Wednesday, July 30, 2014

ಬಾನ ಬಳಗ

ರಂಗು ಚಲ್ಯಾನೆ ಚೌತಿ ಚಂದ್ರ
ನಕ್ಕು ನಲಿದಾವೆ ಬಾನಕ್ಕಿ ತಾರೆ |

ದಿನವು ಇರುಳು ನಲಿದು ತಣಿದು
ಭೂಮಿ ತಾಯಿಗೆ ಪ್ರಿತಿ ಬಸಿದು
ಇರುಳ ಬದುಕಿಗೆ ಬೆಳಕನು ಚೆಲ್ಲಿ
ಕುಣಿದು ನಲಿದಾವೆ |

ಬಾನ ಬುಗುರಿಗೆ ಚಿತ್ತಾರ ಇಟ್ಟು
ನೋಡೋ ಕಣ್ಣಿಗೆ ಚಮಕು ಕೊಟ್ಟು
ಸುಳಿವ ಮೋಡವ ಪಕ್ಕಕ್ಕೆ ಇಟ್ಟು
ನಲಿದು ಕುಣಿದಾವೆ |

ಸೂರ್ಯನಿಲ್ಲದ ಬಾನಿನಲ್ಲಿ
ಚಂದ್ರ ತಾರೆ ಸಭೆಯ ಸೇರಿ
ಹೊಸತು ಹೊನಲು ಪ್ರಭೆಯ ಬೀರಿ
ಮನವ ಸೆಳೆದಾವೆ |

ತುಂಬಿ ತುಳುಕುವ ಬಾನ ಬಳಗ
ಹಗಲಿನಲಿ ಮೇಲೆ ಕೆಳಗೆ
ಬೇಸರದೊಡಲಿಗೆ ಬಣ್ಣವ ನೀಡಿ
ಸಂತಸ ನೀಡ್ಯಾವೆ |

**
(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 27.08.2006ರಂದು)

Saturday, July 26, 2014

ಕುತರ್ಕ

ಫೇಲು

ವಧು

ಪರಿಕ್ಷೆಯಲ್ಲಿ
ವರ ನೂರಕ್ಕೆ
ನೂರು
ಅಂಕ
ಪಡೆದರೂ
ನಪಾಸು..|

ನೀನು


ಅವಳು : ನಿಮ್ಮ ಮನೆಯ ಸುತ್ತಮುತ್ತ ನೋಡುವಂತದ್ದು ಸಾಕಷ್ಟಿವೆ..

ಆದರೆ ನಮ್ಮ ಮನೆಯ ಬಳಿ ಏನೂ ಇಲ್ಲವಲ್ಲೋ..
ಅವನು : ನೀನಿದ್ದೀಯಲ್ಲೇ...

ಸಿಎಮ್ಮು-ಮುಗುಮ್ಮು


ರೇಪ್ ಸುದ್ದಿ ಬಿಟ್ಟು ನಿಮಗೆ ಬೇರೆ ಸುದ್ದಿ ಇಲ್ವಾ..?

ಸಿ.ಎಂ ಮಾಧ್ಯಮದವರ ಮೇಲೆ ಗರಂ
ನಿದ್ದೆ ಬಿಟ್ಟು ನಿಮಗೆ ಬೇರೆ ಕೆಲ್ಸಾ ಇಲ್ವಾ..?
ಜನಸಾಮಾನ್ಯ ಸಿದ್ದಣ್ಣನ ಮೇಲೆ ಮುಗುಂ..|

ಮುಖ್ಯಸ್ಥ


ಆಪ್ ಮುಖ್ಯಸ್ಥ ಅರವಿಂದ

ಕೇಜರಿವಾಲ..
ಬಿಜೆಪಿ ಮುಖ್ಯಸ್ಥ ಮೋದಿ
ಕೇಸರೀವಾಲ..|

ಬಿಗ್ ಬಾಸು

ದಿನಾ ಟಿವಿಯಲಿ
ಬಿಗ್ ಬಾಸು
ಒಳಗಿರುವವರು
ಕೊಡುತ್ತಾರೆ ಪೋಸು
ಚಾನಲ್ಲಿನವರಿಗಿಲಗಲ ಲಾಸು.!
ಬರಿ ಇಂಗ್ಲೀಷು ಟಸ್ಸು ಪುಸ್ಸು
ನಿರ್ಮಾಪಕನಿಗೆ ಮಾತ್ರ
ಕಾಸೋ ಕಾಸು |

ಅರಿವು

ನಗುವು ನೀಡುವುದು
ಮಿತ್ರರ ಕೂಟ
ಹಸಿವು ಕಲಿಸುವುದು
ಜೀವನದ ಪಾಟ|

Friday, July 25, 2014

ಬೆಂಗಾಲಿ ಸುಂದರಿ-19


(ಢಾಕಾದ ಜನಭರಿತ ಬೀದಿ)
           ಸಲೀಂ ಚಾಚಾ ತನ್ನ ಸೈಕಲ್ ರಿಕ್ಷಾವನ್ನು ಸಾಕಷ್ಟು ವೇಗವಾಗಿ ತುಳಿಯುತ್ತಿದ್ದ. ಆದರೆ ಗಾಡಿಯಲ್ಲಿ ಕುಳಿತ ಮಧುಮಿತಾ ಹಾಗೂ ವಿನಚಂದ್ರರಿಗೆ ಕ್ಷಣ ಕ್ಷಣವೂ ಗಂಟೆ ಗಂಟೆಯಾಗಿ ಭಾಸವಾಗುತ್ತಿತ್ತು. ಸಲಿಂ ಚಾಚಾನ ಸೈಕಲ್ ವೇಗ ಪಡೆದುಕೊಳ್ಳುತ್ತಿದ್ದಂತೆಯೇ ವಿನಯಚಂದ್ರ ಹಾಗೂ ಮಧುಮಿತಾರ ಎದೆಬಡಿತದ ವೇಗವೂ ಜಾಸ್ತಿಯಾಗುತ್ತಿತ್ತು. ಸಲೀಂ ಚಾಚಾ ಆಗೀಗ ರಸ್ತೆಯನ್ನು ಕೂಲಂಕಷವಾಗಿ ನೋಡುತ್ತ ಸೈಕಲ್ ತುಳಿಯುತ್ತಿದ್ದನಾದರೂ ಯಾವ ಕ್ಷಣದಲ್ಲಿ ಯಾರು ಬಂದು ಏನು ಮಾಡಿಬಿಡುತ್ತಾರೋ ಎಂಬ ಭಯವೂ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಒಂದು ಕಲ್ಲು ಬಂದು ದಬಾರನೆ ಸೈಕಲ್ ರಿಕ್ಷಾದ ಹಿಂಬದಿಯ ಟಾಪಿಗೆ ಬಡಿಯಿತು. ಸೈಕಲ್ಲಿನಲ್ಲಿ ಪಯಣಿಸುತ್ತಿದ್ದವರು ಒಮ್ಮೆ ಬೆಚ್ಚಿ ಬಿದ್ದರು. ಸಲೀಂ ಚಾಚಾ ಬೆಚ್ಚಿದ ಹೊಡೆತಕ್ಕೆ ಸೈಕಲ್ ಪಲ್ಟಿಯಾಗದಿದ್ದುದು ಅದೃಷ್ಟವೆಂದೇ ಹೇಳಬಹುದು.
              ಢಾಕಾದ ಯಾವು ಯಾವುದೋ ದಾರಿಯಲ್ಲಿ ಸಾಗಿ ಮಧುಮಿತಾಳ ಅಪಾರ್ಟ್ ಮೆಂಟ್ ಬಳಿ ಬರಲು ಯತ್ನಿಸಿದರೆ ಅಲ್ಲಿ ಪೊಲೀಸರು ಸೇರಿದ್ದರು. ದೊಡ್ಡದಾಗಿ ಸೈರನ್ ಕೂಗುತ್ತ ಬರುತ್ತಿದ್ದ ಪೊಲೀಸ್ ವಾಹನಗಳು, ಅಂಬೂಲೆನ್ಸ್ ಗಳು. ಏನೋ ಧಾವಂತ. ಮತ್ತಿನ್ನೇನೋ ಗಡಿಬಿಡಿ. ಆತಂಕದಲ್ಲಿ ಅಡ್ಡಾಡುತ್ತಿದ್ದವರೇ ಹೆಚ್ಚು. ವಿನಯಚಂದ್ರ ಗಮನವಿಟ್ಟು ನೋಡಿದ. ನಾಲ್ಕೈದು ಅಗ್ನಿಶಾಮಕ ವಾಹನಗಳೂ ಇದ್ದವು. ಅಪಾರ್ಟ್ ಮೆಂಟ್ ಗೆ ಬೆಂಕಿ ಬಿದ್ದಿದೆಯೇ? ಒಮ್ಮೆ ಭಯವಾಯಿತು. ಸೈಕಲ್ ನಿಂದ ಜಿಗಿದು ಓಡಿದ. ಪೊಲೀಸ್ ಕಾವಲಿದ್ದು ಯಾರನ್ನೂ ಮುಂದಕ್ಕೆ ಬಿಡುತ್ತಿರಲಿಲ್ಲ. ದಟ್ಟ ಹೊಗೆ ಆವರಿಸಿಕೊಂಡಿತ್ತು. ಇದನ್ನು ಕಂಡಿದ್ದೇ ಮಧುಮಿತಾ ಕುಸಿದು ಕುಳಿತಳು. ಸಲೀಂ ಚಾಚಾ ಅಷ್ಟರಲ್ಲಿ ಅಲ್ಲಿಯೇ ಇದ್ದ ಪೊಲೀಸಿನವನ ಬಳಿ `ಏನಾಗಿದೆ..' ಎಂದು ವಿಚಾರಿಸಿದ. ಅದಕ್ಕೆ ಪ್ರತಿಯಾಗಿ ಆ ಪೊಲೀಸ್ ಅಧಿಕಾರಿ `ದುಷ್ಕರ್ಮಿಗಳು ಈ ಅಪಾರ್ಟ್ ಮೆಂಟ್ ಬಳಿ ಬಾಂಬ್ ಇರಿಸಿದ್ದರು. ಅದು ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಮೂರ್ನಾಲ್ಕು ಗಂಟೆಗಳಾದವು. ಬೆಂಕಿಯನ್ನು ಆರಿಸುವ ಪ್ರಯತ್ನ ನಡೆಯುತ್ತಿದೆ..' ಎಂದವನೇ ಅಸಹನೆಯಿಂದ ಎಲ್ಲ ದೂರ ಹೋಗಿ ಎಂದು ಗದರಿದ.
             ಮಧುಮಿತಾ ಮೈಮೇಲೆ ಭೂತ ಬಂದವಳಂತೆ ತಮ್ಮ ಮನೆಯ ಸದಸ್ಯರಿಗೆ ಏನಾಯಿತು ಎಂದು ಪೊಲೀಸನನ್ನು ಹಿಡಿದೆಳೆದು ಕೇಳಿದಳು. ಅದಕ್ಕಾತ ತನಗೇನೂ ಗೊತ್ತಿಲ್ಲ. ಸಾವು ನೋವು ಸಾಕಷ್ಟು ಸಂಭವಿಸಿದೆ. ಹಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಾರು ಸತ್ತವರು, ಗಾಯಗೊಂಡವರು ಯಾರು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿ ಗಾಯಾಳುಗಳನ್ನು ಸೇರಿಸಿದ ಆಸ್ಪತ್ರೆಯ ಹೆಸರು ಹೇಳಿದ. ಮಧುಮಿತಾ ಆಗಲೇ ದೊಡ್ಡದಾಗಿ ಅಳಲು ಆರಂಭಿಸಿದ್ದರು. ಸಲೀಂ ಚಾಚಾ ಭಯದಿಂದ ಕಂಪಿಸತೊಡಗಿದ್ದ. ವಿನಯಚಂದ್ರ ಏನು ಮಾಡಬೇಕೆಂಬುದು ಗೊತ್ತಾಗದೇ ನಿಂತಿದ್ದ. ಮನಸ್ಸು ಏನೋ ಅಪಾಯವನ್ನು ಊಹಿಸುತ್ತಿತ್ತು. ಏನೂ ಆಗದಿದ್ದರೆ ಸಾಕಪ್ಪಾ ಭಗವಂತಾ ಎಂದುಕೊಂಡ ವಿನಯಚಂದ್ರ.
              `ಆಸ್ಪತ್ರೆಗಾದರೂ ಹೋಗಿ ನೋಡೋಣ. ಏನಾಗಿದೆಯೋ ಗೊತ್ತಾಗುತ್ತದೆ..' ಎಂದು ಸಲೀಂ ಚಾಚಾ ಹೇಳಿದಾಗ ವಿನಯಚಂದ್ರ ಹಾಗೂ ಮಧುಮಿತಾ ಮಾತಿಲ್ಲದೇ ಹಿಂಬಾಲಿಸಿದರು. ಆಸ್ಪತ್ರೆ ಸನಿಹದಲ್ಲೇ ಇತ್ತು. ಆ ಆಸ್ಪತ್ರೆಯೋ ನರಕವೇ ಹೌದು ಎನ್ನುವಂತಿತ್ತು. ಬಾಂಗ್ಲಾದೇಶದಲ್ಲಿ ತೋರುಗಾಣಿಕೆಗೆ ಅಭಿವೃದ್ಧಿಯನ್ನು ಕೈಗೊಂಡಿದ್ದಾರೆ. ಆದರೆ ಆಸ್ಪತ್ರೆಗಳ ಅಭಿವೃದ್ಧಿಗೆ ಏನೂ ಮಾಡಿಲ್ಲವೇನೋ ಎನ್ನಿಸುವಂತಿತ್ತು. ಅಪಾರ್ಟ್ ಮೆಂಟ್ ದುರಂತದ ಗಾಯಾಳುಗಳನ್ನೆಲ್ಲ ತಂದು ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಾಲಿಡಲು ಜಾಗವಿರಲಿಲ್ಲ. ಮೈಕೈ ಸುಟ್ಟುಕೊಂಡ ರೋಗಿಗಳ ಆಕ್ರಂದನ, ಕೈಕಾಲು ನುಜ್ಜುಗುಜ್ಜಾದವರ ನೋವು, ನರಳಾಟ, ಕೂಗಾಟ, ಚೀರಾಟ, ಡಾಕ್ಟರ್, ನರ್ಸುಗಳ ಗಡಿಬಿಡಿಯ ಓಡಾಟ ಮೇರೆ ಮೀರಿತ್ತು. ಎಲ್ಲೆಂದರಲ್ಲಿ ರೋಗಿಗಳನ್ನು ದಾಖಲಿಸಲಾಗಿತ್ತು. ಓಡಾಡುವ ಜಾಗದ ಇಕ್ಕೆಲಗಳಲ್ಲೂ ಗಾಯಾಳುಗಳು ಮಲಗಿದ್ದರು. ಯಾರನ್ನು ನೋಡುವುದು ಯಾರನ್ನು ಬಿಡುವುದು. ಮಧುಮಿತಾ ಗಾಯಗೊಂಡ ಎಲ್ಲರನ್ನೂ ಗಮನಿಸುತ್ತ ತನ್ನ ಕುಟುಂಬದವರು ಕಾಣುತ್ತಾರೆಯೇ ಎಂದು ಗಮನಿಸತೊಡಗಿದ್ದಳು. ಆದರೆ ಆಕೆಯ ಮನೆಯ ಸದಸ್ಯರು ಯಾರೂ ಕಮಡು ಬರಲಿಲ್ಲ. ಇದರಿಂದಾಗಿ ಮಧುಮಿತಾಳ ಮನದೊಳಗಿನ ಆತಂಕ ಇನ್ನಷ್ಟು ಹೆಚ್ಚಿತು.
              `ಭಯ ಪಟ್ಕೋಬೇಡ ಬೇಟಿ. ಅಲ್ಲಾ ಕೆಟ್ಟದನ್ನು ಮಾಡೋದಿಲ್ಲ. ಒಳ್ಳೇದೇ ಆಗುತ್ತೆ...' ಎಂದು ಸಲೀಂ ಚಾಚಾ ಆಕೆಯನ್ನು ಸಮಾಧಾನ ಮಾಡುತ್ತಿದ್ದನಾದರೂ ಮಧುಮಿತಾಳ ಮನಸ್ಸಿಗೆ ಅದು ನಾಟುತ್ತಲೇ ಇರಲಿಲ್ಲ. ಅತ್ತು ಅತ್ತು ಆಕೆಯ ಕಣ್ಣುಗಳು ಕೆಂಪಗಾಗಿದ್ದರೆ ಬಾಯಲ್ಲಿನ ಮಾತು ತೊದಲುತ್ತಿತ್ತು. ಬಿಕ್ಕಳಿಕೆ ಬರಲು ಆರಂಭಿಸಿತ್ತು. ವಿನಯಚಂದ್ರನೂ ಎಲ್ಲಕಡೆ ಹುಡುಕಾಟದಲ್ಲಿ ತೊಡಗಿಕೊಂಡಿದ್ದ. ಕೊನೆಗೆ ಅಲ್ಲಿದ್ದ ವೈದ್ಯರ ಬಳಿ ಹೋಗಿ ವಿಚಾರಿಸಿದಾಗ ತಮಗೆ `ಇನ್ನೂ ರೋಗಿಗಳ ಹೆಸರು ಗೊತ್ತಾಗಿಲ್ಲ. ಇಲ್ಲಿ ಎಲ್ಲ ಕಡೆ ರೋಗಿಗಳಿದ್ದಾರೆ. ಈಗಿನ್ನೂ ಎಲ್ಲರನ್ನೂ ದಾಖಲು ಮಾಡಿಕೊಳ್ಳುತ್ತಿದ್ದವೆ. ಹಲವರು ಸತ್ತಿದ್ದಾರೆ. ಸತ್ತವರನ್ನು ಶವಗಾರದಲ್ಲಿ ಇಡಲಾಗಿದೆ. ಅಲ್ಲೊಮ್ಮೆ ನೋಡಿ..' ಎಂದು ಹೇಳಿದಾಗ ವಿನಯಚಂದ್ರನಿಗೂ ಒಮ್ಮೆ ತಾನು ನಿಂತ ನೆಲ ಕಂಪಿಸಿದಂತೆ ಅನ್ನಿಸಿತು.
           ಡಾಕ್ಟರ್ ಮಾತು ಕೇಳಿ ಶವಾಗಾರದತ್ತ ಓಡಿದರು. ಶವಾಗಾರದಲ್ಲಿಯೂ ಜಾಗ ಸಾಲದ ಕಾರಣ ಹೆಣಗಳನ್ನು ಎಲ್ಲೆಂದರಲ್ಲಿ ಹಾಕಿಡಲಾಗಿತ್ತು. ಎಲ್ಲ ಹೆಣಗಳನ್ನೂ ಬಟ್ಟೆಯಿಂದ ಮುಚ್ಚಿದ್ದರು ಎನ್ನುವುದೊಂದು ಸಮಾಧಾನ. ಮಧುಮಿತಾಳೂ ಜೊತೆಗೆ ಬಂದವಳು ಒಂದೊಂದೆ ಹೆಣದ ಬಟ್ಟೆಯನ್ನು ನಿಧಾನವಾಗಿ ಎತ್ತಿ ತನ್ನ ಕುಟುಂಬದವರಾ ಎಂದು ನೋಡುತ್ತಿದ್ದ ದೃಶ್ಯವಂತೂ ಎಂತಹ ಕಲ್ಲೆದೆಯ ಮನುಷ್ಯನನ್ನೂ ಒಮ್ಮೆಲೆ ಕದಡಿ ಹಾಕಿ ಬಿಡುತ್ತಿತ್ತು. ಸಲೀಂ ಚಾಚಾ ಕೂಡ ನೋಡುತ್ತಿದ್ದ.
            ವಿನಯಚಂದ್ರ ಶವಗಳನ್ನು ಗಮನಿಸುತ್ತ ಬರುತ್ತಿದ್ದವನು ಅಲ್ಲೊಂದು ಕಡೆ ನಿಂತುಬಿಟ್ಟ. ಮಧುಮಿತಾಳನ್ನು ಕ್ಷೀಣ ದನಿಯಲ್ಲಿ ಕರೆದ. ಅಲ್ಲಿ ಮಲಗಿಸಲಾಗಿದ್ದ ನಾಲ್ಕು ಶವಗಳೂ ಮಧುಮಿತಾಳ ಕುಟುಂಬದವರಿಗೆ ಹೋಲಿಕೆಯಾಗುತ್ತಿದ್ದವು. ಮೈತುಂಬ ಅಲ್ಲಲ್ಲಿ ಗಾಯಗೊಂಡಿದ್ದವು. ಸಲೀಂ ಚಾಚಾ ಕೂಡ ಕೂಲಂಕಷವಾಗಿ ನೋಡಿ ಮಧುಮಿತಾಳ ಮನೆಯವರೇ ಇರಬಹುದು ಎಂದು ಹೇಳಿಬಿಟ್ಟ. ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಅಳಲು ಆರಂಭಿಸಿದಳು. ಬಾಂಗ್ಲಾ ಹಿಂಸಾಚಾರಿಗಳಿಗೆ ಮಧುಮಿತಾಳನ್ನು ಹೊರತುಪಡಿಸಿ ಅವಳ ಕುಟುಂಬ ಬಲಿಯಾಗಿತ್ತು. ಮಧುಮಿತಾ ಅಳಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚರತಪ್ಪಿ ಬಿದ್ದಳು. ವಿನಯಚಂದ್ರ, ಸಲೀಂಚಾಚಾ ಗಾಬರಿಯಾದರು. ಆಸ್ಪತ್ರೆಯಲ್ಲಿಯೇ ಇದ್ದ ನೀರನ್ನು ತಂದು ಆಕೆಯ ಮುಖಕ್ಕೆ ಸಿಂಪಡಿಸಿ ತಟ್ಟಿ ಎಬ್ಬಿಸಿದರು. ಎದ್ದ ನಂತರವೂ ಆಕೆಯನ್ನು ಸಮಾಧಾನ ಮಾಡುವ ಧೈರ್ಯ ಅಲ್ಲಿದ್ದ ಯಾರಿಗೂ ಬರಲಿಲ್ಲ. ಅರ್ಧಗಂಟೆಯ ನಂತರ ಆಕೆ ತಾನಾಗಿಯೇ ಸಮಾಧಾನ ಪಟ್ಟುಕೊಳ್ಳುವ ಪ್ರಯತ್ನ ಮಾಡಿದಳು. ಆಕೆಯ ಕುಟುಂಬದ ಶವ ಸಂಸ್ಕಾರಕ್ಕೆ ಸಲೀಂ ಚಾಚಾ ಹಾಗೂ ವಿನಯಚಂದ್ರ ಕ್ರಮ ಕೈಗೊಳ್ಳು ಪ್ರಯತ್ನಿಸಿದರು. ಆಸ್ಪತ್ರೆಯ ಡಾಕ್ಟರುಗಳು ನೂರೆಂಟು ಬಗೆಯ ಪರೀಕ್ಷೆಗಳನ್ನು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಅವರ ಕೆಲಸ ಕಾರ್ಯಗಳನ್ನು ಮುಗಿಸಿ ಶವ ಸಂಸ್ಕಾರಕ್ಕೆ ಒಪ್ಪಿಗೆ ನೀಡುವ ವೇಳೆಗೆ ಒಂದೆರಡು ತಾಸುಗಳು ಮುಗಿದಿದ್ದವು. ಅಲ್ಲದೇ ಮಧುಮಿತಾಳನ್ನೂ ತನಿಖೆಯ ನೆಪದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದೂ ಆಯಿತು. ಆಸ್ಪತ್ರೆಯ ವಿದ್ಯುತ್ ಚಿತಾಗಾರದಲ್ಲಿ ಮಧುಮಿತಾಳ ಕುಟುಂಬದ ಶವಸಂಸ್ಕಾರ ಮಾಡಲಾಯಿತು. ವಿದ್ಯುತ್ ಚಿತೆಯಲ್ಲಿ ಮಧುಮಿತಾಳ ತಂದೆ, ತಾಯಿ, ತಮ್ಮ, ತಂಗಿ ಸುಟ್ಟು ಭಸ್ಮವಾಗುತ್ತಿದ್ದರೆ ಮಾತಿಲ್ಲದೇ ಬಿಕ್ಕುತ್ತ ಮಧುಮಿತಾ ವಿನಯಚಂದ್ರನ ಹೆಗಲಿಗೆ ಒರಗಿ, ಕಾಲಮೇಲೆ ಮಲಗಿ ಕಳೆದಳು.
          `ಮುಸ್ಲಿಂ ರಾಷ್ಟ್ರದಲ್ಲಿ ಹಿಂದುವಾಗಿ ಹುಟ್ಟುವುದೇ ತಪ್ಪಾ? ಹಿಂದುವೆನ್ನುವ ಕಾರಣಕ್ಕಾಗಿ ಅಪಾರ್ಟ್ ಮೆಂಟಿಗೆ ಬಾಂಬಿಡುತ್ತಾರೆ ಎಂದರೆ ಅವರಲ್ಲಿನ ಕ್ರೌರ್ಯ ಅದೆಷ್ಟಿರಬೇಕು. ಎಲ್ಲ ದೌರ್ಜನ್ಯಗಳನ್ನೂ ಸಹಿಸಿಕೊಂಡು ಬದುಕಿದರೂ ಅವಕಾಶ ಸಿಕ್ಕಾಗಲೆಲ್ಲ ಏಟು ತಿನ್ನತ್ತ ಬದುಕಿದರೂ ಸಾವು ತಪ್ಪಲಿಲ್ಲ. ಅಪ್ಪ ಎಷ್ಟು ಒಳ್ಳೆಯವರಾಗಿದ್ದರು. ಕನಸಿನಲ್ಲಿಯೂ ಕೂಡ ಇನ್ನೊಬ್ಬರಿಗೆ ಕೇಡು ಮಾಡಿರಲಿಲ್ಲ. ಅಂತವರೂ ಇಂತಹ ಕ್ರೌರ್ಯಕ್ಕೆ ಬಲಿಯಾದರಲ್ಲ.. ಅಮ್ಮನ ಪ್ರೀತಿ, ತಂಗಿಯ ಕೀಟಲೆ, ತಮ್ಮನ ಹುಸಿಮುನಿಸು ಇವೆಲ್ಲ ಒಂದೇ ಒಂದು ರಾತ್ರಿಯಲ್ಲಿ ಒಂದೇ ವಿದ್ಯುತ್ ಚಿತೆಯಲ್ಲಿ ಕ್ಷಣಾರ್ಧದಲ್ಲಿ ಮುಗಿದುಹೋಯಿತಲ್ಲ. ಇನ್ನೇನೂ ಉಳಿದಿಲ್ಲವಲ್ಲ.. ಏನೆಲ್ಲ ಕನಸು ಕಟ್ಟಿಕೊಂಡಿದ್ದೆವು. ಹೀಗೆ ಅವು ಕೊನೆಯಾಗುತ್ತವೆ ಎಂದುಕೊಂಡಿರಲಿಲ್ಲ...ಹಾಳಾದ ಮತಾಂಧರು. ಅವರಿಗೆ ನಮ್ಮ ಕುಟುಂಬವೇ ಬೇಕಾಗಿತ್ತಾ? ಇವರನ್ನು ಕೊಂದು ಏನು ಸಾಧನೆ ಮಾಡಿದರು?' ಮಧುಮಿತಾ ಹಳಹಳಿಸುತ್ತಲೇ ಇದ್ದಳು. ವಿನಯಚಂದ್ರ ಯೋಚನಾಲಹರಿಯಲ್ಲಿ ಮುಳುಗಿ ಹೋಗಿದ್ದ.
         ಭಾರತಕ್ಕೆ ಇವರನ್ನು ಕರೆದೊಯ್ಯಬೇಕು. ತಮ್ಮ ಮನೆಯ ಬಳಿಯಲ್ಲಿಯೇ ಎಲ್ಲಾದರೂ ಜಮೀನು ಕೊಡಿಸಿ ಉಳಿಸಬೇಕು. ನಮ್ಮಲ್ಲಿ ಒಬ್ಬರೆಂದು ಪ್ರೀತಿಯಿಂದ ಕಾಣಬೇಕು. ನಗು ನಗುತ್ತ ಬಾಳಬೇಕು. ಹೀಗೆ ಎಷ್ಟೊಂದು ಕನಸನ್ನು ಕಟ್ಟಿಕೊಂಡಿದ್ದೆವು. ಭಾರತಕ್ಕೆ ಕರೆತರಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಸೂರ್ಯನ್ ಕೂಡ ಯಾರ ಯಾರ ಬಳಿಯೋ ಮಾತನಾಡಿ ಮಧುಮಿತಾಳ ಕುಟುಂಬವನ್ನು ಭಾರತಕ್ಕೆ ಕರೆಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಇಂತದ್ದೊಂದು ತಿರುವು ಬರುತ್ತದೆ, ಕ್ಷಣಾರ್ಧದಲ್ಲಿ ಮಧುಮಿತಾಳನ್ನು ಹೊರತುಪಡಿಸಿ ಆಕೆಯ ಕುಟುಂಬ ಇನ್ನಿಲ್ಲವಾಗುತ್ತದೆ ಎನ್ನುವುದನ್ನು ನಂಬಲು ಅಸಾಧ್ಯವಾಗಿತ್ತು. ಯಾಕೋ ಈ ರಾತ್ರಿ ಅದೆಷ್ಟು ದೀರ್ಘವಾಗಿದೆಯಲ್ಲ. ಒಂದು ರಾತ್ರಿ ಅದೆಷ್ಟು ಅನುಭವಗಳನ್ನು ಕಟ್ಟಿಕೊಟ್ಟಿತಲ್ಲ ಭಗವಂತಾ.. ಎಂದುಕೊಂಡ ವಿನಯಚಂದ್ರ.
           ತನ್ನ ಜೀವನದಲ್ಲಿ ಇಂತಹ ಅದೆಷ್ಟು ಘಟನೆಗಳನ್ನು ಕಂಡಿದ್ದನೋ ಸಲೀಂ ಚಾಚಾ. ಆದರೆ ಈಗ ಅವನಲ್ಲಿಯೂ ಮಾತುಗಳಿರಲಿಲ್ಲ. ಮೌನವಾಗಿದ್ದ. ಕನ್ಣುಗಳು ಹನಿಗೂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಮಧುಮಿತಾಳನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದ. ಸಲೀಂ ಚಾಚಾ ಸಮಾಧಾನ ಮಾಡಿದಂತೆಲ್ಲ ಆಕೆಯ ನೋವು ಹೆಚ್ಚುತ್ತಿತ್ತು. ಅಷ್ಟರಲ್ಲಾಗಲೇ ಚಿತ್ತಗಾಂಗ್ ಬೆಟ್ಟಗಳ ಮೇಲೆ ಸೂರ್ಯ ಒಡಮೂಡಲು ಆರಂಭಿಸಿದ್ದ. ಢಾಕಾದ ಬಾನಿನಲ್ಲಿ ನಿಧಾನವಾಗಿ ಬೆಳಗಾಗುತ್ತಿತ್ತು. ಅರೇ ರಾತ್ರಿಯನ್ನು ನಿದ್ದೆಯಿಲ್ಲದೇ ಕಳೆದೆವಲ್ಲ. ಒಂದೇ ರಾತ್ರಿಯಲ್ಲಿ ಇಷ್ಟೆಲ್ಲ ಅಡ್ಡಿಗಳು ಆತಂಕಗಳು ಯಾರಿಗೂ ಬರಬಾರದು ಎಂದುಕೊಂಡ ಚಾಚಾ.
           ಅಷ್ಟರಲ್ಲಿ ವಿನಯಚಂದ್ರನ ಮೊಬೈಲ್ ರಿಂಗಣಿಸಿತು. ಅತ್ತಲಿಂದ ಸೂರ್ಯನ್ ಪೋನ್ ಮಾಡಿದ್ದ. ವಿನಯಚಂದ್ರ ನಡೆದ ಘಟನೆಯನ್ನೆಲ್ಲ ತಿಳಿಸಿದ. ಸೂರ್ಯನ್ ಕೂಡ ಆಘಾತದಿಂದ ಕೆಲ ಘಳಿಗೆ ಮಾತನಾಡಲೇ ಇಲ್ಲ. ಕೊನೆಗೆ ವಿನಯಚಂದ್ರನೇ ತಾನು ಕಬ್ಬಡ್ಡಿ ತಂಡದ ಜೊತೆಗೆ ಭಾರತಕ್ಕೆ ಮರಳುವುದಿಲ್ಲ ಎಂದೂ ಕೆಲ ದಿನ ಇಲ್ಲೇ ಇದ್ದು ಬರುತ್ತೇನೆ ಎಂದೂ ತಿಳಿಸಿದನಲ್ಲದೇ ಜಾಧವ್ ಅವರಿಗೆ ಮಾಹಿತಿ ನೀಡುವಂತೆ ತಿಳಿಸಿದ.
          ಪ್ರತಿಯಾಗಿ ಮಾತನಾಡಿದ ಸೂರ್ಯನ್ `ನಿನ್ನೆ ರಾತ್ರಿ ನೀನು ಯಾರಿಗೂ ಮಾಹಿತಿ ನೀಡದೇ ಬಂದ ಕಾರಣ ಎಲ್ಲರೂ ಆತಂಕದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ವಿಷಯ ಅವರಿಗೆ ತಿಳಿದಿದೆ. ಇಂತಹ ಸಮಯದಲ್ಲಿ ತಂಡವನ್ನು ಬಿಟ್ಟು ಹೋದ ಕಾರಣ ಸಿಟ್ಟಿನಲ್ಲಿದ್ದಾರೆ. ಎಲ್ಲಿದ್ದರೂ, ಹೇಗಿದ್ದರೂ ಹೊಟೆಲಿಗೆ ಮರಳುವಂತೆ ತಿಳಿಸುತ್ತಿದ್ದಾರೆ. ನಮಗೆ ವಿಷಯ ಗೊತ್ತಾದ ಕ್ಷಣದಿಂದ ನಿನಗೆ ಪೋನ್ ಮಾಡಲು ಪ್ರಯತ್ನಿಸಿದೆವು. ಆದರೆ ಪೋನನ್ನು ನೀನು ರಿಸೀವ್ ಮಾಡಲಿಲ್ಲ..' ಎಂದ. ವಿನಯಚಂದ್ರ ಮಾತಾಡಲಿಲ್ಲ.
           ಸೂರ್ಯನ್ ಬಳಿ ಅಷ್ಟರಲ್ಲಿ ಜಾಧವ್ ಅವರು ಬಂದರಿರಬೇಕು. ಪೋನನ್ನು ಕೈಗೆತ್ತಿಕೊಂಡವರೇ ಬೈಯಲು ಆರಂಭಿಸಿದರು. `ಭಾರತ ತಂಡದ ಆಟಗಾರನಾಗಿ ಬಂದ ನಿನಗೆ ಸ್ವಲ್ಪವೂ ಜವಾಬ್ದಾರಿ ಬೇಡವಾ..?  ಹೇಳದೇ ಕೇಳದೆ ಬಿಟ್ಟು ಹೋಗುವುದು ಎಂದರೆ ತಮಾಷೆ ಎಂದುಕೊಂಡಿದ್ದೀಯಾ ಹೇಗೆ? ನಿನಗೇನಾದರೂ ಹೆಚ್ಚೂ ಕಡಿಮೆ ಆದರೆ ಏನು ಮಾಡಬೇಕು? ನನ್ನ ಮೇಲೆ ಜವಾಬ್ದಾರಿಯಿಂದ ಕಳಿಸಿದ್ದಾರೆ. ಭಾರತಕ್ಕೆ ಏನು ಉತ್ತರ ಕೊಡಬೇಕು? ನಿನ್ನ ಬೇಜವಾಬ್ದಾರಿಯಿಂದ ನಾವು ಸಮಸ್ಯೆಗೆ ಕಾರಣವಾಗಬೇಕಾಗುತ್ತದೆ. ವಿದೇಶಗಳಲ್ಲಿ ಹೇಳದೆ ಕೇಳದೆ ಹೋಗುವುದು ತಮಾಷೆ ಎಂದುಕೊಂಡಿದ್ದೀಯಾ? ಇನ್ನೆರಡು ತಾಸುಗಳಲ್ಲಿ ನಾವು ವಿಮಾನದ ಮೂಲಕ ಭಾರತಕ್ಕೆ ಮರಳಬೇಕು. ನೀನು ಅಷ್ಟರೊಳಗೆ ಹೊಟೆಲಿಗೆ ಅಥವಾ ವಿಮಾನ ನಿಲ್ದಾಣಕ್ಕೆ ಬರುವುದಾದರೂ ಹೇಗೆ..?' ಎಂದು ಸಿಟ್ಟಿನಿಂದ ಹೇಳುತ್ತಲೇ ಇದ್ದರು.
                 ಅವರು ಬಯ್ಯುತ್ತಿದ್ದುದನ್ನು ಸಂಪೂರ್ಣವಾಗಿ ಸುಮ್ಮನೆ ಕುಳಿತು ಕೇಳಿದ ವಿನಯಚಂದ್ರ ನಂತರ ನಡೆದ ಘಟನೆಯನ್ನೆಲ್ಲ ಹೇಳಿದ. ವಿನಯಚಂದ್ರ ಹೇಳಿದ ಮಾತನ್ನು ಕೇಳಿದ ನಂತರ ಜಾಧವ್ ಅವರು ಕೊಂಚ ಮೆತ್ತಗಾದಂತೆ ಕಂಡರು. ಮಾತಿನಲ್ಲಿದ್ದ ಸಿಟ್ಟು ಇಳಿದಿತ್ತು. ಕೊನೆಗೆ ವಿನಯಚಂದ್ರ ತಾನು ತಂಡದ ಜೊತೆಗೆ ಭಾರತಕ್ಕೆ ಮರಳಲು ಆಗುತ್ತಿಲ್ಲ. ಕೆಲ ದಿನ ಬಾಂಗ್ಲದಲ್ಲಿಯೇ ಇದ್ದು ವಾಪಾಸಾಗುತ್ತೇನೆ ಎಂಬುದನ್ನು ತಿಳಿಸಿದ. ಜಾಧವ್ ಅವರು ಒಪ್ಪಲಿಲ್ಲ. ವಿನಯಚಂದ್ರ ಅವರಿಗೆ ಸಾಕಷ್ಟು ತಿಳಿ ಹೇಳಲು ಯತ್ನಿಸಿ ವಿಫಲನಾದ. ಕೊನೆಗೊಮ್ಮೆ ಪೋನ್ ಕಟ್ ಮಾಡಿದ.

