Wednesday, July 16, 2014

ಬೆಂಗಾಲಿ ಸುಂದರಿ-18


                 ಸುಂದರಬನ್ ಕಾಡಿನ ನಡುವೆ ತಿಂಡಿ ತಿಂದು, ಊಟ ಮುಗಿಸಿ ಕಬ್ಬಡ್ಡಿ ತಂಡದ ಆಟಗಾರರು ಕಾನನದಲ್ಲಿ ಸುತ್ತಾಡಲು ಆರಂಭಿಸಿದರು. ಅಲ್ಲೊಂದು ಕಡೆ ಯಾವುದೋ ಪ್ರಾಣಿ ಕೂಗಿದ ಸದ್ದು. ಎಲ್ಲರಿಗೂ ಅಚ್ಚರಿ ಹಾಗೂ ಶಾಕ್. ಭಯದೊಂದಿಗೆ ಅತ್ತ ಸಾಗಿದಾಗ ಬಿಳಿ ಹುಲಿಯೊಂದು ಮೊಸಳೆಯ ಜೊತೆಗೆ ಕಾದಾಡುತ್ತಿತ್ತು. ಡಿಸ್ಕವರಿ ಚಾನಲ್ಲಿನಲ್ಲಿಯೂ ಅಥವಾ ಇನ್ಯಾವುದೋ ಪ್ರಾಣಿ-ಪಕ್ಷಿಗಳ ಚಾನಲ್ಲಿನಲ್ಲಿಯೂ ನೋಡಿದ್ದವರಿಗೆ ನೇರಾನೇರ ಪ್ರಾಣಿಗಳ ಕಾಳಗ ಭಲೆ ಸಂತಸವನ್ನು ತಂದಿತು. ಖುಷಿಗೂ ಕಾರಣವಾಯಿತು. ಹುಲಿ-ಮೊಸಳೆಗಳು ಹದಪಟ್ಟಿಗೆ ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ. ಕಾದಾಡುತ್ತಲೇ ಇದ್ದವು. ಹುಲಿ ಹಾಗೂ ಮೊಸಳೆಯ ಮೈಯಿಂದ ರಕ್ತ ಧಾರೆಯಾಗಿ ಇಳಿಯುತ್ತಿತ್ತು. ಅವುಗಳಿದ್ದ ಜಾಗ ಮಣ್ಣು ರಾಡಿಯಾಗಿಬಿಟ್ಟಿತ್ತು. ನೀರಂತೂ ಕೆಂಪಾಗಿ ಹೋಗಿತ್ತು. ವಿನಯಚಂದ್ರ ಸೇರಿದಂತೆ ಹಲವರು ಈ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರಿಸಿಕೊಂಡರು. ಕೊನೆಗೊಮ್ಮೆ ಆ ಅರಣ್ಯದ ಗಾರ್ಡ್ ಒಬ್ಬರು ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಹುಲಿ ಹಾಗೂ ಮೊಸಳೆಯ ಕಾದಾಟವನ್ನು ತಪ್ಪಿಸಿದರು. ಮೊಸಳೆ ನೀರಿನೊಳಕ್ಕೆ ಸುಲಭವಾಗಿ ಇಳಿದು ಓಡಿ ಹೋದರೆ ಹುಲಿ ಮಾತ್ರ ಕೆಲಕಾಲ ಪ್ರವಾಸಿಗರನ್ನು, ಆಗಂತುಕರನ್ನು ಗುರುಗುಟ್ಟಿ ನೋಡುತ್ತ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎನ್ನುವ ಸನ್ನೆ ಮಾಡಿತೋ ಎಂಬಂತೆ  ಕಾಡಿನ ನಡುವೆ ಮರೆಯಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಕಬ್ಬಡ್ಡಿ ಆಟಗಾರರ ತಂಡ ಢಾಕಾಕ್ಕೆ ಮರಳುವ ವೇಳೆಗೆ ಸೂರ್ಯ ಸಂಜೆಯ ಕಡೆಗೆ ಮುಖಮಾಡಿದ್ದ.
          ಇತ್ತ ಢಾಕಾದಲ್ಲಿ ಹಿಂಸಾಚಾರ ಮೇರೆ ಮೀರಿತ್ತು. ಹೊಸ ಹೊಸ ಪ್ರದೇಶಗಳಿಗೆ ಹಿಂಸಾಚಾರ ಹಬ್ಬಿತ್ತು. ಕಬ್ಬಡ್ಡಿ ಆಟಗಾರರು ತಾವಿದ್ದ ಹೊಟೆಲಿಗೆ ತಲುಪುವುದೂ ದುಸ್ತರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲೊಂದು ಕಡೆಯಂತೂ ಹಿಂಸಾಚಾರ ನಡೆಸುತ್ತಿದ್ದವರಿಗೂ ಕಬ್ಬಡ್ಡಿ ಆಟಗಾರರಿದ್ದ ಬಸ್ಸಿಗೂ ಮುಖಾಮುಖಿಯಾಗಿ ಅವರು ಒಂದು ಕಲ್ಲನ್ನು ಬಸ್ಸತ್ತ ಬೀಸಿದ್ದರು. ಬೀಸದ ಕಲ್ಲಿಗೆ ಬಸ್ಸಿನದೊಂದು ಗಾಜು ಫಳ್ಳೆಂದು ಒಡೆದಿದ್ದೂ ಆಗಿತ್ತು. ಮತ್ತಷ್ಟು ಹತ್ಯಾರಗಳೊಂದಿಗೆ ಬಸ್ಸಿನತ್ತ ನುಗ್ಗಿ ಬರುತ್ತಿದ್ದಂತೆ ಕಬ್ಬಡ್ಡಿ ಆಟಗಾರರ ತಂಡಕ್ಕೆ ಜೀವವೆಲ್ಲ ಉಡುಗಿದಂತಾಯಿತು. ತಾವು ಖಂಡಿತ ಬದುಕಲಾರೆವು ಎಂದುಕೊಂಡರು. ಹೇಗಾದರೂ ಮಾಡಿ ಬದುಕಿದರೆ ಸಾಕು ಎಂದುಕೊಂಡರು. ಜೀವ-ಉಸಿರನ್ನು ಬಿಗಿ ಹಿಡಿದು