`ದುಬಾಯ್ ರಾಜು' ಇಂತದ್ದೊಂದು ಹೆಸರು ರಾಜೇಂದ್ರನಿಗೆ ಅಂಟಿಕೊಳ್ಳಲು ದೊಡ್ಡದೊಂದು ಹಿನ್ನೆಲೆಯೇ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸುಖಾ ಸುಮ್ಮನೆ ದುಬಾಯಿ ರಾಜು ಎಂದು ಸಾರ್ವಜನಿಕರೂ ಆತನನ್ನು ಕರೆದಿಲ್ಲ ಬಿಡಿ. ತನ್ನೂರನ್ನು ಬಿಟ್ಟು ದುಬಾಯಿಗೆ ಹೋಗಿ ನಾಲ್ಕೆಂಟು ವರ್ಷ ಕೆಲಸ ಮಾಡಿ ಬಂದ ಕಾರಣಕ್ಕಾಗಿಯೇ ಆತನನ್ನು ದುಬಾಯಿ ರಾಜು ಎಂದು ಕರೆಯಲಾರಂಭಿಸಿದ್ದು.
ರಾಜೇಂದ್ರ ಎನ್ನುವ ಹೆಸರಿನ ಮೂರ್ನಾಲ್ಕು ಮಂದಿ ಆತನ ಊರಿನಲ್ಲಿ ಇದ್ದರು. ಒಬ್ಬ ರಾಜೇಂದ್ರನನ್ನು ಕರೆದರೆ ಮತ್ತೊಬ್ಬ ಮಾತನಾಡುತ್ತಿದ್ದ, ಮತ್ಯಾರನ್ನೋ ಕರೆದರೆ ಇನ್ನೊಬ್ಬ. ಈ ಗೊಂದಲ ತಪ್ಪಿಸಲೋಸುಗ ಪ್ರತಿಯೊಬ್ಬ ರಾಜೇಂದ್ರನಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು ಕರೆಯಲು ಪುರಜನರು ಮುಂದಾಗಿದ್ದರು. ಹೀಗಾಗಿ ಇರುವ ಮೂರ್ನಾಲ್ಕು ರಾಜೇಂದ್ರರೂ ಕೆಂಪು ರಾಜೇಂದ್ರ, ಕುಳ್ಳ ರಾಜೇಂದ್ರ, ತುದಿಮನೆ ರಾಜೇಂದ್ರ ಹಾಗೂ ದುಬಾಯ್ ರಾಜೇಂದ್ರ ಎಂದು ಕರೆಸಿಕೊಳ್ಳಲಾರಂಭಿಸಿದ್ದರು. ಈ ಎಲ್ಲ ರಾಜೇಂದ್ರರ ಪೈಕಿ ಈತ ಎಲ್ಲರಿಗೂ ಸ್ವಲ್ಪ ಆಪ್ತನಾದ ಕಾರಣ ಹಾಗೂ ತನ್ನ ವಿಲಕ್ಷಣ ಬುದ್ಧಿಯಿಂದ ದುಬಾಯ್ ರಾಜು ಆಗಿ ಬದಲಾಗಿದ್ದ.
ದುಬಾಯ್ ರಾಜು ಒಂತರಾ ವ್ಯಕ್ತಿ. ಮಜವಾಗಿರುತ್ತಿದ್ದ. ಇತರರನ್ನು ನಗಿಸುವ ಕಾರ್ಯ ಮಾಡುತ್ತಿದ್ದ. ಹೆಂಗಸರಿದ್ದರಂತೂ ಪುಂಖಾನುಪುಂಕವಾಗಿ ಎರಡರ್ಥದ ಶಬ್ದಗಳನ್ನು ವಗಾಯಿಸಿ ವಗಾಯಿಸಿ ಇತರರು ನಗುವ ಮುನ್ನ ತಾನೇ ನಕ್ಕು ಹಾಸ್ಯಕ್ಕೆ ಕಾರಣವಾಗುತ್ತಿದ್ದ, ಹಾಸ್ಯಾಸ್ಪದವಾಗುತ್ತಿದ್ದ. ಸಾಮಾನ್ಯವಾಗಿ ದುಬಾಯಿ ರಾಜು ಯಾರ ಬಳಿಯಾದರೂ ಮಾತನಾಡಲು ಬಂದ ಎಂದರೆ ಎದುರಿಗಿದ್ದವರು ಮಾರು ದೂರ ನಿಂತುಕೊಂಡೇ ಮಾತನಾಡುತ್ತಿದ್ದರು. ಆತನ ಬಾಯಲ್ಲಿ ಸದಾಕಾಲ ಕವಳವೋ ಅಥವಾ ಗುಟ್ಕಾವೋ ಇದ್ದೇ ಇರುತ್ತಿತ್ತು. ಒಂದರೆಘಳಿಗೆಯೂ ಆತನ ಬಾಯಿ ಖಾಲಿಯಿರುತ್ತಿರಲಿಲ್ಲ. ಹೀಗಾಗಿ ಆತನ ಬಾಯಿಯನ್ನು ಎಲ್ಲರೂ ಜೈವಿಕ ಗ್ರೈಂಡರ್ ಎಂದೇ ಕರೆಯುತ್ತಿದ್ದರು. ಕವಳವನ್ನು ಜಗಿದು ಜಗಿದೂ ಆತನ ತುಟಿ, ನಾಲಿಗೆ ಹಾಗೂ ಹಲ್ಲುಗಳು ತಮ್ಮ ನೈಜಬಣ್ಣವನ್ನು ಅದ್ಯಾವುದೋ ಶತಮಾನದಲ್ಲಿ ಕಳೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಆತನ ಬಾಯಿ, ಹಲ್ಲು ಹಾಗೂ ತುಟಿ ಈ ಮೂರೂ ಒಂದೇ ಬಣ್ಣವಾಗಿದ್ದವು.
ದುಬಾಯ್ ರಾಜು ದುಬಾಯಿಯಲ್ಲಿ ಅದೇನು ಕೆಲಸ ಮಾಡಿದ್ದನೋ ಗೊತ್ತಿಲ್ಲ. ಆತ ದುಬಾಯಿಗೆ ಹೋಗುವ ಮುನ್ನ ಹೇಗಿದ್ದ, ಅಲ್ಲಿ ಹೋಗಿದ್ದೇನು ಮಾಡಿದ ಆ ನಂತರ ಬಂದು ಏನು ಮಾಡುತ್ತಿದ್ದಾನೆ ಎಂದು ಗಮನಿಸಿದವರೂ ಇದ್ದಾರೆ. ದುಬಾಯಿ ರಾಜುವನ್ನು ಗಮನಿಸಿದ ಮಹನೀಯರನ್ನು ವಿಚಾರಿಸಿದರೆ ಯಾವುದಾದರೂ ಪಿಎಚ್ಡಿಯನ್ನು ಮಂಡಿಸಬಹುದಾದಷ್ಟು ಸರಕು ಲಭ್ಯವಾಗುತ್ತದೆ. ದುಬಾಯಿಬಾಬು ಆಗಿನಕಾಲಕ್ಕೇ ಎಲ್ಲರಿಗಿಂತ ಹೆಚ್ಚು ಓದಿದ್ದ. ಆದರೆ ಆತ ಬದುಕಿನ ದಾರಿಯಲ್ಲಿ ಏಳು ಬೀಳು ಕಾಣಲಾರಂಭಿಸಿದಾಗಲೇ ತಾನು ಓದಿದ್ದು ಯಾವ ಮೂಲೆಗೂ ಸಾಲುವುದಿಲ್ಲ ಎಂದುಕೊಂಡಿದ್ದು. ಹೀಗಿದ್ದಾಗಲೇ ಅವನಿಗೆ ಯಾರೋ ದುಬಾಯಿಯ ಕನಸಿನ ಬೀಜ ಬಿತ್ತಿದ್ದರು. ದುಬಾಯಿಯಲ್ಲಿ ಎಣ್ಣೆ ಬಾವಿಗಳಿವೆ. ಅಲ್ಲಿ ಹೋಗಿ ಕೆಲಸ ಮಾಡಿದರೆ ಭಾರತದ ಒಂದು ವರ್ಷಕ್ಕಾಗುವಷ್ಟು ಹಣವನ್ನು ಒಂದೇ ತಿಂಗಳಲ್ಲಿ ದುಡಿಯಬಹುದು ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದನೋ. ಈತ ಆ ಕುರಿತು ತನ್ನ ಶತಪ್ರಯತ್ನವನ್ನು ಆರಂಭಿಸಿದ್ದ.
