Saturday, November 22, 2014

ಬೆಂಗಾಲಿ ಸುಂದರಿ -40

(ವಿನಯಚಂದ್ರ-ಮಧುಮಿತಾ ದಾಟಿದ ಗಡಿ ಭಾಗದ ಹಳ್ಳ)
             ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಿಂದಾಗಿ ದೂರದಲ್ಲಿ ಮಬ್ಬು ಮಬ್ಬಾಗಿ ಬಾಂಗ್ಲಾ ಹಾಗೂ ಭಾರತದ ನಡುವೆ ಇರುವ ತಡೆಗೋಡೆ ಅಸ್ಪಷ್ಟವಾಗಿ ಕಾಣುತ್ತಿತ್ತು. ರಿಕ್ಷಾವಾಲ ತಾನಿನ್ನು ಮುಂದಕ್ಕೆ ಹೋಗುವುದು ಅಪಾಯವೆಂದೂ ಹೇಳಿದ. ಇಲ್ಲೇ ನಿಲ್ಲುತ್ತೇನೆ ಎಂದು ಹೇಳಿದವನು ದೂರದಲ್ಲಿ ಹರಿಯುತ್ತಿದ್ದ ನದಿಯೊಂದನ್ನು ತೋರಿಸಿದ. ಆ ನದಿಯ ಬಳಿ ಹೋದರೆ ಭಾರತದೊಳಕ್ಕೆ ನುಸುಳಲು ಸುಲಭವಾಗುತ್ತದೆ ಎಂದು ಹೇಳಿದ. ಪುಟ್ಟ ನದಿಯೊಂದು ದೈತ್ಯನದಿಯಾದ ಜಮುನೆಯನ್ನು ಸೇರುವ ಸ್ಥಳ ಅದಾಗಿತ್ತು. ಆ ನದಿಯ ಹತ್ತಿರ ಗಡಿ ಅಸ್ಪಷ್ಟವಾಗಿತ್ತು.
             ಅರ್ಚಕರು ಗಡಿಬಿಡಿ ಬೇಡ ಎಂದು ಸನ್ನೆ ಮಾಡಿದರು. ಗಡಿ ಬೇಲಿಯಿದ್ದ ಸ್ಥಳದಲ್ಲಿ ಸೇನಾಪಡೆಯ ಜವಾನರು ಇದ್ದಂತೆ ಕಾಣಲಿಲ್ಲ. ಅರ್ಚಕರು ಇಳಿದನಿಯಲ್ಲಿ ನದಿಯ ಬಳಿ ಸೈನಿಕರಿರುತ್ತಾರೆ. ಆದರೆ ಇಲ್ಲಿ ಅವರ ಸಮಸ್ಯೆಯಿಲ್ಲ. ಬೇಲಿಯಿರುವ ಕಾರಣ ಸೈನಿಕರ ಸಂಖ್ಯೆ ಕಡಿಮೆಯಿದೆ. ಆದರೆ ಬೇಲಿ ಕಡಿಮೆಯಿರುವಲ್ಲಿ ಸೈನಿಕರು ಜಾಸ್ತಿ ಇರುತ್ತಾರೆ ಎಂದು ಹೇಳಿದರು.
           ಗಡಿಯ ಪರಿಸ್ಥಿತಿಯನ್ನು ಎಷ್ಟು ಸೂಕ್ಷ್ಮವಾಗಿ ಅರ್ಚಕರು ಅರಿತುಕೊಂಡಿದ್ದಾರಲ್ಲ ಎಂದುಕೊಂಡ ವಿನಯಚಂದ್ರ. ದೂರದಿಂದ ನೋಡಿದರೆ ಆರಾಮಾಗಿ ದಾಟಬಹುದು ಎನ್ನಿಸುವಂತಿದ್ದ ಗಡಿ ಪ್ರದೇಶವನ್ನು ದಾಟುವುದು ಅಂದುಕೊಂಡಂತಿರಲಿಲ್ಲ. ಮುಂದಿನ ಹಾದಿಯಂತೂ ಕತ್ತಿಯ ಮೇಲಿನ ನಡುಗೆಯೇ ಆಗಿತ್ತು. ಇಲ್ಲಿಯವರೆಗೆ ಹಾದು ಬಂದಿದ್ದು ಒಂದು ಹೆಜ್ಜೆಯಾದರೆ ಇನ್ನುಮುಂದೆ ಹೋಗಬೇಕಿರುವುದೇ ಮತ್ತೊಂದು ಹೆಜ್ಜೆಯಾಗಿತ್ತು.
            ಮತ್ತಷ್ಟು ಕತ್ತಲಾಯಿತು. ಅರ್ಚಕರು ನಿಧಾನವಾಗಿ ಸನ್ನೆ ಮಾಡಿದರು. ತಮ್ಮನ್ನು ಹಿಂಬಾಲಿಸುವಂತೆ ಹೇಳಿದ ಅರ್ಚಕರು ಮುನ್ನಡೆಯಲು ಆರಂಭಿಸಿದರು. ಅವರ ಹಿಂದೆ ವಿನಯಚಂದ್ರ ಹಾಗೂ ಕೊನೆಯಲ್ಲಿ ಮಧುಮಿತಾ ಇದ್ದರು. 100 ಮೀಟರ್ ಸಾಗುವ ವೇಳೆಗೆ ಅರ್ಚಕರು ವಿನಯಚಂದ್ರನ ಬಳಿ ಗಡಿ ಪ್ರದೇಶದ ಕಡೆಗೆ ಕೈ ತೋರಿಸುತ್ತಾ `ಅದೋ ಅಲ್ಲಿ ನೋಡಿ.. ಆ ಕಡೆ ಚಿಕ್ಕದೊಂದು ದಿಬ್ಬ ಕಾಣುತ್ತದಲ್ಲ. ಅಲ್ಲೊಂದು ಸುರಂಗವಿದೆ. ಸಮಯ ನೋಡಿಕೊಂಡು ಆ ಸುರಂಗ ದಾಟಬೇಕು. ಜಾಗೃತೆಯಾಗಿರು. ಆ ಸುರಂಗದ ಆಚೆಗೆ ಭಾರತೀಯ ಸೈನಿಕರು ಇದ್ದರೂ ಇರಬಹುದು. ಐದು ನಿಮಿಷಕ್ಕೊಮ್ಮೆ ಅಥವಾ ಆ ಸಮಯದೊಳಗೆ ಸರ್ಚ್ ಲೈಟ್ ಸುತ್ತು ಹಾಕುತ್ತದೆ. ಎಚ್ಚರವಿರಲಿ. ನಾನು ಇನ್ನು ಮುಂದಕ್ಕೆ ಬರುವುದು ಸರಿಯಲ್ಲ. ನಾನು ಮಾಡಬೇಕಿರುವ ಕಾರ್ಯ ಸಾಕಷ್ಟಿದೆ. ಹೇಳಲಿಕ್ಕೆ ಮರೆತಿದ್ದೆ ನೋಡಿ. ಇಲ್ಲಿ ಚಿಕ್ಕದೊಂದು ಹಳ್ಳವಿದೆ. ಮೊಳಕಾಲು ಮುಳುಗುವಷ್ಟು ನೀರಿರುತ್ತದೆ. ನಿಧಾನವಾಗಿ, ಸದ್ದಾಗದಂತೆ ದಾಟಿ. 15-20 ಮೀಟರ್ ಅಗಲವಿರಬಹುದು. ಆದರೆ ಆಳವಿಲ್ಲ. ಎಚ್ಚರಿಕೆಯಿಂದ ಹೋಗಿ. ನಿಮಗೆ ಶುಭವಾಗಲಿ..' ಎಂದರು.
          `ಗಡಿಯ ಆಚೆ ಪ್ರದೇಶದಲ್ಲಿ ಅಸ್ಸಾಮ್ ರಾಜ್ಯವಿರುತ್ತದೆ. ಅಲ್ಲಿ ಹೋದವರೇ ಯಾವುದಾದರೂ ಸೈನಿಕರ ಕ್ಯಾಂಪಿಗೆ ತೆರಳು ನಿಮ್ಮ ಸಂಪೂರ್ಣ ವಿವರಗಳನ್ನು ತಿಳಿಸಿ. ಅವರು ನಿಮಗೆ ಸಹಾಯ ಮಾಡಬಹುದು. ಬಹುಶಃ ಗಡಿಯಾಚೆಗೆ ಭಾರತೀಯರು ಉತ್ತಮ ರಸ್ತೆಗಳನ್ನೂ ಮಾಡಿರಬಹುದು. ಸಾಕಷ್ಟು ವಾಹನ ಸಂಚಾರವೂ ಇರಬಹುದು. ಯಾವುದಾದರೊಂದು ವಾಹನ ಹತ್ತಿ ಹತ್ತಿರದ ಗೋಲಕಗಂಜಿಗೋ ಗೌರಿಪಾರಕ್ಕೋ ಹೋಗಿಬಿಡಿ. ಅಲ್ಲಿಂದ ಮುಂದಕ್ಕೆ ನೀವು ನಿಮ್ಮ ಗುರಿಯನ್ನು ತಲುಪಲು ಅನುಕೂಲವಾಗುತ್ತದೆ..' ಎಂದರು.
          ವಿನಯಚಂದ್ರ ಅರ್ಚಕರ ಕೈ ಹಿಡಿದುಕೊಂಡ. ಕಣ್ತುಂಬಿ ಬಂದಂತಾಯಿತು. ಢಾಕಾದಿಂದ ಬಂದವರಿಗೆ ರಂಗಪುರದ ಬಳಿ ಸಂಪೂರ್ಣ ದುಡ್ಡು ಖಾಲಿಯಾಗಿ ಹಸಿವಿನಿಂದ ಕಂಗೆಡಬೇಕಾದ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದರೂ ಅಲ್ಲದೇ ಬಾಂಗ್ಲಾದ ಗಡಿಯ ವರೆಗೆ ಕರೆತಂದು ಬಿಟ್ಟರಲ್ಲ. ಅಷ್ಟರ ಜೊತೆಗೆ ಗಡಿ ದಾಟುವ ಬಗ್ಗೆ ಸಹಾಯ ಮಾಡುತ್ತಲೂ ಇದ್ದಾರೆ ಎಂದುಕೊಂಡ. ಮಧುಮಿತಾಳೂ ಧನ್ಯವಾದಗಳನ್ನು ಹೇಳಿದಳು. ಸರ್ಚ್ ಲೈಟ್ ಸುತ್ತುತ್ತಲೇ ಇತ್ತು. `ಬೇಗ ಹೊರಡಿ..' ಎಂದರು ಅರ್ಚಕರು. ಬೀಳ್ಕೊಟ್ಟು ಮುಂದಕ್ಕೆ ಹೆಜ್ಜೆ ಹಾಕಿದರು ವಿನಯಚಂದ್ರ ಹಾಗೂ ಮಧುಮಿತಾ.
          ಮಧುಮಿತಾಳಿಗಂತೂ ತವರು ಮನೆಯಿಂದ ಬಹುದೂರ ಹೊರಟಂತಾಗಿತ್ತು. ಮತ್ತಿನ್ನು ಬಾಂಗ್ಲಾ ದೇಶಕ್ಕೆ ಬರುವುದು ಅಸಾಧ್ಯ ಎನ್ನುವಂತೆ ಅವಳಿಗೆ ಅನ್ನಿಸುತ್ತಿತ್ತು. ಭಾರತದ ಗಡಿಯತ್ತ ಒಂದೊಂದೇ ಹೆಜ್ಜೆ ಇಟ್ಟಂತೆಲ್ಲ ಬಾಂಗ್ಲಾದೇಶ ಎನ್ನುವ ತಾಯಿನಾಡು ತನ್ನನ್ನು ಶಾಶ್ವತವಾಗಿ ಕಳೆದುಕೊಳ್ಳಲಿದೆಯಾ ಎನ್ನಿಸುತ್ತಿತ್ತು. ಮುನ್ನಡೆದಂತೆಲ್ಲ ಕತ್ತಲು ಮತ್ತಷ್ಟು ಆವರಿಸಿದಂತೆ ಭಾಸವಾಯಿತು. ಕೈಬೀಸಿ ಶುಭಕೋರುತ್ತಿದ್ದ ಅರ್ಚಕರೂ ಕಾಣದಾದರು. ಕುರುಚಲು ಪೊದೆಗಳು, ಹಾಳುಬಿದ್ದ ಗದ್ದೆ ಬಯಲುಗಳು ಕಾಣಿಸತೊಡಗಿದ್ದವು. ಕೆಲ ಕ್ಷಣಗಳಲ್ಲಿ ಚಿಕ್ಕದೊಂದು ಹಳ್ಳ ಎದುರಾಯಿತು. ಅರ್ಚಕರು ಹೇಳಿದಂತೆ ಆ ಹಳ್ಳದಲ್ಲಿ ಮೊಣಕಾಲೆತ್ತರದ ನೀರಿತ್ತು. ನೀರಿನ ಅಡಿಯಲ್ಲಿ ರಾಡಿ ರಾಡಿ ಮರಳಿದ್ದುದು ಸ್ಪಷ್ಟವಾಗುತ್ತಿತ್ತು. ತಣ್ಣಗೆ ಕೊರೆಯುವಂತೆ ಹರಿಯುತ್ತಿದ್ದ ಆ ಹಳ್ಳವನ್ನು ಅರೆಘಳಿಗೆಯಲ್ಲಿ ದಾಟಿದವರೇ ಹಳ್ಳದ ಏರಿ ಹತ್ತುವಷ್ಟರಲ್ಲಿ ಎದುರಿಗೆ ಯಾರೋ ಮಿಸುಕಾಡಿದಂತಾಯಿತು. ಅಯ್ಯೋ ದೇವರೇ ಇದೇನಾಯ್ತು.. ಬಾಂಗ್ಲಾ ಸೈನಿಕನೋ, ಅಥವಾ ಮತ್ತಿನ್ಯಾರೋ ಸಿಕ್ಕಿಬಿಟ್ಟರೆ ಇನ್ನೇನು ಗತಿ.? ಇಷ್ಟೆಲ್ಲ ಮಾಡಿ ಕೊಟ್ಟ ಕೊನೆಯ ಘಳಿಗೆಯಲ್ಲಿ ನಮ್ಮ ಪ್ರಯತ್ನ ವಿಫಲವಾಗಿಬಿಟ್ಟರೆ..? ಎನ್ನುವ ಭಾವಗಳು ಕಾಡಿದವು.
         ಮಿಸುಕಾಡುತ್ತಿದ್ದ ಆ ಆಕೃತಿಗೆ ಕಾಣದಂತೆ ಅಡಗಿಕುಳಿತುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಬಯಲೇ ಇದ್ದಂತೆ ಕಾಣುತ್ತಿತ್ತಾದ್ದರಿಂ ಎಲ್ಲಿ ಅಡಗಿ ಕೂರುವುದು ಎನ್ನುವುದೂ ಸ್ಪಷ್ಟವಾಗಲಿಲ್ಲ. ಎದುರಿನಲ್ಲಿ ಮಿಸುಕಾಡುತ್ತಿದ್ದ ಆ ಆಕೃತಿ ಕೆಲಕಾಲ ದೂರಾದಂತೆ ಮತ್ತೆ ಕೆಲಕಾಲ ಮಧುಮಿತಾ-ವಿನಯಚಂದ್ರ ರಬ್ಬಿಕೊಂಡು ಕುಳಿತ ಸನಿಹದಲ್ಲೇ ಹಾದು ಹೋದಂತೆ ಮಾಡುತ್ತಿತ್ತು. ಹತ್ತಿರಕ್ಕೆ ಹೋದ ಸಂದರ್ಭದಲ್ಲಿ ಮಾತ್ರ ಆ ಆಕೃತಿಯೊಂದು 14-16 ವರ್ಷದ ಪುಟ್ಟ ಹುಡುಗನಂತೆ ಕಾಣಿಸಿತು. ಆತ ಅದೇನು ಮಾಡುತ್ತಿದ್ದನೋ? ಎಲ್ಲಿಗೆ ಹೊರಟಿದ್ದನೋ? ಹೋಗಿದ್ದನೋ ? ಈ ಗಡಿಯಲ್ಲಿ ಅವನಿಗೇನು ಕೆಲಸವೋ ಎಂದುಕೊಂಡ ವಿನಯಚಂದ್ರ. ಎರಡೂ ಕಡೆಯ ಸೈನಿಕರ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಆತನ ದೇಹ ಗುಂಡಿನಿಂದ ಛಿದ್ರ ಛಿದ್ರವಾಗುವುದು ನಿಶ್ಚಿತ ಎನ್ನಿಸಿತು. ಕೆಲ ಸಮಯದ ನಂತರ ಆತ ದೂರಕ್ಕೆ ಸರಿದುಹೋದ.ಇವರು ಮುಂದಕ್ಕೆ ಹೆಜ್ಜೆ ಹಾಕಿದರು.
         ಸರ್ಚ್ ಲೈಟ್ ಪ್ರತಿ ಐದು ನಿಮಿಷಕ್ಕೊಮ್ಮೆ ಬೆಳಕನ್ನು ಬೀರುತ್ತದೆ ಎನ್ನುವುದು ಅರ್ಚಕರು ಹೇಳಿದ ಮಾತು. ಗಮನವಿಟ್ಟು ನೋಡಿದ ವಿನಯಚಂದ್ರನಿಗೆ ಯಾವ ಕ್ಷಣದಲ್ಲಿ ಸರ್ಚ್ಲೈಟಿನ ಬೆಳಕು ಯಾವ ಜಾಗದಲ್ಲಿ ಬೀಳುತ್ತದೆ ಎನ್ನುವುದು ಮನದಟ್ಟಾಯಿತು. ಆ ಬೆಳಕಿನ ಕಣ್ಣಿಗೆ ಬೀಳದಂತೆ ಸಾಗುವುದು ಮುಖ್ಯವಾಗಿತ್ತು. ಅರ್ಚಕರ ಮುಂಜಾಗರೂಕತೆಯಿಂದಾಗಿ ಸರ್ಚ್ಲೈಟಿನ ಪ್ರಭೆಗೆ ಅಷ್ಟಾಗಿ ಸಿಗದಂಹ ಮಣ್ಣಿನ ಬಣ್ಣದ ಬಟ್ಟೆಯನ್ನು ಇಬ್ಬರೂ ತೊಟ್ಟಿದ್ದರು. ಸರ್ಚ್ ಲೈಟ್ ಇಬ್ಬರ ಮೇಲೆ ಬಿದ್ದರೂ ಅಷ್ಟು ತೊಂದರೆಯಾಗಬಾದರು, ಅಥವಾ ಸರ್ಚ್ ಲೈಟ್ ಸಹಾಯದಿಂದ ಸೈನಿಕರು ನೋಡಿದರೂ ತಕ್ಷಣಕ್ಕೆ ಅವರಿಗೆ ಏನೋ ಗೊತ್ತಾಗಬಾದರು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿತ್ತು.
         ಹಳ್ಳವನ್ನು ದಾಟಿದ ತಕ್ಷಣ ಸಿಕ್ಕ ಚಿಕ್ಕ ಬಯಲಂತೂ ಮರಳುಮಯವಾಗಿತ್ತು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳ ತಂದು ಶೇಖರಿಸಿದ ಮರಳು ಅದಾಗಿರಬೇಕು. ಮರಳಿನಾಳದಿಂದ ಧಗೆ ಹೊರಬರುತ್ತಿತ್ತು. ಅದನ್ನು ದಾಟಿ ಮುಂದಕ್ಕೆ ಬಂದ ತಕ್ಷಣ ಮಧುಮಿತಾ ಇದ್ದಕ್ಕಿದ್ದಂತೆ ಬೆಚ್ಚಿದಳು. ಅದನ್ನು ಗಮನಿಸಿದ ವಿನಯಚಂದ್ರ ಸೀದಾ ಹೋಗಿ ಅವಳ ಬಾಯನ್ನು ಮುಚ್ಚಿದ. ಅವಳ ಬಾಯನ್ನು ಹಾಗೆ ಮುಚ್ಚದಿದ್ದರೆ ಅವಳು ಖಂಡಿತ ಕೂಗಿಕೊಳ್ಳುತ್ತಿದ್ದಳು. ಬೆಚ್ಚಿದ ವಿನಯಚಂದ್ರ ಸುತ್ತೆಲ್ಲ ಪರೀಕ್ಷಾ ದೃಷ್ಟಿ ಬೀರಿದ. ಕೆಲ ಘಳಿಗೆಯಲ್ಲೇ ಆತನ ಕಣ್ಣಿಗೆ ಬಾಲಕ ಕಾಣಿಸಿದ. ಹಳ್ಳದ ದಿಬ್ಬವನ್ನು ಏರುವಾಗ ಕಾಣಿಸಿದ್ದ ಬಾಲಕ ಇಲ್ಲಿ ಮತ್ತೆ ಕಾಣಿಸಿದ್ದ. ಅಷ್ಟೇ ಅಲ್ಲದೇ ಆ ಬಾಲಕನ ಕಣ್ಣಿಗೆ ಇಬ್ಬರೂ ಕಾಣಿಸಿಕೊಂಡು ಬಿಟ್ಟಿದ್ದರು. ಇಬ್ಬರಿಗೂ ಒಮ್ಮೆ ದಿಘಿಲಾಯಿತು. ಬಾಲಕನಲ್ಲೂ ಭಯ ಮೂಡಿರುವುದು ಸ್ವಷ್ಟವಾಗಿತ್ತು. ` ಈತ ಸೈನಿಕರಿಗೆ ಮಾಹಿತಿ ವಿನಿಮಯ ಮಾಡುವವನಾಗಿದ್ದರೆ ಏನು ಮಾಡುವುದು..?' ಎನ್ನುವ ಆತಂಕ ಒಮ್ಮೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದೆ ಬೆನ್ನಿನ ಆಳದಲ್ಲಿ ಬೆವರೊಡೆಯಿತು. ಆ ಬಾಲಕನಿಗೆ ಹೊಡೆದು ಎಚ್ಚರತಪ್ಪಿಸಿಬಿಡಲೇ ಎಂದುಕೊಮಡು ಸೀದಾ ಆತನ ಮೇಲೆ ದಾಳಿ ಮಾಡಲು ಮುಂದಾದ.
         ಅಷ್ಟರಲ್ಲಿ ಆ ಬಾಲಕನೇ ಇವರ ಕಾಲಿಗೆ ಬಿದ್ದುಬಿಟ್ಟಿದ್ದ. ಅರ್ಧ ಬೆಂಗಾಲಿಯಲ್ಲಿ ಅರ್ಧ ಉರ್ದುವಿನಲ್ಲಿ ಏನೇನೋ ಹಲುಬುತ್ತಿದ್ದ. ಆತ ಹೇಳಿದ್ದೇನೆಂಬುದು ಸ್ಪಷ್ಟವಾಗಲಿಲ್ಲ. ಆದರೆ ಆ ಬಾಲಕ ಹಾಗೇ ಹಲುಬುತ್ತ ಬಿಡುವುದೂ ಸಾಧ್ಯವಿರಲಿಲ್ಲ. ವಿನಯಚಂದ್ರ ಬಗ್ಗಿ ಆತನ ಬಾಯನ್ನು ಒತ್ತಿ ಹಿಡಿದು `ಶ್..' ಎಂದ. ಕೆಲ ಕ್ಷಣಗಳ ನಂತರ ಆ ಬಾಲಕನಿಗೆ ಅದೇನೆನ್ನಿಸಿತೋ ಅಥವಾ ಆತನಲ್ಲಿದ್ದ ಭಯ ದೂರವಾಯಿತೋ.. ಬಾಯಿಗೆ ಅಡ್ಡಲಾಗಿ ಹಿಡಿದಿದ್ದ ಕೈಯನ್ನು ಬಿಡಿಸಿಕೊಂಡು ಇಳಿದನಿಯಲ್ಲಿ ಮಾತನಾಡತೊಡಗಿದ. ಆತ ಮಾತನಾಡಿದ್ದು ವಿನಯಚಂದ್ರನಿಗೆ ಸಂಪೂರ್ಣ ಅರ್ಥವಾಗಲಿಲ್ಲ. ಆದರೆ ಮಧುಮಿತಾಳಿಗೆ ಅರ್ಥವಾಗಿತ್ತು.
(ಗಡಿ ಭಾಗದ ಗದ್ದೆಗಳು)
         ತಮ್ಮಂತೆ ಅವನೂ ಕೂಡ ಭಾರತದ ಗಡಿಯೊಳಕ್ಕೆ ನುಸುಳು ಬಂದವನಾಗಿದ್ದ. ಮನೆಯಲ್ಲಿ 12 ಜನ ಅಣ್ಣತಮ್ಮಂದಿರು. ಢಾಕಾದಿಂದ ಭಾರತಕ್ಕೆ ಸಾಗಬೇಕು ಎನ್ನುವ ಕಾರಣಕ್ಕಾಗಿಯೇ ಹೇಗೋ ಪಡಿಪಾಟಲು ಪಟ್ಟು ಬಂದಿದ್ದ. ಬಡತನದಿಂದ ಕೂಡಿದ್ದ ಕುಟುಂಬದಲ್ಲಿ ಮಾತು ಮಾತಿಗೆ ಬೈಗುಳಗಳು, ಹೊಡೆತಗಳು ಸಿಗುತ್ತಿದ್ದವು. ಹೊಟ್ಟೆತುಂಬ ಊಟ ಸಿಗುತ್ತಿರಲಿಲ್ಲ. ಮಾತು ಮಾತಿಗೆ ಏಟು ಸಿಗುತ್ತಿದ್ದವು. ಚಿಕ್ಕಂದಿನಲ್ಲೇ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಮನೆಯಲ್ಲಿ ಸದಾಕಾಲ ಬೈಗುಳ ಅಥವಾ ಹೊಡೆತ ತಪ್ಪುತ್ತಿರಲಿಲ್ಲ. ಅಪ್ಪ, ನಾಲ್ಕು ಜನ ಅಮ್ಮಂದಿರು, ಅಣ್ಣಂದಿರು ಇಷ್ಟು ಸಾಲದೆಂಬಂತೆ ಸಂಬಂಧಿಕರೆಲ್ಲ ಬಂದು ಯಥಾನುಶಕ್ತಿ ಹೊಡೆಯುತ್ತಿದ್ದರು. ಹೀಗಿದ್ದಾಗಲೇ ಯಾರೋ ಒಬ್ಬರು ಆತನಿಗೆ ಭಾರತದ ಬಗ್ಗೆ ಹೇಳಿದ್ದರು. ಅಲ್ಲಿಗೆ ಓಡಿಹೋಗಲು ತಿಳಿಸಿದ್ದರು. ಅಷ್ಟಲ್ಲದೇ ಅಲ್ಲಿ ಬದುಕು ಹಸನಾಗುತ್ತದೆ ಎಂಬ ಕನಸನ್ನೂ ಬಿತ್ತಿದ್ದರು. ಆ ಕಾರಣಕ್ಕಾಗಿಯೇ ಮನೆಯಲ್ಲಿ ತಂದೆಯ ದುಡ್ಡನ್ನು ಕದ್ದು ಭಾರತಕ್ಕೆ ಸಾಗಲು ಗಡಿಯ ಬಳಿ ಬಂದಿದ್ದ. ಗಡಿಯ ಬಳಿ ಬಂದವನು ಹೇಗೆ ಹೋಗಬೇಕು ತಿಳಿಯದೇ ಒದ್ದಾಡಲು ಆರಂಭಿಸಿದ್ದ. ಭಾರತದ ಗಡಿಯಲ್ಲಿ ನುಸುಳಲು ಸೂಕ್ತ ಜಾಗವನ್ನು ಹುಡುಕುತ್ತ ಇತ್ತಿಂದತ್ತ, ಅತ್ತಿಂದಿತ್ತ ಅಲೆದಾಡುತ್ತಿದ್ದ. ವಿನಯಚಂದ್ರ-ಮುಧುಮಿತಾರ ಕೈಗೆ ಸಿಕ್ಕುಬಿದ್ದಿದ್ದ.
           ಆತನೇ ಮಧುಮಿತಾಳ ಬಳಿ ಹೇಳಿದಂತೆ ಮೊದಲಿಗೆ ವಿನಯಚಂದ್ರ-ಮಧುಮಿತಾರು ಬಾಂಗ್ಲಾದೇಶದ ಸೈನಿಕರಿರಬೇಕು ಎಂದುಕೊಂಡಿದ್ದನಂತೆ. ಅದೇ ಕಾರಣಕ್ಕೆ ಕೈಕಾಲಿಗೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದ್ದು. ಕೊನೆಗೆ ಯಾವಾಗ ವಿನಯಚಂದ್ರ ಬಾಯನ್ನು ಗಟ್ಟಿಯಾಗಿ ಮುಚ್ಚಿದನೋ ಆಗಲೇ ಇವರೂ ಗಡಿಯಲ್ಲಿ ನುಸುಳಲು ಆಗಮಿಸಿದ್ದು ಎನ್ನುವುದು ಅರಿವಾಗಿ ಸುಮ್ಮನಾಗಿದ್ದ,
           `ನಾನೂ ಭಾರತದೊಳಕ್ಕೆ ಹೋಗಬೇಕು. ನೀವು ಹೋಗುತ್ತಿದ್ದೀರಲ್ಲಾ.. ದಯವಿಟ್ಟು ನನ್ನನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ.. ಈ ನರಕದಲ್ಲಿ ಇದ್ದು ಸಾಕಾಗಿದೆ. ಭಾರತದಲ್ಲಿ ನೀವು ಹೇಳಿದ ಕೆಲಸ ಮಾಡಿಕೊಂಡಿರುತ್ತೇನೆ.. ನನ್ನನ್ನು ಕರೆದೊಯ್ಯಿರಿ..' ಎಂದು ಅಂಗಲಾಚಲು ಆರಂಭಿಸಿದ್ದ. ಮಧುಮಿತಾಳ ಮನಸ್ಸು ಕರಗಲು ಆರಂಭಿಸಿತ್ತು. ಆತನ ಹೆಸರನ್ನು ಕೇಳಿದ್ದಕ್ಕೆ ಪ್ರತಿಯಾಗಿ ಆತ `ಅಮ್ಜದ್..' ಎಂದಿದ್ದ.
          ಆತನ ಬೇಡಿಕೆಯನ್ನು ಮಧುಮಿತಾ ವಿನಯಚಂದ್ರನ ಬಳಿ ತಿಳಿಸಿದಾಗ ಆತ ಕಡ್ಡಿ ತುಂಡುಮಾಡಿದಂತೆ ಬೇಡ ಎಂದಬಿಟ್ಟ. ತಾವಿಬ್ಬರು ಗಡಿಯನ್ನು ಸುರಕ್ಷಿತವಾಗಿ ದಾಟುವುದು ಬಹುಮುಖ್ಯ. ಅಷ್ಟು ಮಾಡಿದ್ದರೆ ಸಾಕಿತ್ತು. ಈ ಬಾಲಕನನ್ನು ಕರೆದೊಯ್ದು ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಾಗಿರಲಿಲ್ಲ. ನೇರವಾಗಿ ಮಧುಮಿತಾಳ ಬಳಿ ಬೇಡವೇ ಬೇಡ ಎಂದುಬಿಟ್ಟಿದ್ದ. ಆಕೆಯೂ ವಿನಯಚಂದ್ರನ ಬಳಿ ಹಲವಾರು ರೀತಿಯಿಂದ ಹೇಳಿ ನೋಡಿದಳು. ಯಾವುದಕ್ಕೂ ವಿನಯಚಂದ್ರ ಜಗ್ಗದಿದ್ದಾಗ ಮಧುಮಿತಾ ಅಮ್ಜದ್ ಬಳಿ ತಿರುಗಿ ವಿನಯಚಂದ್ರ ಹೇಳಿದಂತೆ ಬೇಡವೇ ಬೇಡ ಎಂದಳು. ಮತ್ತೆ ಬೇಡಿಕೊಳ್ಳಲು ಮುಂದಾದ ಆತನಿಗೆ `ತಮ್ಮನ್ನು ಹಿಂಬಾಲಿಸಬೇಡ..' ಎಂದು ತಾಕೀತು ಮಾಡಿ ಮುನ್ನಡೆದರು. ಆತ ಅಂಗಲಾಚುತ್ತಲೇ ಇದ್ದ.
        ಮುಂದಕ್ಕೆ ಸಾಗುವುದು ಸುಲಭವಾಗಿರಲಿಲ್ಲ. ಸರ್ಚ್ ಲೈಟಿನ ಕಣ್ತಪ್ಪಿಸಿ, ನಿಂತು ನಿಂತು ಸಾಗಬೇಕಿತ್ತು. ಹೀಗಾಗಿ ಅವಿತು ಅವಿತು ಮುಂದಕ್ಕೆ ಸಾಗಿದರು. ಮುಂದೆ ಮುಂದೆ ಹೋದಂತೆಲ್ಲ ಭಾರತ-ಬಾಂಗ್ಲಾ ನಡುವಿನ ಗಡಿಬೇಲಿ ಕಾಣಿಸಲಾರಂಭಿಸಿತು. ದೊಡ್ಡದೊಂದು ದಿಬ್ಬ. ದಿಬ್ಬದ ಮೇಲೆ ಮುಳ್ಳಿನ ಬೇಲಿ ಇರುವುದು ಕಾಣಸುತ್ತಿತ್ತು. ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಲ್ಲಿ ಮೂರು ಹಂತದ ಬೇಲಿ ಇರುವುದು ಸ್ಪಷ್ಟವಾಗುತ್ತಿತ್ತು. ಅರ್ಚಕರು ಹೇಳಿದ್ದ ದಿಕ್ಕಿನ ಜಾಡು ಹಿಡಿದವರಿಗೆ ಗಡಿ ಹತ್ತಿರಕ್ಕೆ ಬಂದರೂ ಸುರಂಗವಿರುವುದು ಕಾಣಿಸಲಿಲ್ಲ. ಹಾದಿ ತಪ್ಪಿದ್ದೇವಾ ಎಂದುಕೊಂಡರಾದರೂ ಎರಡು ದೇಶಗಳ ನಡುವಿನ ಬೇಲಿಯಲ್ಲಿ ಕದ್ದು ನುಸುಳಲು ಮಾಡಿದ ಸುರಂಗ ಸುಲಭಕ್ಕೆ ಕಾಣುವುದಿಲ್ಲ ಎನ್ನುವುದು ಅರಿವಾಯಿತು. ಗಡಿಗೆ ಕೆಲವೇ ಮೀಟರು ದೂರವಿದೆ ಎನ್ನುವಾಗ ಸರ್ಚ್ ಲೈಟಿನ ಆಗಮನದ ಅರಿವಾಯಿತು. ಅದರ ಕಣ್ಣಿಗೆ ಬೀಳದೇ ತಪ್ಪಿಸಿಕೊಳ್ಳಬೇಕಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸರ್ಚ್ ಲೈಟ್ ಹತ್ತಿರದಲ್ಲಿದೆ ಎನ್ನುವಾಗ ಪೊದೆಯಂತಹ ಸ್ಥಳವನ್ನು ನೋಡಿ ಅಲ್ಲಿ ಅಡಗಿದರು. ಆ ಪೊದೆಯ ಮೇಲೆ ಹಾದು ಹೋದ ಸರ್ಚ್ ಲೈಟ್ ಬೆಳಕು ಇಬ್ಬರ ಮುಖದ ಮೇಲೂ ಬಿದ್ದಿತು. ಬೆಳಕು ತಮ್ಮಿಂದ ದೂರ ಹೋಗಿದ್ದು ಗೊತ್ತಾದ ತಕ್ಷಣ ವಿನಯಚಂದ್ರ ಜಾಗೃತನಾದ. ಭಾರತದೊಳಕ್ಕೆ ನುಸುಳಲು ಇದ್ದ ಸುರಂಗದ ಬಾಯನ್ನು ಹುಡುಕಲು ನಿಂತ. ಆತನ ಹಿಂದೆ ಮತ್ತೆ ಸದ್ದಾಂತಾಯಿತು. ತಿರುಗಿ ನೋಡಿದರೆ ಮತ್ತದೇ ಬಾಲಕ ನಿಂತಿದ್ದ. ಹಿಂಬಾಲಿಸಬೇಡ ಎಂದು ಹೇಳಿದ್ದರೂ ಹಿಂದೆಯೇ ಬಂದಿದ್ದವನ ಮೇಲೆ ವಿನಯಚಂದ್ರನಿಗೆ ಎಲ್ಲಿಲ್ಲದ ಕೋಪ ಬಂದಿತು. ನಾಲ್ಕು ಏಟು ಇಕ್ಕಿಬಿಡಲೇ ಎಂದುಕೊಂಡನಾದರೂ ಗಡಿಯಲ್ಲಿ ಇಂತದ್ದೊಂದು ಗಲಾಟೆ ಬೇಡ ಎಂದುಕೊಂಡು ಕಷ್ಟಪಟ್ಟು ನಿಯಂತ್ರಿಸಿಕೊಂಡ.
          ಕೆಲಕಾಲದ ಹುಡುಕಾಟದ ನಂತರ ದೊಡ್ಡದೊಂದು ಹೊಂಡ ಕಾಣಿಸಿತು. ಆದರೆ ಈ ಹೊಂಡವೇ ಸುರಂಗವೇ ಎನ್ನುವುದು ಮಾತ್ರ ಸ್ಪಷ್ಟವಾಗಲಿಲ್ಲ. ಕೊನೆಗೆ ಈ ಹೊಂಡದಲ್ಲಿ ಇಳಿದು ತಾನು ಪರೀಕ್ಷೆ ಮಾಡುತ್ತೇನೆ. ಇದು ಸುರಂಗವೇ ಹೌದಾದರೆ ನಿನ್ನನ್ನು ಕರೆಯುತ್ತೇನೆ. ಅಲ್ಲಿಯ ವರೆಗೆ ಮರೆಯಲ್ಲಿ ಅಡಗಿರು ಎಂದು ಮಧುಮಿತಾಳಿಗೆ ಹೇಳಿದ ವಿನಯಚಂದ್ರ. ಅಷ್ಟರಲ್ಲಿ ಸರ್ಚ್ ಲೈಟ್ ಇನ್ನೊಂದು ಸುತ್ತು ಹಾಕಿ ಬರುತ್ತಿತ್ತು. ವಿನಯಚಂದ್ರ ಹೊಂಡದೊಳಗೆ ಅಡಗಿ ಕುಳಿತ. ಮಧುಮಿತಾ ವಾಪಾಸು ಬಂದು ಮರೆಯಲ್ಲಿ ಕುಳಿತಳು. ಅಮ್ಜದ್ ಅವಳನ್ನು ಹಿಂಬಾಲಿಸಿದ್ದ.!