ಬಸ್ಸಿನಲ್ಲಿ ಸದ್ದಿಲ್ಲದಂತೆ ಕುಳಿತಿದ್ದರು. ಬಸ್ಸಿನ ಡ್ರೈವರ್ ಹರಸಾಹಸ ಪಡುತ್ತಿದ್ದ. ಎದುರು ಬರುತ್ತಿದ್ದ ಹಿಂಸಾಚಾರಿಗಳ ಗುಂಪನ್ನು ತಪ್ಪಿಸಲು ಒದ್ದಾಡುತ್ತಿದ್ದುದು ಸ್ಪಷ್ಟವಾಗಿತ್ತು. ಕೊನೆಗೆ ವಾಹನದ ಡ್ರೈವರ್ ಹಾಗೂ ಬಸ್ಸಿನಲ್ಲಿದ್ದ ಇತರ ಬಾಂಗ್ಲಾದ ಅಧಿಕಾರಿಗಳು ಹಾಗೂ ಹೀಗೂ ಕಷ್ಟಪಟ್ಟು ಕಬ್ಬಡ್ಡಿ ಆಟಗಾರರನ್ನು ಹೊಟೆಲಿಗೆ ತಲುಪಿಸುವ ವೇಳೆಗೆ ಎಲ್ಲರಿಗೂ ಹೋದ ಜೀವ ಬಂದಂತಾಗಿತ್ತು.
          ಇನ್ನು ಇಂತಹ ದೇಶಕ್ಕೆ ಬರಲಾರೆವು. ಒಮ್ಮೆ ಜೀವ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು ಎಲ್ಲರೂ. ಸಾವಿನ ದವಡೆಗೆ ಸಿಲುಕಿ ವಾಪಾಸು ಬಂದ ಅನುಭವ. ಪ್ರತಿಯೊಬ್ಬರೂ ಭಯಗೊಂಡಿದ್ದರು. ಆದರೆ ಯಾರೂ ಎದುರಿಗೆ ತೋರಿಸಕೊಳ್ಳದೇ ಪೆಚ್ಚು ನಗೆಯನ್ನು ಬೀರುತ್ತಿದ್ದರು. ಹೊಟೆಲಿಗೇನೋ ಬಂದಾಗಿದೆ. ನಾಳೆ ಬೆಳಿಗ್ಗೆ ಎದ್ದು ಏರ್ ಪೋರ್ಟಿಗೆ ಹೋಗಬೇಕು. ಹೇಗೆ ಸಾಗುವುದೆಂಬ ಚಿಂತೆ ಎಲ್ಲರ ಮನದಲ್ಲಿ ಆವರಿಸಿತ್ತು. ಬೆಳಗಾಗುವ ವೇಳೆಗೆ ಹಿಂಸಾಚಾರ ತಹಬಂದಿಗೆ ಬರಬಹುದು ಎನ್ನುವ ಆಶಾವಾದ ಕೆಲವರಲ್ಲಿ ಮೂಡಿತ್ತು. ಭಾರತೀಯ ಕಬ್ಬಡ್ಡಿ ತಂಡದ ಜೊತೆಗೆ ಸುಂದರಬನ್ಸ್ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಮಧುಮಿತಾ ತನ್ನ ಅಪಾರ್ಟ್ ಮೆಂಟ್ ಗೆ ಹೇಗೆ ಸಾಗಬೇಕು ಎನ್ನುವ ಆಲೋಚನೆಯಲ್ಲಿ ತೊಡಗಿಕೊಂಡಿದ್ದಳು. ವಿನಯಚಂದ್ರನ ಗಮನಕ್ಕೂ ಇದು ಬಂದಿತ್ತು. ಆತನಿಗೂ ಈಕೆಯನ್ನು ಅವಳ ಮನೆಗೆ ಹೇಗೆ ಕಳಿಸಬೇಕು ಎಂದುಕೊಂಡ.
         ತಂಡದ ಇತರರರಿಗೂ ವಿಷಯವನ್ನು ವಿನಯಚಂದ್ರ ತಿಳಿಸಿದ್ದ. ಎಲ್ಲರೂ ಏನು ಉತ್ತರ ನೀಡಬೇಕೆಂದು ತಿಳಿಯದೇ ಸುಮ್ಮನಾದರು. ಒಂದೆರಡು ಜನ ಹೊಟೆಲಿನಲ್ಲಿಯೇ ಉಳಿಯಲಿ ಎಂದರಾದರೂ ಬಗೆಹರಿಯಲಿಲ್ಲ. ಜಾಧವ್ ಅವರೂ ಈ ಕುರಿತು ಏನು ಹೇಳಬೇಕೋ ತಿಳಿಯದಾದರು. ಸೂರ್ಯನ್ ವಿನಯಚಂದ್ರನ ಬಳಿ `ನಾನು ರೂಮು ಬಿಟ್ಟು ಹೋಗುತ್ತೇನೆ. ನೀನು ಹಾಗೂ ಆಕೆ ಉಳೀರಪ್ಪಾ..' ಎಂದು ತುಂಟತನದಿಂದ ಮಾತನಾಡಿದ. `ಸುಮ್ಮನಿರು ಮಾರಾಯಾ..' ಎಂದು ಆತನನ್ನು ವಿನಯಚಂದ್ರ ಸುಮ್ಮನಿರಿಸುವ ವೇಳೆಗೆ ಸುಸ್ತೋ ಸುಸ್ತು. ಮಧುಮಿತಾ ಒಂದೇ ಸಮನೆ ಮನೆಗೆ ಪೋನ್ ಮಾಡಲು ಯತ್ನಿಸುತ್ತಿದ್ದಳು. ಆದರೆ ಮನೆಯ ಸಂಪರ್ಕ ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಲೇ ಮಧುಮಿತಾ ವ್ಯಾಕುಲಗೊಂಡಿದ್ದಳು. ಅಪಾರ್ಟ್ ಮೆಂಟಿನ ಅಕ್ಕಪಕ್ಕದವರಿಗೆ ಪೋನಾಯಿಸಬೇಕೆಂದರೆ ಅವರ ದೂರವಾಣಿಯೂ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಭಯಗೊಂಡಳು ಮಧುಮಿತಾ. ಮನೆಯವರಿಗೆ ಏನೋ ಆಗಿದೆ ಎನ್ನುವ ನಿರ್ಧಾರಕ್ಕೂ ಬಂದಳು. ವಿನಯಚಂದ್ರ ಆಕೆಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ.
