(ಜಮುನಾ ನದಿಯ ಬಂಗಬಂಧು ಸೇತುವೆ) |
ಯಾವ ಕಾಲದ್ದೋ ಆಟೋ. ನಿಧಾನವಾಗಿ ಸಾಗುತ್ತಿತ್ತು. ಶಬ್ದವನ್ನು ಮಾಡುತ್ತಿದ್ದ ಅಬ್ಬರ ವೇಗಕ್ಕೆ ಇರಲಿಲ್ಲ. ಹಿಂಬದಿ ಕುಳಿತವರಿಗೆ ಆಟೋದ ರೌರವ ಸದ್ದು, ಅದು ಹೊರ ಸೂಸುತ್ತಿದ್ದ ಹೊಗೆ, ಕೋಳಿ ಹಿಕ್ಕೆಯ ವಾಸನೆಯ ಜೊತೆಗೆ ಮಿಶ್ರವಾಗಿ ಹೇಳಿಕೊಳ್ಳಲಾಗದಂತಹ ಯಾತನೆ ಆರಂಭವಾಯಿತು. ಇಬ್ಬರಿಗೂ ಹೊಟ್ಟೆ ತೊಳೆಸಲು ಆರಂಭವಾಯಿತು. ಆಟೋದಿಂದ ತಲೆಯನ್ನು ಹೊರಕ್ಕೆ ಹಾಕಿ ಶುದ್ಧ ಗಾಳಿ ಸಿಗುತ್ತದೆಯೇ ಎಂದು ಪ್ರಯತ್ನಿಸಿದರು. ಆಟೋ, ಕೋಳಿಗಳ ಹಿಕ್ಕೆಯ ವಾಸನೆಯ ಎದುರು ಅವರ ಪ್ರಯತ್ನ ವಿಫಲವಾಯಿತು ಎಂದೇ ಹೇಳಬಹುದು. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲು ಕಡಿಮೆಯಾಗುತ್ತಲಿತ್ತು. ಅಲ್ಲಲ್ಲಿ ಕುರುಚಲು ಕುರುಚಲು ಮರಗಳು, ಪೊದೆಗಳು ಕಾಣಲು ಆರಂಭಿಸಿದ್ದವು. ವಾತಾವರಣ ಮತ್ತಷ್ಟು ಹಸಿರಾಗಲು ಆರಂಭಿಸಿತ್ತು. ಹತ್ತಿರದಲ್ಲೇ ನದಿಯಿದೆ ಎಂದುಕೊಂಡ ವಿನಯಚಂದ್ರ.
`ವಿನು.. ಈಗ ನಾವು ದೊಡ್ಡದೊಂದು ಸೇತುವೆ ದಾಟಬೇಕಿದೆ. ಬ್ರಹ್ಮಪುತ್ರಾ ನದಿ ಸೇತುವೆ. ಅದಕ್ಕೆ ಇಲ್ಲಿ ಜಮುನಾ ನದಿ ಎಂದು ಕರೆಯುತ್ತಾರೆ. ಸೇತುವೆ ಬಹು ದೀರ್ಘವಾಗಿದೆ. ನಾನು ಚಿಕ್ಕಂದಿನಲ್ಲಿ ಶಾಲಾ ಪ್ರವಾಸಕ್ಕೆ ಈ ಸೇತುವೆ ನೋಡಲು ಬಂದಿದ್ದೆ. ಸೇತುವೆಯ ಮಧ್ಯದಲ್ಲಿ ನಿಂತು ತೂರಿ ಬರುವ ಗಾಳಿಗೆ ಮುಖ ಕೊಟ್ಟರೆ ಆಹಾ.. ಎಂತ ಆನಂದ ಅಂತೀಯಾ.. ನದಿಯ ಮಧ್ಯದಲ್ಲೊಂದು ದ್ವೀಪವಿದೆ. ಅಲ್ಲೊಂದಷ್ಟು ಮನೆಗಳಿವೆ. ಗದ್ದೆಗಳೂ ಇವೆ. ಮಳೆಗಾಲ ಬಂತೆಂದರೆ ಆ ದ್ವೀಪ ಮುಳುಗಿ ಹೋಗುತ್ತದೆ. ಅಷ್ಟಲ್ಲದೇ ನದಿಯಲ್ಲಿ ಪ್ರವಾಹ ಏರಿ ಇಕ್ಕೆಲಗಳ ಹತ್ತಿಪ್ಪತ್ತು ಕಿಲೋಮೀಟರ್ ಗಳನ್ನು ಮುಳುಗಿಸಿಬಿಡುತ್ತದೆ. ಆಗ ಬಾಂಗ್ಲಾ ಎನ್ನುವುದು ಅಕ್ಷರಶಃ ನರಕ. ಎಲ್ಲೆಲ್ಲೂ ನೀರು. ನೂರಾರು ಮೈಲುಗಳ ವರೆಗೆ ನೀರು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ ನೋಡು' ಎಂದಳು ಮಧುಮಿತಾ. ವಿನಯಚಂದ್ರ ಹೂಂ ಅಂದ.
