Monday, January 1, 2018

ದಾಸ್ಯ (ಕಥೆ ಭಾಗ-3)

ನನ್ನ ಹಾಗೂ ಪಟೇಲರ ನಡುವಿನ ಜಗಳ ತಾರಕಕ್ಕೇರಿದಾಗಲೇ ನನ್ನ ಕೆನ್ನೆಗೆ ಅವರು ಫಟಾರೆಂದು ಹೊಡೆದಿದ್ದರು. ಬೆನ್ನಿಗೆ ಬಡಿಯಲು ಆರಂಭಿಸಿದ್ದರು. ನನಗೆ ಮಾತ್ರ ಈಗ ಸಿಟ್ಟು ತೀವ್ರವಾಗಿತ್ತು. ಒಂದು ಕ್ಷಣವೂ ಪಟೇಲರ ಮನೆಯಲ್ಲಿ ನಿಲ್ಲದೇ, ಮನೆ ಬಿಟ್ಟು ಬಂದಿದ್ದೆ.
ಅದಾದ ಮೇಲೆ ನನಗೆ ಒಂದೊಂದೆ ಮಾಹಿತಿಗಳು ಬರಲಾರಂಭಿಸಿದ್ದವು. ಪಟೇಲರು ನನ್ನ ಮದುವೆಯಾಗುವುದರ ಹಿಂದೆ ದೊಡ್ಡದೊಂದು ಹುನ್ನಾರವೇ ಅಡಗಿತ್ತು ಎನ್ನುವುದು ತಿಳಿದು ಬಂದಿತ್ತು. ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದು, ಕ್ರಾಂತಿ ಮಾರ್ಗವನ್ನು ಅನುಸರಿಸಿದ್ದು ಎಲ್ಲವನ್ನೂ ಅರಿತಿದ್ದ ಪೊಲೀಸ್ ಪಡೆ ಹಾಗೂ ಅಂಗ್ರೇಜಿ ಸರಕಾರ ನನ್ನನ್ನು ಹದ್ದುಬಸ್ತಿನಲ್ಲಿ ಇಡಲು ಮೋಸದ ಹೂಟವನ್ನು ಹೂಡಿತ್ತು. ಗಣಪಯ್ಯ ಪಟೇಲರ ಬಳಿ ಮದುವೆಯ ಪ್ರಸ್ತಾಪ ಮಾಡಿ, ಮದುವೆಯಾಗುವಂತೆ ಹೇಳಿ ನನ್ನನ್ನು ಚಳವಳಿಯಿಂದ ದೂರ ಇಡುವ ಯೋಜನೆ ಅವರದ್ದಾಗಿತ್ತು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಈ ಸುದ್ದಿ ನನಗೆ ತಿಳಿದ ಕ್ಷಣವೇ ನನಗೆ ಸಿಟ್ಟು ಹೆಚ್ಚಿತು. ನಖಶಿಖಾಂತ ಕೋಪ ಬಂದಿತು. ಆದರೆ ಮಾಡುವುದು ಏನು ಎನ್ನುವುದು ತಿಳಿಯದೇ ಕಂಗಾಲಾದೆ. ಆಗಿದ್ದ ಮೋಸಕ್ಕೆ ಧುಃಖವೂ ಕಟ್ಟೆಯೊಡೆದಿತ್ತು. ತುಂಬಿದ ಬಸುರಿ ಬೇರೆ. ಇದಕ್ಕೊಂದು ಉತ್ತರ ನೀಡಲೇಬೇಕಿತ್ತು.
ನಾನು ಬಸುರಿಯಾದರೂ ತೊಂದರೆಯಿಲ್ಲ ಚಳುವಳಿಯಲ್ಲಿ ಮತ್ತೆ ಪಾಲ್ಗೊಳ್ಳಲೇಬೇಕೆಂದು ನಿರ್ಧರಿಸಿದೆ. ಯಥಾ ಪ್ರಕಾರ ಸುದ್ದಿ ತಿಳಿದ ಪಟೇಲರು ನನ್ನ ಬಳಿ ಬಂದು, `ಚಳವಳಿ ಬಿಟ್ಟು, ಜೊತೆಗೆ ಬಂದರೆ ಮನೆಯಲ್ಲಿ ಅವಕಾಶ. ಇಲ್ಲವಾದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ ಎಂದು ಬೆದರಿಸಿದರು. ನಾನು ಜಗ್ಗಲಿಲ್ಲ. ಗಂಡ ಬಿಟ್ಟವಳು ಎನ್ನುವ ಅಪಖ್ಯಾತಿ ಬಂದರೂ ಚಿಂತೆಯಿಲ್ಲ. ದೇಶಸೇವೆಯೇ ಮುಖ್ಯ ಎಂದುಕೊಂಡೆ.
ಅಷ್ಟರ ನಂತರ ಇನ್ನೊಂದು ಪ್ರಮುಖ ಘಟನೆ ನಡೆಯಿತು. ಚಳವಳಿಯನ್ನು ಹತ್ತಿಕ್ಕಲು ನನ್ನ ಯಜಮಾನರಾದ ಗಣಪಯ್ಯ ಪಟೇಲರು ಬ್ರಿಟೀಷರ ಜೊತೆ ಕೈ ಜೋಡಿಸಿದರು. ಅದೇ ಸಂದರ್ಭದಲ್ಲಿ ತೀವ್ರಗಾಮಿಗಳ ಗುಂಪೊಂದು ನನ್ನ ಸಂಪರ್ಕಕ್ಕೆ ಬಂದಿತು. ನಾನು ಪೊಲೀಸರಿಗೆ ಕಲ್ಲು ಹೊಡೆದಿದ್ದ ವಿಷಯ ತಿಳಿದಿದ್ದ ಆ ಗುಂಪು ನನ್ನನ್ನು ಭೇಟಿ ಮಾಡಿ, ತಮ್ಮ ಗುಂಪಿನ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ಕೋರಲು ಬಂದಿತ್ತು. ಆದರೆ ನಾನು ಆಗ ತುಂಬಿದ ಬಸುರಿ. ನನ್ನ ಪರಿಸ್ಥಿತಿಯನ್ನು ನೋಡಿ ಅವರು ನನ್ನ ಬಳಿ ವಿಷಯವನ್ನು ಅರುಹಲು ಹಿಂದೇಟು ಹಾಕಿದರು. ನನಗೆ ಅದು ಗೊತ್ತಾಗಿ, ನಾನೇ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದೆ.
ನಿಧಾನವಾಗಿ ಆ ಗುಂಪಿನ ಸದಸ್ಯರಲ್ಲಿ ಒಬ್ಬಿಬ್ಬರು ನನ್ನ ಬಳಿ ಮಾತನಾಡಿದಾಗ, ನಾನು ಬಸುರಿಯಾಗಿದ್ದರೂ ತೊಂದರೆಯಿಲ್ಲ. ಹೋರಾಟದ ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಏನು ಮಾಡಬೇಕು ಹೇಳಿ ಎಂದೆ.
ಅವರು ಮೊದಲ ಹಂತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವುದು, ನಂತರದಲ್ಲಿ ಬ್ರಿಟೀಷರನ್ನೋ ಅಥವಾ ಪೊಲೀಸರನ್ನೋ ಅಥವಾ ಅವರಿಗೆ ಸಹಾಯ ಮಾಡುತ್ತಿದ್ದವರನ್ನೋ ಹತ್ಯೆ ಮಾಡುವ ಆಲೋಚನೆ ಹೊಂದಿರುವುದಾಗಿ ಹೇಳಿದರು. ನಾನು ಅದಕ್ಕೆ ಮೆಚ್ಚುಗೆ ಹಾಗೂ ಒಪ್ಪಿಗೆ ಎರಡನ್ನೂ ಸೂಚಿಸಿದೆ. ಅದರಂತೆ ಕೆಲವು ದಿನಗಳ ಕಾಲ ನಮ್ಮ ಕ್ರಾಂತಿಕಾರಿ ಗುಂಪು ಅಲ್ಲಲ್ಲಿ ಉಗ್ರ ಚಟುವಟಿಕೆಗಳನ್ನೂ ಕೈಗೊಂಡಿತು. ಈ ಸಂದರ್ಭದಲ್ಲಿಯೇ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಆ ಮಗುವಿಗೆ ನಮ್ಮ ಬಳಗದವರು ಭರತ ಎಂಬ ಹೆಸರನ್ನಿರಿಸಿದ್ದರು. ಭಾರತ ದೇಶಕ್ಕೆ ಭಾರತ ಎನ್ನುವ ಹೆಸರು ಬರಲು ಮುಖ್ಯ ಕಾರಣನಾದ ಭರತ ಮಹಾರಾಜನ ಹೆಸರು ಅದು.
1947ರ ಜನವರಿಯೋ ಅಥವಾ ಇನ್ಯಾವುದೋ ತಿಂಗಳು ಅದು. ಇನ್ನೇನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ ಎನ್ನುವ ಗುಲ್ಲೆದ್ದಿತ್ತು. ಬ್ರಿಟೀಷರು ಜಿಗುಟುತನ ತೋರುತ್ತಿದ್ದರು. ಭಾರತ ಬಿಟ್ಟು ಹೋಗುವ ದಿನಾಂಕವನ್ನು ನಾಳೆ, ನಾಡಿದ್ದು ಎಂಬಂತೆ ಮುಂದೂಡುತ್ತಲೇ ಇದ್ದರು. ಮಂದಗಾಮಿಗಳು ಆಶಾವಾದಿಗಳಾಗಿದ್ದರು. ಆದರೆ ನಮ್ಮ ಬಳಗಕ್ಕೆ ಮಾತ್ರ ಸಹನೆಯ ಕಟ್ಟೆ ಒಡೆದಿತ್ತು. ಹೀಗಿದ್ದಾಗಲೇ ನಮ್ಮ ಸಂಘಟನೆಯ ವಿಚಾರ ಬ್ರಿಟೀಷರಿಗೂ, ಅವರ ಪರವಾಗಿದ್ದ ಪೊಲೀಸರಿಗೂ ಗೊತ್ತಾಗಿ ಎಲ್ಲೆಂದರಲ್ಲಿ ನಮ್ಮ ಹುಡುಕಾಟವನ್ನು ಕೈಗೊಂಡಿದ್ದರು.
ಭರತನಿಗೆ ಮೂರೋ ನಾಲ್ಕೋ ತಿಂಗಳಾಗಿತ್ತಷ್ಟೇ. ಕ್ರಾಂತಿಕಾರಿಗಳ ಗುಂಪಿನ ಮುಂದಾಳತ್ವ ವಹಿಸಿದ್ದ ನಾನು ತಲೆಮರೆಸಿಕೊಂಡು ಓಡಾಡುತ್ತಿದ್ದೆ. ನೆಂಟರ ಮನೆಯೋ, ಗುಂಪಿನ ಸದಸ್ಯರ ಮನೆಯೋ ಇನ್ನೆಲ್ಲೋ. ಹೀಗಿದ್ದಾಗಲೇ ಒಂದು ದಿನ ನನ್ನನ್ನು ಪೊಲೀಸರು ಹುಡುಕಿಯೇ ಬಿಟ್ಟರು. ನಾನು ತಲೆತಪ್ಪಿಸಿಕೊಳ್ಳುವಲ್ಲಿ ಹೇಗೋ ಯಶಸ್ವಿಯಾದೆ. ಆದರೆ ಅಂದಿನಿಂದ ನನ್ನ ಜಾಡು ಅವರಿಗೆ ಗೊತ್ತಾಗತೊಗಿತ್ತು. ನಾನು ಎತ್ತ ಹೋದರೂ ನನ್ನನ್ನು ಬೆನ್ನಟ್ಟಲು ಆರಂಭಿಸಿದ್ದರು. ತಲೆ ತಪ್ಪಿಸಿಕೊಳ್ಳುವ ಭರದಲ್ಲಿ ಎಲ್ಲೆಲ್ಲೋ ಅಲೆದಿದ್ದೆ. ಕಂಕುಳಲ್ಲಿ ಭರತನಿದ್ದ.
ಹೀಗಿದ್ದಾಗ ಒಮ್ಮೆ ಅಲೆದಾಡಿ ನಮ್ಮೂರಿನ ಬಳಿಯೇ ಬಂದೆ. ಅಲ್ಲಿಗೆ ಬಂದಿದ್ದ ಸುದ್ದಿ ಪಟೇಲರಿಗೆ ಹೇಗೆ ಗೊತ್ತಾಗಿತ್ತೇನೋ. ಸೀದಾ ನನ್ನನ್ನು ಹುಡುಕಿ ಬಂದರು. ಬಂದವರೇ ನನ್ನ ಬಳಿ ರೇಗಾಡಲು ಆರಂಭಿಸಿದರು. ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತೆ ಪಾಲ್ಗೊಂಡಿದ್ದಕ್ಕೆ ಸಿಟ್ಟಾದರು. ಅಷ್ಟೇ ಅಲ್ಲದೇ ನನ್ನ ಜೊತೆಗೆ ಭರತನನ್ನು ಬಿಡಲು ವಿರೋಧಿಸಿ, ಭರತನನ್ನು ನಾನೇ ಕರೆದೊಯ್ಯುತ್ತೇನೆ ಎಂದು ಮುಂದಾದರು. ನನಗೂ ಸಿಟ್ಟು ಉಕ್ಕಿತು. ಅಲ್ಲಿಗೆ ಒಂದು ನಿಕ್ಕಿಯಾಗಿತ್ತು. ಪಟೇಲರು ನನ್ನ ಸ್ವಾತಂತ್ರ್ಯ ಹೋರಾಟಕ್ಕೆ ತಡೆ ಒಡ್ಡಬೇಕೆಂಬ ಕಾರಣಕ್ಕೇ ನನ್ನನ್ನು ಹುಡುಕಿ ಬಂದಿದ್ದಾರೆ ಎಂಬುದು ಅರ್ಥವಾಗಿತ್ತು. ನನ್ನ ಜತೆ ವಿಪರೀತ ಜಗಳವಾಡಿದ ಪಟೇಲರು ಭರತನನ್ನು ನನ್ನಿಂದ ಕಿತ್ತುಕೊಂಡು ಹೊರಟೇ ಹೋದರು. ನನಗೆ ಒಮ್ಮೆ ಆಕಾಶವೇ ಕಳಚಿ ಬಿದ್ದಿತ್ತು.

