Friday, June 14, 2019

ಅಘನಾಶಿನಿ ಕಣಿವೆಯಲ್ಲಿ -34



ಮರುದಿನ ಬಾಬುವಿನ ಮನೆಯ ಬಳಿ ಹೋದವರಿಗೆ ಬಹುದೊಡ್ಡ ಆಘಾತವಾಗಿತ್ತು. ಬಾಬುನನ್ನು ಕರೆದುಕೊಂಡು ಹೋಗಿ ಗಂಧ ಚೋರರು ಹಾಗೂ ಅಕ್ರಮ ದಂಧೆ ಮಾಡುವವರನ್ನು ಹುಡಕಬೇಕು ಎಂದುಕೊಂಡಿದ್ದ ಪ್ರದೀಪ, ವಿಕ್ರಮ ಹಾಗೂ ವಿನಾಯಕರು ತಬ್ಬಿಬ್ಬಾಗಿದ್ದರು.
ಬಾಬುವಿನ ಮನೆಯ ಮುಂದೆ ಬಹಳಷ್ಟು ಜನರು ಸೇರಿದ್ದರು. ಯಾರೋ ಒಬ್ಬರು ಮುಂಜಾನೆ ಬಾಬುವಿನ ಮನೆಗೆ ಬಂದು ಬಾಗಿಲು ಬಡಿದಿದ್ದರೆಂತೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೇ ಇದ್ದಿದ್ದನ್ನು ನೋಡಿ ಅನುಮಾನಗೊಂಡು, ಅವರೇ ಮನೆಯ ಬಾಗಿಲು ಒಡೆದು ಒಳಹೋಗಿ ನೋಡಿದ್ದರಂತೆ. ಮನೆಯಲ್ಲಿ ಬಾಬು ಹಾಗೂ ಆತನ ಕುಟುಂಬ ನೇಣು ಹಾಕಿದ ಸ್ಥಿತಿಯಲ್ಲಿ ಕಾಣಿಸಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎನ್ನಿಸಿತ್ತು.
ಪೊಲೀಸರು ಆಗಲೇ ಬಂದು ಮಹಜರು ಮಾಡಲು ಆರಂಭಿಸಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಹೇಳಿ, ಸಾಲಬಾಧೆ ಇರಬೇಕೆಂಬ ಶಂಕೆಯನ್ನೂ ವ್ಯಕ್ತಪಡಿಸಿ ಅದೇ ರೀತಿಯಲ್ಲಿ ವರದಿ ತಯಾರಿಸಲೂ ಮುಂದಾಗಿತ್ತು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಖಂಡಿತವಾಗಿಯೂ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಮೂಡಿತ್ತು. ಹಿಂದಿನ ದಿನ ತಾವು ಬಾಬುವನ್ನು ಬಡಿದು ವಿಚಾರಣೆ ನಡೆಸಿದ್ದ ಕಾರಣಕ್ಕೇ ಬಾಬುವನ್ನು ಹತ್ಯೆ ಮಾಡಿ, ನೇಣು ಹಾಕಲಾಗಿದೆ ಎಂದು ಪ್ರದೀಪ ಹಾಗೂ ಬಳಗ ತರ್ಕಿಸಿದ್ದರು. ಅದು ನಿಜವಾಗಿತ್ತೂ ಕೂಡ.
ಯಾವುದೋ ಒಂದು ಕೊಂಡಿಯನ್ನು ಹಿಡಿದು ನಿಘೂಡ ಜಗತ್ತಿನ ಬಾಗಿಲನ್ನು ತೆರೆದು ಹೋಗುತ್ತಿದ್ದೇವೆ ಎಂದುಕೊಳ್ಳುವಷ್ಟರಲ್ಲಿ ಕಾಣದ ಕೈ ಆ ಬಾಗಿಲನ್ನು ಮುಚ್ಚಿ ಹಾಕುತ್ತಿತ್ತು. ಎಷ್ಟೇ ಪ್ರಯತ್ನ ಪಟ್ಟೂ ನಿಘೂಡ ಜಗತ್ತಿನ ಒಳಗೆ ಹೋಗಲು ಸಾಧ್ಯವೇ ಆಗುತ್ತಿಲ್ಲವಲ್ಲ ಎಂಬ ಹತಾಶೆ ವಿಕ್ರಮ ಹಾಗೂ ಪ್ರದೀಪನಿಗಾಯಿತು. ಇದಕ್ಕೆ ಏನಾದರೂ ಮಾಡಲೇಬೇಕಲ್ಲ ಎಂದು ಅವರು ಅಲವತ್ತುಕೊಂಡರು. ಬೇಗ ಬೇಗನೆ ಇದಕ್ಕೊಂದು ಅಂತ್ಯ ಕಾಣಿಸದೇ ಇದ್ದಲ್ಲಿ ಇನ್ನೆಷ್ಟು ತಿರುವುಗಳು ಎದುರಾಗಲಿದೆಯೋ ಎಂದುಕೊಂಡರು ಅವರು.
ಬಾಬುವಿನ ಕೊಲೆಯನ್ನು ತಾವು ಹುಡುಕ ಹೊರಟಿರುವ ತಂಡವೇ ಮಾಡಿರುವುದು ಖಚಿತವಾಗಿತ್ತು. ಆ ಗುಂಪನ್ನು ಹುಡುಕಬಹುದಾಗಿದ್ದ ದೊಡ್ಡ ಬಾಗಿಲು ಮುಚ್ಚಿ ಹೋಗಿತ್ತು. ಮತ್ತೆ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಲ್ಲ ಎಂಬ ಹತಾಶೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಸಹನೆಯಿಂದ ಅವರು ತಲೆ ಕೊಡವಿಕೊಳ್ಳುತ್ತಿದ್ದರು.