          ಭಯದ ಕಾರಣದಿಂದಲೇ ಮಧುಮಿತಾಳಿಗೆ ರಾತ್ರಿಯ ಊಟ ಸೇರಲಿಲ್ಲ. ವಿನಯಚಂದ್ರ ಆಕೆಗೆ ಊಟ ಮಾಡಲು ಒತ್ತಾಯ ಮಾಡಿದ. ಆಕೆ ಮಾತ್ರ ಊಟ ಮಾಡದೇ ಅಳಲು ಆರಂಭಿಸಿದಳು. ತನ್ನ ಮನೆಯ ಬಳಿಯೇ ಸೈಕಲ್ ರಿಕ್ಷಾ ಹೊಡೆಯುತ್ತಿದ್ದ ಸಲೀಂ ಚಾಚಾನಿಗೆ ಪೋನ್ ಮಾಡಿದಳು ಮಧುಮಿತಾ. ಸಲೀಂ ಚಾಚಾ ಕೂಡಲೇ ಮಧುಮಿತಾಳ ಮನೆಗೆ ಹೋಗಿ ಬರುವ ಭರವಸೆ ನೀಡಿದ. ಆತನಿಂದ ಉತ್ತರ ಬರುವವರೆಗೂ ಮಧುಮಿತಾ ಚಡಪಡಿಸಿ ಹೋದಳು. ಕೆಲ ಹೊತ್ತಿನಲ್ಲಿಯೇ ಪೋನ್ ಮಾಡಿದ ಸಲೀಂ ಚಾಚಾ ಮಧುಮಿತಾಳ ಅಪಾರ್ಟ್ ಮೆಂಟ್ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ. ಮತ್ತೊಮ್ಮೆ ಗಾಬರಿಗೊಳ್ಳುವ ಪರಿಸ್ಥಿತಿ ಮಧುಮಿತಾಳದ್ದಾಯಿತು.
          ರಾತ್ರಿಯ ವೇಳೆ ಏನಾದರಾಗಲಿ ತಾನು ಅಪಾರ್ಟ್ ಮೆಂಟ್ ಗೆ ಹೊರಡುತ್ತೇನೆ ಎಂದು ಹೊರಟು ನಿಂತಳು ಮಧುಮಿತಾ. ಆಕೆಯನ್ನು ತಡೆಯುವ ವಿನಯಚಂದ್ರನ ಯತ್ನ ವಿಫಲವಾಯಿತು. ಕೊನೆಗೆ ಆಕೆಯ ಜೊತೆಗೆ ತಾನೂ ಹೋಗುವುದಾಗಿ ನಿರ್ಧರಿಸಿದ. ತನ್ನ ನಿರ್ಧಾರವನ್ನು ತಂಡದ ಇತರರಿಗೆ ಹೇಳಿದರೆ ಖಂಡಿತವಾಗಿಯೂ ಆತನನ್ನು ಹೋಗಲು ಅವಕಾಶ ನೀಡುವುದಿಲ್ಲ ಎನ್ನುವುದು ಖಾತ್ರಿಯಿತ್ತು. ಕೊನೆಗೆ ಮಧುಮಿತಾಳ ಬಳಿ ತಾನೂ ಬರುತ್ತೇನೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತಿಳಿಸಿದ. ಆಕೆ ಮೊದ ಮೊದಲು ವಿರೋಧಿಸಿದಳಾದರೂ ಕೊನೆಗೆ ಒಪ್ಪಿಕೊಂಡಳು.