**

           ಪೋನಿಟ್ಟ ತಕ್ಷಣ ವಿನಯಚಂದ್ರನಿಗೆ ಮತ್ತೊಂದು ಆತಂಕ ಎದುರಾಯಿತು. ಮೊದಲಾದರೆ ಮಧುಮಿತಾಳ ಅಪಾರ್ಟ್ ಮೆಂಟಿತ್ತು ಉಳಿದಕೊಳ್ಳಲು. ಆದರೆ ಈಗ ಏನಿದೆ? ಉಳಿದುಕೊಳ್ಳುವುದೆಲ್ಲಿ? ಸಲೀಂ ಚಾಚಾನ ಬಳಿ ಚರ್ಚೆ ಮಾಡಬೇಕೆಂದುಕೊಂಡ. ಸಲೀಂ ಚಾಚಾನ ಬಳಿ ವಿಷಯವನ್ನು ತಿಳಿಸಿ `ಯಾವುದಾದರೂ ಉತ್ತಮ ಹೊಟೆಲ್ ಇದ್ರೆ ತಿಳಿಸು..ನಾವು ಉಳಿದಕೊಳ್ಳಬೇಕು. ನಾನು ಮಧುಮಿತಾಳನ್ನು ಭಾರತಕ್ಕೆ ಕರೆದುಕೊಂಡು ಹೋಗಲೇಬೇಕು ಎಂದುಕೊಂಡಿದ್ದೇನೆ. ಅವಳನ್ನು ಭಾರತಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆಯಾಗುವ ವರೆಗೆ ನಾವು ಎಲ್ಲಾದರೂ ಉಳಿದುಕೊಳ್ಳಲೇಬೇಕು' ಎಂದ.
                  ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ `ಹೊಟೆಲ್ಲಾ? ಅದ್ಯಾಕೆ..? ನಮ್ಮ ಮನೆಯೇ ಇದೆ.. ಬನ್ನಿ ಬನ್ನಿ..ನನ್ನ ಆತ್ಮೀಯರು ನೀವು. ಮಧುಮಿತಾ ನನ್ನ ಮಗಳ ಸಮಾನ. ಅಂತವಳು ಇದೀಗ ದುಃಖದಲ್ಲಿದ್ದಾಳೆ. ನಾನು ಎಲ್ಲೋ ಉಳಿಯಲು ಹೇಳಬೇಕೆ. ನನ್ನ ಮನೆಗೆ ಬನ್ನಿ' ಎಂದ. ಯಾಕೋ ಮುಜುಗರವಾದಂತಾಯಿತು ವಿನಯಚಂದ್ರನಿಗೆ. ಮಧುಮಿತಾಳಿಗೆ ಸಲೀಂ ಚಾಚಾನ ಕುಟುಂಬ ಪರಿಚಯವಿತ್ತಾದ್ದರಿಂದ ಆಕೆ ಸಲೀಂ ಚಾಚಾನ ಮನೆಗೆ ಹೋಗುವುದೇ ಒಳ್ಳೆಯದು ಹಾಗೂ ಅರಾಜಕತೆ ಮೆರೆಯತೊಡಗಿರುವ ಬಾಂಗ್ಲಾದೇಶದಲ್ಲಿ ಸಲೀಂ ಚಾಚಾನ ಮನೆಯಲ್ಲಿ ಉಳಿದುಕೊಳ್ಳುವುದೇ ಸುರಕ್ಷಿತ ಎಂದೂ ತಿಳಿಸಿದಾಗ ವಿನಯಚಂದ್ರ ಬೇರೆ ಸಾಧ್ಯತೆಗಳಿಲ್ಲದಂತಾಗಿ ಒಪ್ಪಿಕೊಂಡುಬಿಟ್ಟ.
           ನಿಧಾನವಾಗಿ ಚಿತಾಗಾರದಿಂದ ಹೊರಬೀಳುವ ವೇಳೆಗೆ ಸೂರ್ಯ ತನ್ನ ತೀಕ್ಷ್ಣ ಪ್ರಭೆಯನ್ನು ಬೀರಿ ಬಾನಿನಲ್ಲಿ ಏರಿ ಬರುತ್ತಿದ್ದ. ಅದ್ಯಾವುದೋ ಹೊಟೆಲಿನಲ್ಲಿ ತಿಂಡಿಯನ್ನು ತಿನ್ನುವ ಶಾಸ್ತ್ರ ಮಾಡಿದರಾದರೂ ಯಾರಿಗೂ ತಿಂಡಿ ಹೊಟ್ಟೆಗೆ ಇಳಿಯಲಿಲ್ಲ. ಒಂದೇ ಒಂದು ರಾತ್ರಿ ಕಟ್ಟಿಕೊಟ್ಟ ಅನುಭವಗಳು ಜನ್ಮಕ್ಕಾಗುವಷ್ಟಿದ್ದವು. ಸಲೀಂ ಚಾಚಾನ ಬಳಿ ವಿನಯಚಂದ್ರ ಇದೇ ಮಾತನ್ನು ಹೇಳಿದಾಗ `ಕಷ್ಟ ಬಂತು ಅಂತ ಬೇಸರ ಮಾಡ್ಕೋಬಾರ್ದು ಬೇಟಾ. ಕಷ್ಟಗಳನ್ನು ಗುದ್ದುವ ಶಕ್ತಿಯನ್ನು ಇಟ್ಟುಕೊಂಡಿರಬೇಕು. ಕಷ್ಟಗಳು ಕಟ್ಟಿಕೊಡುವ ಅನುಭವ ಇದೆಯಲ್ಲ.. ಅವು ಬದುಕನ್ನು ನಡೆಸುವ ದಾರಿಯನ್ನು ತಿಳಿಸುತ್ತವೆ. ಕಷ್ಟ ಬಂದಾಗ ಎದೆಗುಂದಬಾರದು. ಕಷ್ಟ ಬಂದ ನಂತರ ಸುಖ ಬಂದೇ ಬರುತ್ತದೆ ಬೇಟಾ. ಅದಕ್ಕೆ ಕಾಯುವ ತಾಳ್ಮೆ, ಸಹನೆ ಬೇಕು. ಯಾರಿಗ್ಗೊತ್ತು ನಿಮ್ಮ ಬದುಕಿನಲ್ಲಿ ಮುಂದೆ ಕಷ್ಟದ ಸುಳಿವೇ ಇಲ್ಲದಿರಬಹುದು. ಬದುಕು ಹೇಗೆ ಬರುತ್ತದೆಯೋ ಹಾಗೆ ನಡೆದುಕೊಂಡು ಹೋಗಬೇಕು ಬೇಟಾ.. ನಡಿ .. ನಮ್ಮ ಮನೆಗೆ ಹೋಗೋಣ.. ಅಲ್ಲಿ ಉಳಿದ ನಂತರ ನೀವು ಭಾರತಕ್ಕೆ ಹೊರಡುವ ಬಗ್ಗೆ ಚಿಂತಿಸಿದರಾಯ್ತು.. ಚಲ್..' ಎಂದು ಹೊರಟರು. ಸಲೀಂ ಚಾಚಾನ ಮಾತುಗಳು ಬಹಳ ಆಪ್ತವೆನ್ನಿಸುತ್ತವೆ. ಆತನ ಜೊತೆಗೆ ಮಾತನಾಡುತ್ತಲೇ ಇರಬೇಕು ಎನ್ನುಸುತ್ತವೆ ಎಂದುಕೊಂಡ ವಿನಯಚಂದ್ರ.
             ರಾತ್ರಿಗಿಂತ ಹಗಲು ಆಪ್ತವಾಗಿದ್ದರೂ ಢಾಕಾದ ಬೀದಿಗಳು ಹಿಂಸಾಚಾರದಿಂದ ಉರಿಯುತ್ತಿರುವುದು ಸ್ಪಷ್ಟವಾಗಿತ್ತು. ರಾತ್ರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರ ನಡೆದಂತೆ ಭಾಸವಾಗುತ್ತಿತ್ತು. ರಾತ್ರಿಯ ಕತ್ತಲಿನಲ್ಲಿ ಹಿಂಸಾಚಾರದ ಭೀಕರತೆ ಕಾಣಿಸುತ್ತಿರಲಿಲ್ಲ. ಆದರೆ ಹಗಲಿನ ಬೆಳಕಿನಲ್ಲಿ ಹಿಂಸಾಚಾರದ ಚಿತ್ರಣ ಸ್ಪಷ್ಟವಾಗಿ ರಾಚುತ್ತಿತ್ತು. ಎಲ್ಲೋ ಒಡೆದ ಗಾಜುಗಳು, ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದ ಇಟ್ಟಂಗಿಗಳ ತುಂಡು, ಕಲ್ಲುಗಳು, ಹಿಂಸಾಚಾರದಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವರು ಬಿಟ್ಟು ಹೋಗಿದ್ದ ಚಪ್ಪಲಿಗಳು ಅಡ್ಡಾದಿಡ್ಡಿಯಾಗಿ ಬಿದ್ದುಕೊಂಡಿದ್ದವು. ಅದ್ಯಾವುದೋ ಸರ್ಕಲ್ಲಿನಲ್ಲಿ ಟೈರಿಗೆ ಹಚ್ಚಿದ್ದ ಬೆಂಕಿ, ಕೆಟ್ಟ ವಾಸನೆಯೊಂದಿಗೆ ಹೊಗೆ ಕಾರುತ್ತಿತ್ತು.
                   ಹಗಲು ಪೊಲೀಸ್ ಪಹರೆ ಬಿಗಿಯಾಗಿತ್ತು. ಮಾರು ಮಾರು ದೂರಕ್ಕೆ ಪೊಲೀಸರಿದ್ದರು. ಪ್ರತಿಯೊಬ್ಬರೂ ಸೈಕಲ್ ರಿಕ್ಷಾ ತಪಾಸಣೆ ಮಾಡಿ ಮುಂದಕ್ಕೆ ಬಿಡುತ್ತಿದ್ದರು. ಸಲೀಂ ಚಾಚಾ ಅದ್ಹೇಗೋ ಸಾಗಿ ಒಳ ರಸ್ತೆಗಳ ಮೂಲಕ ತನ್ನ ಮನೆಯ ಎದುರು ಬಂದು ನಿಲ್ಲುವ ವೇಳೆಗೆ ಗಂಟೆ 11ನ್ನೂ ಮೀರಿತ್ತು. ಮನೆಯೋಳಗಿದ್ದ ಸಲೀಂ ಚಾಚಾನ ಮಡದಿ, ಒಂದಿಬ್ಬರು ಮೊಮ್ಮಕ್ಕಳು ಬಾಗಿಲಿಂದ ಇಣುಕಿದರು.  ಮಧುಮಿತಾಳ ಪರಿಚಿತ ಮುಖ ನೋಡಿ ಸಂತಸ ಪಟ್ಟರೆ ವಿನಯಚಂದ್ರನ ಅಪರಿಚಿತ ಮುಖ ನೋಡಿ ಕುತೂಹಲಗೊಂಡರು. ಸೈಕಲ್ ಇಳಿಯುತ್ತಿದ್ದ ಸಲೀಂ ಚಾಚಾನನ್ನು ಮಕ್ಕಳು ಸುತ್ತುವರಿದಿದ್ದರೆ ಗುಟುಕನ್ನು ತಂದ ತಾಯಿ ಹಕ್ಕಿಯನ್ನು ಮರಿಗಳು ಸುತ್ತುವರಿದ ದೃಶ್ಯದಂತೆ ಭಾಸವಾಗುತ್ತಿತ್ತು.
         `ಚಲ್ ಬೇಟಾ.. ಒಳಕ್ಕೆ ನಡೀರಿ..' ಎಂದು ಸಲೀಂಚಾಚಾ ಹೇಳಿದರು. ಬಸವಳಿದಿದ್ದ ಮಧುಮಿತಾ, ವಿನಯಚಂದ್ರ ನಿಧಾನವಾಗಿ ಸಲೀಂಚಾಚಾನ ಮನೆಯೊಳಕ್ಕೆ ನಡೆದರು. ಇವರ ಬಾಳಿನಲ್ಲಿ ಇನ್ನೊಂದು ಬದಲಾವಣೆ, ಮತ್ತೊಂದು ಅಧ್ಯಾಯ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಹೊಸದೊಂದು ಕನಸಿಗೆ ಮುನ್ನುಡಿಯಾಗುತ್ತಿತ್ತು.