----
ಇತ್ತ ಆ ನಿಘೂಡ ಮನೆಯಲ್ಲಿ ಆ ಯಜಮಾನ ತನ್ನ ಕೆಳಗಿನ ಆಳುಗಳ ಬಳಿ ಮಾತನಾಡುತ್ತಿದ್ದ. ಎಲ್ಲ ಕೆಲಸ ಸರಿಯಾಗಿದೆ ತಾನೇ.. ಎಂದು ಆತ ಕೇಳುತ್ತಿದ್ದಂತೆಯೇ ಉಳಿದವರು ನಡೆದ ಘಟನೆಯನ್ನೆಲ್ಲ ತಿಳಿಸಿ ಹೇಳಿದರು.
ಬಾಬುವನ್ನು ಹತ್ಯೆ ಮಾಡಿದ್ದು ಒಳ್ಳೇದೇ ಆಯ್ತು. ನಾವೇ ಮಾಡಿದ್ದೇವೆ ಎನ್ನುವ ಬಗ್ಗೆ ಯಾವುದಾದರೂ ಅಂಶ ಬಿಟ್ಟು ಬಂದಿದ್ದೀರಾ? ಗಡುಸಾಗಿ ಕೇಳಿದ್ದ.
ಇಲ್ಲ ಬಾಸ್ ಎಂದು ಮಾರುತ್ತರ ನೀಡಿದ್ದರು ಉಳಿದವರು.
ನಿಮ್ಮನ್ನು ಯಾರಾದರೂ ನೋಡಿದರಾ? ಅದರಲ್ಲೂ ವಿಶೇಷವಾಗಿ ಆ ಹೊಸ ಹುಡುಗರು ನೋಡಿದ್ದಾರಾ ಹೇಗೆ? ಮತ್ತೆ ಕೇಳಿದ್ದ ಆತ.
ಇಲ್ಲ. ಸದ್ದಿಲ್ಲದೇ ಕೆಲಸ ಮಾಡಿ ಬಂದಿದ್ದೇವೆ. ಪೊಲೀಸರೂ ಕೂಡ ಇದನ್ನು ಆತ್ಮಹತ್ಯೆ ಎಂದೇ ವರದಿಯಲ್ಲಿ ಬರೆದಿದ್ದಾರೆ. ಯಾವುದೇ ಆತಂಕ ಬೇಡ..’ ಎಂದು ಮರು ಉತ್ತರ ನೀಡಿದರು ಕೈಕೆಳಗಿನ ವ್ಯಕ್ತಿಗಳು.
ಸರಿ ಹಾಗಾದರೆ, ಒಳ್ಳೆಯದೇ ಆಯ್ತು. ನೀವೆಲ್ಲ ಅತ್ತ ತಲೆ ಹಾಕಬೇಡಿ.. ಯಾವುದೇ ರೀತಿಯ ಅನುಮಾನಕ್ಕೂ ಎಡೆ ಮಾಡಿಕೊಡಬೇಡಿ.. ಆ ಊರಿಗೆ ಬಂದಿರುವವರ ಮೇಲೆ ಮಾತ್ರ ಕಣ್ಣಿಡಿ ಸಾಕು.. ನೀವಿನ್ನು ಹೊರಡಿ.. ಎಂದ ಬಾಸ್
ಸರಿ ಎಂದು ಉಳಿದವರು ಹೋದರು.
ಬಾಸ್ ಮುಖದಲ್ಲಿ ಕಿರುನಗೆಮೂಡಿತು. ಅದೇನೋ ತಪ್ಪಿಸಿಕೊಂಡೆ, ನಿರಾಳನಾದೆ ಎನ್ನುವ ಭಾವ ಆತನ ಮುಖದಲ್ಲಿ ಕಾಣಿಸಿತ್ತು.


(ಮುಂದುವರಿಯುತ್ತದೆ)

