ಬಹುತೇಕರು ಆಗುಂಬೆಯನ್ನು ನೋಡಿಯೇ ಇರುತ್ತಾರೆ. ಆಗುಂಬೆಯ ಸೂರ್ಯಾಸ್ತವನ್ನು ನೋಡಿ ಮನದಣಿದವರು ಅನೇಕರಿದ್ದಾರೆ. ಆಗುಂಬೆಯಂತಹುದೇ ಒಂದು ಸ್ಥಳ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ. ಥಟ್ಟನೆ ನೋಡಿದರೆ ಆಗುಂಬೆಗಿಂತಲೂ ಚನ್ನಾಗಿ ಕಾಣುವ ಈ ತಾಣವೇ ಜೇನುಕಲ್ಲುಗುಡ್ಡ.
ಇದ್ದಕ್ಕಿದ್ದಂತೆ ಭೂಮಿಯ ಕೊನೆಯ ಭಾಗ ಬಂದೇ ಹೋಯಿತೇನೋ ಎನ್ನುವಂತೆ ಕಾಣುವ ಕಡಿದಾದ ಕಲ್ಲಿನ ಗುಡ್ಡ. ಕಣಿವೆಯಾಳದಲ್ಲಿ ಬಳುಕಿ ಹರಿಯುವ ಗಂಗಾವಳಿ ನದಿ. ಕೇಳಿಯೂ ಕೇಳದಂತಹ ನದಿ ಹರಿವಿನ ಶಬ್ದ. ಇಣುಕಿ ನೋಡಿದಲ್ಲೆಲ್ಲ ಸಹ್ಯಾದ್ರಿ ವನರಾಶಿ. ಆಹಾ ಜೇನುಕಲ್ಲು ಗುಡ್ಡದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಆಗುಂಬೆಯಂತೆಯೇ ಇದೂ ಕೂಡ ಸೂರ್ಯಾಸ್ಥಕ್ಕೆ ಹೆಸರಾದುದು. ರೌದ್ರ ರೂಪ ತಾಳಿದ ಸೂರ್ಯ ಪಡುವಣದತ್ತ ಇಳಿದು ಅರಬ್ಬಿ ಸಮುದ್ರದಾಚೆ ಮುಳುಗಿ ಹೋಗುವ ಆ ಸಂಜೆಯ ಸಂದರ್ಭವಂತೂ ವರ್ಣಿಸಲಸದಳ. ಬಾನು ಕೆಂಪಾಗಿ, ಸೂರ್ಯ ಕೂಡ ದೊಡ್ಡದೊಂದು ಚೆಂಡಿನ ಆಕಾರ ಪಡೆದು ಅಸ್ತಮಿಸುತ್ತಿದ್ದರೆ ಜೇನುಕಲ್ಲು ಗುಡ್ಡದಿಂದ ನೋಡುಗರ ಮನಸ್ಸಂತೂ ಸ್ವರ್ಗದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ಜೇನುಕಲ್ಲು ಗುಡ್ಡಕ್ಕೆ ಹೋದರೆ ನಾವು ಮೋಡಗಳ ಮೇಲೆ ನಿಂತಂತೆ ಭಾಸವಾಗುತ್ತದೆ. ಗಂಗಾವಳಿ ಕಣಿವೆಯ ಆಳದಲ್ಲಿ ಹಾದು ಬರುವ ಮೋಡ ಸಹ್ಯಾದ್ರಿ ಶೃಂಗಗಳಿಗೆ ಢಿಕ್ಕಿ ಹೊಡೆದು ನಿಂತಿರುತ್ತದೆ. ಈ ದೃಶ್ಯವಂತೂ ನಾವೇ ಮೋಡಕ್ಕಿಂತ ಮೇಲೆ ನಿಂತಿದ್ದೇವೇನೋ ಅನ್ನಿಸುತ್ತದೆ. ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳ ಮೇಲೆ ಮೋಡಗಳ ಚಾಪೆ ಹಾಸಲಾಗಿದೆಯೇನೋ ಅನ್ನಿಸುತ್ತದೆ. ಮಳೆಗಾಲದಲ್ಲಂತೂ ಜೇನುಕಲ್ಲು ಗುಡ್ಡದ ಸೌಂದರ್ಯ ನೂರ್ಮಡಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಣಿವೆಯಾಳದಲ್ಲಿ ಕಾಣುವ ಅಂಕೋಲಾ ತಾಲೂಕಿನ ಪ್ರದೇಶಗಳು, ನಡು ನಡುವೆ ತಲೆಯೆತ್ತಿರುವ ಗುಡ್ಡಗಳು, ಹಸಿರ ತೋಟಗಳು, ಬಾನಿನ ಕಡೆಗೆ ಮುಖ ಮಾಡಿ ನಿಂತ ಕಾನನದ ಮರಗಳು, ನಡು ನಡುವೆ ಗದ್ದೆಗಳು ಇವೆಲ್ಲವೂ ಕೂಡ ಕಣ್ಮನ ಸೆಳೆಯುತ್ತವೆ.
