Sunday, August 23, 2015

ಮಗುವಿನ ನಗು

ತೊಟ್ಟಿಲಲಿ ಮಲಗಿದ್ದ
ಪುಟ್ಟ ಕಂದನ ನಗುವು
ಮನೆಯೆಲ್ಲಾ ತುಂಬಿತ್ತು
ನನ್ನೊಲವ ಸೆಳೆದಿತ್ತು ||

ತೊಟ್ಟಿಲೊಳಗೆ ಆಡುತ್ತ
ಕೇಕೆಯನು ಹಾಕುತ್ತ
ಮಗುವದು ನಲಿದಿತ್ತು
ಕವಿ ಹೃದಯವ ತಾಕಿತ್ತು ||

ಜಗವದು ಕುಣಿವಂತೆ
ಮಾಡುವ ಶಕ್ತಿಯದು
ಪುಟ್ಟ ಮಗು ಮೂಡಿಸುವ
ಮುಗ್ಧತೆಯ ನಗೆಗಿತ್ತು ||

ಮಗುವದು ನಗುತಿರಲು
ಶಶಿಯುದಿಸಿ ಬಂದಂತೆ
ದೇವರನು ಕಂಡಂತೆ
ಜೀವ ಪುಳಕಗೊಂಡಿತು ||

****

(ಈ ಕವಿತೆಯನ್ನು ಬರೆದಿರುವುದು 19-12-2005ರಂದು ದಂಟಕಲ್ಲಿನಲ್ಲಿ)

ಮಾಸ್ತರ್ ಮಂದಿ-6

ಹರೀಶ ನಾಯ್ಕ :
              ನಾನು ಐದನೇ ಕ್ಲಾಸಿನಲ್ಲಿದ್ದಾಗ ಶಾಲೆಗೆ ಶಿಕ್ಷಕರಾಗಿ ಬಂದವರು ಹರೀಶ ನಾಯ್ಕರು. ಮೊಟ್ಟಮೊದಲ ಪೋಸ್ಟಿಂಗ್ ನಮ್ಮ ಶಾಲೆ. ಬಹಳ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದ ಮಾಸ್ತರ್ ಬಹಳ ಚೆಂದ ಹಾಡು ಹೇಳುತ್ತಿದ್ದರು. ಪೋಸ್ಟಿಂಗಿಗೆ ಹಾಕುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ಮ್ಯಾಪನ್ನು ನೋಡಿದ ಹರೀಶ ಮಾಸ್ತರ್ರಿಗೆ ಅಡ್ಕಳ್ಳಿ ಶಾಲೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದಂತೆ ಕಾಣಿಸಿತಂತೆ. ಒಳ್ಳೆಯ ಶಾಲೆ ಶಿರಸಿಗೂ ಹತ್ತಿರ ಇರಬಹುದು ಎಂದು ಪೋಸ್ಟಿಂಗ್ ಹಾಕಿಸಿಕೊಂಡು ಬಂದೇ ಬಿಟ್ಟರು. ಬಂದ ಮೇಲೆಯೇ ಗೊತ್ತಾಗಿದ್ದು ಮುಖ್ಯ ರಸ್ತೆಯಿಂದ ಅಡ್ಕಳ್ಳಿ ಶಾಲೆ 2 ಕಿಮಿ ದೂರದಲ್ಲಿದೆ ಎನ್ನುವುದು. ಶಿರಸಿಗೇನೋ 15 ಕಿ.ಮಿ ದೂರದಲ್ಲಿ ಶಾಲೆಯಿತ್ತು. ಆದರೆ ಶಾಲೆಗೆ ಬಸ್ ಸಂಪರ್ಕ ಬೇಕಲ್ಲ. ದಿನಕ್ಕೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳಿದ್ದವು. ಅದನ್ನು ಬಿಟ್ಟರೆ ಬೇರೆ ಬಸ್ಸುಗಳೇ ಇರಲಿಲ್ಲ. ಹೀಗಾಗಿ ಅಡ್ಕಳ್ಳಿಯ ಸುತ್ತಮುತ್ತಲ ಊರುಗಳಲ್ಲಿ ಎಲ್ಲಾದರೂ ಉಳಿದುಕೊಳ್ಳಲು ಜಾಗವಿದೆಯೇ ಎಂದು ಪ್ರಯತ್ನಿಸಿದರು. ಅವರಿಗೆ ಎಲ್ಲೂ ಜಾಗಸಿಗಲಿಲ್ಲ. ಕೊನೆಗೆ ಶಾಲೆಯ ಪಕ್ಕದಲ್ಲಿಯೇ ಇದ್ದ ಕ್ವಾಟ್ರಸ್ಸಿನಲ್ಲಿ ಉಳಿದುಕೊಂಡರು. ಮುತ್ಮುರ್ಡಿನ ಕಿರಿಯ ಪ್ರಾಥಮಿಕ ಶಾಲೆಗೆ ಆಗತಾನೆ ಮಾಸ್ತರ್ರಾಗಿ ಬಂದಿದ್ದ ರಮೇಶ ನಾಯ್ಕರೂ ಅವರ ಜೊತೆ ಉಳಿದುಕೊಳ್ಳಲು ಆರಂಭಿಸಿದರು.
             ಹರೀಶ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಬಂದ ದಿನ ನಾನು ದೋಸ್ತ ವಿಜಯನ ಜೊತೆಗೆ ಅಡ್ಕಳ್ಳಿಯ ಆರ್. ಜಿ. ಹೆಗಡೇರ ಮೆನೆಗ ಹೋಗಿದ್ದೆ. ಶಾಲೆಗೆ ಹೊಸ ಮಾಸ್ತರ್ರು ಬರ್ತಾರಂತೆ. ಅರ್ಜೆಂಟು ಬರಬೇಕಂತೆ ಎಂದು ಹೇಳಲು ನಾವು ತೆರಳಿದ್ದೆವು. ನಾವು ವಾಪಾಸು ಬರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆಗೆ ಆರ್. ಜಿ. ಹೆಗಡೇರ ಮನೆಗೆ ಬರುತ್ತಿರುವುದು ಕಾಣಿಸಿತ್ತು. ಗಡ್ಕರ್ ಮಾಸ್ತರ್ರು ನಮ್ಮನ್ನು ತೋರಿಸಿ `ನೋಡ್ರೀ.. ಇವ್ರೂ ನಿಮ್ಮ ಕ್ಲಾಸಿಗೆ ಬರೋ ಹುಡುಗರು. ಇಂವ ಹಾಂಗೆ.. ಅಂವ ಹೀಂಗೆ..' ಎಂದು ನನ್ನ ಹಾಗೂ ವಿಜಯನ ಗುಣಗಾನ ಮಾಡಿದರು. ನಾವು ಮಾಸ್ತರ್ರು ಹಂಗಂತೆ.. ಹಿಂಗಂತೆ ಎನ್ನುತ್ತಾ ಶಾಲೆಗೆ ಮರಳಿದ್ದೆವು.
           ಬಂದವರೇ ನಮ್ಮನ್ನೆಲ್ಲ ಪರಿಚಯ ಮಾಡಿಕೊಂಡರು. ಬಂದ ಹೊಸತರಲ್ಲಿ ನನಗೆ, ವಿಜಯನಿಗೆ ಹಾಗೂ ಹರೀಶ ಮಾಸ್ತರ್ರಿಗೆ ವಿಶೇಷ ಬಂಧ ಬೆಳೆಯಿತು. ಆದರೆ ಯಾವಾಗ ತಿಂಗಳೊಪ್ಪತ್ತಿನಲ್ಲಿ ಅವರು ಶೆಳಕೆಯಿಂದ ನಮಗೆಲ್ಲ ಹೊಡೆಯಲು ಆರಂಭಿಸಿದರೂ ಆವಾಗ ನಾವೂ ಬುದ್ಧಿವಂತಿಕೆಯಿಂದ ಸ್ವಲ್ಪ ಡಿಸ್ಟೆನ್ಸ್ ಮೆಂಟೆನ್ ಮಾಡಿದೆವು. ನಾವು ಬಿಟ್ಟರೂ ಹರೀಶ ಮಾಸ್ತರ್ರು ಬಿಡಬೇಕಲ್ಲ. ನಮ್ಮನ್ನು ಕಾಡಿದರು. ಅದೇನೇನೋ ಕೆಲಸಗಳನ್ನು ಕೊಟ್ಟರು. ವಿಜ್ಞಾನ ವಿಷಯವೆಂದರೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದ ನಮಗೆಲ್ಲ ವಿಜ್ಞಾನ ಪ್ರಯೋಗಗಳನ್ನು ಮಾಡುವುದು ಎಂದರೆ ಹೀಗೆ ಎನ್ನುವುದನ್ನು ತೋರಿಸಿಕೊಟ್ಟರು. ಲಿಟ್ಮಸ್ ಕಾಗದ ಬಣ್ಣ ಬದಲಾಯಿಸುವುದು ಇವೆಲ್ಲ ಅವರಿಂದಲೇ ನೋಡಿದ್ದು. ಲಿಟ್ಮಸ್ ಕಾಗದ ಹರೀಶ ಮಾಸ್ತರ್ರ ಕೈಯಲ್ಲಿ ಬಣ್ಣ ಬದಲಾಯಿಸಿದ್ದನ್ನು ನೋಡಿ ಈ ಮಾಸ್ತರ್ರು ಪಕ್ಕಾ ಮಂತ್ರವಾದಿಯೋ ಅಥವಾ ಇಂದ್ರಜಾಲಿಕನೋ ಇರಬೇಕು ಎಂದೂ ಆಲೋಚಿಸಿದ್ದೆವು ಬಿಡಿ. ಆದರೆ ಯಾವಾಗ ಶಾಸ್ತ್ರ ಸಹಿತವಾಗಿ ಯಾಕೆ ಆ ಕಾಗದ ಬಣ್ಣ ಬದಲಾಯಿಸಿತು ಎನ್ನುವನ್ನು ತಿಳಿಸಿದಾಗ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳು ಇಟ್ಟಿದ್ದೆವು.
             ನಾನು ಹಾಗೂ ವಿಜಯ ಆ ದಿನಗಳಲ್ಲಿ ಒಂದೇ ದೋಣಿ ಕಳ್ಳರು ಬಿಡಿ. ನಮ್ಮ ಕ್ಲಾಸಿನಲ್ಲಿ ಮೂವರು ಗಂಡು ಹುಡುಗರು ಇದ್ದೆವು. ಏಳು ಜನರ ಹುಡುಗಿಯರು. ಮೂವರ ಪೈಕಿ ಮಹೇಶ ಬುದ್ಧಿವಂತನೆಂಬ ಹಣೆಪಟ್ಟಿ ಕಟ್ಟಿಕೊಂಡು ನಮ್ಮಿಂದ 1 ಪೋಟ್ ಡಿಸ್ಟೆನ್ಸಿನಲ್ಲಿ ಇರುತ್ತಿದ್ದ. ನಾನು ಹಾಗೂ ವಿಜಯ ಇಬ್ಬರೂ ಸಮಾನ ದುಃಖಿಗಳು.. ಸಮಾನ ಸುಖಿಗಳು. ಅಂಕಗಳೂ ಹೆಚ್ಚೂ ಕಡಿಮೆ ಒಂದೇ ಹದದಲ್ಲಿ ಬೀಳುತ್ತಿದ್ದವು ಬಿಡಿ. ಹುಡುಗಿಯರಲ್ಲಿ ಸಂಧ್ಯಾ ಹಾಗೂ ಸವಿತಾ ಎಂಬಿಬ್ಬರು ಇದ್ದರು. ಅವರೂ ಕೂಡ ಓದುವುದರಲ್ಲಿ ಎತ್ತಿದ ಕೈ. ಮಹೇಶನಿಗೆ ಸವಾಲು ಹಾಕಿ ಓದುತ್ತಿದ್ದ ಇವರು ಆಗೀಗ ಮಹೇಶನನ್ನು ಹಿಂದಕ್ಕೆ ಹಾಕುತ್ತಲೂ ಇರುತ್ತಿದ್ದರು. ವೀಣಾ ಎಂಬಾಕೆಯೊಬ್ಬಳಿದ್ದಳು. ಆಕೆಗೂ ನನಗೂ ಹಾಗೂ ವಿಜಯನಿಗೂ ಹೆಚ್ಚೂ ಕಡಿಮೆ ಒಂದೇ ಸಮನಾದ ಅಂಕಗಳು ಬರುತ್ತಿದ್ದವು. ವೀಣಾ, ಸಂಧ್ಯಾ, ಹಾಗೂ ಸವಿತಾರಿಗೆ ನಾನು ಹಾಗೂ ವಿಜಯ ಬಹಳ ಆಪ್ತರು. ಮಹೇಶ ಸಾಕಷ್ಟು ಸೊಕ್ಕು ಮಾಡುತ್ತಿದ್ದ ಕಾರಣ ಅವನನ್ನು ಕಂಡರೆ ಉಳಿದವರಿಗೆ ಅಷ್ಟಕ್ಕಷ್ಟೇ ಆಗಿತ್ತು. ನಾನು ಹಾಗೂ ವಿಜಯ ಸಿಕ್ಕಾಪಟ್ಟೆ ಓದುವವರಿಗೆ ಕಾಂಪಿಟೇಟರ್ ಅಲ್ಲ. ಆ ಕಾರಣದಿಂದ ನಾವು ಆಪ್ತರಾಗಿರಬಹುದು. ಅದು ಹಾಗಿರಲಿ ಬಿಡಿ. ಶಶಿಕಲಾ, ರಂಜನಾ ಹಾಗೂ ವಿಜಯಲಕ್ಷ್ಮೀ ಎಂಬ ಮತ್ತೂ ಮೂವರು ಇದ್ದರು. ಅವರೆಲ್ಲ ನಮಗಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಪಡೆಯುತ್ತಿದ್ದ ಕಾರಣ ಅವರ ಪಡೆಯೇ ಬೇರೆ ಆಗಿತ್ತು.
             ಹೀಗಿದ್ದ ನಮ್ಮ ಕ್ಲಾಸಿನಲ್ಲಿ ನೀವು ನಂಬ್ತೀರೋ ಇಲ್ಲವೋ, ನಾನು ಹಾಗೂ ವಿಜಯ ಇಬ್ಬರೂ ವೀಣಾಳಿಗೆ ಲೈನ್ ಹೊಡೆಯುತ್ತಿದ್ದೆವು. ಆಕೆಯನ್ನು ಇಂಪ್ರೆಸ್ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದೆವು. ನನ್ನ ಬಳಿ ಜಾಸ್ತಿ ಮಾತನಾಡಿದರೆ ವಿಜಯ, ವಿಜಯನ ಬಳಿ ಜಾಸ್ತಿ ಮಾತನಾಡಿದರೆ ನಾನು ಇಬ್ಬರೂ ಪೈಪೋಟಿಗೆ ಬಿದ್ದಂತೆ ಆಕೆಯನ್ನು ಇಂಪ್ರೆಸ್ ಮಾಡುವ ಪ್ರಯತ್ನ ಪ್ರತಿ ದಿನ ಸಾಗುತ್ತಿತ್ತು. ಹರೀಶ ಮಾಸ್ತರ್ರಿಗೆ ನಾವೆಲ್ಲರೂ ಆಪ್ತರೇ. ನಾನು ಹಾಗೂ ವಿಜಯ ಇಬ್ಬರೂ ಆಕೇಶಿಯಾ ಗಿಡದ್ದೋ ಇಲ್ಲವೇ ಗಾಳಿ ಗಿಡದ್ದೋ ಶಳಕೆಯನ್ನು ತರುವ ಕೆಲಸ ಮಾಡಬೇಕಿತ್ತು. ತಂದ ತಪ್ಪಿಗೆ ನಮಗೇ ಮೊದಲ ಹೊಡೆತ ಬೀಳುತ್ತಿತ್ತು.
            ನಮಗೆ ಪರೀಕ್ಷೆಗಳಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸು ಬೀಳ್ತಿತ್ತು ಅಂದ್ಕೋಬೇಡಿ. ನಾವೆಲ್ಲ ಎಪಿಎಲ್ ಕಾರ್ಡಿನ ಥರದವರು. ತೀರಾ 25ಕ್ಕೆ 20 ಬೀಳದಿದ್ದರೂ ಪಾಸ್ ಮಾರ್ಕ್ಸ್ ಆಗಿದ್ದ 9ರಿಂದ 18ರ ನಡುವೆ ಯಾವುದಾದರೂ ಒಂದು ಮಾರ್ಕ್ಸಿಗೆ ದಾಸರಾಗುತ್ತಿದ್ದೆವು. 20ರ ಮೇಲೇ ಏನಿದ್ದರೂ ಮಹೇಶನಿಗೋ, ಸಂಧ್ಯಾಳಿಗೋ, ಸವಿತಾಳಿಗೋ ಸಿಗಲಿ ಬಿಡಿ ಎಂದು ಬಿಟ್ಟಿದ್ದೆವು. ಆಗೊಮ್ಮೆ ಈಗೊಮ್ಮೆ ಗಣಿತದಲ್ಲಿ ನಾವು ನಪಾಸಾಗುವುದೂ ಇತ್ತು. ಆ ದಿನಗಳಲ್ಲಿ ನಮಗೆ ನಮ್ಮ ಮಾರ್ಕ್ಸ್ ಕಾರ್ಡುಗಳನ್ನು ಮನೆಯಲ್ಲಿ ತೋರಿಸುವುದು ಎಂದರೆ ಪರಮ ಭಯದ ಸಂಗತಿ. ನನ್ನ ಮನೆಯಲ್ಲಂತೂ ಮೊದಲ ಸ್ಥಾನವನ್ನೇ ಗಳಿಸಿಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರಂತಹ ಮಾಸ್ತರ್ರು ಇದ್ದ ಕಾರಣ ನಾನು ಎಷ್ಟು ಓದಿದ್ದರೂ ಬೀಳುವ ಅಂಕಗಳು ಅಷ್ಟಕ್ಕಷ್ಟೇ ಆಗಿತ್ತು ಬಿಡಿ. ನಮಗೆಲ್ಲ ಆಗ ನಮ್ಮ ಸೀನಿಯರ್ ಆಗಿದ್ದ ಗಣಪತಿಯೇ ಆಪದ್ಭಾಂಧವ. ಮನೆಯಲ್ಲಿ ಮಾರ್ಕ್ಸ್ ಕಾರ್ಡುಗಳನ್ನು ಯಾವ ಸಂದರ್ಭದಲ್ಲಿ ತೋರಿಸಬಾರದು, ಯಾವ ಸಂದರ್ಭದಲ್ಲಿ ತೋರಿಸಬೇಕು ಎಂಬುದನ್ನು ತಿಳಿಸ ಹೇಳುತ್ತಿದ್ದ. ತೀರಾ ಪಾಸು ಮಾರ್ಕ್ಸ್ ಬೀಳದೇ ಇದ್ದರೆ ಆತನೇ ನಮ್ಮ ಮನೆಯ ಅಪ್ಪ, ಅಮ್ಮನ ಸಹಿಯನ್ನು ಫೋರ್ಜರಿ ಮಾಡಿ ಮಾರ್ಕ್ಸ್ ಕಾರ್ಡಿನ ಮೇಲೆ ಹಾಕುತ್ತಿದ್ದ. ನಾವು ಮೊದ ಮೊದಲು ಹೆದರುತ್ತಿದ್ದರೂ ನಂತರ ಮನೆಯವರ ಕಾಟ ತಪ್ಪಿಸಿಕೊಳ್ಳಲು ಗಣಪತಿಯ ಮೊರೆಯನ್ನೇ ಹೋಗಿದ್ದೆವು ಬಿಡಿ. ಕೊನೆಗೊಂದು ದಿನ ಮನೆಯಲ್ಲಿ ಈ ಸಂಗತಿ ಗೊತ್ತಾಗಿ ರಾದ್ಧಾಂತವಾಗಿದ್ದು ಬೇರೆಯ ಸಂಗತಿ. ಇದನ್ನು ಇನ್ನೊಮ್ಮೆ ಹೇಳುತ್ತೇನೆ. ಮಾರ್ಕ್ಸುಗಳ ಬೆನ್ನು ಹತ್ತದೇ ಅದರ ಬದಲಾಗಿ ಉಳಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗ ಕಡೆಗೆ ನಾವು ಕಣ್ಣು ಹಾಯಿಸಿದ್ದೆವು.
           ಶಾಲೆಯ ಕ್ರೀಡಾರಂಗದಲ್ಲಿ ನಾನು ಮುಂದಡಿಯಿಟ್ಟಿದ್ದೆ. ನನ್ನ ಕಾಲದಲ್ಲಿ 100 ಮೀಟರ್ ಓಟದಲ್ಲಿ ಶಾಲೆಯ ಪ್ರತಿನಿಧಿ ನಾನಾಗಿದ್ದೆ. ಕಬ್ಬಡ್ಡಿ ತಂಡದಲ್ಲಿ ನನ್ನ ಸೇರಿಸಿಕೊಂಡಿದ್ದರು. ಆದರೆ ನಾನು ರೈಡರ್ರೂ ಆಗಿರಲಿಲ್ಲ. ಡಿಫೆಂಡರ್ರೂ ಆಗಿರಲಿಲ್ಲ. ತಂಡ 7 ಜನರಲ್ಲಿ ನಾನು ಇದ್ದೆ ಅಷ್ಟೆ. ಸುಮ್ಮನೆ ನಿಲ್ಲುತ್ತಿದ್ದೆ. ಲಾಸ್ಟ್ ಮೇಂಬರ್ ಆಗಿ ಔಟಾಗುತ್ತಿದ್ದೆ. ವಾಲೀಬಾಲ್ ಆಡುತ್ತಿದ್ದೆನಾದರೂ ಸರ್ವೀಸ್ ನೆಟ್ ದಾಟುತ್ತಿರಲಿಲ್ಲ. ಕುಳ್ಳಗಿದ್ದ ಕಾರಣ ಖೋ ಖೋ ಚನ್ನಾಗಿ ಆಡುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದ ಕಾರಣ ಬಹಳ ಬೇಗನೆ ಸುಸ್ತಾಗುತ್ತಿತ್ತು. ಲಾಂಗ್ ಜಂಪ್ ವೀರನಾಗಿದ್ದೆ. ಬಹಳ ದಿನಗಳ ಪ್ರಾಕ್ಟೀಸ್ ಮಾಡಿದ ತಪ್ಪಿಗೆ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಲಭ್ಯವಾಗಿತ್ತು ಎನ್ನುವುದು ಹೆಮ್ಮೆಯೇ ಹೌದು. ಕ್ರೀಡಾರಂಗದಲ್ಲಿ ವಿಜಯನೂ ಸಾಕಷ್ಟು ಸಾಧನೆ ಮಾಡಿದ್ದ ಬಿಡಿ.
             ನಾಟಕ, ಅದೂ ಇದೂ ಎಂದು ನಮ್ಮದು ಹಲವು ಆಲೋಚನೆಗಳು. ಹರೀಶ ಮಾಸ್ತರ್ರ ಕನಸಿಗೆ ನಾವು ಶಿಲೆಯಂತೆ ಸಿಕ್ಕಿದ್ದೆವು. ನಮ್ಮನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡಿದ್ದರು. ವಿಚಿತ್ರವೆಂದರೆ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಹೆಚ್ಚಿನ ಕಾರ್ಯಕ್ರಮದಲ್ಲಿ ನಾನು ಕುಡುಕನ ಪಾತ್ರವೋ, ಅಥವಾ ಅದಕ್ಕೆ ಸಂಬಂಧಿಸಿದಂತೆ ಪಾತ್ರಗಳೋ ಸಿಗುತ್ತಿದ್ದವು ಎನ್ನುವುದು ಮಾತ್ರ ವಿಚಿತ್ರವೇ ಹೌದು ನೋಡಿ. ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಹರೀಶ ಮಾಸ್ತರ್ರೇ ಸಿಂಗರ್ ಆಗಿದ್ದರು. ಘಟ್ಟದ ಕೆಳಗಿನ ಹೊನ್ನಾವರ ತಾಲೂಕಿನ ಯಾವುದೋ ಊರಿನವರಾಗಿದ್ದ ಹರೀಶ ಮಾಸ್ತರ್ರು ನಮ್ಮ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು ಎನ್ನಿ.
              ಆಗೊಮ್ಮೆ, ಈಗೊಮ್ಮೆ ಹರೀಶ ಮಾಸ್ತರ್ರು ನಮ್ಮ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಕ್ರೀಡಾಕೂಟಕ್ಕೆ ತಯಾರು ಮಾಡಲಿಕ್ಕೂ ಮುಂದಾಗುತ್ತಿದ್ದರು. ರಮೇಶ ಗಡ್ಕರ್ ಮಾಸ್ತರ್ರ ಜೊತೆ ವಿಶ್ರಾಂತಿ ವೇಳೆಯಲ್ಲಿ ಚೆಸ್ ಆಡುವ ಮೂಲಕ ನನಗೆ ಬಹುದೊಡ್ಡ ಕಾಟವನ್ನು ತಪ್ಪಿಸಿದ ಖ್ಯಾತಿ ಹರೀಶ ಮಾಸ್ತರ್ರದ್ದಾಗಿತ್ತು. ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡದೇ ಇದ್ದಲ್ಲಿ ನಾನು ಅದೆಷ್ಟೋ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ಬಿಡಿ. ಈ ಕಾರಣದಿಂದಾಗಿ ನಾನು ಹರೀಶ ಮಾಸ್ತರ್ರನ್ನು ಎಷ್ಟೋ ಪಾಲು ನೆನಪಿಸಿಕೊಳ್ಳಬೇಕು. ಹರೀಶ ಮಾಸ್ತರ್ರು ಎಂದರೆ ನೆನಪಾಗುವುದು ಇಷ್ಟೇ ನೋಡಿ. ನಾನು ಏಳನೆ ಕ್ಲಾಸಿನವರೆಗೂ ಅವರ ಕೈಯಲ್ಲೇ ಓದುತ್ತಿದ್ದೆ. ನಾನು ಶಾಲೆ ಮುಗಿಸಿ ಬೇರೆಡೆಗೆ ಹೋಗುವ ಮುನ್ನ ಅವರ ಬಳಿ ದಿನಗಟ್ಟಲೆ ಮಾತನಾಡಿದ್ದೂ ಇದೆ. ನಾನು ಹೈಸ್ಕೂಲು ಸೇರಿ ಒಂದೆರಡು ವರ್ಷಗಳಾದರೂ ಹರೀಶ ಮಾಸ್ತರ್ರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ ಆ ನಂತರದ ದಿನಗಳಲ್ಲಿ ಸಿ. ಎಂ. ಹೆಗಡೆಯವರ ರಾಜಕಾರಣದಿಂದಾಗಿ ಹರೀಶ ಮಾಸ್ತರ್ರು ವರ್ಗಾವಣೆ ಮಾಡಿಸಿಕೊಂಡು ಹೋದರು ಎನ್ನುವ ಸುದ್ದಿಯೂ ಕೇಳಿಬಂದಿತು. ಗಡ್ಕರ್ ಮಾಸ್ತರ್ ಹಾಗೂ ತಾರಕ್ಕೋರು ಇಂತಹ ಕಾರಣದಿಂದಲೇ ವರ್ಗ ಮಾಡಿಸಿಕೊಂಡು ಹೋದರು ಎನ್ನುವುದನ್ನು ಕೇಳಿ ಸಿ. ಎಂ. ಹೆಗಡೆಯವರ ಬಗ್ಗೆ ಸಿಟ್ಟೂ ಬಂದಿತ್ತು.
             ಹೈಸ್ಕೂಲಿನಲ್ಲಿ 8ನೇ ಕ್ಲಾಸಿನಲ್ಲಿ ಸಿಕ್ಕಾಪಟ್ಟೆ ಓದಿ ನಾನು ಮೊದಲ ಸ್ಥಾನ ಪಡೆದುಕೊಂಡು ಬಂದಾಗ ನನ್ನ ಅಪ್ಪ ಗಡ್ಕರ್ ಮಾಸ್ತರ್ ಹಾಗೂ ಹರೀಶ ಮಾಸ್ತರ್ರ ಬಳಿ ಹೇಳಿದ್ದರಂತೆ. ಅದನ್ನು ಕೇಳಿ ಸಂತೋಷ ಪಟ್ಟಿದ್ದ ಈ ಇಬ್ಬರೂ ಮಾಸ್ತರ್ರು ನಾನು ಮೊದಲ ಸ್ಥಾನ ಪಡೆದಿದ್ದನ್ನು ಕೇಳಿ ಬಹಳ ಜನರ ಬಳಿ ಹೊಗಳಿದ್ದರಂತೆ. ನಮ್ಮ ಶಾಲೆಯಲ್ಲಿ ವಿನಯ ಬಹಳ ಕಷ್ಟಪಟ್ಟಿದ್ದ ಬಿಡಿ. ಆದರೆ ಹೈಸ್ಕೂಲಿನಲ್ಲಾದರೂ ಆತನಿಗೆ ಒಳ್ಳೆಯದಾಗುತ್ತಿದೆಯಲ್ಲ. ಅಷ್ಟು ಸಾಕು ಬಿಡಿ. ಹಿಂಗೇ ಚನ್ನಾಗಿ ಓದಲು ಹೇಳಿ ಎಂದೂ ಹೇಳಿದ್ದರಂತೆ. ಈಗಲೂ ಅವರ ಮಾತುಗಳು ನನ್ನನ್ನು ಕಾಡುತ್ತಿರುತ್ತವೆ. ನೆನಪಾಗುತ್ತಿರುತ್ತವೆ.

ಪಿ. ಜಿ. ಹಾವಗೋಡಿ :
               ಹೌದು. ಹಾವಗೋಡಿ ಮಾಸ್ತರ್ ನನಗ ಕೆಲಕಾಲ ಕಲಿಸಿದ್ದಾರೆ. ಹಾವಗೋಡಿ ಮಾಸ್ತರ್ರನ್ನು ನಾನು ಮೊದಲು ನೋಡಿದ್ದು ಮುತ್ಮೂರ್ಡು ಶಾಲೆಗೆ ಅವರು ಮಾಸ್ತರ್ರಾಗಿ ಬರುತ್ತಿದ್ದ ಸಂದರ್ಭದಲ್ಲಿ. ನಮ್ಮೂರ ಸ್ಕಿಡ್ ಆಗುವ ರಸ್ತೆಯಲ್ಲಿ ಲೂನಾ ಮೇಲೆ ಬರುತ್ತಿದ್ದರು ಅವರು. ಅದೊಮ್ಮೆ ನಾವು ನಡೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ  ನಮ್ಮೆದುರೇ ಅವರ ಲೂನಾ ಗಿರಿಗಿರಿ ತಿರುಗಿ ಲಗಾಟಿ ಹೊಡಯುವಂತಾಗಿತ್ತು. ಆಗ ನಮ್ಮನ್ನು ನೋಡಿದ ಹಾವಗೋಡಿ ಮಾಸ್ತರ್ರು `ನೋಡ್ರಾ ತಮಾ.. ಹೆಂಗ್ ಮುಕಳಿ ಕುಂಡೆ ತಿರುಗಿಸ್ತು ಈ ಗಾಡಿ..' ಎಂದಿದ್ದು ನೆನಪಿನಲ್ಲಿದೆ.
               ಮುಂದೆ ಇದೇ ಹಾವಗೋಡಿ ಮಾಸ್ತರ್ರು ಕೋಡ್ಸರ ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಯಾರಿಗೋ ಗೆರೆಪಟ್ಟಿಯಲ್ಲಿ ಹೊಡೆದಿದ್ದರಂತೆ. ಹೊಡೆದಿದ್ದ ಪರಿಗೆ ಗೆರೆಪಟ್ಟಿ ಮುರಿದು ಹೋಗಿದ್ದರೆ ಹೊಡೆತ ತಿಂದವನಿಗೆ ದೊಡ್ಡ ಗಾಯವಾಗಿತ್ತಂತೆ. ನಾಲ್ಕು ದಿನ ಜ್ವರ ಮಾಡಿದ್ದನಂತೆ. ಆ ಬಾಲಕನ ತಂದೆ ತಾಯಿಯರು ಬಂದು ಹಾವಗೋಡಿ ಮಾಸ್ತರ್ರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಯನ್ನೂ ಮಾಡಿದ್ದರಂತೆ. ಈ ಸುದ್ದಿಯನ್ನೆಲ್ಲ ಕೇಳಿದಾಗ ಹಾವಗೋಡಿ ಮಾಸ್ತರ್ರೆಂದರೆ ಯಾರೋ ಭಯೋತ್ಪಾದಕರೇ ಇರಬೇಕು ಎಂದುಕೊಂಡಿದ್ದೆವು ಬಿಡಿ. ಇಂತಹ ಮಾಸ್ತರ್ರಿಗೆ ಏಳನೇ ತರಗತಿಯಲ್ಲಿ `ಸೇತುಬಂಧ' ಪರೀಕ್ಷೆಯ ಪೇಪರ್ ಚೆಕ್ ಮಾಡುವ ಕೆಲಸ ಸಿಕ್ಕಿತ್ತು. ನನ್ನ ಪೇಪರ್ರನ್ನು ಚೆಕ್ ಮಾಡಿದ್ದರು. ನನಗೆ ಸಿಕ್ಕಾಪಟ್ಟೆ ಅಂಕಗೂ ಬಿದ್ದಿದವು ಬಿಡಿ.
             ಆಮೇಲೆ ಯಾವಾಗಲೋ ಒಮ್ಮೆ ಬಹುಶಃ ಐದನೇ ಕ್ಲಾಸಿನಲ್ಲಿ ಇರಬೇಕು. ಅವರು ನನಗೆ ಶಿಕ್ಷಕರಾಗಿ ನಮ್ಮ ಶಾಲೆಗೆ ಬಂದಿದ್ದರು. ಕನ್ನಡ ವಿಷಯವನ್ನು ಬಹಳ ಚನ್ನಾಗಿ ಕಲಿಸುತ್ತಿದ್ದರು ಅವರು. ಆದರೆ ಅವರ ಮೇಲೆ ಇದ್ದ ಒಂದೇ ಬೇಜಾರು ಎಂದರೆ ನಮಗೆ ಆಟದ ಪಿರಿಯಡ್ಡಿನಲ್ಲಿ ಆಟಕ್ಕೇ ಬಿಡುತ್ತಿರಲಿಲ್ಲ. ಆಗಲೂ ಪಾಠವನ್ನೇ ಕಲಿಸುತ್ತಿದ್ದರು. ಕೊನೆಗೊಮ್ಮೆ ನಾವು ವಿದ್ಯಾರ್ಥಿಗಳೆಲ್ಲ ಸೇರಿ ಮಾಸ್ತರ್ರ ಬಳಿ ಗಲಾಟೆ ಮಾಡಿದಾಗಲೇ ನಮ್ಮನ್ನು ಆಟಕ್ಕೆ ಬಿಡಲು ಆರಂಭ ಮಾಡಿದ್ದು. ಹಾವಗೋಡಿ ಮಾಸ್ತರ್ರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಮತ್ತಿನ್ನೇನೂ ವಿಶೇಷ ಘಟನೆಗಳು ಜರುಗಲಿಲ್ಲ ಬಿಡಿ.

