(ರಂಗಪುರದ ಬೀದಿ) |
ಅದೊಂದು ಶಿವನ ದೇವಾಲಯ. ಅರ್ಚಕರೇ ಹೇಳಿದ ಪ್ರಕಾರ ಆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆಯಂತೆ. ಬೆಡಿದ್ದನ್ನು ಈಡೇರಿಸುತ್ತಾನೆ ಎಂದೂ ಅರ್ಚಕರು ಹೇಳಿದರು. ಶಿವನಿಗೆ ಅಡ್ಡಬಿದ್ದ ಮಧುಮಿತಾ ವಿನಯಚಂದ್ರರು ಬದುಕಿನಲ್ಲಿ ಸುಖ-ಶಾಂತಿ ಸದಾ ನೆಲೆಸಿರಲಿ, ಮುಮದಿನ ಪ್ರಯಾಣದಲ್ಲಿ ಯಾವುದೇ ವಿಘ್ನಗಳು ಬಾರದೇ ಇರಲಿ ಎಂದು ಬೇಡಿಕೊಂಡರು.
ನಂತರ ಅರ್ಚಕರೊಡನೆ ರಂಗಪುರ ಬಸ್ ನಿಲ್ದಾಣಕ್ಕೆ ತೆರಳಿ ಭಾರತದ ಗಡಿ ಪ್ರದೇಶದಲ್ಲಿ ಇರುವ ಊರಿನ ಕಡೆಗೆ ತೆರಳುವ ಬಸ್ಸಿಗಾಗಿ ಕಾಯುತ್ತ ನಿಂತರು. `ಸಲೀಂ ಚಾಚಾ.. ಭಾರತದ ಗಡಿಯೊಳಕ್ಕೆ ನುಗ್ಗಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಏಜೆಂಟನೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದ. ಆ ಏಜೆಂಟ ನಮ್ಮ ಬಳಿ ರಂಗಪುರಕ್ಕೆ ಬರುವಂತೆ ಹೇಳಿದ್ದ..' ಎಂದು ವಿನಯಚಂದ್ರ ಹೇಳಿದ.
`ಏಜೆಂಟರು.. ಥೂ.. ಅವರನ್ನು ನಂಬಲಿಕ್ಕೆ ಹೋಗಬೇಡಿ. ಅವರಂತೂ ನಿಮ್ಮ ಬಳಿ ಸಿಕ್ಕಾಪಟ್ಟೆ ದುಡ್ಡು ಪಡೆಯುತ್ತಾರೆ. ನಂಬಿದಾಗಲೆಲ್ಲ ಕೈ ಕೊಡುವವರು ಅವರು. ಅವರ ಮೋಸಕ್ಕೆ ಬಲಿಯಾದವರು ಹಲವರಿದ್ದಾರೆ.. ಮೋಸ ಮಾಡುವ ಏಜೆಂಟರ ಸಾಲಿನಲ್ಲಿ ಇವನೂ ಒಬ್ಬನಿರಬೇಕು..' ಎಂದು ಅರ್ಚಕರು ಹೇಳಿ ಸುಮ್ಮನಾದರು.
`ಆದರೆ ಈ ಏಜೆಂಟನನ್ನು ನಾನು ನೋಡಿದ್ದೆ. ಆದರೆ ಹಾಗೆ ಕಾಣಲಿಲ್ಲ. ಸಲೀಂ ಚಾಚಾ ಬೇರೆ ಆತ ಬಹಳ ಒಳ್ಳೆಯವನು.. ಇದುವರೆಗೂ ನೂರಕ್ಕೂ ಹೆಚ್ಚು ಜನರನ್ನು ಭಾರತದೊಳಕ್ಕೆ ಕಳಿಸಿದ್ದಾನೆ ಎಂದೂ ಹೇಳಿದ್ದ..' ಎಂದ ವಿನಯಚಂದ್ರ.
