(ಕಬ್ಬಡ್ಡಿ ಸಾಂದರ್ಭಿಕ ಚಿತ್ರ) |
ದ್ವಿತೀಯಾರ್ಧದಲ್ಲಿಯೂ ಮತ್ತಷ್ಟು ಅಬ್ಬರದ ಆಟವನ್ನಾಡಿದ ಭಾರತ ತಂಡ ಯಾವ ಕಾಲದ ಸೇಡೋ ಎನ್ನುವಂತೆ ಅಂಕಗಳ ಮೇಲೆ ಅಂಕವನ್ನು ಪಡೆದು ಬೀಗಿತು. ಪಂದ್ಯದಲ್ಲಿ ವಿನಯಚಂದ್ರ 9 ಕ್ಯಾಚ್ ಪಡೆದು ರೈಡಿಂಗಿನಲ್ಲಿ 5 ಬಲಿ ಪಡೆದುಕೊಂಡು ಬಂದಿದ್ದ. ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಆತನಿಗೆ ಪಂದ್ಯಶ್ರೇಷ್ಟ ಪ್ರಶಸ್ತಿ ಲಭ್ಯವಾಗಿತ್ತು. ಈ ಪಂದ್ಯದ ಮೂಲಕ ವಿಶ್ವಕಪ್ಪಿನಲ್ಲಿ ಅತ್ಯಂತ ಹೆಚ್ಚು ಕ್ಯಾಚನ್ನು ಪಡೆದ ಎರಡನೇ ಆಟಗಾರನ ಸ್ಥಾನದಲ್ಲಿ ನಿಂತಿದ್ದ. ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನಿದ್ದ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ಜಯಭೇರಿ ಭಾರಿಸಿದ ಭಾರತ ತಂಡ ತನ್ನ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಮುಂದಿನ ಸುತ್ತು ಸೆಮಿ ಫೈನಲ್ ಆಗಿತ್ತು. ತನ್ನ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಇನ್ನೊಂದು ಗುಂಪಿನಿಂದ ಬಾಂಗ್ಲಾದೇಶ ಹಾಗೂ ಇರಾನ್ ಗಳು ಕ್ರಮವಾಗಿ ಸೆಮಿಫೈನಲ್ ಪ್ರವೇಶ ಮಾಡಿದ್ದವು. ಭಾರತವು ಇರಾನ್ ವಿರುದ್ಧ ಹಾಗೂ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಸೆಣೆಸಾಟ ನಡೆಸಬೇಕಾಗಿತ್ತು. ಈ ಕಾದಾಟದಲ್ಲಿ ಜಯಶಾಲಿಯಾದವರು ಫೈನಲ್ ಪ್ರವೇಶಿಸುತ್ತಿದ್ದರು. ಮರುದಿನ ಈ ಪಂದ್ಯಗಳು ನಡೆಯಲಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದವು. ಕಬ್ಬಡ್ಡಿ ಲೋಕದ ಟಾಪ್ 4 ರಾಂಕ್ ತಂಡಗಳು ಕಾದಾಟಕ್ಕೆ ಸಿದ್ಧವಾಗಿ ನಿಂತಿದ್ದವು. ಯಾವುದೇ ತಂಡ ಕೊಂಚ ಯಾಮಾರಿದರೂ ಸೋಲು ಕಟ್ಟಿಟ್ಟಬುತ್ತಿಯಾಗಿತ್ತು.
ಮತ್ತೆ ಮತ್ತೆ ಗಳಿಸಿದ ಯಶಸ್ಸು ವಿನಯಚಂದ್ರನ ಸಂತಸಕ್ಕೆ ಕಾರಣವಾಗಿತ್ತು. ಇದೇ ಸಂತೋಷದಲ್ಲಿ ಹೊಟೆಲಿಗೆ ಬರುವ ವೇಳೆಗೆ ಮಧುಮಿತಾ ಆತನ ಹಣೆಗೊಂದು ಹೂ ಮುತ್ತನ್ನು ನೀಡಿ ಕಂಗ್ರಾಟ್ಸ್ ಎಂದಾಗ ವಿನಯಚಂದ್ರನ ಮೈತುಂಬ ರೋಮಾಂಚನ. ಖುಷಿಯಿಂದ ಆಕೆಯನ್ನೆತ್ತಿಕೊಂಡು ಒಂದು ಸುತ್ತು ಗಾಳಿಯಲ್ಲಿ ತಿರುಗಿಸಿಬಿಟ್ಟಿದ್ದ. ಮಧುಮಿತಾ ನಸು ನಾಚಿ ಬಾಗಿದ್ದಳು. ವಿನಯಚಂದ್ರನಿಗೆ ಅರಿವಾಗಿಯೂ, ಅರಿವಾಗದಿದ್ದಂತೆ ಚಿಕ್ಕದೊಂದು ಮುತ್ತನ್ನು ನೀಡಿ ಕೆನ್ನೆಯನ್ನು ಗಿಲ್ಲಿದ್ದಳು ಮಧುಮಿತಾ. ವಿನಯಚಂದ್ರನಿಗೆ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವ.
