Sunday, March 4, 2018

ಬೆಣ್ಣೆಯಂತಹ ಜಲಪಾತ



ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಇಲ್ಲಿನ ಪ್ರತಿಯೊಂದೂ ತಾಲೂಕಿನಲ್ಲಿಯೂ ಹತ್ತಾರು ಜಲಪಾತಗಳು ಕಣ್ಣಿಗೆ ಬೀಳುತ್ತವೆ. ಜಲಪಾತಗಳು ನಯನ ಮನೋಹರವಾಗಿ, ನೋಡುಗರ ಕಣ್ಮನವನ್ನು ಸೆಳೆಯುತ್ತವೆ. ಶಿರಸಿ ತಾಲೂಕಿನಲ್ಲಿರುವ ಬೆಣ್ಣೆ ಹೊಳೆ ಜಲಪಾತ ಕೂಡ ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಜಲಪಾತಗಳಲ್ಲಿ ಒಂದು.
ಅಘನಾಶಿನಿ ನದಿಯ ಉಪನದಿಯಾಗಿರುವ ಬೆಣ್ಣೆ ಹೊಳೆಯ ಸೃಷ್ಟಿಯೇ ಬೆಣ್ಣೆ ಜಲಪಾತ. ಈ ಜಲಪಾತದ ಹೆಸರು ಅನ್ವರ್ಥಕವಾದುದು. ಬಾನಂಚಿನಿಂದ ಭುವಿಗೆ ಬೆಣ್ಣೆ ಮುದ್ದೆಯೇ ಉರುಳಿ ಬೀಳುತ್ತಿದೆಯೇನೋ ಎನ್ನುವಂತಹ ದೃಶ್ಯ ವೈಭವ. ನೋಡಿದಷ್ಟೂ ನೋಡಬೇಕೆನ್ನಿಸುವ ಜಲಪಾತ ಹಾಗೂ ಪ್ರಕೃತಿಯ ಸೌಂದರ್ಯ. ಬೆಣ್ಣೆಯಂತಹ ಈ ಜಲಪಾತ ಉತ್ತರ ಕನ್ನಡದ ಸುಂದರ ಜಲಪಾತಗಳಲ್ಲಿ ಒಂದು ಎನ್ನುವ ಅಭಿದಾನವನ್ನೂ ಪಡೆದುಕೊಂಡಿದೆ. 200 ಅಡಿಗೂ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಪಶ್ಚಿಮ ಘಟ್ಟದ ಒಡಲೊಳಗೆ ಹುದುಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.



ಕಾಡಿನ ಒಡಲಿನಲ್ಲಿ ಬೆಚ್ಚಗಿರುವ ಈ ಜಲಪಾತದ ಕುರಿತು ಎಷ್ಟು ವರ್ಣಿಸಿದರೂ ಕಡಿಮೆಯೇ ಎನ್ನಬಹುದು. ಕಾಡಿನ ನಡುವೆ ಇರುವ ಉಂಬಳಗಳು, ಜಿಗಣೆಗಳು ನಿಮ್ಮ ರಕ್ತವನ್ನು ಹೀರಲು ಕಾಯುತ್ತಿರುತ್ತವೆ. ಸೂರ್ಯನ ರಶ್ಮಿಗಳು ಭೂಮಿಯನ್ನು ಮುತ್ತಿಕ್ಕಲಾರದಷ್ಟು ದಟ್ಟ ಕಾಡುಗಳು ನಿಮ್ಮಲ್ಲೊಂದು ಅವ್ಯಕ್ತ ಭೀತಿಯನ್ನು ಹುಟ್ಟು ಹಾಕುತ್ತವೆ. ಆಗೀಗ ಗೂಂಕೆನ್ನುವ ಲಂಗೂರ್‌ಗಳು, ಮಂಗಗಳು ಥಟ್ಟನೆ ನಿಮಗೆ ಹಾಯ್ ಎಂದು ಹೇಳಿ ಮನಸ್ಸನ್ನು ಮೆಚ್ಚಿಸುತ್ತವೆ. ಕೂಗಾಡುವ ಹಕ್ಕಿಗಳ ಇಂಚರ ಕಿವಿಯ ಮೇಲೆ ನರ್ತನ ಮಾಡುತ್ತವೆ. ಅದೃಷ್ಟವಿದ್ದರೆ ಕಾಡು ಪ್ರಾಣಿಗಳ ದರ್ಶನ ಭಾಗ್ಯವೂ ಸಾಧ್ಯವಾದೀತು.
ಹಾಲು ಬಣ್ಣದ, ಬೆಣ್ಣೆಯ ಮುದ್ದೆಯಂತಹ ಜಲಪಾತ ನೋಡಬೇಕಾದಲ್ಲಿ ಅರ್ಧ ಕಿಲೋಮೀಟರಿನಷ್ಟು ನಡಿಗೆ ಅನಿವಾರ್ಯ. ಜಲಪಾತದ ನೆತ್ತಿಗೂ, ಕಷ್ಟಪಟ್ಟು ಸಾಗಿದರೆ ಜಲಪಾತದ ಬುಡಕ್ಕೂ ಹೋಗಬಹುದು. ಜಲಪಾತದ ಒಡಲಿನ ಗುಂಡಿ ಆಳವಾಗಿರುವುದರಿಂದ ಅಲ್ಲಿ ಈಜುವುದು ಅಪಾಯಕರ. ಬೆಣ್ಣೆ ಹೊಳೆ ಜಲಪಾತದ ಕೆಳಭಾಗದಲ್ಲಿ ಚಿಕ್ಕ ಪುಟ್ಟ ಅನೇಕ ಸರಣಿ ಜಲಪಾತಗಳೇ ಇವೆ. ಕಷ್ಟಪಟ್ಟು, ಚಾರಣ ಮಾಡಿ ತೆರಳಿದರೆ ಜಲಪಾತ ದರ್ಶನದಿಂದ ಆಯಾಸವೆಲ್ಲ ಪರಿಹಾರವಾಗಬಹುದಾಗಿದೆ.

