Thursday, April 30, 2015

ಅಬ್ಬರದ ಗಾಳಿ, ಮಳೆಗೆ ನಲುಗಿದ ಉಂಚಳ್ಳಿ

(ಚಲ್ಲಾಪಿಲ್ಲಿಯಾಗಿರುವ ಹಂಚು)
ಎತ್ತ ನೋಡಿದರತ್ತ ಮುರಿದು ಬಿದ್ದು ಭೂಮಿಪಾಲಾಗಿರುವ ಬಾಳೆಯ ಗಿಡಗಳು, ಅಲ್ಲಲ್ಲಿ ನೆಲಕಚ್ಚಿರುವ ತೆಂಗಿನ ಮರಗಳು, ಮುರಿತು ಬಿದ್ದ ಅಡಿಕೆಯ ಮರಗಳು, ಕಿತ್ತುಬಿದ್ದಿರುವ ಮಾವು, ಹಲಸಿನ ಮರಗಳು. ಅಬ್ಬರದ ಗಾಳಿಯ ಪರಿಣಾಮವಾಗಿ ಫಸಲು ಬಿಡುತ್ತಿದ್ದ ಮರಗಳೆಲ್ಲ ಕಿತ್ತು ಬಿದ್ದಿರುವ ದೃಶ್ಯ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪಳೇಕೊಪ್ಪದಲ್ಲಿ ಕಾಣಸಿಗುತ್ತಿದೆ.
ತಾಲೂಕಿನಾದ್ಯಂತ ಬೀಸಿದ ಗಾಳಿ ಕೆಲವು ಕಡೆಗಳಲ್ಲಿ ತೀವ್ರ ಪ್ರತಾಪವನ್ನೇ ತೋರಿದೆ. ಮಳೆಯಿಂದ ಹಾನಿ ಅಷ್ಟಾಗಿ ಸಂಭವಿಸದೇ ಇದ್ದರೂ ಮಳೆಗೂ ಪೂರ್ವ ಬೀಸಿದ ಅಬ್ಬರದ ಗಾಳಿಗೆ ಉಂಚಳ್ಳಿ, ಕೆರೆಕೊಪ್ಪ ಹಾಗೂ ಉಪಳೇಕೊಪ್ಪಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ. ಕೆರೆಕೊಪ್ಪದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದರೆ ಉಂಚಳ್ಳಿಯಲ್ಲಿ 10ಕ್ಕೂ ಅಧಿಕ ತೆಂಗಿನ ಮರಗಳು ನೆಲಕಚ್ಚಿವೆ. ಉಪಳೇಕೊಪ್ಪದಲ್ಲಂತೂ ಗಾಳಿಯ ಹಾನಿ ತೀವ್ರವಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ 20 ರಿಂದ 25 ನಿಮಿಷಗಳ ಕಾಲ ಬೀಸಿದ ಅಬ್ಬರದ ಗಾಳಿಗೆ ಗ್ರಾಮದ 8-10 ಮನೆಗಳ ಹಂಚುಗಳು ಹಾರಿ ಹೋಗಿದೆ. ವಿದ್ಯುತ್ ತಂತಿಗಳ ಮೇಲೂ ಮರಗಳು ಮುರಿದು ಬಿದ್ದಿದ್ದು ತಂತಿಗಳು ತುಂಡಾಗಿದೆ. 5-10 ವಿದ್ಯುತ್ ಕಂಬಗಳು ಮುರಿದು ಹೋಗಿದೆ.
ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಅವರು 3 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು. ಅವರು ಬೆಳೆದ ಬಾಳೆ ಇನ್ನೊಂದೆರಡು ತಿಂಗಳಿನಲ್ಲಿ ಫಸಲನ್ನು ಬಿಡಲು ತಯಾರಾಗಿತ್ತು. 2 ಲಕ್ಷಕ್ಕೂ ಅಧಿಕ ರು. ಖರ್ಚು ಮಾಡಿ ಬಾಳೆಯನ್ನು ಬೆಳೆದಿದ್ದ ಅವರು ಲಕ್ಷಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಿರುಗಾಳಿ ಅವರ ಆಸೆಯನ್ನು ಮಣ್ಣುಪಾಲು ಮಾಡಿದೆ. ತೋಟದಲ್ಲಿ ಬಹುತೇಕ ಬಾಳೆಯ ಮರಗಳು ಕಿತ್ತು ಬಿದ್ದಿದೆ. ಇಷ್ಟೂ ಸಾಲದು ಎನ್ನುವಂತೆ ತೋಟದ ಸುತ್ತಮುತ್ತಲೂ ಬೆಳೆದಿದ್ದ ದೈತ್ಯ ಮರಗಳು ಬಾಳೆಯ ತೋಟದ ಮೇಲೆ ಕಿತ್ತು ಬಿದ್ದಿವೆ. ಮನೆಯ ಪಕ್ಕದಲ್ಲೇ ಇದ್ದ ಹಲಸಿನ ಮರವೊಂದು ಕಿತ್ತು ಬಿದ್ದಿದೆ. ಇದರಿಂದಾಗಿ ಇನ್ನೂ ಬೆಳೆಯದ 150ಕ್ಕೂ ಅಧಿಕ ಹಲಸಿನ ಕಾಯಿ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಫಲ ಬರುತ್ತಿದ್ದ ತೆಂಗಿನ ಮರ ಮುರಿದು ಬಿದ್ದಿದೆ. ಎರಡು ಗೇರು ಮರಗಳು ಕಿತ್ತು ಬಿದ್ದಿವೆ. 200 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದೆ.
ಕವಿ, ಬರಹಗಾರ ಎನ್. ವಿ. ಮಂಜುನಾಥ ಅವರ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಅವರ ಮನೆಯ 500 ಹಂಚುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿ ಪುಡಿ ಪುಡಿಯಾಗಿದೆ. ಮಾವಿನ ಮರವೊಂದು ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. 25 ವರ್ಷ ಪ್ರಾಯದ ಕಳೆದ 15 ವರ್ಷಗಳಿಂದ ಫಲ ನೀಡುತ್ತಿದ್ದ ತೆಂಗಿನ ಮರ ಅರ್ಧದಲ್ಲಿಯೇ ಮುರಿದು ಬಿದ್ದಿದೆ. ಮೇವಿಗಾಗಿ ಹುಲ್ಲನ್ನು ತಂದು ಪೇರಿಸಿ ಇಡಲಾಗಿತ್ತು. ಅದರ ಮೇಲೆ ದೈತ್ಯ ಮಾವಿನ ಮರ ಉರುಳಿದೆ. ತೋಟದಲ್ಲಿದ್ದ ಬಾಳೆಯ ಗಿಡಗಳಂತೂ ಅರ್ಧದಲ್ಲಿಯೇ ಮುರಿದು ನಿಂತಿದೆ. 25ಕ್ಕೂ ಅಧಿಕ ಅಡಿಕೆಯ ಮರಗಳು ಗಾಳಿಯ ಅಬ್ಬರಕ್ಕೆ ಮುರಿದು ಹೋಗಿದೆ.
      ಉಪಳೇಕೊಪ್ಪದ ಜಾನಕಿ ನಾರಾಯಣ ನಾಯ್ಕ, ಜಗದೀಶ ರಾಮ ನಾಯ್ಕ, ವೀರಭದ್ರ ಶೇಷಗಿರಿ ನಾಯ್ಕ, ನೀಲಕಂಠ ರಾಮ ನಾಯ್ಕ, ಸುರೇಶ ಗಣಪತಿ ನಾಯ್ಕ, ವಿಘ್ನೇಶ್ವರ ಗಣಪತಿ ನಾಯ್ಕ, ಲೋಕೇಶ ಗೋಪಾಲ ನಾಯ್ಕ, ಕೇಶವ ಶ್ರೀಧರ ನಾಯ್ಕ, ಕನ್ನ ಬಡಿಯಾ ನಾಯ್ಕ, ವೆಂಕಟೇಶ ರಾಮ ನಾಯ್ಕ ಅವರ ಮನೆಯ ಹಂಚುಗಳು ಹಾರಿ ಹೋಗಿದೆ. ಫಲ ಬಿಡುತ್ತಿದ್ದ ಹಣ್ಣಿನ ಮರಗಳು ಕಿತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಬಾಳೆಯ ಮರಗಳು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಮುನಿದ ಪ್ರಕೃತಿ ಅದೆಷ್ಟೋ ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಅದೆಷ್ಟೋ ಲಕ್ಷ ರು. ಆದಾಯವನ್ನು ತರಬೇಕಿದ್ದ ಹಣ್ಣಿನ ಮರಗಳು, ತೋಟಗಾರಿಕೆ ಗಿಡಗಳೆಲ್ಲ ಧರಾಶಾಹಿಯಾಗಿವೆ. ಇದರಿಂದಾಗಿ ಉಪಳೇಕೊಪ್ಪದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗಾಳಿಯ ಅಬ್ಬರ ಉಪಳೇಕೊಪ್ಪಕ್ಕೆ ಸೀಮಿತವಾಗದೇ ಹಳೆ ಉಂಚಳ್ಳಿ, ಉಂಚಳ್ಳಿ ಹಾಗೂ ಕೆರೆಕೊಪ್ಪಗಳಲ್ಲಿಯೂ ಪ್ರತಾಪವನ್ನು ತೋರಿದೆ. ಕನಿಷ್ಟ 25 ಲಕ್ಷಕ್ಕೂ ಅಧಿಕ ರು. ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಬಡ, ಕೂಲಿ ಕಾರ್ಮಿಕರಾದ ಉಪಳೇಕೊಪ್ಪದ ನಿವಾಸಿಗಳು ಪ್ರಕೃತಿಯ ಮುನಿಸಿನ ಪರಿಣಾಮ ಕಂಗಾಲಾಗಿದ್ದಾರೆ. ಜೀವನಾಧಾರವಾಗಿದ್ದ ಬೆಳೆಯೆಲ್ಲ ಮಣ್ಣುಪಾಲಾಗಿರುವ ಕಾರಣ ಮುಂದೆ ಜೀವನವನ್ನು ಯಾವ ರೀತಿ ನಡೆಸಬೇಕು ಎನ್ನುವುದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕೂಡಲೇ ಬೆಳೆಹಾನಿಯನ್ನು ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಿರಸಿಯ ತಹಶಿಲ್ದಾರ್ ಬಸಪ್ಪ ಪೂಜಾರ, ಶಾನುಭೋಗರಾದ ಆರ್. ಎಂ. ನಾಯ್ಕ ಹಾಗೂ ಉಂಚಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ಭಟ್ ಅವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
***
25 ನಿಮಿಷ ಬೀಸಿದ ಗಾಳಿ 25 ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಲಹಿ ಬೆಳೆಸಿದ್ದ ಗಿಡ ಮರಗಳೆಲ್ಲ ನೆಲಕಚ್ಚಿವೆ. ದೇವರು ನಮ್ಮ ಮೇಲೆ ಯಾಕೆ ಸಿಟ್ಟಾಗಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ರಾತ್ರಿಯ ಅಬ್ಬರದ ಗಾಳಿ ಎಲ್ಲರಲ್ಲೂ ಭಯವನ್ನು ಹುಟ್ಟು ಹಾಕಿದೆ. ಮರಗಳನ್ನೆಲ್ಲ ತಿರುಗಿಸಿ ತಿರುಗಿಸಿ ಒಗೆಯುತ್ತಿತ್ತು. ಮನೆಯ ಹಂಚುಗಳನ್ನೆಲ್ಲ ಹಾರಿಸುತ್ತಿತ್ತು. ನಮಗೆ ಮನೆಯೊಳಗೆ ಕುಳಿತುಕೊಳ್ಳಲೂ ಭಯ, ಮನೆಯಿಂದ ಹೊರಗೆ ಬರಲೂ ಭಯ ಎನ್ನುವಂತಾಗಿತ್ತು.
ರಾಧಾ ವೆಂಕಟ್ರಮಣ ನಾಯ್ಕ
ಉಪಳೇಕೊಪ್ಪ
ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟು ಹೋಗಿದ್ದಾರೆ. ಸರ್ಕಾರ ನಮಗೆ ಕೊಡುವ ಪರಿಹಾರ ಸಾವಿರ ಸಾವಿರ ರು.ಗಳ ಮಟ್ಟದಲ್ಲಿರುತ್ತದೆ. ಆದರೆ ನಮಗೆ ಆಗಿರುವ ಹಾನಿ ಮಾತ್ರ ಲಕ್ಷಾಂತರ ರು. ಸರ್ಕಾರ ನೀಡುವ ಪರಿಹಾರವೂ ಇನ್ನೂ ನಾಲ್ಕೈದು ತಿಂಗಳುಗಳ ನಂತರ ನಮ್ಮ ಕೈಗೆ ತಲುಪುತ್ತದೆ. ಆದ್ದರಿಂದ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವನ್ನು ಮಾಡಬಾರದು. ಆಗಿರುವ ಹಾನಿಯನ್ನು ಸರಿಯಾಗಿ ಅಂದಾಜು ಮಾಡಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕಾಗಿದೆ.
ವೆಂಕಟೇಶ ರಾಮಾ ನಾಯ್ಕ

No comments:

Post a Comment