ದುಬಾಯಿಗೆ ಹೋಗಬೇಕು ಎಂದರೆ ಸುಮ್ಮನೆ ಆಗಿಬಿಡುತ್ತದೆಯೇ? ಪಾಸ್ಪೋರ್ಟು, ವಿಸಾ ಎಲ್ಲಾ ಆಗಬೇಕು, ಹಣಕಾಸಿಗೆ ಕೊರತೆಯಿರಲಿಲ್ಲ. ಆದರೆ ಈ ಎಲ್ಲವುಗಳಿಗಿಂತ ಪ್ರಮುಖ ಸಮಸ್ಯೆಯೊಂದಿತ್ತು. ರಾಜುವಿಗೆ ಇಂಗ್ಲೀಷು ಬರುತ್ತಲೇ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಂಗ್ಲೀಷಿನಲ್ಲಿ ಮಾತನಾಡಬೇಕು ಎಂದು ಯಾರೋ ರಾಜೇಂದ್ರನ ಕಿವಿ ಕಚ್ಚಿಬಿಟ್ಟಿದ್ದರು. ಅದಕ್ಕೆ ಆತ ಇಂಗ್ಲೀಷನ್ನು ಕಲಿಯಲು ಸಕಲ ರೀತಿಯಿಂದ ಪ್ರಯತ್ನವನ್ನು ಆರಂಭಿಸಿದ್ದ. ಹಳ್ಳಿಗನಿಗೆ ಇಂಗ್ಲೀಷು ಸುಲಭಕ್ಕೆ ಒಗ್ಗಲಿಲ್ಲ ಬಿಡಿ. ಕೊನೆಗೆ ಅದ್ಯಾರೋ ಬರೆದುಕೊಟ್ಟ ಇಂಗ್ಲೀಷ್ ಚೀಟಿಯನ್ನು ಉರು ಹೊಡೆದು ಅಲ್ಪ ಮಟ್ಟಿಗೆ ಇಂಗ್ಲೀಷು ಬಲ್ಲವರ ರೀತಿಯಲ್ಲಿ ಆಡತೊಡಗಿದ್ದ.
ದುಬಾಯಿಯಲ್ಲಿ ಆತ ಅದೇನು ಕೆಲಸ ಮಾಡಿದನೋ ದೇವರಿಗೇ ಪ್ರೀತಿ. ಕೇಳಿದವರ ಬಳಿಯಲ್ಲೆಲ್ಲ ಯಾವುದೋ ಆಯಿಲ್ ಕಂಪನಿಯ ಮ್ಯಾನೇಜರ್ ಆಗಿದ್ದೆನೆಂದು ಹೇಳುತ್ತಿದ್ದ. ಸರಿ ಸುಮಾರು ನಾಲ್ಕು ವರ್ಷಗಳಿಗಿಮತಲೂ ಅಧಿಕ ಸಮಯ ಅಲ್ಲಿದ್ದ. ಬರುವಾಗ ದುಬಾಯಿ ದೊರೆಗಳು ಬೇಡ ಎಂದು ಬಿಸಾಕಿದ್ದನೆಲ್ಲ ಭಕ್ತಿಯಿಂದ ಎತ್ತಿಕೊಂಡು ಬಂದಿದ್ದ. ಈ ನಾಡಿನಲ್ಲಿ ಆತನನ್ನು ವಿಸ್ಮಯದಿಂದ ನೋಡಿದ್ದರು.