Monday, June 10, 2019

ಬಲಿದಾನ ಚಿಹ್ನೆ : ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ


ಧೋನಿ ಧರಿಸಿದ್ದ ಬಲಿದಾನ ಬ್ಯಾಡ್ಜ್‌ಗೆ ಸಂಬಂಧಿಸಿದಂತೆ ಐಸಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸುತ್ತಿದೆ ಎನ್ನುವ ಅಭಿಪ್ರಾಯ ಕ್ರಿಕೆಟ್ ಪ್ರೇಮಿಗಳದ್ದು. ಐಸಿಸಿಯ ನಡೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಚಿಹ್ನೆಯನ್ನು ಒಳಗೊಂಡ ಕೈಗವಸನ್ನು ಮಹೇಂದ್ರ ಸಿಂಗ್ ಧೋನಿ ಧರಿಸಿದ್ದರು. ಆದರೆ ಇದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಐಸಿಸಿ ಈ ಚಿಹ್ನೆಯನ್ನು ತೆಗೆದುಹಾಕುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿತ್ತು.
ಐಸಿಸಿಯ ಈ ನಿಲುವು ವ್ಯಾಪಕವಾಗಿ ಖಂಡನೆಗೆ ಒಳಗಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಸಿಸಿಯ ನಡೆಯನ್ನು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಪ್ರತ್ಯೇಕ ಹ್ಯಾಷ್‌ಟ್ಯಾಗ್ ಮೂಲಕ ಐಸಿಸಿಯ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೇ ಧೋನಿಯನ್ನು ಬೆಂಬಲಿಸುತ್ತಿರುವ ಅಭಿಮಾನಿಗಳು ಚಿಹ್ನೆಯನ್ನು ತೆಗೆಯದಂತೆ ಆಗ್ರಹಿಸಿದ್ದಾರೆ.

ಸೆಲ್ಯೂಟ್, ನಮಾಜ್‌ಗೆ ಇಲ್ಲ ವಿರೋಧ:
ಧೋನಿ ಧರಿಸಿದ್ದ ಕೈಗವಸಿನ ಮೇಲಿನ ಚಿಹ್ನೆಗೆ ಸಂಬಂಧಿಸಿದಂತೆ ಐಸಿಸಿ ಕಾನೂನು ಹಾಗೂ ನಿಯಮಗಳ ನೆಪ ಒಡ್ಡಿದೆ. ಆದರೆ ಮೈದಾನದಲ್ಲಿ ಬೇರೆ ಬೇರೆ ದೇಶಗಳ ಆಟಗಾರರು ಬೇರೆ ಬೇರೆ ನಡೆಯನ್ನು ಪ್ರದರ್ಶಿಸಿದಾಗ ಐಸಿಸಿ ವೌನ ವಹಿಸಿದ್ದು, ಧೋನಿ ವಿಷಯದಲ್ಲಿ ಮಾತ್ರ ಅನಾವಶ್ಯಕವಾಗಿ ಆಸಕ್ತಿ ತೋರುತ್ತಿದೆ ಎನ್ನುವ ಆರೋಪ ಅಭಿಮಾನಿಗಳದ್ದು.
ವೆಸ್ಟ್ ಇಂಡೀಸ್ ಆಟಗಾರನೋರ್ವ ಕ್ಯಾಚ್ ಹಿಡಿದ ನಂತರ ಸೆಲ್ಯೂಟ್ ಮಾಡಿದ ಸಂದರ್ಭದಲ್ಲಿ ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪಾಕಿಸ್ಥಾನದ ಆಟಗಾರರು ಮೈದಾನದಲ್ಲಿಯೇ ನಮಾಜ್ ಮಾಡಿದ ಸಂದರ್ಭದಲ್ಲಿಯೂ ಕೂಡ ಐಸಿಸಿ ಯಾವುದೇ ನಿಯಮಗಳ ನೆಪವನ್ನೂ ಹೇಳಿರಲಿಲ್ಲ. ಅಷ್ಟೇ ಏಕೆ ಹಿಂದೆ ಜಿಂಬಾಬ್ವೆಯ ಆಟಗಾರ ಹೆನ್ರಿ ಓಲಾಂಗಾ, ತನ್ನ ದೇಶದ ಸರ್ವಾಧಿಕಾರಿ ರಾಬರ್ಟ್ ಮುಗಾಬೆ ವಿರುದ್ಧ ಮೈದಾನದಲ್ಲಿಯೇ ಪ್ರತಿಭಟನೆಯನ್ನು ನಡೆಸಿದಾಗಲೂ ಕೂಡ ಐಸಿಸಿ ವೌನ ವಹಿಸಿತ್ತು. ಹಿಂದೆ ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್, ಯುದ್ಧದಲ್ಲಿ ಮಡಿದ ಸೈನಿಕರ ಪರವಾಗಿ ಕೆಂಪು ಬಣ್ಣದ ಸ್ಟಿಕ್ಕರ್ ಧರಿಸಿ ಆಡಿದ್ದರು. ಅಷ್ಟೇ ಏಕೆ, ಇಂಗ್ಲೆಂಡ್ ತಂಡದ ಜೆರ್ಸಿಯ ಮೇಲೆ ಅದರ ಸೇನೆಯ ಚಿಹ್ನೆಗಳು ರಾರಾಜಿಸುತ್ತಿವೆ. ಆದರೆ ಅದ್ಯಾವುದೂ ಐಸಿಸಿಗೆ ಕಾಣಿಸುತ್ತಿಲ್ಲ. ಆದರೆ ಈಗ ಧೋನಿ ಕೈಗವಸಿನ ವಿಚಾರದಲ್ಲಿ ಮಾತ್ರ ಅನಗತ್ಯ ಆರೋಪಗಳನ್ನು ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಪಾತ್ರವಾಗಿದೆ.
ಹಿಂದೆ ಐಸಿಸಿ ಹಲವು ವಿಷಯಗಳಲ್ಲಿಯೂ ಒಂದು ಕಣ್ಣಿಗೆ ಬೆಣ್ಣೆಘಿ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸಿತ್ತುಘಿ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳ ಆಟಗಾರರು ಸ್ಲೆಡ್ಜಿಂಗ್ ಮಾಡಿದ ಸಂದರ್ಭದಲ್ಲಿ ಅದರ ಕುರಿತು ಮೃದು ಧೋರಣೆ ತಾಳಿದ್ದ ಐಸಿಸಿ ಭಾರತೀಯ ಆಟಗಾರರು ಸ್ಲೆಡ್ಜಿಂಗ್ ಮೂಲಕ ಪ್ರತ್ಯುತ್ತರ ನೀಡಿದ ಸಂದರ್ಭದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಆಟಗಾರರಿಗೆ ನಿಷೇಧವನ್ನು ಹೇರಿದ ಸಂದರ್ಭಗಳೂ ಇದ್ದವು.
ಅನಾವಶ್ಯಕ ಕ್ಯಾತೆ
ಈ ವಿಶ್ವಕಪ್‌ನಲ್ಲಿ ಐಸಿಸಿ ಗಮನ ಹರಿಸಲು ಹಲವು ವಿಷಯಗಳಿವೆ. ಐಸಿಸಿ ನೇಮಿಸಿರುವ ಅಂಪಾಯರ್‌ಗಳು ತಪ್ಪುಗಳ ಮೇಲೆ ತಪ್ಪುಗಳನ್ನು ಂಆಡುವ ಮೂಲಕ ಪಂದ್ಯಗಳ ಲಿತಾಂಶ ಏರು ಪೇರಾಗಲು ಕಾರಣರಾಗುತ್ತಿದ್ದಾರೆ. ವಿಂಡೀಸ್ ಹಾಗೂ ಆಸಿಸ್ ಪಂದ್ಯದ ಸಂದರ್ಭದಲ್ಲಿ ಅಂಪಾಯರ್ 7-8 ತಪ್ಪು ತೀರ್ಪು ನೀಡಿದ ಸಂದರ್ಭದಲ್ಲಿಯೂ ಕೂಡ ಅದರ ಬಗ್ಗೆ ಐಸಿಸಿ ವೌನ ತಾಳಿದೆ. ಹೀಗಿರುವಾಗ ಧೋನಿ ವಿಷಯದ ಬಗ್ಗೆ ಅನಾವಶ್ಯಕ ಆಸಕ್ತಿ ತಳೆದಿರುವುದು ಮಾತ್ರ ವಿಚಿತ್ರ ಎನ್ನಿಸಿದೆ.
ವಿಶ್ವಕಪ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಸಿಸಿ ಕೈಗೊಳ್ಳಬೇಕಾದ ಅನೇಕ ಕಾರ್ಯಗಳಿವೆ. ವಿಶ್ವಕಪ್ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಐಸಿಸಿ ಕ್ರಮ ಕೈಗೊಳ್ಳಬೇಕಿದೆ. ತಪ್ಪು ನಿರ್ಣಯ ಕೊಡುತ್ತಿರುವ ಅಂಪಾಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅದನ್ನು ಬಿಟ್ಟು ಅನಾವಶ್ಯಕ ವಿವಾದ ಹುಟ್ಟು ಹಾಕುವುದು ಸರಿಯಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ.

