(ಹುಲಿ ಶಿಖಾರಿಯ ಸಾಂದರ್ಭಿಕ ಚಿತ್ರ) |
ಎಲ್ಲರೂ ಒಮ್ಮೆಲೆ ಬೆಚ್ಚಿ ಬಿದ್ದು `ವಾಟ್...' ಎಂಬ ಉದ್ಗಾರದೊಂದಿಗೆ ಕುಮುಟಿ ಬಿದ್ದರು.
ಹುಲಿ ಹೊಡೆಯುವುದು ಸಾಮಾನ್ಯವೇ..? ಇಲಿಯನ್ನು ಕೊಲ್ಲಲು ಹಲವರು ಹೆದರುವ ಇಂದಿನ ದಿನಮಾನದಲ್ಲಿ ಹುಲಿ ಹೊಡೆಯುವುದು ಅಂದರೆ ಸುಲಭವೇನಲ್ಲ ಬಿಡಿ. ಗಪ್ಪಜ್ಜ ಇಂತಹ ಸಾಹಸ ಮಾಡಿದ್ದಾನೆ ಎಂದಿದ್ದನ್ನು ಕೇಳಿ ಎಲ್ಲರಿಗೂ ಒಳಗೊಳಗೆ ಖುಷಿ. ಊರಿನ ತುಂಬೆಲ್ಲ ಗಪ್ಪಜ್ಜನಿಗೆ ಹುಲಿ ಹೊಡೆದ ಗಪ್ಪಜ್ಜ ಎನ್ನುವ ಮಾತು ಚಾಲ್ತಿಯಲ್ಲಿ ಬಂದಿತ್ತು. ವಿನಾಯಕನಿಗೆ ಇದು ಒಮ್ಮೆಲೆ ನೆನಪಿಗೆ ಬಂದಿತು. ಅಲ್ಲದೇ ಅಜ್ಜ ಎದುರು ಸಿಕ್ಕಾಗಲೆಲ್ಲ `ಗಪ್ಪಜ್ಜ .. ಹುಲಿ ಹೊಡೆದಿದ್ನಡಾ ಮಾರಾಯಾ..' ಎಂದು ಹೇಳುವ ಮೂಲಕ ಗಪ್ಪಜ್ಜ ನೆಂದರೆ ಕನ್ನಡ ಚಿತ್ರರಂಗದ ವಿಲನ್ನೇ ಇರಬೇಕು ಎಂದು ಅನೇಕರು ನನ್ನಲ್ಲಿ ಭೀತಿಯನ್ನು ಹುಟ್ಟುಹಾಕಿದ್ದರು. ವಿನಾಯಕನಲ್ಲಿ ಈ ಮಾತು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ತಾನು ಚಿಕ್ಕವನಾಗಿದ್ದಾಗ ಸದಾ ಕಿಲಾಡಿ ಮಾಡುವ ನಮ್ಮ ವಿರುದ್ಧ ಗಪ್ಪಜ್ಜ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಆಗಾಗ ತನ್ನ ಊರುಗೋಲಿನಿಂದ ಬಾಸುಂಡೆ ಬರುವಂತೆ ಬಡಿದಿದ್ದೂ ಇದೆ. ಇಂತಹ `ಗಪ್ಪಜ್ಜ ಹುಲಿ ಹೊಡೆದಿದ್ನಡಾ..' ಎಂದು ದಂಟಕಲ್ಲಿನ ಹಿರಿಯರ ಆದಿಯಾಗಿ ಹೇಳುತ್ತಿದ್ದ ಮಾತು ಚಿಕ್ಕಂದಿನಲ್ಲಿ ಭಯವನ್ನು ಹುಟ್ಟಿಸಿದರೂ ದೊಡ್ಡವನಾದ ಮೇಲೆ ಕುತೂಹಲಕ್ಕೆ ಕಾರಣವಾಗಿತ್ತು.