`ವಿನು.. ನೀನು ಮನೆಗೆ ಊಟಕ್ಕೆ ಬರಬೇಕಂತೆ... ಅಪ್ಪನ ಹೇಳಿದ್ದಾರೆ..'
`ಹೌದಾ.. ಯಾವಾಗ ? ನಾನೊಬ್ಬನೆ ಬರಬೇಕಾ? ಜಾಧವ್ ಸರ್ ಬಂದಿದ್ದರೆ ಚನ್ನಾಗಿತ್ತು...' ವಿನಯಚಂದ್ರ ಪೆಕರನಂತೆ ಹೇಳಿದ್ದ. ಮನಸ್ಸಿನಲ್ಲಿ ಸಂತಸ ಮೂಟೆಕಟ್ಟಿಕೊಂಡಿತ್ತು.
`ಹುಂ.. ಅವರ ಬಳಿಯೂ ಹೇಳಿದ್ದಾರೆ. ಹಾಗೇ ಆ ಸೂರ್ಯನ್ ನೂ ಕರೆದುಕೊಂಡು ಬಾ.. ಆದರೆ ಬರುವಾಗ ಹುಷಾರು ಮಾರಾಯಾ..' ಚಿಕ್ಕದೊಂದು ಎಚ್ಚರಿಕೆ ಮಧುಮಿತಾಳಿಂದ ಬಂದಿತ್ತು.
`ಖಂಡಿತ ಅವರನ್ನು ಕರೆದುಕೊಂಡು ಬರುತ್ತೇನೆ. ಆದರೆ ಯಾಕೆ ಹುಷಾರು? ಅಂತದ್ದೇನಾಯ್ತು ಮತ್ತೆ..?' ಗಲಿಬಿಲಿಯಿಂದ ಕೇಳಿದ ವಿನಯಚಂದ್ರ.
`ಏನಿಲ್ಲ.. ಢಾಕಾದ ಹೊರವಲಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.. ಹಿಂದುಗಳ ಮೇಲೆ ಮತ್ತೆ ದಾಳಿ ಮಾಡಲಾಗುತ್ತಿದೆ. ಈಗಾಗಲೇ ಒಂದೆರಡು ಹಳ್ಳಿಗಳು ದೌರ್ಜನ್ಯಕ್ಕೆ ಬಲಿಯಾಗಿ ಸುಟ್ಟು ಹೋಗಿವೆ. ಮೂರೋ ನಾಲ್ಕೋ ಜನರು ಅಗ್ನಿಯ ಕೆನ್ನಾಲಿಗೆಗೆ ಸತ್ತು ಹೋಗಿದ್ದಾರೆ..'
`ಹಾಂ..? ಹೌದಾ.. ನಮಗಿದು ಗೊತ್ತೇ ಆಗಲಿಲ್ಲವಲ್ಲ.. ನಿಮಗೇನೂ ತೊಂದರೆ ಇಲ್ಲ ತಾನೆ? ನೀವೆಲ್ಲ ಸೌಖ್ಯ ತಾನೆ '
`ಇಲ್ಲ.. ನಮಗೆ ತೊಂದರೆ ಇಲ್ಲ. ವಿಶ್ವಕಪ್ ಮುಗಿದರೆ ಸಾಕು ಎಂದುಕೊಂಡಿದೆ ಬಾಂಗ್ಲಾ ಸರ್ಕಾರ. ಮುಗಿದ ನಂತರ ಹಿಂಸಾಚಾರ ಇನ್ನೂ ಹೆಚ್ಚಾಗಬಹುದು. ಜಗತ್ತಿಗೆ ತನ್ನ ಮರ್ಯಾದೆ ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಈ ಹಿಂಸಾಚಾರದ ಬಗ್ಗೆ ಬಾಂಗ್ಲಾ ಸರ್ಕಾರ ಮುಚ್ಚಿಟ್ಟಿದೆ. ಈಗ ನಡೆಯುತ್ತಿರುವ ಹಿಂಸಾಚಾರವನ್ನು ಹೊರ ಜಗತ್ತಿಗೆ ಗೊತ್ತಾಗದ ಹಾಗೇ ಇಡಲು ಪ್ರಯತ್ನಿಸುತ್ತಿದೆ. ಆದರೆ ನಾವು ಸ್ಥಳೀಯರು. ಅದರಲ್ಲೂ ಹಿಂಸೆಗೆ ಒಳಗಾಗುತ್ತಿರುವವರು. ನಮಗೆ ಆತಂಕ ಹೆಚ್ಚಾಗಿದೆ..' ಎಂದು ಮಧುಮಿತಾ ದುಗುಡದ ಜೊತೆಗೆ ಹೇಳಿದಳು.
