Saturday, November 22, 2014

ಬೆಂಗಾಲಿ ಸುಂದರಿ -40

(ವಿನಯಚಂದ್ರ-ಮಧುಮಿತಾ ದಾಟಿದ ಗಡಿ ಭಾಗದ ಹಳ್ಳ)
             ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಿಂದಾಗಿ ದೂರದಲ್ಲಿ ಮಬ್ಬು ಮಬ್ಬಾಗಿ ಬಾಂಗ್ಲಾ ಹಾಗೂ ಭಾರತದ ನಡುವೆ ಇರುವ ತಡೆಗೋಡೆ ಅಸ್ಪಷ್ಟವಾಗಿ ಕಾಣುತ್ತಿತ್ತು. ರಿಕ್ಷಾವಾಲ ತಾನಿನ್ನು ಮುಂದಕ್ಕೆ ಹೋಗುವುದು ಅಪಾಯವೆಂದೂ ಹೇಳಿದ. ಇಲ್ಲೇ ನಿಲ್ಲುತ್ತೇನೆ ಎಂದು ಹೇಳಿದವನು ದೂರದಲ್ಲಿ ಹರಿಯುತ್ತಿದ್ದ ನದಿಯೊಂದನ್ನು ತೋರಿಸಿದ. ಆ ನದಿಯ ಬಳಿ ಹೋದರೆ ಭಾರತದೊಳಕ್ಕೆ ನುಸುಳಲು ಸುಲಭವಾಗುತ್ತದೆ ಎಂದು ಹೇಳಿದ. ಪುಟ್ಟ ನದಿಯೊಂದು ದೈತ್ಯನದಿಯಾದ ಜಮುನೆಯನ್ನು ಸೇರುವ ಸ್ಥಳ ಅದಾಗಿತ್ತು. ಆ ನದಿಯ ಹತ್ತಿರ ಗಡಿ ಅಸ್ಪಷ್ಟವಾಗಿತ್ತು.
             ಅರ್ಚಕರು ಗಡಿಬಿಡಿ ಬೇಡ ಎಂದು ಸನ್ನೆ ಮಾಡಿದರು. ಗಡಿ ಬೇಲಿಯಿದ್ದ ಸ್ಥಳದಲ್ಲಿ ಸೇನಾಪಡೆಯ ಜವಾನರು ಇದ್ದಂತೆ ಕಾಣಲಿಲ್ಲ. ಅರ್ಚಕರು ಇಳಿದನಿಯಲ್ಲಿ ನದಿಯ ಬಳಿ ಸೈನಿಕರಿರುತ್ತಾರೆ. ಆದರೆ ಇಲ್ಲಿ ಅವರ ಸಮಸ್ಯೆಯಿಲ್ಲ. ಬೇಲಿಯಿರುವ ಕಾರಣ ಸೈನಿಕರ ಸಂಖ್ಯೆ ಕಡಿಮೆಯಿದೆ. ಆದರೆ ಬೇಲಿ ಕಡಿಮೆಯಿರುವಲ್ಲಿ ಸೈನಿಕರು ಜಾಸ್ತಿ ಇರುತ್ತಾರೆ ಎಂದು ಹೇಳಿದರು.
           ಗಡಿಯ ಪರಿಸ್ಥಿತಿಯನ್ನು ಎಷ್ಟು ಸೂಕ್ಷ್ಮವಾಗಿ ಅರ್ಚಕರು ಅರಿತುಕೊಂಡಿದ್ದಾರಲ್ಲ ಎಂದುಕೊಂಡ ವಿನಯಚಂದ್ರ. ದೂರದಿಂದ ನೋಡಿದರೆ ಆರಾಮಾಗಿ ದಾಟಬಹುದು ಎನ್ನಿಸುವಂತಿದ್ದ ಗಡಿ ಪ್ರದೇಶವನ್ನು ದಾಟುವುದು ಅಂದುಕೊಂಡಂತಿರಲಿಲ್ಲ. ಮುಂದಿನ ಹಾದಿಯಂತೂ ಕತ್ತಿಯ ಮೇಲಿನ ನಡುಗೆಯೇ ಆಗಿತ್ತು. ಇಲ್ಲಿಯವರೆಗೆ ಹಾದು ಬಂದಿದ್ದು ಒಂದು ಹೆಜ್ಜೆಯಾದರೆ ಇನ್ನುಮುಂದೆ ಹೋಗಬೇಕಿರುವುದೇ ಮತ್ತೊಂದು ಹೆಜ್ಜೆಯಾಗಿತ್ತು.
