Monday, October 27, 2014

ಮುರೇಗಾರ್ ಸಮಸ್ಯೆಗೆ ಮುಕ್ತಿ ಎಂದು?

(ಮುರೇಗಾರ್ ಜಲಪಾತ)

          ಶಿರಸಿ ತಾಲೂಕಿನ ಸಾಲ್ಕಣಿ ಗ್ರಾ.ಪಂ ವ್ಯಾಪ್ತಿಯ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಅಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಈ ಊರುಗಳನ್ನು ಬಾಧಿಸುತ್ತಿದೆ.
ಶಿರಸಿಯನ್ನು ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಎಂದು ಕರೆಯಲಾಗುತ್ತದೆ. ಈ ತಾಲೂಕಿನ ಸಾಲ್ಕಣ ಪಂಚಾಯತ ವ್ಯಾಪ್ತಿಯಲ್ಲಿರುವ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಮರ್ಪಕ ರಸ್ತೆ ಸಂಚಾರದಿಂದ ಬವಣೆ ಎದುರಿಸುವಂತಾಗಿದೆ. ಮುರೇಗಾರ್, ಹುಡ್ಲೇಜಡ್ಡಿ, ದುಗ್ಗುಮನೆ, ಶಿರ್ಲಬೈಲ್, ಮಳ್ಳಿಕೈ ಈ ಮುಂತಾದ ಊರುಗಳಿಗೆ ತೆರಳುವ ರಸ್ತೆ ತೀವ್ರವಾಗಿ ಹಾಳಾಗಿದ್ದು ಸಂಚಾರ ಅಸಾಧ್ಯ ಎನ್ನುವಂತಾಗಿದೆ.
ಶಿರಸಿಯಿಂದ ಸಾಲ್ಕಣಿಗೆ ತೆರಳುವ ಮುಖ್ಯ ರಸ್ತೆಯಿಂದ 5 ಕಿ.ಮಿ ಅಂತರದಲ್ಲಿ ಈ ಎಲ್ಲ ಊರುಗಳಿವೆ. ಈ ಊರಿಗೆ ತೆರಳಲು ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಡಾಂಬರು ರಸ್ತೆ ಈಗಾಗಲೇ ಕಿತ್ತು ಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ಮಾರ್ಗದಲ್ಲಿ ಸಂಚಾರ ಮಾಡುವವರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಈ ಮಾರ್ಗದಲ್ಲಿ ಸಿಗುವ ಘಟ್ಟ ಪ್ರದೇಶದಲ್ಲಂತೂ ಡಾಂಬರು ರಸ್ತೆಯನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು ಯಾವ ಕ್ಷಣದಲ್ಲಿ ವಾಹನವನ್ನು ಪಂಚರ್ ಮಾಡುತ್ತದೆಯೋ ಎನ್ನುವ ಭಯದಿಂದಲೇ ಸಾಗಬೇಕಾಗಿದೆ. ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ. ಹೊಂಡದ ಆಳವನ್ನರಿಯೇ ಮುಂದೆ ಸಾಗುವವರು ಬಿದ್ದ ಉದಾಹರಣೆಗಳೂ ಇದೆ.
ಈ ರಸ್ತೆಯನ್ನು 2004ರಿಂದ 2006ರ ಅವಧಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಿದ ದಶಕಗಳು ಕಳೆಯುವಲ್ಲಿಯೇ ಸಂಪೂರ್ಣ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ತೋರಿಸುತ್ತದೆ. ಈ ವರ್ಷ ಈ ರಸ್ತೆ ಮರುಡಾಂಬರೀಕರಣಕ್ಕಾಗಿ 1.5 ಲಕ್ಷ ರು. ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದಾಗಿ 200ಕ್ಕೂ ಅಧಿಕ ಮನೆಗಳ 3000ಕ್ಕೂ ಹೆಚ್ಚಿನ ಜನರು ಹಾಳಾದ ರಸ್ತೆಯಲ್ಲಿ ಪ್ರಯಾಸದಿಂದ ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣ ಮಾಡಲಾಗಿತ್ತು. ಇದಕ್ಕಾಗಿ 1.20 ಲಕ್ಷ ರು. ವೆಚ್ಚದಲ್ಲಿ ಅಲ್ಲಲ್ಲಿ ಅಗಲೀಕರಣವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಕೆಲವು ಕಡೆಗಳಲ್ಲಂತೂ ರಸ್ತೆಯ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಕಾಲುವೆಗಳು ಉಂಟಾಗಿವೆ. ದುಗ್ಗುಮನೆ ಸನಿಹದಲ್ಲಿ ಮೋರಿಯೊಂದರ ಪಾಶ್ರ್ವ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮುರೇಗಾರ್ ಜಲಪಾತವನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರು ಈ ಮಾರ್ಗದಲ್ಲಿ ಕಷ್ಟಪಟ್ಟು, ರಸ್ತೆಯನ್ನು ಹಳಿಯುತ್ತ ಪ್ರಯಾಣ ಮಾಡುತ್ತಿದ್ದಾರೆ. ಹೊಂಡಮಯ ರಸ್ತೆಯಿಂದಾಗಿ ಹೈರಾಣಾಗುತ್ತಿದ್ದಾರೆ.
(ಹಾಳು ರಸ್ತೆ)
ಸಾಲ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಮುರೇಗಾರ್ ಹಾಗೂ ಸುತ್ತಮುತ್ತಲ ಊರುಗಳಿಗೆ ಸಾಲ್ಕಣಿ ಸಮೀಪದ ಟಿ.ಸಿ.ಯಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಕತ್ತಲೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಪದೇ ಪದೆ ಟಿ.ಸಿ. ಹಾಳಾಗುತ್ತದೆ. ವಿದ್ಯುತ್ ಮಾರ್ಗದಲ್ಲಿ ದೋಷ ಸಂಭವಿಸುತ್ತದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಹೆಸ್ಕಾಂ ಈ ಭಾಗದ ಕಡೆಗೆ ಗಮನ ಹರಿಸುತ್ತಿಲ್ಲ. ಹುಲೇಕಲ್, ಸಾಲ್ಕಣಿ ಭಾಗದಲ್ಲಿರುವ ಲೈನ್ಮನ್ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಆ ಕಡೆಗೆ ಆಗಮಿಸುವುದೇ ಇಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಒಮ್ಮೆಯೂ ಈ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಗ್ರಾಮಸ್ಥರೆ ಸರಿಪಡಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದಾಗಿ ಮುರೇಗಾರ್, ದುಗ್ಗುಮನೆ, ಶಿರ್ಲಬೈಲ್, ಹುಡ್ಲೆಜಡ್ಡಿ, ಮಳ್ಳಿಕೈ ಈ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೇ ಸ್ಥಳೀಯರೇ ಸರಿಪಡಿಸಿಕೊಳ್ಳುತ್ತಿದ್ದಾರೆ.
ಶಿರಸಿಯಿಂದ ಕೇವಲ 22 ಕಿ.ಮಿ ದೂರದಲ್ಲಿರುವ ಈ ಗ್ರಾಮಗಳಲ್ಲಿ ಸಮಸ್ಯೆಗಳು ಜ್ವಲಂತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಲ್ಕಣಿ, ಹುಲೇಕಲ್ ಅಥವಾ ಶಿರಸಿಗೆ ಆಗಮಿಸುವ ಅನಿವಾರ್ಯತೆಯಿದೆ. ಆದರೆ ರಸ್ತೆ ಸಮರ್ಪಕವಾಗಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಈ ಕುರಿತು ಗಮನ ಹರಿಸಿಲ್ಲ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿದೆ. ಈಗಲೂ ಯಾವುದೇ ಜನಪ್ರತಿನಿಧಿಗಳು ತಮ್ಮ ಗೋಳನ್ನು ಕೇಳುತ್ತಿಲ್ಲ. ಪ್ರವಾಸಿ ತಾಣವಾದ ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನೂ ಸರಿಪಡಿಸಲು ಮುಂದಾಗಿಲ್ಲ. ಆ ನೆಪದಲ್ಲಾದರೂ ಈ ಊರುಗಳಿಗೆ ಸರ್ವಋತು ರಸ್ತೆಯಾಗುತ್ತದೆ ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾದ ಅಗತ್ಯವಿದೆ.