                  ಯಾರಿಗೆ ಗೊತ್ತು ಮತ್ತೆ ವಾಪಾಸು ಬರಲಿಕ್ಕಾಗುತ್ತದೆಯೋ ಎಲ್ಲವೋ. ಬಾಂಗ್ಲಾದೇಶದಲ್ಲಿಯೇ ಇರುವ ಅನಿವಾರ್ಯತೆ ಬಂದರೂ ಬರಬಹುದು. ಯಾವುದಕ್ಕೂ ಸಜ್ಜಾಗಿಯೇ ಹೋಗಬೇಕು ಎಂದು ಆಲೋಚಿಸಿದ. ವಿನಯಚಂದ್ರ ಬಾಂಗ್ಲಾದೇಶದಲ್ಲಿ ಅಗತ್ಯವೆನ್ನಿಸುವ ಕೆಲವೇ ಕೆಲವು ವಸ್ತುಗಳನ್ನು ತೆಗೆದುಕೊಂಡ. ತಾನು ಭಾರತದವನು ಎಂಬುದಕ್ಕೆ ಸಾಕ್ಷಿಯಾಗಿ ಒಂದು ಗುರುತಿನ ಚೀಟಿಯನ್ನೂ ತೆಗೆದುಕೊಂಡ. ಉಳಿದ ವಸ್ತುಗಳನ್ನು ರೂಮಿನಲ್ಲಿಯೇ ಬಿಟ್ಟ. ಕೊನೆಗೆ ಸೂರ್ಯನ್ ಹಾಗೂ ತನ್ನ ಕಬ್ಬಡ್ಡಿ ತಂಡದ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದು ತಾನು ಮಧುಮಿತಾಳೊಂದಿಗೆ ತೆರಳುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಮರಳುತ್ತೇನೆ. ಇಲ್ಲವಾದರೆ ನೀವೆಲ್ಲ ಭಾರತಕ್ಕೆ ಮರಳಿ. ನಾನು ಶತಪ್ರಯತ್ನದಿಂದ ಬಂದು ತಲುಪುತ್ತೇನೆ ಎಂದು ಬರೆದಿದ್ದ. ಸದ್ದಿಲ್ಲದಂತೆ ಸೂರ್ಯನ್ ಮಲಗಿದ್ದ ಜಾಗದಲ್ಲಿ ಇಟ್ಟು ಹೊರಟ. ಮಧುಮಿತಾ ಹಿಂಬಾಲಿಸಿದಳು.
           ಕಗ್ಗತ್ತಲ ರಾತ್ರಿಯಲ್ಲಿ ಮಧುಮಿತಾ ಹಾಗೂ ವಿನಯಚಂದ್ರ ಢಾಕಾದ ಬೀದಿಗಳಲ್ಲಿ ನಡೆಯುತ್ತಿದ್ದರೆ ಬೇಕೆಂದರೂ ಇನ್ನೊಂದು ಜೀವಿ ಅಲ್ಲಿರಲಿಲ್ಲ. ಎಲ್ಲ ನಗರಗಳಂತೆ ರಾತ್ರಿಯ ವೇಳೆ ಅಬ್ಬರದಿಂದ ಓಡಾಡುವ ವಾಹನಗಳು ಅಲ್ಲೊಂದು ಇಲ್ಲೊಂದು ಇದ್ದವು. ಆಗೊಮ್ಮೆ ಈಗೊಮ್ಮೆ ಪೊಲೀಸ್ ಸೈರನ್ ಕೇಳಿಸುತ್ತಿತ್ತು. ದಾರಿಯ ತುಂಬೆಲ್ಲ ಯಾವುದೋ ಮೂಲೆಯಲ್ಲಿ ನಾಯಿಯೊಂದು ಬೊಗಳಿ ಅರಚುತ್ತಿತ್ತು. ಮಧುಮಿತಾಳಿಗೆ ಭಯವಾಗಿ ಥಟ್ಟನೆ ವಿನಯಚಂದ್ರನ ಕೈ ಹಿಡಿದುಕೊಂಡಳು. ವಿನಯಚಂದ್ರ ಒಮ್ಮೆ ಬೆಚ್ಚಿದನಾದರೂ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಡೆಯಹತ್ತಿದ.
           ಅರೇ ಇಳಿಸಂಜೆಯ ವೇಳೆ ಹಿಂಸಾಚಾರದಿಂದ ಉರಿಯುತ್ತಿದ್ದ ಊರು, ಬೀದಿ ಇದೇನಾ ಎನ್ನುವಷ್ಟು ಶಾಂತವಾಗಿತ್ತು ಆ ಬೀದಿ. ನಿರ್ಮಾನುಷವಾಗಿದ್ದ ಕಾರಣ ಅವ್ಯಕ್ತ ಭೀತಿ ಗೂಡು ಕಟ್ಟಿಕೊಂಡಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಬೀದಿ ದೀಪಗಳು ಮಿಣುಕುತ್ತಿದ್ದವು. ನೇರ ಹಾದಿಯಲ್ಲಿ ಸಾಗಲು ಭಯವಾಯಿತು. ಬಳಸು ಹಾದಿಯನ್ನು ಹಿಡಿದು ಸಾಗಿದರು. ಮಧುಮಿತಾಳಿಗೆ ಢಾಕಾ ಪರಿಚಿತವಾಗಿದ್ದ ಕಾರಣ ಅವಳನ್ನೇ ಅನುಸರಿಸುತ್ತಿದ್ದ ವಿನಯಚಂದ್ರ. ಯಾವು ಯಾವುದೋ ಕಡೆಗಳಲ್ಲಿ ತಿರುಗುತ್ತ, ಹುಡುಕುತ್ತ ಅವರಿಬ್ಬರೂ ಸಾಗುತ್ತಿದ್ದರೆ ಅತಿಯಾಗಿ ಸುರೆ ಕುಡಿದ ದೇವತೆಗಳು ಸ್ವರ್ಗದ ಯಾವುದೋ ಮೂಲೆಯಲ್ಲಿ ಅಲೆದಾಡುತ್ತಿದ್ದಂತೆ ಅನ್ನಿಸುತ್ತಿತ್ತು. ಬಾನಂಚಿನಲ್ಲಿ ಬಿರು ಬೇಸಿಗೆಯಲ್ಲಿ ಅಪರೂಪಕ್ಕೆ ಬಂದ ಮೋಡದ ಜೋಡಿ ಎತ್ತ ಸಾಗಬೇಕೆಂದು ತಿಳಿಯದೇ ಗಾಳಿ ಸುಳಿದಾಡಿದ ಕಡೆಯಲ್ಲಿ ಸಾಗಿದಂತೆ ಅನ್ನಿಸುತ್ತಿತ್ತು. ಭಯದ ನಡುವೆಯೂ ಮಧುಮಿತಾಳಿಗೆ ವಿನಯಚಂದ್ರನ ಸಾನ್ನಿಧ್ಯ ಖುಷಿ ಕೊಟ್ಟಿತ್ತು.