          ಪ್ರೈಮರಿ ಬದುಕು ಕಳೆದು ಎಷ್ಟೋ ವರ್ಷಗಳು ಕಳೆದು ಹೋಗಿದೆ. ಆ ದಿನಗಳಲ್ಲಿ ನಮ್ಮದು ಹಸಿ ಮನಸ್ಸೇ ಸರಿ. ಏನೇ ನಡೆದಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ಆ ಕಾರಣದಿಂದಲೇ ಬಹಳಷ್ಟು ಸಂಗತಿಗಳನ್ನು ನಾನು ಇಲ್ಲಿ ಉಲ್ಲೇಖ ಮಾಡಿದ್ದೇನೆ. ತಾರಕ್ಕೋರನ್ನೋ, ಗಡ್ಕರ್ ಮಾಸ್ತರ್ರನ್ನೋ, ಹರೀಶ ಮಾಸ್ತರ್ರನ್ನೋ ಪ್ರೀತಿಯಿಂದ ಕಾನುತ್ತಿದ್ದೇನೆ, ನೆನೆಯುತ್ತೇನೆ ಎಂದರೆ ಆ ದಿನಗಳಲ್ಲಿ ಅವರು ತೋರಿದ ಅಕ್ಕರೆಗಳೆ ಕಾರಣವಾಗುತ್ತವೆ. ಜಿ. ಎಸ್. ಭಟ್ಟರಂತೂ ಅವರ ಸಿಟ್ಟಿನಿಂದಲೇ ನೆನಪಿನಲ್ಲಿ ಉಳಿದು ಹೋಗಿದ್ದಾರೆ. ಇನ್ನು ಸಿ. ಎಂ. ಹೆಗಡೆಯವರ ಬಗ್ಗೆ ನಾನು ಹೀಗೆ ಅಂದುಕೊಳ್ಳಲಿಕ್ಕೆ ಕಾರಣ ಅವರೇ ಬಿಡಿ. ಅಲ್ಲಿಂದ ಮುಂದಕ್ಕೆ ನನ್ನ ಹೈಸ್ಕೂಲಿನ ಬದುಕು ಆರಂಬಗೊಂಡಿತು. ಏಳನೇ ಕ್ಲಾಸಿಗೆ ಆಗ ಇದ್ದ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕನೇ ಟಾಪರ್ ಆಗಿ ಪಾಸಾಗಿದ್ದೆ. ಸಂದ್ಯಾ, ಸವಿತಾ, ಮಹೇಶ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದರೆ ನಾನು ನಾಲ್ಕನೇ ಸ್ಥಾನ ಪಡೆದಿದ್ದೆ. ವಿಜಯ ನನಗಿಂತ ಮೂರು ಅಂಕ ಕಡಿಮೆ ಪಡೆದುಕೊಂಡು ಮುಂದಿನ ಸ್ಥಾನ ಪಡೆದುಕೊಂಡಿದ್ದ. ಶಾಲೆಗೆ ದೊಡ್ಡದಂದು ಟೇಬಲ್ಲನ್ನು ಕೊಡುಗೆಯಾಗಿ ಕೊಟ್ಟು ನಾವು ಶಾಲೆಯನ್ನು ಬಿಟ್ಟಿದ್ದೆವು. ಆಮೇಲಿಂದ ಬೇರೆಯದೇ ಬದುಕು ಆರಂಭಗೊಂಡಿತ್ತು. ಹೈಸ್ಕೂಲು ನಮ್ಮನ್ನು ಕೈಬೀಸಿ ಕರೆದಿತ್ತು.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ನನ್ನ ಹೈಸ್ಕೂಲು ಬದುಕಿನ ಮಾಸ್ತರ್ರ ಬಗ್ಗೆ ಬರೆಯಲಿದ್ದೇನೆ)

Friday, August 21, 2015

ಪರಿವರ್ತನೆ (ಕಥೆ)

              ನನ್ನ ಹೊಚ್ಚ ಹೊಸ ಬೈಕು ಮೊಟ್ಟ ಮೊದಲ ಬಾರಿಗೆ ಪಂಚರ್ ಆಗಿದ್ದಾಗ ನಾನು ನಮ್ಮೂರಿನ ಪಂಚರ್ ಕಟ್ಟುವ ಅಮಿರ್ ಖಾನ್ ನ ಮೊರೆ ಹೋಗಿದ್ದೆ. ಬಹುಶಃ ಈ ಪಂಚರ್ ದೆಸೆಯಿಂದಲೇ ನನಗೆ ಅಮೀರ್ ಖಾನ್ ಪರಿಚಯ ಆಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ನನ್ನ ಯಮಭಾರದ ಗಾಡಿಯನ್ನು ತಳ್ಳಿಕೊಂಡು ಅಮೀರ್ ಖಾನ್ ನ ಪಂಚರ್ ಅಂಗಡಿಯ ವರೆಗೆ ಏದುಸಿರು ಬಿಡುತ್ತಾ ಹೋಗುವ ವೇಳೆಗೆ ಅಂಗಡಿಯಲ್ಲಿ ಅಮೀರ್ ಖಾನ್ ಇರಲಿಲ್ಲ. ಅಂಗಡಿಗೆ ತಾಗಿಕೊಂಡಂತೆ ಇದ್ದ ಮನೆಯಲ್ಲಿ ಆತನ ಬೇಗಂ ಇದ್ದಳು. ಅವರ ಬಳಿ ಅಮೀರ್ ಖಾನ್ ಇದ್ದಾನಾ ಎಂದು ಕೇಳಿ, ಈಗ ಬರುತ್ತಾರೆ ಇರಿ ಎನ್ನುವ ಉತ್ತರ ಕೇಳಿ ಕಾಯುತ್ತ ಕುಳಿತಿದ್ದೆ. ಕೆಲ ಹೊತ್ತಿನಲ್ಲಿ ಅಮೀರ್ ಖಾನ್ ಬಂದಿದ್ದ.
            ಮೊಟ್ಟ ಮೊದಲ ಪಂಚರ್ ಅನ್ನು ಸರಿಮಾಡಿಕೊಟ್ಟಿದ್ದ ಅಮಿರ್ ಖಾನ್ ನಂತರದ ದಿನಗಳಲ್ಲಿ ನನ್ನ ತೀರಾ ಪರಿಚಯದ ವ್ಯಕ್ತಿಗಳಲ್ಲಿ ಒಬ್ಬನಾಗಿ ಬದಲಾಗಿದ್ದ. ನಮ್ಮೂರಿನ ರಸ್ತೆ ಹೇಳಿ-ಕೇಳಿ ಮಣ್ಣು ರಸ್ತೆ. ಅಭಿವೃದ್ಧಿ ಪರ ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ನುಜ್ಜುಗುಜ್ಜಾಗಿ ಮತ್ತಷ್ಟು ಹಾಳಾಗಿದ್ದ ನಮ್ಮೂರ ರಸ್ತೆಯಲ್ಲಿ ಗಾಡಿ ಓಡಿಸುವುದು ಯಮಯಾತನೆಯ ಕೆಲಸವೇ ಹೌದಾಗಿತ್ತು. ಇಂತಹ ರಸ್ತೆಯಲ್ಲಿ ನನ್ನ ಗಾಡಿ ಪದೇ ಪದೆ ಪಂಚರ್ ಆಗುತ್ತಿತ್ತು. ಆಗೆಲ್ಲ ನಾನು ಅಮೀರ್ ಖಾನ್ ಮೊರೆ ಹೋಗುತ್ತಿದ್ದೆ. ಆತ ಪಂಚರ್ ಸರಿಪಡಿಸಿಕೊಡುತ್ತಿದ್ದ. ಹೀಗೆ ನಾನು ಪದೇ ಪದೆ ಅವನ ಮೊರೆ ಹೋದ ಕಾರಣ ಆತ ನನ್ನ ಪರಿಚಿತನಾದ. ಕೊನೆ ಕೊನೆಗೆ ಆತ ಅದೆಷ್ಟು ಪರಿಚಿತನಾಗಿದ್ದನೆಂದರೆ ತನ್ನ ಮನೆಯ ಸಮಸ್ಯೆಗಳನ್ನೂ ಹೇಳಿಕೊಳ್ಳುವಷ್ಟು ಆಪ್ತನಾಗಿ ಬದಲಾಗಿದ್ದ.
             ಅಮೀರ್ ಖಾನ್ ಗೆ ಬಹುಃ 45-50 ವರ್ಷ ವಯಸ್ಸಾಗಿರಬೇಕು. ಮೂವರು ಹೆಂಡತಿಯರು ಹಾಗೂ 11 ಜನ ಮಕ್ಕಳು ಅಮೀರ್ ಖಾನ್ ನ ಆಸ್ತಿ. ಆಮೀರ್ ಭಾಯ್.. ಇಷ್ಟೆಲ್ಲ ಮಕ್ಕಳನ್ನು ಹೇಗೆ ಸಾಕ್ತೀಯಾ? ಕಷ್ಟ ಆಗೋಲ್ಲವಾ ಎಂದು ನಾನು ಕೇಳಿದ್ದೆ. ಅಲ್ಲಾಹು ಕರುಣಿಸಿದ್ದಾನೆ.. 11 ಇರಲಿ ಅಥವಾ 20 ಇರಲಿ. ಅವರನ್ನು ಸಾಕುತ್ತೇನೆ. ತೊಂದರೆಯಿಲ್ಲ. ಸ್ವಲ್ಪ ದೊಡ್ಡವರಾಗುವ ವರೆಗೆ ಕಷ್ಟವಾಗುತ್ತದೆ. ಆ ಮೇಲೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದ ಅಮೀರ್ ಖಾನನ ಮೊದಲ ಮಗ ಖಾದರ್ ಆಗಲೇ ಇನ್ನೊಂದು ಮೆಕಾನಿಕ್ ಅಂಗಡಿಯನ್ನೂ ಆರಂಭಿಸಿದ್ದ. ಇಂತಹ ಅಮೀರ್ ಖಾನ್ ನ ಕಿರಿಯ ತಮ್ಮ ಸಲ್ಮಾನ್.
              ಸಲ್ಮಾನ್ ಹಾಗೂ ಆಮೀರ್ ಎಂದರೆ ಆ ಊರಿನಲ್ಲಿ ಎಲ್ಲರಿಗೂ ಪ್ರೀತಿ ಹಾಗೂ ಅಕ್ಕರೆ. ಊರಿನಲ್ಲಿ ಪಂಚರ್ ಅಂಗಡಿ ಹಾಗೂ ಮೆಕಾನಿಕ್ ಅಂದರೆ ಇವರಿಬ್ಬರೇ ಎಂಬ ಕಾರಣವೂ ಅಕ್ಕರೆ ಹಾಗೂ ಪ್ರೀತಿಗೆ ಪ್ರಮುಖ ಕಾರಣವಾಗಿತ್ತು. ಇದ್ದವರ ಪೈಕಿ ಸಲ್ಮಾನ್ ಎಲ್ಲರ ಜೊತೆ ಬೆರೆಯುವಂತಹ ವ್ಯಕ್ತತ್ವದವನಾಗಿದ್ದರೆ, ಆಮೀರ್ ಸ್ವಲ್ಪ ಗುಮ್ಮನ ಗುಸ್ಕ. ಮನೆಯಲ್ಲಿ ಮಾತ್ರ ಅವಳಿಗಳೇನೋ ಎನ್ನುವಂತೆ ಬೆಳೆದಿದ್ದವರು ಅವರು. ಸಲ್ಮಾನ್ ಗೆ ಮೂವರು ಹೆಂಡತಿಯರು. ಆರು ಮಕ್ಕಳು. ಸಲ್ಮಾನ್ ಆತ್ಮೀಯತೆಯ ಪ್ರತೀಕ. ಆದರೆ ಆಮೀರ್ ಸ್ವಲ್ಪ ಸಿಡುಕ. ಬಡತನ ಹಾಸುಹೊಕ್ಕಾಗಿದ್ದರೂ ಇವರಿಗೆ ಮಾತ್ರ ಯಾವುದೇ ಕುಂದನ್ನು ಉಂಟುಮಾಡಿರಲಿಲ್ಲ. ಆದರೆ ಧರ್ಮದ ವಿಷಯ ಬಂದರೆ ಮಾತ್ರ ಸಲ್ಮಾನ್ ಅಪ್ಪಟ ಕರ್ಮಠರು ಎಂದರೆ ತಪ್ಪಾಗಲಿಕ್ಕಿಲ್ಲ.
             ಆಮೀರ್ ಗೂ ಧರ್ಮಪ್ರೇಮ ಅಲ್ಪ-ಸ್ವಲ್ಪ ಇತ್ತು. ಆದರೆ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಳ್ಳುತ್ತಿದ್ದವನಿಗೆ ಧರ್ಮದ ಬಗ್ಗೆ ಹೆಚ್ಚಿಗೆ ಆಲೋಚನೆ ಮಾಡಲು ಸಮಯವೇ ಇರಲಿಲ್ಲ. ತಾನು ಮಾಡುವ ಕೆಲಸದಲ್ಲಿಯೇ ಧರ್ಮ, ದೇವರು ಅಡಗಿದ್ದಾನೆ ಎಂದುಕೊಂಡಿದ್ದವನು ಆಮೀರ್. ಆದರೆ ಅಪರೂಪಕ್ಕೊಮ್ಮೆ ಮಸೀದಿಗೆ ಹೋಗಿ ನಮಾಜ್ ಮಾಡಿ, ಖುರಾನ್ ಪಠಣವನ್ನೂ ಮಾಡಿ ಬರುತ್ತಾನೆ. ಆದರೆ ಸಲ್ಮಾನ್ ಹಾಗಲ್ಲ. ಎಷ್ಟಕ ಕರ್ಮಠ ಎಂದರೆ ದಿನಕ್ಕೆ ಐದು ಬಾರಿ ಸಮಯಕ್ಕೆ ಸರಿಯಾಗಿ ನಮಾಜ್ ಮಾಡುತ್ತಿದ್ದ. ಅಷ್ಟೇ ಏಕೆ ಮನೆಗೂ ಆಗಾಗ ಮೌಲ್ವಿಗಳನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿದ್ದ.
              ನನ್ನ ಹಾಗೂ ಸಲ್ಮಾನ್ ನ ನಡುವೆ ಆಗಾಗ ಧರ್ಮದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ನಾನು ನನ್ನ ಧರ್ಮವನ್ನು ಸಮರ್ಥನೆ ಮಾಡಿ ಕೊಂಡರೆ ಆತ ಅವನ ಧರ್ಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ. ನಾವು ವಾದ ಮಾಡುವ ಸಂದರ್ಭದಲ್ಲಿ ಅನೇಕ ಜನರೂ ಸೇರಿ ಗಲಾಟೆ ನಡೆಯುತ್ತಿದೆಯೋ ಎನ್ನುವಂತಹ ವಾತಾವರಣವೂ ಮೂಡುತ್ತಿದ್ದವು. ಮೊದ ಮೊದಲಿಗೆಲ್ಲ ಆರೋಗ್ಯಕರ ಚರ್ಚೆಗೆ ಮುಂದಾಗುತ್ತಿದ್ದ ಸಲ್ಮಾನ್ ಕೊನೆ ಕೊನೆಗೆ ನನ್ನ ಪಟ್ಟುಗಳನ್ನು ತಾಳಲಾರದೇ ವ್ಯಗ್ರನೂ ಆಗುತ್ತಿದ್ದ. ಒಂದೆರಡು ಸಾರಿ ನಾವು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದು ನನ್ನ ಮೇಲೇರಿ ಬಂದಿದ್ದೂ ಇತ್ತು. ಕೊನೆಗೆ ಯಾವಾಗಲೋ ಶಾಂತನಾದಾಗ `ಮಾಫ್ ಕರೋ ಭಾಯ್..' ಎಂದು ಆಲಿಂಗನ ಮಾಡಿಕೊಂಡು ಕ್ಷಮೆ ಕೋರುತ್ತಿದ್ದ. ನನಗಂತೂ ಕಸಿವಿಸಿಯಾಗುತ್ತಿತ್ತು. ಕ್ಷಮೆಕೋರಿ ದೂರ ಹೋದರೂ ಆತನ ಬಟ್ಟೆಗೆ ಪೂಸಿಕೊಂಡಿದ್ದ ಅತ್ತರಿನ ವಾಸನೆ ಅದೆಷ್ಟೋ ತಾಸುಗಳ ಕಾಲ ಅಲ್ಲಿಯೇ ಘಂಮ್ಮೆನ್ನುತ್ತಿತ್ತು.
               ಹೀಗಿದ್ದಾಗಲೇ ಈ ಅಣ್ಣತಮ್ಮಂದಿರಿಗೆ ಮೆಕ್ಕಾಕ್ಕೆ ಹೋಗುವ ಹುಚ್ಚು ಹತ್ತಿ ಬಿಟ್ಟಿತ್ತು. ಮೆಕ್ಕಾಕ್ಕೆ ಹೋಗುವ ಕಾರಣಕ್ಕಾಗಿಯೇ ಅಣ್ಣ-ತಮ್ಮಂದಿರಿಬ್ಬರೂ ನನ್ನ ಬೆನ್ನು ಬಿದ್ದು ಬಿಟ್ಟಿದ್ದರು. ಸರ್ಕಾರ ಕೊಡ ಮಾಡುವ ಸಬ್ಸಿಡಿಯನ್ನು ಇಬ್ಬರೂ ಪಡೆದುಕೊಳ್ಳಬೇಕೆನ್ನುವ ಸಲುವಾಗಿ ಅವರು ನನ್ನ ಮೊರೆ ಹೋಗಿದ್ದರು. ನಾನು ನನ್ನ ಪರಿಚಯದವರನ್ನು ಬಳಸಿಕೊಂಡು ಸಬ್ಸಿಡಿ ಕೊಡಿಸುವ ಜವಾಬ್ದಾರಿಯಿತ್ತು. ಜೊತೆಯಲ್ಲಿ ಮೆಕ್ಕಾಕ್ಕೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ಮಾಡಿ ವೀಸಾ ಕ್ಕೆ ಪ್ರಯತ್ನಿಸುವುದನ್ನೂ ನಾನು ಮಾಡಿಕೊಡಬೇಕಿತ್ತು. ನನಗೆ ತಿಂಗಳಾನುಗಟ್ಟಲೆ ದುಂಬಾಲು ಬಿದ್ದಿದ್ದ ಅವರನ್ನು ನಾನು ಆ ಸಂದರ್ಭದಲ್ಲಿಯೇ ಹೆಚ್ಚು ಗಮನಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಒಂದೇ ಧರ್ಮದವರಾಗಿದ್ದರೂ ಸಾಕಷ್ಟು ಭಿನ್ನರೂ ಕೂಡ ಹೌದು. ಇಬ್ಬರೂ ಒಂದೇ ತಾಯಿಯ ಮಕ್ಕಳಾಗಿದ್ದರೂ ಅವರ ಗುಣದಲ್ಲಿ ಮಾತ್ರ ಅದ್ಯಾವ ಪತಿಯ ಭಿನ್ನತೆಯಿತ್ತೆಂದರೆ ನಾನು ಬಹಳ ಅಚ್ಚರಿ ಪಟ್ಟುಕೊಂಡಿದ್ದೆ. ಆಮೀರ್ ಸೌಮ್ಯ ವ್ಯಕ್ತಿತ್ವದವನಾಗಿದ್ದರೆ ಸಲ್ಮಾನ್ ಮಾತ್ರ ಬೇಗನೆ ರೊಚ್ಚಿಗೇಳುತ್ತಿದ್ದ. ಸಿಟ್ಟಿನ ಪ್ರವೃತ್ತಿಯ ಸಲ್ಮಾನ್ ನನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗಿತ್ತು. ನೋಡಲಿಕ್ಕೆ ಇಬ್ಬರೂ ಅವಳಿಯೇನೋ ಅನ್ನುವಂತೆ ಕಾಣಿಸುತ್ತಿದ್ದರು. ಆದರೆ ಇಬ್ಬರ ಮನಸ್ಥಿತಿಯೂ ಬೇರೆ ಬೇರೆಯಾಗಿತ್ತು. ಮೆಕ್ಕಾಕ್ಕೆ ಹೋಗುವ ಸಲುವಾಗಿ ಅವರಿಬ್ಬರ ಪಾಸ್ ಪೋರ್ಟ್ ತಯಾರಿಸಲು ನಾನು ಪ್ರಯತ್ನಿಸಿದ್ದೇನೋ ನಿಜ. ಆದರೆ ಆ ದಾಖಲೆ ಪತ್ರಗಳು ರೂಪುಗೊಳ್ಳಲು ಕೆಲ ಸಮಯ ತಗುಲಿದ್ದವು. ಆಗೆಲ್ಲ ತಮ್ಮ ಸಲ್ಮಾನ್ ನನ್ನ ಬಳಿ ಬಂದು ಕೂಗಾಡಿ ಹೋಗಿದ್ದ. ಬೇಕಂತಲೇ ಪಾಸ್ ಪೋರ್ಟ್ ನಿಧಾನವಾಗಿ ಆಗುತ್ತಿದೆ. ನಾವು ಮೆಕ್ಕಾಕ್ಕೆ ಹೋಗಬಾರದು ಎನ್ನುವ ಉದ್ದೇಶ ಇದ್ದ ಹಾಗಿದೆ ಹಾಗೆ ಹೀಗೆ ಎನ್ನುವಂತೆಲ್ಲ ಗಲಾಟೆ ಮಾಡಿದ್ದ. ನಾನು ಆತನನ್ನು ಸಮಾಧಾನ ಪಡಿಸಲು ಹೈರಾಣಾಗಿದ್ದೆ. ಆದರೆ ಆಮೀರ್ ಬಂದು ತಮ್ಮನನ್ನು ಸಮಾಧಾನ ಮಾಡಿ ಕರೆದೊಯ್ದಿದ್ದ.
                ಕೊನೆಗೊಂದು ದಿನ ಪಾಸ್ ಪೋರ್ಟ್ ಆಗಿಯೇ ಬಿಟ್ಟಿತು. ಆ ದಿನ ಮಾತ್ರ ಸಲ್ಮಾನ್ ನನ್ನ ಬಳಿ ಬಂದು ಖುಷಿಯಿಂದ ಹೇಳಿಕೊಂಡಿದ್ದ. ಮೆಕ್ಕಾಕ್ಕೆ ಹೋಗಿ ಧರ್ಮೋಪದೇಶ ಪಡೆದುಕೊಂಡು ಬಂದು ನಮ್ಮೂರಿನಲ್ಲಿ ತಾನೊಂದು ಮೌಲ್ವಿಯಾಗುತ್ತೇನೆ ನೋಡುತ್ತಿರಿ ಎಂದು ಹೇಳಿದ್ದ ಸಲ್ಮಾನ್ ಸ್ವಲ್ಪ ವ್ಯಗ್ರನಾಗಿಯೂ ಮಾತನಾಡಿದ್ದ. ಪಾಸ್ ಪೋರ್ಟ್ ಸಿಕ್ಕಿದ್ದಾಗಿದೆ. ಇನ್ನೇಕೆ ನಿನ್ನ ಹಂಗು ಬೇಕು ಎನ್ನುವಂತಿತ್ತು ಸಲ್ಮಾನ್ ನ ವರಸೆ. ನಾನು ಹೆಚ್ಚು ಮಾತನಾಡದೇ ಸುಮ್ಮನುಳಿದಿದ್ದೆ. ಯಥಾಪ್ರಕಾರ ಆಮಿರ್ ಬಂದು ನನ್ನ ಬಳಿ ಕ್ಷಮೆ ಕೋರಿ ಹೋಗಿದ್ದ ಎನ್ನಿ.
              ಇದಾಗಿ ಹಲವು ದಿನಗಳು ಕಳೆದಿದ್ದವು. ಅಣ್ಣ-ತಮ್ಮಂದಿರ ಸುದ್ದಿ ಇರಲಿಲ್ಲ. ಬಹುಶಃ ಹಜ್ ಯಾತ್ರೆಗೆ ಹೋಗಿದ್ದಾರೇನೋ ಅಂದುಕೊಂಡಿದ್ದೆ. ತಿಂಗಳುಗಟ್ಟಲೆ ದಿನಗಳನ್ನು ಕಳೆದ ನಂತರ ಅದೊಂದು ದಿನ ಆ ಅಣ್ಣ-ತಮ್ಮಂದಿರಿ ಸಿಕ್ಕಿದ್ದರು. `ಏನ್ರಪ್ಪಾ.. ನಾಪತ್ತೆಯಾಗಿದ್ದಿರಿ..? ಯಾವ ಕಡೆ ಹೋಗಿದ್ರಿ?' ಎಂದು ಕೇಳಿದ್ದೆ. ಕೊನೆಗೆ ಅವರ ಪೈಕಿ ಸಲ್ಮಾನ್ ಖುಷಿಯಿಂದ ಮಾತನಾಡಿದ್ದ. ಆದರೆ ಆಮೀರ್ ಮಾತನಾಡಿರಲಿಲ್ಲ. ಸಲ್ಮಾನ್ ನನ್ನ ಬಳಿ ಹಜ್ ಯಾತ್ರೆಗೆ ಹೋಗಿ ಬಂದೆವೆಂದೂ ಹಾಜಿಗಳೆನ್ನಿಸಿಕೊಂಡೆವೆಂದೂ ಹೇಳಿದ್ದ. ಫಾಸಪೋರ್ಟ್ ಮಾಡಿಸಿಕೊಡಲು ನಾನು ಸಹಾಯ ಮಾಡಿದ್ದಕ್ಕಾಗಿಯೇ ಹಜ್ ಯಾತ್ರೆ ಸಾಧ್ಯವಾಯಿತು ಎಂದೂ ಹೇಳಿದ್ದ. ಯಾವಾಗಲೂ ನನ್ನ ಬಳಿ ಪ್ರೀತಿಯಿಂದ ಮಾತನಾಡಿ, ಖುಷಿಯಿಂದ ಕಳೆಯುತ್ತಿದ್ದ ಆಮೀರ್ ನನ್ನನ್ನು ಮಾತನಾಡಿಸದೇ ಸಿಟ್ಟಿನ ಮುಖಭಾವದಿಂದ ಹೋಗಿದ್ದು ನನಗೆ ವಿಚಿತ್ರವೆನ್ನಿಸಿತ್ತು. ನನ್ನ ಜೊತೆಗೆ ಸದಾಕಾಲ ಜಗಳಕ್ಕೆ ನಿಲ್ಲುತ್ತಿದ್ದ ಸಲ್ಮಾನ್ ಹಳೆಯ ಕಾಲದ ಯಾವುದೋ ಮಿತ್ರನಂತೆ ಮಾತನಾಡಿದ್ದು, ಆದರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು.
               ನಂತರದ ದಿನಗಳಲ್ಲಿ ಮಾತ್ರ ಬಹಳ ವಿಚಿತ್ರ ಘಟನೆಗಳು ಜರುಗಿದ್ದವು. ಆಮೀರ್ ಹಾಗೂ ಸಲ್ಮಾನ್ ವಾಸವಾಗಿದ್ದ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಮೊದಲು ಸಲ್ಮಾನ್ ಯಾವ ರೀತಿಯಲ್ಲಿ ತನ್ನ ಧರ್ಮದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದನೋ ಈಗ ಆಮೀರ್ ಅದೇ ಕೆಲಸಕ್ಕೆ ಮುಂದಾಗಿದ್ದ. ಸಲ್ಮಾನ್ ತನ್ನ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ, ವಾದಕ್ಕೆ ಸೀಮಿತನಾಗಿದ್ದನಾದರೂ ಆಮೀರ್ ಮಾತ್ರ ಇನ್ನೂ ಹಲವಾರು ಹೆಜ್ಜೆ ಮುಂದಕ್ಕೆ ಸಾಗಿದ್ದ. ಆತ ಯಾರ ಮಾತನ್ನೂ ಕೇಳದೇ ಇರುವ ಹಂತವನ್ನು ತಲುಪಿದ್ದ. ಅದಕ್ಕೆ ಬದಲಾಗಿ ಸಲ್ಮಾನ್ ಮಾತ್ರ ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆರಂಭಿಸಿದ್ದ.
           
