(ಶಿರ್ಲೆ ಜಲಪಾತ) |
ಯಲ್ಲಾಪುರ ಪಟ್ಟಣದಿಂದ 15 ಕಿ.ಮಿ ದೂರದಲ್ಲಿರುವ ಶಿರ್ಲೆ ಜಲಪಾತ ದಿನವಹಿ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಲ್ಲಾಪುರ, ಹುಬ್ಬಳ್ಳಿ, ಕಾರವಾರ, ಕುಮಟಾ, ಶಿರಸಿ, ಶಿವಮೊಗ್ಗ ಸೇರಿದಂತೆ ಹಲವಾರು ಪ್ರದೇಶಗಳಿಂದ ಯುವಕರು, ಮಹಿಳೆಯರೆನ್ನದೇ ತಂಡೋಪತಂಡವಾಗಿ ಆಗಮಿಸಿ ಜಲಪಾತ ವೀಕ್ಷಣೆ ಮಾಡಿ ಹೋಗುತ್ತಾರೆ. 50 ಅಡಿಗೂ ಅಧಿಕ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ತನ್ನ ಸೌಂದರ್ಯದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಗಮಿಸುವ ಪ್ರವಾಸಿಗರು ಜಲಪಾತದ ನೀರಿಗೆ ತಲೆಯೊಡ್ಡಿ ಸ್ನಾನ ಮಾಡಿ ಸಂತಸವನ್ನೂ ಅನುಭವಿಸುತ್ತಾರೆ. ಆದರೆ ಇಂತಹ ಜಲಪಾತ ಮೂಲಬೂತ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.
ಜಲಪಾತವಿರುವ ಶಿರ್ಲೆ ಗ್ರಾಮದಲ್ಲಿ 8-10 ಮನೆಗಳಿವೆ. ಇಡಗುಂದಿ ಗ್ರಾಮ ಪಂಚಾಯತದ ಅರಬೈಲ್ ಮಜರೆಯಲ್ಲಿರುವ ಈ ಜಲಪಾತವಿದೆ. ಇಂತಹ ಸುಂದರ ಜಲಪಾತವಿರುವ ಶಿರ್ಲೆ ಗ್ರಾಮಕ್ಕೆ ತೆರಳವುದು ಮಾತ್ರ ದುಸ್ತರ ಎನ್ನುವಂತಹ ಪರಿಸ್ಥಿತಿಯಿದೆ. ಮುಖ್ಯ ರಸ್ತೆಯಿಂದ 1.5 ಕಿ.ಮಿ ದೂರ ಕಡಿದಾದ ಘಟ್ಟದ ರಸ್ತೆಯಿದೆ. ರಸ್ತೆ ಕೂಡ ಚೂಪಾದ ಕಲ್ಲುಗಳು ಹಾಗೂ ಕೊರಕಲುಗಹಳಿಂದ ಆವೃತವಾಗಿದೆ. ದಿನಂಪ್ರತಿ 25ಕ್ಕೂ ಅಧಿಕ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಓಡಾಡಬೇಕು ಎನ್ನುವಂತಹ ಪರಿಸ್ಥಿತಿಯಿದೆ.