ದುಬಾಯಿ ರಾಜು ದುಬಾಯಿಗೆ ಹೋದವನು ಇದ್ದಕ್ಕಿದ್ದಂತೆ ಮನೆಗೆ ವಾಪಾಸು ಬಂದಿರುವುದರ ಕುರಿತು ಹಲವು ರೀತಿಯಲ್ಲಿ ತರ್ಕಿಸುತ್ತಾರೆ. ಮದುವೆಯಾಗಬೇಕು ಎನ್ನುವ ಕಾರಣಕ್ಕೆ ವಾಪಾಸು ಬಂದ ಎಂದು ಒಂದಿಬ್ಬರು ಹೇಳಿದರೆ ಅವಿಭಕ್ತ ಕುಟುಂಬವಾದ ಮನೆಯಲ್ಲಿ ಹಿಸೆ ಆದರೆ ಆಸ್ತಿಯಲ್ಲಿ ಪಾಲು ಕೇಳಬೇಕು ಎನ್ನುವ ಕಾರಣಕ್ಕಾಗಿ ಮನೆಗೆ ಮರಳಿ ಬಂದ ಎಂದು ಹೇಳುವವರೂ ಇದ್ದಾರೆ. ಇವರು ಹೀಗಂದಿದ್ದಕ್ಕೆ ತಲೆದೂಗುವವರು ಸಾಕಷ್ಟು ಜನರಿರುವ ಕಾರಣ ತರ್ಕಕ್ಕೆ ಬೆಲೆ ಬಂದಿದೆ. ಆ ತರ್ಕ ಬಹುಮಟ್ಟಿಗೆ ಸತ್ಯವೂ ಆಗಿರುವುದರಿಂದ ತರ್ಕಿಸಿದ ಮಹನೀಯರೆಲ್ಲ ತರ್ಕಶಾಸ್ತ್ರ ಪಂಡಿತರೆಂದು ಕರೆಸಿಕೊಳ್ಳಲು ಆರಂಭಿಸಿದ್ದಾರೆ.
ದುಬಾಯ್ ರಾಜು ಕೆಲವೊಂದು ದುರ್ಗುಣಗಳನ್ನು ಹೊಂದಿದ್ದಾನೆ ಎನ್ನುವುದನ್ನು ಬಿಟ್ಟರೆ ಬಹುತೇಕ ಒಳ್ಳೆಯವನೇ. ಇಲ್ಲಿನದನ್ನು ಅಲ್ಲಿಗೆ ಹೇಳುವುದು, ಅಲ್ಲಿನದ್ದನ್ನು ಇಲ್ಲಿಗೆ ಹೇಳುವುದು ಆತನ ಪ್ರಮುಖ ದುರ್ಗುಣ. ಆದ್ದರಿಂದ ದುಬಾಯ್ ರಾಜುವಿನ ಆರಲ್ಲಿ ನಾರದ, ಶಕುನಿ ಮುಂತಾದ ಹಲವಾರು ಬಿರುದುಗಳನ್ನೂ ಹೊಂದಿದ್ದಾನೆ. ಈತನ ಕಾರಣದಿಂದಲೇ ಊರಲ್ಲಿ ಮೂರ್ನಾಲ್ಕು ಮಹಾಯುದ್ಧಗಳೂ ಜರುಗಿವೆ. ಸಾಮಾನ್ಯವಾಗಿ ಆತ ಯಾರು ಯಾರಿಗೆ ಆಗುವುದಿಲ್ಲವೋ ಅಂತವರ ಪಟ್ಟಿ ಮಾಡಿಕೊಂಡು ಅವರ ಹಾಗೂ ಇವರ ನಡುವಿನ ವಕ್ತಾರನಾಗಿಯೂ, ಅವರ ಮಾತನ್ನು ಇವರಿಗೆ ತಿಳಿಸಿ, ಇವರ ಮಾತನ್ನು ಅವರಿಗೆ ತಿಳಿಸಿ ತನ್ನ ಬೇಳೆಯನ್ನು ಬೇಯಿಸಿಕೊಂಡವನು. ಆತನ ಊರಿನಲ್ಲಿ ದುಬಾಯಿ ರಾಜುವಿನ ಈ ದುರ್ಗುಣ ಬಹು ದಿನಗಳ ವರೆಗೆ ಯಾರಿಗೂ ತಿಳಿದೇ ಇರಲಿಲ್ಲ. ಕೊನೆಗೊಂದು ದಿನ ಮಹಾನುಭಾವರೊಬ್ಬರು ಹೊಂಚು ಹಾಕಿ ಗೊತ್ತು ಮಾಡಿದಾಗ ದುಬಾಯಿ ರಾಜು `ನಾನವನಲ್ಲ.. ನಾನವನಲ್ಲ..' ಎಂದು ಹುಯ್ಯಲೆಬ್ಬಿಸಿ, ಕಿಡಿಕಾರಿ, ಹಲುಬಿಕೊಂಡು ಗಲಾಟೆಯನ್ನೂ ಮಾಡಿದ್ದಿದೆ.