***

              ಅದೊಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಸುದ್ದಿಯೊಂದು ಬಂದಿತ್ತು. ಆಮೀರ್ ಖಾನ್ ಮನೆಯ ಮೇಲೆ ಭಯೋತ್ಪಾದನಾ ನಿಗ್ರಹ ದಳದವರು ಧಾಳಿ ಮಾಡಿದ್ದಾರೆ. ಆಮೀರ್ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬಂದೂಕುಗಳು, ಪಿಸ್ತೂಲುಗಳು ಸಿಕ್ಕಿವೆಯಂತೆ. ಮನೆಯ ಯಜಮಾನನಾದ ಆಮೀರ್ ಹಾಗೂ ಆತನ ತಮ್ಮ ಸಲ್ಮಾನ್ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರಂತೆ ಎಂಬ ಸುದ್ದಿ ಕೇಳಿಬಂದಿತ್ತು. ಅದಾದ ಮರುದಿನವೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನನ್ನ ಮನೆಯ ಕದವನ್ನೂ ತಟ್ಟಿದ್ದರು. ನಾನು ಈಗ ಮಾತ್ರ ಭಯಗೊಂಡಿದ್ದೆ. ಅಧಿಕಾರಿಗಳು ನನ್ನನ್ನು ಸೀದಾ ಅವರ ಕಚೇರಿಗೆ ಕರೆದೊಯ್ದಿದ್ದರು. ಸದಾ ಧರ್ಮದ ಪರವಾಗಿ ಮಾತನಾಡಿ ಗಲಾಟೆಗೆ ತಯಾರಾಗುತ್ತಿದ್ದ ಸಲ್ಮಾನ್ ಏನೋ ಭಾನಗಡಿ ಮಾಡಿರಬೇಕು ಎಂದುಕೊಂಡಿದ್ದೆ.
             ಕರೆದೊಯ್ದವರೇ ನನ್ನ ಬಳಿ ಕೇಳಿದ್ದಿಷ್ಟು. ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಹಜ್ ಯಾತ್ರೆ ಮಾಡಲು ಅನುಕೂಲವಾಗುವಂತೆ ಪಾಸಪೋರ್ಟ್ ಮಾಡಿಸಿಕೊಟ್ಟಿದ್ದು, ಅದಕ್ಕೆ ಸಹಾಯ ಮಾಡಿದ್ದು ನಾನಾಗಿದ್ದೆ. ಅದನ್ನು ಯಾವ ಕಾರಣಕ್ಕೆ ಮಾಡಿಸಿಕೊಟ್ಟಿದ್ದೆಂದು ಕೇಳಿದ್ದರು. ನಾನು ಎಲ್ಲ ವಿವರಗಳನ್ನೂ ಹೇಳಿದ್ದೆ. ಕೊನೆಗೆ ನನ್ನ ಮಾತನ್ನು ಅವರು ನಂಬಿದರೋ ಬಿಟ್ಟರೋ ಎನ್ನುವುದು ಗೊತ್ತಾಗಲಿಲ್ಲ. ಆದರೆ ನನ್ನನ್ನು ವಾಪಾಸು ಹೋಗುವಂತೆ ಹೇಳಿದ್ದರಿಂದ ನಾನು ನಿರಾಳನಾಗಿದ್ದೆ. ಹೋಗುವ ಮುನ್ನ ಅಧಿಕಾರಿಗಳ ಬಳಿ ಬಂಧನಕ್ಕೊಳಪಟ್ಟಿರುವ ಆಮೀರ್ ಹಾಗೂ ಸಲ್ಮಾನ್ ಅವರನ್ನು ಮಾತನಾಡಿಸಬಹುದೇ ಎಂದು ಹೇಳಿದ್ದೆ. ಅದಕ್ಕವರು ಸಾಕಷ್ಟು ಫಾರ್ಮುಗಳ ಮೇಲೆ ಸಹಿ ಹಾಕಿಸಿಕೊಂಡು ಒಪ್ಪಿಗೆ ಸೂಚಿಸಿದ್ದರು.
          ದೊಡ್ಡ ಜೈಲಿನಲ್ಲಿ ಎರಡು ಪ್ರತ್ಯೇಕ ಕೋಣೆಗಳಲ್ಲಿ ಆಮೀರ್ ಹಾಗೂ ಸಲ್ಮಾನ್ ರನ್ನು ಕೂಡಿ ಹಾಕಲಾಗಿತ್ತು. ಅವರು ಇದ್ದ ಸ್ಥಿತಿಯನ್ನು ಗಮನಿಸಿದರೆ ಸತ್ಯವನ್ನು ಬಾಯಿ ಬಿಡಿಸುವ ಸಲುವಾಗಿ ಸಾಕಷ್ಟು ಚಿತ್ರಹಿಂಸೆ ನೀಡಿರುವುದು ಗಮನಕ್ಕೆ ಬರುತ್ತಿತ್ತು. ನಾನು ಸೀದಾ ಆಮೀರ್ ಇದ್ದ ಕೋಣೆಯತ್ತ ಹೋದೆ. ಆಮೀರನಿಗೆ ನಾನು ಬರುತ್ತಿರುವುದು ಕಾಣಿಸಿತ್ತು. ಆದರೆ ನನ್ನ ಜೊತೆಗೆ ಮಾತನಾಡಲು ಸಿದ್ಧನಿರದ ಆಮೀರ್ ಮುಖ ತಿರುಗಿಸಿಕೊಂಡ. ಕೊನೆಗೆ ಸಲ್ಮಾನ್ ಬಳಿಗೆ ಹೋದೆ. ಸಲ್ಮಾನ್ ನನ್ನನ್ನು ನೋಡಿದವನೇ ಕಣ್ಣಿನಲ್ಲಿ ನೀರು ತಂದುಕೊಂಡು `ಮಾಫ್ ಕರೋ. ನಾನು ಏನೂ ಧೋಖಾ ಮಾಡಿಲ್ಲ. ನನ್ನನ್ನು ಇಲ್ಲಿ ಸುಮ್ಮನೇ ಸಿಕ್ಕಿಸಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಡಿಸಿ ಮಾರಾಯ್ರೇ..' ಎಂದು ಹಲುಬಲು ಆರಂಭಿಸಿದ. ನನಗೆ ಮತ್ತೆ ವಿಚಿತ್ರವೆನ್ನಿಸಿತ್ತು.
            `ಏನಾಗುತ್ತದೋ ಗೊತ್ತಿಲ್ಲ. ಆದರೆ ಇದೆಲ್ಲ ಹೇಗಾಯಿತು? ಇದಕ್ಕೆಲ್ಲ ಏನು ಕಾರಣ? ನಿಮ್ಮ ಮನೆಯಲ್ಲಿ ಭಯೋತ್ಪಾದಕ ವಸ್ತುಗಳು ಸಿಗುತ್ತವೆ ಎಂದರೆ ಹೇಗೆ ಸಾಧ್ಯ? ನೋಡಿ ನಿಮಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಸಹಾಯ ಮಾಡಿದ ನನ್ನ ತಲೆಗೂ ಇದು ಸುತ್ತಿಕೊಳ್ಳುತ್ತಿದೆ..' ಎಂದು ಸಿಟ್ಟಿನಿಂದ ನುಡಿದೆ.
            `ಭಾಯ್.. ಇದು ನನ್ನ ಕೆಲಸವಲ್ಲ ಭಾಯ್. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಇದೆಲ್ಲ  ಆಮೀರ್ ನ ಕೆಲಸ. ನಾನು ಯಾವುದಕ್ಕೂ ಸಂಬಂಧ ಇಲ್ಲದವನು. ಆದರೆ ಆಮೀರ್ ನಿಂದಾಗಿ ನಾನೂ ಈಗ ಜೈಲುಪಾಲಾಗುವ ಪರಿಸ್ಥಿತಿ ಬಂದಿತು. ಅವನಿಂದಲೇ ನಿಮಗೂ ಕೆಟ್ಟ ಹೆಸರು ಬಂದಿತು ನೋಡಿ.. ಛೇ..' ಎಂದು ತಲೆ ಕೊಡವಿದ ಸಲ್ಮಾನ್.
            `ಆಮೀರ್..? ಆತ ಹೀಗೆ ಮಾಡಿದನಾ? ಹೇಗೆ ಸಾಧ್ಯ? ಮತ್ತೆ ಆಗ ಅಷ್ಟೆಲ್ಲ ಒಳ್ಳೆಯವನಾಗಿದ್ದನಲ್ಲ.. ಹಜ್ ಯಾತ್ರೆ ಮಾಡಿದ ನಂತರ ಏನಾಯಿತು ನಿಮಗೆ?' ಎಂದು ಅಚ್ಚರಿ, ದುಗುಡ ಹಾಗೂ ಕುತೂಹಲದಿಂದ ಕೇಳಿದ್ದೆ.
           `ಅಯ್ಯೋ ಅದೊಂದು ದೊಡ್ಡ ಕಥೆ. ಹಜ್ ಯಾತ್ರೆಗೆ ಮುನ್ನ ನಾನು ಉಗ್ರವಾದ ಆಲೋಚನೆಗಳನ್ನು ಹೊಂದಿದ್ದೇನೋ ನಿಜ. ನನ್ನಣ್ಣ ಆಮೀರ್ ಒಳ್ಳೆಯವನಾಗಿದ್ದಿದ್ದೂ ನಿಜ. ಆದರೆ ಅಲ್ಲಿಗೆ ಹೋದ ಮೇಲೆಯೇ ನಮ್ಮಲ್ಲಿ ಬದಲಾವಣೆಗಳು ಜರುಗಿದ್ದು ನೋಡಿ. ಹೇಗೋ ಇದ್ದ ಆತ ಹೇಗೋ ಆದ. ಮತ್ತೆ ಇನ್ನು ಹೇಗೋ ಇದ್ದ ನಾನು ಹೀಗೆ ಆಗಿದ್ದೇನೆ ನೋಡಿ..' ಎಂದು ಹಲುಬಿದ ಸಲ್ಮಾನ್.
           `ಅರ್ಥವಾಗುತ್ತಿಲ್ಲ.. ಬಿಡಿಸಿ ಹೇಳು ಮಾರಾಯಾ.' ಎಂದೆ ನಾನು
           `ನಿಮ್ಮ ಧರ್ಮದಲ್ಲಿ ಕಾಶೀ ಯಾತ್ರೆಯನ್ನು ಹೇಗೆ ಮಾಡುತ್ತೀರೋ ಹಾಗೆ ನಮ್ಮ ಧರ್ಮದಲ್ಲಿ ಮೆಕ್ಕಾ ಯಾತ್ರೆ ಮಾಡುತ್ತೇವೆ. ಕಾಶಿ ನಿಮಗೆ ಪವಿತ್ರ. ನಮಗೆ ಮೆಕ್ಕಾ ಹಾಗೂ ಮದೀನಾ ಯಾತ್ರೆ. ಇದನ್ನೇ ಹಜ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆ ಮಾಡಿದವರನ್ನು ಹಾಜಿ ಎಂದೂ ಹೇಳಲಾಗುತ್ತದೆ. ಹೀಗೆ ಹಜ್ ಯಾತ್ರೆಗೆ ನಮ್ಮಂತೆ ಕೋಟ್ಯಂತರ ಜನರು ದೇಶ ವಿದೇಶಗಳಿಂದ ಬರುತ್ತಾರೆ. ನಾವು ಕೂಡ ಹೋದ್ವಿ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲಿಂದಲೇ ಎಲ್ಲ ಬದಲಾಗಿದ್ದು ನೋಡಿ.' ಎಂದ ಸಲ್ಮಾನ್. `ಅಂದರೆ? ಏನಾಯಿತು ಅಲ್ಲಿ?' ನಾನು ನಡುವೆ ಬಾಯಿ ಹಾಕಿ ಕೇಳಿದೆ.
            `ಅಲ್ಲಿ ಎಲ್ಲಾ ರಾಷ್ಟ್ರಗಳ ಜನರೂ ಬರುತ್ತಾರೆ ಎಂದೆನಲ್ಲ. ಅಣ್ಣ ಆಮೀರ್ ಗೆ ಹೇಗೋ ಗೊತ್ತಿಲ್ಲ ಪಾಕಿಸ್ತಾನದಿಂದ ಬಂದಿದ್ದ ಕೆಲವು ಭಯೋತ್ಪಾದಕರ ಪರಿಚಯವಾಗಿಬಿಟ್ಟಿತ್ತು. ಸೌಮ್ಯನಾಗಿ, ಎಲ್ಲರಿಗೂ ಬೇಕಾಗಿ ಜೀವಿಸುತ್ತಿದ್ದ ಆತನ ತಲೆಯನ್ನು ಭಯೋತ್ಪಾದಕರು ವ್ಯವಸ್ಥಿತವಾಗಿ ತಿರುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಆತನ ತನ್ನ ಧರ್ಮವನ್ನು ಬಿಟ್ಟು ಉಳಿದೆಲ್ಲ ಧರ್ಮವನ್ನೂ ದ್ವೇಷಿಸುವ ಹಂತಕ್ಕೆ ತಲುಪಿದ್ದ. ಧರ್ಮದ ಸ್ಥಾಪನೆಗಾಗಿ ಧರ್ಮಯುದ್ಧ ಮಾಡಲೂ ಸಿದ್ಧ ಎಂದು ಹೇಳುವ ಮಟ್ಟಕ್ಕೆ ಆತ ಬಂದು ತಲುಪಿದ್ದ. ಇದೇ ಕಾರಣಕ್ಕೆ ಈಗ ಆತ ಯಾರ ಬಳಿಯೂ ಹೆಚ್ಚು ಮಾತನಾಡುವುದಿಲ್ಲ. ಎಲ್ಲರನ್ನೂ ದ್ವೇಷ ಮಾಡುತ್ತಾನೆ. ಎಲ್ಲರ ಮೇಲೂ ಕೆಂಡ ಕಾರುತ್ತಾನೆ. ಇದೀಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿ ಇರಿಸಿಕೊಳ್ಳುವುದಕ್ಕೂ ಇದೇ ಕಾರಣ. ಈಗ ನೋಡಿ ಇದು ಎಲ್ಲಿಗೆ ಬಂದು ತಲುಪಿದೆ ಅಂತ..' ಎಂದ ಸಲ್ಮಾನ್.
            ನನ್ನಲ್ಲಿ ಅಚ್ಚರಿಯಿತ್ತು. ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ, ಎಲ್ಲಾ ಧರ್ಮದವರನ್ನೂ ಪ್ರೀತಿಯಿಂದ ಸಲಹುತ್ತಿದ್ದ ಆಮೀರ್ ನಲ್ಲಿ ಇಂತಹ ಬದಲಾವಣೆಯಾಗಿದೆ ಎಂದರೆ ಸಾಮಾನ್ಯವೇನಲ್ಲ. ಆಮೀರ್ ಉಗ್ರನಾದ ಎನ್ನುವುದನ್ನು ನನ್ನ ಮನಸ್ಸು ಹೇಗೆ ನಂಬಲು ತಯಾರಿರಲಿಲ್ಲವೋ ಅದೇ ರೀತಿ ಉಗ್ರ ಗುಣಗಳನ್ನು ಹೊಂದಿದ್ ಸಲ್ಮಾನ್ ಹೇಗೆ ಸೌಮ್ಯನಾದ ಎನ್ನುವುದನ್ನೂ ನಂಬಲು ಸಿದ್ಧವಿರಲಿಲ್ಲ. ಕುತೂಹಲ ತಡೆಯಲಾಗದೇ ಕೇಳಿಯೂಬಿಟ್ಟೆ. `ಹಾಗಾದರೆ ನೀನು ಇಷ್ಟೆಲ್ಲ ಸುಮ್ಮನಾಗಲು, ನಿನ್ನೊಳಗಿನ ಉಗ್ರ ಗುಣಗಳು ಕಾಣೆಯಾಗಲು ಕಾರಣ ಏನು? ನಿನಗೂ ಉಗ್ರರ ಗುಂಪು ಸಿಗಲಿಲ್ಲವಾ? ನಿನ್ನನ್ನು ಮನಃಪರಿವರ್ತನೆ ಮಾಡಲು ಅವರು ಪ್ರಯತ್ನಿಸಲಿಲ್ಲವಾ?' ಎಂದು ಕೇಳಿದೆ.
            ಒಮ್ಮೆ ನಕ್ಕ ಸಲ್ಮಾನ್ `ಭಾಯ್.. ನಿಮ್ಮ ಧರ್ಮದಲ್ಲಿ ನೀವು ಕಾಶಿಗೆ ಹೋಗುತ್ತೀರಾ. ಕಾಶಿಗೆ ಹೋಗಿ ಬಂದವರನ್ನು ಸರಿಯಾಗಿ ಮಾತನಾಡಿಸಿದರೆ ಅವರಲ್ಲಿ ಅದೇನೋ ಒಂದು ರೀತಿಯ ಭಾವ ಕಾಡುತ್ತಿರುತ್ತದೆ. ಬೌದ್ಧುಕವಾಗಿ ಔನ್ನತ್ಯ ಸಾಧಿಸಿರುತ್ತಾರೆ. ತಾವು ಇದುವರೆಗೂ ಮಾಡಿದ್ದು ಸಾಕು. ಇನ್ನಾದರೂ ಸಮಾಜಮುಖಿಯಾಗೋಣ, ಜನರಿಗೆ ಒಳ್ಳೆಯದನ್ನು ಮಾಡೋಣ ಎಂದುಕೊಂಡು ಜೀವನ ನಡೆಸುತ್ತಾರೆ. ನನಗೂ ಕೂಡ ಹಾಗೆಯೇ ಆಯಿತು. ನಮ್ಮ ಧರ್ಮದ ಅತ್ಯುನ್ನತ ಕ್ಷೇತ್ರಕ್ಕೆ ಹೋದ ನನಗೆ ಎಲ್ಲ ಆಸೆಗಳೂ ಸಂಪೂರ್ಣವಾಗಿ ಕರಗಿಬಿಟ್ಟವು. ಯಾಕೋ ನಾನು ಇದುವರೆಗೂ ಸುಮ್ಮನೇ ಧರ್ಮ-ಧರ್ಮ ಎಂದು ಹೊಡೆದಾಟ ಮಾಡುತ್ತಿದ್ದೆ. ಆದರೆ ಅದರಿಂದ ನನಗೆ ಸಿಕ್ಕಿದ್ದೇನು ಎನ್ನಿಸಿತು. ಸಮಾಜದಿಂದಲೂ ದೂರವಾದೆ. ನನ್ನನ್ನು ಕಂಡರೆ ಎಲ್ಲರೂ ಹೆದರಲು ಆರಂಭಿಸಿದರು. ನಾನು ನನ್ನ ಮನೆಯಲ್ಲಿರುವ ನನ್ನ ಧರ್ಮದ ಗೃಂಥವನ್ನು ಅದೆಷ್ಟು ಸಹಸ್ರ ಸಾರಿ ಓದಿದ್ದೆನೊ. ಆದರೆ ಅದರಲ್ಲಿನ ವಾಕ್ಯಗಳು ಸಂಪೂರ್ಣ ಅರ್ಥವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಹೀಗಾಗಿ ಧರ್ಮ ಹಾಗೆ ಹೇಳುತ್ತಿದೆ, ಹೀಗೆ ಹೇಳುತ್ತದೆ ಎಂದೆಲ್ಲ ವಾದಿಸುತ್ತಿದೆ. ಆದರೆ ಯಾತ್ರೆಗೆ ಹೋದ ನನಗೆ ಒಬ್ಬ ಪ್ರಸಿದ್ದ ಮೌಲ್ವಿಗಳ ದರ್ಶನ ಭಾಗ್ಯ ಸಿಕ್ಕಿತು. ಅವರು ನನಗೆ ನನ್ನ ಧರ್ಮದ ಗೃಂಥದ ಎಳೆ ಎಳೆಯನ್ನೂ ಸಂಪೂರ್ಣವಾಗಿ ವಿವರಿಸಿದರು. ನನ್ನ ಧರ್ಮ ಉಗ್ರವಾದುದಲ್ಲ. ಯುದ್ಧ ಮಾಡಿ ಎಂದು ಹೇಳುವುದಿಲ್ಲ. ಬದಲಾಗಿ ಪ್ರೀತಿಯನ್ನು ಹಂಚಿ ಎಂದು ಹೇಳುತ್ತದೆ ಎಂದರು. ನಾನು ಎಷ್ಟು ತಪ್ಪು ಮಾಡುತ್ತಿದ್ದೆ ಎನ್ನುವುದು ಅರಿವಾಯಿತು. ತಕ್ಷಣವೇ ನಾನು ಬದಲಾಗಲು ನಿರ್ಧಾರ ಮಾಡಿದೆ. ನನ್ನೊಳಗಿನ ಉಗ್ರ ಹಾಗೇ ಕಾಣೆಯಾಗಿದ್ದ..' ಎಂದ ಸಲ್ಮಾನ್.
               ನನ್ನಲ್ಲಿ ಅಚ್ಚರಿಯಿತ್ತು. ಆತನೇ ಮುಂದುವರೆದ `ನನಗೂ ಅನೇಕ ಜನರು ಬಂದು ಹಾಗೆ ಮಾಡು ಹೀಗೆ ಮಾಡು ಎಂದರು. ಭಯೋತ್ಪಾದಕ ಸಂಘಟನೆಗೆ ಸೇರಲು ಆಹ್ವಾನವನ್ನೂ ನೀಡಿದ್ದರು. ಆದರೆ ಅವರ ಬಳಿ ನಾನು ಪ್ರೀತಿಯ ಪಾಠವನ್ನು ಹೇಳಿದೆ. ಇದರಿಂದಾಗಿ ಯಾತ್ರೆಯ ಮಧ್ಯದಲ್ಲಿಯೇ ನನ್ನ ಮೇಲೆ ಹಲ್ಲೆಯೂ ನಡೆಯಿತು. ಆದರೆ ಮೌಲ್ವಿಗಳ ಸಹಾಯದಿಂದ ನಾನು ಬದುಕಿದೆ. ಆದರೆ ನನ್ನಣ್ಣ ಸಂಪೂರ್ಣವಾಗಿ ಅವರ ವಶಕ್ಕೆ ಸಿಲುಕಿದ್ದ. ಆತನನ್ನು ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ. ಮುಂದೊಂದು ದಿನ ಶಸ್ತ್ರಾಸ್ತ್ರಗಳನ್ನೂ ತಂದು ಇರಿಸಿದ. ಇದನ್ನು ನಾನು ಉಗ್ರವಾಗಿ ವಿರೋಧ ಮಾಡಿದ್ದೆ. ಆದರೆ ಅಣ್ಣ ನನ್ನ ಮಾತು ಕೇಳಲಿಲ್ಲ. ಕೊನೆಗೊಂದು ದಿನ ನಾನೇ ಭಯೋತ್ಪಾದನೆ ನಿಗ್ರಹ ದಳದವರಿಗೆ ಮಾಹಿತಿಯನ್ನೂ ನೀಡಿದೆ. ಈಗ ನೋಡಿ ದಳದ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ. ನಾನೇ ಮಾಹಿತಿ ನೀಡಿದವನು ಎಂದರೂ ನಂಬುತ್ತಿಲ್ಲ. ನನ್ನನ್ನೂ ಭಯೋತ್ಪಾದಕ ಎಂಬಂತೆ ಕಾಣುತ್ತಿದ್ದಾರೆ' ಎಂದ.
             ಸಲ್ಮಾನ್ ಇಂತಹದ್ದೊಂದು ಮಾಹಿತಿ ನೀಡುತ್ತಾನೆ ಎಂದು ನಾನು ಖಂಡಿತವಾಗಿಯೂ ಅಂದಾಜು ಮಾಡಿರಲಿಲ್ಲ. ದೇಶದಾದ್ಯಂತ ಇರುವ ನಮ್ಮದೇ ದೇಶದ ಗುಪ್ತಚರರು ಈ ಅಣ್ಣತಮ್ಮಂದಿರ ಮೇಲೆ ಕಣ್ಣಿರಿಸಿದ್ದರು. ಅವರ ತನಿಖೆಗೆ ಸಿಕ್ಕಿಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಸಲ್ಮಾನ್ ಮಾಹಿತಿ ನೀಡಿದ್ದಾನೆ ಎನ್ನುವುದು ನನ್ನಲ್ಲಿ ಶಾಕ್ ನೀಡಿತ್ತು. ಸಲ್ಮಾನ್ ಇಂತಹ ಕೆಲಸ ಮಾಡಿದ್ದಾನೆ ಎನ್ನುವುದು ನನ್ನ ನಿರೀಕ್ಷೆಗೆ ನಿಲುಕದ ಸಂಗತಿಯಾದ್ದರಿಂದ ಒಮ್ಮೆ ಬೆಚ್ಚಿದ್ದೆ. ನಾನು ಮಾತುಕತೆಗೆ ಆಡಲು ಬಂದಾಗ ನನ್ನ ಜೊತೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬ ಬಂದಿದ್ದ. ಆತ ನಮ್ಮ ಮಾತುಕತೆಗಳನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಸಲ್ಮಾನನ ಮಾತನ್ನು ಕೇಳಿ ಆತನಿಗೂ ಒಮ್ಮೆ ಅಚ್ಚರಿಯಾಗಿದ್ದು ಮುಖಭಾವದಿಂದ ಕಾಣುತ್ತಿತ್ತು.
             `ಒಳ್ಳೆಯ ಕೆಲಸ ಮಾಡಿದ್ದೀಯಾ ಸಲ್ಮಾನ್ ಭಾಯ್. ನಿಜಕ್ಕೂ ನಿನ್ನ ದೇಶಪ್ರೇಮ, ಪ್ರೀತಿಯ ಪಾಠ ಮೆಚ್ಚುವಂತದ್ದು. ನಾನು ಅಧಿಕಾರಿಗಳ ಬಳಿ ಹೇಳುತ್ತೇನೆ. ನನ್ನ ಮಾತನ್ನು ಕೇಳಿದರೆ ಆಯಿತು. ಇಲ್ಲವಾದರೆ ಮುಂದೆ ಏನಾಗುತ್ತದೆಯೋ ನೋಡೋಣ. ಆದರೆ ನೀನು ಹೇಳಿದ ಮಾತುಗಳಿದೆಯಲ್ಲ. ಇದನ್ನು ಜಗತ್ತು ಅನುಸರಿಸಿದರೆ ಮಾತ್ರ ಎಷ್ಟು ಒಳ್ಳೆಯದು ಅಲ್ಲವಾ. ದ್ವೇಷದಿಂದ, ಭಯದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯವಿದೆ. ನನಗೆ ಅರ್ಥವಾಗುತ್ತದೆ. ನಿನಗೆ ಅರ್ಥವಾಗುತ್ತದೆ. ಆದರೆ ಜಗತ್ತಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ ನೋಡು.' ಎಂದೆ. ಮುಂದಿನ ಕೆಲ ಘಳಿಗೆಯಲ್ಲಿ ಆತನ ಜೊತೆ ಮಾತುಕತೆಯೂ ನಡೆಯಿತು. ಅಷ್ಟರಲ್ಲಿ ನನ್ನ ಜೊತೆಗೆ ಇದ್ದ ಅಧಿಕಾರಿ ಸನ್ನೆ ಮಾಡಿದ. ಮಾತು ಸಾಕು ಎನ್ನುವಂತೆ ಹೇಳಿ ನನ್ನನ್ನು ಹೊರಕ್ಕೆ ಹೋಗುವಂತೆ ತಿಳಿಸಿದ. ನಾನು ಸಲ್ಮಾನನನ್ನು ಬೀಳ್ಕೊಟ್ಟೆ. ಸಲ್ಮಾನನ ಕೋಣೆ ದಾಟಿ ಆಮೀರ್ ಇದ್ದ ಕೋಣೆಯ ಬಳಿ ಬಂದಾಗ ಇದ್ದಕ್ಕಿದ್ದಂತೆ ಆಮೀರ್ `ಧರ್ಮಯುದ್ಧ ಶಾಶ್ವತ. ಧರ್ಮಯುದ್ಧಕ್ಕೆ ಜಯವಾಗಲಿ.' ಎಂದು ದೊಡ್ಡದಾಗಿ ಕೂಗಿದ. ನಾನು ಬೆಚ್ಚಿಬಿದ್ದು ಹೊರಕ್ಕೆ ಬಂದಿದ್ದೆ.

****

            ಇದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಅಚ್ಚರಿಯ ಸುದ್ದಿಯೊಂದು ಬಂದಿತ್ತು. ಜೈಲಿನಲ್ಲಿ ಸಲ್ಮಾನ್ ತನ್ನ ಅಣ್ಣ  ಆಮೀರನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಚ್ಚರಿಯಿಂದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳ ಬಳಿ ಕೇಳಿದಾಗ `ಉಗ್ರನ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡಿದ್ದ ಸಲ್ಮಾನ್. ಅದರೆ ಆಮೀರ್ ಆ ಮಾತಿಗೆ ಬೆಲೆ ಕೊಡಲಿಲ್ಲ. ಕೊನೆಗೆ ಇಂತಹ ಉಗ್ರ ಮನೋಭಾವದವನು ಇರುವುದಕ್ಕಿಂತ ಸಾಯುವುದೇ ಒಳ್ಳೆಯದು. ಆತನನ್ನು ಸಾಯಿಸಿದರೆ ಜಗತ್ತಿನಲ್ಲಿ ಅದೆಷ್ಟೋ ಅಮಾಯಕರು ನಿಶ್ಚಿಂತೆಯಿಂದ ಇರುತ್ತಾರೆ ಎಂದು ಎಂದು ಪತ್ರ ಬರೆದು ಆಮೀರನನ್ನು ಹತ್ಯೆ ಮಾಡಿದ್ದ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ನೋಡಿ..' ಎಂದಿದ್ದರು.
            ಒಂದು ಯಾತ್ರೆ ಇಬ್ಬರಲ್ಲೂ ಎಂತಹ ಬದಲಾವಣೆ ತಂದಿತಲ್ಲ. ಸೌಮ್ಯನಾಗಿದ್ದವನು ಉಗ್ರನಾದ. ಉಗ್ರನಾದವನು ಸೌಮ್ಯಭಾವವನ್ನು ಹೊಂದಿದ. ಒಬ್ಬ ಹಿಂಸೆಯ ಹಾದಿ ಹಿಡಿದರೆ ಇನ್ನೊಬ್ಬ ಪ್ರೀತಿಯ ಹೂವನ್ನು ಮುಡಿದ. ಎಂತಹ ಬದಲಾವಣೆಗಳಲ್ಲವಾ ಎಂದುಕೊಂಡೆ. ಸಲ್ಮಾನ್ ಹಾಗೂ ಆಮೀರ್ ಸಹೋದರರ ಈ ರೀತಿಯ ಬದಲಾವಣೆಗಳು ನನ್ನಲ್ಲೂ ತರಂಗಗಳನ್ನು ಎಬ್ಬಿಸಿದ್ದವು.

        

Thursday, August 20, 2015

ಟೀಂ ಇಂಡಿಯಾಗೆ ಟೆಸ್ಟ್

            ಒಂದಾನೊಂದು ಕಾಲದ ಕ್ರಿಕೆಟ್ ಲೋಕದ ನಂಬರ್ 1 ಟೆಸ್ಟ್ ರಾಂಕಿನ ರಾಷ್ಟ್ರ ಭಾರತ ಇದೀಗ ಬಕ್ಕಾಬೋರಲು ಬಿದ್ದಿದೆ. ಒಂದರ ಹಿಂದೆ ಒಂದರಂತೆ ಸೋಲುಗಳನ್ನು ಕಾಣಲು ಆರಂಭಿಸಿದೆ. ಡ್ರಾ ಸಾಧಿಸಿಕೊಳ್ಳುವಂತಹ ಪಂದ್ಯಗಳಲ್ಲಿಯೂ ಸೋಲನ್ನು ಕಾಣುವ ಮೂಲಕ ಮಾನ ಹರಾಜು ಮಾಡಿಕೊಳ್ಳುತ್ತಿದೆ. ಇನ್ನು ವಿದೇಶಿ ನೆಲದಲ್ಲಂತೂ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸಾಕಪ್ಪಾ ಸಾಕು ಎನ್ನಿಸುವಂತಹ ದಯನೀಯ ಸ್ಥಿತಿಗೆ ತಲುಪಿದೆ. ಇಂತಹ ಸೋಲಿಗೆ ಕಾರಣಗಳನ್ನು ಹುಡುಕಿದರೆ ಅನೇಕ ಸಂಗತಿಗಳು ಹೊರಬೀಳುತ್ತವೆ.
           ದಶಕಗಳ ಹಿಂದೆ ಭಾರತ ಕ್ರಿಕೆಟ್ ತಂಡ ಟೆಸ್ಟ್ ರಾಂಕಿಂಗಿನಲ್ಲಿ ಮೊದಲ ಸ್ಥಾನವನ್ನು ಎಡತಾಕುತ್ತಿತ್ತು. 2007-08ರ ಆಜೂಬಾಜಿನಲ್ಲಿ ಮೊದಲ ಸ್ಥಾನದಲ್ಲಿದ್ದು ನಂತರ ಒಂದೆರಡು ವರ್ಷಗಳ ವರೆಗೂ ಅದೇ ಸ್ಥಾನವನ್ನು ಕಾಪಾಡಿಕೊಂಡಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಭಾರತದ ಪರಿಸ್ಥಿತಿ ಅಯ್ಯೋ ಪಾಪ ಎನ್ನಿಸಲು ಆರಂಭವಾಗಿದೆ. ಸಾಲು ಸಾಲು ಸೋಲುಗಳು ತಂಡದ ಆತ್ಮಸ್ಥೈರ್ಯವನ್ನೇ ಕಂಗೆಡಿಸಿಬಿಟ್ಟಿದೆ. ಆಷ್ಟ್ರೇಲಿಯಾದಂತಹ ದೈತ್ಯ ಕ್ರಿಕೆಟ್ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದ ಭಾರತ ತಂಡ ಇದೇನಾ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಭಾರತದ ಟೆಸ್ಟ್ ಕ್ರಿಕೆಟ್ ತಳಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
          ಗಂಗೂಲಿ, ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್ ಇವರಂತಹ ದೈತ್ಯರು ಭಾರತೀಯ ತಂಡದಲ್ಲಿ ಇದ್ದಷ್ಟು ಕಾಲ ತಂಡಕ್ಕೆ ಸೋಲೆಂಬುದೇ ಇರುತ್ತಿರಲಿಲ್ಲ. ಸೋಲಿನ ಸಂದರ್ಭದಲ್ಲೆಲ್ಲ ಡ್ರಾ ಆದರೂ ಸಾಧಿಸಿಕೊಳ್ಳುತ್ತಿತ್ತು. ಕನಿಷ್ಟ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಕ್ರಿಕೆಟ್ ನ ರಾಜನಾಗಿ ಮೆರೆಯುತ್ತಿತ್ತು. ಆದರೆ ಅಂತಹ ತಂಡ ಇದೀಗ ಸೋಲನ್ನು ತಪ್ಪಿಸಿಕೊಳ್ಳಲಾಗದೇ ವಿದೇಶಿ ನೆಲದಲ್ಲಿ ಮುಗ್ಗರಿಸುತ್ತಿದೆ.
           ಭಾರತ ಕ್ರಿಕೆಟ್ ತಂಡದ ಗುಣಮಟ್ಟ ಚನ್ನಾಗಿಲ್ಲ, ಅನುಭವದ ಕೊರತೆ ಈ ಮುಂತಾದ ಮಾತುಗಳು ಸದಾಕಾಲ ಚಾಲ್ತಿಯಲ್ಲಿದೆ. 2000ದಿಂದ ಆರಂಭಗೊಂಡ ಭಾರತೀಯ ಟೆಸ್ಟ್ ಕ್ರಿಕೆಟ್ ನ ಸುವರ್ಣಯುಗ 2011ರ ವರೆಗೂ ನಿರಾತಂಕವಾಗಿ ಮುಂದುವರಿದಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳು ಹಲವಾರು. ಸೆಹವಾಗ್ ಅವರ ಆರಂಭಿಕ ಆಟ. ಮಧ್ಯಮ ಕ್ರಮಾಂಕದಲ್ಲಿ ಮಾತ್ರವಲ್ಲ ಆಪತ್ತಿನ ಸಂದರ್ಭದಲ್ಲಿ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಆಡುತ್ತಿದ್ದ ರಾಹುಲ್ ದ್ರಾವಿಡ್, ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್, ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರುಗಳು ಬ್ಯಾಟಿಂಗಿನ ಮೂಲಕ ಭಾರತ ಟೆಸ್ಟ್ ತಂಡವನ್ನು ರಕ್ಷಣೆ ಮಾಡುತ್ತಿದ್ದರೆ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸ್ಪಿನ್ ಮೂಲಕ ಬೌಲಿಂಗ್ ಮುಂದಾಳುಗಳಾಗಿದ್ದರು. ನಡು ನಡುವೆ ಜಹೀರ್ ಖಾನ್ ಕೂಡ ಮಿಂಚುತ್ತಿದ್ದರು. ಜಾವಗಲ್ ಶ್ರೀನಾಥ್ ಕೂಡ ಆ ದಶಕದ ಮೊದಲ ಭಾಗದಲ್ಲಿ ಬೌಲಿಂಗ್ ಸಾರಥ್ಯ ವಹಿಸಿಕೊಂಡಿದ್ದವರೇ. ಆದರೆ ಇಂತಹ ಆಟಗಾರರು ನಿವೃತ್ತಿಯಾದ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡ ಶೂನ್ಯತೆ ಇನ್ನೂ ಭರ್ತಿಯಾಗಿಲ್ಲ ಎನ್ನುವುದು ದುರಂತ.


ಸೂಕ್ತ ಆರಂಭಿಕ ಆಟಗಾರರ ಕೊರತೆ :
          ಭಾರತದ ಟೆಸ್ಟ್ ಇತಿಹಾಸದಲ್ಲಿ ತ್ರಿಶತಕ ದಾಖಲಿಸಿದ ಏಕೈಕ ಆಟಗಾರ ವೀರೇಂದ್ರ ಸೆಹ್ವಾಗ್. ಸ್ಲಿಪ್ ನಲ್ಲಿ ಕ್ಯಾಚ್ ಕೊಟ್ಟು ಔಟಾಗುತ್ತಾರೆ, ಬೇಗನೆ ಔಟಾಗುತ್ತಾರೆ ಈ ಮುಂತಾದ ಅಪವಾದಗಳಿದ್ದರೂ ಕೂಡ ಸೆಹ್ವಾಗ್ ಆಡುತ್ತಿದ್ದಷ್ಟು ಕಾಲ ಭಾರತದ ಟೆಸ್ಟ್ ತಂಡ ಆತ್ತಮ ಆರಂಭವನ್ನು ಪಡೆಯುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಸೆಹ್ವಾಗ್ ಹೊರತು ಪಡಿಸಿದರೆ ಇನ್ನೊಂದು ತುದಿಯಲ್ಲಿ ಸದೃಢ ಆರಂಭಿಕ ಆಟಗಾರನಿರಲಿಲ್ಲ ಎನ್ನುವುದನ್ನು ಬಿಟ್ಟರೆ ತಂಡ ಉತ್ತಮ ಆರಂಭವನ್ನೇ ಪಡೆಯುತ್ತಿತ್ತು. ಆದರೆ ಈಗ ಗಮನಿಸಿದರೆ ಅಂತಹ ಆರಂಭಿಕ ಆಟಗಾರರ ಕೊರತೆಯನ್ನು ತಂಡ ಎದುರಿಸುತ್ತಲೇ ಇದೆ. ಆಡುವ ಕಸುವಿದ್ದರೂ ಸೆಹ್ವಾಹ್ ರನ್ನು ಕಡೆಗಣಿಸಲಾಗಿದೆ. ಮುರುಳಿ ವಿಜಯ್ ಆಸ್ಟ್ರೇಲಿಯಾ ನೆಲಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಇನ್ನು ಶಿಖರ್ ಧವನ್ ಒಂದು ಪಂದ್ಯದಲ್ಲಿ ಶತಕ ಭಾರಿಸಿ ನಾಲ್ಕು ಪಂದ್ಯದಲ್ಲಿ ಎರಡಂಕಿ ಮೊತ್ತ ಬಾರಿಸಲು ತಿಣುಕಾಡುತ್ತಾರೆ. ಹೊಸ ಹುಡುಗರ ಪೈಕಿ ಕೆ. ಎಲ್. ರಾಹುಲ್ ಭರವಸೆ ಮೂಡಿಸಿದ್ದಾರಾದರೂ ಅನುಭವ ಸಾಲದು. ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಆಗೀಗ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಪ್ರಯೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಅಪಸವ್ಯಗಳಿಂದಾಗಿ ಭಾರತ ಟೆಸ್ಟ್ ತಂಡಕ್ಕೆ ಉತ್ತಮ ಆರಂಭವೇ ದೊರಕುತ್ತಿಲ್ಲ.

