(ಸುಂದರಬನದಲ್ಲಿ ಜಿಂಕೆ ಜೋಡಿ) |
ಫುಟ್ ಬಾಲ್ ಜಗದ್ವಿಖ್ಯಾತ ಕ್ರೀಡೆ. ಅದನ್ನು ವೀಕ್ಷಣೆ ಮಾಡಲು ಸಾಕಷ್ಟು ಜನರು ಬರುತ್ತಾರೆ. ಟೆನ್ನಿಸ್ ಕೂಡ ಅಷ್ಟೇ ಖ್ಯಾತಿಯನ್ನು ಗಳಿಸಿಕೊಂಡಿದೆ. ವಿಂಬಲ್ಡನ್, ಪ್ರೆಂಚ್ ಓಪನ್, ಯುಸ್ ಓಪನ್, ಆಷ್ಟ್ರೇಲಿಯನ್ ಓಪನ್ ಗಳಿಗೂ ವೀಕ್ಷಕರ ಸಂಖ್ಯೆ ಬಹಳಷ್ಟಿರುತ್ತದೆ. ಕ್ರಿಕೆಟ್ ಕೂಡ ಲಕ್ಷಗಟ್ಟಲೇ ಜನರನ್ನು ವೀಕ್ಷಕರಾಗಿ ಪಡೆದುಕೊಂಡಿದೆ. ಆದರೆ ಕಬ್ಬಡ್ಡಿಯೆಲ್ಲ ಯಾರಿಗೆ ಗೊತ್ತು? ಭಾರತ ಉಪಖಂಡದಲ್ಲಿ ಖ್ಯಾತಿಯಲ್ಲಿರುವ ಈ ಕ್ರೀಡೆ ಮತ್ತಿನ್ಯಾರು ನೋಡುತ್ತಾರೆ? ಎಂದುಕೊಂಡಿದ್ದ ವಿನಯಚಂದ್ರ. ಆದರೆ ಆ ಕ್ರೀಡೆ ಇದೀಗ ಗಡಿದಾಟಿದೆ. ದೂರ ದೂರದ ಖಂಡಗಳಿಗೂ ವ್ಯಾಪಿಸಿದೆ. ಕಬ್ಬಡ್ಡಿಯನ್ನೂ ಕುತೂಹಲದಿಂದ ನೋಡುವವರಿದ್ದಾರೆ. ನಿಧಾನವಾಗಿ ಅದು ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ ಎನ್ನುವುದು ವಿನಯಚಂದ್ರನಿಗೆ ಅರಿವಾಯಿತು.
ಸಾಮಾನ್ಯವಾಗಿ ಭಾರತ-ಬಾಂಗ್ಲಾದೇಶ, ಭಾರತ-ಪಾಕಿಸ್ತಾನ, ಪಾಕಿಸ್ತಾನ-ಬಾಂಗ್ಲಾದೇಶಗಳ ನಡುವಣ ಪಂದ್ಯಗಳೆಂದರೆ ಏನೋ ತುರುಸು. ಜಿದ್ದಾಜಿದ್ದಿ. ಎದುರಾಳಿಗಳನ್ನು ಸದಾ ಹಣಿಯುವ ಕಾತರತೆ. ಸಾಂಪ್ರದಾಯಿಕ ಎದುರಾಳಿಗಳು ಎನ್ನುವ ಬಿರುದುಗಳೂ ಇರುವ ಕಾರಣ ರೋಚಕತೆಗೆ ಕೊರತೆಯಿಲ್ಲ. ಫೈನಲ್ ಪಂದ್ಯವೂ ಅಂತಹ ಕ್ಷಣಗಳಿಗೆ ಸಾಕ್ಷಿಯಾಗಲಿತ್ತು.
ಮೊದಲ ಏಳು ಜನರಲ್ಲಿ ಒಬ್ಬ ಆಟಗಾರನಾಗಿ ವಿನಯಚಂದ್ರ ಕಣಕ್ಕಿಳಿದಿದ್ದ. ಕಾಯ್ದಿಟ್ಟ ಆಟಗಾರರ ಸಾಲಿನಲ್ಲಿ ಸೂರ್ಯನ್ ಇದ್ದ. ಟಾಸ್ ಹಾಕಲಾಯಿತು. ಭಾರತದ ಪರವಾಗಿ ಟಾಸ್ ಬಂದಿತು. ಭಾರತ ತಂಡ ರೈಡಿಂಗನ್ನು ಆಯ್ಕೆ ಮಾಡಿಕೊಂಡಿತು. ಯಾವುದೇ ಪಂದ್ಯಗಳಲ್ಲಿಯೂ ಮೊದಲು ದಾಳಿ ಮಾಡುವವನಿಗೆ ಸಾಕಷ್ಟು ಅವಕಾಶಗಳು ಲಭ್ಯವಾಗುತ್ತವೆ. ಭಾರತ ರೈಡಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಬಾಂಗ್ಲಾದೇಶ ಕೋರ್ಟನ್ನು ಆರಿಸಿಕೊಳ್ಳಬೇಕಾಯಿತು. ಯಾವುದೋ ಒಂದು ಕೋರ್ಟನ್ನು ಆಯ್ಕೆ ಮಾಡಿಕೊಂಡಿತು. ವಿನಯಚಂದ್ರನಿಗೆ ಸೂರ್ಯನ್ ಜೊತೆಯಲ್ಲಿಯೇ ಪರಿಚಯವಾಗಿದ್ದ ತಮಿಳುನಾಡಿನ ಇನ್ನೊಬ್ಬಾತ ರೈಡಿಂಗಿಗೆ ಹೋದ. ಸಾಕಷ್ಟು ಪ್ರಯತ್ನ ಪಟ್ಟರೂ ಒಂದೇ ಒಂದು ಅಂಕಗಳನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎದುರಾಳಿ ರೈಡಿಂಗಿಗೆ ಬಂದ. ಭಾರತ ತಂಡ ಜಾಗರೂಕವಾಗಿ ಆಡಿದ ಕಾರಣ ಯಾವುದೇ ಅಂಕವನ್ನು ಎದುರಾಳಿಗೆ ಬಿಟ್ಟುಕೊಡಲಿಲ್ಲ. ಮತ್ತೆ ದಾಳಿ ಭಾರತದ ಪಾಲಿಗೆ ಒದಗಿತು. ಆಂಧ್ರದ ಆಟಗಾರ ರೈಡ್ ಮಾಡಲು ಹೋದ. ಕೆಲ ಹೊತ್ತು ಹೀಗೆ ಆಟ ಸಾಗುತ್ತಿದ್ದಾಗ ಬಾಂಗ್ಲಾದೇಶೀ ಆಟಗಾರರು ಭಾರತದ ರೈಡರ್ ನನ್ನು ರಪ್ಪನೆ ಹಿಡಿದು ಹೆಡೆಮುರಿ ಕಟ್ಟಿದರು. ಬಾಂಗ್ಲಾಕ್ಕೆ ಒಂದಂಕ ಲಭ್ಯವಾಯಿತು. ಒಮ್ಮೆ ಅವಾಕ್ಕಾಯಿತು ಭಾರತ ತಂಡ.
