(ಭೀಮನಗುಡ್ದದಲ್ಲಿ ಸೂರ್ಯೋದಯ) |
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಮಳೆ ಬೀಳುವ ಪ್ರದೇಶ ಎನ್ನುವ ಖ್ಯಾತಿಯನ್ನು ಗಳಿಸಕೊಂಡಿರುವ ಸಿದ್ದಾಪುರ ತಾಲೂಕಿನ ನಿಲ್ಕುಂದದ ಫಾಸಲೆಯಲ್ಲಿಯೇ ಇರುವ ಸುಂದರ ಸ್ಥಳ ಭೀಮನವಾರೆಗುಡ್ಡ. ಸೂರ್ಯೋದಯ ಹಾಗೂ ಸೂರ್ಯಾಸ್ತ ಕಣ್ಣು ತುಂಬಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳ. ಪಶ್ಚಿಮ ಘಟ್ಟದ ಕೊಟ್ಟ ಕೊನೆಯಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ ಕರಾವಳಿ ಭಾಗದ ದೂರದೂರದ ಚಿತ್ರಣ ಕಣ್ಣಿಗೆ ತುಂಬುತ್ತದೆ. ಕೆಳಗಿನ ಆಳದಲ್ಲೆಲ್ಲೋ ಅಂಗೈನ ರೇಖೆಗಳ ಆಕಾರದಲ್ಲಿ ಹರಿದು ಹೋಗುವ ಅಘನಾಶಿನಿ ನದಿಯಂತೂ ಮನಸ್ಸಿನಲ್ಲಿ ಸಂತಸಕ್ಕೆ ರೆಕ್ಕೆ ಕಟ್ಟುತ್ತದೆ.
ನೆರಳು ಬೆಳಕಿನ ಚಿತ್ತಾರ |
ಭೀಮನಗುಡ್ಡದ ಸುತ್ತಮುತ್ತ ದಟ್ಟವಾದ ಕಾಡಿದೆ. ಗುಡ್ಡದ ತುದಿಯಲ್ಲಿ ನಿಂತುಕೊಂಡರೆ ಕೆಳಭಾಗದಲ್ಲಿ ಜಲಪಾತ ಧುಮ್ಮಿಕ್ಕುವ ಸದ್ದು ಕಿವಿಗಪ್ಪಳಿಸುತ್ತದೆ. ಕರಾವಳಿ ಪ್ರದೇಶವನ್ನು ಆವರಿಸಿರುವ ಮಂಜು, ಊದ್ದಕ್ಕೆ ಅಂಕುಡೊಂಕಾಗಿ ಹರಿದು ಹೋಗಿರುವ ಅಘನಾಶಿನಿ ನದಿ, ತಲವಾರಿನಲ್ಲಿ ಕಡಿದಂತೆ ಚೂಪಾಗಿರುವ ಗುಡ್ಡಗಳು ನೋಡಿದಷ್ಟೂ ನೋಡಬೇಕು ಎನ್ನಿಸುತ್ತದೆ. ಮುಂಜಾನೆ 6 ಗಂಟೆಗೆಲ್ಲ ಭೀಮನವಾರೆ ಗುಡ್ಡವನ್ನು ತಲುಪಿದರಂತೂ ಸೂರ್ಯೋದಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಕರ್ನಾಟಕದಲ್ಲಿ ಆಗುಂಬೆಯ ಸೂರ್ಯೋದಯ, ಸೂರ್ಯಾಸ್ತ ಹೆಸರುವಾಸಿ. ಅದಕ್ಕೆ ಸಾಟಿಯಾಗುವಂತಹ ಸೌಂದರ್ಯ ಭೀಮನವಾರೆಗುಡ್ಡದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಸುಂದರ ತಾಣವನ್ನು ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೆಳಗಿನ ಜಾವದಲ್ಲಿ ಗುಡ್ಡವನ್ನೇರುತ್ತಾರೆ. ಜೊತೆ ಜೊತೆಯಲ್ಲಿಯೇ ಸಂಜಯಾಗುವುದನ್ನೇ ಕಾಯುತ್ತ ಸೂಯರ್ಾಸ್ತವನ್ನು ನೋಡಿ ಆನಂದಿಸುತ್ತಾರೆ. ಭೀಮನವಾರೆ ಗುಡ್ಡವನ್ನು ನೋಡಲು ಆಗಮಿಸುವ ಪ್ರವಾಸಿಗರು ಹತ್ತಿರದಲ್ಲಿಯೇ ಇರುವ ಉಂಚಳ್ಳಿ ಜಲಪಾತ, ವಾಟೆಹೊಳೆ ಜಲಪಾತ, ನಿಲ್ಕುಂದದ ಪ್ರಾಚೀನ ದೇವಾಲಯ ವೀಕ್ಷಣೆ ಮಾಡಬಹುದಾಗಿದೆ. 