Friday, October 17, 2014

ಬೆಂಗಾಲಿ ಸುಂದರಿ-33

(ಶೇರ್ ಪುರದಲ್ಲಿರುವ ಕೋಟೆಯೊಂದರ ಅವಶೇಷ)
             ಅದೇ ಸಮಯದಲ್ಲಿ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಎಲ್ಲರೂ ಮೌನವಹಿಸಿದರು. ಮುಷ್ಫೀಕರನ ಹೆಂಡತಿ ಹೋಗಿ ಬಾಗಿಲು ತೆರೆದಳು. ಬಂದಿದ್ದವನು ಮುಷ್ಪಿಕರನ ಬಂಟ. ಮಧುಮಿತಾಳನ್ನು ಮುಷ್ಫಿಕರನ ಬಳಿ ಕರೆದೊಯ್ಯಲು ಬಂದಿದ್ದ. ಕೊನೆಗೆ ಮುಷ್ಫಿಕರನ ಹೆಂಡತಿಯೇ ಕೆಲ ಸಮಯದ ನಂತರ ಮಧುಮಿತಾ ಬರುತ್ತಾಳೆ ಎಂದು ಹೇಳಿ ಆತನನ್ನು ಕಳಿಸಿದಳು. ಆತ ಹೋದ ತಕ್ಷಣ ಇತ್ತ ಇವರು ಕಾರ್ಯಪ್ರವೃತ್ತರಾದರು. ಕತ್ತಲೆಯಲ್ಲಿ ಮುಷ್ಫಿಕರನ ಹೆಂಡತಿ ಯಾವ ರೀತಿ ಇದ್ದಾಳೆ ಎನ್ನುವುದು ವಿನಯಚಂದ್ರ ಹಾಗೂ ಮಧುಮಿತಾಳಿಗೆ ಗೊತ್ತಾಗಲಿಲ್ಲ. ಬಹುತೇಕ ಮಧುಮಿತಾಳಂತೆ ಇರಬಹುದೇನೋ ಅನ್ನಿಸಿತು.
             ಮುಷ್ಫಿಕರನ ಹೆಂಡತಿ ಮಧುಮಿತಾಳಂತೆ ಬಟ್ಟೆ ಧರಿಸಿಕೊಂಡಳು. ತನ್ನ ಚಹರೆಯನ್ನು ಬದಲಿಸಿಕೊಂಡಳು. ಮುಷ್ಫೀಕರನೇನೂ ಮಧುಮಿತಾಳನ್ನು ನೋಡಿರಲಿಲ್ಲವಾದ್ದರಿಂದ ಅನುಮಾನ ಬರುವ ಸಾಧ್ಯತೆಗಳಿರಲಿಲ್ಲ. ವಿನಯಚಂದ್ರ ದೊಡ್ಡದೊಂದು ದೊಣ್ಣೆಯನ್ನು ಅಡಗಿಸಿ ಇಟ್ಟುಕೊಂಡ. ಮುಷ್ಫೀಕರನ ಹೆಂಡತಿಯೇ ಮುಂದಕ್ಕೆ ಸಾಗಿದಳು. ಅವಳ ಜೊತೆಯಲ್ಲಿ ವಿನಯಚಂದ್ರ ಹೋದ. ಮಧುಮಿತಾ ಮುಷ್ಫಿಕರನ ಹೆಂಡತಿಯ ಅಣತಿಯಂತೆ ಆ ಕೋಟೆಯಂತಹ ಮನೆಯ ಇನ್ನೊಂದು ದಿಕ್ಕಿನಲ್ಲಿದ್ದ ಕಳ್ಳ ದಾರಿಯತ್ತ ಸಾಗಿದಳು. ಮುಷ್ಫಿಕರನ ಹೆಂಡತಿ ಮುಷ್ಫೀಕರನ ಶಯನಕೋಣೆಗೆ ಸಾಗುತ್ತಿದ್ದಂತೆಯೇ ವಿನಯಚಂದ್ರ ಹೊರಗಡೆಯೇ ನಿಂತ. ಬಾಗಿಲು ತೆರೆದುಕೊಂಡೇ ಇತ್ತು. ಹೊರಗಿನಿಂದ ನೋಡುತ್ತಿದ್ದ ವಿನಯಚಂದ್ರನಿಗೆ ಮುಷ್ಫೀಕರನ ಆಕಾರ, ಚಹರೆ ಕಣ್ಣಿಗೆ ಕಾಣುತ್ತಿತ್ತು.