-----
ಪಾಕಿಸ್ಥಾನದ ಪ್ರಭಾವವೇ?
ಧೋನಿ ಕೈಗವಸಿನ ಚಿಹ್ನೆಯ ವಿಷಯದಲ್ಲಿ ಐಸಿಸಿ ಪಾಕಿಸ್ಥಾನದ ಪ್ರಭಾವಕ್ಕೆ ಮಣಿದಿದೆಯೇ ಎನ್ನುವ ಪ್ರಶ್ನೆಗಳು ಮೂಡಿದೆ. ಧೋನಿ ಸೇನಾಮುದ್ರೆ ಬಳಸಿರುವುದು ಪುಲ್ವಾಮಾ ದಾಳಿಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಎಂದು ಪಾಕಿಸ್ಥಾನ ಭಾವಿಸಿದೆ. ಧೋನಿ ಸೇನಾಮುದ್ರೆ ಬಳಸಿರುವುದರಿಂದ ಎಲ್ಲರಿಗಿಂತ ಹೆಚ್ಚು ಮುಜುಗರಕ್ಕೀಡಾಗಿದ್ದು ಪಾಕಿಸ್ಥಾನ ಮಾತ್ರಘಿ. ಹೀಗಾಗಿ ಪಾಕಿಸ್ಥಾನವು ಐಸಿಸಿ ಮೇಲೆ ಈ ಮುದ್ರೆ ತೆಗೆಯುವಂತೆ ಹೇಳಲು ಪ್ರಭಾವ ಬೀರಿತು ಎನ್ನುವುದು ಅಭಿಮಾನಿಗಳ ವಾದವಾಗಿದೆ.







Thursday, June 6, 2019

ಅನುಮಾನ ಹುಟ್ಟಿಸುತ್ತಿದೆ ಕಾಡುಕೋಣಗಳ ಸರಣಿ ಸಾವು

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದವೇ ವನ್ಯಪ್ರಾಣಿಗಳು?