`ಹುಂ .. ಹೇ ಮಧು.. ನೀನು ಇನ್ನೂ ಹುಷಾರಾಗಿರು ಮಾರಾಯ್ತಿ.. ಒಬ್ಬೊಬ್ಬನೇ ಓಡಾಡುವ ಪ್ರಸಂಗ ನಿನಗೆ ದಿನದಲ್ಲಿ ಹಲವು ಸಾರಿ ಬರುತ್ತದೆ. ಹಿಂಸಾಚಾರ ನಡೆಯುತ್ತಿರುವ ಜಾಗದ ಕಡೆಗೆ ಅಪ್ಪಿತಪ್ಪಿಯೂ ಹೋಗಬೇಡ. ನನಗಿರುವವಳು ನೀನೊಬ್ಬಳೇ.. ' ಎಂದು ವಿನಯಚಂದ್ರ ಹೇಳುತ್ತಿದ್ದಂತೆ
`ಅಯ್ಯೋ ಹುಚ್ಚಪ್ಪಾ.. ನಾನು ಬಾಂಗ್ಲಾದೇಶದ ಸರ್ಕಾರದ ಕೆಲಸದಲ್ಲಿದ್ದೇನೆ. ನನಗೆ ಏನೂ ಆಗುವುದಿಲ್ಲ ಮಾರಾಯಾ.. ನನಗೇನೂ ಆಗೋದಿಲ್ಲ. ಸರ್ಕಾರ ನನ್ನ ಸಹಾಯಕ್ಕಿದೆ. ನೀನು ಹೆದರಿಕೊಳ್ಳಬೇಡ. ನಾನು ತೊಂದರೆಗೆ ಒಳಗಾಗುವುದಿಲ್ಲ..' ಎಂದು ಹೇಳಿ ಆತನ ತಲೆಯನ್ನು ನೇವರಿಸಿದಳು. ವಿನಯಚಂದ್ರನಿಗೆ ಹಿತವಾಗಿತ್ತು. ವಿನಯಚಂದ್ರನ ತಲೆ ಕೂದಲನ್ನು ಹಿಡಿದು ಅದರಲ್ಲಿ ತನ್ನ ಬೆರಳುಗಳ ಮೂಲಕ ಆಡತೊಡಗಿದ್ದಳು. ವಿನಯಚಂದ್ರ ನಸುನಗುತ್ತಲಿದ್ದ.
`ನಾಳೆ ಸೆಮಿ ಫೈನಲ್ ಇದೆ. ನಾಡಿದ್ದು ನಮಗೆ ಗ್ಯಾಪ್ ಇದೆ. ಆ ದಿನ ನಾವು ಬರಲು ಪ್ರಯತ್ನ ಮಾಡುತ್ತೇವೆ..'ಎಂದ ವಿನಯಚಂದ್ರ. ಅಷ್ಟರಲ್ಲಿ ಅಲ್ಲಿಗೆ ಸೂರ್ಯನ್ ಬಂದಿದ್ದ. ಆತನ ಬಳಿ ಮಧುಮಿತಾಳ ಮನೆಗೆ ಹೋಗುವ ಬಗ್ಗೆ ಕೇಳಿದಾಗ ಅವನೂ ಒಪ್ಪಿಕೊಂಡ.
***
ಹಿತವಾದ ನೆನಪು, ಖುಷಿ, ಕನಸು, ಸಂಭ್ರಮದ ಜೊತೆ ಜೊತೆಯಲ್ಲಿ ಆ ದಿನ ಕಳೆದು ಹೋಯಿತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೂ ಸೋಲೆಂಬುದನ್ನೇ ಕಂಡಿರಲಿಲ್ಲ. ಆಡಿದ ಎಲ್ಲ ಪಂದ್ಯಗಳೂ ಗೆಲುವಿನ ಸವಿಯನ್ನೇ ನೀಡಿದ್ದವು. ಇನ್ನೆರಡೇ ಪಂದ್ಯಗಳನ್ನು ಗೆದ್ದರೆ ವಿಶ್ವಕಪ್ ಮತ್ತೊಮ್ಮೆ ಭಾರತದ ಮುಡಿಗೆ ಏರಲು ಸಾಧ್ಯವಿತ್ತು. ಇರಾನ್ ವಿರುದ್ಧ ಪಂದ್ಯ ಗೆದ್ದರೆ ಫೈನಲ್. ಪೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಎದುರಾಳಿಯಾಗಬಹುದಿತ್ತು. ತಮ್ಮ ಸಂಪೂರ್ಣ ಸಾಮರ್ಥ್ಯ ಒರೆ ಹಚ್ಚಲು ಇವೆರಡೇ ಪಂದ್ಯ ಸಾಕಾಗಿತ್ತು. ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ಬಂದ ದಾರಿಯನ್ನೊಮ್ಮೆ ನೆನಪು ಮಾಡಿಕೊಂಡರು. ತಾವಾಡಿದ ಪಂದ್ಯಗಳಲ್ಲಿಯೇ ಯಾವುದು ಚನ್ನಾಗಿತ್ತು, ಯಾವ ಕ್ಯಾಚ್, ಯಾವ ರೈಡಿಂಗ್ ಖುಷಿ ಕೊಟ್ಟಿತು ಎನ್ನುವುದನ್ನೆಲ್ಲ ಮಾತನಾಡಿಕೊಂಡರು.