------------

ಇದಾಗಿ ಮೂರನೇ ದಿನಕ್ಕೆ ಪಟೇಲರು ತೀರಿಕೊಂಡಿದ್ದರು. ಅವರದು ಸಹಜ ಸಾವಾಗಿರಲಿಲ್ಲ. ಅವರ ಹತ್ಯೆಯಾಗಿತ್ತು. ಚಾಕುವಿನಿಂದ ಇರಿದ ಗುರುತುಗಳು ಮೈಮೇಲಿದ್ದವು. ನನಗೆ ಆಘಾತವಾಗಲಿಲ್ಲ. ನಾನು ನಿರೀಕ್ಷಿಸಿದ್ದೆ. ಸೀದಾ ಪಟೇಲರ ಮನೆಗೆ ನಾನು ಹೋಗುವ ವೇಳೆಗೆ ಅಲ್ಲಿದ್ದ ಪೊಲೀಸರು ನನ್ನನ್ನು ಬಂಧಿಸಿದ್ದರು.
ಪಟೇಲರ ಹತ್ಯೆಗೆ ಕಾರಣ ಸರಳವಾಗಿತ್ತು. ಭರತನನ್ನು ನನ್ನಿಂದ ಕಿತ್ತುಕೊಂಡು ಹೋದ ಸಂಗತಿ ನಮ್ಮ ಕ್ರಾಂತಿಕಾರಿ ಗುಂಪುಗಳಿಗೆ ತಿಳಿದಿತ್ತು. ಅವರು ನನ್ನ ಬಳಿ ಬಂದು ನನ್ನನ್ನು ಸಮಾಧಾನ ಮಾಡಿದ್ದರಲ್ಲದೇ, ಪಟೇಲರಿಂದ ಭರತನ್ನು ಮತ್ತೊಮ್ಮೆ ವಾಪಾಸು ಕರೆತರುವುದಾಗಿ ಹೇಳಿ ಹೋಗಿದ್ದರು. ನಾನು ಗುಂಪನ್ನು ಸಮಾಧಾನ ಮಾಡುವ ಯತ್ನ ಮಾಡಿದ್ದೆ. ಆದರೆ ನನ್ನ ಮಾತು ಕೇಳದ ಗುಂಪು ಸೀದಾ ಪಟೇಲರ ಮನೆಗೆ ಹೋಗಿತ್ತು. ಅಲ್ಲಿ ವಾಗ್ವಾದಗಳೂ ಆಗಿದ್ದವಂತೆ. ಜೊತೆಗೆ ಪಟೇಲರ ಮೇಲೆ ಏರಿ ಹೋಗಿದ್ದ ಗುಂಪಿನ ಸದಸ್ಯರು ಭರತನನ್ನು ಅವರ ಕೈಯಿಂದ ಕಿತ್ತುಕೊಂಡು ಬರಲು ಯತ್ನಿಸಿದ್ದರಂತೆ. ಹೀಗಿದ್ದಾಗಲೇ ಪಟೇಲರು ಮನೆಯಲ್ಲಿದ್ದ ಹಳೆಯ ಬಂದೂಕನ್ನು ತಂದು ಹೆದರಿಸಲು ಯತ್ನಿಸಿದ್ದರು. ತಕ್ಷಣವೇ ಗುಂಪಿನ ಸದಸ್ಯರಲ್ಲೋರ್ವ ಅವರ ಮೇಲೆ ನುಗ್ಗಿ ಚಾಕುವಿನಿಂದ ಇರಿದಿದ್ದ. ಒಂದೇ ಇರಿತಕ್ಕೆ ಪಟೇಲರು ತೀರಿಕೊಂಡಿದ್ದರು.
ತದನಂತರದಲ್ಲಿ ಪಟೇಲರ ಸಾವಿಗೆ ನಾನೇ ಕಾರಣ ಎಂದು ಕೆಲ ತಿಂಗಳುಗಳ ಜೈಲಾಯಿತು. ಅಷ್ಟರಲ್ಲಿ ಭಾರತ ಸ್ವಾತಂತ್ರ್ಯಗೊಂಡಿತ್ತು. ನಾನು ಬಿಡುಗಡೆಯೂ ಆದೆ. ಇದೇ ನೋಡು ನನ್ನ ಕಥೆ...' ಎಂದರು ಅಜ್ಜಿ.
ನನ್ನಲ್ಲಿ ಮಾತುಗಳಿರಲಿಲ್ಲ.

(ಮುಗಿಯಿತು)

ಇವರು ಜಗತ್ತಿಗೆ ಶ್ರೀಮಂತರು

(ಕತಾರ್)
ಪ್ರಪಂಚದಲ್ಲಿ ಅಜಮಾಸು 200ಕ್ಕೂ ಅಕ ರಾಷ್ಟ್ರಗಳಿವೆ. ಈ  ರಾಷ್ಟ್ರಗಳಲ್ಲಿ, ಕೆಲವು ಪ್ರತಿ ವರ್ಷ ಬಿಲಿಯನ್, ಟ್ರಿಲಿಯನ್ ಆದಾಯ ಉತ್ಪಾದಿಸುತ್ತವೆ. ಮತ್ತೆ ಕೆಲವು ರಾಷ್ಟ್ರಗಳ ಆದಾಯ ತೀರಾ ಕಡಿಮೆ ಇದೆ. ವಿಶ್ವದಲ್ಲಿ ಅದೆಷ್ಟೋ ರಾಷ್ಟ್ರಗಳು ಶ್ರೀಮಂತವಾದವುಗಳು ಎನ್ನುವ ಹಣೆಪಟ್ಟಿಯನ್ನು ಹೊತ್ತು ನಿಂತಿವೆ. ಮತ್ತೆ ಕೆಲವು ರಾಷ್ಟ್ರಗಳು ತೀರಾ ಬಡ ದೇಶಗಳು ಎಂಬ ಕುಖ್ಯಾತಿ ಗಳಿಸಿಕೊಂಡಿವೆ.
ದೇಶದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ದೇಶಗಳು ಶ್ರೀಮಂತವಾಗಿವೆ. ಮಾನವ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಲವಾದ ರಾಷ್ಟ್ರಗಳು ಬಡವಾಗಿವೆ. ಭ್ರಷ್ಟಾಚಾರ, ಸದೃಢ ಆಡಳಿತ ಮುಂತಾದವುಗಳೂ ಕೂಡ ರಾಷ್ಟ್ರಗಳ ಅಭಿವೃದ್ಧಿಗೆ ಕಾರಣವಾಗಿವೆ.

ದೇಶದ ಶ್ರೀಮಂತಿಕೆಯನ್ನು ಅರಿಯಬೇಕಾದರೆ ಆಯಾಯಾ ದೇಶದ ಜಿಡಿಪಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ರಾಷ್ಟ್ರದ ಹಣಕಾಸಿನ ವೌಲ್ಯ, ಒಂದು ನಿಗದಿತ ವಸ್ತುವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಶಕ್ತಿ, ದೇಶಗಳು ಕೊಳ್ಳುವ ಶಕ್ತಿ ಇತ್ಯಾದಿಗಳ ಮೂಲಕ ದೇಶದ ಜಿಡಿಪಿಯನ್ನು ಅರಿಯಲಾಗುತ್ತದೆ. ಈ ಜಿಡಿಪಿಯನ್ನು ಆಧರಿಸಿಕೊಂಡು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕವಾಗಿ ಯಾವ ದೇಶ ಶ್ರೀಮಂತ, ಯಾವ ದೇಶ ಬಡವಾಗಿದೆ ಎನ್ನುವುದನ್ನು ನಿರ್ಧರಿಸುತ್ತದೆ.
(ಲಕ್ಸೆಂಬರ್ಗ್)
ಸಾಮಾನ್ಯವಾಗಿ ಪೆಟ್ರೂಲಿಯಂ ಉತ್ಪನ್ನಗಳನ್ನು ನಂಬಿರುವ ರಾಷ್ಟ್ರಗಳು ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದೆ. ಜಾಗತಿಕವಾಗಿ ಪೆಟ್ರೂಲಿಯಂ ಉತ್ಪನ್ನಗಳಿಗೆ ಬೇಡಿಕೆ ಬಂದಂತೆ ದೇಶದ ಆದಾಯಗಳೂ ಹೆಚ್ಚುತ್ತ ಹೋಗಿ, ಶ್ರೀಮಂತಿಕೆಯ ಮಟ್ಟ ಕೂಡ ಹೆಚ್ಚಾಗುತ್ತದೆ. ಆದರೆ 2014ರಿಂದ ಸತತವಾಗಿ ಇಳಿಯುತ್ತಾ ಸಾಗಿರುವ ತೈಲಬೆಲೆಯು ಕೊಲ್ಲಿ ರಾಷ್ಟ್ರಗಳ ಜಿಡಿಪಿಯನ್ನು ಬಹುವಾಗಿ ಬಾಧಿಸಿವೆ. ಇದೇ ಹೊತ್ತಿನಲ್ಲಿ ಇತರ ದೇಶಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿರುವ ಐರ್ಲೆಂಡ್ ಹಾಗೂ ಐಸ್‌ಲೆಂಡ್ ಮುಂತಾದ ರಾಷ್ಟ್ರಗಳು ಬಂಡವಾಳ ಹಾಗೂ ದೇಶದ ಅಭಿವೃದ್ದಿಯಲ್ಲಿ ಮೂಲಕ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಐಎಂಎಫ್ 2017ರ ಅಕ್ಟೋಬರ್ ತಿಂಗಳಿನಲ್ಲಿ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

1. ಕತಾರ್ (124,930 ಡಾಲರ್)
ಈ ವರ್ಷದ ಶ್ರೀಮಂತ ರಾಷ್ಟ್ರದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕತಾರ್ ಕೇವಲ 22.7ಲಕ್ಷ ಜನಸಂಖ್ಯೆ ಹೊಂದಿದೆ. ಈ ವರ್ಷದ ಒಟ್ಟಾರೆ ಗಳಿಕೆಯನ್ನು ಹಂಚಿದರೆ ಪ್ರತಿ ನಾಗರಿಕನೂ 124,930 ರಷ್ಟು ಧನವನ್ನು ಪಡೆಯುತ್ತಾನೆ. ಈ ಮಾಹಿತಿಯೇ ಅಗ್ರಸ್ಥಾನ ಪಡೆಯಲು ನೆರವಾಗಿದೆ ಎಂದು ಐಎಂಎಫ್ ವರದಿ ಮಾಡಿದೆ. ತೈಲಬೆಲೆ ಇಳಿದಿದ್ದರೂ ಈ ದೇಶದ ಇನ್ನೊಂದು ಉತ್ಪನ್ನವಾದ, ಪರ್ಯಾಯ ಇಂಧನದ ರೂಪವಾದ ಹೈಡ್ರೋ ಕಾರ್ಬನ್ನುಗಳ ಮಾರಾಟ ಈ ದೇಶದ ಗಳಿಕೆಗೆ ನೆರವಾಗಿದೆ. ಜಿಡಿಪಿಯಲ್ಲಿ ಏರಿಕೆಯು ಈ ವರ್ಷವೂ ಮುಂದುವರೆಯಲಿದೆ ಎಂದು ಐಎಂಎಫ್ ಅಂದಾಜಿಸಿದೆ.
(ಸಿಂಗಾಪುರ)

2. ಲಕ್ಸೆಂಬರ್ಗ್ (109,190 ಡಾಲರ್)
ಕೇವಲ ಆರು ಲಕ್ಷದಷ್ಟು ಜನಸಂಖ್ಯೆ ಇರುವ ಈ ರಾಷ್ಟ್ರ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನ ಪಡೆಯಲು ಇದರ ನಾಗರಿಕರಲ್ಲಿ ಹೆಚ್ಚಿನವರು ಉದ್ಯೋಗಸ್ಥರಾಗಿರುವುದೇ ಕಾರಣವಾಗಿದೆ. 2016ರಲ್ಲಿ ಯೂರೋಪಿಯನ್ ಯೂನಿಯನ್ ನ ಒಟ್ಟಾರೆ ಏಳಿಗೆಗಿಂತಲೂ ಈ ದೇಶ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಶ್ರೀಮಂತಿಕೆ ತುಂಬಿ ತುಳುಕುತ್ತಿದೆ. ಆದರೆ ಬ್ರೆಕ್ಸಿಟ್ ಹಾಗೂ ಇತರ ಧೋರಣೆಗಳಲ್ಲಿ ಬದಲಾವಣೆಗಳಿಂದಾಗಿ ಅಮೇರಿಕಾಕ್ಕೆ ಎದುರಾದಂತೆಯೇ ಈ ದೇಶದ ಮೇಲೂ ಪ್ರಭಾವ ಬೀರಬಹುದೆಂದು ಐಎಂಎಫ್ ಅನುಮಾನ ವ್ಯಕ್ತಪಡಿಸಿದೆ.