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ವ್ಯಾಪ್ತಿಯಲ್ಲಿರುವ ಅಣಶಿ-ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ  ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಡುಕೋಣಗಳ ಸರಣಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ. ಅಸಹಜ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸುವ ಮೂಲಕ ಅರಣ್ಯ ಇಲಾಖೆ ಯಾವುದೋ ದೊಡ್ಡ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ಮೃತಪಟ್ಟಿದ್ದರೂ ಕೇವಲ 4 ಕಾಡುಕೋಣಗಳು ಮಾತ್ರ ಸತ್ತಿವೆ ಎನ್ನುವ ಮೂಲಕ ಅರಣ್ಯ ಇಲಾಖೆ ನೈಜ ಕಾರಣವನ್ನು ಮುಚ್ಚಿಡಲು ಯತ್ನಿಸುತ್ತಿದೆ. ತನ್ಮೂಲಕ ಯಾವುದೋ ಅಂಶವನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.


ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯ
ಕಾಡುಕೋಣಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜೋಯಿಡಾ ಕಾಡಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕಾಡುಕೋಣಗಳು ಮೃತಪಟ್ಟ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ಕೆಳ ಹಂತದ ಅರಣ್ಯಾಧಿಕಾರಿಗಳು ಸ್ಥಳೀಯ ಹಂತದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವು ಎಂದು ವರದಿ ಬರುವಂತೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಕಾಡುಕೋಣಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ತಜ್ಞ ವೈದ್ಯರ ಮೊರೆ ಹೋದರು ಎನ್ನುವ ಮಾತುಗಳು ಕೇಳಿ ಬಂದಿದೆ. ಕಾಡುಕೋಣಗಳು ಸಹಜ ಕಾರಣದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಯುವುದಿಲ್ಲಘಿ. ಶಿವಮೊಗ್ಗ ದ ವೈದ್ಯರಿಗೆ ಕಾಡುಕೋಣಗಳ ತಾಜಾ ಮಾಂಸ ಸಿಗದ ಕಾರಣ ವೈದ್ಯಕೀಯ ಪರೀಕ್ಷೆಯಲ್ಲಿ ನಿಖರ ಕಾರಣಗಳು ತಿಳಿದುಬರುವ ಸಾಧ್ಯತೆಗಳು ಕಡಿಮೆ ಎನ್ನುವುದು ಶಿವಮೊಗ್ಗದ ವೈದ್ಯಕೀಯ ಮೂಲಗಳ ಮಾಹಿತಿ.
ಇದೀಗ ಬೆಂಗಳೂರಿನ ಎರಡು ಪ್ರಯೋಗಾಲಯಗಳಿಗೆ ಕಾಡುಕೋಣಗಳ ಅಂಗಾಂಗಗಳನ್ನು ಒಯ್ಯಲಾಗಿದೆ. 10-12 ದಿನಗಳಲ್ಲಿ ಅವುಗಳ ಪರೀಕ್ಷೆಯ ವರದಿಗಳು ಹೊರಬೀಳಲಿದೆ. ನಂತರವಷ್ಟೇ ಕಾಡುಕೋಣಗಳ ಸಾವಿನ ಕಾರಣಗಳು ತಿಳಿದುಬರಲಿದೆ.


ಇನ್ನಷ್ಟು ಕಾಡುಕೋಣಗಳ ಸಾವು
ಕಾಡುಕೋಣಗಳ ಸರಣಿ ಸಾವು ಕೇವಲ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿಲ್ಲಘಿ. ಕಾಡುಕೋಣಗಳು ಕಾಳಿ ನದಿಗೆ ನಿರ್ಮಿಸಲಾಗಿರುವ ಕೊಡಸಳ್ಳಿ ಅಣೆಕಟ್ಟು ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿಯೂ ಮೃತಪಟ್ಟಿವೆ. ನಾಲ್ಕಕ್ಕೂ ಅಧಿಕ ಕಾಡುಕೋಣಗಳು ಕೊಡಸಳ್ಳಿ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿ ಸತ್ತಿವೆ ಎನ್ನುವ ಮಾಹಿತಿಗಳು ಹೊಸದಿಗಂತಕ್ಕೆ ಲಭ್ಯವಾಗಿದೆ.
ಅರಣ್ಯ ಸಚಿವರೇ ಇತ್ತ ಗಮನ ಕೊಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೇ ಅರಣ್ಯ ಇಲಾಖೆಯೂ ಇದೆ. ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸರಣಿ ಸಾವಿನ ಕುರಿತು ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳುವ ಅಗತ್ಯವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ವನ್ಯಜೀವಿಗಳ ಸರಣಿ ಸಾವು ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಖಡಕ್ ನಿರ್ಧಾರ ಕೈಗೊಂಡು ಕೆಲವೇ ಸಂಖ್ಯೆಗಳಷ್ಟಿರುವ ಕಾಡುಕೋಣಗಳ ರಕ್ಷಣೆಗೆ ಆದೇಶ ಹೊರಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮನವಿಯಾಗಿದೆ.

ಸಾವಿಗೇನು ಕಾರಣ?
ಕಾಡುಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೆಲ್ಲ ಕಾಡುಪ್ರಾಣಿಗಳನ್ನು ಕಾಡುವುದೇ ಇಲ್ಲಘಿ. ಕಾಡುಪ್ರಾಣಿಗಳು ಏಕಾಏಕಿ ಬಹಳಷ್ಟು ಸಂಖ್ಯೆಯಲ್ಲಿ ಅಸುನೀಗುತ್ತಿವೆ ಎಂದರೆ ಅದಕ್ಕೆ ಬಲವಾದ ಕಾರಣಗಳೇ ಇರುತ್ತವೆ. ಮಾರಕ ಖಾಯಿಲೆ, ಸೋಂಕು, ವಿಷ ಪ್ರಾಶನ ಅಥವಾ ಇನ್ನಿತರ ಯಾವುದೋ ಕಾರಣಗಳಿಂದ ಕಾಡುಕೋಣಗಳು ಸಾಯುತ್ತಿರಬಹುದು ಎನ್ನುವುದು ಪರಿಸರ ಪ್ರೇಮಿಗಳ ಮನಸ್ಸಿನಲ್ಲಿ ಮೂಡಿರುವ ಶಂಕೆ.
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಮನುಷ್ಯರ ಅತಿಕ್ರಮ ಪ್ರವೇಶಕ್ಕೆ ಅವಕಾಶವಿಲ್ಲಘಿ. ಇಂತಹ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿರುವ ಕಾಡುಕೋಣಗಳು ಮಾತ್ರ ಮೃತಪಟ್ಟಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯ ಹೊರಗಿನ, ಅಂದರೆ ಮನುಷ್ಯರ ಓಡಾಟ ಹೆಚ್ಚಿರುವ ಕಾಡುಗಳಲ್ಲಿನ ಕಾಡೆಮ್ಮೆಘಿ, ಕಾಡುಕೋಣಗಳು ಮೃತಪಟ್ಟಿಲ್ಲಘಿ. ಹೀಗಾಗಿ ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸಾವಿಗೆ ಬೇರೇನೋ ಕಾರಣಗಳಿವೆ ಎನ್ನುವ ಸಂಶಯ ಬಲವಾಗಿದೆ.



ಮಾಧ್ಯಮಗಳಿಗೆ ನಿರ್ಬಂಧ
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ ಮೃತಪಟ್ಟಿರುವ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ತಕ್ಷಣ ಅರಣ್ಯ ಇಲಾಖೆ ಈ ಪ್ರದೇಶಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ. ಯಾವುದೇ ಅಧಿಕಾರಿಗಳಿಗೂ ಕಾಡುಕೋಣಗಳ ಸಾವಿನ ಕುರಿತು ಮಾಹಿತಿ ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎನ್ನುವ ಮಾಹಿತಿಗಳು ಅಧಿಕಾರಿ ವಲಯದಿಂದ ಕೇಳಿ ಬಂದಿದೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆಯ ನಡೆ ಇನ್ನಷ್ಟು ಅನುಮಾನಕ್ಕೂ ಕಾರಣವಾಗಿದೆ.


------------------
ಕಾಡುಪ್ರಾಣಿಗಳಲ್ಲಿಯೇ ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಪ್ರಾಣಿಗಳೆಂದರೆ ಅದು ಕಾಡುಕೋಣಗಳು. ಆದರೆ ಕಾಳಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾಡುಕೋಣಗಳು ಮೃತಪಟ್ಟಿರುವುದನ್ನು ಗಮನಿಸಿದರೆ ಇದು ಸಹಜವಾದುದಲ್ಲಘಿ. ಬೇರೇ ಏನೋ ಕಾರಣ ಇದೆ ಎನ್ನಿಸುತ್ತದೆ.
ಸಂಜಯ ಭಟ್ಟ ಬೆಣ್ಣೆ
ಪರಿಸರಪ್ರೇಮಿ

Tuesday, June 4, 2019

ಮತ್ತೆ ಬತ್ತಿದ ಅಘನಾಶಿನಿ

(ಚಿತ್ರ- ಗೋಪಿ ಜಾಲಿ)
ಹರಿವು ನಿಲ್ಲಿಸಿದ ಪಾಪನಾಶಿನಿ ನದಿ/ಜೀವ ಜಗತ್ತಿಗೆ ಆತಂಕ



ಎರಡು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಹರಿವು ನಿಲ್ಲಿಸಿದ್ದ ಅಘನಾಶಿನಿ ಮತ್ತೊಮ್ಮೆ ಬತ್ತಿ ಹೋಗಿದೆ. ಉತ್ತರ ಕನ್ನಡದ ಜೀವದಾಯಿ ನದಿಗಳಲ್ಲಿ ಒಂದಾಗಿರುವ ಅಘನಾಶಿನಿ ನದಿ ಬತ್ತಿರುವುದರಿಂದ ನದಿ ಪಾತ್ರದ ಜೀವ ಸಂಕುಲಗಳು ಆತಂಕಕ್ಕೆ ಈಡಾಗಿವೆ.
ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುವ ಅಘನಾಶಿನಿ ನದಿಯ ಕವಲು ಒಂದುಗೂಡಿ 98 ಕಿಲೋಮೀಟರ್ ದೂರ ಹರಿದು ಕುಮಟಾ ತಾಲೂಕಿನಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ.  ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
2017ರಲ್ಲಿ ಪ್ರಕೃತಿಯ ಮುನಿಸು ಹಾಗೂ ಮನುಷ್ಯನ ದುರಾಸೆಯ ಕಾರಣದಿಂದ ಬತ್ತಿ ಹೋಗಿದ್ದ ಅಘನಾಶಿನಿ ನದಿ ಇದೀಗ ಮತ್ತೊಮ್ಮೆ ಬತ್ತಿದೆ. ಅಘನಾಶಿನಿ ನದಿ ತೀರದಲ್ಲಿ ಈಗ ಕಲರವವಿಲ್ಲಘಿ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲಪಾತ ಜೀವ ಕಳೆದುಕೊಂಡಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ. ಅಘನಾಶಿನಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದ ಅಪರೂಪದ ನೀರುನಾಯಿಗಳೂ ಕೂಡ ಬದುಕಿಗಾಗಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾರ್ನಬಿಲ್, ಕೆಂಪು ಅಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವು ಜೀವಿಗಳು ಒದ್ದಾಡುತ್ತಿವೆ.