ಎದುರಾಳಿ ರೈಡಿಂಗಿಗೆ ಬಂದ. ಬಂದವನೇ ಭಾರತದ ಒಬ್ಬ ಆಟಗಾರನನ್ನು ಬಡಿದುಕೊಂಡು ಹೋದ. ಪರಿಣಾಮ ಬಾಂಗ್ಲಾ ಎರಡಂಕ. ಭಾರತ ಸೊನ್ನೆ. ಭಾರತದಿಂದ ರೈಡಿಂಗ್. ಒಬ್ಬನನ್ನು ಹೊಡೆದುಕೊಂಡು ಬಂದ. ಪರಿಣಾಮ ಬಾಂಗ್ಲಾ 2 ಭಾರತ 1. ಹಿನ್ನಡೆ ಆತಂಕವನ್ನು ತಂದಿದ್ದರೂ ಇನ್ನೂ ಸಮಯ ಸಾಕಷ್ಟಿತ್ತು. ಮತ್ತೊಬ್ಬ ರೈಡಿಂಗಿಗೆ ಬಂದ. ಈ ಸಾರಿ ಸರಿಯಾದ ಅವಕಾಶಕ್ಕೆ ಕಾದಿದ್ದ ವಿನಯಚಂದ್ರ ರಪ್ಪನೆ ಎದುರಾಳಿಯ ಕಾಲನ್ನು ಹಿಡಿದು ಕೆಡವಿದ. ಬಿದ್ದರೂ ಮಧ್ಯದ ಗೆರೆಯನ್ನು ಮುಟ್ಟಲು ಕೊಸರಾಡುತ್ತಿದ್ದವನ ಮೇಲೆ ಇತರೆ ಆಟಗಾರರು ಬಂದು ಹೆಡೆಮುರಿ ಕಟ್ಟಿದರು. ವಿನಯಚಂದ್ರನ ದೆಸೆಯಿಂದ ಅಂಕ ಸಮನಾಯಿತು. ಒಮ್ಮೆ ನಿರಾಳತೆ ಆವರಿಸಿತು. ಕೆಲ ಹೊತ್ತು 2-2 ಅಂತರದಲ್ಲಿಯೇ ಆಟ ಸಾಗಿತು. ಯಾರೊಬ್ಬರೂ ಮುನ್ನಡೆಯಲಿಲ್ಲ. ಯಾರೂ ಹಿಂದಕ್ಕೆ ಬೀಳಲಿಲ್ಲ. ತಪ್ಪುಗಳಿಗಾಗಿ ಪರಸ್ಪರರು ಕಾಯುತ್ತಿದ್ದಂತೆ ಕಂಡಿತು. ಇದೇ ಹೊತ್ತಿನಲ್ಲಿ ಜಾಧವ್ ಅವರು ಸೂರ್ಯನ್ ನ್ನು ಅಂಗಣಕ್ಕೆ ಬಿಟ್ಟರು. ಮಧ್ಯಂತರ ಬಂದಿತು. ಈ ವೇಳೆಗೆ ಭಾರತ ತಂಡ 10-8ರಿಂದ ಮುನ್ನಡೆಯನ್ನು ಹೊಂದಿತ್ತು. ಮುನ್ನಡೆ ಅತ್ಯಲ್ಪದ್ದಾಗಿರುವ ಕಾರಣ ಯಾವುದೇ ಸಮಯದಲ್ಲಿಯೂ ಸೋಲು ಧುತ್ತನೆ ಕಾಡಬಹುದಾಗಿತ್ತು.