ಇತ್ತ ಬಾಂಗ್ಲಾದೇಶದಲ್ಲಿ ನಿಧಾನವಾಗಿ ಹಿಂಸಾಚಾರ ಕಾವು ಪಡೆದುಕೊಳ್ಳುತ್ತಿತ್ತು. ಅಲ್ಲೀಗ ಚುನಾವಣೆ ಘೋಷಣೆಯಾಗಿತ್ತು. ಆದ್ದರಿಂದ ಮತ್ತೊಮ್ಮೆ ಹಿಂಸಾಚಾರ ಜೋರಾಗಿತ್ತು. ಹಿಂದೂಗಳು ಬಾಂಗ್ಲಾದಲ್ಲಿ ಪಕ್ಷಗಳ ಗೆಲುವನ್ನು ನಿರ್ಧರಿಸುತ್ತಾರೆ. ಅವರು ಯಾರಿಗೆ ಬೆಂಬಲ ನೀಡುತ್ತಾರೋ ಅವರೇ ಚುನಾವಣೆಯಲ್ಲಿ ಜಯಭೇರಿ ಭಾರಿಸುತ್ತಾರೆ. ಆದ್ದರಿಂದ ಹಿಂದೂಗಳ ಬೆಂಬಲ ಯಾರಿಗೆ ಇಲ್ಲವೋ ಅವರು ಹಿಂಸಾಚಾರಕ್ಕಿಳಿಯುತ್ತಾರೆ. ಸೊಖಾ ಸುಮ್ಮನೆ ಹಿಂದುಗಳ ಮೇಲೆ ದಾಳಿ ಮಾಡಿ ಅವರ ವಿರುದ್ಧ ಹಿಂಸಾಚಾರದಿಂದ ತೊಂದರೆ ನೀಡುತ್ತಾರೆ. ಬಾಂಗ್ಲಾದಲ್ಲಿ ಈಗ ನಡೆಯುತ್ತಿರುವುದು ಅದೇ ಆಗಿತ್ತು.
ಮರುದಿನ ಮೊದಲ ಪಂದ್ಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಇತ್ತು. ಇತ್ತಂಡಗಳೂ ಜಿದ್ದಾಜಿದ್ದಿನಿಂದ ಕಾದಾಡಿದವು. ಎರಡನೆ ರಾಂಕಿನ ಬಾಂಗ್ಲಾದೇಶ ಹಾಗೂ ಮೂರನೇ ರಾಂಕಿನ ಪಾಕಿಸ್ತಾನಗಳು ಗೆಲುವಿಗಾಗಿ ಸಕಲ ರೀತಿಯಿಂದಲೂ ಪ್ರಯತ್ನಗಳನ್ನು ನಡೆಸಿದವು. ಯಾರೊಬ್ಬರೂ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಒಂದೊಂದು ಅಂಕಕ್ಕೂ ಸಾಕಷ್ಟು ಕಾದಾಟ ನಡೆಯುತ್ತಿತ್ತು. ವಿನಯಚಂದ್ರನಿಗಂತೂ ಫೈನಲ್ ಪಂದ್ಯ ಸುಲಭದ್ದಲ್ಲ. ಬಹಳ ಕಷ್ಟಪಡಬೇಕಾಗುತ್ತದೆ ಎಂದುಕೊಂಡ. ಅಂತಿಮವಾಗಿ ಬಾಂಗ್ಲಾದೇಶ 16-14 ಅಂಕಗಳಿಂದ ಗೆಲುವಿನ ನಗೆ ಬೀರಿತಲ್ಲದೇ ಫೈನಲ್ ಗೂ ಏರಿತು. ಪಾಕಿಸ್ತಾನ ಪೆಚ್ಚಿನಿಂದ ಮುರನೇ ರಾಂಕಿನ ಪಂದ್ಯವನ್ನಾಡಲು ಅಣಿಯಾಯಿತು. ಬಾಂಗ್ಲಾದೇಶದ ಗೆಲುವು ನಿರೀಕ್ಷಿತ ಎನ್ನಿಸಿತ್ತಾದ್ದರಿಂದ ಭಾರತ ತಂಡದ ಆಟಗಾರರಿಗೆ ವಿಶೇಷ ಎನ್ನಿಸಲಿಲ್ಲ.