(ಚಿತ್ರ- ಗೋಪಿ ಜಾಲಿ)
ಕಡಿಮೆಯಾಗಿದೆ ನೀರು, ಸೊರಗಿದೆ ಉಪನದಿಗಳು
ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರ ಇಳಿಕೆ ಕಂಡಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ನದಿ ಎರಡನೇ ಬಾರಿ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆ ಬತ್ತಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯೂ ನೀರಿಲ್ಲದೇ ಸೊರಗಿದೆ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಶಾಲ್ಮಲಾ ನದಿ ಬತ್ತಿ ಹೋಗಿತ್ತುಘಿ. ಯಲ್ಲಾಪುರ ಪಟ್ಟಣಕ್ಕೆ ನೀರನ್ನು ಒದಗಿಸುವ ಬೇಡ್ತಿ ನದಿ ಬತ್ತಿ ಹಲವು ದಿನಗಳೇ ಕಳೆದಿವೆ. ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಆತಂಕವನ್ನು ಹೊರಹಾಕಿದ್ದರು. ಇದೀಗ ಮಲೆನಾಡಿನ ಇನ್ನೊಂದು ನದಿ ಬತ್ತಿ ಹೋಗಿದೆ. ಇದರ ನೇರ ಪರಿಣಾಮ ಪರಿಸರದ ಮೇಲಾಗುತ್ತಿದೆ. ನದಿಯನ್ನೇ ನಂಬಿದ್ದ ಜೀವ ಜಗತ್ತುಘಿ, ಪಕ್ಷಿಘಿ, ಪ್ರಾಣಿ ಸಂಕುಲ ಉಸಿರು ಚೆಲ್ಲುತ್ತಿವೆ. 10-12 ದಿನಗಳ ಒಳಗಾಗಿ ಮಳೆಯಾಗದಿದ್ದಲ್ಲಿ ಮಲೆನಾಡಿನ ಪರಿಸ್ಥಿತಿ ಇನ್ನಷ್ಟು ಘೋರವಾಗಿರಲಿದೆ.

(ಚಿತ್ರ- ಗೋಪಿ ಜಾಲಿ)

---------------------
ನದಿ ತೀರಗಳಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ. ನದಿಗಳ ಮೇಲಿನ ಅವಲಂಬನೆ ಕೂಡ ಹೆಚ್ಚಾಗಿದೆ. ಪಂಪ್ ಮೂಲಕ ಕೃಷಿಗೆ ನದಿ ನೀರನ್ನು ಬಳಸುವ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನದಿಗಳು ಬತ್ತುತ್ತಿವೆ. ಮಳೆ ನೀರು ಇಂಗಿಸಿದರೆ ಇಂತಹ ಸಮಸ್ಯೆಗೆ ಪರಿಹಾರ ಹುಡುಕಬಹುದು.
ಶಿವಾನಂದ ಕಳವೆ
ಪರಿಸರ ಬರಹಗಾರರು

Monday, June 3, 2019

ಕಾಣದ ರೋಗಕ್ಕೆ ಕಾಡುಕೋಣಗಳ ಬಲಿ


ಮಾರಕ ರೋಗ ಸಾಧ್ಯತೆ/ಮನುಷ್ಯರಿಗೂ ತಗುಲಬಹುದೇ?


ಪ್ರಕರಣ ಮುಚ್ಚಿಡಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ
ಕಾಡುಕೋಣಗಳ ಮೃತದೇಹ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಅಂಗಾಂಗಗಳ ರವಾನೆ
ಹೊಟ್ಟೆ ಹಾಗೂ ಬಾಯಿ ಹುಣ್ಣಿನಿಂದ ಕಾಡುಕೋಣಗಳು ಮೃತಪಟ್ಟಿರುವ ಶಂಕೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ  ಮೃತಪಡುತ್ತಿರುದು ಆತಂಕಕ್ಕೆ ಕಾರಣವಾಗಿದೆ. ಕಾಡುಕೋಣಗಳ ಸರಣಿ ಸಾವು ಮಾರಕ ರೋಗದ ಸಾಧ್ಯತೆಯನ್ನು ಹುಟ್ಟು ಹಾಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ನಿಘೂಡ ರೋಗಕ್ಕೆ ಬಲಿಯಾಗಿವೆ. ಅಣಶಿ, ಕ್ಯಾಸಲ್‌ರಾಕ್ ಮುಂತಾದ ಪ್ರದೇಶಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಅಜಮಾಸು 10ರಿಮದ 12 ವರ್ಷ ಪ್ರಾಯದ ಕಾಡುಕೋಣಗಳು ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಮೃತಪಟ್ಟಿವೆ.