ಮಧ್ಯಂತರದ ಅವಧಿಯಲ್ಲಿ ಜಾಧವ್ ಅವರು ಆಟಗಾರರ ಆಟದ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸರಿಯಾದ ರೀತಿಯಲ್ಲಿ ಯಾರೂ ಆಟವನ್ನೇ ಆಡಿಲ್ಲ ಎಂದೂ ಝಾಡಿಸಿದರು. ಸಮರ್ಪಕವಾಗಿ ಆಡುವಂತೆ ಹೇಳಿದರಷ್ಟೇ ಅಲ್ಲದೇ ಇನ್ನು ನಾಲ್ಕೋ ಐದೋ ನಿಮಿಷ ಭವಿಷ್ಯವನ್ನು ನಿರ್ಧರಿಸುತ್ತದೆ. ಅಷ್ಟರಲ್ಲಿ ಹೇಗಾದರೂ ಮಾಡಿ ಗೆಲುವನ್ನು ಸವಿಯಿರಿ, ಏನು ಬೇಕಾದರೂ ಆಗಲಿ ಎನ್ನುವಂತೆ ಹೇಳಿದರು. ಎಲ್ಲರಲ್ಲೂ ಈ ಮಾತು ಕಿಚ್ಚು, ಕೆಚ್ಚನ್ನು ಹೊತ್ತಿಸಿತ್ತು. ದ್ವಿತೀಯಾರ್ಧ ಆರಂಭಗೊಂಡ ನಂತರ ಭಾರತ ತಂಡದವರು ಆಕ್ರಮಣಕಾರಿಯಾಗಿ ಆಡಲು ಆರಂಭಿಸಿದರು. ಬಾಂಗ್ಲಾದವರೂ ಸುಮ್ಮನಿರಲಿಲ್ಲ. ವಿನಯಚಂದ್ರ ಎರಡು ಸಾರಿ ರೈಡಿಂಗಿಗೆ ಹೋಗಿ ಒಟ್ಟೂ ಮೂರು ಅಂಕಗಳನ್ನು ಪಡೆದುಕೊಂಡು ಬಂದ. ಅಲ್ಲದೇ ನಾಲ್ಕು ಕ್ಯಾಚ್ ಹಿಡಿದ. ಕೊನೆಗೊಮ್ಮೆ ಈತ ರೈಡಿಂಗಿಗೆ ಹೋದಾಗ ಎದುರಾಳಿ ತಂಡದವರು ವಿನಯಚಂದ್ರನನ್ನು ಹಿಡಿದು ಹೆಡೆಮುರಿ ಕಟ್ಟಿದರು. ಕೆಳಗೆಬಿದ್ದ ವಿನಯಚಂದ್ರನ ಮೇಲೆ ಯಾವ ಕಾಲದ ಸಿಟ್ಟೋ ಎನ್ನುವಂತೆ ಹತ್ತಿ ಕುಣಿದುಬಿಟ್ಟರು. ನೆಲಕ್ಕೆ ಬಿದ್ದ ರಭಸಕ್ಕೆ ಒಂದೆರಡು ಕಡೆಗಳಲ್ಲಿ ಗಾಯವೂ ಆಯಿತು. ಮೈಕೈ ಎಲ್ಲ ನುಜ್ಜುಗುಜ್ಜಾದ ರೀತಿ ಆಗಿತ್ತು. ನರನಾಡಿಗಳಲ್ಲಿ ನೋವು ತುಂಬಿಕೊಂಡಿತ್ತು. ತಕ್ಷಣಕ್ಕೆ ಜಾಧವ್ ಅವರು ವಿನಯಚಂದ್ರನನ್ನು ಅಂಗಣದಿಂದ ಹೊರಕ್ಕೆ ಕರೆದುಕೊಂಡು ಬದಲಿ ಆಟಗಾರನನ್ನು ಕಳಿಸಿದರು. ಅಷ್ಟರಲ್ಲಿ ಅಂತಿಮ ಸಮಯ ಬಂದಿತ್ತು. ಭಾರತ 28-22 ರಿಂದ ಮುನ್ನಡೆಯನ್ನು ಸಾಧಿಸಿತ್ತು. ಅಂತಿಮ ಸೀಟಿ ಊದುವ ವೇಳೆಗೆ ಭಾರತ 31 ಬಾಂಗ್ಲಾದೇಶ 25 ಅಂಕಗಳನ್ನು ಪಡೆದುಕೊಂಡಿತ್ತು. ಆರು ಅಂಕಗಳ ಮುನ್ನಡೆಯ ಮೂಲಕ ಗೆಲುವನ್ನು ಸಾಧಿಸಿತ್ತು ಅಷ್ಟೇ ಅಲ್ಲದೇ ವಿಶ್ವಕಪ್ಪನ್ನು ಮತ್ತೊಮ್ಮೆ ತನ್ನ ಮುಡಿಗೆ ಏರಿಸಿಕೊಂಡಿತ್ತು.
ಗೆದ್ದು ಬಂದ ಭಾರತೀಯ ಆಟಗಾರರು ವಿನಯಚಂದ್ರನನ್ನು ಸುತ್ತುವರಿದಿದ್ದರು. ಆತನಿಗೆ ಗಂಭೀರವಾಗಿ ಗಾಯವಾಗಿರಲಿಲ್ಲ. ನಿಟ್ಟುಸಿರುವು ಬಿಟ್ಟಿದ್ದರು. ವಿಶ್ವಕಪ್ಪನ್ನು ಗೆದ್ದ ಖುಷಿ ಬಿದ್ದ ನೋವನ್ನು ಮರೆಸಿ ಹಾಕಿತ್ತು. ಸತತವಾಗಿ ವಿಶ್ವಕಪ್ಪನ್ನು ಗೆದ್ದು ಇತಿಹಾಸದ ಪುಟಗಳಲ್ಲಿ ಭಾರತದ ಕಬ್ಬಡ್ಡಿ ತಂಡ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿತ್ತು. ಪಂದ್ಯದಲ್ಲಿ ಭಾರತದ ಆಟಗಾರನಿಗೆ ಪಂದ್ಯಪುರುಷೋತ್ತಮ ಲಭಿಸಿದರೆ ವಿನಯಚಂದ್ರನಿಗೆ ಅತ್ಯುತ್ತಮ ಕ್ಯಾಚರ್ ಪ್ರಶಸ್ತಿ ಲಭಿಸಿತು. ಅಲ್ಲದೇ ವಿಶೇಷ ಪ್ರಶಸ್ತಿಯನ್ನೂ ಪಡೆದುಕೊಂಡ. ವಿಶ್ವಕಪ್ಪನ್ನು ತಂಡದ ನಾಯಕನ ಕೈಗಿತ್ತಾಗಲಂತೂ ಸ್ವರ್ಗವೇ ಸಿಕ್ಕ ಅನುಭವ. ಕೂಗಿದರು, ಕಬ್ಬರಿದರು. ಸಂತಸಕ್ಕೆ ಪಾರವೇ ಇರಲಿಲ್ಲ. ಒಂದು ವಿಶ್ವಕಪ್ ಎಷ್ಟೆಲ್ಲ ಸಂತೋಷವನ್ನು ನೀಡುತ್ತದಲ್ಲ ಎಂದುಕೊಂಡ ವಿನಯಚಂದ್ರ. ಆ ದಿನವಿಡಿ ಸಂತಸದ ಹೊಳೆ ಹರಿದಿತ್ತು. ಜಾಧವ್ ಸರ್ ಅವರಂತೂ ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ವಿನಯಚಂದ್ರನಿಗಂತೂ ತನಗಾದ ಗಾಯ, ಮೈಕೈ ನೋವು ಮರೆತಂತೆ ಖುಷಿಪಟ್ಟ. ಒಂದು ಗೆಲುವು ಅದೆಷ್ಟೋ ಕಾಲದ ಕಷ್ಟ, ನೋವುಗಳನ್ನು ಮರೆ ಮಾಚುತ್ತದೆ ಎಂದುಕೊಂಡ ವಿನಯಚಂದ್ರ.