ನಿರ್ವಹಣೆ ಕೊರತೆಯಲ್ಲಿ ಮಧ್ಯಮಕ್ರಮಾಂಕ :
          ಕೆಲವು ವರ್ಷಗಳ ಹಿಂದೆ ಭಾರತದ ಮಧ್ಯಮ ಕ್ರಮಾಂಕವನ್ನು ಗಮನಿಸಿ. ಒನ್ ಡೌನ್ ಆಟಗಾರ ರಾಹುಲ್ ದ್ರಾವಿಡ್ ಸದಾಕಾಲ ತಂಡದ ಆಪದ್ಬಾಂಧವನಾಗಿ ರಕ್ಷಣೆಗೆ ಧಾವಿಸುತ್ತಿದ್ದ. ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂಡವನ್ನು ಉಳಿಸುತ್ತಿದ್ದ. ಇಷ್ಟರ ಜೊತೆಗೆ ಪಿಳಿ ಪಿಳಿ ಕಣ್ಣು ಬಿಡುತ್ತ ಗಂಗೂಲಿ ಕೂಡ ರಕ್ಷಣೆ ಮಾಡುತ್ತಿದ್ದ. ಇವರೆಲ್ಲರೂ ಫೇಲಾದರು ಎಂದರೆ ಅವನೊಬ್ಬನಿದ್ದ ವಿವಿಎಸ್. ಲಕ್ಷ್ಮಣ್. ಎಂತಹ ತಂಡವೇ ಇರಲಿ, ಬಾಲಂಗೋಚಿಗಳನ್ನು ಕಟ್ಟಿಕೊಂಡಾದರೂ ಸರಿ ತಂಡವನ್ನು ದಡ ಮುಟ್ಟಿಸುತ್ತಿದೆ. ಆದರೆ ಈಗ ಏನಾಗಿದೆ ನೋಡಿ. ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಹೆಸರು ಗಳಿಸಿದ ಆಟಗಾರರೇ ಇದ್ದಾರೆ. ಕೋಹ್ಲಿ, ಪೂಜಾರಾ, ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಇದ್ದಾರೆ. ಇವರ ಪೈಕಿ ವಿರಾಟ್ ಕೋಹ್ಲಿ ಸಾಕಷ್ಟು ಚನ್ನಾಗಿ ಆಡುತ್ತಿದ್ದಾರೆ. ಆದರೆ ಇದೀಗ ನಾಯಕನ ಅವತಾರ ತೊಟ್ಟಿರುವ ಕೋಹ್ಲಿಯಲ್ಲಿ ಏಕದಿನದ ಆಟದ ಅನುಭವ ಸಾಕಷ್ಟಿದೆ. ಅದು ಟೆಸ್ಟ್ ಆಟಕ್ಕೆ ಸಾಲದು. ಅಲ್ಲದೇ ಕೋಹ್ಲಿಯ ಸಿಟ್ಟಿನ ಮನೋಭಾವ ಕೂಡ ಟೆಸ್ಟ್ ಪಂದ್ಯಕ್ಕೆ ಹಿಡಿಸುವುದಿಲ್ಲ. ಟೆಸ್ಟ್ ಏನಿದ್ದರೂ ಶಾಂತ ಸ್ವಭಾವವನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ಇನ್ನೂ ಪಳಗಬೇಕಾದದ್ದು ಸಾಕಷ್ಟಿದೆ.
            ದ್ರಾವಿಡ್ ನಂತರ ಯಾರು ಎಂಬ ಪ್ರಶ್ನೆ ಉದ್ಭವವಾದಾಗ ಎಲ್ಲರ ಕಣ್ಣಿಗೆ ಬಿದ್ದಿದ್ದು ಚೆತೆಶ್ವರ ಪೂಜಾರ. ಅದಕ್ಕೆ ತಕ್ಕಂತೆ ಪೂಜಾರಾ ಟೆಸ್ಟ್ ಪಂದ್ಯದಲ್ಲಿ ಸ್ವದೇಶದಲ್ಲಿ ಯಾವಾಗ ಶತಕಗಳ ಮೇಲೆ ಶತಕ ಬಾರಿಸಿದರೋ ತಂಡಕ್ಕೆ ಮತ್ತೊಬ್ಬ ದ್ರಾವಿಡ್ ಸಿಕ್ಕ ಎಂದುಕೊಂಡವರು ಹಲವರು. ದ್ರಾವಿಡ್ ಸಾಧನೆಯನ್ನೇ ಮರೆಯುವಂತೆ ಹುಯ್ಯಲಿಟ್ಟು ಪೂಜಾರಾನನ್ನು ಆಕಾಶಕ್ಕೆ ಏರಿಸಿದವರು ಮಾಧ್ಯಮದ ಜನರು. ಆದರೆ ಅದೇ ಪೂಜಾರಾ ವಿದೇಶಿ ನೆಲದಲ್ಲಿ ಒಂದಂಕಿ, ಎರಡಂಕಿಗೆ ಔಟಾಗತೊಡಗಿದಾಗ ಮಾತ್ರ ಎಂತಹ ಆಟಗಾರನನ್ನು ದ್ರಾವಿಡ್ ಗೆ ಹೋಲಿಸಿದೆವು ಛೇ ಎಂದುಕೊಂಡವರು ಹಲವರು. ಚೆತೇಶ್ವರ ಪೂಜಾರರಲ್ಲಿ ಪ್ರತಿಭೆಯಿದೆ. ಆದರೆ ವಿದೇಶಿ ನೆಲದಲ್ಲಿ ಈ ಪ್ರತಿಭೆ ಸೋತು ಸುಣ್ಣವಾಗುತ್ತಿದೆ. ಸ್ವದೇಶಕ್ಕಷ್ಟೇ ಸೀಮಿತವಾಗಿರುವ ಈ ಪ್ರತಿಭೆ ವಿದೇಶದ ನೆಲದಲ್ಲಿ ಉತ್ತಮವಾಗಿ ಆಡಿದಾಗ ಮಾತ್ರ ತಂಡಕ್ಕೆ ನಂಬಿಕಸ್ಥನಾಗಬಲ್ಲ.
             ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಜಿಂಕ್ಯಾ ರಹಾನೆಗೆ ಪ್ರತಿಭೆಯಿದೆ. ಪಂದ್ಯದಲ್ಲಿ ದೀರ್ಘಕಾಲ ನೆಲಕಷ್ಷಿ ಆಡಬಲ್ಲ ಸಾಮರ್ಥ್ಯವೂ ಇದೆ. ಆದರೆ ನಾಯಕನ ಅಥವಾ ತಂಡದ ನಿರ್ಧಾರಕ್ಕೆ ಬಲಿಯಾಗಬೇಕಾಗುತ್ತದೆ. ಒಮ್ಮೆ ಆರಂಭಿಕನಾಗಿ, ಇನ್ನೊಮ್ಮೆ ಒನ್ ಡೌನ್, ಮತ್ತೊಮ್ಮೆ ಸೆಕೆಂಡ್ ಡೌನ್, ಐದನೇ ಕ್ರಮಾಂಕ, ಆರನೇ ಕ್ರಮಾಂಕ ಹೀಗೆ ಕ್ರಮಾಂಕ ಬದಲಾವಣೆಯ ಪ್ರಯೋಗದಿಂದಾಗಿ ರಹಾನೆಯ ಆಟವೇ ಹಾಳಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರ ಎಂಬ ಮಾತ್ರಕ್ಕೆ ದ್ರಾವಿಡ್ ಹೇಗೆ ವಿವಿಧ ಪ್ರಯೋಗಗಳಿಗೆ ಬಲಿಯಾದರೋ ಅದೇ ರೀತಿ ರಹಾನೆಯನ್ನೂ ಪ್ರಯೋಗಕ್ಕೆ ಒಳಪಡಿಸುತ್ತಿರುವುದು ಸರಿಯಲ್ಲ. ರಹಾನೆಗೆ ಸೂಕ್ತವೆನ್ನಿಸಿದ ಕ್ರಮಾಂಕದಲ್ಲಿ ಆಡಲು ಬಿಟ್ಟರೆ ಮುಂದಿನ ದಿನಗಳಲ್ಲಿ ಆತ ಖಂಡಿತವಾಗಿಯೂ ಭಾರತ ಟೆಸ್ಟ್ ತಂಡದ ಆಪದ್ಭಾಂಧವನಾಗಲು ಸಾಧ್ಯವಿದೆ.
            ರೋಹಿತ್ ಶರ್ಮಾ ಬಗ್ಗೆ ಹೇಳುವುದಕ್ಕಿಂತ ಹೇಳದೇ ಇರುವುದೇ ಒಳ್ಳೆಯದು. ಕಾಮೆಂಟರಿ ಹೇಳುವವರ ಬಾಯಲ್ಲಿ ರೋಹಿತ್ ಒಬ್ಬ ಪ್ರತಿಭೆಯ ಖನಿ. ಆದರೆ ಐಪಿಎಲ್, ಹಾಗೂ ಟಿ20 ಪಂದ್ಯಗಳಲ್ಲಿ ಮಾತ್ರ ಸದಾ ಫಾರ್ಮಿನಲ್ಲಿರುವ ರೋಹಿತ್  ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ಪಂದ್ಯಗಳಿಗಿಂತ ಆಡದೇ ಇರುವ ಪಂದ್ಯಗಳೇ ಅಧಿಕ. ಟೆಸ್ಟ್ ಪಂದ್ಯಗಳಲ್ಲಂತೂ ಪ್ರಥಮ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಸಾಧನೆ. ಆ ನಂತರದ ಎಲ್ಲ ಪಂದ್ಯಗಳಲ್ಲಿಯೂ ರೋಹಿರ್ ಟುಸ್ ಪಟಾಕಿಯೇ. ಇಂತಹ ಆಟಗಾರರಿಗೆ ಪದೇ ಪದೆ ಅವಕಾಸಕೊಡುವುದಕ್ಕಿಂತ ಕೇದಾರ್ ಜಾಧವ್, ಕರುಣ್ ನಾಯರ್, ಮನೀಶ್ ಪಾಂಡೆ ಅವರಂತಹ ಆಟಗಾರರಿಗೆ ಅವಕಾಶ ಕೊಟ್ಟು ನೋಡುವುದು ಉತ್ತಮ.
       
ಅವಾಂತರಕ್ಕೆಲ್ಲ ಧೋನಿಯೇ ಹೊಣೆಯೇ?
             ಹೀಗೊಂದು ಅನುಮಾನ ಎಲ್ಲರಲ್ಲೂ ಕಾಡಿದರೆ ತಪ್ಪಾಗಲಿಕ್ಕಿಲ್ಲ. ಧೋನಿ ಭಾರತ ತಂಡದ ಕ್ಯಾಪ್ಟನ್ ಆಗುವ ಮೊದಲು ತಂಡಕ್ಕೆ ಖಾಯಂ ಕೀಪರ್ ಇರಲಿಲ್ಲ ಎನ್ನುವುದು ನಿಜ. ಪಾರ್ಟ್ ಟೈಂ ಆಗಿದ್ದ ದ್ರಾವಿಡ್ ಆಗೀಗ ಕೀಪಿಂಗ್ ಕೆಲಸ ಮಾಡುತ್ತಿದ್ದ. ಜೊತೆಗೆ ಅಜಯ್ ರಾತ್ರ, ಪಾರ್ಥಿವ್ ಪಟೇಲ್ ಮುಂತಾದವರು ಅನೇಕ ಪಂದ್ಯಗಳನ್ನು ಆಡಿದ್ದರೂ ರೆಗ್ಯೂಲರ್ ಕೀಪರ್, ಬ್ಯಾಟ್ಸಮನ್ ಆಗಿ ನೆಲೆನಿಂತು ತಂಡದ ಸಾರಥ್ಯವನ್ನೂ ವಹಿಸಿಕೊಂಡಿದ್ದು ಧೋನಿ. ಏಕದಿನ ಹಾಗೂ ಟಿ20ಯಲ್ಲಿ ಧೋನಿಯ ಸಾಧನೆ ಆಕಾಶದೆತ್ತರ. ಆದರೆ ಟೆಸ್ಟ್ ನಲ್ಲಿ ಮಾತ್ರ ಅಷ್ಟಕ್ಕಷ್ಟೆ. ತನ್ನ ಚಾಣಾಕ್ಷತೆಯಿಂದ ಆರಂಭಿಕ ದಿನಗಳಲ್ಲಿ ಉತ್ತಮ ಸಾಧನೆಗೆ ಕಾರಣವಾದ ಧೋನಿ ಕೊನೆ ಕೊನೆಗೆ ತನ್ನ ವಿಫಲ ಪ್ರಯೋಗದಿಂದಾಗಿಯೇ ಇಂದಿನ ಕಳಪೆ ಸಾಧನೆಗೂ ಕಾರಣ ಎಂದರೆ ತಪ್ಪೇನಲ್ಲ ಬಿಡಿ. ತನ್ನ ನಂಬಿಗಸ್ತರು ಎನ್ನುವ ಕಾರಣಕ್ಕೆ ಕೆಲಸಕ್ಕೆ ಬಾರದ ರವೀಂದ್ರ ಜಡೇಜಾ, ಅಶ್ವಿನ್ ಅವರನ್ನು ಪದೇ ಪದೆ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕೊಟ್ಟ. ಟೆಸ್ಟ್ ನಲ್ಲಿ ವಿಫಲ ಎಂಬ ಅಪಖ್ಯಾತಿಯಿದ್ದರೂ ಸುರೇಶ್ ರೈನಾ ತಂಡದಲ್ಲಿ ಸ್ಥಾನ ಪಡೆದ. ಬದಲಾಗಿ ಉತ್ತಮ ಆಟ ಆಡುತ್ತಿದ್ದ ಗೌತಮ್ ಗಂಭೀರ್, ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಅವರನ್ನು ತಂಡದಿಂದ ದೂರವಿಟ್ಟ ಎನ್ನುವ ಆರೋಪವನ್ನೂ ಮುಡಿಗೇರಿಸಿಕೊಂಡಿರುವುದು ಸುಳ್ಳಲ್ಲ. ಇಂತಹ ವಿಫಲ ಪ್ರಯೋಗಗಳಿಂದ ಧೋನಿ ಕೊನೆಗೆ ತಂಡದ ಸಾರಥ್ಯ ಮಾತ್ರವಲ್ಲಿ ತಂಡದಿಂದಲೂ ಹೊರ ಬಿದ್ದ. ಕೆಲವು ಗೆಲುವುಗಳನ್ನು ಕಂಡಿದ್ದರೂ ವಿದೇಶದಲ್ಲಿ ಸತತವಾಗಿ ಸೋಲುಗಳನ್ನು ಅನುಭವಿಸಿದ್ದು ಧೋನಿಗೆ ಮುಳುವಾಯಿತು. ಪ್ರತಿಭೆಯಿದ್ದ ಸಂಜೂ ಸ್ಯಾಮ್ಸನ್, ವೃದ್ಧಿಮಾನ್ ಸಾಹಾ ಅವರಂತಹ ಆಟಗಾರರಿಗೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚುವಿಯಾಗಿ ತಂಡದಲ್ಲಿ ಸೇರಿಸಿಕೊಂಡು ಆರಂಭಿಕರೋ ಅಥವಾ ಇನ್ಯಾವುದೋ ಸ್ಥಾನದಲ್ಲಿ ಆಡಿಸುವ ಮೂಲಕ ಅವರನ್ನು ಬೆಳೆಸಬಹುದಾಗಿದ್ದರೂ ಅವರೆಲ್ಲರನ್ನು ದೂರವಿಟ್ಟ ಎನ್ನುವ ಆರೋಪಗಳು ಎಲ್ಲರ ಬಾಯಲ್ಲಿ ಕೇಳಿಬರುತ್ತಲಿದೆ.

ಮಾಗಬೇಕಿರುವ ಸ್ಪಿನ್ನರುಗಳು :
            ಅನಿಲ್ ಕುಂಬ್ಳೆಯ ನಂತರದ ದಿನಗಳಲ್ಲಿ ಭಾರತದ ಸ್ಪಿನ್ನರುಗಳು ಹೆಸರು ಗಳಿಸಲೇ ಇಲ್ಲ. ಕುಂಬ್ಳೆ ಸಮಕಾಲೀನರಾಗಿ ಖ್ಯಾತಿ ಪಡೆದ ಹರ್ಭಜನ್ ಸಿಂಗ್ ನಂತರದ ದಿನಗಳಲ್ಲಿ ಫಾರ್ಮ್ ಕಳೆದುಕೊಂಡರು. ಅಷ್ಟೇ ಅಲ್ಲ ತಂಡದಿಂದಲೂ ಹೊರಬಿದ್ದಿದ್ದರು. ಇದೀಗ ಮತ್ತೆ ತಂಡಕ್ಕೆ ವಾಪಾಸಾಗಿದ್ದರೂ ಮೊದಲಿನ ಚಾರ್ಮ್ ಉಳಿದಿಲ್ಲ. ಅಶ್ವಿನ್ ಇದ್ದವರ ಪೈಕಿ ಪರವಾಗಿಲ್ಲ. ಆದರೂ ಅಗತ್ಯವಿದ್ದಾಗ ವಿಫಲರಾಗುತ್ತಾರೆ ಎನ್ನುವ ಆರೋಪವಿದೆ. ಮಿಶ್ರಾರಲ್ಲಿ ಪ್ರತಿಭೆಯಿದ್ದರೂ ಅವರನ್ನು ಕಡೆಗಣಿಸಲಾಗಿತ್ತು. ಇದೀಗ ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಓಝಾರಿಗೆ ಇನ್ನೊಂದು ಅವಕಾಶ ನೀಡಬಹುದು. ಆದರೆ ರವೀಂದ್ರ ಜಡೇಜಾ ಅಗತ್ಯವಿಲ್ಲ. ಬದಲಾಗಿ ಶ್ರೇಯಸ್ ಗೋಪಾಲ್, ಅಕ್ಷರ್ ಪಟೇಲ್, ಪರ್ವೇಜ್ ರಸೂಲ್ ರಂತಹ ಸ್ಪಿನ್ನರ್ ಗಳನ್ನು ಬೆಳೆಸಬಹುದಾಗಿದೆ.

ವೇಗದ ಬೌಲರ್ ಗಳಿಗೆ ಅನುಭವದ ಕೊರತೆ :
           ಸದಾಕಾಲ ಗಾಯಗೊಂಡೇ ಇರುವ ಜಾಹೀರ್ ಖಾನ್ ಇನ್ನು ಕ್ರಿಕೆಟ್ ಗೆ ಮರಳಿದಂತೆಯೇ. ಅವರ ನಂತರ ಮುಂದಾಳುವಾಗುವ ನೆಹ್ರಾ ನಿರ್ವಹಣೆ ಕೊರತೆಯಿಂದ ಬಳಲಿದರು. ಇಶಾಂತ್ ಶರ್ಮಾ ಕೆಲವು ಪಂದ್ಯಗಳಲ್ಲಿ ಮಾತ್ರ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ತಮ್ಮ ಉದ್ದದ ಕೂದಲಿಗೆ ಕೊಟ್ಟ ಗಮನವನ್ನು ಬೌಲಿಂಗಿಗೆ ಕೊಟ್ಟಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿದ್ದರು. ವೇಗದ ಬೌಲಿಂಗಿಗೆ ಗಮನ ಕೊಡುವ ವರುಣ್ ಆರನ್ ಹಾಗೂ ಉಮೇಶ್ ಯಾದವ್ ಇನ್ನಷ್ಟು ಮಾಗಿದರೆ ಉತ್ತಮ ಆಟ ಸಾಧ್ಯವಿದೆ.

            ಕ್ರೀಡಾ ಜ್ಯೋತಿ (ಬೇಕನ್) ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾವಣೆಯಾಗುತ್ತಲೇ ಇರಬೇಕು. ಒಬ್ಬನೇ ವ್ಯಕ್ತಿ ಎಷ್ಟು ದೂರ ಅದನ್ನು ಕೊಂಡೊಯ್ಯಲು ಸಾಧ್ಯ? ಆದರೆ ಭಾರತ ಕ್ರಿಕೆಟ್ ತಂಡದಲ್ಲಿ ಬೇಕನ್ ಬದಲಾವಣೆ ಆಗಲೇ ಇಲ್ಲ. ಸೌರವ್ ಗಂಗೂಲಿಯಿಂದ ಆರಂಭಗೊಂಡ ನಿವೃತ್ತಿಯ ಕುಂಬ್ಳೆ, ದ್ರಾವಿಡ್, ಲಕ್ಷ್ಮಣ್, ತೆಂಡೂಲ್ಕರ್ ಮೂಲಕ ವರ್ಷಕ್ಕೊಬ್ಬರಂತೆ ನಿವೃತ್ತಿಯ ಹಾದಿಯನ್ನು ಹಿಡಿದರು. ಈ ಆಟಗಾರರಿಗೆ ಸಮರ್ಥವಾಗಿ ಇನ್ನೊಬ್ಬ ಆಟಗಾರ ಹುಟ್ಟಿಕೊಳ್ಳಲೇ ಇಲ್ಲ. ಅಂತಹ ಆಟಗಾರರನ್ನು ಬೆಳೆಸುವ ಕಾರ್ಯಕ್ಕೆ ಬಿಸಿಸಿಐ ಕೂಡ ಮುಂದಾಗಲಿಲ್ಲ. ಪರಿಣಾಮವಾಗಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ದಶಕದ ಹಿಂದೆ ಭಾರತ ತಂಡದಲ್ಲಿ ಒಂದೆರಡು ಸ್ಥಾನಗಳಲ್ಲಿ ಕೊರತೆಯಿತ್ತು. ಆಗ ಬೇರೆ ಯಾರಾದರೂ ಉತ್ತಮ ಆಟಗಾರನಿಗೆ ಅವಕಾಶ ಕೊಟ್ಟಿದ್ದರೆ ಇಂದಿನ ಇಂತಹ ದುರಂತದ ಸ್ಥಿತಿ ಕೊಂಚ ಕಡಿಮೆಯಾಗುತ್ತಿತ್ತೇನೋ. ಈಗ ತಂಡದಲ್ಲಿ ಇರುವ ಬಹುತೇಕರು 28-30 ವರ್ಷದ ಆಜೂಬಾಜಿನಲ್ಲಿದ್ದಾರೆ. ಒಂದಿಬ್ಬರು 22 ರಿಂದ 26 ವರ್ಷದ ಎಡಬಲದಲ್ಲಿದ್ದಾರೆ. ಹೀಗಿದ್ದಾಗ ತಂಡದಲ್ಲಿ ಕೆಲವು ಪ್ರಯೋಗ ಮಾಡಲೇಬೇಕು. 18 ರಿಂದ 20 ವರ್ಷದೊಳಗಿನ ಯುವ ಆಟಗಾರರಿಗೆ ಅಪರೂಪಕ್ಕಾದರೂ ಅವಕಾಶ ನೀಡಲೇಬೇಕು. ಒಬ್ಬ ಸಂಜೂ ಸ್ಯಾಮ್ಸನ್, ಕರುಣ್ ನಾಯರ್, ಮನೀಶ್ ಪಾಂಡೆ, ಕೇದಾರ ಜಾಧವ್ ಮಂದೀಪ್ ಸಿಂಗ್ ಅವರಂತಹ ಆಟಗಾರರಿಗೆ ಆಗೀಗ ಅವಕಾಶ ಕೊಡುವ ಮೂಲಕ ಅಗತ್ಯ ಬಿದ್ದಾಗ, ಯಾರಾದರೂ ದಿಢೀರ್ ನಿವೃತ್ತಿ ಘೋಷಿಸಿದಾಗ ಅನುಕೂಲಕ್ಕೆ ಬರುತ್ತಾರೆ.
             ಆಷ್ಟ್ರೇಲಿಯಾ ತಂಡವನ್ನು ಗಮನಿಸಿ. ಅಲ್ಲಿ ತಂಡದ ಕ್ಯಾಪ್ಟನ್ ಆಗುತ್ತಾನೆ ಎಂದೇ ಆಟಗಾರನನ್ನು ರೂಪಿಸುತ್ತಾರೆ. ಸ್ಟೀವ್ ವಾ ಇದ್ದಾಗಲೇ ಪಾಂಟಿಂಗ್ ರನ್ನು ಕ್ಯಾಪ್ಟನ್ ರೀತಿ ಬೆಳೆಸಿದರು. ಪಾಂಟಿಂಗ್ ಕಾಲದಲ್ಲಿ ಮೈಕಲ್ ಕ್ಲಾರ್ಕ್ ಅವರನ್ನು ಬೆಳೆಸಿದರು. ಕ್ಲಾರ್ಕ್ ಕಾಲದಲ್ಲೇ ಸ್ಟೀವನ್ ಸ್ಮಿತ್ ಅವರನ್ನು ಬೆಳೆಸಿದ್ದರು. ಇದೀಗ ಕ್ಲಾರ್ಕ್ ನಿವೃತ್ತಿಯಾಗಿದ್ದಾರೆ. ಆದರೆ ಸ್ಟೀವನ್ ಸ್ಮಿತ್, ಕ್ಲಾರ್ಕ್ ಜಾಗವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಅಂತಹ ವಾತಾವರಣ ಭಾರತ ಕ್ರಿಕೆಟ್ ತಂಡದಲ್ಲಿಯೂ ರೂಪುಗೊಳ್ಳಬೇಕಿದೆ. ಹೀಗಾದಾಗ ಮಾತ್ರ ತಂಡದಲ್ಲಿ ಶೂನ್ಯಭಾವ ಕಾಡುವುದನ್ನು ತಡೆಯಬಹುದಾಗಿದೆ. ಅದೇನೇ ಇರಲಿ ಭಾರತ ತಂಡದಲ್ಲಿ ಇರುವವರೆಲ್ಲ ಯುವಕರು. ಅನುಭವವನ್ನು ಇದೀಗತಾನೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂದ್ಯಗಳು ಬೇಕಾಗಬಹುದು. ಆದರೆ ಒಮ್ಮೆ ಅನುಭವ ಪಡೆದು ಲಯಕ್ಕೆ ಮರಳಿದರೆ ಮಾತ್ರ ಉತ್ತಮ ಫಲಿತಾಂಶವನ್ನು ನೀಡಬಲ್ಲರು. ಇನ್ನೊಂದು ದಶಕಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ಉತ್ತಮ ಭವಿಷ್ಯವಿದೆ. ಆದರೆ ಕ್ರಿಕೆಟ್ ಬೇಕನ್ ಅನ್ನು ಸದಾಕಾಲು ಮುಂದುವರಿಯುವಂತೆ ನೋಡಿಕೊಂಡಾಗ ಮಾತ್ರ ಗೆಲುವಿನ ಸರಣಿಯನ್ನೂ ಮುಂದುವರಿಸಬಹುದು. ಇಲ್ಲವಾದಲ್ಲಿ ಸಾಲು ಸಾಲು ಸೋಲು ಸದಾಕಾಲ ಇದ್ದರೂ ಅಚ್ಚರಿ ಪಡಬೇಕಿಲ್ಲ ಬಿಡಿ.            

Wednesday, August 19, 2015

ಹುಡುಕು

ಕಣ್ಣೀರ ಮಳೆಯಲ್ಲಿ
ಮಿಂದೆದ್ದು ಬಂದಾಗ
ಸಿಕ್ಕಿತಲ್ಲ ಮನಕೆ
ಒಂದು ಶಾಂತಿ |

ಬೇಸರದ ಒಡಲಿಂದ
ಜಿಗಿದು ಹೊರ ಬಂದಾಗ
ಮಿಡಿಯಿತಲ್ಲಾ ಮನದಿ
ಸಂತಸದ ತಂತಿ |

ಭಯದ ಕೋಟೆಯನೀಗ
ಸೀಳಿ ಹೊರಬಂದಾಗ
ಮೂಡಿತಲ್ಲಾ ಮನದಿ
ಹೊಸತೊಂದು ಶಕ್ತಿ |

ಕಷ್ಟಗಳ ಸೆಳವಿಂದ
ಈಜಿ ಹೊರಬಂದಾಗ
ದೊರಕಿತಲ್ಲಾ ಜೀವ
ಜೀವಕ್ಕೆ ಮುಕ್ತಿ |

ದುಃಖವು ಕರಗಿದೊಡೆ
ಸಂತಸ ಮೂಡಿದೊಡೆ
ಹುಡುಕಿತಲ್ಲಾ ಮನವು
ಕವನಕ್ಕೆ ಸ್ಪೂರ್ತಿ ||


*****

(ಈ ಕವಿತೆಯನ್ನು ಬರೆದಿರುವುದು 08-12-2005ರಂದು ದಂಟಕಲ್ಲಿನಲ್ಲಿ)

Tuesday, August 18, 2015

ಮಾರ್ಗಸೂಚಿ

               ವಾಯವ್ಯ ಕರ್ನಾಟಕ ರಸ್ತೆ ಸಾರಿ ಸಂಸ್ಥೆ ಜನೋಪಯೋಗಿ ಕಾರ್ಯ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಹಳ್ಳಿಹಳ್ಳಿಗಳಿಗೆ ಸರ್ಕಾರಿ ಸಾರಿಗೆಯನ್ನು ಓಡಿಸುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆನಿಂತಿದೆ. ದೂರದ ಊರುಗಳಿಗೂ ಬಸ್ಸುಗಳನ್ನು ಓಡಿಸುವ ಮೂಲಕ ಜನಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಾಕಷ್ಟು ಬಸ್ ಸೇವೆಗಳನ್ನು ನೀಡುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ ಪ್ರದೇಶಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿಯೂ ಶಿರಸಿಯನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡು ಸಾರಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ದಿನವಹಿ ಸಾವಿರಾರು ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದೆ. ಈಗಾಗಲೂ ನೂರಾರು ಮಾರ್ಗಗಳಲ್ಲಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಇನ್ನೂ ಹಲವಾರು ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸುವ ಅಗತ್ಯವಿದೆ. ಸಾರಿಗೆ ಸಂಸ್ಥೆ ಓಡಿಸಬಹುದಾದ ಕೆಲವೊಂದು ಮಾರ್ಗಗಳನ್ನು ನಾನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಮಾರ್ಗಗಳ ಬಗ್ಗೆ ಶಿರಸಿಯ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಿದ್ದೇನೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ಪಟ್ಟಿ ಮಾಡುತ್ತ ಹೋಗಿದ್ದೇನೆ. ಸುಮ್ಮನೇ ಗಮನಿಸಬಹುದು.

* ಶಿರಸಿ-ಸಿದ್ದಾಪುರ-ಜೋಗ ಜಲಪಾತ
           ಶಿರಸಿಯಿಂದ ಸಿದ್ದಾಪುರ ಮೂಲಕ ವಿಶ್  ವಿಖ್ಯಾತವಾದ ಜೋಗ ಜಲಪಾತಕ್ಕೆ ತೆರಳಲು ಕೇವಲ ಒಂದು ಅಥವಾ ಎರಡು ಬಸ್ಸುಗಳು ಮಾತ್ರ ದಿನಂಪ್ರತಿ ಓಡಾಟ ಮಾಡುತ್ತಿವೆ. ಬದಲಾಗಿ ಪ್ರತಿ ಒಂದೂವರೆ ಗಂಟೆಗೆ ಒಂದು ಬಸ್ಸಿನಂತೆ ಅಥವಾ ಎರಡು ತಾಸಿಗೊಂದರಂತೆ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಸಾಗರ, ಶಿವಮೊಗ್ಗದಿಂದ ಪ್ರತಿ 10 ಅಥವಾ 15 ನಿಮಿಷಕ್ಕೊಂದರಂತೆ ಬಸ್ಸುಗಳು ಜೋಗ ಜಲಪಾತಕ್ಕೆ ಓಡಾಟ ಮಾಡುತ್ತವೆ. ಇದರಲ್ಲಿ ಖಾಸಗಿ ಬಸ್ಸುಗಳದ್ದು ಸಿಂಹಪಾಲು. ನಡು ನಡುವೆ ಸರ್ಕಾರಿ ಬಸ್ಸುಗಳೂ ಓಡಾಟ ಮಾಡುತ್ತಿವೆ. ಈ ಕಾರಣದಿಂದಲೇ ಜೋಗಜಲಪಾತಕ್ಕೆ ಶಿವಮೊಗ್ಗ ಅಥವಾ ಆ ಭಾಗದಿಂದ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿದೆ. ಆದರೆ ಜೋಗಜಲಪಾತದ ಒಂದು ಭಾಗ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಉತ್ತರ ಕನ್ನಡದ ವಿವಿಧ ಪ್ರದೇಶಗಳಿಂದ ಜೋಗಕ್ಕೆ ತರಳಲು ಅದರಲ್ಲೂ ವಿಶೇಷವಾಗಿ ಶಿರಸಿ, ಯಲ್ಲಾಪುರ, ಮುಂಡಗೋಡ ಹಾಗೂ ಪಕ್ಕದ ಹುಬ್ಬಳ್ಳಿ, ಬೆಳಗಾವಿಗಳಿಂದ ಬಂದು ಹೋಗಿ ಮಾಡಲು ನೇರವಾಗಿ ಬಸ್ಸುಗಳೇ ಇಲ್ಲ. ಶಿರಸಿಯಿಂದ ದಿನಕ್ಕೆ ಒಂದೋ ಅಥವಾ ಎರಡೋ ಬಸ್ಸುಗಳು ಮಾತ್ರ ಓಡಾಟ ಮಾಡುತ್ತಿವೆ. ಬಸ್ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ಈ ಭಾಗದ ಪ್ರವಾಸಿಗರು ಖಾಸಗಿ ವಾಹನವನ್ನು ಮಾಡಿಕೊಂಡು ಜೋಗಜಲಪಾತ ವೀಕ್ಷಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಬರುವವರಿಗಂತೂ ನೇರವಾದ ಬಸ್ಸು ಇಲ್ಲವೇ ಇಲ್ಲ. ಶಿರಸಗೆ ಬಂದು ಅಲ್ಲಿಂದ ಸಿದ್ದಾಪುರ ಮೂಲಕ ತಾಳಗುಪ್ಪಕ್ಕೆ ಹೋಗಿ ಅಲ್ಲಿಂದ ಜೋಗಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಬದಲಾಗಿ ಹುಬ್ಬಳ್ಳಿಯಿಂದ ಒಂದೆರಡು ಬಸ್ಸುಗಳನ್ನು ನೇರವಾಗಿ ಜೋಗ ಜಲಪಾತಕ್ಕೆ ಓಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅಲ್ಲದೇ ಸಂಸ್ಥೆಯ ಆದಾಯವೂ ಹೆಚ್ಚಾಗಬಲ್ಲದು. 60 ಕಿ.ಮಿ ಅಂತರದ ಮಾರ್ಗ ಇದಾಗಿದೆ.

* ಬನವಾಸಿ-ಶಿರಸಿ-ಜೋಗಜಲಪಾತ/ ಬನವಾಸಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ
          ಪ್ರವಾಸೋದ್ಯಮದ ಅಭಿವೃದ್ಧಿಯನ್ನೇ ಪ್ರಮುಖ ಅಂಶವನ್ನಾಗಿಟ್ಟುಕೊಂಡು ಈ ಮಾರ್ಗವನ್ನು ಜಾರಿಗೆ ತರಬಹುದು. ಪ್ರವಾಸಿಗರನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಬನವಾಸಿ-ಶಿರಸಿ-ಸಿದ್ದಾಪುರ ಜೋಗಜಲಪಾತ ನಡುವೆ ದಿನವಹಿ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಇದಲ್ಲದೇ ಬನವಾಸಿ-ಹರೀಶಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ ನಡುವೆ ಬಸ್ಸುಗಳನ್ನು ಓಡಿಸಿದರೆ ಜನಸ್ನೇಹಿಯೂ ಆಗುತ್ತದೆ, ಪ್ರವಾಸಿ ತಾಣಗಳಾದ ಬನವಾಸಿ, ಚಂದ್ರಗುತ್ತಿ ಹಾಗೂ ಜೋಗಜಲಪಾತಗಳನ್ನು ಸಂಪರ್ಕಿಸಬಹುದಾಗಿದೆ. ಈ ಮಾರ್ಗದಿಂದ ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಸಿದ್ದಾಪುರ ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ, ಹರೀಶಿ ಭಾಗಗಳ ಜನರಿಗೂ ಅನುಕೂಲವಾಗಲಿದೆ. ಬನವಾಸಿ-ಸಿರಸಿ-ಜೋಗಜಲಪಾತ ಮಾರ್ಗ 82 ಕಿ.ಮಿ ದೂರದ್ದಾಗಿದ್ದರೆ ಬನವಾಸಿ-ಚಂದ್ರಗುತ್ತಿ-ಜೋಗ ಮಾರ್ಗ 75ರಿಂದ 80 ಕಿ.ಮಿ ದೂರದ್ದಾಗಿದೆ.

* ಶಿರಸಿ-ಜೋಗಜಲಪಾತ- ಭಟ್ಕಳ
            ಇದು ಅಪರೂಪದ ಮಾರ್ಗ. ಭಟ್ಕಳ ಸಾರಿಗೆ ಘಟಕ ಹಾಗೂ ಶಿರಸಿ ಸಾರಿಗೆ ಘಟಕಗಳು ಒಟ್ಟಾಗಿ ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಶಿರಸಿ-ಸಿದ್ದಾಪುರ-ಜೋಗಜಲಪಾತ-ಕಾರ್ಗಲ್-ಕೂಗಾರ ಘಟ್ಟ-ನಾಗವಳ್ಳಿ-ಭಟ್ಕಳ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದರಿಂದ ಭಟ್ಕಳ ಭಾಗದ ಜನರು ಜೋಗ ಜಲಪಾತವನ್ನು ವೀಕ್ಷಣೆ ಮಾಡಲು ಅನುಕೂಲವಾಗಲಿದೆ. ಈ ಮಾರ್ಗದಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಜೋಗದಿಂದ ಭಟ್ಕಳ ಮಾರ್ಗದಲ್ಲಿ ಕೆಲವು ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತವೆ. ಅಲ್ಲದೇ ದಿನಕ್ಕೆ ಮೂರೋ ನಾಲ್ಕೋ ಸರ್ಕಾರಿ ಬಸ್ಸುಗಳು ಮಾತ್ರ ಓಡಾಡುತ್ತವೆ. ಈ ಭಾಗದ ಜನರಿಗೆ ಬಸ್ಸುಗಳ ಸೌಕರ್ಯದ ಅನಿವಾರ್ಯತೆಯಿದೆ. ಶಿರಸಿಯಿಂದ ಬೆಳಿಗ್ಗೆ 2 ಬಸ್ಸುಗಳು, ಸಂಜೆ 2 ಬಸ್ಸುಗಳು (ಒಂದೊಂದೊಂದು ಬಸ್ಸು ಓಡಿಸಬಹುದು) ಅದೇ ರೀತಿ ಭಟ್ಕಳದಿಂದಲೂ ತಲಾ ಎರಡೆರಡು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಜೋಗಕ್ಕೆ ತೆರಳುವ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ. ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಸರಿಸುಮಾರು 130 ಕಿಲೋಮೀಟರ್ ಅಂತರ.

* ಕುಮಟಾ-ಸಿದ್ದಾಪುರ-ಸೊರಬ
         ಕುಮಟಾ ಹಾಗೂ ಸೊರಬಗಳ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲು ಈ ಮಾರ್ಗ ಸಹಕಾರಿಯಾಗಲಿದೆ. ಸೊರಬದ ಜನರು ಕುಮಟಕ್ಕೆ ತೆರಳಬೇಕೆಂದರೆ ಶಿರಸಿಗೆ ಬಂದು ಹೋಗಬೇಕಾದ ಅನಿವಾರ್ಯತೆಯಿದೆ. ಅಥವಾ ಸಿದ್ದಾಪುರಕ್ಕೆ ಬಂದು ಹೋಗಬೇಕಾಗುತ್ತದೆ. ಇದರ ಬದಲಾಗಿ ಕುಮಟಾದಿಂದ ಸಿದ್ದಾಪುರ ಮಾರ್ಗವಾಗಿ ಸೊರಬದ ವರೆಗೆ ನೇರವಾಗಿ ಬಸ್ಸುಗಳನ್ನು ಓಡಿಸಿದರೆ ಅನುಕೂಲವಾಗುತ್ತದ. ಸಿದ್ದಾಪುರದಿಂದ ಸೊರಬ ಭಾಗದ ಜನರಿಗೆ ಹೇಗೆ ಈ ಬಸ್ಸು ಸಹಕಾರಿಯೋ ಅದೇ ರೀತಿ ಸಿದ್ದಾಪುರದಿಂದ ಕುಮಟಾಕ್ಕೆ ತೆರಳುವ ಜನಸಾಮಾನ್ಯರಿಗೂ ಇದು ಉಪಯೋಗಕಾರಿ. ಈ ಮಾರ್ಗದ ನಡುವೆ 110 ಕಿ.ಮಿ ಅಂತರವಿದೆ.