(ಮುಂದುವರಿಯುತ್ತದೆ.)

ಸಾಲ್ಕಣಿಯ ಪೋರನಿಗೆ ಸಹಾಯ ಮಾಡಿ

(ರವಿಕೀರ್ತಿ ಹೆಗಡೆ)
ಅರವಿಂದ ವಿಶ್ವನಾಥ ಹೆಗಡೆ ಮತ್ತು ಭಾಗ್ಯಲಕ್ಷ್ಮಿ ಹೆಗಡೆಯವರ ಏಕೈಕ ಪುತ್ರ ರವಿಕೀರ್ತಿ ಹೆಗಡೆ. ಹಾಲುಗಲ್ಲದ ಹಸುಳೆಯ(2.5 ವರ್ಷ) ಬೋನ್ ಮಾರೋ ಎನ್ನುವ ಕಾಯಿಲೆ ಜೀವ ಹಿಂಡುತ್ತಿದೆ. ಪ್ರತಿ ಹನ್ನೆರಡು ದಿನಕ್ಕೊಮ್ಮೆ ಈ ಪೋರನಿಗೆ ಕೆಂಪು ಮತ್ತು ಬಿಳಿ ರಕ್ತ ನೀಡಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಬೇಣದಮನೆ ನಿವಾಸಿತರಾಗಿರುವ ಅರವಿಂದ ಹೆಗಡೆ ಮಗನ ಅನಾರೋಗ್ಯಕ್ಕಾಗಿ ಈಗಾಗಲೇ ಎರಡೂವರೆ ಲಕ್ಷ ರು. ಖರ್ಚು ಮಾಡಿದ್ದಾರೆ. ಹನ್ನೊಂದು ತಿಂಗಳಿನಿಂದ ಬಾಧಿಸುತ್ತಿರುವ ಕಾಯಿಲೆ ಯಾವುದು ಎಂದು ಅರಿಯುವುದಕ್ಕಾಗಿ ಶಿರಸಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಮಂಗಳೂರು, ಮಂಗಳೂರಿನಿಂದ ಈಗ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಿಗೆ ಮೂರು ಸಾರಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಬೋನ್ ಮಾರೋ ತಜ್ಞ ಡಾ.ಆಶಿಶ್ ದೀಕ್ಷಿತ ಅವರು ರೋಗ ಪತ್ತೆ ಮಾಡಿದ್ದಾರೆ. ಈ ಕುರಿತಂತೆ ಪ್ರಮಾಣಪತ್ರವನ್ನು ನೀಡಲಾಗಿದ್ದು ಇದರಲ್ಲಿ ಬೋನ್ ಮಾರೋ ಫೇಲ್ಯೂರ್ ಸಿಂಡ್ರೋಮ್ ಎಂದು ಗುರುತಿಸಲಾಗಿದೆ. ಈತನಿಗೆ ನಿರಂತರ ರಕ್ತವನ್ನು ಕೊಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಅರವಿಂದ ಹೆಗಡೆಯವರು ಕೃಷಿಕರಾಗಿದ್ದಾರೆ. ಸಣ್ಣ ಹಿಡುವಳಿದಾರರಾಗಿರುವ ಇವರು ಮಗನ ಔಷಧೋಪಚಾರಕ್ಕಾಗಿ ಸಾಲ-ಸೋಲ ಮಾಡಿ ಹಣ ಒದಗಿಸುತ್ತಿದ್ದಾರೆ. ಎರಡು ತಿಂಗಳ ವರೆಗೆ ರಕ್ತ ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿರಬೇಕು. ಆಗಲೂ ಚಿಕಿತ್ಸೆ ಫಲಕಾರಿಯಾಗದಿದ್ದರೆ ಈ ಮಗುವಿನ ರಕ್ತಸಂಬಂದಿ ವ್ಯಕ್ತಿಗಳ ಅಸ್ತಿಮಜ್ಜೆಯನ್ನು ಕಸಿ ಮಾಡಬೇಕಾಗುತ್ತದೆ. ಹೀಗೆ ಕಸಿ ಮಾಡಲು ಅಂದಾಜು 20 ಲಕ್ಷ ರು. ಖರ್ಚು ತಗುಲಬಹುದೆನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ. ಈಗಾಗಲೇ ನೀಡುವ ಚುಚ್ಚುಮದ್ದೊಂದಕ್ಕೆ 70 ಸಾವಿರ ರು.ವರೆಗೂ ವೆಚ್ಚ ತಗುಲಿದೆ. ಅರವಿಂದ ಹೆಗಡೆ ದಂಪತಿಯವರಿಗೆ ಮತ್ತೊಂದು ಮಗು ಜನಿಸಿತ್ತಾದರೂ ಅದು ಆಗಲೇ ತೀರಿಕೊಂಡಿದೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಸಾಲ್ಕಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಡಾರ ಚುಚ್ಚುಮದ್ದನ್ನು ಮಗುವಿಗೆ ಕೊಟ್ಟ ನಂತರ ಇದ್ದಕ್ಕಿದ್ದಂತೆ ಮೈಮೇಲೆ ನೀಲಿ ಕಲೆ ಕಾಣಿಸಿಕೊಳ್ಳಲು ಆರಂಭವಾಯಿತು. ಇದ್ದಕ್ಕಿದ್ದಂತೆ ಸುಸ್ತು ಹಾಗೂ ಮೈ ಬಿಳುಚಿಕೊಳ್ಳಲಾರಂಭಿಸಿತು. ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದರು. ನಂತರ ಚಿಕಿತ್ಸೆಗಾಗಿ ಶಿರಸಿಯ ಮಕ್ಕಳ ತಜ್ಞರಾದ ಡಾ. ನೀರಲಗಿ ಮತ್ತು ಡಾ. ದಿನೇಶ ಹೆಗಡೆ ಅವರಲ್ಲಿ ತಪಾಸಣೆಗಾಗಿ ಕರೆದೊಯ್ದಾಗ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ಪುನಃ ಪುನಃ ಮೈ ಬಿಳುಚಿಕೊಳ್ಳುವುದು, ಸುಸ್ತಾಗುವುದು, ನೀಲಿ ಕಲೆ ಕಾಣಿಸಿಕೊಳ್ಳುವುದು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದಾಗ ರಕ್ತವನ್ನೂ ನೀಡಲಾಗಿತ್ತು. ಕೊನೆಗೆ ಹೆಚ್ಚಿನ ತಪಾಸಣೆಗೆ ಹುಬ್ಬಳ್ಳಿಯ ಎಸ್ಡಿಎಂ ಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಮಂಗಳೂರಿನ ನಿಟೆಯ ಕೆ. ಎಸ್. ಹೆಗಡೆ ಆಸ್ಪತ್ರೆಗೆ ಕರೆದೊಯ್ದು ಒಮ್ಮೆ ಬೋನ್ ಮಾರೋ ತಪಾಸಣೆ ಮಾಡಲಾಯಿತು. ಸಂಬಂಧಪಟ್ಟಂತೆ ಚಿಕಿತ್ಸೆಯನ್ನೂ ನೀಡಲಾಯಿತು. ಆದರೆ ಅದು ಫಲಕಾರಿಯಾಗದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಾಗ ರೋಗ ಪತ್ತೆಯಾಗಿದ್ದು ಈಗ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿಗೆ ಈಗಾಗಲೇ 45ಕ್ಕೂ ಹೆಚ್ಚಿನ ಸಾರಿ ರಕ್ತ ನೀಡಲಾಗಿದೆ. ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಮೂರು ಬಾರಿ ಬೋನ್ ಮಾರೋ ತಪಾಸಣೆ ಮಾಡಿ ಚಿಕಿತ್ಸೆ ನಿಡಲಾಗಿದೆ. ಒಂದೊಂದು ತಪಾಸಣೆ ಹಾಗೂ ಚುಚ್ಚುಮದ್ದಿಗೂ 10 ರಿಂದ 12 ಸಾವಿರ ರು. ಖರ್ಚು ತಗುಲುತ್ತಿದೆ. ಈ ಪುಟಾಣಿಯ ರೋಗದ ಕುರಿತಂತೆ ಗ್ರಾ.ಪಂ ಅಧ್ಯಕ್ಷರು, ಜಿ.ಪಂ ಸದಸ್ಯರು ಪ್ರಮಾಣ ಪತ್ರ ನೀಡಿದ್ದಲ್ಲದೇ ಆರ್ಥಿಕ ಸಹಾಯಕ್ಕಾಗಿ ಶಿಫಾರಸು ಮಾಡಿದ್ದಾರೆ. ಅರವಿಂದ ಹೆಗಡೆಯವರ ದೂರವಾಣಿ ಸಂಖ್ಯೆ 08283-260319 ಮೊಬೈಲ್ ಸಂಖ್ಯೆ 9448965394 ಆಗಿದ್ದು ಇವರಿಗೆ, ಅಂದರೆ ಮಗುವಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡಬಯಸುವವರು ಶಿರಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆ ಸಂಖ್ಯೆ 20115676399 (ಐಎಫೆಸ್ಸಿ ಕೋಡ್ 917) ಅಲ್ಲಿಗೆ ಜಮಾ ಮಾಡಬಹುದಾಗಿದೆ.

Wednesday, July 23, 2014

ಗಣಪಜ್ಜಿಯ ಹಾಡುಗಳು-4

                 ಹಳ್ಳಿಹಾಡುಗಳ ಸರದಾರಿಣಿ ದಿ.ಗಣಪಜ್ಜಿಯ ಬಗ್ಗೆ ಈಗಾಗಲೇ ಬಹುತೇಕ ಮಾಹಿತಿಗಳನ್ನು ನೀಡಿದ್ದೇನೆ. ಆಕೆಯ ಕುರಿತು ಹೇಳಿದ ಮಾಹಿತಿಗಳಷ್ಟೇ ಹೇಳುವ ಮಾಹಿತಿಗಳೂ ಇವೆ. ತನಗೆ ವಯಸ್ಸಾಗಿದ್ದರೂ ಕೂಡ ಎದುರಿಗೆ ಹರೆಯದ ಹುಡುಗರಿದ್ದರೆ ಅವರ ವಯಸ್ಸಿಗೆ ಏನು ಬೇಕೋ ಅದನ್ನೇ ಹೇಳುವಂತಹವಳು ಗಣಪಜ್ಜಿ. ಸ್ಥೂಲಕಾಯದ ಗಣಪಜ್ಜಿಯ ಹಸಿರು ಕಾಟನ್ ಸೀರೆ ಇನ್ನೂ ನನ್ನ ಕಣ್ಣಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಅಂದಹಾಗೆ ಆಕೆ ಹೇಳಿದ ಮಜವಾದ ಹಾಡೊಂದನ್ನು ನಾನು ಇಲ್ಲಿ ಬರೆಯಲೇ ಬೇಕು. ಇಲ್ಲವಾದರೆ ಎಲ್ಲವನ್ನೂ ಹೇಳಿ ಬಹು ಅಮೂಲ್ಯವಾದುದನ್ನು ಮುಚ್ಚಿಟ್ಟಂತೆ ಆಗುತ್ತದೆ. ತಂಟೆ ಮಾಡುವ ಬಾಲಕನ ಗುಣಗಾನ ಮಾಡಿ ಆತನನ್ನು ವಾಪಾಸ್ ಕರೆತರುವ ತಾಯಿ, ಅಜ್ಜಿಯ ಹಾಡು ಇದೆ.

ಸಾರಿಸಿದೊಳವಿಕೆ ಸುಣ್ಣವ ಚೆಲ್ಲಿದ
ಧೂಳ್ ತಂದು ಪಸರಿಸಿದ |
ಕಾರುಣ್ಯ ರಂಗವಲ್ಯವ ಹಾಸ್ಯೋದೆ/ಆಗ್ಯೋದೆ
ನೋಡು ಬಾ ಎಂದ |

ಔಷೇಕಕೆ ಜಲವ ತಂದಿಟ್ಟರೆ
ಆಧ್ವಾನವ ಮಾಡಿದ |
ಪ್ರೀತಿಯಿಂದಲೆ ಗಂಧಾಕ್ಷತವಿಟ್ಟು
ಹೂ ತೊಳಸಿ ಮುಡಿದ |

ಹೂಗಿ ಮಿಡಿ ಬಿಡಿದಾ ಹಾಗಲು ತೊಂಡೆ
ಬೆರಳೊಳು ಕಿತ್ತ |
ದೂರ ಮಾಡುತ ಬಂದರೆ ನಾನಲ್ಲ
ಮತ್ಯಾರ ಮಗನೋ ಎಂದ |

ಹಪ್ಪಳ ಸಂಡಿಗೆ ಹರಗುವ ದಿನದಲಿ
ತಪ್ಪದೆ ತಾ ಬಂದ |
ಉಪ್ಪು ಸಾಕೋ, ಸಾಲದೋ ಎಂದು
ತಪ್ಪದೆ ತೆಗ ತಿಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಆಹ್... ಸರಳ ವಾಕ್ಯದಲ್ಲಿ ನಡೆದ ಘಟನೆಗಳನ್ನು ಹೇಳುವ ಪರಿಯನ್ನು ಗಮನಿಸಿ. ಗೊಂದಲವಿಲ್ಲದೇ ನೇರಾ ನೇರ, ಸುಲಭದಲ್ಲಿ ಹೇಳುವ ಹಳೆಯ ಹಾಡಿನ ಅಜ್ಜಿ ಕುತೂಹಲದ ಮೂಟೆ ಎಂದರೂ ತಪ್ಪಿಲ್ಲ ನೋಡಿ..
ಅಜ್ಜಿ ಮುಂದುವರಿದು ಹೇಳುತ್ತಾಳೆ-

ಮೆತ್ತಿಯ ಕ್ವಾಣೆಯ ಹುಗಶಿಡ ಮಕ್ಕಳ
ಒತ್ತಿ ಬೀಗವ ಹಾಕಿದ |
ಕೃಷ್ಣ ಕೃಷ್ಣ ತೆಗೆಯೋ ಎಂದರೆ
ನಿಮ್ ಗಂಡನ ಹೆಸರೇಳೆಂದ.. |

ಮೆತ್ತಿಯ ಮೇಲೆ ಹರಗಿದ ವಸ್ತ್ರವ
ಬತ್ತಿ ಎನುತ ಸಿಗಿದ..|
ಕೃಷ್ಣ ಕೃಷ್ಣ ಯಾರ ಎಂದರೆ
ಬೆಕ್ಕೇನ ಎಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಅಷ್ಟೆಲ್ಲ ಕಿಲಾಡಿ, ತಂಟೆ ಮಾಡುವ ಬಾಲಕನನ್ನು ಕೃಷ್ಣ ಎಂದು ಮುದ್ದಿನಿಂದ ಕರೆಯುವ ಪರಿಯನ್ನು ಗಮನಿಸಿ. ಮಗುವನ್ನು ದೇವರಿಗೆ ಹೋಲಿಸುತ್ತ, ಹುಸಿ ಮುನಿಸಿನಿಂದ ಹಾಡನ್ನು ಹಾಡುವ ಪರಿ ಬೆರಗನ್ನು ಮೂಡಿಸುತ್ತದೆ.
ಹಾಡು ಇನ್ನೂ ಮುಂದುವರಿಯುತ್ತದೆ..

ಆಡುವ ಮಕ್ಕಳ ಅಳಿಸಬೇಡೆಂದರೆ
ಬಾಯಿಂದೇಡಿಸಿದ | (ಏಡಿಸುವುದು (ಛೇಡಿಸುವುದು) ಎನ್ನುವ ಶಬ್ದ ನೆನಪು ಮಾಡಿಕೊಳ್ಳಿ)
ಒರಗಿದ ಮಕ್ಕಳ ಎಬಸಬೇಡೆಂದರೆ
ಬಟ್ಟಲ ಬಾರಿಸಿದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |

ತಮಾಷೆಯ ಈ ಹಾಡು ಇನ್ನೂ ಮುಂದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅಜ್ಜಿ ಹೇಳಿದ್ದಿಷ್ಟು. ಹವ್ಯಕರ ಆಡುಮಾತಿನ ಈ ಹಾಡು ಸೆಳೆಯುತ್ತದೆ. ಗಣಪಜ್ಜಿ ಇನ್ನೊಂದು ಹಾಡನ್ನು ಹೇಳಿದ್ದಾಳೆ. ಪೌರಾಣಿಕ, ಗಂಭೀರ ಹಾಡು ಕೂಡ ಸೆಳೆಯುತ್ತದೆ. ಮಣಿಕರ್ಣಿಕೆಯ ಜನ್ಮವೃತ್ತಾಂತ ಇಲ್ಲಿದೆ.

ಅತಿಭಕ್ತಿಯಿಂದಲೇ ಲೋಪಾಮುದ್ರೆಯು ತನ್ನ
ಪತಿಗೆ ವಂದಿಸಿ ಕಾಶೀ ಕಾಂಡದೊಳು ಉನ್ನತದ ಫಲ
ಯಾವುದದು ತನಗದು ಅರುಹಬೇಕೆನುತ,
ನಸು ನಗುತ ಮನದೊಳಗೆ ಅಗಸ್ತ್ಯರು
ಸತಿಯ ನೀಕೇಳಕ ಚಿತ್ತದಿ, ಪ್ರಥ್ವಿಯಲಿ
ಮಣಿಕರ್ಣಿಕುದಿಸಿದ ಕಥೆಯ ನಿಶ್ಚರಿಪೆ |

ಜಗದೇಕ ಬ್ರಹ್ಮ ಪ್ರಳಯದೊಳು ತಾನ್
ಒಡಗೂಡಿಕೊಂಡಿರಲು ಶಕ್ತಿಯೊಳು
ತ್ರಿಜಗಾಕ್ಷ ಅವ್ಯಾಕ್ಷ ಮಹಾ ತತ್ವದೊಳು
ಪುಟ್ಟಿದವು ತ್ರಿಜಗ ವ್ಯಾಪಕ ಮಾಯದಿಂದಲಿ
ಒಲುಶಿ ವಿಶ್ವೇಶ್ವರನ, ಶ್ರೀ ಜ್ಞಾನ ಶಕ್ತಿಯೊಳ್
ಹರಿಹರ ಬ್ರಹ್ಮೇಂದ್ರ ರೂಪಿನೊಳು
ಒಲಿದು ತೋರುವನ |

ವಿಷ್ಣು ನಾಮದಲಿಹ ಜಗವನು
ಉತ್ಪತ್ಯವನು ಮಾಡೆಂದರೆ, ಸತ್ಯವೆಂಬುದು
ಮುಕ್ತಿ ಕ್ಷೇತ್ರದಿ, ಸ್ವಾಮಿ ನಡೆತರಲು,
ಛತ್ರಕೋಪವ ಧರಿಸಿ ಅಂಗದೊಳು
ವಶ್ಚರಿಸಿ ಬಹುಜಲವು ತುಂಬೇ
ಬಹು ನಿಷ್ಟೆಯಲಿ ಜಪ ತಪವ ಮಾಡಿದ
ಯೋಗ ಮಾರ್ಗದಲಿ |

ಅರಸಗೆ ಅರವತ್ತು ಸಾವಿರ
ವರುಷ ಶ್ರೀಹರಿ ತಪವ ಚರಿಸಲು
ಪರಸಿವನು ನಡೆತಂದು ಸುಳಿಯಲು
ಮೌನದಿಂದಿಳಿಯೆ, ನಗುತ ನಾಮತ್ಸಕವ
ಚರಿಸಿಯೇ ಸ್ಮರಿಸುತಲೇ ಮೂರ್ತಿಯದು
ಸೆಳೆಯಲು ಮನಸು ಚಂಚಲವಾಗೆ
ಮಾಧವರರಿತು ಪೇಳಿದರು |

ಅಖಂಡ ವಿಪ್ರಶಾಂತ ಕರೆಯಲಿ
ಅಖಂಡ ಬ್ರಹ್ಮಾಂಡವನು ವಿವರದಿ
ಇಂಬಿಟ್ಟ ಬಹು ವಿಶ್ವರೂಪಿರಿ ವಿಶ್ವ ಪ್ರಕಾಶದಿ
ಚಂದ್ರಶೇಖರರೊಲಿದು ನಿಂತಿರೆ
ಇಂದಿನಾ ತಪ ಕೈಗೂಡಿತೆನುತಲಿ
ಕೊಂಡಾಡಿ ಹರಿ ನೋಡಿದನು
ಮನದಿಷ್ಟ ತಣಿದಂತೆ |

ಮಣಿಕರ್ಣಿಕೆ ಎಂಬ ವಿಧಾನವು
ಈ ಸ್ಥಳದೊಳಗುದ್ಭವವಾಗಲೆಂದರು
ಹರನಗುತ ಮಾಧವರೊಳರುಹಿದರು
ಮಧುರ ವಾಕ್ಯವು ಚಿನ್ಮಯನೆ 
ನೀನಾಡಿದ ವಾಕ್ಯವು ಸನ್ಮತವಾಯ್ತು 
ಯನ್ನ ಮನುಸಿಗೆ ಯನ್ನ ನಿನ್ನೆಯ
ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ವರವ ಪಾಲಿಸ
ರೆಂದ ಮಾಧವನು |
- ಎಂದು ಹಾಡು ಮುಗಿಯುತ್ತದೆ. ಈ ಹಾಡಿನಲ್ಲಿ ಮಧುರ ವಾಕ್ಯದಲಿ ಎನ್ನುವ ಸಾಲಿನಿಂದ ಈ ಮೊದಲೆ ಬರೆದಿದ್ದೆ. ಹಳೆಯ ಕಡತಗಳನ್ನು ತಿರುವಿ ಹಾಕುತ್ತಿದ್ದಾಗ ಹಾಡು ಪೂರ್ತಿಯಾಗಿ ಸಿಕ್ಕಿತು. ಅದನ್ನಿಲ್ಲಿ ಇಟ್ಟಿದ್ದೇನೆ. ಓದಿ ಸಂತಸಪಡಿ. ಗಣಪಜ್ಜಿಯ ಹಾಡಿನ ಒಂದು ಕಂತು ಇದು. ಇನ್ನುಳಿದ ಕಂತುಗಳು ಮಿತ್ರ ಸಂಜಯನ ಬಳಿ ಇದೆ. ಅವನ್ನು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಮುಂದಿಡಲಾಗುತ್ತದೆ.

