Monday, November 18, 2024

ಯಕ್ಷಗಾನ-ತಾಳಮದ್ದಲೆಯ ಸ್ವಾರಸ್ಯಕರ ಘಟನೆಗಳು

1960ರ ದಶಕದ ಚಳಿಗಾಲದ ಒಂದು ಸಂಜೆ. ಆಗತಾನೆ ಕರ್ಕಿ ಮೇಳದವರು ಆಟ ಮುಗಿಸಿ ಊರ ಕಡೆ ಹೊರಟಿತ್ತು. ಆಗೆಲ್ಲ ನಡೆದುಕೊಂಡೇ ಊರು ತಲುಪುವುದು ವಾಡಿಕೆ. ಮುಂದಿನ ಆಟ ಎಲ್ಲೋ, ಯಾವಾಗಲೋ ಎಂದು ಮೇಳದ ಮೇಲ್ವಿಚಾರಕರು ಮಾತಾಡಿಕೊಳ್ಳುತ್ತ ಸಾಗಿದ್ದರು. ನಿಧಾನವಾಗಿ ಸೂರ್ಯ ಕಂತಿದ್ದ.
ಬಹಳ ದೂರ ನಡೆದುಕೊಂಡು ಹೋಗುತ್ತಿದ್ದ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ಇನ್ನೂ ತಮ್ಮ ತಮ್ಮ ಊರು ತಲುಪುವುದು ತುಂಬಾ ದೂರ ಉಳಿದಿತ್ತು. ಹೀಗಿದ್ದಾಗ ಅದ್ಯಾವುದೋ ಒಂದು ಊರಿನ ಹೊರವಲಯ, ಅಲ್ಲೊಬ್ಬರು ಮಹನೀಯರು ಈ ಮೇಳದವರನ್ನು ಎದುರಾದರು. ಊಭಯಕುಶಲೋಪರಿಯೆಲ್ಲ ನಡೆಯಿತು.
ಎದುರಾದ ಆಗಂತುಕರು ಮೇಳದ ಬಳಿ ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ಅದಕ್ಕೆ ಮೇಳದವರು ತಮ್ಮ ಕಥೆಯನ್ನೆಲ್ಲ ಹೇಳಿದರು. ಕೊನೆಗೆ ಅಲ್ಲಿ ಸಿಕ್ಕ ಆಗಂತುಕರು, ʻತಮ್ಮೂರಿನಲ್ಲೂ ಒಂದು ಆಟ ಆಡಿʼ ಎಂದರು.
ಮೇಳದವರು ʻಆಟಕ್ಕೆ ಸ್ಥಳ ಬೇಕು.. ಜನ ಎಲ್ಲ ಬರಬೇಕಲ್ಲʼ ಎಂದರು.
ʻಜಾಗ ಎಲ್ಲ ತಯಾರಿದೆ.. ಜನರೂ ಬರುತ್ತಾರೆ. ನೀವು ವೇಷ ಕಟ್ಟಿಕೊಳ್ಳುವ ವೇಳೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ..ʼ ಎಂದರು ಆ ವ್ಯಕ್ತಿ.
ಎಲ್ಲರೂ ಒಪ್ಪಿಕೊಂಡು, ಆ ಆಗಂತುಕನ ಹಿಂಬಾಲಿಸಿ ಮುನ್ನಡೆದರು. ಅರ್ಧ ಫರ್ಲಾಂಗಿನಷ್ಟು ದೂರ ಸಾಗಿದ ನಂತರ ಅಲ್ಲೊಂದು ಕಡೆ ಯಕ್ಷಗಾನದ ಆಟ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಳದ ಮಹನೀಯರು ಮೆಚ್ಚುಗೆ ಸೂಚಿಸಿ, ವೇಷ ಕಟ್ಟಲು ಹೊರಟರು.
ಕೆಲ ಸಮಯದಲ್ಲಿ ವೇಷ ಕಟ್ಟಿ ಮುಗಿಯಿತು. ಭಾಗವತರು ಹಾಡಲು ಶುರುಮಾಡಿದರು.