            ಮತ್ತಷ್ಟು ಕತ್ತಲಾಯಿತು. ಅರ್ಚಕರು ನಿಧಾನವಾಗಿ ಸನ್ನೆ ಮಾಡಿದರು. ತಮ್ಮನ್ನು ಹಿಂಬಾಲಿಸುವಂತೆ ಹೇಳಿದ ಅರ್ಚಕರು ಮುನ್ನಡೆಯಲು ಆರಂಭಿಸಿದರು. ಅವರ ಹಿಂದೆ ವಿನಯಚಂದ್ರ ಹಾಗೂ ಕೊನೆಯಲ್ಲಿ ಮಧುಮಿತಾ ಇದ್ದರು. 100 ಮೀಟರ್ ಸಾಗುವ ವೇಳೆಗೆ ಅರ್ಚಕರು ವಿನಯಚಂದ್ರನ ಬಳಿ ಗಡಿ ಪ್ರದೇಶದ ಕಡೆಗೆ ಕೈ ತೋರಿಸುತ್ತಾ `ಅದೋ ಅಲ್ಲಿ ನೋಡಿ.. ಆ ಕಡೆ ಚಿಕ್ಕದೊಂದು ದಿಬ್ಬ ಕಾಣುತ್ತದಲ್ಲ. ಅಲ್ಲೊಂದು ಸುರಂಗವಿದೆ. ಸಮಯ ನೋಡಿಕೊಂಡು ಆ ಸುರಂಗ ದಾಟಬೇಕು. ಜಾಗೃತೆಯಾಗಿರು. ಆ ಸುರಂಗದ ಆಚೆಗೆ ಭಾರತೀಯ ಸೈನಿಕರು ಇದ್ದರೂ ಇರಬಹುದು. ಐದು ನಿಮಿಷಕ್ಕೊಮ್ಮೆ ಅಥವಾ ಆ ಸಮಯದೊಳಗೆ ಸರ್ಚ್ ಲೈಟ್ ಸುತ್ತು ಹಾಕುತ್ತದೆ. ಎಚ್ಚರವಿರಲಿ. ನಾನು ಇನ್ನು ಮುಂದಕ್ಕೆ ಬರುವುದು ಸರಿಯಲ್ಲ. ನಾನು ಮಾಡಬೇಕಿರುವ ಕಾರ್ಯ ಸಾಕಷ್ಟಿದೆ. ಹೇಳಲಿಕ್ಕೆ ಮರೆತಿದ್ದೆ ನೋಡಿ. ಇಲ್ಲಿ ಚಿಕ್ಕದೊಂದು ಹಳ್ಳವಿದೆ. ಮೊಳಕಾಲು ಮುಳುಗುವಷ್ಟು ನೀರಿರುತ್ತದೆ. ನಿಧಾನವಾಗಿ, ಸದ್ದಾಗದಂತೆ ದಾಟಿ. 15-20 ಮೀಟರ್ ಅಗಲವಿರಬಹುದು. ಆದರೆ ಆಳವಿಲ್ಲ. ಎಚ್ಚರಿಕೆಯಿಂದ ಹೋಗಿ. ನಿಮಗೆ ಶುಭವಾಗಲಿ..' ಎಂದರು.
          `ಗಡಿಯ ಆಚೆ ಪ್ರದೇಶದಲ್ಲಿ ಅಸ್ಸಾಮ್ ರಾಜ್ಯವಿರುತ್ತದೆ. ಅಲ್ಲಿ ಹೋದವರೇ ಯಾವುದಾದರೂ ಸೈನಿಕರ ಕ್ಯಾಂಪಿಗೆ ತೆರಳು ನಿಮ್ಮ ಸಂಪೂರ್ಣ ವಿವರಗಳನ್ನು ತಿಳಿಸಿ. ಅವರು ನಿಮಗೆ ಸಹಾಯ ಮಾಡಬಹುದು. ಬಹುಶಃ ಗಡಿಯಾಚೆಗೆ ಭಾರತೀಯರು ಉತ್ತಮ ರಸ್ತೆಗಳನ್ನೂ ಮಾಡಿರಬಹುದು. ಸಾಕಷ್ಟು ವಾಹನ ಸಂಚಾರವೂ ಇರಬಹುದು. ಯಾವುದಾದರೊಂದು ವಾಹನ ಹತ್ತಿ ಹತ್ತಿರದ ಗೋಲಕಗಂಜಿಗೋ ಗೌರಿಪಾರಕ್ಕೋ ಹೋಗಿಬಿಡಿ. ಅಲ್ಲಿಂದ ಮುಂದಕ್ಕೆ ನೀವು ನಿಮ್ಮ ಗುರಿಯನ್ನು ತಲುಪಲು ಅನುಕೂಲವಾಗುತ್ತದೆ..' ಎಂದರು.