`ಅಯ್ಯೋ.. ಬಾಂಗ್ಲಾದೇಶದಲ್ಲಿ ಭಾರತದ ಗಡಿಯೊಳಕ್ಕೆ ಬಾಂಗ್ಲಾ ನಿವಾಸಿಗಳನ್ನು ಕಳಿಸಲು ದೊಡ್ಡದೊಂದು ಜಾಲವೇ ಇದೆ. ಸಾವಿರಾರು ಜನರು ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರನ್ನು ಭಾರತದೊಳಕ್ಕೆ ಅಕ್ರಮವಾಗಿ ಕಳಿಸಲು ಅವರು ಯಶಸ್ವಿಯೂ ಆಗಿದ್ದಾರೆ. ಹೆಚ್ಚಿನವರು ಭಾರತಕ್ಕೆ ಕಳಿಸುವುದಕ್ಕಾಗಿ ಭಾರಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ಬಹಳ ಜನ ಒಮ್ಮೆ ಹಣ ಪಡೆದ ನಂತರ ನಾಪತ್ತೆಯಾಗುತ್ತಾರೆ. ಸಾವಿರಾರು ಜನರು ಏಜೆಂಟರ ಮೋಸಕ್ಕೆ ಬಲಿಯಾಗಿದ್ದಾರೆ...' ಎಂದರು ಅರ್ಚಕರು.
`ಹೌದಾ..?' ಎಂದು ಅಚ್ಚರಿಯಿಂದ ಕೇಳಿದ ವಿನಯಚಂದ್ರ.
`ಹುಂ.. ಬಾಂಗ್ಲಾ ದೇಶದವರಿಗೆ ಭಾರತ ಎನ್ನುವುದು ಸ್ವರ್ಗ. ಪಕ್ಕದ ದೊಡ್ಡ ರಾಷ್ಟ್ರ ಭಾರತ. ಬಾಂಗ್ಲಾದಂತೆ ಬದುಕು ನರಕವಲ್ಲ. ಇಲ್ಲಿನಂತೆ ಅನಿಶ್ಚಿತತೆಯೂ ಭಾರತದಲ್ಲಿ ಇಲ್ಲ. ಭಾರತದಲ್ಲಿ ರಾಜಕಾರಣಿಗಳು ಓಲೈಕೆ ಮಾಡುತ್ತಾರೆ ಎನ್ನುವುದು ಗೊತ್ತಿರುವ ಸಂಗತಿಯೂ ಹೌದು. ಒಮ್ಮೆ ಭಾರತದೊಳಕ್ಕೆ ಹೋಗಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎನ್ನುವುದು ಇಲ್ಲಿನ ಸಾವಿರಾರು ಜನರ ನಂಬಿಕೆ. ಆ ಕಾರಣಕ್ಕಾಗಿಯೇ ಭಾರತದೊಳಕ್ಕೆ ಹೋಗಲು ಹಾತೊರೆಯುತ್ತಾರೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಾರತೊಳಕ್ಕೆ ನುಸುಳುತ್ತಲೂ ಇದ್ದಾರೆ. ಬಾಂಗ್ಲಾದಲ್ಲೇ ಈ ಕಾರಣಕ್ಕಾಗಿಯೇ ಒಂದು ಜೋಕೂ ಕೂಡ ಇದೆ. `ನಾವಿಬ್ಬರು.. ನಮಗಿಬ್ಬರು.. ಹೆಚ್ಚಿಗೆ ಇದ್ದವರು ಭಾರತಕ್ಕೆ ಹೋದರು..' ಎಂದು ಹೇಳುತ್ತಿರುತ್ತಾರೆ. ಇಂತಹ ನುಸುಳುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡವರು ಭಾರತಕ್ಕೆ ಕಳಿಸುವ ನೆಪದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ..' ಎಂದರು ಅರ್ಚಕರು.
(ರಂಗಪುರದಲ್ಲಿರುವ ಮಹಾಬೋಧಿ ದೇವಸ್ಥಾನ) |
`ಹೌದು.. ಇಂತಹ ಕಾರಣಕ್ಕೇ ಬಾಂಗ್ಲಾದೇಶ ವಿಭಿನ್ನವಾಗಿದೆ. ವಿಚಿತ್ರವೂ ಆಗಿದೆ..' ಎಂದಳು ಮಧುಮಿತಾ.
