ಗಜಮುಖ ಗಣಪನ ಭಜಿಸಿ ಶಾರದೆಯನು ಸ್ತುತಿಸಿ
ಒರೆವೆನು ಗೋಕರ್ಣದ ಮಹಿಮೆಯ ವಿಸ್ತರಿಸಿ
ನರಲೋಕದೊಳು ಪಾಪ ಅಧಿಕವೆಂದೆನಿಸಿ
ಸುರಮುನಿ ಗೋಕರ್ಣದ ಮಹಿಮೆಯ ವಿಸ್ತರಿಸಿ
ಜಯದೇವ ಜಯದೇವ ||ಪ||
ಜಯಜಯ ವಿಘ್ನೇಶ್ವರಗೆ ಜಯಗೌರಿ ಪ್ರಿಯಗೆ
ಜಯಜಯ ಸಾಗರರಾಯ ಕೋಟೀತೀರ್ಥನಿಗೆ
ಜಯಜಯ ವೇಂಕಟರಮಣಗೆ ಮಂಕಾಳೇಶ್ವರಿಗೆ
ಜಯಜಯ ಗೋಕರ್ಣಾದ ಸರ್ವದೇವರಿಗೂ
ಜಯದೇವ ಜಯದೇವ ||೧||
ಒಂದು ದಿನ ಕೈಕಸೆಯು ಲಿಂಗವ ಪೂಜಿಸಲು
ಬಂದಾ ರಾವಣನಾ ಕಾಲಿಂದ ಛೇದಿಸಲು
ತಂದು ಕೊಡುವೆನು ಪ್ರಾಣಲಿಂಗವೆಂದೆನುತಾ
ಬಂದನೆ ಕೈಲಾಸಕ್ಕೆ ಹರಗೆ ವಂದಿಸುತಾ
ಜಯದೇವ ಜಯದೇವ ||೨||
ಬಂದಾ ರಾವಣನಾತ ಕಂಡೂ ಉಪಚರಿಸಿ
ಪ್ರಾಣಲಿಂಗವ ಕೊಡಲು ಸುರರೂ ಚಿಂತಿಸಿ
ಕಂದಾ ಗಣಪತಿಯಾ ಭಕ್ತಿಂದಾ ಪೂಜಿಸಿ
ವಂದಿಸಿ ಕಳಿಸಿದರಾಗ ಸುರರು ಸಂಸ್ತುತಿಸಿ
ಜಯದೇವ ಜಯದೇವ ||೩||
ಕಂಜಾಸಖಗರ್ಘ್ಯವನು ಕೊಡುವೆನೆಂದೆನುತಾ
ಹಂಬಲಿಸಿ ಬರುತಿರಲು ಕಂಡೂ ಬಾಲಕನಾ
ಕಂದಾ ಹಿಡಿ ಲಿಂಗವನು ಎಂದೂ ಘರ್ಜಿಸುತಾ
ಲಿಂಗವ ಕೊಟ್ಟು ನಡೆದಾನೆ ಅರ್ಘ್ಯಕೆಂದೆನುತಾ
ಜಯದೇವ ಜಯದೇವ ||೪||
ಆಡಿದ ಮಾತಿಗೆ ತಪ್ಪದೆ ಬಾಲಕ ಗಣಪ
ಮೂರು ಬಾರಿ ಕರೆದು ಲಿಂಗವ ಸ್ಥಾಪಿಸಿದ
ಆ ಮೇಳ್ಯಕೆ ಸುರರೆಲ್ಲ ಜಯಜಯ ಶಬ್ದ
ಬಂಗಾರದ ಮಳೆಗಳನೆ ಸುರಿಸಲಾಶ್ಚರ್ಯ
ಜಯದೇವ ಜಯದೇವ ||೫||
ಕೆಟ್ಟೆನೆಂದ್ ಬಾಲಕನಾ ಸಿಟ್ಟಿಲಿ ರಾವಣನು
ಮುಷ್ಟಿಲಿ ತ್ರಾಣಿಸಿ ತೆಗೆದನು ಸಜ್ಜಯಲಿಂಗವನು
ಪಂಚದಿಕ್ಕಿಗು ಒಗೆಯಲು ಪಂಚಕ್ಷೇತ್ರೆನುತಾ
ವಂಚಿಸಿ ತೆಗೆಯಲು ಬಾರದು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೬||
ಕಡುನಾಚಿ ರಾವಣನು ಓಡಿದನಾಕ್ಷಣದಿ
