Tuesday, August 11, 2015

ಅಘನಾಶಿನಿ ಕಣಿವೆಯಲ್ಲಿ-25

              ಪೊಲೀಸರು ಹಾಗೂ ಫಾರೆಸ್ಟ್ ಅಧಿಕಾರಿಗಳಿಗೆ ಅದ್ಹೇಗೆ ತಿಳಿದಿತ್ತೋ? ಕಾಡಿನೊಳಕ್ಕೆ ಬಂದಿದ್ದ ಅವರು ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಲು ಆರಂಭಿಸಿದ್ದರು. ಪ್ರದೀಪ ಹಾಗೂ ತಂಡವನ್ನು ಕಂಡೊಡನೆಯೇ ಪರಿಶೀಲಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ `ಓಹೋ.. ನೀವೇನೋ ಪ್ರದೀಪ್.. ಬನ್ನಿ.. ನಿಮ್ಮನ್ನ ವಿಚಾರಣೆ ಮಾಡಬೇಕಿದೆ..' ಎಂದು ಕರೆದೊಯ್ದ. ಗಂಟೆಗಟ್ಟಲೆ ಕಾಲ ಮಾತುಕತೆ ನಡೆಯಿತು. ಅದೇನು ಮಾತನಾಡಿಕೊಂಡರೋ ಗೊತ್ತಾಗಲಿಲ್ಲ. ಪ್ರದೀಪ ಏನೋ ಹೇಳುತ್ತಿದ್ದ, ಅಧಿಕಾರಿ ಇನ್ನೇನನ್ನೋ ಬರೆದುಕೊಳ್ಳುತ್ತಿದ್ದ. ನಡು ನಡುವೆ ಪೊಲೀಸ್ ಅಧಿಕಾರಿ ಬೆವರು ಒರೆಸಿಕೊಳ್ಳುತ್ತಿದ್ದುದೂ ತಿಳಿಯಿತು. ವಿಷ್ಣು ಮೊದಲಿನಿಂದಲೂ ಪ್ರದೀಪನ ಮೇಲೆ ಕಣ್ಣಿಟ್ಟಿದ್ದ. ಪ್ರದೀಪ ಸಾಮಾನ್ಯದವನೇನಲ್ಲ. ಈತ ತಮಗೆಲ್ಲರಿಗೂ ಏನನ್ನೋ ಮುಚ್ಚಿಟ್ಟಿದ್ದಾನೆ ಎನ್ನುವುದು ವಿಷ್ಣುವಿಗೆ ಖಾತರಿಯಾಗಿತ್ತು. ಇದೀಗ ಪ್ರದೀಪ ಪೊಲೀಸ್ ಅಧಿಕಾರಿಯ ಬಳಿ ಮಾತನಾಡುತ್ತಿರುವುದನ್ನು ನೋಡಿದಾಗ ವಿಷಯ ಪಕ್ಕಾ ಆಯಿತು.
             ಪ್ರದೀಪ ಪೊಲೀಸ್ ಅಧಿಕಾರಿಗೆ ಏನು ಏಳಿದನೋ ಗೊತ್ತಾಗಲಿಲ್ಲ. ಪ್ರದೀಪನ ಅಣತಿಯಂತೆ ಚಕಚಕನೆ ಕಾರ್ಯಗಳು ನಡೆಯುತ್ತಿದ್ದವು. ವಿನಾಯಕ ಸ್ವಲ್ಪ ದೂರದಲ್ಲಿದ್ದ ದಡೆಯ ಬಳಿ ಹೋಗಿ, ಫಾರೆಸ್ಟ್ ಅಧಿಕಾರಿಗೆ ಎಲ್ಲವನ್ನೂ ತೋರಿಸಿದ್ದ. ಫಾರೆಸ್ಟ್ ಅಧಿಕಾರಿ ಕೊಯ್ಯಲಾಗಿದ್ದ ಎಲ್ಲಾ ಮರಗಳನ್ನೂ, ತುಂಡುಗಳನ್ನೂ ಲೆಕ್ಕಹಾಕಿ, ಯಾವ ಜಾತಿಯ ಮರ, ಎಷ್ಟು ತುಂಡುಗಳಿವೆ ಎನ್ನುವುದನ್ನೆಲ್ಲ ತನ್ನ ಲೆಕ್ಖದ ಪಟ್ಟಿಯಲ್ಲಿ ಬರೆದಿಟ್ಟುಕೊಂಡು ಮಹಜರು ನಮೂದಿಸಿಕೊಳ್ಳುತ್ತಿದ್ದ. ಸಾಕಷ್ಟು ಬೆಲೆ ಬಾಳುವ ಮರಗಳನ್ನೇ ಕಡಿದು ಅವುಗಳಿಂದ ವಿವಿಧ ಗಾತ್ರದ ನಾಟಾಗಳನ್ನು