`ಎಲ್ಲಾ ಸರಿ.. ನೀವೂ ಹಲವರನ್ನು ಭಾರತಕ್ಕೆ ಕಳಿಸಿದ್ದೀನಿ ಎಂದಿರಲ್ಲ.. ಸುಮಾರು ಎಷ್ಟು ಜನರನ್ನು ಭಾರತಕ್ಕೆ ಕಳಿಸಿರಬಹುದು?' ಎಂದು ಕೇಳಿದ ವಿನಯಚಂದ್ರ.
`ನಾನು ಇದುವರೆಗೂ 125 ಜನರನ್ನು ಭಾರತಕ್ಕೆ ಕಳಿಸಿದ್ದೇನೆ. ಅವರೆಲ್ಲರೂ ಹಿಂದೂಗಳೇ. ಅವರೆಲ್ಲ ಭಾರತಕ್ಕೆ ಹೋಗುವಾಗ ಕೇಳುವ ಒಂದೇ ಪ್ರಶ್ನೆಯೆಂದರೆ ನೀವೂ ಭಾರತಕ್ಕೆ ಬನ್ನಿ ಅಂತ. ಆಗ ಅವರ ಬಳಿ ನಾನು ಮತ್ಯಾರಾದರೂ ಹಿಂದೂಗಳು ಭಾರತಕ್ಕೆ ಬರುವವರಿದ್ದರೆ ಅವರನ್ನು ಕಳಿಸಲು ನಾನು ಬರಬೇಕಾಗುತ್ತದೆ ಎಂದು ಹೇಳಿದ್ದೆ. ಈಗ ನೀವೂ ಕೇಳುತ್ತಿದ್ದೀರಿ. ನಿಮಗೂ ನಾನು ಅದೇ ಉತ್ತರವನ್ನು ನೀಡುತ್ತೇನೆ. ಮೊದಲೇ ಹೇಳಿಬಿಡುತ್ತೇನೆ. ನಾನು ಏಜೆಂಟನಲ್ಲ. ನಾನು ದುಡ್ಡಿಗಾಗಿಯೂ ಮಾಡುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಮಾಡುತ್ತೇನೆ. ಬಾಂಗ್ಲಾದಲ್ಲಿ ಹಿಂದೂಗಳು ಹೀನಾಯವಾಗಿ ಸಾಯುತ್ತಿದ್ದಾರೆ. ಅವರ ಬದುಕು ಭಾರತಕ್ಕೆ ಹೋದರೆ ಚನ್ನಾಗಿರುತ್ತದೆ ಎನ್ನುವ ಕಾರಣಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ. ನನ್ನಿಂದಾಗಿ ನೂರಾರು ಜನರು ಬದುಕುತ್ತಾರೆ ಎಂದಾದರೆ ಅಷ್ಟೇ ಸಾಕು..' ಎಂದರು ಅರ್ಚಕರು.
ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಅರ್ಚಕರನ್ನು ಹೆಮ್ಮೆಹಿಂದ ನೋಡಿದರು. ಅಷ್ಟರಲ್ಲಿ ಭಾರತದ ಗಡಿ ಪ್ರದೇಶದಲ್ಲಿರುವ ಬಾಂಗ್ಲಾದ ಹಳ್ಳಿಗಳಿಗೆ ತೆರಳುವ ಬಸ್ಸೊಂದು ಬಂದಿತು. ಅರ್ಚಕರೇ ಮುಂದಾಳುವಾಗಿ ಬಸ್ಸನ್ನೇರಿದರು. ಬಸ್ಸು ಸಾಕಷ್ಟು ಖಾಲಿಯಿತ್ತು. ` ಈ ಬಸ್ಸು ನಾಗೇಶ್ವರಿ ಎನ್ನುವ ಊರಿಗೆ ತೆರಳುತ್ತದೆ. ಸರಿಸುಮಾರು 100 ಕಿ.ಮಿ ದೂರದೊಳಗೆ ನಾವು ಅಲ್ಲಿಗೆ ತೆರಳಬಹುದು. ಆದರೆ ಎರಡು ದೇಶಗಳ ಗಡಿ ಭಾಗವಾದ ಕಾರಣ ಈ ಪ್ರದೇಶದ ರಸ್ತೆಗಳು ತೀರಾ ಕೆಟ್ಟದಾಗಿದೆ. ಹೀಗಾಗಿ ನಾಗೇಶ್ವರಿಯನ್ನು ತಲುಪಲು ಸಾಕಷ್ಟು ಸಮಯ ಸಿಗುತ್ತದೆ..' ಎಂದರು ಅರ್ಚಕರು.