ಸಂಜೆ ಹೊಟೆಲಿನಲ್ಲಂತೂ ಸಂಭ್ರಮ ಮೇರೆ ಮೀರಿತ್ತು. ಎಲ್ಲರೂ ಪಂದ್ಯಾವಳಿಯಲ್ಲಿ ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವವರೇ ಆಗಿದ್ದರು. ವಿನಯಚಂದ್ರ ಮೊದಲು ಮನೆಗೆ ಪೋನ್ ಮಾಡಿ ವಿಷಯ ತಿಳಿಸಿದ. ಮನೆಯಲ್ಲಿಯೂ ಸಂಭ್ರಮದ ವಾತಾವರಣ ಮೇರೆ ಮೀರಿತ್ತು. ಮಧುಮಿತಾ ಮೊದಲು ಬಂದವಳೇ ವಿನಯಚಂದ್ರನನ್ನು ತಬ್ಬಿಕೊಂಡು ಕಂಗ್ರಾಟ್ಸ್ ಎಂದಳು. ಗೊತ್ತಾದರೂ ಗೊತ್ತಾಗದಂತೆ ವಿನಯಚಂದ್ರನ ತುಟಿಗೆ ಮುತ್ತನ್ನು ಕೊಟ್ಟುಬಿಟ್ಟಿದ್ದಳು. ವಿನಯಚಂದ್ರ ಒಮ್ಮೆ ಅವಾಕ್ಕಾದರೂ ನಂತರ ರೋಮಾಂಚನದಿಂದ ಮುತ್ತಿನ ಸವಿಯನ್ನು ಅನುಭವಿಸಿದ್ದ. ನಂತರ ಅವನಿಗಾದ ಗಾಯಗಳು ಅವಳ ಅರಿವಿಗೆ ಬಂದಿತು. ವಿನಯಚಂದ್ರ ಮುಜುಗರದಿಂದ ಬೇಡ ಬೇಡ ಎನ್ನುತ್ತಿದ್ದರೂ ಕೇಳದೇ ಆತನನ್ನು ರೂಮಿಗೆ ಎಳೆದೊಯ್ದು ಗಾಯಗಳನ್ನೆಲ್ಲ ತೊಳೆದು ಔಷಧಿ ಹಚ್ಚಿದಳು. ವಿನಯಚಂದ್ರ ಮತ್ತೊಮ್ಮೆ ಅವಳ ಕೈಗಳನ್ನು ಚುಂಬಿಸಿದ್ದ. `ಜಗತ್ತಿನಲ್ಲಿ ಯಾರು ಯಾರು ಹೇಗೆ ಸೇರುತ್ತಾರೋ ಗೊತ್ತಿಲ್ಲ.. ಈ ಕಬ್ಬಡ್ಡಿ ನಮ್ಮಿಬ್ಬರನ್ನು ಸೇರಿಸಿದೆ. ಇದಕ್ಕೊಂದು ಸಲಾಂ..' ಎಂದ ವಿನಯಚಂದ್ರ. ಮಧುಮಿತಾಳ ಕಣ್ಣಲ್ಲಿ ಬೆರಗು ಮೂಡಿತ್ತು.
**
ಮರುದಿನ ಬಂಗಾಳ ಕೊಲ್ಲಿಯ ಅಕ್ಕಪಕ್ಕದಲ್ಲಿದ್ದ ಸುಂದರಬನ್ಸ್ ಪ್ರದೇಶವನ್ನು ನೊಡಲು ಭಾರತದ ಕಬ್ಬಡ್ಡಿ ತಂಡ ತೆರಳಬೇಕಿತ್ತು. ಬಂಗಾಳದ ಹುಲಿಗಳು, ಗಂಗಾನದಿ ಸಮುದ್ರವನ್ನು ಸೇರುವ ಪ್ರದೇಶವನ್ನೆಲ್ಲ ನೋಡಬೇಕು ಎನ್ನುವುದು ತಂಡದ ಯೋಚನೆಯಾಗಿತ್ತು. ಆದರೆ ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಎಲ್ಲರ ಚಿಂತೆಗೆ ಕಾರಣವಾಗಿತ್ತು. ಸುಂದರಬನ್ಸ್ ನೋಡಲು ತೆರಳುವುದೋ ಬೇಡವೋ ಎನ್ನುವ ಸಂದಿಗ್ಧತೆ ಎಲ್ಲರಲ್ಲೂ ಇದ್ದುದು ಸುಳ್ಳಲ್ಲ. ಆದರೆ ಆಟಗಾರರಿಗೆಲ್ಲ ಸುಂದರಬನ್ಸ್, ಬಂಗಾಳದ ಬಿಳಿಯ ಹುಲಿಗಳು, ಭಾರತದ ಪವಿತ್ರ ನದಿ ಗಂಗೆ ತನ್ನ ಬಳಗದ ಜೊತೆಗೂಡಿ ಸಮುದ್ರವನ್ನು ಸೇರುವ ಸ್ಥಳವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಯನ್ನು ತಡೆದುಕೊಳ್ಳಲಾಗಲಿಲ್ಲ. ಒತ್ತಾಯಿಸಿದ ಪರಿಣಾಮ ಅಲ್ಲಿಗೆ ತೆರಳುವುದು ನಿಶ್ಚಯವಾಯಿತು. ಕೋಚ್ ಜಾಧವ್ ಅವರ ಮೂಲಕ ಮಧುಮಿತಾಳೂ ಅಲ್ಲಿಗೆ ಬರುವಂತೆ ಮಾಡಿಸಿಕೊಳ್ಳಲು ವಿನಯಚಂದ್ರ ಯಶಸ್ವಿಯಾದ.