ಮುಂದಿನ ಪಂದ್ಯ ಭಾರತ ಹಾಗೂ ಇರಾನ್ ನಡುವಿನ ಸೆಮಿಫೈನಲ್ಸ್. ಇರಾನಿ ಆಟಗಾರರೂ ದೈತ್ಯರೇ. ಫಠಾಣರು. ದಷ್ಟಪುಷ್ಟರು. ಮೊದಲ ಸೀಟಿ ಬಿದ್ದು ಆಟ ಶುರುವಾಗೇಬಿಟ್ಟಿತು. ಭಾರತ ಮೊದಲ ಹಂತದಲ್ಲಿಯೇ ಎದುರಾಳಿಯ ಮೇಲೆ ಸತತ ದಾಳಿ ನಡೆಸಿ ಲೀಡ್ ಪಡೆಯಲು ಯತ್ನಿಸಿತು. ಪದೇ ಪದೆ ದಾಳಿ ಮಾಡಿ ಎದುರಾಳಿಯಲ್ಲಿ ಗಲಿಬಿಲಿಗೊಳಿಸಿತು. ಸೂರ್ಯನ್ ರೈಡಿಂಗು ಹಾಗೂ ವಿನಯಚಂದ್ರನ ಕ್ಯಾಚುಗಳು ಇರಾನಿಯರನ್ನು ಬೆದರಿಸಿದವು. ವಿನಯಚಂದ್ರನಂತೂ ಮೊದಲ ಅರ್ಧದಲ್ಲಿಯೇ ಆರು ಕ್ಯಾಚುಗಳನ್ನು ಹಿಡಿದು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದ. ನೋಡುಗರಿಗೆ ಇದು ಸೆಮಿಪೈನಲ್ ಪಂದ್ಯವೇ ಹೌದಾ ಎನ್ನುವಷ್ಟು ಸರಳವಾಗಿ ಭಾರತ ತಂಡ ಆಡುತ್ತಿತ್ತು. ಮೊದಲಾರ್ಧದ ವೇಳೆಗೆ 10 ಅಂಕಗಳ ಮುನ್ನಡೆ ಪಡೆಯುವ ಮೂಲಕ ಫೈನಲ್ ನಿಚ್ಚಳಗೊಳಿಸಿಕೊಂಡಿತ್ತು. 22-12 ಅಂಕಗಳು ಮೊದಲಾರ್ಧದ ವೇಳೆ ಇತ್ತಂಡಗಳೂ ಗಳಿಸಿಕೊಂಡಿದ್ದವು.
ದ್ವಿತೀಯಾರ್ಧದಲ್ಲಿಯೂ ಭಾರತವೇ ಮತ್ತೊಮ್ಮೆ ಪಾರಮ್ಯ ಮೆರೆಯಿತು. ಯಾವುದೇ ಸಮಸ್ಯೆಗಳು ಎದುರಾಗದಂತೆ ಭಾರತ ಉತ್ತಮವಾಗಿ ಆಡಿತು. ಪಂದ್ಯದ ಅಂತ್ಯದ ವೇಳೆಗೆ ಭಾರತ 36 ಹಾಗೂ ಇರಾನ್ 22 ಅಂಕಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿತು. ಅತ್ಯಮೂಲ್ಯವಾದ 10 ಕ್ಯಾಚುಗಳನ್ನು ವಿನಯಚಂದ್ರ ಹಿಡಿದು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶಿ ಆಟಗಾರನ ಜೊತೆಗೆ ಅತಿಹೆಚ್ಚು ಕ್ಯಾಚ್ ಮಾಡಿದವರ ಸಾಲಿನಲ್ಲಿ ಜಂಟಿಯಾಗಿ ಮೊದಲ ಸ್ಥಾನ ಗಳಿಸಿಕೊಂಡಿದ್ದ. ಒಂದು ದಿನದ ಬಿಡುವಿನ ನಂತರ ಫೈನಲ್ಸ್ ನಡೆಯಲಿತ್ತು. ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಫೈನಲ್ ಪಂದ್ಯಾವಳಿ ನಿಗದಿಯಾಯಿತು.
**
ಜಾಧವ್ ಅವರನ್ನು ಒತ್ತಾಯಪಡಿಸಿಕೊಂಡು ಸೂರ್ಯನ್ ಜೊತೆಗೆ ವಿನಯಚಂದ್ರ ಮಧುಮಿತಾಳ ಮನೆಗೆ ಹೊರಡುವಷ್ಟರಲ್ಲಿ ಸಾಕು ಸರಿಯಾಯಿತು. ಮಧುಮಿತಾ ತನ್ನ ಅಪಾರ್ಟ್ ಮೆಂಟನ್ನು ತೋರಿಸಿದ್ದಳಾದ್ದರಿಂದ ಅಲ್ಲಿಗೆ ಹೋಗಲು ಹೆಚ್ಚು ಸಮಸ್ಯೆಯಾಗಲಿಲ್ಲ. ಮನೆಮಂದಿಗೆ ವಿನಯಚಂದ್ರ ಹಾಗೂ ಜಾಧವ್ ಅವರು ಪರಿಚಿತರು. ಸೂರ್ಯನ್ ಹೊಸಬ. ಅವನನ್ನು ಪರಿಚಯ ಮಾಡಿಕೊಟ್ಟ ನಂತರ ಉಭಯಕುಶಲೋಪರಿ ಮಾತಿಗೆ ನಿಂತರು. ಆಗಲೇ ಜಾಧವ್ ಅವರು ಮಧುಮಿತಾಳ ತಂದೆಯ ಬಳಿ ಮಧುಮಿತಾ ಹಾಗೂ ವಿನಯಚಂದ್ರರ ಪ್ರೇಮದ ವಿಷಯವನ್ನು ತಿಳಿಸಿದರು. ಮಧುಮಿತಾಳ ತಂದೆ ಈ ಕುರಿತು ವಿರೋಧವನ್ನು ವ್ಯಕ್ತಪಡಿಸಲಿಲ್ಲವಾದರೂ ವಿನಯಚಂದ್ರನ ಮನೆ, ಕುಟುಂಬದ ಕುರಿತು ತಮಗೇನೂ ಮಾಹಿತಿ ಇಲ್ಲ ಎಂದು ಹೇಳಿದರು. ಕೊನೆಗೆ ವಿನಯಚಂದ್ರನೇ ತನ್ನ ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ಹೇಳಿದ. ಮಧುಮಿತಾಳ ತಂದೆ ನಿರಾಳರಾದರು. ವಿನಯಚಂದ್ರನ ಬಗ್ಗೆ ಏನೋ ಮೆಚ್ಚುಗೆ ಮೂಡಿದಂತಾಯಿತು. ಕೊನೆಗೆ ವಿನಯಚಂದ್ರನೇ ಮುಂದುವರೆದು `ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಅಲ್ಲಿಯೇ ಉಳಿದುಕೊಳ್ಳಲು ನಿಮಗೆ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅಲ್ಲಿಯೇ ಉಳಿದಕೊಳ್ಳಬೇಕೆಂದು ಕ್ರಮ ಕೈಗೊಳ್ಳುತ್ತಿದ್ದೇವೆ. ಸೂರ್ಯನ್ ಈ ಕುರಿತು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾನೆ..' ಎಂದ.