          ವಿನಯಚಂದ್ರ ಅರ್ಚಕರ ಕೈ ಹಿಡಿದುಕೊಂಡ. ಕಣ್ತುಂಬಿ ಬಂದಂತಾಯಿತು. ಢಾಕಾದಿಂದ ಬಂದವರಿಗೆ ರಂಗಪುರದ ಬಳಿ ಸಂಪೂರ್ಣ ದುಡ್ಡು ಖಾಲಿಯಾಗಿ ಹಸಿವಿನಿಂದ ಕಂಗೆಡಬೇಕಾದ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದರೂ ಅಲ್ಲದೇ ಬಾಂಗ್ಲಾದ ಗಡಿಯ ವರೆಗೆ ಕರೆತಂದು ಬಿಟ್ಟರಲ್ಲ. ಅಷ್ಟರ ಜೊತೆಗೆ ಗಡಿ ದಾಟುವ ಬಗ್ಗೆ ಸಹಾಯ ಮಾಡುತ್ತಲೂ ಇದ್ದಾರೆ ಎಂದುಕೊಂಡ. ಮಧುಮಿತಾಳೂ ಧನ್ಯವಾದಗಳನ್ನು ಹೇಳಿದಳು. ಸರ್ಚ್ ಲೈಟ್ ಸುತ್ತುತ್ತಲೇ ಇತ್ತು. `ಬೇಗ ಹೊರಡಿ..' ಎಂದರು ಅರ್ಚಕರು. ಬೀಳ್ಕೊಟ್ಟು ಮುಂದಕ್ಕೆ ಹೆಜ್ಜೆ ಹಾಕಿದರು ವಿನಯಚಂದ್ರ ಹಾಗೂ ಮಧುಮಿತಾ.
          ಮಧುಮಿತಾಳಿಗಂತೂ ತವರು ಮನೆಯಿಂದ ಬಹುದೂರ ಹೊರಟಂತಾಗಿತ್ತು. ಮತ್ತಿನ್ನು ಬಾಂಗ್ಲಾ ದೇಶಕ್ಕೆ ಬರುವುದು ಅಸಾಧ್ಯ ಎನ್ನುವಂತೆ ಅವಳಿಗೆ ಅನ್ನಿಸುತ್ತಿತ್ತು. ಭಾರತದ ಗಡಿಯತ್ತ ಒಂದೊಂದೇ ಹೆಜ್ಜೆ ಇಟ್ಟಂತೆಲ್ಲ ಬಾಂಗ್ಲಾದೇಶ ಎನ್ನುವ ತಾಯಿನಾಡು ತನ್ನನ್ನು ಶಾಶ್ವತವಾಗಿ ಕಳೆದುಕೊಳ್ಳಲಿದೆಯಾ ಎನ್ನಿಸುತ್ತಿತ್ತು. ಮುನ್ನಡೆದಂತೆಲ್ಲ ಕತ್ತಲು ಮತ್ತಷ್ಟು ಆವರಿಸಿದಂತೆ ಭಾಸವಾಯಿತು. ಕೈಬೀಸಿ ಶುಭಕೋರುತ್ತಿದ್ದ ಅರ್ಚಕರೂ ಕಾಣದಾದರು. ಕುರುಚಲು ಪೊದೆಗಳು, ಹಾಳುಬಿದ್ದ ಗದ್ದೆ ಬಯಲುಗಳು ಕಾಣಿಸತೊಡಗಿದ್ದವು. ಕೆಲ ಕ್ಷಣಗಳಲ್ಲಿ ಚಿಕ್ಕದೊಂದು ಹಳ್ಳ ಎದುರಾಯಿತು. ಅರ್ಚಕರು ಹೇಳಿದಂತೆ ಆ ಹಳ್ಳದಲ್ಲಿ ಮೊಣಕಾಲೆತ್ತರದ ನೀರಿತ್ತು. ನೀರಿನ ಅಡಿಯಲ್ಲಿ ರಾಡಿ ರಾಡಿ ಮರಳಿದ್ದುದು ಸ್ಪಷ್ಟವಾಗುತ್ತಿತ್ತು. ತಣ್ಣಗೆ ಕೊರೆಯುವಂತೆ ಹರಿಯುತ್ತಿದ್ದ ಆ ಹಳ್ಳವನ್ನು ಅರೆಘಳಿಗೆಯಲ್ಲಿ ದಾಟಿದವರೇ ಹಳ್ಳದ ಏರಿ ಹತ್ತುವಷ್ಟರಲ್ಲಿ ಎದುರಿಗೆ ಯಾರೋ ಮಿಸುಕಾಡಿದಂತಾಯಿತು. ಅಯ್ಯೋ ದೇವರೇ ಇದೇನಾಯ್ತು.. ಬಾಂಗ್ಲಾ ಸೈನಿಕನೋ, ಅಥವಾ ಮತ್ತಿನ್ಯಾರೋ ಸಿಕ್ಕಿಬಿಟ್ಟರೆ ಇನ್ನೇನು ಗತಿ.? ಇಷ್ಟೆಲ್ಲ ಮಾಡಿ ಕೊಟ್ಟ ಕೊನೆಯ ಘಳಿಗೆಯಲ್ಲಿ ನಮ್ಮ ಪ್ರಯತ್ನ ವಿಫಲವಾಗಿಬಿಟ್ಟರೆ..? ಎನ್ನುವ ಭಾವಗಳು ಕಾಡಿದವು.