`ಬಾಂಗ್ಲಾದೇಶವೇ ಕೆಟ್ಟದ್ದು. ಅಂತದ್ದರಲ್ಲಿ ಈ ಪ್ರದೇಶ ಇನ್ನೂ ಕೆಟ್ಟದಾಗಿದೆ ಎನ್ನುತ್ತಾರೆ.. ಹೇಗಿದೆಯಪ್ಪಾ..' ಎಂದುಕೊಂಡ ವಿನಯಚಂದ್ರ. ಮಧುಮಿತಾ ಹಿಂದೆ ಹಲವು ಬಾರಿ ರಂಗಪುರಕ್ಕೆ ಬಂದಿದ್ದಳು. ಆದರೆ ರಂಗಪುರದಿಂದ ಮುಂದಕ್ಕೆ ಭಾರತದ ಗಡಿಯವರೆಗೆ ಬಂದಿರಲಿಲ್ಲ. ಹೀಗಾಗಿ ಮುಂದಿನ ಪಯಣ ಅವಳಿಗೂ ಹೊಸದೇ ಆಗಿತ್ತು. ಬೆರಗಿನಿಂದಲೇ ಹೊರಟಳು. ಬಸ್ಸು ಅರ್ಧ ತಾಸಿನ ವಿಶ್ರಮದ ನಂತರ ಹೊರಟಿತು.
ರಂಗಪುರದ ವಾತಾವರಣ ಬಾಂಗ್ಲಾದೇಶದ ಇತರ ಭಾಗಗಳಿಗಿಂತ ಕೊಂಚ ಭಿನ್ನವಾಗಿತ್ತು. ಬಾಂಗ್ಲಾದ ಎಲ್ಲ ಕಡೆಗಳಲ್ಲಿ ಭತ್ತದ ಗದ್ದೆಗಳು ವಿಶಾಲವಾಗಿದ್ದರೆ ರಂಗಪುರದ ಸುತ್ತಮುತ್ತ ಗದ್ದೆಗಳ ಜೊತೆ ಜೊತೆಯಲ್ಲಿ ಕುರುಚಲು ಕಾಡುಗಳಿದ್ದವು. ಬಯಲು ಕಡಿಮೆಯಾಗಿ ಚಿಕ್ಕಪುಟ್ಟ ಗುಡ್ಡಗಳೂ ಕಾಣಿಸಿಕೊಳ್ಳತೊಡಗಿದ್ದವು. ಗುಡ್ಡ ತುಂಬೆಲ್ಲ ಹೇರಳವಾಗಿ ಮರಗಳು ಆವರಿಸಿದ್ದವು. ಅರ್ಧಗಂಟೆಯ ಪ್ರಯಾಣ ನಂತರ ರಂಗಪುರದ ಫಾಸಲೆಯನ್ನು ದಾಟಿ ಬಸ್ಸು ನಾಗೇಶ್ವರಿಯ ಕಡೆಗೆ ತೆರಳಿತು. ರಂಗಪುರದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ದೇವಾಲಯಗಳು ಕಣ್ಣಿಗೆ ಬೀಳುತ್ತಿದ್ದವು. ಅಲ್ಲೊಂದು ಕಡೆ ಭವ್ಯವಾಗಿ ನಿರ್ಮಾಣ ಮಾಡಲಾಗಿದ್ದ ಮಹಾಬೋಧಿ ದೇವಾಲಯವೂ ಕಾಣಿಸಿತು. ಕುತೂಹಲ ತಡೆಯಲಾಗದೇ ವಿನಯಚಂದ್ರ `ಈ ಊರಿನಲ್ಲಿ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಹಾಗಿದೆ.. ದೇವಸ್ಥಾನಗಳು ಸಾಕಷ್ಟು ಕಂಡೆ. ಅಲ್ಲೊಂದು ಕಡೆ ಬೌದ್ಧ ದೇವಾಲಯವೂ ಕಾಣಿಸಿತು..' ಎಂದ.