Tuesday, July 22, 2014

ಬೆಂಕಿ-ಪ್ರೀತಿ

ಬೆಂಕಿ ಬದುಕಿನ ನಡುವೆ
ಸುಳಿದು ಬರುತಿದೆ ಪ್ರೀತಿ
ದಹಿಸುತಿಹ ಮನದೊಳಗೆ
ಹಸಿರು ಮೆರೆಸಿದೆ ಪ್ರೀತಿ |

ಇಂದಿನಾ ದಿನ ಕೊನೆಗೆ
ಬೆಂಕಿ ಬಾಣಲೆಯಲಿದ್ದೆ
ಹೃದಯದೊಳಗಣ ನೂರು
ಚಿಂತೆ ಬೆರೆತು ಬದುಕಿದ್ದೆ |

ಮೂಡಿ ಮೊಳೆತಿದೆ ಪ್ರೀತಿ
ಇನ್ನು ಬಿಡು ವರ್ಷಹನಿ
ಸುಡುವ ಬೆಂಕಿಯೂ ಕೂಡ
ತಂಪು ತುಂಬುವ ಬಾನಿ |

ಇಂದಿನ ದಿನ ಕಳೆಯೆ
ನಾನು ನಾನಾಗುತಿಹೆ
ಬದುಕಿನಾ ಮಾರ್ಗದಲಿ
ಪ್ರೀತಿಯಾ ತಿಳಿದಿರುವೆ |

**

(ಈ ಕವಿತೆಯನ್ನು ಬರೆದಿರುವುದು 20-11-2006ರಂದು ದಂಟಕಲ್ಲಿನಲ್ಲಿ)

Monday, July 21, 2014

ಹನಿ ಮಿನಿ ಕವಿತೆ

ಗಂಡು-ಬೆಂಡು

ಮದುವೆಯ ಮುನ್ನ

ಗಂಡು ಸಿಡಿಗುಂಡು..!
ಮದುವೆಯ ನಂತರ
ಬರಿ ಬೆಂಡು ||

ಕಷ್ಟದ ಕೆಲಸ


ಮು.ಮಂ ಸಿದ್ದರಾಮಯ್ಯರ

ವಿವಿಧ ಭಂಗಿಯ ಪೋಟೋ
ತೆಗೆದುಕೊಳ್ಳುವುದು ಬಹಳ ಕಷ್ಟ ಮಾರಾಯ್ರೆ..
ಯಾಕಂದ್ರೆ ಅವರದ್ದು ಯಾವಾಗಲೂ
ನಿದ್ದೆಯದೇ ಭಂಗಿ..!

ನೀರೋನಂತೆ..


ರೋಂ

ಹತ್ತಿ ಉರಿಯುತ್ತಿದ್ದಾಗ
ನೀರೋ
ಪಿಟೀಲು ಬಾರಿಸುತ್ತಿದ್ದನಂತೆ..|
ರಾಜ್ಯ
ಅತ್ಯಾಚಾರದಲ್ಲಿ
ಬಳಲಿ ಬೆಂಡಾಗುತ್ತಿದ್ದಾಗ
ಮು.ಮಂ ಸಿದ್ದರಾಮಯ್ಯ
ನಿದ್ದೆ ಮಾಡುತ್ತಿದ್ದಾನಂತೆ..!!

ಹೋಲಿಕೆ


ಸಿದ್ದರಾಮಯ್ಯರ

ನಿದ್ದೆ ಪುರಾಣದ ನಡುವೆ
ಕೇಜ್ರಿವಾಲ ನೆನಪಾಗುವುದು
ಫುಟ್ ಬಾಲ್ ವಿಶ್ವಕಪ್ಪಿನ
ನಡುವೆ ಕ್ರಿಕೆಟ್
ಮ್ಯಾಚ್ ನೋಡಿದಂತೆ |

ಜಾರ್ಜಾವತಾರ


ನಮ್ಮ ಗೃಹ ಸಚಿವ ಜಾರ್ಜು

ಅತ್ಯಾಚಾರ ರಾಜ್ಯದಲ್ಲಿ
ಹೆಚ್ಚಾಗುತ್ತಿದ್ದರೂ
ಕ್ಯಾಮರಾದೆದುರು
ಕೊಡುತ್ತಿದ್ದಾರೆ ಪೋಜು..||

ಬನ್ನಿ ಕನಸುಗಳೆ

ಬನ್ನಿ ಕನಸುಗಳೆ ಎದೆಯ ಗೂಡಿಗೆ
ದೂರ ತೀರದಿಂದ |
ಬೆಂದ ಎದೆಗೆ ಹಲ ತಂಪು ನೀಡಿರಿ
ಮಳೆಯ ಹನಿಗಳಿಂದ ||

ಬನ್ನಿ ಕನಸುಗಳೆ ತಂಪು ತನ್ನಿರಿ
ದಡದ ಮೋಡದಿಂದ |
ಹೊಸತು ವಿಷಯಗಳ ಹಿಡಿದು ತನ್ನಿರಿ
ಆಚೆ ದಡಗಳಿಂದ ||

ನಿಮ್ಮ ನಡೆಗಳಲಿ ಚಿಮ್ಮಿ ಬರಲಿ ಹಲ
ನಲಿವು ಗುಡಿಗಳಿಂದ |
ಹೊಸತು ಕನಸಿಗೆ ಅರ್ಥ ಹೊಮ್ಮಲಿ
ಹಲವು ಪ್ರೀತಿಯಿಂದ ||

ಬೆಮದ ಹೃದಯವು ತುಂಬಿ ಹರಸಲಿ
ಮುಗ್ಧ ಮನಸಿನಿಂದ |
ರೌದ್ರ ಬಾಳಲಿ ಪ್ರೀತಿ ತುಂಬಲಿ
ಸಕಲ ಕನಸಿನಿಂದ ||


***
( ಈ ಕವಿತೆಯನ್ನು ಬರೆದಿರುವುದು 8-4-2006ರಂದು ದಂಟಕಲ್ಲಿನಲ್ಲಿ..)

Saturday, July 19, 2014

ಹುಡುಗಿ I HATE YOU (ಪ್ರೇಮಪತ್ರ-13)

ಪ್ರೀತಿಯ ಹುಡುಗಿ
             ಹಾಗಂತ ಕರೆಯೋಕೆ ನಂಗೆ ಇಷ್ಟವಿಲ್ಲ. ಆದ್ರೂ ನಿನ್ನ ಜೊತೆಗಿನ ಕೊನೆಯ ಬರಹದ ವ್ಯವಹಾರವೋ ಎಂಬಂತೆ ಇದನ್ನು ಬರೆಯುತ್ತಾ ಇದ್ದೇನೆ. ಹಾಗಾಗಿ ಪ್ರೀತಿಯ ಗೆಳತಿ ಎನ್ನುವ ಸಂಬೋಧನೆಯೇ ಇರಲಿ.
             ಸ್ಪಷ್ಟವಾಗಿ, ನೇರಾ ನೇರವಾಗಿ ಹೇಳೋಕೆ ನಾನು ಪ್ರಯತ್ನ ಪಡ್ತೀನಿ..ಯಾವ್ದೋ.. ಜನ್ಮದ ನಂಟು-ಗಂಟು ಎಂಬಂತೆ ಆ ದಿನ ನಿನ್ನ ಪರಿಚಯವಾಯ್ತು. ನಿಂಗದು ಗೊತ್ತೇ ಇದೆ. ಎಲ್ಲಕ್ಕಿಂತ ಮೊದಲು ನಮ್ಮ ಮನಸ್ಸುಗಳಲ್ಲಿ ಮನೆ ಮಾಡಿದ್ದು ಸ್ನೇಹ. ಇದೂ ನಿಂಗೆ ತಿಳಿದೇ ಇದೆ. ಮಾತು-ಕತೆ-ಸ್ನೇಹ ಇವುಗಳೆಲ್ಲವೂ ಪ್ರೇಮದ ಮೊದಲ ಮೆಟ್ಟಿಲಂತೆ. ಆದರೆ ಇದು ಎಲ್ಲರಲ್ಲೂ ಅರಳಲಾರದು. ಇವುಗಳಿಗೆ ತಮ್ಮದೇ ಆದ ನಿರ್ದಿಷ್ಟ ಪರೀಧಿಯಿದೆ. ಬಾವನೆಗಳ ಬಂಧ-ಹಂದರವಿದೆ. ಆದಿನ ನಾ ನಿನ್ನ love ಮಾಡ್ತೀನಿ ಅಂದಾಗ ನೀನು ಅದೇ ಕ್ಷಣ ಒಪ್ಪಿಕೊಂಡುಬಿಟ್ಟಿದ್ದೆಯಲ್ಲ ಆಗ ನನಗೆ ಖುಷಿಯಾಗುವ ಬದಲು ಅಚ್ಚರಿಯಾಗಿತ್ತು. ಇದೇನಿದು ಯೋಚಿಸಿ ಹೇಳ್ತೀ ಅಂತ್ಲೋ, ಟೈಂ ಬೇಕು ಅಂತ್ಲೋ ಹೇಳುವಲ್ಲಿ ಓಕೆ ಅಂದಳಲ್ಲ.. ಎಂದುಕೊಂಡಿದ್ದೆ. ಆ ನಂತರ ಖುಷಿಯಾಗಿತ್ತು. ಆಗಲೇ ನನ್ನ ಮನದ ಮೂಸೆಯಲ್ಲಿ ಪ್ರೇಮಕಾವ್ಯ ಅರಳಿ, ನಿನ್ನದೇ ನೆನಪು ನೆರಳಲ್ಲಿ ಬೆಳೆದು, ನನ್ನದೇ ಆದ ಕನಸಿನ ಪ್ರಶ್ನೆಗಳಿಗೆ ಉತ್ತರವಾಗಿ ಖುಷಿಯೂ ಆಗಿಬಿಟ್ಟಿತ್ತು. ಆಗಲೇ ನಾ ನಿನ್ನ ಬಳಿಗೆ
ಗೆಳತೀ, ಯಾಕ್ಹೀಗೆ
ನೀ-ನೆಂಬ ಭೃಂಗವೆದೆಯ ಗೂಡಿಗೆ
ಕಿಂಡಿ ಕೊರೆದು ನಿನ್ನ
ನೆನಪನ್ನೇ ಭದ್ರವಾಗಿಸಿದೆಯಲ್ಲಾ..
ಎಂದು ಹೇಳಿ-ಕೇಳಿ ಉಲ್ಲಸಿತಗೊಂಡಿದ್ದೆ.
                ಅದೇ ಸಮಯದಲ್ಲಿ ನೀನೂ ಖುಷಿಯಿಂದ ನನಗೆ ಪ್ರೀತಿಯ ಓಲೆಯನ್ನು ಬರೆದು ನನ್ನ ಮನದ ಇಂಚಿಂಚಿನಲ್ಲೂ ಕಾಣದ, ಕಾಣುವ-ಕಾಡುವ ಗೆಳತಿಯಾಗಿ, ಕವನವಾಗಿ, ಕನಸಾಗಿಬಿಟ್ಟಿದ್ದೆ. ನಾನು I LOVE YOU ಅಂದಾಗಲೆಲ್ಲ I To Love You ಎಂದು ನೀನು ಹೇಳುತ್ತಿದ್ದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಎನ್ನುತ್ತಲೇ ಇದೆ.
                ಆ ನಟರಾಜ ಟಾಕೀಸಿನಲ್ಲಿ ನಾನು ಮತ್ತು ನಿನ್ನ ಗೆಳತಿಯರ ಗುಂಪು ಕುಳಿತು ಮುಂಗಾರು ಮಳೆ ಸಿನೆಮಾ ನೋಡಿ ಮನದಣಿಯೆ ಆನಂದಿಸಿದ್ದು, ಕಾಲೇಜಿನ ಕ್ಯಾಂಪಸ್ಸಿನಲ್ಲಿ ಯಾರಿಗೂ ಕಾಣದಂತೆ ಕಣ್ಣಿನಲ್ಲೇ ಮಾತಾಡಿಕೊಂಡಿದ್ದು, ದೋಸ್ತನೊಬ್ಬನ ಅವ್ಯಕ್ತ ಪ್ರೀತಿಗೆ ಸಪೋರ್ಟ್ ಮಾಡಿದ್ದು, ಅದು ಸಕ್ಸಸ್ ಆಗಿದ್ದು, ನಾನು ತಂದ್ಕೊಡೋ ನವಿಲುಗರಿಗಾಗಿ ನೀನು ಕಾದು ಕುಳಿತಿದ್ದು, ಎಲ್ಲಕ್ಕಿಂತ ಮಿಗಿಲಾಗಿ ನಿನ್ನ birthday ಗೆ ನನ್ನದೇ ಮೊಟ್ಟ ಮೊದಲ phone call ಬರಬೇಕು ಎಂದಿದ್ದು, ನಾನು ಪೋನ್ ಮಾಡಿ ನಿಂಗೆ ಜನ್ಮದಿನದ ಹಾರಯಿಕೆಗಳನ್ನು ತಿಳಿಸಿದ್ದು ಇವೆಲ್ಲ ನಿಂಗೆ ಮರೆತಿಲ್ಲ ಅಂದ್ಕೊಂಡಿದ್ದೀನಿ. ನಂಗಂತೂ ಇವೆಲ್ಲ ಹಸಿ ಹಸಿ ನೆನಪುಗಳು. ಕಹಿ ಕಹಿ ಡಿಪ್ಪೆಂಡಾಲ್-ಎಂ ಮಾತ್ರೆಗಳು..
               ನಿಂಗೊತ್ತು ಗೆಳತಿ ನಾನು ನಿನ್ನ ಅದೆಷ್ಟು ಹಚ್ಕೊಂಡಿದ್ದೆ ಅಂತ. ನಿನ್ನನ್ನು ಅದ್ಯಾವ ಪರಿ ಇಷ್ಟಪಟ್ಟಿದ್ದೆ ಗೊತ್ತಾ.. ಆದ್ರೆ ನಾನು ಕೇಳೋದಿಷ್ಟ.. ನೀ ಯಾಕೆ ಹೀಗ್ಮಾಡಿದೆ ಅಂತ. ನಿನ್ನನ್ನು ಬದುಕಿನ ತುಂಬ ಆರಿಸಿ, ಆವರಿಸಿ ಮನದ ಗುಡಿಯೊಳಗೆ ತುಂಬಿಟ್ಟುಕೊಂಡಿದ್ದ ನಂಗೆ ಯಾಕೆ ನೀನು ಮೋಸ ಮಾಡ್ದೆ ಅಂತ ಅಷ್ಟೇ ನಾನು ಕೇಳ್ತಿರೋ ಪ್ರಶ್ನೆ.
               ಹೇಳ್ತೀನಿ ಕೇಳು, ಈಗ್ಗೆ ವಾರಗಳ ಹಿಂದಷ್ಟೇ ಮಿತ್ರನೊಬ್ಬಾತ ಬಂದು ನೀನು ನಂಜೊತೆ ಪ್ರೀತಿಯ ನಾಟಕ ಆಡ್ತಿರೋ ವಿಷಯ ಹೇಳ್ದಾಗ ಅವನಿಗೆ ನಾನು ಹೊಡೆಯೋಕೆ ಹೋಗ್ಬಿಟ್ಟಿದ್ದೆ. ಕೊನೆಗೆ ಆತ `ನೀ ಅಂದ್ಕೊಂಡಿರೋ ಹಾಗೆ ಅವಳು ನಿನ್ನ ಪ್ರೀತಿ ಮಾಡ್ತಿಲ್ಲ ಕಣೋ ದೋಸ್ತಾ.. ಅವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ನಿಂಗೆ ಮಾತ್ರ ಮೋಸ ಮಾಡ್ತಿದ್ದಾಳೆ. ನಿನ್ನೆದುರು ಮಾತ್ರ ನಾಟಕವಾಡ್ತಿದ್ದಾಳೆ. ಡಬ್ಬಲ್ ಗೇಮ್ ಆಡ್ತಾ ಇದ್ದಾಳೆ ಕಣೋ ಅಂದಾಗ ನಂಗೆ ಒಂದ್ಸಾರಿ ಅಳು ಬಂದ್ಬಿಟ್ಟಿತ್ತು.
              ನಿಂಗೊತ್ತಲ್ಲ ಹುಡುಗಿ ನಾನ್ಯಾವತ್ತೂ ನನ್ನೊಳಗಿನ ನೋವನ್ನು ಬೇರೆ ಯಾರಬಳಿಯೂ ಹೇಳೋಲ್ಲ ಅಂತ. ನನ್ನೊಳಗೆ ಸಾವಿರ ನೋವಿನ ಗೊಂಚಲು, ಗೊಂಚಲುಗಳಿದ್ದರೂ ಕೂಡ ಎಲ್ಲರ ಎದುರು ನಗ್ತಾ ನಗ್ತಾ ಇದ್ದಿರ್ತೀನಲ್ಲಾ.. ಇದು ಬಹುಶಃ ನನಗಿಂತ್ಲೂ ಹೆಚ್ಚು ನಿಂಗೇ ಗೊತ್ತಿದೆ. ಜೊತೆಗೆ ನಾನು ಇನ್ನೊಬ್ಬರ ನೋವಿಗೆ ತತ್ತಕ್ಷಣ ಮಿಡಿಯುನೆನೆಂಬ ಸತ್ಯವೂ ನಿಂಗೊತ್ತು. ಆದರೆ ಗೆಳತಿ ನಂಗೀಗ ನಿನ್ನ ಮೋಸವನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕು ಅನ್ನಿಸ್ತಿದೆ. ಯಾರ ಬಳಿ ಹೇಳಿಕೊಳ್ಳಲಿ..?
             ಹುಡುಗಿ, ನೀನು ಮೋಸ ಮಾಡ್ತಿದ್ದೀಯಾ ಅನ್ನೋದು ನನಗೆ ತಿಳಿದ ತಕ್ಷಣವೇ ನಾನು ಜಾಗೃತನಾದೆ. ನನ್ನೊಳಗಿನ ಪತ್ರಕರ್ತ ಚಿಗಿತುಕೊಂಡ. ತಕ್ಷಣವೇ ನಿನ್ನ ಮೋಸಗಾರಿಕೆಯನ್ನು, ಡಬ್ಬಲ್ ಗೇಮನ್ನು ಗೊತ್ತು ಮಾಡಿಕೊಂಡೆ. ಹುಡುಗಿ, ನಾನು ನಿನ್ನ ಆ ಇನ್ನೊಬ್ಬ ಲವ್ವರ್ ಇದ್ದಾನಲ್ಲ ಅವನ ಪರಿಚಯ ಮಾಡ್ಕೊಂಡಿದ್ದೀನಿ. ಮಿಗಿಲಾಗಿ ಆತನ ರೌಡಿ ಗ್ಯಾಂಗ್ ಕೂಡ ನನಗೆ ಪರಿಚಯವಾಗಿಬಿಟ್ಟಿದೆ. ನೀನು ಮಾಡ್ತಿದ್ದ ಮೋಸದ ಪ್ರತಿಯೊಂದು ಎಳೆ ಎಳೆಯನ್ನೂ ನಾನು ತಿಳ್ಕೊಂಡುಬಿಟ್ಟಿದ್ದೀನಿ ಗೊತ್ತಾ.
            ಕಾಲೇಜಿನ ಎಂಟರೆನ್ಸ್ ಬಳಿ ನೀನು-ಅವ್ನು ಮಾತನಾಡುತ್ತಿದ್ದಾಗಲೆಲ್ಲಾದ್ರೂ ನಾನು ದೂರದಿಂದ ಬರುತ್ತಿರುವುದು ಕಂಡರೆ ಸಾಕು ನಿನ್ನ ಗೆಳತಿಯರಿಂದ ಸಿಗ್ನಲ್ ಬರುತ್ತದಲ್ಲಾ ಅದೆಲ್ಲಾ ನಂಗೆ ಗೊತ್ತಿಲ್ಲ ಅಂದ್ಕೊಂಡ್ಯಾ?
            ಹಾಂ, ನಾ ಕೊಟ್ಟಿದ್ದ ನವಿಲುಗರಿನ ಎತ್ತಿ ಬಿಸಾಡಿಬಿಟ್ಟಿದ್ದೀಯಲ್ಲಾ.. ಅದೂ ನಂಗೆ ಗೊತ್ತಿದೆ. ಜೊತೆಗೆ ಅವನು ನಿಂಗೆ ಪ್ರೆಸೆಂಟ್ ಮಾಡಿದ್ದಾನಲ್ಲ ಕಪ್ಪು ಬಣ್ಣದ ವಿಚಿತ್ರ ಲಾಕೆಟ್. ಅದನ್ನು ನೀನು ಪ್ರತೀದಿನ ಹಾಕಿಕೊಮಡು ಬರುತ್ತಿರುವುದೂ ನನಗೆ ಗೊತ್ತಿದೆ.
             ಹುಂ, ಬಿಟ್ಟು ಬಿಡು ಅಂತ ನಾನು ಹೇಳೋದಿಲ್ಲ. ಹುಡುಗೀರಿಗೆ ಅದು ಭಾಳ ಕಷ್ಟವಾಗುತ್ತದಂತೆ.. ನಾನೇ ನಿನ್ನ ಮರೆತುಬಿಡ್ತೀನಿ. ನಿನ್ನ ಮೇಲಿದ್ದ ಪ್ರೀತಿಯ ಎಲ್ಲ ಮೊಳಕೆಗಳನ್ನೂ ಕೊಂದುಕೊಂಡು ಅಲ್ಲೊಂದು ಸ್ನೇಹದ ಬಸುರಿಗಿಡವನ್ನು ನೆಟ್ಟು ಬಿಡ್ತೀನಿ.
              ಮರೆತಿದ್ದೆ ಕಣೆ ಹುಡುಗಿ, ನಿನ್ನ ಡಬ್ಬಲ್ ಗೇಮ್ ನನಗೆ ಗೊತ್ತಾದರೂ ನಾನು ಸುಮ್ಮನಿದ್ದೀನಿ ಎನ್ನುವುದು ನಿನಗೆ ಅಚ್ಚರಿ ತಂದಿರಬೇಕಲ್ಲ. ನಿನ್ನ ಮೋಸಕ್ಕೆ ಪ್ರತಿಯಾಗಿ ನಾನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದು ಹಾರಾಡಿ, ಗಲಾಟೆ ಮಾಡಿ ಜಗಳಕ್ಕೆ ಇಳಿಯುವಂತಹ ಜಾಯಮಾನದವನು ನಾನಲ್ಲ. ನನಗೆ ಅಥವಾ ನನ್ನಲ್ಲಿರುವ ಸಂಸ್ಕಾರವೇ ಬೇರೆ. ಖಂಡಿತವಾಗಿಯೂ ಸಾಪ್ಟ್ ನಾನು. ಮೋಸ ಮಾಡಿದ್ದಿಯಲ್ಲಾ ಹುಡುಗಿ, ಮತ್ಯಾರಿಗೂ ಮಾಡಬೇಡ ಎಂದು ಹೇಳಿ ಸುಮ್ಮನೆ ಬಿಟ್ಟುಬಿಡುವಂತವನು ನಾನು. ಆದರೆ ನೀನು ಹೀಗೆ ಡಬ್ಬಲ್ ಗೇಮ್ ಆಡುವ ವಿಷಯ ಅವನಿಗೆ ಗೊತ್ತಾದ್ರೆ? ಆಗ ನಿನ್ನ ಪರಿಸ್ಥಿತಿ ಏನು ಗೊತ್ತಾ? ನಂಗೆ ಗೊತ್ತಾದಂತೆ ಅವನಿಗೆ ನಿನ್ನ ಮೋಸದ ವಿಷಯ ಆದಷ್ಟು ಗೊತ್ತಾಗದೇ ಇರಲಿ, ನೀನು ಚನ್ನಾಗಿರು ಎಂಬುದಷ್ಟೇ ನನ್ನ ಮನದೊಳಗಣ ಹಾರಯಿಕೆ.
             ಹಾಂ ಗೆಳತಿ. ಇದು ಖಂಡಿತ ಫಿಟ್ಟಿಂಗ್ ಇಡುವ ಬಗೆಯಲ್ಲ. ಆದರೂ ಹೇಳುತ್ತಿದ್ದೇನೆ ಕೇಳು. ನಾ ಕಂಡಂತೆ ನಿನ್ನ ಆ ಹುಡುಗನ ಒಂದಷ್ಟು ಗುಣಗಳು ನನ್ನರಿವಿಗೆ ಬಂದಿವೆ. ಅವನ್ನು ಹೇಳದಿದ್ದರೆ ಒಂದಷ್ಟು ದಿನಗಳ ಕಾಲ ಮನಸ್ಸಿಗೆ ಆರಾಧನೆಯಾಗಿದ್ದವಳಿಗೆ ಸತ್ಯವನ್ನು ಹೇಳದೇ ಬಿಟ್ಟೆನಲ್ಲ ಎನ್ನುವ ಬಾವ ಕಾಡದಿರುವುದಿಲ್ಲ. ಅವನು `ಶಿವ'ನಂತೆ ಕಡುಕೋಪಿ ನೆನಪಿರಲಿ. ಹಾಗೆಯೇ ಒಂದೆರಡು ಚಿಕ್ಕ ಚಿಕ್ಕ ಚಟಗಳೂ ಅಕ್ಕಪಕ್ಕದಲ್ಲಿವೆ. ಆದರೆ LOVE ಅಂದ್ರೆ ಆತನಿಗೆ ಜೀವ. ನನಗೆ ಮಾಡಿದಂತೆ ಅವನಿಗೆ ಮೋಸ ಮಾಡಬೇಡ. ಅವನಿಗೆ ಮೋಸ ಮಾಡಿದರೆ ಅವನು ನನ್ನಂತೆ ಸುಮ್ಮನಿರುವ ಭೂಪನಲ್ಲ. ಹಾಗಾಗಿ ಟೇಕ್ ಕೇರ್..
             ಕೊನೆಯದಾಗಿ ಹೇಳಲು ಬಹಳಷ್ಟು ವಿಷಯಗಳಿವೆ. ನೋಡ್ಲಿಕ್ಕೆ ಚನ್ನಾಗಿಲ್ಲ ಎಂದೋ ಅಥವಾ ಕೈಯಲ್ಲಿ ದುಡ್ಡಿಲ್ಲ ಎಂದೋ.. ಅಥವಾ ಕಥೆ-ಕವನಗಳು ಬದುಕು ಕಟ್ಟಿಕೊಡುವುದಿಲ್ಲ ಎಂದೋ ನೀನು ನನ್ನ ಪ್ರೀತಿಗೆ ಮೋಸ ಮಾಡಿರಬಹುದು. ಯಾಕ್ಹೀಗೆ ಅಂತ ನಾನು ಆ ಬಗ್ಗೆ ಕೇಳುವುದಿಲ್ಲ. ಆದರೆ ಒಂದ್ಮಾತು ನೆನಪಿನಲ್ಲಿ ಇಟ್ಟುಕೊ. ಬಹುಶಃ ಅವನೂ ಕೂಡ ನನ್ನಷ್ಟು ನಿಷ್ಕ್ಮಷವಾಗಿ ನಿನ್ನನ್ನು ಪ್ರೀತಿಸಿರಲಾರ, ಪ್ರೀತಿಸಲಾರ.
             ಆರೆ ನೋಡ್ತಿರು ಗೆಳತಿ,  ನಾನು ನಿನ್ನೆದುರಿಗೆ ಹೇಗೆ ಗೆಲುವುಗಳನ್ನು ಪಡೆಯುತ್ತ ಹೋಗ್ತೀನಿ ಅಂತ. ಕೊನೆಗೊಂದಿನ ಜಗತ್ತನ್ನೇ ನನ್ನ ಮುಷ್ಟಿಯಲ್ಲಿ ಹಿಡೀತಿನಿ. ಆಗ ನಿಂಗೆ ಅಯ್ಯೋ ಇಂಥವನನ್ನು ನಾನು ಪ್ರೀತಿಸುವ ನಾಟಕ ಮಾಡಿ ತಪ್ಪು ಮಾಡಿಬಿಟ್ಟೆ. ಅನ್ನೋ ಗಿಲ್ಟು ಕಾಡುತ್ತದಲ್ಲ ಆಗ ನಂಗೆ ಸಮಾಧಾನವಾಗುತ್ತದೆ. ನನ್ನ ತೆಕ್ಕೆಯಲ್ಲಿ ಇನ್ನೊಬ್ಬಳು ಸುಖವಾಗಿರುತ್ತಾಳೆ. ನಿನ್ನ ಮನಸ್ಸು ರೋಧಿಸುತ್ತಿರುತ್ತದೆ. ಆಗಲೇ ನನಗೆ ಖುಷಿಯಾಗುತ್ತದೆ. ನಿನ್ನ ಮೋಸಕ್ಕೆ ಪ್ರತಿಕಾರ ತೆಗೆದುಕೊಂಡ ನಿಟ್ಟುಸಿರು ಹೊರಬರುತ್ತದೆ.
           ಹುಂ.. ಆದರೂ ನಂಗ್ಯಕೋ ಮುಂಗಾರು ಮಳೆಯ ಪ್ರೀತಂ ತುಂಬಾ ನೆನಪಾಗ್ತಾ ಇದ್ದಾನೆ. ಅದರಲ್ಲೂ ಆತ ಹೇಳುವ `ತಲೆನ ಪರ ಪರ ಕೆರ್ಕೊಂಡ್ಬಿಟ್ಟೆ ಕಣ್ರಿ..' ಅನ್ನೋ ಡೈಲಾಗೇ ಮತ್ತೆ ಮತ್ತೆ ನೆನಪಿಗೆ ಬರ್ತಿದೆ.
           ಹುಂ ಹೋಗ್ಲಿಬಿಡು. ಸುಮ್ನೆ ತಲೆ ತಿಂತಾ ಇದ್ದೀನೋ. ನಾನೇ ಹಾಗೆ. ವಿಪರೀತ ಬರೆಯೋನು. ಬರೀತಾ ಬರೀತಾನೆ ಏನನ್ನು ಎಲ್ಲಿ ಹೇಳಬೇಕೋ ಅದನ್ನು ಇದ್ದ ಹಾಗೆ ಹೇಳ್ದೆ ಗೊಂದಲ ಗೊಂದಲ ಮಾಡಿಕೊಂಡು ತೊಳಲಾಡಿ ಬಿಡೋನು. ಬಹುಶಃ ನಿಂಗೆ ಪ್ರಪೋಸ್ ಮಾಡುವಾಗಲೂ ಅದೆಷ್ಟು ರೀತಿ ಯಾತನೆ-ರೋಮಾಂಚನ-ಭಯಗಳನ್ನು ಅನುಭವಿಸಿದ್ದೆನೋ. ಅದೆಲ್ಲ ಈಗ ನೆನಪೇ ಆಗುತ್ತಿಲ್ಲ.
           ಹಾಂ ಹುಡುಗಿ ನಾನು ನಿನ್ನ ಗೆಳೆತನವನ್ನು ಬಿಟ್ಟು ಬಿಡೋದಿಲ್ಲ. ಯಾಕೆ ಗೊತ್ತಾ ನಿನ್ನ ಜೊತೆಗೆ ಇದ್ದು ನಿನ್ನೆದುರೇ ಗೆಲುವುಗಳನ್ನು ನಂಗೆ ದಾಖಲಿಸುತ್ತ ಹೋಗಬೇಕಿದೆ. ನೀನು ಕೇಳಹುದು `ನನ್ನನ್ನು ನೀನು ಬಿಟ್ಟು ಬಿಡ್ತೀಯಾ. ಮುಂದೆ ಇನ್ನೊಬ್ಬಗಳನ್ನು ಲವ್ ಮಾಡ್ತೀಯಾ?' ಅಂತ. `ಇಲ್ಲ ನಾನು ಇನ್ನೊಬ್ಬಳನ್ನು ಖಂಡಿತವಾಗಿಯೂ ಲವ್ ಮಾಡೋಲ್ಲ. ಬದಲಾಗಿ ಒಳ್ಳೆಯ ಜಾಬ್ ಹಿಡಿದು, ಅಪ್ಪ ಅಮ್ಮ ಆಯ್ಕೆ ಮಾಡಿದ ಹುಡುಗಿಯನ್ನು ಮದ್ವೆ ಆಗ್ತೀನಿ. you know.. arrange marrage..!!'
           ಹೋ.. ನಗ್ತಾ ಇದ್ದೀಯಾ.. ನಗು ನಗು.. ಈಗ ನಗ್ತೀಯಾ. ನಂಗೆ ಕಣ್ಣೀರು ಬಂದ್ರೆ ನಿಂಗೆ ಖುಷಿ ಅಲ್ವಾ. ಬಿಡು. ಮುಂದೆ ನಾನು ಲೈಫಿನಲ್ಲಿ ನಗ್ತಾ ನಗ್ತಾ ಇರ್ತೀನಿ. ಆಗ ನೀನು ಅಳ್ತಾ ಇರ್ತೀಯಲ್ಲಾ ಆಗ ಆಗುತ್ತೆ ನನಗೆ ಖುಷಿ.
           ಕೊನೇದಾಗಿ ಹೇಳ್ತೀನಿ, ಈ ಬಗ್ಗೆ ನನ್ನ ಬಳಿ ಸಾರಿ ಕೇಳಬೇಡ. ಈಗ ಸಾರಿ ಕೇಳುವುದರಿಂದ ಯಾವುದೇ ಉಪಯೋಗವಿಲ್ಲ. ನೀನು ನನ್ನ ಹತ್ತಿರ ಬಂದು `ಸಾರಿ ಕಣೋ ನಂದು ತಪ್ಪಾಯ್ತು. ನಾ ನಿನ್ನೇ ಪ್ರೀತಿಸುತ್ತೀನಿ, still i love you...ಅಂದ್ರೂ ನಾನು ನಿನ್ನ ಪ್ರೀತಿಸೋದಿಲ್ಲ.
            ಮತ್ತೇನಿಲ್ಲ.. ನನ್ನಿಂದಾಗಿ ನಿನ್ನ ಬದುಕಿಗೆ ಅಷ್ಟೋ ಇಷ್ಟೋ ಗಾಸಿಪ್ಪು ಸಿಕ್ಕಿರಬಹುದು. ಅಥವಾ ಅದು ನಿನ್ನನ್ನು ಘಾಸಿ ಮಾಡಿರಬಹುದು. ಅದಕ್ಕಾಗಿ ನನ್ನದು ಸಾರಿ. ಇನ್ನು ನಾನು ನಿನ್ನ ಕನಸಲ್ಲಿ ಬಂದು ಕಾಡೋದಿಲ್ಲ. ನೀನೂ ಕೂಡ ಬಂದು ಕಾಡಬೇಡ. ಒಳ್ಳೆಯದಾಗಲಿ ನಿನಗೆ
ಕೊನೆಯದಾಗಿ `I HATE YOU'