ಮಧುಮಿತಾಳ ಕುಟುಂಬ ಸಂತಸಗೊಂಡಿತು. ಆಗಲೇ ಮಧುಮಿತಾಳ ತಂದೆ `ಅಲ್ಲ ಇಲ್ಲಿನ ಜಮೀನು, ಈ ದೇಶ ಎಲ್ಲವನ್ನೂ ಬಿಟ್ಟು ಬರುವುದು ಸುಲಭದಲ್ಲಿ ಸಾಧ್ಯವಿಲ್ಲ. ನಮ್ಮ ತಾಯ್ನಾಡನ್ನು ಹೇಗೆ ಬಿಟ್ಟುಬರೋದು ಅಂತ ಅರ್ಥವೇ ಆಗುತ್ತಿಲ್ಲ. ಅದಲ್ಲದೇ ನಮ್ಮ ಜಮೀನು ಬೇರೆ ಇದೆ. ಅದಕ್ಕೊಂದು ವ್ಯವಸ್ಥೆ ಮಾಡಬೇಕಲ್ಲ. ಭಾರತಕ್ಕೆ ಹೋದ ನಂತರ ಮತ್ತೆ ಇಲ್ಲಿಗೆ ಮರಳಲಿಕ್ಕಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ..' ಅಳಲನ್ನು ತೋಡಿಕೊಂಡಿದ್ದರು.
ಆಗ ಜಾಧವ್ ಅವರು `ನೋಡಿ.. ಬದುಕಿ ಉಳಿದರೆ ಇಂತಹ ಜಮೀನುಗಳನ್ನು ಸಾವಿರ ಸಾವಿರ ದುಡಿಯಬಹುದು. ಸಧ್ಯ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಅಷ್ಟು ಚನ್ನಾಗಿಲ್ಲ. ಮುಂದೆ ಯಾವಾಗಲಾದರೂ ಒಳ್ಳೆ ದಿನಗಳು ಬಂದರೆ ಬಾಂಗ್ಲಾಕ್ಕೆ ಮರಳಬಹುದಲ್ಲ. ಅಲ್ಲಿಯ ತನಕ ಭಾರತದಲ್ಲಿಯೇ ಉಳಿದುಕೊಳ್ಳಬಹುದು. ಇಲ್ಲಿದ್ದರೆ ಯಾವ ಕ್ಷಣದಲ್ಲಿ ಯಾರು ದಾಳಿ ಮಾಡುತ್ತಾರೋ, ಯಾವ ಹೊತ್ತಿನಲ್ಲಿ ಸಾವು ಬಂದು ಬಾಗಿಲು ತಟ್ಟುತ್ತದೋ, ಮುಂದೆ ಹೇಗೋ ಏನೋ ಎಂದುಕೊಂಡು ಬದುಕುವುದಕ್ಕಿಂತ ಅಲ್ಲಿ ಅರಾಮಾಗಿರುವುದು ಒಳ್ಳೆಯದಲ್ಲವೇ?..' ಎಂದಾಗ ಮಧುಮಿತಾಳ ತಂದೆಗೂ ಹೌದೆನ್ನಿಸಿರಬೇಕು. `ಹೂಂ..' ಎಂದು ಸುಮ್ಮನಾದರು. ನಂತರ ಹಾಗೆ ಹೀಗೆ ಮಾತುಕತೆ ಸಾಗಿತು.