         ಕೋಟೆಯಂತಹ ಮನೆಯಲ್ಲಿ, ಕೈಗೆ ಕಾಲಿಗೆ ಆಳುಗಳನ್ನು ಇಟ್ಟುಕೊಂಡಿದ್ದ, ಗೂಂಡಾಗಳ ಪಡೆಯನ್ನೇ ನಿರ್ಮಾಣ ಮಾಡಿಕೊಂಡು ದಿನಕ್ಕೊಂದು ಹೆಣ್ಣಿನ ಬದುಕು ಹಾಳುಮಾಡುತ್ತಿದ್ದ ಮುಷ್ಫೀಕರ ನೋಡಲಿಕ್ಕೆ ದೈತ್ಯ ದೇಹಿಯೇನೂ ಅಲ್ಲ. ಸಾಧಾರಣ ಎತ್ತರ. ಆದರೆ ಗಟ್ಟುಮುಟ್ಟಾಗಿದ್ದ. ಬೆಂಗಾಲಿ ಮುಖ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದವನು ಸೂರ್ಯನನ್ನೇ ಕಾಣಲಿಲ್ಲವೇನೋ ಎಂಬಂತೆ ಬಿಳುಚಿಕೊಂಡಿದ್ದ. ಮೈಕೈತುಂಬ ಆಭರಣಗಳ ಸರಮಾಲೆಯಿತ್ತು. ಅಬ್ಬಾ ಖಯಾಲಿ ಮನುಷ್ಯನೇ ಎಂದುಕೊಂಡ ವಿನಯಚಂದ್ರ. ನಿನಗೆ ಬುದ್ಧಿ ಕಲಿಸುತ್ತೇನೆ ಇರು ಎಂದುಕೊಂಡ ಮನಸ್ಸಿನಲ್ಲಿಯೇ. ಮುಷ್ಫಿಕರನ ಹೆಂಡತಿ ಆ ಕೋಣೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳಾದರೂ ಚಿಲಕ ಹಾಕಲಿಲ್ಲ.
          ಒಳಹೋದವಳೇ ಮುಷ್ಫೀಕರನನ್ನು ರಮಿಸತೊಡಗಿದಳು. ಮುಷ್ಫಿಕರನಿಗೆ ಒಮ್ಮೆ ಆಶ್ಚರ್ಯ. ಈ ಕೋಣೆಗೆ ಬರುವವರೆಲ್ಲ ಗಲಾಟೆ ಮಾಡುತ್ತಾರೆ, ಅಳುತ್ತಾರೆ, ಬೆದರುತ್ತಾರೆ. ದೈನ್ಯದಿಂದ ಬೇಡಿಕೊಳ್ಳುತ್ತಾರೆ. ಕೂಗತ್ತಾರೆ. ಕಬ್ಬರಿಯುತ್ತಾರೆ. ಆದರೆ ಈಕೆ ಮಾತ್ರ ತನ್ನನ್ನು ರಮಿಸುತ್ತಿದ್ದಾಳಲ್ಲ ಎಂದು ಕ್ಷಣಕಾಲ ಆಲೋಚಿಸಿದ. ಆದರೆ ಮನಸ್ಸು ಆ ಕಡೆಗೆ ಹೆಚ್ಚಿನ ಸಮಯ ಹೋಗಲಿಲ್ಲ. ರಮಿಸತೊಡಗಿದ್ದವಳನ್ನು ತಾನೂ ಮುದ್ದಿಸತೊಡಗಿದ್ದ. ತನ್ನ ತೆಕ್ಕೆಗೆ ಬಿದ್ದಿದ್ದವಳ ತುಟಿಗೆ ತುಟಿಯೊತ್ತಲು ಸಜ್ಜಾಗುತ್ತಿದ್ದ. ಹೀಗಿದ್ದಾಗಲೇ ವಿನಯಚಂದ್ರ ಕೋಣೆಯೊಳಕ್ಕೆ ಬಂದಿದ್ದ. ಮುಷ್ಫಿಕರನಿಗೆ ಇದು ಕೊಂಚವೂ ಅರಿವಿಗೆ ಬಾರಲಿಲ್ಲ. ಬಂದವನೇ ಸರಿಯಾದ ಸಮಯಕ್ಕೆ ಕಾಯುತ್ತ ನಿಂತ. ಹೀಗಿದ್ದಾಗಲೇ ವಿನಯಚಂದ್ರನಿಗೆ ಮುಷ್ಫಿಕರನ ಹೆಂಡತಿ ಸನ್ನೆ ಮಾಡಿದ್ದಳು. ತಕ್ಷಣವೇ ವಿನಯಚಂದ್ರ ಅಡಗಿಸಿ ಇಟ್ಟಿದ್ದ ದೊಣ್ಣೆಯನ್ನು ಬೀಸಿದ್ದ. ಮುಷ್ಫಿಕರನ ಹೆಂಡತಿ ತಪ್ಪಿಸಿಕೊಂಡರೆ ಏಟು ಸರಿಯಾಗಿ ಮುಷ್ಫಿಕರನ ಹಣೆಗೆ ಬಿದ್ದಿತ್ತು. ಏಟಿನ ಬಲ ಯಾವ ರೀತಿ ಇತ್ತೆಂದರೆ ಒಮ್ಮೆಲೆ ಕೂಗಿಕೊಂಡ ಮುಷ್ಫಿಕರ ತಲೆಯೊಡೆದು ಬಿದ್ದಿದ್ದ. ಎಚ್ಚರ ತಪ್ಪಿತ್ತು. ಒಡೆದ ಹಣೆಯಿಂದ ರಕ್ತ ಧಾರೆ ಧಾರೆಯಾಗಿ ಹರಿಯತೊಡಗಿತ್ತು. ವಿನಯಚಂದ್ರ ಹೊಡೆದು ಬಿಟ್ಟಿದ್ದನಾದರೂ ಆದ ಗಾಯದಿಂದ ಅವಾಕ್ಕಾಗಿ ನಿಂತಿದ್ದ. ಮುಷ್ಫಿಕರನ ಹೆಂಡತಿ ಒಮ್ಮೆ ವಿನಯಚಂದ್ರನನ್ನು ನೋಡಿದವಳೇ ಆತನ ಕೈಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂದು ಎಚ್ಚರತಪ್ಪಿದ್ದ ಮುಷ್ಪಿಕರನ ದೇಹದ ಮೇಲೆಲ್ಲ ಹೊಡೆತಗಳನ್ನು ಬಾರಿಸತೊಡಗಿದ್ದಳು. ತಲೆಗೆ ಬಿದ್ದ ಹೊಡೆತದಿಂದ ಮುಷ್ಫಿಕರ ಎಚ್ಚರ ತಪ್ಪಿದ್ದು ಸ್ಪಷ್ಟವಾಗಿತ್ತು. ಮುಂದಿನ ಹೊಡೆತವೆಲ್ಲ ಆತನ ಹೆಂಡತಿ ತನ್ನ ಭಾವನೆಗಳನ್ನು ಹೊರಹಾಕಲು ಬಳಕೆ ಮಾಡಿಕೊಂಡಿದ್ದಳು. ಮನ ದಣಿಯೆ ಹೊಡೆದ ನಂತರವೇ ಅವಳ ಆವೇಶ ಇಳಿದಿದ್ದು.
            ಇಷ್ಟೆಲ್ಲ ಆಗಿದ್ದರೂ ಆತನ ಬಂಟರಿಗೆ ಏನೋ ತಿಳಿದಿರಲಿಲ್ಲ. ಇದು ಅಚ್ಚರಿಗೂ ಕಾರಣವಾಗಿತ್ತು. ತಕ್ಷಣ ಜಾಗೃತಳಾದ ಮುಷ್ಫಿಕರನ ಹೆಂಡತಿ ವಿನಯಚಂದ್ರನನ್ನು ಹಿಡಿದು ಎಳೆದುಕೊಂಡು ಹೊರಟಳು. ಮಧುಮಿತಾ ಸಾಗಿದ್ದ ಕಳ್ಳ ದಾರಿಯಲ್ಲೇ ಮುಂದಕ್ಕೆ ಸಾಗಿದಳು. ಅಲ್ಲೆಲ್ಲೋ ಒಂದು ಕಡೆ ಸಾಗುವ ದಾರಿಯಲ್ಲಿ ಮಧುಮಿತಾ ನಿಂತುಕೊಂಡಿದ್ದಳು. ಅವಳನ್ನೂ ಕರೆದುಕೊಂಡು ತಾನೇ ಮುಂದಾಳುವಾಗಿ ಹೊರಟಳು ಮುಷ್ಫಿಕರನ ಮಡದಿ. ದಾರಿಯ ಕೊನೆಯಲ್ಲೊಬ್ಬ ಬಂಟ ನಿಂತುಕೊಂಡಿದ್ದ. ಆತನ ಬಳಿ ಅದೇನು ಹೇಳಿದಳೋ ತಕ್ಷಣ ಅವನು ಎತ್ತಲೋ ಹೊರಟುಹೋದ. ನಂತರ ವಿನಯಚಂದ್ರ ಹಾಗೂ ಮಧುಮಿತಾಳನ್ನು ಕರೆದುಕೊಂಡು ಹೊರಬಂದ ಆಕೆ  ಎಲ್ಲೆಲ್ಲೋ ಸುತ್ತಿಸಿ ಯಾವು ಯಾವುದೋ ದಾರಿಯಲ್ಲಿ ಮುಂದಕ್ಕೆ ಕರೆದೊಯ್ದಳು. ಆ ಕೋಟೆಯಂತ ಮನೆಯಲ್ಲಿದ್ದ ಬಂಟರ ಕಣ್ಣಿಗೆ ಕಾಣದಂತೆ ಬಹುದೂರ ಕರೆದೊಯ್ದ ನಂತರ ಸುರಕ್ಷಿತ ಎನ್ನುವಂತಾದ ಮೇಲೆ ವಿನಯಚಂದ್ರ ಹಾಗೂ ಮಧುಮಿತಾ ಹೊರಡುವ ಮಾರ್ಗವನ್ನು ತಿಳಿಸಿ ತಾನು ಮರಳಲು ಅನುವಾದಳು.