ನಿಘೂಡ ರೋಗ?
ಮಲೆನಾಡಿನ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟ ಘಟನೆ ಹಸಿಯಾಗಿದೆ. ಈ ಮಂಗಗಳಿಂದಾಗಿ ಮನುಷ್ಯನಿಗೂ ಮಂಗನ ಖಾಯಿಲೆ ಬಂದು ಅನೇಕರನ್ನು ಬಲಿ ತೆಗೆದುಕೊಂಡ ಘಟನೆಗಳು ಜನರ ಮನಸ್ಸಿನಲ್ಲಿ  ಭೀತಿಯನ್ನು ಹೆಚ್ಚಿಸಿರುವ ಬೆನ್ನಲ್ಲೇ ಕಾಡುಕೋಣಗಳ ಸರಣಿ ಸಾವು ಆತಂಕ ತಂದಿದೆ. ಮೃತಪಟ್ಟಿರುವ ಕಾಡುಕೋಣಗಳಿಂದ ಮನುಷ್ಯನಿಗೂ ನಿಘೂಡ ಖಾಯಿಲೆಗಳು ಬರಬಹುದೇ ಎನ್ನುವ ಪ್ರಶ್ನೆಗಳು ಮೂಡಿವೆ.

ಮುಚ್ಚಿಟ್ಟ ಅರಣ್ಯ ಇಲಾಖೆ
ಜೋಯಿಡಾ ಕಾಡಿನಲ್ಲಿ ಸಾಲು ಸಾಲು ಕಾಡುಕೋಣಗಳು ಸತ್ತಿದ್ದರೂ ಅರಣ್ಯ ಇಲಾಖೆ ಅದನ್ನು ಮುಚ್ಚಿಡಲು ಮುಂದಾಗಿದೆ. ಇದುವರೆಗೂ 16ಕ್ಕೂ ಹೆಚ್ಚಿನ ಕಾಡುಕೋಣಗಳು ಬಲಿಯಾಗಿದ್ದರೂ ಅರಣ್ಯ ಇಲಾಖೆ ಕೇವಲ 4 ಕಾಡುಕೋಣ ಮಾತ್ರ ಸತ್ತಿದೆ ಎನ್ನುವ ಮೂಲಕ ಗಂಭೀರ ವಿಷಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಟ್ಟೆಘಿ, ಕೋಡುಗಾಳಿ, ಕಡಗರ್ಣಿ ಹಾಗೂ ದಿಗಾಳಿಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಇದಲ್ಲದೇ ಅಣಶಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಅನೇಕ ಕಡೆಗಳಲ್ಲಿಯೂ ಕಾಡುಕೋಣಗಳು ಅಸಹಜವಾಗಿ ಸತ್ತಿವೆ ಎನ್ನುವ ಮಾಹಿತಿಯನ್ನು  ಸ್ಥಳೀಯ ಮಟ್ಟದ ಅರಣ್ಯ ಅಧಿಕಾರಿಗಳೇ ನೀಡಿದ್ದಾರೆ.
ಸತ್ತಿರು ಕಾಡುಕೋಣಗಳ ಕಳೆಬರಗಳ ಮರಣೋತ್ತರ ಪರೀಕ್ಷೆಗಾಗಿ ಕಾಡುಕೋಣಗಳ ಅಂಗಾಂಗಗಳನ್ನು  ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಈ ಕಾಡುಕೋಣಗಳು ಹೊಟ್ಟೆ ಹಾಗೂ ಗಂಟಲು ಹುಣ್ಣಿನಿಂದ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ.
ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ಈ ಸಾರಿ ಎಲ್ಲ ಕಡೆಗಳಲ್ಲಿಯೂ ತಲೆದೋರಿದೆ. ಈ ಸಮಸ್ಯೆ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನೂ ಬಿಟ್ಟಿಲ್ಲಘಿ. ಆದರೆ ಕಾಡುಕೋಣಗಳು ಮೃತಪಟ್ಟ ಸ್ಥಳಗಳ ಸುತ್ತಮುತ್ತ ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ತಲೆದೋರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಹೀಗಿದ್ದರೂ  ಕಾಡುಕೋಣಗಳ ಸರಣಿ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅರಣ್ಯ ಇಲಾಖೆ ಕಾಡುಕೋಣಗಳ ಸಾವಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಂಡು ಸರಣಿ ಸಾವು ತಪ್ಪಿಸಬೇಕಿದೆ. ಈ ಕಾಡುಕೋಣಗಳಿಗೆ ತಗುಲಿರುವ ಸೋಂಕು ಮನುಷ್ಯನಿಗೂ ತಗುಲಬಹುದೇ ಅಥವಾ ಇನ್ನಿತರ ಖಾಯಿಲೆಗಳಿಗೆ ಕಾರಣವಾಗಬಹುದೇ ಎನ್ನುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಅಗತ್ಯವಿದೆ. ಪ್ರಕರಣ ಮುಚ್ಚಿ ಹಾಕುವ ಬದಲು ಅರಣ್ಯ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಜರೂರತ್ತಿದೆ.