ವಿನಾಯಕನಿಗೆ ದೊಡ್ಡವನಾದಂತೆಲ್ಲ ಗಪ್ಪಜ್ಜ ನ ಮೇಲಿದ್ದ ಭಯ ದೂರವಾಗಿತ್ತು. ಅಷ್ಟರಲ್ಲಿ ವಯಸ್ಸಾಗಿದ್ದ ಗಪ್ಪಜ್ಜ ತನ್ನ ಸಿಟ್ಟು ಸೆಡವನ್ನು ದೂರ ಮಾಡಿಕೊಂಡು ಪರಿಸ್ಥಿತಿಗೆ ತಕ್ಕಂತೆ ಅಸಹಾಯಕತೆಯನ್ನು, ಸೌಮ್ಯ ಸ್ವಭಾವವನ್ನೂ ಹೊಂದಿದ್ದ. ವಿನಾಯಕ ಕಾಲೇಜಿಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲೆಲ್ಲ ಆಗಾಗ ಮಾತಿಗೆ ಸಿಗುತ್ತಿದ್ದ ಗಣಪಜ್ಜ `ಹ್ವಾ..ಶಿರಸಿಂದ ಬರಕಿದ್ರೆ ಸಂಯುಕ್ತ ಕರ್ನಾಟಕ ತಗಂಡು ಬಾರಾ..ಓದಕಾಗಿತ್ತು..' ಎಂದು ಹೇಳುವ ಮೂಲಕ ಮಾತಿಗೆ ಪೀಠಿಕೆ ಹಾಕುತ್ತಿದ್ದ. ವಿನಾಯಕನೂ ಮೊದ ಮೊದಲು ಭಯದಿಂದ ಮಾತನಾಡುತ್ತಿದ್ದ. ಕೊನೆ ಕೊನೆಗೆ ಮಾತು ಆಪ್ತವಾಗುವ ಹಂತಕ್ಕೆ ಬಂದಿತ್ತು. ಸಲಿಗೆಯೂ, ಕುಶಾಲಿ ಮಾಡುವ ಹಂತವೂ ತಲುಪಿತ್ತು.
ವಿನಾಯಕ ನೆನಪು ಮಾಡಿಕೊಳ್ಳುತ್ತಿದ್ದಂತೆಯೇ ವಿಜೇತಾ ಹಾಗೂ ವಿಕ್ರಮರು ಗಪ್ಪಜ್ಜನ ಬಳಿ ಹುಲಿ ಹೊಡೆದ ವೃತ್ತಾಂತವನ್ನು ಹೇಳುವಂತೆ ಪೀಡಿಸಲು ಆರಂಭಿಸಿದರು. ತನ್ನ ಯವ್ವನದಲ್ಲಿ ಹುಲಿಯಂತೆಯೇ ಅಬ್ಬರದಿಂದ ಮೆರೆದಿದ್ದ ಗಪ್ಪಜ್ಜ ನ ಬಳಿ ಆತನ ಯವ್ವನದ ದಿನಗಳ ಬಗ್ಗೆ ಹೇಳು ಎಂದಾಗ ಆತ ಬಿಡುತ್ತಾನೆಯೇ..? ವಯಸ್ಸಾದ ಮೇಲೆ ಆತನಿಗೂ ಹೊತ್ತು ಹೋಗಬೇಕು. ಮನೆಯಲ್ಲಿ ಮಾತುಕೆಳುತ್ತಿದ್ದವರೆಲ್ಲ ಈಗ ದೊಡ್ಡವರಾಗಿದ್ದಾರೆ. ಆತನಿಗೆ ಮಾತನಾಡಲು ಒಬ್ಬರು ಬೇಕಿತ್ತು. ಅದೇ ಸಮಯಕ್ಕೆ ಸಿಕ್ಕು ಕೇಳಿದ್ದರು. `ತಡಿರಾ ತಮಾ ಚಾ ಕುಡ್ಕತ್ತ ಮಾತಾಡನಾ..' ಎಂದು ಹೇಳಿ ಮೊಟ್ಟ ಮೊದಲನೇ ಸಾರಿ ತಾನು ಹುಲಿ ಹೊಡೆದ ಕಥೆಯನ್ನು ಹೇಳಲು ಶುರು ಮಾಡಿದ್ದ. ತೊಂಭತ್ತು ವಸಂತಗಳನ್ನು ಮೀರಿದ್ದ ಗಪ್ಪಜ್ಜ ತನ್ನ ಇಪ್ಪತ್ತರ ಹರೆಯದಲ್ಲಿ ಮಾಡಿದ್ದ ಸಾಹಸದ ವಿವರವನ್ನು ಕೇಳಲು ಎಲ್ಲರೂ ಅವರ ಮನೆಯ ಖುರ್ಚಿಯ ತುದಿಯಲ್ಲಿ ಚೂಪಗೆ ಕುಂತಿದ್ದರು..