        ವಿನಯಚಂದ್ರ ಆಕೆಗೆ ಧನ್ಯವಾದ ಹೇಳಿದ. ಮಧುಮಿತಾ ಕಣ್ತುಂಬಿಕೊಂಡು ಕಾಲಿಗೆ ನಮಸ್ಕರಿಸಲು ಮುಂದಾದಳು. ಆಗ ಮಾತನಾಡಿದ ಮುಷ್ಫಿಕರನ ಹೆಂಡತಿ `ಬೇಡ.. ನಾನೂ ಆತನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ನೀವು ಸಿಕ್ಕಿರಿ. ಆತನಿಗೆ ಈಗ ಏಟು ಬಿದ್ದಿದೆ. ಸತ್ತಿದ್ದಾನೋ? ಬದುಕಿದ್ದಾನೋ ಗೊತ್ತಿಲ್ಲ. ಬದುಕಿದ್ದರೆ ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕುವುದಿಲ್ಲ ಎಂದುಕೊಂಡಿದ್ದೇನೆ. ನೋಡೋಣ ಏನಾಗುತ್ತದೆ ಅಂತ.. ನೀವು ಮುಂದಕ್ಕೆ ಸಾಗಿ. ಇನ್ನು ಐದಾರು ಕಿಮಿ ಸಾಗಿದ ನಂತರ ಹೆದ್ದಾರಿ ಸಿಗುತ್ತದೆ. ಅಲ್ಲಿಯವರೆಗೂ ಓಡುತ್ತಲೇ ಇರಿ. ಯಾವ ಕ್ಷಣದಲ್ಲಿ ಮುಷ್ಫಿಕರನ ಬಂಟರು ನಿಮ್ಮನ್ನು ಹುಡುಕಿ ಬರುತ್ತಾರೆ ಹೇಳುವುದು ಅಸಾಧ್ಯ. ಸಾಧ್ಯವಾದರೆ ಈ ರಸ್ತೆಗೆ ಸಮಾನಾಂತರವಾಗಿ ಮರಗಳ ಮರೆಯಲ್ಲಿ ಸಾಗಿ. ಹೆದ್ದಾರಿಗೆ ಹೋಗುವವರೆಗೆ ಈ ದಾರಿಯನ್ನು, ನಾನು ಹೇಳಿದಂತೆ ಬಳಕೆ ಮಾಡಿ. ಆಮೇಲೆ ಸಮಸ್ಯೆಗಳು ಅಷ್ಟಾಗಿ ಇರುವುದಿಲ್ಲ.. ನಿಮಗೆ ಒಳ್ಳೆಯದಾಗಲಿ.. ಅಲ್ಲಾ ನಿಮ್ಮನ್ನು ಕಾಪಾಡಲಿ .. ' ಎಂದು ಹೇಳಿದವಳೇ ಒಂದೇ ಒಂದು ಮಾತಿಗೆ ಕಾಯದೇ ವಾಪಾಸಾದಳು.