`1971ರಲ್ಲಿ ಸಂದರ್ಭದಲ್ಲಿ ನದಿಗೆ ಸೇತುವೆ ಇರಲಿಲ್ಲ. 1990ರ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸೆತುವೆಯಂನ್ನೇ ಬಂಗಬಂಧು ಸೇತುವೆ ಎಂದು ಕರೆಯಲಾಗುತ್ತದೆ. ಬಾಂಗ್ಲಾದ ಬಹುದೊಡ್ಡ ಸೇತುವೆಗಳಲ್ಲಿ ಇದೂ ಒಂದು. ರಾತ್ರಿಯ ವೇಳೆ ಈ ಸೇತುವೆಗೆ ಲೈಟ್ ಹಾಕಲಾಗುತ್ತದೆ. ಆಗ ಎಷ್ಟು ಚಂದ ಕಾಣುತ್ತದೆ ಗೊತ್ತಾ ಇದು..ಓಹ್.. ಪಾಕಿಸ್ತಾನ ಈ ನದಿಯನ್ನು ದಾಟಲು ಬಹಳ ಹರಸಾಹಸ ಮಾಡಿತ್ತು. ಬಾಂಗ್ಲಾದ ಬಡಪಾಯಿ ಜನರೂ ಈ ನದಿಯಿಂದ ಆಗ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. ಬೆನ್ನ ಹಿಂದೆ ಪಾಕಿಸ್ತಾನ ಸೇನೆ ರಣಹದ್ದುಗಳಂತೆ ಬೆನ್ನಟ್ಟಿ ಬರುತ್ತಿದ್ದರೆ ಮುಂದೆ ಈ ನದಿ ಅಡ್ಡಾಗಿತ್ತು. ಅದನ್ನು ದಾಟಲಾಗದೇ ಹಲವರು ಪಾಕಿಸ್ತಾನಿ ಸೇನೆಯ ಫಿರಂಗಿಗಳಿಗೆ, ಬಂದೂಕುಗಳಿಗೆ ಬಲಿಯಾಗಿದ್ದರು. ನದಿಯನ್ನು ಕಷ್ಟಪಟ್ಟು ಈಜಿ ದಾಟಿದ ಕೆಲವೇ ಕೆಲವು ಮಂದಿ ಮುಂದೆ ಬಾಂಗ್ಲಾದ ನದಿಯಾಚೆಗಿನ ಪ್ರದೇಶಕ್ಕೆ ಹೋದರು. ಕೊನೆಗೊಮ್ಮೆ ಭಾರತಕ್ಕೂ ನಿರಾಶ್ರಿತರಾಗಿ ಹೋಗಬೇಕಾಯಿತು. 1971ರ ಸಮಯದಲ್ಲಿ ಈ ನದಿಯಲ್ಲಿ ಉರುಳಿದ ಹೆಣಗಳು ಲಕ್ಷಕ್ಕೂ ಅಧಿಕ ಎಂದು ಅಂದಾಜು ಮಾಡಲಾಗುತ್ತದೆ. ನದಿ ನೀರು ರಕ್ತದಿಂದ ಕೆಂಪಾಗಿ ಹರಿಯುತ್ತಿತ್ತು ಎಂದೂ ಹೇಳುತ್ತಾರೆ. ಬೇಸಿಗೆಯಲ್ಲಿ ತಣ್ಣಗೆ ಹರಿಯುವ ನದಿಯ ಆರ್ಭಟವನ್ನು ನೋಡಬೇಕಾದರೆ ಮಳೆಗಾಲ ಬರಬೇಕು..' ಎಂದಳು.
