Wednesday, June 6, 2018

ಇದೇ ಅಲ್ಲವೇ ಅಚ್ಛೇದಿನ್ ?


(ಸಹ ಬರಹಗಾರ : ಗುರುಪ್ರಸಾದ ಕಲ್ಲಾರೆ)

ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ ಸಲಕರಣೆಗಳಾದ ಮಿಕ್ಸರ್, ಗ್ರೈಂಡರ್, ಇಸ್ತ್ರಿ, ಟಿವಿ ಇವ್ಯಾವುವೂ ಆ ಊರಿನಲ್ಲಿರಲಿಲ್ಲ. ಅಷ್ಟೇ ಏಕೆ ಮೊಬೈಲುಗಳು ಒಂದಿಬ್ಬರ ಬಳಿ ಇದ್ದರೂ ಅದಕ್ಕೆ ಚಾರ್ಜೇ ಇರುತ್ತಿರಲಿಲ್ಲ. ಈ ಎಲ್ಲ ಆಧುನಿಕ ಯಂತ್ರಗಳಿಗೆ ಅಗತ್ಯವಾದ ವಿದ್ಯುತ್ ಎಂಬುದೇ ಈ ಊರಿನಲ್ಲಿರಲಿಲ್ಲ. ವಿದ್ಯುತ್ ಗಾಗಿ ಈ ಊರಿನ ಗ್ರಾಮಸ್ಥರು ಏಳು ದಶಕಗಳಿಂದ ಕಾದು ಕುಳಿತಿದ್ದರು. ಕೊನೆಗೂ ಅವರ ಕಾಯುವಿಕೆಗೆ ಫಲ ಸಿಕ್ಕಿದೆ. ಹೆಬ್ಬಾರಗುಡ್ಡದ ಪಾಲಿಗೆ ಅಚ್ಛೇದಿನ್ ವಿದ್ಯುತ್ತಿನ ರೂಪದಲ್ಲಿ ಬಂದು ತಲುಪಿದೆ. ಮನೆ ಮನೆಯನ್ನು ಬೆಳಗಿಸಿದೆ.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲಾ ನೀಡಿದ ಕೊಡುಗೆ ಅವಿಸ್ಮರಣೀಯ. ಮಹಾತ್ಮಾ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕಹಳೆ ಕರ್ನಾಟಕದಲ್ಲಿ ಪ್ರತಿಧ್ವನಿಸಿದ್ದು ಅಂಕೋಲಾದಲ್ಲಿ. ಇಂತಹ ಅಂಕೋಲಾ ತಾಲೂಕನ ಡೋಂಗ್ರಿ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲೇ ಇರುವ ಕುಗ್ರಾಮ ಹೆಬ್ಬಾರ ಗುಡ್ಡ. ಹೆಬ್ಬಾರಗುಡ್ಡ ಗ್ರಾಮ ಎಲ್ಲ ಇಲ್ಲಗಳ ನಡುವೆ ಕಳೆದು ಹೋಗಿರುವ ಊರು. ಈ ಊರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾದರೂ, ಊರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಎನ್ನುವುದು ಮರೀಚಿಕೆಯೇ ಆಗಿತ್ತು. ವಿದ್ಯುತ್, ಸರ್ವ ಋತು ರಸ್ತೆ, ಶಾಲೆ, ಆಸ್ಪತ್ರೆ ಇವ್ಯಾವುದೂ ಇರಲಿಲ್ಲ. ಬಸ್ಸಿಗೋ, ರೇಷನ್ ಗೋ ಹೋಗೋಣ ಎಂದರೆ ಕಡಿದಾದ ಬೆಟ್ಟವನ್ನು ಇಳಿದು ಅಜಮಾಸು ೧೦ ಕಿಲೋಮೀಟರ್ ನಡೆದು ಹೋಗಬೇಕಾದ ದಾರುಣ ಸ್ಥಿತಿ. ಇಂತಹ ಊರಿಗೆ ವಿದ್ಯುತ್ ಕೊಡಿ ಎನ್ನುವುದು ಆ ಗ್ರಾಮದ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿತ್ತು. ಅದೀಗ ನನಸಾಗಿದೆ.