***
ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ನಮ್ಮ ಭಾಗದಲ್ಲಿ ತೀವ್ರವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಹಲವಾರು ಸಾರಿ ಅರ್ಜಿ ಅದಕ್ಕೆ ಮನ್ನಣೆ ದೊರಕಿಲ್ಲ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಲೈನ್ಮನ್ ಈ ಭಾಗಕ್ಕೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಆಗಮಿಸುವುದೇ ಇಲ್ಲ. ಸ್ಥಳೀಯರೇ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಸಂಬಂಧಪಟ್ಟವರು ಸರಿಪಡಿಸಬೇಕಾಗಿದೆ.
ರಾಘವೇಂದ್ರ ಎನ್ ನಾಯ್ಕ, ಇಲೆಕ್ಟ್ರಿಕ್ ಕೆಲಸಗಾರ, ಶಿರ್ಲಬೈಲ್


***
(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

4 comments:

  1. Kakkalli - Doranagiri Road neevu nodiddira??
    Adara Kathenu Heegene.

    ReplyDelete
  2. ಕಕ್ಕಳ್ಳಿ-ಧೋರಣಗಿರಿ ರಸ್ತೆಯನ್ನು ನೋಡಿದ್ದೇನೆ.. ಜೊತೆಯಲ್ಲಿ ಮುಷ್ಕಿ ರಸ್ತೆಯ ದಾರುಣ ಸ್ಥಿತಿಯನ್ನೂ ಕಂಡಿದ್ದೇನೆ. ಅವುಗಳ ಬಗ್ಗೆ ಹಲವು ಸಾರಿ ಬರೆದೂ ಇದ್ದೇನೆ. ಆದರೆ ಆಳರಸರಿಗೆ ಮಾತ್ರ ಅದು ಕೇಳುತ್ತಿಲ್ಲ. ವಿಚಿತ್ರ ನೋಡಿ ಆ ಪ್ರದೇಶವನ್ನು ಸನ್ಮಾನ್ಯ ಕಾಗೇರಿಯವರು ಕಳೆದ 20 ವರ್ಷಗಳಿಂದ ಆಳುತ್ತ ಬಂದಿದ್ದಾರೆ. ಬಾಯಲ್ಲಿ ಅಭಿವೃದ್ಧಿ ಮಂತ್ರವನ್ನು ಹೇಳುವ ಅವರು ಈ ಒಂದೇ ಒಂದು ರಸ್ತೆಯನ್ನು ಸರಿ ಮಾಡಿಸಲು ಆಗಿಲ್ಲ. ಅವರ ಸಾಮರ್ಥ್ಯಕ್ಕೆ ಇದೊಂದು ಉದಾಹರಣೆ ಎಂದರೂ ತಪ್ಪಾಗಲಿಕ್ಕಿಲ್ಲ.. ಅಲ್ಲವೇ..

    ReplyDelete
  3. Havdu.. Innu Vichitravenendare Taluk panchayat sadasyaroo ade oorinalli iddare.avaroo pratinitya ade rasteyindale odaduttare.Avaradu Janakurudu

    ReplyDelete
  4. ಖಂಡಿತ ಹೌದು..
    ಆ ರಸ್ತೆಯನ್ನು ಸರಿ ಮಾಡಿದ್ದರೆ ಅಂಕೋಲಾ ತಾಲೂಕಿನ ಹೆಗ್ಗಾರು, ಹಳವಳ್ಳಿ, ಕಲ್ಲೇಶ್ವರ, ಗುಳ್ಳಾಪುರ ತಲುಪಲು ಶಿರಸಿಗರಿಗೆ ಬಹಳ ಹತ್ತಿರವಾಗುತ್ತಿತ್ತು. ದತ್ತಾತ್ರೆಯ ವೈದ್ಯ ಎಂಬ ಹೆಸರಿನ ಆ ಸದಸ್ಯರು ಈಗ ಉಪಾಧ್ಯಕ್ಷರು. ಈ ಕುರಿತು ಕೇಳಿದರೆ ಜಾಣ ಕಿವುಡರಂತೆ ವರ್ತನೆ ಮಾಡುತ್ತಾರೆ. ತಾವೇ ಅನೇಕ ಸಾರಿ ತಮ್ಮ ದ್ವಿಚಕ್ರ ವಾಹನವನ್ನು ಆ ರಸ್ತೆಯಲ್ಲಿ ಪಂಕ್ಚರ್ ಮಾಡಿಕೊಂಡಿದ್ದರೂ ಕೂಡ ರಸ್ತೆಯ ಬಗ್ಗೆ ಚಕಾರವೆತ್ತುವುದಿಲ್ಲ. ಉಳಿದೆಲ್ಲ ಸಮಸ್ಯೆಗಳೂ ಅವರಿಗೆ ಕಾಣುತ್ತವೆ. ಇದು ಮಾತ್ರ ಕಾಣುವುದಿಲ್ಲ.

    ReplyDelete