Monday, July 7, 2014

ಗಣಪಜ್ಜಿಯ ಹಾಡುಗಳು

          ಈಗೊಂದು ಐದಾರು ವರ್ಷಗಳ ಹಿಂದೆ ನಾನು ಹಾಗೂ ಗೆಳೆಯ ಸಂಜಯ ಭಟ್ಟ ಬೆಣ್ಣೆಗದ್ದೆ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹ ಮಾಡುವ ಕಾರ್ಯಕ್ಕಾಗಿ ಶಿರಸಿ-ಸಿದ್ದಾಪುರ ಸೀಮೆಯ ಹಲವಾರು ಹಳ್ಳಿಗಳನ್ನು ಹೊಕ್ಕಿದ್ದೆವು. ಆ ಹಳ್ಳಿಗಳ ಅಥವಾ ನಮಗೆ ಮಾಹಿತಿ ಬಂದ ಹಿರಿಯ ಹವ್ಯಕ ಮಹಿಳೆಯರನ್ನು ಹುಡುಕಿಕೊಂಡು ಹೋಗಿ ಅವರನ್ನು ಹಿಂದೂ ಬಿಡದೇ ಮುಂದೂ ಬಿಡದೆ ಕಾಡಿ, ಬೇಡಿ ಅವರ ಬಳಿಯಿಂದ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹಿಸಿ ಬಂದಿದ್ದೆವು. ನಾವು ಹಾಡನ್ನು ಸಂಗ್ರಹಿಸಲು ತೆರಳಿದ ಬಹುತೇಕರು 80 ವರ್ಷ ವಯಸ್ಸನ್ನು ಮೀರಿದವರು. ಅವರಲ್ಲಿ ಹಲವರು ಹಾಸಿಗೆಯನ್ನು ಹಿಡಿದಿದ್ದರು. ಆ ಅಜ್ಜಿಯರೇ ಹೇಳಿದಂತೆ ಇದುವರೆಗೂ ಹೀಗೆ ಹವ್ಯಕ ಹಾಡುಗಳನ್ನು ಬರೆದುಕೊಳ್ಳುತ್ತೇವೆ ಎಂದು ಬಂದಿದ್ದು ನಾವೇ ಮೊದಲಂತೆ. ನಮಗೆ ಹೆಮ್ಮೆಯಾಗಿತ್ತು. ನನ್ನ ಹರಪೆಗೆ ಸಂಜಯ ಬಂದಿದ್ದ. ಆತನ ಹರಪೆಗೆ ನಾನು ಹೋಗಿದ್ದೆ.
           ಹಲವು ಅಜ್ಜಿಯರು ನಾವು ಬಂದ ಕಾರಣವನ್ನು ತಿಳಿಸಿದಾಗ ಖುಷಿಯಿಂದ ಹಾಡನ್ನು ಹೇಳಲು ತೊಡಗಿಕೊಂಡಿದ್ದರೆ ಮತ್ತೆ ಹಲವರ ಬಳಿ ಹಾಡನ್ನು ಬಾಯಿ ಬಿಡಿಸಲು ನಾವು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಈ ಅಜ್ಜಿಯರಿದ್ದಾರಲ್ಲ ಅವರಷ್ಟು ಕೊಮಣೆ ಮಾಡುವವರು ಇನ್ನೊಬ್ಬರಿಲ್ಲವೇನೋ ಅಂದುಕೊಂಡಿದ್ದೆವು. ಆದರೆ ಅಜ್ಜಿಯರಿಂದ ಆರಂಭದಲ್ಲಿ ಒಂದು ಹಳ್ಳಿ ಹಾಡನ್ನು ಬಾಯಿಬಿಡಿಸುವುದೇ ತಡ. ನೂರಾರು ಹಾಡುಗಳು ಸರ ಸರನೆ ಹೊರಬೀಳುತ್ತಿದ್ದವು. ನಾನು ಹಾಗೂ ಸಂಜಯ ಜಿದ್ದಿಗೆ ಬಿದ್ದಂತೆ ಅವರ ಬಾಯಿಂದ ಬರುತ್ತಿದ್ದ ಹಾಡನ್ನು ಬರೆದುಕೊಳ್ಳುತ್ತಿದ್ದರೂ ಕೈ ಸೋಲುತ್ತಿತ್ತು. ಅಷ್ಟು ಹಾಡುಗಳನ್ನು ಹಾಡುತ್ತಿದ್ದರು.