ತಯಾರಿಸಲಾಗುತ್ತಿತ್ತು. ದೊಡ್ಡ ದೊಡ್ಡ ತೊಲೆಗಳು, ತುಂಡುಗಳನ್ನು ಅಚ್ಚುಕಟ್ಟಾಗಿ ತಯಾರು ಮಾಡಿ ಪೇರಿಸಿ ಇಡಲಾಗಿತ್ತು. ಅಲ್ಲಿ ಪೇರಿಸಿ ಇಡಲಾಗಿದ್ದ ಮರದ ತುಂಡುಗಳನ್ನು ಗಮನಿಸಿದರೆ ಅಜಮಾಸು ಒಂದು ವಾರಕ್ಕೂ ಅಧಿಕ ಕಾಲದಿಂದ ಮರಕ್ಕೆ ಕೊಡಲಿ ಹಾಕುವ ಕಾರ್ಯ ನಿರಂತರವಾಗಿ ಸಾಗಿರುವುದು ಸ್ಪಷ್ಟವಾಗುತ್ತಿತ್ತು.
            ಫಾರೆಸ್ಟ್ ಆಫೀಸರ್ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿದ್ದರು. ಫಾರೆಸ್ಟ್ ಆಫೀಸರ್ ತನ್ನ ವ್ಯಾಪ್ತಿಯಲ್ಲಿ ಇಷ್ಟು ರಾಜಾರೋಷವಾಗಿ ಮರಗಳ್ಳತನ ನಡೆಯುತ್ತಿದ್ದರೂ ಸುಮ್ಮನಿದ್ದಾನೆ ಎಂದು ಹಿರಿಯ ಅಧಿಕಾರಿಗಳಿಂದ ಆಗಲೇ ಮೂರ್ನಾಲ್ಕು ಸಾರಿ ಬೈಗುಳಗಳನ್ನು ಎದುರಿಸಿಯಾಗಿತ್ತು. ಆತ ಚಡಪಡಿಸುತ್ತಿದ್ದ. ಮನಸ್ಸಿನಲ್ಲಿಯೇ ಹಿಡಿಶಾಪವನ್ನು ಹಾಕುತ್ತಿದ್ದ.
           ಪೊಲೀಸರಿಗೆ ಮಾತ್ರ ಪ್ರದೀಪನಿಂದ ಹೊಡೆತ ತಿಂದು ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಹೇಗೆ ಪತ್ತೆ ಹಚ್ಚುವುದಪ್ಪಾ ದೇವರೆ ಎನ್ನುವ ಚಿಂತೆ ಕಾಡುತ್ತಿತ್ತು. ಕೂಡಲೇ ಸುತ್ತಮುತ್ತಲ ಊರುಗಳಿಗೆ ಪೊಲೀಸರನ್ನು ಕಳುಹಿಸಿ ಯಾರಾದರೂ ಅಕಾಲಿಕವಾಗಿ ಮರಣ ಹೊಂದಿದ್ದಾರೆಯೋ ಹೇಗೆ ಎನ್ನುವುದನ್ನು ತಿಳಿದುಕೊಂಡು ಬರುವಂತೆ ಹೇಳಲಾಯಿತು. ದಂಟಕಲ್ಲಿನಿಂದ ಸುತ್ತಮುತ್ತ ಇದ್ದ ಎಲ್ಲ ಊರುಗಳಿಗೂ ತಲಾ ಒಬ್ಬರಂತೆ ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ತೆರಳಿದರು. ಪ್ರದೀಪ ಈ ಎಲ್ಲ ಕಾರ್ಯಗಳೂ ನಡೆದ ನಂತರ ನಿರಾಳನಾದಂತೆ ಅನ್ನಿಸಿತು. ವಿಕ್ರಮ ಹಾಗೂ ವಿನಾಯಕ ಪ್ರದೀಪನ ಕಾರ್ಯವೈಖರಿಯ ಕುರಿತು ಅನುಮಾನ ಬಂದು ಕೇಳಿದಾಗ `ಮಂತ್ರಿಗಳ ಹೆಸರನ್ನು ಹೇಳಿ ಕೆಲಸ ಮಾಡಿಸಿದೆ ನೋಡಿ..' ಎಂದು ಮೊದಲೇ ಹೇಳಿದ್ದ ಮಾತನ್ನು ಪುನರುಚ್ಚಾರ ಮಾಡಿದ. ಆದರೆ ಈ ಸಾರಿ ಪ್ರದೀಪನ ಮಾತನ್ನು ಯಾರೂ ನಂಬಲು ತಯಾರಿರಲಿಲ್ಲ.