* ಶಿರಸಿ-ಸಿದ್ದಾಪುರ-ಜೋಗಜಲಪಾತ-ಹೊನ್ನಾವರ
           ದೂರದ ಲೆಕ್ಖದಲ್ಲಿ ಹೇಳುವುದಾದರೆ ಈ ಮಾರ್ಗ ಸುತ್ತುಬಳಸಿನದ್ದಾಗಿದೆ. ಶಿರಸಿಯಿಂದ ಕುಮಟಾ ಮೂಲಕ ಹೊನ್ನಾವರ ತಲುಪುವುದು ಸುಲಭದ ಮಾರ್ಗ. ಆದರೆ ಸಿದ್ದಾಪುರ ಜೋಗ ಜಲಪಾತದ ಮೂಲಕ ಹೊನ್ನಾವರಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳನ್ನು ಓಡಿಸಿದರೆ ಶಿರಸಿ ಹಾಗೂ ಹೊನ್ನಾವರದ ಪ್ರವಾಸಿಗರಿಗೆ ಜೋಗ ಜಲಪಾತಕ್ಕೆ ತೆರಳುವುದು ಅನುಕೂಲಕರ. ಅಲ್ಲದೇ ಮಾವಿನಗುಂಡಿ, ಬಂಗಾರಮಕ್ಕಿ, ಗೇರುಸೊಪ್ಪಾ ಈ ಮುಂತಾದ ಪ್ರದೇಶಗಳ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ. ಈ ಮಾರ್ಗದ ಮೂಲಕ ಸಾಗಿದರೆ ಎರಡೂ ಸ್ಥಳಗಳ ನಡುವಿನ ಅಂತರ 140ರಿಂದ 150 ಕಿ.ಮಿ ಆಗುತ್ತದೆ.

* ಶಿರಸಿ-ಯಾಣ-ಅಂಕೋಲಾ
         ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಮಾರ್ಗ ಇದಾಗಿದೆ. ಶಿರಸಿ ಹಾಗೂ ಅಂಕೋಲಾ ನಡುವಿನ ಈ ಮಾರ್ಗದ ಅಂತರ 65 ರಿಂದ 70 ಕಿ.ಮಿ. ಮಾರ್ಗ ಮಧ್ಯದಲ್ಲಿ ಲೋಕವಿಖ್ಯಾತಿ  ಗಳಿಸಿರುವ ಯಾಣ ಹಾಗೂ ವಿಭೂತಿ ಜಲಪಾತಗಳನ್ನು ಬೆಸೆಯಬಹುದಾಗಿದೆ. ಅಲ್ಲದೇ ಮತ್ತೀಘಟ್ಟ, ದೇವನಳ್ಳಿ, ಅಚವೆ, ವಡ್ಡಿ ಘಟ್ಟಗಳು ಸಿಗುತ್ತವೆ. ಈ ಎಲ್ಲ ಊರುಗಳಿಗೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಅನುಕೂಲ ಕಲ್ಪಿಸುತ್ತದೆ. ಮತ್ತಿಘಟ್ಟಾ, ದೇವನಳ್ಳಿ ಈ ಮುಂತಾದ ಭಾಗಗಳ ಜನರು ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ತೆರಳಲು ಸಿರಸಿಗೆ ಆಗಮಿಸುವುದೂ ತಪ್ಪುತ್ತದೆ. ಅಲ್ಲದೇ ಸಿರಸಿಯಿಂದ ಕಾರವಾರಕ್ಕೆ ಈಗ ದೇವಿಮನೆ ಘಟ್ಟದ ಮೂಲಕ ಮಾರ್ಗವಿದ್ದು 120 ಕಿ.ಮಿ ಅಂತರವಿದೆ. ಆದರೆ ಯಾಣ ಮೂಲಕ ಬಸ್ ಓಡಿಸಿದರೆ ಕನಿಷ್ಟ 10ರಿಂದ 15 ಕಿಮಿ ಉಳಿತಾಯವಾಗಲಿದೆ. ಮಾರ್ಗಮಧ್ಯದಲ್ಲಿ ವಡ್ಡಿ ಘಟ್ಟ ಸಿಗುತ್ತದೆ. ಈ ಘಟ್ಟದಲ್ಲಿ ರಸ್ತೆಯನ್ನು ಸರಿಪಡಿಸಿಕೊಂಡರೆ ಸಂಚಾರ ಸುಗಮವಾಗುತ್ತದೆ. ಇದೇ ಮಾರ್ಗದಲ್ಲಿಯೇ ಸಂಚಾರ ವಿಸ್ತರಿಸಿ ಸಿರಸಿ-ಯಾಣ-ಗೋಕರ್ಣಕ್ಕೂ ಬಸ್ ಓಡಿಸಬಹುದಾಗಿದೆ. ಶೈವ ಕ್ಷೇತ್ರಗಳಾದ ಯಾಣ ಹಾಗೂ ಗೋಕರ್ಣಗಳನ್ನು ಇದರಿಂದ ಬೆಸೆಯಬಹುದಾಗಿದೆ. ಇದಲ್ಲದೇ ಶಿರಸಿ-ಯಾಣ-ಅಂಕೋಲಾ-ಕಾರವಾರ ನಡುವೆ ಬಸ್ಸುಗಳನ್ನೂ ಓಡಿಸಬಹುದಾಗಿದೆ. ಜನಸಾಮಾನ್ಯರಿಗೆ ಈ ಮಾರ್ಗ ಬಹು ಉಪಯೋಗಿ. ಈ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತ ಹರಿಸಬೇಕಾಗಿದೆ.

* ಶಿರಸಿ-ಧೋರಣಗಿರಿ-ಗುಳ್ಳಾಪುರ-ಅಂಕೋಲಾ
         ಶಿರಸಿ ತಾಲೂಕಿನ ಹುಲೇಕಲ್, ವಾನಳ್ಳಿ, ಜಡ್ಡೀಗದ್ದೆ, ಕಕ್ಕಳ್ಳಿ, ದೋರಣಗಿರಿ, ಅಂಕೋಲಾ ತಾಲೂಕಿನ ಸುಂಕಸಾಳ, ಹೆಗ್ಗಾರ, ವೈದ್ಯಹೆಗ್ಗಾರ, ಗುಳ್ಳಾಪುರ ಈ ಭಾಗದ ಜನಸಾಮಾನ್ಯರಿಗೆ ಅನುಕೂಲವಾಗುವ ಈ ಮಾರ್ಗ ಸಾರಿಗೆ ಇಲಾಖೆಗೆ ಹೇರಳ ಆದಾಯವನ್ನು ತರಬಲ್ಲದು. ಹುಲೇಕಲ್, ವಾನಳ್ಳಿ ಭಾಗದ ಜನಸಾಮಾನ್ಯರು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಲು ಸಿರಸಿಯನ್ನು ಸುತ್ತು ಬಳಸುವುದು ಇದರಿಂದ ತಪ್ಪುತ್ತದೆ. ಶಿರಸಿಯಿಂದ ಗುಳ್ಳಾಪುರಕ್ಕೆ 45 ರಿಂದ 50 ಕಿ.ಮಿ ದೂರವಿದೆ. ಅಲ್ಲಿಂದ ಅಂಕೋಲಾ 50 ಕಿಮಿ ಫಾಸಲೆಯಲ್ಲಿದೆ. 100 ಕಿ.ಮಿ ಅಂತರದ ಮಾರ್ಗ ಇದಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಉತ್ತಮ. ಇದೇ ಮಾರ್ಗದಲ್ಲಿ ಈ ಹಿಂದೆ ಶಿರಸಿ-ದೋರಣಗಿರಿ-ಗುಳ್ಳಾಪುರ-ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ದಿನಕ್ಕೆ ಒಂದು ಬಸ್ ಓಡಾಟ ಮಾಡುತ್ತಿತ್ತು. ಈ ಬಸ್ ಸಂಚಾರವನ್ನು ಪುನಾರಂಭ ಮಾಡಬೇಕಾದ ಅಗತ್ಯವೂ ಇದೆ. ಸೋಂದಾದಿಂದ ಹುಲೇಕಲ್, ವಾನಳ್ಳಿ, ಗುಳ್ಳಾಪುರ, ಯಲ್ಲಾಪುರ, ಶಿರಸಿ ಮೂಲಕ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಸ್ಸೊಂದು ಓಡಾಟ ಮಾಡುತ್ತಿತ್ತು. ಈ ಮಾರ್ಗವನ್ನು ನಂತರದ ದಿನಗಳಲ್ಲಿ ನಿಲ್ಲಿಸಲಾಯಿತು. ಈ ಮಾರ್ಗ ಸರ್ವಋತುವಾಗಿರದ ಕಾರಣ ಸಂಚಾರ ನಿಲ್ಲಿಸಲಾಯಿತು. ಮಾರ್ಗವನ್ನು ಸರ್ವಋತು ಮಾಡುವುದರ ಜೊತೆಗೆ ಇಂತಹ ಬಸ್ ಸಂಚಾರ ಪುನಾರಂಭ ಮಾಡುವುದರಿಂದ ಶಿರಸಿಗರಿಗೆ ಮಾತ್ರವಲ್ಲ, ಕೊಡಸಳ್ಳಿ ಅಣೆಕಟ್ಟೆ ನಿರಾಶ್ರಿತರಿಗೆ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ಕೊಡಸಳ್ಳಿ ಅಣೆಕಟ್ಟೆಯಿಂದ ನಿರಾಶ್ರಿತರಾದ ಜನರು ಶಿರಸಿಗೆ ಬರಬೇಕೆಂದರೆ ಯಲ್ಲಾಪುರವನ್ನು ಸುತ್ತುಬಳಸುವುದು ತಪ್ಪುತ್ತದೆ. ಸರಿಸುಮಾರು 35 ರಿಂದ 40 ಕಿ.ಮಿ ಉಳಿತಾಯವಾಗಲಿದೆ. ಅಲ್ಲದೇ ಇದೇ ಮಾರ್ಗದಲ್ಲಿ ದೋರಣಗಿರಿಯಿಂದ ಹೆಗ್ಗಾರ-ಹಳವಳ್ಳಿ-ಕಮ್ಮಾಣಿ ಬಳಿ ಬಂದು ಹಿಲ್ಲೂರಿನ ಮೂಲಕ ಅಂಕೋಲಾಕ್ಕೆ ಸಂಪರ್ಕವನ್ನೂ ಕಲ್ಪಿಸಿದರೆ ಈ ಎಲ್ಲ ಭಾಗಗಳ ಜನಸಾಮಾನ್ಯರಿಗೆ ಬಹು ಅನುಕೂಲವಾಗಲಿದೆ.

* ಸಿದ್ದಾಪುರ-ನಿಲ್ಕುಂದ-ಕುಮಟಾ
         ಸಿದ್ದಾಪುರ ಮೂಲಕ ನಿಲ್ಕುಂದ ಹಾಗೂ ಬಂಡಲದ ಮೂಲಕ ಕುಮಟಾಕ್ಕೆ ಬಸ್ ಸಂಚಾರವನ್ನು ಆರಂಭಿಸಿದರೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ. ಸಿದ್ದಾಪುರದಿಂದ ಈ ಮಾರ್ಗದಲ್ಲಿ 70ರಿಂದ 80 ಕಿಮಿ ಅಂತರದಲ್ಲಿ ಕುಮಟಾ ಸಿಗುತ್ತದೆ. ಮಾರ್ಗ ಮದ್ಯದಲ್ಲಿ ಕೋಲಸಿರ್ಸಿ, ಬಿದ್ರಕಾನ್, ಹೆಗ್ಗರಣಿ, ಹಾರ್ಸಿಕಟ್ಟಾ, ನಿಲ್ಕುಂದ, ಕಂಚೀಕೈ, ಬಂಡಲ, ಮಾಸ್ತಿಹಳ್ಳ ಈ ಮಾರ್ಗದ ಜನರಿಗೆ ಅನುಕೂಲವಾಗುತ್ತದೆ. ಇಲಾಖೆ ಸಿದ್ದಾಪುರ-ನಿಲ್ಕುಂದ-ಬಂಡಲ-ಕುಮಟಾ-ದೊಡ್ಮನೆ-ಸಿದ್ದಾಪುರದ ಮೂಲಕ ಬಸ್ ಓಡಿಸಿದರೆ ಬಸ್ ರೌಂಡ್ ಸಿಕ್ಕಂತಾಗುತ್ತದೆ. ದಿನಕ್ಕೆರಡು ಸಾರಿ ಬಸ್ ಓಡಿಸುವುದು ಅನುಕೂಲಕರ.

* ಯಲ್ಲಾಪುರ-ಸೋಂದಾ-ಹುಲೇಕಲ್- ಶಿರಸಿ
          ಈ ಮಾರ್ಗದ ಮೂಲಕ 10-15 ಕಿಮಿ ಸುತ್ತು ಬಳಸಿದರೂ ಜನಸಾಮಾನ್ಯರಿಗೆ ಅನುಕೂಲಕರ ಹಾಗೂ ಇಲಾಖೆಗೆ ಆದಾಯ ತರುವಾ ಮಾರ್ಗ ಇದಾಗಿದೆ. ಯಲ್ಲಾಪುರದಲ್ಲಿ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ನೇರವಾಗಿ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ. ಅಲ್ಲದೇ ಮಾರ್ಗಮಧ್ಯದ ವಾದೀರಾಜಮಠ ಹಾಗೂ ಸ್ವಾದಿ ಜೈನಮಠಗಳಿಗೂ ಜನಸಾಮಾನ್ಯರು ಹೋಗಿ ಬರಬಹುದಾಗಿದೆ. ಸಾಗರ ಹಾಗೂ ಸಿರಸಿ ನಡುವೆ ಪ್ರತಿ ದಿನ ಮುಂಜಾನೆ ಬಸ್ಸೊಂದಿದೆ. ಪೋಸ್ಟಲ್ ಕಾರ್ಯಕ್ಕೆ ಬಳಕೆಯಾಗುವ ಈ ಬಸ್ ಸಾಗರದಿಂ 7 ಗಂಟೆಗೆ ಹೊರಟು ತಾಳಗುಪ್ಪ, ಕಾರ್ಗಲ್, ಜೋಗ, ಮಾವಿನಗುಂಡಿ, ಸಿದ್ದಾಪುರ, ಕೋಲಸಿರ್ಸಿ, ಹಾರ್ಸಿಕಟ್ಟಾ, 16ನೇ ಮೈಲಕಲ್ ಮೂಲಕ ಸಿರಸಿಗೆ ಬರುತ್ತದೆ. ಈ ಮಾರ್ಗ ಬಹು ದೀರ್ಘವಾದುದುದಾದರೂ ಜನಸಾಮಾನ್ಯರಿಗೆ ಬಹು ಉಪಯೋಗಿಯಾಗಿದೆ. ಕಾಲೇಜು, ಶಾಲೆಗಳ ವಿದ್ಯಾರ್ಥಿಗಳಿಗಂತೂ ಈ ಬಸ್ಸು ಬಹು ಅನುಕೂಲ ಕಲ್ಪಿಸಿದೆ. ಅದೇ ರೀತಿ ಯಲ್ಲಾಪುರ-ಸೋಂದಾ-ಶಿರಸಿ ಬಸ್ ಓಡಿಸಿದರೆ ಅನುಕೂಲವಾಗುತ್ತದೆ.

* ಶಿರಸಿ-ಜೋಗಜಲಪಾತ-ಕೂಗಾರ-ನಾಗೋಡಿ-ಕೊಲ್ಲೂರು
           ಶಿರಸಿಯಿಂದ ಕೊಲ್ಲೂರಿಗೆ ಬಸ್ ಸಂಚಾರವೇ ಇಲ್ಲ. ದಶಕಗಳ ಹಿಂದೆ ಕೊಲ್ಲೂರಿಗೆ ಶಿರಸಿಯಿಂದ ಬಸ್ ಓಡಾಟ ಮಾಡುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಈ ಬಸ್ ಸಂಚಾರ ನಿಲ್ಲಿಸಲಾಯಿತು. ಆದರೆ ಶಿರಸಿಯಿಂದ ಜೋಗ ಜಲಪಾತ, ಕೂಗಾರ, ನಾಗೋಡಿ  ಮೂಲಕ ಕೊಲ್ಲೂರಿಗೆ ಬಸ್ ಸಂಚಾರ ಆರಂಭಿಸಿದರೆ ಕೊಲ್ಲೂರಿಗೆ ಶಿರಸಿ, ಸಿದ್ದಾಪುರ ಭಾಗದ ಜನಸಾಮಾನ್ಯರು ಕೊಲ್ಲೂರು ಮೂಕಾಂಬಿಕೆ ದರ್ಶನವನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ. 150 ರಿಂದ 160 ಕಿಮಿ ದೂರದ ಈ ಮಾರ್ಗದಿಂದ ಹೇರಳ ಆದಾಯ ಸಾಧ್ಯವಿದೆ. ಜೋಗಜಲಪಾತಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಜೋಗದಿಂದ ಬಸ್ ಸಂಚಾರ ಕಡಿಮೆಯಿರುವ ಕೂಗಾರ, ಮಾಗೋಡ, ನಾಗೋಡಿಗಳಿಗೆ ಹಾಗೂ ಈ ಮಾರ್ಗ ಮಧ್ಯದ ಜನಸಾಮಾನ್ಯರಿಗಂತೂ ಈ ಬಸ್ ಸಂಚಾರದಿಂದ ಬಹಳ ಉಪಕಾರಿಯಾಗುತ್ತದೆ. ಈ ಮಾರ್ಗ ಸ್ವಲ್ಪ ಸುತ್ತು ಬಳಸಿನ ದಾರಿಯೂ ಹೌದು. ನಾಗೋಡಿಯ ಬಳಿಯಲ್ಲಿ ಕೊಡಚಾದ್ರಿಯೂ ಇರುವುದರಿಂದ ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೂ ಈ ಮಾರ್ಗ ಉಪಕಾರಿ. ಈ ಮಾರ್ಗವಲ್ಲದೇ ಕೊಲ್ಲೂರಿಗೆ ಸಾಗರ-ಸಿಗಂದೂರು ಮೂಲಕವೂ ಬಸ್ ಸಂಚಾರವನ್ನೂ ಕೈಗೊಳ್ಳಬಹುದಾಗಿದೆ. ಈ ಮಾರ್ಗವೂ ಆದಾಯವನ್ನು ತರಬಲ್ಲದಾಗಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತದೆ. ಸಾಗರದ ಸಾರಿಗೆ ಘಟಕದ ಸಹಯೋಗವಿದ್ದರೆ ಈ ಮಾರ್ಗದಲ್ಲಿ ಬಸ್ ಓಡಿಸುವುದು ಸುಲಭ. ದಿನಕ್ಕೆ ಒಂದು ಅಥವಾ ಎರಡು ಬಸ್ಸುಗಳನ್ನು ಓಡಿಸುವುದು ಅನುಕೂಲಕರ.

*ಶಿರಸಿ-ಸಾಗರ-ಹೊಸನಗರ-ರಾಮಚಂದ್ರಾಪುರಮಠ
           ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಬಸ್ ಸಂಚಾರ ಉಪಕಾರಿ. ಈಗಿನ ಪರಿಸ್ಥಿತಿಯಲ್ಲಿ ಶಿರಸಿ, ಸಿದ್ದಾಪುರ ಪ್ರದೇಶದ ಜನರು (ವಿಶೇಷವಾಗಿ ಹವ್ಯಕರು) ರಾಮಚಂದ್ರಾಪುರ ಮಠಕ್ಕೆ ತೆರಳಬೇಕೆಂದರೆ ನೇರವಾಗಿ ಬಸ್ ಸೌಕರ್ಯವಿಲ್ಲ. ಸಾಗರ, ಹೊಸನಗರಗಳಲ್ಲಿ ಬಸ್ ಬದಲಾಯಿಸುವ ಅನಿವಾರ್ಯತೆಯಿದೆ. ಬದಲಾಗಿ ಶಿರಸಿಯಿಂದ ನೇರವಾಗಿ ಬಸ್ ಸೌಕರ್ಯ ಒದಗಿಸಿದರೆ ಅನುಕೂಲವಾಗಬಲ್ಲದು. ದಿನಕ್ಕೊಂದು ಅಥವಾ ಎರಡು ಬಸ್ ಓಡಿಸುವುದು ಉತ್ತಮ. ಮುಂದಿನ ದಿನಗಳಲ್ಲಿ ಸ್ವರ್ಣವಲ್ಲಿ ಮಠದಿಂದ ರಾಮಚಂದ್ರಾಪುರ ಮಠದ ನಡುವೆ ಬಸ್ ಸಂಚಾರವನ್ನೂ ಒದಗಿಸಬಹುದಾಗಿದೆ. ಆದಾಯದ ದೃಷ್ಟಿಯಿಂದ ಈ ಬಸ್ ಸಂಚಾರ ಬಹು ಉತ್ತಮ. ಸಿರಸಿಯಿಂದ ಅಜಮಾಸು 140 ರಿಂದ 160 ಕಿಮಿ ಅಂತರದಲ್ಲಿ  ರಾಮಚಂದ್ರಾಪುರ ಮಠವಿದೆ. ಸಾರಿಗೆ ಇಲಾಖೆ ತ್ವರಿತವಾಗಿ ಈ ಬಸ್ ಸಂಚಾರ ಕೈಗೊಳ್ಳುವ ಬಗ್ಗೆ ಚಿತ್ತ ಹರಿಬಹುದಾಗಿದೆ. ಜೊತೆಯಲ್ಲಿ ಸಿರಸಿಯಿಂದ ತೀರ್ಥಹಳ್ಳಿ ಮೂಲಕ ಶೃಂಗೇರಿಗೆ ದಿನಕ್ಕೊಂದು ಬಸ್ ಓಡಿಸಬಹುದು. ರಾತ್ರಿ ಬಸ್ ಆದರೆ ಉತ್ತಮ. ಸಂಜೆ ಹೊರಟು ಬೆಳಗಿನ ಜಾವ ಶೃಂಗೇರಿ ತಲುಪುವಂತಹ ಮಾರ್ಗ ಇದಾಗಿದೆ.

          ಜೊತೆಯಲ್ಲಿ ಹುಬ್ಬಳ್ಳಿ-ಮುಂಡಗೋಡ-ಬನವಾಸಿ (ಚಂದ್ರಗುತ್ತಿಗೆ ವಿಸ್ತರಣೆ ಮಾಡಬಹುದು),  ಮುಂಡಗೋಡ-ಬನವಾಸಿ( ಪ್ರತಿ 1 ಅಥವಾ 2 ತಾಸಿಗೊಮ್ಮೆ), ಯಲ್ಲಾಪುರ-ಮುಂಡಗೋಡ-ಬನವಾಸಿ, ಮುಂಡಗೋಡ-ಬನವಾಸಿ-ಸೊರಬ, ಶಿರಸಿ-ಕ್ಯಾಸಲ್ ರಾಕ್ (ದಿನಕ್ಕೆ 1 ಅಥವಾ 2 ಬಸ್, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್), ಯಲ್ಲಾಪುರದಿಂದ ಕ್ಯಾಸಲ್ ರಾಕ್ ಈ ಮಾರ್ಗದಲ್ಲಿ ಬಸ್ ಓಡಿಸಬಹುದಾಗಿದೆ. ತನ್ಮೂಲಕ ಸಾರಿಗೆ ಇಲಾಖೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಜೊತೆಯಲ್ಲಿ ಹೇರಳ ಆದಾಯವನ್ನು ಗಳಿಸಿಕೊಳ್ಳಬಹುದಾಗಿದೆ.

             ಇವಿಷ್ಟು ನನ್ನ ಗಮನಕ್ಕೆ ಬಂದ ಮಾರ್ಗಸೂಚಿಯಾಗಿದೆ. ಇದು ಶಿರಸಿ ಹಾಗೂ ಸಿದ್ದಾಪುರವನ್ನು ಗಮನದಲ್ಲಿ ಇರಿಸಿಕೊಂಡು ಆಲೋಚಿಸಿದ ಮಾರ್ಗಗಳು. ಮುಂದಿನ ದಿನಗಳಲ್ಲಿ ಯಲ್ಲಾಪುರ, ದಾಂಡೇಲಿ, ಹಳಿಯಾಳ, ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಹಾಗೂ ಹೊನ್ನಾವರಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾರ್ಗಸೂಚಿ ನೀಡುವ ಕೆಲಸವನ್ನು ಮಾಡುತ್ತೇನೆ. ಸಾರಿಗೆ ಇಲಾಖೆಯ ಗಮನಕ್ಕೆ ಈ ಮಾರ್ಗಗಳ ಬಗ್ಗೆ ತಿಳಿಸಲಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುತ್ತಾರೆ ಎನ್ನುವ ಆಶಾಭಾವ ನಮ್ಮದಾಗಿದೆ.  
           


Thursday, August 13, 2015

ಒಲವಿನ ಗೆಳೆಯ

ಗೆಳೆಯ ನಿನ್ನೆಯ ಬೆಡಗು ಬೆರಗು
ನನ್ನ ಮನದಲಿ ಕುಣಿದಿದೆ
ಆಸೆ ಬಣ್ಣದಿ ಪ್ರೇಮ ಕುಂಚವು
ಹೊಸತು ಚಿತ್ರವ ಬಿಡಿಸಿದೆ ||

ನಿನ್ನ ಎದೆಗೆ ಒರಗಿ ನಿಂತು
ಹೃದಯ ಬಡಿತ ಕೇಳಲೇ
ಕೈಯ ಒಳಗೆ ಕೈಯ ಇಟ್ಟು
ನಾಡಿ ಮಿಡಿತವ ಅರಿಯಲೇ ||

ನಾನು ನೀನು ಮನಸ ಕೊಟ್ಟು
ಜನುಮ ಜನುಮವೆ ಕಳೆದಿದೆ
ಕಾಲ ಕಾಲಕೆ ಪ್ರೀತಿ ಮಳೆಯು
ಧಮನಿ ಧಮನಿಯ ತೊಯ್ದಿದೆ ||

ನಿನ್ನ ಹಾದಿಯ ನಡುವೆ ನಾನು
ಹೆಜ್ಜೆ ಹೆಜ್ಜೆಗೂ ಇಣುಕಲೇ
ಕೈಯ ಹಿಡಿದು ಮನಸು ಮಿಡಿದು
ಬದುಕಿನುದ್ದಕೂ ಸಾಗಲೇ ||

*****

(ಈ ಕವಿತೆಯನ್ನು ಬರೆದಿರುವುದು 13-08-2015ರಂದು ಶಿರಸಿಯಲ್ಲಿ)


Tuesday, August 11, 2015

ಅಘನಾಶಿನಿ ಕಣಿವೆಯಲ್ಲಿ-25

              ಪೊಲೀಸರು ಹಾಗೂ ಫಾರೆಸ್ಟ್ ಅಧಿಕಾರಿಗಳಿಗೆ ಅದ್ಹೇಗೆ ತಿಳಿದಿತ್ತೋ? ಕಾಡಿನೊಳಕ್ಕೆ ಬಂದಿದ್ದ ಅವರು ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಲು ಆರಂಭಿಸಿದ್ದರು. ಪ್ರದೀಪ ಹಾಗೂ ತಂಡವನ್ನು ಕಂಡೊಡನೆಯೇ ಪರಿಶೀಲಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ `ಓಹೋ.. ನೀವೇನೋ ಪ್ರದೀಪ್.. ಬನ್ನಿ.. ನಿಮ್ಮನ್ನ ವಿಚಾರಣೆ ಮಾಡಬೇಕಿದೆ..' ಎಂದು ಕರೆದೊಯ್ದ. ಗಂಟೆಗಟ್ಟಲೆ ಕಾಲ ಮಾತುಕತೆ ನಡೆಯಿತು. ಅದೇನು ಮಾತನಾಡಿಕೊಂಡರೋ ಗೊತ್ತಾಗಲಿಲ್ಲ. ಪ್ರದೀಪ ಏನೋ ಹೇಳುತ್ತಿದ್ದ, ಅಧಿಕಾರಿ ಇನ್ನೇನನ್ನೋ ಬರೆದುಕೊಳ್ಳುತ್ತಿದ್ದ. ನಡು ನಡುವೆ ಪೊಲೀಸ್ ಅಧಿಕಾರಿ ಬೆವರು ಒರೆಸಿಕೊಳ್ಳುತ್ತಿದ್ದುದೂ ತಿಳಿಯಿತು. ವಿಷ್ಣು ಮೊದಲಿನಿಂದಲೂ ಪ್ರದೀಪನ ಮೇಲೆ ಕಣ್ಣಿಟ್ಟಿದ್ದ. ಪ್ರದೀಪ ಸಾಮಾನ್ಯದವನೇನಲ್ಲ. ಈತ ತಮಗೆಲ್ಲರಿಗೂ ಏನನ್ನೋ ಮುಚ್ಚಿಟ್ಟಿದ್ದಾನೆ ಎನ್ನುವುದು ವಿಷ್ಣುವಿಗೆ ಖಾತರಿಯಾಗಿತ್ತು. ಇದೀಗ ಪ್ರದೀಪ ಪೊಲೀಸ್ ಅಧಿಕಾರಿಯ ಬಳಿ ಮಾತನಾಡುತ್ತಿರುವುದನ್ನು ನೋಡಿದಾಗ ವಿಷಯ ಪಕ್ಕಾ ಆಯಿತು.
             ಪ್ರದೀಪ ಪೊಲೀಸ್ ಅಧಿಕಾರಿಗೆ ಏನು ಏಳಿದನೋ ಗೊತ್ತಾಗಲಿಲ್ಲ. ಪ್ರದೀಪನ ಅಣತಿಯಂತೆ ಚಕಚಕನೆ ಕಾರ್ಯಗಳು ನಡೆಯುತ್ತಿದ್ದವು. ವಿನಾಯಕ ಸ್ವಲ್ಪ ದೂರದಲ್ಲಿದ್ದ ದಡೆಯ ಬಳಿ ಹೋಗಿ, ಫಾರೆಸ್ಟ್ ಅಧಿಕಾರಿಗೆ ಎಲ್ಲವನ್ನೂ ತೋರಿಸಿದ್ದ. ಫಾರೆಸ್ಟ್ ಅಧಿಕಾರಿ ಕೊಯ್ಯಲಾಗಿದ್ದ ಎಲ್ಲಾ ಮರಗಳನ್ನೂ, ತುಂಡುಗಳನ್ನೂ ಲೆಕ್ಕಹಾಕಿ, ಯಾವ ಜಾತಿಯ ಮರ, ಎಷ್ಟು ತುಂಡುಗಳಿವೆ ಎನ್ನುವುದನ್ನೆಲ್ಲ ತನ್ನ ಲೆಕ್ಖದ ಪಟ್ಟಿಯಲ್ಲಿ ಬರೆದಿಟ್ಟುಕೊಂಡು ಮಹಜರು ನಮೂದಿಸಿಕೊಳ್ಳುತ್ತಿದ್ದ. ಸಾಕಷ್ಟು ಬೆಲೆ ಬಾಳುವ ಮರಗಳನ್ನೇ ಕಡಿದು ಅವುಗಳಿಂದ ವಿವಿಧ ಗಾತ್ರದ ನಾಟಾಗಳನ್ನು ತಯಾರಿಸಲಾಗುತ್ತಿತ್ತು. ದೊಡ್ಡ ದೊಡ್ಡ ತೊಲೆಗಳು, ತುಂಡುಗಳನ್ನು ಅಚ್ಚುಕಟ್ಟಾಗಿ ತಯಾರು ಮಾಡಿ ಪೇರಿಸಿ ಇಡಲಾಗಿತ್ತು. ಅಲ್ಲಿ ಪೇರಿಸಿ ಇಡಲಾಗಿದ್ದ ಮರದ ತುಂಡುಗಳನ್ನು ಗಮನಿಸಿದರೆ ಅಜಮಾಸು ಒಂದು ವಾರಕ್ಕೂ ಅಧಿಕ ಕಾಲದಿಂದ ಮರಕ್ಕೆ ಕೊಡಲಿ ಹಾಕುವ ಕಾರ್ಯ ನಿರಂತರವಾಗಿ ಸಾಗಿರುವುದು ಸ್ಪಷ್ಟವಾಗುತ್ತಿತ್ತು.
            ಫಾರೆಸ್ಟ್ ಆಫೀಸರ್ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿದ್ದರು. ಫಾರೆಸ್ಟ್ ಆಫೀಸರ್ ತನ್ನ ವ್ಯಾಪ್ತಿಯಲ್ಲಿ ಇಷ್ಟು ರಾಜಾರೋಷವಾಗಿ ಮರಗಳ್ಳತನ ನಡೆಯುತ್ತಿದ್ದರೂ ಸುಮ್ಮನಿದ್ದಾನೆ ಎಂದು ಹಿರಿಯ ಅಧಿಕಾರಿಗಳಿಂದ ಆಗಲೇ ಮೂರ್ನಾಲ್ಕು ಸಾರಿ ಬೈಗುಳಗಳನ್ನು ಎದುರಿಸಿಯಾಗಿತ್ತು. ಆತ ಚಡಪಡಿಸುತ್ತಿದ್ದ. ಮನಸ್ಸಿನಲ್ಲಿಯೇ ಹಿಡಿಶಾಪವನ್ನು ಹಾಕುತ್ತಿದ್ದ.
           ಪೊಲೀಸರಿಗೆ ಮಾತ್ರ ಪ್ರದೀಪನಿಂದ ಹೊಡೆತ ತಿಂದು ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಹೇಗೆ ಪತ್ತೆ ಹಚ್ಚುವುದಪ್ಪಾ ದೇವರೆ ಎನ್ನುವ ಚಿಂತೆ ಕಾಡುತ್ತಿತ್ತು. ಕೂಡಲೇ ಸುತ್ತಮುತ್ತಲ ಊರುಗಳಿಗೆ ಪೊಲೀಸರನ್ನು ಕಳುಹಿಸಿ ಯಾರಾದರೂ ಅಕಾಲಿಕವಾಗಿ ಮರಣ ಹೊಂದಿದ್ದಾರೆಯೋ ಹೇಗೆ ಎನ್ನುವುದನ್ನು ತಿಳಿದುಕೊಂಡು ಬರುವಂತೆ ಹೇಳಲಾಯಿತು. ದಂಟಕಲ್ಲಿನಿಂದ ಸುತ್ತಮುತ್ತ ಇದ್ದ ಎಲ್ಲ ಊರುಗಳಿಗೂ ತಲಾ ಒಬ್ಬರಂತೆ ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ತೆರಳಿದರು. ಪ್ರದೀಪ ಈ ಎಲ್ಲ ಕಾರ್ಯಗಳೂ ನಡೆದ ನಂತರ ನಿರಾಳನಾದಂತೆ ಅನ್ನಿಸಿತು. ವಿಕ್ರಮ ಹಾಗೂ ವಿನಾಯಕ ಪ್ರದೀಪನ ಕಾರ್ಯವೈಖರಿಯ ಕುರಿತು ಅನುಮಾನ ಬಂದು ಕೇಳಿದಾಗ `ಮಂತ್ರಿಗಳ ಹೆಸರನ್ನು ಹೇಳಿ ಕೆಲಸ ಮಾಡಿಸಿದೆ ನೋಡಿ..' ಎಂದು ಮೊದಲೇ ಹೇಳಿದ್ದ ಮಾತನ್ನು ಪುನರುಚ್ಚಾರ ಮಾಡಿದ. ಆದರೆ ಈ ಸಾರಿ ಪ್ರದೀಪನ ಮಾತನ್ನು ಯಾರೂ ನಂಬಲು ತಯಾರಿರಲಿಲ್ಲ.