ತಂಡದ ಪ್ರತಿಯೊಬ್ಬ ಆಟಗಾರರಿಗೂ ವಿನಯಚಂದ್ರ ಹಾಗೂ ಮಧುಮಿತಾರ ಪ್ರೇಮದ ವಿಷಯ ತಿಳಿದುಹೋಗಿತ್ತು. ಮೊದ ಮೊದಲು ಎಲ್ಲರಿಗೂ ಇದು ಬೆರಗಿಗೆ ಕಾರಣವಾದರೆ ನಂತರ ಮಾತ್ರ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದರು. ಏನೇ ಸವಾಲುಗಳು ಎದುರಾಗಲಿ, ಅದೇನೇ ಕಷ್ಟಗಳು ಬರಲಿ ಈ ಜೋಡಿಯನ್ನು ಒಂದುಗೂಡಿಸಬೇಕು ಎಂದು ಪಣತೊಟ್ಟವರಂತೆ ವರ್ತಿಸುತ್ತಿದ್ದರು.
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆ ಕಾರಣದಿಂದಾಗಿ ಹಿಂಸಾಚಾರ ಪೀಡಿತ ಪ್ರದೇಶವನ್ನು ತಪ್ಪಿಸಿಕೊಂಡು ಸುತ್ತು ಬಳಸಿನ ದಾರಿಯಲ್ಲಿ ಸುಂದರಬನ್ಸ್ ಪ್ರದೇಶಕ್ಕೆ ತೆರಳಬೇಕಿತ್ತು. ಸಾಕಷ್ಟು ಸವಾಲಿನ ಕಾರ್ಯವಾದ್ದರಿಂದ ಒಂದೆರಡು ತಾಸು ವಿಳಂಬವೂ ಆಯಿತು. ಗಂಗಾನದಿಯ ಮುಖಜ ಪ್ರದೇಶದಲ್ಲಿ ಅಂಕುಡೊಂಕಿನ ದಾರಿಯಲ್ಲಿ ಸಾಗಿ ಕೊನೆಗೊಮ್ಮೆ ಬಂಗಾಳಕೊಲ್ಲಿಯ ತೀರಕ್ಕೆ ಬಂದರು. ಆಟಗಾರೆರಿಗೆಲ್ಲ ಅದೇನೋ ಹೆಮ್ಮೆ. ಮನಸ್ಸಿನ ತುಂಬೆಲ್ಲ ಗೌರವದ ಭಾವನೆ. ಭಾರತದ ಕೊಲ್ಕತ್ತಾದಿಂದ ಬಾಂಗ್ಲಾದೇಶದ ಹಲವು ಕಡೆಗಳಲ್ಲಿ ಗಂಗಾನದಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗಂಗೆ ಸಮುದ್ರ ಸೇರುವ ಮುನ್ನ ಗೋಮತಿ, ಮೇಘನಾ, ಬ್ರಹ್ಮಪುತ್ರಾ ಈ ಮುಂತಾದ ನದಿಗಳನ್ನು ಬಾಂಗ್ಲಾದೇಶದ ಫಾಸಲೆಯಲ್ಲಿಯೇ ತನ್ನ ತೆಕ್ಕೆಗೆ ಎಳೆದುಕೊಂಡು ಭರತಖಂಡದ ಬಹುದೊಡ್ಡ ನದಿಯಾಗಿ ಪರಿವರ್ತನೆಯಾಗುತ್ತಾಳೆ.
`ನಿಂಗೊತ್ತಾ ವಿನು.. ಗಂಗಾ ನದಿ ಸಮುದ್ರವನ್ನು ಸೇರಿದ ನಂತರವೂ ಮೂರ್ನಾಲ್ಕು ಕಿ.ಮಿಗಳಷ್ಟು ದೂರ ಸಮುದ್ರದ ಉಪ್ಪು ನೀರಿನೊಂದಿಗೆ ಬೆರೆಯದೇ ಮುಂದಕ್ಕೆ ಹರಿಯುತ್ತಲೇ ಇರುತ್ತಾಳೆ. ಆ ನಂತರವೇ ಸಮುದ್ರದ ಉಪ್ಪು ನೀರು ಗಂಗೆಯ ನೀರಿನೊಂದಿಗೆ ಬೆರಯಲು ಆರಂಭವಾಗುತ್ತದೆ..' ಎಂದಳು ಮಧುಮಿತಾ..
`ಹುಂ.. ಎಲ್ಲೋ ಚಿಕ್ಕಂದಿನಲ್ಲಿ ಓದಿದ್ದ ನೆನಪು. ಮಧು ಇದೇ ಜಾಗದಲ್ಲಿ ಅಲ್ಲವಾ ಪದೇ ಪದೆ ಚಂಡಮಾರುತಗಳು ಅಪ್ಪಳಿಸುತ್ತವೆ. ಬಂಗಾಳಕೊಲ್ಲಿಯಲ್ಲೆದ್ದ ಚಂಡಮಾರುತ ಇದೇ ತೀರದ ಮೂಲಕ ಬಾಂಗ್ಲಾದೇಶದಲ್ಲಿ ಹಾವಳಿ ಮಾಡುತ್ತವೆ.. ಅಲ್ಲವಾ..' ಎಂದ ವಿನಯಚಂದ್ರ.