**
`ನಂಗಾಗ ಇಪ್ಪತ್ತೋ ಇಪ್ಪತ್ತೈದೋ.. ಸಮಾ ನೆನಪಿಲ್ಲೆ.. ಆಗ ಆನು ಅಂದ್ರೆ ಸುತ್ತಮುತ್ತಲೆಲ್ಲ ಭಯಂಕರ ಹೆದರ್ತಿದ್ದ. ಉರಾಉರಿ ಕಾಲ.. ಯನ್ನ ಉರಾಉರಿ ನೋಡಿ ಎಷ್ಟ್ ಜನ ಯನ್ನ ಅಪ್ಪಯ್ಯನ ಕೈಲಿ ಬಂದ್ ಪುಕಾರು ಹೇಳಿದ್ವೇನ. ಯನ್ನ ಅಪ್ಪಯ್ಯನೂ ಅಷ್ಟೇ ಅಬ್ಬರದ ಮನುಷ್ಯ ಆಗಿದ್ದ. ಅದಕಾಗೇ ಆ ದಿನಗಳಲ್ಲಿ ಆನು ಬಹಳಷ್ಟು ಹಾರಾಡಿದ್ರೂ ಅಂವ ಯಂಗೆ ಎಂತದ್ದೂ ಮಾಡ್ತಿದ್ನಿಲ್ಲೆ..' ಎಂದ.
`ಹೂಂ.. ಹೂಂ..' ಎಂದರು ಎಲ್ಲರೂ
'ಈಗ ಯಂಗೆ ತೊಂಭತ್ತಾತ ಮಾರಾಯಾ.. ಯಂಗೆ ಇಪ್ಪತ್ತು ವರ್ಷದ ಆಜು ಬಾಜಲ್ಲಿ ನಡೆದಿದ್ದು ಅಂದ್ರೆನಿಮಗೆಂತದಾದ್ರೂ ತಲಿಗೆ ಹೋಗ್ಲಕ್ಕ..? ಆಗಿನ ಕಾಲ, ಹೆಂಗಿತ್ತು ಗೊತ್ತಿದ್ದ.. ಈ ಊರಿದ್ದಲಾ ಇದರ ಸುತ್ತಮುತ್ತ ಈಗ ಬೋಳು ಗುಡ್ಡ ಕಾಣ್ತಲಾ.. ಆಗೆಲ್ಲಾ ಬರೀ ಕಾನೇ ಇದ್ದಿತ್ತು.. ಈಗ ಯಮ್ಮನೆ ಕೊಟ್ಗೆ ಇದ್ದಲಾ ಅಲ್ಲೀವರಿಗೆ ಹುಲಿ ಬಂದು ದನ-ಕರ ಎಲ್ಲಾ ಹೊತ್ಕಂಡು ಹೋಗ್ತಿತ್ತು ಹುಲಿ. ಹುಲಿಯ ಅಬ್ಬರಕ್ಕೆ ದನಗಳ ಜೊತೆಗೆ ಜನಗಳೂ ಬೆಚ್ಚಿ ಬಸವಳಿದು ಬಿಟ್ಟಿದಿದ್ದ ಒಂದು ಕಾಲದಲ್ಲಿ.. ಬ್ರಿಟೀಷರ ಕಾಲ ಬೇರೆ ನೋಡು...' ಎಂದರು.
