Friday, July 11, 2014

ಗಣಪಜ್ಜಿಯ ಹಾಡುಗಳು-2

            ಗಣಪಜ್ಜಿ ಹುಕಿಗೆ ಬಿದ್ದು ಹಾಡನ್ನು ಒಂದರ ಹಿಂದೊಂದರಂತೆ ಹೇಳುತ್ತಿದ್ದಳು. ನಾನು ಹಾಗೂ ಸಂಜಯ ಬರೆದುಕೊಳ್ಳುತ್ತ ಸಾಗಿದ್ದೆವು. ಮಧ್ಯದಲ್ಲಿ ನಾವು ಅಜ್ಜಿಗೆ ಪ್ರಶ್ನೆ ಕೇಳಲೂ ಭಯವಾಗಿತ್ತು. ನಾವು ಪ್ರಶ್ನೆ ಕೇಳುವ ಭರದಲ್ಲಿ ಅಜ್ಜಿಗೆ ನೆನಪಾಗಿದ್ದ ಹಾಡುಗಳು ಮರೆತು ಹೋದರೆ ಏನು ಮಾಡುವುದು ಎನ್ನುವುದು ನಮ್ಮೊಳಗಿನ ದುಗುಡವಾಗಿತ್ತು. ನಮ್ಮ ಪ್ರಶ್ನೆಗೆ ಆಸ್ಪದವೇ ಇಲ್ಲದಂತೆ ಗಣಪಜ್ಜಿ ಯಾವ ಸಂದರ್ಭದಲ್ಲಿ ಹೇಳುವ ಹಾಡು, ಯಾಕೆ ಹೇಳುತ್ತಾರೆ? ಅದನ್ನು ಹೇಳಿದರೆ ಏನು ಪ್ರಯೋಜನ, ಹಾಡಿನ ಧಾಟಿ ಇತ್ಯಾದಿಗಳ ಬಗ್ಗೆಯೆಲ್ಲ ಮಾಹಿತಿ ನೀಡುತ್ತ ಹಾಡುತ್ತಿದ್ದುದರಿಂದ ನಮ್ಮ ಹಲವಾರು ಸಮಸ್ಯೆಗಳು ಪರಿಹಾರವಾದಂತಾಗಿದ್ದವು. ಬರೆದುಕೊಳ್ಳುತ್ತಿದ್ದ ನಾನು ಹಾಗೂ ಸಂಜಯ ಸುಸ್ತಾಗಿದ್ದಂತೂ ಸುಳ್ಳಲ್ಲ.
             ಖಂಡಿತವಾಗಿಯೂ ನಾನು ಹಾಗೂ ಸಂಜಯ ಮಾತಿಗೆ ಬಿದ್ದರೆ ಮೇರೆ ಮೀರು ಬಿಡುತ್ತೇವೆ. ಪೋಲಿ ಮಾತುಗಳು ಸರಾಗವಾಗಿ ಹೊರಬರುತ್ತವೆ. ಅಜ್ಜಿಗೆ ಪೋಲಿಯೆನ್ನಿಸುವ ಹವ್ಯಕರ ಹಳ್ಳಿ ಹಾಡು ಸಾಕಷ್ಟು ಗೊತ್ತಿದ್ದ ಕಾರಣ ಆ ಬಗೆಯ ಹಾಡುಗಳು ಗೊತ್ತಿದ್ದರೆ ಹೆಚ್ಚು ಹೆಚ್ಚು ಹೇಳು ಎಂದೆವು. `ನೆನಪಿದ್ದಷ್ಟು ಹೇಳ್ತಿ ಅಕಾ..' ಎಂದು ಹೇಳಿದ ಅಜ್ಜಿ ಹಾಡಿದ ಹಾಡುಗಳಲ್ಲಿ ಪೂರ್ತಿ ಸಿಕ್ಕಿದ್ದು ಒಂದೋ ಎರಡೋ ಅಷ್ಟೆ. ಸಿಕ್ಕಿದಷ್ಟು ಹಾಡನ್ನು ಇಲ್ಲಿಡುವ ಪ್ರಯತ್ನ ನಮ್ಮದು