                   ಮಧುಮಿತಾ ಹಾಗೂ ವಿನಯಚಂದ್ರ ಓಡಲು ಆರಂಭಿಸಿದರು. ಮುಷ್ಫಿಕರನ ಹೆಂಡತಿ ಹೇಳಿದ್ದೆಲ್ಲವನೂ ಚಾಚೂತಪ್ಪದೇ ಪಾಲಿಸುತ್ತ ಮುನ್ನಡೆದರು. ಇದರಿಂದಾಗಿ ಅರ್ಧಗಂಟೆಯೊಳಗೆ ಹೆದ್ದಾರಿ ಸಿಕ್ಕಿತು. ಹೆದ್ದಾರಿಯಲ್ಲಿ ವಾಹನ ಸಂಚಾರವೂ ಆರಂಭವಾಗಿತ್ತು.
            ವಿನಯಚಂದ್ರ ಯಾವುದೋ ಒಂದು ವಾಹನಕ್ಕೆ ಕೈ ಮಾಡಿದ. ನಿಂತ ವಾಹನದಲ್ಲಿ ಇಬ್ಬರೂ ತೂರಿಕೊಂಡರು. ಆ ವಾಹನ ಹೆದ್ದಾರಿಗುಂಟ ಸಾಗಿ ಬೋಗ್ರಾಕ್ಕೆ ಕವಲೊಡೆಯುವಲ್ಲಿ ಇವರನ್ನಿಳಿಸಿ ತೆರಳಿತು. ಅಲ್ಲೊಂದಷ್ಟು ಹೊಟೆಲುಗಳು, ಅಂಗಡಿಗಳು ಇದ್ದವು. ಅಲ್ಲೊಂದು ಅಂಗಡಿಯಲ್ಲಿ ಬಾಳೆಯ ಹಣ್ಣು, ಬ್ರೆಡ್ಡುಗಳನ್ನು ತಿಂದು ಹಸಿವನ್ನು ಕಡಿಮೆ ಮಾಡಿಕೊಂಡರು. ನಂತರ ಬಸ್ಸಿಗಾಗಿ ಕಾಯುತ್ತ ನಿಂತರು. ಕೆಲವೇ ಕ್ಷಣದಲ್ಲಿ ಇವರಿಗಾಗಿಯೇ ಬಂತೇನೋ ಎನ್ನುವಂತೆ ಬಸ್ಸೊಂದು ಆಗಮಿಸಿತು. ಖಾಲಿ ಖಾಲಿಯಾಗಿತ್ತು. ತಕ್ಷಣವೇ ಬಸ್ಸಿನ್ನು ಏರಿ ಕುಳಿತವರಿಗೆ ಒಮ್ಮೆ ನಿರಾಳ ಬಾವನೆ.
              `ಮಧು.. ಇಷ್ಟೊತ್ತಿಗೆ ಮುಷ್ಫಿಕರನ ಮನೆಯಲ್ಲಿ ಹುಯ್ಯಲೆದ್ದಿರುತ್ತದೆ ಅಲ್ಲವಾ?'
              `ಹುಂ.. ಖಂಡಿತ.. ಬಹುಶಃ ಅವನ ಬಂಟರು ನಮ್ಮನ್ನು ಹುಡುಕಲು ಆರಂಭಿಸಿರಲೂ ಸಾಕು.. ಇಲ್ಲಿಗೂ ಬಂದು ಬಿಡುತ್ತಾರಾ?'
              `ಏನೋ ಗೊತ್ತಿಲ್ಲ ಮಧು.. ಮುಷ್ಫಿಕರನ ಹೆಂಡತಿ ನಮ್ಮನ್ನು ಕಾಪಾಡಿದಳಲ್ಲ. ಅವಳೇ ಏನಾದರೂ ಮಾಡುತ್ತಾಳೆ ಎನ್ನುವ ವಿಶ್ವಾಸ ನನ್ನದು. ಖಂಡಿತ ಅವಳನ್ನು ನಾವು ನೆನೆಯ ಬೇಕು ಅಲ್ಲವಾ?'
              `ಹೌದು ವಿನು.. ಅವಳಿರಲಿಲ್ಲ ಎಂದರೆ ನೆನಪು ಮಾಡಿಕೋ.. ನಮ್ಮ ಬದುಕು ಇಷ್ಟೊತ್ತಿಗೆ ಚಿಂದಿಯಾಗಿಬಿಡುತ್ತಿತ್ತು. ಯಾವ ಗದ್ದೆಯಲ್ಲಿ ನಾವು ಮಣ್ಣಾಗಿರುತ್ತಿದ್ದೆವೋ.. ಅಲ್ಲವಾ?'
