(ಈದ್ಗಾ ಮೈದಾನ ಕರಾಟಿಯಾ) |
ಅಪ್ಪನಿಗೆ ಸಿಟ್ಟು ಬರುತ್ತಿತ್ತು ನಿಜ. ಆದರೆ ಸಿಟ್ಟು ಮಾಡಿದ ಮಾತ್ರಕ್ಕೆ ಮಕ್ಕಳು ಕಷ್ಟ ಪಡಬೇಕು ಎಂದು ಯಾವತ್ತೂ ಭಾವಿಸಿರಲಿಲ್ಲ. ಮಕ್ಕಳ ಸುಖಕ್ಕಾಗಿ ಏನೆಲ್ಲ ಮಾಡಿದ್ದನಲ್ಲ. ಆದರೆ ಗೊತ್ತು ಗುರಿಯಲ್ಲದ ಈ ನಾಡಿನಲ್ಲಿ ನಾನು ಪಡುತ್ತಿರುವ ಈ ಪಾಡು ಅಪ್ಪನಿಗೆ ತಿಳಿದರೆ ಆತನ ಮನಸ್ಸಿನಲ್ಲಿ ಇನ್ನೆಂತಹ ತರಂಗಗಳು ಏಳಬಹುದು ಎಂದೆಲ್ಲ ಆಲೋಚಿಸಿದ. ಇದೇ ಸಮಯದಲ್ಲಿ ವಿನಯಚಂದ್ರನಿಗೆ ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದ ಚಿದಂಬರ ಕೋಚ್ ಅವರೂ ಕಬ್ಬಡ್ಡಿಯ ವಿಶ್ವಕಪ್ಪಿಗೆ ಬಂದಾಗ ಮಿತ್ರನಾಗಿದ್ದ ಸೂರ್ಯನ್, ಆಪ್ತತೆಯಿಂದ ತಿದ್ದಿದ ಜಾಧವ್ ಸರ್ ನೆನಪಾದರು. ಕಬ್ಬಡ್ಡಿಯ ಆಟಗಾರರೆಲ್ಲ ಕಣ್ಣಮುಂದೆ ಬಂದರು.
ಬಾಂಗ್ಲಾ ನಾಡಿನಲ್ಲಿ ಕಳೆದುಹೋಗಿದ್ದರೂ ಬಾಂಗ್ಲಾ ಟಿ.ವಿಯಲ್ಲಿ ತಮ್ಮನ್ನು ಹುಡುಕಬೇಕೆಂದು ಜಾಹೀರಾತು ಕೊಟ್ಟರಲ್ಲ. ಇದು ಯಾರ ಕೆಲಸವಿರಬಹುದು. ಭಾರತ ಸರ್ಕಾರ ಕೊಟ್ಟಿತೆ.? ಭಾರತದ ಕಬ್ಬಡ್ಡಿ ಸಂಸ್ಥೆ ಕೊಟ್ಟಿತೆ? ಜಾಧವ್ ಸರ್ ಕೊಟ್ಟರಾ? ಅಥವಾ ತಮಿಳು ನಾಡಿನ ಸರ್ಕಾರದಲ್ಲಿ ತನ್ನ ಸಂಬಂಧಿಕರಿದ್ದಾರೆ ಎಂದು ಹೇಳಿದ್ದನಲ್ಲ ಸೂರ್ಯನ್.. ಆತ ಕೊಟ್ಟನೆ. ಅಪ್ಪ-ಅಮ್ಮ ದುಗುಡಪಟ್ಟುಕೊಂಡು ಕೊಟ್ಟಿರಬಹುದು, ಅದ್ಯಾವುದೋ ಚಾನಲ್ಲಿನಲ್ಲಿ ಕೆಲಸ ಮಾಡುತ್ತಿದ್ದಾನಲ್ಲ ಸಂಜಯ ಅವನ ಕೆಲಸವೇ ಇದು? ಎಂದೆಲ್ಲ ಆಲೋಚನೆಗಳು ವಿನಯಚಂದ್ರನಲ್ಲಿ ಸುಳಿದವು. ಅವರ ಪ್ರೀತಿಗೆ ವಿನಯಚಂದ್ರನ ಕಣ್ಣು ಹನಿಗೂಡಿದವು.