(ಮುಂದುವರಿಯುತ್ತದೆ.)

Thursday, November 20, 2014

ಮುತ್ತಿಗೆ ಸೇರದ್ದು

ಕಿಸ್ ಆಫ್ ಲೌ ಡೇ... ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ..
ಅಚ್ಚಕನ್ನಡದಲ್ಲಿ ಮುತ್ತಿನ ದಿನ ಎಂದು ಕರೆಸಿಕೊಳ್ತಾ ಇದೆ..
ಇಂತಹ ಮುತ್ತಿನ ದಿನದ ನೆನಪಲ್ಲಿ ಬರೆದಿದ್ದು

* ಮುತ್ತಿನಂತಹ ತಾತ : `ಮುತ್ತಾ'ತ

* ಮುತ್ತಿನಂತಹ ನಟ : `ಮುತ್ತು'ರಾಜ

*  ಅತ್ಯುತ್ತಮ ಕ್ರಿಕೆಟರ್ : `ಮುತ್ತ'ಯ್ಯ ಮುರಳೀಧರನ್, ಮಹೇಂದ್ರ ನಾಗ`ಮುತ್ತು' (ವೆಸ್ಟ್ ಇಂಡೀಸ್ ಆಟಗಾರ)

* SOME ಮಾಜ ಸುಧಾರಕ : `ಮುತ್ತ'ಪ್ಪ ರೈ

* ಮುತ್ತಿನಂತಹ ಊರು : `ಮುತ್ತ'ತ್ತಿ, `ಮುತ್ತ'ಮುರುಡು, `ಮುತ್ತಿಗೆ'

* ಮಹಾಮಹಿಳೆ : ಮಾರಿ `ಮುತ್ತು'

* ಮಹಾ ಪತ್ನಿ : `ಮುತ್ತು'ಲಕ್ಷ್ಮಿ

* ಮುತ್ತಿನಂತಹ ಫೈನಾನ್ಸ್ : `ಮುತ್ತು'ಟ್ ಫೈನಾನ್ಸ್.

* ಮುತ್ತಿನಂತಹ ಸಿನೆಮಾ : `ಮುತ್ತಿ'ನ ಹಾರ

* ಮುತ್ತಿನಂತಹ ಮಾತು : `ಮುತ್ತು' ಕೊಟ್ಟರೆ ಮುಗಿಯಿತು. ಮಾತು ಆಡಿದರೆ ಹೋಯಿತು.

* ಐತಿಹಾಸಿಕ ಸಾಲು : `ಮುತ್ತಿ'ನ ಸತ್ತಿಗೆಯನಿತ್ತು ಸಲಹು ಭೂಭುಜ

ವಿ. ಸೂ :
ಇವನ್ನು ಸುಮ್ಮನೆ ತಮಾಷೆಗೆ ಬರೆದಿದ್ದು... ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಣಿ`ಮುತ್ತು'ಗಳನ್ನು ಇವಕ್ಕೆ ಪೋಣಿಸಲಾಗುತ್ತದೆ..

Wednesday, November 19, 2014

ನನ್ನ ಪ್ರೀತಿ

ದಿನ ನಗುವು, ಜೊತೆ ಬಿಗುವು
ತುಂಬಿಕೊಂಡಿದೆಯೋ ನನ್ನ ಪ್ರೀತಿ |

ಹೊಸ ಹುರುಪು ಜೊತೆ ಒನಪು
ಮೆರೆಸಿಕೊಂಡಿದೆಯೋ ನನ್ನ ಪ್ರೀತಿ|

ಹೊಸ ಸ್ಪರ್ಷ ನವ ವರ್ಷ
ಜೊತೆಯಲಿದೆಯೋ ನನ್ನ ಪ್ರೀತಿ |

ಮೆಲು ಸರಸ ಕೊಂಚ ವಿರಸ
ಬೆರೆತಿದೆಯೋ ನನ್ನ ಪ್ರೀತಿ |

ಸವಿ ಕನಸು ಹಸಿ ಮನಸು
ಅರಿತಿದೆಯೋ ನನ್ನ ಪ್ರೀತಿ |

ನೂರು ವರುಷ, ಜೊತೆ ಹರುಷ
ಮೆರೆದಿದೆಯೋ ನನ್ನ ಪ್ರೀತಿ |

ಸೋಲು ಗೆಲುವಿನ ನಡುವೆ
ಬದುಕಿದೆಯೋ ನನ್ನ ಪ್ರೀತಿ |



***

(ದಂಟಕಲ್ಲಿನಲ್ಲಿ ಬರೆದ ಈ ಕವಿತೆ 28-06-2006ರದ್ದು  )

Friday, November 14, 2014

ಮದ್ವೆ ಮಾಡ್ಕ್ಯಳೆ-3

ಕೂಸೆ ನಿಂಗೆ ಹೊಸದೊಂದು
ಗಂಡು ನೋಡಿದ್ನೇ
ಮಾಣಿ ಭಾರಿ ಶಿಸ್ತಾಗಿದ್ದ
ಮದ್ವೆ ಆಗ್ತ್ಯನೆ..|

ಆನು ಇನ್ನೂ ಓದಕಾಜು
ಮದ್ವೆ ಬ್ಯಾಡದೋ ಅಪ್ಪಯ್ಯಾ
ದೊಡ್ಡ ಕೆಲ್ಸ ಹುಡುಕಕಾಜು
ತ್ರಾಸು ಕೊಡಡ್ದೋ |

ಮಾಣಿ ಭಾರಿ ಚೊಲೋ ಇದ್ನೆ
ಮದ್ವೆ ಆಗ್ತ್ಯನೆ ಕೂಸೆ
ದೊಡ್ಡ ಕೆಲ್ಸ ಮಾಡ್ತಾ ಇದ್ದ
ಒಪ್ಪಿಗ್ಯತ್ಯನೆ |

ನಂದಿನ್ನೂ ಡಿಗ್ರಿ ಆಜಿಲ್ಲೆ
ಈಗ್ಲೆ ಎಂತಕ್ಕೆ ಮದ್ವೆ
ಇನ್ನೂ ಎರ್ಡು ವರ್ಷ ಹೋಗ್ಲಿ ಸುಮ್ನೆ
ಆಮೇಲೆ ನೋಡನ |

ಮೊನ್ನೆ ಬಂದ ಜೋಯಿಸ್ರಂತೂ
ಲೀಸ್ಟು ಕೊಟ್ಟಿದ್ದ
ದೊಡ್ಡ ಪಟ್ಟಿಯಲ್ಲಿ ನೂರು ಮಾಣಿ
ಪೋಟೋ ಇಟ್ಟಿದ್ದ |

ಪೋಟೋ ತೋರ್ಸಿ, ಆಸೆ ತೋರ್ಸಿ
ತಲೆ ಕೆಡ್ಸಡದೋ ಅಪ್ಪಯಾ
ಯಂಗಿನ್ನೂ ಓದಕಾಜು
ತ್ರಾಸು ಕೊಡಡದೋ |

ಉದ್ದ ಲೀಸ್ಟು ಇಲ್ಲಿಟ್ಟಿದ್ದಿ
ಬೇಗ ನೋಡ್ಬಿಡೆ ಕೂಸೆ
ಯಾರಡ್ಡಿಲ್ಲೆ ಹೇಳದನ್ನ
ಬೇಗ ಹೇಳ್ಬಿಡೆ |

ಮೂಲೆಮನೆ ಮಾಣಿಗೆ
ಕೆಲ್ಸ ಇಲ್ಯಲಾ ಅಪ್ಪಯ್ಯಾ
ದಂಟಕಲ್ ಮಾಣಿ
ದಂಟಿನ ಹಾಂಗೆ ಇದ್ದಿಗಿದ್ನಲಾ |

ಕಲ್ಮನೆ, ಸಣ್ಣಳ್ಳಿ, ಹೇರೂರು
ಇನ್ನೂ ಹೆಸ್ರು ರಾಶಿ ಇದ್ದಲೆ ಕೂಸೆ
ಅಜ್ಜಿಮನೆ, ಕಾನಳ್ಳಿ, ಹೊಸಳ್ಳಿ
ಮಾಣಿಯಕ್ಕ ಚೊಲೋ ಇದ್ವಲೆ |

ಕಲ್ಮನೆ ಮಾಣಿ ಸಣ್ಣಕ್ಕಿದ್ದ
ಸಣ್ಣಳ್ಳಿಯಂವ ಓದಿದ್ನಿಲ್ಲೆ
ಹೇರೂರ ಮಾಣಿ ಹಲ್ ಸರಿ ಇಲ್ಯಡಾ
ಯಂಗೆ ಬ್ಯಾಡದೋ ಅಪ್ಪಯ್ಯಾ |

ಪಟ್ಟಿ ಇನ್ನೂ ಜಾಸ್ತಿ ಇದ್ದು
ಬೇಗ ಒಪ್ಗ್ಯಳೇ ಕೂಸೆ
ಒಳ್ಳೆ ಟೈಮು ಬೇಗನೆ ನೋಡಿ
ಮದ್ವೆ ಮಾಡ್ಬುಡ್ತಿ |

ಅಜ್ಜಿಮನೆ ಮಾಣಿಗೆ ವಯಸ್ಸಾಗೋತು
ಕಾನಳ್ಳಿ ಮಾಣಿಗೆ ಊರು ಗೊತ್ತಿಲ್ಲೆ
ಹೊಸಳ್ಳಿ ಮಾಣಿ ಚಂದಾನೇ ಇಲ್ಲೆ
ಮದ್ವೆ ಬ್ಯಾಡದೋ ಅಪ್ಪಯ್ಯಾ |

ನಿಂಗ್ ಹೇಳಿ ಸಾಕಾಗೋತೆ
ಹಟಾ ಮಾಡಡದೇ ಕೂಸೆ
ಹಳ್ಳಿ ಮಾಣಿ ಒಪ್ಪಿಕೊಳ್ಳೆ
ತ್ರಾಸು ಕೊಡಡದೇ |

ಬೆಂಗಳೂರು ಮಾಣಿ ಇದ್ರೆ ಹೇಳು
ಮದ್ವೆ ಮಾಡ್ಕ್ಯತ್ತಿ ಅಪ್ಪಯ್ಯಾ
ಹಳ್ಳಿ ಬದಿಯವ್ ಬ್ಯಾಡದೇ ಬ್ಯಾಡ
ನಾ ಒಪ್ಪತ್ನಿಲ್ಲೆ |

ಹಿಂಗೇಳದೆ ಮಳ್ ಕೂಸೆ
ಮದ್ವೆಗೆ ಒಪ್ಕ್ಯಳೆ
ಬದುಕಿನ ತುಂಬ ಪ್ರೀತಿ ಮಾಡ್ತ
ಹೂಂ ಅಂತೇಳೆ |

ಬ್ಯಾಡದೇ ಬ್ಯಾಡ ಹಳ್ಳಿ ಹುಡುಗ
ಎರಡನೆ ಮಾತಿಲ್ಲೆ ಅಪ್ಪಯ್ಯಾ
ಇದರ ಬಿಟ್ಟರೆ ಇನ್ನು ಬ್ಯಾರೆ ಉತ್ತರ
ಯಂಗೆ ಗೊತ್ತಿಲ್ಲೆ |

****
(ಸುಮ್ಮನೆ ತಮಾಷೆಗೆ ಅಂತ ಬರೆದ ಹವ್ಯಕ ಗೀತೆ. ಮಗಳಿಗೆ ಹಲವಾರು ಊರುಗಳ ಹುಡುಗರ ಲೀಸ್ಟನ್ನು ತಂದು ಇವರಲ್ಲಿ ಯಾರನ್ನಾದರೂ ಮದುವೆಯಾಗು ಎಂದು ಹೇಳುವ ತಂದೆಗೆ ಮಗಳು ಕೊಡುವ ಉತ್ತರ ಈ ಹವ್ಯಕ ಗೀತೆಯಲ್ಲಿದೆ..)
(ಬರೆದಿದ್ದು ನ.14, 2014ರಂದು ಶಿರಸಿಯಲ್ಲಿ)

ಬೆಂಗಾಲಿ ಸುಂದರಿ-39

           ಸಾಕಷ್ಟು ದೊಡ್ಡದಾಗಿತ್ತು ತೀಸ್ತಾ ನದಿ. ಅಕ್ಕಪಕ್ಕದಲ್ಲಿ ಹಾದು ಹೋದಂತಿದ್ದ ಎರಡು ಸೇತುವೆಗಳು ನದಿಯ ಇಕ್ಕೆಲಗಳನ್ನು ಜೋಡಿಸಿದ್ದವು. ಬೇಸಿಗೆಯ ಆರಂಭವಾದ್ದರಿಂದ ನದಿಯಲ್ಲಿ ನೀರು ಕಡಿಮೆಯಿತ್ತು. ಉದ್ದನೆಯ ಬಯಲು ಮಲಗಿದೆಯೋ ಎಂಬಂತೆ ಕಾಣುತ್ತಿದ್ದ ಪ್ರದೇಶ. ಒಂದು ಕಡೆಯಲ್ಲಿ ಚಿಕ್ಕದೊಂದು ಸರೋವರದ ಆಕೃತಿಯಲ್ಲಿ ನೀರು ನಿಂತುಕೊಂಡಿತ್ತು. ಅರ್ಚಕರು `ಭಾರತಕ್ಕೂ ಬಾಂಗ್ಲಾದೇಶಕ್ಕೂ ತೀಸ್ತಾ ನದಿ ನೀರಿನ ಹಂಚಿಕೆಯ ಸಲುವಾಗಿ ಗಲಾಟೆಗಳು ನಡೆದಿವೆ. ಆಗೀಗ ವಿವಾದಗಳು ಉಂಟಾಗುತ್ತಲೂ ಇರುತ್ತವೆ. ಕಳೆದ ಎರಡು ದಶಕಗಳಿಂದ ಈ ನದಿ ನಿರಿನ ಹಂಚಿಕೆ ಜ್ವಲಂತವಾಗಿಯೇ ಇದೆ. ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿವೆ. ಹೀಗಾಗಿ ತೀಸ್ತಾನದಿ ನೀರು ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ' ಎಂದರು. ವಿನಯಚಂದ್ರ ಹಾಗೂ ಮಧುಮಿತಾ ಸುಮ್ಮನೇ ಕೇಳುತ್ತಿದ್ದರು.
           `ಭಾರತದ ಸಿಕ್ಕಿಂ ರಾಜ್ಯದಲ್ಲಿ ಹುಟ್ಟುವ ತೀಸ್ತಾ ನದಿ ನಂತರ ಪಶ್ಚಿಮ ಬಂಗಾಳದ ಫಾಸಲೆಯಲ್ಲಿ ಹರಿದು ಬಾಂಗ್ಲಾದೇಶವನ್ನು ಸೇರುತ್ತದೆ. ಭಾರತದಲ್ಲಿ ಈ ನದಿಗೆ ಹಲವಾರು ಅಣೆಕಟ್ಟುಗಳನ್ನೂ ಕಟ್ಟಲಾಗಿದೆ. ಹಿಮಾಲಯದಲ್ಲಿ ಹುಟ್ಟುವ ನದಿಯಾದ ಕಾರಣ ಸದಾಕಾಲ ತುಂಬಿರುತ್ತದೆ. ಇಂತಹ ನದಿ ನೀರನ್ನು ಭಾರತ ಅಣೆಕಟ್ಟಿ ತಾನೇ ಇಟ್ಟುಕೊಳ್ಳುತ್ತದೆ. ಪರಿಣಾಮವಾಗಿ ಬಾಂಗ್ಲಾದೇಶಕ್ಕೆ ಅಗತ್ಯವಾದ ನೀರು ಸಿಗುತ್ತಿಲ್ಲ ಎನ್ನುವ ವಾದ ಬಾಂಗ್ಲಾದೇಶದ್ದು. ಭಾರತವೂ ತನ್ನದೇ ಆದ ವಾದವನ್ನು ಮುಂದಿಡುತ್ತದೆ. ವಿಚಿತ್ರವೆಂದರೆ ನೀರು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಕೂಗಾಡುವ ಬಾಂಗ್ಲಾದೇಶ ಮಾತ್ರ ತೀಸ್ತಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದೇ ಇಲ್ಲ. ಆದರೆ ಭಾರತ ಸಮರ್ಪಕವಾಗಿ ನೀರು ಹಂಚಿಕೆ ಮಾಡುವುದಿಲ್ಲ ಎಂದು ಕೂಗಾಡುವುದನ್ನು ನಿಲ್ಲಿಸುವುದೇ ಇಲ್ಲ.. ಇದೋ ನೋಡಿ ಈ ನದಿಯ ಇಕ್ಕೆಲಗಳೂ ಸದಾಕಾಲ ಹಸಿರಾಗಿ ಇರವಂತಾಗಬಹುದಿತ್ತು. ವರ್ಷಕ್ಕೆ ಮೂರು ಬೆಳೆಗಳನ್ನೂ ಬೆಳೆಯಬಹುದಿತ್ತು. ಆದರೆ ನದಿಯ ಅಕ್ಕಪಕ್ಕದ ಬಯಲುಗಳು ಮಾತ್ರ ಒಣಗಿ ನಿಂತಿವೆ..' ಎಂದರು ಅರ್ಚಕರು.
           ವಿಶಾಲವಾದ ನದಿ ಹರವಿನ ಪಾತ್ರ ಬತ್ತಿದಂತಿತ್ತು. ಉದ್ದವಾದ ಸೇತುವೆ ನದಿಯನ್ನು ಅಡ್ಡಡ್ಡ ಸೀಳಿದಂತೆ ಮುಂದಕ್ಕೆ ಸಾಗಿತ್ತು. ನದಿಯ ಪಾತ್ರದಲ್ಲಿ ಅದ್ಯಾರೋ ಉಸುಕನ್ನು ತೆಗೆಯುತ್ತಿದ್ದರು. ಸೇತುವೆಯ ಮೇಲೆ ವೇಗವಾಗಿ ಸಾಗುತ್ತಿದ್ದ ಬಸ್ಸಿನಿಂದ ಒಂದು ಪಕ್ಕದಲ್ಲಿ ಮಾತ್ರ ನೀರಿನ ಗುಂಡಿಯಿದ್ದರೆ ಅಲ್ಲೊಂದಿಷ್ಟು ಮಹಿಳೆಯರು ತಲೆಯ ಮೇಲೆ ನೀರಿನ ಕೊಡಗಳನ್ನು ಹೊತ್ತು ಸಾಗುತ್ತಿದ್ದರು. ನಂದನ ವನದಲ್ಲೂ ಬರವೇ ಎಂದುಕೊಂಡ ವಿನಯಚಂದ್ರ. ತೀಸ್ತಾ ನದಿ ಸೇತುವೆ ದಾಟಿ ಮುನ್ನಡೆಯಿತು ಬಸ್ಸು. ಸೇತುವೆ ದಾಟಿದ ನಂತರ ರಸ್ತೆಯಲ್ಲಿ ಹೊರಳಿ ಕುರಿಗ್ರಾಮದ ಕಡೆಗೆ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಮನೆಗಳು. ಪುಟ್ಟ-ಪುಟ್ಟ ಹಳ್ಳಿಗಳು ಕಾಣಿಸಿದವು. ಮುಂದೆ ಮುಂದೆ ಸಾಗಿದಂತೆಲ್ಲ ರಸ್ತೆ ಮತ್ತಷ್ಟು ಕಿರಿದಾಯಿತು. ಕಿರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಧಾನವಾಗಿ ಹೆಚ್ಚತೊಡಗಿತು.
           ಅಲ್ಲೊಂದು ಕಡೆ ತಿಂಡಿ ತಿನ್ನಲು ವಾಹನ ನಿಲ್ಲಿಸಲಾಯಿತು. ಅರ್ಚಕರ ಬಸ್ಸಿನಿಂದ ಇಳಿದರು. ಅಷ್ಟೇ ಅಲ್ಲ ವಿನಯಚಂದ್ರ ಹಾಗೂ ಮಧುಮಿತಾರನ್ನೂ ಇಳಿಯಲು ಹೇಳಿ ಅಲ್ಲೇ ಇದ್ದ ಹೊಟೆಲೊಂದಕ್ಕೆ ಕರೆದೊಯ್ದರು. ಹೊಟೆಲಿನಲ್ಲಿ ಬೆಂಗಾಲಿ ಸ್ಪೆಷಲ್ ರಸಗುಲ್ಲಕ್ಕೆ ಆರ್ಡರ್ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಕಣ್ಣೆದುರಿಗೆ ತಂದಿಟ್ಟ ರಸಗುಲ್ಲವನ್ನು ಮೂವರೂ ಸವಿಯುತ್ತಿದ್ದಾಗಲೇ `ರೋಶಗುಲಾ.. ಬೆಂಗಾಲಿಯ ವಿಶೇಷ ತಿಂಡಿ. ಈ ರಾಷ್ಟ್ರಕ್ಕೇನಾದರೂ ರಾಷ್ಟ್ರೀಯ ತಿಂಡಿ ಎನ್ನುವುದು ಇದ್ದರೆ ಅದು ರೋಶಗುಲಾ ವೇ ಹೌದು..' ಎಂದರು. ವಿನಯಚಂದ್ರ ರೋಶಗುಲಾದ ಹೆಸರು ಕೇಳಿ ಕೆಲಕಾಲ ಅವಾಕ್ಕಾಗಿ ನಿಂತಿದ್ದ. ಕೊನೆಗೆ ರಸಗುಲ್ಲಾವೇ ಬಾಂಗ್ಲಾದೇಶದಲ್ಲಿ ರಶೊಗುಲಾವಾಗಿ ಬದಲಾಗಿದೆ ಎಂಬುದು ನೆನಪಾಯಿತು. ಮಧುಮಿತಾಳಂತೂ ಖುಷಿಯಿಂದ ಸವಿದಳು. ಆಕೆಗೆ ಚಿಕ್ಕಂದಿನಿಂದ ಬಲು ಆಪ್ತ ತಿಂಡಿಯಾಗಿತ್ತದು. ಕಳೆದುಹೋಗಿದ್ದು ಮತ್ತೊಮ್ಮೆ ಸಿಕ್ಕಂತಾಯಿತು. ಮತ್ತೊಮ್ಮೆ ರೊಶಗುಲಾವನ್ನು ನೀಡಿದ್ದಕ್ಕಾಗಿ ಅರ್ಚಕರಿಗೆ ಧನ್ಯವಾದ ಹೇಳಿದಳು ಆಕೆ.
         ಮತ್ತೆ ಹೊರಡಲು ಅನುವಾದ ಬಸ್ಸನ್ನು ಏರಿದರು ಮೂವರೂ. ಬಸ್ಸು ರಾಜರಹಾಟ್ ಪ್ರದೇಶವನ್ನು ಹಾದು ಒಂದು ತಾಸಿನ ಅವಧಿಯಲ್ಲಿ ಕುರಿಗ್ರಾಮವನ್ನು ತಲುಪಿತು. ಅಲ್ಲಿ ಇಳಿದ ಮೂವರೂ ಆ ಗ್ರಾಮದ ಫಾಸಲೆಯಲ್ಲೇ ಇದ್ದ ಸ್ಥಳದತ್ತ ತೆರಳಿದರು. ಮುಖ್ಯ ಬೀದಿಯಿಂದ ಕವಲೊಡೆದ ಸಾದಾ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ಒಂದು ಕಡೆ ಅರ್ಚಕರು ಇಬ್ಬರನ್ನು ಕರೆದೊಯ್ದರು. ಮನೆಯೊಂದರ ಬಳಿ ನಿಲ್ಲಿಸಿ ಮನೆಯ ಯಜಮಾನನನ್ನು ಕರೆದರು. ಮನೆಯ ಯಜಮಾನ ಹೊರಬಂದ ನಂತರ ಆತನನ್ನು ಅರ್ಚಕರು ಪರಿಚಯಿಸಿದರು.
         ಭಾರತಕ್ಕೆ ಕಳಿಸುವ ಅರ್ಚಕರ ಕೈಂಕರ್ಯದಲ್ಲಿ ಜೊತೆಗೂಡಿದ ವ್ಯಕ್ತಿಯಾಗಿದ್ದರು ಆತ. ಆತನೂ ಹಿಂದೂವೇ ಆಗಿದ್ದ. ಭಾರತ ತಲುಪುವ ವರೆಗೆ ಸಹಾಯ ಮಾಡುವುದು ಆತನ ಪ್ರಮುಖ ಕಾರ್ಯವಾಗಿತ್ತು. ತನ್ನ ಮನೆಯ ಪಕ್ಕದಲ್ಲೇ ಇದ್ದ ಕೊಠಡಿಯಲ್ಲಿ ಸಂಜೆಯಾಗುವ ವರೆಗೆ ಉಳಿಯಲು ಅವಕಾಶ ಮಾಡಿಕೊಟ್ಟ. ಮಾತಿಗೆ ನಿಂತ ಅರ್ಚಕರು `ಇಲ್ಲಿಯವರೆಗಿನ ನಮ್ಮ ಪ್ರಯಾಣ ನಿರಾಳ. ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಇನ್ನುಮುಂದಿನ ಹಾದಿಯಂತೂ ಬಹಳ ಕಠಿಣ. ಹೆಜ್ಜೆ ಹೆಜ್ಜೆಗೆ ಅಪಾಯವಿದೆ. ಮೊದಲಿಗೆ ನಾವು ಧರ್ಲಾ ನದಿಯನ್ನು ದಾಟಿ ಭಾರತದ ಗಡಿಯತ್ತ ಹೋಗಬೇಕು. ಅಲ್ಲಿ ಸಮಯ ನೋಡಿ ದಾಟಬೇಕು. ಅದೃಷ್ಟವಿದ್ದರೆ ಇವತ್ತೇ ದಾಟಬಹುದು. ಸಾಧ್ಯವಾಗದಿದ್ದರೆ ಕಾಯಬೇಕು. ಕೆಲವೊಮ್ಮೆ ನಾವು ಹೀಗೆ ಕಾಯುವುದು ಕನಿಷ್ಟ ಒಂದು ವಾರವೂ ಆಗಬಹುದು. ನೋಡೋಣ ಏನಾಗುತ್ತದೆ ಅಂತ..' ಎಂದರು.
         ಇಬ್ಬರೂ ತಲೆಯಲ್ಲಾಡಿಸಿ ಸುಮ್ಮನಾದರು. ಸಂಜೆಯಾಗುವುದನ್ನೇ ಕಾಯುತ್ತ ಕಳೆದರು. ಹೀಗೆ ಕಾಯುತ್ತಿದ್ದಾಗಲೇ ಉಳಿದಕೊಂಡಿದ್ದ ಮನೆಯ ಯಜಮಾನರು, ಅವರ ಪತ್ನಿ, ಮಕ್ಕಳು ಬಂದು ಪರಿಚಯ ಮಾಡಿಕೊಂಡರು. ವಿನಯಚಂದ್ರನಿಗೆ ಇವರೆಲ್ಲ ಎಷ್ಟು  ಆಪ್ತರು ಎನ್ನಿಸಿತು. ಕತ್ತಲಾಗುತ್ತಿದ್ದಂತೆ ಅರ್ಚಕರು ಭಾರತದ ಗಡಿಯತ್ತ ತೆರಳುವಂತೆ ಸೂಚಿಸಿದರು. ಬೇಗನೇ ತಯಾರಾದ ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯತ್ತ ಹೊರಟರು. ಸೈಕಲ್ ರಿಕ್ಷಾ ಒಂದನ್ನು ಬಾಡಿಗೆಗೆ ತಂದಿದ್ದ ಅರ್ಚಕರು ಸೀದಾ ಭಾರತದ ಗಡಿಯತ್ತ ತಮ್ಮನ್ನು ಕರೆದೊಯ್ಯಲು ಹೇಳಿದರು. ಅರ್ಚಕರ ಅಣತಿಯನ್ನು ಕೇಳಿದ ಸೈಕಲ್ ರಿಕ್ಷಾವಾಲಾ `ಏನು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದೀರಾ..? ಹುಷಾರು..' ಎಂದ. ಅರ್ಚಕರು ಅದೇನೋ ಅಬೂಬು ಹೇಳಿದರಾದರೂ ಸೈಕಲ್ ರಿಕ್ಷಾವಾಲಾ ನಂಬಲಿಲ್ಲ.
         ಕೆಲ ಹೊತ್ತಿನಲ್ಲಿಯೇ ಧಾರ್ಲಾ ನದಿಯನ್ನು ದಾಟಿ ಸೈಕಲ್ ಮುಂದಕ್ಕೆ ಸಾಗಿತು.ಅಲ್ಲೆಲ್ಲೋ ಒಳ ಪ್ರದೇಶಗಳಲ್ಲಿ ಸೈಕಲ್ ಸಾಗುತ್ತಿದ್ದರೆ ವಿನಯಚಂದ್ರನಿಗೆ ತಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಬಗೆ ಹರಿಯಲಿಲ್ಲ. ಅಕ್ಕಪಕ್ಕದಲ್ಲಿ ವಿಶಾಲವಾದ ಬಯಲು ಇರುವುದು ಗೊತ್ತಾಗುತ್ತಿತ್ತು. ಸೈಕಲ್ ರಿಕ್ಷಾವಾಲ ಸೈಕಲ್ಲಿಗೆ ಯಾವುದೇ ಬೆಳಕು ಅಳವಡಿಸಿರಲಿಲ್ಲ. ಕತ್ತಲೆಯಲ್ಲಿಯೇ ಮುಂದಕ್ಕೆ ಸಾಗುತ್ತಿದ್ದ. ಭಾರತದ ಗಡಿಯೊಳಕ್ಕೆ ನುಸುಳಲು ಅದೆಷ್ಟು ಜನರನ್ನು ಹೀಗೆ ಕರೆದೊಯ್ದಿದ್ದನೋ. ಪಳಗಿದ ಆತನಿಗೆ ಯಾವ ಕ್ಷಣದಲ್ಲಿ ಹೇಗೆ ಮಾಡಬೇಕು ಎನ್ನುವುದು ಗೊತ್ತಿತ್ತು. ಆದ್ದರಿಂದ ಕತ್ತಲೆಯಲ್ಲಿಯೇ ಹಳೆಯ ಜಾಡಿನ ರಸ್ತೆಯಲ್ಲಿ ಸಾಗುತ್ತಿದ್ದ. ಒಂದು ತಾಸಿನ ಪಯಣದ ನಂತರ ಭಾರತದ ಗಡಿ ಪ್ರದೇಶವೆನ್ನುವುದು ದೂರದಲ್ಲಿ ಕಾಣುತ್ತಿತ್ತು. ಹಾಕಿದ್ದ ಬೇಲಿ, ಅಲ್ಲೆಲ್ಲೋ ಒಂದು ಕಡೆಯಿದ್ದ ಸರ್ಚ್ ಲೈಟಿನಿಂದ ಭಾರತದ ಗಡಿಯನ್ನು ಗುರುತಿಸಬಹುದಿತ್ತು. ದೂರದಲ್ಲೇ ಸೈಕಲ್ ರಿಕ್ಷಾ ನಿಲ್ಲಿಸಿ ಸುಸಂದರ್ಭಕ್ಕಾಗಿ ಕಾಯುತ್ತ ನಿಂತರು.