*****

                `ಏನ್ರೀ.. ಏನ್ ಯಡವಟ್ಟು ಮಾಡಿಕೊಂಡಿರಿ? ಇದೆಲ್ಲಾ ಹೇಗಾಯ್ತು. ಯಾವಾಗಲೂ ನಾವು ಕೈ ಹಾಕಿದ ಕೆಲಸದಲ್ಲಿ ಸೋಲು ಬಂದಿರಲಿಲ್ಲ. ಆದರೆ ಈ ದಿನ ನೀವೆಲ್ಲ ಸೋತು ಬಂದಿದ್ದೀರಿ ಎಂದರೆ ಏನು? ನಮ್ಮ ತಂಡದ ಒಬ್ಬ ವ್ಯಕ್ತಿ ಸಾಯೋದು ಅಂದರೇನು? ಮಾನ ಮರ್ಯಾದೆ ಇಲ್ಲವಾ ನಿಮಗೆ.. ಏನಿದೆಲ್ಲಾ..' ಎಂದು ಆ ನಾಯಕ ಗದರುತ್ತಿದ್ದರೆ ಆತನ ಮುಂದೆ ನಿಂತಿದ್ದ ನಾಲ್ಕಕ್ಕೂ ಹೆಚ್ಚಿನ ಜನ ತಲೆ ತಗ್ಗಿಸಿ ಮಾತು ಕೇಳುತ್ತಿದ್ದರು. ತಪ್ಪಾಗಿದ್ದಂತೂ ನಿಜ. ಮರಗಳ್ಳತನ ಮಾಡುವಾಗ ಯಾರೋ ಒಂದಷ್ಟು ಜನರು ಪೋಟೋ ಹೊಡೆದುಕೊಳ್ಳತೊಡಗಿದ್ದರು. ಅವರ ಮೇಲೆ ದಾಳಿ ಮಾಡಿದರೆ ಪ್ರತಿ ದಾಳಿ ಕೂಡ ನಡೆಯಿತು. ಅದರಲ್ಲಿ ಒಬ್ಬಾತ ಅಸುನೀಗಿದ್ದ. ಅಷ್ಟೇ ಅಲ್ಲದೇ ಇನ್ನೊಬ್ಬನ ಮೇಲೆ ನಾಯಿ ದಾಳಿ ಮಾಡಿ ಕಾಲಿಗೆ ಗಾಯ ಮಾಡಿತ್ತು. ಆ ಭಾಗದ ಕಾಳದಂಧೆಯಲ್ಲಿ ಒಮ್ಮೆಯೂ ಇಂತಹ ಸೋಲು ಕಾಳದಂದೆ ಮಾಡುವವರಿಗೆ ಎದುರಾಗಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಅಂತಹ ಸೋಲು ಎದುರಾಗಿತ್ತು. ನಾಯಕ ಚಡಪಡಿಸಿದ್ದ.
               ಇಷ್ಟು ದಿನ ಹೆದರಿಕೊಂಡಂತಿದ್ದ ಜನರ ನಡುವೆ ಇಂದು ಯಾರೋ ಒಂದಿಷ್ಟು ಜನ ಬಂದು ತಿರುಗಿ ನಿಂತರು, ಪ್ರತಿದಾಳಿ ನಡೆಸಿದರು ಎನ್ನುವುದು ಸಿಟ್ಟಿಗೂ ಕಾರಣವಾಗಿತ್ತು. ಭಯವನ್ನು ಹುಟ್ಟಿಸುವ ಮೂಲಕ ಆ ಭಾಗದಲ್ಲಿ ಮರಗಳ್ಳರು ಹಾಗೂ ಸೂರ್ಯ ಶಿಖಾರಿ ತಂಡ ಪ್ರಖ್ಯಾತಿ ಗಳಿಸಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರತಿದಾಳಿ ನಡೆದು ಭಯವೇ ಹೋದಂತಹ ಅನುಭವ. ಕೂಡಲೇ ಇದನ್ನು ತಡೆಯಬೇಕು ಎಂದುಕೊಂಡ ಗುಂಪಿನ ನಾಯಕ.