ಎಲ್ಲರೂ ಅವರು ಹೇಳಿದಂತೆಲ್ಲ ಕಣ್ಮುಂದೆ ಎಪ್ಪತ್ತು ವರ್ಷಗಳ ಹಿಂದಿನ ಚಿತ್ರಣ ಅಂದರೆ 1930-40ರ ದಶಕದ ಚಿತ್ರಣವನ್ನು ಕಟ್ಟಿಕೊಳ್ಳುತ್ತ ಹೋದರು. ಅವರು ಹುಲಿಯನ್ನು ರೌಧ್ರ ಭಯಂಕರವಾಗಿ ಚಿತ್ರಿಸುತ್ತ ಹೋದರು. ಎಲ್ಲರ ಕಣ್ಣಮುಂದೆ ಹುಲಿಯೆಂದರೆ ರೌದ್ರ ಎನ್ನಿಸಲೇ ಇಲ್ಲ. ಅಂದಿನ ಹಾಗೆ ಹುಲಿ ಕಣ್ಣೆದುರಿಗೆ ಬಂದು ಎಡತಾಕಿ ಹಾಯ್ ಹೇಳಿ ಹೋಗುವುದಿಲ್ಲ ನೋಡಿ. ಹುಲಿಯ ಭಯವೂ ಇಲ್ಲವಲ್ಲ. ಅದಕ್ಕೆ ಹುಲಿಯೆಂದರೆ ಬಹುತೇಕ ದಂತಕಥೆಯಂತೆ, ಚಿಕ್ಕಮಕ್ಕಳ ಪಾಲಿಗೆ ಆಟಿಕೆಯಂತೆ ಅನ್ನಿಸಿತು. ಅದಕ್ಕೆ ತಕ್ಕಂತೆ ಚಿತ್ರಣ ಕೂಡ.
`ಯಂಗವ್ವು ನಿಂಗಳ ಹಾಂಗೆ ಇದ್ದ ಕಾಲ ಅದು. ಬ್ರಿಟೀಷ್ ರೂಲಿತ್ತು. ಈಗಿನ ಹಾಂಗೆ ಹುಲಿ ಬೇಟೆ ನಿಷೇಧ ಇತ್ತಿಲ್ಲೆ. ಮತ್ತೊಂದ್ ವಿಷ್ಯ ಅಂದ್ರೆ ಆಗ ಬ್ರಿಟೀಷರೇ ಹುಲಿ ಹೊಡೆಯಲೆ ಅಡ್ಡಿಲ್ಲೆ ಹೇಳಿ ಹೇಳಿದಿದ್ದ. ಹುಲಿ ಹೊಡೆದು ಅದರ ಬಾಲ ತಂದು ಪಟೇಲನ ಬಳಿ ತೋರಿಶಿದವ್ಕೆ ಇನಾಮೂ ಸಿಕ್ತಿತ್ತು. ನಮ್ಮೂರಲ್ಲೂ ಹುಲಿ ಕಾಟ ಇತ್ತಲಾ.. ಹುಲಿ ಹೊಡಿಯದೇ ಸೈ..ಅಂದಕಂಡಿ..ಬಂದೂಕು ಬೇಕು ಹೇಳಿ ಅಪ್ಪಯ್ಯನ ಹತ್ರೆ ಕೇಳದು ಹೆಂಗೆ..? ತಲೆಬಿಶಿ ಶಿಕ್ಕಾಪಟ್ಟೆ ಆಗೋತು. ಅಪ್ಪಯ್ಯನ ಹತ್ರ ಕೇಳಿರೆ ಎಲ್ಲಾದ್ರೂ ಬೈದು ಸುಮ್ಮಂಗಿರಾ.. ನೀ ಹುಲಿ ಉಸಾಬರಿಗೆ ಹೋಗದು ಬ್ಯಾಡಾ.. ಹೇಳಿ ಹೇಳಿದ್ರೆ ಎನ್ನುವ ಹೆದ್ರಿಕೆ ಇತ್ತು.. ಕೊನಿಗೂ ಬಿಟ್ಟಿದ್ನಿಲ್ಲೆ.. ಕೇಳ್ದಿ ಹೇಳಾತು.. ಅಪ್ಪಯ್ಯ ಅಡ್ಡಿಲ್ಲೆ ಅಂದ್ ಬಿಟ್ನಾ..