ಅಷ್ಟರಲ್ಲಿ ಆಟೋದಲ್ಲಿದ್ದ ಕೋಳಿಗಳ ಕೂಗನ್ನೂ ಮೀರಿಸುವಂತಹ ಕರ್ಕಶ ಧ್ವನಿಯೊಂದು ರಾಗ ರಾಗವಾಗಿ ಕೇಳಿಬರಲಾರಂಭಿಸಿತು. ವಿನಯಚಂದ್ರ ಹಾಗೂ ಮಧುಮಿತಾ ಮೊದ ಮೊದಲು ಬೆಚ್ಚಿದರೂ ಕೊನೆಗೆ ಗಮನವಿಟ್ಟು ಕೇಳಿದಾಗ ಆಟೋ ಡ್ರೈವರ್ ಹಾಡುತ್ತ ಸಾಗುತ್ತಿದ್ದ ಎನ್ನುವುದು ಸ್ಪಷ್ಟವಾಯಿತು. ಮೊದಲೇ ಕಂಗೆಟ್ಟಿದ್ದ ಇವರಿಗೆ ಇನ್ನೊಂದು ಹೊಸ ಬಗೆಯ ಸಮಸ್ಯೆ ಎದುರಾದಂತಾಯಿತು. ಬೆಂಗಾಲಿಯಲ್ಲಿ ಯಾವುದೋ ಹಾಡನ್ನು ತನ್ನ ಲಹರಿಯಲ್ಲಿ ಆ ಡ್ರೈವರ್ ಹಾಡುತ್ತಲೇ ಇದ್ದ. ಯಾವುದೋ ಬೆಂಗಾಲಿ ಸಿನೆಮಾದ್ದಿರಬೇಕು. ತನ್ನ ಖುಷಿಗೆ, ತನ್ನ ಪಾಡಿಗೆ ತಾನು ಹಾಡುತ್ತಿದ್ದ. ಆದರೆ ವಾಹನದ ಹಿಂಬದಿ ಇದ್ದವರು ಮಾತ್ರ ಅದನ್ನು ಕೇಳಲಾರದೇ ತೊಂದರೆ ಪಡುವಂತಾಗಿತ್ತು. ವಿಚಿತ್ರವೆಂದರೆ ಆತ ಹಾಡು ಹೇಳಲು ಆರಂಭಿಸಿದ ನಂತರ ಒಂದೇ ಒಂದು ಕೋಳಿ ಸಹ ಧ್ವನಿಯನ್ನು ಹೊರ ಹಾಕಲಿಲ್ಲ. ಯಾರೋ ಗಪ್ ಚುಪ್ ಎಂದರೋ ಎಂಬಂತೆ ಸುಮ್ಮನೆ ಕುಳಿತಿದ್ದವು.!
ಅಂತೂ ಇಂತೂ ಒಂದು ತಾಸು ಪ್ರಯಾಣ ಮಾಡಿದ ಬಳಿಕ ಆ ಆಟೋದಿಂದ ಇಳಿಯುವ ಸಮಯ ಬಂದಿತು. ನಡೆದು ಬಂದಿದ್ದರೆ ಇನ್ನಷ್ಟು ಆರಾಮಾಗಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ. ಜಮುನಾ ಇಕೋ ಪಾರ್ಕಿನ ಪಕ್ಕದ ರಸ್ತೆಯ ಕಡೆಗೆ ಆ ಆಟೋದವನು ತೆರಳುವವನಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಂದ ದುಡ್ಡನ್ನು ಪಡೆದು ಮುಂದಕ್ಕೆ ಹೋದ. ಆತ ಅತ್ತ ಹೋದ ನಂತರ ಇವರು ನಿರಾಳರಾದರು. ಜಮುನಾ ನದಿಯಿಂದ ಹಾದು ಬರುತ್ತಿದ್ದ ಶುದ್ಧ ಗಾಳಿಯನ್ನು ಮೂಗರಳಿಸಿ ದೇಹದೊಳಕ್ಕೆ ಎಳೆದುಕೊಂಡರು. ಒಮ್ಮೆ ಹಾಯೆನ್ನಿಸಿತು. ಸ್ನಾನ ಮಾಡಿದ್ದರೆ ಚನ್ನಾಗಿತ್ತು ಎಂದೂ ಅನ್ನಿಸದೇ ಇರಲಿಲ್ಲ.