ಊಟ ಮುಗಿಸಿ ಅಲ್ಲಿಂದ ಬರುವ ವೇಳೆಗೆ ಎಲ್ಲರ ಮನಸ್ಸಿನಲ್ಲಿ ಸಂತಸದ ತಂಗಾಳಿ ಅಲೆ ಅಲೆಯಾಗಿ ಬೀಸುತ್ತಿತ್ತು. ಹೊಸ ಕನಸೊಂದು ಚಿಗುರೊಡೆಯಲು ಹಾತೊರೆಯುತ್ತಿತ್ತು. ಮಧುಮಿತಾ ಹಾಗೂ ವಿನಯಚಂದ್ರ ಮೊದಲಿಗಿಂತ ಹೆಚ್ಚು ಸಂತಸದಲ್ಲಿದ್ದರು. ಅವರ ಮನೆಯಲ್ಲಿದ್ದಷ್ಟೂ ಹೊತ್ತೂ ಕಣ್ಣು ಹಾಗೂ ಸಂಜ್ಞೆಯ ಮೂಲಕ ಪರಸ್ಪರ ಮಾತನಾಡುತ್ತಿದ್ದುದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ. ಒಂದಿಬ್ಬರ ಗಮನಕ್ಕೆ ಬಂದಿದ್ದರೂ ಅದನ್ನು ಇತರರಿಗೆ ಹೇಳುವ ಪ್ರಯತ್ನ ಮಾಡಲಿಲ್ಲ. ಪ್ರೇಮಿಗಳ ಪರಿಭಾಷೆ ಇದು ಎಂದುಕೊಂಡು ಸುಮ್ಮನಾಗಿದ್ದರು ಎಲ್ಲರೂ.
ಸಂಜೆ ಹೊಟೆಲಿಗೆ ಬಂದವನೇ ಪ್ರಾಕ್ಟೀಸು ಮುಗಿಸಿ ವಿನಯಚಂದ್ರ ತನ್ನ ಮನೆಗೆ ಪೋನ್ ಮಾಡಿದ. ಈತನ ಪೋನಿಗೆ ಕಾಯುತ್ತಿದ್ದೆವೋ ಎಂಬಂತೆ ಆತನ ತಂದೆ ಮಾತಿಗೆ ನಿಂತರು. ನಂತರ ತಾಯಿ ಮಾತಿಗೆ ಬಂದಾಗ ಅವರ ಬಳಿ ಮಧುಮಿತಾಳ ವಿಷಯವನ್ನು ಹೇಳಿದ. ಮೊದ ಮೊದಲು ಯಾರೋ ಏನೋ ಎಂದುಕೊಂಡ ವಿನಯಚಂದ್ರನ ತಾಯಿ ಕೊನೆಗೆ ಆತನ ವಿವರಣೆ ಕೇಳಿದ ನಂತರ ಸಮಾಧಾನ ಪಟ್ಟುಕೊಂಡರು. ತಂಗಿಗೂ ವಿಷಯವನ್ನು ತಿಳಿಸಿದ. ಜೊತೆಗೆ ಈ ಕುರಿತು ತಂದೆಯ ಬಳಿ ಮಾತನಾಡುವಂತೆಯೂ ತಿಳಿಸಿ ಪೋನಿಟ್ಟ. ಪೋನಿಟ್ಟಮೇಲೆ ಮತ್ತಷ್ಟು ಹಾಯಾದ ವಿನಯಚಂದ್ರ ಖುಷಿಯಲ್ಲಿಯೇ ಆ ರಾತ್ರಿ ಕಳೆದ. ಕನಸಲ್ಲಿ ಮಧುಮಿತಾ ಕಾಡಿದಳು. ಕನಸಿನ ಮೊದಲಾರ್ಧ ಹತವಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಕನಸಿನ ಕುದುರೆಯ ಮೇಲೆ ಸಾಗುತ್ತಿದ್ದರು. ಆದರೆ ಕನಸಿನ ಉತ್ತರಾರ್ಧ ಮಾತ್ರ ಭಯಾನಕವಾಗಿತ್ತು. ಅದ್ಯಾರೋ ತಮ್ಮನ್ನು ಗಾಜಿನ ಚೂರುಗಳ ಮೇಲೆ ನಡೆಸಿದಂತೆಯೂ, ಚಬುಕಿನಿಂದ ಬೆನ್ನಿನ ಮೇಲೆ ಬೀಸಿದಂತೆಯೂ ಅನ್ನಿಸಿತು. ಮತ್ತೊಬ್ಬರಾರೋ ವಿನಯಚಂದ್ರನಿಗೆ ಸುನ್ನತ್ ಮಾಡಿದಂತೆ ಅನ್ನಿಸಿ ರಾತ್ರಿಯ ನಿದ್ದೆಯಲ್ಲಿ ಬೆಚ್ಚಿದ. ಎಚ್ಚರಾದಾಗ ಮನಸ್ಸು ಕಸಿವಿಸಿಗೊಂಡಿತ್ತು. ಬಟ್ಟೆ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು.