(ಮುಂದುವರಿಯುತ್ತದೆ..)

Sunday, November 9, 2014

ಒಂದಿಷ್ಟು HONEYಗಳು

`ಸಿದ್ದು'ಗಳು

ಕ್ರಿಕೆಟ್ ಕಾಮೆಮಟರಿಯಲ್ಲಿ
ಬಲು ಜೋರು ಸಿದ್ದು |
ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರ
ಮತ್ತು ಸದನದಲ್ಲಿ ನಿದ್ದೆಯಲ್ಲಿ
ಜೋರಂತೆ ಸಿದ್ದು |

ಕ್ರೀಡಾ ಮನೋಭಾವ

ಪದೇ ಪದೆ ಬರುವ
ಸೋಲನ್ನೂ ಕೂಡ
ಗೆಲುವಿನಂತೆ ಸವಿಯುವ
ಜಗತ್ತಿನ ಏಕೈಕ ತಂಡ
ಅದು ಭಾರತದ ಕ್ರಿಕೆಟ್ ತಂಡ ||


ಹುಟ್ಟಿದ ದಿನ

ವರ್ಷಕ್ಕೊಮ್ಮೆ ಬಂದು
ನಿನ್ನ ಆಯುಷ್ಯ ಒಂದು
ವರ್ಷ ಕಳೆಯಿತು
ಜೊತೆಗೆ ನೀನು ಸಾವಿಗೆ
ಒಂದು ವರ್ಷ ಹತ್ತಿರವಾದೆ
ಎನ್ನುವ ದಿನ |

ಎನರ್ಜಿ ಸೀಕ್ರೆಟ್

ಪ್ರತಿ matchನಲ್ಲೂ ಹೊಡೆಯುವ
ತೆಂಡೂಲ್ಕರ್ ಶಾಟು, ಅದು
ಬಹಳ ಫಾಸ್ಟು |
ಏಕೆಂದರೆ ಅದರ ಸೀಕ್ರೆಟ್ಟು
ಪ್ಯಾಕೆಟ್ ಒಳಗಿನ ಬೂಸ್ಟು ||


ಉಪಸಂಪಾದಕ

ಉಪಸಂಪಾದಕನೆಂದರೆ
ಏನೆಂದುಕೊಂಡಿರಿ?
ಪತ್ರಿಕೆಯ ಏಳಿಗೆಗಾಗಿ
ಉಪಹಾರವನ್ನೂ ಸೇವಿಸದೇ
ಉಪವಾಸ ಬಿದ್ದು ದುಡಿಯುವಾತ ||

Saturday, November 8, 2014

ಬೆಂಗಾಲಿ ಸುಂದರಿ-38

(ರಂಗಪುರದ ಬೀದಿ)
             ಬೆಳಗಿನ ಜಾವದಲ್ಲೇ ಎದ್ದ ಅರ್ಚಕರು ಹಾಯಾಗಿ ನಿದ್ದೆ ಮಾಡುತ್ತಿದ್ದ ವಿನಯಚಂದ್ರ ಹಾಗೂ ಮಧುಮಿತಾಳನ್ನು ಎಬ್ಬಿಸಿದರು. ಅದ್ಯಾವಾಗಲೂ ಮಾಡಿದ್ದ ತಿಂಡಿಯನ್ನು ತಿನ್ನಿಸಿ ಬೇಗ ಬೇಗನೆ ಪ್ರಯಾಣ ಆರಂಭಕ್ಕೆ ಒತ್ತಡ ಹಾಕಿದರು. ಈ ಅರ್ಚಕರದ್ದು ಸ್ವಲ್ಪ ಗಡಿಬಿಡಿ ಸ್ವಭಾವ ಎಂದುಕೊಂಡ ವಿನಯಚಂದ್ರ. ಆದರೂ ತಮ್ಮ ಒಳ್ಳೆಯದಕ್ಕೇ ಈ ಕೆಲಸ ಮಾಡುತ್ತಿದ್ದಾರಲ್ಲ ಎಂದುಕೊಂಡು ಸುಮ್ಮನಾದ. ಅರ್ಚಕರೇ ಮುಂಜಾನೆದ್ದು ತಿಂಡಿಯನ್ನೂ ಮಾಡಿಟ್ಟಿದ್ದರು. ತಿಂಡಿ ತಿಂದು ಭಾರತದ ಗಡಿಯತ್ತ ತೆರಳಲು ತಯಾರಾದರು.  ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲು ಆರಂಭಿಸುತ್ತಿದ್ದಂತೆ ವಿನಯಚಂದ್ರ ಹಾಗೂ ಮಧುಮಿತಾ ದೇವರ ಬಳಿ ಬಂದು ಮುಂದಿನ ಪ್ರಯಾಣ ಸುಗಮವಾಗಿ ನೆರವೇರಲಿ ಎಂದು ಬೇಡಿಕೊಂಡರು. ಇದುವರೆಗಿನ ಪ್ರಯಾಣ ಒಂದು ಹಂತದ್ದಾಗಿದ್ದರೆ ಇನ್ನು ಮುಂದಿನ ಸಂಚಾರವೇ ಮತ್ತೊಂದು ಹಂತದ್ದಾಗಿತ್ತು. ಭಾರತದ ಗಡಿಯೊಳಗೆ ನುಸುಳುವುದು ಪ್ರಯಾಣದ ಪ್ರಮುಖ ಘಟ್ಟವೇ ಆಗಿತ್ತು.
             ಅದೊಂದು ಶಿವನ ದೇವಾಲಯ. ಅರ್ಚಕರೇ ಹೇಳಿದ ಪ್ರಕಾರ ಆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆಯಂತೆ. ಬೆಡಿದ್ದನ್ನು ಈಡೇರಿಸುತ್ತಾನೆ ಎಂದೂ ಅರ್ಚಕರು ಹೇಳಿದರು. ಶಿವನಿಗೆ ಅಡ್ಡಬಿದ್ದ ಮಧುಮಿತಾ ವಿನಯಚಂದ್ರರು ಬದುಕಿನಲ್ಲಿ ಸುಖ-ಶಾಂತಿ ಸದಾ ನೆಲೆಸಿರಲಿ, ಮುಮದಿನ ಪ್ರಯಾಣದಲ್ಲಿ ಯಾವುದೇ ವಿಘ್ನಗಳು ಬಾರದೇ ಇರಲಿ ಎಂದು ಬೇಡಿಕೊಂಡರು.
            ನಂತರ ಅರ್ಚಕರೊಡನೆ ರಂಗಪುರ ಬಸ್ ನಿಲ್ದಾಣಕ್ಕೆ ತೆರಳಿ ಭಾರತದ ಗಡಿ ಪ್ರದೇಶದಲ್ಲಿ ಇರುವ ಊರಿನ ಕಡೆಗೆ ತೆರಳುವ ಬಸ್ಸಿಗಾಗಿ ಕಾಯುತ್ತ ನಿಂತರು. `ಸಲೀಂ ಚಾಚಾ.. ಭಾರತದ ಗಡಿಯೊಳಕ್ಕೆ ನುಗ್ಗಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಏಜೆಂಟನೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದ. ಆ ಏಜೆಂಟ ನಮ್ಮ ಬಳಿ ರಂಗಪುರಕ್ಕೆ ಬರುವಂತೆ ಹೇಳಿದ್ದ..' ಎಂದು ವಿನಯಚಂದ್ರ ಹೇಳಿದ.
           `ಏಜೆಂಟರು.. ಥೂ.. ಅವರನ್ನು ನಂಬಲಿಕ್ಕೆ ಹೋಗಬೇಡಿ. ಅವರಂತೂ ನಿಮ್ಮ ಬಳಿ ಸಿಕ್ಕಾಪಟ್ಟೆ ದುಡ್ಡು ಪಡೆಯುತ್ತಾರೆ. ನಂಬಿದಾಗಲೆಲ್ಲ ಕೈ ಕೊಡುವವರು ಅವರು. ಅವರ ಮೋಸಕ್ಕೆ ಬಲಿಯಾದವರು ಹಲವರಿದ್ದಾರೆ.. ಮೋಸ ಮಾಡುವ ಏಜೆಂಟರ ಸಾಲಿನಲ್ಲಿ ಇವನೂ ಒಬ್ಬನಿರಬೇಕು..' ಎಂದು ಅರ್ಚಕರು ಹೇಳಿ ಸುಮ್ಮನಾದರು.
            `ಆದರೆ ಈ ಏಜೆಂಟನನ್ನು ನಾನು ನೋಡಿದ್ದೆ. ಆದರೆ ಹಾಗೆ ಕಾಣಲಿಲ್ಲ. ಸಲೀಂ ಚಾಚಾ ಬೇರೆ ಆತ ಬಹಳ ಒಳ್ಳೆಯವನು.. ಇದುವರೆಗೂ ನೂರಕ್ಕೂ ಹೆಚ್ಚು ಜನರನ್ನು ಭಾರತದೊಳಕ್ಕೆ ಕಳಿಸಿದ್ದಾನೆ ಎಂದೂ ಹೇಳಿದ್ದ..' ಎಂದ ವಿನಯಚಂದ್ರ.
            `ಅಯ್ಯೋ.. ಬಾಂಗ್ಲಾದೇಶದಲ್ಲಿ ಭಾರತದ ಗಡಿಯೊಳಕ್ಕೆ ಬಾಂಗ್ಲಾ ನಿವಾಸಿಗಳನ್ನು ಕಳಿಸಲು ದೊಡ್ಡದೊಂದು ಜಾಲವೇ ಇದೆ. ಸಾವಿರಾರು ಜನರು ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರನ್ನು ಭಾರತದೊಳಕ್ಕೆ ಅಕ್ರಮವಾಗಿ ಕಳಿಸಲು ಅವರು ಯಶಸ್ವಿಯೂ ಆಗಿದ್ದಾರೆ. ಹೆಚ್ಚಿನವರು ಭಾರತಕ್ಕೆ ಕಳಿಸುವುದಕ್ಕಾಗಿ ಭಾರಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ಬಹಳ ಜನ ಒಮ್ಮೆ ಹಣ ಪಡೆದ ನಂತರ ನಾಪತ್ತೆಯಾಗುತ್ತಾರೆ. ಸಾವಿರಾರು ಜನರು ಏಜೆಂಟರ ಮೋಸಕ್ಕೆ ಬಲಿಯಾಗಿದ್ದಾರೆ...' ಎಂದರು ಅರ್ಚಕರು.
            `ಹೌದಾ..?' ಎಂದು ಅಚ್ಚರಿಯಿಂದ ಕೇಳಿದ ವಿನಯಚಂದ್ರ.
             `ಹುಂ.. ಬಾಂಗ್ಲಾ ದೇಶದವರಿಗೆ ಭಾರತ ಎನ್ನುವುದು ಸ್ವರ್ಗ. ಪಕ್ಕದ ದೊಡ್ಡ ರಾಷ್ಟ್ರ ಭಾರತ. ಬಾಂಗ್ಲಾದಂತೆ ಬದುಕು ನರಕವಲ್ಲ. ಇಲ್ಲಿನಂತೆ ಅನಿಶ್ಚಿತತೆಯೂ ಭಾರತದಲ್ಲಿ ಇಲ್ಲ.  ಭಾರತದಲ್ಲಿ ರಾಜಕಾರಣಿಗಳು ಓಲೈಕೆ ಮಾಡುತ್ತಾರೆ ಎನ್ನುವುದು ಗೊತ್ತಿರುವ ಸಂಗತಿಯೂ ಹೌದು. ಒಮ್ಮೆ ಭಾರತದೊಳಕ್ಕೆ ಹೋಗಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎನ್ನುವುದು ಇಲ್ಲಿನ ಸಾವಿರಾರು ಜನರ ನಂಬಿಕೆ. ಆ ಕಾರಣಕ್ಕಾಗಿಯೇ ಭಾರತದೊಳಕ್ಕೆ ಹೋಗಲು ಹಾತೊರೆಯುತ್ತಾರೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಾರತೊಳಕ್ಕೆ ನುಸುಳುತ್ತಲೂ ಇದ್ದಾರೆ. ಬಾಂಗ್ಲಾದಲ್ಲೇ ಈ ಕಾರಣಕ್ಕಾಗಿಯೇ ಒಂದು ಜೋಕೂ ಕೂಡ ಇದೆ. `ನಾವಿಬ್ಬರು.. ನಮಗಿಬ್ಬರು.. ಹೆಚ್ಚಿಗೆ ಇದ್ದವರು ಭಾರತಕ್ಕೆ ಹೋದರು..' ಎಂದು ಹೇಳುತ್ತಿರುತ್ತಾರೆ. ಇಂತಹ ನುಸುಳುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡವರು ಭಾರತಕ್ಕೆ ಕಳಿಸುವ ನೆಪದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ..' ಎಂದರು ಅರ್ಚಕರು.
(ರಂಗಪುರದಲ್ಲಿರುವ ಮಹಾಬೋಧಿ ದೇವಸ್ಥಾನ)
            `ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಲು, ರೇಷನ್ ಕಾರ್ಡ್ ಮಾಡಿಸಲು, ಎಲ್.ಐಸಿ. ಹೀಗೆ ಹಲವಾರು ಕಡೆಗಳಲ್ಲಿ ಏಜೆಂಟರಿರುತ್ತಾರೆ. ಆದರೆ ಈ ಬಗೆಯ ಏಜೆಂಟರನ್ನು ಕಂಡಿರಲಿಲ್ಲ ನೋಡಿ..' ಎಂದು ನಕ್ಕ ವಿನಯಚಂದ್ರ.
              `ಹೌದು.. ಇಂತಹ ಕಾರಣಕ್ಕೇ ಬಾಂಗ್ಲಾದೇಶ ವಿಭಿನ್ನವಾಗಿದೆ. ವಿಚಿತ್ರವೂ ಆಗಿದೆ..' ಎಂದಳು ಮಧುಮಿತಾ.
              `ಎಲ್ಲಾ ಸರಿ.. ನೀವೂ ಹಲವರನ್ನು ಭಾರತಕ್ಕೆ ಕಳಿಸಿದ್ದೀನಿ ಎಂದಿರಲ್ಲ.. ಸುಮಾರು ಎಷ್ಟು ಜನರನ್ನು ಭಾರತಕ್ಕೆ ಕಳಿಸಿರಬಹುದು?' ಎಂದು ಕೇಳಿದ ವಿನಯಚಂದ್ರ.
             `ನಾನು ಇದುವರೆಗೂ 125 ಜನರನ್ನು ಭಾರತಕ್ಕೆ ಕಳಿಸಿದ್ದೇನೆ. ಅವರೆಲ್ಲರೂ ಹಿಂದೂಗಳೇ. ಅವರೆಲ್ಲ ಭಾರತಕ್ಕೆ ಹೋಗುವಾಗ ಕೇಳುವ ಒಂದೇ ಪ್ರಶ್ನೆಯೆಂದರೆ ನೀವೂ ಭಾರತಕ್ಕೆ ಬನ್ನಿ ಅಂತ. ಆಗ ಅವರ ಬಳಿ ನಾನು ಮತ್ಯಾರಾದರೂ ಹಿಂದೂಗಳು ಭಾರತಕ್ಕೆ ಬರುವವರಿದ್ದರೆ ಅವರನ್ನು ಕಳಿಸಲು ನಾನು ಬರಬೇಕಾಗುತ್ತದೆ ಎಂದು ಹೇಳಿದ್ದೆ. ಈಗ ನೀವೂ ಕೇಳುತ್ತಿದ್ದೀರಿ. ನಿಮಗೂ ನಾನು ಅದೇ ಉತ್ತರವನ್ನು ನೀಡುತ್ತೇನೆ. ಮೊದಲೇ ಹೇಳಿಬಿಡುತ್ತೇನೆ. ನಾನು ಏಜೆಂಟನಲ್ಲ. ನಾನು ದುಡ್ಡಿಗಾಗಿಯೂ ಮಾಡುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಮಾಡುತ್ತೇನೆ. ಬಾಂಗ್ಲಾದಲ್ಲಿ ಹಿಂದೂಗಳು ಹೀನಾಯವಾಗಿ ಸಾಯುತ್ತಿದ್ದಾರೆ. ಅವರ ಬದುಕು ಭಾರತಕ್ಕೆ ಹೋದರೆ ಚನ್ನಾಗಿರುತ್ತದೆ ಎನ್ನುವ ಕಾರಣಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ. ನನ್ನಿಂದಾಗಿ ನೂರಾರು ಜನರು ಬದುಕುತ್ತಾರೆ ಎಂದಾದರೆ ಅಷ್ಟೇ ಸಾಕು..' ಎಂದರು ಅರ್ಚಕರು.
         ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಅರ್ಚಕರನ್ನು ಹೆಮ್ಮೆಹಿಂದ ನೋಡಿದರು. ಅಷ್ಟರಲ್ಲಿ ಭಾರತದ ಗಡಿ ಪ್ರದೇಶದಲ್ಲಿರುವ ಬಾಂಗ್ಲಾದ ಹಳ್ಳಿಗಳಿಗೆ ತೆರಳುವ ಬಸ್ಸೊಂದು ಬಂದಿತು. ಅರ್ಚಕರೇ ಮುಂದಾಳುವಾಗಿ ಬಸ್ಸನ್ನೇರಿದರು. ಬಸ್ಸು ಸಾಕಷ್ಟು ಖಾಲಿಯಿತ್ತು. ` ಈ ಬಸ್ಸು ನಾಗೇಶ್ವರಿ ಎನ್ನುವ ಊರಿಗೆ ತೆರಳುತ್ತದೆ. ಸರಿಸುಮಾರು 100 ಕಿ.ಮಿ ದೂರದೊಳಗೆ ನಾವು ಅಲ್ಲಿಗೆ ತೆರಳಬಹುದು. ಆದರೆ ಎರಡು ದೇಶಗಳ ಗಡಿ ಭಾಗವಾದ ಕಾರಣ ಈ ಪ್ರದೇಶದ ರಸ್ತೆಗಳು ತೀರಾ ಕೆಟ್ಟದಾಗಿದೆ. ಹೀಗಾಗಿ ನಾಗೇಶ್ವರಿಯನ್ನು ತಲುಪಲು ಸಾಕಷ್ಟು ಸಮಯ ಸಿಗುತ್ತದೆ..' ಎಂದರು ಅರ್ಚಕರು.
         `ಬಾಂಗ್ಲಾದೇಶವೇ ಕೆಟ್ಟದ್ದು. ಅಂತದ್ದರಲ್ಲಿ ಈ ಪ್ರದೇಶ ಇನ್ನೂ ಕೆಟ್ಟದಾಗಿದೆ ಎನ್ನುತ್ತಾರೆ.. ಹೇಗಿದೆಯಪ್ಪಾ..' ಎಂದುಕೊಂಡ ವಿನಯಚಂದ್ರ. ಮಧುಮಿತಾ ಹಿಂದೆ ಹಲವು ಬಾರಿ ರಂಗಪುರಕ್ಕೆ ಬಂದಿದ್ದಳು. ಆದರೆ ರಂಗಪುರದಿಂದ ಮುಂದಕ್ಕೆ ಭಾರತದ ಗಡಿಯವರೆಗೆ ಬಂದಿರಲಿಲ್ಲ. ಹೀಗಾಗಿ ಮುಂದಿನ ಪಯಣ ಅವಳಿಗೂ ಹೊಸದೇ ಆಗಿತ್ತು. ಬೆರಗಿನಿಂದಲೇ ಹೊರಟಳು. ಬಸ್ಸು ಅರ್ಧ ತಾಸಿನ ವಿಶ್ರಮದ ನಂತರ ಹೊರಟಿತು.
           ರಂಗಪುರದ ವಾತಾವರಣ ಬಾಂಗ್ಲಾದೇಶದ ಇತರ ಭಾಗಗಳಿಗಿಂತ ಕೊಂಚ ಭಿನ್ನವಾಗಿತ್ತು. ಬಾಂಗ್ಲಾದ ಎಲ್ಲ ಕಡೆಗಳಲ್ಲಿ ಭತ್ತದ ಗದ್ದೆಗಳು ವಿಶಾಲವಾಗಿದ್ದರೆ ರಂಗಪುರದ ಸುತ್ತಮುತ್ತ ಗದ್ದೆಗಳ ಜೊತೆ ಜೊತೆಯಲ್ಲಿ ಕುರುಚಲು ಕಾಡುಗಳಿದ್ದವು. ಬಯಲು ಕಡಿಮೆಯಾಗಿ ಚಿಕ್ಕಪುಟ್ಟ ಗುಡ್ಡಗಳೂ ಕಾಣಿಸಿಕೊಳ್ಳತೊಡಗಿದ್ದವು. ಗುಡ್ಡ ತುಂಬೆಲ್ಲ ಹೇರಳವಾಗಿ ಮರಗಳು ಆವರಿಸಿದ್ದವು. ಅರ್ಧಗಂಟೆಯ ಪ್ರಯಾಣ ನಂತರ ರಂಗಪುರದ ಫಾಸಲೆಯನ್ನು ದಾಟಿ ಬಸ್ಸು ನಾಗೇಶ್ವರಿಯ ಕಡೆಗೆ ತೆರಳಿತು. ರಂಗಪುರದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ದೇವಾಲಯಗಳು ಕಣ್ಣಿಗೆ ಬೀಳುತ್ತಿದ್ದವು. ಅಲ್ಲೊಂದು ಕಡೆ ಭವ್ಯವಾಗಿ ನಿರ್ಮಾಣ ಮಾಡಲಾಗಿದ್ದ ಮಹಾಬೋಧಿ ದೇವಾಲಯವೂ ಕಾಣಿಸಿತು. ಕುತೂಹಲ ತಡೆಯಲಾಗದೇ ವಿನಯಚಂದ್ರ `ಈ ಊರಿನಲ್ಲಿ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಹಾಗಿದೆ.. ದೇವಸ್ಥಾನಗಳು ಸಾಕಷ್ಟು ಕಂಡೆ. ಅಲ್ಲೊಂದು ಕಡೆ ಬೌದ್ಧ ದೇವಾಲಯವೂ ಕಾಣಿಸಿತು..' ಎಂದ.
            `ಹೌದು.. ರಂಗಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವ ಪ್ರಮುಖ ಪ್ರದೇಶಗಳಲ್ಲಿ ರಂಗಪುರವೂ ಒಂದು. ಶೆ.10 ರಿಂದ 15ರಷ್ಟು ಹಿಂದೂಗಳಿದ್ದಾರೆ ಇಲ್ಲಿ. ಶೆ.1ರಷ್ಟು ಬೌದ್ಧರೂ ಇದ್ದಾರೆ. ಹಲವಾರು ದೇವಾಲಯಗಳೂ ಇಲ್ಲಿದೆ. ಬೌದ್ಧರ ಪ್ರಮುಖ ಯಾತ್ರಾ ಸ್ಥಳವಾದ ಮಹಾಬೋಧಿ ದೇವಾಲಯ ಇಲ್ಲಿದೆ. ಈ ದೇವಾಲಯಕ್ಕೆ 10 ಶತಮಾನಗಳ ಹಿನ್ನೆಲೆಯಿದೆ.. ಭವ್ಯವಾದ ಈ ದೇವಾಲಯವನ್ನು ನೋಡುತ್ತಿದ್ದರೆ ಮನಸ್ಸಿನಲ್ಲಿ ಅದೇನೋ ಶಾಂತಿ..' ಎಂದರು ಅರ್ಚಕರು.
            `ನಾನು ಎಲ್ಲೋ ಕೇಳಿದ್ದೇನೆ. 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ನಡೆದಿತ್ತಂತೆ.. ಆಗ ಬಹಳಷ್ಟು ಹಿಂದೂಗಳನ್ನು ಹತ್ಯೆ ಮಾಡಿದ್ದರಂತೆ.. ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದ್ದರಂತೆ..' ಎಂದು ಕೇಳಿದ ವಿನಯಚಂದ್ರ.
             `ಹೌದು.. 1971ರಲ್ಲಿ ನಡೆದ ನಂತರ 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. 2000ದಿಮದಲೂ ನಡೆಯುತ್ತಲೇ ಬಂದಿತ್ತಾದರೂ 2013ರಲ್ಲಿ ತೀವ್ರ ಸ್ವರೂಪ ಕಂಡಿತು. 2013ರಲ್ಲಿ ಬಾಂಗ್ಲಾದೇಶದ ಮುಸ್ಲಿಂ ಧಾರ್ಮಿಕ ಮುಖಂಡರು ಹಿಂದೂಗಳ ದಂಗೆಗೆ ಕರೆ ನೀಡಿದ್ದರು. ಈ ಕಾರಣಕ್ಕಾಗಿಯೇ ದಂಗೆ ನಡೆದು ಅದೆಷ್ಟೋ ಹಿಂದೂಗಳು ಹತ್ಯೆಯಾದರು. ಅವರ ಮನೆಗಳು ಬೆಂಕಿಗೆ ಆಹುತಿಯಾದವು. ದರೋಡೆ ನಡೆಯಿತು. ಮಾನಭಂಗವೂ ಆಯಿತು. ಕೊನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾದಾಗ ರಾಜಕೀಯ ಒತ್ತಡಗಳು ಹೆಚ್ಚಿದ ಕಾರಣ ಬಾಂಗ್ಲಾ ಸರ್ಕಾರ ದಂಗೆಯನ್ನು ತಡೆಯಿತು ಎನ್ನಿ..' ಎಂದರು ಅರ್ಚಕರು.
             `ಯಾರು ಈ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ..?'
(ಕಂದುಬಣ್ಣದಲ್ಲಿರುವ ಪ್ರದೇಶಗಳೆಲ್ಲ 2013ರಲ್ಲಿ
 ಹಿಂದೂಗಳ ಮೇಲೆ ದಾಳಿ ನಡೆದ ಪ್ರದೇಶಗಳು)
             `ಎಲ್ಲರೂ ಮಾಡುತ್ತಾರೆ. ಬಡಪಾಯಿ ಹಿಂದೂಗಳು. ಸುಮ್ಮನಿರುತ್ತಾರಲ್ಲ.. ಅದಕ್ಕೆ ಹೀಗೆ. 2013ರಲ್ಲಿ ಬಾಂಗ್ಲಾದೇಶಿ ಜಮಾತೆ ಇಸ್ಲಾಮಿ ಸಂಘಟನೆ ಕರೆ ಕೊಟ್ಟಿತ್ತು. ಅದರಿಮದಾಘಿ ಬಹುತೇಕ ಬಾಂಗ್ಲಾದಾದ್ಯಂತ ದಂಗೆ ತೀವ್ರವಾಗಿ ನಡೆಯಿತು. ಚಿತ್ತಗಾಂಗ್, ಕುಲ್ನಾ, ರಂಗಪುರ, ಬರೀಸಾಲ್, ರಾಜಾಶಾಹಿ, ಢಾಕಾ, ಸಿಲ್ಹೇಟ್ ಈ ಎಲ್ಲ ವಿಭಾಗಗಳಲ್ಲೂ ದಂಗೆ ತೀವ್ರವಾಗಿತ್ತು. ಹಿಂದೂಗಳ 36 ದೇವಸ್ಥಾನಗಳ ಮೇಲೂ ದಾಳಿ ನಡೆಯಿತು. ರಾಜಗಂಜ್ ನ ಕಾಳಿ ದೇವಾಲಯ, ಬೈನ್ನಬಾರಿ, ಪಿಂಗ್ಜೋರ್, ಗೈಯಾರ್ಚಾರ್ ನ ದೇವಾಲಯಗಳು, ನಲ್ಚಿರಾದ ಪಿಂಗ್ಳಕಟಿ ಸರ್ಭಜನಿನ್ ದುರ್ಗಾ ಮಂದಿರ, ಗೋಲಿಮಂದ್ರಾದ ಕಾಲಿ ದೇವಾಲಯ, ರಾಮಚಂದ್ರಪುರದ ದೇವಾಲಯ, ಅಲಿದಾಂಗಾದ ಸರ್ಭಜನೀನಾ ಪೂಜಾ ಸಂಘ ಮಂದಿರ, ಲಖೀಪುರ, ರಾಥೇರ್ ಪುರಗಳ ಕಾಳಿ ಮಂದಿರ, ನಥಪಾರಾದ ಖೇತ್ರಪಾಲ ದೇವಾಲಯ, ಘುಟಿಯಾದ ಕಾಳಿ ಮಂದಿರ, ಪಕೂರಿಯಾದ ಹರಿ ಮಂದಿರ, ಚಪಟಾಲಿ ಹಾಗೂ ಬಾಂಗ್ಲಾ-ದಶಪುರದ ದೇವಾಲಯಗಳು, ಬಟಾಜೋರ್ ನ ರಾಧಾಕೃಷ್ಣ ದೇವಾಲಯ, ಪಕ್ಷಿಯಾ, ಶಶಂಗಾವ್ನ ಕಾಳಿ ಮಂದಿರಗಳು, ಅಂಶು ಕುಕ್ರುಲ್ ಪೂರ್ಬಪಾರಾದ ರಾಧಾ ಗೋವಿಂದ ಮಂದಿರ, ಅಛಿಂ ಬಜಾರ್ ನ ಕಾಳಿ ದೇವಸ್ತಾನ, ಕಲ್ಖುಲಾದ ಶಿವ ದೇವಸ್ಥಾನ, ಕಾಫಿಲಾಬಾರಿಯಾದ ದುರ್ಗಾ ದೇವಸ್ಥಾನ, ಅಂಟೈಲ್, ಕುರಿಪೈಕಾದ ರಾಧಾ ಗೋವಿಂದ ಮಂದಿರಗಳು, ಮಾಧವಪುರದ ಮಾಧವ ದೇವಸ್ಥಾನ, ಬೋಬಹಾಲಾದ ಹರಿ ಮಂದಿರ, ದಕ್ಷಿಣ ಮಾರ್ತಾದ ಕಾಳಿ ಮಂದಿರ, ಸಬೇಕ್ಪಾರಾ, ಕರ್ಮಕರ್ಪಾರಾ, ಬಮೂನಿಯಾ, ಕಾಮರ್ಚತ್ ನ ದೇವಸ್ಥಾನಗಳು ಹಾಗೂ ಕೆಶೂರಿತಾ ಮಧ್ಯಪಾರಾದ ಶ್ರೀಶ್ರೀ ಲಕ್ಷ್ಮಿ ಮಠಮಂದಿರಗಳ ಮೇಲೆ ದಾಳಿ ನಡೆದಿದ್ದವು. ದೇವಸ್ಥಾನಗಳಿಗೂ ಸಾಕಷ್ಟು ಹಾನಿಯಾಗಿತ್ತು. ಈಗೀಗ ಅವನ್ನೆಲ್ಲ ಸರಿಪಡಿಸಲಾಗುತ್ತಿದೆ. 1989, 1990, 1992, 2000, 2004, 2005, 2006, 2012ರಲ್ಲೆಲ್ಲ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಇದರಿಂದುಂಟಾದ ಹಾನಿ ಲೆಕ್ಖಕ್ಕೆ ಸಿಗುತ್ತಿಲ್ಲ..' ಎಂದು ಹೇಳಿದ ಅರ್ಚಕರು ದೀರ್ಘವಾಗಿ ನಿಟ್ಟುಸಿರು ಬಿಟ್ಟರು.
           `ಈ ಸಂಗತಿಗಳೆಲ್ಲ ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೀರಲ್ಲ.. ಅದರಲ್ಲೂ ದೇವಸ್ಥಾನಗಳ ಮೇಲೆ ದಾಳಿಯಾಗಿದ್ದು.. ಅವುಗಳ ಹೆಸರನ್ನೆಲ್ಲ ಹೇಳಿದಿರಲ್ಲ.. ನಿಮ್ಮನ್ನು ಮೆಚ್ಚಲೇಬೇಕು..' ಎಂದ ವಿನಯಚಂದ್ರ.
           `ಬೇಡ ಬೇಡ ಎಂದರೂ ನೆನಪಿನಲ್ಲಿಯೇ ಇರುತ್ತವೆ ಈ ಎಲ್ಲ ಸಂಗತಿಗಳು. ಬಾಂಗ್ಲಾದೇಶದ ಹಿಂದೂ ದೇವಾಲಯಗಳಲ್ಲಿರುವ ಅರ್ಚಕರನ್ನು ಕೇಳಿದರೆ ಈ ಎಲ್ಲ ವಿಷಯಗಳನ್ನು ನನಗಿಂತ ಸ್ಪಷ್ಟವಾಗಿ ಹೇಳಬಲ್ಲರು. ನಮಗೆಲ್ಲರಿಗೂ ಆ ದಿನಗಳೆಂದರೆ ಬೆಂಕಿಯ ಮೇಲಿನ ನಡಿಗೆಯೇ ಆಗಿತ್ತು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ದೇವಸ್ಥಾನಗಳನ್ನೂ ರಕ್ಷಣೆ ಮಾಡಿಕೊಳ್ಳಬೇಕಲ್ಲ. ಬಹುಶಃ ಆ ದೇವರೇ ಆ ದಿನಗಳಲ್ಲಿ ನಮ್ಮನ್ನು ಕಾಪಾಡಿದ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು. ವಿನಯಚಂದ್ರ ಮೌನವಾಗಿಯೇ ಮಾತು ಕೇಳುತ್ತಿದ್ದ.
          `ನೀವು ಹೇಳಿದ ಮಾತುಗಳನ್ನು ಆಲಿಸಿದೆ. ಬಾಂಗ್ಲಾದಲ್ಲಿ ಕಾಳಿ ದೇವಸ್ಥಾನಗಳು ಜಾಸ್ತಿ ಇದ್ದಂತಿದೆಯಲ್ಲ..' ಎಂದ ವಿನಯಚಂದ್ರ.
           `ಹೌದು.. ಬಾಂಗ್ಲಾದೇಶ ಮಾತ್ರವಲ್ಲ ನಿಮ್ಮ ಪಶ್ಚಿಮ ಬಂಗಾಳದಲ್ಲೂ ಕೂಡ ಕಾಳಿ ಆರಾಧಕರು ಜಾಸ್ತಿ ಇದ್ದಾರೆ. ಬೆಂಗಾಳಿಗಳೇ ಹಾಗೆ ಕಾಳಿ ಹಾಗೂ ರಾಧಾ-ಗೋವಿಂದರನ್ನು ಆರಾಧನೆ ಮಾಡುತ್ತಾರೆ. ಬೆಂಗಾಲಿಗಳಿಗೆ ಕಾಳಿಯೆಂದರೆ ಅಪಾರ ಪ್ರಿತಿ. ಕಾಳಿ ಓಡಾಡಿದ ನೆಲ ಈ ಪ್ರದೇಶ ಎಂದು ಯಾವಾಗಲೂ ಅಂದುಕೊಳ್ಳುತ್ತಾರೆ. ಸ್ವಾಮಿವಿವೇಕಾನಂದರು, ರಾಮಕೃಷ್ಣ ಪರಮಹಂಸರೆಲ್ಲ ಕಾಳಿ ಆರಾಧನೆ ಮಾಡಿದವರೇ ಅಲ್ಲವೇ? ಅವರೆಲ್ಲ ಬೆಂಗಾಲಿ ನಾಡಿನಲ್ಲಿ ಓಡಾಡಿದವರೇ ಅಲ್ಲವೇ?' ಎಂದು ಹೇಳಿದರು ಅರ್ಚಕರು.
           `ಕಾಳಿ ಆರಾಧನೆ.. ಕಾಳಿ ಕರ್ಮಭೂಮಿ ಹೀಗೆ ಅಂದುಕೊಳ್ಳುವುದೇನೋ ಸರಿ. ಈ ಕಾರಣಕ್ಕಾಗಿಯೇ ಈ ನಾಡು ಇಷ್ಟೆಲ್ಲ ರಕ್ತಬಲಿ ಪಡೆಯುತ್ತಿದೆಯೇ? ಕಾಳಿಯೆಂದರೆ ಬಲಿ ಪಡೆಯುವವಳಲ್ಲವೇ? ಈ ನಾಡಿನಲ್ಲಿ ನಡೆಯುವ ರಕ್ತಪಾತ ನೋಡಿದಾಗಲೆಲ್ಲ ನನಗೆ ಹೀಗೆ ಅನ್ನಿಸುತ್ತಿದೆ..' ಎಂದು ಥಟ್ಟನೆ ಹೇಳಿದಳು ಮಧುಮಿತಾ.
             `ಇರಬಹುದೇನೋ.. ಈ ನಾಡಿನಲ್ಲಿ ಯಾವಾಗಲೂ ರಕ್ತಪಾತ ನಡೆಯುತ್ತಿರುವುದು ಸುಳ್ಳಲ್ಲ. ಪ್ರಾಚೀನ ಕಾಲದಿಂದಲೂ ನಡೆಯುತ್ತ ಬಂದಿದೆ. ಬ್ರಿಟೀಷರು ಬಂದ ನಂತರ ಇಲ್ಲಿ ಯುದ್ಧಗಳ ಮೂಲಕ ರಕ್ತಪಾತ ಇಮ್ಮಡಿಸಿದರೆ ಭಾರತದಿಂದ ಬೇರ್ಪಟ್ಟ ಬಳಿಕ ರಕ್ತಪಾತ ನೂರ್ಮಡಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು ಅರ್ಚಕರು.
               `ಅಪ್ಪ ಯಾವಾಗಲೋ ಹೇಳುತ್ತಿದ್ದರು.. ಬೆಂಗಾಲಿಗಳೆಂದರೆ ಬುದ್ಧಿವಂತರು ಅಂತ.. ಭಾರತದಲ್ಲಿ ಏನೇ ಬದಲಾವಣೆಗಳಿದ್ದರೂ ಮೊದಲು ಬಂಗಾಳದಲ್ಲೇ ಆಗುತ್ತದೆ. ಹೊಸ ಸಾಧ್ಯತೆಗಳಿಗೆ ಬಂಗಾಳ ತೆರೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಎಂತಹ ನಾಡು ಹೇಗಾಗಿಬಿಟ್ಟಿತಲ್ಲ..' ಎಂದು ಗೊಣಗಿದ ವಿನಯಚಂದ್ರ. ಅರ್ಚಕರೂ ಕುಡ ಹೌದೆಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಬಸ್ಸು ಶಹೀದ್ ಬಾಗ್, ಕೌನಿಯಾಗಳನ್ನು ಹಾದು ತೀಸ್ತಾನದಿ ಸೇತುವೆಯ ಬಳಿ ಆಗಮಿಸಿತು.