ವಿದ್ಯುತ್ತಿಗಾಗಿ ನಡೆದ ಹೋರಾಟ

ಅಂಕೋಲಾ ಮತ್ತು ಶಿರಸಿ ತಾಲೂಕಿನ ಗಡಿ ಭಾಗದ ಗ್ರಾಮದಲ್ಲಿರುವ ಈ ಹೆಬ್ಬಾರಗುಡ್ಡ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ತಾಲೂಕಾ ಕೇಂದ್ರದಿಂದ ಸುಮಾರು 58 ಕಿಲೋಮೀಟರ್ ದೂರದಲ್ಲಿದೆ ಇರುವ ಈ ಗ್ರಾಮದಲ್ಲಿ21 ಮನೆಗಳಿದ್ದು 125 ಜನರು ವಾಸಿಸುತ್ತಾರೆ. ಸಿದ್ದಿಗಳು ಹಾಗೂ ಹವ್ಯಕರು ಈ ಗ್ರಾಮದ ನಿವಾಸಿಗಳು. ದಟ್ಟ ಕಾಡಿನ ನಡುವೆ, ಕೊರಕಲು-ಮುರುಕಲು ರಸ್ತೆಯಲ್ಲಿ ಏರಿಳಿಯುತ್ತ ಹೋದರೆ ಈ ಗ್ರಾಮದ ದರ್ಶನ ಸಾಧ್ಯ. ವಿದ್ಯುತ್ತಿಗಾಗಿ ನಡೆಸಿದ ಹೋರಾಟಕ್ಕೆ ಮಿತಿಯೇ ಇಲ್ಲ. ಎರಡು ದಶಕಗಳಿಂದ ಜನಪ್ರತಿನಿಧಿಗಳಿಗೆ ಅರ್ಜಿಗಳ ಮೇಲೆ ಅರ್ಜಿ, ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಗ್ರಾಮದ ದುಸ್ಥಿತಿಯನ್ನೂ ವಿವರಿಸಲಾಗಿತ್ತು. ತದ ನಂತರದಲ್ಲಿ ಕೆಲವು ಯುವಕರು ಹೆಬ್ಬಾರಗುಡ್ಡದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಬರಹಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನೂ ಕೈಗೊಂಡರು. ವಾಟ್ಸಾಪ್, ಟ್ವೀಟರ್, ಫೇಸ್ಬುಕ್ ಗಳ ಮೂಲಕ ದೇಶದ ಮೂಲೆ ಮೂಲೆಗೆ ಹೆಬ್ಬಾರಗುಡ್ಡದ ದುಸ್ಥಿತಿ ತಿಳಿಯುವಂತೆ ಮಾಡಿದರು. ಆದರೆ ಅವರ ಹೋರಾಟಕ್ಕೂ ಈಗ ಬೆಲೆ ಸಿಕ್ಕಿದೆ.

ರಾಜ್ಯ ಸರ್ಕಾರದ ನಿರಾಸಕ್ತಿ

ಊರಿಗೆ ವಿದ್ಯುತ್ ಕೊಡಿ ಎಂದು ಹೇಳುತ್ತಿದ್ದರೂ, ರಾಜ್ಯ ಸರ್ಕಾರ ವಿದ್ಯುತ್ ಸಂಪರ್ಕಕ್ಕಾಗಿ ರಾಜೀವ ಗಾಂಧಿ ಯೋಜನೆ, ಭಾಗ್ಯಜ್ಯೋತಿ ಯೋಜನೆಯನ್ನು ಘೋಷಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಕೊಡುತ್ತೇವೆ, ನಾಳೆ ವಿದ್ಯುತ್ ಕೊಡುತ್ತೇವೆ ಎನ್ನುವ ಭರವಸೆಗಳಲ್ಲಿಯೆ ಹೆಬ್ಬಾರ ಗುಡ್ಡದ ಜನರನ್ನು ಸಾಗಹಾಕಲಾಗುತ್ತಿತ್ತು. ವಿವಿಧ ಪತ್ರಿಕೆಗಳು ಹೆಬ್ಬಾರಗುಡ್ಡದ ದುಸ್ಥಿತಿಯ ಕುರಿತು, ಬುದ್ಧಿವಂತರ ಜಿಲ್ಲೆಯಲ್ಲಿರುವ ಕತ್ತಲ ಗ್ರಾಮದ ಕುರಿತು ಪದೇ ಪದೆ ಎಚ್ಚರಿಸುತ್ತಿದ್ದರೂ, ಈ ವರದಿಗಳಿಂದ ಪ್ರೇರೇಪಿತವಾದ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದ್ದರೂ ಹಿಂದಿನ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಸದಾ ನಿದ್ದೆಯಲ್ಲಿದ್ದ ಸರ್ಕಾರದ ಪ್ರತಿನಿಧಿಗಳು ಭರವಸೆಯಲ್ಲಿಯೇ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನು ಭಹಿಷ್ಕಾರ ಮಾಡುವ ನಿರ್ಧಾರವನ್ನೂ ಮಾಡಿದ್ದರು.