ಅಲ್ಲಿಂದ ಜಮುನಾ (ಬ್ರಹ್ಮಪುತ್ರ) ಕಾಣುತ್ತಿತ್ತು. ಭಾರತದಲ್ಲಿ ಬ್ರಹ್ಮಪುತ್ರ ಎಂದು ಗಂಡು ಹೆಸರಿನಿಂದ ಕರೆಯಲ್ಪಡುವ ನದಿ ಬಾಂಗ್ಲಾ ನಾಡಿನಲ್ಲಿ ಜಮುನಾ ಆಗಿ ಬದಲಾಗುತ್ತದಲ್ಲ ಎನ್ನಿಸಿತು. ಗಂಡು ನದಿ ಇಲ್ಲಿ ಹೆಣ್ಣು ನದಿಯಾಗಿ ಬದಲಾಗುತ್ತದೆಯಲ್ಲ ಎಂದುಕೊಂಡ ವಿನಯಚಂದ್ರ. ರಾತ್ರಿಯಾಗುವುದರೊಳಗೆ ನದಿ ದಾಟಿಬಿಡಬೇಕು ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದರು. ಕೆಲವೇ ನಿಮಿಷದ ಅವಧಿಯಲ್ಲಿ ಜಮುನಾ ನದಿ ಕಣ್ಣಮುಂದೆ ವಿಸ್ತಾರವಾಗಿ ಕಾಣಿಸಿತು. ರಸ್ತೆಯ ಒಂದು ಪಕ್ಕದಲ್ಲಿ ಜಮುನಾ ಇಕೋ ಪಾರ್ಕ್ ಇತ್ತು. ಇನ್ನೊಂದು ಪಕ್ಕದಲ್ಲಿ ಯಾವುದೋ ಒಂದು ಚಿಕ್ಕ ನದಿ ಜಮುನಾ ನದಿಯನ್ನು ಬಂದು ಸೇರುತ್ತಿತ್ತು. ಹೆದ್ದಾರಿಗೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಅದೆಷ್ಟೋ ದೂರವಿದ್ದಂತೆ ಕಾಣಿಸುತ್ತಿತ್ತು. ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ಗಾಳಿ ಸುಂಯ್ ಎಂದು ಶಬ್ದ ಮಾಡುತ್ತಿತ್ತು.
ನಿಧಾನವಾಗಿ ಹೆಜ್ಜೆ ಹಾಕಿದರು. ಜಮುನಾ ನದಿಯ ನಟ್ಟ ನಡುವೆಯೆಲ್ಲೋ ನೀರಿನ ಸೆಳವು ಇರಬೇಕು. ಸೇತುವೆ ಮೇಲಿನಿಂದ ಕಾಣುತ್ತಿತ್ತು. ಉಳಿದಂತೆ ನೀರು ನಿಂತಂತೆ ಇತ್ತು. ಆದರೆ ನದಿ ಸಾಕಷ್ಟು ಆಳವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಮುಂದೆ ಮುಂದೆ ಸಾಗಿದಂತೆಲ್ಲ ನದಿಯ ಅಗಾಧತೆ ಇವರನ್ನು ಸೆಳೆಯಿತು. ವಿನಯಚಂದ್ರ `ಆಹ್.. ಈ ನದಿಯ ಸಮ್ಮುಖದಲ್ಲಿ ನಾನು ಕವಿಯಾಗೋಣ, ಸುಮ್ಮನೆ ಕಳೆದುಹೋಗೋಣ ಎನ್ನಿಸುತ್ತಿದೆ. ನಮ್ಮೂರ ಸನಿಹ ಹರಿಯುವ ಅಘನಾಶಿನಿ ನದಿಯಲ್ಲಿ ಈಜಿದ್ದೆ. ಈ ನದಿಯಲ್ಲಿಯೂ ಈಜಬೇಕು ಅಂತ ಮನಸ್ಸಾಗುತ್ತಿದೆ..' ಎಂದ.