ಕೆಲ ಸಮಯದ ತನಕ ಆಟ ಸಾಂಗವಾಗಿ ನೆರವೇರಿತು. ಅಷ್ಟರಲ್ಲಿ ಮುಖ್ಯ ಪಾತ್ರಧಾರಿಯ ಪ್ರವೇಶವೂ ನಡೆಯಿತು. ಚಂಡೆಯ ಸದ್ದು ಮುಗಿಲು ತಲುಪುವಂತಿತ್ತು. ಆರ್ಭಟದೊಂದಿಗೆ ಮುಕ್ಯ ಪಾತ್ರಧಾರಿ ರಂಗವನ್ನು ಪ್ರವೇಶಿಸಿದ್ದಲ್ಲದೇ ಮಂಡಿಕುಣಿತವನ್ನೂ ಶುರು ಹಚ್ಚಿಕೊಂಡರು.
ಪಾತ್ರಧಾರಿಯ ಆರ್ಭಟ ಹೇಗಿತ್ತೆಂದರೆ ವೇದಿಯ ಮುಂದೆ ಕುಳಿತು ಆಟವನ್ನು ನೋಡುತ್ತಿದ್ದವರೆಲ್ಲ ಒಮ್ಮೆಲೆ ಆವೇಶ ಬಂದವರಂತೆ ಕುಣಿಯಲು ಶುರು ಮಾಡಿದರು. ಕ್ಷಣಕ್ಷಣಕ್ಕೂ ಪಾತ್ರಧಾರಿಯ ಕುಣಿತ ಹೆಚ್ಚಾಯಿತು. ಭಾಗವತರ ಭಾಗವತಿಕೆ, ಚಂಡೆಯ ಸದ್ದು ಹೆಚ್ಚಿದಂತೆಲ್ಲ ನೋಡುತ್ತಿದ್ದ ಜನಸಮೂಹ ಕೂಡ ಜೋರು ಜೋರಾಗಿ ಕುಣಿಯ ಹತ್ತಿದರು.
ಭಾಗವತಿಕೆ ಮಾಡುತ್ತಿದ್ದ ಭಾಗವತರು ಈ ಜನಸಮೂಹದ ನರ್ತನವನ್ನು ನೋಡಿದವರೇ ದಂಗಾಗಿ ಹೋದರು.
ʻಇದೇನಿದು ಈ ರೀತಿ ಜನರು ಕುಣಿಯುತ್ತಿದ್ದಾರಲ್ಲʼ ಎಂದು ಒಮ್ಮೆ ವಿಸ್ಮಯವಾದರೂ ನಿಜವಾದ ಕಾರಣ ತಿಳಿದು ದಂಗಾಗಿ ಹೋದರು.
ತಕ್ಷಣವೇ ʻಗಂಟು ಮೂಟೆಯ ಕಟ್ಟಿರೋ..ʼ ಎಂದು ಜೋರಾಗಿ ಪದ ಹಾಡಲು ಶುರು ಮಾಡಿದರು.
ಇದುವರೆಗೂ ಸರಿಯಾಗಿ ಹಾಡುತ್ತಿದ್ದ ಭಾಗವತರು ಇದೇನು ಹೊಸದಾಗಿ ಗಂಟು ಮೂಟೆಯ ಕಟ್ಟಿರೋ ಎನ್ನುವ ಪದ ಹಾಡುತ್ತಿದ್ದಾರಲ್ಲ ಎನ್ನುವ ಅನುಮಾನದಲ್ಲಿ ಪಾತ್ರಧಾರಿಗಳು ಭಾಗವತರನ್ನು ನೋಡಲು ಆರಂಭಿಸಿದರು.
ಆಗ ಭಾಗವತರು
ʻಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..ʼ ಎಂದು ಇನ್ನೊಮ್ಮೆ ರಾಗವಾಗಿ ಹಾಡಿದರು. ಆಗಲೂ ಪಾತ್ರಧಾರಿಗಳಿಗೆ ಅರ್ಥವಾಗಿರಲಿಲ್ಲ.
ಭಾಗವತರು ಮತ್ಯೊಮ್ಮೆ
'ಗಮನಿಸಿ ಕೇಳೊರೋ
ಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..' ಎಂದು ಹಾಡಿದರು.
ತಕ್ಷಣವೇ ಎಚ್ಚೆತ್ತ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಕಟ್ಟಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಓಡಲು ಆರಂಭಿಸಿದರು.
ಭಾಗವತರ ಪದಕ್ಕೆ ಕುಣಿಯುತ್ತಿದ್ದ ಭೂತಗಳ ಗುಂಪು ಊರ ಹೊರಗಿನ ಸ್ಮಷಾನದಲ್ಲಿ ಬಹಳ ಹೊತ್ತಿನ ತನಕ ಕುಣಿಯುತ್ತಲೇ ಇತ್ತು.