ಢಾಕಾದಿಂದ ಹೊರಟು ಎಷ್ಟು ದಿನವಾಗಿರಬಹುದು ಎಂದು ಆಲೋಚನೆ ಮಾಡಿದ ವಿನಯಚಂದ್ರ. ಮೂರು ದಿನಗಳಾದವಾ? ನಾಲ್ಕಾಯಿತಾ? ಎಂದುಕೊಂಡ. ಆದರೆ ದಿನಗಳೆಷ್ಟಾದವು ಎನ್ನುವುದು ನೆನಪಿಗೆ ಬರಲಿಲ್ಲ. ಸಲೀಂ ಚಾಚಾ ಜೊತೆಗಿದ್ದಿದ್ದರಿಂದ ಬಾಂಗ್ಲಾದೇಶದಲ್ಲಿ ತೊಂದರೆಯಾಗಲಿಲ್ಲ. ಆತ ಇಲ್ಲದಿದ್ದರೆ ಬಾಂಗ್ಲಾ ನಾಡಿನಲ್ಲಿಯೇ ಅದೆಷ್ಟು ಸಾರಿ ಗಿರಕಿ ಹೊಡೆಯುತ್ತಿದ್ದೆವೋ ಎಂದುಕೊಂಡ ವಿನಯಚಂದ್ರ. ಮಧುಮಿತಾ ಬಾಂಗ್ಲಾ ನಾಡಿನವಳೇ. ಆದರೆ ಇಂತಹ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಆಕೆಗೂ ಏನು ಮಾಡಬೇಕು ಎನ್ನುವುದು ಬಗೆ ಹರಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಲೀಂ ಚಾಚಾನನ್ನು ಸುಮ್ಮನೆ ಅನುಮಾನಿಸಿದೆನಾ ಎಂದೂ ಮನಸ್ಸಿನಲ್ಲಿ ಅನ್ನಿಸಿತು. ಛೇ ಎಂದು ತಲೆಕೊಡವಿದ. ಅಷ್ಟರಲ್ಲಿ ಒಂದು ಊರು ಕಾಣಿಸಿತು. ಬೆಂಗಾಲಿಯಲ್ಲಿದ್ದ ಆ ಊರನ್ನು ಕಷ್ಟಪಟ್ಟು ಓದಲು ಯತ್ನಿಸಿದ ವಿನಯಚಂದ್ರ. ಹಬ್ಲಾ ತೆಂಗಾರಿಪಾರಾ ಎಂದೇನೋ ಓದಿಕೊಂಡ. ಇದೆಂತಹ ವಿಚಿತ್ರ ಊರು ಎಂದುಕೊಂಡ. ಈ ಊರಿನ ಹೆಸರು ಕೇಳಿರದ, ನೋಡಿರದ ತನಗೆ ಇದು ವಿಚಿತ್ರ ಎನ್ನಿಸುತ್ತಿದೆ. ಆದರೆ ಈ ಊರಿನವರಿಗೆ ಇದೇ ವಿಶಿಷ್ಟ ಹೆಸರಾಗಿರಬೇಕು. ಬೇರೆ ಊರಿನ ಜನರು, ಪ್ರವಾಸಿಗರು ನಮ್ಮೂರಿಗೆ ಬಂದಾಗ ನಮ್ಮೂರಿನ ಹೆಸರನ್ನು ಕೇಳಿ ಇದೇ ರೀತಿ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲವೇ? ತಮ್ಮೂರೂ ಇದೇ ರೀತಿ ವಿಚಿತ್ರವಾಗುವುದಿಲ್ಲವೇ ಎಂದನ್ನಿಸಿತು. ಚಿಕ್ಕದಾಗಿ ನಕ್ಕ.