`ಅಂತ ಹುಚ್ಚು ಸಾಹಸಕ್ಕೆ ಕೈ ಹಾಕಬೇಡ ಮಾರಾಯಾ.. ಈ ನದಿಯಲ್ಲಿ ಈಜುವುದು ಅಷ್ಟು ಸುಲಭವಲ್ಲ. ನದಿ ಮಧ್ಯದಲ್ಲಿ ಭಾರಿ ಸೆಳವಿದೆ. ಒಂದೇ ಏಟಿಗೆ ಕೊಚ್ಚಿಕೊಂಡು ಹೋಗುತ್ತದೆ. ಎಂತಹ ನುರಿತ ಈಜುಗಾರನಿದ್ದರೂ ಅವನನ್ನು ತನ್ನೊಳಗೆ ಎಳೆದುಕೊಂಡು ಜಲಸಮಾಧಿ ಮಾಡುವ ತಾಕತ್ತು ಜಮುನೆಗಿದೆ. ಈಜುವವರು ಅತ್ಲಾಗಿರಲಿ ಬಾಂಗ್ಲಾದಲ್ಲಿ ದೊಡ್ಡ ದೊಡ್ಡ ದೋಣಿಗಳನ್ನು ಸಂಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಅವನ್ನು ತನ್ನ ಒಡಲೊಳಗೆ ಎಳೆದುಕೊಂಡು ಬಿಡುತ್ತಾಳೆ ಈಕೆ. ಅದಕ್ಕಾಗಿಯೇ ವಿಶ್ವದಲ್ಲಿ ಅಮೇಝಾನ್ ನದಿಯನ್ನು ಬಿಟ್ಟರೆ ಅತ್ಯಂತ ಹೆಚ್ಚು ದೋಣಿ ದುರಂತಗಳು ಸಂಭವಿಸುವುದು ಬಾಂಗ್ಲಾದಲ್ಲಿ. ಅದೂ ಕೂಡ ಇದೇ ನದಿಯಲ್ಲಿ. ಒಂದೊಂದು ದೋಣಿಯಲ್ಲೂ ನೂರಿನ್ನೂರು ಜನ ಪ್ರಯಾಣ ಮಾಡುತ್ತಾರೆ. ದೋಣಿ ಮುಳುಗಿದಾಗ ಅವರಲ್ಲಿ ಒಂದಿಬ್ಬರು ಬದುಕಿ ಉಳಿದರೂ ಪವಾಡವೇ..' ಎಂದಳು.
`ಹುಂ..' ಎಂದು ಸುಮ್ಮನಾದ ವಿನಯಚಂದ್ರ ಸುಮ್ಮನೆ ನಡೆಯತೊಡಗಿದ. ಕೆಲ ಹೊತ್ತಿನ ಬಳಿಕ `ಈ ಸೇತುವೆ ಬಹಳ ಚನ್ನಾಗಿದೆ ಕಣೆ. ಸಾಕಷ್ಟು ಆಧುನಿಕವೂ ಹೌದು. ಎರಡೂ ಪಕ್ಕದಲ್ಲಿ ಲೈಟ್. ದೊಡ್ಡ ದೊಡ್ಡ ವಿದ್ಯುತ್ ಕಂಬಗಳು, ಪಕ್ಕದಲ್ಲಿ ರೈಲ್ವೆ ಮಾರ್ಗ ಕೂಡ ಇದೆ. ಬಂಗಬಂಧು.. ಸೇತುವೆಯ ಹೆಸರೂ ಚನ್ನಾಗಿದೆ...' ಎಂದ.
`ಹೌದು.. ಬಾಂಗ್ಲಾ ದೇಶದ ಎರಡು ಪ್ರಮುಖ ಭಾಗಗಳನ್ನು ಒಂದುಗೂಡಿಸುವ ಸೇತುವೆ ಇದು. ಅದಕ್ಕೇ ಈ ಹೆಸರಿದೆ. ತೀರಾ ಇತ್ತೀಚಿನ ದಿನಗಳಲ್ಲಿ ಈ ಸೇತುವೆಯ ಮೂಲಕ ಪ್ರವಾಸೋದ್ಯಮವನ್ನೂ ಕೈಗೊಳ್ಳಲಾಗುತ್ತಿದೆ. ರಾತ್ರಿ ವೇಳೆ ಲೈಟ್ ಹಾಕುತ್ತಾರಲ್ಲ.. ಅದನ್ನು ನೋಡಲೆಂದೇ ದೂರ ದೂರದ ಪ್ರದೇಶದಿಂದ ಜನರು ಬರುತ್ತಾರೆ. ಆದರೆ ಇವತ್ತು ಲೈಟ್ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ. ನಾಡಿನ ತುಂಬೆಲ್ಲ ಹಿಂಸಾಚಾರ ಭುಗಿಲೆದ್ದಿದೆ. ಇವತ್ತು ಈ ಸೇತುವೆಯ ಮೇಲೆ ವಿದ್ಯುದ್ದೀಪಗಳು ಉರಿದರೆ ಅಚ್ಚರಿ ಎನ್ನಬಹುದು...' ಎಂದಳು.