           ನನ್ನ ಬಳಿ ಅದ್ಯಾರೋ ಕೋಡ್ಸರದ ಗಣಪಜ್ಜಿಯ ವಿಷಯವನ್ನು ಹೇಳಿದ್ದರು. ಆಕೆ ನಮ್ಮ ಭಾಗದಲ್ಲಿ ಅತ್ಯಂತ ಹಿರಿಯ ಮಹಿಳಾ ಜೀವಿ ಎಂದೂ ಹೇಳಿದ್ದರು. ಅಜ್ಜಿಗೆ ಸಾವಿರಾರು ಹಳ್ಳಿ ಹಾಡುಗಳು ಗೊತ್ತಿವೆ. ಅಜ್ಜಿಗೆ ಹುಷಾರಿಲ್ಲ ಹಾಸಿಗೆ ಹಿಡಿದಿದ್ದಾರೆ ಎಂದೂ ಮಾಹಿತಿ ತಿಳಿಸಿದ್ದರು. ಸರಿ ಎಂದುಕೊಂಡು ನಾನು ಸಂಜಯನಿಗೆ ಪೋನಾಯಿಸಿದೆ. ಮರುದಿನವೇ ಬಂದ. ನಾನು, ಸಂಜಯ ಹಾಗೂ ನನ್ನ ತಂದೆಯವರಾದ ಸುಬ್ರಾಯ ಹೆಗಡೆಯವರು ನಮ್ಮೂರಿನಿಂದ ಕೋಡ್ಸರಕ್ಕೆ ನಡೆದುಕೊಂಡು ಅಜ್ಜಿಯನ್ನು ಹುಡುಕಿ ಹೊರಟೆವು. ಮನೆಗೆ ಹೋಗಿ ತಲುಪಿದಾಗ ನನ್ನ ತಂದೆಯವರು `ನನಗೆ ಈ ಮನೆಯವರು ಗೊತ್ತು. ಇವರು ಪರಿಚಯಸ್ಥರು. ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದರು..' ಎಂದು ಮಾಹಿತಿ ನೀಡಿದಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.
         ಶತಮಾನಗಳಷ್ಟು ಹಳೆಯ ಮನೆ. ಆ ಮನೆಯ ಒಳ ಮೂಲೆಯಲ್ಲಿ ಕತ್ತಲೆಯಲ್ಲಿ ಅಜ್ಜಿ ಕುಳಿತಿದ್ದರು. ಹಾಸಿಗೆಯ ಮೇಲೆ ಮಲಗಿಕೊಂಡಿದ್ದರಿರಬೇಕು. ನಾವು ಬಂದ ವಿಷಯವನ್ನು ಆಕೆಯ ಮಗ ಅವರಿಗೆ ಹೇಳಿದರೂ ಗಣಪಜ್ಜಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ನನ್ನ ತಂದೆಯವರು `ನಾನು ಸುಬ್ರಾಯ, ದಂಟಕಲ್ ಮಂಕಾಳಕ್ಕನ ಮಗ, ಯಲೂಗಾರು ಅಜ್ಜನಮನೆ..' ಎಂದ ತಕ್ಷಣ ಅಜ್ಜಿಗೆ ಹಳೆಯ ನೆನಪುಗಳು ಮರುಕಳಿಸಿತಿರಬೇಕು. ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಗಣಪಜ್ಜಿ ನಾನು ನಿಮ್ಮ ಮನೆಗೆ ಬಂದಿದ್ದೆ ಎಂದರು. ನನ್ನ ಅಜ್ಜಿಯಾದ ಮಂಕಾಳಿ ಕೋಂ ವಿಘ್ನೇಶ್ವರ ಹೆಗಡೆಯವರ ಕುರಿತು ಹಲವಾರು ಸುದ್ದಿಗಳನ್ನು ಹೇಳಿದರು. ಇಂತಹ ಅಜ್ಜಿಗೆ ವಯಸ್ಸಾಗಿತ್ತಲ್ಲದೇ ವಯೋ ಸಹಜ ಕಾರಣದಿಂದ ಹಾಸಿಗೆ ಹಿಡಿದಿದ್ದು ಸಹಜವಾಗಿತ್ತು. ಅಜ್ಜಿಯ ವಳಿ ಈಗಲೇ ಬಂದು ಒಳ್ಳೆಯ ಕೆಲಸವನ್ನೇ ಮಾಡಿದೆವು. ಅಜ್ಜಿಯನ್ನು ನೋಡಿದರೆ ಜಾಸ್ತಿ ವರ್ಷ ಬದುಕಲಾರಳು ಎಂದುಕೊಂಡೆವು. ಆದರೆ ಅಜ್ಜಿಯ ಬಳಿ ಮಾತ್ರ ನಮ್ಮ ಅಸಲಿ ಕಾರಣವನ್ನು ಹೇಳಿದರೆ ಅಜ್ಜಿಗೆ ನಾಚಿಕೊಂಡಳು. ಹಳೆಯ ಹವ್ಯಕ ಹಾಡನ್ನು ಹೇಳಿ ಎಂದರೆ ಗೊತ್ತೇ ಇಲ್ಲ ಎನ್ನುವಂತೆ ಮಾಡಿದಳು. ನಮಗೆ ಒಮ್ಮೆ ಭ್ರಮ ನಿರಸನ.