(ಹಿರಿಯರು ಅನೇಕ ಸಾರಿ ಹೇಳಿದ್ದ ಈ ಕಥೆ.. ಯಲ್ಲಾಪುರ ಭಾಗದಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬರೂ ಈ ಕಥೆ ನಿಜವೆಂದೇ ಹೇಳುತ್ತಾರೆ. ಹೀಗಾಗಿ ನಾನು ಕೇಳಿದ ಕಥೆಯನ್ನು ಯಥಾವತ್ತಾಗಿ ಇಲ್ಲಿಟ್ಟಿದ್ದೇನೆ. ಯಾರಿಗಾದರೂ ಈ ಬಗ್ಗೆ ಗೊತ್ತಿದ್ದರೆ ಸವಿಸ್ತಾರವಾಗಿ ತಿಳಿಸಿ)



********************

ತೊಂಭತ್ತರ ದಶಕದಲ್ಲಿ ನಡೆದ ಕತೆ ಇದು

ಆಗಿನ ದಿನಗಳಲ್ಲಿ ಕನ್ನಡ ಶಬ್ದಗಳ ಮದ್ಯ ಚಿಕ್ಕ ಚಿಕ್ಕ ಇಂಗ್ಲೀಷ್‌ ಶಬ್ದಗಳ ಬಳಕೆ ದಣಿ ದಣೀ ಶುರುವಾಗುತ್ತಿದ್ದ ಸಮಯ.
ಯಲ್ಲಾಪುರದ ಯಾವುದೋ ಒಂದು ಊರಿನಲ್ಲಿ ತಾಳಮದ್ದಲೆ ಸಂಭ್ರಮ. ರಾತ್ರಿ ಇಡೀ ತಾಳಮದ್ದಲೆ ನಡೆಯುವ ಸಂಭ್ರಮ. ತಾಳಮದ್ದಲೆಯನ್ನು ಸವಿಯುವ ಸಲುವಾಗಿ ಇಡಿಯ ಊರಿಗೆ ಊರೆ ನಲಿದಿತ್ತು. ಶ್ರೀಕೃಷ್ಣ ಸಂಧಾನದ ಪ್ರಸಂಗ.
ಶ್ರೀಕೃಷ್ಣ ಸಂಧಾನಕ್ಕಾಗಿ ವಿಧುರನ ಮನೆಗೆ ಬಂದು, ನಂತರ ದುರ್ಯೋಧನನ ಸಭೆಯಲ್ಲಿ ಸಂಧಾನದ ಮಾತುಕತೆಯನ್ನೆಲ್ಲ ಆಡಿ ಮುಗಿದಿತ್ತು. ಕೃಷ್ಣ-ದುರ್ಯೋಧನನ ಪಾತ್ರಧಾರಿಗಳೆಲ್ಲ ಭಾರಿ ಭಾರಿಯಾಗಿ ತಮ್ಮ ವಾಗ್ಝರಿಯನ್ನು ಹರಿಸಿದ್ದರು.
ಶ್ರೀಕೃಷ್ಣ ದುರ್ಯೋಧನನ ಜತೆ ಸಂಧಾನ ವಿಫಲವಾಗಿ ತೆರಳಿದ ನಂತರ ದುರ್ಯೋಧನ ವಿಧುರನನ್ನು ಜರಿಯುವ ಸಂದರ್ಭ ಬಂದಿತ್ತು. ಶ್ರೀಕೃಷ್ಣ ದುರ್ಯೋಧನನ ಸಭೆಗೆ ಮೊದಲು ಬರದೇ ವಿಧುರನ ಮನೆಗೆ ಹೋಗಿದ್ಯಾಕೆ ಎಂದೆಲ್ಲ ಪ್ರಶ್ನಿಸಿ ನಾನಾ ರೂಪದಿಂದ ವಿಧುರನನ್ನು ಬೈದು ಆಗಿತ್ತು.
ಇದರಿಂದ ಮನನೊಂದ ವಿಧುರ ಆಪತ್ಕಾಲದಲ್ಲಿ ಕೌರವರ ರಕ್ಷಣೆಗಾಗಿ ಇರಿಸಿದ್ದ ಬಿಲ್ಲು-ಬಾಣಗಳನ್ನು ಮುರಿದು ಹಾಕುವ ಸಂದರ್ಭವೂ ಬಂದಿತ್ತು. ಸಭಾಸದರೆಲ್ಲ ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ಸವಿಯುತ್ತಿದ್ದರು.
ಭಾಗವತರ ಹಾಡುಗಾರಿಕೆ, ಪಾತ್ರಧಾರಿಗಳ ವಾದ-ಪ್ರತಿವಾದಗಳೆಲ್ಲ ಉತ್ತಮವಾಗಿ ನಡೆಯುತ್ತಿದ್ದವು. ನೋಡುಗರು ವಾಹ್‌ ವಾಹ್‌ ಎನ್ನುವಂತೆ ತಾಳಮದ್ದಲೆ ಸಾಗುತ್ತಿತ್ತು.