ಶಿರ್ಲೆ ಗ್ರಾಮಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಅನೇಕ ಸಾರಿ ಸ್ಥಳೀಯರು ಬೇಡಿಕೆಗಳನ್ನು ಇಟ್ಟಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಗಳನ್ನೂ ಸಲ್ಲಿಸಿದ್ದಾರೆ. ಬೇಸಿಗೆಯಲ್ಲಿಯೇ ಓಡಾಡಲು ತೊಂದರೆಯಾಗುವ ಈ ರಸ್ತೆಯಲ್ಲಿ ಮಳೆಗಾಲ ಬಂತೆಂದರೆ ಮತ್ತಷ್ಟು ತೊಂದರೆ ಅನುಭವಿಸುವ ಅನಿವಾರ್ಯವಿದೆ. ತಮ್ಮ ಊರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡುವುದು ಬೇಡ. ಬದಲಾಗಿ ಜಲಪಾತಕ್ಕೆ ತೆರಳುವವರಿಗಾದರೂ ರಸ್ತೆ ನಿರ್ಮಾಣ ಮಾಡಿಕೊಡಿ. ಜಲಪಾತದ ನೆಪದಲ್ಲಿ ನಮ್ಮೂರಿಗಾದರೂ ಉತ್ತಮ ರಸ್ತೆಯ ಭಾಗ್ಯ ಸಿಗಲಿ ಎಂದು ಸ್ಥಳೀಯರು ತಮ್ಮ ಬೇಡಿಕೆ ಮುಂದಿಡುತ್ತಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಅವರ ಬಗ್ಗೆ ಭರವಸೆಯನ್ನು ಹೊಂದಿದ್ದ ಸ್ಥಳೀಯರು ಇದೀಗ ಹತಾಶೆಯನ್ನು ಅನುಭವಿಸುತ್ತಿದ್ದಾರೆ.
ದಟ್ಟ ಕಾನನದ ನಡುವೆ ಇರುವ ಶಿರ್ಲೆ ಗ್ರಾಮದಲ್ಲಿ ಅಜಮಾಸು 35ರಷ್ಟು ಜನಸಂಖ್ಯೆಯಿದೆ. ದಟ್ಟ ಕಾನನದ ನಡುವೆ ಇರುವ ಈ ಗ್ರಾಮದ ನಿವಾಸಿಗಳ ಬವಣೆ ಒಂದೆರಡಲ್ಲ. ಈ ಗ್ರಾಮಸ್ಥರು ಸೊಸೈಟಿ, ಪಡಿತರ ಹಾಗೂ ಶಾಲೆಗಳಿಗೆ 5 ಕಿ.ಮಿ ದೂರದಲ್ಲಿರುವ ಇಡಗುಂದಿಯನ್ನೇ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿಯಿದೆ. ಶಿರ್ಲೆ ಗ್ರಾಮದಲ್ಲಿ ಕಿ. ಪ್ರಾ. ಶಾಲೆಯನ್ನು ಆರಂಭಿಸಲು ಅವಕಾಶಗಳಿದ್ದರೂ ಸರ್ಕಾರ ಮಾತ್ರ ಕಡಿಮೆ ಮಕ್ಕಳ ಸಂಖ್ಯೆಯ ನೆಪವನ್ನೊಡ್ಡಿ ಶಾಲೆಗೆ ಅವಕಾಶ ನೀಡುತ್ತಿಲ್ಲ. ಈ ಗ್ರಾಮದ ನಿವಾಸಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಬಂಧಿಕರ ಮನೆಗಳನ್ನೇ ನಂಬಿಕೊಂಡಿದ್ದಾರೆ. ಮಕ್ಕಳನ್ನು ತಮ್ಮ ನೆಂಟರ ಮನೆಗಳಲ್ಲಿ ಇಟ್ಟು ಓದಿಸುತ್ತಿದ್ದಾರೆ.