`ಹುಂ.. ಹೌದು. ಆದರೆ ಗಂಗಾನದಿಯ ಮುಖಜ ಭೂಮಿಯ ತುಂಬೆಲ್ಲ ಕಾಂಡ್ಲಾ ವನವಿದೆಯಲ್ಲ. ಈ ಕಾಂಡ್ಲಾ ವನದಿಂದೊಡಗೂಡಿದ ಪ್ರದೇಶವನ್ನೇ ಸುಂದರಬನ್ಸ್ ಎಂದು ಕರೆಯುರೆ. ಇದು ರಕ್ಷಿತಾರಣ್ಯ. ಈ ಅರಣ್ಯವಿರುವ ಕಾರಣದಿಂದಲೇ ಚಂಡಮಾರುತದ ಸಾಕಷ್ಟು ತೊಂದರೆಗಳು ಕಡಿಮೆಯಾಗುತ್ತವೆ. ವಿಶ್ವದ ಅತ್ಯಪರೂಪದ ಅರಣ್ಯಗಳಲ್ಲಿ ಇದೂ ಒಂದು. ವಿಶಿಷ್ಟ ಬಗೆಯ ಬಂಗಾಲದ ಬಿಳಿ ಹುಲಿಗಳು ಇಲ್ಲಿ ಮಾತ್ರ ಬದುಕುತ್ತವೆ. ಇಲ್ಲಿ ಬೇಟೆ ನಿಷಿದ್ದ. ಅಳಿವಿನ ಅಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಣೆ ಮಾಡಲು ಈ ಜಾಗ ಬಳಕೆಯಾಗಿವೆ. ಆದರೆ ಸರ್ಕಾರದ ಕಣ್ಣು ತಪ್ಪಿಸಿ ಆಗೀಗ ಬೇಟೆ ಮಾಡಲಾಗುತ್ತದೆ.. ಈ ಅರಣ್ಯ ಇದೆಯಲ್ಲ ಇದೊಂದು ರೀತಿಯ ವಿಚಿತ್ರ. ಇಲ್ಲಿ ಯಾವಾಗ, ಯಾವ ಕಡೆಗಳಲ್ಲಿ ಸಮುದ್ರ ಒಳನುಗ್ಗಿದೆ ಎಂದು ಹೇಳುವುದು ಕಷ್ಟ. ಅದೇ ರೀತಿ ಗಂಗಾ ನದಿಯ ಕವಲು ಯಾವ ಪ್ರದೇಶದಲ್ಲಿ ಹಾದು ಹೋಗಿದೆ ಎನ್ನುವುದೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ. ನಡು ನಡುವೆ ನೀರು, ಅಲ್ಲಲ್ಲಿ ಜವುಳು ಮಣ್ಣು, ಮುಳ್ಳು ಕಂಡಿಗಳ ಗಿಡ, ಕಾಂಡ್ಲಾ ಸಸ್ಯಸಂಕುಲ. ಆದರೆ ಅರಣ್ಯದಲ್ಲಿ ವನ್ಯಜೀವಿಗಳ ಸಮೂಹವೇ ಜೀವನ ನಡೆಸುತ್ತಿದೆ ನೋಡು ' ಎಂದಳು ಮಧುಮಿತಾ.
`ಭಾರತದ ಲಕ್ಷ್ಮೀಮಾಖತ ಪುರದಿಂದ ಬಾಂಗ್ಲಾದೇಶ ಫಿರೋಜ್ ಪುರದವರೆಗೂ ಸುಂದರಬನ್ಸ್ ರಕ್ಷಿತಾರಣ್ಯ ಹಬ್ಬಿನಿಂತಿದೆ. ಈ ಅರಣ್ಯ ವ್ಯಾಪ್ತಿಯಲ್ಲಿ ಸರಿಸುಮಾರು 2000 ಬಿಳಿ ಹುಲಿಗಳಿವೆ. ನಿಮ್ಮ ಕಡೆಗಳಲ್ಲಿ ಹುಲಿಯ ಬಣ್ಣ ಬೇರೆ. ಇಲ್ಲಿಯ ಹುಲಿಗಳ ಬಣ್ಣವೇ ಬೇರೆ. ಬಿಳಿ ಬಣ್ಣದ ಹುಲಿಗಳ ಮೇಲೆ ಕಪ್ಪು, ಕಂದು ಪಟ್ಟೆಗಳು. ಈ ಹುಲಿಗಳು ಬಾಂಗ್ಲಾದೇಶದ ಸ್ವಾಭಿಮಾನ, ಹೋರಾಟದ ಸಂಕೇತ. ಈ ಕಾರಣದಿಂದಲೇ ಬಾಂಗ್ಲಾದೇಶದ ಕ್ರಿಕೆಟ್ ತಂಡವನ್ನು ಹುಲಿಗಳ ತಂಡ ಎಂದೂ ಕರೆಯುತ್ತಾರೆ. ಬಾಂಗ್ಲಾದೇಶದ ಯಾವುದೇ ಕ್ರೀಡೆಯ ಸಮವಸ್ತ್ರದ ಮೇಲೆ ಬೆಂಗಾಲಿ ಹುಲಿಗಳ ಚಿತ್ತಾರವನ್ನು ಹಾಕಿರುತ್ತಾರೆ. ನೋಡಿದ್ದೀಯಲ್ಲ. ಸಮುದ್ರದವೆರೂ ಹಬ್ಬಿನಿಂತಿರುವ ಕಾಂಡ್ಲಾ ಅರಣ್ಯ ಹಾಗೂ ಇತರ ಪ್ರದೇಶಗಳು ಬಿಳಿ ಹುಲಿಗಳಿಗೆ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವಾಗಿದೆ. ಜಗತ್ತಿನ ಅತ್ಯಪರೂಪದ ಜೈವಿಕ ತಾಣ ಇದು..' ಎಂದು ಮಧುಮಿತಾಳೆ ಮುಂದುವರಿದು ಹೇಳಿದಳು.