               `ಹುಂ.. ಅವಳನ್ನು ಎಷ್ಟು ನೆನಪು ಮಾಡಿಕೊಂಡರೂ ಸಾಲದು ನೋಡು.. ನಮ್ಮ ಈ ಪಯಣದಲ್ಲಿ ಸಲೀಂ ಚಾಚಾ ಎಷ್ಟು ಮುಖ್ಯಪಾತ್ರವಾಗುತ್ತಾನೋ ಅಷ್ಟೇ ಕೂಡ ಅವಳೂ.. ನಾವು ಅವರನ್ನು ದಿನನಿತ್ಯ ನೆನೆಯಲೇಬೇಕು..'
            ಮಾತು ಹೀಗೆ ಸಾಗಿತ್ತು. ಬಸ್ಸು ಮುಂದಕ್ಕೆ ಸಾಗಿದಂತೆಲ್ಲ ಮನಸ್ಸಿನ ತುಂಬೆಲ್ಲ ನೂರಾರು ಆಲೋಚನೆಗಳು. ದೊಡ್ಡ ಗಂಡಾಂತರದಿಂದ ಪಾರಾದ ಸಂತಸ. ಮಧುಮಿತಾ ಈಗೀಗ ಒಂದೊಂದು ಕನ್ನಡ ಶಬ್ದವನ್ನು ಆಡಲು ಶುರುಮಾಡಿದ್ದಳು. ವಿನಯಚಂದ್ರನೇ ಆಗೀಗ ಆಕೆಗೆ ಹೇಳಿಕೊಟ್ಟಿದ್ದ. ಅದೇ ರೀತಿ ವಿನಯಚಂದ್ರನೂ ಕೂಡ ಬೆಂಗಾಲಿಯಲ್ಲಿ ಮಾತನಾಡತೊಡಗಿದ್ದ. ನಮಸ್ಕಾರಕ್ಕೆ ನಮೋಷ್ಕಾರ್ ಎನ್ನುವುದು, `ವ' ಅಕ್ಷರವಿದ್ದಲ್ಲಿ `ಬ' ಅಕ್ಷರವನ್ನು ಬಳಕೆ ಮಾಡುವುದು ಮಾಡುತ್ತಿದ್ದ.
                `ಮಧು.. ಬೆಂಗಾಲಿಯಲ್ಲಿ ನನ್ನ ಹೆಸರು ಬಿನೋಯ್ಚಂದ್ರ ಆಗುತ್ತಲ್ಲ..' ಎಂದು ಕೇಳಿದ್ದ.  `ಹುಂ ಹೌದು..' ಎಂದು ಅವಳು ಕನ್ನಡದಲ್ಲಿಯೇ ಉತ್ತರಿಸಿದ್ದಳು.
               ಹತಿಕುಮುರುಲ್ ದಾಟಿ ಮುಂದಕ್ಕೆ ಸಾಗಿದಂತೆ ಚಿಕ್ಕದೊಂದು ನದಿ ಸಿಕ್ಕಿತು. `ವಿನು ಅದೋ ನೋಡು ಆ ನದಿಯೆ ಬೆಂಗಾಲಿ ನದಿ.. ನದಿ ಚಿಕ್ಕದು. ಆದರೆ ಹೆಸರು ಇಡೀ ದೇಶದ್ದೇ..' ಎಂದಳು.
                `ಭಾರತದಲ್ಲಿ ಮಾತ್ರ ಭಾರತ ಎಂಬ ನದಿಯಿಲ್ಲ. ಹಿಂದೂಸ್ಥಾನಕ್ಕೆ ಕಾರಣವಾದ ಸಿಂದೂ ಇದೆ. ಆದರೆ ಬಾಂಗ್ಲಾದೇಶದಲ್ಲಿ ಬೆಂಗಾಲಿ ನದಿ ಇದೆ.. ವಾವ್..' ಎಂದ ವಿನಯಚಂದ್ರ.