         ಮಿಸುಕಾಡುತ್ತಿದ್ದ ಆ ಆಕೃತಿಗೆ ಕಾಣದಂತೆ ಅಡಗಿಕುಳಿತುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಬಯಲೇ ಇದ್ದಂತೆ ಕಾಣುತ್ತಿತ್ತಾದ್ದರಿಂ ಎಲ್ಲಿ ಅಡಗಿ ಕೂರುವುದು ಎನ್ನುವುದೂ ಸ್ಪಷ್ಟವಾಗಲಿಲ್ಲ. ಎದುರಿನಲ್ಲಿ ಮಿಸುಕಾಡುತ್ತಿದ್ದ ಆ ಆಕೃತಿ ಕೆಲಕಾಲ ದೂರಾದಂತೆ ಮತ್ತೆ ಕೆಲಕಾಲ ಮಧುಮಿತಾ-ವಿನಯಚಂದ್ರ ರಬ್ಬಿಕೊಂಡು ಕುಳಿತ ಸನಿಹದಲ್ಲೇ ಹಾದು ಹೋದಂತೆ ಮಾಡುತ್ತಿತ್ತು. ಹತ್ತಿರಕ್ಕೆ ಹೋದ ಸಂದರ್ಭದಲ್ಲಿ ಮಾತ್ರ ಆ ಆಕೃತಿಯೊಂದು 14-16 ವರ್ಷದ ಪುಟ್ಟ ಹುಡುಗನಂತೆ ಕಾಣಿಸಿತು. ಆತ ಅದೇನು ಮಾಡುತ್ತಿದ್ದನೋ? ಎಲ್ಲಿಗೆ ಹೊರಟಿದ್ದನೋ? ಹೋಗಿದ್ದನೋ ? ಈ ಗಡಿಯಲ್ಲಿ ಅವನಿಗೇನು ಕೆಲಸವೋ ಎಂದುಕೊಂಡ ವಿನಯಚಂದ್ರ. ಎರಡೂ ಕಡೆಯ ಸೈನಿಕರ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಆತನ ದೇಹ ಗುಂಡಿನಿಂದ ಛಿದ್ರ ಛಿದ್ರವಾಗುವುದು ನಿಶ್ಚಿತ ಎನ್ನಿಸಿತು. ಕೆಲ ಸಮಯದ ನಂತರ ಆತ ದೂರಕ್ಕೆ ಸರಿದುಹೋದ.ಇವರು ಮುಂದಕ್ಕೆ ಹೆಜ್ಜೆ ಹಾಕಿದರು.
         ಸರ್ಚ್ ಲೈಟ್ ಪ್ರತಿ ಐದು ನಿಮಿಷಕ್ಕೊಮ್ಮೆ ಬೆಳಕನ್ನು ಬೀರುತ್ತದೆ ಎನ್ನುವುದು ಅರ್ಚಕರು ಹೇಳಿದ ಮಾತು. ಗಮನವಿಟ್ಟು ನೋಡಿದ ವಿನಯಚಂದ್ರನಿಗೆ ಯಾವ ಕ್ಷಣದಲ್ಲಿ ಸರ್ಚ್ಲೈಟಿನ ಬೆಳಕು ಯಾವ ಜಾಗದಲ್ಲಿ ಬೀಳುತ್ತದೆ ಎನ್ನುವುದು ಮನದಟ್ಟಾಯಿತು. ಆ ಬೆಳಕಿನ ಕಣ್ಣಿಗೆ ಬೀಳದಂತೆ ಸಾಗುವುದು ಮುಖ್ಯವಾಗಿತ್ತು. ಅರ್ಚಕರ ಮುಂಜಾಗರೂಕತೆಯಿಂದಾಗಿ ಸರ್ಚ್ಲೈಟಿನ ಪ್ರಭೆಗೆ ಅಷ್ಟಾಗಿ ಸಿಗದಂಹ ಮಣ್ಣಿನ ಬಣ್ಣದ ಬಟ್ಟೆಯನ್ನು ಇಬ್ಬರೂ ತೊಟ್ಟಿದ್ದರು. ಸರ್ಚ್ ಲೈಟ್ ಇಬ್ಬರ ಮೇಲೆ ಬಿದ್ದರೂ ಅಷ್ಟು ತೊಂದರೆಯಾಗಬಾದರು, ಅಥವಾ ಸರ್ಚ್ ಲೈಟ್ ಸಹಾಯದಿಂದ ಸೈನಿಕರು ನೋಡಿದರೂ ತಕ್ಷಣಕ್ಕೆ ಅವರಿಗೆ ಏನೋ ಗೊತ್ತಾಗಬಾದರು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿತ್ತು.