            ಅದ್ಯಾವುದೋ ಸರ್ಕಲ್ಲಿನ ಮೂಲೆಯಲ್ಲಿ ನಿಂತು ಮಧುಮಿತಾ ಸಲೀಂ ಚಾಚಾನಿಗೆ ಪೋನಾಯಿಸಿದಳು. ಆತನ ಬಳಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ತಮ್ಮನ್ನು ಅಪಾರ್ಟ್ ಮೆಂಟಿನ ಬಳಿ ಕರೆದೊಯ್ಯುವಂತೆ ಹೇಳಿದ್ದಳು. ಅದಕ್ಕೆ ಸಲೀಂ ಚಾಚಾ ಯಾವುದೋ ಪ್ರದೇಶಕ್ಕೆ ಬರುವಂತೆ ಹೇಳಿದ. ಮಧುಮಿತಾ ಹಾಗೂ ವಿನಯಚಂದ್ರ ಅತ್ತ ಕಡೆ ಹೆಜ್ಜೆ ಹಾಕಿದರು. ಅದ್ಯಾವುದೋ ಮೂಲೆಯಲ್ಲಿ ಗುಂಪೊಂದು ಕೇಕೆ ಹಾಕುತ್ತ ನಗುತ್ತಿತ್ತು. ಇದನ್ನು ಕೇಳಿದ್ದೇ ವಿನಯಚಂದ್ರ ಹಾಗೂ ಮಧುಮಿತಾ ದೊಡ್ಡ ಕಂಪೌಂಡಿನ ಹಿಂದಕ್ಕೆ ಸರಿದು ಅಡಗಿ ಕೂತರು. ಆ ಗುಂಪು ಹತ್ತಿರಕ್ಕೆ ಬಂದಂತೆ ಭಾಸವಾಯಿತು. ಮಾತುಗಳು ದೊಡ್ಡದಾಗುತ್ತಿದ್ದವು. ಭಯದಿಂದ ತತ್ತರಿಸಿದ ಮಧುಮಿತಾ ವಿನಯಚಂದ್ರನನ್ನು ತಬ್ಬಿಹಿಡಿದು ಕುಳಿತಿದ್ದಳು. ಮಧುಮಿತಾ ತಬ್ಬಿಕೊಂಡಿದ್ದರಿಂದ ಒಮ್ಮೆ ವಿನಯಚಂದ್ರ ಕಸಿವಿಸಿಗೊಂಡಿದ್ದರೂ ನಂತರ ತುಂಟತನದಿಂದ ಆಕೆಯ ಕೆನ್ನೆಯ ಮೇಲೊಂದು ಮುತ್ತನ್ನು ಕೊಟ್ಟು ಕಣ್ಣು ಹೊಡೆದಿದ್ದ. ಮಧುಮಿತಾ ಭಯದ ನಡುವೆಯೂ ನಾಚಿಕೊಂಡಿದ್ದಳು. ನಿಧಾನವಾಗಿ ಆ ಗುಂಪಿನ ಧ್ವನಿ ದೂರಾದಾಗ ನಿರಾಳರಾದರು. ಮಧುಮಿತಾ ಕೂಡ ಮುತ್ತಿಗೆ ಪ್ರತಿಯಾಗಿ ಮುತ್ತನು ನೀಡಿ ಸರಸರನೆ ಹೆಜ್ಜೆ ಹಾಕಿದ್ದಳು. ವಿನಯಚಂದ್ರ ಎಳೆದು ಆಕೆಯನ್ನು ತಬ್ಬಿಕೊಂಡಿದ್ದ. ಆಕೆ ತುಂಟತನದಿಂದ ಕೊಸರಿಕೊಂಡು ಮುಂದಕ್ಕೆ ಸಾಗಿದ್ದಳು. ವಿನಯಚಂದ್ರ ಚಿಗರೆಯ ಮರಿಯಂತೆ ಕುಣಿಯುತ್ತ ಸಾಗಿದ್ದ.
           ಸಲೀಂ ಚಾಚಾ ಹೇಳಿದ್ದ ಜಾಗಕ್ಕೆ ಬರುವ ವೇಳೆಗೆ ಇನ್ನೂ ಅರ್ಧಗಂಟೆ ಬೇಕಾಯಿತು. ನೇರವಾಗಿ ಬರಬಹುದಾಗಿದ್ದ ದಾರಿಯಲ್ಲಿ ಅಪಾಯವಿರಬಹುದೆಂದು ಅರಿತು ಸುತ್ತು ಬಳಸಿಯೂ ಅಥವಾ ಇನ್ನಾವುದೋ ಮಾರ್ಗವನ್ನು ಹಿಡಿದೋ ಬಂದಿದ್ದರು. ಬೀದಿಯ ಕೊನೆಯಲ್ಲಿ ಜನರ ಸುಳಿವು ಕಂಡುಬಂದ ತಕ್ಷಣ ಇವರೂ ಅಡಗುತ್ತ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದರು. ನಡು ನಡುವೆ ರೊಮ್ಯಾಂಟಿಕ್ ಆಗುತ್ತ, ಮುತ್ತಿನ ವಿನಿಮಯ ಮಾಡಿಕೊಳ್ಳುತ್ತಲೇ ಸಾಗಿದ್ದರು. ಬದು ಕತ್ತಿಯ ಮೇಲಿನ ನಡಿಗೆಯಾಗಿದೆ. ಆದರೆ ಇದು ಹಿತವಾಗಿದೆ ಎಂದುಕೊಂಡ ವಿನಯಚಂದ್ರ.