            ನದಿಯ ದಡದಲ್ಲೆಲ್ಲ ಗದ್ದೆಗಳು, ಮನೆಗಳು ಸಾಕಷ್ಟಿದ್ದವು. ಅಲ್ಲೊಮ್ಮೆ ಇಲ್ಲೊಮ್ಮೆ ಅಡಿಕೆಯ ತೋಟಗಳೂ ಕಾಣಿಸಿದ್ದವು. ವಿನಯಚಂದ್ರ ಅಚ್ಚರಿಯಿಂದ ನೋಡಿದ್ದ. ಕೊನೆಗೆ ತನ್ನ ಮನೆಯಲ್ಲಿ ಯಾವಾಗಲೋ ಒಮ್ಮೆ ಅಡಿಕೆ ದರ ಕುಸಿತದ ವಿಷಯ ಬಂದಾಗ ಅಪ್ಪ `ಬಾಂಗ್ಲಾದಿಂದ ಅಡಿಕೆ ಕಳ್ಳಮಾಲಿನ ರೂಪದಲ್ಲಿ ಭಾರತಕ್ಕೆ ಬರ್ತಾ ಇದೆಯಂತೆ.. ಆ ಕಾರಣಕ್ಕೆ ನಮ್ಮಲ್ಲಿ ಅಡಿಕೆ ದರ ಕುಸಿತವಾಗಿದೆ..' ಎಂದಿದ್ದು ನೆನಪಾಯಿತು. ಅಡಿಕೆ ತೋಟದಲ್ಲಿ ಫಸಲೂ ಕೂಡ ಸಾಕಷ್ಟಿತ್ತು. ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ದರವನ್ನು ಏರಿಳಿತ ಮಾಡುವಷ್ಟು ಸಾಮರ್ಥ್ಯ ಈ ಅಡಿಕೆ ತೋಟಗಳಿಗಿದೆಯಲ್ಲ ಎಂದುಕೊಂಡ ಆತ.
              ಮತ್ತೊಂದು ಅರ್ಧಗಂಟೆಯ ಪ್ರಯಾಣ ಬಳಿಕ ಭುಯಿಯಾಘಟಿ ಎನ್ನುವ ಗ್ರಾಮ ಸಿಕ್ಕಿತು. ಅಲ್ಲಿಗೆ ಬರುವ ವೇಳೆಗೆ ಬಸ್ಸು ಸಂಪೂರ್ಣ ಭರ್ತಿಯಾಗಿ ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರಿಗೂ ಮೊದಲೇ ಸೀಟು ಸಿಕ್ಕಿತ್ತಾದ್ದರಿಂದ ಜನಜಂಗುಳಿಯಲ್ಲಿ ಒದ್ದಾಡುವ ಪ್ರಸಂಗ ಎದುರಾಗಲಿಲ್ಲ. ಬಸ್ಸಿನಲ್ಲಿ ಜನಜಂಗುಳಿ ಎಷ್ಟೊತ್ತಪ್ಪಾ ಎಂದರೆ ಒಂದಿಬ್ಬರು ವಿನಯಚಂದ್ರನ ಮೈಮೇಲೆ ಒರಗಿಕೊಂಡೇ ನಿಂತಿದ್ದರು. ವೇಗವಾಗಿ ಸಾಗುತ್ತಿದ್ದ ಬಸ್ಸು ಗಾಳಿಯನ್ನು ಸೀಳುತ್ತಿದ್ದರೂ ಒಳಗಿದ್ದವರು ಮಾತ್ರ ಬೆವರಿ ನೀರಾಗಿದ್ದರು.
              ಧನಕುಂಡಿ ಎನ್ನುವ ಊರನ್ನು ತಲುಪುವ ವೇಳೆಗೆ ಬಸ್ಸು ಅಸಹನೀಯ ಎನ್ನಿಸತೊಡಗಿತ್ತು. ಬಸ್ಸಿನ ಟಾಪಿನ ಮೇಲೆಲ್ಲ ಜನರು ಕುಳಿತಿದ್ದರು. ಈಗಾಗಲೇ ಒಂದೂವರೆ ತಾಸು ಬಸ್ಸು ಪ್ರಯಾಣ ಮಾಡಿದ್ದವರು ಇನ್ನೂ ಎರಡು ತಾಸಿಗಿಂತ ಅಧಿಕ ಪ್ರಯಾಣ ಕೈಗೊಳ್ಳಬೇಕಿತ್ತು. ಪ್ರಮುಖ ಪಟ್ಟಣವಾದ ಶೇರ್ ಪುರವನ್ನು ತಲುಪುವ ವೇಳೆಗೆ ಆಗಸವಾಗಲೇ ಕೆಂಪಡರಿತ್ತು. ಮೂರು ತಾಸುಗಳ ಪಯಣ ಮೈಮನಸ್ಸುಗಳನ್ನು ಕದಡಿಬಿಟ್ಟಿತ್ತು. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಆದರೂ ಬೋಗ್ರಾವನ್ನು ತಲುಪುವುದು ಅನಿವಾರ್ಯವಾದ ಕಾರಣ ಇಬ್ಬರೂ ಸಹಿಸಿಕೊಂಡಿದ್ದರು. ಶೇರ್ ಪುರ ಸಾಕಷ್ಟು ದೊಡ್ಡದಾದ ನಗರಿಯೇ. 20-25 ಕಿ.ಮಿ ವಿಸ್ತಾರವಾಗಿರುವ ನಗರ ಎಂದರೂ ತಪ್ಪಿಲ್ಲ. ಪಕ್ಕದ ಹಾಜಿಪುರವನ್ನೂ ತನ್ನೊಳಗೆ ನುಂಗಿಕೊಂಡು ಬೆಳೆಯುತ್ತಿದೆ ಶೇರ್ ಪುರ. ಒಂದರ್ಧ ಗಂಟೆಯ ವಿರಾಮದ ನಂತರ ಬಸ್ಸು ಮುಂದಕ್ಕೆ ಹೊರಟಿತು.