`ಇನ್ನು ಗಂಗಾನದಿಯ ಕುರಿತು ಹೇಳುವುದಾದರೆ ಅದರ ಉಪ ಹೆಸರುಗಳೂ ಸೇರಿದಂತೆ ಮುಖಜಭೂಮಿಗಳು ಬಹುದೊಡ್ಡವು. ಭಾರತದ ಮಂದಾರಮನಿ ಎಂಬಲ್ಲಿಂದ ಬಾಂಗ್ಲಾದೇಶದ ಮಗ್ದಾರಾ ಎಂಬಲ್ಲಿವರೆಗೂ ಹಲವು ಕವಲುಗಳ ಮೂಲಕ ಗಂಗೆ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಅಂದರೆ ಗಂಗಾನದಿಯ ಮುಖಜ ಭೂಮಿಯ ವ್ಯಾಪ್ತಿ 150 ಕಿ.ಮಿಯಿಂದ 300 ಕಿ.ಮಿ ವರೆಗೆ ಹಬ್ಬಿದೆ ಎನ್ನಬಹುದು. ಭಾರತದಿಂದ ಕೊಚ್ಚಿಕೊಂಡು ಬಂದ ಫಲವತ್ತಾದ ಮಣ್ಣುಗಳನ್ನು ಇಲ್ಲಿ ರಾಶಿ ರಾಶಿಯಾಗಿ ಗುಡ್ಡೆ ಹಾಕುತ್ತದೆ ಗಂಗೆ. ಅದರಿಂದ ಬಾಂಗ್ಲಾದೇಶಿಯರು ಹೇರಳ ಬೆಳೆ ಬೆಳಯಲು ಯತ್ನಿಸುತ್ತಾರೆ. ಆದರೆ ಗಂಗೆ ಹಾಗೂ ಉಪನದಿಗಳಲ್ಲಿನ ಪ್ರವಾಹದ ಕಾರಣ ಬೆಳೆದ ಬೆಳೆ ಕೊಚ್ಚಿಕೊಂದು ಹೋಗುತ್ತದೆ. ಹೀಗಾಗಿಯೇ ಬಾಂಗ್ಲಾದೇಶವನ್ನು ಅನಿಶ್ಚಿತತೆಯ ತಾಣ ಎಂದೂ ಕರೆಯಲಾಗುತ್ತದೆ..' ಎಂದು ವಿವರಣೆ ನೀಡಿದಾಗ ಕೇಳುತ್ತಿದ್ದ ವಿನಯಚಂದ್ರ ಮೂಕವಿಸ್ಮಿತನಾಗಿ ಅವಳನ್ನೇ ನೋಡುತ್ತಿದ್ದ.
`ಸುಂದರಬನ್ಸ್ ವ್ಯಾಪ್ತಿಯಲ್ಲಿ ಭಾರತ-ಬಾಂಗ್ಲಾ ಗಡಿ ನಿರ್ದಿಷ್ಟವಾಗಿಲ್ಲ. ಹುಲಿಯಂತಹ ಸಂರಕ್ಷಿತ ಪ್ರಾಣಿಗಳು ಅಡ್ಡಾಡಲೋಸುಗ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾದೇಶಿಯರು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದೊಳಗೆ ನುಸುಳುತ್ತಾರೆ. ಅವರೇ ಭಾರತದ ಪಾಲಿಗೆ ಅಕ್ರಮ ನುಸುಳುಕೋರರು, ಬಾಂಗ್ಲಾ ವಲಸಿಗರು. ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾದರೆ ವನ್ಯಮೃಗಗಳಿಗೆ ಸಮಸ್ಯೆಯಾಗುತ್ತದೆ. ಬೇಲಿ ನಿರ್ಮಾಣ ಮಾಡದೇ ಇದ್ದರೆ ಮನುಷ್ಯರೇ ಸಮಸ್ಯೆಗಳಾಗುತ್ತಾರೆ..' ಎಂದಾಗ ವಿನಯಚಂದ್ರ ನಿಟ್ಟುಸಿರು ಬಿಟ್ಟ.
`ಬಾಂಗ್ಲಾದೇಶದಲ್ಲಿ ರಸ್ತೆ ಸಾರಿಗೆ ಎಷ್ಟು ಅಭಿವೃದ್ಧಿಯಾಗಿದೆಯೋ ಅಷ್ಟೇ ಮುಖ್ಯವಾಗಿ ಜಲಸಾರಿಗೆಯೂ ಇಲ್ಲಿ ಜೀವನಾಡಿ. ಗಂಗೆ, ಮೇಘನಾ, ಗೋಮತಿಗಲ್ಲಿ ದೊಡ್ಡ ದೊಡ್ಡ ದೋಣಿಗಳು ತಿರುಗಾಡುತ್ತವೆ. ಅತಿಯಾಗಿ ಪ್ರಯಾಣಿಕರನ್ನು ಹೇರುವ ಕಾರಣದಿಂದಲೇ ದೋಣಿ ಅವಘಡಗಳು ಹೆಚ್ಚು ಹೆಚ್ಚು ಜರುಗುತ್ತಿರುತ್ತವೆ. ಗಂಗಾ ನದಿಗೆ ಬಾಂಗ್ಲಾದೇಶದ ವ್ಯಾಪ್ತಿಯಲ್ಲಿ ಸೇತುವೆಗಳು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ಇದೆ ಎನ್ನುವುದನ್ನು ಬಿಟ್ಟರೆ ನದಿ ದಾಟಲು ಬಾರ್ಜುಗಳು, ಹಡಗುಗಳೇ ಬಳಕೆಯಾಗುತ್ತವೆ. ನಾವು ಬರುವಾಗಲೂ ಅಷ್ಟೇ ಬಸ್ಸು ಗಂಗಾನದಿಯನ್ನು ಬಾರ್ಜಿನ ಮೂಲಕವೇ ದಾಟಿದ್ದನ್ನು ನೀನು ಗಮನಿಸಿರಬಹುದು. ಈಗೀಗ ಒಂದೆರಡು ಸೇತುವೆ ನಿರ್ಮಾಣಕ್ಕೂ ಚಿಂತನೆ ನಡೆಸಲಾಗುತ್ತಿದೆ. ಆದರೆ ಸೇತುವೆ ಕಾಮಗಾರಿ ಕೈಗೊಂಡರೆ ಮುಗಿಯುವುದು ಇನ್ಯಾವ ಕಾಲದಲ್ಲೋ..' ಎಂದಳು ಮಧುಮಿತಾ.