*****

                `ಏನ್ರೀ.. ಏನ್ ಯಡವಟ್ಟು ಮಾಡಿಕೊಂಡಿರಿ? ಇದೆಲ್ಲಾ ಹೇಗಾಯ್ತು. ಯಾವಾಗಲೂ ನಾವು ಕೈ ಹಾಕಿದ ಕೆಲಸದಲ್ಲಿ ಸೋಲು ಬಂದಿರಲಿಲ್ಲ. ಆದರೆ ಈ ದಿನ ನೀವೆಲ್ಲ ಸೋತು ಬಂದಿದ್ದೀರಿ ಎಂದರೆ ಏನು? ನಮ್ಮ ತಂಡದ ಒಬ್ಬ ವ್ಯಕ್ತಿ ಸಾಯೋದು ಅಂದರೇನು? ಮಾನ ಮರ್ಯಾದೆ ಇಲ್ಲವಾ ನಿಮಗೆ.. ಏನಿದೆಲ್ಲಾ..' ಎಂದು ಆ ನಾಯಕ ಗದರುತ್ತಿದ್ದರೆ ಆತನ ಮುಂದೆ ನಿಂತಿದ್ದ ನಾಲ್ಕಕ್ಕೂ ಹೆಚ್ಚಿನ ಜನ ತಲೆ ತಗ್ಗಿಸಿ ಮಾತು ಕೇಳುತ್ತಿದ್ದರು. ತಪ್ಪಾಗಿದ್ದಂತೂ ನಿಜ. ಮರಗಳ್ಳತನ ಮಾಡುವಾಗ ಯಾರೋ ಒಂದಷ್ಟು ಜನರು ಪೋಟೋ ಹೊಡೆದುಕೊಳ್ಳತೊಡಗಿದ್ದರು. ಅವರ ಮೇಲೆ ದಾಳಿ ಮಾಡಿದರೆ ಪ್ರತಿ ದಾಳಿ ಕೂಡ ನಡೆಯಿತು. ಅದರಲ್ಲಿ ಒಬ್ಬಾತ ಅಸುನೀಗಿದ್ದ. ಅಷ್ಟೇ ಅಲ್ಲದೇ ಇನ್ನೊಬ್ಬನ ಮೇಲೆ ನಾಯಿ ದಾಳಿ ಮಾಡಿ ಕಾಲಿಗೆ ಗಾಯ ಮಾಡಿತ್ತು. ಆ ಭಾಗದ ಕಾಳದಂಧೆಯಲ್ಲಿ ಒಮ್ಮೆಯೂ ಇಂತಹ ಸೋಲು ಕಾಳದಂದೆ ಮಾಡುವವರಿಗೆ ಎದುರಾಗಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಅಂತಹ ಸೋಲು ಎದುರಾಗಿತ್ತು. ನಾಯಕ ಚಡಪಡಿಸಿದ್ದ.
               ಇಷ್ಟು ದಿನ ಹೆದರಿಕೊಂಡಂತಿದ್ದ ಜನರ ನಡುವೆ ಇಂದು ಯಾರೋ ಒಂದಿಷ್ಟು ಜನ ಬಂದು ತಿರುಗಿ ನಿಂತರು, ಪ್ರತಿದಾಳಿ ನಡೆಸಿದರು ಎನ್ನುವುದು ಸಿಟ್ಟಿಗೂ ಕಾರಣವಾಗಿತ್ತು. ಭಯವನ್ನು ಹುಟ್ಟಿಸುವ ಮೂಲಕ ಆ ಭಾಗದಲ್ಲಿ ಮರಗಳ್ಳರು ಹಾಗೂ ಸೂರ್ಯ ಶಿಖಾರಿ ತಂಡ ಪ್ರಖ್ಯಾತಿ ಗಳಿಸಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರತಿದಾಳಿ ನಡೆದು ಭಯವೇ ಹೋದಂತಹ ಅನುಭವ. ಕೂಡಲೇ ಇದನ್ನು ತಡೆಯಬೇಕು ಎಂದುಕೊಂಡ ಗುಂಪಿನ ನಾಯಕ.
              `ಯಾರು ನಿಮ್ಮ ಮೇಲೆ ದಾಳಿ ಮಾಡಿದ್ದು?' ಸಿಟ್ಟಿನಿಂದ ಕೂಗಿದ್ದ ನಾಯಕ
              `ಗೊತ್ತಿಲ್ಲ. ನಾಲ್ಕೋ ಐದೋ ಜನ ಇದ್ದರು. ಒಬ್ಬಳು ಹುಡುಗಿ ಇದ್ದಳು..'
              `ಹುಡುಗಿ ಇದ್ದಳಾ? ಯಾರು ಅವರು ಪತ್ತೆ ಮಾಡಿ..'
              `ಗೊತ್ತಾಗಲಿಲ್ಲ.. ನಮ್ಮ ಕಡೆಯವರಲ್ಲ ಅವರು.. ಯಾರೋ ಹೊಸಬರು. ಜೊತೆಗೆ ನಾಯಿ ಇತ್ತು. ನಮ್ಮ ಮೇಲೆ ಮರುದಾಳಿ ಮಾಡಿದವನು ಸಾಮಾನ್ಯ ವ್ಯಕ್ತಿಯಲ್ಲ. ಹೊಡೆದ ಒಂದೇ ಹೊಡೆತಕ್ಕೆ ನಮ್ಮವ ಸತ್ತು ಹೋದ. ಅಷ್ಟೇ ಅಲ್ಲ ಆತನ ಹಿಂದೆ ಬರುತ್ತಿದ್ದ ನಮ್ಮನ್ನೂ ಬೆನ್ನಟ್ಟಿ ಬಂದ. ನಾವು ವಾಪಾಸು ಓಡಿ ಬಂದೆವು..'
             `ನಾಚಿಕೆ ಆಗೋದಿಲ್ಲವಾ ನಿಮಗೆ.. ಸೋತು ಬಂದಿದ್ದೀರಿ ಅಂತ ಹೇಳೋಕೆ. ಇಷ್ಟೆಲ್ಲ ಜನ ಇದ್ದೀರಿ ನೀವು. ನಿಮಗೆ ಬೇಕಾದ ಆಯುಧ ಕೂಡ ಕೊಟ್ಟಿದ್ದೆ. ಸರಿಯಾಗಿ ಇಕ್ಕಬೇಕಿತ್ತು ಅವನಿಗೆ.'
             `ಆಗಲಿಲ್ಲ ಬಾಸ್.. ಅದೇ ವೇಳೆ ನಾಯಿ ಕೂಡ ದಾಳಿ ಮಾಡಿತಲ್ಲ.. ನನಗೆ ಕಾಲು ಊರಲು ಆಗುತ್ತಿಲ್ಲ.. ನಾನೇ ಎಲ್ಲರನ್ನೂ ಹೇಗೋ ವಾಪಾಸು ಕರೆತಂದೆ. ಆಮೇಲೆ ಬಹಳ ಹೊತ್ತಿನ ನಂತರ ಸತ್ತು ಹೋಗಿದ್ದ ನಮ್ಮವನ ದೇಹವನ್ನು ಹೊತ್ತು ತಂದು ಹಾಕಿಕೊಂಡು ಬಂದಿದ್ದೇವೆ..'
             `ಥೂ.. ಮತ್ತೆ ಮತ್ತೆ ತಪ್ಪನ್ನೇ ಮಾಡಿದ್ದೀರಲ್ಲೋ.. ಆ ದೇಹವನ್ನು ಎಲ್ಲಾದರೂ ಮಣ್ಣು ಮಾಡಿ. ಅಥವಾ ಕಾಣೆ ಮಾಡಿ. ನೀವು ಹೊತ್ತುಕೊಂಡು ಬಂದ ಮಾರ್ಗದ ಜಾಡು ಹಿಡಿದು ಬಂದರೆ ಏನು ಮಾಡ್ತೀರಿ? ಎಲ್ಲಾ ಕೆಲಸನೂ ತಪ್ಪಾಗಿಯೇ ಮಾಡಿದ್ದೀರಿ.. ಏನಾಗಿದೆ ನಿಮಗೆ? ಈ ಸಾರಿ ಬಚಾವಾಗೋದು ಕಷ್ಟವಿದೆಯಲ್ಲ. ಇನ್ನು ಮೇಲೆ ಪೊಲೀಸರೂ ಚುರುಕಾಗುತ್ತಾರೆ. ಮೊದಲಿನ ಹಾಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟು ಕೆಲಸ ಮಾಡಿಸಲು ಆಗೋದಿಲ್ಲ. ಎಲ್ಲಾ ಕೆಲಸ ಎಡವಟ್ಟು ಮಾಡಿದಿರಲ್ಲ..' ಎಂದು ಬಾಸ್ ಬಯ್ಯುತ್ತಲೇ ಇದ್ದ.
             ಬಹಳ ಹೊತ್ತಿನ ನಂತರ ಬಯ್ಯುವುದನ್ನು ನಿಲ್ಲಿಸಿದ ಆತ ಹಲವು ಸೂಚನೆಗಳನ್ನು ನೀಡಿದ. ಧಾಳಿ ಮಾಡಿದ ತಂಡವನ್ನು ಹುಡುಕುವುದು, ನಾಯಿಯ ದಾಳಿಗೆ ಗಾಯಗೊಂಡಿದ್ದವನು ಹೊರ ಜಗತ್ತಿನಲ್ಲಿ ಯಾರಾದರೂ ಕೇಳಿದರೆ ಏನು ಹೇಳುವುದು ಎಂಬುದನ್ನೂ ತಿಳಿಸಿದ್ದ. ಸತ್ತವನನ್ನು ಅಘನಾಶಿನಿ ನದಿಯಲ್ಲಿ ತೇಲಿಸಿ ಬಿಡಿ. ತೇಲಿಸುವ ಮುನ್ನ ಮುಖವನ್ನು ಸಂಪೂರ್ಣ ಜಜ್ಜಿ ಹಾಕಿ. ಗುರುತು ಸಿಗದಂತೆ ಮಾಡಿ ಎಂದೂ ಹೇಳುವುದನ್ನು ಮರೆಯಲಿಲ್ಲ. ಆ ನಾಯಕ ಹೇಳಿದಂತೆ ಮುಂದಿನ ಎಲ್ಲ ಕಾರ್ಯಗಳನ್ನೂ ಚಕಚಕನೆ ನೆರವೇರಿಸಿತು ಆತನ ತಂಡ.

****

             `ವಿಕ್ರಂ. ಮೊದಲು ನಾವು ರಾಮು ಯಾರ ಮೇಲೆ ದಾಳಿ ಮಾಡಿತೋ ಆತನನ್ನು ಹುಡುಕೋಣ..' ಎಂದ ಪ್ರದೀಪ.
             `ಹೇಗೆ ಸಾಧ್ಯ?' ಎಂದ ವಿಕ್ರಂ
              `ರಾಮು ಯಾರ ಮೇಲೆ ದಾಳಿ ಮಾಡಿತ್ತೋ ಆತ ಸುತ್ತಮುತ್ತಲ ಊರಿನವನಿರಬೇಕು. ಕಾಲಿಗೆ ಯಾರಿಗೆ ಗಾಯವಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಕಾಲಿಗೆ ಗಾಯವಾಗಿರುವವನೇ ರಾಮುವಿನ ದಾಳೀಗೆ ಒಳಗಾಗಿರುವ ವ್ಯಕ್ತಿ. ಹೀಗೆ ಮಾಡಿದರೆ ಹುಡುಕಬಹುದು ನೋಡು. ಸುತ್ತಮುತ್ತಲ ಊರುಗಳಲ್ಲಿ ನಾಳೆಯಿಂದಲೇ ನಾವು ಆರೋಗ್ಯ ಕಾರ್ಯಕರ್ತರು ಎನ್ನುವ ಸೊಗಿನಲ್ಲಿ ಹೋಗೋಣ. ಖಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳು ನಾಟಕವನ್ನು ಆಡೋಣ. ಆಗ ನಮಗೆ ಗಾಯಗೊಂಡವನ ಸುಳಿವು ಸಿಕ್ಕರೂ ಸಿಗಬಹುದು. ಹೇಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಅವರು ಬೇರೆಯ ಮಾರ್ಗದಲ್ಲಿ ಪತ್ತೆ ಹಚ್ಚುತ್ತಾರೆ..' ಎಂದ ಪ್ರದೀಪ.
            `ಇದು ಸಕ್ಸಸ್ ಆಗ್ತದೆ ಅಂತೀಯಾ? ಈಗಾಗಲೇ ಕಾಡಿನಲ್ಲಿ ನಡೆದ ದಾಳಿ, ಒಬ್ಬ ಸತ್ತಿರುವುದು ಇವೆಲ್ಲ ಸುತ್ತಮುತ್ತಲೂ ಹಬ್ಬಿರುತ್ತದೆ. ಅಂತದ್ದರಲ್ಲಿ ದಾಳಿಗೆ ಒಳಗಾದವರು ನಮ್ಮ ಕೈಗೆ ಸಿಗುತ್ತಾರೆ ಅಂತೀಯಾ? ಸಿಕ್ಕರೂ ಅವರು ನಿಜ ಹೇಳಬೇಕಲ್ಲ..' ವಿಕ್ರಂ ಸಂದೇಹವನ್ನು ತೋಡಿಕೊಂಡ.
            `ನೀ ಹೇಳೋದು ನಿಜ. ಆದರೆ ಒಂದು ಕಲ್ಲು ಹೊಡೆಯೋಣ. ಸಿಕ್ಕರೆ ಒಂದು ಕಾಯಿ. ಇಲ್ಲವಾದರೆ ತೊಂದರೆ ಇಲ್ಲ. ಸಿಕ್ಕಿದರು ಅಂತಾದರೆ ನಿಜ ಹೇಳದಿದ್ದರೆ ತೊಂದರೆಯೇನಿಲ್ಲ. ಆದರೆ ಆತನ ಮೇಲೆ ಕಣ್ಣು ಇಡಬಹುದು ಅಲ್ಲವಾ. ಕಣ್ಣಿಟ್ಟರೆ ಸೂರ್ಯಶಿಖಾರಿ ತಂಡವನ್ನು ಪತ್ತೆ ಹಚ್ಚ ಬಹುದೇನೋ..' ಎಂದು ಪ್ರದೀಪ ಹೇಳಿದ್ದ. ಪ್ರದೀಪನ ಮಾತಿನ ವೈಖರಿಯಿಂದ ವಿಕ್ರಮನ ಆದಿಯಾಗಿ ಎಲ್ಲರೂ ಅಚ್ಚರಿ ಹೊಂದಿದ್ದರು.
            `ಇನ್ನೊಂದು ವಿಷಯ. ಖಂಡಿತ ನಮ್ಮಿಂದ ದಾಳಿಗೆ ಒಳಗಾದವರು ಸುಮ್ಮನೆ ಕೂರುವುದಿಲ್ಲ. ಅವರ ಮೇಲೆ ಯಾರು ದಾಳಿ ಮಾಡಿರಬಹುದು ಎನ್ನುವುದನ್ನು ತಲಾಶ್ ಮಾಡಲು ಆರಂಭಿಸುತ್ತಾರೆ. ಅವರ ಕಣ್ಣು ಇವತ್ತಲ್ಲಾ ನಾಳೆ ನಮ್ಮ ಮೇಲೆ ಬಿದ್ದೇ ಬೀಳುತ್ತದೆ. ಆದ್ದರಿಂದ ಎಲ್ಲರೂ ಹುಷಾರಾಗಿರ್ರಪ್ಪಾ..' ಎಂದು ಪ್ರದೀಪ ಹೇಳುವುದನ್ನು ಮರೆಯಲಿಲ್ಲ. ಪ್ರದೀಪನ ಆಲೋಚನಾ ಸರಣಿಗೆ ಎಲ್ಲರೂ ತಲೆದೂಗಿದರು. ಮುಂದೆ ಹುಷಾರಾಗಿರುತ್ತೇವೆ ಎಂದೂ ಹೇಳಿದರು. ಅಘನಾಶಿನಿ ಕಣಿವೆ ಒಮ್ಮೆ ಬೆಚ್ಚಿ ಬಿದ್ದಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ದುರಂತಗಳಿಗೆ, ನೋವುಗಳಿಗೆ, ಜನಸಾಮಾನ್ಯರೂ ನಡುಗಿ ಹೋಗುವಂತಹ ತಿರುವುಗಳಿಗೆ ಮರಗಳ್ಳರ ಮೇಲಿನ ದಾಳಿ ಕಾರಣವಾಗಲಿತ್ತು. ಪ್ರದೀಪ ಇವೆಲ್ಲವನ್ನೂ ಅಂದಾಜು ಮಾಡಿದ್ದ.

(ಮುಂದುವರಿಯುತ್ತದೆ)

Sunday, August 9, 2015

ಕಡಲುಕ್ಕಿದಾಗ

ಪ್ರೀತಿ ನೀಡುವ ಕಡಲು
ಉಕ್ಕಿ ಬಂದಾಗ
ಹಡಗು ಒಡೆಯಿತಲ್ಲ
ಬಾಳು ಮರುಗಿತಲ್ಲ ||

ಜಲದ ರಾಶಿಯ ಕಡಲು
ಮೈದುಂಬಿ ಬಂದಾಗ,
ಬದುಕು ಮುರಿಯಿತಲ್ಲ
ಸಾವೇ ಬಂದಿತಲ್ಲ ||

ಶಕ್ತಿ ನೀಡುವ ಕಡಲು
ರೌದ್ರವಾದಾಗ,
ಮನೆಯೇ ತೊಳೆಯಿತಲ್ಲ
ನೋವು ತುಂಬಿತಲ್ಲ ||

ಭೂಮಿ ತಣಿಸುವ ಕಡಲು
ಸಿಡಿಲಿನಂತಾಗಿ
ಮನಸ ಇರಿಯಿತಲ್ಲ
ಜೀವ ನುಂಗಿತಲ್ಲ ||

ರಕ್ಷೆ ನೀಡುವ ಕಡಲು
ಶಿಕ್ಷೆ ಕೊಟ್ಟಾಗ
ಜೀವ ಅರಿಯದಲ್ಲ
ಎಲ್ಲಾ ಮುಗಿಯಿತಲ್ಲ ||

****

(ಈ ಕವಿತೆಯನ್ನು ಬರೆದಿರುವುದು 03-04-2006ರಂದು ದಂಟಕಲ್ಲಿನಲ್ಲಿ)

Friday, August 7, 2015

ತೋಟದಲ್ಲಿ ಇರೋ ಸುಖ

ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹೂ ಅಂತೀಯಾ.. ಊಹೂ ಅಂತೀಯಾ..
ಬಾ ಅಂತೀಯಾ.. ತಾ ಅಂತೀಯಾ.. ||

ಹೇಳುವೆ ಜೊತೆ ಬಂದರೆ
ಸೊಂಗೆ ಅಟ್ಲ ಬದಿ ಅಂಚಲಿ
ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ..
ಹೂ ಅಂತೀಯಾ, ಊಹೂ ಅಂತೀಯಾ ||

ಏಲಕ್ಕಿಯಾ ಹಸಿ ಗಿಡಗಳು
ತೂಗಾಡುವಾ ಬಾಳೆಲೆಗಳು
ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ..

ಉದುರುವಾ ಹಣ್ಣಡೆಕೆಯು
ಕಾಳ್ಮೆಣಸಿನ ಹಸಿರೆಲೆಗಳು
ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ..

ಕೊಳೆ ಮದ್ದಿನ ಗಮ್ಮತ್ತಿದೆ
ಮಂಡ್ಗಾದ್ಗೆಯಾ ನೀರ ಹೆಚ್ಚಿದೆ
ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ..

ತೋಟವು ತಗ್ಗಲ್ಲಿದೆ
ಬೆಟ್ಟವು ಬದಿಯಲ್ಲಿದೆ
ತೋಟದಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ..

ಬೇರ್ಹುಳ ಮರ ತಿಂದಿದೆ
ಬಿಸಿಲಿಗೆ ಮರ ಬಾಡಿದೆ
ತೋಟದಲ್ಲಿ ಇರೋ ದುಃಖ
ಗೊತ್ತೇ ಇರಲಿಲ್ಲ..
ಬಾ ಅಂತೀಯಾ, ಬೇಡ ಅಂತೀಯಾ.. ||

**

(ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಅನ್ನುವ ಧಾಟಿಯಲ್ಲಿ ಬರೆದ ಕವಿತೆ. ಸುಮ್ಮನೆ ತಮಾಷೆಗೆ ಬರೆದಿದ್ದು. ಹಂಸಲೇಖರ ಕ್ಷಮೆ ಕೋರುತ್ತಾ. ಸುಮ್ಮನೆ ಓದಿ ಖುಷಿಪಡಿ)

(ಈ ಕವಿತೆಯನ್ನು ಬರೆದಿರುವುದು ಆಗಸ್ಟ್ 7, 2015ರಂದು ಶಿರಸಿಯಲ್ಲಿ)



ನಾವು ಹವ್ಯಕರು-3

ನಾವು ಹವ್ಯಕರು ನಾವು ಹವ್ಯಕರು
ಅಡಿಕೆಯ ಬೆಳೆಗಾರರು |
ವೇದ ಪಾರಂಗತರು
ನಾವು ಹವ್ಯಕರು ನಾವು ಹವ್ಯಕರು ||

ಉತ್ತರದಿಂದ ಬಂದವ್ವಡ
ನಾವು ಹವ್ಯಕರು
ಹೈಗುಂದದಲ್ಲಿ ನಿಂತವ್ವಡ
ನಾವು ಹವ್ಯಕರು ||

ಏಳು ಗೋತ್ರ ಸಣಕಲು ಗಾತ್ರ
ನಾವು ಹವ್ಯಕರು
ವೇದ ಪಾಠ, ಮೂರು ಮಠ
ನಾವು ಹವ್ಯಕರು ||

ಉ.ಕ, ದ.ಕ, ಶಿವಮೊಗ್ಗ
ಎಲ್ಲೆಲ್ಲೂ ಹವ್ಯಕರು
ಕಾಸರಗೋಡು, ಕುಂಬ್ಳೆ ಸೀಮೆ
ನಾವು ಹವ್ಯಕರು ||

ಕೃಷಿಗೂ ಸೈ, ಸಾಫ್ಟ್ ವೇರ್ ಗೂ ಜೈ
ನಾವು ಹವ್ಯಕರು
ಬದುಕಿಗಾಗಿ ನೂರಾರು ರೂಪ
ನಾವು ಹವ್ಯಕರು ||

ದೋಸೆ, ಅನ್ನ, ಅಪ್ಪೆಹುಳಿ
ಪ್ರೀತಿಯ ಹವ್ಯಕರು
ಉಪ್ಪಿನಕಾಯಿ, ಅಪ್ಪೆಮಿಡಿ
ಮೆಲ್ಲುವ ಹವ್ಯಕರು ||

ಯಂತ್ರಕ್ಕೂ ಸೈ, ಮಂತ್ರಕ್ಕೂ ಸೈ
ನಾವು ಹವ್ಯಕರು
ಕಷ್ಟ ಬಂದ್ರೂ ನಗ್ತಾ ಇರುವವರು
ನಾವು ಹವ್ಯಕರು ||

***

(ಹವ್ಯಕರ ಬಗ್ಗೆ ವಿವರ ನೀಡುವ ನಾವು ಹವ್ಯಕರು ಶೀರ್ಷಿಕೆಯಲ್ಲಿ ಈಗಾಗಲೇ ಎರಡು ಕವಿತೆ ಬರೆದಿದ್ದೆ. ಆ ಎರಡು ಕವಿತೆಗಳ ಮುಂದುವರಿದ ಭಾಗವಾಗಿ ಈ ಕವಿತೆ ಬರೆದಿದ್ದೇನೆ. ಹವ್ಯಕರ ಮತ್ತಷ್ಟು ಗುಣಗಳನ್ನು ಈ ಕವಿತೆ ತಿಳಿಸುತ್ತದೆ. ನಿಮಗಿಷ್ಟವಾಗಬಹುದು.)

(ಈ ಕವಿತೆಯನ್ನು ಬರೆದಿರುವುದು ಆಗಸ್ಟ್ 7, 2015ರಂದು ಸಿರಸಿಯಲ್ಲಿ)



Wednesday, August 5, 2015

ಚಲಿಸುವ ಮೋಡಗಳು

ಚಲಿಸುವ ಮೋಡಗಳು
ಏನೋ ಹೇಳುತಿವೆ |
ಬಾವದ ಬದುಕಲ್ಲಿ
ಬಯಕೆಯ ತುಂಬುತಿವೆ ||

ಚಲಿಸುವ ಮೋಡಗಳು
ಚಲನೆಯ ತುಂಬುತಿವೆ |
ಮನದೇಕಾಂತದಲಿ
ಪ್ರೀತಿಯ ನೀಡುತಿವೆ ||

ಚಲಿಸುವ ಮೋಡಗಳು
ಶಾಂತಿಯ ನೀಡುತಿವೆ |
ಅಜ್ಞಾನದ ಇರುಳಲ್ಲಿ
ಜ್ಞಾನವ ಹಂಚುತಿವೆ ||

ಚಲಿಸುವ ಮೋಡಗಳು
ಕಣ್ಮನ ಸೆಳೆಯುತಿವೆ |
ಭಯದ ಬದುಕಲ್ಲಿ
ಧೈರ್ಯವ ತುಂಬುತಿವೆ ||

ಚಲಿಸುವ ಮೋಡಗಳು
ಎಲ್ಲೋ ಸಾಗುತಿವೆ |
ಬಾಳಿನ ಬಯಲಲ್ಲಿ
ನಲಿವನು ನೀಡುತಿವೆ ||

***

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 23-11-2005ರಂದು)