ಮೂಡಣದಲ್ಲಿ ರವಿ ಕಿತ್ತಳೆ ಹಣ್ಣಿನ ಬಣ್ಣದಲ್ಲಿ ಮೂಡುತ್ತಿದ್ದ. ಸಾಗುವ ದಾರಿ ಸಾಕಷ್ಟಿದೆ ಎನ್ನಿಸಿತು ವಿನಯಚಂದ್ರನಿಗೆ. ಸಲೀಂ ಚಾಚಾನ ಬಳಿ ಇವತ್ತು ಹಗಲಿಡಿ ಸೈಕಲ್ ತುಳಿಯೋಣವೇ ಎಂದು ಕೇಳೋಣ ಎನ್ನಿಸಿತು. ಸಾಧ್ಯವಾದರೆ ಸಂಜೆಯೊಳಗೆ ತಾಂಗೈಲ್ ನಗರವನ್ನು ದಾಟಿ ಮುಂದಕ್ಕೆ ಹೋಗಲು ಪ್ರಯತ್ನಿಸಬೇಕು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಭಾರತವನ್ನು ಮುಟ್ಟಿದರೆ ಸಾಕು ಎಂದುಕೊಂಡ. ಯಾಕೋ ಈ ಬೆಂಗಾಲಿ ನಾಡು ಖುಷಿ ಕೊಡುತ್ತಿಲ್ಲ. ಅಸಹನೀಯ ಎನ್ನಿಸುತ್ತಿದೆಯಲ್ಲ ಎಂಬ ಭಾವನೆ ಆತನ ಮನದೊಳಗೆ. ಅಷ್ಟರಲ್ಲಿ ಮಧುಮಿತಾ ಎದ್ದಿದ್ದಳು. ಸಲೀಂ ಚಾಚಾ ಕೂಡ ನಿದ್ದೆಯಿಂದೆದ್ದ.
ಪ್ರಾಥರ್ವಿಧಿ ಮುಗಿಸಲು ಪಕ್ಕಕ್ಕೆ ಸೈಕಲ್ ನಿಲ್ಲಿಸಿದ ವಿನಯಚಂದ್ರ. ಸೈಕಲ್ಲಿನಲ್ಲಿದ್ದ ನೀರಿನಿಂದ ಮುಖಮಾರ್ಜನ ಮಾಡಿಕೊಂಡ ಬಳಿಕ ಸಲೀಂ ಚಾಚಾನ ಬಳಿ `ಚಾಚಾ.. ಕರಾಟಿಯಾದಿಂದ ಮುಂದಕ್ಕೆ ಹೋಗಿ ಬಿಡೋಣ. ಸಾಧ್ಯವಾದರೆ ಸಂಜೆಯೊಳಗೆ ತಾಂಗೈಲ್ ತಲುಪೋಣ. ನಾನು ಸೈಕಲ್ ತುಳಿಯಲು ಸಿದ್ಧ.. ಒಮ್ಮೆ ಭಾರತದ ಗಡಿಯೊಳಕ್ಕೆ ಹೋಗಿಬಿಟ್ಟರೆ ಸಾಕು ಎನ್ನಿಸಿಬಿಟ್ಟಿದೆ ಚಾಚಾ' ಎಂದ ವಿನಯಚಂದ್ರ ಒಮ್ಮೆ ತಲೆಕೊಡವಿದ.