ಹದಿನೈದೇ ದಿನದಲ್ಲಿ ಕಾರ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೀನದಯಾಳ ಉಪಾಧ್ಯಾಯ ಕುಟೀರಜ್ಯೋತಿ ಯೋಜನೆಯಡಿಯಲ್ಲಿ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಕಾರ್ಯದಲ್ಲಿ ಫಲಾನುಭವಿಯಾದದ್ದು ಹೆಬ್ಬಾರಗುಡ್ಡ. ದೇಶದ ಕೊಟ್ಟಕೊನೆಯ ಗ್ರಾಮ, ಕಟ್ಟ ಕಡೆಯ ಮನೆಯಲ್ಲಿಯೂ ವಿದ್ಯುತ್ ಬೆಳಕು ಮಿನುಗಬೇಕೆಂಬುದು ಪ್ರಧಾನಿ ಮೋದಿಯವರ ಕನಸು. ಹೆಬ್ಬಾರಗುಡ್ಡದಲ್ಲಿ ಈ ಕನಸು ನನಸಾಗಿದೆ. ರಾಜ್ಯದ ವಿಧಾನಸಭಾ ಚುನಾವಣೆ ಮುಗಿದು ೧೫ ದಿನಗಳು ಕಳೆಯುವಷ್ಟರಲ್ಲಿಯೇ ಹೆಬ್ಬಾರ ಗುಡ್ಡಕ್ಕೆ ವಿದ್ಯುತ್ ತಂತಿ ಎಳೆಯುವ, ಟಿಸಿ ಕೂರಿಸುವ ಸೇರಿದಂತೆ ವಿದ್ಯುತ್ ಸಂಪರ್ಕ ನೀಡುವ ಎಲ್ಲ ಕಾರ್ಯಗಳೂ ನಡೆದಿರುವುದು ವಿಶೇಷ.

ಪರಿಸರ ದಿನಾಚರಣೆಗೂ ಒಂದು ದಿನ ಮೊದಲು ಅಂದರೆ ಜೂ.೪ರಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಉದ್ಘಾಟಿಸುವುದರೊಂದಿಗೆ ಹೆಬ್ಬಾರಗುಡ್ಡದ ಏಳು ದಶಕಗಳ ಕತ್ತಲಿಗೆ ಪೂರ್ಣವಿರಾಮ ಬಿದ್ದಿದೆ. ಆ ಗ್ರಾಮದಲ್ಲಿ ಇನ್ನು ಬೆಳಕು ರಾರಾಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ನೀಡಿದ್ದೇವೆ, ನೀಡುತ್ತೇವೆ ಎಂದು ಹೇಳಿದಾಗ ಅದನ್ನು ಆಡಿಕೊಂಡವರು, ನಕ್ಕವರು ಅದೆಷ್ಟೋ ಜನ. ಎಲ್ಲಿದೆ ಅಚ್ಛೇದಿನ್ ಎಂದು ಕೇಳಿದವರಿಗಂತೂ ಲೆಕ್ಖವೇ ಇಲ್ಲ ಬಿಡಿ. ಹೀಗೆ ಕೇಳಿದವರಿಗೆಲ್ಲ ಇದೀಗ ಹೆಬ್ಬಾರಗುಡ್ಡದ ಜನರು ಇಲ್ಲಿದೆ ಅಚ್ಛೇದಿನ್ ಎಂದು ಹೇಳುತ್ತಿರುವುದು ಮೋದಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಚ್ಛೇದಿನ್ ಕುರಿತು ಕ್ಯಾತೆ ತೆಗೆಯುವವರಿಗೆ ನಮ್ಮೂರಿಗೆ ಬರುವಂತೆ ಹೇಳುತ್ತೇವೆ ಎನ್ನುತ್ತಾರೆ ಹೆಬ್ಬಾರಗುಡ್ಡದ ಗ್ರಾಮಸ್ಥರು. ಇದೇ ಅಲ್ಲವೇ ಪುಣ್ಯಕಾರ್ಯ. ಇದೇ ಅಲ್ಲವೇ ಸರ್ಕಾರದ ಯಶಸ್ಸು?


ಪತ್ರಕರ್ತರ ಗ್ರಾಮವಾಸ್ತವ್ಯದ ಪ್ರತಿಫಲ

ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ಕೊನೆಗೊಮ್ಮೆ ಪತ್ರಕರ್ತರಿಗೆ ಗ್ರಾಮ ವಾಸ್ತವ್ಯ ಮಾಡಿಸುವ ನಿರ್ಧಾರವನ್ನು ಕೈಗೊಂಡರು. ಶಿರಸಿ, ಯಲ್ಲಾಪುರ, ಅಂಕೋಲಾ ಹಾಗೂ ಕಾರವಾರಗಳ ಕೆಲವು ಪತ್ರಕರ್ತರನ್ನು ಹೆಬ್ಬಾರಗುಡ್ಡಕ್ಕೆ ಕರೆದೊಯ್ದು, ಅಲ್ಲಿ ಒಂದು ರಾತ್ರಿ ಕಳೆಯುವಂತೆ ಮಾಡಿದರು. ಅಲ್ಲಿಗೆ ತೆರಳಿದ ಪತ್ರಕರ್ತರು ಆ ಊರಿನ ದುಸ್ಥಿತಿಯನ್ನು ಅರಿತು ರಾಜ್ಯಮಟ್ಟದಲ್ಲಿ ವರದಿ ಮಾಡಿದರು. ಈ ವರದಿಗಳಿಗೆ ತ್ವರಿತವಾಗಿ ಸ್ಪಂದಿಸಿದ ಜನಪ್ರತಿನಿಧಿಗಳು ಕ್ರಮ ಕೈಗೊಂಡಿದ್ದು ಉಲ್ಲೇಖನೀಯ.


No comments:

Post a Comment