(ಬ್ರೂನಿ)
3. ಸಿಂಗಾಪುರ (90,530 ಡಾಲರ್)
ವಿಶ್ವದ ಅತಿ ಶ್ರೀಮಂತ ರಾಷ್ಟವಾಗಲು ಈ 2017ರ ಮೊದಲ ಮೂರು ತಿಂಗಳಲ್ಲಿ ಜಿಡಿಪಿಯಲ್ಲಿ ಸಾಸಿದ 2.7% ರಷ್ಟು ಏರಿಕೆಯನ್ನು ಐಎಂಎಫ್ ಪರಿಗಣಿಸಿದೆ. ಅಜಮಾಸು ಐವತ್ತಾರು ಲಕ್ಷದ ಷ್ಟು ಜನಸಂಖ್ಯೆ ಹೊಂದಿರುವ ಈ ಪುಟ್ಟ ರಾಷ್ಟ್ರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಿಂದ ಸತತ ಅಭಿವೃದ್ಧಿ ಸಾಸಿದ್ದರೂ ಕಳೆದ ವರ್ಷ ಕೊಂಚ ಹಿಂದೆ ಬಿದ್ದಿತ್ತು. ಆದರೆ ಈ ರಾಷ್ಟ್ರ ರ್ತುಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಈ ಮೂಲಕ ಪಡೆಯುವ ಲಾಭ ದೇಶವನ್ನು ಶ್ರೀಮಂತವಾಗಿಸಲು ನೆರವಾಗಿದೆ.

4. ಬ್ರೂನಿ (76,740 ಡಾಲರ್)
2016ರಲ್ಲಿ  ರಾಷ್ಟ್ರೀಯ ಆದಾಯದಲ್ಲಿ ಇಳಿಕೆ ಕಂಡಿದ್ದರೂ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿಯೇ ನಿರ್ವಹಿಸಿದೆ ಎಂದು ಜಾಗತಿಕ ಹಣಕಾಸು ನಿ ವರದಿ ಮಾಡಿದೆ. ಕೇವಲ ನಾಲ್ಕು ಲಕ್ಷ ನಾಗರಿಕರಿರುವ ಈ ದೇಶದ ಮುಖ್ಯ ಆದಾಯವಾದ ತೈಲದ ಬೆಲೆ ಕಳೆದ ಎರಡು ವರ್ಷಗಳಿಂದ ಇಳಿಕೆ ಕಂಡಿದೆ. ಆದರೆ ತೈಲ ರಪ್ತು ಇಳಿಕೆಯನ್ನು ಕಂಡಿದೆ. ಇದರಿಂದ ದೇಶದ ಶ್ರೀಮಂತಿಕೆ ಇಳಳಿಮುಖ ಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಶೇ. 90ರಷ್ಟು ಆದಾಯ ತೈಲ ಮತ್ತು ನೈಸರ್ಗಿಕ ಅನಿಲದ ಮಾರಾಟದಿಂದ ಬರುತ್ತಿದೆ. 2014ರಲ್ಲಿ ವಿಶ್ವದ ಅತಿ ಹೆಚ್ಚು ಆದಾಯವನ್ನು ಬ್ರೂನಿ ತೈಲ ಮಾರಾಟದಿಂದಲೇ ಗಳಿಸಿತ್ತು.

(ಐರ್ಲ್ಯಾಂಡ್)
5. ಐರ್ಲೆಂಡ್ (72,630 ಡಾಲರ್)
ಯೂರೋಪ್ ನಲ್ಲಿಯೇ ಅತಿ ಹೆಚ್ಚು ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಸಾಸಿರುವ ದೇಶವಾಗಿರುವ ಐರ್ಲೆಂಡ್. ಇದು ಯೂರೋಪಿನ ಪ್ರಮುಖ ಐದು ಶ್ರೀಮಂತ ದೇಶಗಳಲ್ಲಿ ಒಂದು ಎನ್ನಿಸಿಕೊಂಡಿದೆ. 2016ರಲ್ಲಿ ಈ ದೇಶ ಹೂಡಿಕೆ, ಕಟ್ಟಡ ನಿರ್ಮಾಣ ಮುಂತಾದವುಗಳಿಗೆ ಆದ್ಯತೆ ನೀಡಿದೆ. ದೇಶದ ನೈಸರ್ಗಿಕ ಸಂಪತ್ತಿನ ಸದ್ಬಳಕೆಯಿಂದ ಜಿಡಿಪಿ ಏರಿಕೆಯನ್ನು ಕಂಡಿದೆ ಎಂದು ಐಎಂಎ್ ವರದಿ ಮಾಡಿದೆ.

6. ನಾರ್ವೆ (70,590 ಡಾಲರ್)
ಕೇವಲ ಐವತ್ತು ಲಕ್ಷದ ನಾಗರಿಕರಿರುವ ಈ ಸ್ಕಾಂಡಿನೀವಿಯನ್ ದೇಶ ಇದು. ಮ‘್ಯರಾತ್ರಿಯ ಸೂರ್ಯನ ನಾಡು ಎನ್ನುವ ಖ್ಯಾತಿಯೂ ನಾರ್ವೇಗೆ ಇದೆ. ವಿಶ್ವದ ಐದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಿಂದ ಒಂದೇ ಹಂತ ದೂರದಲ್ಲಿದೆ. ಐಎಂಎ್ ಪ್ರಕಾರ ಕೆಳೆದ ಎರಡು ವರ್ಷಗಳಲ್ಲಿ ತೈಲಬೆಲೆ ಇಳಿಕೆಯಿಂದ ಪ್ರ‘ಾವಗೊಂಡಿತ್ತು. 2008 ಮತ್ತು 2009ರ ಆರ್ಥಿಕ ಹಿಂಜರಿತದಿಂದಲೂ ಈ ದೇಶ ನಲುಗಿತ್ತು. ಆದರೆ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು  ಮತ್ತು ನಿರುದ್ಯೋಗ ಕಡಿಮೆ ಮಾಡಲು ಕೈಗೊಂಡ ಪ್ರಯತ್ನಗಳು ಈ ದೇಶವನ್ನು ಮತ್ತೊಮ್ಮೆ  ಜಾಗತಿಕ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ.

(ನಾರ್ವೇ)
7. ಕುವೈತ್ ( 69,670 ಡಾಲರ್)
ಅಜಮಾಸು ನಲವತ್ತು ಲಕ್ಷಗಳಷ್ಟು ಜನಸಂಖ್ಯೆಯನ್ನು ಹೊಂದಿರುವ  ಈ ದೇಶಕ್ಕೆ ತೈಲಮಾರಾಟವೇ ಪ್ರಮುಖ ಆದಾಯವಾಗಿತ್ತು. 2016ರಲ್ಲಿ ಇಳಿಕೆಯಾದ ತೈಲಬೆಲೆ ದೇಶದ ಆರ್ಥಿಕತೆಯ ಮೇಲೆ ಪ್ರ‘ಾವ ಬೀರಿತ್ತು ಎಂದು ಐಎಂಎ್ ವರದಿ ತಿಳಿಸುತ್ತದೆ. ಆದರೆ ತೈಲದ ಹೊರತಾಗಿ ಇತರ ಕ್ಷೇತ್ರಗಳಲ್ಲಿ ದೇಶ ಹೂಡಿದ ಹೂಡಿಕೆ ಈ ಹಿಂಜರಿಕೆಯಿಂದ ಹೊರಬರಲು ನೆರವಾಗಿದೆ ಹಾಗೂ ನೆರವಾಗುತ್ತಿದೆ.

8. ಸಂಯುಕ್ತ ಅರಬ್ ಸಂಸ್ಥಾನ (68,250 ಡಾಲರ್)
ತೈಲಬೆಲೆ ಹೆಚ್ಚಿದ್ದಾಗ ವಿಶ್ವದ ಶ್ರೀಮಂತ ರಾಷ್ಟ್ರವಾಗಿದ್ದ ಯು.ಎ.ಇ. ತೈಲಮಾರುಕಟ್ಟೆಯಲ್ಲಿ ಆಗಿರುವ ಇಳಿಕೆಯಿಂದ 2016ರಲ್ಲಿ ಪಟ್ಟಿಯಲ್ಲಿ ಕೆಳಗಿಳಿಯಬೇಕಿತ್ತು. ಆದರೆ ಈ ರಾಷ್ಟ್ರ ತೈಲದ ಮೇಲಿನ ಅವಲಂಬನೆಯಿಂದ ಹೊರಬರಲು 1994ರಲ್ಲಿ ಕೈಗೊಂಡಿದ್ದ ಕ್ರಮಗಳ ಪರಿಣಾಮವಾಗಿ ಇತರ ಕ್ಷೇತ್ರಗಳ ಮೇಲೆ ಹೂಡಿದ್ದ ಹೂಡಿಕೆಗಳು ಇಂದು ಲನೀಡುತ್ತಿದ್ದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇಂದಿಗೂ ಸ್ಥಾನ ಪಡೆಯುವಂತಾಗಿದೆ. ಸುಮಾರು ಒಂದು ಕೋಟಿಯಷ್ಟು ನಾಗರಿಕರು ವಿಶ್ವದ ಅತ್ಯಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ. ಈ ಏರಿಕೆ 2017ರಲ್ಲಿ ಮುಂದುವರೆಯುತ್ತಾ ಸಾಗಿದೆ.

(ಕುವೈತ್)
9. ಸ್ವಿಟ್ಝರ್ಲೆಂಡ್ (61,360 ಡಾಲರ್)
2015ರಲ್ಲಿ ಈ ದೇಶದ ಕೇಂದ್ರೀಯ ಬ್ಯಾಂಕ್ 52 ಬಿಲಿಯಲ್ ಡಾಲರುಗಳನ್ನು ಕಳೆದುಕೊಂಡ ಬಳಿಕ ಈಗ ಚೇತರಿಕೆಯ ಹಂತದಲ್ಲಿದೆ. 2016ರಲ್ಲಿ ನಿ‘ಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ದೇಶ ಕಳೆದ ವರ್ಷ ಶೇ.1.5ನಷ್ಟು ಪ್ರಗತಿ ಸಾಸಿದೆ. ಅಲ್ಲದೇ ಈ ಹಿಂಜರಿತದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನಗಳು ಎಂಭತ್ತು ಲಕ್ಷ ಜನಸಂಖ್ಯೆಯ ಈ ದೇಶವನ್ನು ನಿಧಾನ ಹಿಂದಿನ ವೈಭವಕ್ಕೆ ಮರಳಿಸುತ್ತಿವೆ.