             `ವಿನೂ.. ಇಲ್ಲೊಂದು ಊರಿದೆ ನೋಡು.. 9.ಮೈಲ್.. ಅಂತ.. ಎಂತ ಮಜವಾಗಿದೆಯಲ್ಲ..' ಎಂದು ಕೇಳಿದಳು ಮಧುಮಿತಾ. ತಕ್ಷಣ ವಿನಯಚಂದ್ರನಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಫುರ ತಾಲೂಕಿನಲ್ಲಿ `16ನೇ ಮೈಲ್' ಎಂಬ ಊರು ಇರುವುದು ನೆನಪಿಗೆ ಬಂದಿತು. ಮಧುಮಿತಾನ ಬಳಿ ಹೇಳಿದ. `ಆ ಹೆಸರು ಬಂದಿದ್ದೇಕೆ..?' ಕೇಳಿದ್ದಳು.
           `ನನಗೂ ಸರಿಯಾಗಿ ಗೊತ್ತಿಲ್ಲ.. ಬಹುಶಃ ಆ ಊರಿನಿಂದ ಶಿರಸಿಗೆ 16 ಮೈಲು ದೂರವಾಗುತ್ತದೆ ಎಂಬ ಲೆಕ್ಖವಿರಬೇಕು.. ಮುಂಚೆ ಘಟ್ಟದ ಕೆಳಗೆ ಅಂದರೆ ಕರಾವಳಿಯಿಂದ ಕಾಲ್ನಡಿಗೆಯಲ್ಲಿ ಬಂದವರು ಆ ಊರಿನ ಬಳಿ ಬರುತ್ತಿದ್ದರಂತೆ. ಅಲ್ಲಿ ಉಳಿಯುವ ವ್ಯವಸ್ಥೆ ಕೈಗೊಳ್ಳಲಾಗುತ್ತಿತ್ತಂತೆ. ಅಲ್ಲಿ ವಿಶ್ರಾಂತಿ ಪಡೆದು ನಂತರ ಪ್ರಯಾಣ ಮಾಡುತ್ತಿದ್ದರಂತೆ. ಆ ಕಾರಣಕ್ಕೆ ಆ ಹೆಸರನ್ನು ಇಟ್ಟಿರಬಹುದು. ಇದು ಬ್ರಿಟೀಷರ ಕಾಲದ್ದು..' ಎಂದ ವಿನಯಚಂದ್ರ. ಮಧುಮಿತಾಳಿಗೆ ಎಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ.
           `ಹೇಯ್.. ನೀ ಹೇಳಿದ್ದು ನಿಜವೇ ಇರಬೇಕು.. ನೋಡು ಶೇರ್ ಪುರದಿಂದ 9ನೇ ಮೇಲ್ ಗೆ 9 ಮೈಲು ದೂರವಿದೆ.. ಈ ಊರಿಗೂ ಅದೇ ಕಾರಣಕ್ಕೆ ಹೀಗೆ ಹೆಸರು ಇಟ್ಟಿರಬೇಕು..' ಎಂದಳು ಮಧುಮಿತಾ. ವಿನಯಚಂದ್ರ ನಕ್ಕ. ಮತ್ತೊಂದು ಅರ್ಧತಾಸಿನ ಪ್ರಯಾಣದ ನಂತರ ಸುಲ್ತಾನ್ ಗಂಜ್ ಎಂಬ ಪ್ರದೇಶ ಸಿಕ್ಕಿತು. ಮತ್ತೊಂದು ತಾಸಿನ ನಂತರ ಬೋಗ್ರಾ ಸಿಕ್ಕಿತು. ಅಲ್ಲಿಗೆ ತೆರಳುವ ವೇಳೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸಾಕಷ್ಟು ಹಣ್ಣಾಗಿದ್ದರು.

(ಮುಂದುವರಿಯುತ್ತದೆ.)

No comments:

Post a Comment