**
ಅತ್ತೆಯ ಮನೆಯಲ್ಲಿ ಸುತ್ತಿ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.|

ಮಾವನ ಮನೆಯಲಿ ಕೂಡೆ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.
ಶ್ರೀರಾಮರ ಮಡದಿ..||ಪ||

ದ್ವಾರಕಾ ಪುರದಲ್ಲಿ, ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ
ಬೆಟ್ಟ ಬಡಿದಳು ಶ್ರೀಕೃಷ್ಣರ ರಮಣಿ
ಕೃಷ್ಣರ ರಾಣಿ ರುಕ್ಮಿಣಿ ದೇವಿ..|

ಅತ್ತೆಯ ಮನೆಯಲ್ಲಿ ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ..||
 ಎಂದು ಹಾಡಿದ ಅಜ್ಜಿಗೆ ಮುಂದಿನ ಸಾಲುಗಳು ನೆನಪಾಗಲೇ ಇಲ್ಲ. ಮಾವನ ಮನೆಗೆ ಹೋಗುವ ಮಗಳು ಮಾವನ ಮನೆಯನ್ನು ಬೆಳಗಲಿ ಎಂದು ಹೇಳುವ ತಾಯಿ ಮಾವನ ಮನೆಯೊಂದು ದೇವರ/ಶ್ರೀಕೃಷ್ಣನ ನಿವಾಸ. ಅಲ್ಲಿನ ಸದಸ್ಯರೆಲ್ಲ ದೇವ ದೇವತೆಗಳು. ಅವರಿಗೆ ಗೌರವನ್ನು ಕೊಟ್ಟು, ನೀನೂ ಗೌರವವನ್ನು ಪಡೆದುಕೊ. ಜೊತೆಯಲ್ಲಿ ಕೊಟ್ಟ ಮನೆಯನ್ನು ಬೆಳಗು ಎಂದು ಹಾರೈಸುವ ಈ ಹಾಡು ಇಂದಿನ ಕಾಲಕ್ಕೆ ಪ್ರಸ್ತುತ ಎನ್ನಿಸುವಂತದ್ದು.

**
ಉಪ್ಪರಿಗೆಯಲ್ಲೇ ಪಟ್ಟೆ ಮಂಚ ಹಾಕಿರಬೇಕು
ಅತ್ರದೆಣ್ಣೆ ಮೇಜು-ಕುರ್ಚಿ ತಂದಿಟ್ಟಿರಬೇಕು
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |
ತಾಳೀ ತಂಬ್ಗೆ ಬೆಳಗಿಡಬೇಕು ಜಳ-ಜಳ
ಮಜ್ಗೆ ಡಾವ್ ಇಟ್ಟಿರಬೇಕು ಸಳ-ಸಳ
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |

-ಇದೊಂದು ಮಜವಾದ ಹಾಡು. ಗಂಡನನ್ನು ಹೆಂಡತಿ ಒಲಿಸುವ, ಒಪ್ಪಿಸುವ ಪರಿಯನ್ನು ಗಮನಿಸಿ. ಈ ಹಾಡೂ ನಮಗೆ ಪೂರ್ತಿಯಾಗಿ ಸಿಗಲಿಲ್ಲ. ಛೇ.