ಸೂರ್ಯ ಅದಾಗಲೇ ಬಾನಿನ ಅಂಚಿಗೆ ಜಾರಿದ್ದ. ಪಡುವಣ ಬಾನು ಆಗಲೇ ಕೆಂಪಾಗಿ ನಾಚಿತ್ತು. `ನಿಮ್ಮ ಬಾಂಗ್ಲಾ ಸರ್ಕಾರ ಲೈಟ್ ಹಾಕದಿದ್ದರೆ ಏನಂತೆ.. ಅದೋ ನೋಡು ಬಾನಲ್ಲಿ ಸೂರ್ಯ ಕೆಂಪಾಗಿದ್ದಾನೆ. ಆತನೇ ನಮ್ಮ ಪಾಲಿಗೆ ಬಹುದೊಡ್ಡ ಲೈಟ್. ಸೇತುವೆ ದಾಟುತ್ತಿರುವ ಪ್ರೇಮಿಗಳನ್ನು ನೋಡಿ ಆತ ನಾಚಿಬಿಟ್ಟಿದ್ದಾನೆ. ನೋಡು ಆತನ ಮುಖ ಅದೆಷ್ಟು ಕೆಂಪಾಗಿದೆ ಅಂತ..' ಎಂದ ವಿನಯಚಂದ್ರ.
`ಹೂಂ... ನೀನು ಕವಿಯಾಗುತ್ತಿದ್ದೀಯಾ... ಓ ದೇವರೆ...' ಎಂದಳು.. ಹಾಗೆಂದವಳೇ ವಿನಯಚಂದ್ರನ ಕೆನ್ನೆಗೊಂದು ಮುತ್ತನ್ನು ನೀಡಿದಳು. ವಿನಯಚಂದ್ರ ಒಮ್ಮೆ ಅಚ್ಚರಿಗೊಂಡ. `ಆಹಾ.. ಇಂತಹ ಮುತ್ತುಗಳು ಸಿಗುತ್ತದೆ ಅಂತಾದರೆ ಮತ್ತಷ್ಟು ಒಳ್ಳೊಳ್ಳೆಯ ಸಾಲುಗಳನ್ನು ನಾನು ಪುಂಖಾನುಪುಂಖವಾಗಿ ಹೇಳುವಂತೆ ಮಾಡು ದೇವರೆ..' ಎಂದು ಬೇಡಿಕೊಂಡ. ಮಧುಮಿತಾಳನ್ನು ನೋಡಿ ಕಣ್ಣುಮಿಟುಕಿಸಿದ. ಮಧುಮಿತಾ ವಿನಯಚಂದ್ರನನ್ನು ಹಿತವಾಗಿ ಜಿಗುಟಿದಳು.
(ಬಂಗಬಂಧು ಸೇತುವೆಯ ಇನ್ನೊಂದು ನೋಟ) |
`ಬೇಡ ಮಾರಾಯಾ.. ಅಂತಹ ಕೆಲಸ ಮಾಡಬೇಡ. ಈಗ ನಿನಗೆ ಇದು ಸ್ವರ್ಗ. ಮಳೆಗಾಲದಲ್ಲಿ ಇದೆಲ್ಲ ನೀರಿನಡಿ ಮುಳುಗಿರುತ್ತದೆ. ನೀನೂ ಇರುವುದಿಲ್ಲ. ನಿನ್ನ ಜಮೀನೂ ಇರುವುದಿಲ್ಲ.. ಅಂತಹ ಆಲೋಚನೆ ಮಾಡೋದೇ ಬೇಡ..' ಎಂದಳು.