10 ಕಿ.ಮಿ ಅಂತರದಲ್ಲೇ ಇರುವ ಲಕ್ಕಿಕುಣಿ ಬೆಟ್ಟ, ಬೆಣ್ಣೆಹೊಳೆ ಜಲಪಾತ, ಮಂಜುಗುಣಿ ದೇವಾಲಯಗಳನ್ನೂ ನೋಡಬಹುದಾಗಿದೆ. ಈ ಪ್ರಸಿದ್ಧ ತಾಣಕ್ಕೆ ಆಗಮಿಸುವವರು ಸಿದ್ದಾಪುರಕ್ಕೆ ಆಗಮಿಸಿ ಹಾರ್ಸಿಕಟ್ಟಾ ಹೆಗ್ಗರಣಿಯ ಮೂಲಕ ಬರಬಹುದಾಗಿದೆ. ಹುಬ್ಬಳ್ಳಿ ಭಾಗದ ಪ್ರವಾಸಿಗರು ಶಿರಸಿ-ಅಮ್ಮೀನಳ್ಳಿ ಮೂಲಕ ಭೀಮನಗುಡ್ಡವನ್ನು ತಲುಪಬಹುದಾಗಿದೆ. ಮಂಗಳೂರು ಭಾಗದವರು ಕುಮಟಾದಿಂದ ಬಂಡಲಕ್ಕೆ ಆಗಮಿಸಿ ಅಲ್ಲಿಂದ ಭೀಮನವಾರೆಗುಡ್ಡ ತಲುಪಬಹುದಾಗಿದೆ. ಶಿರಸಿಯಿಂದ 33 ಕಿ.ಮಿ, ಸಿದ್ದಾಪುರದಿಂದ 45 ಕಿ.ಮಿ ಹಾಗೂ ಕುಮಟಾದಿಂದ 60 ಕಿ.ಮಿ ದೂರದಲ್ಲಿ ಈ ಸುಂದರ ಸ್ಥಳವಿದೆ.
ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪರಿಸರವನ್ನು ಹಾಳುಗೆಡವುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡುವುದು, ತಿನ್ನಲು ತಂದ ತಿಂಡಿಗಳನ್ನು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಭೀಮನಗುಡ್ಡದಲ್ಲಿ ನಿರ್ಮಾಣ ಮಾಡಿರುವ ವೀಕ್ಷಣಾ ಗೋಪುರದಲ್ಲಿ ಫೈರ್ ಕ್ಯಾಂಪ್ ಮಾಡುವ ಮೂಲಕ ಅದನ್ನು ಹಾಳುಮಾಡುತ್ತಿದ್ದರೆ ಗೋಪುರದ ಗೋಡೆಗಳ ಮೇಲೆ ತಮ್ಮ ವಿಕಾರ ಅಕ್ಷರಗಳನ್ನು ಬರೆಯುವ ಮೂಲಕ ಅಂದಗೆಡಿಸುತ್ತಿದ್ದಾರೆ. ಈ ತಾಣದ ಸುತ್ತಮುತ್ತ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಭೀಮನಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇಂತಹ ಕಾರ್ಯಗಳನ್ನು ನಿಲ್ಲಿಸಬೇಕಾಗಿದೆ. ನಿಸರ್ಗದ ಮಡಿಲಿನಲ್ಲಿರುವ ಸುಂದರ ಪ್ರದೇಶದ ಅಂದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸಿಗರ ಮೇಲಿದೆ. ನಮ್ಮದೇ ನಾಡಿನ ಭಾಗವನ್ನು ಸುಂದರವಾಗಿ ಇಟ್ಟುಕೊಳ್ಳುವ ಕಾರ್ಯವೂ ನಡೆಯಬೇಕಾಗಿದೆ.
olleya lekhana ishtaa aaytu
ReplyDelete