ಸುರರು ಭೂಸುರರೆಲ್ಲ ನೆರೆದರಥ್ಯದಲಿ
ನಿರ್ವಿಘ್ನದಾಯಕನೆಂದು ಪೂಜಿಸಲು
ಮೊದಲಾರಾಧನೆ ಈತನು ವಿಘ್ನೇಶ್ವರನೆಂದು
ಜಯದೇವ ಜಯದೇವ ||೭||
ಅಷ್ಟದಿಕ್ಪಾಲಕರೊಳ್ ಮಧ್ಯದಿ ಮಹಾಬಲನು
ಅರ್ಧಾಂಗಿ ಸಹಿತ ಸಾಗರನೂ ಷಣ್ಮುಖನು
ಅಷ್ಟಾಮಾವದ್ಯ ಜೋಗುಳದ ಮಧ್ಯದಲಿ
ನಿತ್ಯವು ರುದ್ರಾಭಿಷೇಕವು ಕೋಟೀತೀರ್ಥದಲಿ
ಜಯದೇವ ಜಯದೇವ ||೮||
ವರುಷಕ್ಕೆ ಬರುವದು ಮಹಾಯೋಗ ಶಿವರಾತ್ರೆ
ದರುಶನಕೆಂದ್ ಬರುವರು ಜನರ ಗಲಾಟೆ
ಪರಮಪುರುಷನ ತೇರ ಎಳೆವ ಭರಾಟೆ
ವೈಕುಂಠನಾಭ ಶ್ರೀ ವೇಂಕಟನಾ ಭೇಟಿ
ಜಯದೇವ ಜಯದೇವ ||೯||
ಸ್ತ್ರೀಹತ್ಯಾ ಶಿಶುಹತ್ಯಾ ಗೋಳತ್ಯಾಗಳನು
ನಿರ್ಮಿಸಿದನು ಬ್ರಹ್ಮನು ಮಹಾಪಾತಕಗಳನು
ದುಷ್ಕರ್ಣಿ ಚಾಂಡಾಳಿ ರಜಸ್ವಲೆ ದೋಷಂಗಳನು
ಶಿವಸ್ಮರಣೆಯೊಳ್ ಮಾತ್ರ ಸುಡುವದು ಸತ್ಯ ಪೇಳಿದರೆ
ಜಯದೇವ ಜಯದೇವ ||೧೦||
ಗೋಕರ್ಣದಲ್ಲಿರುವ ತಾಂಬರಗೌರಿ ತ್ರಾಸಿಡಿದು
ತೂಗಿದರೆ ಗೋಕರ್ಣವೇ ಮೇಲು
ಯಾತ್ರೆ ಮಾಡಿದ ವಾರ ಪಾಪ ಪರಿಹಾರ
ಕಾಶಿಯಿಂದಧಿಕ ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೧||
ನಿತ್ಯ ಗೋಕರ್ಣದ ಮಹಿಮೆಯ ಪೇಳ್ವವರಿಗ್
ಸಪ್ತಜನ್ಮದ ಪಾಪವು ಕಳೆದು ಹೋಗುವುದು
ಭಕ್ತಿಮುಕ್ತಿಯು ಸಂತಾನ ಸೌಭಾಗ್ಯ
ತಪ್ಪದೆ ಕೊಡುವನು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೨||
* ಹರಹರ ಮಹಾದೇವ *
(ಹವ್ಯಕ ಬಾಂಧವರ ಪಾಲಿನ ಮಹಾನ್ ಗೀತೆ. ನಿಮಗೆಲ್ಲ ಓದಲು ಸಿಗಲಿ ಅಂತ ಪೂರ್ತಿ ಹಾಕಿದ್ದೇನೆ. ಇದನ್ನು ಬರೆದವರು ಯಾರು ಅಂತಾ ಗೊತ್ತಿಲ್ಲ. ಆದರೆ ನಮ್ಮ ಮನೆ ಮನೆಗಳಲ್ಲಿ ಆಗಾಗ ಹಾಡ್ತಾ ಇರುತ್ತಾರೆ. ಓದಿ. )