ದುಬಾಯ್ ರಾಜುವಿನ ಮನೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆಸ್ತಿ ಗಲಾಟೆಯ ಹಿಂದಿನ ರೂವಾರಿ ದುಬಾಯಿ ರಾಜು ಎನ್ನುವ ವಿಷಯವನ್ನು ಮುಚ್ಚಿಟ್ಟರೂ ಸದ್ದಿಲ್ಲದೆ ಜಗಜ್ಜಾಹೀರಾಗಿಬಿಟ್ಟಿದೆ. ಇದು ಖಂಡಿತ ದುಬಾಯಿ ರಾಜುವಿನ ತಪ್ಪಲ್ಲ ಬಿಡಿ. ದುಬಾಯ್ ರಾಜುವಿನ ಮನೆಯಲ್ಲಿ ಆರೆಂಟು ಜನ ಸದಸ್ಯರು. ಅಂತವರು ಹಿಸೆಗಾಗಿ ಮನೆಯಲ್ಲಿ ಕಿತ್ತಾಡಿದರೆ ಅದು ಜಗತ್ತಿಗೆ ತಿಳಿಯುವುದಿಲ್ಲವೇ.. ಆದರೆ ಎಲ್ಲವುಗಳಿಗೂ ದುಬಾಯ್ ರಾಜುವೇ ಮೂಲ ಎಂದು ಗೂಬೆ ಕೂರಿಸಲು ಆತನ ದುರ್ಗುಣವೇ ಕಾರಣ.
ತನ್ನೂರಿನಲ್ಲಿ ಸರ್ಕಾರ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲಿ ಅದರಲ್ಲಿ ಮೂಗು ತೂರಿಸುವುದರಲ್ಲಿ ದುಬಾಯಿರಾಜು ಶತಸಿದ್ಧ. ಕಾಮಗಾರಿಗಳಲ್ಲಿ ಹುಳುಕು ಹುಡುಕುವ ದುಬಾಯಿ ರಾಜು ತಾನು ಅದನ್ನು ಜಗತ್ತಿನ ಎದುರು ಇಡುವ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ. ತನ್ನೂರಿನ ಇತರರ ಬಳಿ ಹೇಳಿಕೊಂಡು ನೀನು ಆ ಕುರಿತು ಮಾತನಾಡು ಅದು ಸರಿಯಿಲ್ಲ, ನೀನು ಈ ಕುರಿತು ಮಾತನಾಡು ಇದು ಸರಿಯಿಲ್ಲ ಎಂದು ಹೇಳುವ ಮೂಲಕ ಯೋಜನೆ ವಿರುದ್ಧ ಮಾತನಾಡುವಂತೆ ಮಾಡುತ್ತಾನೆ. ದುಬಾಯಿ ರಾಜುವಿನ ಮಾತು ಕಟ್ಟಿಕೊಂಡು ಆ ವ್ಯಕ್ತಿ ಮಾತನಾಡಿದ ಎಂದರೆ ದುಬಾಯಿ ರಾಜುವೇ ಮುಂದೆ ನಿಂತುಕೊಂಡು `ಊರಿನ ಅಭಿವೃದ್ಧಿಗೆ ಎದುರು ಮಾತನಾಡುತ್ತಿದ್ದಾನೆ. ಊರಿನ ಅಭಿವೃದ್ಧಿ ಕಂಡರೆ ಆಗುವುದಿಲ್ಲ. ಇವನದ್ದು ಯಾವಾಗಲೂ ಹೀಗೆಯೇ ವಿರೋಧ ಮಾಡುವ ಸ್ವಭಾವ..' ಎನ್ನುವ ಮೂಲಕ ಉಲ್ಟಾ ಹೊಡೆಯುವ ಮೂಲಕ ಹಲವರ ದ್ವೇಷವನ್ನೂ ಕಟ್ಟಿಕೊಂಡಿದ್ದಾನೆ.