ಇಂತಿ `ನಿನ್ನವ'ನಲ್ಲದ ದೋಸ್ತ
ಚಿರಂತ್

**
(ಇದನ್ನು ಬರೆದಿದ್ದು 1-09-2007ರಂದು ದಂಟಕಲ್ಲಿನಲ್ಲಿ)

Friday, July 18, 2014

ಪ್ರೀತಿ ಹುಟ್ಟಿದಾಗ

ಪ್ರೀತಿ ಹುಟ್ಟಿದಾಗ
ಹೃದಯ ನಲಿಯಿತು
ಮಿಡಿಯ ತೊಡಗಿತು
ಜೊತೆಗೆ ಕನಸ ಕಟ್ಟಿತು |

ಪ್ರೀತಿ ಮೂಡಿದಾಗ
ಎದೆ ಹಸಿರಾಯಿತು
ಬಾವ ಹೂವಾಯಿತು
ಮನವು ಕುಣಿದಾಡಿತು |

ಪ್ರೀತಿ ಕಣ್ದೆರೆದಾಗ
ತನುವು ಕೆಂಪಾಯಿತು
ದನಿಯು ಇಂಪಾಯಿತು
ಜೊತೆಗೆ ತಂಪಾಯಿತು |

ಪ್ರೀತಿ ಜನಿಸಿದಾಗ
ಕನಸು ಕಮಡಾಯಿತು
ನೋವು ನಲಿವಾಯಿತು
ಗೆಳತಿ ನಿನ್ನ ನೆಪಾಯಿತು. |

**

(ಈ ಕವಿತೆಯನ್ನು ಬರೆದಿರುವುದು 18-12-2005ರಂದು ದಂಟಕಲ್ಲಿನಲ್ಲಿ)