`ಹೌದು.. ರಂಗಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವ ಪ್ರಮುಖ ಪ್ರದೇಶಗಳಲ್ಲಿ ರಂಗಪುರವೂ ಒಂದು. ಶೆ.10 ರಿಂದ 15ರಷ್ಟು ಹಿಂದೂಗಳಿದ್ದಾರೆ ಇಲ್ಲಿ. ಶೆ.1ರಷ್ಟು ಬೌದ್ಧರೂ ಇದ್ದಾರೆ. ಹಲವಾರು ದೇವಾಲಯಗಳೂ ಇಲ್ಲಿದೆ. ಬೌದ್ಧರ ಪ್ರಮುಖ ಯಾತ್ರಾ ಸ್ಥಳವಾದ ಮಹಾಬೋಧಿ ದೇವಾಲಯ ಇಲ್ಲಿದೆ. ಈ ದೇವಾಲಯಕ್ಕೆ 10 ಶತಮಾನಗಳ ಹಿನ್ನೆಲೆಯಿದೆ.. ಭವ್ಯವಾದ ಈ ದೇವಾಲಯವನ್ನು ನೋಡುತ್ತಿದ್ದರೆ ಮನಸ್ಸಿನಲ್ಲಿ ಅದೇನೋ ಶಾಂತಿ..' ಎಂದರು ಅರ್ಚಕರು.
`ನಾನು ಎಲ್ಲೋ ಕೇಳಿದ್ದೇನೆ. 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ನಡೆದಿತ್ತಂತೆ.. ಆಗ ಬಹಳಷ್ಟು ಹಿಂದೂಗಳನ್ನು ಹತ್ಯೆ ಮಾಡಿದ್ದರಂತೆ.. ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದ್ದರಂತೆ..' ಎಂದು ಕೇಳಿದ ವಿನಯಚಂದ್ರ.
`ಹೌದು.. 1971ರಲ್ಲಿ ನಡೆದ ನಂತರ 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. 2000ದಿಮದಲೂ ನಡೆಯುತ್ತಲೇ ಬಂದಿತ್ತಾದರೂ 2013ರಲ್ಲಿ ತೀವ್ರ ಸ್ವರೂಪ ಕಂಡಿತು. 2013ರಲ್ಲಿ ಬಾಂಗ್ಲಾದೇಶದ ಮುಸ್ಲಿಂ ಧಾರ್ಮಿಕ ಮುಖಂಡರು ಹಿಂದೂಗಳ ದಂಗೆಗೆ ಕರೆ ನೀಡಿದ್ದರು. ಈ ಕಾರಣಕ್ಕಾಗಿಯೇ ದಂಗೆ ನಡೆದು ಅದೆಷ್ಟೋ ಹಿಂದೂಗಳು ಹತ್ಯೆಯಾದರು. ಅವರ ಮನೆಗಳು ಬೆಂಕಿಗೆ ಆಹುತಿಯಾದವು. ದರೋಡೆ ನಡೆಯಿತು. ಮಾನಭಂಗವೂ ಆಯಿತು. ಕೊನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾದಾಗ ರಾಜಕೀಯ ಒತ್ತಡಗಳು ಹೆಚ್ಚಿದ ಕಾರಣ ಬಾಂಗ್ಲಾ ಸರ್ಕಾರ ದಂಗೆಯನ್ನು ತಡೆಯಿತು ಎನ್ನಿ..' ಎಂದರು ಅರ್ಚಕರು.
`ಯಾರು ಈ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ..?'