ಈ ಊರಿನ ಶಾಲೆ, ಸೊಸೈಟಿ ಹಾಗೂ ಪಡಿತರದ ಕುರಿತು ಬವಣೆ ಒಂದು ರೀತಿಯಾದರೆ ಈ ಗ್ರಾಮಸ್ಥರು ಮತದಾನ ಮಾಡಬೇಕೆಂದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇನ್ನೊಂದು ಕಡೆ. ಈ ಊರಿನ ಮತದಾರರು ಮತದಾನ ಮಾಡಬೇಕೆಂದರೆ 13 ಕಿ.ಮಿ ಸಾಗುವುದು ಅನಿವಾರ್ಯ. ತಮ್ಮ ಗ್ರಾಮದಿಂದ 13 ಕಿ.ಮಿ ದೂರದಲ್ಲಿರುವ ಬೀರಗದ್ದೆಗೆ ತೆರಳಿ ಮತದಾನ ಮಾಡಿ ಬರುತ್ತಿದ್ದಾರೆ. ಮತದಾನಕ್ಕೆ ಅಷ್ಟು ದೂರ ತೆರಳುವುದು ಅಸಾಧ್ಯ, ಈ ಕಾರಣದಿಂದ ಶಿರ್ಲೆ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಿ ಎಂದು ಅಧಿಕಾರಿಗಳಿಗೆ ಬೇಡಿಕೆಯನ್ನಿಟ್ಟಿದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಬಹುದೂರ ಹೋಗಿ ಬರುವ ಕಾರಣದಿಂದ ಚುನಾವಣೆಗಳಲ್ಲಿ ಅನೇಕರು ಮತದಾನವನ್ನೇ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಇವು ಜಲಪಾತಕ್ಕೆ ತೆರಳುವ ರಸ್ತೆ ಹಾಗೂ ಜಲಪಾತವಿರುವ ಗ್ರಾಮದ ಸಮಸ್ಯೆಯಾದರೆ, ನಯನಮನೋಹರ ಜಲಪಾತವಿರುವ ಪರಿಸರದ ಕಥೆ ಮತ್ತಷ್ಟು ಶೋಚನೀಯವಾಗಿದೆ. ಶಿರ್ಲೆಯ ಜಲಪಾತವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಸುಮ್ಮನೆ ಬರುತ್ತಿಲ್ಲ. ಮದ್ಯದ ಬಾಟಲಿ, ಪ್ಲಾಸ್ಟಿಕ್ ಇತ್ಯಾದಿಗಳನ್ನು ತರುತ್ತಾರೆ. ಮದ್ಯಪಾನ ಮಾಡಿದ ನಂತರ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕಟ್ಟಿಕೊಂಡು ಬರುವ ತಿಂಡಿಯ ಪ್ಯಾಕೇಟ್ಗಳನ್ನು ಕಂಡಕಂಡಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಜಲಪಾತದ ಸೌಂದರ್ಯಕ್ಕೆ ಕುಂದುಂಟಾಗುತ್ತಿದೆ. ಪ್ರವಾಸೋದ್ಯಮ ಎಂದು ಭಾಷಣಗಳಲ್ಲಿ ಭಾರಿ ಭಾರಿ ಮಾತನಾಡುವ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ನಿಸರ್ಗದ ನಡುವೆ ಇರುವ ಸುಂದರ ಜಲಪಾತ ಹಾಗೂ ಗ್ರಾಮದ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಪ್ರವಾಸೋದ್ಯಮ ಸಚಿವರು, ಯಲ್ಲಾಪುರ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಮುಂದಾಗಬೇಕಿದೆ.
***
ನಮ್ಮೂರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡಿ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 1.5 ಕಿಮಿ ಅಂತರದಲ್ಲಿ ನಮ್ಮೂರಿದ್ದರೂ ಇಲ್ಲಿ ಸಂಚಾರ ಮಾಡುವುದು ಮಾತ್ರ ತೀರಾ ಅಪಾಯಕಾರಿ ಎನ್ನುವಂತಹ ಪರಿಸ್ಥಿತಿಯಿದೆ. ಅಪಾಯವನ್ನು ಸದಾ ಕೈಯಲ್ಲಿ ಹಿಡಿದು ನಾವು ಪ್ರಯಾಣ ಮಾಡುತ್ತಿದ್ದೇವೆ. ಜಲಪಾತಕ್ಕೆ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಾದರೂ ನಮಗೊಂದು ಸರ್ವಋತು ರಸ್ತೆ ಮಾಡಿಕೊಡಬೇಕಾಗಿದೆ.
ನಾರಾಯಣ ರಾಮಚಂದ್ರ ಭಟ್
ಶಿರ್ಲೆ ನಿವಾಸಿ
No comments:
Post a Comment