ಜೇನಕಲ್ಲು ಗುಡ್ಡ ಹೆಸರೇ ಹೇಳುವ ಹಾಗೆ ಜೇನುಗಳ ಕಲ್ಲು ಕೂಡ ಹೌದು. ಕಡಿದಾದ ಕಲ್ಲು ಬಂಡೆ. ಆ ಕಲ್ಲುಬಂಡೆಯ ಪಾರ್ಶ್ವದಲ್ಲೆಲ್ಲ ಜೇನುಗಳು ಗೂಡು ಕಟ್ಟಿಕೊಂಡಿದೆ. ಈ ಜೇನುಕಲ್ಲು ಗುಡ್ಡದ ನೆತ್ತಿಯ ಮೇಲೆ ನಿಂತರೆ ಎಷ್ಟು ಆಹ್ಲಾದವೋ, ಅಷ್ಟೇ ಅಪಾಯಕಾರಿ ತಾಣವೂ ಇದಾಗಿದೆ. ಕಬ್ಬಿಣದ ಬೇಲಿ ಇಲ್ಲಿದ್ದರೂ ಕೊಂಚ ಯಾಮಾರಿದರೆ ಕೈಲಾಸವೇ ಗತಿ ಎನ್ನುವಂತಹ ಸ್ಥಳ. ನೆತ್ತಿಯ ಮೇಲೆ ಒಂದೆರಡು ವೀಕ್ಷಣಾ ಗೋಪುರಗಳೂ ಇದೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿದಂತಹ ಸ್ಥಳ. ದಟ್ಟವಾದ ಕಾಡಿನಿಂದಾವೃತವಾದ ಈ ತಾಣಕ್ಕೆ ವರ್ಷದ ಯಾವುದೇ ಕಾಲದಲ್ಲಿಯೂ ಕೂಡ ಹೋಗಿ ಬರಬಹುದು. ಈ ತಾಣದವರೆಗೂ ಬಸ್ ಸೌಕರ್ಯವಿಲ್ಲ. ಸ್ವಂತ ವಾಹನವನ್ನು ಬಳಸುವುದು ಅನಿವಾರ್ಯ. ಕಚ್ಚಾ ರಸ್ತೆ ದ್ವಿಚಕ್ರ ವಾಹನ ಸವಾರರನ್ನು ಹೈರಾಣಾಗಿಸಬಹುದು. ಆದರೆ ಜೇನುಕಲ್ಲು ಗುಡ್ಡದಲ್ಲಿ ವಿಹರಿಸಿದರೆ ಮನಸ್ಸಿನ ಕ್ಲೇಷ, ಆಯಾಸ, ಪ್ರಯಾಸಗಳೆಲ್ಲ ಕ್ಷಣಾರ್ದದಲ್ಲಿ ದೂರವಾಗುತ್ತದೆ.