ಸಲೀಂ ಚಾಚಾ `ನಾನೂ ಅದನ್ನೇ ಹೇಳೋಣ ಅಂತಿದ್ದೆ ನೋಡು. ನಾವು ಎಷ್ಟು ವೇಗವಾಗಿ ಹೋಗುತ್ತೀವೋ ಅಷ್ಟು ಒಳ್ಳೆಯದು. ಯಾಕೋ ನನ್ನ ಮನಸ್ಸಿನಲ್ಲಿ ಅದೇನೋ ಭೀತಿ ಕಾಡುತ್ತಿದೆ. ಮುಂದೇನೋ ಆಗುತ್ತದೆ ಎನ್ನುವ ಬಾವ ಬಿಟ್ಟೂ ಬಿಡದೆ ಕಾಡುತ್ತಿದೆ. ಮಲಗಿದ್ದೆನಲ್ಲ ಏನೇನೋ ಹುಚ್ಚು ಕನಸುಗಳು. ಎರಡು ಸಾರಿ ಬೆವೆತು ಬಿಟ್ಟಿದ್ದೆ. ಎರಡು ಸಾರಿ ಎಚ್ಚರೂ ಆಗಿತ್ತು. ನೀನು ನಿನ್ನ ಪಾಡಿಗೆ ಸೈಕಲ್ ತುಳಿಯುತ್ತಿದ್ದೆಯಲ್ಲ. ಹಾಗಾಗಿ ನಾನು ನಿನ್ನನ್ನು ಮಾತಾಡಿಸಲು ಹೋಗಲಿಲ್ಲ. ಇನ್ನುಮುಂದೆ ನಾವು ವಿಶ್ರಾಂತಿಗಾಗಿ ನಿಲ್ಲುವುದೇ ಬೇಡ. ಸಾಗುತ್ತಲೇ ಇರೋಣ. ಊಟ, ತಿಂಡಿ, ಗುಟುಕು ನಿದ್ದೆ ಇಷ್ಟೇ ಸಾಕು. ಮೊದಲು ಗಡಿಯನ್ನು ಮುಟ್ಟೋಣ. ಆಮೇಲೆ ಒಳ್ಳೆಯ ಸಮಯ ನೋಡಿಕೊಂಡು ನೀವು ಗಡಿಯನ್ನು ದಾಟಿಬಿಡಿ. ನಾನು ಮರಳುತ್ತೇನೆ..' ಎಂದ ಚಾಚಾ.
ವಿನಯಚಂದ್ರನ ಮನಸ್ಸಿನಲ್ಲಿ ಇಂತಹ ಚಾಚಾನನ್ನು ಅನುಮಾನಿಸಿ ತಪ್ಪು ಮಾಡಿದೆ ಎನ್ನುವ ಪಶ್ಚಾತ್ತಾಪ ಕಾಡಿತು. ಖಾದಿರ್ ಭಾಯ್ ಮನೆಯಿಂದ ತಂದಿದ್ದ ರೊಟ್ಟಿ, ಖಾರದ ಚಟ್ನಿಯನ್ನು ತಿನ್ನುವಾಗ ವಿನಯಚಂದ್ರನಿಗೆ ಹುಬ್ಬಳ್ಳಿ ನೆನಪಾಯಿತು. ಅಲ್ಲಿಯೂ ಇಂತದ್ದೇ ಖಡಕ್ಕಾದ ರೊಟ್ಟಿ, ಚಟ್ನಿ ಮಾಡುತ್ತಾರಲ್ಲಾ.. ಇಷ್ಟೇ ಖಾರವಾಗಿರುತ್ತದೆ.. ಆದರೆ ಬಹಳ ರುಚಿಕಟ್ಟಾಗಿರುತ್ತದೆ ಎಂದುಕೊಂಡವನೇ ಸಲೀಂ ಚಾಚಾನ ಬಳಿ ಹೇಳಿದ. ಸಲೀಂ ಚಾಚಾ ತಾನು ಚಿಕ್ಕವನಿದ್ದಾಗ ಹೈದರಾಬಾದಿನಲ್ಲಿ ಇಂತಹ ತಿಂಡಿ ತಿನ್ನುತ್ತಿದ್ದೆ. ಆಗ ಒಂದೆರಡು ಸಾರಿ ಹುಬ್ಬಳ್ಳಿಯ ರೊಟ್ಟಿ, ಚಟ್ನಿಯ ಖಾರದ ಬಗ್ಗೆ ಕೇಳಿದ್ದೆ ಎಂದರು. ಈ ವಿಷಯದ ಬಗ್ಗೆ ಅಷ್ಟಾಗಿ ತಿಳಿಯದ ಮಧುಮಿತಾ ಸಲೀಂ ಚಾಚಾ ಹಾಗೂ ವಿನಯಚಂದ್ರನನ್ನು ಸುಮ್ಮನೆ ನೋಡಿದಳು.