ಈಗಿನ ಹಾಂಗೆ ಬಸ್ಸಿತ್ತಿಲ್ಯಲಾ..ಅದೇ ಖುಷಿಯಲ್ಲಿ ಶಿರಸಿಗೆ ನೆಡ್ಕಂಡು ಹೋಗಿ ಬಂದೂಕು ತಗಂಡ್ ಬಂದಿ.. ತಗಾ.. ಇದೇ ಇಲ್ನೋಡು.. ಇದೇ ಬಂದೂಕು..' ಎಂದು ಗಪ್ಪಜ್ಜ ಬಂದೂಕು ತೋರಿಸಿದಾಗ ಗಪ್ಪಜ್ಜ ಹುಲಿ ಹೇಗೆ ಹೊಡೆದಿರಬಹುದು ಎನ್ನುವ ಕಲ್ಪನೆ ಮನದಲ್ಲಿ ಮೂಡಿ ಎಲ್ಲರಲ್ಲೂ ರೋಮಾಂಚನ..
ಹಳೇ ತೇಗದ ಮರದ ದೊಡ್ಡ ಹಿಡಿಕೆ ಹೊಂದಿದ್ದ ಬಂದೂಕು ಅದು. 70 ವರ್ಷ ಹಿಂದಿಂದು ಬೇರೆ. ಈಗತಾನೆ ಎಣ್ಣೆ ಹಾಕಿ ಒರೆಸಿ ಇಟ್ಟಿದ್ದರೋ ಎನ್ನುವಂತೆ ಮಿಂಚುತ್ತಿತ್ತು. ತಗಳ್ರಾ ಎಂದು ಹೇಳಿದವರೇ ಎಲ್ಲರ ಮುಂದೆ ಬಂದೂಕನ್ನು ಹಿಡಿದರು.. ಪ್ರದೀಪ ಎತ್ತಿಕೊಂಡ.. ರಾವಣ ಬಿಲ್ಲನ್ನೆತ್ತಲೂ ಅಷ್ಟು ಕಷ್ಟಪಟ್ಟಿದ್ದನೋ ಇಲ್ಲವೋ.. ಅದರ ಭಾರಕ್ಕೆ ಒಮ್ಮೆ ಆಯ ತಪ್ಪಿದ.. `ತಮಾ.. ನಿಂಗೆ ಎತ್ತಲೆ ಆಗ್ತಿಲ್ಲೆ.. ನೋಡು.. ಆಗ ಯಂಗವ್ವು ಇದನ್ನ ವಂದೇ ಕೈಯಲ್ಲಿ ಹಿಡಕಂಡು ಬೇಟೆ ಮಾಡ್ತಿದ್ಯ.. ಹುಲಿ ಹೊಡೆದಿದ್ದೂ ಇದರಲ್ಲೇಯಾ.. ಅಂದ್ರೆ ನೀ ನಂಬ್ತಿಲ್ಲೆ..' ಎಂದಾಗ ಪ್ರದೀಪ ಕಕ್ಕಾಬಿಕ್ಕಿ.
ಗಪ್ಪಜ್ಜ ಮುಂದುವರಿದ..
`ಒಂದು ಚಳಿಗಾಲ ಹುಲಿಗೆ ಗತಿ ಕಾಣ್ಸವು ಹೇಳಿ ಅಂದಕಂಡಿದ್ದಿದ್ದಿ. ಆನು ಬಂದೂಕು ತಂದಿಟ್ಟು ತಿಂಗಳು ಗಟ್ಟಲೆ ಆಗಿತ್ತು.. ಆದರೆ ಎಲ್ಲೋ ಅದಕ್ಕೆ ಸೂಟು ಸಿಕ್ಕಿತ್ತು ಕಾಣ್ತು.. ಹುಲಿಯ ಪತ್ತೇನೆ ಇಲ್ಲೆ.. ಅಪ್ಪಯ್ಯಂತೂ ಗಪ್ಪತಿ ಬಂದೂಕು ತಗಬಂಜಾ ಹೇಳಿ ಹುಲಿಗೆ ಗೊತ್ತಾಗೋಜು ಕಾಣ್ತು.. ಹುಲಿ ಇತ್ಲಾಗೆ ಮಕಾನೆ ಹಾಕಿದ್ದಿಲ್ಲೆ ಹೇಳಿ ಹೇಳಲೆ ಶುರು ಮಾಡಿದ್ದ. ವಾರಕ್ಕೆ ಎರಡು ಸಾರಿಯಾದರೂ ಬಂದು ಕೊಟ್ಗೆ ಮೇಲೆ ದಾಳಿ ಮಾಡ್ತಾ ಇದ್ದಿದ್ ಹುಲಿ ಎತ್ಲಾಗ್ ಹೋತು ಅನ್ನೋ ತಲೆಬಿಸಿ... ಹಿಂಗೆ ಸ್ವಲ್ಪ ದಿನ ಆದ್ಮೇಲೆ ಒಂದಿನ ಮೂರು ಸಂಜೆ ಹೊತ್ತಲ್ಲಿ ನಮ್ಮೂರ್ ಜೀಡೆಹೊಂಡ ಇದ್ದಲಾ ಅಲ್ಲಿ ಹುಲಿ ಗಂವ್ ಅಂತಾ.. ಹೋ ಬಂತು ಹುಲಿ ಅಂದ್ಕಂಡಿ.. ಮೈಯೆಲ್ಲಾ ಚುರು ಚುರುಗುಡಲೆ ಹಿಡತ್ತು.. ಹುಲಿ ಹೊಡೆಯವ್ವು ಹೇಳಿ ಒಂಥರಾ ಖುಷಿ.. ಬಂದೂಕು ಎತ್ತಿ ಲೋಡು ಮಾಡಿಟ್ಗಂಡಿ..
`ಸುಮಾರ್ ಹೊತ್ತಾತು..ಜೀಡೆ ಹೊಂಡದಲ್ಲಿ ಕೂಗೋ ಹುಲಿ ಮನೆ ಹತ್ರ ಬತ್ತೇ ಇಲ್ಲೆ.. ಯಂಗಂತೂ ಯದೆಯಲ್ಲಿ ಢವ ಢವ.. ರಾತ್ರಿ ಎಂಟ್ ಗಂಟೆ ಆದ್ರೂ ಹುಲಿ ಬಪ್ಪ ಲಕ್ಷಣನೇ ಇಲ್ಲೆ .. ಈ ಹುಲಿಗೆ ಹುಲಿ ಹಿಡಿಲಿ ಹೇಳಿ ಬೈದು ದಣೀ ಬಂದು ಊಟಕ್ ಕುಂತಿದ್ದಿದ್ದಿ.. ಕ್ವಟ್ಗೇಲಿ ದನ ಕರ ಎಲ್ಲಾ ಹುಯ್ಯಲೆಬ್ಸಿಬಿಟ್ಟ.. ಓಹೋ ಹುಲಿ ಬಂಜು ಅಂದ್ಕಂಡಿ.. ಅದಕ್ ಸರಿಯಾಗಿ ಅಪ್ಪಯ್ಯ.. ತಮಾ ಕೊಟ್ಗಿಗೆ ಹುಲಿ ಬಂಜು ಕಾಣ್ತು.. ನೋಡು.. ಎಂದ.. ಅಲ್ಲೆಲ್ಲೋ ಇಟ್ಟಿದ್ದು ಲಾಟನ್ ಹಿಡ್ಕಂಡು ಕ್ವಟ್ಗಿಗೆ ಹೋದ್ರೆ ಹೌದು.. ಹುಲಿ ಬಂಜು..'