10. ಹಾಂಗ್‌ಕಾಂಗ್ (61,020 ಡಾಲರ್)
 ಐಎಂಎ್ ನೀಡಿರುವ ವರದಿಯ ಪ್ರಕಾರ 2016ರಲ್ಲಿ ಈ ದೇಶದ ಪ್ರಗತಿಯ ಗತಿ ನಿ‘ಾನವಾಗಿತ್ತು. ಆದರೂ ಈ ದೇಶ ಪಟ್ಟಿಯಲ್ಲಿ ಕೊಂಚ ಕೆಳಕ್ಕೆ ಇಳಿದಿರಬಹುದೇ ಹೊರತು ಹೊರಬಿದ್ದಿಲ್ಲ. ಇಂದಿಗೂ ಈ ದೇಶ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಕಳೆದ ವರ್ಷ ನೆರೆಯ ಚೀನಾದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಗೂ ದೇಶದ ಉತ್ಪನ್ನಗಳನ್ನು ಕೊಳ್ಳುವಿಕೆಯೂ ಕಡಿಮೆಯಾದ ಕಾರಣ ಹಿಂಜರಿತಕ್ಕೆ ಒಳಗಾಗಿತ್ತು. ಆದರೆ ಈ ವರ್ಷ ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಹೂಡಿಕೆಯ ಮೂಲಕ ಮತ್ತೊಮ್ಮೆ ಏರುಮುಖದತ್ತ ಸಾಗುತ್ತಿದೆ. ಪುಟ್ಟ ರಾಷ್ಟ್ರವಾಗಿದ್ದರೂ ಇದರ ಎಪ್ಪತ್ತು ಲಕ್ಷ ಜನರು ವಾಸವಾಗಿದ್ದು ಜಗತ್ತಿನ ಅತಿ ಹೆಚ್ಚಿನ ಜನಸಾಂದ್ರತೆ ಹೊಂದಿರುವ ದೇಶವಾಗಿದೆ.

(ಯುಎಇ)
11. ಸ್ಯಾನ್ ಮಾರಿನೋ (60,360 ಡಾಲರ್)
ಕೇವಲ ತೊಂ‘ತ್ತು ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಷ್ಟ್ರದಲ್ಲಿ ನಿರುದ್ಯೋಗ ನಿವಾರಣೆಗೆ ನೀಡಿರುವ ಹೆಚ್ಚಿನ ಒತ್ತು ಹಾಗೂ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೇಶದ ಏಳಿಗೆಗೆ ನೆರವಾಗಿದೆ. ಆರ್ಥಿಕ ಹಿಂಜರಿತದಿಂದ ನಲುಗಿದ್ದ ರಾಷ್ಟ್ರಕ್ಕೆ ಈ ಪ್ರಯತ್ನಗಳೇ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿವೆ.

12. ಅಮೇರಿಕಾ ಸಂಯುಕ್ತ ಸಂಸ್ಥಾನ (59,500 ಡಾಲರ್) ಐಎಂಎ್ ಪ್ರಕಾರ, ಈ ವಿಶಾಲ ದೇಶದಲ್ಲಿ 32.5 ಕೋಟಿ ಜನರಿದ್ದು 1850ರಿಂದ ಈ ದೇಶ ಪಡೆದ ಅಗಾ‘ ಬೆಳವಣಿಗೆ ಹಾಗೂ ವಿಸ್ತರಣೆ ವಿಶ್ವದಲ್ಲಿಯೇ ಅಪ್ರತಿಮವಾಗಿದ್ದು ಈ ಬೆಳವಣಿಗೆ ಇಂದಿಗೂ ಮುಂದುವರೆಯುತ್ತಿದೆ. 2016ರ ಐಎಂಎ್ ವರದಿಯ ಪ್ರಕಾರ ಈ ದೇಶದಲ್ಲಿ ನಿರುದ್ಯೋಗ ಅತಿ ಕಡಿಮೆ ಇದ್ದು ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಬಂಡವಾಳ ಹಾಗೂ ಖರ್ಚು ಮಾಡುವ ಶಕ್ತಿ ಈ ದೇಶದ ಏಳ್ಗೆಗೆ ನೆರವಾಗುತ್ತಿವೆ.

(ಸ್ವಿಟ್ಜರ್ಲ್ಯೆಂಡ್)
13. ಸೌದಿ ಅರೇಬಿಯಾ (55,260 ಡಾಲರ್)
ಈ ದೇಶದ ಜಿಡಿಪಿ ಬಹುತೇಕವಾಗಿ ತೈಲದ ಮಾರಾಟವನ್ನೇ ಆಧರಿಸಿದೆ. ಇತ್ತೀಚಿನ ತೈಲಬೆಲೆಯಲ್ಲಿ ಕುಸಿತದ ಬಳಿಕ ಇತರ ಕ್ಷೇತ್ರಗಳಲ್ಲಿಯೂ ದೇಶ ಹೂಡಿರುವ ಹಣವನ್ನು ಪರಿಗಣಿಸಿ ಐಎಂಎಫ್ ಮುಂದಿನ ವರ್ಷಗಳಲ್ಲಿ ಪಡೆಯಬಹುದಾದ ಏಳಿಗೆಯನ್ನೂ ಮುಂಗಂಡು ಈ ಪಟ್ಟಿಯಲ್ಲಿ ಸ್ಥಾನ ನೀಡಿದೆ. 3.2 ಕೋಟಿ ಜನಸಂಖ್ಯೆಯ ಈ ದೇಶ ಈಗ ವಿಷನ್ 2030 ಅಥವಾ 2030ರಲ್ಲಿ ದೇಶ ಪಡೆಯಬೇಕಾದ ಏಳ್ಗೆಗಾಗಿ ಇಂದಿನ ಕ್ರಮಗಳನ್ನು ಹೊರಡಿಸಿದ್ದು ನಿ‘ಾನವಾಗಿ ತೈಲದ ಮೇಲಿನ ಅವಲಂಬನೆಯಿಂದ ಹೊರಬರುವ ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ದೇಶದ ಚುಕ್ಕಾಣಿ ಹಿಡಿದಿರುವವರ ಮನಸ್ಥಿತಿ ಆಧುನಿಕ ದೇಶ ನಿರ್ಮಾಣ ಮಾಡುವುದರತ್ತ ಒಲವು ಹೊಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸೌದಿ ಅರೆಬಿಯಾ ಇನ್ನಷ್ಟು ಆದಾಯ ಗಳಿಕೆ ಮಾಡಿಕೊಂಡು, ತನ್ನ ಸ್ಥಾನದಲ್ಲಿ ಏರಿಕೆಯನ್ನು ಕಂಡರೂ ಅಚ್ಚರಿ ಪಡಬೇಕಿಲ್ಲಘಿ.

14. ನೆದರ್ಲ್ಯಾಂಡ್ಸ್ (53,580 ಡಾಲರ್)
2016ರ ಅಂಕಿ ಅಂಶಗಳ ವರದಿಯನ್ನು ಗಮನಿಸಿದ ಐಎಂಎ್ ಹಿಂದಿನ ವರ್ಷಗಳಲ್ಲಿ ಎದುರಾಗಿದ್ದ ಆರ್ಥಿಕ ಹಿಂಜರಿತವನ್ನು ಎದುರಿಸಿ ಮುಂದೆ ಬರುವ ಪ್ರಯತ್ನ ಹಾಗೂ ಬ್ರೆಕ್ಸಿಟ್ ಒಪ್ಪಂದದ ಮೂಲಕ ದೇಶದ ಆರ್ಥಿಕತೆಗೆ ಎದುರಾಗಿದ್ದ ಕಂಟಕದಿಂದ ಪಾರಾಗುವ ಕ್ರಮಗಳನ್ನೂ ಪರಿಗಣಿಸಿದೆ. ನೆದರ್ಲ್ಯಾಂಡ್ಸ್ ವಾಸ್ತವವಾಗಿ ನೆದರ್ಲ್ಯಾಂಡ್ಸ್, ಅರೂಬಾ, ಕುರಾಕಾವೋ ಹಾಗೂ ಸೈಂಟ್ ಮಾರ್ಟೆನ್ ಎಂಬ ನಾಲ್ಕು ದೇಶಗಳನ್ನು ಸಂಯುಕ್ತವಾಗಿ ನೆದರ್ಲ್ಯಾಂಡ್ಸ್ ಅಪತ್ಯ ಎಂದು ಕರೆಯಲಾಗುತ್ತದೆ. ಡೆನ್ಮಾರ್ಕ್ ಎಂಬ ಹೆಸರೂ ಈ ದೇಶಕ್ಕಿದೆ. ಈ ದೇಶದ ಒಟ್ಟಾರೆ ಜನಸಂಖ್ಯೆ ಕೇವಲ 1.7 ಕೋಟಿ. ಇವರಲ್ಲಿ ಹೆಚ್ಚಿನವರು ನೆದರ್ಲ್ಯಾಂಡ್ಸ್‌ನ ಪ್ರಮುಖ ದ್ವೀಪದಲ್ಲಿಯೇ ನೆಲೆಸಿದ್ದಾರೆ.

(ಹಾಂಗ್ ಕಾಂಗ್)
15. ಐಸ್‌ಲ್ಯಾಂಡ್ (52,150 ಡಾಲರ್)
ಹೆಸರೇ ಸೂಚಿಸುವಂತೆ ಈ ರಾಷ್ಟ್ರ ಅತಿ ಶೀತಲವಾದ ಪ್ರದೇಶ ಹೊಂದಿದೆ. ದೇಶದ ಎತ್ತ ನೋಡಿದರೂ ಹಿಮವೇ ಆವೃತ್ತವಾಗಿದೆ. ದೇಶದಾದ್ಯಂತ ಇರುವ ಮಂಜೇ ಈ ದೇಶದ ಪ್ರಮುಖ ಆದಾಯ. ಈ ಹಿಮವನ್ನೇ ಪ್ರವಾಸೋದ್ಯಮಕ್ಕೆ ಬಳಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ದೇಶದ ಜಿಡಿಪಿ ಏರಲು ಬಳಸಿಕೊಂಡಿದೆ. ಈ ಪುಟ್ಟ ರಾಷ್ಟ್ರವನ್ನು ವೀಕ್ಷಣೆ ಮಾಡಲು ತೆರಳುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತನ್ಮೂಲಕ ಆದಾಯ ಕೂಡ ಹೆಚ್ಚಳವಾಗುತ್ತಿದೆ. ಈ ಏಳಿಗೆಯನ್ನು ಗಮನಿಸಿದ ಐಎಂಎ್ ಅಂಕಿ ಅಂಶಗಳ ಆಧಾರದ ಮೇಲೆ ಈ ಬೆಳವಣಿಗೆ ಹೆಚ್ಚಿನ ಅವಯವರೆಗೆ ಮುಂದುವರೆಯಲಿದೆ ಎಂದು ಊಹಿಸಿ ಹದಿನೈದನೆಯ ಸ್ಥಾನವನ್ನು ನೀಡಿದೆ.

Friday, December 29, 2017

ವಾರ್ತಾ ವಾಹಿನಿಗಳ ಅಮರ ಚಿತ್ರಕಥಾ

ಸಮಯ : 8.00 ಮುಂಜಾನೆ
ಸಂಗಪ್ಪ : ಆಲ್ ರೈಟ್.. ಎಲ್ಲಾ ಇದ್ದೀರಾ? ಶುರು ಹಚ್ಚಿಕೊಳ್ಳೋಣವಾ?
ರಂಗಮ್ಮ : ಯೆಸ್ ಸರ್.. ಶುರು ಹಚ್ಚಿಕೊಳ್ಳೋಣ..
ಸಂಗಪ್ಪ : ನೋಡಿ.. ಇವತ್ತು ಹೆಂಗೆ ನ್ಯೂಸ್ ಬರಬೇಕು ಅಂದ್ರೆ ಕರ್ನಾಟಕ ಹೊತ್ತಿಕೊಂಡು ಉರಿಯಬೇಕು ತೀಳೀತಾ? ರೀ ಕಾಪಿ ಎಡಿಟರ್.. ಕಾಪಿ ಸರಿ ಮಾಡಿ ಅಂದ್ರೆ ಕಾಪಿ ಕುಡಿತಾ ಇದ್ದೀರಾ? ನಾನ್ ಸೆನ್ಸ್.. ಹೇಳಿದ್ ಕೆಲಸ ಮಾಡ್ರೀ.. ಓಕೆ.. ಪ್ಯಾನಲ್ ಡಿಸ್ಕಷನ್ಗೆ ಬರೋದಿಕ್ಕೆ ಯಾರ್ ಯಾರಿಗೆ ಹೇಳಿದ್ದೀರಾ?
ರಂಗಮ್ಮ : ರಮೇಶ್ ಸುಮನ್ ಕುಟ್ಟು ಅವರು ಬರ್ತೀನಿ ಅಂದಿದ್ದಾರೆ. ಅವರಿಗೆ ಪಾಟೀ ಸವಾಲು ಹಾಕೋಕೆ ಯಾರೂ ಸಿಗ್ತಾ ಇಲ್ಲ.
ಸಂಗಪ್ಪ : ನೋಡೋಣ ಬಲಕ್ಕೆ ಹೊರಳೋಣ. ಯಾರಾದ್ರೂ ಸಿಕ್ತಾರೆ. ಸ್ವೀಟಿ ರವಿ ಅವರನ್ನ ವಿಚಾರಿಸಿ. bemki  ಹತ್ತಬೇಕು. ಅಂದ ಹಾಗೇ ಖನ್ನಡ ಮಾತಾಡೋ ಸಂಘಟನೆಯವರು ಯಾರಾದ್ರೂ ಇದ್ದರೆ ಅವರನ್ನು ಬರಕ್ ಹೇಳಿ.
ರಂಗಮ್ಮ : ರಾಮಾಯಣ ಗೌಡರಿಗೆ ಹೇಳಲಾ?
ಸಂಗಪ್ಪ  : ಆ ಯಪ್ಪಂಗೆ ಸರಿಯಾಗಿ ಕನ್ನಡ ಬರೋದಿಲ್ಲ. ಆ ವಯ್ಯನ್ನ ಕಟ್ಟಿಕಂಡು ನಾವ್ ಹೆಂಗ್ ಪ್ಯಾನಲ್ ಡಿಸ್ ಕಷನ್ ಮಾಡಣ ಹೇಳಿ? ಇರ್ಲಿ ಕರಕಂಡು ಬನ್ನಿ.
ರಂಗಮ್ಮ : ಆಯ್ತು. ಹಂಗೇ ಮಾಡ್ತೀನಿ ಬಿಡಿ
ಸಂಗಪ್ಪ  : ಆ ರಿಪೋರ್ಟರ್ ಎಂಡ್ ಕ್ಯಾಮರಾಮನ್ ಸ್ಯಾಟಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾನೇನ್ರಿ? ವಾಟ್ ? ನಾನ್ ಸೆನ್ಸ್.. ಯೂಸ್ ಲೆಸ್ ಫೆಲ್ಲೋ..ಬೇಗನೆ ಹೋಗಕ್ಕೆ ಹೇಳ್ರಿ ಆ ವಯ್ಯಂಗೆ.. ಆಲ್ ರೈಟ್ ಶುರು ಹಚ್ಚಿಕೊಳ್ಳೋಣವಾ?