(ಮುಂದುವರಿಯುತ್ತದೆ..)

Thursday, November 6, 2014

ತಿರುಗಾಟ

ಭೂಮಿಯಂತೆ ನಾನೂ ಕೂಡ
ನಿಂತ ಕಡೆಗೆ ನಿಲ್ಲಲಾರೆ
ಒಮ್ಮೆ ಇಲ್ಲಿ ಹಾಗೇ ಮುಂದೆ
ತಿರುಗಿ ಸಾಗುತಿರುವೆನು |

ಯಾರ ಹಂಗೂ ನನಗೆ ಇಲ್ಲ
ಸ್ಪಷ್ಟ ನೆಲೆಯ ಕುರುಹೂ ಇಲ್ಲ
ಅಲೆಮಾರಿಯ ಬದುಕು ಪೂರಾ
ಮುಟ್ಟುವುದಿಲ್ಲ ಯಾವುದೇ ತೀರ |

ಮನಸಿನಂತೆ ನನ್ನ ವೇಗ
ಕ್ಷಣದಿ ಬದುಕು ಆವೇಗ
ಬಂಧನವು ಬಾಳಲಿ ಇಲ್ಲ
ತಿರುಕತನವೇ ತುಂಬಿದೆಯಲ್ಲ |

ತಿರುಗಾಟವೇ ನನ್ನ ಬದುಕು
ನಿಲುವಿಗಿಲ್ಲ ಇಂಥ ಝಲಕು
ನಡೆಯುತಲೇ ಗೆಲ್ಲುವೆ
ಸಾಗುತಲೇ ಬದುಕುವೆ |

**
(ಈ ಕವಿತೆಯನ್ನು ಬರೆದಿರುವುದು 09-10-2006ರಂದು ದಂಟಕಲ್ಲಿನಲ್ಲಿ)
( ಆಕಾಶವಾಣಿ ಕಾರವಾರದಲ್ಲಿ ಈ ಕವಿತೆಯನ್ನು 23-01-2008ರಂದು ವಾಚನ ಮಾಡಲಾಗಿದೆ)