              `ಯಾರು ನಿಮ್ಮ ಮೇಲೆ ದಾಳಿ ಮಾಡಿದ್ದು?' ಸಿಟ್ಟಿನಿಂದ ಕೂಗಿದ್ದ ನಾಯಕ
              `ಗೊತ್ತಿಲ್ಲ. ನಾಲ್ಕೋ ಐದೋ ಜನ ಇದ್ದರು. ಒಬ್ಬಳು ಹುಡುಗಿ ಇದ್ದಳು..'
              `ಹುಡುಗಿ ಇದ್ದಳಾ? ಯಾರು ಅವರು ಪತ್ತೆ ಮಾಡಿ..'
              `ಗೊತ್ತಾಗಲಿಲ್ಲ.. ನಮ್ಮ ಕಡೆಯವರಲ್ಲ ಅವರು.. ಯಾರೋ ಹೊಸಬರು. ಜೊತೆಗೆ ನಾಯಿ ಇತ್ತು. ನಮ್ಮ ಮೇಲೆ ಮರುದಾಳಿ ಮಾಡಿದವನು ಸಾಮಾನ್ಯ ವ್ಯಕ್ತಿಯಲ್ಲ. ಹೊಡೆದ ಒಂದೇ ಹೊಡೆತಕ್ಕೆ ನಮ್ಮವ ಸತ್ತು ಹೋದ. ಅಷ್ಟೇ ಅಲ್ಲ ಆತನ ಹಿಂದೆ ಬರುತ್ತಿದ್ದ ನಮ್ಮನ್ನೂ ಬೆನ್ನಟ್ಟಿ ಬಂದ. ನಾವು ವಾಪಾಸು ಓಡಿ ಬಂದೆವು..'
             `ನಾಚಿಕೆ ಆಗೋದಿಲ್ಲವಾ ನಿಮಗೆ.. ಸೋತು ಬಂದಿದ್ದೀರಿ ಅಂತ ಹೇಳೋಕೆ. ಇಷ್ಟೆಲ್ಲ ಜನ ಇದ್ದೀರಿ ನೀವು. ನಿಮಗೆ ಬೇಕಾದ ಆಯುಧ ಕೂಡ ಕೊಟ್ಟಿದ್ದೆ. ಸರಿಯಾಗಿ ಇಕ್ಕಬೇಕಿತ್ತು ಅವನಿಗೆ.'
             `ಆಗಲಿಲ್ಲ ಬಾಸ್.. ಅದೇ ವೇಳೆ ನಾಯಿ ಕೂಡ ದಾಳಿ ಮಾಡಿತಲ್ಲ.. ನನಗೆ ಕಾಲು ಊರಲು ಆಗುತ್ತಿಲ್ಲ.. ನಾನೇ ಎಲ್ಲರನ್ನೂ ಹೇಗೋ ವಾಪಾಸು ಕರೆತಂದೆ. ಆಮೇಲೆ ಬಹಳ ಹೊತ್ತಿನ ನಂತರ ಸತ್ತು ಹೋಗಿದ್ದ ನಮ್ಮವನ ದೇಹವನ್ನು ಹೊತ್ತು ತಂದು ಹಾಕಿಕೊಂಡು ಬಂದಿದ್ದೇವೆ..'
             `ಥೂ.. ಮತ್ತೆ ಮತ್ತೆ ತಪ್ಪನ್ನೇ ಮಾಡಿದ್ದೀರಲ್ಲೋ.. ಆ ದೇಹವನ್ನು ಎಲ್ಲಾದರೂ ಮಣ್ಣು ಮಾಡಿ. ಅಥವಾ ಕಾಣೆ ಮಾಡಿ. ನೀವು ಹೊತ್ತುಕೊಂಡು ಬಂದ ಮಾರ್ಗದ ಜಾಡು ಹಿಡಿದು ಬಂದರೆ ಏನು ಮಾಡ್ತೀರಿ? ಎಲ್ಲಾ ಕೆಲಸನೂ ತಪ್ಪಾಗಿಯೇ ಮಾಡಿದ್ದೀರಿ.. ಏನಾಗಿದೆ ನಿಮಗೆ? ಈ ಸಾರಿ ಬಚಾವಾಗೋದು ಕಷ್ಟವಿದೆಯಲ್ಲ. ಇನ್ನು ಮೇಲೆ ಪೊಲೀಸರೂ ಚುರುಕಾಗುತ್ತಾರೆ. ಮೊದಲಿನ ಹಾಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟು ಕೆಲಸ ಮಾಡಿಸಲು ಆಗೋದಿಲ್ಲ. ಎಲ್ಲಾ ಕೆಲಸ ಎಡವಟ್ಟು ಮಾಡಿದಿರಲ್ಲ..' ಎಂದು ಬಾಸ್ ಬಯ್ಯುತ್ತಲೇ ಇದ್ದ.
