Friday, June 8, 2018

ಜ್ವರ ಬರಬೇಕು

ಜ್ವರ ಬರಬೇಕು
ಆಗೊಮ್ಮೆ, ಈಗೊಮ್ಮೆ

ಎರಡೋ ಮೂರೋ ಕಂಬಳಿಯ
ಹೊದ್ದು ಮಲಗಬೇಕು
ಕಟಕಟಿಸುವ ಚಳಿಯ ನಡುವೆಯೂ
ನಿನ್ನ ಜಪ ಮಾಡಬೇಕು|

ತಲೆಗೆ ಹತ್ತಿದ ಜ್ವರದ
ಬಾಧೆಯ ನಡುವೆ
ನಿನ್ನ ನೆನಪಾಗಬೇಕು
ನಿನ್ನ ಹೆಸರ ಹಲುಬಬೇಕು|

ತಲೆಗೆ ಹಾಕಿದ ತಣ್ಣೀರು
ಪಟ್ಟಿಯ ಬಿಸಿಯೆಲ್ಲವೂ ನಿನ್ನ
ತಬ್ಬುಗೆಯ ನೆನಪು ಮಾಡಬೇಕು
ಹಿತವೆನ್ನಿಸಬೇಕು|

ಪ್ಯಾರಾಸೆಟಮಾಲ್, ಸಿಪಿಎಮ್ಮಿನ
ಕಹಿಯ ನಡುವೆಯೂ
ನಿನ್ನ ಚುಂಬನದ ಅಮಲೇ
ನಾಲಗೆಯ ಆವರಿಸಬೇಕು |

ಜ್ವರ ಬರಬೇಕು
ನಿನ್ನ ನೆನಪಿನ ನೆಪಕ್ಕಾದರೂ|

No comments:

Post a Comment