(ಢಾಕಾ-ತಾಂಗೈಲ್ ದಾರಿ ಮಧ್ಯದಲ್ಲಿ ಕಾಣುವ ದೃಶ್ಯ) |
`ನೀನಾ.. ಬೇಡ ಮಾರಾಯ್ತಿ.. ನೀನು ಸೈಕಲ್ ತುಳಿದು ಏನಾದ್ರೂ ಹೆಚ್ಚೂ ಕಡಿಮೆಯಾದರೆ ನಾನೇ ನಿನ್ನನ್ನು ನೋಡಿಕೊಳ್ಳಬೇಕಲ್ಲ.. ಆಮೇಲೆ ಏನಾದರೂ ಆಗಿ ನಿನ್ನನ್ನು ಹೊತ್ತುಕೊಂಡು ಹೋಗುವಂತಾದರೆ ನಾನೇನು ಮಾಡಬೇಕು ಹೇಳು' ಎಂದು ಕಣ್ಣುಮಿಟುಕಿಸಿದ. `ಥೂ ಹೋಗೋ..' ಎಂದವಳೇ ಸೈಕಲ್ ಏರಿಯೇಬಿಟ್ಟಳು.
ಇವಳು ಯಾವ ರೀತಿ ಸೈಕಲ್ ತುಳಿಯುತ್ತಾಳೋ ದೇವರೆ ಎಂದುಕೊಂಡೇ ವಿನಯಚಂದ್ರ ಹಿಂದಿನ ಸೀಟನ್ನೇರಿದ. ಸಲೀಂ ಚಾಚಾ ಕೂಡ ಕುಳಿತ. ಮಧುಮಿತಾ ಯಾವಾಗ ಸೈಕಲ್ ಕಲಿತಿದ್ದಳೋ. ಚನ್ನಾಗಿಯೇ ತುಳಿಯಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ಬಾವಾಖೋಲಾ ಎಂಬ ಪುಟ್ಟ ಹಳ್ಳಿ ಸಿಕ್ಕಿತು. ಅಲ್ಲಿಗೆ ಬರುವ ವೇಳೆಗೆ ಮಧುಮಿತಾಳಿಗೆ ಸುಸ್ತಾಗಿರಬೇಕು ಎಂದುಕೊಂಡ ವಿನಯಚಂದ್ರ ಸೈಕಲ್ ತಾನೇ ಪಡೆದುಕೊಂಡ. ಮಧುಮಿತಾಳಿಗೆ ನಿಜಕ್ಕೂ ಸುಸ್ತಾಗಿತ್ತು. ಕೇಳಿದ ತಕ್ಷಣ ಕೊಟ್ಟುಬಿಟ್ಟಳು. ನಗುತ್ತಾ ಸೈಕಲ್ ಹತ್ತಿದ ವಿನಯಚಂದ್ರ ಮಧುಮಿತಾಳನ್ನು ಕೀಟಲೆ ಮಾಡುತ್ತಲೇ ಮುಂದಕ್ಕೆ ಸಾಗಿದ.
ಉದ್ದನೆಯ ಹಾದಿ. ಅಕ್ಕಪಕ್ಕ ವಿಶಾಲವಾದ ಗದ್ದೆ ಬಯಲುಗಳು. ಸೂರ್ಯನ ಮೊದಲ ಕಿರಣಗಳು ಭೂಮಿಗೆ ಆಗ ತಾನೇ ಮುತ್ತಿಕ್ಕಲು ಆರಂಭಿಸಿದ್ದವು. ರಾತ್ರಿಯಿಂದ ಇದ್ದ ಚಳಿಯ ವಾತಾವರಣ ನಿಧಾನವಾಗಿ ಕಡಿಮೆಯಾಗಿ ಬಿಸಿಲಿನ ಝಳ ಆರಂಭವಾಗಿತ್ತು.