             ಬಹಳ ಹೊತ್ತಿನ ನಂತರ ಬಯ್ಯುವುದನ್ನು ನಿಲ್ಲಿಸಿದ ಆತ ಹಲವು ಸೂಚನೆಗಳನ್ನು ನೀಡಿದ. ಧಾಳಿ ಮಾಡಿದ ತಂಡವನ್ನು ಹುಡುಕುವುದು, ನಾಯಿಯ ದಾಳಿಗೆ ಗಾಯಗೊಂಡಿದ್ದವನು ಹೊರ ಜಗತ್ತಿನಲ್ಲಿ ಯಾರಾದರೂ ಕೇಳಿದರೆ ಏನು ಹೇಳುವುದು ಎಂಬುದನ್ನೂ ತಿಳಿಸಿದ್ದ. ಸತ್ತವನನ್ನು ಅಘನಾಶಿನಿ ನದಿಯಲ್ಲಿ ತೇಲಿಸಿ ಬಿಡಿ. ತೇಲಿಸುವ ಮುನ್ನ ಮುಖವನ್ನು ಸಂಪೂರ್ಣ ಜಜ್ಜಿ ಹಾಕಿ. ಗುರುತು ಸಿಗದಂತೆ ಮಾಡಿ ಎಂದೂ ಹೇಳುವುದನ್ನು ಮರೆಯಲಿಲ್ಲ. ಆ ನಾಯಕ ಹೇಳಿದಂತೆ ಮುಂದಿನ ಎಲ್ಲ ಕಾರ್ಯಗಳನ್ನೂ ಚಕಚಕನೆ ನೆರವೇರಿಸಿತು ಆತನ ತಂಡ.

****

             `ವಿಕ್ರಂ. ಮೊದಲು ನಾವು ರಾಮು ಯಾರ ಮೇಲೆ ದಾಳಿ ಮಾಡಿತೋ ಆತನನ್ನು ಹುಡುಕೋಣ..' ಎಂದ ಪ್ರದೀಪ.
             `ಹೇಗೆ ಸಾಧ್ಯ?' ಎಂದ ವಿಕ್ರಂ
              `ರಾಮು ಯಾರ ಮೇಲೆ ದಾಳಿ ಮಾಡಿತ್ತೋ ಆತ ಸುತ್ತಮುತ್ತಲ ಊರಿನವನಿರಬೇಕು. ಕಾಲಿಗೆ ಯಾರಿಗೆ ಗಾಯವಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಕಾಲಿಗೆ ಗಾಯವಾಗಿರುವವನೇ ರಾಮುವಿನ ದಾಳೀಗೆ ಒಳಗಾಗಿರುವ ವ್ಯಕ್ತಿ. ಹೀಗೆ ಮಾಡಿದರೆ ಹುಡುಕಬಹುದು ನೋಡು. ಸುತ್ತಮುತ್ತಲ ಊರುಗಳಲ್ಲಿ ನಾಳೆಯಿಂದಲೇ ನಾವು ಆರೋಗ್ಯ ಕಾರ್ಯಕರ್ತರು ಎನ್ನುವ ಸೊಗಿನಲ್ಲಿ ಹೋಗೋಣ. ಖಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳು ನಾಟಕವನ್ನು ಆಡೋಣ. ಆಗ ನಮಗೆ ಗಾಯಗೊಂಡವನ ಸುಳಿವು ಸಿಕ್ಕರೂ ಸಿಗಬಹುದು. ಹೇಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಅವರು ಬೇರೆಯ ಮಾರ್ಗದಲ್ಲಿ ಪತ್ತೆ ಹಚ್ಚುತ್ತಾರೆ..' ಎಂದ ಪ್ರದೀಪ.