Wednesday, November 5, 2014

ಬೆಂಗಾಲಿ ಸುಂದರಿ -37

(ಭಾರತ-ಬಾಂಗ್ಲಾ ಗಡಿ)
          `ಹಾಗಾದರೆ ನೀವು ಭಾರತದೊಳಕ್ಕೆ ನುಸುಳಬೇಕು ಎಂದುಕೊಂಡಿದ್ದೀರಿ...' ನೇರವಾಗಿ ಮಾತಿಗೆ ಇಳಿದಿದ್ದರು ಅರ್ಚಕರು.
          `ಹೌದು.. ನಮ್ಮ ಪಾಲಿಗೆ ಅದೇ ಒಳ್ಳೆಯ ನಿರ್ಧಾರ. ನಿಮ್ಮಿಂದ ಸಹಾಯ ನಿರೀಕ್ಷಿಸಬಹುದೆ?' ಎಂದು ಕೇಳಿದ್ದ ವಿನಯಚಂದ್ರ.
          `ಈ ನರಕದಿಂದ ಪಾರಾಗುತ್ತೀರಿ ಎಂದಾದರೆ ನಾನು ನಿಮಗೆ ಸಹಾಯ ಮಾಡಲು ಸಿದ್ಧ.. ನೋಡಿ.. ಏನು ಮಾಡಬಲ್ಲೆ ನಾನು ನಿಮಗೆ..?' ಎಂದು ಕೇಳಿದರು ಅರ್ಚಕರು.
           `ಭಾರತದ ಗಡಿಗೆ ಹೋಗಲು, ಭಾರತದೊಳಕ್ಕೆ ನುಸುಳಲು ಸುಲಭವಾಗುವಂತಹ ಸ್ಥಳವನ್ನು ತಿಳಿಸಿ. ನಿಮಗೆ ಮಾಹಿತಿಯಿದ್ದರೆ ನಮಗೆ ಹೇಳಿ..' ಕೇಳಿದ್ದ ವಿನಯಚಂದ್ರ.
            `ಹುಂ. ಖಂಡಿತ ಹೇಳಬಲ್ಲೆ.. ಭಾರತದ ಗಡಿಯೊಳಕ್ಕೆ ನುಸುಳಬಹುದು. ಆದರೆ ಬಹಳ ಹುಷಾರಾಗಿರಬೇಕು. ಭಾರತದ ಗಡಿ ಭದ್ರತಾ ಪಡೆಯ ಯೋಧರ ಕಣ್ಣು ತಪ್ಪಿಸುವುದು ಸುಲಭದ ಕೆಲಸವಲ್ಲ ನೋಡಿ. ಈಗೊಂದು ವರ್ಷದ ವರೆಗೂ ಭಾರತದ ಗಡಿ ನುಸುಳುವುದು ಬಹಳ ಸುಲಭದ ಕೆಲಸವಾಗಿತ್ತು. ಆದರೆ ಈಗೀಗ ಕಟ್ಟು ನಿಟ್ಟು ಹೆಚ್ಚಾಗುತ್ತಿದೆ ಎಂದು ಕೇಳಿದ್ದೇನೆ. ಸ್ವಲ್ಪ ಎಚ್ಚರ ತಪ್ಪಿದರೂ ಯೋಧರು ಹೊಡೆಯುವ ಗುಂಡೇಟಿಗೆ ಜೀವ ತೆರಬೇಕಾಗುತ್ತದೆ..' ಎಂದು ಅರ್ಚಕರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು. ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ನಿಟ್ಟುಸಿರು ಬಿಟ್ಟರು.
             ಮಾತು ಬಾಂಗ್ಲಾದೇಶದ ಪರಿಸ್ಥಿತಿಯ ಕಡೆಗೆ ಹೊರಳಿತು. ಅರ್ಚಕರು ವಿನಯಚಂದ್ರ ಹಾಗೂ ಮಧುಮಿತಾ ಢಾಕಾದಿಂದ ಪಡಿಪಾಟಲು ಪಟ್ಟುಕೊಂಡು ರಂಗಪುರದ ವರೆಗೆ ಬಂದಿದ್ದನ್ನು ಕೇಳಿ ಬೇಜಾರು ಮಾಡಿಕೊಂಡರು. ರೈಲಿನಲ್ಲಿ ಬಂದಿದ್ದರೆ ಎರಡು ದಿನಗಳಲ್ಲಿ ತಲುಪಬಹುದಾದ ದೂರವನ್ನು ಹದಿನೈದು ದಿನಗಳ ಕಾಲ ವ್ಯಯಿಸಿದ್ದಕ್ಕೆ ವ್ಯಥೆ ಪಟ್ಟುಕೊಂಡರು. ಮಾರ್ಗ ಮಧ್ಯೆ ನಡೆದ ಅವಘಡಗಳ ವಿಷಯ ಕೇಳಿ ಮತ್ತಷ್ಟು ವ್ಯಾಕುಲಗೊಂಡರು.
            `ಭಾರತದಿಂದ ಬೇರ್ಪಟ್ಟಾದ ಎಂತಹ ನಾಡಾಗಿತ್ತು ಗೋತ್ತಾ ಇದು.. ಆದರೆ ಹೇಗಿದ್ದ ನಾಡು ಹೇಗೆ ಬದಲಾಯಿತು ನೋಡಿ.. ಛೇ.. ಆ ನಾಡು ಹೀಗೆ ಸದಾ ನರಕವಾಗಬೇಕು ಎನ್ನುವ ಆಲೋಚನೆ ಹೊಂದಿದ್ದ ಬ್ರಿಟೀಷರು ಅಖಂಡ ಬಾಂಗ್ಲಾ ನಾಡನ್ನು 1910ರ ದಶಕದಲ್ಲಿ ಒಡೆದರೇನೋ ಅನ್ನಿಸುತ್ತಿದೆ. ಆಗ ಒಡೆದ ನಾಡು ಹಾಗೂ ಮನಸುಗಳು ಇನ್ನೆಂದಿಗೂ ಒಂದಾಗದಷ್ಟು ದೂರವಾಗಿಬಿಟ್ಟಿವೆ. 1947ರಲ್ಲಿ ಭಾರತದಿಂದ ಪೂರ್ವ ಪಾಕಿಸ್ತಾನವಾಗಿ ಬದಲಾದ ಈ ನಾಡಿನಲ್ಲಿ ನಂತರದ 24 ವರ್ಷಗಳು ನರಕ ಎಂದರೂ ತಪ್ಪಲ್ಲ. ಪಶ್ಚಿಮ ಪಾಕಿಸ್ತಾನ ಅಥವಾ ಈಗಿನ ಪಾಕಿಸ್ತಾನದ ಆಡಳಿತ ಶಾಹಿಗಳು ಈ ನಾಡಿನ ಮೇಲೆ ನಿರಂತರ ದಬ್ಬಾಳಿಕೆ ನಡೆಸಿದರು. ಅದೊಮ್ಮೆ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಪಕ್ಷವೇ ಚುನಾವಣೆಯಲ್ಲಿ ಬಹುಮತ ಪಡದಾಗ ಮಾತ್ರ ಪಶ್ಚಿಮ ಪಾಕಿಸ್ತಾನದ ಕ್ರೂರತನ ಮೇರೆ ಮೀರಿತು. 1971ರಲ್ಲಿ ಏಕಾಏಕಿ ಈ ನಾಡಿನ ಮೇಲೆ ಪಾಕಿಸ್ತಾನಿ ಸೈನ್ಯಗಳು ನುಗ್ಗಿಬಂದವು. ಬಾಂಗ್ಲಾದೇಶಿಯರನ್ನು ಕಂಡಕಂಡಲ್ಲಿ ಕೊಚ್ಚಿ ಹಾಕಿದರು. ಬಾಂಗ್ಲಾ ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ಅತ್ಯಾಚಾರ ಮಾಡಿದರು. ಪಾಕಿಸ್ತಾನದ ರಕ್ತಪೀಪಾಸುತನ ಯಾವ ರೀತಿ ಇತ್ತೆಂದರೆ ಬೆದರಿದ ಬಾಂಗ್ಲಾ ನಾಡಿನವರು ಭಾರತಕ್ಕೆ ವಲಸೆ ಹೋದರು. ಹೆಚ್ಚೂ ಕಡಿಮೆ 2 ಲಕ್ಷ ಜನರು ಭಾರತದ ಗಡಿ ದಾಟಿ ಹೋದರು. ಆಗ ಸಮಸ್ಯೆಯಾಗಿದ್ದು ಭಾರತಕ್ಕೆ. ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಈ ಸಮಸ್ಯೆ ಪರಿಹರಿಸುವ ಸಲುವಾಗಿ ಮಧ್ಯಪ್ರವೇಶ ಮಾಡಿದರು. ಪಾಕಿಸ್ತಾನಕ್ಕೆ ತಾಕೀತು ನೀಡಿದರು. ಆದರೆ ಕೇಳದ ಪಾಕಿಸ್ತಾನ ಬಾಂಗ್ಲಾದೇಶಿಯರನ್ನು ಕೊಲ್ಲುತ್ತಲೇ ಇತ್ತು. ಇಂದಿರಾಗಾಂಧಿ ಯುದ್ಧ ಘೋಷಣೆ ಮಾಡಿದರು. ಪಾಕಿಸ್ತಾನಿ ಸೈನ್ಯವನ್ನು ಬಗ್ಗು ಬಡಿದರು. ಬಾಂಗ್ಲಾದೇಶ ಉದಯವಾಯಿತು..' ಎಂದು ದೀರ್ಘವಾಗಿ ಹೇಳಿದರು ಆ ಅರ್ಚಕರು.
            ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ಸುಮ್ಮನೆ ಕೇಳುತ್ತಿದ್ದರು. ಅರ್ಚಕರೇ ಮುಂದುವರಿದು  `ಆಗ ಬಾಂಗ್ಲಾದೇಶದಲ್ಲಿ ಕನಿಷ್ಟವೆಂದರೂ 10 ಲಕ್ಷ ಜನ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ. 10 ಲಕ್ಷಕ್ಕೂ ಅಧಿಕ ಮಹಿಳೆಯರ ಮಾನಭಂಗವಾಗಿದೆ. ಕೊಲ್ಲಲ್ಪಟ್ಟವರಲ್ಲಿ 2 ಲಕ್ಷಕ್ಕೂ ಅಧಿಕ ಹಿಂದೂಗಳಿದ್ದರೆ, ಅಷ್ಟೇ ಸಂಖ್ಯೆಯ ಮಹಿಳೆಯರು ಪಾಕಿಸ್ತಾನಿ ಸೈನ್ಯದ ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ. ಭಾರತ 1971ರ ಯುದ್ಧದಲ್ಲಿ ಗೆದ್ದು 90 ಸಾವಿರ ಪಾಕಿಸ್ತಾನಿ ಸೈನಿಕರನ್ನು ಸೆರೆ ಹಿಡಿದಿತ್ತಲ್ಲ.. ಅವರನ್ನು ಬೇಶರತ್ತಾಗಿ ಬಿಡುಗಡೆ ಮಾಡಿತ್ತು. ಆಗ ನಾವೆಲ್ಲ ಬೇಜಾರು ಮಾಡಿಕೊಂಡಿದ್ದವು. ಭಾರತ ಆಗ ಆ ಸೈನಿಕರಿಗೆ ತಕ್ಕ ಪಾಠ ಕಲಿಸಬೇಕಿತ್ತು. ಅವರಿಗೆ ಶಿಕ್ಷೆ ನೀಡಬೇಕಿತ್ತು. ಆದರೆ ಭಾರತ ಹಾಗೆ ಮಾಡಲೇ ಇಲ್ಲ. ಅವರನ್ನು ಬಿಟ್ಟು ಕಳಿಸಿತು...'ಎಂದರು ಅರ್ಚಕರು.
(ಭಾರತ-ಬಾಂಗ್ಲಾ ಗಡಿಯಲ್ಲಿ ನಿವಾಸಿಗಳು)
             `ನೀವೂ ಭಾರತಕ್ಕೆ ಬಂದು ಬಿಡಿ...' ಎಂದು ಹೇಳಿದ ವಿನಯಚಂದ್ರ.
             `ಇಲ್ಲ.. ನಾನು ಭಾರತಕ್ಕೆ ಬರುವುದಿಲ್ಲ. ಕಾರಣಗಳು ಹಲವಿದೆ. ಬಾಂಗ್ಲಾ ನಾಡಿನಲ್ಲಿ ಹಿಂದೂಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮುಂಚೆ ಹಲವಾರು ದೇವಾಲಯಗಳಿದ್ದವು. ಅವೂ ಈಗ ಗಣನೀಯವಾಗಿ ಕಾಣೆಯಾಗಿದೆ. ನಾನು ಪೂಜೆ ಮಾಡುತ್ತಿರುವ ಈ ದೇವಾಲಯವೂ ಬಾಂಗ್ಲಾ ನಾಡಿನ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದು. ನಾನು ಬಾರತಕ್ಕೆ ಬಂದರೆ ಈ ದೇವಾಲಯದ ಪೂಜೆ ಜನ ಸಿಗುವುದಿಲ್ಲ. ಇದು ಮೊದಲ ಕಾರಣ. ನಾನು ಇಲ್ಲೇ ಹುಟ್ಟಿ ಬೆಳೆದವನು. ತಾಯ್ನಾಡು ಹೇಗೆ ಇರಲಿ ಅಲ್ಲೇ ಬಾಳಿ ಬದುಕಬೇಕಾದುದು ಅನಿವಾರ್ಯ. ಅತ್ಯಗತ್ಯ ಕೂಡ. ಈ ನಾಡು ಎಂತಹುದೇ ನರಕ ಆಗಿರಲಿ ನಾನು ಇಲ್ಲೇ ಬದುಕುತ್ತೇನೆ. ನಿಮ್ಮಂತಹ ಹಲವಾರು ಜನ ಹಿಂದೂಗಳು ಆಗಾಗ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಕೆಲವರು ಭಾರತದ ಗಡಿಗೆ ತಲುಪಿಸಲು ಸಹಾಯ ಕೇಳುತ್ತಾರೆ. ಅಂತವರಿಗೆ ನಾನು ಸಹಾಯ ಮಾಡುತ್ತೇನೆ. ನಾನೂ ಭಾರತಕ್ಕೆ ಬಂದರೆ ಅಂತವರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ನಾನು ಮಾಡಲೇಬೇಕಾದ ಕೆಲಸಗಳು ಇನ್ನೂ ಹಲವಿದೆ. ನಿಮ್ಮಂತಹ ಹಲವು ಹಿಂದೂಗಳನ್ನು ಭಾರತದ ಗಡಿ ತಲುಪಿಸಬೇಕಾಗಿದೆ. ನಾನು ಬರುವುದಿಲ್ಲ..' ಎಂದು ಹೇಳಿದ ಅರ್ಚಕರ ಧ್ವನಿ ಗದ್ಗದಿತವಾದಂತಿತ್ತು. ಅವರು ಬಾವುಕರಾಗಿದ್ದರಾ? ಕತ್ತಲೆಯಲ್ಲಿ ಗೊತ್ತಾಗಲಿಲ್ಲ.
             ಮೂವರಿಗೂ ಒಮ್ಮೆ ಮಾತು ಹೊರಡಲಿಲ್ಲ. ಮೌನವೇ ಇದ್ದಕ್ಕಿದ್ದಂತೆ ಆವರಿಸಿತು. ರಂಗಪುರದ ಹೊರ ಬೀದಿಯಿನ್ನೂ ಎಚ್ಚರಿತ್ತು. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆನ್ನುವ ಸದ್ದು ಕಿವಿಗೆ ಕೇಳುತ್ತಿತ್ತು. ದೇವಸ್ಥಾನದ ಪಕ್ಕದ ಕೋಣೆಯೊಂದರ ಮಂದ್ರ ಬೆಳಕು ಎಲ್ಲೆಡೆ ಆವರಿಸಿತ್ತು. `ನಿಮ್ಮ ಕುಟುಂಬ...' ಎಂದು ಕೇಳಿದ ವಿನಯಚಂದ್ರ ಏನೋ ನೆನಪಾದವನಂತೆ ನಾಲಿಗೆ ಕಚ್ಚಿಕೊಂಡ.
             `ನನ್ನ ಕುಟುಂಬ.. ಬಾಂಗ್ಲಾದೇಶದ ಹಿಂಸೆಗೆ ಬಲಿಯಾಗಿ 10 ವರ್ಷಗಳು ಕಳೆದವು. 2004ರ ವೇಳೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಬಹಳವಾಗಿತ್ತು. ರಂಗಪುರದಲ್ಲಿಯೂ ಹಿಂಸಾಚಾರ ಹೆಚ್ಚಿಬಿಟ್ಟಿತ್ತು. ಮುಸ್ಲೀಮರು ಕಂಡಕಂಡಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದರು. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಹಿಂದೂಗಳಿಗೆ ಸೇರಿದ್ದ ತುಂಡು ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದರು. ಹಿಂದೂ ಹುಡುಗಿಯರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲದೇ ಹೆಚ್ಚಿನ ಹಿಂದೂ ಹುಡುಗಿಯರನ್ನು ತಮ್ಮ ಮನೆಗಳಲ್ಲಿ ತಮ್ಮ ದೇಹಸುಖ ತೀರಿಸುವ ದಾಸಿಗಳನ್ನಾಗಿ ಮಾಡಿಕೊಂಡಿದ್ದರು. ಈಗಲೂ ಹಲವು ಹಿಂದೂ ಯುವತಿಯರು ಬಾಂಗ್ಲಾದ ಮುಸ್ಲೀಮರ ಮನೆಗಳಲ್ಲಿ ದಾಸಿಯರಾಗಿ, ಜೀತದ ಬದುಕು ಬಾಳುತ್ತಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದಾರೆ. 2004ರಲ್ಲಿ ನನ್ನ ಹೆಂಡತಿಯನ್ನು ಹಿಂಸಾಚಾರಿಗಳು ಅತ್ಯಾಚಾರ ಮಾಡಿ ಕೊಂದು ಹಾಕಿದರು. ನನ್ನ ಮಗಳನ್ನು ಎತ್ತಿಕೊಂಡು ಹೋದರು. ಈ ವರೆಗೂ ನನ್ನ ಮಗಳು ಏನಾದಳು ಎನ್ನುವುದು ಗೊತ್ತಿಲ್ಲ. ಬದುಕಿದ್ದಾಳೋ, ಸತ್ತಿದ್ದಾಳೋ ಗೊತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂವಾಗಿ ಹುಟ್ಟುವುದೇ ತಪ್ಪು. ಇನ್ನು ಹಿಂದೂ ಹುಡುಗಿಯಾಗಿ ಹುಟ್ಟುವುದಂತೂ... ಬೇಡ ಬಿಡಿ..' ಎಂದರು ಅವರು. ಮತ್ತೆ ಮೌನ ತುಂಬಿತು.
            `ನಾವೀಗ ಭಾರತ ತಲುಪುವುದು ಹೇಗೆ? ಯಾವ ಮಾರ್ಗದಲ್ಲಿ ಹೋದರೆ ಉತ್ತಮ?' ವಿನಯಚಂದ್ರನೇ ಕೇಳಿದ್ದ. ಕೆಲಕಾಲದ ನಂತರ.
             `ನೀವೀಗ ಸೀದಾ ತೀಸ್ತಾನದಿಯನ್ನು ದಾಟಿ ಕುರಿಗ್ರಾಮದ ಕಡೆಗೆ ಸಾಗಿ. ಅಲ್ಲಿಂದ 10 ಕಿ.ಮಿ ಅಂತರದಲ್ಲಿ ಭಾರತದ ಗಡಿಯಿದೆ. ಕುರಿಗ್ರಾಮದಿಂದ ಧಾರ್ಲಾ ನದಿಯನ್ನು ದಾಟಬೇಕು. ಅಲ್ಲೊಂದು ಕಡೆ ಕಚ್ಚಾ ರಸ್ತೆಯಿದೆ. ಅದು ಸೀದಾ ಭಾರತದ ಗಡಿಗೆ ಸಾಗುತ್ತದೆ. ಜಮುನಾ ನದಿ ದಡದತ್ತ ನಾವು ಸಾಗಬೇಕು. ಸಂಜೆಯಾಗುವ ಸಮಯವನ್ನೇ ಆಯ್ದುಕೊಂಡು ಸೂರ್ಯ ರಶ್ಮಿ ಇಳಿದ ಮೇಲೆ ಗಡಿಯೊಳಕ್ಕೆ ನುಸುಳಬೇಕು. ಗಡಿಯಲ್ಲಿ ಒಂದಿಷ್ಟು ಕಾವಲು ಗೋಪುರಗಳಿವೆ. ಅಲ್ಲಿಂದ ಸರ್ಚ್ ಲೈಟ್ ಗಳು ನಿರಂತರವಾಗಿ ಗಡಿಯಮೇಲೆ ಹರಿದಾಡುತ್ತಲೇ ಇರುತ್ತವೆ. ಆ ದೀಪದ ಬೆಳಕಿಗೆ ನಾವು ಸಿಗದಂತೆ ಸಾಗಿದರೆ ನುಸುಳಬಹುದು. ಆದರೆ ಬಹಳ ಅಪಾಯದ ಸಂಗತಿ. ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ನಾಳೆ ಬೆಳಿಗ್ಗೆ ದೇವಸ್ಥಾನದ ಪೂಜೆ ಮುಗಿಸಿದ ನಂತರ ನೀವು ಪ್ರಯಾಣ ಮಾಡಿ. ನಿಮ್ಮ ಜೊತೆಗೆ ನಾನು ಬರುತ್ತೇನೆ. ಭಾರತದ ಗಡಿಯವರೆಗೆ ತಲುಪಿಸಿ ಬರುತ್ತೇನೆ..' ಎಂದರು ಅರ್ಚಕರು.
             `ಒಂದುವೇಳೆ ನಾವು ಗಡಿ ದಾಟುವಾಗ ಭಾರತದ ಸೈನ್ಯಕ್ಕೆ ಸಿಕ್ಕುಬಿದ್ದರೆ..?' ಎಂದು ಕೇಳಿದ ವಿನಯಚಂದ್ರ.
              `ನೀವು ಕಬ್ಬಡ್ಡಿ ಆಟಗಾರರಲ್ಲವಾ. ಅದನ್ನು ಹೇಳಿದ. ಆದಷ್ಟು ಸೈನ್ಯವನ್ನು ನಂಬಿಸಲು ಯತ್ನಿಸಿ. ಇಲ್ಲವಾದರೆ ತೊಂದರೆಯಿಲ್ಲ. ನಿಮ್ಮನ್ನು ಹಿಡಿದು ಮಿಲಿಟರಿ ಜೈಲಿಗೆ ತಳ್ಳಬಹುದು. ಆಗ ವಿಚಾರಣೆ ಸಂದರ್ಭದಲ್ಲಿ ನಡೆದಿದ್ದೆಲ್ಲವನ್ನೂ ತಿಳಿಸಿ. ಸೈನ್ಯದ ಅಧಿಕಾರಿಗಳ ಬಳಿ ನಿಮ್ಮ ವಿಳಾಸ, ಇತ್ಯಾದಿಗಳನ್ನೆಲ್ಲ ಹೇಳಿ ತಪಾಸಣೆ ಮಾಡಲು ಹೇಳಿ. ನಂತರ ನಿಮ್ಮನ್ನು ಬಿಟ್ಟು ಬಿಡಬಹುದು. ಆದರೆ ಒಂದಂತೂ ನಿಜ ನೋಡಿ ಗಡಿಯೊಳಕ್ಕೆ ನುಸುಳಿದ್ದಕ್ಕೆ ನಿಮಗೆ ಸಾದಾ ಶಿಕ್ಷೆಯಂತೂ ಖಂಡಿತ. ಏಕೆಂದರೆ ಯಾವುದೇ ದೇಶದಲ್ಲಿ ಗಡಿ ನುಸುಳುವಿಕೆ ಅಪರಾಧವೇ ಹೌದು..' ಎಂದರು ಅರ್ಚಕರು.
             `ಭಾರತದ ಸೈನ್ಯವೇನೋ ಸರಿ. ಬಾಂಗ್ಲಾದೇಶದ ಸೈನ್ಯದ ಸಮಸ್ಯೆ ಇಲ್ಲವೇ? ' ಎಂದು ಕೇಳಿದ್ದ ವಿನಯಚಂದ್ರ.
             `ಬಾಂಗ್ಲಾದೇಶದ ಸೈನ್ಯ ಗಡಿಯಲ್ಲಿ ಇರುತ್ತದೆ. ಆದರೆ ಅವರಂತಹ ಲಂಚಕೋರರು ಇನ್ನೊಬ್ಬರಿಲ್ಲ. ಅವರಿಗೆ ಒಂದಿಷ್ಟು ದುಡ್ಡು ಕೊಟ್ಟರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ಇನ್ನೊಂದು ವಿಶೇಷ ಸಂಗತಿಯನ್ನು ನಾನಿಲ್ಲಿ ಹೇಳಲೇಬೇಕು. ಭಾರತದವರಿಗೆ ಗಡಿ ಕಾಯುವುದು ಬಹಳ ಮುಖ್ಯದ ಕೆಲಸ. ಆದರೆ ಬಾಂಗ್ಲಾದವರಿಗೆ ಹಾಗಲ್ಲ. ಬಹುದೊಡ್ಡ ದೇಶ ಭಾರತ ತನ್ನ ನಾಡನ್ನು ಕಾಪಾಡಿಕೊಳ್ಳುವ ಸಲುವಾಗಿ ಗಡಿಯನ್ನು ಕಟ್ಟುನಿಟ್ಟಾಗಿ ಕಾಯುತ್ತಿರುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಏನಿದೆ. ಎಲ್ಲರೂ ಭಾರತಕ್ಕೇ ನುಸುಳಲು ನೋಡುತ್ತಿರುತ್ತಾರೆ. ಆದರೆ ಯಾವೊಬ್ಬನೂ ಬಾಂಗ್ಲಾದತ್ತ ಮುಖ ಮಾಡುವುದಿಲ್ಲ. ಈ ಸಂಗತಿ ಬಾಂಗ್ಲಾ ಸೈನ್ಯಕ್ಕೆ ಗೊತ್ತಿದೆ. ಆದ್ದರಿಂದ ಅವರು ಸುಮ್ಮನೇ ಇರುತ್ತಾರೆ. ಭಾರತದವರು ಮಾತ್ರ ಗಡಿಯನ್ನು ಕಾಯಲು ಸಾಕಷ್ಟು ಕಷ್ಟಪಡುತ್ತಾರೆ..' ಎಂದು ಹೇಳಿದರು ಅರ್ಚಕರು.
(ಗಡಿ ನುಸುಳುವವರು ಮಾಡಿಕೊಂಡ ಕಳ್ಳದಾರಿ)
             ಅರ್ಚಕರೇ ಮುಂದುವರಿಸಿದರು. `ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಬಾಂಗ್ಲಾ ಸೈನ್ಯದವರೂ ಆಗೀಗ ಭಾರತದ ಸೈನ್ಯದವರ ಮೇಲೆ ದಾಳಿ ಮಾಡುತ್ತಾರೆ. ಭಾರತದ ಗಡಿ ಬೇಲಿಯನ್ನು ಧ್ವಂಸವೂ ಮಾಡುತ್ತಿರುತ್ತಾರೆ. ಭಾರತೀಯ ಸೈನಿಕರ ಬಂಕರುಗಳ ಮೇಲೆ ಗುಂಡಿನ ಸುರಿಮಳೆ ಸುರಿಸುತ್ತಾರೆ. ಶೆಲ್ ದಾಳಿಯನ್ನೂ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣವೊಂದಿದೆ. ಬಾಂಗ್ಲಾದೇಶಿಯರು ಭಾರತದೊಳಕ್ಕೆ ನುಸುಳಬೇಕಾದರೆ ಭಾರತದವರ ಕಟ್ಟಿನಿಟ್ಟಿನ ಪಹರೆ ತಪ್ಪಿಸಲು ಈ ಕ್ರಮ ಮಾಡಲಾಗುತ್ತದೆ. ಬಾಂಗ್ಲಾ ಸೈನ್ಯಕ್ಕೆ ದುಡ್ಡುಕೊಟ್ಟರೆ ಅವರು ಗಡಿಯ ಯಾವುದಾದರೂ ಒಂದು ಕಡೆ ದಾಳಿ ಮಾಡಿ ಅಲ್ಲಿ ನುಸುಳಲು ಅನುಕೂಲವಾಗುವಂತೆ ಜಾಗ ಮಾಡುತ್ತಾರೆ. ಅದೇ ಸಮಯದಲ್ಲಿ ಯಾರಾದರೂ ನುಸುಳುತ್ತಿದ್ದರೆ ಅವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಗಡಿಯ ಇನ್ನೊಂದು ಪ್ರದೇಶದಲ್ಲಿ ಭಾರತದ ಸೈನ್ಯದ ಮೇಲೆ ದಾಳಿ ನಡೆಸಿ ಗಮನವನ್ನು ತಪ್ಪಿಸುತ್ತಾರೆ. ಭಾರತೀಯ ಸೈನಿಕರ ಗಮನ ಅತ್ತಕಡೆಯಿದ್ದಾಗ ಇತ್ತ ಬಾಂಗ್ಲಾದೇಶಿಯರು ನುಸುಳಿಬಿಟ್ಟಿರುತ್ತಾರೆ. ಆದರೆ ಈಗೀಗ ಬಾಂಗ್ಲಾ ಸೈನಿಕರ ಇಂತಹ ಕಾರ್ಯಗಳು ಭಾರತೀಯ ಸೈನಿಕರಿಗೆ ಗೊತ್ತಾಗಿದೆ. ಹಾಗಾಗಿ ಅವರು ಬೇರೆ ರೀತಿಯ ಕಾರ್ಯ ಕೈಗೊಳ್ಳುತ್ತಿದ್ದಾರೆ...' ಎಂದು ತಿಳಿಸಿದರು ಅರ್ಚಕರು.
          `ನಾವು ಭಾರತ ತಲುಪುವುದು ಕಷ್ಟವೆನ್ನುತ್ತೀರಾ..?' ಎಂದು ಕೇಳಿದ ವಿನಯಚಂದ್ರ.
          `ಕಷ್ಟವೇ...' ಎಂದವರು ಕೊಂಚ ಹೊತ್ತು ಆಲೋಚಿಸಿದ ನಂತರ `ಒಂದು ಮಾರ್ಗವಿದೆ.. ಆದರೆ ಆ ಮಾರ್ಗ ಎಷ್ಟು ಸಮಂಜಸ ಎಂಬುದು ಗೊತ್ತಿಲ್ಲ.. ಆದರೂ ಪ್ರಯತ್ನಿಸಬಹುದು. ಭಾರತ ಹಾಗೂ ಬಾಂಗ್ಲಾ ವಿಭಜನೆಯಾದಾಗ ಒಂದಷ್ಟು ವಿಶಿಷ್ಟ ಸಂಗತಿಗಳು ಜರುಗಿವೆ. ಯಾವುದೇ ಎರಡು ದೇಶಗಳು ಗಡಿ ಮಾಡಿಕೊಳ್ಳುವಾಗ ತಮ್ಮ ತಮ್ಮ ನಡುವೆ  ಎಲ್ಲ ಪ್ರದೇಶಗಳನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಭಾರತ-ಬಾಂಗ್ಲಾ ಗಡಿಯ ನಡುವೆ ಹಾಗಾಗಿಲ್ಲ. ಇಲ್ಲಿ ಕೆಲವು ಪ್ರದೇಶಗಳಿನ್ನೂ ಗೊಂದಲದ ಗೂಡಾಗಿಯೇ ಉಳಿದಿವೆ. ಬಾಂಗ್ಲಾ ನಾಡಿನೊಳಗೆ ಭಾರತದ ಪ್ರದೇಶಗಳಿವೆ. ಭಾರತದೊಳಗೆ ಬಾಂಗ್ಲಾ ಭೂಮಿಯೂ ಇದೆ..' ಎಂದರು ಅರ್ಚಕರು.
         `ಏನು? ಏನದು? ನನಗೆ ಅರ್ಥವಾಗಿಲ್ಲ..' ಎಂದ ವಿನಯಚಂದ್ರ.
         `ಹೌದು.. ಇದು ಅರ್ಥವಾಗಲು ಕೊಂಚ ಕಷ್ಟವೇ. ಬಾಂಗ್ಲಾ ದೇಶದ ಗಡಿಯೊಳಗೆ ಭಾರತದ ಭೂಮಿಯಿದೆ ಎಂದನಲ್ಲ. ನದಿಯೊಳಗಿನ ದ್ವೀಪದ ಹಾಗೆ. ನದಿಯಲ್ಲಿ ದ್ವೀಪ ನೋಡಿದ್ದೀಯಲ್ಲ ಸುತ್ತೆಲ್ಲ ನೀರು. ಮಧ್ಯ ಮಾತ್ರ ಭೂಮಿ. ಹಾಗೆಯೇ ಇಲ್ಲೂ ಕೂಡ. ಸುತ್ತೆಲ್ಲ ಬಾಂಗ್ಲಾ ನಾಡು. ನಡುವೆ ಭಾರತದ ಭೂಮಿ. ಭಾರತದ ಪ್ರದೇಶದಲ್ಲೂ ಕೂಡ ಹಾಗೆಯೇ ಇದೆ. ಗಡಿ ಗುರುತಿಸುವಿಕೆಯಲ್ಲಿ ಆದ ಗೊಂದಲವೇ ಇದಕ್ಕೆ ಕಾರಣ.  ತೀಸ್ತಾ ನದಿಯ ಪಕ್ಕದಲ್ಲಿ ಒಂದು ಪ್ರದೇಶವಿದೆ. ಅದರ ಬಗ್ಗೆ ಹೇಳಿದರೆ ನಿಮ್ಮ ತಲೆ ಹನ್ನೆರಡಾಣೆಯಾಗುವುದರಲ್ಲಿ ಸಮದೇಹವೇ ಇಲ್ಲ. ಬಾಂಗ್ಲಾದ ಆ ಪ್ರದೇಶದ ನಡುವೆ ವರ್ತುಲದಂತೆ 6-8 ಕಿ.ಮಿ ಪ್ರದೇಶ ಭಾರತಕ್ಕೆ ಸೇರಿದ್ದು. ಆದರೆ ಭಾರತದ ಗಡಿಗೆ ಈ ಪ್ರದೇಶ ಸೇರಿಲ್ಲ. ಭಾರತದ ಗಡಿಗೂ ಭಾರತದ್ದೇ ಆದ ಈ ಭೂ ಪ್ರದೇಶಕ್ಕೂ ನಡುವೆ 3-4 ಕಿ.ಮಿ ದೂರವಿದೆ. ಭಾರತೀಯರು ಯಾರಾದರೂ ಇಲ್ಲಿಗೆ ಬರಬೇಕೆಂದರೆ ಭಾರತದ ಗಡಿಯನ್ನು ದಾಟಿ ಬಾಂಗ್ಲಾ ದೇಶದಲ್ಲಿ ಪ್ರಯಾಣ ಮಾಡಿ ಮತ್ತೆ ಇತ್ತ ಬರಬೇಕು. ಅದೇ ರೀತಿ ಭಾರತದ ಈ ಭೂ ಪ್ರದೇಶ ಅಂದೆನಲ್ಲ ಅದರೊಳಗೆ ಇನ್ನೊಂದು ವರ್ತುಲದಂತಹ ಪ್ರದೇಶವಿದೆ. ಅದು ಬಾಂಗ್ಲಾದೇಶಕ್ಕೆ ಸೇರಿದ್ದು. ಇದೊಂಥರಾ ವೃತ್ತದೊಳಗೆ ವೃತ್ತ ಎಂಬಂತಿದೆ. ಇನ್ನೂ ಮಜವಾದ ಸಂಗತಿ ಏನೆಂದರೆ ಇಲ್ಲಿ ಒಬ್ಬ ಜಮೀನ್ದಾರ ತನ್ನ ಜಮೀನು ಬಾಂಗ್ಲಾದ್ದು ಎಂದರೆ ಮತ್ತೊಬ್ಬಾತ ತನ್ನದು ಭಾರತದ್ದು ಎನ್ನುತ್ತಾನೆ. ಕಂದಾಯ ವಸೂಲಿ, ಅಭಿವೃದ್ಧಿ ಇತ್ಯಾದಿಗಳೆಲ್ಲ ಬಹಳ ಕಷ್ಟ. ಬಾಂಗ್ಲಾ ದೇಶ ಹಾಗೂ ಭಾರತದ ಗಡಿಗಳು ಎಷ್ಟು ಅಂಕುಡೊಂಕಾಗಿದೆ ಎಂದರೆ ಅದನ್ನು ವಿವರಣೆ ಮಾಡುವುದು ಕಷ್ಟ. ಗಡಿಯಲ್ಲಿ ಭಾರತದ ಒಂದು ರಸ್ತೆಯಿದೆ. ಆ ರಸ್ತೆಯ ಎರಡೂ ಅಂಚುಗಳು ಬಾಂಗ್ಲಾದೇಶಕ್ಕೆ ಸೇರಿದ್ದು. ನಡುವಿನ ರಸ್ತೆ ಮಾತ್ರ ಭಾರತದ್ದು. ಆಚೆ ಕಾಲಿಟ್ಟರೆ ಬಾಂಗ್ಲಾ ಈಚೆ ಕಾಲಿಟ್ಟರೆ ಬಾಂಗ್ಲಾ. ಇಂತಹ ಪ್ರದೇಶಗಳು ಭಾರತದ ಒಳ ನುಸುಳಲು ಹೇಳಿಮಾಡಿಸಿದಂತಹ ಪ್ರದೇಶಗಳು. ನಿಮ್ಮನ್ನು ಇಂತಹುದೇ ಒಂದು ಪ್ರದೇಶಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತೇನೆ. ಸಾಧ್ಯವಾದರೆ ನೀವು ಅಲ್ಲಿಂದಲೇ ಭಾರತ ತಲುಪಬಹುದು..' ಎಂದರು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ತಲೆಯಲ್ಲಾಡಿಸಿದರು. ಆದರೆ ಇಬ್ಬರಲ್ಲೂ ಗಡಿ ಸಮಸ್ಯೆ ಬಗೆ ಹರಿದಿರಲಿಲ್ಲ.
             ಮೂವರಿಗೂ ನಿದ್ದೆ ಹತ್ತುತ್ತಿತ್ತು. ಬೆಳಿಗ್ಗೆ ಸಾಗಬೇಕಾದ ದೂರ ಸಾಕಷ್ಟಿತ್ತು. ಮರುದಿನ ವಿನಯಚಂದ್ರ ಹಾಗೂ ಮಧುಮಿತಾರ ಬದುಕಿನ ಅವಿಸ್ಮರಣೀಯ ದಿನವಿತ್ತು. ಸಾವು-ಬದುಕನ್ನು ನಿರ್ಧಾರ ಮಾಡುವ ದಿನವಾಗಿತ್ತು. ಅದೃಷ್ಟ ಕೈ ಹಿಡಿದರೆ ಭಾರತ ತಲುಪುವುದು ಇಲ್ಲವಾದರೆ ಭಾರತೀಯ ಸೈನಿಕರ ಗುಂಡೇಟಿಗೆ ಬಲಿಯಾಗಿ ಜೀವತೆರಬೇಕಿತ್ತು. ನಾಳೆ ದಿನ ಹೇಗೋ ಏನೋ ಎನ್ನುವ ಆಲೋಚನೆಯಲ್ಲಿದ್ದ ವಿನಯಚಂದ್ರ ಹಾಗೂ ಮಧುಮಿತಾರಿಗೆ ಯಾವಾಗ ನಿದ್ದೆ ಆವರಿಸಿತ್ತೋ ಗೊತ್ತಾಗಲಿಲ್ಲ.

Sunday, November 2, 2014

ಮೌನ ಭೋಜನ

ಮೌನಭೋಜನ
ಏನೆಲ್ಲಾ ನೀಡಿತು ? ಹೊಸತನ !
ಘಮ್ಮೆಂದು ಕಂಪುಚೆಲ್ಲಿ ಮನವ
ತಣಿದು-ಕುಣಿಸಿದ ಧೂಪದ ಕಂಪು,
ಜೊತೆಗೆ ಹರ್ಷಾನಂದವ ನೀಡಿದ
ಕೊಳಲಗಾನದ ಇಂಪು |

ಮೌನಭೋಜನ..
ನವ ಜೀವೋದ್ಧೀಪನ |
ಹಣತೆಯಿಂದ ಬೆಳಕು ಚೆಲ್ಲಿ
ಬಾಳು ಬೆಳಗುವ ದೀಪ,
ಮೌನ ಮೆರೆಯುವ ನಿಶೆಯ ಹೊಸ್ತಿಲೊಳು
ಆತ್ಮ-ಮನಸ್ಸು ಪಡೆದಿದೆ
ಹೊಸದಾದ ಒಂದು ರೂಪ |

ಮೌನಭೋಜನ..
ಮರೆಯದ ಮಧುರ ಭಾವನ |
ಚಿರಂತನ | ಕಾಪಿಡಿದು ಕೊನೆಯ
ಜೀವ ಬಿಂದು ಉಳಿವವರೆಗೆ
ಮೈಝುಮ್ಮೆನ್ನಿಸುವ ಭಾವ ಮಿಲನ
ಜೊತೆಗೆ ಭಾವಸ್ಫುರಣ |

ಮೌನಭೋಜನ..
ಸ್ಫೂರ್ತಿಯ ಬಟ್ಟಲೊಳು,
ಮನದ ತುಂಬಾ ತೃಪ್ತಿ ಇಟ್ಟು
ಬದುಕಿಗೊಂದು ನವ ಸ್ಫೂರ್ತಿಯಾಗಿ
ಸವಿ ನೆನಪಿಟ್ಟ ಕವನ |
ಭಾವ ತಂತುಗಳ ಮಿಲನ |

ಮೌನಭೋಜನ..
ಸ್ಪೂರ್ತಿ-ಮಾರ್ಗದರ್ಶಿ-ಚೇತನಾ |
ಬಾಳಿಗೆ ಹೊಸತು ಪ್ರೇರಣಾ |
ಕಳೆದಿದೆ ಏಕತಾನ |
ಗದ್ದಲದ ಗುಡ್ಡದೊಳು
ಮೌನ ಹೃದಯ ಸ್ಪಂದನ |

***
(ಈ ಕವಿತೆಯನ್ನು ಬರೆದಿರುವುದು ಹುಳಗೋಳದಲ್ಲಿ 18-12-2006ರಂದು)
(ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಎಬಿವಿಪಿಯಲ್ಲಿ  ಅರೆಕಾಲಿಕ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಎಬಿವಿಪಿಯಿಂದ ಹುಳಗೋಳದಲ್ಲಿ ಸ್ಪೂರ್ತಿ-2006ರ ಎಂಬ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿತ್ವ ವಿಕಸನದ ಆ ಶಿಬಿರದಿಂದ ನಾನು ಕಲಿತದ್ದು ಹಲವಷ್ಟು. ಆ ಸಂದರ್ಭದಲ್ಲಿ ಮೌನಭೋಜನ ಎನ್ನುವ ಹೊಸ ವಿಧಾನವನ್ನು ನಾನು ಸವಿದ ನಂತರ ಬರೆದಿದ್ದು ಈ ಕವನ.
ಈ ಮೌನಭೋಜನದ ಬಗ್ಗೆ ನಾವು ಹೇಳುವುದು ಸಾಕಷ್ಟಿದೆ. ಬ್ರಾಹ್ಮಣರ ಮನೆಗಳಲ್ಲಿ ಉಪನಯನವಾದ ನಂತರ ಉಪಾಕರ್ಮ ಆಗುವ ವರೆಗೆ ಊಟಕ್ಕೆ ಕುಳಿತಾಗ ಮಾತನಾಡಬಾರದು ಎನ್ನುವ ನಿಯಮ/ಶಾಸ್ತ್ರವಿದೆ. ನನ್ನ ಉಪನಯನದ ಸಂದರ್ಭದಲ್ಲೂ ನಾನು ಹೀಗೆ ಮಾಡಿದ್ದೆ. ಈಗಿನವರು ಹಾಗೆಮಾಡಿದ್ದು ನಾ ಕಾಣೆ ಬಿಡಿ. ಅದೇ ರೀತಿಯ ಈ ಮೌನಭೋಜನ ಕೊಂಚ ವಿಶಿಷ್ಟವಾದುದು ಎಂದೇ ಹೇಳಬಹುದು. ವಿದ್ಯುತ್ ದೀಪವಿಲ್ಲದೇ ಹಣತೆಯ ದೀಪದ ಬೆಳಕಲ್ಲಿ ಮೌನವಾಗಿ ಊಟವನ್ನು ಮಾಡುವುದೇ ಈ ಪ್ರಕ್ರಿಯೆ.
ಹಣತೆ ಸೂಸುವ ಮಂದ್ರಬೆಳಕು. ಘಮ್ಮೆನ್ನುವಾ ವಾಸನೆ ಸುತ್ತೆಲ್ಲ ಪರಿಸರವನ್ನು ಆವರಿಸಿ ವಿಶಿಷ್ಟ ಅನುಭವ ನೀಡಿದರೆ ಆ ಸಂದರ್ಭದಲ್ಲಿ ಹಾಕಲಾಗುವ ಕೊಳಲ ನಿನಾದ ಮನಸ್ಸನ್ನು ತಲ್ಲೀನಗೊಳಿಸುತ್ತದೆ. `ಇಂತದ್ದು ಬೇಕು, ಇದು ಬೇಡ..' ಎಂದು ಕೈ ಸನ್ನೆಯಲ್ಲೇ ಹೇಳಿ ಹಾಕಿಸಿಕೊಳ್ಳುವ, ಬೇಡವೆನ್ನುವ ವಿಧಾನವಂತೂ ಮಜಾ ಕೊಡುತ್ತದೆ. ಇಂತಹ ಮೌನಭೋಜನ ಉಣ್ಣುವವರಿಗಷ್ಟೇ ಅಲ್ಲ ಬಡಿಸುವವರಿಗೂ ಸವಾಲು ಕೂಡ ಹೌದು. ಇಂತದ್ದೊಂದು ಮೌನಭೋಜನದ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ. ನೀವೂ ಭಾಗವಹಿಸಿ. ಉಂಟಾಗುವ ಆನಂದ ಎಲ್ಲರಿಗೂ ಹಂಚಿ )