`ಇನ್ನೊಂದು ಪ್ರಮುಖ ವಿಷಯ. ಬಾಂಗ್ಲಾದೇಶ ಶೆ.90ರಷ್ಟು ಗಡಿಯನ್ನು ಭಾರತದ ಜೊತೆಗೆ ಹಂಚಿಕೊಂಡಿದೆ. ಚಿತ್ತಗಾಂಗ್ ಪ್ರದೇಶದಲ್ಲಿ ಬರ್ಮಾದ ಜೊತೆಗೆ ಕೊಂಚ ಗಡಿಯನ್ನು ಹಂಚಿಕೊಂಡಿರುವ ಬಾಂಗ್ಲಾದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದರೆ ಭಾರದ ನೆರವು ಬೇಕೇ ಬೇಕು. ಇದೀಗ ಬಾಂಗ್ಲಾದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೆಲವು ಸೇತುವೆಗಳಿಗೆ ಭಾರತದ ಸಹಾಯ ಸಹಕಾರ ಇದ್ದೇ ಇದೆ..' ಎಂದಳು ಮಧುಮಿತಾ.
(ದೋಣಿಮನೆಗಳು) |
`ಶ್.. ಸದ್ದು ಮಾಡಬೇಡಿ.. ಅದೋ ಆ ದಡದ ಮೇಲೆ ಬಿಳಿಯ ಹುಲಿಯೊಂದು ಆರಾಮಾಗಿ ಮಲಗಿದೆ ನೋಡಿ..' ಎಂದು ಜೊತೆಯಲ್ಲಿಯೇ ಬಂದಿದ್ದ ಗೈಡ್ ಹೇಳುತ್ತಿದ್ದಂತೆ ಮಾತನಾಡುತ್ತ ಬರುತ್ತಿದ್ದ ಆಟಗಾರರು ಸುಮ್ಮನಾದರು. ದಡದ ಮೇಲೊಂದು ಬಿಳಿಯ ಹುಲಿ ಒಬ್ಬಂಟಿಯಾಗಿ, ಆರಾಮಗಿ ನಿದ್ರಿಸುತ್ತಿತ್ತು. ಈ ಲೋಕದ ಪರಿವೆಯೇ ಇಲ್ಲವೇನೋ ಎನ್ನುವಷ್ಟು ಗಾಢವಾಗಿ ನಿದ್ದೆ ಮಾಡುತ್ತಿತ್ತು ಅದು. ದೋಣಿ ಮುಂದೆ ಸಾಗಿದಂತೆಲ್ಲ ಹೊಸದೊಂದು ಪ್ರಾಣಿಲೋಕ ಅನಾವರಣಗೊಂಡಿತು. ಅಲ್ಲೊಂದು ಕಡೆ ಜೋಡಿ ಪ್ಯಾಂಗೋಲಿನ್ನುಗಳು ಖುಷಿ ಖುಷಿಯಿಂದ ಸಾಗುತ್ತಿದ್ದವು. ಮತ್ತೊಂದು ದಡದಲ್ಲಿದ್ದ ಮೊಸಳೆಗಳ ಹಿಂಡು ದೋಣಿಯನ್ನು ಕಂಡ ತಕ್ಷಣ ಸರಸರನೆ ಬಂದು ಬುಳುಕ್ ಎನ್ನುವ ಸದ್ದು ಮಾಡುತ್ತ ನೀರಿಗಿಳಿದವು.
ಮತ್ತೊಂದೆರಡು ಕಿ.ಮಿ ಬಂದ ನಂತರ ಅಲ್ಲೊಂದು ಕಡೆ ದೋಣಿ ನಿಂತಿತು. ದಡದ ಮೇಲೆ ಪಂಜರದ ರೀತಿಯಲ್ಲಿ ದಾರಿಯೊಂದನ್ನು ಮಾಡಲಾಗಿತ್ತು. ಆ ದಾರಿಯಲ್ಲಿ ಸಾಗಬೇಕು ಎಂದು ಗೈಡ್ ಹೇಳಿದ. ಇಕ್ಕೆಲಗಳಲ್ಲಿ ಕಾಡು. ನಡುವಲ್ಲಿ ಪಂಜರದ ಹಾದಿ. ಮುಂದೆ ಮುಂದೆ ಸಾಗಿದಂತೆಲ್ಲ ಸುಂದರಬನ್ಸ್ ಹೊಸ ಹೊಸ ರೀತಿಯಲ್ಲಿ ಗೋಚರವಾಗತೊಡಗಿತು. ಜಿಂಕೆಗಳು, ಕಡವೆಗಳ ಹಿಂಡು ಅಲ್ಲಲ್ಲಿ ನೀರು ಕುಡಿಯಲು ಬಂದಿದ್ದವು. ಕಾಡು ನೋಡಲು ಬಂದಿದ್ದ ಮನುಷ್ಯರನ್ನು ಕತ್ತೆತ್ತಿ ವಿಸ್ಮಯದಿಂದ ನೋಡುತ್ತಿದ್ದವು. ಒಂದೆರಡು ಮೈಲಿ ನಡೆದ ನಂತರ ಕಾಡಿನ ನಡುವೊಂದು ಚಿಕ್ಕಮನೆ ಕಾಣಿಸಿತು. ಅದು ಬಾಂಗ್ಲಾ ಸರ್ಕಾರ ನಿರ್ಮಾಣ ಮಾಡಿದ್ದ ವಿಶ್ರಾಂತಿ ಗೃಹವೆಂದು ಮಾಹಿತಿ ತಿಳಿಯಿತು. ಅಲ್ಲಿ ತಿಂಡಿ, ತಿನಿಸುಗಳನ್ನು ಮುಗಿಸಿ ಮತ್ತೆ ಮರಳುವಷ್ಟರಲ್ಲಿ ಸೂರ್ಯ ಪಶ್ಚಿಮದತ್ತ ಮುಖಮಾಡಿನಿಂತಿದ್ದ.
(ಮುಂದುವರಿಯುತ್ತದೆ.)
No comments:
Post a Comment