`ಚಾಚಾ ನಾವು ಹೊರಟು ಎಷ್ಟು ದಿನಗಳಾದವು? ನೆನಪಿದೆಯಾ?' ಎಂದು ಕೇಳಿದ.
`ಬೇಟಾ.. ಎಂಟು ದಿನಗಳಾಗಿರಬೇಕು ನೋಡು. ಲೆಕ್ಖ ಇಟ್ಟಿಲ್ಲ. ಅಂದಾಜು ಮಾಡಿದ ಪ್ರಕಾರ ಎಂಟು ದಿನ ಕಳೆದಿದೆ. ಯಾಕೋ..?' ಎಂದ ಚಾಚಾ.
`ಯಾಕೂ ಇಲ್ಲ. ನನಗೆ ಸುಮ್ಮನೆ ಕುತೂಹಲ. ನಾವು ಪಯಣ ಆರಂಭಿಸಿ ಎಷ್ಟು ದಿನಗಳಾಗಿರಬಹುದು ಅಂತ. ಇನ್ನೆಷ್ಟು ದಿನ ಬೇಕಾಗಬಹುದು? ನನಗೆ ಹಗಲು ರಾತ್ರಿಗಳು ಸರಿಯುವುದಷ್ಟೇ ಗೊತ್ತಾಗುತ್ತಿದೆ. ದಿನಗಳನ್ನು ಎಣಿಸುವುದನ್ನು ನಿಲ್ಲಿಸಿದ್ದೇನೆ. ಯಾಕೋ ಹಾಗೆ ದಿನಗಳನ್ನು ಲೆಕ್ಖ ಹಾಕಲೂ ನನಗೆ ಭಯವಾಗುತ್ತದೆ ಚಾಚಾ'
`ಬೇಟಾ.. ನಾವು ಇಲ್ಲಿಯವರೆಗೆ ರಾತ್ರಿ ಪ್ರಯಾಣ.. ಹಗಲು ವಿಶ್ರಾಂತಿ ಎನ್ನುವಂತೆ ಸಾಗಿ ಬಂದಿದ್ದೇವೆ. ಹಾಗಾಗಿ ದಿನಗಳು ಜಾಸ್ತಿ ಬೇಕಾದವು. ಇನ್ನುಮುಂದೆ ಹಗಲು-ರಾತ್ರಿ ಪಯಣ ಮುಂದುವರಿಸೋಣ. ನಾವು ಎಷ್ಟು ಬೇಗ ಸಾಗುತ್ತೀವೋ ಅಷ್ಟು ಒಳ್ಳೆಯದು. ಏನಂತೀಯಾ? '
`ಹೌದು.. ಹೌದು.. ಅದು ಸರಿ. ಅದೇ ಸರಿಯಾದುದು' ಎಂದ ವಿನಯಚಂದ್ರ.