           `ಸಂಜಯ ಈ ಅಜ್ಜಿಗೆ ಸಿಕ್ಕಾಪಟ್ಟೆ ಹಾಡು ಗೊತ್ತಿದೆ. ನಮ್ಮ ಸಂಗ್ರಹಕ್ಕೆ ಒಳ್ಳೆಯ ಸರಕುಗಳು ಸಿಗಬಹುದು..' ಎಂದು ಬೇರೆ ಹೇಳಿದ್ದೆ. ಸಂಜಯನಿಗೆ ನಾನು ಸುಳ್ಳು ಹೇಳಿದೆ ಎನ್ನುವ ಭಾವವೂ ಕಾಡಿತ್ತಂತೆ.(ಇತ್ತೀಚೆಗೆ ಸಿಕ್ಕಾಗ ಹೇಳಿದ್ದು). ಇವ ಪೊಕಳೆ ಬಿಟ್ಟ. ವಿನಯನನ್ನು ನಂಬಿ ನಾನು ಬಂದೆ ಥತ್... ಎಂದುಕೊಂಡ. ನನಗೋ ಅವಮಾನವಾದಂತಹ ಅನುಭವ. ಅಜ್ಜಿ ಬಾಯಿಬಿಡಲೊಲ್ಲೆ ಎನ್ನುತ್ತಿದ್ದಳು. ಕೊನೆಗೂ ಬಹಳ ಹೊತ್ತಿನ ನಂತರ ಅಜ್ಜಿ ಬಾಯಿಬಿಟ್ಟಳು. ನಮಗೆ ಅದರಲ್ಲೂ ನನಗೆ ಬಹಳ ಖುಷಿಯಾಯಿತು. ಆ ಅಜ್ಜಿ ಕೊನೆ ಕೊನೆಗೆ ಸುಮಾರು 50-60 ಹಾಡನ್ನು ಹೇಳಿರಬೇಕು. ಹಳೆಯಕಾಲದ ಹವ್ಯಕ ಹಾಸ್ಯ ಗೀತೆಗಳನ್ನು ಬಹಳಷ್ಟು ಹೇಳಿದಳು. ಮಾತು ಕೇಳದ ಮಗ, ತುಂಟ ತನ ಮಾಡುವ ಚಿಕ್ಕ ಹುಡುಗರನ್ನು ರಮಿಸುವುದು, ಸೊಕ್ಕಿನ ಸೊಸೆ, ಗಂಗೆ-ಗೌರಿ ಜಗಳ ಹೀಗೆ ಹತ್ತು ಹಲವು. ನಾವು ತೆಗೆದುಕೊಂಡು ಹೋಗಿದ್ದ ಪಟ್ಟಿ ಖಾಲಿಯಾಗಿ ಅವರ ಮನೆಯಲ್ಲಿ ಖಾಲಿ ಹಾಳೆಯನ್ನು ಕಡ ತೆಗೆದುಕೊಳ್ಳುವಷ್ಟು ಹಾಡನ್ನು ಹೇಳಿದಳು.
         ಅಜ್ಜಿಯ ಹಾಡಿನಿಂದ ಮದ್ಯಾಹ್ನ ಊಟವೂ ಅಲ್ಲಿಯೇ ಆಯಿತು. ರಾತ್ರಿಯ ಊಟವನ್ನೂ ಮಾಡಿದೆವು. ರಾತ್ರಿ ಅವರ ಮನೆಯಲ್ಲಿಯೇ ಉಳಿಯುವ ಒತ್ತಾಯವನ್ನು ಮಾಡಿದರಾದರೂ ನಾವು ಒಪ್ಪಲಿಲ್ಲ. ಇಂತಹ ಅಜ್ಜಿ ಹಳ್ಳಿ ಹಾಡಿನ ಜೊತೆಗೆ ಕೆಲವು ಆರೋಗ್ಯದ ಟಿಪ್ಸ್ ಗಳನ್ನೂ ಕೊಟ್ಟಿದ್ದು ವಿಶೇಷವಾಗಿತ್ತು. ನಮ್ಮ ಅದೃಷ್ಟವೋ ಜೊತೆಗೆ ದುರಾದೃಷ್ಟವೋ ಗೊತ್ತಿಲ್ಲ. ನಾವು ಅಲ್ಲಿಗೆ ಹೋಗಿ ಬಹಳಷ್ಟು ಹಾಡನ್ನು ಬರೆದುಕೊಂಡು ಬಂದಿದ್ದೆವು. ಇನ್ನೂ ಬಹಳಷ್ಟು ಹಾಡುಗಳನ್ನು ಬರೆಯುವುದು ಬಾಕಿ ಇತ್ತು. ಇನ್ನೊಂದು ದಿನ ಬರುತ್ತೇವೆ ಎಂದು ಬಂದಿದ್ದೆವು. ನಾವು