         ಹಳ್ಳವನ್ನು ದಾಟಿದ ತಕ್ಷಣ ಸಿಕ್ಕ ಚಿಕ್ಕ ಬಯಲಂತೂ ಮರಳುಮಯವಾಗಿತ್ತು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳ ತಂದು ಶೇಖರಿಸಿದ ಮರಳು ಅದಾಗಿರಬೇಕು. ಮರಳಿನಾಳದಿಂದ ಧಗೆ ಹೊರಬರುತ್ತಿತ್ತು. ಅದನ್ನು ದಾಟಿ ಮುಂದಕ್ಕೆ ಬಂದ ತಕ್ಷಣ ಮಧುಮಿತಾ ಇದ್ದಕ್ಕಿದ್ದಂತೆ ಬೆಚ್ಚಿದಳು. ಅದನ್ನು ಗಮನಿಸಿದ ವಿನಯಚಂದ್ರ ಸೀದಾ ಹೋಗಿ ಅವಳ ಬಾಯನ್ನು ಮುಚ್ಚಿದ. ಅವಳ ಬಾಯನ್ನು ಹಾಗೆ ಮುಚ್ಚದಿದ್ದರೆ ಅವಳು ಖಂಡಿತ ಕೂಗಿಕೊಳ್ಳುತ್ತಿದ್ದಳು. ಬೆಚ್ಚಿದ ವಿನಯಚಂದ್ರ ಸುತ್ತೆಲ್ಲ ಪರೀಕ್ಷಾ ದೃಷ್ಟಿ ಬೀರಿದ. ಕೆಲ ಘಳಿಗೆಯಲ್ಲೇ ಆತನ ಕಣ್ಣಿಗೆ ಬಾಲಕ ಕಾಣಿಸಿದ. ಹಳ್ಳದ ದಿಬ್ಬವನ್ನು ಏರುವಾಗ ಕಾಣಿಸಿದ್ದ ಬಾಲಕ ಇಲ್ಲಿ ಮತ್ತೆ ಕಾಣಿಸಿದ್ದ. ಅಷ್ಟೇ ಅಲ್ಲದೇ ಆ ಬಾಲಕನ ಕಣ್ಣಿಗೆ ಇಬ್ಬರೂ ಕಾಣಿಸಿಕೊಂಡು ಬಿಟ್ಟಿದ್ದರು. ಇಬ್ಬರಿಗೂ ಒಮ್ಮೆ ದಿಘಿಲಾಯಿತು. ಬಾಲಕನಲ್ಲೂ ಭಯ ಮೂಡಿರುವುದು ಸ್ವಷ್ಟವಾಗಿತ್ತು. ` ಈತ ಸೈನಿಕರಿಗೆ ಮಾಹಿತಿ ವಿನಿಮಯ ಮಾಡುವವನಾಗಿದ್ದರೆ ಏನು ಮಾಡುವುದು..?' ಎನ್ನುವ ಆತಂಕ ಒಮ್ಮೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದೆ ಬೆನ್ನಿನ ಆಳದಲ್ಲಿ ಬೆವರೊಡೆಯಿತು. ಆ ಬಾಲಕನಿಗೆ ಹೊಡೆದು ಎಚ್ಚರತಪ್ಪಿಸಿಬಿಡಲೇ ಎಂದುಕೊಮಡು ಸೀದಾ ಆತನ ಮೇಲೆ ದಾಳಿ ಮಾಡಲು ಮುಂದಾದ.
         ಅಷ್ಟರಲ್ಲಿ ಆ ಬಾಲಕನೇ ಇವರ ಕಾಲಿಗೆ ಬಿದ್ದುಬಿಟ್ಟಿದ್ದ. ಅರ್ಧ ಬೆಂಗಾಲಿಯಲ್ಲಿ ಅರ್ಧ ಉರ್ದುವಿನಲ್ಲಿ ಏನೇನೋ ಹಲುಬುತ್ತಿದ್ದ. ಆತ ಹೇಳಿದ್ದೇನೆಂಬುದು ಸ್ಪಷ್ಟವಾಗಲಿಲ್ಲ. ಆದರೆ ಆ ಬಾಲಕ ಹಾಗೇ ಹಲುಬುತ್ತ ಬಿಡುವುದೂ ಸಾಧ್ಯವಿರಲಿಲ್ಲ. ವಿನಯಚಂದ್ರ ಬಗ್ಗಿ ಆತನ ಬಾಯನ್ನು ಒತ್ತಿ ಹಿಡಿದು `ಶ್..' ಎಂದ. ಕೆಲ ಕ್ಷಣಗಳ ನಂತರ ಆ ಬಾಲಕನಿಗೆ ಅದೇನೆನ್ನಿಸಿತೋ ಅಥವಾ ಆತನಲ್ಲಿದ್ದ ಭಯ ದೂರವಾಯಿತೋ.. ಬಾಯಿಗೆ ಅಡ್ಡಲಾಗಿ ಹಿಡಿದಿದ್ದ ಕೈಯನ್ನು ಬಿಡಿಸಿಕೊಂಡು ಇಳಿದನಿಯಲ್ಲಿ ಮಾತನಾಡತೊಡಗಿದ. ಆತ ಮಾತನಾಡಿದ್ದು ವಿನಯಚಂದ್ರನಿಗೆ ಸಂಪೂರ್ಣ ಅರ್ಥವಾಗಲಿಲ್ಲ. ಆದರೆ ಮಧುಮಿತಾಳಿಗೆ ಅರ್ಥವಾಗಿತ್ತು.