ಮತ್ತೊಂದು ತಾಸಿನ ಅವಧಿಯಲ್ಲಿ ಕರಾಟಿಯಾ ಸಿಕ್ಕಿತು. ಸಾಕಷ್ಟು ದೊಡ್ಡದಾಗಿದ್ದ ಈ ಪಟ್ಟಣ ಬಾಂಗ್ಲಾದ ನಾಡಿನ ಸುಂದರ ಗ್ರಾಮಗಳಲ್ಲೊಂದು ಎನ್ನಿಸಿತು. ಸಲೀಂ ಚಾಚಾ ಈ ಪಟ್ಟಣ ನೋಡಿದ ತಕ್ಷಣ `ಬೇಟಾ.. ಈ ಊರಿದೆಯಲ್ಲ ಬಹಳ ಒಳ್ಳೊಳ್ಳೆಯ ಸಂಗತಿಗಳನ್ನು ಹೊಂದಿದೆ. ಇಲ್ಲೊಂದು ರೋಖಿಯಾ ಮೊಹಲ್ ಅಂತ ಇದೆ. ಪ್ರಾಚೀನ ಕಟ್ಟಡ. ಸ್ವಲ್ಪ ಹಾಳಾಗಿದೆ. ಆದರೆ ನೋಡುಗರನ್ನು ಬಹಳ ಸೆಳೆಯುತ್ತದೆ. ಬಾಂಗ್ಲಾದ ಮೇಲೆ ಪಾಕಿಸ್ತಾನ ದಾಳಿ ಮಾಡಿತ್ತಲ್ಲ 1971ರಲ್ಲಿ ಆಗ ಈ ಕಟ್ಟಡಕ್ಕೆ ಬಹಳ ಹಾನಿಯಾಗಿದೆ. ಇಟ್ಟಿಗೆಯಿಂದ ಮಾಡಿದ್ದ ಈ ಕಟ್ಟಡ ಶಿಥಿಲವಾಗಲು ಆ ದಾಳಿ ಕಾರಣ ಎನ್ನಬಹುದು. ಸರ್ಕಾರ ಈ ಕಟ್ಟಡ ಉಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಐದಾರು ವರ್ಷಗಳೇ ಕಳೆದಿವೆ. ಇದುವರೆಗೂ ಕಟ್ಟಡ ಹಾಗೆಯೇ ಇದೆ. ಈ ಮಹಲ್ ಬಗ್ಗೆ ತಿಳಿದವರೆಲ್ಲ ಬಂದು ಖುಷಿಯಿಂದ ನೋಡಿ ಹೋಗುತ್ತಾರೆ' ಎಂದ.
ವಿನಯಚಂದ್ರ ಬೆರಗಿನಿಂದ ಕೇಳಿದ. `ಮತ್ತಿನ್ನೇನೇನಿದೆ..? ನಾವೂ ಹೋಗಿ ನೋಡಬಹುದಾ?'
` ನಾವು ನೋಡಲಿಕ್ಕೆ ಆಗುವುದಿಲ್ಲ. ಇಂತಹ ಹಿಂಸಾಪೀಡಿತ ಸಮಯದಲ್ಲಿ ಅದನ್ನು ನೋಡುತ್ತ ಇರಲಿಕ್ಕಾಗುತ್ತದಾ? ಜೀವ ಉಳಿದರೆ ಮತ್ತೆ ಎಂದಾದರೂ ಬಾಂಗ್ಲಾಕ್ಕೆ ಬಂದು ಅವನ್ನೆಲ್ಲ ನೋಡಬಹುದು' ಎಂದ ಚಾಚಾ ಮಾತು ಮುಂದುವರಿಸಿದ `ಕರಾಟಿಯಾ ಜಮೀಂದಾರ್ ಬಾರಿ ಅಂತೊಂದು ಕಟ್ಟಡವಿದೆ. ಇದು ಒಂದಾನೊಂದು ಕಾಲದಲ್ಲಿ ಈ ಪ್ರದೇಶವನ್ನು ಆಳಿದ ಬಹುದೊಡ್ಡ ಜಮೀನ್ದಾರನ ಮನೆ. ಈಗ ಆ ಜಮೀನ್ದಾರನ ವಂಶಸ್ಥರು ಅಲ್ಲಿ ವಾಸ ಮಾಡುತ್ತಿದ್ದಾರೆ. ಆದರೂ ಅದೊಂದು ಪ್ರವಾಸಿ ಸ್ಥಳವಾಗುವತ್ತ ಮುನ್ನಡೆದಿದೆ. ದೊಡ್ಡ ಪಟ್ಟಣ. ಆದರೆ ಕಳೆದ ದಶಕದವರೆಗೂ ಜಮೀನ್ದಾರಿ ಪದ್ಧತಿಯಲ್ಲಿ ನಲುಗಿತ್ತು. ಇದೀಗ ಅಲ್ಪ ಸ್ವಲ್ಪ ಬದಲಾಗಿದೆ..' ಎಂದ ಚಾಚಾ.