Tuesday, August 4, 2015

ಮಾಸ್ತರ್ ಮಂದಿ-5

ಸಿ. ಎಂ. ಹೆಗಡೆ :
           ಉಫ್.. ಇವರ ಬಗ್ಗೆ ಎಷ್ಟು ಅಂತ ಹೇಳುವುದು? ಪೂರ್ತಿ ಹೇಳಿದರೆ ನಾಲ್ಕೈದು ಭಾಗಗಳು ಬೇಕಾಗುತ್ತವೆಯೇನೋ ಗೊತ್ತಿಲ್ಲ. ಇವರಿಂದ ನಾನು ಅನುಭವಿಸಿದಷ್ಟು ಬಹುಶಃ ಇನ್ನೊಬ್ಬರು ಅನುಭವಿಸಿರಲಿಕ್ಕಿಲ್ಲ. ನನ್ನ ತಂಗಿ ಸುಪರ್ಣಾಳೂ ಇವರ ಬಗ್ಗೆ ಕಿಡಿಕಾರುತ್ತಾಳೆ. ನಾನು ಮೂರು ಅಥವಾ ನಾಲ್ಕನೇ ಕ್ಲಾಸಿನಲ್ಲಿ ಇದ್ದಾಗ ನಮ್ಮ ಶಾಲೆಗೆ ಬಂದವರು ಸಿ. ಎಂ. ಹೆಗಡೆಯವರು. ಜಿ. ಎಸ್. ಭಟ್ಟರು ಸತ್ತು ಹೋದ ನಂತರ ಶಾಲೆಗೆ ಶಿಕ್ಷಕರಾಗಿ ಬಂದವರು ಇವರೇ ಇರಬೇಕು. ಮೊದಲ ಪೋಸ್ಟಿಂಗೇ ನಮ್ಮ ಶಾಲೆಯಿರಬೇಕು. ಬಂದ ಹೊಸತರಲ್ಲಿ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದರು ಸಿ. ಎಂ. ಹೆಗಡೆಯವರು.
           ನನ್ನ ಅಪ್ಪನಿಗೂ-ಗಡ್ಕರ್ ಮಾಸ್ತರಿಗೂ ಬಹಳ ಪರಿಚಯವಿತ್ತು. ಸಿ. ಎಂ. ಹೆಗಡೆಯವರು ಬಂದ ಒಂದೆರಡು ದಿನಗಳಲ್ಲಿ ನನ್ನ ಬಳಿ ಗಡ್ಕರ್ ಮಾಸ್ತರ್ರು ಅಪ್ಪನ ಕರ್ಕೊಂಡು ಬಾ ಎಂದಿದ್ದರು. ನನಗೆ ದಿಘಿಲ್ ದಬ್ಬಾಕ್ಕಂಡಿತ್ತು. ನಾ ಏನ್ ತಪ್ಪು ಮಾಡಿದ್ನೋ? ಯಾಕ್ ಅಪ್ಪನ್ನ ಕರೆಸ್ತಿದ್ದಾರೋ ಎಂದು ಭಯಗೊಂಡಿದ್ದೆ. ನಾ ಏನೇ ತಪ್ಪು ಮಾಡಿದರೂ ಮಾಸ್ತರ್ರು ಹೊಡೆತ ಹಾಕುತ್ತಾರೆಯೇ ಹೊರತು ತೀರಾ ಮನೆಯವರನ್ನು ಕರೆದುಕೊಂಡು ಬಾ ಎಂದು ಹೇಳಿರಲಿಲ್ಲ. ಅಂತದ್ದರಲ್ಲಿ ಅಪ್ಪನ್ನ ಕರ್ಕೊಂಡು ಬಾ ಎಂದು ಗಡ್ಕರ್ ಮಾಸ್ತರ್ರು ಹೇಳುತ್ತಿದ್ದಾರೆ ಎಂದರೆ ಏನೋ ಆಗಿರಬೇಕು ಎಂದುಕೊಂಡೆ. ನನ್ನ ತಂಟೆ, ತಕರಾರಿನ ಲೀಸ್ಟನ್ನೆಲ್ಲ ಜ್ಞಾಪಕ ಮಾಡಿಕೊಂಡೆ. ನಾನು ತೀರಾ ತಲೆಹೋಗುವಂತಹ ಕೆಲಸ ಮಾಡಿರಲಿಲ್ಲವಾದರೂ ಮಾಸ್ತರ್ರು ಅಪ್ಪನ್ನ ಕರ್ಕೊಂಡು ಬಾ ಎಂದು ಹೇಳಿದ್ದಕ್ಕೆ ಮಾತ್ರ ಚಿಂತೆಗೀಡು ಮಾಡಿತ್ತು.
            ಭಯದಿಂದಲೇ ಅಪ್ಪನ ಬಳಿ ವಿಷಯ ಪ್ರಸ್ತಾಪ ಮಾಡಿದ್ದೆ. `ದರಿದ್ರ ಮಾಣಿ.. ಎಂತಾ ಭಾನಗಡಿ ಮಾಡ್ಕಂಡು ಬಂಜ್ಯೇನ..' ಕೂಗಿದ ಅಪ್ಪ ನಾಲ್ಕೇಟು ಬಡಿದು ಶಾಲೆಗೆ ಬಂದಿದ್ದ. ಆದರೆ ಶಾಲೆಗೆ ಬಂದಾಗ ಮಾತ್ರ ವಿಷಯ ಬೇರೆಯದೇ ಆಗಿತ್ತು. ಸಿ. ಎಂ. ಹೆಗಡೆಯವರು ಹೊಸದಾಗಿ ಶಾಲೆಗೆ ಬಂದಿದ್ದರಲ್ಲ. ಅವರಿಗೆ ಮದ್ಯಾಹ್ನದ ಊಟಕ್ಕೆ ಏಲ್ಲಾದರೂ ಹೋಗಬೇಕಿತ್ತು. ಪ್ರಾರಂಭದಲ್ಲಿ ನಮ್ಮೂರಿನ ಪೋಸ್ಟ್ ಮ್ಯಾನ್ ಪ್ರಕಾಶಣ್ಣನ ಮನೆಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡೋಣ ಎಂದು ಎಲ್ಲರೂ ಚಿಂತನೆ ಮಾಡಿದ್ದರು. ಆದರೆ ಅವರಿಗೆ ಅದೇನು ಅನಿವಾರ್ಯ ಕಾರಣ ಬಂದಿತ್ತೋ ಗೋತ್ತಿಲ್ಲ, ಆಗುವುದಿಲ್ಲ ಎಂದುಬಿಟ್ಟಿದ್ದರು. ಕೊನೆಗೆ ಮೂರ್ನಾಲ್ಕು ಮನೆಗಳಲ್ಲಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗಿತ್ತಾದರೂ ಯಾರ ಮನೆಯಲ್ಲಿಯೂ ಹೂ ಅಂದಿರಲಿಲ್ಲ. ಕೊನೆಗೆ ಗಡ್ಕರ್ ಮಾಸ್ತರ್ರಿಗೆ ನಮ್ಮನೆ ನೆನಪಾಗಿತ್ತು.
          `ಸುಬ್ರಾಯ ಹೆಗ್ಡೇರೇ.. ನೀವು ಈ ಒಂದ್ ಕೆಲಸ ಮಾಡಿಕೊಟ್ಟರೆ ಬಹಳ ಉಪಕಾರವಾಗ್ತದೆ ನೋಡಿ..' ಎಂದು ಗಡ್ಕರ್ ಮಾಸ್ತರ್ರ ವಿನಮ್ರತೆಗೆ ಅಪ್ಪ ಹೂ ಅಂದು ವಾಪಾಸು ಬಂದಿದ್ದ. ಅವಿಭಕ್ತ ಕುಟುಂಬದ ಮದ್ಯಾಹ್ನದ ಊಟದ ಸಾಲಿಗೆ ಒಂದು ಮಣೆ ಜಾಸ್ತಿಯಾಗಿತ್ತಷ್ಟೆ. ಆದರೆ ವಿನಾಕಾರಣ ಅಪ್ಪನಿಂದ ಹೊಡೆತ ತಿಂದಿದ್ದ ಬೆನ್ನು ಕೆಂಪಾಗಿದ್ದು ಇಳಿಯಲು ಮತ್ತೆರಡು ದಿನಗಳೇ ಬೇಕಾಗಿದ್ದವು. ಆ ನಂತರ ಸಿ. ಎಂ. ಹೆಗಡೆ ಮಾಸ್ತರ್ರು ಪ್ರತಿ ದಿನ ನಮ್ಮನೆಗೆ ಮದ್ಯಾಹ್ನದ ಊಟಕ್ಕೆ ಬರುತ್ತಿದ್ದರು. ಮನೆಯಲ್ಲಿರುತ್ತಿದ್ದ 10-12 ಜನರ ಪೈಕಿ ನನ್ನ ಅಜ್ಜಿ ಮಂಕಾಳಿ ಹಾಗೂ ಈಗಲೂ ಶಾಲಾ ಮಾಸ್ತರ್ರಿಕೆ ಮಾಡುತ್ತಿರುವ ವಿ. ವಿ. ಹೆಗಡೆ ಮಾಸ್ತರ್ರು ಮಾತ್ರ ಸಿ. ಎಂ. ಹೆಗಡೆ ಮಾಸ್ತರ್ರು ಊಟ ಮಾಡಲು ಬರುತ್ತಿದ್ದುದಕ್ಕೆ ಸಿಟ್ಟಾಗಿದ್ದರು. ಏನೇನೋ ಕೊಂಕು ಮಾತನಾಡುತ್ತಿದ್ದರು. ಆದರೆ ಮನೆ ಯಜಮಾನನಾದ ನನ್ನ ಅಪ್ಪನಾಗಲೀ, ಮನೆಯ ಎಲ್ಲ ಸದಸ್ಯರಿಗೆ ಪ್ರತಿದಿನ ಎಷ್ಟೇ ಕಷ್ಟ ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದ ಅಮ್ಮನಾಗಲೀ ಒಂದಿನಿತೂ ಬೇಸರ ಪಟ್ಟುಕೊಳ್ಳಲಿಲ್ಲ.
            11.30ಕ್ಕೆ ಶಾಲೆ ಬಿಟ್ಟರೆ 12ಕ್ಕೆ ಮನೆಗೆ ಬರುವ ನಾವು ಆಸ್ರಿಗೆ ಕುಡಿದು, ನಂತರ ಊಟ ಮಾಡುತ್ತಿದ್ದೆವು. ನನ್ನ ಜೊತೆಗೆ ನಡೆದು ಬರುವ ಸಿ. ಎಂ. ಹೆಗಡೆಯವರೂ ಇದೇ ರೀತಿ ಮಾಡುತ್ತಿದ್ದರು. ಊಟ ಮುಗಿಸುತ್ತಿದ್ದ ನಾವು ಸೀದಾ ಗುಡ್ಡ ಹತ್ತಿ ಓಡಿ ಬರುತ್ತಿದ್ದರೆ ಮಾಸ್ತರ್ರು ಮಾತ್ರ 15 ನಿಮಿಷ ನಿದ್ದೆ ಮಾಡಿ ಬರುತ್ತಿದ್ದರು. ಮುಂದಿನ ದಿನಗಳಲ್ಲಿ ಸಿ. ಎಂ. ಹೆಗಡೆಯವರು ಬೈಕ್ ತೆಗೆದುಕೊಂಡಿದ್ದರು. ಪ್ರತಿದಿನ ಶಾಲೆಯಿಂದ ಮನೆಗೆ ಬರುವಾಗ ನನ್ನನ್ನು ಬೈಕಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಆದರೆ ವಾಪಾಸು ಶಾಲೆಗೆ ಹೋಗುವಾಗ ಮಾತ್ರ ನಾನು ಎದೆ ಎತ್ತರದ ಗುಡ್ಡ ಹತ್ತಿ ಬರಬೇಕಾಗಿತ್ತು. ಸರಿಸುಮಾರು 2 ವರ್ಷಗಳ ಕಾಲ ನಮ್ಮ ಮನೆಯಲ್ಲಿ ಮನೆಯ ಸದಸ್ಯರಂತೆ ಆಗಿ ಹೋಗಿದ್ದರು ಸಿ. ಎಂ. ಹೆಗಡೆಯವರು. ಆದರೆ ನಂತರದ ದಿನಗಳಲ್ಲಿ ನಮ್ಮ ಮನೆಯಲ್ಲಿ ಹಿಸೆ ಪಂಚಾಯ್ತಿಕೆ ಆರಂಭವಾಗಿತ್ತು. ಜಗಳಗಳೂ ಆಗಾಗ ನಡೆಯುತ್ತಿದ್ದವು. ಅಪ್ಪನಿಗೂ-ಚಿಕ್ಕಪ್ಪಂದಿರಿಗೂ ಸಾಕಷ್ಟು ಜಗಳಗಳಾಗುತ್ತಿದ್ದವು. ಮುಂದೆ ಮಾತ್ರ ಸಿ. ಎಂ. ಹೆಗಡೆಯವರು ನನ್ನ ಚಿಕ್ಕಪ್ಪಂದಿರ ಮಾತನ್ನು ಕಟ್ಟಿಕೊಂಡು ನನ್ನ ವಿರುದ್ಧ ಹಾಗೂ ನನ್ನ ತಂಗಿಯ ವಿರುದ್ಧ ದ್ವೇಷ ಕಾರಿದ್ದು ಮಾತ್ರ ಇಂದಿಗೂ ನೆನಪಾಗುತ್ತಲೇ ಇರುತ್ತದೆ.
            ಸಿ. ಎಂ. ಹೆಗಡೆಯವರು ನನಗೆ ಮೊಟ್ಟಮೊದಲು ಕಲಿಸಿದ್ದು 5ನೇ ಕ್ಲಾಸಿನಲ್ಲಿ ಬೀಜಗಣಿತವನ್ನು. ತಾರಕ್ಕೋರು ಕ್ಲಾಸಿನಲ್ಲಿ ಕಲಿಸುತ್ತಿದ್ದವರು ಗಣಿತ ವಿಷಯ ಕಲಿಸಲು ಸಿ. ಎಂ. ಹೆಗಡೆಯವರ ಬಳಿ ಹೇಳಿದ್ದರು. ನಂತರದ ದಿನಗಳಲ್ಲಿ 2 ಅಥವಾ 3 ವಿಷಯಗಳನ್ನು ನನ್ನ ಕ್ಲಾಸಿನವರಿಗೆ ಹೇಳಲು ಆರಂಭಿಸಿದ್ದರು. ಹರೀಶ ನಾಯ್ಕ ಮಾಸ್ತರ್ರು ನಮ್ಮ ಶಾಲೆಗೆ ಬರುವ ವರೆಗೂ ಸಿ. ಎಂ. ಹೆಗಡೆಯವರು ನನಗೆ ಕಲಿಸುತ್ತಿದ್ದರು.
          `ನನ್ನ ಕೈಗೆ ಸಿಕ್ಕಿದ್ದರೆ ನಿನ್ನ ಚರ್ಮ ಸುಲಿದು ಬಿಡ್ತಿದ್ದೆ ನೋಡು ವಿನಯಾ..' ಎಂದು ಪದೇ ಪದೆ ಹೇಳುತ್ತಿದ್ದ ಸಿ. ಎಂ. ಹೆಗಡೆಯವರು ಅವಕಾಶ ಸಿಕ್ಕಾಗಲೆಲ್ಲ ನನಗೆ ಹೊಡೆಯುತ್ತಿದ್ದರು. ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ಸಾಕಷ್ಟು ಆರೋಪಗಳನ್ನೂ ನನ್ನ ಮೇಲೆ ಸುರಿಸಿದ್ದರು. `ವಿನಯ ಓದಿದ್ದರೆ ಬುದ್ಧಿವಂತನೇ ಆಗಿದ್ದ..' ಎಂದು ಪದೇ ಪದೆ ಹೇಳುತ್ತಿದ್ದ ಇವರು ಬಹಳಷ್ಟು ಪರೀಕ್ಷೆಗಳಲ್ಲಿ ಬೇಕಂತಲೇ ಅಂಕಗಳನ್ನು ಕಟ್ ಮಾಡಿದ್ದೂ ಇದೆ. ಒಮ್ಮೆ ಹೀಗಾಗಿತ್ತು. ಸಮಾಜ ವಿಜ್ಞಾನ ವಿಷಯ ನನ್ನ ಫೆವರೇಟ್. ಅದರಲ್ಲೂ ಭೂಪಟ ನೋಡುವುದು, ಗ್ಲೋಬ್ ನೋಡುವುದು, ನಕಾಶೆ ಬಿಡಿಸುವುದು, ಚಿತ್ರ ಬಿಡಿಸುವುದು, ರಾಷ್ಟ್ರದ ರಾಜಧಾನಿಗಳ ಚಿತ್ರವನ್ನು ಬಿಡಿಸುವುದು ಇತ್ಯಾದಿ ವಿಷಯಗಳಲ್ಲಂತೂ ನನ್ನನ್ನು ಮೀರಿಸುವವರೇ ಇರಲಿಲ್ಲ. ಹೀಗಿದ್ದಾಗ ನಾನು ಒಂದು ಪರೀಕ್ಷೆಯಲ್ಲಿ 25ಕ್ಕೆ 23 ಅಂಕಗಳನ್ನು ಪಡೆದುಕೊಂಡು ಬಿಟ್ಟಿದ್ದೆ. ಯಾವಾಗಲೂ ಸಿ. ಎಂ. ಹೆಗಡೆಯವರ ಕೈಚಳಕದಿಂದ 20ಕ್ಕಿಂತ ಜಾಸ್ತಿ ಅಂಕ ಪಡೆಯದ ನಾನು ಆ ಪರೀಕ್ಷೆಯಲ್ಲಿ ಮಾತ್ರ 25ಕ್ಕೆ 23 ಬಂತಲ್ಲ ಎಂದು ಬಹಳ ಖುಷಿಯಾಗಿಬಿಟ್ಟಿದ್ದೆ. `ಓಹೋ.. ನಂಗೆ 25ಕ್ಕೆ 23 ಬಿತ್ತು..' ಎಂದು ಖುಷಿಯಾಗಿ ನನ್ನ ಖಾಸಾ ದೋಸ್ತ್ ವಿಜಯನ ಬಳಿ ಹೇಳಿಯೂ ಬಿಟ್ಟಿದ್ದೆ. ಆತ ಮತ್ತೆ ಕೆಲವರ ಬಳಿ ಹೇಳಿದ್ದ. ಕೊನೆಗೆ ನಾನು ಹೇಳಿದ ವಿಷಯ ಸಿ. ಎಂ. ಹೆಗಡೆಯವರ ಕಿವಿಗೂ ಬಿದ್ದಿತ್ತು. ತಕ್ಷಣವೇ ನನ್ನನ್ನು ವಾಪಾಸು ಕರೆದ ಅವರು `ನಿಂಗೆ 23 ಕೊಟ್ಟಿಗಿದ್ನನಾ.. ತಡಿ..' ಎಂದರು. ಏನೇನೋ ಹುಡುಕಿದರು. ಹಾಗೂ ಹೀಗೂ ಮಾಡಿ 4 ಅಂಕಕ್ಕೆ ಕತ್ತರಿಯನ್ನು ಹಾಕಿಬಿಟ್ಟರು. ಪರಿಣಾಮವಾಗಿ ನನಗೆ 19 ಅಂಕಗಳು ಮಾತ್ರ ಬಂದಿದ್ದವು. ಇಷ್ಟೆಲ್ಲ ಮಾಡಿದ ನಂತರ ಏನೋ ಸಾಧನೆ ಮಾಡಿದೆ ಎನ್ನುವ ಕಿರುನಗು ಅವರ ತುಟಿಯ ಮೇಲೆ ಇದ್ದಿದ್ದು ಇಂದಿಗೂ ನೆನಪಾಗುತ್ತಿದೆ.
           ಶಾಲಾ ಮಟ್ಟದಲ್ಲಿ ಕ್ರೀಡಾಕೂಟ ನಡೆದಾಗಲೆಲ್ಲ ಏನಾದರೂ ನೆಪ ಹೂಡಿ ನನಗೆ ತೊಂದರೆ ಕೊಡುತ್ತಿದ್ದುದು ಇನ್ನೂ ನೆನಪಿದೆ ನೋಡಿ. `ಏನ್ ಹುಳುಕು ಮಾಸ್ತರ್ರು ಇವರು..' ಎಂದು ನಾನು ನನ್ನ ದೋಸ್ತರ ಬಳಿ ಹೇಳಿಕೊಂಡಿದ್ದೆ. ದೋಸ್ತರು ಸೀದಾ ಸಿ. ಎಂ. ಹೆಗಡೆಯವರ ಬಳಿ ಫಿಟ್ಟಿಂಗ್ ಇಟ್ಟು ಬೈಯಲೂ ಬೈದಿದ್ದರು. ಹೊಡೆತವನ್ನೂ ಕೊಟ್ಟಿದ್ದರು. ಪ್ರತಿದಿನ ಒಂದಲ್ಲ ಒಂದು ನೆಪವನ್ನು ಹುಡುಕಿ ಕ್ಲಾಸಿನಿಂದ ಹೊರಗೆ ಹಾಕುವುದೂ ಇತ್ತು. ಅದೊಮ್ಮೆ ಕಾನಸೂರಿನಲ್ಲಿ ಕೇಂದ್ರಮಟ್ಟದ ಕ್ರೀಡಾಕೂಟ ನಡೆದಿತ್ತು. ನಮ್ಮ ಶಾಲೆಯಲ್ಲಿ ಆ ಸಮಯದಲ್ಲಿ ವೇಗದ ರನ್ನರ್ ನಾನೇ ಆಗಿದ್ದೆ. ಕ್ರೀಡಾಕೂಟದ ಸಮಯದಲ್ಲಿ ನನ್ನ ಕಾಲಿನ ಹೆಬ್ಬೆರಳು ಮುರಿದು ಹೋಗಿತ್ತು. ನಾನು ಓಡುವುದು ಸಾಧ್ಯವೇ ಇಲ್ಲ ಎಂದು ಡಾಕ್ಟರ್ ಆದಿಯಾಗಿ ಎಲ್ಲರೂ ಹೇಳಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರು ಕೇಳಬೇಕೆ? ಓಡಿಸಿಯೇ ಬಿಟ್ಟರು. ನಾನು ಹೆಬ್ಬೆರಳನ್ನು ನೆಲಕ್ಕೆ ಊರದೇ ನಾಲ್ಕೇ ಬೆರಳಿನ ಸಹಾಯದಿಂದ ಓಡಿದೆ. ಬಿಡಿ ಮೊದಲ ಮೂರು ಸ್ಥಾನಗಳೇನೂ ಬರಲಿಲ್ಲ. ನಾಲ್ಕನೇ ಸ್ಥಾನ ನನ್ನದಾಗಿತ್ತು. ನಾನು ನಾಲ್ಕನೇ ಸ್ಥಾನ ಬಂದಿದ್ದೇನೆ ಎಂದು ಸಿ. ಎಂ. ಹೆಗಡೆಯವರು ಬೆನ್ನ ಮೇಲೆ ಸಿಕ್ಕಾಪಟ್ಟೆ ಬಡಿದಿದ್ದರು. ಕಾಲ್ಬೆರಳು ಮುರಿದ ಕಾರಣದಿಂದಾಗಿಯೇ ನಮ್ಮ ಶಾಲೆಯ ವಾಲೀಬಾಲ್ ತಂಡದಲ್ಲಿ ನಾನು ಒಬ್ಬನಾಗಿದ್ದರೂ ಭಾಗವಹಿಸಿರಲಿಲ್ಲ. ಕಬ್ಬಡ್ಡಿಯಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ ಲಾಂಗ್ ಜಂಪ್ ಹಾಗೂ ಇತರ ರನ್ನಿಂಗ್ ರೇಸಿನಲ್ಲಿ ಭಾಗವಹಿಸಿದ್ದೆ. ವಾಲೀಬಾಲಿನಲ್ಲಿ ನಾನು ಟೀಂ ಸದಸ್ಯನಾಗಿದ್ದರೆ ನನ್ನಿಂದ ತಂಡಕ್ಕೆ ಲಾಭವಾಗುವ ಬದಲು ಹಾನಿಯಾಗುವುದೇ ಹೆಚ್ಚಿತ್ತು ಬಿಡಿ. ಆ ದಿನಗಳಲ್ಲಿ ನಾನು ಸರ್ವೀಸ್ ಮಾಡಿದರೆ ಅದು ನೆಟ್ ದಾಟುತ್ತಲೂ ಇರಲಿಲ್ಲ. ನಾನು ಭಾಗವಹಿಸದೇ, ನನ್ನ ಬದಲು ಬೇರೋಬ್ಬರು ಭಾಗವಹಿಸಿ ತಂಡ ಮೊದಲ ಸ್ಥಾನ ಬಂದಿತ್ತು. ಆದರೆ ಶಾಲೆಗೆ ವಾಪಾಸು ಬಂದ ನಂತರ ಸಿ. ಎಂ. ಹೆಗಡೆಯವರು ಮಾತ್ರ ನಾನು ಬೇಕಂತಲೇ ಭಾಗವಹಿಸಲಿಲ್ಲ. ಶಾಲೆಗೆ ನನ್ನಿಂದಾಗಿ ಕೆಟ್ಟ ಹೆಸರು ಬಂದಿದೆ ಎಂದು ಹಬ್ಬಿಸಿ ಶಾಲೆಯಲ್ಲಿ ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದರು.
           ಆ ದಿನಗಳಲ್ಲಿ ನಾನು ಸುಂದರವಾಗಿ ಚಿತ್ರ ಬಿಡಿಸುತ್ತಿದ್ದೆ. ಶಾಲೆಯ ಎಲ್ಲಾ ಮಾಸ್ತರ್ರು ನಿರ್ಣಾಯಕರಾಗಿ ಇರುತ್ತಿದ್ದರು. ಸಿ. ಎಂ. ಹೆಗಡೆಯವರೊಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ 10ಕ್ಕೆ 9 ಅಂಕ ಕೊಟ್ಟರೆ ಸಿ. ಎಂ. ಹೆಗಡೆಯಯವರು ಮಾತ್ರ 10ಕ್ಕೆ 3 ಅಂಕಗಳನ್ನು ಕೊಟ್ಟು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಅವರು ಕಡಿಮೆ ಅಂಕ ಕೊಟ್ಟರೂ ನಾನು ಮೊದಲ ಸ್ಥಾನ ಬರುತ್ತಿದ್ದೆ ಅದು ಬೇರೆಯ ವಿಷಯ ಬಿಡಿ.
            ನನಗಿಂತ ಎರಡು ಕ್ಲಾಸಿಗೆ ಹಿರಿಯವನಾಗಿ ಗಣಪತಿ ಎಂಬಾತ ಬರುತ್ತಿದ್ದ. ಈ ಗಣಪತಿಯ ಬಗ್ಗೆ ಜಿ. ಎಸ್. ಭಟ್ಟರ ಬಗ್ಗೆ ಬರೆಯುವಾಗ ಬರೆದಿದ್ದೆ. ಆತ ಹಾಗೂ ನಾನು ಶಾಲೆಯ ವೇಗದ ರನ್ನರುಗಳು. ಅಲ್ಲದೆ ಶಾಲೆಯ ಹಲವಾರು ಭಾನಗಡಿಗಳಲ್ಲಿ ನಮ್ಮ ಕೈ ಇದ್ದೇ ಇರುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಆದರೂ ಗಣಪತಿ ನನಗಿಂತ ಬಹಳ ಜೋರಿದ್ದ. ಭಯಂಕರ ಕಿಲಾಡಿ, ತಂಟೆ ಮನುಷ್ಯ. ಗಲಾಟೆ, ತಂಟೆ, ಕಳ್ಳತನಗಳಲ್ಲಿ ಆತನದು ಎತ್ತಿದ ಕೈ ಆಗಿತ್ತು. ತಾನು ಮಾಡಿದ ಭಾನಗಡಿಯನ್ನು ನನ್ನ ಮೇಲೆ ಹಾಕುತ್ತಿದ್ದ. ನಾನು ಸಿಗದಿದ್ದರೆ ನಮ್ಮೂರಿನಿಂದ ಶಾಲೆಗೆ ಬರುತ್ತಿದ್ದ ಶ್ರೀಪಾದನ ಮೇಲೋ, ಶ್ರೀಪಾದನ ತಂಗಿಯರಾದ ಅನಸೂಯ, ನಾಗರತ್ನಾಳ ಮೇಲೋ ಹಾಕುತ್ತಿದ್ದ. ಈತ ಶಾಲೆಗೆ ಕಳ್ಳ ಬೀಳುತ್ತಿದ್ದ ಬಗ್ಗೆ ನಿಮಗೆ ಮೊದಲೆ ತಿಳಿಸಿದ್ದೇನೆ. ಬಹುಶಃ ಸಿ. ಎಂ. ಹೆಗಡೆಯವರಿಗೆ ಗಣಪತಿ ಕದ್ದು ಕೂರುತ್ತಿದ್ದ ಜಾಗಗಳನ್ನು ನಾನು ತೋರಿಸಿಕೊಟ್ಟ ಮೇಲೆಯೇ ಗಣಪತಿ ಶಾಲೆಗೆ ಹೋಗದೇ ಕದ್ದು ಕೂರುತ್ತಿದ್ದುದು ಕಡಿಮೆಯಾಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
          ಒಂದು ದಿನ ನಾನು, ಗಣಪತಿ. ಶ್ರೀಪಾದ, ಅನಸೂಯಾ ಮುಂತಾದವರೆಲ್ಲ ಒಂದು ಭಾನಗಡಿಗೆ ಕೈ ಹಾಕಿದ್ದೆವು. ಮನೆಯಿಂದ ಬೆಂಕಿಪೆಟ್ಟಿಗೆಯನ್ನು ಕದ್ದುಕೊಂಡು ಬರುವುದು. ನಾವು ಶಾಲೆಗೆ ಬರುವಾಗ ಗುಡ್ಡೆತಲೆ ಎನ್ನುವ ಜಾಗವೊಂದಿದೆ. ಅಲ್ಲಿಗೆ ಬಂದು ಒಂದಿಷ್ಟು ಕರಡ ( ಒಣಗಿದ ಹುಲ್ಲು)ವನ್ನು ತಂದು ಗುಡ್ಡೆ ಮಾಡಿ ಬೆಂಕಿ ಹಾಕುವುದು ನಮ್ಮ ಪ್ಲಾನ್ ಆಗಿತ್ತು. ಇಂತಹ ಪ್ಲಾನಿನ ರೂವಾರಿ ಗಣಪತಿಯೇ ಆಗಿದ್ದ. ಅಷ್ಟೇ ಅಲ್ಲದೇ ಬೆಂಕಿಪೆಟ್ಟಿಗೆಯನ್ನು ಮೊದಲು ಕದ್ದು ತಂದವನೂ ಅವನೇ, ಕರಡ ಕಿತ್ತು ತಂದು ಬೆಂಕಿ ಹಾಕಿದ್ದೂ ಅವನೇ. ಮೂರ್ನಾಲ್ಕು ದಿನ ಈ ಕೆಲಸವನ್ನು ನಾವೆಲ್ಲ ಸಾಂಗವಾಗಿ ನೆರವೇರಿಸಿದ್ದೆವು. ಆದರೆ ಅದೊಂದು ದಿನ ಬೆಂಕಿಪೆಟ್ಟಿಗೆಯನ್ನು ಕದ್ದು ತರುವ ಪಾಳಿ ನನ್ನದಾಗಿತ್ತು. ನಾನು ಬೆಂಕಿ ಪೆಟ್ಟಿಗೆ ಕದ್ದು ತರುವಾಗ ನನ್ನ ಅಜ್ಜಿ ಮಂಕಾಳಿಯ ಕೈಗೆ ಸಿಕ್ಕಿಬಿದ್ದಿದ್ದೆ. ನಾನು ಏನೇ ಕೆಲಸ ಮಾಡಿದರೂ ಅದಕ್ಕೆ ಕಾಲು-ಬಾಲ ಸೇರಿಸಿ ಹಿಗ್ಗಿಸುವ ಪ್ರವೃತ್ತಿಯ ಅಜ್ಜಿ ಹುಯ್ಯಲಿಟ್ಟಿದ್ದಳು. ಮೊಮ್ಮಗ ಏನೋ ಭಾನಗಡಿಗೆ ತೊಡಗಿಕೊಂಡಿದ್ದಾನೆ ಎಂದಳು. ಅಪ್ಪ-ಚಿಕ್ಕಪ್ಪ ಎಲ್ಲರೂ ಬಂದು ತಲೆಗೆ 10ರಂತೆ ಏಟು ಬಿಗಿದಿದ್ದರು. ನಾನು ನಿಜ ಹೇಳಿದ್ದೆ. ನಾನು ನಿಜ ಹೇಳಿದ್ದು ಮಾತ್ರ ಅಜ್ಜಿಯ ಬಾಯಲ್ಲಿ `ಹುಡ್ರು ಅಡ್ಕಳ್ಳಿ, ಬ್ಯಾಣಕ್ಕೆ ಬೆಂಕಿ ಕೊಟ್ಟಿದ್ದ..' ಎಂದಾಗಿ ಬದಲಾಗಿತ್ತು. ನಾವು ಬಲಿಪಶುಗಳಾಗಿದ್ದೆವು.
        ನಾವು ಬೆಂಕಿ ಕೊಟ್ಟೆದ್ದೆವು ಎಂದು ಅಪಪ್ರಚಾರ ಮಾಡಿ ಯಶಸ್ವಿಯಾಗಿದ್ದ ಮಂಕಾಳಜ್ಜಿ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದ ಸಿ. ಎಂ. ಹೆಗಡೆಯವರ ಬಳಿ ವಿಷಯವನ್ನು ತಿಳಿಸಿಬಿಟ್ಟಿದ್ದಳು. ಸಿ. ಎಂ. ಹೆಗಡೆಯವರು ಶಾಲೆಗೆ ಬಂದವರೇ ನಮ್ಮೂರಿನಿಂದ ಬರುತ್ತಿದ್ದ ಎಲ್ಲರನ್ನೂ ಹಿಡಿದು ದನಕ್ಕೆ ಬಡಿದಹಾಗೆ ಬಡಿದು ಬಿಟ್ಟಿದ್ದರು. ಅಷ್ಟೇ ಅಲ್ಲ ಗಣಪತಿಗೆ ಚೋರ ಗುರು ಎಂದೂ ನನಗೆ ಚಂಡಾಲ ಶಿಷ್ಯ ಎಂದೂ ಹೆಸರನ್ನು ಇಟ್ಟುಬಿಟ್ಟಿದ್ದರು.
          ಸಿ. ಎಂ. ಹೆಗಡೆಯವರಿಂದ ನಾನು ಅನುಭವಿಸಿದ್ದು ಒಂದೆರಡಲ್ಲ ಬಿಡಿ. ಈಗಲೂ ಎಲ್ಲಾದರೂ ಸಿ. ಎಂ. ಹೆಗಡೆಯವರು ಎದುರಿಗೆ ಸಿಕ್ಕಾಗ ಕೇಳಬೇಕು ಎನ್ನಿಸುತ್ತದೆ. ನಾನೇನು ತಪ್ಪು ಮಾಡಿದ್ದೆ ಎಂದು ನನಗೆ ಸೊಕಾ ಸುಮ್ಮನೆ ಇಲ್ಲ ಸಲ್ಲದ ಹೆಸರನ್ನು ಇಟ್ಟಿರಿ? ಯಾಕೆ ಅಪಪ್ರಚಾರ ಮಾಡಿದಿರಿ? ಯಾಕೆ ವಿನಾಕಾರಣ ಹೊಡೆಯುತ್ತಿದ್ದಿರಿ? ಯಾಕೆ ಹುಳುಕು ಮಾಡುತ್ತಿದ್ದಿರಿ? ಸುಳ್ಳು ಸುಳ್ಳೆ ಹೇಳಿ ನನ್ನನ್ನು ತೇಜೋವಧೆ ಮಾಡುತ್ತಿದ್ದಿರಿ ಎಂದು ಕೇಳಬೇಕು ಎನ್ನಿಸುತ್ತದೆ. ಆದರೆ ಸುಮ್ಮನಾಗುತ್ತೇನೆ. ಆದರೆ ನನ್ನ ಅಮ್ಮ ಮಾತ್ರ ಆಗಾಗ ಹೇಳುತ್ತಿರುತ್ತಾಳೆ `ತಮಾ ಸಿ. ಎಂ. ಹೆಗಡೆಯವರಿಗೆ ನಾನು ಅನ್ನ ಹಾಕಿದ್ದೆ. ಆ ಋಣದ ಪರಿಜ್ಞಾನವೂ ಇಲ್ಲದಂತೆ ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ನಿನ್ನ ಮೇಲೆ ಸಿಟ್ಟು ಮಾಡಿದರು. ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ಶಾಲೆಯಲ್ಲಿ ಹಾಗೆ ಮಾಡುತ್ತಿದ್ದರು.' ಎಂದು. ನಾನು ಈಗಲೂ ಸಿ. ಎಂ. ಹೆಗಡೆಯರವ ತಪ್ಪಿಲ್ಲವೇನೋ ಎಂದುಕೊಂಡು ಸುಮ್ಮನಾಗುತ್ತಿದ್ದೇನೆ ಅಷ್ಟೇ. ಆದರೂ ಆಗೀಗ ನೆನಪಾದರೆ ಮಾತ್ರ ಸಿಟ್ಟು ಬರುತ್ತದೆ.
             ನಾನು ಏಳನೇ ಕ್ಲಾಸಿನಲ್ಲಿದ್ದಾಗ ಸಿ. ಎಂ. ಹೆಗಡೆರಿಗೆ ಮದುವೆಯಾಯಿತು. ನಮ್ಮ ಮನೆಯ ಪಕ್ಕದ ಮನೆಗೆ ಅವರು ದೂರದಿಂದ ನೆಂಟರೂ ಆದರು. ನೆಂಟಸ್ತನದ ಪರಿಣಾಮ ಒಂದಿಷ್ಟು ದಿನ ಅವರ ಮನೆಗೂ ಊಟಕ್ಕೆ ಹೋಗುತ್ತಿದ್ದರು. ಆ ದಿನಗಳಲ್ಲಿ ನಮ್ಮ ಮನೆ ಸಂಪೂರ್ಣ ಹಿಸೆಯಾಗಿತ್ತು ಬಿಡಿ. ಹೀಗಿದ್ದಾಗ ಒಂದು ದಿನ ನಮ್ಮ ಮನೆಯಲ್ಲಿಯೇ ಇದ್ದ ಬೆಳ್ಳ ಎಂಬ ನಾಯಿಯೊಂದು ಮನೆ ಹಿಂದಿನ ಹಲಸಿನ ಮರಕ್ಕೆ ಬಂದಿದ್ದ ಮಂಗವೊಂದನ್ನು ಕ್ಯಾಚ್ ಹಿಡಿದಿತ್ತು. ಅನಾಮತ್ತು 6-8 ತಾಸುಗಳ ಕಾಲ ನಾಯಿಗೂ ಮಂಗನಿಗೂ ಕಾದಾಟ ನಡೆದಿತ್ತು. ಕೊನೆಗೊಮ್ಮೆ ಬೆಳ್ಳ ನಾಯಿ ಮಂಗವನ್ನು ಕೊಂದು ಹಾಕಿ ತಿಂದಿತ್ತು. ಈ ಲಡಾಯಿಯಲ್ಲಿ ಬೆಳ್ಳನ ಕಣ್ಣು, ದೇಹ ಎಲ್ಲ ಮಂಗನ ಗೀರಿಗೆ ಸಿಗಿದು ಹೋಗಿತ್ತು. ನಾಯಿ ಹಾಗೂ ಮಂಗನ ಈ ಲಡಾಯಿ ನಮಗೆಲ್ಲ ಬಹಳ ವಿಶೇಷ ಸಂಗತಿಯಾಗಿತ್ತು. ನಾನಂತೂ ಕುಣಿದು ಕುಪ್ಪಳಿಸುತ್ತ ನೋಡಿದ್ದೆ. ನಮ್ಮೂರಿಗರಿಗೆಲ್ಲ ನಾನೇ ವಿಷಯವನ್ನೂ ಹೇಳಿದ್ದೆ. ಅದೇ ಪ್ರಕಾರವಾಗಿ ನಮ್ಮ ಪಕ್ಕದ ಮನೆಗೂ ಹೋಗಿ ಹೇಳಿದ್ದೆ. ಆ ಮನೆಯಲ್ಲಿ ಊಟಕ್ಕೆಂದು ಬಂದಿದ್ದ ಸಿ. ಎಂ. ಹೆಗಡೆಯವರು ಜಸ್ಟ್ ಮಲಗಿದ್ದರು. ನಾನು ಹೋಗಿ ಹೇಳಿದ ತಕ್ಷಣ `ಎಂತಾ.. ನಾಯಿ ಮಂಗನ್ನ ಹಿಡದು ಬಿಟ್ಚಾ.. ಬ್ಯಾರೆ ಎಂತಾ ಹಿಡದ್ದಿಲ್ಯಾ? ಥೋ... ಆ ಮಂಗನ್ನ ಬದಲು ನಿನ್ನನ್ನಾದರೂ ಹಿಡಿದಿದ್ದರೆ ಚನ್ನಾಗಿತ್ತು..' ಎಂದಿದ್ದು ಮಾತ್ರ ಇಂದಿಗೂ ನೆನಪಿನಲ್ಲಿದೆ ನೋಡಿ.
            ನಮ್ಮ ಮನೆಯಲ್ಲಿ ಹಿಸೆ ಪಂಚಾಯ್ತಿಗೆ ಜೋರಾದಂತೆಲ್ಲ ಮಾಸ್ತರ್ರು ನಮ್ಮ ಮನೆಗೆ ಊಟಕ್ಕೆ ಬರುವುದನ್ನು ನಿಲ್ಲಿಸಿದ್ದರು. ಕಲ್ಮನೆಯ ಪ್ರಕಾಶಣ್ಣನ ಮನೆಗೆ ಊಟಕ್ಕೆ ಹೋಗಲು ಆರಂಭಿಸಿದ್ದರು. ಆದರೆ ನನ್ನ ವಿರುದ್ಧದ ಅಪಪ್ರಚಾರ, ಸಿಟ್ಟು, ಹೊಡೆತ, ನನ್ನನ್ನು ಅಕ್ಷರಶಃ ನಾಯಯನ್ನು ಕಂಡ ಹಾಗೆ ಮಾಡುವುದೆಲ್ಲ ಜೋರಾಗಿಯೇ ಇತ್ತು. ಹರೀಶ ನಾಯ್ಕರು, ಗಡ್ಕರ್ ಮಾಸ್ತರ್ರು ಹಾಗೂ ತಾರಕ್ಕೋರ ಕಾರಣದಿಂದ ನಾನು ಶಾಲೆಯಲ್ಲಿ ಹೇಗೋ ಬಚಾವಾಗಿದ್ದೆ ಎನ್ನುವುದು ಮಾತ್ರ ಸತ್ಯಸ್ಯ ಸತ್ಯ ನೋಡಿ.
            ನನಗೆ ಮಾತ್ರ ಹೀಗೆ ಮಾಡಿದರಾ ಸಿ. ಎಂ. ಹೆಗಡೆಯವರು ಎಂದುಕೊಂಡಿದ್ದೆ. ಆದರೆ ನನ್ನ ತಂಗಿಗೂ ಇದೇ ರೀತಿ ಮಾಡಿದ್ದರು ಎನ್ನುವುದು ಕೇಳಿದಾಗ ಮಾತ್ರ ಅವರ ಮೇಲಿನ ಮುನಿಸು ಜಾಸ್ತಿಯಾಗಿತ್ತು ನೋಡಿ. ಶಾಲೆಯಲ್ಲಿ ಪ್ರತಿದಿನ ಮುಂಜಾನೆ ಕಸ ಹೆಕ್ಕುವುದು ರೂಢಿ. ಒಂದಿನ ತಂಗಿ ಕಸ ಹೆಕ್ಕಿ ಗುಡ್ಡೆ ಹಾಕಿದ್ದಳಂತೆ. ನಮ್ಮ ಶಾಲೆಯ ಹೊರ ಆವರಣದಲ್ಲಿ ದೊಡ್ಡ ಕಟ್ಟೆಯ ಬಾವಿಯೊಂದಿದೆ. ಬಾವಿಯ ಪಕ್ಕದಲ್ಲಿರುವ ಆಕೇಶಿಯಾ ಮರಗಳು ಇದ್ದು, ಅದರ ಎಲೆಗಳು ಸದಾ ಬಾವಿಗೆ ಬೀಳುತ್ತವೆ. ಒಂದಿನ ಬೆಳಿಗ್ಗೆ ಬಂದವರೇ ತಂಗಿಯ ಬಳಿ ಜೋರು ಸಿಟ್ಟು ಮಾಡುತ್ತ `ಬಾವಿಗೆ ಕಸ ಹಾಕ್ತೀಯಾ.? ನೋಡು ನೀನು ಕಸ ಹಾಕಿದ್ದಕ್ಕೆ ಬಾವಿಯ ತುಂಬೆಲ್ಲ ಅಷ್ಟು ಕಸಗಳು ಬಿದ್ದಿವೆ.' ಎಂದು ಕೂಗಾಡಿದವರೇ ಶೆಳಕೆಯಿಂದ ಹೊಡೆತಗಳ ಮೇಲೆ ಹೊಡೆತ ಕೊಟ್ಟರು. ತಂಗಿಗೆ ಮಾತ್ರ ಯಾಕೆ ಹೊಡೆಯುತ್ತಿದ್ದಾರೆ? ಏನಾಗಿದೆ ಎನ್ನುವುದು ಗೊತ್ತಿರಲೇ ಇಲ್ಲ. ನಾನಲ್ಲ ಎಂದು ಹೇಳಿದರೂ ತಂಗಿಯ ಮಾತನ್ನು ಅವರು ಕೇಳಲೇ ಇಲ್ಲ. ತಂಗಿಯಂತೂ ಮುಂದಿನ ದಿನಗಳಲ್ಲಿ ಸಿ. ಎಂ. ಹೆಗಡೇರೆಂದರೆ ಕಿಡಿ ಕಾರುತ್ತಿದ್ದಳು. ಕೊಸ ಕೊಸ ಮಾಸ್ತರ್ರು ಎಂದೂ ಅಡ್ಡ ಹೆಸರನ್ನು ಇಟ್ಟು ಬಿಟ್ಟಿದ್ದಳು. ಅದಕ್ಕೆ ಪ್ರತಿಯಾಗಿ ಮಾಸ್ತರ್ರೂ ಚಿಕ್ಕ ಚಿಕ್ಕ ವಿಷಯಗಳಿಗೆ ಕೊಂಕನ್ನು ಹುಡುಕುತ್ತ ಬೈಯುತ್ತಿದ್ದರು. ಇಂತಹ ಮಾಸ್ತರ್ರು ಇದೀಗ ನಮ್ಮ ಶಾಲೆಯಿಂದ ವರ್ಗವಾಗಿ ಬೇರೆಲ್ಲೋ ಕೆಲಸ ಮಾಡುತ್ತಿದ್ದಾರೆ.
           ನನ್ನ ವಿದ್ಯಾರ್ಥಿ ಜೀವನದಲ್ಲಿ ಮ್ಯಾಕ್ಸಿಮಮ್ ನೋವಿಗೆ ಕಾರಣವಾದವರು ಸಿ. ಎಂ.ಹೆಗಡೆಯವರು ಎಂದರೆ ತಪ್ಪಾಗಲಿಕ್ಕಿಲ್ಲ. ಜಿ. ಎಸ್. ಭಟ್ಟರು ಹೊಡೆಯುತ್ತಿದ್ದರು. ಬೇಜಾರಿರಲಿಲ್ಲ. ತಾರಕ್ಕೋರ ಪ್ರೀತಿ, ಗಡ್ಕರ್ ಮಾಸ್ತರ್ರ ಅಕ್ಕರೆಯೆಲ್ಲ ಇಷ್ಟವಾಗುತ್ತಿತ್ತು. ಆದರೆ ಸಿ. ಎಂ. ಹೆಗಡೆಯವರು ಚಿಕ್ಕಪ್ಪಂದಿರ ಮಾತು ಕಟ್ಟಿಕೊಂಡು ನನ್ನ ಮೇಲೆ ವಿನಾಕಾರಣ ಸಿಟ್ಟು ಮಾಡಿದರಲ್ಲ ಎನ್ನುವುದು ಮಾತ್ರ ಈಗಲೂ ಕಾಡುತ್ತಿದೆ. ಮಾತು ಮಾತಿಗೂ `ನಿನ್ ಕೈಲಿ ಎಂತದೂ ಆಗ್ತಿಲ್ಲೆ.. ಸುಮ್ಮಂಗ್ ತ್ವಾಟ ಗದ್ದೆ ನೋಡ್ಕಂಡ್ ಇರಾ..' ಎನ್ನುತ್ತ ಹಂಗಿಸುತ್ತಿದ್ದ, ಹಿಯಾಳಿಸುತ್ತಿದ್ದ ಮಾತುಗಳೇ ನೆನಪಿಗೆ ಬರುತ್ತವೆ. ಬಹುಶಃ ಈ ಎಲ್ಲ ಕಾರಣಗಳು ನನ್ನ ಜೀವನದ ಮೇಲೆ ಬಹು ದೊಡ್ಡ ಪ್ರಭಾವವನ್ನೇ ಬೀರಿದವೇನೋ. ನನ್ನಲ್ಲಿ ಅದೇನೋ ಒಂದು ಜಿದ್ದು ಬೆಳೆಯಲು ಸಿ. ಎಂ. ಹೆಗಡೆಯವರೇ ಕಾರಣರಾದರೇನೋ ಅನ್ನಿಸುತ್ತಿದೆ. ಇಂತಹ ಮಾಸ್ತರ್ರು ಚನ್ನಾಗಿರಲಿ. ಆದರೆ ನನಗೆ ಮಾಡಿದರೆ ಮತ್ಯಾರಿಗೂ ಮಾಡದೇ ಇರಲಿ.