(ಗಡಿ ಭಾಗದ ಗದ್ದೆಗಳು)
         ತಮ್ಮಂತೆ ಅವನೂ ಕೂಡ ಭಾರತದ ಗಡಿಯೊಳಕ್ಕೆ ನುಸುಳು ಬಂದವನಾಗಿದ್ದ. ಮನೆಯಲ್ಲಿ 12 ಜನ ಅಣ್ಣತಮ್ಮಂದಿರು. ಢಾಕಾದಿಂದ ಭಾರತಕ್ಕೆ ಸಾಗಬೇಕು ಎನ್ನುವ ಕಾರಣಕ್ಕಾಗಿಯೇ ಹೇಗೋ ಪಡಿಪಾಟಲು ಪಟ್ಟು ಬಂದಿದ್ದ. ಬಡತನದಿಂದ ಕೂಡಿದ್ದ ಕುಟುಂಬದಲ್ಲಿ ಮಾತು ಮಾತಿಗೆ ಬೈಗುಳಗಳು, ಹೊಡೆತಗಳು ಸಿಗುತ್ತಿದ್ದವು. ಹೊಟ್ಟೆತುಂಬ ಊಟ ಸಿಗುತ್ತಿರಲಿಲ್ಲ. ಮಾತು ಮಾತಿಗೆ ಏಟು ಸಿಗುತ್ತಿದ್ದವು. ಚಿಕ್ಕಂದಿನಲ್ಲೇ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಮನೆಯಲ್ಲಿ ಸದಾಕಾಲ ಬೈಗುಳ ಅಥವಾ ಹೊಡೆತ ತಪ್ಪುತ್ತಿರಲಿಲ್ಲ. ಅಪ್ಪ, ನಾಲ್ಕು ಜನ ಅಮ್ಮಂದಿರು, ಅಣ್ಣಂದಿರು ಇಷ್ಟು ಸಾಲದೆಂಬಂತೆ ಸಂಬಂಧಿಕರೆಲ್ಲ ಬಂದು ಯಥಾನುಶಕ್ತಿ ಹೊಡೆಯುತ್ತಿದ್ದರು. ಹೀಗಿದ್ದಾಗಲೇ ಯಾರೋ ಒಬ್ಬರು ಆತನಿಗೆ ಭಾರತದ ಬಗ್ಗೆ ಹೇಳಿದ್ದರು. ಅಲ್ಲಿಗೆ ಓಡಿಹೋಗಲು ತಿಳಿಸಿದ್ದರು. ಅಷ್ಟಲ್ಲದೇ ಅಲ್ಲಿ ಬದುಕು ಹಸನಾಗುತ್ತದೆ ಎಂಬ ಕನಸನ್ನೂ ಬಿತ್ತಿದ್ದರು. ಆ ಕಾರಣಕ್ಕಾಗಿಯೇ ಮನೆಯಲ್ಲಿ ತಂದೆಯ ದುಡ್ಡನ್ನು ಕದ್ದು ಭಾರತಕ್ಕೆ ಸಾಗಲು ಗಡಿಯ ಬಳಿ ಬಂದಿದ್ದ. ಗಡಿಯ ಬಳಿ ಬಂದವನು ಹೇಗೆ ಹೋಗಬೇಕು ತಿಳಿಯದೇ ಒದ್ದಾಡಲು ಆರಂಭಿಸಿದ್ದ. ಭಾರತದ ಗಡಿಯಲ್ಲಿ ನುಸುಳಲು ಸೂಕ್ತ ಜಾಗವನ್ನು ಹುಡುಕುತ್ತ ಇತ್ತಿಂದತ್ತ, ಅತ್ತಿಂದಿತ್ತ ಅಲೆದಾಡುತ್ತಿದ್ದ. ವಿನಯಚಂದ್ರ-ಮುಧುಮಿತಾರ ಕೈಗೆ ಸಿಕ್ಕುಬಿದ್ದಿದ್ದ.
           ಆತನೇ ಮಧುಮಿತಾಳ ಬಳಿ ಹೇಳಿದಂತೆ ಮೊದಲಿಗೆ ವಿನಯಚಂದ್ರ-ಮಧುಮಿತಾರು ಬಾಂಗ್ಲಾದೇಶದ ಸೈನಿಕರಿರಬೇಕು ಎಂದುಕೊಂಡಿದ್ದನಂತೆ. ಅದೇ ಕಾರಣಕ್ಕೆ ಕೈಕಾಲಿಗೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದ್ದು. ಕೊನೆಗೆ ಯಾವಾಗ ವಿನಯಚಂದ್ರ ಬಾಯನ್ನು ಗಟ್ಟಿಯಾಗಿ ಮುಚ್ಚಿದನೋ ಆಗಲೇ ಇವರೂ ಗಡಿಯಲ್ಲಿ ನುಸುಳಲು ಆಗಮಿಸಿದ್ದು ಎನ್ನುವುದು ಅರಿವಾಗಿ ಸುಮ್ಮನಾಗಿದ್ದ,
           `ನಾನೂ ಭಾರತದೊಳಕ್ಕೆ ಹೋಗಬೇಕು. ನೀವು ಹೋಗುತ್ತಿದ್ದೀರಲ್ಲಾ.. ದಯವಿಟ್ಟು ನನ್ನನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ.. ಈ ನರಕದಲ್ಲಿ ಇದ್ದು ಸಾಕಾಗಿದೆ. ಭಾರತದಲ್ಲಿ ನೀವು ಹೇಳಿದ ಕೆಲಸ ಮಾಡಿಕೊಂಡಿರುತ್ತೇನೆ.. ನನ್ನನ್ನು ಕರೆದೊಯ್ಯಿರಿ..' ಎಂದು ಅಂಗಲಾಚಲು ಆರಂಭಿಸಿದ್ದ. ಮಧುಮಿತಾಳ ಮನಸ್ಸು ಕರಗಲು ಆರಂಭಿಸಿತ್ತು. ಆತನ ಹೆಸರನ್ನು ಕೇಳಿದ್ದಕ್ಕೆ ಪ್ರತಿಯಾಗಿ ಆತ `ಅಮ್ಜದ್..' ಎಂದಿದ್ದ.