ಚಾಚಾನ ಅಣತಿಯಂತೆ ಕರಾಟಿಯಾದ ಹೊರವಲಯದಲ್ಲಿಯೇ ಸೈಕಲ್ ಚಾಲನೆ ಮಾಡಿದ ವಿನಯಚಂದ್ರ. ದೂರದ ಬೆಟ್ಟ ಹೇಗೆ ಕಣ್ಣಿಗೆ ನುಣ್ಣಗೆ ಕಾಣುತ್ತದೆಯೋ ಕರಾಟಿಯಾ ಕೂಡ ದೂರದಿಂದ ಬಹಳ ಸುಂದರವಾಗಿ ಕಾಣಿಸಿತು. ಪಟ್ಟಣದ ಒಳಹೊಕ್ಕರೆ ಇನ್ನೇನೇನನ್ನು ಕಾಣಬಹುದೋ ಎಂದುಕೊಂಡ ವಿನಯಚಂದ್ರ. ತಾವು ತಲುಪಲೇಬೇಕು ಎಂದು ನಿಶ್ಚಯ ಮಾಡಿಕೊಂಡಿದ್ದ ತಾಂಗೈಲ್ ಕೆಲವೇ ತಾಸುಗಳ ಅವಧಿಯಲ್ಲಿತ್ತು. ಸಲೀಂ ಚಾಚಾ ಸೈಕಲ್ ಚಾಲನೆಗೆ ತೊಡಗಿದ. ವಿನಯಚಂದ್ರ ಮಧುಮಿತಾಳ ಪಕ್ಕಕ್ಕೆ ಬಂದು ಕುಳಿತ. ಹಲವು ತಾಸುಗಳ ಸೈಕಲ್ ಚಾಲನೆಯ ಕಾರಣ ಕೊಂಚ ಸುಸ್ತಾದಂತಿದ್ದ ವಿನಯಚಂದ್ರ ಹಾಗೇ ಮಧುಮಿತಾಳ ಕಾಲ ಮೇಲೆ ಒರಗಿದ. ಮದುಮಿತಾ ವಿನಯಚಂದ್ರನ ತಲೆಗೂದಲ್ಲಿ ಕೈಹಾಕಿ ಆಡತೊಡಗಿದಳು. ಹಾಗೆ ಕಣ್ಮುಚ್ಚಿದ ವಿನಯಚಂದ್ರನಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ.. ಕಣ್ಣು ಬಿಟ್ಟಾಗ ದೊಡ್ಡದೊಂದು ಗಲಾಟೆ. ಯಾರೋ ಕೂಗುತ್ತಿದ್ದರು. ಮತ್ಯಾರೋ ಚೀರುತ್ತಿದ್ದರು. ಪೊಲೀಸ್ ಸೈರನ್ನುಗಳು ಅರಚುತ್ತಿದ್ದವು. ಗುಂಡಿನ ಸದ್ದು ಮೊರೆಯುತ್ತಿತ್ತು. ಏನಾಗುತ್ತಿದೆ ಎನ್ನುವುದು ಒಮ್ಮೆ ಬಗೆಹರಿಯಲಿಲ್ಲ. ಭಾರತವನ್ನು ತಲುಪಬೇಕೆನ್ನುವ ಮಹದುದ್ದೇಶವನ್ನು ಹೊಂದಿ ಢಾಕಾದಿಂದ ಸೈಕಲ್ ಮೂಲಕ ಸಾಗಿ ಬಂದಿದ್ದವರನ್ನು ತಾಂಗೈಲ್ ನಗರಿ ಸ್ವಾಗತಿಸಿದ್ದು ಹೀಗೆ..
(ಮುಂದುವರಿಯುತ್ತೆ)
No comments:
Post a Comment