Saturday, November 1, 2014

ಬೆಂಗಾಲಿ ಸುಂದರಿ-36

(ತಾಹತ್ ಮಹಲ್ ರಂಗಪುರ)
           ಬಸ್ಸು ನಿಧಾನವಾಗಿ ಚಲಿಸುತ್ತಿತ್ತು. ಬಸ್ಸಿನ ಆಮೆವೇಗ ಬಹುಬೇಗನೆ ಬೇಸರ ತರಿಸಿಬಿಟ್ಟಿತು. ಚಲಿಸುವ ವೇಳೆಯಲ್ಲಿ ಬಸ್ಸಿನ ಪ್ರತಿಯೊಂದು ಭಾಗಗಳೂ ನಡುಗುತ್ತಿದ್ದವು. ವಿನಯಚಂದ್ರನಂತೂ ದೇವರೇ ಈ ಬಸ್ಸು ಎಲ್ಲಿಯೂ ಕೈಕೊಡದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದ. ಏದುಸಿರು ಬಿಡುತ್ತಾ ಬಸ್ಸು ಸಾಗುತ್ತಿತ್ತು. ಮತ್ತೊಂರ್ಧ ತಾಸಿನ ನಂತರ ಬೋಗ್ರಾ ನಗರವನ್ನು ದಾಟಿದ ಬಸ್ಸು ರಂಗಪುರದತ್ತ ಮುಖ ಮಾಡಿತು. ಮಾರ್ಗ ಕ್ರಮಿಸಿದಂತೆಲ್ಲ ಬಸ್ಸಿನಲ್ಲಿ ನಿಧಾನಕ್ಕೆ ಜನ ತುಂಬಲಾರಂಭಿಸಿದರು.
           ಆಮೆವೇಗದ ಕಾರಣ ಪ್ರಯಾಣ ಮತ್ತಷ್ಟು ದೀರ್ಘವಾಗುತ್ತಿದೆಯಾ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಅದೇನೋ ಅಸಹನೆ. ಬಸ್ಸಂತೂ ಏರಿಳಿತವೇ ಇಲ್ಲವೇನೋ ಎಂಬಂತೆ ಸಾಗುತ್ತಿತ್ತು. ರಂಗಪುರವನ್ನು ಯಾವಾಗ ತಲುಪುತ್ತೇನಪ್ಪಾ ದೇವರೆ ಎನ್ನಿಸದೇ ಇರಲಿಲ್ಲ. ನೂನ್ಗೋಲಾ, ನಾಮೂಜಾ ಈ ಮುಂತಾದ ಊರುಗಳನ್ನು ಹಿಂದಕ್ಕೆ ಹಾಕು ಬಸ್ಸು ಮುಮದೆ ಸಾಗಿತು. ಮಧುಮಿತಾ ವಿನಯಚಂದ್ರನಿಗೆ ಪ್ರತಿ ಊರುಗಳು ಬಮದಾಗಲೂ ಬೆಂಗಾಲಿಯ ಹೆಸರುಗಳನ್ನು ಓದಿ ಹೇಳುತ್ತಿದ್ದಳು. ವಿನಯಚಂದ್ರ ತಲೆಯಲ್ಲಾಡಿಸುತ್ತಿದ್ದ. ಗೋವಿಂದೋಗೋಂಜ್ ಎಂಬ ಊರನ್ನು ತಲುಪುವ ವೇಳೆಗೆ ಒಂದೆರಡು ತಾಸುಗಳು ಕಳೆದಿತ್ತು. ನಿಧಾನವಾಗಿ ಏರುತ್ತಿದ್ದ ಬಿಸಿಲಿನ ಕಾರಣ ಬಸ್ಸಿನೊಳಗೆ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಿತ್ತು. ಬಸ್ಸಿನ ನೆತ್ತಿ ಕಾದಂತೆಲ್ಲ ಒಳಗೆ ಕುಳಿತವರು ಚಡಪಡಿಸತೊಡಗಿದರು.
           ನಡುವೆಲ್ಲೋ ಜಮುನಾ ನದಿಯನ್ನು ಸೇರುವ ಉಪನದಿಯೊಂದು ಸಿಕ್ಕಿತು. ಈ ನದಿಯ ಬಳಿ ಬಸ್ಸನ್ನು ನಿಲ್ಲಿಸಿದ ಡ್ರೈವರ್ ಓಡಿ ಹೋಗಿ ಬಾಟಲಿಯಲ್ಲಿ ನೀರನ್ನು ಹಿಡಿದುಕೊಂಡು ಬಂದು ಬಸ್ಸಿನ ರೇಡಿಯೇಟರ್ ಗೆ ಹಾಕಿದ. ಒಮ್ಮೆ ಬಸ್ಸಿನ ಅಂತರಾಳದ ಬಾಯಾರಿಕೆಗೆ ತಂಪನ್ನು ನೀಡಿದ ಚಾಲಕ ಮತ್ತೆ ಬಸ್ಸನ್ನು ಮುಂದಕ್ಕೋಡಿಸಿದ. ವೇಗ ಮಾತ್ರ ಹೆಚ್ಚಲಿಲ್ಲ. ಇನ್ನೊಂದು ತಾಸಿನ ಪಯಣದ ನಂತರ ಬಸ್ಸು ಪಾಲಾಶ್ಬಾರಿ ಎಂಬಲ್ಲಿಗೆ ಹಾಗೂ-ಹೀಗೂ ಎಂಬಂತೆ ಬಂದು ತಲುಪಿತು. ಅಲ್ಲಿಗೆ ಬಂದು ತಲುಪಿದ ಬಸ್ಸು ಒಮ್ಮೆ ಗರ್ರ್ ಎಂದು ಸದ್ದು ಮಾಡಿ ಸ್ಥಬ್ಧವಾಯಿತು. ನಂತರ ಡ್ರೈವರ್ ಏನೇ ಪ್ರಯತ್ನ ಮಾಡಿದರೂ ಮತ್ತೆ ಮುಂದಕ್ಕೆ ಹೊರಡಲಿಲ್ಲ. ಸದ್ದನ್ನೂ ಮಾಡಲಿಲ್ಲ.
           `ನಾನಾಗ್ಲೇ ಹೇಳಿದ್ದೆ. ಈ ಬಸ್ಸು ಎಲ್ಲಾದರೂ ಕೈಕೊಡುತ್ತದೆ ಅಂತ.. ನೋಡು.. ಈಗ ಏನಾಯ್ತು ಅಂತ..' ಎಂದು ಮಧುಮಿತಾಳನ್ನು ಛೇಡಿಸಿದ ವಿನಯಚಂದ್ರ. ಹುಂ ಎಂದಳಾಕೆ. ಬಸ್ಸಿನಲ್ಲಾಗಲೇ ಗುಜು ಗುಜು ಶುರುವಾಗಿತ್ತು. ಕೆಲವರು ಸಣ್ಣದಾಗಿ ಗಲಾಟೆಯನ್ನೂ ಆರಂಭಿಸಿದರು. ಸೀಟಿನಿಂದೆದ್ದ ವಿನಯಚಂದ್ರ ನುಗ್ಗಾಡಿ ಮುಂದಕ್ಕೆ ಹೋಗಿ ಕಂಡಕ್ಟರ್ ಬಳಿ ಬಸ್ಸು ಮುಂದಕ್ಕೆ ಹೋಗದ ಕಾರಣ ತಮ್ಮ ಪ್ರಯಾಣದ ಹಣವನ್ನು ಮರಳಿಸುವಂತೆ ಕೇಳಿದ. ವಿನಯಚಂದ್ರನ ಹಿಂದಿ ಅರ್ಥವಾಗದಂತೆ ನೋಡುತ್ತಿದ್ದ ಕಂಡಕ್ಟರ್ ಬಳಿ ಮಧುಮಿತಾ ಬಂದು ವಿವರಿಸಿದಳು. ಕೊನೆಗೆ ಕಂಡಕ್ಟರ್ ಒಪ್ಪಲಿಲ್ಲ. ವಿನಯಚಂದ್ರನ ವಾದವನ್ನು ಕೇಳುತ್ತಿದ್ದ ಒಂದಷ್ಟು ಪ್ರಯಾಣಿಕರು ವಿನಯಚಂದ್ರನ ಪರವಾಗಿ ನಿಂತರು. ಸಣ್ಣ ಪ್ರಮಾಣದ ಗಲಾಟೆಯೇ ನಡೆಯಿತು. ಒಂದಿಬ್ಬರು ತೋಳೇರಿಸಿಕೊಂಡು ಕಂಡಕ್ಟರನ ಮೇಲೇರಿ ಹೋದರು. ಹೆದರಿದ ಕಂಡಕ್ಟರ್ ಹಣ ವಾಪಾಸು ನೀಡಲು ಮುಂದಾದ. ವಿನಯಚಂದ್ರ ಮೊದಲಿಗೆ ಹಣವನ್ನು ಇಸಿದುಕೊಂಡು ಗುಂಪಿನಿಂದ ಹೊರಬಂದ. `ಅಬ್ಬ ಇಷ್ಟಾದರೂ ಸಿಕ್ಕಿತಲ್ಲ. ಮುಂದಿನ ಪ್ರಯಾಣ ಹೇಗೆ ಮಾಡೋದು ಅಂದ್ಕೊಂಡಿದ್ದೆ. ಉಪವಾಸದಲ್ಲೇ ಭಾರತ ಗಡಿಯವರೆಗೆ ತಲುಪಬೇಕಾ ಎಂದುಕೊಂಡಿದ್ದೆ. ಆದರೆ ಪ್ರಯಾಣದ ಜೊತೆಗೆ ದುಡ್ಡೂ ಸಿಕ್ಕಿತು ನೋಡು..' ಎಂದವನೇ ಹಣ ಎಣಿಸಲು ಆರಂಭಿಸಿದ. ತಾನಂದುಕೊಂಡಿದ್ದಕ್ಕಿಂತ ಜಾಸ್ತಿ ಹಣ ವಾಪಾಸು ಬಂದಿತ್ತು. ಮತ್ತೊಮ್ಮೆ ಮುಖ ಊರಗಲವಾಯಿತು ವಿನಯಚಂದ್ರನಿಗೆ.
        ಊರಿನ ದಾರಿಯಲ್ಲಿ ನಡೆದು ಹೊರಟವರು ಕಂಡ ಕಂಡ ವಾಹನಕ್ಕೆಲ್ಲ ಕೈ ಮಾಡಲು ಆರಂಭಿಸಿದರು. ಆದರೆ ಮೊದ ಮೊದಲು ಯಾವ ವಾಹನಗಳೂ ನಿಲ್ಲಲಿಲ್ಲ. ಕೊನೆಗೊಂದು ಲಡಕಾಸಿ ಜೀಪು ಸಿಕ್ಕಿತು. ಜೀಪು ನೋಡಿದ ವಿನಯಚಂದ್ರ ಏರಲು ಅನುಮಾನ ಮಾಡಿದ. ಕೊನೆಗೆ ಮಧುಮಿತಾಳೇ `ಸಾಧ್ಯವಾದಷ್ಟು ದೂರದ ವರೆಗೆ ಹೋಗೋಣ..ಪ್ರಯಾಣ ಮಾಡಿದ್ದಷ್ಟೇ ಬಂತು.. ಮತ್ತೆ ಇಂತಹ ಅವಕಾಶ ಸಿಗುತ್ತದೆ ಎನ್ನುವುದು ಕಷ್ಟ ನೋಡಿ..' ಎಂದಳು. ವಿನಯಚಂದ್ರ ಒಪ್ಪಿಕೊಂಡು ಜೀಪೇರಿದ. ಜೀಪು ನಿಧಾನವಾಗಿ ಮುಂದಕ್ಕೆ ಸಾಗಿತು. ಅಂಕುಡೊಂಕಿನ ಹಾದಿಯಲ್ಲಿ ಸಾಗಿದ ಜೀಪು ಮಿಥಾಪುರ, ಪೀರ್ ಗಂಜ್, ದುರ್ಗಾಪುರಗಳನ್ನು ದಾಟಿ ಹಿಥೋಂಪುರಕ್ಕೆ ಆಗಮಿಸಿತು. ಆ ಊರು ಬಂದ ತಕ್ಷಣ ಜೀಪಿನ ಯಜಮಾನ ವಿನಯಚಂದ್ರನ ಬಳಿ `ಎಲ್ಲಿಗೆ ಹೋಗುತ್ತಿರುವುದು..' ಎಂದು ವಿಚಾರಿಸಿದ. ಮಧುಮಿತಾ `ರಂಗಪುರ್..' ಎಂದಳು. ಕೊನೆಗೆ ಜೀಪಿನ ಯಜಮಾನ ಅವರನ್ನು ಅಲ್ಲೇ ಇಳಿಸಿ ತಾನು ಬೇರೊಂದು ದಾರಿಯಲ್ಲಿ ಹೊರಟ. ಇವರ ಬಳಿ ಪ್ರಯಾಣದ ದರವನ್ನು ಇಸಿದುಕೊಳ್ಳಲಿಲ್ಲ. ವಿನಯಚಂದ್ರ ಮೇಲೆಬಿದ್ದು ದುಡ್ಡಕೊಡಬೇಕಾ ಎಂದೂ ಕೇಳಲಿಲ್ಲ.
         `ನೋಡು ಮಧು.. ದುಡ್ಡಿನ ಶಿಲ್ಕು ನಮ್ಮ ಬಳಿ ಕಡಿಮೆ ಇದೆ ಎಂದಾದರೆ ಪೈಸೆ ಪೈಸೆಗೆ ಲೆಕ್ಖಮಾಡಬೇಕಾಗುತ್ತದೆ. ಕೊಡುವ ಮೊತ್ತದಲ್ಲಿ ಒಂದು ರು. ಉಳಿದರೂ ಸಾಕು ಎನ್ನಿಸುತ್ತದೆ. ಈಗ ನೋಡು ಆ ಕಂಡಕ್ಟರ್ ದುಡ್ಡು ವಾಪಾಸು ಕೊಟ್ಟಿದ್ದಕ್ಕೆ ಮನಸ್ಸು ಹೂವಾಗುತ್ತಿದೆ... ' ಎಂದ ವಿನಯಚಂದ್ರ.
          `ಹೌದು.. ದುಡ್ಡು ಸಿಕ್ಕಾಪಟ್ಟೆ ಕೈಗೆ ಸಿಗುತ್ತಿದ್ದರೆ ಖರ್ಚು ಮಾಡುವುದೇ ಗೊತ್ತಾಗುವುದಿಲ್ಲ. ಆದರೆ ಈಗ ನೋಡು ಇರುವ ದುಡ್ಡನ್ನೇ ಎಷ್ಟು ಕಡಿಮೆಯೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಖರ್ಚು ಮಾಡಬೇಕು. ದುಡ್ಡನ್ನು ಸಮರ್ಪಕವಾಗಿ ಬಳಕೆ ಮಾಡುವುದನ್ನು ಕಲಿಸುತ್ತದೆ ಇದು..' ಎಂದಳು.
           `ಚಿಕ್ಕಂದಿನಿಂದ ನನಗೆ ಅಪ್ಪ ಕೈತುಂಬಾ ಹಣಕೊಡುತ್ತಿದ್ದರು. ಕೊಟ್ಟ ಹಣಕ್ಕೆ ಲೆಕ್ಖ ನೀಡು ಅನ್ನುತ್ತಿದ್ದರು. ನಾನು ಅವರ ಕಣ್ಣು ಕಟ್ಟಲು ಲೆಕ್ಖ ಬರೆದಿದ್ದೂ ಇದೆ. ಆಗ ಬೇಕಾಬಿಟ್ಟಿ ಖರ್ಚು ಮಾಡಿದ್ದೆ. ಆದರೆ ಕೆಟ್ಟದ್ದಕ್ಕೆ ಖರ್ಚು ಮಾಡಲಿಲ್ಲ. ನಾನು ಖರ್ಚು ಮಾಡಿದ್ದೆಲ್ಲವೂ ಒಳ್ಳೆಯದಕ್ಕೇ ಎಂದುಕೊಂಡಿದ್ದೆ. ಆದರೆ ಈಗ ಮಾತ್ರ ದುಡ್ಡಿನ ಮಹತ್ವ ಗೊತ್ತಾಗುತ್ತಿದೆ. ಆಗ ಕಲಿತಿದ್ದಕ್ಕಿಂತ ಹೆಚ್ಚು ಈಗ ಕಲಿತಿದ್ದೇನೆ. ದುಡ್ಡಿಗೆ ನಮಸ್ಕಾರ ಕೊಡಬೇಕು ಅನ್ನಿಸುತ್ತದೆ..' ಎಂದ ವಿನಯಚಂದ್ರ.
           `ಹೌದು ವಿನು.. ಕಲಿಕೆ ನಿರಂತರ. ಯಾರಿಂದ, ಹೇಗೆ, ಯಾವಾಗ ಕಲಿಯುತ್ತೇವೆ ಎನ್ನುವುದನ್ನು ಹೇಳಲು ಬರುವುದಿಲ್ಲ ನೋಡು. ದುಡ್ಡು ನಮಗೆ ಭಾರಿ ಪಾಠ ಕಲಿಸುತ್ತದೆ. ಕೆಳಕ್ಕೆ ತಳ್ಳುತ್ತದೆ. ಮೇಲೆ ಬರಲು ಸಹಾಯ ಮಾಡುತ್ತದೆ..' ಎಂದಳು ಮಧುಮಿತಾ. ತಲೆಯಲ್ಲಾಡಿಸಿದ ವಿನಯಚಂದ್ರ.
(ಬೇಗಂ ರೋಖಿಯಾ ವಿಶ್ವವಿದ್ಯಾಲಯ ರಂಗಪುರ)
           ರಂಗಪುರ ಹತ್ತಿರದಲ್ಲೇ ಇತ್ತು. ವಾಹನ ಸಿಗುವ ವರೆಗೆ ನಡೆಯುತ್ತ ಸಾಗೋಣ ಎಂದು ನಿರ್ಧಾರ ಮಾಡಿದ ಇಬ್ಬರೂ ಮುಂದಕ್ಕೆ ಹೆಜ್ಜೆ ಹಾಕಿದರು. ದಾರಿ ಸಾಗುತ್ತಲೇ ಇದ್ದರೂ ಯಾವೊಂದು ವಾಹನವೂ ಇವರ ಬಳಿ ನಿಲ್ಲಲಿಲ್ಲ. ಮದ್ಯಾಹ್ನದ ಉರಿಬಿಸಿಲು ಕಡಿಮೆಯಾಗಿ ಸಂಜೆ ಮೂಡುತ್ತಿತ್ತು. ಆಗಲೇ ಇಬ್ಬರಿಗೂ ಮದ್ಯಾಹ್ನ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ರಂಗಪುರ ತಲುಪುವ ವರೆಗೆ ಏನನ್ನೂ ತಿನ್ನಬಾರದು ಎಂದು ನಿರ್ಧರಿಸಿ ಬೇಗ ಬೇಗನೆ ಹೆಜ್ಜೆ ಹಾಕಿದರು ಇಬ್ಬರೂ. ಹಸಿವಾಗಿರುವುದು ಮರೆಯಲಿ ಎನ್ನುವ ಕಾರಣಕ್ಕೆ ಯಾವು ಯಾವುದೋ ಸುದ್ದಿಗಳನ್ನು ಮಾತನಾಡುತ್ತ ಬರುತ್ತಿದ್ದರು. ಪೈರ್ ಬಂದ್ ಎನ್ನುವ ಊರು ಸಿಕ್ಕಿತು ಅವರಿಗೆ. ಅಲ್ಲಿಗೆ ಬರುವ ವೇಳೆಗೆ ಹಸಿವೆಯನ್ನು ತಾಳಲಾರೆ ಎನ್ನುವಂತಾಗಿತ್ತು ಇಬ್ಬರಿಗೂ. ರಸ್ತೆಯ ಅಕ್ಕಪಕ್ಕದಲ್ಲಿ ಜೋಳ ಬೆಳೆದು ನಿಂತಿದ್ದು ಕಾಣಿಸಿತು. ಉದ್ದುದ್ದದ ಜೋಳದ ಕುಂಡಿಗೆಗಳು ಬೆಳೆದಿದ್ದವು. ವಿನಯಚಂದ್ರ ತಡೆಯಲಾದರೆ ಹೋಗಿ ಒಂದೆರಡನ್ನು ಕಿತ್ತುಕೊಂಡು ಬಂದ.  ಇಬ್ಬರೂ ತಿನ್ನಲಾರಂಭಿಸಿದರು. ಚೀಲದಲ್ಲಿ ಕೊಂಚವೇ ನೀರಿತ್ತು. ನೀರನ್ನು ಕುಡಿಯುವ ವೇಳೆಗೆ ಹಸಿವು ಕೊಂಚ ಅಡಗಿದಂತಾಯಿತು. ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದರು.
           ವಿಸ್ತಾರವಾದ ಬಯಲು, ನಡು ನಡುವೆ ಸಿಗುವ ಒಣಗಿದ ಹೊಳೆಗಳು ಪದೇ ಪದೆ ಸಿಕ್ಕವು. ರಂಗಪುರ ನಿಧಾನವಾಗಿ ಹತ್ತಿರಾಗುತ್ತಿತ್ತು. ನಡು ನಡುವೆ ಒಂದೆರಡು ಅಡ್ಡ ರಸ್ತೆಗಳೂ ಸಿಕ್ಕವು. ಮತ್ತೊಂದರ್ಧ ತಾಸಿನ ಪಯಣದ ವೇಳೆಗೆ ಸೂರ್ಯನಾಗಲೇ ಕಂತಿದ್ದ. ನಿಧಾನವಾಗಿ ಕತ್ತಲಾವರಿಸಿಬಿಟ್ಟಿತ್ತು. ರಂಗಪುರ ನಗರದ ಹೊರ ಭಾಗದಲ್ಲೇ ಪ್ರಯಾಣ ಮಾಡಬಹುದಾದ ಬೈಪಾಸ್ ರಸ್ತೆ ಕೂಡ ಸಿಕ್ಕಿತು. ಅಲ್ಲಿ ವಿನಯಚಂದ್ರ `ನಾವು ಯಾವ ಮಾರ್ಗದಲ್ಲಿ ಸಾಗೋದು?' ಎಂದು ಕೇಳಿದ. `ಬೈಪಾಸ್.. ಬೇಡ ಮಾರಾಯಾ.. ಇಂತಹ ಬೈಪಾಸ್ ರಸ್ತೆಯಲ್ಲೇ ಅಲ್ಲವಾ ಸಲೀಂ ಚಾಚಾನನ್ನು ಕಳೆದುಕೊಂಡಿದ್ದಲ್ಲವಾ? ನಗರದೊಳಗೇ ಹೋಗೋಣ.. ಇವತ್ತು ರಾತ್ರಿ ಪ್ರಯಾಣ ಖಂಡಿತ ಸಾಧ್ಯವಾಗದ ಮಾತು. ಅಲ್ಲೆಲ್ಲಾದರೂ ಪಾರ್ಕು ಇದ್ದರೆ ಅಲ್ಲೇ ಮಲಗೋಣ. ಬೋಗ್ರಾದಲ್ಲಿ ಮಲಗಿದಂತೆ.. ಇಲ್ಲಿಂದ ಭಾರತದ ಗಡಿ ತೀರಾ ದೂರವೇನಲ್ಲ. ಒಂದೆರಡು ದಿನದ ಪಯಣ ಅಷ್ಟೇ. ಸಲೀಂ ಚಾಚಾ ಹೇಳಿದ ಏಜೆಂಟನ ಪೋನ್ ನಂಬರ್ ನನ್ನ ಬಳಿ ಇದೆ. ಒಮ್ಮೆ ಪೋನ್ ಮಾಡಿ ನೋಡೋಣ. ಆತನ ಸಹಾಯ ಸಿಕ್ಕರೆ ಹಾಗೆ.. ಇಲ್ಲವಾದರೆ ನಾವೇ ಒಂದು ಪ್ರಯತ್ನ ಮಾಡೋಣ..' ಎಂದಳು. ಆಕೆಯ ಸಲಹೆ ಸರಿಯೆನ್ನಿಸಿತು.
        ರಂಗಪುರ ನಗರಿಯೆಡೆಗೆ ತೆರಳುವ ರಸ್ತೆಯಲ್ಲೇ ಮುನ್ನಡೆದರು. ಅರ್ಧ ಗಂಟೆಯ ನಂತರ ರಂಗಪುರ ನಗರಿ ಕತ್ತಲೆಯ ಜೊತೆಗೆ, ಬೆಳಕಿನ ದೀಪಗಳೊಡನೆ ಬರಮಾಡಿಕೊಂಡಿತು. ಎಲ್ಲೆಲ್ಲೂ ಝಗಮಗಿಸುವ ಬೆಳಕು, ರಸ್ತೆಯ ತುಂಬೆಲ್ಲ ಸೈಕಲ್ ರಿಕ್ಷಾಗಳು, ಬೆಂಗಾಲಿಯಲ್ಲಿ ಮಾತನಾಡುತ್ತ ಓಡಾಡುವ ಜನ, ಕಣ್ಣಿಗೆ ಕಾಣಿಸಿತು. ನಗರದೊಳಗೆ ಕಾಲಿಟ್ಟಂತೆಲ್ಲ ಉಬ್ಬರ ಮನಸ್ಸೂ ಉಲ್ಲಾಸಗೊಂಡಿತು. ಅಲ್ಲೆಲ್ಲೋ ಒಂದು ಬೀದಿಯಲ್ಲಿ ಸಾಗುತ್ತಿದ್ದಾಗಲೇ ಒಂದು ದೇವಸ್ಥಾನ ಕಣ್ಣಿಗೆ ಬಿದ್ದಿತು. ಅಚ್ಚರಿಯಿಂದ ನೋಡದವರೇ ದೇವಸ್ಥಾನದ ಒಳಹೊಕ್ಕರು. ದೇವಸ್ಥಾನದಲ್ಲೇ ಇದ್ದ ಅರ್ಚಕರೊಬ್ಬರು ಇವರನ್ನು ಅನುಮಾನದಿಂದಲೇ ನೋಡಿದರು. ಕೊನೆಗೆ ಮಧುಮಿತಾಳೇ ಬೆಂಗಾಲಿಯಲ್ಲಿ ಎಲ್ಲ ವಿಷಯ ತಿಳಿಸಿದಾಗ ಅರ್ಚಕರು ದೇವಸ್ಥಾನದ ಒಳಗೆ ಉಳಿಯಲು ಅವಕಾಶ ಮಾಡಿಕೊಟ್ಟರು. ರಾತ್ರಿಯೂಟವನ್ನೂ ನೀಡಿದರು. ಹಸಿದಿದ್ದ ಇಬ್ಬರೂ ಬೇಗ ಬೇಗನೆ ಊಟ ಮಾಡಿದರು. ಊಟ ಮುಗಿದ ನಂತರ ಅರ್ಚಕರು ಮಾತಿಗೆ ಕುಳಿತರು.

(ಮುಂದುವರಿಯುತ್ತದೆ)