ಇದೇನಿದು ಈ ರೀತಿ ವಿಚಿತ್ರ, ಭಯಾನಕ ಕನಸು ಬಿದ್ದಿತಲ್ಲ ಎಂದು ಹಳಿದುಕೊಂಡ ವಿನಯಚಂದ್ರ. ದೀಪ ಹಾಕಿ ಟೈಮ್ ನೋಡಿದ. ಆಗಲೇ ಗಡಿಯಾರದಲ್ಲಿ ಮುರು ಗಂಟೆಯನ್ನು ದಾಟಿ 15 ನಿಮಿಷ ಜಾಸ್ತಿಯಾಗಿತ್ತು. ಬೆಳಗಿನ ಜಾವದಲ್ಲಿ ಬೀಳುವ ಕನಸುಗಳು ನಿಜವಾಗುತ್ತದಂತೆ. ಹಾಗಾದರೆ ನನಗೆ ಕನಸಿನಲ್ಲಿ ಕಂಡಿದ್ದು ಸತ್ಯವಾಗುತ್ತದೆಯಾ? ಯಾಕೋ ವಿನಯಚಂದ್ರನಿದೆ ಅದು ಸಹ್ಯವಾಗಲಿಲ್ಲ. ಹಾಗಾಗದಿದ್ದರೆ ಸಾಕು ಎಂದು ಮನಸ್ಸಿನಲ್ಲಿಯೇ ಹಲುಬಿಕೊಂಡ. ದೀಪ ಹಾಕಿದ ವಿನಯಚಂದ್ರನನ್ನು ನೋಡಿದ ಸೂರ್ಯನ್ `ಏನಾಯ್ತು ದೋಸ್ತ್..' ಎಂದ. ಅದಕ್ಕೆ ಪ್ರತಿಯಾಗಿ `ಏನಿಲ್ಲ..' ಎಂದವನು ಹಾಗೇ ಮಲಗಿದ. ಮತ್ತೊಮ್ಮೆ ನಿದ್ದೆ. ಕೆಲವೊಮ್ಮೆ ಕನಸುಗಳು ಮುಂದಿನ ಜೀವನವನ್ನು ತಿಳಿಸಿ ಹೇಳುತ್ತವೆ. ಹಾಗಾದರೆ ವಿನಯಚಂದ್ರ ಹಾಗೂ ಮಧುಮಿತಾಳ ಬದುಕಿನಲ್ಲಿಯೂ ಮುಂದೆ ಕಷ್ಟದ ದಿನಗಳು ಬರಲಿದ್ದವಾ? ಇಬ್ಬರೂ ಸುರಳೀತವಾಗಿ ಭಾರತವನ್ನು ತಲುಪುತ್ತಾರಾ? ಮತ್ತಿನ್ನೇನಾದರೂ ಎರಡವಟ್ಟು ಆಗುತ್ತದೆಯಾ? ಯಾಕೋ ವಿನಯಚಂದ್ರ ಆಲೋಚನೆ ಮಾಡಿದಷ್ಟೂ ಆತಂಕ ಹೆಚ್ಚಿದಂತಾಗಿ ಸುಮ್ಮನೆ ಮಲಗಿದ. ಯಾವುದೋ ಕ್ಷಣದಲ್ಲಿ ನಿದ್ದೆ ಆವರಿಸಿತ್ತು.
ಇಬ್ಬನಿಯ ನಸುಕು, ಹಿತವಾದ ಚಳಿಗಾಳಿ ವಿನಯಚಂದ್ರ ಹಾಗೂ ರೂಂ ಮೇಟ್ ಸೂರ್ಯನ್ ರನ್ನು ಬಡಿದೆಬ್ಬಿಸಿತ್ತು. ಇವತ್ತು ಫೈನಲ್ ಇದೆಯಲ್ಲ ಎಂದುಕೊಂಡ ಇಬ್ಬರೂ ಬೇಗನೆ ತಯಾರಾದರು. ಪ್ರಾತರ್ವಿಧಿ ಮುಗಿಸಿ ತಂಡ ತರಬೇತಿ ಪಡೆಯುತ್ತಿದ್ದ ಜಾಗದತ್ತ ತೆರಳಿದರು. ಆಗಲೇ ಬಹುತೇಕ ಆಟಗಾರರು ಅಲ್ಲಿಗೆ ಆಗಮಿಸಿದ್ದರು. ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ಈಗ ಸ್ಟಾರ್ ಗಳಾಗಿದ್ದರು. ಹಲ ಕೆಲವು ಅಭಿಮಾನಿಗಳು ಗುರುತಿಸುವಂತಾಗಿದ್ದರು. ವಿಶೇಷವಾಗಿ ಇತರ ತಂಡದ ಆಟಗಾರರು ಇವರ ಕಡೆ ಮೆಚ್ಚುಗೆಯ ನೋಟವನ್ನು ಬೀರುತ್ತಿದ್ದರು. ಪರಿಚಯ ಮಾಡಿಕೊಳ್ಳಲು ಇಷ್ಟ ಪಡುತ್ತಿದ್ದರು. ವಿನಯಚಂದ್ರ ಹಾಗೂ ಸೂರ್ಯನ್ ಎಲ್ಲರ ಗೌರವಕ್ಕೆ, ಮೆಚ್ಚುಗೆಗೆ ಪ್ರತ್ಯುತ್ತರ ನೀಡಿ, ಅವರ ಜೊತೆ ಬೆರೆತು ತರಬೇತಿಯನ್ನು ಪೂರೈಸುವ ವೇಳೆಗೆ ಮದ್ಯಾಹ್ನವೂ ಆಗಿತ್ತು. ಸಂಜೆ ನಡೆಯಲಿರುವ ಫೈನಲ್ ಪಂದ್ಯ ದುಗುಡವನ್ನು ತಂದಿತ್ತು.
**
(ಮುಂದುವರಿಯುತ್ತದೆ..)
No comments:
Post a Comment