**
ಎಂಟು ಎಂದು ದಿನ ರೊಕ್ಕ
ಎಣಿಸಿ ಕೈಯಲಿ ಕೊಟ್ಟೆ
ಗಂಟು ಹೋಯ್ತು ಗೋವಳ ರಾಯ
ನೆಂಟರ ಮಲ್ಲಿ ಇಟ್ಟು ಬಂದ್ಯ
ಆಕಳು ಕಾಣೆ ನಂ ಆಕಳು ಕಾಣೆ |

ಆಕಳ ಗುತ್ ನಾ ನರಿಯೆ
ಆಕೆ ನಂಕೈಲಿ ಹೇಳಲಿಲ್ಲ
ಸೆರಗನ್ಹಾಸಿ ಬೇಡಿದ್ದಾದರೆ
ಸಾವಿರದಾಕಳ ತರಿಸಿಕೊಡುವೆ
ಆಕಳು ಬಕ್ಕು ನಿಂ ಆಕಳು ಬಕ್ಕು |

ಹಳ್ಳದಂಚಿಗೆ ಮೇಯ್ತಿತ್ತು
ಮನಿಗ್ ಹಾದಿ ಹಿಡದಿತ್ತು
ಕರನಾಸಿಗ್ ವದರತಿತ್ತು
ಮನೆಗಾಗೇ ಬರತಿತ್ತು
ಆಕಳು ಬಕ್ಕು ನಿಮ್ ಆಕಳು ಬಕ್ಕು..||

-ಎಂಬ ಈ ಹಾಡಿನಲ್ಲಿ ಕಳೆದು ಹೋದ ಆಕಳಿಗಾಗಿ ಮನೆಯೊಡತಿ ಪರಿತಪಿಸುವ ಪರಿ ಬಿಂಬಿತವಾಗಿದೆ. ಸೂಚ್ಯವಾಗಿ ಗಂಡ ಮನೆಗೆ ಬರುತ್ತಿಲ್ಲ ಎನ್ನುವುದನ್ನೂ ಹೇಳಲಾಗುತ್ತಿದೆ. ಬಹುದಿನಗಳಿಂದ ಗಂಡ ಮನೆಗೆ ಬಂದಿಲ್ಲ ಎನ್ನುವ ಅಂಶವನ್ನು ಈ ಹಾಡು ಬಿಡಿಸಿ ಹೇಳುತ್ತಿದೆ. ಇದೂ ಕೂಡ ಪೂರ್ತಿಯಾಗಿ ಸಿಗದ ಹಾಡು.
**

ಮಧುರ ವಾಕ್ಯವು
ಚಿನ್ಮಯನೆ ನೀನಾಡಿದ ವಾಕ್ಯವು
ಸನ್ಮತವಾಯ್ತು ಯನ್ನ ಮನುಸಿಗೆ
ಯನ್ನ ನಿನ್ನೆಯ ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ಮರವ ಪಾಲಿಸ
ರೆಂದ ಮಾಧವನು |

ಈ ಹಾಡೂ ಕೂಡ ಪೂರ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಮಾಧವನು ಶಿವನ ಕುರಿತಾಗಿ ಹೀಗೆನ್ನುತ್ತಾನೆ ಎನ್ನುವ ಹವ್ಯಕ ಹಾಡು. ಖಂಡಿತವಾಗಿಯೂ ನನಗೆ ಈ ಹಾಡಿನ ಧಾಟಿ ಅರ್ಥವಾಗಿಲ್ಲ. ಆ ಅಜ್ಜಿ ರಾಗವಾಗಿ ಹಾಡುತ್ತಿದ್ದರೆ ನಾವು ಅಷ್ಟೇ ತನ್ಮಯರಾಗಿ ಬರೆದುಕೊಂಡಿದ್ದಷ್ಟೇ ನೆನಪಿದೆ. ಈ ಹಾಡಿನ ಬಗ್ಗೆಯೂ ಗೊತ್ತಿದ್ದವರು ತಿಳಿಸಬಹುದು.