          ಸಲೀಂ ಚಾಚ ಬಹು ಹೊತ್ತಿನ ನಂತರ ಬಂದ. ಆತ ಬರುವುದು ವಿಳಂಬವಾಗುತ್ತಿದ್ದಂತೆ ಬರುತ್ತಾನೋ ಇಲ್ಲವೋ ಎನ್ನುವ ಅನುಮಾನವೂ ಒಂದು ಕ್ಷಣ ಕಾಡದೇ ಇರಲಿಲ್ಲ. ಆ ಸ್ಥಳದಿಂದ ಮಧುಮಿತಾಳಿದ್ದ ಅಪಾರ್ಟ್ ಮೆಂಟ್ ಅನಾಮತ್ತು 8 ಕಿ.ಮಿ ದೂರದಲ್ಲಿತ್ತು. ಸಲೀಂ ಚಾಚಾ ಬರದಿದ್ದರೆ ಅಲ್ಲಿಗೆ ತೆರಳುವುದು ಹೇಗೆ ಎನ್ನುವ ಆಲೋಚನೆ ಮಧುಮಿತಾಳ ಮನಸ್ಸಿನಲ್ಲಿ ಮೂಡದೇ ಇರಲಿಲ್ಲ. ಕೊನೆಗೊಮ್ಮೆ ಸಲೀಂ ಚಾಚಾ ಬಂದ. ಸಲೀಂ ಚಾಚಾನ ಮೈತುಂಬ ರಕ್ತದ ಕಲೆಗಳಾಗಿದ್ದವು. ಹೌಹಾರಿದ ವಿನಯಚಂದ್ರ ಹಾಗೂ ಮಧುಮಿತಾ ಸಲೀಂ ಚಾಚಾನ ಬಳಿ ವಿಚಾರಿಸಿದಾಗ `ದಾರಿಯಲ್ಲಿ ಬರುವಾಗ ಒಂದು ಕುಟಂಬದ ಮೇಲೆ ಹಲ್ಲೆ ನಡೆದಿತ್ತು. ಅವರನ್ನು ರಕ್ಷಿಸಿ ಬಂದೆ. ಅದಕ್ಕೆ ಹೀಗಾಗಿದೆ..' ಎಂದು ಉತ್ತರಿಸಿದಾಗ ನಿರಾಳರಾದರಷ್ಟೆ ಅಲ್ಲದೇ ಸಲೀಂ ಚಾಚಾನ ಬಗ್ಗೆ ಖುಷಿಯನ್ನೂ ಪಟ್ಟರು. ಮಧುಮಿತಾ ಸಲೀಂ ಚಾಚಾನಿಗೆ ವಿನಯಚಂದ್ರನನ್ನು ಪರಿಚಯಿಸಿದಳು. ಸಲೀಂ ಚಾಚಾ ಬೆರಗುಗಣ್ಣಿನಿಂದ ವಿನಯಚಂದ್ರನನ್ನು ನೋಡಿದ. ವಿನಯಚಂದ್ರ ಚಾಚಾನಿಗೆ ನಮಸ್ಕರಿಸಲು ನೋಡಿದಾಗ `ಜೀತೆ ರಹೋ ಬೇಟಾ..' ಎಂದು ಹರಸಿದ.
            ಸಲೀಂ ಚಾಚಾನ ಬಳಿ ತನ್ನ ಅಪಾರ್ಟ್ ಮೆಂಟಿನ ಕುರಿತು ವಿಚಾರಿಸಿದಾಗ `ಆ ಪ್ರದೇಶದಲ್ಲಿ ಇನ್ನೂ ಹಿಂಸಾಚಾರ ನಡೆಯುತ್ತಲೇ ಇದೆ. ಉಳಿದ ಕಡೆಗಳಲ್ಲಿ ಹಿಂಸಾಚಾರ ಹಬ್ಬದಂತೆ ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರೂ ಆ ಪ್ರದೇಶದಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ನಾನು ಹಲವು ಸಾರಿ ಅಲ್ಲಿಗೆ ಹೋಗಲು ಪ್ರಯತ್ನ ಪಟ್ಟಿದ್ದಿದೆ. ಆದರೆ ಸಾಧ್ಯವಾಗಲಿಲ್ಲ..' ಎಂದ.
            `ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗು ಚಾಚಾ.. ಯಾಕೋ ಮನೆಯವರನ್ನು ನೋಡಬೇಕು ಎನ್ನಿಸುತ್ತಿದೆ..' ಎಂದು ಮಧುಮಿತಾ ಹೇಳಿದಾಗ ಚಾಚಾನಿಗೆ ಇಲ್ಲ ಎನ್ನಲಾಗಲಿಲ್ಲ.
            ಮಧುಮಿತಾಳಿಗೆ ಮನೆಯೇಕೋ ಬಹಳ ನೆನಪಾಗುತ್ತಿತ್ತು. ಅಪ್ಪ, ಅಮ್ಮ ಹಾಗೂ ಮನೆಯ ಸದಸ್ಯರು ಬಹಳ ಕಾಡುತ್ತಿದ್ದರು. ಅವರಿಗೇನೋ ಆಗಿದೆ ಎಂದು ಒಳಮನಸ್ಸು ಹೇಳಿತ್ತಿತ್ತು. ಜೊತೆಯಲ್ಲಿಯೇ ಏನೂ ಆಗದಿರಲಿ ದೇವರೆ ಎಂದೂ ಮನಸ್ಸು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಿತ್ತು. ಸಲೀಂ ಚಾಚಾ ತನ್ನ ಸೈಕಲ್ ರಿಕ್ಷಾ ಮೇಲೆ ಕುಳ್ಳಿರಿಸಿಕೊಂಡು ಅವರನ್ನು ಕರೆದೊಯ್ಯತೊಡಗಿದ. ವಿನಯಚಂದ್ರನಿಗೆ ಮತ್ತೆ ಕಸಿವಿಸಿ. 75 ವರ್ಷ ವಯಸ್ಸಾಗಿದ್ದ ಸಲೀಂ ಚಾಚಾ ಸೈಕಲ್ ತುಳಿಯುತ್ತಿದ್ದರೆ ಹರೆಯದಲ್ಲಿದ್ದ ನಾವು ಸೈಕಲ್ಲಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಿದ್ದೇವಲ್ಲ.. ಎನ್ನಿಸಿತು. ಚಾಚಾನ ಬಳಿ `ನಾನು ಸೈಕಲ್ ತುಳಿಯಲೇ..' ಎಂದ. ಚಾಚಾ ಅದಕ್ಕೆ ಪ್ರತಿಯಾಗಿ `ಯಾಕೆ ಬೇಟಾ.. ಏನಾಯಿತು.. ನಾನು ಸೈಕಲ್ ತುಳಿಯುವುದು ನಿನಗಿಷ್ಟವಿಲ್ಲವೇ..?' ಎಂದು ಕೇಳಿದ್ದ. ಚಿಕ್ಕಂದಿನಲ್ಲಿ ಅತಿಯಾಗಿ ಮುದ್ದು ಮಾಡುತ್ತಿದ್ದ ಅಜ್ಜನ ನೆನಪಾಗಿತ್ತು ವಿನಯಚಂದ್ರನಿಗೆ.
           `ಇಲ್ಲ ಚಾಚಾ.. ನೀವು ಸೈಕಲ್ ತುಳೀತಿದ್ರೆ.. ನಾವು ಕುಳಿತಿರೋದು.. ನನಗೆ ಸರಿ ಕಾಣುತ್ತಿಲ್ಲ.. ವಯಸ್ಸಾದವರು ನೀವು.. ಬನ್ನಿ ಕುಳಿತುಕೊಳ್ಳಿ.. ನಾನು ಸೈಕಲ್ ತುಳಿಯುತ್ತೇನೆ..'
            `ನಯಿ ಬೇಟಾ.. ಸೈಕಲ್ ತುಳಿದು ಜೀವನ ನಡೆಸುವುದು ನಮ್ಮ ವೃತ್ತಿ. ಹೇಗೆ ಇರಲಿ,.. ಎಂತದ್ದೇ ಆಗಿರಲಿ ನಾವು ಸೈಕಲ್ ತುಳಿದೇ ಜೀವಿಸುತ್ತೇವೆ. ನನಗೆ ತೊಂದರೆಯಿಲ್ಲ ಬೇಟಾ.. ನೀನು ಆರಾಮಾಗಿ ಕುಳಿತುಕೋ..'
             `ಇಲ್ಲ ಚಾಚಾ.. ನಾನು ಕಬ್ಬಡ್ಡಿ ಆಟಗಾರ.. ನನಗೂ ಸೈಕಲ್ ತುಳಿದು ಗೊತ್ತಿದೆ. ಬನ್ನಿ ನಾನೊಮ್ಮೆ ತುಳಿಯುತ್ತೇನೆ..' ಎಂದವನೇ ವಿನಯಚಂದ್ರ ಸಲೀಂ ಚಾಚಾನನ್ನು ಸೈಕಲ್ಲಿನಿಂದ ಇಳಿಸಿ ತಾನು ಸೈಕಲ್ ಹತ್ತಿಯೇ ಬಿಟ್ಟ. ಅನಿವಾರ್ಯವಾಗಿ ಚಾಚಾ  ತಾನು ತುಳಿಯುತ್ತಿದ್ದ ಸೈಕಲ್ಲಿನಲ್ಲಿ ಪ್ರಯಾಣಿಕನಾಗಬೇಕಾಯಿತು. ಮೊದ ಮೊದಲಿಗೆ ವಿನಯಚಂದ್ರನಿಗೆ ಸೈಕಲ್ ರಿಕ್ಷಾ ತುಳಿಯುವುದು ಕಷ್ಟವಾದರೂ ಕೆಲವೇ ಮಾರುಗಳ ದೂರ ಹೋಗುವಷ್ಟರಲ್ಲಿ ಹದ ಸಿಕ್ಕಿತು. ಸಲೀಂ ಚಾಚಾ ಮಾತಿಗೆ ತೊಡಗಿದ್ದ. ವಿನಯಚಂದ್ರನ ಬಳಿ ಆತನ ಪೂರ್ವಾಪರಗಳನ್ನೆಲ್ಲ ವಿಚಾರಿಸಿದ. ಮಧುಮಿತಾ ಹೇಳಿದಳು. ಕೊನೆಗೆ ತಾನು ವಿನಯಚಂದ್ರನನ್ನು ಪ್ರೀತಿಸುತ್ತಿರುವ ವಿಷಯವನ್ನೂ ತಿಳಿಸಿದಾಗ ಸಲೀಂ ಚಾಚಾ ಸಂತಸಪಟ್ಟರು. ವಿನಯಚಂದ್ರ ಭಾರತದವನೆಂದು ತಿಳಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ತಾನೂ ಭಾರತದಲ್ಲಿದ್ದೆ.. ಹೈದರಾಬಾದ್ ತನ್ನ ಊರಾಗಿತ್ತು. ಚಿಕ್ಕಂದಿನಲ್ಲಿಯೇ ಮನೆಯಿಂದ ಓಡಿ ಬಂದಿದ್ದೆ. ಢಾಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಸ್ವಾತಂತ್ರ್ಯ ಸಿಕ್ಕಿತ್ತು. ಬಾಂಗ್ಲಾದೇಶ ಭಾರತದಿಂದ ಬೇರೆಯಾಗಿತ್ತು. ನನಗೆ ಭಾರತಕ್ಕೆ ಮರಳಲು ಸಾಧ್ಯವೇ ಆಗಿಲ್ಲ ಎಂದೂ ಹೇಳಿದ.