ಇತ್ತೀಚಗೆ ಒಂದು ದೊಡ್ಡ ಘಟನೆ ಜರುಗಿದೆ. ಅದೇನೆಂದರೆ ದುಬಾಯಿ ರಾಜುವಿನ ಮದುವೆ. ಆತನ ಊರನ್ನೂ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದುಬಾಯ್ ರಾಜುವಿನ ಮದುವೆ ಬಹುದೊಡ್ಡ ಸುದ್ದಿ. ಮದುವೆಯಾದ ನಂತರ ಆತನ ಹಲವು ನಡವಳಿಗೆಳು ಸರಿಯಾಗಬಹುದು ಎಂದು ಪುರಜನರು ಭಾವಿಸಿದ್ದರು. ಆದರೆ ಬದಲಾಗಿ ಇನ್ನಷ್ಟು ಉಪದ್ವಾಪಿಯಾಗಿ ಬದಲಾಗಿರುವುದು ದುರಂತದ ಸಂಗತಿಯೆನ್ನಬಹುದು. ಮೊದಲು ತನಗೊಬ್ಬನಿಗೆ ಎಂದುಕೊಂಡಿದ್ದ ದುಬಾಯಿ ರಾಜು ಇದೀಗ ತನ್ನ ಹಾಗೂ ತನ್ನ ಪತ್ನಿಗೆ ಎನ್ನುವುದು ಒಳ್ಳೆಯ ಸಂಗತಿಯಾದರೂ ಇದಕ್ಕಾಗಿ ಅಡ್ಡದಾರಿಯನ್ನು ಹಿಡಿದಿರುವುದು ಬೇಸರದ ಸಂಗತಿಯೆನ್ನಬಹುದು. ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಪಕ್ಕದ ಮನೆಯ ಮಾವಿನ ಮರದ ಹಣ್ಣುಗಳು, ಹಲಸಿನ ಹಣ್ಣುಗಳು, ಪೇರಲ, ತರಕಾರಿಗಳು ಸೇರಿದಂತೆ ಬಹು ಅಮೂಲ್ಯ ವಸ್ತುಗಳೆಲ್ಲ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದೆ. ಈ ಕಾರಣಕ್ಕಾಗಿ ದುಬಾಯಿ ರಾಜು ಮತ್ತೊಮ್ಮೆ ತರಾಟೆಯನ್ನು ಎದುರಿಸಬೇಕಾಗಿ ಬಂದಿದ್ದೂ ಇದೆ. ಯಥಾ ಪ್ರಕಾರ ನಾನವನಲ್ಲ ಎಂದು ಹೇಳಿದ ದುಬಾಯ್ ರಾಜು ನೀವು ಕಂಡಿದ್ದೀರಾ..? ದಾಖಲೆಯಿದ್ದರೆ ಕೊಡಿ ಎನ್ನುವ ಮೂಲಕ ಹೊಸ ವರಸೆಯನ್ನು ಶುರು ಮಾಡಿಕೊಂಡಿದ್ದರ ಹಿಂದೆ ಹೆಂಡಿತ ಕೈವಾಡವನ್ನೂ ಸಂಶಯಿಸುವವರಿದ್ದಾರೆ.
ಇಂತಿಪ್ಪ ದುಬಾಯಿ ರಾಜು ತನಗಷ್ಟೇ ಅಲ್ಲದೇ ಇತರರಿಗೂ ಹೊರೆಯಾಗಿ, ಪರಾವಲಂಬಿಯಾಗಿ, ಅವರಿವರಿಗೆ ಕಾಟಕೊಡುತ್ತಿರುವ ಸುದ್ದಿ ಹಳೆಯದಾಗುತ್ತಿದೆ. ತಾನು ದುಬಾಯಿಗೆ ಹೋಗಿದ್ದೆ ಎನ್ನುವ ವಿಷಯ ಬಹುಶಃ ಇದೀಗ ಅವನಿಗೂ ನೆನಪಿಲ್ಲವೇನೋ. ಸ್ಥಳೀಯ ರಾಜಕಾರಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ದುಬಾಯಿ ರಾಜು ಮುಂದಿನ ದಿನಗಳಲ್ಲಿ ಪಂಚಾಯ್ತಿಯ ಚುನಾವಣೆಗೂ ನಿಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಲಿವೆ. ಹೀಗಾದರೆ ದೇವರೇ ಗತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನದನ್ನು ಕಾದು ನೋಡಬೇಕಾಗಿದೆ.
No comments:
Post a Comment