            `ಇದು ಸಕ್ಸಸ್ ಆಗ್ತದೆ ಅಂತೀಯಾ? ಈಗಾಗಲೇ ಕಾಡಿನಲ್ಲಿ ನಡೆದ ದಾಳಿ, ಒಬ್ಬ ಸತ್ತಿರುವುದು ಇವೆಲ್ಲ ಸುತ್ತಮುತ್ತಲೂ ಹಬ್ಬಿರುತ್ತದೆ. ಅಂತದ್ದರಲ್ಲಿ ದಾಳಿಗೆ ಒಳಗಾದವರು ನಮ್ಮ ಕೈಗೆ ಸಿಗುತ್ತಾರೆ ಅಂತೀಯಾ? ಸಿಕ್ಕರೂ ಅವರು ನಿಜ ಹೇಳಬೇಕಲ್ಲ..' ವಿಕ್ರಂ ಸಂದೇಹವನ್ನು ತೋಡಿಕೊಂಡ.
            `ನೀ ಹೇಳೋದು ನಿಜ. ಆದರೆ ಒಂದು ಕಲ್ಲು ಹೊಡೆಯೋಣ. ಸಿಕ್ಕರೆ ಒಂದು ಕಾಯಿ. ಇಲ್ಲವಾದರೆ ತೊಂದರೆ ಇಲ್ಲ. ಸಿಕ್ಕಿದರು ಅಂತಾದರೆ ನಿಜ ಹೇಳದಿದ್ದರೆ ತೊಂದರೆಯೇನಿಲ್ಲ. ಆದರೆ ಆತನ ಮೇಲೆ ಕಣ್ಣು ಇಡಬಹುದು ಅಲ್ಲವಾ. ಕಣ್ಣಿಟ್ಟರೆ ಸೂರ್ಯಶಿಖಾರಿ ತಂಡವನ್ನು ಪತ್ತೆ ಹಚ್ಚ ಬಹುದೇನೋ..' ಎಂದು ಪ್ರದೀಪ ಹೇಳಿದ್ದ. ಪ್ರದೀಪನ ಮಾತಿನ ವೈಖರಿಯಿಂದ ವಿಕ್ರಮನ ಆದಿಯಾಗಿ ಎಲ್ಲರೂ ಅಚ್ಚರಿ ಹೊಂದಿದ್ದರು.
            `ಇನ್ನೊಂದು ವಿಷಯ. ಖಂಡಿತ ನಮ್ಮಿಂದ ದಾಳಿಗೆ ಒಳಗಾದವರು ಸುಮ್ಮನೆ ಕೂರುವುದಿಲ್ಲ. ಅವರ ಮೇಲೆ ಯಾರು ದಾಳಿ ಮಾಡಿರಬಹುದು ಎನ್ನುವುದನ್ನು ತಲಾಶ್ ಮಾಡಲು ಆರಂಭಿಸುತ್ತಾರೆ. ಅವರ ಕಣ್ಣು ಇವತ್ತಲ್ಲಾ ನಾಳೆ ನಮ್ಮ ಮೇಲೆ ಬಿದ್ದೇ ಬೀಳುತ್ತದೆ. ಆದ್ದರಿಂದ ಎಲ್ಲರೂ ಹುಷಾರಾಗಿರ್ರಪ್ಪಾ..' ಎಂದು ಪ್ರದೀಪ ಹೇಳುವುದನ್ನು ಮರೆಯಲಿಲ್ಲ. ಪ್ರದೀಪನ ಆಲೋಚನಾ ಸರಣಿಗೆ ಎಲ್ಲರೂ ತಲೆದೂಗಿದರು. ಮುಂದೆ ಹುಷಾರಾಗಿರುತ್ತೇವೆ ಎಂದೂ ಹೇಳಿದರು. ಅಘನಾಶಿನಿ ಕಣಿವೆ ಒಮ್ಮೆ ಬೆಚ್ಚಿ ಬಿದ್ದಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ದುರಂತಗಳಿಗೆ, ನೋವುಗಳಿಗೆ, ಜನಸಾಮಾನ್ಯರೂ ನಡುಗಿ ಹೋಗುವಂತಹ ತಿರುವುಗಳಿಗೆ ಮರಗಳ್ಳರ ಮೇಲಿನ ದಾಳಿ ಕಾರಣವಾಗಲಿತ್ತು. ಪ್ರದೀಪ ಇವೆಲ್ಲವನ್ನೂ ಅಂದಾಜು ಮಾಡಿದ್ದ.

(ಮುಂದುವರಿಯುತ್ತದೆ)

No comments:

Post a Comment