ಭಲೆ ಭೀಮನವಾರೆ

(ಭೀಮನಗುಡ್ದದಲ್ಲಿ ಸೂರ್ಯೋದಯ)
ಮೂಡಣದಲ್ಲಿ ಸೂರ್ಯ ಉದಯಿಸುತ್ತಿದ್ದರೆ ಮನಸ್ಸಿನಲ್ಲಿ ಉಂಟಾಗುವ ರೋಮಾಂಚನ ಬಣ್ಣಿಸಲಸದಳ. ಬಾನು ಕೆಂಪಾಗಿ, ಕಿತ್ತಳೆ ಹಣ್ಣಿನ ಬಣ್ಣದಲ್ಲಿ ನೇಸರ ಆಗಸದಲ್ಲಿ ಎತ್ತರೆತ್ತರಕ್ಕೆ ಬರುತ್ತಿದ್ದರೆ ನೋಡುಗರ ಮನಸ್ಸಿನಲ್ಲಿ ಉಂಟಾಗುವ ಆನಂದ ಬಣ್ಣಿಸಲಸದಳ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೀಮನವಾರೆ ಗುಡ್ಡದ ಸುಂದರ ಚಿತ್ರಣ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಮಳೆ ಬೀಳುವ ಪ್ರದೇಶ ಎನ್ನುವ ಖ್ಯಾತಿಯನ್ನು ಗಳಿಸಕೊಂಡಿರುವ ಸಿದ್ದಾಪುರ ತಾಲೂಕಿನ ನಿಲ್ಕುಂದದ ಫಾಸಲೆಯಲ್ಲಿಯೇ ಇರುವ ಸುಂದರ ಸ್ಥಳ ಭೀಮನವಾರೆಗುಡ್ಡ. ಸೂರ್ಯೋದಯ ಹಾಗೂ ಸೂರ್ಯಾಸ್ತ ಕಣ್ಣು ತುಂಬಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳ. ಪಶ್ಚಿಮ ಘಟ್ಟದ ಕೊಟ್ಟ ಕೊನೆಯಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ ಕರಾವಳಿ ಭಾಗದ ದೂರದೂರದ ಚಿತ್ರಣ ಕಣ್ಣಿಗೆ ತುಂಬುತ್ತದೆ. ಕೆಳಗಿನ ಆಳದಲ್ಲೆಲ್ಲೋ ಅಂಗೈನ ರೇಖೆಗಳ ಆಕಾರದಲ್ಲಿ ಹರಿದು ಹೋಗುವ ಅಘನಾಶಿನಿ ನದಿಯಂತೂ ಮನಸ್ಸಿನಲ್ಲಿ ಸಂತಸಕ್ಕೆ ರೆಕ್ಕೆ ಕಟ್ಟುತ್ತದೆ.
ನೆರಳು ಬೆಳಕಿನ ಚಿತ್ತಾರ
ದ್ವಾಪರಯುಗದಲ್ಲಿ ವನವಾಸದಲ್ಲಿದ್ದ ಪಾಂಡವರು ಈ ಪ್ರದೇಶದಲ್ಲೆಲ್ಲ ಸುತ್ತಾಡಿದ್ದರಂತೆ. ಆಗ ಭುಜಬಲ ಪರಾಕ್ರಮಿ ಭೀಮ ಈ ಸ್ಥಳದಲ್ಲಿ ಒಂದು ವಾರೆಯಾಗಿ ಮಲಗಿ ವಿಶ್ರಮಿಸಿದ್ದನಂತೆ. ಆ ಕಾರಣಕ್ಕಾಗಿಯೇ ಈ ಸ್ಥಳಕ್ಕೆ ಭೀಮನವಾರೆ ಗುಡ್ಡ ಎನ್ನುವ ಹೆಸರು ಬಂದಿದೆ. ಭೀಮ ಮಲಗಿದ್ದ ಎನ್ನುವುದಕ್ಕೆ ಕುರುಹು ಎಂಬಂತೆ ಭೂಮಿಯ ಮೇಲೆ ಮಡಿಕೆ ಮಡಿಕೆಗಳೆದ್ದಿವೆ. ತಲೆದಿಂಬಿನಂತಹ ರಚನೆ ಮೇಲಕ್ಕೆದ್ದು ವಿಸ್ಮಯವನ್ನು ಹುಟ್ಟಿಸುತ್ತದೆ. ಭೀಮನವಾರೆಗುಡ್ಡದ ತುತ್ತ ತುದಿಯಲ್ಲಿ ನಿಂತರೆ ಬೀಸಿ ಬರುವ ಅಬ್ಬರದ ಗಾಳಿಯಂತೂ ಎದೆಯೊಳಗೆ ತಲ್ಲಣವನ್ನು ಮುಡಿಸುವಂತದ್ದು. ಅಕ್ಕಪಕ್ಕದಲ್ಲಿ ಪ್ರಪಾತ ನಡುವೆ ಕಾಲು ಹಾದಿಯಷ್ಟೇ ಇರುವ ಗುಡ್ಡವಂತೂ ನೋಡಿದಷ್ಟೂ ಖುಷಿಯನ್ನು ಕೊಡುತ್ತದೆ.
ಭೀಮನಗುಡ್ಡದ ಸುತ್ತಮುತ್ತ ದಟ್ಟವಾದ ಕಾಡಿದೆ. ಗುಡ್ಡದ ತುದಿಯಲ್ಲಿ ನಿಂತುಕೊಂಡರೆ ಕೆಳಭಾಗದಲ್ಲಿ ಜಲಪಾತ ಧುಮ್ಮಿಕ್ಕುವ ಸದ್ದು ಕಿವಿಗಪ್ಪಳಿಸುತ್ತದೆ. ಕರಾವಳಿ ಪ್ರದೇಶವನ್ನು ಆವರಿಸಿರುವ ಮಂಜು, ಊದ್ದಕ್ಕೆ ಅಂಕುಡೊಂಕಾಗಿ ಹರಿದು ಹೋಗಿರುವ ಅಘನಾಶಿನಿ ನದಿ, ತಲವಾರಿನಲ್ಲಿ ಕಡಿದಂತೆ ಚೂಪಾಗಿರುವ ಗುಡ್ಡಗಳು ನೋಡಿದಷ್ಟೂ ನೋಡಬೇಕು ಎನ್ನಿಸುತ್ತದೆ. ಮುಂಜಾನೆ 6 ಗಂಟೆಗೆಲ್ಲ ಭೀಮನವಾರೆ ಗುಡ್ಡವನ್ನು ತಲುಪಿದರಂತೂ ಸೂರ್ಯೋದಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಕರ್ನಾಟಕದಲ್ಲಿ ಆಗುಂಬೆಯ ಸೂರ್ಯೋದಯ, ಸೂರ್ಯಾಸ್ತ ಹೆಸರುವಾಸಿ. ಅದಕ್ಕೆ ಸಾಟಿಯಾಗುವಂತಹ ಸೌಂದರ್ಯ ಭೀಮನವಾರೆಗುಡ್ಡದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಸುಂದರ ತಾಣವನ್ನು ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೆಳಗಿನ ಜಾವದಲ್ಲಿ ಗುಡ್ಡವನ್ನೇರುತ್ತಾರೆ. ಜೊತೆ ಜೊತೆಯಲ್ಲಿಯೇ ಸಂಜಯಾಗುವುದನ್ನೇ ಕಾಯುತ್ತ ಸೂಯರ್ಾಸ್ತವನ್ನು ನೋಡಿ ಆನಂದಿಸುತ್ತಾರೆ. ಭೀಮನವಾರೆ ಗುಡ್ಡವನ್ನು ನೋಡಲು ಆಗಮಿಸುವ ಪ್ರವಾಸಿಗರು ಹತ್ತಿರದಲ್ಲಿಯೇ ಇರುವ ಉಂಚಳ್ಳಿ ಜಲಪಾತ, ವಾಟೆಹೊಳೆ ಜಲಪಾತ, ನಿಲ್ಕುಂದದ ಪ್ರಾಚೀನ ದೇವಾಲಯ ವೀಕ್ಷಣೆ ಮಾಡಬಹುದಾಗಿದೆ. 10 ಕಿ.ಮಿ ಅಂತರದಲ್ಲೇ ಇರುವ ಲಕ್ಕಿಕುಣಿ ಬೆಟ್ಟ, ಬೆಣ್ಣೆಹೊಳೆ ಜಲಪಾತ, ಮಂಜುಗುಣಿ ದೇವಾಲಯಗಳನ್ನೂ ನೋಡಬಹುದಾಗಿದೆ. ಈ ಪ್ರಸಿದ್ಧ ತಾಣಕ್ಕೆ ಆಗಮಿಸುವವರು ಸಿದ್ದಾಪುರಕ್ಕೆ ಆಗಮಿಸಿ ಹಾರ್ಸಿಕಟ್ಟಾ ಹೆಗ್ಗರಣಿಯ ಮೂಲಕ ಬರಬಹುದಾಗಿದೆ. ಹುಬ್ಬಳ್ಳಿ ಭಾಗದ ಪ್ರವಾಸಿಗರು ಶಿರಸಿ-ಅಮ್ಮೀನಳ್ಳಿ ಮೂಲಕ ಭೀಮನಗುಡ್ಡವನ್ನು ತಲುಪಬಹುದಾಗಿದೆ. ಮಂಗಳೂರು ಭಾಗದವರು ಕುಮಟಾದಿಂದ ಬಂಡಲಕ್ಕೆ ಆಗಮಿಸಿ ಅಲ್ಲಿಂದ ಭೀಮನವಾರೆಗುಡ್ಡ ತಲುಪಬಹುದಾಗಿದೆ. ಶಿರಸಿಯಿಂದ 33 ಕಿ.ಮಿ, ಸಿದ್ದಾಪುರದಿಂದ 45 ಕಿ.ಮಿ ಹಾಗೂ ಕುಮಟಾದಿಂದ 60 ಕಿ.ಮಿ ದೂರದಲ್ಲಿ ಈ ಸುಂದರ ಸ್ಥಳವಿದೆ.
ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪರಿಸರವನ್ನು ಹಾಳುಗೆಡವುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡುವುದು, ತಿನ್ನಲು ತಂದ ತಿಂಡಿಗಳನ್ನು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಭೀಮನಗುಡ್ಡದಲ್ಲಿ ನಿರ್ಮಾಣ ಮಾಡಿರುವ ವೀಕ್ಷಣಾ ಗೋಪುರದಲ್ಲಿ ಫೈರ್ ಕ್ಯಾಂಪ್ ಮಾಡುವ ಮೂಲಕ ಅದನ್ನು ಹಾಳುಮಾಡುತ್ತಿದ್ದರೆ ಗೋಪುರದ ಗೋಡೆಗಳ ಮೇಲೆ ತಮ್ಮ ವಿಕಾರ ಅಕ್ಷರಗಳನ್ನು ಬರೆಯುವ ಮೂಲಕ ಅಂದಗೆಡಿಸುತ್ತಿದ್ದಾರೆ. ಈ ತಾಣದ ಸುತ್ತಮುತ್ತ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಭೀಮನಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇಂತಹ ಕಾರ್ಯಗಳನ್ನು ನಿಲ್ಲಿಸಬೇಕಾಗಿದೆ. ನಿಸರ್ಗದ ಮಡಿಲಿನಲ್ಲಿರುವ ಸುಂದರ ಪ್ರದೇಶದ ಅಂದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸಿಗರ ಮೇಲಿದೆ. ನಮ್ಮದೇ ನಾಡಿನ ಭಾಗವನ್ನು ಸುಂದರವಾಗಿ ಇಟ್ಟುಕೊಳ್ಳುವ ಕಾರ್ಯವೂ ನಡೆಯಬೇಕಾಗಿದೆ.

Thursday, October 30, 2014

ಒಪ್ಪಿಬಿಡು ಮನವೇ

(ಚಿತ್ರ : ವಿನಾಯಕ ಹೆಗಡೆ)
ಒಪ್ಪಿಬಿಡು ಮನವೇ ನೀ
ನನ್ನೊಡಲ ಪ್ರೀತಿಯಾ
ತೊರೆಯದಿರು ಜೊತೆ ನೀನು
ನನ್ನೊಡಲ ಬುತ್ತಿಯಾ |

ನೀನಿರುವೆ ನನ ಪ್ರಾಣ
ಸಕಲ ಜೀವವೂ ನೀನು
ನನ್ನ ಬಾಳೆಲೆಯ ನವ
ಚೈತ್ರದುಸಿರು ನೀನು |

ನಾನು ನಿನ್ನಯ ಪ್ರೇಮಿ
ಜೊತೆ ಬಾಳ್ವೆ, ನಿನ್ನ ಹಿತ
ಬಾಳು ಕರಗುವ ಮುನ್ನ
ಒಮ್ಮೆ ಒಪ್ಪಿಬಿಡು ಮನವೇ |

ಕಳೆದಿರಲಿ ಹಳೆ ದುಃಖ
ಮೂಡಿ ಬರಲೀ ಪ್ರೀತಿ
ನನ್ನ ನೀನೊಪ್ಪಿದೊಡೆ
ಬಾಳ್ವೆ ಪೂರಾ ಸ್ವಾತಿ ||

***
(ಈ ಕವಿತೆಯನ್ನು ಬರೆದಿರುವುದು 01-11-2006ರಂದು ದಂಟಕಲ್ಲಿನಲ್ಲಿ)

Monday, October 27, 2014

ಮುರೇಗಾರ್ ಸಮಸ್ಯೆಗೆ ಮುಕ್ತಿ ಎಂದು?

(ಮುರೇಗಾರ್ ಜಲಪಾತ)

          ಶಿರಸಿ ತಾಲೂಕಿನ ಸಾಲ್ಕಣಿ ಗ್ರಾ.ಪಂ ವ್ಯಾಪ್ತಿಯ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಅಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಈ ಊರುಗಳನ್ನು ಬಾಧಿಸುತ್ತಿದೆ.
ಶಿರಸಿಯನ್ನು ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಎಂದು ಕರೆಯಲಾಗುತ್ತದೆ. ಈ ತಾಲೂಕಿನ ಸಾಲ್ಕಣ ಪಂಚಾಯತ ವ್ಯಾಪ್ತಿಯಲ್ಲಿರುವ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಮರ್ಪಕ ರಸ್ತೆ ಸಂಚಾರದಿಂದ ಬವಣೆ ಎದುರಿಸುವಂತಾಗಿದೆ. ಮುರೇಗಾರ್, ಹುಡ್ಲೇಜಡ್ಡಿ, ದುಗ್ಗುಮನೆ, ಶಿರ್ಲಬೈಲ್, ಮಳ್ಳಿಕೈ ಈ ಮುಂತಾದ ಊರುಗಳಿಗೆ ತೆರಳುವ ರಸ್ತೆ ತೀವ್ರವಾಗಿ ಹಾಳಾಗಿದ್ದು ಸಂಚಾರ ಅಸಾಧ್ಯ ಎನ್ನುವಂತಾಗಿದೆ.
ಶಿರಸಿಯಿಂದ ಸಾಲ್ಕಣಿಗೆ ತೆರಳುವ ಮುಖ್ಯ ರಸ್ತೆಯಿಂದ 5 ಕಿ.ಮಿ ಅಂತರದಲ್ಲಿ ಈ ಎಲ್ಲ ಊರುಗಳಿವೆ. ಈ ಊರಿಗೆ ತೆರಳಲು ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಡಾಂಬರು ರಸ್ತೆ ಈಗಾಗಲೇ ಕಿತ್ತು ಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ಮಾರ್ಗದಲ್ಲಿ ಸಂಚಾರ ಮಾಡುವವರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಈ ಮಾರ್ಗದಲ್ಲಿ ಸಿಗುವ ಘಟ್ಟ ಪ್ರದೇಶದಲ್ಲಂತೂ ಡಾಂಬರು ರಸ್ತೆಯನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು ಯಾವ ಕ್ಷಣದಲ್ಲಿ ವಾಹನವನ್ನು ಪಂಚರ್ ಮಾಡುತ್ತದೆಯೋ ಎನ್ನುವ ಭಯದಿಂದಲೇ ಸಾಗಬೇಕಾಗಿದೆ. ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ. ಹೊಂಡದ ಆಳವನ್ನರಿಯೇ ಮುಂದೆ ಸಾಗುವವರು ಬಿದ್ದ ಉದಾಹರಣೆಗಳೂ ಇದೆ.
ಈ ರಸ್ತೆಯನ್ನು 2004ರಿಂದ 2006ರ ಅವಧಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಿದ ದಶಕಗಳು ಕಳೆಯುವಲ್ಲಿಯೇ ಸಂಪೂರ್ಣ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ತೋರಿಸುತ್ತದೆ. ಈ ವರ್ಷ ಈ ರಸ್ತೆ ಮರುಡಾಂಬರೀಕರಣಕ್ಕಾಗಿ 1.5 ಲಕ್ಷ ರು. ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದಾಗಿ 200ಕ್ಕೂ ಅಧಿಕ ಮನೆಗಳ 3000ಕ್ಕೂ ಹೆಚ್ಚಿನ ಜನರು ಹಾಳಾದ ರಸ್ತೆಯಲ್ಲಿ ಪ್ರಯಾಸದಿಂದ ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣ ಮಾಡಲಾಗಿತ್ತು. ಇದಕ್ಕಾಗಿ 1.20 ಲಕ್ಷ ರು. ವೆಚ್ಚದಲ್ಲಿ ಅಲ್ಲಲ್ಲಿ ಅಗಲೀಕರಣವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಕೆಲವು ಕಡೆಗಳಲ್ಲಂತೂ ರಸ್ತೆಯ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಕಾಲುವೆಗಳು ಉಂಟಾಗಿವೆ. ದುಗ್ಗುಮನೆ ಸನಿಹದಲ್ಲಿ ಮೋರಿಯೊಂದರ ಪಾಶ್ರ್ವ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮುರೇಗಾರ್ ಜಲಪಾತವನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರು ಈ ಮಾರ್ಗದಲ್ಲಿ ಕಷ್ಟಪಟ್ಟು, ರಸ್ತೆಯನ್ನು ಹಳಿಯುತ್ತ ಪ್ರಯಾಣ ಮಾಡುತ್ತಿದ್ದಾರೆ. ಹೊಂಡಮಯ ರಸ್ತೆಯಿಂದಾಗಿ ಹೈರಾಣಾಗುತ್ತಿದ್ದಾರೆ.
(ಹಾಳು ರಸ್ತೆ)
ಸಾಲ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಮುರೇಗಾರ್ ಹಾಗೂ ಸುತ್ತಮುತ್ತಲ ಊರುಗಳಿಗೆ ಸಾಲ್ಕಣಿ ಸಮೀಪದ ಟಿ.ಸಿ.ಯಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಕತ್ತಲೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಪದೇ ಪದೆ ಟಿ.ಸಿ. ಹಾಳಾಗುತ್ತದೆ. ವಿದ್ಯುತ್ ಮಾರ್ಗದಲ್ಲಿ ದೋಷ ಸಂಭವಿಸುತ್ತದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಹೆಸ್ಕಾಂ ಈ ಭಾಗದ ಕಡೆಗೆ ಗಮನ ಹರಿಸುತ್ತಿಲ್ಲ. ಹುಲೇಕಲ್, ಸಾಲ್ಕಣಿ ಭಾಗದಲ್ಲಿರುವ ಲೈನ್ಮನ್ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಆ ಕಡೆಗೆ ಆಗಮಿಸುವುದೇ ಇಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಒಮ್ಮೆಯೂ ಈ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಗ್ರಾಮಸ್ಥರೆ ಸರಿಪಡಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದಾಗಿ ಮುರೇಗಾರ್, ದುಗ್ಗುಮನೆ, ಶಿರ್ಲಬೈಲ್, ಹುಡ್ಲೆಜಡ್ಡಿ, ಮಳ್ಳಿಕೈ ಈ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೇ ಸ್ಥಳೀಯರೇ ಸರಿಪಡಿಸಿಕೊಳ್ಳುತ್ತಿದ್ದಾರೆ.
ಶಿರಸಿಯಿಂದ ಕೇವಲ 22 ಕಿ.ಮಿ ದೂರದಲ್ಲಿರುವ ಈ ಗ್ರಾಮಗಳಲ್ಲಿ ಸಮಸ್ಯೆಗಳು ಜ್ವಲಂತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಲ್ಕಣಿ, ಹುಲೇಕಲ್ ಅಥವಾ ಶಿರಸಿಗೆ ಆಗಮಿಸುವ ಅನಿವಾರ್ಯತೆಯಿದೆ. ಆದರೆ ರಸ್ತೆ ಸಮರ್ಪಕವಾಗಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಈ ಕುರಿತು ಗಮನ ಹರಿಸಿಲ್ಲ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿದೆ. ಈಗಲೂ ಯಾವುದೇ ಜನಪ್ರತಿನಿಧಿಗಳು ತಮ್ಮ ಗೋಳನ್ನು ಕೇಳುತ್ತಿಲ್ಲ. ಪ್ರವಾಸಿ ತಾಣವಾದ ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನೂ ಸರಿಪಡಿಸಲು ಮುಂದಾಗಿಲ್ಲ. ಆ ನೆಪದಲ್ಲಾದರೂ ಈ ಊರುಗಳಿಗೆ ಸರ್ವಋತು ರಸ್ತೆಯಾಗುತ್ತದೆ ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾದ ಅಗತ್ಯವಿದೆ.

***
ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ನಮ್ಮ ಭಾಗದಲ್ಲಿ ತೀವ್ರವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಹಲವಾರು ಸಾರಿ ಅರ್ಜಿ ಅದಕ್ಕೆ ಮನ್ನಣೆ ದೊರಕಿಲ್ಲ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಲೈನ್ಮನ್ ಈ ಭಾಗಕ್ಕೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಆಗಮಿಸುವುದೇ ಇಲ್ಲ. ಸ್ಥಳೀಯರೇ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಸಂಬಂಧಪಟ್ಟವರು ಸರಿಪಡಿಸಬೇಕಾಗಿದೆ.
ರಾಘವೇಂದ್ರ ಎನ್ ನಾಯ್ಕ, ಇಲೆಕ್ಟ್ರಿಕ್ ಕೆಲಸಗಾರ, ಶಿರ್ಲಬೈಲ್


***
(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

Sunday, October 26, 2014

ಬದಲು ಬಯಕೆ

ಇರುಳು ಹಾಯುವ ಹಾದಿಯಲ್ಲಿ
ಒಮ್ಮೆ ಮಾತನು ಆಡುವಾ |
ಸಾವು ಸುಳಿಯುವ ಬದುಕಿನಲ್ಲಿ
ಹಳೆಯ ಸೇಡನು ಮರೆಯುವಾ ||

ಬದುಕಿನಾ ಈ ರೇಖೆಯೊಳಗೆ
ಸೇಡು ಉನ್ನತಿ ಮೆರೆಯುತ್ತಿತ್ತು |
ಎದೆಯ ಆಳದ ಹುಮ್ಮಸ್ಸೆಲ್ಲ
ದ್ವೇಷವಾಗಿಯೇ ಸುರಿಯುತ್ತಿತ್ತು ||

ಈಗ ಹಾದಿಯು ಮಂಜು-ಮಂಜು
ಸ್ವಷ್ಟ ಚಿತ್ರಣ ಇಲ್ಲವೇ |
ನಿನ್ನೆ ಮಾಡಿದ ಕರ್ಮವೆಲ್ಲವೂ
ಮನದ ನೆನಪಲಿ ಉಳಿದಿವೆ ||

ಇನ್ನು ದ್ವೇಷವ ಮರೆತು ನಾವು
ಹೊಸತು ಲೋಕವ ಕಟ್ಟುವಾ |
ದ್ವೇಷ-ಸೇಡಿಗೆ ಅರ್ಥವಿಲ್ಲ
ಎಂದು ಲೋಕಕೆ ಸಾರುವಾ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ ಬರೆದಿದ್ದು, 11-12-2006ರಂದು)

Saturday, October 25, 2014

ದೀಪಾವಳಿ ಆಚಾರ-ವಿಚಾರ

ದೀಪವಾಳಿ ತಯಾರಿ
(ಬಲಿವೇಂದ್ರನನ್ನು ಕೂರಿಸುತ್ತಿರುವುದು)

ದೀಪಾವಳಿ ಹಬ್ಬದ ಸಡಗರ ಮೇರೆ ಮೀರಿದೆ. ದೀಪಗಳ ಹಬ್ಬಕ್ಕೆ ಜನಸಾಮಾನ್ಯರು ಸಂಭ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಿವೇಂದ್ರನ ಪೂಜೆಗಾಗಿ ಮನೆ ಮನೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೊಡ್ಡಹಬ್ಬ ಎಂದೇ ಕರೆಯುತ್ತಾರೆ. ಎಲ್ಲ ಹಬ್ಬಗಳಿಗೂ ಕಿರೀಟವಿಟ್ಟಂತಹ ಹಬ್ಬ ಇದು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ತಮ್ಮನ್ನು ತಾವು ಮರೆತು ಆನಂದಿಸುವಂತಹ ಹಬ್ಬ. ಇಂತಹ ದೀಪಾವಳಿಯ ಸಂಭ್ರಮ ಬುಧವಾರದಿಂದ ಆರಂಭವಾಯಿತು. ಮನೆ ಮನೆಗಳಲ್ಲಿ ಬೂರೆ ಹಬ್ಬ ಎಂದು ಕರೆಯುವ ಈ ದಿನದಂದು ಬೂರೆ ನೀರನ್ನು ಮನೆಯೊಳಕ್ಕೆ ತರುವ ಮೂಲಕ ಹಬ್ಬ ಆರಂಭವಾಗುತ್ತದೆ. ಬೂರೆ ನೀರು ತಂದ ನಂತರ ಬಲಿವೇಂದ್ರನ ಹೋಲಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಮಣೆಯ ಮೇಲೆ ಮಣ್ಣಿನ ಚಿತ್ತಾರ ಬಿಡಿಸಿ ಅದರ ಮೇಲೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಹಾಕಿ, ಅದರ ಬಾಯಿಗೆ ಅಗಲವಾದ ಬಟ್ಟಲನ್ನು ಇಟ್ಟು ಅದರ ಮೇಲೆ ಅಕ್ಕಿಯನ್ನು ಹರವಿ, ತೆಂಗಿನ ಕಾಯಿ ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಜೋಡು ಕೋಡನ್ನು ಹೊಂದಿರುವ ಅಡಿಕೆ ಸಿಂಗಾರದಿಂದ ಬಲೀಂದ್ರ ಮೂರ್ತಿಯನ್ನು ಕೂರಿಸಲಾಗುತ್ತದೆ. ಮೂರ್ತಿಯ ಅಕ್ಕಪಕ್ಕ ಬಲಿತ ಸೌತೆಕಾಯಿ ಹಾಗೂ ಮೊಗೆ ಕಾಯಿಗಳನ್ನು ಇಡಲಾಗುತ್ತದೆ.
(ಗೋಪೂಜೆ)
ಮೂರು ದಿನಗಳ ಕಾಲ ಬಲೀಂದ್ರ ಮೂತರ್ಿಯನ್ನು ಪೂಜೆ ಮಾಡಲಾಗುತ್ತದೆ. ಹಬ್ಬದ ಸರಣಿಯ ಎರಡನೇ ದಿನವಾದ ಗುರುವಾರ ವಾಹನ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯುತ್ತದೆ. ತಮ್ಮ ತಮ್ಮ ಮನೆಯ ವಾಹನಗಳು, ಆಭರಣಗಳನ್ನು ಇಂದು ಪೂಜೆ ಮಾಡಲಾಯಿತು. ವಾಹನಗಳಿಗೆ ಸಿಂಗರಿಸಿ ಸಭ್ರಮಿಸಿದರು. ಮೂರನೇ ದಿನವಾದ ಶುಕ್ರವಾರ ಗೋಪೂಜೆ ನಡೆಯಲಿದೆ. ಶುಕ್ರವಾರದಂದು ಗೋವನ್ನು ಸಿಂಗರಿಸಿ, ಗೋವಿನ ಪೂಜೆ ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ತಯಾರಿಗಾಗಿ ಕಳೆದ ಮೂನರ್ಾಲ್ಕು ದಿನಗಳಿಂದ ಜನರು ಮಾರುಕಟ್ಟೆಗಳತ್ತ ಮುಖಮಾಡಿದ್ದರು. ಅಗತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ತರಕಾರಿಗಳು, ಗೋವೆಕಾಯಿ, ಕಬ್ಬು, ಅಡಿಕೆ ಸಿಂಗಾರ, ಪುಂಡಿ ನಾರಿನ ಹಗ್ಗ, ಗೋವುಗಳ ಕುತ್ತಿಗೆಗೆ ಕಟ್ಟುವ ಗಂಟೆ, ಆಕಾಶಬುಟ್ಟಿ, ಹೂವುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳಲು ಜನಸಾಮಾನ್ಯರು ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಮಾರುಕಟ್ಟೆಗಳಲ್ಲಿಯೂ ಕೂಡ ದೀಪಾವಳಿಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ತರಕಾರಿ ದರದಲ್ಲಿ ಸಾಮಾನ್ಯ ದಿನಕ್ಕಿಂದ 10-20 ರು. ಏರಿಕೆಯಾಗಿದ್ದರೆ, ದವಸ ಧಾನ್ಯಗಳಲ್ಲಿಯೂ ಕೂಡ 5-10 ರು. ಹೆಚ್ಚಳವಾಗಿತ್ತು. ಪುಂಡಿ ನಾರಿನ ಹಗ್ಗಕ್ಕೆ ಜೋಡಿಗೆ 20, 30, 40 ರು. ದರ ನಿಗದಿಯಾಗಿದ್ದರೆ ಹೂವುಗಳ ಬೆಲೆ ಮೊಳಕ್ಕೆ 30 ರಿಂದ 50 ರು. ಮುಟ್ಟಿತ್ತು. ಇದರಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕಿದರು.
(ಎತ್ತ ನೋಡಿದರತ್ತ ಹಣತೆಗಳು)
ಪಟಾಕಿ ಸದ್ದು ಕೂಡ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೂಡ ಪಟಾಕಿ ಸಿಡಿಸುವ ಸಂತಸಕ್ಕೆ ತಡೆಯುಂಟಾಗಿಲ್ಲ. ಮಕ್ಕಳಾದಿಯಾಗಿ ಪಟಾಗಿ ಸಿಡಿಸಿ ಸಂತಸಪಟ್ಟರು. ಪಟಾಕಿ ಸಿಡಿಸುವ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ತರಹೇವಾರಿ ಪಟಾಕಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿಯೂ ಪಟಾಕಿ ಅಬ್ಬರ ಜೋರಾಗಿದೆ. ದೀಪಾವಳಿಯ ಹಬ್ಬ ಧಾಮರ್ಿಕವಾಗಿ ಮಾತ್ರ ಮಹತ್ವವನ್ನು ಪಡೆದುಕೊಂಡಿಲ್ಲ. ಬದಲಾಗಿ ಪರಿಸರ ಸ್ನೇಹಿ ಹಬ್ಬವಾಗಿದೆ. ಪ್ರಕೃತಿ ಮಾತೆಯನ್ನು ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಈ ಹಬ್ಬದಲ್ಲಿ ಊಟೋಪಚಾರ ಮಾಡಿಸಲಾಗುತ್ತದೆ. ಪ್ರಾಣಿಗಳಲ್ಲಿ ದೇವರನ್ನು ಕಾಣಲಾಗುತ್ತದೆ.
ಬೆಳಕಿನ ಹಬ್ಬವೆಂದರೆ ಜೀವನದಲ್ಲಿ ಬೆಳಕನ್ನು ಹೊತ್ತಿಸುವಂತದ್ದು ಎನ್ನುವ ಭಾವನೆ ಹಲವು ಪ್ರದೇಶದಲ್ಲಿದೆ. ಯಾವುದೇ ಮಂಗಲಕಾರ್ಯ ಮಾಡುವುದಿದ್ದರೂ ದೀಪಾವಳಿಯ ನಂತರ ಎನ್ನುವ ನಂಬಿಕೆ ಬಹುತೇಕ ಕಡೆಗಳಲ್ಲಿದೆ. ಹಬ್ಬ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಶೇಂಗಾ ಎಣ್ಣೆ ದೀಪ ಶ್ರೇಷ್ಟವಾದದ್ದು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹಣತೆಯ ದೀಪ ರಾರಾಜಿಸುತ್ತಿದ್ದರೆ ಪಟ್ಟಣಗಳಲ್ಲಿ ವಿದ್ಯುತ್ ದೀಪಗಳ ಆಕಾಶ ಬುಟ್ಟಿಗಳು ತೂಗಾಡುತ್ತವೆ. ವಿದ್ಯುತ್ ದೀಪಗಳ ಅಲಂಕಾರವನ್ನು ಪಟ್ಟಣದ ಮನೆ, ಅಂಗಡಿಗಳಲ್ಲಿ ಕಾಣಬಹುದಾಗಿದೆ.
(ಗೋವುಗಳನ್ನು ಓಡಸುತ್ತಿರುವುದು)
       ಹಬ್ಬ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಸಿಹಿ ಕಡುಬನ್ನು ಮಾಡಿ ತಿನ್ನಿಸಲಾಗುತ್ತದೆ. ಅದೇ ರೀತಿ ಗಂಟೆ, ವಿವಿಧ ನಮೂನೆಯ ದಂಡೆಗಳನ್ನು ಕಟ್ಟುವ ಮೂಲಕ ಗೋವುಗಳ ಶೃಂಗಾರ ಆರಂಭಗೊಳ್ಳುತ್ತದೆ. ಗೋಪೂಜೆ ದಿನವಾದ ಶುಕ್ರವಾರ ಗೋವುಗಳ ಪೂಜೆಯ ಜೊತೆ ವಿಶೇಷವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇನ್ನಷ್ಟು ಅಲಂಕರಿಸಲಾಗುತ್ತದೆ. ಸಾಮೂಹಿಕವಾಗಿ ಗೋವುಗಳ ಶೃಂಗಾರ, ಪೂಜೆ, ಓಟ ಇತ್ಯಾದಿಗಳು ನಡೆಯುತ್ತವೆ. ಅಂದು ಸಂಜೆ ಬಲಿವೇಂದ್ರನನ್ನು ಕಳಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆ ಬೀಳುತ್ತದೆಯಾದರೂ ಬಿದಿಗೆಯ ದಿನ ವಸ್ತ್ರ ಉಡಿಕೆಯ ದಿನ ಅಥವಾ ವಸ್ತೊಳಿಕೆಯ ದಿನ ಎಂದು ಕರೆದು, ಹೊಸ ವಸ್ತ್ರವನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲಿಗೆ ಹಬ್ಬ ಸಂಪೂರ್ಣಗೊಳ್ಳುತ್ತದೆ.