ಶಿರಸಿ ಹಾಗೂ ಸಿದ್ದಾಪುರ ರಸ್ತೆಯಲ್ಲಿ ರಾಗಿಹೊಸಳ್ಳಿಗೂ ಸನಿಹದ ಕಸಗೆ ಎಂಬಲ್ಲಿನ ದಟ್ಟ ಕಾಡಿನ ನಡುವೆ ಇರುವ ಬೆಣ್ಣೆ ಜಲಪಾತ ವೀಕ್ಷಣೆಗೆ ಸಪ್ಟೆಂಬರ್‌ನಿಂದ ಜನವರಿ ವರೆಗೆ ಪ್ರಶಸ್ತ ಕಾಲ. ಶಿರಸಿಯಿಂದ ಹಾಗೂ ಕುಮಟಾದಿಂದ ಕನಿಷ್ಟ 30-35 ಕಿಲೋಮೀಟರ್ ದೂರದಲ್ಲಿದೆ. ಜಲಪಾತದ ನೆತ್ತಿಯ ವರೆಗೂ ಕಚ್ಚಾ ರಸ್ತೆಯಿದೆ. ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗುವುದು ಅನಿವಾರ್ಯ. ಜಲಪಾತಕ್ಕೆ ತೆರಳ ಬೇಕಾದಲ್ಲಿ ಸ್ವಂತ ವಾಹನ ಅನಿವಾರ್ಯ. ತೀರಾ ಹಾಳಾಗಿರುವ ರಸ್ತೆಯಿಂದಾಗಿ ವಾಹನಗಳಲ್ಲಿ ಅನಿವಾರ್ಯ ಸಂದರ್ಭಗಳಿಗೆ ಬೇಕಾಗುವ ಸಲಕರಣೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಇಲ್ಲವಾದಲ್ಲಿ ಕಾಡಿನಲ್ಲಿ ಹೈರಾಣಾಗುವುದು ನಿಶ್ಚಿತ.


ಕಡ್ಡಾಯ ಸೂಚನೆ :
ಜಲಪಾತಕ್ಕೆ ಹಲವಾರು ಜನರು ಆಗಮಿಸುತ್ತಾರೆ. ಆಗಮಿಸುವವರಲ್ಲಿ ಪ್ರಮುಖ ವಿನಂತಿಯನ್ನು ಸ್ಥಳೀಯರು ಮಾಡುತ್ತಾರೆ. ಸಸ್ಯಶ್ಯಾಮಲೆಯ ಸ್ಥಳವನ್ನು ಮಲಿನ ಮಾಡುವುದು ಕಡ್ಡಾಯವಾಗಿ ನಿಷೇಧ. ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯದೇ ನಿಸರ್ಗವನ್ನು ಅದರ ಪಾಡಿಗೆ ಹಾಗೇ ಬಿಟ್ಟು ಬಿಡಬೇಕೆಂಬುದು ಪರಿಸರಾಸಕ್ತರ ಕಳಕಳಿ.

No comments:

Post a Comment