          ಆತನ ಬೇಡಿಕೆಯನ್ನು ಮಧುಮಿತಾ ವಿನಯಚಂದ್ರನ ಬಳಿ ತಿಳಿಸಿದಾಗ ಆತ ಕಡ್ಡಿ ತುಂಡುಮಾಡಿದಂತೆ ಬೇಡ ಎಂದಬಿಟ್ಟ. ತಾವಿಬ್ಬರು ಗಡಿಯನ್ನು ಸುರಕ್ಷಿತವಾಗಿ ದಾಟುವುದು ಬಹುಮುಖ್ಯ. ಅಷ್ಟು ಮಾಡಿದ್ದರೆ ಸಾಕಿತ್ತು. ಈ ಬಾಲಕನನ್ನು ಕರೆದೊಯ್ದು ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಾಗಿರಲಿಲ್ಲ. ನೇರವಾಗಿ ಮಧುಮಿತಾಳ ಬಳಿ ಬೇಡವೇ ಬೇಡ ಎಂದುಬಿಟ್ಟಿದ್ದ. ಆಕೆಯೂ ವಿನಯಚಂದ್ರನ ಬಳಿ ಹಲವಾರು ರೀತಿಯಿಂದ ಹೇಳಿ ನೋಡಿದಳು. ಯಾವುದಕ್ಕೂ ವಿನಯಚಂದ್ರ ಜಗ್ಗದಿದ್ದಾಗ ಮಧುಮಿತಾ ಅಮ್ಜದ್ ಬಳಿ ತಿರುಗಿ ವಿನಯಚಂದ್ರ ಹೇಳಿದಂತೆ ಬೇಡವೇ ಬೇಡ ಎಂದಳು. ಮತ್ತೆ ಬೇಡಿಕೊಳ್ಳಲು ಮುಂದಾದ ಆತನಿಗೆ `ತಮ್ಮನ್ನು ಹಿಂಬಾಲಿಸಬೇಡ..' ಎಂದು ತಾಕೀತು ಮಾಡಿ ಮುನ್ನಡೆದರು. ಆತ ಅಂಗಲಾಚುತ್ತಲೇ ಇದ್ದ.
        ಮುಂದಕ್ಕೆ ಸಾಗುವುದು ಸುಲಭವಾಗಿರಲಿಲ್ಲ. ಸರ್ಚ್ ಲೈಟಿನ ಕಣ್ತಪ್ಪಿಸಿ, ನಿಂತು ನಿಂತು ಸಾಗಬೇಕಿತ್ತು. ಹೀಗಾಗಿ ಅವಿತು ಅವಿತು ಮುಂದಕ್ಕೆ ಸಾಗಿದರು. ಮುಂದೆ ಮುಂದೆ ಹೋದಂತೆಲ್ಲ ಭಾರತ-ಬಾಂಗ್ಲಾ ನಡುವಿನ ಗಡಿಬೇಲಿ ಕಾಣಿಸಲಾರಂಭಿಸಿತು. ದೊಡ್ಡದೊಂದು ದಿಬ್ಬ. ದಿಬ್ಬದ ಮೇಲೆ ಮುಳ್ಳಿನ ಬೇಲಿ ಇರುವುದು ಕಾಣಸುತ್ತಿತ್ತು. ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಲ್ಲಿ ಮೂರು ಹಂತದ ಬೇಲಿ ಇರುವುದು ಸ್ಪಷ್ಟವಾಗುತ್ತಿತ್ತು. ಅರ್ಚಕರು ಹೇಳಿದ್ದ ದಿಕ್ಕಿನ ಜಾಡು ಹಿಡಿದವರಿಗೆ ಗಡಿ ಹತ್ತಿರಕ್ಕೆ ಬಂದರೂ ಸುರಂಗವಿರುವುದು ಕಾಣಿಸಲಿಲ್ಲ. ಹಾದಿ ತಪ್ಪಿದ್ದೇವಾ ಎಂದುಕೊಂಡರಾದರೂ ಎರಡು ದೇಶಗಳ ನಡುವಿನ ಬೇಲಿಯಲ್ಲಿ ಕದ್ದು ನುಸುಳಲು ಮಾಡಿದ ಸುರಂಗ ಸುಲಭಕ್ಕೆ ಕಾಣುವುದಿಲ್ಲ ಎನ್ನುವುದು ಅರಿವಾಯಿತು. ಗಡಿಗೆ ಕೆಲವೇ ಮೀಟರು ದೂರವಿದೆ ಎನ್ನುವಾಗ ಸರ್ಚ್ ಲೈಟಿನ ಆಗಮನದ ಅರಿವಾಯಿತು. ಅದರ ಕಣ್ಣಿಗೆ ಬೀಳದೇ ತಪ್ಪಿಸಿಕೊಳ್ಳಬೇಕಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸರ್ಚ್ ಲೈಟ್ ಹತ್ತಿರದಲ್ಲಿದೆ ಎನ್ನುವಾಗ ಪೊದೆಯಂತಹ ಸ್ಥಳವನ್ನು ನೋಡಿ ಅಲ್ಲಿ ಅಡಗಿದರು. ಆ ಪೊದೆಯ ಮೇಲೆ ಹಾದು ಹೋದ ಸರ್ಚ್ ಲೈಟ್ ಬೆಳಕು ಇಬ್ಬರ ಮುಖದ ಮೇಲೂ ಬಿದ್ದಿತು. ಬೆಳಕು ತಮ್ಮಿಂದ ದೂರ ಹೋಗಿದ್ದು ಗೊತ್ತಾದ ತಕ್ಷಣ ವಿನಯಚಂದ್ರ ಜಾಗೃತನಾದ. ಭಾರತದೊಳಕ್ಕೆ ನುಸುಳಲು ಇದ್ದ ಸುರಂಗದ ಬಾಯನ್ನು ಹುಡುಕಲು ನಿಂತ. ಆತನ ಹಿಂದೆ ಮತ್ತೆ ಸದ್ದಾಂತಾಯಿತು. ತಿರುಗಿ ನೋಡಿದರೆ ಮತ್ತದೇ ಬಾಲಕ ನಿಂತಿದ್ದ. ಹಿಂಬಾಲಿಸಬೇಡ ಎಂದು ಹೇಳಿದ್ದರೂ ಹಿಂದೆಯೇ ಬಂದಿದ್ದವನ ಮೇಲೆ ವಿನಯಚಂದ್ರನಿಗೆ ಎಲ್ಲಿಲ್ಲದ ಕೋಪ ಬಂದಿತು. ನಾಲ್ಕು ಏಟು ಇಕ್ಕಿಬಿಡಲೇ ಎಂದುಕೊಂಡನಾದರೂ ಗಡಿಯಲ್ಲಿ ಇಂತದ್ದೊಂದು ಗಲಾಟೆ ಬೇಡ ಎಂದುಕೊಂಡು ಕಷ್ಟಪಟ್ಟು ನಿಯಂತ್ರಿಸಿಕೊಂಡ.
          ಕೆಲಕಾಲದ ಹುಡುಕಾಟದ ನಂತರ ದೊಡ್ಡದೊಂದು ಹೊಂಡ ಕಾಣಿಸಿತು. ಆದರೆ ಈ ಹೊಂಡವೇ ಸುರಂಗವೇ ಎನ್ನುವುದು ಮಾತ್ರ ಸ್ಪಷ್ಟವಾಗಲಿಲ್ಲ. ಕೊನೆಗೆ ಈ ಹೊಂಡದಲ್ಲಿ ಇಳಿದು ತಾನು ಪರೀಕ್ಷೆ ಮಾಡುತ್ತೇನೆ. ಇದು ಸುರಂಗವೇ ಹೌದಾದರೆ ನಿನ್ನನ್ನು ಕರೆಯುತ್ತೇನೆ. ಅಲ್ಲಿಯ ವರೆಗೆ ಮರೆಯಲ್ಲಿ ಅಡಗಿರು ಎಂದು ಮಧುಮಿತಾಳಿಗೆ ಹೇಳಿದ ವಿನಯಚಂದ್ರ. ಅಷ್ಟರಲ್ಲಿ ಸರ್ಚ್ ಲೈಟ್ ಇನ್ನೊಂದು ಸುತ್ತು ಹಾಕಿ ಬರುತ್ತಿತ್ತು. ವಿನಯಚಂದ್ರ ಹೊಂಡದೊಳಗೆ ಅಡಗಿ ಕುಳಿತ. ಮಧುಮಿತಾ ವಾಪಾಸು ಬಂದು ಮರೆಯಲ್ಲಿ ಕುಳಿತಳು. ಅಮ್ಜದ್ ಅವಳನ್ನು ಹಿಂಬಾಲಿಸಿದ್ದ.!

(ಮುಂದುವರಿಯುತ್ತದೆ.)

No comments:

Post a Comment