ಹೋಗಿ ಬಂದ ತಿಂಗಳೊಪ್ಪತ್ತಿನಲ್ಲೇ ಆ ಅಜ್ಜಿ ತೀರಿಕೊಂಡ ಸುದ್ದಿ ಬಂದಿತು. ಓಹ್.. ಆ ಅಜ್ಜಿಯ ಜೊತೆಗೆ ಮರೆಯಾಗುತ್ತಿದ್ದ ಅದೆಷ್ಟೋ ಹಾಡುಗಳನ್ನು ಬರೆದಿಟ್ಟುಕೊಂಡೆವಲ್ಲ ಎನ್ನುವ ಸಮಾಧಾನ ಒಂದುಕಡೆಯಾದರೆ ಇನ್ನೂ ಅದೆಷ್ಟೋ ಹಾಡುಗಳನ್ನು ಬರೆದುಕೊಳ್ಳ ಬಹುದಿತ್ತು. ಆ ರಾತ್ರಿ ನಾವು ಅಲ್ಲಿ ಉಳಿದಿದ್ದರೆ ಮತ್ತಷ್ಟು ಹಾಡುಗಳನ್ನು ಬರೆದುಕೊಳ್ಳಬಹುದಿತ್ತಲ್ಲ.. ಎಷ್ಟೋ ಅಮೂಲ್ಯ ಹಾಡುಗಳು ಮರೆಯಾದವಲ್ಲ ಎನ್ನುವ ಭಾವನೆ ಕಾಡುತ್ತಿದೆ. ಅಜ್ಜಿಯ ಪೋಟೋ ಹೋಡೆದುಕೊಳ್ಳಲು ನಾವು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾಚಿಕೆ ಕೊಟ್ಟೆಯಾದ ಅಜ್ಜಿ ಕೊನೆಗೂ ಪೋಟೋಕ್ಕೆ ನಿಲ್ಲಲಿಲ್ಲ. ನಮಗೆ ಈಗಲೂ `ಬ್ಯಾಡದಾ ತಮಾ.. ಯನ್ನ ಪೋಟೋ ಹೊಡೆಯದು ಬ್ಯಾಡಾ.. ಇಶ್ಶಿ.. ಸರಿ ಕಾಣ್ತಿಲ್ಲೆ.. ಥೋ ಆನು ಮುದುಕಿನಾ..' ಎಂದು ಹೇಳಿದ್ದು ಸದಾ ನೆನಪಾಗುತ್ತಿರುತ್ತದೆ.
             ಆ ಅಜ್ಜಿ ಹೇಳಿದ ಹಾಡುಗಳು ನಿಮ್ಮೆದುರು ಇಡುತ್ತಿದ್ದೇನೆ. ಈ ಹಾಡುಗಳಲ್ಲಿ ಹಲವು ಅಪೂರ್ಣವಾಗಿವೆ. ವಯಸ್ಸಾಗಿದ್ದ ಅಜ್ಜಿ  ಕಷ್ಟಪಟ್ಟು ನೆನಪು ಮಾಡುಕೊಂಡು ಹೇಳುತ್ತಿತ್ತು. ಆಗಾಗ ಅಜ್ಜಿಯ ಹಾಡಿನ ಸಾಲು ತಪ್ಪಿ ಹೋಗುತ್ತಿತ್ತು. ಆದ್ದರಿಂದ ಸಿಕ್ಕಷ್ಟು, ಇಲ್ಲಿಡುತ್ತೇನೆ. ಹಾಡುಗಳು ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ಅದನ್ನು ಪೂರ್ಣಗೊಳಿಸಿ..
**
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ,
ನಾವು ನಮ್ಮ ಮನಿಗೆ ಹೋಗಿ
ದೇವರ ಪೂಜೆ ಮಾಡುವಾ..|
ಸಂಪಿಗೆ ವನಕೆ ಹೋಗಿ
ಸಂಪಿಂಗ್ಹೂವ ಕೊಯ್ವನಾ
ಸಂಪಿಗ್ಹೂವ ಕೊಯ್ದು ತಂದು
ದೇವರ ಚರಣಕೆ ಹಾಕ್ವನಾ |
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ..
(ಮೊಮ್ಮಗನ ತಂಟೆಯ ಬಗ್ಗೆ ಅಕ್ಕಪಕ್ಕದ ಮನೆಯವರಿಂದ ಅತಿಯಾದ ದೂರುಗಳು ಬರಲಾರಂಭಿಸಿದಾಗ ಅಜ್ಜಿಯರು ರಮಿಸಿ ಕರೆಯುವ ಬಗೆ ಹೀಗಿತ್ತು.)