Wednesday, July 16, 2014

ಬೆಂಗಾಲಿ ಸುಂದರಿ-18


                 ಸುಂದರಬನ್ ಕಾಡಿನ ನಡುವೆ ತಿಂಡಿ ತಿಂದು, ಊಟ ಮುಗಿಸಿ ಕಬ್ಬಡ್ಡಿ ತಂಡದ ಆಟಗಾರರು ಕಾನನದಲ್ಲಿ ಸುತ್ತಾಡಲು ಆರಂಭಿಸಿದರು. ಅಲ್ಲೊಂದು ಕಡೆ ಯಾವುದೋ ಪ್ರಾಣಿ ಕೂಗಿದ ಸದ್ದು. ಎಲ್ಲರಿಗೂ ಅಚ್ಚರಿ ಹಾಗೂ ಶಾಕ್. ಭಯದೊಂದಿಗೆ ಅತ್ತ ಸಾಗಿದಾಗ ಬಿಳಿ ಹುಲಿಯೊಂದು ಮೊಸಳೆಯ ಜೊತೆಗೆ ಕಾದಾಡುತ್ತಿತ್ತು. ಡಿಸ್ಕವರಿ ಚಾನಲ್ಲಿನಲ್ಲಿಯೂ ಅಥವಾ ಇನ್ಯಾವುದೋ ಪ್ರಾಣಿ-ಪಕ್ಷಿಗಳ ಚಾನಲ್ಲಿನಲ್ಲಿಯೂ ನೋಡಿದ್ದವರಿಗೆ ನೇರಾನೇರ ಪ್ರಾಣಿಗಳ ಕಾಳಗ ಭಲೆ ಸಂತಸವನ್ನು ತಂದಿತು. ಖುಷಿಗೂ ಕಾರಣವಾಯಿತು. ಹುಲಿ-ಮೊಸಳೆಗಳು ಹದಪಟ್ಟಿಗೆ ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ. ಕಾದಾಡುತ್ತಲೇ ಇದ್ದವು. ಹುಲಿ ಹಾಗೂ ಮೊಸಳೆಯ ಮೈಯಿಂದ ರಕ್ತ ಧಾರೆಯಾಗಿ ಇಳಿಯುತ್ತಿತ್ತು. ಅವುಗಳಿದ್ದ ಜಾಗ ಮಣ್ಣು ರಾಡಿಯಾಗಿಬಿಟ್ಟಿತ್ತು. ನೀರಂತೂ ಕೆಂಪಾಗಿ ಹೋಗಿತ್ತು. ವಿನಯಚಂದ್ರ ಸೇರಿದಂತೆ ಹಲವರು ಈ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರಿಸಿಕೊಂಡರು. ಕೊನೆಗೊಮ್ಮೆ ಆ ಅರಣ್ಯದ ಗಾರ್ಡ್ ಒಬ್ಬರು ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಹುಲಿ ಹಾಗೂ ಮೊಸಳೆಯ ಕಾದಾಟವನ್ನು ತಪ್ಪಿಸಿದರು. ಮೊಸಳೆ ನೀರಿನೊಳಕ್ಕೆ ಸುಲಭವಾಗಿ ಇಳಿದು ಓಡಿ ಹೋದರೆ ಹುಲಿ ಮಾತ್ರ ಕೆಲಕಾಲ ಪ್ರವಾಸಿಗರನ್ನು, ಆಗಂತುಕರನ್ನು ಗುರುಗುಟ್ಟಿ ನೋಡುತ್ತ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎನ್ನುವ ಸನ್ನೆ ಮಾಡಿತೋ ಎಂಬಂತೆ  ಕಾಡಿನ ನಡುವೆ ಮರೆಯಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಕಬ್ಬಡ್ಡಿ ಆಟಗಾರರ ತಂಡ ಢಾಕಾಕ್ಕೆ ಮರಳುವ ವೇಳೆಗೆ ಸೂರ್ಯ ಸಂಜೆಯ ಕಡೆಗೆ ಮುಖಮಾಡಿದ್ದ.
          ಇತ್ತ ಢಾಕಾದಲ್ಲಿ ಹಿಂಸಾಚಾರ ಮೇರೆ ಮೀರಿತ್ತು. ಹೊಸ ಹೊಸ ಪ್ರದೇಶಗಳಿಗೆ ಹಿಂಸಾಚಾರ ಹಬ್ಬಿತ್ತು. ಕಬ್ಬಡ್ಡಿ ಆಟಗಾರರು ತಾವಿದ್ದ ಹೊಟೆಲಿಗೆ ತಲುಪುವುದೂ ದುಸ್ತರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲೊಂದು ಕಡೆಯಂತೂ ಹಿಂಸಾಚಾರ ನಡೆಸುತ್ತಿದ್ದವರಿಗೂ ಕಬ್ಬಡ್ಡಿ ಆಟಗಾರರಿದ್ದ ಬಸ್ಸಿಗೂ ಮುಖಾಮುಖಿಯಾಗಿ ಅವರು ಒಂದು ಕಲ್ಲನ್ನು ಬಸ್ಸತ್ತ ಬೀಸಿದ್ದರು. ಬೀಸದ ಕಲ್ಲಿಗೆ ಬಸ್ಸಿನದೊಂದು ಗಾಜು ಫಳ್ಳೆಂದು ಒಡೆದಿದ್ದೂ ಆಗಿತ್ತು. ಮತ್ತಷ್ಟು ಹತ್ಯಾರಗಳೊಂದಿಗೆ ಬಸ್ಸಿನತ್ತ ನುಗ್ಗಿ ಬರುತ್ತಿದ್ದಂತೆ ಕಬ್ಬಡ್ಡಿ ಆಟಗಾರರ ತಂಡಕ್ಕೆ ಜೀವವೆಲ್ಲ ಉಡುಗಿದಂತಾಯಿತು. ತಾವು ಖಂಡಿತ ಬದುಕಲಾರೆವು ಎಂದುಕೊಂಡರು. ಹೇಗಾದರೂ ಮಾಡಿ ಬದುಕಿದರೆ ಸಾಕು ಎಂದುಕೊಂಡರು. ಜೀವ-ಉಸಿರನ್ನು ಬಿಗಿ ಹಿಡಿದು ಬಸ್ಸಿನಲ್ಲಿ ಸದ್ದಿಲ್ಲದಂತೆ ಕುಳಿತಿದ್ದರು. ಬಸ್ಸಿನ ಡ್ರೈವರ್ ಹರಸಾಹಸ ಪಡುತ್ತಿದ್ದ. ಎದುರು ಬರುತ್ತಿದ್ದ ಹಿಂಸಾಚಾರಿಗಳ ಗುಂಪನ್ನು ತಪ್ಪಿಸಲು ಒದ್ದಾಡುತ್ತಿದ್ದುದು ಸ್ಪಷ್ಟವಾಗಿತ್ತು. ಕೊನೆಗೆ ವಾಹನದ ಡ್ರೈವರ್ ಹಾಗೂ ಬಸ್ಸಿನಲ್ಲಿದ್ದ ಇತರ ಬಾಂಗ್ಲಾದ ಅಧಿಕಾರಿಗಳು ಹಾಗೂ ಹೀಗೂ ಕಷ್ಟಪಟ್ಟು ಕಬ್ಬಡ್ಡಿ ಆಟಗಾರರನ್ನು ಹೊಟೆಲಿಗೆ ತಲುಪಿಸುವ ವೇಳೆಗೆ ಎಲ್ಲರಿಗೂ ಹೋದ ಜೀವ ಬಂದಂತಾಗಿತ್ತು.
          ಇನ್ನು ಇಂತಹ ದೇಶಕ್ಕೆ ಬರಲಾರೆವು. ಒಮ್ಮೆ ಜೀವ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು ಎಲ್ಲರೂ. ಸಾವಿನ ದವಡೆಗೆ ಸಿಲುಕಿ ವಾಪಾಸು ಬಂದ ಅನುಭವ. ಪ್ರತಿಯೊಬ್ಬರೂ ಭಯಗೊಂಡಿದ್ದರು. ಆದರೆ ಯಾರೂ ಎದುರಿಗೆ ತೋರಿಸಕೊಳ್ಳದೇ ಪೆಚ್ಚು ನಗೆಯನ್ನು ಬೀರುತ್ತಿದ್ದರು. ಹೊಟೆಲಿಗೇನೋ ಬಂದಾಗಿದೆ. ನಾಳೆ ಬೆಳಿಗ್ಗೆ ಎದ್ದು ಏರ್ ಪೋರ್ಟಿಗೆ ಹೋಗಬೇಕು. ಹೇಗೆ ಸಾಗುವುದೆಂಬ ಚಿಂತೆ ಎಲ್ಲರ ಮನದಲ್ಲಿ ಆವರಿಸಿತ್ತು. ಬೆಳಗಾಗುವ ವೇಳೆಗೆ ಹಿಂಸಾಚಾರ ತಹಬಂದಿಗೆ ಬರಬಹುದು ಎನ್ನುವ ಆಶಾವಾದ ಕೆಲವರಲ್ಲಿ ಮೂಡಿತ್ತು. ಭಾರತೀಯ ಕಬ್ಬಡ್ಡಿ ತಂಡದ ಜೊತೆಗೆ ಸುಂದರಬನ್ಸ್ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಮಧುಮಿತಾ ತನ್ನ ಅಪಾರ್ಟ್ ಮೆಂಟ್ ಗೆ ಹೇಗೆ ಸಾಗಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿಕೊಂಡಿದ್ದಳು. ವಿನಯಚಂದ್ರನ ಗಮನಕ್ಕೂ ಇದು ಬಂದಿತ್ತು. ಆತನಿಗೂ ಈಕೆಯನ್ನು ಅವಳ ಮನೆಗೆ ಹೇಗೆ ಕಳಿಸಬೇಕು ಎಂದುಕೊಂಡ.
         ತಂಡದ ಇತರರರಿಗೂ ವಿಷಯವನ್ನು ವಿನಯಚಂದ್ರ ತಿಳಿಸಿದ್ದ. ಎಲ್ಲರೂ ಏನು ಉತ್ತರ ನೀಡಬೇಕೆಂದು ತಿಳಿಯದೇ ಸುಮ್ಮನಾದರು. ಒಂದೆರಡು ಜನ ಹೊಟೆಲಿನಲ್ಲಿಯೇ ಉಳಿಯಲಿ ಎಂದರಾದರೂ ಬಗೆಹರಿಯಲಿಲ್ಲ. ಜಾಧವ್ ಅವರೂ ಈ ಕುರಿತು ಏನು ಹೇಳಬೇಕೋ ತಿಳಿಯದಾದರು. ಸೂರ್ಯನ್ ವಿನಯಚಂದ್ರನ ಬಳಿ `ನಾನು ರೂಮು ಬಿಟ್ಟು ಹೋಗುತ್ತೇನೆ. ನೀನು ಹಾಗೂ ಆಕೆ ಉಳೀರಪ್ಪಾ..' ಎಂದು ತುಂಟತನದಿಂದ ಮಾತನಾಡಿದ. `ಸುಮ್ಮನಿರು ಮಾರಾಯಾ..' ಎಂದು ಆತನನ್ನು ವಿನಯಚಂದ್ರ ಸುಮ್ಮನಿರಿಸುವ ವೇಳೆಗೆ ಸುಸ್ತೋ ಸುಸ್ತು. ಮಧುಮಿತಾ ಒಂದೇ ಸಮನೆ ಮನೆಗೆ ಪೋನ್ ಮಾಡಲು ಯತ್ನಿಸುತ್ತಿದ್ದಳು. ಆದರೆ ಮನೆಯ ಸಂಪರ್ಕ ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಲೇ ಮಧುಮಿತಾ ವ್ಯಾಕುಲಗೊಂಡಿದ್ದಳು. ಅಪಾರ್ಟ್ ಮೆಂಟಿನ ಅಕ್ಕಪಕ್ಕದವರಿಗೆ ಪೋನಾಯಿಸಬೇಕೆಂದರೆ ಅವರ ದೂರವಾಣಿಯೂ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಭಯಗೊಂಡಳು ಮಧುಮಿತಾ. ಮನೆಯವರಿಗೆ ಏನೋ ಆಗಿದೆ ಎನ್ನುವ ನಿರ್ಧಾರಕ್ಕೂ ಬಂದಳು. ವಿನಯಚಂದ್ರ ಆಕೆಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ.
          ಭಯದ ಕಾರಣದಿಂದಲೇ ಮಧುಮಿತಾಳಿಗೆ ರಾತ್ರಿಯ ಊಟ ಸೇರಲಿಲ್ಲ. ವಿನಯಚಂದ್ರ ಆಕೆಗೆ ಊಟ ಮಾಡಲು ಒತ್ತಾಯ ಮಾಡಿದ. ಆಕೆ ಮಾತ್ರ ಊಟ ಮಾಡದೇ ಅಳಲು ಆರಂಭಿಸಿದಳು. ತನ್ನ ಮನೆಯ ಬಳಿಯೇ ಸೈಕಲ್ ರಿಕ್ಷಾ ಹೊಡೆಯುತ್ತಿದ್ದ ಸಲೀಂ ಚಾಚಾನಿಗೆ ಪೋನ್ ಮಾಡಿದಳು ಮಧುಮಿತಾ. ಸಲೀಂ ಚಾಚಾ ಕೂಡಲೇ ಮಧುಮಿತಾಳ ಮನೆಗೆ ಹೋಗಿ ಬರುವ ಭರವಸೆ ನೀಡಿದ. ಆತನಿಂದ ಉತ್ತರ ಬರುವವರೆಗೂ ಮಧುಮಿತಾ ಚಡಪಡಿಸಿ ಹೋದಳು. ಕೆಲ ಹೊತ್ತಿನಲ್ಲಿಯೇ ಪೋನ್ ಮಾಡಿದ ಸಲೀಂ ಚಾಚಾ ಮಧುಮಿತಾಳ ಅಪಾರ್ಟ್ ಮೆಂಟ್ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ. ಮತ್ತೊಮ್ಮೆ ಗಾಬರಿಗೊಳ್ಳುವ ಪರಿಸ್ಥಿತಿ ಮಧುಮಿತಾಳದ್ದಾಯಿತು.
          ರಾತ್ರಿಯ ವೇಳೆ ಏನಾದರಾಗಲಿ ತಾನು ಅಪಾರ್ಟ್ ಮೆಂಟ್ ಗೆ ಹೊರಡುತ್ತೇನೆ ಎಂದು ಹೊರಟು ನಿಂತಳು ಮಧುಮಿತಾ. ಆಕೆಯನ್ನು ತಡೆಯುವ ವಿನಯಚಂದ್ರನ ಯತ್ನ ವಿಫಲವಾಯಿತು. ಕೊನೆಗೆ ಆಕೆಯ ಜೊತೆಗೆ ತಾನೂ ಹೋಗುವುದಾಗಿ ನಿರ್ಧರಿಸಿದ. ತನ್ನ ನಿರ್ಧಾರವನ್ನು ತಂಡದ ಇತರರಿಗೆ ಹೇಳಿದರೆ ಖಂಡಿತವಾಗಿಯೂ ಆತನನ್ನು ಹೋಗಲು ಅವಕಾಶ ನೀಡುವುದಿಲ್ಲ ಎನ್ನುವುದು ಖಾತ್ರಿಯಿತ್ತು. ಕೊನೆಗೆ ಮಧುಮಿತಾಳ ಬಳಿ ತಾನೂ ಬರುತ್ತೇನೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತಿಳಿಸಿದ. ಆಕೆ ಮೊದ ಮೊದಲು ವಿರೋಧಿಸಿದಳಾದರೂ ಕೊನೆಗೆ ಒಪ್ಪಿಕೊಂಡಳು.
                  ಯಾರಿಗೆ ಗೊತ್ತು ಮತ್ತೆ ವಾಪಾಸು ಬರಲಿಕ್ಕಾಗುತ್ತದೆಯೋ ಎಲ್ಲವೋ. ಬಾಂಗ್ಲಾದೇಶದಲ್ಲಿಯೇ ಇರುವ ಅನಿವಾರ್ಯತೆ ಬಂದರೂ ಬರಬಹುದು. ಯಾವುದಕ್ಕೂ ಸಜ್ಜಾಗಿಯೇ ಹೋಗಬೇಕು ಎಂದು ಆಲೋಚಿಸಿದ. ವಿನಯಚಂದ್ರ ಬಾಂಗ್ಲಾದೇಶದಲ್ಲಿ ಅಗತ್ಯವೆನ್ನಿಸುವ ಕೆಲವೇ ಕೆಲವು ವಸ್ತುಗಳನ್ನು ತೆಗೆದುಕೊಂಡ. ತಾನು ಭಾರತದವನು ಎಂಬುದಕ್ಕೆ ಸಾಕ್ಷಿಯಾಗಿ ಒಂದು ಗುರುತಿನ ಚೀಟಿಯನ್ನೂ ತೆಗೆದುಕೊಂಡ. ಉಳಿದ ವಸ್ತುಗಳನ್ನು ರೂಮಿನಲ್ಲಿಯೇ ಬಿಟ್ಟ. ಕೊನೆಗೆ ಸೂರ್ಯನ್ ಹಾಗೂ ತನ್ನ ಕಬ್ಬಡ್ಡಿ ತಂಡದ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದು ತಾನು ಮಧುಮಿತಾಳೊಂದಿಗೆ ತೆರಳುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಮರಳುತ್ತೇನೆ. ಇಲ್ಲವಾದರೆ ನೀವೆಲ್ಲ ಭಾರತಕ್ಕೆ ಮರಳಿ. ನಾನು ಶತಪ್ರಯತ್ನದಿಂದ ಬಂದು ತಲುಪುತ್ತೇನೆ ಎಂದು ಬರೆದಿದ್ದ. ಸದ್ದಿಲ್ಲದಂತೆ ಸೂರ್ಯನ್ ಮಲಗಿದ್ದ ಜಾಗದಲ್ಲಿ ಇಟ್ಟು ಹೊರಟ. ಮಧುಮಿತಾ ಹಿಂಬಾಲಿಸಿದಳು.
           ಕಗ್ಗತ್ತಲ ರಾತ್ರಿಯಲ್ಲಿ ಮಧುಮಿತಾ ಹಾಗೂ ವಿನಯಚಂದ್ರ ಢಾಕಾದ ಬೀದಿಗಳಲ್ಲಿ ನಡೆಯುತ್ತಿದ್ದರೆ ಬೇಕೆಂದರೂ ಇನ್ನೊಂದು ಜೀವಿ ಅಲ್ಲಿರಲಿಲ್ಲ. ಎಲ್ಲ ನಗರಗಳಂತೆ ರಾತ್ರಿಯ ವೇಳೆ ಅಬ್ಬರದಿಂದ ಓಡಾಡುವ ವಾಹನಗಳು ಅಲ್ಲೊಂದು ಇಲ್ಲೊಂದು ಇದ್ದವು. ಆಗೊಮ್ಮೆ ಈಗೊಮ್ಮೆ ಪೊಲೀಸ್ ಸೈರನ್ ಕೇಳಿಸುತ್ತಿತ್ತು. ದಾರಿಯ ತುಂಬೆಲ್ಲ ಯಾವುದೋ ಮೂಲೆಯಲ್ಲಿ ನಾಯಿಯೊಂದು ಬೊಗಳಿ ಅರಚುತ್ತಿತ್ತು. ಮಧುಮಿತಾಳಿಗೆ ಭಯವಾಗಿ ಥಟ್ಟನೆ ವಿನಯಚಂದ್ರನ ಕೈ ಹಿಡಿದುಕೊಂಡಳು. ವಿನಯಚಂದ್ರ ಒಮ್ಮೆ ಬೆಚ್ಚಿದನಾದರೂ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಡೆಯಹತ್ತಿದ.
           ಅರೇ ಇಳಿಸಂಜೆಯ ವೇಳೆ ಹಿಂಸಾಚಾರದಿಂದ ಉರಿಯುತ್ತಿದ್ದ ಊರು, ಬೀದಿ ಇದೇನಾ ಎನ್ನುವಷ್ಟು ಶಾಂತವಾಗಿತ್ತು ಆ ಬೀದಿ. ನಿರ್ಮಾನುಷವಾಗಿದ್ದ ಕಾರಣ ಅವ್ಯಕ್ತ ಭೀತಿ ಗೂಡು ಕಟ್ಟಿಕೊಂಡಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಬೀದಿ ದೀಪಗಳು ಮಿಣುಕುತ್ತಿದ್ದವು. ನೇರ ಹಾದಿಯಲ್ಲಿ ಸಾಗಲು ಭಯವಾಯಿತು. ಬಳಸು ಹಾದಿಯನ್ನು ಹಿಡಿದು ಸಾಗಿದರು. ಮಧುಮಿತಾಳಿಗೆ ಢಾಕಾ ಪರಿಚಿತವಾಗಿದ್ದ ಕಾರಣ ಅವಳನ್ನೇ ಅನುಸರಿಸುತ್ತಿದ್ದ ವಿನಯಚಂದ್ರ. ಯಾವು ಯಾವುದೋ ಕಡೆಗಳಲ್ಲಿ ತಿರುಗುತ್ತ, ಹುಡುಕುತ್ತ ಅವರಿಬ್ಬರೂ ಸಾಗುತ್ತಿದ್ದರೆ ಅತಿಯಾಗಿ ಸುರೆ ಕುಡಿದ ದೇವತೆಗಳು ಸ್ವರ್ಗದ ಯಾವುದೋ ಮೂಲೆಯಲ್ಲಿ ಅಲೆದಾಡುತ್ತಿದ್ದಂತೆ ಅನ್ನಿಸುತ್ತಿತ್ತು. ಬಾನಂಚಿನಲ್ಲಿ ಬಿರು ಬೇಸಿಗೆಯಲ್ಲಿ ಅಪರೂಪಕ್ಕೆ ಬಂದ ಮೋಡದ ಜೋಡಿ ಎತ್ತ ಸಾಗಬೇಕೆಂದು ತಿಳಿಯದೇ ಗಾಳಿ ಸುಳಿದಾಡಿದ ಕಡೆಯಲ್ಲಿ ಸಾಗಿದಂತೆ ಅನ್ನಿಸುತ್ತಿತ್ತು. ಭಯದ ನಡುವೆಯೂ ಮಧುಮಿತಾಳಿಗೆ ವಿನಯಚಂದ್ರನ ಸಾನ್ನಿಧ್ಯ ಖುಷಿ ಕೊಟ್ಟಿತ್ತು.
            ಅದ್ಯಾವುದೋ ಸರ್ಕಲ್ಲಿನ ಮೂಲೆಯಲ್ಲಿ ನಿಂತು ಮಧುಮಿತಾ ಸಲೀಂ ಚಾಚಾನಿಗೆ ಪೋನಾಯಿಸಿದಳು. ಆತನ ಬಳಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ತಮ್ಮನ್ನು ಅಪಾರ್ಟ್ ಮೆಂಟಿನ ಬಳಿ ಕರೆದೊಯ್ಯುವಂತೆ ಹೇಳಿದ್ದಳು. ಅದಕ್ಕೆ ಸಲೀಂ ಚಾಚಾ ಯಾವುದೋ ಪ್ರದೇಶಕ್ಕೆ ಬರುವಂತೆ ಹೇಳಿದ. ಮಧುಮಿತಾ ಹಾಗೂ ವಿನಯಚಂದ್ರ ಅತ್ತ ಕಡೆ ಹೆಜ್ಜೆ ಹಾಕಿದರು. ಅದ್ಯಾವುದೋ ಮೂಲೆಯಲ್ಲಿ ಗುಂಪೊಂದು ಕೇಕೆ ಹಾಕುತ್ತ ನಗುತ್ತಿತ್ತು. ಇದನ್ನು ಕೇಳಿದ್ದೇ ವಿನಯಚಂದ್ರ ಹಾಗೂ ಮಧುಮಿತಾ ದೊಡ್ಡ ಕಂಪೌಂಡಿನ ಹಿಂದಕ್ಕೆ ಸರಿದು ಅಡಗಿ ಕೂತರು. ಆ ಗುಂಪು ಹತ್ತಿರಕ್ಕೆ ಬಂದಂತೆ ಭಾಸವಾಯಿತು. ಮಾತುಗಳು ದೊಡ್ಡದಾಗುತ್ತಿದ್ದವು. ಭಯದಿಂದ ತತ್ತರಿಸಿದ ಮಧುಮಿತಾ ವಿನಯಚಂದ್ರನನ್ನು ತಬ್ಬಿಹಿಡಿದು ಕುಳಿತಿದ್ದಳು. ಮಧುಮಿತಾ ತಬ್ಬಿಕೊಂಡಿದ್ದರಿಂದ ಒಮ್ಮೆ ವಿನಯಚಂದ್ರ ಕಸಿವಿಸಿಗೊಂಡಿದ್ದರೂ ನಂತರ ತುಂಟತನದಿಂದ ಆಕೆಯ ಕೆನ್ನೆಯ ಮೇಲೊಂದು ಮುತ್ತನ್ನು ಕೊಟ್ಟು ಕಣ್ಣು ಹೊಡೆದಿದ್ದ. ಮಧುಮಿತಾ ಭಯದ ನಡುವೆಯೂ ನಾಚಿಕೊಂಡಿದ್ದಳು. ನಿಧಾನವಾಗಿ ಆ ಗುಂಪಿನ ಧ್ವನಿ ದೂರಾದಾಗ ನಿರಾಳರಾದರು. ಮಧುಮಿತಾ ಕೂಡ ಮುತ್ತಿಗೆ ಪ್ರತಿಯಾಗಿ ಮುತ್ತನು ನೀಡಿ ಸರಸರನೆ ಹೆಜ್ಜೆ ಹಾಕಿದ್ದಳು. ವಿನಯಚಂದ್ರ ಎಳೆದು ಆಕೆಯನ್ನು ತಬ್ಬಿಕೊಂಡಿದ್ದ. ಆಕೆ ತುಂಟತನದಿಂದ ಕೊಸರಿಕೊಂಡು ಮುಂದಕ್ಕೆ ಸಾಗಿದ್ದಳು. ವಿನಯಚಂದ್ರ ಚಿಗರೆಯ ಮರಿಯಂತೆ ಕುಣಿಯುತ್ತ ಸಾಗಿದ್ದ.
           ಸಲೀಂ ಚಾಚಾ ಹೇಳಿದ್ದ ಜಾಗಕ್ಕೆ ಬರುವ ವೇಳೆಗೆ ಇನ್ನೂ ಅರ್ಧಗಂಟೆ ಬೇಕಾಯಿತು. ನೇರವಾಗಿ ಬರಬಹುದಾಗಿದ್ದ ದಾರಿಯಲ್ಲಿ ಅಪಾಯವಿರಬಹುದೆಂದು ಅರಿತು ಸುತ್ತು ಬಳಸಿಯೂ ಅಥವಾ ಇನ್ನಾವುದೋ ಮಾರ್ಗವನ್ನು ಹಿಡಿದೋ ಬಂದಿದ್ದರು. ಬೀದಿಯ ಕೊನೆಯಲ್ಲಿ ಜನರ ಸುಳಿವು ಕಂಡುಬಂದ ತಕ್ಷಣ ಇವರೂ ಅಡಗುತ್ತ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದರು. ನಡು ನಡುವೆ ರೊಮ್ಯಾಂಟಿಕ್ ಆಗುತ್ತ, ಮುತ್ತಿನ ವಿನಿಮಯ ಮಾಡಿಕೊಳ್ಳುತ್ತಲೇ ಸಾಗಿದ್ದರು. ಬದು ಕತ್ತಿಯ ಮೇಲಿನ ನಡಿಗೆಯಾಗಿದೆ. ಆದರೆ ಇದು ಹಿತವಾಗಿದೆ ಎಂದುಕೊಂಡ ವಿನಯಚಂದ್ರ.
          ಸಲೀಂ ಚಾಚ ಬಹು ಹೊತ್ತಿನ ನಂತರ ಬಂದ. ಆತ ಬರುವುದು ವಿಳಂಬವಾಗುತ್ತಿದ್ದಂತೆ ಬರುತ್ತಾನೋ ಇಲ್ಲವೋ ಎನ್ನುವ ಅನುಮಾನವೂ ಒಂದು ಕ್ಷಣ ಕಾಡದೇ ಇರಲಿಲ್ಲ. ಆ ಸ್ಥಳದಿಂದ ಮಧುಮಿತಾಳಿದ್ದ ಅಪಾರ್ಟ್ ಮೆಂಟ್ ಅನಾಮತ್ತು 8 ಕಿ.ಮಿ ದೂರದಲ್ಲಿತ್ತು. ಸಲೀಂ ಚಾಚಾ ಬರದಿದ್ದರೆ ಅಲ್ಲಿಗೆ ತೆರಳುವುದು ಹೇಗೆ ಎನ್ನುವ ಆಲೋಚನೆ ಮಧುಮಿತಾಳ ಮನಸ್ಸಿನಲ್ಲಿ ಮೂಡದೇ ಇರಲಿಲ್ಲ. ಕೊನೆಗೊಮ್ಮೆ ಸಲೀಂ ಚಾಚಾ ಬಂದ. ಸಲೀಂ ಚಾಚಾನ ಮೈತುಂಬ ರಕ್ತದ ಕಲೆಗಳಾಗಿದ್ದವು. ಹೌಹಾರಿದ ವಿನಯಚಂದ್ರ ಹಾಗೂ ಮಧುಮಿತಾ ಸಲೀಂ ಚಾಚಾನ ಬಳಿ ವಿಚಾರಿಸಿದಾಗ `ದಾರಿಯಲ್ಲಿ ಬರುವಾಗ ಒಂದು ಕುಟಂಬದ ಮೇಲೆ ಹಲ್ಲೆ ನಡೆದಿತ್ತು. ಅವರನ್ನು ರಕ್ಷಿಸಿ ಬಂದೆ. ಅದಕ್ಕೆ ಹೀಗಾಗಿದೆ..' ಎಂದು ಉತ್ತರಿಸಿದಾಗ ನಿರಾಳರಾದರಷ್ಟೆ ಅಲ್ಲದೇ ಸಲೀಂ ಚಾಚಾನ ಬಗ್ಗೆ ಖುಷಿಯನ್ನೂ ಪಟ್ಟರು. ಮಧುಮಿತಾ ಸಲೀಂ ಚಾಚಾನಿಗೆ ವಿನಯಚಂದ್ರನನ್ನು ಪರಿಚಯಿಸಿದಳು. ಸಲೀಂ ಚಾಚಾ ಬೆರಗುಗಣ್ಣಿನಿಂದ ವಿನಯಚಂದ್ರನನ್ನು ನೋಡಿದ. ವಿನಯಚಂದ್ರ ಚಾಚಾನಿಗೆ ನಮಸ್ಕರಿಸಲು ನೋಡಿದಾಗ `ಜೀತೆ ರಹೋ ಬೇಟಾ..' ಎಂದು ಹರಸಿದ.
            ಸಲೀಂ ಚಾಚಾನ ಬಳಿ ತನ್ನ ಅಪಾರ್ಟ್ ಮೆಂಟಿನ ಕುರಿತು ವಿಚಾರಿಸಿದಾಗ `ಆ ಪ್ರದೇಶದಲ್ಲಿ ಇನ್ನೂ ಹಿಂಸಾಚಾರ ನಡೆಯುತ್ತಲೇ ಇದೆ. ಉಳಿದ ಕಡೆಗಳಲ್ಲಿ ಹಿಂಸಾಚಾರ ಹಬ್ಬದಂತೆ ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರೂ ಆ ಪ್ರದೇಶದಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ನಾನು ಹಲವು ಸಾರಿ ಅಲ್ಲಿಗೆ ಹೋಗಲು ಪ್ರಯತ್ನ ಪಟ್ಟಿದ್ದಿದೆ. ಆದರೆ ಸಾಧ್ಯವಾಗಲಿಲ್ಲ..' ಎಂದ.
            `ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗು ಚಾಚಾ.. ಯಾಕೋ ಮನೆಯವರನ್ನು ನೋಡಬೇಕು ಎನ್ನಿಸುತ್ತಿದೆ..' ಎಂದು ಮಧುಮಿತಾ ಹೇಳಿದಾಗ ಚಾಚಾನಿಗೆ ಇಲ್ಲ ಎನ್ನಲಾಗಲಿಲ್ಲ.
            ಮಧುಮಿತಾಳಿಗೆ ಮನೆಯೇಕೋ ಬಹಳ ನೆನಪಾಗುತ್ತಿತ್ತು. ಅಪ್ಪ, ಅಮ್ಮ ಹಾಗೂ ಮನೆಯ ಸದಸ್ಯರು ಬಹಳ ಕಾಡುತ್ತಿದ್ದರು. ಅವರಿಗೇನೋ ಆಗಿದೆ ಎಂದು ಒಳಮನಸ್ಸು ಹೇಳಿತ್ತಿತ್ತು. ಜೊತೆಯಲ್ಲಿಯೇ ಏನೂ ಆಗದಿರಲಿ ದೇವರೆ ಎಂದೂ ಮನಸ್ಸು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಿತ್ತು. ಸಲೀಂ ಚಾಚಾ ತನ್ನ ಸೈಕಲ್ ರಿಕ್ಷಾ ಮೇಲೆ ಕುಳ್ಳಿರಿಸಿಕೊಂಡು ಅವರನ್ನು ಕರೆದೊಯ್ಯತೊಡಗಿದ. ವಿನಯಚಂದ್ರನಿಗೆ ಮತ್ತೆ ಕಸಿವಿಸಿ. 75 ವರ್ಷ ವಯಸ್ಸಾಗಿದ್ದ ಸಲೀಂ ಚಾಚಾ ಸೈಕಲ್ ತುಳಿಯುತ್ತಿದ್ದರೆ ಹರೆಯದಲ್ಲಿದ್ದ ನಾವು ಸೈಕಲ್ಲಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಿದ್ದೇವಲ್ಲ.. ಎನ್ನಿಸಿತು. ಚಾಚಾನ ಬಳಿ `ನಾನು ಸೈಕಲ್ ತುಳಿಯಲೇ..' ಎಂದ. ಚಾಚಾ ಅದಕ್ಕೆ ಪ್ರತಿಯಾಗಿ `ಯಾಕೆ ಬೇಟಾ.. ಏನಾಯಿತು.. ನಾನು ಸೈಕಲ್ ತುಳಿಯುವುದು ನಿನಗಿಷ್ಟವಿಲ್ಲವೇ..?' ಎಂದು ಕೇಳಿದ್ದ. ಚಿಕ್ಕಂದಿನಲ್ಲಿ ಅತಿಯಾಗಿ ಮುದ್ದು ಮಾಡುತ್ತಿದ್ದ ಅಜ್ಜನ ನೆನಪಾಗಿತ್ತು ವಿನಯಚಂದ್ರನಿಗೆ.
           `ಇಲ್ಲ ಚಾಚಾ.. ನೀವು ಸೈಕಲ್ ತುಳೀತಿದ್ರೆ.. ನಾವು ಕುಳಿತಿರೋದು.. ನನಗೆ ಸರಿ ಕಾಣುತ್ತಿಲ್ಲ.. ವಯಸ್ಸಾದವರು ನೀವು.. ಬನ್ನಿ ಕುಳಿತುಕೊಳ್ಳಿ.. ನಾನು ಸೈಕಲ್ ತುಳಿಯುತ್ತೇನೆ..'
            `ನಯಿ ಬೇಟಾ.. ಸೈಕಲ್ ತುಳಿದು ಜೀವನ ನಡೆಸುವುದು ನಮ್ಮ ವೃತ್ತಿ. ಹೇಗೆ ಇರಲಿ,.. ಎಂತದ್ದೇ ಆಗಿರಲಿ ನಾವು ಸೈಕಲ್ ತುಳಿದೇ ಜೀವಿಸುತ್ತೇವೆ. ನನಗೆ ತೊಂದರೆಯಿಲ್ಲ ಬೇಟಾ.. ನೀನು ಆರಾಮಾಗಿ ಕುಳಿತುಕೋ..'
             `ಇಲ್ಲ ಚಾಚಾ.. ನಾನು ಕಬ್ಬಡ್ಡಿ ಆಟಗಾರ.. ನನಗೂ ಸೈಕಲ್ ತುಳಿದು ಗೊತ್ತಿದೆ. ಬನ್ನಿ ನಾನೊಮ್ಮೆ ತುಳಿಯುತ್ತೇನೆ..' ಎಂದವನೇ ವಿನಯಚಂದ್ರ ಸಲೀಂ ಚಾಚಾನನ್ನು ಸೈಕಲ್ಲಿನಿಂದ ಇಳಿಸಿ ತಾನು ಸೈಕಲ್ ಹತ್ತಿಯೇ ಬಿಟ್ಟ. ಅನಿವಾರ್ಯವಾಗಿ ಚಾಚಾ  ತಾನು ತುಳಿಯುತ್ತಿದ್ದ ಸೈಕಲ್ಲಿನಲ್ಲಿ ಪ್ರಯಾಣಿಕನಾಗಬೇಕಾಯಿತು. ಮೊದ ಮೊದಲಿಗೆ ವಿನಯಚಂದ್ರನಿಗೆ ಸೈಕಲ್ ರಿಕ್ಷಾ ತುಳಿಯುವುದು ಕಷ್ಟವಾದರೂ ಕೆಲವೇ ಮಾರುಗಳ ದೂರ ಹೋಗುವಷ್ಟರಲ್ಲಿ ಹದ ಸಿಕ್ಕಿತು. ಸಲೀಂ ಚಾಚಾ ಮಾತಿಗೆ ತೊಡಗಿದ್ದ. ವಿನಯಚಂದ್ರನ ಬಳಿ ಆತನ ಪೂರ್ವಾಪರಗಳನ್ನೆಲ್ಲ ವಿಚಾರಿಸಿದ. ಮಧುಮಿತಾ ಹೇಳಿದಳು. ಕೊನೆಗೆ ತಾನು ವಿನಯಚಂದ್ರನನ್ನು ಪ್ರೀತಿಸುತ್ತಿರುವ ವಿಷಯವನ್ನೂ ತಿಳಿಸಿದಾಗ ಸಲೀಂ ಚಾಚಾ ಸಂತಸಪಟ್ಟರು. ವಿನಯಚಂದ್ರ ಭಾರತದವನೆಂದು ತಿಳಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ತಾನೂ ಭಾರತದಲ್ಲಿದ್ದೆ.. ಹೈದರಾಬಾದ್ ತನ್ನ ಊರಾಗಿತ್ತು. ಚಿಕ್ಕಂದಿನಲ್ಲಿಯೇ ಮನೆಯಿಂದ ಓಡಿ ಬಂದಿದ್ದೆ. ಢಾಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಸ್ವಾತಂತ್ರ್ಯ ಸಿಕ್ಕಿತ್ತು. ಬಾಂಗ್ಲಾದೇಶ ಭಾರತದಿಂದ ಬೇರೆಯಾಗಿತ್ತು. ನನಗೆ ಭಾರತಕ್ಕೆ ಮರಳಲು ಸಾಧ್ಯವೇ ಆಗಿಲ್ಲ ಎಂದೂ ಹೇಳಿದ.
             ವಿನಯಚಂದ್ರ ಈ ಕುರಿತು ವಿಚಾರಿಸಿದಾಗ `ಹತ್ತೋ ಹದಿನೈದೋ ವರ್ಷದವನಿದ್ದಾಗ ಮನೆಯಲ್ಲಿ ತಂದೆ ತಾಯಿಗಳ ಜೊತೆ ಜಗಳವಾಡಿ ಓಡಿ ಬಂದಿದ್ದೆ. ಆದರೆ ನಂತರ ಹೈದರಾಬಾದಿಗೆ ಹೋಗಲು ಇಂದಿನವರೆಗೂ ಆಗಿಲ್ಲ. ಬಹುಶಃ ಮುಂದೂ ಆಗುವುದಿಲ್ಲವೇನೋ.. ನನಗಿಲ್ಲಿ ಮನೆ, ಮಡದಿ ಮಕ್ಕಳು ಎಲ್ಲ ಇದ್ದಾರೆ. ಈ ಬೇಟಿ ಮಧು ಇದ್ದಾಳಲ್ಲ.. ಒಂದಿನ ಸೈಕಲ್ ತುಳಿದು ಸುಸ್ತಾಗಿತ್ತು. ಇಳಿಸಂಜೆಯ ಸಮಯದಲ್ಲಿ ಅದ್ಯಾರೋ ನನ್ನ ಸೈಕಲ್ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನನ್ನನ್ನು ಬೀಳಿಸಿದ್ದರು. ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದಳು. ಅಂದಿನಿಂದ ನನಗೆ ಮಧು ಮಗಳಂತೆಯೇ ಆಗಿದ್ದಾಳೆ.. ' ಎಂದ. ಮಧುಮಿತಾ ಏನೆಲ್ಲ ಮಾಡಿದ್ದಾಳಲ್ಲ.. ಎಂದುಕೊಂಡ ವಿನಯಚಂದ್ರ.
           ಚಾಚಾ ವಿನಯಚಂದ್ರನ ಮನೆಯ ಬಗ್ಗೆ ವಿಚಾರಿಸಿದಾಗ ವಿನಯಚಂದ್ರ ವಿವರಿಸಿ ತನ್ನ ತಾತನನ್ನು ನೀವು ನೆನಪು ಮಾಡಿದಿರಿ ಎಂದು ತಿಳಿಸಿದ. ಸಲೀಂ ಚಾಚಾ ತನ್ನ ಉದ್ದನೆಯ ಬಿಳಿ ಗಡ್ಡವನ್ನು ನೀವಿಕೊಂಡು ಪುಕು ಪುಕು ನಕ್ಕರು. ಅಷ್ಟರಲ್ಲಿ ಇವರು ಸಾಗುತ್ತಿದ್ದ ದಾರಿಯಲ್ಲಿ ಹತ್ತೋ ಹದಿನೈದೋ ಜನರಿದ್ದ ಗುಂಪು ಗಲಾಟೆ ಮಾಡುತ್ತ ಬರುತ್ತಿದ್ದು ಕಂಡು ಬಂದಿತು. ಸಲೀಂ ಚಾಚಾ ಇದ್ದಕ್ಕಿದ್ದಂತೆ ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಸೈಕಲ್ಲಿನಿಂದ ಇಳಿಸಿ ಹಿಂದಕ್ಕೆ ಕುಳ್ಳಿರಿಸಿ ತಾನು ಸೈಕಲ್ ಹೊಡೆಯಲು ಆರಂಭಿಸಿದ. ಆ ಗುಂಪು ಹತ್ತಿರಕ್ಕೆ ಬಂದಿತು. ವಿನಯಚಂದ್ರನಿಗೆ ಮುಂದೇನಾಗುತ್ತದೆಯೋ ಎನ್ನುವ ಭಯ. ಹತ್ತಿರ ಬಂದ ಗುಂಪು ಸಲೀಂ ಚಾಚಾನನ್ನು ನಿಲ್ಲಿಸಿ `ಯಾರು ನೀವು.. ಎಲ್ಲಿಗೆ ಸಾಗುತ್ತಿದ್ದೀರಿ.. ಯಾರಿದ್ದಾರೆ ಗಾಡಿಯಲ್ಲಿ ..' ಎಂದೇನೋ ವಿಚಾರಿಸಿದರಿರಬೇಕು. ಸಲೀಂ ಚಾಚಾ ಅದೇನು ಹೇಳಿದರೂ.. ಒಬ್ಬಾತ ಬಂದು ಗಾಡಿಯಲ್ಲಿ ಇಣುಕಿನೋಡಿದ. ವಿನಯಚಂದ್ರನಿಗೆ ಮಾತು ಹೊರಡಲಿಲ್ಲ. ಗಾಡಿಯಲ್ಲಿ ಇಣುಕುತ್ತಿದ್ದವನ ಮೇಲೆ ಮುಗಿಬಿದ್ದು ನಾಲ್ಕು ಏಟು ಹಾಕಿಬಿಡಲೇ ಎಂದುಕೊಂಡನಾಡದೂ ಸುಮ್ಮನಾದ. ಗಾಡಿಯಲ್ಲಿ ಇಣುಕಿ ನೋಡಿದವನು ಸುಮ್ಮನೇ ಹೋದ. ಮನಸ್ಸು ನಿರಾಳವಾಯಿತು. ಸೈಕಲ್ ರಿಕ್ಷಾ ಮುಂದಕ್ಕೆ ಸಾಗಿತು.