(ಕಂದುಬಣ್ಣದಲ್ಲಿರುವ ಪ್ರದೇಶಗಳೆಲ್ಲ 2013ರಲ್ಲಿ ಹಿಂದೂಗಳ ಮೇಲೆ ದಾಳಿ ನಡೆದ ಪ್ರದೇಶಗಳು) |
`ಈ ಸಂಗತಿಗಳೆಲ್ಲ ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೀರಲ್ಲ.. ಅದರಲ್ಲೂ ದೇವಸ್ಥಾನಗಳ ಮೇಲೆ ದಾಳಿಯಾಗಿದ್ದು.. ಅವುಗಳ ಹೆಸರನ್ನೆಲ್ಲ ಹೇಳಿದಿರಲ್ಲ.. ನಿಮ್ಮನ್ನು ಮೆಚ್ಚಲೇಬೇಕು..' ಎಂದ ವಿನಯಚಂದ್ರ.
`ಬೇಡ ಬೇಡ ಎಂದರೂ ನೆನಪಿನಲ್ಲಿಯೇ ಇರುತ್ತವೆ ಈ ಎಲ್ಲ ಸಂಗತಿಗಳು. ಬಾಂಗ್ಲಾದೇಶದ ಹಿಂದೂ ದೇವಾಲಯಗಳಲ್ಲಿರುವ ಅರ್ಚಕರನ್ನು ಕೇಳಿದರೆ ಈ ಎಲ್ಲ ವಿಷಯಗಳನ್ನು ನನಗಿಂತ ಸ್ಪಷ್ಟವಾಗಿ ಹೇಳಬಲ್ಲರು. ನಮಗೆಲ್ಲರಿಗೂ ಆ ದಿನಗಳೆಂದರೆ ಬೆಂಕಿಯ ಮೇಲಿನ ನಡಿಗೆಯೇ ಆಗಿತ್ತು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ದೇವಸ್ಥಾನಗಳನ್ನೂ ರಕ್ಷಣೆ ಮಾಡಿಕೊಳ್ಳಬೇಕಲ್ಲ. ಬಹುಶಃ ಆ ದೇವರೇ ಆ ದಿನಗಳಲ್ಲಿ ನಮ್ಮನ್ನು ಕಾಪಾಡಿದ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು. ವಿನಯಚಂದ್ರ ಮೌನವಾಗಿಯೇ ಮಾತು ಕೇಳುತ್ತಿದ್ದ.
`ನೀವು ಹೇಳಿದ ಮಾತುಗಳನ್ನು ಆಲಿಸಿದೆ. ಬಾಂಗ್ಲಾದಲ್ಲಿ ಕಾಳಿ ದೇವಸ್ಥಾನಗಳು ಜಾಸ್ತಿ ಇದ್ದಂತಿದೆಯಲ್ಲ..' ಎಂದ ವಿನಯಚಂದ್ರ.
`ಹೌದು.. ಬಾಂಗ್ಲಾದೇಶ ಮಾತ್ರವಲ್ಲ ನಿಮ್ಮ ಪಶ್ಚಿಮ ಬಂಗಾಳದಲ್ಲೂ ಕೂಡ ಕಾಳಿ ಆರಾಧಕರು ಜಾಸ್ತಿ ಇದ್ದಾರೆ. ಬೆಂಗಾಳಿಗಳೇ ಹಾಗೆ ಕಾಳಿ ಹಾಗೂ ರಾಧಾ-ಗೋವಿಂದರನ್ನು ಆರಾಧನೆ ಮಾಡುತ್ತಾರೆ. ಬೆಂಗಾಲಿಗಳಿಗೆ ಕಾಳಿಯೆಂದರೆ ಅಪಾರ ಪ್ರಿತಿ. ಕಾಳಿ ಓಡಾಡಿದ ನೆಲ ಈ ಪ್ರದೇಶ ಎಂದು ಯಾವಾಗಲೂ ಅಂದುಕೊಳ್ಳುತ್ತಾರೆ. ಸ್ವಾಮಿವಿವೇಕಾನಂದರು, ರಾಮಕೃಷ್ಣ ಪರಮಹಂಸರೆಲ್ಲ ಕಾಳಿ ಆರಾಧನೆ ಮಾಡಿದವರೇ ಅಲ್ಲವೇ? ಅವರೆಲ್ಲ ಬೆಂಗಾಲಿ ನಾಡಿನಲ್ಲಿ ಓಡಾಡಿದವರೇ ಅಲ್ಲವೇ?' ಎಂದು ಹೇಳಿದರು ಅರ್ಚಕರು.