(ಗಣಪಜ್ಜಿ ಹೇಳಿದ ಒಂದೆರಡು ತಮಾಷೆಯ ಹಾಡುಗಳು ಇವೆ. ಅವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.. )

2 comments:

  1. ಮಾನ್ಯರೇ, ಇಂತಹ ಹಾಡುಗಳು ನಮ್ಮಿಂದ ಮರೆಯಾಗುತ್ತಿವೆ. ಯಾರದೋ ಶಿಫಾರಸಿನಿಂದಲೋ ರಾಜಕೀಯದಿಂದಲೋ ಒತ್ತಡದಿಂದಲೋ, ಕಾಡಿ ಬೇಡಿ ಪ್ರಶಸ್ತಿ ಅವರಿಂದ ಜನಪದಕ್ಕೆ ಯಾವುದೇ ಉಪಯೋಗವಿರುವುದಿಲ್ಲ. ಜನಪದ ಗೀತೆಯ ಸಾಗರದಲ್ಲಿ ಕಾಣದ ಮಾಯವಾಗುತ್ತಿರುವ ಹಾಡುಗಳನ್ನು ಯಾರಿಗೂ ಕೇಳಿಸುವುದಿಲ್ಲ. ಅವರು ಹಾಡುವುದೂ ಇಲ್ಲ. ಇಂತಹ ಸಾಗರದ ಮುತ್ತಿನಂತೆ ಸಿಗುವ ಕಲಾವಿದರು ಹಾಡುವಾಗ ನೀವು ಅದೃಷ್ಠವಂತರು ಕೇಳಿದಿರಿ. ಬರೆದುಕೊಂಡಿರಿ. ಅದನ್ನೇ ದ್ವನಿಮುದ್ರಿಸಿಕೊಂಡಿದ್ದರೆ. ನಾವು ಕೇಳುವ ಅದೃಷ್ಠವಂತರಾಗುತ್ತಿದ್ದೆವು. ದಯವಿಟ್ಟು ಇಂತಹ ಸಂದರ್ಭ ಸಿಕ್ಕಾಗ ದ್ವನಿಮುದ್ರಿಸಿಕೊಂಡರೆ ಅನುಕೂಲವಾಗುತ್ತಿತ್ತು ಅಲ್ಲವೇ?

    ReplyDelete
  2. ನಿಮ್ಮ ಸಲಹೆಗೆ, ಅಭಿಮಾನಕ್ಕೆ, ಅಭಿಪ್ರಾಯಕ್ಕೆ ಧನ್ಯವಾದಗಳು ನಂಜುಮಡರಾಜು ಅವರೆ...
    ನಾವು ಪ್ರತಿ ಸಾರಿ ಹಾಡುಗಳನ್ನು ಸಂಗ್ರಹಿಸಲು ಹೋಗುವಾಗಲೂ ಸಾಮಾನ್ಯವಾಗಿ ಧ್ವನಿಮುದ್ರಣ ಮಾಡಿಕೊಳ್ಳುತ್ತೇವೆ. ಆದರೆ ನಾವು ಇಂತಹ ಹಾಡುಗಳ ಸಂಗ್ರಹಣೆಗೆ ಇಳಿದ ಮೊದ ಮೊದಲ ದಿನಗಳ ಕಾರ್ಯಗಳಲ್ಲಿ ಇದೂ ಒಂದು. ಆಗ ನಮ್ಮಲ್ಲಿ ತಂತ್ರಜ್ಞಾನಗಳಿದ್ದರೂ ಸಮರ್ಪಕ ಬಳಕೆಯ ಅರಿವಿರಲಿಲ್ಲ. ದುರದೃಷ್ಟವೆಂದರೆ ಈ ಅಜ್ಜಿಯ ಹಾಡಿಗಳನ್ನು ಸಂಗ್ರಹ ಮಾಡುವಾಗ ನಮ್ಮ ಬಳಿ ಅಗತ್ಯವಾದ ಧ್ವನಿಮುದ್ರಣ ವ್ಯವಸ್ತೆಗಳು ಇದ್ದರೂ ಬಳಕೆಗೆ ಸಿಕ್ಕಿರಲಿಲ್ಲ. ಅದಕ್ಕಾಗಿ ಈಗಲೂ ಬೇಸರ ಪಡುತ್ತಿದ್ದೇವೆ.

    ReplyDelete