(ಮುಂದುವರಿಯುತ್ತದೆ.)

Monday, July 14, 2014

ಗಣಪಜ್ಜಿಯ ಹಾಡುಗಳು-3

        ಗಣಪಜ್ಜಿಯ ಕುರಿತು ಎರಡು ಕಂತುಗಳನ್ನು ಈಗಾಗಲೇ ಬರೆದಿದ್ದೇನೆ. ಮೂರನೇ ಕಂತು ಬರೆಯದಿದ್ದರೆ ಮನಸ್ಸು ತಡೆಯಲಾರದೇನೋ ಎಂದುಕೊಂಡು ಬರೆಯಲು ಕುಂತಿದ್ದೇನೆ. ಗಣಪಜ್ಜಿಯ ಬಾಯಿಂದ ಕೇಳಿದ ಹಾಡುಗಳನ್ನು ನಾನು ಹಾಗೂ ಸಂಜಯ ಬರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದೆನಷ್ಟೆ. ಇನ್ನೂ ಹಲವು ಹಾಡುಗಳು ನನ್ನಲ್ಲಿ ಬಾಕಿ ಉಳಿದುಬಿಟ್ಟಿವೆ. ಮೊನ್ನೆ ತಾನೆ ಸಂಜಯ ಸಿಕ್ಕಿದ್ದ. ನಾನು ಗಣಪಜ್ಜಿಯ ಹಾಡುಗಳನ್ನು ಬ್ಲಾಗುಗಳ ಮೂಲಕ ಬರೆದ ವಿಷಯವನ್ನು ಅವನ ಮುಂದಿಟ್ಟೆ. ಖಂಡಿತ ಒಳ್ಳೆಯ ಕೆಲಸ. ಅದನ್ನು ಮುದ್ದಾಂ ಮಾಡು ಎಂದು ಹಾರೈಸಿದ್ದಲ್ಲದೇ ತನ್ನ ಬಳಿ ಇರುವ ಹಾಡಿನ ಸಂಗ್ರಹವನ್ನೂ ತಂದುಕೊಡುವ ಭರವಸೆಯನ್ನು ನೀಡಿದ್ದಾನೆ. ಆತನಿಗೆ ಖಂಡಿತವಾಗಿಯೂ ಧನ್ಯವಾದ ಹೇಳಲೇಬೇಕು.
          ಗಣಪಜ್ಜಿಯಿಂದ ಬರೆದುಕೊಂಡು ಬಂದ ಹಾಡುಗಳಲ್ಲಿ ಹೆಚ್ಚಿನವು ತಮಾಷೆ ಹಾಗೂ ಪೋಲಿಯ ಹಾಡುಗಳು. ಆದರೂ ನಡು ನಡುವೆ ಒಂದೆರಡು ಪುರಾಣದ ಹಾಡುಗಳೂ ಇವೆ. ದೊಡ್ಡ ಹಬ್ಬದಲ್ಲಿ ಗೋವನ್ನು ಬಿಟ್ಟಿದ್ದು, ಗೋವಿನ ಬಳಿ ಮಾತನಾಡಿದ್ದು ಸೇರಿದಂತೆ ಹಲವಾರು ಹಾಡುಗಳು ಆಕೆಯಿಂದ ಹೇಳಲ್ಪಟ್ಟಿವೆ. ಅಂತದ್ದೇ ಒಂದು ತಮಾಷೆಯ ಹಾಡು ಇಲ್ಲಿದೆ ನೋಡಿ. ಈ ಹಾಡು ದೊಡ್ಡ ಹಬ್ಬದ ಸಂದರ್ಭದಲ್ಲಿ ಗೋವುಗಳನ್ನು ಬಿಡುವುದು ಹಾಗೂ ಗೋವಿನ ಜೊತೆಗೆ ಮನೆಯ ಯಜಮಾನ್ತಿ ಮಾತನಾಡುವುದು, ಗೋವಿಗೆ ಜಾಗೃತೆಯಿಂದ ಇರು ಎನ್ನುವ ಭಾವಗಳಿವೆ.

ಗೋವು ಕಣ್ಣಿಯ ಬಿಡುವನಕ
ಮನೆ ದೇವರ ಕೃಪೆಯಿರಲೆ
ಹೋಕ್ಹೋಗಿ ಮನೆಗೆ ಬರುವನಕ
ಹುಲಿದೇವರ ಕೃಪೆಯಿರಲೆ..|
-ಆಕಳು ಮೇಯಲು ಹೋಗಿ ಮನೆಗೆ ಸುರಕ್ಷಿತವಾಗಿ ಬರುವಾಗ ದೇವರು ಹಾಗೂ ಹುಲಿ ಕೂಡ ಕೃಪೆ ತೋರಿಸು ಎಂದು ಮನುಷ್ಯ ಬೇಡಿಕೊಳ್ಳುವುದು ಇನ್ನೆಲ್ಲಿ ಕಾಣಲು ಸಾಧ್ಯವಿದೆ.?
ಅದೇ ಹಾಡು ಮುಂದುವರಿಯುತ್ತದೆ..

ಅಪ್ಪನ ಮನೆ ತುರುಹಿಂಡು ಎಪ್ಪತ್ತು ಸಾವಿರ
ಹೊಸ್ತಿಲೊಳಗವರು ನಡೀವಾಗ
ನಡೀವಾಗ ಗೋವಕ್ಕನ
ಹತ್ತು ಸಾವಿರ ಗಂಟೆ ಗುಯ್ಯಲೆಂದು..|
-ಆಹಾ.. ಗೋವನ್ನೂ ಅಕ್ಕನೆಂದು ಕರೆಯುತ್ತಾಳಲ್ಲ... ಈ ಹವ್ಯಕ ಹಾಡನ್ನು ಅದ್ಯಾರು ಬರೆದರೋ.. ಅಂತಹ ಆಶುಕವಿಗೆ ಧನ್ಯೋಸ್ಮಿ.

ಹತ್ತಲಾರದ ಗುಡ್ಡೆ ಹತ್ತೇಳು ಪಶುತಾಯಿ
ತಿರುಗಿ ನೋಡಲಿಕೆ ಅರಿಯಾಳು
ಅರಿಯಾಳು ಗೋಮಾಳ
ಮುತ್ತಿನ ಸನ್ನೆಯಲಿ ಹೊಡತಾರೋ..|

ಕೊಟ್ಟಿಗೆ ಕೆಸರೆಂದು ಹಾದಿ ದೂರ ಎಂದು
ಬಾರದುಳಿಯಡ ಪಶುತಾಯೆ
ಪಶುತಾಯೆ ನಿನ್ನೊಡೆಯರು
ಹಾಲಿಲ್ಲದುಣ್ಣರು ಇರುಳೂಟ |
-ಆಕಳನ್ನು ಪಶುವೆಂದು ಭಾವಿಸದೆ ಮನೆಯ ಒಬ್ಬ ಸದಸ್ಯನೆಂದು ಪರಿಗಣಿಸಿ, ವಿನಮ್ರನಾಗಿ ಆಕಳ ಬಳಿ ಕೇಳಿಕೊಳ್ಳುವ ಪರಿ ಬಹಳ ಕಾಡುತ್ತದೆ. ಆಕಳ ಬಳಿ ನೆಪ ಹೂಡಬೇಡ. ಸುಮ್ಮನೆ ಸಿಟ್ಟಾಗಿ ಕೊಟ್ಟಿಗೆಗೆ ಬರದೇ ಉಳಿದುಬಿಡಬೇಡ ಎನ್ನುವ ಈ ಹವ್ಯಕ ಹಾಡುಗಳು ಎಂತವನನ್ನೂ ಸೆಳೆದುಬಿಡುತ್ತವೆ.

**

ಈ ಮೇಲಿನ ಹಾಡು ಬೆಳಿಗ್ಗೆ ಮುಂಚೆ ಆಕಳ ಬಳಿ ಹೀಗೆ ಹೇಳುವಂತದ್ದಾದರೆ ಸಂಜೆಯ ವೇಳೆಗೆ ಕೊಟ್ಟಿಗೆಗೆ ಆಗಮಿಸುವ ಆಕಳನ್ನು ಸ್ವಾಗತಿಸುವ ಸಲುವಾಗಿ ಇನ್ನೊಂದು ಸುಂದರ ಹಾಡನ್ನೂ ಹಾಡಲಾಗುತ್ತದೆ. ಆ ಹಾಡು ಇನ್ನೂ ಮಜವಾಗಿದೆ ನೋಡಿ. ಈ ಹಾಡಿನಲ್ಲಿ ಆಕಳು ದೂರನ್ನೂ ಹೇಳುತ್ತದೆ ಗಮನಿಸಿ.

ಗೋವು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಗೋವು ಬರುವ ಬಾಗಿಲಿಗೆ |
ಎತ್ತು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಎತ್ತು ಬರುವ ಬಾಗಿಲಿಗೆ |
**

ಮನೆಗೆ ಬರುವ ಗೋವು (ಎತ್ತು) ಮನೆಯೊಡತಿಯ ಬಳಿ ದೂರನ್ನು ಹೇಳುತ್ತದೆ.. ಇದು ಮಜವಾಗಿದೆ ನೋಡಿ

ಗುಡ್ಡ ಬೆಟ್ಟಗಳೆಲ್ಲ ತಿರುಗಿಸಿ
ಅಟ್ಟು ಹೊಡೆದನೇ ಗೋವಳನು
ಬೆತ್ತದ ಶೆಳೆಯಲಿ
ಹೊಡೆದನೆಂದ್ವಡೆಯಗೇಳಿದವೇ..
**
ಮುಂದುವರಿದು ಗೋವು ಇನ್ನೂ ಪುಕಾರು ಹೇಳುತ್ತವೆ ಕೇಳಿ.. ಓದಿದಂತೆಲ್ಲ ನಿಮ್ಮ ಮನಸ್ಸು ಮುದಗೊಳ್ಳುವುದು ಖಚಿತ

ಹುಲ್ಲು ಸತ್ತಿತು ಹೊಲನೊಳಗೆ
ನೀರು ಬತ್ತಿತು ಕೊಣದೊಳಗೆ
ಹ್ಯಾಂಗೆ ಜೀವಿಸಲೆಂದು
ಯೋಚನೆಗೊಂಡವು ಪಶುಗಳು..
**

ಗೋವಿನ ಪುಕಾರಿಗೆ ಪ್ರತಿಯಾಗಿ ಮನೆಯೊಡತಿ ಗೋವನ್ನು ಸಮಾಧಾನ ಮಾಡಿ ಸಂತೈಸುವ ಪರಿ ನೋಡಿ ಹೇಗಿದೆ.. ಅಂತ..

ಗುತ್ತಿಯ ಹೊಲನೊಳಗೆ
ಮುತ್ತಿನ ದೋಣಿಯ ಕಳುಸಿ
ಮತ್ತೊಮ್ಮೆ ಅದರ ತರಿಸೂವಿ
ಮುತ್ತಿನ ದೋಣಿಯ ಕಳುಸಿ
ಮಿತ್ರೆಯರ ಕೂಡ ಉದುಕವ
ಉದುಕವ ಹೊಯ್ಸೂವಿ ಗೋವೆ
ನೀ ಚಿಂತೆ ಪಡದೀರು |

ಬಡಗೀಯ ಮನೆಗ್ಹೋಗಿ
ಕುಡುಗೋಲು ಮಾಡ್ತರಿಸಿ
ಬಡ ಬಟ್ಟನ ಕೂಡ ಹೊರೆ ಹುಲ್ಲ
ಬಡ ಬಟ್ಟನ ಕೂಡ ಹೊರೆಹುಲ್ಲ ತರಿಸೂವಿ
ಗೋವೆ ನೀ ಚಿಂತಿ ಪಡದೀರು. |
-ಆಹಾ.. ನಮ್ಮ ಹಿರೀಕರು ಅದೆಷ್ಟು ಸಹೃದಯಿಗಳಾಗಿರಬೇಕು. ಅವರ ಮನದಲ್ಲಿನ ಪ್ರಾಣಿಪ್ರೀತಿಗಳನ್ನು ಇಂದಿನವರಾದ ನಾವು ಖಂಡಿತವಾಗಿಯೂ ವಿವರಿಸುವುದು ಅಸಾದ್ಯ. ನಮ್ಮ ಹಿರಿಯರ ಪ್ರಾಣಿಪ್ರಿಯ ಗುಣ ಎಂತಹ ಕಾಲದಲ್ಲೂ ಎಂತವರನ್ನೂ ಮೋಡಿ ಮಾಡಬಲ್ಲದು.