ಜೇನುಕಲ್ಲು ಗುಡ್ಡ ನೋಡಲು ಬಂದರೆ ಅಕ್ಕಪಕ್ಕದಲ್ಲಿಯೇ ಮಾಗೋಡು ಜಲಪಾತ ಹಾಗೂ ಕವಡೀಕೆರೆಗಳಿದೆ. ಆರೇಳು ಕಿಲೋಮೀಟರ್ ದೂರದಲ್ಲಿಯೇ ಈ ತಾಣಗಳಿದ್ದು ಇವನ್ನೂ ಕೂಡ ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲ, ಹತ್ತಿರದಲ್ಲಿಯೇ ಚಂದಗುಳಿಯ ಘಂಟೆ ಗಣಪನ ಸನ್ನಿಯೂ ಇದೆ. ಘಂಟೆಯನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರೆ ಇಷ್ಟಾರ್ಥ ಕರುಣಿಸುತ್ತಾನೆ ಎನ್ನುವ ಪ್ರತೀತಿ ಹೊಂದಿರುವವ ಗಣಪನ ದೇವಾಲಯ ಹತ್ತಿರದಲ್ಲೇ ಇದೆ. ಜೇನುಕಲ್ಲು ಗುಡ್ಡವನ್ನು ನೋಡಲು ಬರುವವರು ಇವುಗಳನ್ನೂ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳು ಮೋಜು ಮಸ್ತಿಗೆ ಬಳಕೆಯಾಗುತ್ತಿವೆ. ಇಂತಹ ತಾಣಕ್ಕೆ ಬರುವವರು ನಿರ್ಮಲ ಮನಸ್ಸಿನಿಂದ ಬಂದು ಹೋಗುವುದು ಬಿಟ್ಟು ಗುಂಡುಗಲಿಗಳಾಗುತ್ತಿದ್ದಾರೆ. ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿದಂತೆ ತಾವು ತರುವ ವಸ್ತುಗಳನ್ನು ಇಂತಹ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಜೇನುಕಲ್ಲು ಗುಡ್ಡಕ್ಕೆ ಹೋಗುವವರು ತ್ಯಾಜ್ಯವನ್ನು ಎಸೆಯಲು ಅವಕಾಶ ಕೊಡಬಾರದು. ಪ್ರಕೃತಿಯ ಮಧ್ಯದಲ್ಲಿರುವ ತಾಣವನ್ನು ಮಲಿನ ಮಾಡದೇ ತಾಣದ ಸಹಜತೆ ಉಳಿಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಷ್ಟಾದಾಗ ಮಾತ್ರ ಇಂತಹ ತಾಣಗಳ ಸೌಂದರ್ಯ ಸಹಜವಾಗಿರುತ್ತದೆ, ಇನ್ನಷ್ಟು ಹೆಚ್ಚುತ್ತದೆ.
ಹೋಗುವ ಬಗೆ :
ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬಂದು ಅಲ್ಲಿಂದ 15-18 ಕಿ.ಮಿ ದೂರದಲ್ಲಿರುವ ಜೇನುಕಲ್ಲು ಗುಡ್ಡಕ್ಕೆ ಹೋಗಬಹುದು. ಶಿವಮೊಗ್ಗ-ಶಿರಸಿಯ ಮೂಲಕ ಬರುವವರು ಯಲ್ಲಾಪುರ ರಸ್ತೆಯಲ್ಲಿ ಸಾಗಿ ಮಳಲಗಾಂವ್ ಅಥವಾ ಉಪಳೇಶ್ವರದಲ್ಲಿ ಎಡಕ್ಕೆ ತಿರುಗಿ ಚಂದಗುಳಿ, ಮಾಗೋಡ ಫಾಲ್ಸ್ ಮೂಲಕ ಜೇನುಕಲ್ಲು ಗುಡ್ಡಕ್ಕೆ ತೆರಳಬಹುದು. ಮಂಗಳೂರು ಭಾಗದಿಂದ ಬರುವವರು ಅಂಕೋಲಾಕ್ಕೆ ಬಂದು ಅಲ್ಲಿಂದ ಯಲ್ಲಾಪುರ ಮೂಲಕ ಈ ತಾಣವನ್ನು ತಲುಪಲು ಸಾಧ್ಯವಿದೆ. ಯಾವುದೇ ಹೊಟೆಲುಗಳು ಅಥವಾ ಇನ್ನಿತರ ಅಂಗಡಿಗಳು ಇಲ್ಲಿಲ್ಲದ ಕಾರಣ ದಿನವಿಡೀ ಇರಲು ಬಯಸುವವರು ಊಟ ಅಥವಾ ತಿಂಡಿ ಕಟ್ಟಿಕೊಂಡು ಬರುವುದು ಅನಿವಾರ್ಯ. ಯಲ್ಲಾಪುರದಲ್ಲಿ ಉಳಿಯಲು ವಸತಿಗೃಹಗಳಿವೆ. ಒಂದು ಅಥವಾ ಎರಡು ದಿನಗಳ ಅವಯಲ್ಲಿ ಜೇನುಕಲ್ಲು ಗುಡ್ಡ ಸೇರಿದಂತೆ ಯಲ್ಲಾಪುರ ತಾಲೂಕಿನ ಎಲ್ಲ ಪ್ರವಾಸಿ ತಾಣಗಳ ದರ್ಶನ ಮಾಡಬಹುದಾಗಿದೆ.
-----------
(ಈ ಲೇಖನ 2017ರ ಡಿಸೆಂಬರ್ 20ರಂದು ಹೊಸದಿಗಂತದ ಅಂತರಗಂಗೆ ಪುರವಣಿಯ ಯುವರಾಗ ಪುಟದಲ್ಲಿ ಪ್ರಕಟವಾಗಿದೆ)
No comments:
Post a Comment