`ಮಳೆಗಾಲ ಕಳೆದಾಗ ನಮ್ಮದಾಗುವ, ಮಳೆಗಾಲ ಬಂದಾಗ ಸರ್ಕಾರ ನೋಡಿಕೊಳ್ಳುವಂತಹ ಯೋಜನೆಗಳಿದ್ದರೆ ಹೇಳು ಮಾರಾಯ್ತಿ. ಮಳೆಗಾಲದಲ್ಲಿ ಸರ್ಕಾರಕ್ಕೆ ಈ ಜಮೀನು ವಾಪಾಸು ಕೊಟ್ಟು ಪರಿಹಾರ ಪಡೆದುಕೊಳ್ಳೋಣ. ಬೇಸಿಗೆ ಬಂದ ತಕ್ಷಣ ವಾಪಾಸು ಬಂದು ಬೇಸಾಯ ಮಾಡೋಣ..' ಎಂದ ವಿನಯಚಂದ್ರ. `ಸಾಕು ಸುಮ್ಮನೆ ಬಾರೋ..' ಎಂದು ಆತನ ಕೈ ಹಿಡಿದು ಮುಂದಕ್ಕೆ ಎಳೆದುಕೊಂಡು ಹೊರಟಳು. ವಿನಯಚಂದ್ರ ನಗುತ್ತಿದ್ದ.
ಆ ದ್ವೀಪದ ಮಧ್ಯದಲ್ಲೊಂದು ಕಾರ್ಖಾನೆಯಿತ್ತು. ಅದ್ಯಾವ ಕಾರ್ಖಾನೆ ಎಂಬುದು ಸ್ಪಷ್ಟವಾಗಲಿಲ್ಲ. ಕಾರ್ಖಾನೆಯ ಸುತ್ತ 25 ಅಡಿಗೂ ಎತ್ತರದ ದಪ್ಪನೆಯ ಸಿಮೆಂಟ್ ಗೋಡೆ ನಿರ್ಮಾಣ ಮಾಡಲಾಗಿತ್ತು. ಕಾರ್ಖಾನೆಯಿಂದ ಹೊಗೆ ಉಗುಳುವ ಚಿಮಣಿಗಳು ಮಾತ್ರ ಕಾಣುತ್ತಿದ್ದವು. `ನೋಡು.. ಆ ಕಾರ್ಖಾನೆಯವರು ನದಿಯ ಪ್ರವಾಹದ ನೀರನ್ನು ತಡೆಯುವ ಸಲುವಾಗಿ ಏನೆಲ್ಲ ಪ್ರಯತ್ನ ಮಾಡಿಕೊಂಡಿದ್ದಾರೆ. ಆದರೂ ಮಳೆಗಾಲದಲ್ಲಿ ಅಲ್ಲಿ ನೀರು ನುಗ್ಗುವುದು ಮಾತ್ರ ತಪ್ಪಿಲ್ಲ..' ಎಂದಳು ಮಧುಮಿತಾ. ಬೆರಗಿನಿಂದ ನೋಡಿದ ವಿನಯಚಂದ್ರ ಮುಂದಕ್ಕೆ ಹೆಜ್ಜೆ ಹಾಕಿದ.
ನದಿಯ ನಡುವೆ ಇದ್ದ ದ್ವೀಪ ಕೊನೆಯಾಗುತ್ತ ಬಂದಿತ್ತು. ದ್ವೀಪದ ಆಚೆಗಿನ ಎರಡನೇ ಕವಲು ಮೊದಲಿನ ಕವಲಿನಷ್ಟು ದೊಡ್ಡದಾಗಿರಲಿಲ್ಲ. ಸೆಳವೂ ಅಷ್ಟೊಂದು ಪ್ರಮಾಣದಲ್ಲಿ ಇರಲಿಕ್ಕಿಲ್ಲ ಎಂದುಕೊಂಡ ವಿನಯಚಂದ್ರ. ಎರಡನೇ ಕವಲು ದೊಡ್ಡದಾಗಿರದಿದ್ದ ಕಾರಣ ಬಹುಬೇಗನೆ ಸೇತುವೆಯನ್ನು ದಾಟಿಬಿಟ್ಟರು. ನದಿಯಾಚೆಗೂ ಜಮುನಾ ಇಕೋ ಪಾರ್ಕು ಹಬ್ಬಿತ್ತು. ನದಿಯ ಇಕ್ಕೆಲಗಳಲ್ಲಿದ್ದ ಜೈವಿಕ ಉದ್ಯಾನವನ್ನು ಸರ್ಕಾರ ರಕ್ಷಣೆ ಮಾಡುತ್ತಿತ್ತು. ಈ ಉದ್ಯಾನದಾಚೆ ಟೋಲ್ ನಾಕಾವೊಂದಿತ್ತು. ಸೇತುವೆಯ ಮೇಲೆ ಪ್ರಯಾಣ ಮಾಡುವ ವಾಹನಗಳಿಗೆ ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. `ಭಾರತದಂತೆ ಇಲ್ಲೂ ಟೋಲ್ ಸಂಗ್ರಹವಿದೆ..' ಎಂದುಕೊಂಡ ವಿನಯಚಂದ್ರ.