ಹೀಗಿದ್ದಾಗಲೇ ದುರ್ಯೋಧನನ ಮಾತುಗಳಿಗೆ ವಿಧುರ ಉತ್ತರ ನೀಡಬೇಕು. ಆದರೆ ಆ ಸಂದರ್ಭದಲ್ಲಿ ವಿಧುರನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಆತನಿಗೆ ತಾನು ಏನು ಮಾತನಾಡಬೇಕು ಎನ್ನುವುದು ಮರೆತು ಹೋಗಿದೆ. ವಾಸ್ತವದಲ್ಲಿ ವಿಧುರನ ಪಾತ್ರಧಾರಿ ʻಹೌದು.. ಹೌದು..ʼ ಎನ್ನಬೇಕಿತ್ತು. ಆದರೆ ಆ ಮಾತು ಮರೆತು ಹೋಗಿದೆ.
ದುರ್ಯೋಧನ ಎರಡು ಸಾರಿ ತನ್ನ ಮಾತನ್ನಾಡಿದರೂ ವಿಧುರನಿಂದ ಉತ್ತರ ಬರಲೇ ಇಲ್ಲ. ಕೊನೆಗೆ ದುರ್ಯೋಧನ ಪಾತ್ರಧಾರಿ ಭಾಗವತರಿಗೆ ಸನ್ನೆ ಮಾಡಿದ್ದಾಯ್ತು. ಭಾಗವತರು ವಿಧುರನ ಪಾತ್ರಧಾರಿ ಕಡೆ ನೋಡಿ ಹಾಡಿನ ರೂಪದಲ್ಲಿ ಎಚ್ಚರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ವಿಧುರನ ಪಾತ್ರಧಾರಿ ʻYes Yes..' ಎಂದ. ಕನ್ನಡದ ತಾಳಮದ್ದಲೆಯಲ್ಲಿ ಇಂಗ್ಲೀಷ್‌ ಶಬ್ದ ಬಂದಿದ್ದು ಪ್ರೇಕ್ಷಕರಾದಿಯಾಗಿ ಎಲ್ಲರಿಗೂ ಒಮ್ಮೆ ಅಚ್ಚರಿಯಾಗಿತ್ತು. ಇದೇನಿದು ಎಂದು ಆಲೋಚನೆ ಶುರು ಮಾಡಲು ಆರಂಭಿಸಿದ್ದರು.
ತಕ್ಷಣವೇ ಭಾಗವತರು ʻ ವಿಧುರ ಯೆಸ್‌ ಎಂದ....ʼ ಎಂದು ರಾಗವಾಗಿ ಹಾಡಲು ಶುರು ಮಾಡಿದರು.
ಈ ಪ್ರಸಂಗ ಮುಗಿದ ಕೆಲವು ದಿನಗಳವರೆಗೂ ವಿಧುರ ಯೆಸ್‌ ಎಂದ ಎನ್ನುವ ಸಂಗತಿ ಜನರ ಬಾಯಲ್ಲಿ ಚರ್ಚೆಯಾಗುತ್ತಲೇ ಇತ್ತು. ತಾಳಮದ್ದಲೆಯ ಸವಿಯನ್ನುಂಡವರು ಆಗೀಗ ಈ ಸನ್ನಿವೇಶದ ಕುರಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದುದೂ ಜಾರಿಯಲ್ಲಿತ್ತು. ಯಲ್ಲಾಪುರದ ಕೆಲವರಿಗೆ ಈಗಲೂ ವಿಧುರ ಯೆಸ್‌ ಎಂದ ಎನ್ನುವ ತಾಳಮದ್ದಲೆಯ ಸನ್ನಿವೇಶ ನೆನಪಾಗಬಹುದು. ಯಲ್ಲಾಪುರದ ಭಾಗದ ಜನರಿಗೆ ಈ ಬಗ್ಗೆ ಜಾಸ್ತಿ ಗೊತ್ತಿದ್ದರೆ ತಿಳಿಸಿ.
ಇಂತಹ ಯಕ್ಷಗಾನ ಹಾಗೂ ತಾಳಮದ್ದಲೆಯ ತಮಾಷೆಯ ಸನ್ನಿವೇಶಗಳಿದ್ದರೆ ನೀವೂ ತಿಳಿಸಿ

No comments:

Post a Comment