****
ಆಚರಣೆ'
(ಎತ್ತುಗಳ ಸಿಂಗಾರ)

ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಡಗರದಿಂದ ನಡೆಯಿತು. ಮನೆ ಮನೆಗಳಲ್ಲಿ ಗೋವಿನ ಪೂಜೆಯನ್ನು ಮಾಡುವ ಮೂಲಕ ಶಾಸ್ತ್ರ-ಸಂಪ್ರದಾಯ ಸಹಿತವಾಗಿ ಆಚರಿಸಲಾಯಿತು.
ಮುಂಜಾನೆ ಗೋವುಗಳನ್ನು ಸ್ನಾನ ಮಾಡಿಸುವುದರಿಂದ ಆರಂಭಗೊಳ್ಳುವ ಬಲಿಪಾಡ್ಯಮಿಯ ಸಡಗರ ನಿಧಾನವಾಗಿ ರಂಗೇರಿತು. ಅಡಿಕೆ, ಪಚೋಲಿ, ಪುಂಡಿ ನಾರು  ಸೇರಿದಂತೆ ಹಳ್ಳಿಗರೇ ತಯಾರಿಸಿದ ವಿಶಿಷ್ಟ ಬಗೆಯ ಹಾರದಿಂದ ಗೋವುಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಶೇಡಿ ಹಾಗೂ ಕೆಮ್ಮಣ್ಣಿನಿಂದ ಗೋವುಗಳ ಮೈಮೇಲೆ ಚಿತ್ತಾರ ಬರೆಯುವ ಮೂಲಕ ಮತ್ತು ಗೋವುಗಳ ಕೋಡುಗಳಿಗೆ ಕೆಮ್ಮಣ್ಣು-ಶೇಡಿಯ ಬಣ್ಣ ಬಳಿದು ಸಿಂಗರಿಸಲಾಯಿತು. ಗೋ ಮಾತೆಯ ಪೂಜೆಯಲ್ಲಿ ಧನ್ಯತಾ ಭಾವ ಕಂಡುಕೊಂಡ ಆಸ್ತಿಕರು ಮನೆ ಮನೆಗಳಲ್ಲಿ ತಯಾರು ಮಾಡುವ ಹೋಳಿಗೆ, ಕಡುಬು ಸೇರಿದಂತೆ ವಿಶಿಷ್ಟ ತಿನಿಸುಗಳನ್ನೆಲ್ಲ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು. ಗೋವಿನ ರಕ್ಷಣೆಗಾಗಿ ಪಾರಂಪರಿಕವಾಗಿ ಆಚರಿಸುತ್ತ ಬಂದ ಹುಲಿಯಪ್ಪನ ಪೂಜೆಯನ್ನು ಸಾರ್ವತ್ರಿಕವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮನೆಯ ಆಧಾರ ಸ್ಥಂಭವೆಂದೇ ಪರಿಗಣಿಸಲ್ಪಡುವ ಪ್ರಧಾನ ಕಂಬಕ್ಕೂ ಪೂಜೆ ಮಾಡುವ ಸಂಪ್ರದಾಯ ಮಲೆನಾಡಿನ ವಿಶೇಷತೆಗಳಲ್ಲೊಂದಾಗಿದೆ. ತಮ್ಮ ಜಮೀನು ಮನೆಗಳನ್ನು ರಕ್ಷಿಸುವ ಗಣಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸುವುದೂ ಸಹ ಈ ಪ್ರದೇಶದ ವೈಶಿಷ್ಟ್ಯತೆಯಾಗಿದೆ. ಈ ಎಲ್ಲ ಪೂಜೆ ಗಳು ಮುಗಿದ ನಂತರವೇ ಮನೆ ಮನೆಗಳ ಗೋವುಗಳನ್ನು ಬಯಲಿಗೆ ಬಿಡಲಾಗುತ್ತದೆ.
(ಭೂತಪ್ಪನಿಗೆ ಪೂಜೆ)
ಗೋವಿನ ಬಯಲಿನಲ್ಲಿ ಎಲ್ಲರ ಮನೆಗಳಿಂದ ಆಗಮಿಸಿದ ಹಸುಗಳು ಒಂದೆಡೆ ಸೇರುತ್ತವೆ. ಈ ಬಯಲಿನಲ್ಲಿ ಎತ್ತುಗಳನ್ನು ಸಿಂಗರಿಸಿ ಓಡಿಸಲಾಯಿತು. ಓಡುವ ಎತ್ತು, ಹೋರಿಗಳ ಜೊತೆಗೆ ಅವುಗಳ ಮಾಲೀಕರೂ ಓಡಿ ಸಂಭ್ರಮಿಸಿದರು. ನಂತರ ಊರ ಸುತ್ತಮುತ್ತಲೂ ಇರುವ ಚೌಡಿ, ಬೀರಲು, ಜಟಕ, ನಾಗರು ಸೇರಿದಂತೆ ಸಮಸ್ತ ಊರು ರಕ್ಷಣೆ ಮಾಡುವ ದೇವಗಣಗಳನ್ನು ಪೂಜಿಸಲಾಯಿತು. ಮನೆ ಮನೆಗಳಲ್ಲಿ ಆಯುಧಗಳು, ಯಂತ್ರಗಳು, ಹೊಸ್ತಿಲು, ತುಳಸಿ ಕಟ್ಟೆ, ಕೊಟ್ಟಿಗೆ ಈ ಮುಂತಾದವುಗಳಿಗೆಲ್ಲ ಪೂಜೆ ನಿಡುವ ಮೂಲಕ ದೀಪಾವಳಿ ಪ್ರಕೃತಿಯ ಆರಾಧಿಸುವ ಹಬ್ಬ ಎನ್ನುವ ವಿಶೇಷಣಕ್ಕೆ ಪುಷ್ಟಿ ಸಿಕ್ಕಂತಾಯಿತು.
ಸಂಜೆ ತುಳಸಿ ಪೂಜೆಯ ನಂತರ ಬಲಿವೇಂದ್ರನನ್ನು ಕಳಿಸುವ ಸಂಪ್ರದಾಯ ನಡೆಯಿತು. ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜೊಂಜನ್ನು ಹಚ್ಚಿಡುತ್ತಾರೆ. ಮನೆಯಂಗಳದ ವರೆಗೂ ಶಿಂಡ್ಲೇ ಕಾಯಿಯ ಜೊಂಜನ್ನು ಉರಿಸಲಾಗುತ್ತದೆ. ತನ್ಮೂಲಕ ಬೆಳಕಿನ ಹಬ್ಬ ತೆರೆಯೆಳೆಯುತ್ತಿದ್ದಂತೆಯೇ ಬಲಿವೇಂದ್ರನನ್ನು ಮುಂದಿನ ವರ್ಷಕ್ಕಾಗಿಯೂ ಕರೆಯಲಾಯಿತು.
(ಭಾರ ಎತ್ತುವ ಸ್ಪರ್ಧೆ)
             ಹೊಸ ಬಟ್ಟೆಗಳನ್ನು ಧರಿಸುವ ಎಲ್ಲ ವಯೋಮಾನದವರು ಈ ಹಬ್ಬವನ್ನು ಹೊಸ ವರ್ಷವೆನ್ನುವ ನಂಬುಗೆಯಿಂದಲೂ, ಶೃದ್ಧೆಯಿಂದ ಆಚರಿಸುವುದು ವಿಶೇಷವಾಗಿದೆ. ಹಬ್ಬದ ದಿನ ಸಾರ್ವಜನಿಕ ಸ್ಥಳದಲ್ಲಿ ತೆಂಗಿನ ಕಾಯಿ ಒಡೆಯುವ ಜೂಜಾಟ ಸೇರಿದಂತೆ ಹಲವಾರು ವಿಧದ ಸಾಹಸವನ್ನು ಪ್ರದರ್ಶಿಸಬಲ್ಲ ಕ್ರೀಡೆಗಳನ್ನು ಪಣಕ್ಕಿಟ್ಟು ಆಡಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಗಿನ ತನಕವೂ ಜೂಜಾಟಗಳು ನಡೆಯುತ್ತವೆ. ಇಂದಿನ ಜೂಜಾಟಕ್ಕೆ ಬಹುತೇಕ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಮನರಂಜನೆಯು ಪ್ರಾಮುಖ್ಯತೆ ಪಡೆಯುತ್ತದೆ.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ಅಡ್ಕಳ್ಳಿಯಲ್ಲಿ ಬಾರ ಎತ್ತುವ ಸ್ಫಧರ್ೆಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾದಿ ದೀಪಾವಳಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಕಾನಸೂರು, ಕಲ್ಮಟ್ಟಿಹಳ್ಳಿ, ಮಲೆನಳ್ಳಿ, ಕಲ್ಮನೆ, ಅಡ್ಕಳ್ಳಿ, ಸೊಂಡ್ಲಬೈಲ್, ಮುತ್ತಮುರ್ಡ, ಕೋಡಸಿಂಗೆ, ಹಿತ್ಲಕೈ, ಬಾಳಗಾರ್, ದಂಟಕಲ್ ಈ ಮುಂತಾದ ಊರುಗಳ ಯುವಕರು 60 ಕೆ.ಜಿ.ಗೂ ಅಧಿಕ ಭಾರದ ಕಲ್ಲನ್ನು ಎತ್ತಲು ಪ್ರಯತ್ನಿಸಿದರು. ಹಲವು ಈ ಭಾರದ ಕಲ್ಲನ್ನು ಎತ್ತದೇ ಬಸವಳಿದರೆ ಕೆಲವು ಯುವಕರು ಅದನ್ನು ಎತ್ತಲು ಸಫಲರಾದರು. ಭಾರದ ಕಲ್ಲನ್ನು ಎತ್ತಿದ ಯುವಕರು ಕಲ್ಲನ್ನು ಹೊತ್ತುಕೊಂಡೇ ಸ್ಥಳೀಯ ಭೂತಪ್ಪನ ಕಟ್ಟೆಯನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವುದು ವಾಡಿಕೆ. ಹೀಗೆ ಮಾಡಿದ ಯುವಕರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಭಾಗವಹಿಸುವ ಯುವಕರು ಕಲ್ಲನ್ನು ಎತ್ತಲು ವಿಫಲರಾದರೆ ಬಹುಮಾನವನ್ನು ಬರುವ ವರ್ಷಕ್ಕಾಗಿ ಕಾಯ್ದಿರಿಸಲಾಗುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ವೈವಿಧ್ಯತೆಯೊಂದಿಗೆ ಆಟಗಳಲ್ನಡೆದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

**
(ಈ ಎರಡೂ ಲೇಖನಗಳು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ )

Friday, October 24, 2014

ಬೆಂಗಾಲಿ ಸುಂದರಿ-35

(ಬೋಗ್ರಾದ ಖಾಲಿ ಖಾಲಿ ಬೀದಿ)
            ಕಾಣೆಯಾಗಿರುವವನು ವಿನಯಚಂದ್ರನಾದರೂ ಆತನ ಪರಮಾಪ್ತ ಗೆಳೆಯನಾಗಿ ಬದಲಾಗಿದ್ದ ಸೂರ್ಯನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನದೇ ಸಾಮರ್ಥ್ಯ ಬಳಕೆ ಮಾಡಿ ವಿನಯಚಂದ್ರನನ್ನು ಹೇಗೆ ಹುಡುಕಲು ಸಾಧ್ಯ ಎನ್ನುವುದನ್ನೆಲ್ಲ ಪ್ರಯತ್ನಿಸಿದ್ದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಒಟ್ಟಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸೂರ್ಯನ್ ಗೆ ಬಲವಾಗಿ ಅನ್ನಿಸುತ್ತಿತ್ತು. ತಾನೇ ಬಾಂಗ್ಲಾಕ್ಕೆ ಹೋಗಿ ಬಿಡಲಾ ಎಂದೂ ಆಲೋಚಿಸಿದ್ದ. ಆದರೆ ಬಾಂಗ್ಲಾ ನಾಡಿನಲ್ಲಿ ವಿಮಾನ, ರೈಲು, ರಸ್ತೆ, ದೂರವಾಣಿ ಇವೆಲ್ಲ ಹಿಂಸಾಚಾರದಿಂದ ಕಲಸುಮೇಲೋಗರವಾಗಿರುತ್ತವೆ. ಅಸ್ತವ್ಯಸ್ತವಾಗಿರುತ್ತವೆ ಎಂದುಕೊಂಡು ಸುಮ್ಮನಾಗಿದ್ದ. ತಮಿಳುನಾಡಿನ ಸರ್ಕಾರದಲ್ಲಿದ್ದ ರಾಜಕಾರಣಿಗಳು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ವಿನಯಚಂದ್ರ ಖಂಡಿತವಾಗಿಯೂ ಭಾರತಕ್ಕೆ ಮರಳುತ್ತಾನೆ ಎನ್ನುವ ವಿಶ್ವಾಸ ಸೂರ್ಯನದ್ದಾಗಿತ್ತು.
              ವಿನಯಚಂದ್ರ ಭಾರತಕ್ಕೆ ಮರಳುವಲ್ಲಿ ಏನೋ ಸಮಸ್ಯೆಯಾಗಿದೆ. ಆದರೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದುಕೊಂಡ. ಯಾವುದಕ್ಕೂ ಇರಲಿ ಎಂದುಕೊಂಡ ಸೂರ್ಯನ್ ಮಧುಮಿತಾ ಭಾರತದಲ್ಲಿ, ಭಾರತದ ನಿವಾಸಿಯಾಗಿ ಉಳಿಯಲು ಬೇಕಾದ ದಾಖಲೆಪತ್ರಗಳನ್ನು ತಯಾರು ಮಾಡಲು ಹೊರಟಿದ್ದ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾಳೆ ಎನ್ನುವುದನ್ನು ತಪ್ಪಿಸಿ, ಮಧುಮಿತಾ ಭಾರತದ ನಿವಾಸಿ ಎಂದು ತೋರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಸೂರ್ಯನ್ ಕೈಗೊಳ್ಳಲು ಆರಂಭಿಸಿದ್ದ. ಏನೇ ಸಮಸ್ಯೆ ಬಂದರೂ ಅಗತ್ಯದ ದಾಖಲಾತಿ ಪತ್ರಗಳು ಸಹಾಯ ನೀಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ತಮಿಳುನಾಡು ಸರ್ಕಾರದ ಸಚಿವರು ಈ ನಿಟ್ಟಿನಲ್ಲಿ ಸೂರ್ಯನ್ ಸಹಾಯಕ್ಕೆ ಸಂಪೂರ್ಣವಾಗಿ ನಿಂತುಬಿಟ್ಟಿದ್ದರು. ಆದ್ದರಿಂದ ಸೂರ್ಯನ್ ಗೆ ಎಲ್ಲ ರೀತಿಯ ಅನುಕೂಲವೂ ಆಯಿತು.

***

          ರಾತ್ರಿಯಲ್ಲೆಲ್ಲೋ ಎಚ್ಚರಾಯಿತು ಮಧುಮಿತಾಳಿಗೆ. ಚಳಿಯಾಗದಂತೆ ಬೆಚ್ಚಗೆ ಹಿಡಿದಿಡಲು ವಿನಯಚಂದ್ರ ಪ್ರಯತ್ನ ನಡೆಸುತ್ತಿದ್ದ. ಕೊನೆಗೆ ಆಕೆಯನ್ನು ಬೆಚ್ಚಗೆ ತಬ್ಬಿ ಹಿಡಿದು ಕುಳಿತಿದ್ದ. ವಿನಯಚಂದ್ರನ ಮೇಲೆ ಮತ್ತಷ್ಟು ಗೌರವ ಮೂಡಿತು ಮಧುಮಿತಾಳಿಗೆ. ವಿನಯಚಂದ್ರನಿಗೆ ನಿದ್ದೆ ಮಾಡಲು ಹೇಳಿದ ಮಧುಮಿತಾ ತಾನು ಎಚ್ಚರಿರುವುದಾಗಿ ಹೇಳಿದಳು. ಅದಕ್ಕೆ ಪ್ರಾರಂಭದಲ್ಲಿ ವಿನಯಚಂದ್ರ ಒಪ್ಪಲಿಲ್ಲ. ಕೊನೆಗೊಮ್ಮೆ ಹಿತವಾಗಿ ಮುತ್ತು ನೀಡಿ ವಿನಯಚಂದ್ರನನ್ನು ಒಪ್ಪಿಸಿದಳು. ಅಲ್ಲೇ ಮಧುಮಿತಾಳ ಭುಜಕ್ಕೆ ಒರಗಿ ನಿದ್ರಿಸಲು ಆರಂಭಿಸಿದ ವಿನಯಚಂದ್ರ.
         ಮಧುಮಿತಾಳ ಮನಸ್ಸಿನ ತುಂಬ ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದಿದ್ದ ಘಟನೆಗಳು ಸುಳಿದುಬರಲು ಆರಂಭಿಸಿದ್ದವು. ಭಾರತದ ಯಾವುದೋ ಮೂಲೆಯ ಹುಡುಗನ ಪರಿಚಯವಾಗಿ ಆತನನ್ನು ತಾನು ಪ್ರೀತಿಸುತ್ತೇನೆ ಎಂದು ಕನಸಿನಲ್ಲಿಯೂ ಮಧುಮಿತಾ ಅಂದುಕೊಂಡಿರಲಿಲ್ಲ. ವಿನಯಚಂದ್ರನ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಂದ ಬೆಳೆದಿದ್ದು, ನಾಚಿಕೊಂಡು ನಾಚಿಕೊಂಡು ಆತನೇ ಪ್ರೇಮನಿವೇದನೆ ಮಾಡಿದ್ದು, ಇದಕ್ಕೇ ಕಾಯುತ್ತಿದ್ದೆನೋ ಎಂಬಂತೆ ಒಪ್ಪಿಕೊಂಡಿದ್ದು ಎಲ್ಲವೂ ಕಣ್ಣೆದುರು ಸುಳಿಯಿತು. ಅಲ್ಲಿಯವರೆಗೆ ಹಿತವಾಗಿದ್ದ ಬದುಕು ಆ ನಂತರದ ದಿನಗಳಲ್ಲಿ ಏನೆಲ್ಲ ತಿರುವುಗಳನ್ನು ಪಡೆದುಕೊಂಡು ಬಿಟ್ಟಿತಲ್ಲ ಎನ್ನುವುದು ನೆನಪಾಗಿ ಬೆದರಿದಳು ಮಧುಮಿತಾ.
          ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ದಾಳಿಗಳು, ಅದಕ್ಕೆ ಬಲಿಯಾದ ತನ್ನ ಕುಟುಂಬ, ಸಲೀಂ ಚಾಚಾನ ಆತಿಥ್ಯ, ಆತನ ಮುಂದಾಳತ್ವದಲ್ಲೇ ಭಾರತ ತಲುಪಲು ಹೊರಟಿದ್ದು, ಸಲೀಂ ಚಾಚಾನ ನಿಧನ ನಂತರದ ತಮ್ಮ ಬದುಕು ಎಲ್ಲವೂ ನೆನಪಾಗಿ ಕಣ್ಣೀರಿನ ರೂಪದಲ್ಲಿ ಧರೆಗಿಳಿಯಲು ಪ್ರಯತ್ನಿಸಿತು. ತಾನು ಅಳಲಾರಂಭಿಸಿದರೆ ವಿನಯಚಂದ್ರನ ನಿದ್ದೆಗೆಲ್ಲಿ ಭಂಗ ಬರುತ್ತದೆಯೊ ಎಂದುಕೊಂಡ ಮಧುಮಿತಾ ಕಣ್ಣೀರನ್ನು ಒರೆಸಿಕೊಂಡಳು.
(ಬೋಗ್ರಾದಲ್ಲಿರುವ ಒಂದು ಬೌದ್ಧ ಧಾಮ)
          ಇಬ್ಬನಿ ನಿಧಾನವಾಗಿ ಇಳಿಯಲು ಆರಂಭಿಸಿತ್ತು. ಬೆಳಗಿನ ಜಾವವಿರಬೇಕು ಎಂದುಕೊಂಡಳು ಮಧುಮಿತಾ. ಮೂರ್ನಾಲ್ಕು ತಾಸಿನ ಚುಟುಕು ನಿದ್ದೆ ಮಾಡಿದ ವಿನಯಚಂದ್ರ ಎದ್ದ. ಕಣ್ಣು ಮುಚ್ಚಿಕೊಂಡೇ ಮೆಲು ದನಿಯಲ್ಲಿ `ಮಧು..' ಎಂದ.
         `ಹೂಂ..'ಅಂದಳು. `ಹೀಗೆ ಇದ್ದು ಬಿಡೋಣವಾ..?' ಎಂದ. ಮಾತಾಡಲಿಲ್ಲ ಮಧುಮಿತಾ. `ನಿನ್ನ ಭುಜ ಎಷ್ಟೆಲ್ಲ ಮೆತ್ತಗಿದೆ. ಸದಾ ನಿನ್ನ ಭುಜ ಹೀಗೆ ಇರುತ್ತದೆ. ನನ್ನ ತಲೆಗೆ ದಿಂಬಿನಂತೆ.. ಅಂತಾದರೆ ಎಷ್ಟು ಶತಮಾನಗಳಾದರೂ ಹೀಗೆ ಇದ್ದು ಬಿಡೋಣ..' ಎಂದು ತುಂಟತನದಿಂದ ಕೇಳಿದ್ದ. `ಥೂ.. ಹೋಗೋ..ಯಾವಾಗಲೂ ನಿನಗೆ ಇಷ್ಟೇ' ಎಂದಿದ್ದಳು ಅವಳು.
           ಮೂಡಣದಲ್ಲಿ ನೇಸರ ನಿಧಾನವಾಗಿ ಏರಿ ಬರುತ್ತಿದ್ದ. ಬಾನಿನ್ನೂ ಕಿತ್ತಳೆ ವರ್ಣದಿಂದ ರಂಗು ರಂಗಾಗಿ ಕಾಣಲು ಆರಂಭಿಸುತ್ತಿದ್ದಾಗಲೇ ರಾತ್ರಿ ಯಾವ ರೀತಿ ಕಂಪೌಂಡ್ ಗೋಡೆ ಹಾರಿದ್ದರೋ ಅದೇ ದಾರಿಯಲ್ಲಿ ಮರಳಿ ಹೊರಟರು. ರಾತ್ರಿ ಎತ್ತರ ಗೊತ್ತಾಗಿರಲಿಲ್ಲವಾದರೂ ಬೆಳಗಿನ ವೇಳೆಗೆ ಯಾಕೋ ತುಂಬ ಎತ್ತರವಿದೆ ಎನ್ನಿಸಿತು. ಕಂಪೌಂಡ್ ಏರಿದ ವಿನಯಚಂದ್ರ ಮಧುಮಿತಾಳನ್ನು ಹತ್ತಿಸಿಕೊಳ್ಳಲು ಕೈಚಾಚಿದ. ಆಕೆಯ ಭಾರ ತೀವ್ರವಾಗಿ ದಬಾರನೆ ಕೆಳಕ್ಕೆ ಬಿದ್ದ. ಕೊಂಚ ನೋವಾಯಿತು. ಎರಡನೇ ಸಾರಿ ತಾನು ಕಂಪೌಂಡ್ ಏರುವ ಬದಲು ಆಕೆಯನ್ನು ಹಿಡಿದು ಹತ್ತಿಸಿದ. ನಿಧಾನವಾಗಿ ಕಂಪೌಂಡ್ ದಾಟಿಕೊಂಡರು.
        ಬೋಗ್ರಾ ನಗರಿ ಆಗ ತಾನೇ ಮುಂಜಾವಿನ ಸುಖನಿದ್ದೆಯಿಂದ ಎಚ್ಚರವಾಗುತ್ತಿತ್ತು. ಬೀದಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಇವರು ಮುಂದಕ್ಕೆ ಹೊರಡಲೇ ಬೇಕಾಗಿತ್ತು. ಭಾರತದ ಗಡಿಗೆ ಹತ್ತಿರದಲ್ಲಿರುವ ರಂಗಪುರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕಾಗಿತ್ತು. ಬಸ್ಸಿನ ಮೂಲಕ ಸಾಗಲು ಕನಿಷ್ಟ ಆರೆಂಟು ಗಂಟೆಗಳ ಕಾಲ ಪ್ರಯಾಣ ಮಾಡಲೇಬೇಕಾಗಿತ್ತು. ನಡೆಯಲಿಕ್ಕೆ ಹೊರಟರೆ ಮೂರು ದಿನಗಳಾದರೂ ಸಾಗಬೇಕಾಗಿತ್ತು. ವಿನಯಚಂದ್ರ ಮಧುಮಿತಾಳ ಬಳಿ ಈ ವಿಷಯದ ಕುರಿತು ಚರ್ಚೆ ಮಾಡಿದ. ಕಿಸೆಯೊಳಗಿನ ಹಣವನ್ನು ಎಣಿಸಿಕೊಂಡ. ರಂಗಪುರವನ್ನು ತಲುಪಲು ಸಾಕಾಗುವಷ್ಟು ಹಣವಿರಲಿಲ್ಲ. ಮುಂದೇನು ಮಾಡುವುದು ಎನ್ನುವ ಆಲೋಚನೆ ಇಬ್ಬರಲ್ಲೂ ಕಾಡಿತು. ಕೊನೆಗೆ ಮಧುಮಿತಾಳೇ `ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣ.. ಬಸ್ಸಿನಲ್ಲೇ ಆದರೆ ಕಂಡಕ್ಟರನ ಬಳಿ ಕಾಡಿ ಬೇಡಿ ಪ್ರಯಾಣ ಮಾಡೋಣ. ಆತ ನಮ್ಮನ್ನು ಕರೆದೊಯ್ದರೆ ಸರಿ. ಇಲ್ಲವಾದರೆ ಅಲ್ಲೆ ಎಲ್ಲಾದರೂ ಇಳಿದು ನಡೆದು ಹೊರಡೋಣ.. ಏನಂತೀಯಾ..?' ಎಂದಳು. ವಿನಯಚಂದ್ರ ಒಪ್ಪಿಕೊಂಡಿದ್ದ.
         ಬೋಗ್ರಾದ ಬಸ್ಸು ನಿಲ್ದಾಣದ ಕಡೆಗೆ ತೆರಳಿದರು. ಮುಂಜಾವಿನಲ್ಲಿ ಖಾಲಿ ಖಾಲಿಯಾಗಿದ್ದ ಬೋಗ್ರಾದಲ್ಲಿ ನಡೆಯುವುದೆಂದರೆ ವಿಚಿತ್ರ ಖುಷಿಯನ್ನು ನೀಡುತ್ತಿತ್ತು. ಎಲ್ಲಿ ನೋಡಿದರೂ ಜನರಿರಲಿಲ್ಲ. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಸಾಗುತ್ತಿದ್ದವು. ಸೈಕಲ್ ರಿಕ್ಷಾಗಳ ಟ್ರಿಣ್ ಟ್ರೀಣ್ ಸದ್ದು ಕೇಳಿಸುತ್ತಿತ್ತು. ಕೆಲ ಹೊತ್ತಿನಲ್ಲಿಯೇ ಬೋಗ್ರಾ ಬಸ್ಸು ನಿಲ್ದಾಣ ಸಿಕ್ಕಿತು. ಅಲ್ಲಿಗೇ ಹೋಗಿ ಕೆಲ ಹೊತ್ತು ಕಾದರೂ ಬಸ್ಸು ಸಿಗಲಿಲ್ಲ. ಒಂದು ತಾಸಿನ ನಂತರ ಲಡಕಾಸಿ ಬಸ್ಸೊಂದು ನಿಧಾನವಾಗಿ ಬಂದಿತು. ವಿನಯಚಂದ್ರ ಬೇಗನೇ ಬಸ್ಸನ್ನೇರಲು ಹೊರಟವನು ಬಸ್ಸನ್ನು ನೋಡಿ ಕೆಲ ಕಾಲ ಹಿಂದೇಟು ಹಾಕಿದ. ಈ ಬಸ್ಸು ರಂಗಪುರವನ್ನು ತಲುಪಬಲ್ಲದೇ ಎಂದೂ ಆಲೋಚಿಸಿದ. ವಿನಯಚಂದ್ರನ ಮನದಾಳವನ್ನು ಅರಿತಂತೇ ಮಾತನಾಡಿದ ಮಧುಮಿತಾ `ಬಾಂಗ್ಲಾದಲ್ಲಿ ಇದಕ್ಕಿಂತ ಲಡಕಾಸಿ ಬಸ್ಸುಗಳಿವೆ. ದೂರ ದೂರಿಗೆ ಇವುಗಳ ಮೂಲಕವೇ ಪ್ರಯಾಣ ಕೈಗೊಳ್ಳೋದು. ಏನೂ ಚಿಂತೆ ಮಾಡಬೇಡ. ಇದರಲ್ಲೇ ಹೋಗೋಣ..' ಎಂದು ಖಂಡತುಂಡವಾಗಿ ಹೇಳಿದ್ದಳು. ವಿನಯಚಂದ್ರ ಬಸ್ಸನ್ನೇರಿದ್ದ.
       ಖಾಲಿಯಿದ್ದ ಬಸ್ಸು ಹೊರಡುವ ಮುನ್ನ ಬಸ್ಸಿನಲ್ಲಿ ಒಬ್ಬಾತ ಬಾಳೆ ಹಣ್ಣನ್ನು ಮಾರಲು ತಂದಿದ್ದ. ಹೊಟ್ಟೆಗೆ ಸಾಕಾಗುವಷ್ಟು ಹಣ್ಣನ್ನು ತಿಂದರು. ವಿನಯಚಂದ್ರ ಮತ್ತೊಮ್ಮೆ ಜೇಬಿನಲ್ಲಿದ್ದ ಹಣವನ್ನು ಎಣಿಸಿಕೊಂಡ. ಅಷ್ಟರಲ್ಲಿ ಬಸ್ಸಿನ ಕಂಡಕ್ಟರ್ ಬಂದಿದ್ದ. ಕೊನೆಗೆ ಕಂಡಕ್ಟರ್ ಬಳಿ ತನ್ನಲ್ಲಿ ಇರುವ ಹಣದ ಬಗ್ಗೆ ತಿಳಿಸಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯ ತನಕ ಕರೆದೊಯ್ಯಿರಿ ಎಂದ. ಹಣವನ್ನು ಎಣಿಸಿದ ಕಂಡಕ್ಟರ್ `ಪೀರ್ ಗಂಜ್ ವರೆಗೆ ಪ್ರಯಾಣ ಮಾಡಬಹುದು..' ಎಂದು ಹೇಳಿ ಟಿಕೇಟ್ ನೀಡಿದ. `ಪೀರ್ ಗಂಜಿನಿಂದ ರಂಗಪುರ ಎಷ್ಟು ದೂರ..?' ಎಂದು ಕೇಳಿದ ವಿನಯಚಂದ್ರ. `ಬಸ್ಸಿನಲ್ಲಾದರೆ ಎರಡು ತಾಸುಗಳ ಪಯಣ ತಾಸುಗಳ ಪ್ರಯಾಣ..' ಎಂದು ಕಂಡಕ್ಟರ್ ಮುಂದಕ್ಕೆ ತೆರಳಿದ್ದ.
         ಇವರಂದುಕೊಂಡದ್ದಕ್ಕಿಂತ ನಿಧಾನವಾಗಿ ಬಸ್ಸು ತೆರಳಲು ಆರಂಭಿಸಿತು. ಬೋಗ್ರಾದ ಬಸ್ ನಿಲ್ದಾಣದಿಂದ ಬಸ್ಸು ಮುಂದಕ್ಕೆ ಹೊರಡುವ ವೇಳೆಗೆ ಸೂರ್ಯ ಆಗಲೇ ಬಾನಿನ ಮೇಲಕ್ಕೆ ಬರಲು ಆರಂಭಿಸಿದ್ದ. `ಬಾಳೆಹಣ್ಣು ತಿಂದಿದ್ದು ಒಳ್ಳೇದೇ ಆಯ್ತು.. ಇಲ್ಲವಾಗಿದ್ದರೆ ಉಪವಾಸವಿರಬೇಕಿತ್ತು.. ಈ ಬಸ್ಸು ಯಾಕೋ ಬಹಳ ನಿಧಾನ ಹೋಗ್ತಾ ಇದೆ ಕಣೆ ಮಧು..' ಎಂದ ವಿನಯಚಂದ್ರ. `ಹೂಂ..' ಅಂದ ಮಧುಮಿತಾ ಸುಮ್ಮನಾದಳು. ಬಸ್ಸು ಆಮೆಗತಿಯಲ್ಲಿಯೇ ಮುಂದುವರಿಯುತ್ತಿತ್ತು. ಬೋಗ್ರಾದಲ್ಲಿ ನಿಧಾನಕ್ಕೆ ಜನಸಂದಣಿಯೂ ಹೆಚ್ಚಾಗುತ್ತಿತ್ತು. ಮೂರ್ನಾಲ್ಕು ತಿರುವುಗಳನ್ನು ದಾಟಿ ರಂಗಪುರದ ಕಡೆಗೆ ಆಗಮಿಸುವ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಬಹಳಷ್ಟು ಹೊತ್ತು ಸರಿದಿದ್ದವು.

(ಮುಂದುವರಿಯುತ್ತದೆ)