**
    ಸ್ಥಳದಲ್ಲಿಯೇ ಹಾಡನ್ನು ಹೊಸೆದು ಹಾಡುವ ಸಾಮರ್ಥ್ಯ ಹೊಂದಿದ್ದ ಅಜ್ಜಿ ನಾವು ಅಲ್ಲಿಗೆ ಹೋದಾಗ ಒಂದು ಹಾಡನ್ನು ಹೇಳಿದ್ದು ಹೀಗೆ..
ಅರ್ಧ ರಾತ್ರಿಲಿ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸರಗೆ ಕೊಡ್ತಿ ಹೇಳಿದ್ರಿ (ಸರಗೆ=ಆಭರಣ)
ಮನಿಗೆ ಹಾದಿ ಹಿಡಿದಿದ್ರಿ
ಸುಬ್ರಾಯ ಹೆಗಡೆರ ಬೆಡಗೆ
ಸುಬ್ರಾಯ ಹೆಗಡೆರ ಸೊಬಗೆ
ಸಂಜೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ವಾಲೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸುಬ್ರಾಯ ಹೆಗಡೆರ ಬೆಡಗೇ
ಸುಬ್ರಾಯ ಹೆಗಡೆರ ಸೊಬಗೆ...

**
ಇನ್ನೊಂದು ಮಜವಾದ ಸಾಲುಗಳಿವೆ.. ಆದರೆ ಅರ್ಧಮರ್ಧ ಹೇಳಿದ ಅಜ್ಜಿಗೆ ಪೂರ್ತಿ ನೆನಪಾಗಲಿಲ್ಲ.. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ಎಂಟಕ್ಕೆದ್ದು ಗಂಟೆ ನೋಡಿ
ಗಂಟು ಮೋರೆ ಹಾಕ್ತಾಳ್ರೀ
ಗಂಟಿಗಷ್ಟು ಬುದ್ಧಿ ಇಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|
ಎಂತಾ ಕಾಲ ಬಂದೋಯ್ತು..
ಇಂತಾ ಕಾಲ ಬಂದದ್ದಿಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|

