Tuesday, May 5, 2015
ಸೆಳೆಯುತ್ತಿದೆ ಕಲ್ಪ-ಶಿಲ್ಪ
ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿ ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸಿತು. ರೈತರು, ತೋಟಿಗರು ಪೋಷಿಸಿಕೊಂಡು ಬಂದಿರುವ ಹಲವಾರು ಕಲೆ, ವೈವಿಧ್ಯತೆಗಳನ್ನು ಅನಾವರಣಗೊಳಿಸಿತು. ಶ್ರೀಮಠದಲ್ಲಿ ಅನಾವರಣಗೊಂಡ ಕಲಾ ವಿಶಿಷ್ಟತೆಯಲ್ಲಿ ಕಲ್ಪ ಶಿಲ್ಪವೂ ಒಂದು.
ಚಿಕ್ಕ ಕಿರುಬೆರಳ ಗಾತ್ರದ ಆಕೃತಿಗಳಿಂದ ಹಿಡಿದು ಒಂದಡಿ ಎತ್ತರದ ಬೇರು ಬೊಗಟೆ ಕಲಾಕೃತಿಗಳೂ ಕಲ್ಪ ಶಿಲ್ಪದಲ್ಲಿದ್ದವು. ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದ್ದ ಬಗೆ ಬಗೆಯ ಆಕೃತಿಗಳಂತೂ ಎಲ್ಲರನ್ನೂ ಸೆಳೆದವು. ಕಲ್ಲಿನಿಂದಲೇ ಮಾಡಿದ್ದ ಕೊಳಲು ಎಲ್ಲರಲ್ಲಿಯೂ ಬೆರಗು ಮೂಡಿಸಿತು. ಕಲ್ಲಿನಿಂದ ಕೊಳಲನ್ನು ಮಾಡಲು ಸಾಧ್ಯವಿದೆ ಎನ್ನುವುದು ವಿಸ್ಮಯಕ್ಕೆ ಕಾರಣವಾಯಿತು. ಬಿದಿರು, ಶಮೆ ಹಾಗೂ ವಾಟೆ ಬಿದಿರಿನಿಂದ ಕೊಳಲನ್ನು ಮಾಡಲಾಗುತ್ತದೆ. ಆದರೆ ಕಲ್ಲಿನಿಂದ ಕೊಳಲನ್ನು ಮಾಡುವ ಪರಿಕಲ್ಪನೆಯೇ ವಿಶಿಷ್ಟವಾದುದು. ಶಿಲ್ಪ ಕಲ್ಪದ ರೂವಾರಿಯಾದ ಶಿವಮೂರ್ತಿ ಭಟ್ಟರ ತನ್ಮಯತೆ ಕಲ್ಲಿನ ಕೊಳಲಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿ ಕಲ್ಲಿನ ಕೊಳಲನ್ನು ತಯಾರಿಸಿದ್ದೇನೆ ಎಂದು ಭಟ್ಟರು ಹೇಳುತ್ತಾರೆ. ಕಲ್ಲಿನ ಕೊಳಲಿನಿಂದ ಧ್ವನಿಯನ್ನು ಹೊರಡಿಸಬಹುದೇ ಎಂದು ಕೃಷಿಜಯಂತಿಗೆ ಆಗಮಿಸಿದ್ದ ಜನಸಾಮಾನ್ಯರು ಪರೀಕ್ಷೆ ಮಾಡಿ, ಕೊಳಲನ್ನು ಊದಿ ನೋಡುತ್ತಿದ್ದುದು ವಿಶೇಷವಾಗಿತ್ತು.
ತನ್ನ ತಂದೆ ಸತ್ಯನಾರಾಯಣ ಭಟ್ಟರು ಬೇರು ಬೊಗಟೆ ಕಲಾಕೃತಿಗಳನ್ನು ಮಾಡುತ್ತಿದ್ದರು. ಅವರೇ ತನಗೆ ಸ್ಪೂರ್ತಿ ಎಂದು ಹೇಳುವ ಶಿವಮೂರ್ತಿ ಭಟ್ಟರು ತೆಂಗಿನಕಾಯಿಯ ಚಿಪ್ಪಿನಿಂದ ಸ್ಪ್ರಿಂಗ್, ಗಣಪತಿ, ವಾಲ್ ಪ್ಲೇಟ್, 50-60ಕ್ಕೂ ಹೆಚ್ಚಿನ ವಿವಿಧ ಕೀಟಗಳು, ಇಲಿ, ಮುಖ, ಆಮೆ, ಪಿಗ್ಮಿ ಮನುಷ್ಯ, ತಾಯಿ-ಮಗು, ಜಿರಾಫೆ, ಸಿಯಾಳದ ಚಿಪ್ಪಿನಿಂದ ಬೇಲೂರು ಶಿಲಾಬಾಲಿಕೆ ಹೀಗೆ ಹಲವು ಬಗೆಯ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದೇನೆ ಎಂದು ಭಟ್ಟರು ತಿಳಿಸುತ್ತಾರೆ.
ಮರದ ತುಂಡುಗಳಿಂದ ವ್ಯಾನಿಟಿ ಬ್ಯಾಗ್ ಒಂದನ್ನು ತಯಾರಿಸಿದ್ದು ಮನಮೋಹಕವಾಗಿದೆ. ಹೂಜಿಗಳು, ಹೂದಾನಿಗಳು, ಚಿಕ್ಕ ಪೆಟ್ಟಿಗೆ ಇತ್ಯಾದಿಗಳ ಅಷ್ಟೇ ಸುಂದರವಾಗಿದೆ.
Subscribe to:
Post Comments (Atom)

No comments:
Post a Comment