             ವಿನಯಚಂದ್ರ ಈ ಕುರಿತು ವಿಚಾರಿಸಿದಾಗ `ಹತ್ತೋ ಹದಿನೈದೋ ವರ್ಷದವನಿದ್ದಾಗ ಮನೆಯಲ್ಲಿ ತಂದೆ ತಾಯಿಗಳ ಜೊತೆ ಜಗಳವಾಡಿ ಓಡಿ ಬಂದಿದ್ದೆ. ಆದರೆ ನಂತರ ಹೈದರಾಬಾದಿಗೆ ಹೋಗಲು ಇಂದಿನವರೆಗೂ ಆಗಿಲ್ಲ. ಬಹುಶಃ ಮುಂದೂ ಆಗುವುದಿಲ್ಲವೇನೋ.. ನನಗಿಲ್ಲಿ ಮನೆ, ಮಡದಿ ಮಕ್ಕಳು ಎಲ್ಲ ಇದ್ದಾರೆ. ಈ ಬೇಟಿ ಮಧು ಇದ್ದಾಳಲ್ಲ.. ಒಂದಿನ ಸೈಕಲ್ ತುಳಿದು ಸುಸ್ತಾಗಿತ್ತು. ಇಳಿಸಂಜೆಯ ಸಮಯದಲ್ಲಿ ಅದ್ಯಾರೋ ನನ್ನ ಸೈಕಲ್ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನನ್ನನ್ನು ಬೀಳಿಸಿದ್ದರು. ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದಳು. ಅಂದಿನಿಂದ ನನಗೆ ಮಧು ಮಗಳಂತೆಯೇ ಆಗಿದ್ದಾಳೆ.. ' ಎಂದ. ಮಧುಮಿತಾ ಏನೆಲ್ಲ ಮಾಡಿದ್ದಾಳಲ್ಲ.. ಎಂದುಕೊಂಡ ವಿನಯಚಂದ್ರ.
           ಚಾಚಾ ವಿನಯಚಂದ್ರನ ಮನೆಯ ಬಗ್ಗೆ ವಿಚಾರಿಸಿದಾಗ ವಿನಯಚಂದ್ರ ವಿವರಿಸಿ ತನ್ನ ತಾತನನ್ನು ನೀವು ನೆನಪು ಮಾಡಿದಿರಿ ಎಂದು ತಿಳಿಸಿದ. ಸಲೀಂ ಚಾಚಾ ತನ್ನ ಉದ್ದನೆಯ ಬಿಳಿ ಗಡ್ಡವನ್ನು ನೀವಿಕೊಂಡು ಪುಕು ಪುಕು ನಕ್ಕರು. ಅಷ್ಟರಲ್ಲಿ ಇವರು ಸಾಗುತ್ತಿದ್ದ ದಾರಿಯಲ್ಲಿ ಹತ್ತೋ ಹದಿನೈದೋ ಜನರಿದ್ದ ಗುಂಪು ಗಲಾಟೆ ಮಾಡುತ್ತ ಬರುತ್ತಿದ್ದು ಕಂಡು ಬಂದಿತು. ಸಲೀಂ ಚಾಚಾ ಇದ್ದಕ್ಕಿದ್ದಂತೆ ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಸೈಕಲ್ಲಿನಿಂದ ಇಳಿಸಿ ಹಿಂದಕ್ಕೆ ಕುಳ್ಳಿರಿಸಿ ತಾನು ಸೈಕಲ್ ಹೊಡೆಯಲು ಆರಂಭಿಸಿದ. ಆ ಗುಂಪು ಹತ್ತಿರಕ್ಕೆ ಬಂದಿತು. ವಿನಯಚಂದ್ರನಿಗೆ ಮುಂದೇನಾಗುತ್ತದೆಯೋ ಎನ್ನುವ ಭಯ. ಹತ್ತಿರ ಬಂದ ಗುಂಪು ಸಲೀಂ ಚಾಚಾನನ್ನು ನಿಲ್ಲಿಸಿ `ಯಾರು ನೀವು.. ಎಲ್ಲಿಗೆ ಸಾಗುತ್ತಿದ್ದೀರಿ.. ಯಾರಿದ್ದಾರೆ ಗಾಡಿಯಲ್ಲಿ ..' ಎಂದೇನೋ ವಿಚಾರಿಸಿದರಿರಬೇಕು. ಸಲೀಂ ಚಾಚಾ ಅದೇನು ಹೇಳಿದರೂ.. ಒಬ್ಬಾತ ಬಂದು ಗಾಡಿಯಲ್ಲಿ ಇಣುಕಿನೋಡಿದ. ವಿನಯಚಂದ್ರನಿಗೆ ಮಾತು ಹೊರಡಲಿಲ್ಲ. ಗಾಡಿಯಲ್ಲಿ ಇಣುಕುತ್ತಿದ್ದವನ ಮೇಲೆ ಮುಗಿಬಿದ್ದು ನಾಲ್ಕು ಏಟು ಹಾಕಿಬಿಡಲೇ ಎಂದುಕೊಂಡನಾಡದೂ ಸುಮ್ಮನಾದ. ಗಾಡಿಯಲ್ಲಿ ಇಣುಕಿ ನೋಡಿದವನು ಸುಮ್ಮನೇ ಹೋದ. ಮನಸ್ಸು ನಿರಾಳವಾಯಿತು. ಸೈಕಲ್ ರಿಕ್ಷಾ ಮುಂದಕ್ಕೆ ಸಾಗಿತು.

(ಮುಂದುವರಿಯುತ್ತದೆ.)

No comments:

Post a Comment