**
ತವರು ಮನೆಯಿಂದ ಗಂಡನ ಮನೆಗೆ ಹೊರಟ ಮಗಳ ಬಳಿ ತಾಯಿ ಕೆಲವು ಮಜಾ ಸಂಗತಿಗಳನ್ನು ಹೇಳಿಕೊಡುತ್ತಾಳೆ. ಕೆಲಸದ ಶ್ರಮ ತಪ್ಪಿಕೊಳ್ಳಲೋಸುಗ ಆಕೆ ಹೇಳುವ ಪಾಟ ಮಜವಾಗಿದೆ.  ಓದಿ ನೋಡಿ.. ಹಾಡು ಅಪೂರ್ಣವಾಗಿದೆ.. ಪೂರ್ತಿ ಗೊತ್ತಿದ್ದವರು ತಿಳಿಸಬಹುದು..

ಬೆಳಗು ಮುಂಜಾಮದಿ
ಏಳಕ್ಕೆದ್ದು ಚಹಾ ಆಯಿತೆ
ಎಂದೇ ಕೇಳು
ಬುದ್ದಿಯ ಮಾತ ಹೇಳುವೆ ನಿನಗೆ
ಸದ್ದಿಲ್ಲದೆ ನೀ ಕೇಳು|

ತೆಳ್ಳನೆ ಸೀರೆ ಒಳ್ಳೆಯ ಶೋಭೆ
ಗಂಡನ ಮನೆಯಲಿ ಪಡೆ ಮಗಳೆ
ಹೊಟೆಲಿನಿಂದ ಊಟಕೆ ತರಿಸಿ
ಅಡುಗೆಯ ಕಾಟವ ತಪ್ಪಿಸಿಕೊ..|

(ಈ ಹಾಡಿನಲ್ಲಿ ಸೂಕ್ಷ್ಮವಾಗಿ ಇರುವ ಪೋಲಿ ಶಬ್ದಗಳನ್ನು ಗಮನಿಸಿ.. ತೆಳ್ಳನೆ ಸೀರೆಯಲ್ಲಿ ಮೈ ಕಾಣುವಂತಿರಬೇಕು ಎನ್ನುವ ಮಾತನ್ನು ತಾಯಿ ಮಗಳಿಗೆ ಹೇಳುತ್ತಾಳೆ. ಗಂಡ ನಿನ್ನ ಬಳಿಯೇ ಗಮನ ಇರಿಸುತ್ತಾನೆ ಎಂದೂ ಹೇಳುತ್ತಾಳೆ.)(ಈ ಹಾಡು ಪೂರ್ತಿಯಾಗಿ ಸಿಕ್ಕರೆ ಇನ್ನೆಷ್ಟು ಮಜವಾಗಿರುತ್ತಿತ್ತೋ.. ಛೇ..)

(ಮುಂದಿನ ಕಂತಿನಲ್ಲಿ ಇನ್ನಷ್ಟು ಹಾಡುಗಳು ಕೊಡುತ್ತೇನೆ... ಗಣಪಜ್ಜಿ ಮರಳಲಿದ್ದಾಳೆ.. ಕಾಯಬೇಕಿದೆ..)

No comments:

Post a Comment