`ಕಾಳಿ ಆರಾಧನೆ.. ಕಾಳಿ ಕರ್ಮಭೂಮಿ ಹೀಗೆ ಅಂದುಕೊಳ್ಳುವುದೇನೋ ಸರಿ. ಈ ಕಾರಣಕ್ಕಾಗಿಯೇ ಈ ನಾಡು ಇಷ್ಟೆಲ್ಲ ರಕ್ತಬಲಿ ಪಡೆಯುತ್ತಿದೆಯೇ? ಕಾಳಿಯೆಂದರೆ ಬಲಿ ಪಡೆಯುವವಳಲ್ಲವೇ? ಈ ನಾಡಿನಲ್ಲಿ ನಡೆಯುವ ರಕ್ತಪಾತ ನೋಡಿದಾಗಲೆಲ್ಲ ನನಗೆ ಹೀಗೆ ಅನ್ನಿಸುತ್ತಿದೆ..' ಎಂದು ಥಟ್ಟನೆ ಹೇಳಿದಳು ಮಧುಮಿತಾ.
`ಇರಬಹುದೇನೋ.. ಈ ನಾಡಿನಲ್ಲಿ ಯಾವಾಗಲೂ ರಕ್ತಪಾತ ನಡೆಯುತ್ತಿರುವುದು ಸುಳ್ಳಲ್ಲ. ಪ್ರಾಚೀನ ಕಾಲದಿಂದಲೂ ನಡೆಯುತ್ತ ಬಂದಿದೆ. ಬ್ರಿಟೀಷರು ಬಂದ ನಂತರ ಇಲ್ಲಿ ಯುದ್ಧಗಳ ಮೂಲಕ ರಕ್ತಪಾತ ಇಮ್ಮಡಿಸಿದರೆ ಭಾರತದಿಂದ ಬೇರ್ಪಟ್ಟ ಬಳಿಕ ರಕ್ತಪಾತ ನೂರ್ಮಡಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು ಅರ್ಚಕರು.
`ಅಪ್ಪ ಯಾವಾಗಲೋ ಹೇಳುತ್ತಿದ್ದರು.. ಬೆಂಗಾಲಿಗಳೆಂದರೆ ಬುದ್ಧಿವಂತರು ಅಂತ.. ಭಾರತದಲ್ಲಿ ಏನೇ ಬದಲಾವಣೆಗಳಿದ್ದರೂ ಮೊದಲು ಬಂಗಾಳದಲ್ಲೇ ಆಗುತ್ತದೆ. ಹೊಸ ಸಾಧ್ಯತೆಗಳಿಗೆ ಬಂಗಾಳ ತೆರೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಎಂತಹ ನಾಡು ಹೇಗಾಗಿಬಿಟ್ಟಿತಲ್ಲ..' ಎಂದು ಗೊಣಗಿದ ವಿನಯಚಂದ್ರ. ಅರ್ಚಕರೂ ಕುಡ ಹೌದೆಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಬಸ್ಸು ಶಹೀದ್ ಬಾಗ್, ಕೌನಿಯಾಗಳನ್ನು ಹಾದು ತೀಸ್ತಾನದಿ ಸೇತುವೆಯ ಬಳಿ ಆಗಮಿಸಿತು.
(ಮುಂದುವರಿಯುತ್ತದೆ..)
Is It a true story
ReplyDeleteಇದು ಕಾದಂಬರಿ..
ReplyDeleteಕಾದಂಬರಿಯ ಪಾತ್ರಗಳು ಕಾಲ್ಪನಿಕ...
ಆದರೆ ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದ ವಿಷಯಗಳು ಮಾತ್ರ ಅಪ್ಪಟ ಸತ್ಯ..
ಬಾಂಗ್ಲಾದೇಶದಲ್ಲಿ ನಡೆದ ಘಟನೆಗಳ ದಾಖಲೆಗಳಲ್ಲಿ ಉಲ್ಲೇಖವಾಗಿದ್ದು