`ವಿನೂ ನಾವೀಗ ಸಿರಾಜ್ ಗಂಜ್ ವಲಯದಲ್ಲಿದ್ದೇವೆ. ನಾವಿಲ್ಲಿಂದ ಸಿರಾಜ್ಗಂಜ್ ತಲುಪುವುದು ಬೇಡ. ಬದಲಾಗಿ ನೇರವಾಗಿ ಬೋಗ್ರಾಕ್ಕೆ ಹೋಗೋಣ. ಅಲ್ಲಿಂದ ರಂಗಪುರಕ್ಕೆ ಪ್ರಯಾಣ ಮಾಡೋಣ. ಅಲ್ಲಿಂದ ಭಾರತದ ಗಡಿಯನ್ನು ತಲುಪುವುದು ಸುಲಭವಾಗುತ್ತದೆ.. ಬೋಗ್ರಾ ಅಜಮಾಸು 50 ಕಿ,ಮಿ ಆಗಬಹುದು. ಅಲ್ಲಿಂದ 50 ಕಿ.ಮಿ ಅಂತರದಲ್ಲಿ ರಂಗಪುರವಿದೆ ' ಎಂದಳು ಮಧುಮಿತಾ. ಅದಕ್ಕೆ ಒಪ್ಪಿಗೆ ಸೂಚಿಸಿದ ವಿನಯಚಂದ್ರ. ಆಗಲೇ ಸೂರ್ಯ ಪಡುವಣದ ಬಾನಿನಲ್ಲಿ ಮುಳುಗಿಬಿಟ್ಟಿದ್ದ. ನಿಧಾನವಾಗಿ ಕತ್ತಲು ಆವರಿಸಿಬಿಟ್ಟಿತ್ತು. ಆ ರಾತ್ರಿ ಪ್ರಯಾಣ ಮಾಡುವುದೋ ಬೇಡವೋ ಎನ್ನುವ ಸಂದಿಗ್ಧತೆ ಇಬ್ಬರಲ್ಲೂ ಮನೆಮಾಡಿತು. ಸಾಧ್ಯವಾದಷ್ಟು ದೂರ ಸಾಗುವುದೇ ಸೂಕ್ತ. ವಾಹನ ಸಿಕ್ಕರೆ ಅದರಲ್ಲಿ ಹೋಗುವುದು ಇಲ್ಲವಾದರೆ ಕಾಲ್ನಡಿಗೆಯಲ್ಲಿ ಮುಂದೆ ಸಾಗುವುದು ಎಂದು ನಿರ್ಧರಿಸಿದರು ಇಬ್ಬರೂ. ಕೆಲನಿಮಿಷಗಳ ಪ್ರಯಾಣದ ನಂತರ ಸೈದಾಬಾದ್ ಎಂಬ ಗ್ರಾಮ ಸಿಕ್ಕಿತು. ಅಲ್ಲಿಂದ ಸಿರಾಜ್ ಗಂಜಿಗೆ ತೆರಳಲು ರಸ್ತೆ ಕವಲೊಡೆಯುತ್ತದೆ. ಅಲ್ಲೊಂದಷ್ಟು ಹೊಟೆಲುಗಳಿದ್ದವು. ಆದರೆ ಯಾವುದೂ ಬಾಗಿಲು ತೆಗೆದಿರಲಿಲ್ಲ. ಹೊಟೆಲಿನ ಕಟ್ಟೆಯ ಮೇಲೆ ಕೆಲಕಾಲ ದಣಿವಾರಿಸಿಕೊಂಡು ಮತ್ತೆ ಮುಂದಕ್ಕೆ ಸಾಗಿದರು.
(ಮುಂದುವರಿಯುತ್ತದೆ..)
No comments:
Post a Comment