(ಮುಂದುವರಿಯುತ್ತದೆ)

ಅವಳು

ಅವಳು...
ನುಡಿ ಮುತ್ತಾಗಿದ್ದಳು
ಸ್ಪೂರ್ತಿಯ ತೊತ್ತಾಗಿದ್ದಳು

ನಲಿವು ನೀಡುತ್ತ
ಮನಸಿನಲಿ ಮೆರೆಯುತ್ತ
ಕಾಣದಲೇ ಮಾಯವಾದಳು ||

ಅವಳು...
ತುಟಿಯ ನಗುವಾಗಿದ್ದಳು
ಜೊತೆಗೆ ಮಗುವಾಗಿದ್ದಳು

ಏನೇನೋ ಹುಡುಕುತ್ತ
ಎಲ್ಲೆಲ್ಲೊ ಅಲೆಯುತ್ತ
ಕತ್ತಲಲಿ ಕರಗಿ ಹೋದಳು ||

ಅವಳು...
ಒಂದು ಹಾಡಾಗಿದ್ದಳು
ಸಂತಸದ ಗೂಡಾಗಿದ್ದಳು

ಎಲ್ಲೆಲ್ಲೋ ಎಡವುತ್ತ
ಏನೇನೋ ತಡವುತ್ತ
ಕಣ್ಣಂಚಿನಿಂದ ಮರೆಯಾದಳು ||

ಅವಳು...
ಹೂವಂತ ಮನಸಾಗಿದ್ದಳು
ಪ್ರೀತಿಯನು ಅರಿತಿದ್ದಳು

ಮನಸನ್ನು ತಿಳಿಯುತ್ತ
ನನಸನ್ನು ಬಯಸುತ್ತ
ಕೊನೆಗೊಮ್ಮೆ ಆಕೆ ಕನಸಾದಳು ||

ಅವಳು...
ಒಲವ ಸವಿಯಾಗಿದ್ದಳು
ಜೊತೆಗೆ ಕವಿಯಾಗಿದ್ದಳು

ಹೊಸ ಹಾಡ ಕಟ್ಟುತ್ತ
ಹಳೆ ನೆನಪ ಮೆರೆಸುತ್ತ
ಕೊನೆಗೊಮ್ಮೆ ಎಲ್ಲೂ ಕಾಣದಾದಳು ||

ಅವಳು...
ಜೀವದ ಸೆಲೆಯಾಗಿದ್ದಳು
ಕರುಣೆಯ ಬಲೆಯಾಗಿದ್ದಳು

ಪ್ರೀತಿ ಬೆಲೆ ತಿಳಿಸುತ್ತ
ಹೊಸ ಅಲೆಯ ಬೆಳೆಸುತ್ತ
ಬೇರೆಲ್ಲೋ ನೆಲೆಯ ಕಂಡುಕೊಂಡಳು ||

***

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 21-11-2005ರಂದು)

Saturday, August 1, 2015

ಮಾಸ್ತರ್ ಮಂದಿ-4

ರಮೇಶ ಗಡ್ಕರ್ :
                  ಆರ್ ವೈ ಗಡ್ಕರ್ ಮಾಸ್ತರ್ರ ಬಗ್ಗೆ ಏನಂತ ಹೇಳುವುದು, ಏನಂತ ಬಿಡುವುದು? ರಮೇಶ ಗಡ್ಕರ್ ಎಂಬ ಹೆಸರಿನ ಮಾಸ್ತರ್ರು ಜಿ. ಎಸ್. ಭಟ್ಟರು ಅಪಘಾತತದಲ್ಲಿ ತೀರಿಕೊಂಡ ತರುವಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡ್ಸಿಂಗೆ, ಅಡ್ಕಳ್ಳಿಗೆ ಬಂದವರು. ಶಾಲೆಗೆ ಪೂರ್ಣಾವದಿ ಹೆಡ್ಮಾಸ್ತರ್ರಾಗಿ ಬಂದವರೆಂದರೆ ಇವರೇ ಮೊದಲಿಗರೇನೋ. ಗಡ್ಕರ್ ಮಾಸ್ತರ್ ನಮ್ಮ ಶಾಲೆಗೆ ಬರುವಾಗ ಶಾಲೆಗೆ ಪ್ರಮುಖವಾಗಿ ಇದ್ದುದು ಒಂದೇ ಕೋಣೆ. ಬಂದವರೇ ಶಾಲೆಗೆ ಇದ್ದ ಬಹುದೊಡ್ಡ ಕೋಣೆಯನ್ನು ಭಾಗ ಮಾಡಿ ಎರಡು ಕೋಣೆ ಮಾಡಿಸಿದರು. ಅಷ್ಟೇ ಅಲ್ಲ ಸಕ್ಕ ಪಕ್ಕ ಇನ್ನೂ ಎರಡು ಹೊಸ ಕೋಣೆಗಳನ್ನು ಕಟ್ಟಿಸಲು ಕಾರಣರಾದರು.
            ಗಡ್ಕರ್ ಮಾಸ್ತರ್ರು ಅಂದ ತಕ್ಷಣ ನನಗೆ ಪ್ರಮುಖವಾಗಿ ನೆನಪಾಗುವುದು ಅವರ ಹ್ಯಾಂಡ್ ರೈಟಿಂಗ್. ಬಹಳ ಸುಂದರವಾಗಿ ಬರೆಯುತ್ತಿದ್ದ ಅವರ ಅಕ್ಷರಗಳು ಇನ್ನೂ ನನ್ನ ಕಣ್ಣ ಮುಂದೆ ಇದೆ. ಶಾಲೆಯ ಎಲ್ಲ ಬೋರ್ಡುಗಳ ಮೇಲೂ ಸುಂದರ ಅಕ್ಷರಗಳನ್ನು ಬರೆದರು. ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ನುಡಿಮುತ್ತು, ಅಮರವಾಣಿ, ತಿಥಿ-ಪಂಚಾಂಗ, ಮ್ಯಾಪ್ ಇವುಗಳನ್ನೆಲ್ಲ ಅದೆಷ್ಟು ಸುಂದರವಾಗಿ ಬರೆದರೆಂದರೆ ಇಂದಿಗೂ ಅವುಗಳ ನೆನಪಾಗುತ್ತಿರುತ್ತವೆ. ಗಡ್ಕರ್ ಮಾಸ್ತರ್ರು ಎಂದ ಕೂಡಲೇ ನನಗೆ ಮೊಟ್ಟ ಮೊದಲು ನೆನಪಾಗುವುದು ಎಂದರೆ ಒಂದು ದಿನ ಶಾಲೆಯಲ್ಲಿ ಪ್ರಾರ್ಥನೆ ಮುಗಿದ ತಕ್ಷಣ ಪ್ರತಿಯೊಬ್ಬರ ಎಣಿಕೆ ನಡೆಯುತ್ತಿತ್ತು. ಎತ್ತರ ಪ್ರಕಾರ ನಿಲ್ಲ ಬೇಕಿದ್ದವರು ಒಂದು, ಎರಡು, ಮೂರು ಎಂದು ಸರಣಿಯಲ್ಲಿ ಹೇಳಬೇಕಿತ್ತು. ನನ್ನ ಮುಂದೆ 10-15 ಕುಳ್ಳರು ನಿಂತಿದ್ದರು. ಅವರೆಲ್ಲ ಎಣಿಕೆ ಮುಗಿಸಿ ನನ್ನ ಬಳಿ ಬಂದಿತು. ಮಳೆ-ಗಾಳಿಯ ಸಮಯ. ನಾನು ಎಣಿಕೆ ಮಾಡುವುದನ್ನು ಬಿಟ್ಟು ದಿಕ್ಕು ನೋಡುತ್ತಿದ್ದೆ. ಭಾರಿ ಗಾಳಿ ಬೀಸುತ್ತಿತ್ತಲ್ಲ ಭೂತಪ್ಪನ ಕಟ್ಟೆಯ ಮಾವಿನಮರದ ಕೊಂಬೆಗಳು ಸಿಕ್ಕಾಪಟ್ಟೆ ಓಲಾಡುತ್ತಿದ್ದವು. ಅವನ್ನು ನೋಡುತ್ತ ಮರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂದು ಕಾಯುತ್ತ ನಿಂತಿದ್ದೆ. ಹಾಗೆ ನೋಡುತ್ತಿದ್ದವನು ನಾನು ನನ್ನ ಸಂಕ್ಯೆಯನ್ನು ಗಟ್ಟಿ ಹೇಳಲು ಮರೆತಿದ್ದೆ. ಗಡ್ಕರ್ ಮಾಸ್ತರ್ರು ಸೀದಾ ಹತ್ತಿರ ಬಂದವರೇ ನನ್ನ ಬುರ್ಡೆ ಮೇಲೆ ರಪ್ಪನೆ ಬಡಿದು ಎಲ್ಲಿ ನೋಡಾಕ್ ಹತ್ತೀಯೋ ಎಂದು ಗನಾಕೆ ಬೈದರು. ನಾನು ಒಮ್ಮೆ ಕುಮುಟಿ ಬಿದ್ದಿದ್ದೆ.
           ಆಮೇಲೆ ಐದನೇ ಕ್ಲಾಸಿಗೆ ಬಂದಾಗ ಮಾತ್ರ ಅವರ ಜೊತೆ ಹತ್ತಿರದಿಂದ ಒಡನಾಡುವ ಭಾಗ್ಯ ನನಗೆ ಸಿಕ್ಕಿತು. ಐದನೇ ಕ್ಲಾಸಿನಿಂದ ಏಳನೆತ್ತಿವರೆಗೆ ಗಡ್ಕರ ಮಾಸ್ತರ್ರೇ ನನಗೆ ಹಿಂದಿ ಕಲಿಸಿದವರು. `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ್ ತೇರಿ..' ಎಂಬ ಹಾಡನ್ನು ಗಡ್ಕರ್ ಮಾಸ್ತರ್ರು ತಲೆ ಹಾಗೂ ಕಾಲನ್ನು ಕುಣಿಸುತ್ತಾ ಹೇಳುತ್ತಿದ್ದರೆ ನಾವೆಲ್ಲ ತಲ್ಲೀನರಾಗುತ್ತಿದ್ದೆವು. ಯಾವ ಪರೀಕ್ಷೆಗಳಲ್ಲಿ ಅದೆಷ್ಟು ಮಾರ್ಕ್ಸ್ ಬೀಳುತ್ತಿತ್ತೋ ಗೊತ್ತಿಲ್ಲ. ಹಿಂದಿಯಲ್ಲಿ ಮಾತ್ರ 25ಕ್ಕೆ 20ರ ಮೇಲೆ ಪಕ್ಕಾ ಬೀಳುತ್ತಿತ್ತು. ಅಷ್ಟು ಚನ್ನಾಗಿ ಕಲಿಸುತ್ತಿದ್ದರು ಅವರು.
            ಗಡ್ಕರ್ ಮಾಸ್ತರ್ ಎಂದ ಕೂಡಲೇ ಅದೊಂದು ಘಟನೆ ನನ್ನ ಕಣ್ಣೆದುರು ಸದಾ ನೆನಪಿಗೆ ಬರುತ್ತದೆ. ಒಮ್ಮೆ ಹರೀಶ ಮಾಸ್ತರ್ರು ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅದ್ಯಾವುದೋ ಪ್ರಯೋಗವನ್ನು ಕೈಗೊಂಡಿದ್ದರು. ಗಂಧಕದ ನೀರನ್ನೋ ಅಥವಾ ಆಸಿಡ್ ಮಿಶ್ರಿತ ನೀರನ್ನೋ ಬಳಸಿ ವಿಜ್ಞಾನದ ಪ್ರಯೋಗ ಮಾಡಿದ್ದರು. ಆದರೆ ಪ್ರಯೋಗ ಮುಗಿಸಿದ ನಂತರ ಅದನ್ನು ಒಗೆಯುವುದನ್ನು ಬಿಟ್ಟು ಒಂದು ಚೊಂಬಿನಲ್ಲಿ ಹಾಕಿ ಹಾಗೇ ಇಟ್ಟಿದ್ದರು. ಗಡ್ಕರ್ ಮಾಸ್ತರ್ರು ಕವಳ ಹಾಕುತ್ತಿದ್ದರು. ಕವಳ ಹಾಕಿದ ನಂತರ ಬಾಯಿಯನ್ನು ತೊಳೆಯುವುದು ಅವರ ಹವ್ಯಾಸ. ಅವರು ಹಿಂದೆ ನೋಡಲಿಲ್ಲ ಮುಂದೆ ನೋಡಲಿಲ್ಲ. ಪ್ರಯೋಗಕ್ಕೆ ಬಳಕೆ ಮಾಡಿ ಹಾಗೇ ಇಟ್ಟಿದ್ದ ರಾಸಾಯನಿಕ ಮಿಶ್ರಿತ ನೀರನ್ನು ಬಾಯಿಗೆ ಹಾಕಿಯೇ ಬಿಟ್ಟರು. ಯಾಕೋ ನೀರು ಎಂದಿನಂತೆ ಇಲ್ಲವಲ್ಲ ಎಂದು ಅವರಿಗೆ ಅನ್ನಿಸಿತು. ತಕ್ಷಣ ತುಪ್ಪಿದರು. ಹರೀಶ ನಾಯ್ಕರೇ ನೀರು ಹಾಳಾಗಿದೆಯಾ? ಎಂದರು. ಆಗಲೇ ಹರೀಶ ನಾಯ್ಕರಿಗೆ ಅನುಮಾನ ಬಂದು ಯಾವ ನೀರು ಕುಡಿದಿದ್ದೀರಿ ಎಂದರು. ತಕ್ಷಣ ಗಡ್ಕರ್ ಮಾಸ್ತರ್ರು ವಿಷಯ ಹೇಳಿದ್ದರು. ಆಗ ಹೌಹಾರಿದ್ದ ಹರೀಶ ಮಾಸ್ತರ್ರು ರಾಸಾಯನಿಕ ಮಿಶ್ರಿತ ನೀರಿನ ವಿಷಯ ಹೇಳಿದ್ದರು.
             ಗಡ್ಕರಿ ಮಾಸ್ತರ್ರು ಬಾಯನ್ನು ಮುಕ್ಕಳಿಸಿದ್ದವರು ಒಂದು ಗುಟುಕನ್ನೂ ಕುಡಿದು ಬಿಟ್ಟಿದ್ದರಂತೆ. ಯಾವಾಗ ಹರೀಶ ಮಾಸ್ತರ್ರಿಂದ ರಾಸಾಯನಿಕ ವಿಷಯವನ್ನು ತಿಳಿದರೋ ಆಗ ಒಮ್ಮೆ ಕುಸಿದು ಕುಳಿತ ರಮೇಶ ಗಡ್ಕರ್ ಮಾಸ್ತರ್ರು ಅಳುವುದೊಂದು ಬಾಕಿ. ತಾರಕ್ಕೋರು, ಸಿ. ಎಂ. ಹೆಗಡೇರು ಹತ್ತಿರ ಬಂದು ಸಮಾಧಾನ ಹೇಳುತ್ತಿದ್ದರೂ ಕೇಳುವ ಮನಸ್ಸಿರಲಿಲ್ಲ. ಏನೋ ಆಯಿತು ಎಂದುಕೊಂಡರು. ತಕ್ಷಣವೇ ಅವರನ್ನು ಕಾನಸೂರಿನ ಬೆಳ್ಳೇಕೇರಿ ಡಾಕ್ಟರ್ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸುದೈವದಿಂದ ಗಡ್ಕರ್ ಮಾಸ್ತರ್ರಿಗೆ ಏನೂ ಆಗಿರಲಿಲ್ಲ. ಬಹುಶಃ ಈಗಿನ ಮಾಸ್ತರ್ರುಗಳಾದರೆ ಇದೇ ನೆಪ ಎಂದುಕೊಂಡು ವಾರಗಟ್ಟಲೆ ರಜಾ ಹಾಕುತ್ತಿದ್ದರೇನೋ. ಆದರೆ ಗಡ್ಕರ್ ಮಾಸ್ತರ್ರು ಹಾಗೆ ಮಾಡಲಿಲ್ಲ. ಆಸ್ಪತ್ರೆಯಿಂದ ಮತ್ತೆ ಶಾಲೆಗೆ ವಾಪಾಸು ಬಂದು ಪಾಠ ಕಲಿಸುವಲ್ಲಿ ನಿರತರಾಗಿದ್ದರು. ಮರುದಿನ ಗಡ್ಕರ್ ಮಾಸ್ತರ್ರನ್ನು ಶ್ಲಾಘಿಸಿ ಸಿರಸಿಯಿಂದ ಬರುವ `ಲೋಕಧ್ವನಿ' ಪತ್ರಿಕಯಲ್ಲಿ ವರದಿಯೊಂದು ಪ್ರಕಟಗೊಂಡಿತ್ತು.
             ಶಾಲೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾಲ್ಕು ತಂಡ ಮಾಡಿ ನಾಲ್ವರು ಮಾಸ್ತರ್ರು ಅವರನ್ನು ಹಂಚಿಕೊಂಡು ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದವರು ಗಡ್ಕರ್ ಮಾಸ್ತರ್ರು. ನಾನು ಗಡ್ಕರ್ ಮಾಸ್ತರ್ರ ತಂಡಕ್ಕೆ ಸೇರಿದ್ದೆ. ತಾರಕ್ಕೋರ ತಂಡಕ್ಕೆ ಸೆರಿದ್ದರೆ ಚನ್ನಾಗಿತ್ತು ಎನ್ನುವುದು ನನ್ನ ಮನದಾಳದ ಆಸೆಯಾಗಿದ್ದರೂ ಗಡ್ಕರ್ ಮಾಸ್ತರ್ ತಂಡಕ್ಕೆ ಸೇರಿದ್ದರಿಂದ ಬೇಜಾರೇನೂ ಆಗಿರಲಿಲ್ಲ.
            ಗಡ್ಕರ್ ಮಾಸ್ತರ್ ವಾಲೀಬಾಲ್ ಆಡುವ ರೀತಿ ನಮ್ಮೆಲ್ಲರಿಗೆ ತಮಾಷೆಯ ವಿಷಯವಾಗಿತ್ತು. ಸರ್ವೀಸ್ ಮಾಡುವಾಗ ಅವರು ಮಾಡುತ್ತಿದ್ದ ವಿಚಿತ್ರ ಆಕ್ಷನ್ ನಮ್ಮೆಲ್ಲರಲ್ಲಿ ನಗುವನ್ನು ಉಕ್ಕಿಸುತ್ತಿತ್ತು. ನಾವೆಲ್ಲರೂ ನೇರವಾಗಿ ನಿಂತುಕೊಂಡು ನೆಟ್ ದಾಟಿಸಿ ಸರ್ವೀಸ್ ಮಾಡುತ್ತಿದ್ದರೆ ಗಡ್ಕರ್ ಮಾಸ್ತರ್ ಮಾತ್ರ ನೆಟ್ ಗೆ ವಿರುದ್ಧ ದಿಕ್ಕಿನಲ್ಲಿ ತುದಿಗಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ರಪ್ಪನೆ ತಿರುಗಿ ಕುಪ್ಪಳಿಸಿದಂತೆ ಮಾಡಿ ಸರ್ವೀಸ್ ಮಾಡುತ್ತಿದ್ದರು. ವಾಲೀಬಾಲ್ ಸೀದಾ ನೆಟ್ ದಾಟಿ ರೊಯ್ಯಂನೆ ಬಂದು ಬೀಳುತ್ತಿತ್ತು. ಮೊದ ಮೊದಲು ಇದು ನಮ್ಮೆಲ್ಲರಿಗೆ ತಮಾಷೆಯನ್ನು ತಂದಿದ್ದರೂ ಕೊನೆ ಕೊನೆಗೆ ಇದೂ ಒಂದು ಆಟದ ತಂತ್ರ ಎನ್ನುವುದು ಅರಿವಾಗಿ ಹೆಮ್ಮೆಯುಂಟಾಗಿತ್ತು.
             ಗಡ್ಕರ್ ಮಾಸ್ತರ್ ಎಂದರೆ ಸಾಕು ನನಗೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿರುವುದು ಚೆಸ್. ನನಗೆ ಚೆಸ್ ಆಟವನ್ನು ಶಾಸ್ತ್ರೋಕ್ತವಾಗಿ ಕಲಿಸಿದವರು ಇವರೇ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಐದು ವರ್ಷದವನಿದ್ದಾಗ ಚಿಕ್ಕಪ್ಪ ಮಹೇಶ ನನಗೆ ಮೊದಲು ಚೆಸ್ ಕಲಿಸಿದ್ದ. ಆ ನಂತರ ಅಪ್ಪನ ಬಳಿ ಹರಪೆ ಬಿದ್ದು ನಾನು ಚೆಸ್ ಬೋರ್ಡನ್ನು ತಂದುಕೊಂಡಿದ್ದೆ. ಪುರಸೊತ್ತಾದಾಗಲೆಲ್ಲ ಅಮ್ಮನ ಜೊತೆ ಚೆಸ್ ಆಡುತ್ತಿದ್ದೆ. ಅಮ್ಮನನ್ನು ಚೆಸ್ಸಿನಲ್ಲಿ ಸೋಲಿಸುವ ಮೂಲಕ ನಮ್ಮನೆಯಲ್ಲಿ ಚೆಸ್ ಲೋಕದಲ್ಲಿ ನಾನೇ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದೆ. ಈ ವಿಷಯ ನನ್ನ ಕ್ಲಾಸ್ ಮೇಟ್ ಮಹೇಶ ಎಂಬಾತನಿಗೆ ತಿಳಿದುಹೋಗಿತ್ತು. ಆತ ಒಂದು ದಿನ ಶಾಲೆಯಲ್ಲಿ ಚೆಸ್ ಆಡಲು ನನ್ನನ್ನು ಕರೆಸಿ ಹೀನಾಯವಾಗಿ ಸೋಲಿಸಿದ್ದ. ಅಷ್ಟರ ನಂತರ ನನ್ನ ಚೆಸ್ ಪ್ರತಾಪದ ಪುಂಗಿ ಬಂದಾಗಿತ್ತು.
             ರಮೇಶ ಗಡ್ಕರ್ ಮಾಸ್ತರ್ ಜೊತೆಗೆ ಮುತ್ಮೂರ್ಡ್ ಶಾಲೆಗೆ ಕಲಿಸಲು ಹೋಗುವ ರಮೇಶ ನಾಯ್ಕರು ಖಾಯಂ ಆಗಿ ಚೆಸ್ ಆಡುತ್ತಿದ್ದರು. ರಮೇಶ ನಾಯ್ಕರು ಬರದೇ ಇದ್ದ ದಿನ ಮಹೇಶನ ಜೊತೆಗೆ ಚೆಸ್ ಆಡುತ್ತಿದ್ದರು. ಶಾಲೆಯಲ್ಲಿ ಆಟಕ್ಕೆ ಬಿಡುತ್ತಿದ್ದ ಸಮಯದಲ್ಲಿ ಮಹೇಶ ರಮೇಶ ನಾಯ್ಕರ ಜೊತೆ ಚೆಸ್ ಆಡಿದರೆ ಊಟದ ಗ್ಯಾಪಿನಲ್ಲಿ ರಮೇಶ ನಾಯ್ಕರು ಚೆಸ್ ಆಡುತ್ತಿದ್ದರು. ಯಾವುದೋ ಒಂದು ದಿನ ಮಹೇಶನಿಗೆ ಏನಾಗಿತ್ತೋ? ನನ್ನ ಮೇಲೆ ಸಿಟ್ಟು ಬಂದಿತ್ತೇನೋ. `ಸಾರ್.. ವಿನಯ ಭಯಂಕರ ಚೊಲೋ ಚೆಸ್ ಆಡ್ತಾನೆ..' ಎಂದುಬಿಟ್ಟಿದ್ದ. ಗಡ್ಕರ್ ಮಾಸ್ತರ್ `ಹೌದಾ.. ಬಾ ಆಡೋಣ..' ಎಂದಿದ್ದರು. ಅಂದಿನಿಂದ ನಾನು ಅವರ ಜೊತೆ ಖಾಯಂ ಚೆಸ್ ಆಡುವವನಾಗಿಬಿಟ್ಟೆ. ಪರಿಣಾಮವಾಗಿ ಆಟದ ವಿರಾಮಕ್ಕೆ ಆಡಲು ಹೋಗಲು ನನಗೆ ಆಗುತ್ತಲೇ ಇರಲಿಲ್ಲ. ಆ ಸಮಯದಲ್ಲಿ ಗಡ್ಕರ್ ಮಾಸ್ತರ್ ಜೊತೆ ಚೆಸ್ ಆಡಬೇಕಿತ್ತು. ಕೊನೆ ಕೊನೆಗೆ ನನಗೆ ಅಳು ಬರುವಷ್ಟು ಮಟ್ಟಕ್ಕೆ ಇದು ಮುಟ್ಟಿತ್ತು. ನನ್ನನ್ನು ಚೆಸ್ ಆಡಲು ತಗಲುಹಾಕಿದ ಮಹೇಶ ಮಾತ್ರ ಆಟಕ್ಕೆ ಹೋಗುತ್ತಿದ್ದನಷ್ಟೇ ಅಲ್ಲದೇ ಸಮಾ ಮಾಡಿದೆ ಎಂದು ನಗುತ್ತಿದ್ದ.
            ರಮೇಶ ಮಾಸ್ತರ್ರು ಚೆಸ್ ಆಡುವ ರೀತಿಯೂ ವಿಚಿತ್ರವಾಗಿತ್ತು. ಚೆಸ್ ಆಡುವ ಸಂದರ್ಭದಲ್ಲಿ ಅವರು ಯಾವಾಗಲೂ ಕಪ್ಪು ಕಾಯಿಗಳನ್ನೇ ಇಟ್ಟುಕೊಳ್ಳುತ್ತಿದ್ದರು. ನಾನು ಯಾವಾಗಲೂ ಬಿಳಿಯಕಾಯಿಯನ್ನು ಇಟ್ಟುಕೊಳ್ಳಬೇಕಿತ್ತಲ್ಲದೇ ನಿಯಮದ ಪ್ರಕಾರ ನಾನೇ ಆಟವನ್ನು ಆರಂಭಿಸಬೇಕಿತ್ತು. ಬಹಳ ಚನ್ನಾಗಿ ಆಡುತ್ತಿದ್ದ ರಮೇಶ ಗಡ್ಕರ್ ಆಟದ ಎದುರು ಸೋಲೆಂಬುದು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಿರುವಾಗ ಒಂದು ದಿನ ಆಲೋಚನೆಯೊಂದು ಬಂದಿತು. ಆಲೋಚನೆ ಎನ್ನುವುದಕ್ಕಿಂತ ಬೇಸರ ಎಂದರೆ ಉತ್ತಮ. ದಿನಾ ಬಿಳಿಯ ಕಾಯಿಯಲ್ಲಿ ಚದುರಂಗವನ್ನು ಆಡಿ ಆಡಿ ಬೇಸರವಾಗಿ ಅದೊಂದು ದಿನ ಕಪ್ಪು ಕಾಯಿಯನ್ನು ನನಗೆ ಕೊಡಿ ಎಂದರೆ. ಗಡ್ಕರ್ ಮಾಸ್ತರ್ ಒಪ್ಪಲಿಲ್ಲ. ಕೊನೆಗೆ ಹರಪೆ ಬಿದ್ದು ಕಪ್ಪು ಕಾಯಿ ಪಡೆದುಕೊಂಡೆ. ವಿಚಿತ್ರವೆಂದರೆ ಆ ದಿನ ನಾನು ಪಂದ್ಯಗಳನ್ನು ಗೆದ್ದೆ. ಒಂದಾದ ಮೇಲೆ ಒಂದರಂತೆ ಗೆದ್ದೆ. ಆ ದಿನ ರಮೇಶ ಮಾಸ್ತರ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಪಾಠದ ಸಮಯದಲ್ಲಿ ನನಗೆ ಹಿಡಿದು ಬಡಿದೂ ಬಿಟ್ಟಿದ್ದರು. ಕೊನೆಗೆ ಗೊತ್ತಾಗದ್ದೆಂದರೆ ರಮೇಶ ಮಾಸ್ತರ್ರ ವೀಕ್ ನೆಸ್ ಕಪ್ಪು ಕಾಯಿಯಲ್ಲಿತ್ತು. ಕಪ್ಪು ಕಾಯಿಯ ಗಾಢ ಬಣ್ಣ ಎದ್ದು ಕಾಣುತ್ತಿದ್ದ ಕಾರಣದಿಂದಾಗಿ ಅವರು ಯಾವಾಗಲೂ ಅದೇ ಕಾಯಿಯನ್ನು ಇಟ್ಟುಕೊಳ್ಳುತ್ತಿದ್ದರು. ಅಪ್ಪಿತಪ್ಪಿ ಬಿಳಿ ಕಾಯಿಯನ್ನು ಇಟ್ಟುಕೊಂಡರೋ ಅವರ ದೃಷ್ಟಿದೋಷದ ಕಾರಣ ಗೊಂದಲ ಪಟ್ಟುಕೊಂಡು ಪಂದ್ಯ ಸೋಲುತ್ತಿದ್ದರು. ರಮೇಶ ಮಾಸ್ತರ್ರ ಈ ಗೊಂದಲವನ್ನು ಮಹೇಶನ ಬಳಿಗೆ ಯಾವಾಗ ಹೇಳಿದೆನೋ ಆ ದಿನದಿಂದ ಮಹೇಶ ಮತ್ತೆ ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡಲು ತೊಡಗಿದ್ದ ಎನ್ನುವುದು ವಿಶೇಷವಾಗಿತ್ತು.
           ಆರ್. ವೈ. ಗಡ್ಕರ್ ಮಾಸ್ತರ್ ಚೆಸ್ ಆಡುವಾಗ ಸಾಕಷ್ಟು ತಮಾಷೆಯನ್ನೂ ಮಾಡುತ್ತಿದ್ದರು. ಚೆಸ್ ಆಟದ ಕುದುರೆಗಳನ್ನು ನಮ್ಮೂರಿನ ಕಡೆಗೆ ಮುಖ ಮಾಡಿ ನಿಲ್ಲಿಸಿ `ನೋಡೋ ವಿನಯಾ.. ನನ್ ಕುದುರೆ ನಿಮ್ಮೂರ್ ಕಡೆ ಮುಖ ಮಾಡೈತಿ. ಗ್ಯಾರಂಟಿ ನಿನ್ ಸೋಲ್ಸಿ ನಿಮ್ಮೂರಿಗೆ ಹೊತ್ಕಂಡ್ ಹೊಕ್ಕೈತಿ..' ಎನ್ನುತ್ತಿದ್ದರು. ಇಂತಹ ಮಾಸ್ತರ್ ಜೊತೆ ಚೆಸ್ ಆಡಿದ ಕಾರಣದಿಂದಲೇ ನಾನು ಕೊನೆಗೆ ನನ್ನ ಕಾಲೇಜು ಬದುಕಿನಲ್ಲಿ ಚೆಸ್ ಟೀಂ ಕ್ಯಾಪ್ಟನ್ ಆಗಿದ್ದೆ. ಅಷ್ಟೇ ಅಲ್ಲದೇ ಕೊನೆಗೊಂದು ದಿನ ಯುನಿವರ್ಸಿಟಿ ಬ್ಲೂ ಆಗಿಯೂ ಹೊರಹೊಮ್ಮಿದ್ದೆ. ಇಂತಹದ್ದಕ್ಕೆ ಕಾರಣವಾದ ಗಡ್ಕರ್ ಮಾಸ್ತರ್ರಿಗೆ ಸಲಾಂ.
              ನಾನು 7ನೇ ಕ್ಲಾಸ್ ಪಾಸಾಗಿ ಬರುವ ವೇಳೆಗೆ ಟಿಸಿ ತರಬೇಕಿತ್ತಲ್ಲ ಆಗ ಶಾಲಾಭಿವೃದ್ಧಿ ನಿಧಿಗಾಗಿ 100 ರು. ಪಡೆದುಕೊಂಡಿದ್ದು ಇನ್ನೂ ನೆನಪಿದೆ. ತೋಂಡಿ ಪರೀಕ್ಷೆಯಲ್ಲಿ ಅಪರೂಪಕ್ಕೆಂಬಂತೆ ಎಲ್ಲರಿಗಿಂತ ಜಾಸ್ತಿ ಮಾರ್ಕ್ಸ್ ಪಡೆದುಕೊಂಡಾಗ ಬುರ್ಡೆಗೆ ಒಂದೇಟು ಕೊಟ್ಟು `ಯಾವಾಗ್ಲೂ ಹಿಂಗೆ ಓದಾಕ್ ಏನಾಕೈತ್ಲೇ ನಿಂಗೆ..' ಎಂದು ಬೈದಿದ್ದೂ ನೆನಪಿನಲ್ಲಿದೆ. ಇಂತಹ ಗಡ್ಕರ್ ಮಾಸ್ತರ್ರನ್ನು ನಾನು ಹೆಚ್ಚೂ ಕಡಿಮೆ ಮರೆತೇ ಬಿಟ್ಟಿದ್ದೆ. ತೀರಾ ಇತ್ತೀಚೆಗೆ ಹೊನ್ನಾವರದ ಬಿಇಒ ಕಚೇರಿಯಲ್ಲಿ ಯಾವುದೋ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ನಿವೃತ್ತಿ ಹೊಂದಿದರು ಎನ್ನುವ ಸುದ್ದಿಯನ್ನು ಕೇಳಿದಾಗ ಮಾತ್ರ ಮನಸ್ಸು ಕಲ್ಲವಿಲಗೊಂಡಿತ್ತು. ಅಷ್ಟೇ ಅಲ್ಲದೇ ನನ್ನ ಪ್ರಾಥಮಿಕ ಶಾಲಾ ದಿನಗಳು, ಗಡ್ಕರ್ ಮಾಸ್ತರ್ ಜೊತೆಗಿನ ಒಡನಾಟ ನೆನಪಾಗಿತ್ತು. ಇಂತಹ ಗುರುಗಳನ್ನು ನಾನು ಹೇಗೆ ಮರೆಯಲಿ?

(ಮುಂದುವರಿಯುತ್ತದೆ)