------------
ಸಂಗಪ್ಪ  :
ನಮಸ್ಕಾರ ದೊಡ್ ಸುದ್ದಿಗೆ ಸ್ವಾಗತ... ನೋಡುಗರಿಗೆಲ್ಲ ದೊಡ್ ನಮಸ್ಕಾರ..
ಎಲ್ಲರ ನಿರೀಕ್ಷೆಯಂತೆ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಎಲ್ಲೆಡೆ ಗಲಾಟೆ... ದೊಂಬಿ.. ನಡೆಯುತ್ತಿದೆ.. ಎಲ್ಲಿ ಏನ್ ಆಗ್ತಾ ಇದೆ ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ.. ನಮಗೂ ಗೊತ್ತಾಗ್ತಾ ಇಲ್ಲ ಅನ್ನೋದು ಇಂಟರೆಸ್ಟಿಂಗ್..
ಪೊಲೀಸರು ಅವರ ಸಮವಸ್ತ್ರದಲ್ಲಿ ಬಂದಿದ್ದಾರೆ.. ಜನರೆಲ್ಲ ಬಟ್ಟೆ ಹಾಕಿಕೊಂಡು ಬಂದಿದ್ದಾರೆ. ಗಲಾಟೆ ನಡಿತಾ ಇದೆ. ಆದರೆ ಎಲ್ಲಿ ಯಾವ ರೀತಿ ಗಲಾಟೆ ಆಗ್ತಾ ಇದೆ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟವಾಗ್ತಾ ಇಲ್ಲ. ಮೆಜೆಸ್ಟಿಕ್ನಿಂದ ಹಿಡಿದು ಆನೇಕಲ್ಲು, ಕೆಂಗೇರಿಯಿಂದ ಹಿಡಿದು ಹೊಸಕೋಟೆ ತನಕ ಬೆಂಗಳೂರು ವೊತ್ತಿ ವೊತ್ತಿ ಹುರಿತಾ ಇರೋದು ಇವತ್ತಿನ ಸ್ಪೆಷಲ್ ಸುದ್ದಿ.
ರಂಗಮ್ಮ :
ಹೊತ್ತಿ ಉರಿತಾ ಇದೆ ಅಂದ್ರೆ ಎಲ್ಲ ಕಡೆ ಬೆಂಕಿನಾ ಸಾರ್..
ಸಂಗಪ್ಪ  :
ಹೊತ್ತಿ ಉರಿಯೋದು ಅಂದ್ರೆ ಬೆಂಕಿ ಅಲ್ದೆ ಇನ್ನೇನ್ ನೀರೇನಮ್ಮಾ.. ಆಲ್ ರೈಟ್ ಮುಂದಕ್ ಹೋಗೋಣ.. ಬೆಂಗಳೂರು ಹೊತ್ತಿ ಉರಿಯುತ್ತಿರುವುದು ನಮ್ಮ ಕಣ್ಣಿಗೆ ಹೇಗೆ ಕಾಣ್ತಾ ಇದೆ ಅಂದ್ರೆ ಒಂದೆರಡು ಹೆಣ ಬೀಳೋದಂತೂ ಗ್ಯಾರಂಟಿ.. ಹೆಣಗಳ ಸಂಕ್ಯೆ ಹೆಚ್ಚಾಗಲೂ ಬಹುದು.. ಎಷ್ಟು ನಿಮಿಷಕ್ಕೆ ಎಷ್ಟು ಹೆಣಬಿತ್ತು ಅನ್ನೋದನ್ನ ನಾವು ನಿಮಗೆ ಲೈವ್ ಆಗಿ ಕಾಲ ಕಾಲಕ್ಕೆ ತೋರಿಸ್ತಾ ಇರ್ತೀವಿ.. ಈ ನಡುವೆ ಒಂದು ಸಣ್ಣ ವಿರಾಮ.. ಎಲ್ಲೂ ಹೋಗಬೇಡಿ.. ಇಲ್ಲೇ ಇರಿ..

--------------
ಸಂಗಪ್ಪ  : ರಿಪೋರ್ಟರ್ ಸ್ಪಾಟಲ್ ಇದಾನಂತಾ... ಓಕೆ.. ಈಗ ಪೋನ್ ಇನ್ ಮಾಡೋಣ. ಸರಿ.. ಆ ರಿಪೋರ್ಟರ್ ಗೆ ಮೊದಲೇ ಹೇಳ್ರಪ್ಪಾ.. ಹೊತ್ತಿ ಉರಿಯೋ ಥರ ರಿಪೋರ್ಟ್ ಮಾಡೊಕೆ.. ಎಲ್ಲೂ ಇದು ಬಂದಿರಬಾರದು.. ಅಂತದ್ದು ಹೇಳೋಕೆ ಹೇಳಿ.. ಎಷ್ಟು.. ನಾಲ್ಕು ಜಾಹೀರಾತು ಆಯ್ತಾ.. ಇನ್ನೆರಡು ಹಾಕಿ... ರೈಟ್

-------------

ಸಂಗಪ್ಪ  : ಮತ್ತೊಮ್ಮೆ ದೊಡ್ ಸುದ್ದಿಗೆ ಸ್ವಾಗತ... ನೀವು ನೋಡುತ್ತಿದ್ದಂತೆಯೇ ಬೆಂಗಳೂರು ಇನ್ನಷ್ಟು ಹೊತ್ತಿ ಉರಿಯುತ್ತಿರುವುದು ಗಮನಕ್ಕೆ ಬರುತ್ತಿದೆ. ಎಲ್ಲೆಲ್ಲೂ ಗಲಾಟೆ, ದೊಂಬಿ.. ಇದು ನಮ್ ಚಾನಲ್ ನಲ್ಲಿ ಮಾತ್ರ.. ಬೇರೆಲ್ಲೂ ಇಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನೀಡೋಕೆ ಸ್ಥಳದಲ್ಲಿ ಇರೋ ನಮ್ ರಿಪೋರ್ಟರ್ ಗುಂಪಲ್ ಗೋವಿಂದ ಲೈನ್ ನಲ್ ಇದ್ದಾರೆ.. ಹೇಳಿ ಗುಂಪಲ್ ಗೋವಿಂದ ಅವರೇ.. ಏನಾಗ್ತಿದೆ ಅಲ್ಲಿ.. ಪರಿಸ್ಥಿತಿ ಹೇಗಿದೆ?
ಗುಂಪಲ್ ಗೋವಿಂದ : ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈ ಒಂದು ಪರಿಸ್ಥಿತಿ ಯಾವ ಕ್ಷಣದಲ್ಲಿ ಕೈಮೀರುತ್ತದೆ ಎನ್ನುವುದು ಕಷ್ಟ ಇದೆ. ಬೆಂಗಳೂರು ವೊತ್ತಿ ಹುರಿಯುತ್ತಿದೆ.
ಸಂಗಪ್ಪ  : ಗೋವಿಂದ ಹೇಳಿ ಬೆಂಗಳೂರು ಹೇಗೆ ಹೊತ್ತಿ ಉರಿಯುತ್ತಿದೆ?
ಗು.ಗೋ : ಯೇಗೆ ವೊತ್ತು ಹುರಿಯುತ್ತಿದೆ ಎನ್ನುವುದು ಇನ್ನೂ ನಮಗೆ ಸ್ಪಷ್ಟವಾಗಬೇಕಿದೆ. ಆದರೆ ಈ ವೊಂದು ಬೆಂಕಿ ಕ್ಷಣ ಕ್ಷಣಕ್ಕೂ ಕೆನ್ನಾಲಿಗೆಯಂತೆ ಚಾಚುತ್ತಿರುವುದು ಸ್ಪಷ್ಟವಾಗುತ್ತಿದೆ. ನಾವು ನೋಡ್ತಾ ಇದ್ದಂತೆ ವೊಗೆ ಸಿಕ್ಕಾಪಟ್ಟೆ ಯೆಚ್ಚಿದೆ. ಎಲ್ಲೋ ಒಂದು ಕಡೆ ಬೆಂಕಿ ಇರೋದಂತೂ ಸ್ಪಷ್ಟ..
ಸಂಗಪ್ಪ : ಗೋವಿಂದ ಅವರೇ ಬೆಂಕಿ ಎಲ್ಲಿಂದ ಹೊತ್ಕೊಂಡಿದೆ ಅನ್ನೋದು ಗೊತ್ತಾಯ್ತಾ?
ಗು. ಗೋ : ಅದಿನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬರಬೇಕಿದೆ. ಆದರೆ ಎಲ್ಲೋ ಒಂದು ಕಡೆ ಬೆಂಕಿ ತೀವ್ರವಾಗಿದ್ದು ಸ್ಪಷ್ಟ. ಬೆಂಗಳೂರಿಗರು ಬೆಂಕಿಯಲ್ಲಿ ವೊತ್ತಿ ಹುರಿದು ಬೆಂದು ವೋಗ್ತಿದ್ದಾರೆ. ಈ ವೊಂದು ಪರಿಸ್ಥಿತಿ ಯೇನಿದೆ ಇದು ಏನು ಅಂತ ಇನ್ನೂ ಸ್ಪಷ್ಟವಾಗ್ತಾ ಇಲ್ಲ...
ಸಂಗಪ್ಪ  : ಆಲ್ ರೈಟ್ ಗೋವಿಂದ ಅವ್ರೇ.. ಅಲ್ಲಿಗೆ ಏನಾದ್ರೂ ಅಗ್ನಿಶಾಮಕ ವಾಹನಗಳು ಬಂದಿದೆಯಾ ಹೇಗೆ?
ಗು. ಗೋ :  ಹಗ್ನಿಶಾಮಕ ವಾಹನ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತಂತೆ ಇನ್ನೂ ಯೆಚ್ಚಿನ ಮಾಹಿತಿ ಕೇಳಿ ಬರಬೇಕಿದೆ. ಈ ಒಂದು ಸಂದರ್ಭದಲ್ಲಿ ನಾನು ಯೇಳೋದು ಹೇನು ಅಂದ್ರೆ ಬೆಂಕಿ ಧಗ ಧಗನೆ ಉರಿತಾ ಇದೆ..
ಸಂಗಪ್ಪ : ಹೊತ್ತಿ ಉರಿಯುವ ಬೆಂಕಿ ಈಗಾಗಲೇ ಬೆಂಗಳೂರನ್ನು ದಾಟಿ ಮುನ್ನುಗ್ಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈ ಕೆನ್ನಾಲಿಗೆ ಯಾರ್ಯಾರನ್ನ ಬಲಿ ತೆಗೆದುಕೊಳ್ಳುಕಾದು ನೋಡಬೇಕಿದೆ. ಯಾವುದಕ್ಕೂ ನೋಡ್ತಾ ಇರಿ.. ನಮ್ ಟಿವಿ


(ಮುಂದುವರಿಯುವುದು...)

Tuesday, December 26, 2017

ಮುಂಬಯಿಯಲ್ಲಿನ್ನು ಎಸಿ ಲೋಕಲ್ ರೈಲು

ಭಾರತೀಯ ರೈಲ್ವೆಗೆ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಈ ಅವಯಲ್ಲಿ ಭಾರತೀಯ ರೈಲ್ವೆ ಅನೇಕ ಏಳು ಬೀಳುಗಳನ್ನೂ ಕಂಡಿದೆ. ಸಾಕಷ್ಟು ಬೆಳವಣಿಗೆಗಳು, ತಾಂತ್ರಿಕ ಅಭಿವೃದ್ಧಿ ಭಾರತೀಯ ರೈಲ್ವೆಯಲ್ಲಿ ಆಗಿದೆ. ಉಂಗಿಬಂಡಿಗಳು ಓಡುತ್ತಿದ್ದ ಜಾಗದಲ್ಲಿ ಡೀಸೇಲ್ ಇಂಜಿನ್ನುಗಳು, ವಿದ್ಯುತ್ ರೈಲುಗಳೂ ಬಂದಿವೆ. ಅಷ್ಟೇ ಏಕೆ ಇದೀಗ ಭಾರತದಲ್ಲಿ ಬುಲೆಟ್ ಟ್ರೇನ್ ಓಡಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಸಾಗಿವೆ.
ಅದೇ ರೀತಿ ರೈಲ್ವೆಯ ಕಾರ್ಯಕ್ಷಮತೆ ಕೂಡ ಹೆಚ್ಚಿದೆ. ರೈಲ್ವೆ ನಿಲ್ದಾಣಗಳ ಸುಧಾರಣೆ, ಹಳಿಗಳ ಬದಲಾವಣೆ, ಮಾರ್ಗಗಳ ವಿದ್ಯುದೀಕರಣ, ಹಳಿಗಳ ಡಬ್ಲಿಂಗ್, ಬೋಗಿಗಳ ಸುಧಾರಣೆ ಹೀಗೆ ಹಲವಾರು ವಿಭಾಗಗಳಲ್ಲಿ ರೈಲ್ವೆ ಅಭಿವೃದ್ಧಿಯನ್ನು ಕಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಹಳೆಯ ಬೋಗಿಗಳ ಬದಲು ಹೊಸ, ಆಧುನಿಕ ವ್ಯವಸ್ಥೆಯನ್ನೊಳಗೊಂಡ ಬೋಗಿಗಳು ಬಂದಿವೆ. ಸುಖಾಸೀನ ಸೀಟುಗಳನ್ನೊಳಗೊಂಡ ಬೋಗಿಗಳು, ಹವಾನಿಯಂತ್ರಿತ ಬೋಗಿಗಳೂ ಬಂದಿದೆ. ಇದೀಗ ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೇನುಗಳಲ್ಲಿಯೂ ಕೂಡ ಹವಾ ನಿಯಂತ್ರಿತ ಬೋಗಿಗಳನ್ನು ಅಳವಡಿಕೆ ಮಾಡಲಾಗಿದ್ದು, ಈ ರೈಲುಗಳು ಸೋಮವಾರದಿಂದ ಓಡಾಟ ನಡೆಸಲು ಆರಂಭಿಸಿವೆ.


ಮುಂಬಯಿ ಲೋಕಲ್ ರೈಲ್ವೆ ಇತಿಹಾಸ-ವಿಶೇಷ
ಮುಂಬಯಿಯ ಮಹಾನಗರ ರೈಲ್ವೆ ವಿಭಾಗಕ್ಕೊಳಪಟ್ಟಿರುವ ಮುಂಬಯಿಯ ಲೋಕಲ್ ರೈಲುಗಳ ಜಾಲ ಎಂತವರನ್ನೂ ನಿಬ್ಬೆರಗಾಗಿಸುತ್ತದೆ. 465 ಕಿಲೋಮೀಟರ್ (289ಮೈಲು) ವಿಸ್ತಾರವಾಗಿರುವ ಮುಂಬಯಿ ಲೋಕಲ್ ಟ್ರೇನ್ ಜಾಲವು ಪ್ರತಿದಿನ 2342 ರೈಲ್ವೆ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಸರಾಸರಿ 7.5 ಮಿಲಿಯನ್ ಪ್ರಯಾಣಿಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುತ್ತದೆ. ಜಗತ್ತಿನ ಅತ್ಯಂತ ಜನನಿಬಿಡ ಲೋಕಲ್ ರೈಲ್ವೆ ಜಾಲಗಳಲ್ಲಿ ಮುಂಬಯಿ ಸಬ್‌ಅರ್ಬನ್ ರೈಲ್ವೇಯೂ ಒಂದು ಎನ್ನಿಸಿಕೊಂಡಿದೆ. ಮುಂಜಾನೆ 4 ಗಂಟೆಯಿಂದ ಮಧ್ಯ ರಾತ್ರಿ 1 ಗಂಟೆಯವರೆಗೂ ರೈಲು ಸೇವೆ ಇರುವುದೂ ಕೂಡ ವಿಶೇಷ. 1853ರ ಎಪ್ರಿಲ್ 16ರಂದು ಮದುಆಹ್ನ 3.35ಕ್ಕೆ ಮೊಟ್ಟಮೊದಲ ಸಬ್ ಅರ್ಬನ್ ರೈಲು ಓಡಿತ್ತುಘಿ. ಸಾಮಾನ್ಯವಾಗಿ ಪ್ರತಿ ರೈಲುಗಳಲ್ಲಿಯೂ 12ರಿಂದ 15 ಬೋಗಿಗಳನ್ನು ಅಳವಡಿಸಲಾಗುತ್ತದೆ. ಮುಂಬಯಿ ಸಬ್‌ಅರ್ಬನ್ ರೈಲುಗಳ ಸರಾಸರಿ ವೇಗ 50 ಕಿಮಿ. ಪ್ರತಿ ರೈಲಿನಲ್ಲಿಯೂ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆಯ ಬೋಗಿಗಳಿವೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಗಳನ್ನೂ ತೆರೆಯಲಾಗಿದೆ. 2002ರ ವೇಳೆಗೆ ಪ್ರಾಯೋಗಿಕವಾಗಿ ಒಂದೊಂದು ಹವಾನಿಯಂತ್ರಿತ ಬೋಗಿಗಳನ್ನು ಅಳವಡಿಸಲಾಗಿತ್ತು. 2013ರಲ್ಲಿ ಸಂಪೂರ್ಣ ಹವಾನಿಯಂತ್ರಿತ ರೈಲುಗಳನ್ನು ಓಡಿಸುವ ಯೋಜನೆ ಕೈಗೊಳ್ಳಲಾಯಿತು. 2017ರಂದು ಅದು ಕಾರ್ಯರೂಪಕ್ಕೆ ಬರುತ್ತಿದೆ.
ಮುಂಬಯಿಯಲ್ಲಿ ಲೋಕಲ್ ರೈಲಿಗೆ ಚಾಲನೆ ನೀಡಿದ್ದು ಬ್ರಿಟೀಷರು. 1853ರಲ್ಲಿ 34 ಕಿಮಿ ದೂರದ ವಿಕ್ಟೋರಿಯಾ ಟರ್ಮಿನಸ್-ಠಾಣೆ ನಡುವಿನ ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭವಾಯಿತು. ಇದು ಏಷ್ಯಾದ ಮೊಟ್ಟಮೊದಲ ರೈಲ್ವೆ ಸೇವೆಯಾಗಿರುವುದೂ ಕೂಡ ವಿಶೇಷವೇ ಸರಿ. ಮುಂಬಯಿಯ ಲೋಕಲ್ ರೈಲ್ವೆ ಜಾಲವು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಎರಡೂ ವಲಯಗಳ ದೀರ್ಘ ದೂರದ ರೈಲುಗಳೂ ಕೂಡ ಕೆಲವು ಕಡೆಗಳಲ್ಲಿ ಲೋಕಲ್ ರೈಲಿನ ಮಾರ್ಗದಲ್ಲಿಯೇ ಚಲಿಸುವುದು ವಿಶೇಷ.
ಮುಂಬಯಿಯ ಲೋಕಲ್ ರೈಲ್ವೆ ಜಾಲವನ್ನು ಪ್ರಮುಖವಾಗಿ ನಾಲ್ಕು ಭಾಗ ಮಾಡಲಾಗಿದೆ. ಪಶ್ಚಿಮ ಭಾಗ, ಕೇಂದ್ರ ಭಾಗ, ಹಾರ್ಬರ್ ಭಾಗ ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗ ಎಂಬ ನಾಲ್ಕು ಭಾಗಗಳಿವೆ. ಪಶ್ಚಿಮ ಭಾಗದಲ್ಲಿ 37 ರೈಲ್ವೆ ನಿಲ್ದಾಣಗಳಿವೆ. ಕೇಂದ್ರೀಐ ವಿಭಾಗದಲ್ಲಿ 62, ಹಾರ್ಬರ್ ವಿಭಾಗದಲ್ಲಿ 32 ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗದಲ್ಲಿ 10 ರೈಲ್ವೆ ನಿಲ್ದಾಣಗಳಿವೆ.

ಭಾರತೀಯ ರೈಲ್ವೆಯ ವಿಶೇಷತೆಗಳು
ಭಾರತದಲ್ಲಿ 119630 ಕಿಲೋಮೀಟರ್ ಉದ್ದದ ರೈಲ್ವೆ ಹಳಿಗಳಿವೆ. ಜಗತ್ತಿನ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲ ಭಾರತದ್ದು ಎನ್ನುವ ಖ್ಯಾತಿ ಗಳಿಸಿಕೊಂಡಿದೆ. ಈ ಮಾರ್ಗಗಳ ಪೈಕಿ ಶೇ.45ರಷ್ಟು ಮಾರ್ಗವನ್ನು ವಿದ್ಯುದೀಕರಣ ಗೊಳಿಸಲಾಗಿದೆ. ಭಾರತದಲ್ಲಿ ಒಂದು ರೈಲಿನಲ್ಲಿ ಪ್ರತಿ ದಿನ ಓಡಾಡುವವರ ಸರಾಸರಿ ಸಂಖ್ಯೆ 13313. ಭಾರತದಲ್ಲಿ ಸಂಚರಿಸುವ ಎಲ್ಲ ರೈಲುಗಳ ಸರಾಸರಿ ವೇಗ ತಾಸಿಗೆ 50.9 ಕಿಲೋಮೀಟರ್. 254006 ರೈಲ್ವೆ ವ್ಯಾಗನ್ನುಗಳು, 70241 ಪ್ಯಾಸೆಂಜರ್ ಬೋಗಿಗಳು, 11122 ಲೋಕೋ ಮೋಟಿವ್‌ಗಳುಗಳಿದ್ದು ಇದರಲ್ಲಿ 39 ಉಗಿ ಇಂಜಿನ್ನುಗಳು, 5869 ಡಿಸೇಲ್ ಇಂಜಿನ್ನುಗಳು ಹಾಗೂ 5214 ವಿದ್ಯುತ್ ಚಾಲಿತ ಇಂಜಿನ್ನುಗಳಾಗಿವೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ನೀಡಿದ ಸಂಸ್ಥೆಗಳಲ್ಲಿ ಭಾರತೀಯ ರೈಲ್ವೆಗೆ 8ನೇ ಸ್ಥಾನ.