***
ಇನ್ನೊಂದು ಮಜವಾದ ಹಾಡಿದೆ. ಈ ಹಾಡಿನಲ್ಲಿ ಪ್ರಶ್ನೋತ್ತರ ಸರಣಿಗಳಿವೆ.. ಓದಿ ಮಜಾ ಅನುಭವಿಸಿ.

ಉತ್ತುಮರಾ ಮಗನೆಂದು
ಉಪ್ಪರಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ..|
ಪೆಟ್ಟಿಗೆಯ ಬೀಗ ತೆಗೆಸಿದ್ಯ ಮಾವಯ್ಯ
ತಾಳಿ ಸರ ಕದ್ದು ಹುಗಸೀದ |

ಒಳ್ಯವರ ಮಗನೆಂದು
ಮಾಳಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ ಅತ್ಯವ್ವ
ಮುತ್ತಿನ ಸರ ಕದ್ದು ಹುಗಸೀದ..|

-ಇದು ಆರೋಪವಾದರೆ.. ಇದಕ್ಕೆ ಪ್ರಿಯಾಗಿ ಸಮಝಾಯಿಶಿ ಅಥವಾ ಸಮರ್ಥನೆಯನ್ನು ನೀಡುವ ಪರಿ ಗಮನಿಸಿ

ಮಾವುಗಳ ಸಂತಿಗೆ
ತ್ವಾಟಕ್ಕೆ ಹೋಗಿಕ್ಕು
ನೆರೆಮನೆಯ ಬಾಳೆಕೊನೆ ಕಳಹೂದ
ಕಳಹೂದ ಕಂಡ್ಕಂಡು
ಕದಿಯುವ ಬುದ್ದಿ ಕಲಿತಿಕ್ಕು |

ಅತ್ಯಗುಳ ಸಂತಿಗೆ
ಹಿತ್ತಲಿಗೆ ಹೋಗಿಕ್ಕು
ನೆರೆಮನೆಯ ಬದ್ನೆಕಾಯಿ ಕಳಹೂದ
ಹಳಹೂದ ಕಂಡ್ಕಂಡು
ಕಳುವ ಬುದ್ದಿಯನೇ ಕಲಿತಿಕ್ಕು |

ಯಾವಾಗಲೂ ನನ ಮಗಗೆ
ಕಳುವ ಬುದ್ಧಿಗಳಿಲ್ಲೆ
ಅತ್ತೆಯ ಮನೆಯ ಹಸೆ ಮೇಲೆ
ಹಸೆ ಮೇಲೆ ಇದ್ದಾಗ
ಅತ್ಯಗ್ಯಕ್ಕಳು ಕಳವ ಹೊರಸೀರಿ..|

ಇಂದು ಬಟ್ಟಲ ಕದ್ದ
ನಾಳೆ ಗಿಂಡಿಯ ಕದ್ದ
ನಾಡದತ್ತೆಯಾ ಮಗಳ ಕದ್ದು
ಮಗಳ ಕದ್ದು ಹೋಪಾಗ
ಯಾರ ಮೇಲೆ ಕಳುವ ಹೊರಿಸೂವಿ..|
-ಈ ಹಾಡನ್ನು ಹೇಳುವ ವೇಳೆಗೆ ಅಜ್ಜಿಗೆ ಹಲವಾರು ತಮಾಷೆಯ ಹಾಡುಗಳು ನೆನಪಾಗ ಹತ್ತಿದ್ದವು. ನಾನು ಹಾಗೂ ಸಂಜಯ ರೋಮಾಂಚನದಿಂದ ಬರೆದುಕೊಳ್ಳಹತ್ತಿದ್ದೆವು. ಅಜ್ಜಿಯೂ ತಮಾಷೆ ಮಾಡುತ್ತಲೇ ಹಾಡನ್ನು ಹೇಳುತ್ತಿತ್ತು. ಆದರೆ ವಯಸ್ಸಾದ ಅಜ್ಜಿ ಒಂದು ಕಡೆ ಕುಳಿತಲ್ಲಿ ಕೂರಲಾಗದೇ ಚಡಪಡಿಸುತ್ತಿತ್ತು. ಆಗೀಗ ನಿಲ್ಲುತ್ತ, ಆಗೀಗ ಕೂರುತ್ತ `ತಮಾ.. ಯನ್ನ ಸ್ವಂಟ ಹಿಡದೋತು.. ಹನೀ ಕೈ ಹಿಡ್ಕಳ.. ಯನ್ನ ಒಂಚೂರು ಎತ್ತ ಮಾರಾಯಾ..' ಎನ್ನುತ್ತ ಕರೆದಾಗಲೆಲ್ಲ ನಾನು ಆಜ್ಞಾ ಪಾಲಕನಾಗಿ ಆಕೆಯ ಕೈಯನ್ನು ಹಿಡಿದು ಎಳೆದು ಕೂರಿಸುತ್ತಿದ್ದೆ. ಪ್ರತಿಯಾಗಿ ಅಜ್ಜಿ `ನಿಂಗೆ ಗನಾ ಕೂಸು ಸಿಗಲ.. ದಂಟಕಲ್ ಮಂಕಾಳಕ್ಕನ ಹಾಂಗೆ ಇರಲಿ..' ಎಂದು ಹಾರೈಸುತ್ತಿತ್ತು. ನಾನು ಪೆಚ್ಚುನಗೆಯನ್ನು ಹಾರಿಸುತ್ತಿದ್ದೆ. ಈ ಅಜ್ಜಿ ನಮಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ಅಜಮಾಸು 10 ತಾಸುಗಳ ಕಾಲ ಹಾಡನ್ನು ಹೇಳಿತ್ತು. ಪಾಪ ಅದೆಷ್ಟು ತೊಂದರೆಯನ್ನು ಅನುಭವಿಸಿದ್ದರೋ ಅಜ್ಜಿ. ಏನನ್ನೂ ಹೇಳದೆ ನಾವು ಕೇಳುತ್ತಿದ್ದೇವೆ ಎನ್ನುವ ಕಾರಣಕ್ಕಾಗಿ ತನ್ನ ದೈಹಿಕ ಸಮಸ್ಯೆಗಳನ್ನೆಲ್ಲ ಮರೆತು ಹಾಡುತ್ತಿದ್ದುದನ್ನು ನೆನಪು ಮಾಡಿಕೊಂಡರೆ ಹಾಡು ಸಂಗ್ರಹದ ನೆಪದಲ್ಲಿ ಅಜ್ಜಿಗೆ ತ್ರಾಸು ಕೊಟ್ಟೆವಾ ಎಂದುಕೊಂಡಿದ್ದಿದೆ. ಆದರೆ ಅಜ್ಜಿ `ತಮಾ.. ನಿಂಗ ಒಳ್ಳೆ ಕೆಲಸ ಮಾಡ್ತಾ ಇದ್ದಿ.. ಹಿಂಗಿದ್ ಮಾಡವ್ ಯಾರಾದ್ರೂ ಶಿಕ್ತ್ವಾ ಹೇಳಿ ಆನೂ ಕಾಯ್ತಾ ಇದ್ದಿದ್ದಿ.. ನಿಂಗವ್ವು ಶಿಕ್ದಿ.. ಚೊಲೋ ಆತು..' ಎಂದು ಹೇಳಿದ್ದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಸರ್ಟಿಫಿಕೆಟ್ ಎಂದುಕೊಂಡು ಖುಷಿಯಾಗಿದ್ದೇವೆ.

(ಅಜ್ಜಿಯ ಹಾಡುಗಳು ಇನ್ನಷ್ಟಿದ್ದು.. ಮುಂದಿನ ಭಾಗದಲ್ಲಿ ಅದನ್ನು ತಿಳಿಸಲಾಗುವುದು)



Saturday, July 12, 2014

ಹನಿಸುತಿದೆ..

ಮಧ್ಯವರ್ತಿ

ನಾನು ಬಡವಿ
ಆತ ಬಡವ 
ಒಲವೆ ನಮ್ಮ ಬದುಕು..
ನಾನು ನೀನು
ಒಟ್ಟಿಗಿರಲು
ಬಜೆಟ್ ಯಾಕೆ ಬೇಕು..?


ಬಯಕೆ

ಸದನದಲ್ಲಿ 
ನಿದ್ದೆ ಮಾಡುವ ಭಾಗ್ಯಕ್ಕೊಬ್ಬ 
ಮುಖ್ಯಮಂತ್ರಿ..
ಇದೀಗ
ರಾಹುಲ್ ಗಾಂಧಿಗೆ
ವಿರೋಧ ಪಕ್ಷದ
ಸ್ಥಾನಮಾನವೂ ಬೇಕಂತ್ರೀ..!!


ಸ್ಪೂರ್ತಿ

ಸದನದಲ್ಲಿ ಸದಾ
ಸಿದ್ದರಾಮಯ್ಯರ ನಿದ್ದೆ
ಅದಕ್ಕೆ ಸ್ಪೂರ್ತಿ ಮಾತ್ರ
ರಾಹುಲ್ ಗಾಂಧಿ ಅವರದ್ದೇ,,!!


ಗೌಡರ ರೈಲು

ವಿರೋಧ ಪಕ್ಷದವರು
ಎಷ್ಟೇ ಕೂಗಾಡಿದರೂ
ಕಿರುಚಿದರು,,
ಬೋರ್ಡು ಮೆಟ್ಟಿ ತುಳಿದರೂ
ರೈಲು ಬಿಟ್ಟೇ ಬಿಟ್ಟರು
ಸದಾನಂದ ಗೌಡರು |


ಮಗುವಿನ ಇಷ್ಟ


ಪುಟ್ಟ ಮಗುವಿಗೆ ಬೇಕಿಲ್ಲ
ಪೊಕೆಮಾನು
ಇಷ್ಟಪಡುತ್ತಿಲ್ಲ
ಡೋರೆಮಾನು..
ಈಗೇನಿದ್ದರೂ ಬೇಕಂತೆ
ರಾಹುಲ್ ಗಾಂಧಿಯ
ಕಾರ್ಟೂನು..|


ಇದೇ ಮೊದಲು

ಜಗತ್ತಿನ ಮೊಟ್ಟ ಮೊದಲ
ಟ್ಯಾಬ್ಲೆಟ್ಟು..
ನಮ್ಮ ಪ್ರೀತಿಯ
ಬಳಪ ಮತ್ತು ಸ್ಲೇಟು |


ಎಲ್ಲೆಲ್ಲೂ ನಿದ್ದೆಯೇ

ಚಿಂತೆ ಇಲ್ಲದವನಿಗೆ
ಸಂತೆಯಲ್ಲೂ ನಿದ್ದೆ
ಇದು ಹಳೆಯದಾಯ್ತು..|
ಈಗೇನಿದ್ದರೂ
ಚಿಂತೆ ಇಲ್ಲದವನಿಗೆ
ಸದನದಲ್ಲೂ ನಿದ್ದೆ..||

ವ್ಯತ್ಯಾಸ
ಮದುವೆಯಾಗದಿರುವುದನ್ನು
ಅವಿವಾಹಿತ, ಬ್ರಹ್ಮಚಾರಿ ಎನ್ನಬಹುದು
ಆದರೆ ಈ ಎರಡೂ ಶಬ್ದಗಳಲ್ಲಿ
ಅದೆಷ್ಟು ವ್ಯತ್ಯಾಸ
ರಾಹುಲ್ ಗಾಂಧಿ ಅವಿವಾಹಿತ
ವಾಜಪೇಯಿ ಬ್ರಹ್ಮಚಾರಿ..|

**
(ಆಗೀಗ ನೆನಪಾದಾಗ, ಹೊಳೆದಾಗ ಬರೆದು ಫೆಸ್ ಬುಕ್ಕಿನ ನನ್ನ ವಾಲಿನಲ್ಲಿ ಹಾಕುತ್ತಿದ್ದೆ.. 
ಅವನ್ನು ಸಂಗ್ರಹಿಸಿ ಈ ರೂಪದಲ್ಲಿ ಇಟ್ಟಿದ್ದೇನೆ.. ಓದಿ ಹೇಳಿ ನಿಮ್ಮ ಅಭಿಪ್ರಾಯವ)

Friday, July 11, 2014

ಗಣಪಜ್ಜಿಯ ಹಾಡುಗಳು-2

            ಗಣಪಜ್ಜಿ ಹುಕಿಗೆ ಬಿದ್ದು ಹಾಡನ್ನು ಒಂದರ ಹಿಂದೊಂದರಂತೆ ಹೇಳುತ್ತಿದ್ದಳು. ನಾನು ಹಾಗೂ ಸಂಜಯ ಬರೆದುಕೊಳ್ಳುತ್ತ ಸಾಗಿದ್ದೆವು. ಮಧ್ಯದಲ್ಲಿ ನಾವು ಅಜ್ಜಿಗೆ ಪ್ರಶ್ನೆ ಕೇಳಲೂ ಭಯವಾಗಿತ್ತು. ನಾವು ಪ್ರಶ್ನೆ ಕೇಳುವ ಭರದಲ್ಲಿ ಅಜ್ಜಿಗೆ ನೆನಪಾಗಿದ್ದ ಹಾಡುಗಳು ಮರೆತು ಹೋದರೆ ಏನು ಮಾಡುವುದು ಎನ್ನುವುದು ನಮ್ಮೊಳಗಿನ ದುಗುಡವಾಗಿತ್ತು. ನಮ್ಮ ಪ್ರಶ್ನೆಗೆ ಆಸ್ಪದವೇ ಇಲ್ಲದಂತೆ ಗಣಪಜ್ಜಿ ಯಾವ ಸಂದರ್ಭದಲ್ಲಿ ಹೇಳುವ ಹಾಡು, ಯಾಕೆ ಹೇಳುತ್ತಾರೆ? ಅದನ್ನು ಹೇಳಿದರೆ ಏನು ಪ್ರಯೋಜನ, ಹಾಡಿನ ಧಾಟಿ ಇತ್ಯಾದಿಗಳ ಬಗ್ಗೆಯೆಲ್ಲ ಮಾಹಿತಿ ನೀಡುತ್ತ ಹಾಡುತ್ತಿದ್ದುದರಿಂದ ನಮ್ಮ ಹಲವಾರು ಸಮಸ್ಯೆಗಳು ಪರಿಹಾರವಾದಂತಾಗಿದ್ದವು. ಬರೆದುಕೊಳ್ಳುತ್ತಿದ್ದ ನಾನು ಹಾಗೂ ಸಂಜಯ ಸುಸ್ತಾಗಿದ್ದಂತೂ ಸುಳ್ಳಲ್ಲ.
             ಖಂಡಿತವಾಗಿಯೂ ನಾನು ಹಾಗೂ ಸಂಜಯ ಮಾತಿಗೆ ಬಿದ್ದರೆ ಮೇರೆ ಮೀರು ಬಿಡುತ್ತೇವೆ. ಪೋಲಿ ಮಾತುಗಳು ಸರಾಗವಾಗಿ ಹೊರಬರುತ್ತವೆ. ಅಜ್ಜಿಗೆ ಪೋಲಿಯೆನ್ನಿಸುವ ಹವ್ಯಕರ ಹಳ್ಳಿ ಹಾಡು ಸಾಕಷ್ಟು ಗೊತ್ತಿದ್ದ ಕಾರಣ ಆ ಬಗೆಯ ಹಾಡುಗಳು ಗೊತ್ತಿದ್ದರೆ ಹೆಚ್ಚು ಹೆಚ್ಚು ಹೇಳು ಎಂದೆವು. `ನೆನಪಿದ್ದಷ್ಟು ಹೇಳ್ತಿ ಅಕಾ..' ಎಂದು ಹೇಳಿದ ಅಜ್ಜಿ ಹಾಡಿದ ಹಾಡುಗಳಲ್ಲಿ ಪೂರ್ತಿ ಸಿಕ್ಕಿದ್ದು ಒಂದೋ ಎರಡೋ ಅಷ್ಟೆ. ಸಿಕ್ಕಿದಷ್ಟು ಹಾಡನ್ನು ಇಲ್ಲಿಡುವ ಪ್ರಯತ್ನ ನಮ್ಮದು

**
ಅತ್ತೆಯ ಮನೆಯಲ್ಲಿ ಸುತ್ತಿ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.|

ಮಾವನ ಮನೆಯಲಿ ಕೂಡೆ ನಾಗಂತಿಗೆ
ಸುತ್ತಿ ದೀವಿಗೆಯ ಚಲಿಸಲಿ..
ಸುತ್ತಿ ದೀವಿಗೆಯ ಚಲಿಸಲಿ ನಮ್ಮ ಮಗಳು
ಔಪಾಸನ್ಯಕೊಟ್ಟು ಪ್ರೀತ್ಯರ್ತರಾಗುವಳೋ.
ಶ್ರೀರಾಮರ ಮಡದಿ..||ಪ||

ದ್ವಾರಕಾ ಪುರದಲ್ಲಿ, ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ
ಬೆಟ್ಟ ಬಡಿದಳು ಶ್ರೀಕೃಷ್ಣರ ರಮಣಿ
ಕೃಷ್ಣರ ರಾಣಿ ರುಕ್ಮಿಣಿ ದೇವಿ..|

ಅತ್ತೆಯ ಮನೆಯಲ್ಲಿ ದೇವರ ಬಲದಲ್ಲಿ
ದೇವಕಿ ದೇವಿಯರ ಸಮ್ಮಿಳದಲ್ಲಿ..||
 ಎಂದು ಹಾಡಿದ ಅಜ್ಜಿಗೆ ಮುಂದಿನ ಸಾಲುಗಳು ನೆನಪಾಗಲೇ ಇಲ್ಲ. ಮಾವನ ಮನೆಗೆ ಹೋಗುವ ಮಗಳು ಮಾವನ ಮನೆಯನ್ನು ಬೆಳಗಲಿ ಎಂದು ಹೇಳುವ ತಾಯಿ ಮಾವನ ಮನೆಯೊಂದು ದೇವರ/ಶ್ರೀಕೃಷ್ಣನ ನಿವಾಸ. ಅಲ್ಲಿನ ಸದಸ್ಯರೆಲ್ಲ ದೇವ ದೇವತೆಗಳು. ಅವರಿಗೆ ಗೌರವನ್ನು ಕೊಟ್ಟು, ನೀನೂ ಗೌರವವನ್ನು ಪಡೆದುಕೊ. ಜೊತೆಯಲ್ಲಿ ಕೊಟ್ಟ ಮನೆಯನ್ನು ಬೆಳಗು ಎಂದು ಹಾರೈಸುವ ಈ ಹಾಡು ಇಂದಿನ ಕಾಲಕ್ಕೆ ಪ್ರಸ್ತುತ ಎನ್ನಿಸುವಂತದ್ದು.

**
ಉಪ್ಪರಿಗೆಯಲ್ಲೇ ಪಟ್ಟೆ ಮಂಚ ಹಾಕಿರಬೇಕು
ಅತ್ರದೆಣ್ಣೆ ಮೇಜು-ಕುರ್ಚಿ ತಂದಿಟ್ಟಿರಬೇಕು
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |
ತಾಳೀ ತಂಬ್ಗೆ ಬೆಳಗಿಡಬೇಕು ಜಳ-ಜಳ
ಮಜ್ಗೆ ಡಾವ್ ಇಟ್ಟಿರಬೇಕು ಸಳ-ಸಳ
ಒಲ್ಲೆ ಎನ್ನಲು ಬೇಡಿ ಪತಿಯೆ ಎನ್ನ |

-ಇದೊಂದು ಮಜವಾದ ಹಾಡು. ಗಂಡನನ್ನು ಹೆಂಡತಿ ಒಲಿಸುವ, ಒಪ್ಪಿಸುವ ಪರಿಯನ್ನು ಗಮನಿಸಿ. ಈ ಹಾಡೂ ನಮಗೆ ಪೂರ್ತಿಯಾಗಿ ಸಿಗಲಿಲ್ಲ. ಛೇ.

**
ಎಂಟು ಎಂದು ದಿನ ರೊಕ್ಕ
ಎಣಿಸಿ ಕೈಯಲಿ ಕೊಟ್ಟೆ
ಗಂಟು ಹೋಯ್ತು ಗೋವಳ ರಾಯ
ನೆಂಟರ ಮಲ್ಲಿ ಇಟ್ಟು ಬಂದ್ಯ
ಆಕಳು ಕಾಣೆ ನಂ ಆಕಳು ಕಾಣೆ |

ಆಕಳ ಗುತ್ ನಾ ನರಿಯೆ
ಆಕೆ ನಂಕೈಲಿ ಹೇಳಲಿಲ್ಲ
ಸೆರಗನ್ಹಾಸಿ ಬೇಡಿದ್ದಾದರೆ
ಸಾವಿರದಾಕಳ ತರಿಸಿಕೊಡುವೆ
ಆಕಳು ಬಕ್ಕು ನಿಂ ಆಕಳು ಬಕ್ಕು |

ಹಳ್ಳದಂಚಿಗೆ ಮೇಯ್ತಿತ್ತು
ಮನಿಗ್ ಹಾದಿ ಹಿಡದಿತ್ತು
ಕರನಾಸಿಗ್ ವದರತಿತ್ತು
ಮನೆಗಾಗೇ ಬರತಿತ್ತು
ಆಕಳು ಬಕ್ಕು ನಿಮ್ ಆಕಳು ಬಕ್ಕು..||

-ಎಂಬ ಈ ಹಾಡಿನಲ್ಲಿ ಕಳೆದು ಹೋದ ಆಕಳಿಗಾಗಿ ಮನೆಯೊಡತಿ ಪರಿತಪಿಸುವ ಪರಿ ಬಿಂಬಿತವಾಗಿದೆ. ಸೂಚ್ಯವಾಗಿ ಗಂಡ ಮನೆಗೆ ಬರುತ್ತಿಲ್ಲ ಎನ್ನುವುದನ್ನೂ ಹೇಳಲಾಗುತ್ತಿದೆ. ಬಹುದಿನಗಳಿಂದ ಗಂಡ ಮನೆಗೆ ಬಂದಿಲ್ಲ ಎನ್ನುವ ಅಂಶವನ್ನು ಈ ಹಾಡು ಬಿಡಿಸಿ ಹೇಳುತ್ತಿದೆ. ಇದೂ ಕೂಡ ಪೂರ್ತಿಯಾಗಿ ಸಿಗದ ಹಾಡು.
**

ಮಧುರ ವಾಕ್ಯವು
ಚಿನ್ಮಯನೆ ನೀನಾಡಿದ ವಾಕ್ಯವು
ಸನ್ಮತವಾಯ್ತು ಯನ್ನ ಮನುಸಿಗೆ
ಯನ್ನ ನಿನ್ನೆಯ ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ಮರವ ಪಾಲಿಸ
ರೆಂದ ಮಾಧವನು |

ಈ ಹಾಡೂ ಕೂಡ ಪೂರ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಮಾಧವನು ಶಿವನ ಕುರಿತಾಗಿ ಹೀಗೆನ್ನುತ್ತಾನೆ ಎನ್ನುವ ಹವ್ಯಕ ಹಾಡು. ಖಂಡಿತವಾಗಿಯೂ ನನಗೆ ಈ ಹಾಡಿನ ಧಾಟಿ ಅರ್ಥವಾಗಿಲ್ಲ. ಆ ಅಜ್ಜಿ ರಾಗವಾಗಿ ಹಾಡುತ್ತಿದ್ದರೆ ನಾವು ಅಷ್ಟೇ ತನ್ಮಯರಾಗಿ ಬರೆದುಕೊಂಡಿದ್ದಷ್ಟೇ ನೆನಪಿದೆ. ಈ ಹಾಡಿನ ಬಗ್ಗೆಯೂ ಗೊತ್ತಿದ್ದವರು ತಿಳಿಸಬಹುದು.

(ಗಣಪಜ್ಜಿ ಹೇಳಿದ ಒಂದೆರಡು ತಮಾಷೆಯ ಹಾಡುಗಳು ಇವೆ. ಅವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.. )