ಎಂದು ನಿಟ್ಟುಸಿರಿಟ್ಟರು..
ಎಲ್ಲರಿಗೂ ಮುಂದೇನಾಯ್ತು ಅನ್ನುವ ಕುತೂಹಲ.. ಆಮೇಲೆ ಎಂದರು.. ತಡಿರಾ ವಂದಕ್ಕೆ ಹೋಗಿ ಬತ್ತಿ ಎಂದರು ಗಪ್ಪಜ್ಜ .. ಎಲ್ಲರಿಗೂ ಸಿನೆಮಾ ಮಧ್ಯ ಇಂಟರ್ವಲ್ ಬಂದಂಗಾಯ್ತು.. ವಂದಕ್ಕೆ ಹೋದ ಗಪ್ಪಜ್ಜ ವಾಪಾಸು ಬರುವುದರೊಳಗಾಗಿ ಬಂದೂಕನ್ನು ನೋಡಿ ಅದರ ಭಾರದ ಕಾರಣ ಉಸಾಬರಿ ಬ್ಯಾಡ ಎಂದು ಪ್ರದೀಪ ಅದನ್ನು ದೂರಕ್ಕಿಟ್ಟು ಪೆಕರನಂತೆ ನಕ್ಕಿದ್ದ..
ಅವರ ಹಳೆಯ ಮನೆಯ ಗೋಡೆಯ ಮೇಲೆ ಹತ್ತು ಹಲವು ತರಹೇವಾರಿ ಕ್ಯಾಲೆಂಡರುಗಳಿದ್ದರೂ ಅಲ್ಲೊಂದು ಕಡೆಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕಿದ ಒಂದು ಪೋಟೋ ಹಾಗೂ ಅದರ ಕೆಳಭಾಗದಲ್ಲಿದ್ದ ತಾಮ್ರಪಟ ಕಣ್ಣಿಗೆ ಕಂಡಿತು. ಹತ್ತಿರ ಹೋಗಿ ನೋಡಿದಳು ವಿಜೇತಾ. ಅದು ಗಪ್ಪಜ್ಜ ನ ಅಪ್ಪಯ್ಯ ಗಣೇಶಜ್ಜನ ಪೋಟೋ ಹಾಗೂ ಆತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಸರ್ಕಾರ ನೀಡಿದ ಗೌರವ ಫಲಕವಾಗಿತ್ತು.. ಅದರಲ್ಲಿ ಬರೆದಿದ್ದ ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದಿ ಮುಗಿಸುವುದರೊಳಗಾಗಿ ಒಂದು ನಂಬರ್ ಕಾರ್ಯ ಮುಗಿಸಿ ಬಂದ ಗಪ್ಪಜ್ಜ ಅವರ ಮನೆಯ ಕಾಲಮಣೆ ಮೇಲೆ ಕುಳಿತು ಮಾತಿಗೆ ತೊಡಗಿದ್ದರು.
(ಮುಂದುವರಿಯುತ್ತದೆ...)
No comments:
Post a Comment