ಭಾರತೀಯ ರೈಲ್ವೆಯ ಹಲವು ಮೊದಲುಗಳು
ಭಾರತದಲ್ಲಿ ಮೊಟ್ಟಮೊದಲ ರೈಲು ಓಡಿದ್ದು 1845ರ ಮೇ 8ರಂದು. ಆಗಿನ ಮದ್ರಾಸ್ ಪ್ರಾಂತ್ಯದ ರೆಡ್ ಹಿಲ್ಸ್‌ನಿಂದ ಚಿಂತಾದ್ರಿಪೇಟೆ ವರೆಗಿನ 34 ಕಿಲೋಮೀಟರ್ ಉದ್ದದ ಮಾರ್ಗಕ್ಕೆ 1837ರಲ್ಲೇ ಅಡಿಗಲ್ಲು ಹಾಕಲಾಯಿತಾದರೂ 1853ರಲ್ಲಿ ಈ ಮಾರ್ಗದಲ್ಲಿ ಮೊದಲ ರೈಲು ಓಡಾಡಿತು. ಈ ಕಾರಣದಿಂದ 1845ರಲ್ಲಿ ಮುಂಬಯಿ ಹಾಗೂ ಠಾಣೆ ಮದ್ಯ ಓಡಾಡಿದ ರೈಲನ್ನೇ ಭಾರತದ ಮೊಟ್ಟ ಮೊದಲ ರೈಲು ಎನ್ನಲಾಗುತ್ತದೆ. 1951ರಲ್ಲಿ ಭಾರತದ ಎಲ್ಲ ಪ್ರಾಂತ್ಯಗಳ ರೈಲನ್ನೂ ರೈಲ್ವೆ ಇಲಾಖೆಯ ಅಡಿಯಲ್ಲಿ ತರಲಾಯಿತು. ಜೊತೆಗೆ ಭಾರತದಲ್ಲಿ ರೈಲ್ವೆ ವಿಭಾಗಗಳನ್ನೂ ಆರಂಭಿಸಲಾಯಿತು. 1925ರಲ್ಲಿ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್ ಹಾಗೂ ಕುರ್ಲಾ ನಡುವೆ ಮೊಟ್ಟಮೊದಲ ವಿದ್ಯುತ್ ಚಾಲಿತ ರೈಲನ್ನು ಓಡಿಸಲಾಯಿತು. 1873ರ ಫೆಬ್ರವರಿ 24ರಂದು ಕೋಲ್ಕತ್ತಾದಲ್ಲಿ ಸಿಲ್ಡಾಹ್‌ನಿಂದ ಅರ್ಮೇನಿಯನ್ ಘಾಟ್ ಸ್ಟ್ರೀಟ್‌ವರೆಗೆ ಮೊಟ್ಟಮೊದಲ ಟ್ರಾಮ್ ರೈಲನ್ನು ಓಡಿಸಲಾಯಿತು. 1951ರಲ್ಲಿ ರೈಲುಗಳಲ್ಲಿ ಫ್ಯಾನುಗಳನ್ನು ಹಾಗೂ ಲೈಟ್‌ಗಳ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಅದೇ ವರ್ಷ ಪ್ಯಾಸೆಂಜರ್ ಬೋಗಿಗಳು ಹಾಗೂ ಇತರೆ ಐಷಾರಾಮಿ ಬೋಗಿಗಳನ್ನು ಆರಂಭಿಸಲಾಯಿತು. ನಿದ್ರಿಸಿ ಪ್ರಯಾಣಿಸುವವರಿಗಾಗಿ ಸ್ಲೀಪಿಂಗ್ ಬೋಗಿಗಳನ್ನೂ ಆರಂಭಿಸಲಾಯಿತು.
ಭಾರತದ ಮೊಟ್ಟ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು 1956ರಲ್ಲಿ ದೆಹಲಿಯಿಂದ ಕೋಲ್ಕತ್ತಾದ ಹೌರಾ ವರೆಗೆ ಪ್ರಯಾಣ ಬೆಳೆಸಿತು. 1986ರಲ್ಲಿ ಹೊಸದಿಲ್ಲಿಯಲ್ಲಿ ಕಂಪ್ಯೂಟರೀಕೃತ ಟಿಕೆಟ್ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1988ರಲ್ಲಿ ದೆಹಲಿ ಹಾಗೂ ಝಾನ್ಸಿ ನಡುವೆ ಮೊಟ್ಟಮೊದಲ ಶತಾಬ್ದಿ ರೈಲನ್ನು ಓಡಿಸಲಾಯಿತು. 1990ರಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರವನ್ನು ಪರಿಚಯಿಸಲಾಯಿತು. 1993ರಲ್ಲಿ ಎಸಿ-3 ಟೈರ್ ಕೋಚ್ ಹಾಗೂ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಾಯಿತು. ಅಲ್ಲದೇ ಇದುವರೆಗೂ ಇದ್ದ ಪ್ಯಾಸೆಂಜರ್ ಮತ್ತು ಸ್ಲೀಪರ್ ಬೋಗಿಗಳನ್ನು ಪ್ರತ್ಯೇಕಿಸಲಾಯಿತು. 1996ರಲ್ಲಿ ಕಂಪ್ಯೂಟರೀಕೃತ ಮುಂಗಡ ಸೀಟು ಕಾಯ್ದಿರಿಸುವ ಸೇವೆ ಜಾರಿಗೆ ಬಂದಿತು. 2016ರಲ್ಲಿ ಭಾರತದ ಅತ್ಯಂತ ವೇಗದ ರೈಲಾದ ಗತಿಮಾನ್ ಎಕ್ಸ್‌ಪ್ರೆಸ್‌ನ್ನು ಪರಿಚಯಿಸಲಾಗಿದೆ.  2022ರ ವೇಳೆಗೆ ಭಾರತದ ಎಲ್ಲ ರೈಲ್ವೆ ಮಾರ್ಗಗಳನ್ನೂ ವಿದ್ಯುದೀಕರಣಗೊಳಿಸುವ ಗುರಿ ರೈಲ್ವೆ ಇಲಾಖೆಯ ಮುಂದಿದೆ.


ಮುಂಬೈನಲ್ಲಿ ಎಸಿ ಲೋಕಲ್ ರೈಲು
ಇದೇ ಮೊತ್ತ ಮೊದಲ ಬಾರಿಗೆ ಮುಂಬೈನಲ್ಲಿ ಹವಾನಿಯಂತ್ರಿತ ಸಬ್‌ಅರ್ಬನ್ ಲೋಕಲ್ ರೈಲು ಸಂಚರಿಸಲು ಆರಂಭಿಸಿವೆ. ಮುಂಬಯಿಗರ ಪಾಲಿಗೆ ಇದು ಹೊಸವರ್ಷದ ಕೊಡುಗೆ. ಹವಾ ನಿಯಂತ್ರಿತ ಬೋಗಿಗಳನ್ನು ಒಳಗೊಂಡಿರುವ ಮೊಟ್ಟ ಮೊದಲ ರೈಲು ಅಂಧೇರಿಯಿಂದ 2 ಗಂಟೆ 10 ನಿಮಿಷಕ್ಕೆ ಹೊರಡಲಿದೆ. ಅದೇ ರೀತಿ ಈ ಎಸಿ ಲೋಕಲ್ ರೈಲು 2 ಗಂಟೆ 44 ನಿಮಿಷಕ್ಕೆ ಚರ್ಚ್‌ಗೇಟ್ ತಲುಪಲಿದೆ.
ಒಟ್ಟು 12 ಟ್ರಿಪ್‌ಗಳು
ಮೊದಲ ಉದ್ಘಾಟನಾ ಪ್ರಯಾಣದ ಬಳಿಕ ಎಲ್ಲಾ ವಾರದ ದಿನಗಳಲ್ಲಿ 6 ರಿಟರ್ನ್ ಟ್ರಿಪ್‌ಗಳನ್ನು ಒದಗಿಸಲಿದೆ. ಶನಿವಾರ ಹಾಗೂ ಭಾನುವಾರ ನಿರ್ವಹಣೆ ಉದ್ದೇಶದಿಂದ ಸೇವೆಗಳಿಂದ ಅಲಭ್ಯ ವಾಗಿರುತ್ತದೆ ಎಂದು ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದರ್ ಭಾಕರ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ 12 ಟ್ರಿಪ್‌ಗಳು, ಚರ್ಚ್‌ಗೇಟ್-ವಿರಾರ್(ಪಲ್‌ಘರ್) ವಲಯದಲ್ಲಿ 8 ಟ್ರಿಪ್‌ಗಳನ್ನು ನೀಡಲಿದೆ. ಚರ್ಚ್‌ಗೇಟ್-ಬೋರಿವಾಲಿ ನಡುವೆ 3 ಟ್ರಿಪ್‌ಗಳನ್ನು ನೀಡಲಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಮತ್ತೊಂದು ಅಂತಿಮ ಸೇವೆ ತುಂಬಾ ನಿಧಾನವಾದ ಪ್ರಯಾಣವಾಗಿರುತ್ತದೆ. ಅದು ಮಹಾಲಕ್ಷ್ಮಿ- ಬೋರಿವಿಲಿ ನಡುವೆ ಅಲ್ಲಲ್ಲಿ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಹೋಗುವ ಟ್ರಿಪ್ ಆಗಿರಲಿದೆ. ಜ.1ರ ನಂತರ ಈ ರೈಲಿನ ಸೇವೆಯನ್ನು ಚರ್ಚ್‌ಗೇಟ್‌ನಿಂದ ವೀರಾರ್ ವರೆಗೆ ವಿಸ್ತರಣೆ ಮಾಡಲಾಗುತ್ತಿದೆ.

ಟಿಕೆಟ್ ದರ ಹೆಚ್ಚು
ಉದ್ಘಾಟನಾ ಟಿಕೆಟ್ ದರವನ್ನು ಪಶ್ಚಿಮ ರೈಲ್ವೆ ಘೋಷಿಸಿದೆ. ಟಿಕೆಟ್ ದರ ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್‌ಗಿಂತ 1.3 ಪಟ್ಟು ಹೆಚ್ಚಿದೆ. ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಟಿಕೆಟ್ ಲಭ್ಯವಿವೆ. ಅವುಗಳು ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್ ದರಕ್ಕಿಂತ 5, 7.5 ಮತ್ತು 10 ಪಟ್ಟು ಹೆಚ್ಚಿವೆ. ಅಲ್ಲದೇ, ಶೇ.5ರಷ್ಟು ಜಿಎಸ್‌ಟಿ ಹಾಗು ಇತರ ಶುಲ್ಕಗಳೂ ಸೇರುತ್ತವೆ.

ಹವಾನಿಯಂತ್ರಿತ ಸಬ್‌ಅರ್ಬನ್ ರೈಲಿನ ವಿಶೇಷತೆಗಳು
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಸಂಪೂರ್ಣ ಹವಾನಿಯಂತ್ರಿತ ರೈಲು 6,000 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಸ್ವಯಂಚಾಲಿತ ಬಾಗಿಲು ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆಘಿ, ಎಲ್‌ಇಡಿ ದೀಪಗಳು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ನಡುವೆ ತುರ್ತು ಟಾಕ್ ಬ್ಯಾಕ್ ವ್ಯವಸ್ಥೆ, ಅತ್ಯಾಧುನಿಕ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಗಂಟೆಗೆ 100 ಕಿ.ಮೀ. ತನಕದ ವೇಗ, 12 ಬೋಗಿಗಳನ್ನೂ ಪರಸ್ಪರ ಸಂಪರ್ಕಿಸುವ ಏರ್‌ಟೈಟ್ ಪ್ರವೇಶ ದ್ವಾರಗಳು, ಇನ್ನೂ ಇತರ ಆಧುನಿಕ ಸೌಲಭ್ಯಗಳು ಹಾಗೂ ಪ್ರಯಾಣಿಕರ ಸುರಕ್ಷತೆಗೂ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಈ ರೈಲು ಹೊಂದಿರುತ್ತದೆ. ಈಗಾಗಲೇ 65ಕ್ಕೂ ಹೆಚ್ಚಿನ ಸಾರಿ ಈ ರೈಲಿನ ಪ್ರಾಯೋಗಿಕ ಓಡಾಟ ಪರೀಕ್ಷೆ ಕೈಗೊಳ್ಳಲಾಗಿದೆ.

ಮೆಟ್ರೋ ನಗರಗಳಲ್ಲಿ ಎಸಿ ಲೋಕಲ್ ರೈಲು
ಮುಂಬೈ ಮೆಟ್ರೊ ನಗರವಷ್ಟೇ ಅಲ್ಲದೆ ಕೋಲ್ಕತಾ, ಚೆನ್ನೈ ಮತ್ತು ಸಿಕಂದರಾಬಾದ್ ಮೆಟ್ರೊ ನಗರಗಳ ಲೋಕಲ್ ರೈಲುಗಳಲ್ಲೂ ಹವಾನಿಯಂತ್ರಿತ ಮತ್ತು ಸ್ವಯಂಚಾಲಿತ ಬಾಗಿಲುಗಳ ಬೋಗಿಗಳಿರಲಿವೆ ಎಂಬುದು ರೈಲ್ವೆ ಇಲಾಖೆಯ ಅಕಾರಿಗಳು ನೀಡುವ ಮಾಹಿತಿ.
ಹೊಸ ಎಸಿ ರೈಲುಗಳು ಮತ್ತು ಹಳೇ ಲೋಕಲ್ ರೈಲುಗಳು ಒಟ್ಟೊಟ್ಟಿಗೆ ಓಡಾಡಲಿವೆ. ಆದರೆ ಪ್ರಯಾಣದ ದರಗಳಲ್ಲಿ ವ್ಯತ್ಯಾಸವಿದೆ. ಸ್ವಯಂಚಾಲಿತ ಬಾಗಿಲುಗಳ ಎಸಿ ಬೋಗಿಗಳಿರುವ ರೈಲುಗಳು ಚೆನ್ನೈ, ಕೋಲ್ಕತಾ, ಬೆಂಗಳೂರು ನಗರಗಳಲ್ಲೂ ಓಡಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂಬುದೂ ಅಕಾರಿಗಳು ನೀಡುವ ಮಾಹಿತಿ.

Wednesday, December 20, 2017

ಆಗುಂಬೆಯ ತಮ್ಮ ಜೇನುಕಲ್ಲುಗುಡ್ಡ


ಬಹುತೇಕರು ಆಗುಂಬೆಯನ್ನು ನೋಡಿಯೇ ಇರುತ್ತಾರೆ. ಆಗುಂಬೆಯ ಸೂರ್ಯಾಸ್ತವನ್ನು ನೋಡಿ ಮನದಣಿದವರು ಅನೇಕರಿದ್ದಾರೆ. ಆಗುಂಬೆಯಂತಹುದೇ ಒಂದು ಸ್ಥಳ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ. ಥಟ್ಟನೆ ನೋಡಿದರೆ ಆಗುಂಬೆಗಿಂತಲೂ ಚನ್ನಾಗಿ ಕಾಣುವ ಈ ತಾಣವೇ ಜೇನುಕಲ್ಲುಗುಡ್ಡ.
ಇದ್ದಕ್ಕಿದ್ದಂತೆ ಭೂಮಿಯ ಕೊನೆಯ ಭಾಗ ಬಂದೇ ಹೋಯಿತೇನೋ ಎನ್ನುವಂತೆ ಕಾಣುವ ಕಡಿದಾದ ಕಲ್ಲಿನ ಗುಡ್ಡ. ಕಣಿವೆಯಾಳದಲ್ಲಿ ಬಳುಕಿ ಹರಿಯುವ ಗಂಗಾವಳಿ ನದಿ. ಕೇಳಿಯೂ ಕೇಳದಂತಹ ನದಿ ಹರಿವಿನ ಶಬ್ದ. ಇಣುಕಿ ನೋಡಿದಲ್ಲೆಲ್ಲ ಸಹ್ಯಾದ್ರಿ ವನರಾಶಿ. ಆಹಾ ಜೇನುಕಲ್ಲು ಗುಡ್ಡದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಆಗುಂಬೆಯಂತೆಯೇ ಇದೂ ಕೂಡ ಸೂರ್ಯಾಸ್ಥಕ್ಕೆ ಹೆಸರಾದುದು. ರೌದ್ರ ರೂಪ ತಾಳಿದ ಸೂರ್ಯ ಪಡುವಣದತ್ತ ಇಳಿದು ಅರಬ್ಬಿ ಸಮುದ್ರದಾಚೆ ಮುಳುಗಿ ಹೋಗುವ ಆ ಸಂಜೆಯ ಸಂದರ್ಭವಂತೂ ವರ್ಣಿಸಲಸದಳ. ಬಾನು ಕೆಂಪಾಗಿ, ಸೂರ್ಯ ಕೂಡ ದೊಡ್ಡದೊಂದು ಚೆಂಡಿನ ಆಕಾರ ಪಡೆದು ಅಸ್ತಮಿಸುತ್ತಿದ್ದರೆ ಜೇನುಕಲ್ಲು ಗುಡ್ಡದಿಂದ ನೋಡುಗರ ಮನಸ್ಸಂತೂ ಸ್ವರ್ಗದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ಜೇನುಕಲ್ಲು ಗುಡ್ಡಕ್ಕೆ ಹೋದರೆ ನಾವು ಮೋಡಗಳ ಮೇಲೆ ನಿಂತಂತೆ ಭಾಸವಾಗುತ್ತದೆ. ಗಂಗಾವಳಿ ಕಣಿವೆಯ ಆಳದಲ್ಲಿ ಹಾದು ಬರುವ ಮೋಡ ಸಹ್ಯಾದ್ರಿ ಶೃಂಗಗಳಿಗೆ ಢಿಕ್ಕಿ ಹೊಡೆದು ನಿಂತಿರುತ್ತದೆ. ಈ ದೃಶ್ಯವಂತೂ ನಾವೇ ಮೋಡಕ್ಕಿಂತ ಮೇಲೆ ನಿಂತಿದ್ದೇವೇನೋ ಅನ್ನಿಸುತ್ತದೆ. ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳ ಮೇಲೆ ಮೋಡಗಳ ಚಾಪೆ ಹಾಸಲಾಗಿದೆಯೇನೋ ಅನ್ನಿಸುತ್ತದೆ. ಮಳೆಗಾಲದಲ್ಲಂತೂ ಜೇನುಕಲ್ಲು ಗುಡ್ಡದ ಸೌಂದರ್ಯ ನೂರ್ಮಡಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಣಿವೆಯಾಳದಲ್ಲಿ ಕಾಣುವ ಅಂಕೋಲಾ ತಾಲೂಕಿನ ಪ್ರದೇಶಗಳು, ನಡು ನಡುವೆ ತಲೆಯೆತ್ತಿರುವ ಗುಡ್ಡಗಳು, ಹಸಿರ ತೋಟಗಳು, ಬಾನಿನ ಕಡೆಗೆ ಮುಖ ಮಾಡಿ ನಿಂತ ಕಾನನದ ಮರಗಳು, ನಡು ನಡುವೆ ಗದ್ದೆಗಳು ಇವೆಲ್ಲವೂ ಕೂಡ ಕಣ್ಮನ ಸೆಳೆಯುತ್ತವೆ.
ಜೇನಕಲ್ಲು ಗುಡ್ಡ ಹೆಸರೇ ಹೇಳುವ ಹಾಗೆ ಜೇನುಗಳ ಕಲ್ಲು ಕೂಡ ಹೌದು. ಕಡಿದಾದ ಕಲ್ಲು ಬಂಡೆ. ಆ ಕಲ್ಲುಬಂಡೆಯ ಪಾರ್ಶ್ವದಲ್ಲೆಲ್ಲ ಜೇನುಗಳು ಗೂಡು ಕಟ್ಟಿಕೊಂಡಿದೆ. ಈ ಜೇನುಕಲ್ಲು ಗುಡ್ಡದ ನೆತ್ತಿಯ ಮೇಲೆ ನಿಂತರೆ ಎಷ್ಟು ಆಹ್ಲಾದವೋ, ಅಷ್ಟೇ ಅಪಾಯಕಾರಿ ತಾಣವೂ ಇದಾಗಿದೆ. ಕಬ್ಬಿಣದ ಬೇಲಿ ಇಲ್ಲಿದ್ದರೂ ಕೊಂಚ ಯಾಮಾರಿದರೆ ಕೈಲಾಸವೇ ಗತಿ ಎನ್ನುವಂತಹ ಸ್ಥಳ. ನೆತ್ತಿಯ ಮೇಲೆ ಒಂದೆರಡು ವೀಕ್ಷಣಾ ಗೋಪುರಗಳೂ ಇದೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿದಂತಹ ಸ್ಥಳ. ದಟ್ಟವಾದ ಕಾಡಿನಿಂದಾವೃತವಾದ ಈ ತಾಣಕ್ಕೆ ವರ್ಷದ ಯಾವುದೇ ಕಾಲದಲ್ಲಿಯೂ ಕೂಡ ಹೋಗಿ ಬರಬಹುದು. ಈ ತಾಣದವರೆಗೂ ಬಸ್ ಸೌಕರ್ಯವಿಲ್ಲ. ಸ್ವಂತ ವಾಹನವನ್ನು ಬಳಸುವುದು ಅನಿವಾರ್ಯ. ಕಚ್ಚಾ ರಸ್ತೆ ದ್ವಿಚಕ್ರ ವಾಹನ ಸವಾರರನ್ನು ಹೈರಾಣಾಗಿಸಬಹುದು. ಆದರೆ ಜೇನುಕಲ್ಲು ಗುಡ್ಡದಲ್ಲಿ ವಿಹರಿಸಿದರೆ ಮನಸ್ಸಿನ ಕ್ಲೇಷ, ಆಯಾಸ, ಪ್ರಯಾಸಗಳೆಲ್ಲ ಕ್ಷಣಾರ್ದದಲ್ಲಿ ದೂರವಾಗುತ್ತದೆ.
ಜೇನುಕಲ್ಲು ಗುಡ್ಡ ನೋಡಲು ಬಂದರೆ ಅಕ್ಕಪಕ್ಕದಲ್ಲಿಯೇ ಮಾಗೋಡು ಜಲಪಾತ ಹಾಗೂ ಕವಡೀಕೆರೆಗಳಿದೆ. ಆರೇಳು ಕಿಲೋಮೀಟರ್ ದೂರದಲ್ಲಿಯೇ ಈ ತಾಣಗಳಿದ್ದು ಇವನ್ನೂ ಕೂಡ ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲ, ಹತ್ತಿರದಲ್ಲಿಯೇ ಚಂದಗುಳಿಯ ಘಂಟೆ ಗಣಪನ ಸನ್ನಿಯೂ ಇದೆ. ಘಂಟೆಯನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರೆ ಇಷ್ಟಾರ್ಥ ಕರುಣಿಸುತ್ತಾನೆ ಎನ್ನುವ ಪ್ರತೀತಿ ಹೊಂದಿರುವವ ಗಣಪನ ದೇವಾಲಯ ಹತ್ತಿರದಲ್ಲೇ ಇದೆ. ಜೇನುಕಲ್ಲು ಗುಡ್ಡವನ್ನು ನೋಡಲು ಬರುವವರು ಇವುಗಳನ್ನೂ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳು ಮೋಜು ಮಸ್ತಿಗೆ ಬಳಕೆಯಾಗುತ್ತಿವೆ. ಇಂತಹ ತಾಣಕ್ಕೆ ಬರುವವರು ನಿರ್ಮಲ ಮನಸ್ಸಿನಿಂದ ಬಂದು ಹೋಗುವುದು ಬಿಟ್ಟು ಗುಂಡುಗಲಿಗಳಾಗುತ್ತಿದ್ದಾರೆ. ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿದಂತೆ ತಾವು ತರುವ ವಸ್ತುಗಳನ್ನು ಇಂತಹ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಜೇನುಕಲ್ಲು ಗುಡ್ಡಕ್ಕೆ ಹೋಗುವವರು ತ್ಯಾಜ್ಯವನ್ನು ಎಸೆಯಲು ಅವಕಾಶ ಕೊಡಬಾರದು. ಪ್ರಕೃತಿಯ ಮಧ್ಯದಲ್ಲಿರುವ ತಾಣವನ್ನು ಮಲಿನ ಮಾಡದೇ ತಾಣದ ಸಹಜತೆ ಉಳಿಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಷ್ಟಾದಾಗ ಮಾತ್ರ ಇಂತಹ ತಾಣಗಳ ಸೌಂದರ್ಯ ಸಹಜವಾಗಿರುತ್ತದೆ, ಇನ್ನಷ್ಟು ಹೆಚ್ಚುತ್ತದೆ.
ಹೋಗುವ ಬಗೆ :
ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬಂದು ಅಲ್ಲಿಂದ 15-18 ಕಿ.ಮಿ ದೂರದಲ್ಲಿರುವ ಜೇನುಕಲ್ಲು ಗುಡ್ಡಕ್ಕೆ ಹೋಗಬಹುದು. ಶಿವಮೊಗ್ಗ-ಶಿರಸಿಯ ಮೂಲಕ ಬರುವವರು ಯಲ್ಲಾಪುರ ರಸ್ತೆಯಲ್ಲಿ ಸಾಗಿ ಮಳಲಗಾಂವ್ ಅಥವಾ ಉಪಳೇಶ್ವರದಲ್ಲಿ ಎಡಕ್ಕೆ ತಿರುಗಿ ಚಂದಗುಳಿ, ಮಾಗೋಡ ಫಾಲ್ಸ್ ಮೂಲಕ ಜೇನುಕಲ್ಲು ಗುಡ್ಡಕ್ಕೆ ತೆರಳಬಹುದು. ಮಂಗಳೂರು ಭಾಗದಿಂದ ಬರುವವರು ಅಂಕೋಲಾಕ್ಕೆ ಬಂದು ಅಲ್ಲಿಂದ ಯಲ್ಲಾಪುರ ಮೂಲಕ ಈ ತಾಣವನ್ನು ತಲುಪಲು ಸಾಧ್ಯವಿದೆ. ಯಾವುದೇ ಹೊಟೆಲುಗಳು ಅಥವಾ ಇನ್ನಿತರ ಅಂಗಡಿಗಳು ಇಲ್ಲಿಲ್ಲದ ಕಾರಣ ದಿನವಿಡೀ ಇರಲು ಬಯಸುವವರು ಊಟ ಅಥವಾ ತಿಂಡಿ ಕಟ್ಟಿಕೊಂಡು ಬರುವುದು ಅನಿವಾರ್ಯ. ಯಲ್ಲಾಪುರದಲ್ಲಿ ಉಳಿಯಲು ವಸತಿಗೃಹಗಳಿವೆ. ಒಂದು ಅಥವಾ ಎರಡು ದಿನಗಳ ಅವಯಲ್ಲಿ ಜೇನುಕಲ್ಲು ಗುಡ್ಡ ಸೇರಿದಂತೆ ಯಲ್ಲಾಪುರ ತಾಲೂಕಿನ ಎಲ್ಲ ಪ್ರವಾಸಿ ತಾಣಗಳ ದರ್ಶನ ಮಾಡಬಹುದಾಗಿದೆ.

-----------

(ಈ ಲೇಖನ 2017ರ ಡಿಸೆಂಬರ್ 20ರಂದು ಹೊಸದಿಗಂತದ ಅಂತರಗಂಗೆ ಪುರವಣಿಯ ಯುವರಾಗ ಪುಟದಲ್ಲಿ ಪ್ರಕಟವಾಗಿದೆ)