Monday, December 4, 2017

ಅಬ್ಬಬ್ಬಾ ಹೆಸರೇ...!

ಕ್ರಿಕೆಟ್ ಆಡುವ ದೇಶಗಳು ಹಲವಾರು.. ಕ್ರಿಕೆಟ್ ಆಡುವ ಆಟಗಾರರ ಹೆಸರು ಮಾತ್ರ ಮಜವಾಗಿದೆ. ಕೆಲವು ಆಟಗಾರರ ಹೆಸರಂತೂ ಕಿಲೋಮೀಟರ್ಗಳಷ್ಟು ಉದ್ದವಿದೆ. ಶ್ರೀಲಂಕಾದ ಆಟಗಾರರ ಹೆಸರಂತೂ ಅದಷ್ಟು ಉದ್ದವಿದೆ ಅಂದರೆ.. ಆಹಾ ಬೆರಗಾಗುತ್ತೀರಿ. ಭಾರತದ ಕೆಲವು ಆಟಗಾರರ ಹೆಸರೂ ಸುದೀರ್ಘವಾಗಿದೆ. ಅಂತಹ ಕೆಲವು ವಿಶಿಷ್ಟ ಹಾಗೂ ಉದ್ದ ಹೆಸರನ್ನು ಇಲ್ಲಿ ಇಡುತ್ತಿದ್ದೇನೆ.. ಸುಮ್ನೆ ನೋಡಿ...

ಇಲ್ ಬುಲಾ
1947ರಿಂದ 1954ರ ನಡುವೆ ಫಿಜಿ ದೇಶದಲ್ಲಿ ಹಲವಾರು ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಬುಲಾ ಎಂಬ ಆಟಗಾರನ ಹೆಸರು ಎಷ್ಟು ಉದ್ದವಿದೆ ಎಂದರೆ... ಆಹಾ.. ಇಲಿಕೆನಾ ಲಸರುಸಾ ತಲೆಬುಲಾಮೈನವಾಲೆನಿವೈವಕಬುಲೈಮೈನಕುಲಲಕೆಬಲೌ- ಇದು ಆ ಪುಣ್ಯಾತ್ಮನ ಹೆಸರಂತೆ. ಈ ಹೆಸರನ್ನು ಒಂದೇ ಉಸುರಿಗೆ, ಹೇಳಿ ಅಂದರೆ ಎಂತವರೂ ತಬ್ಬಿಬ್ಬಾಗಬಹುದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಂದರೆ ಜಪ್ಪಯ್ಯಾ ಅಂದರೂ ಆಗೋದಿಲ್ಲ ಬಿಡಿ. ಅಂದಹಾಗೆ ಈತ ಹಾರ್ಡ್ ಹಿಟ್ಟರ್ ಆಗಿದ್ದನಂತೆ. ಎರಡು ಶತಕಗಳನ್ನೂ ಬಾರಿಸಿದ್ದಾನಂತೆ. ಆತನ ಹೆಸರನ್ನು ಬರೆಯಹೋದರೆ ಸ್ಕೋರ್ ಕಾರ್ಡಿನಲ್ಲಿ ಜಾಗ ಸಾಲುವುದಿಲ್ಲ ಬಿಡಿ. ಅದಕ್ಕೇ ಆತ ಇಲ್ ಬುಲಾ ಅಂತ ಚಿಕ್ಕದಾಗಿ ಮಾಡಿಕೊಂಡನಂತೆ.

ಚಮಿಂಡಾ ವಾಸ್
ಶ್ರೀಲಂಕಾದ ಎಡಗೈ ವೇಗದೂತ ಬೌಲರ್ ಚಮಿಂಡಾ ವಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದ ಈ ವಾಸ್ ನ ಪೂರ್ಣಹೆಸರು ಕೇಳಿದರೆ ಅಚ್ಚರಿಯಾಗಬಹುದು. ವರ್ಣಕುಲಸೂರಿಯಾ ಪಟಬೆಂಡಿಗೆ ಉಷಾಂತ ಜೋಸೆಫ್ ಚಮಿಂಡಾ ವಾಸ್ ಎನ್ನುವುದು ಆತನ ಪೂರ್ತಿ ಹೆಸರು. 400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಈತ 761 ವಿಕೆಟ್ ಪಡೆದು ಸಾಧನೆ ಮಾಡಿದ್ದಾನೆ.

ಇಬಿ ಡ್ವಾಯರ್
ಸಿಡ್ನಿ ಮೂಲದ, ಇಂಗ್ಲೆಂಡ್ ಪರ ಆಡಿದ ಆಟಗಾರ ಎಡ್ ಡ್ವಾಯರ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಕೈಚಳಕ ತೋರಿದವರು ಇವರು. ಇವರ ಪೂರ್ಣ ಹೆಸರು ಜಾನ್ ಎಲಿಸಿಯಸ್ ಬೆನೆಡಿಕ್ಟ್ ಬೆರ್ನಾರ್ಡ್ ಪ್ಲೆಸಿಡ್ ಕ್ವಿರ್ಕ್ ಕ್ಯಾರಿಂಗ್ಟನ್ ಡ್ವಾಯರ್ ಎಂದು.

ಚನಕ ವಲಗೆದರಾ
ಶ್ರೀಲಂಕಾದ ಆಟಗಾರರ ಹೆಸರು ಸುದೀರ್ಘವಾಗಿದೆ. ಚಮಿಂಡಾ ವಾಸ್ ಹೆಸರನ್ನು ಈಗಾಗಲೇ ಓದಿದ್ದೀರಿ. ಚನಕ ವಲಗೆದರಾನ ಹೆಸರೂ ಕೂಡ ಸುದೀರ್ಘವಾಗಿದೆ. ಉಡಾ ವಲವ್ವೆ ಮಹಿಮ್ ಬಂಡಾರಲಗೆ ಚನಕ ಅಸಂಗ ವಲಗೆದರಾ ಎನ್ನುವುದನ್ನು ಸ್ಕೋರ್ ಕಾರ್ಡಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಚನಕ ವಲಗೆದರಾ ಅಂತ ಚಿಕ್ಕದು ಮಾಡಿಕೊಂಡಿರಬೇಕು ಬಿಡಿ. ಈ ಆಟಗಾರ ಈಗಾಗಲೇ 50 ವಿಕೆಟ್ ಕಬಳಿಸಿದ್ದಾರೆ.

ರಾಸ್ ಟೇಲರ್
ನ್ಯೂಝಿಲೆಂಡ್ ನ ಆಪದ್ಭಾಂಧವ, ಮಧ್ಯಮ ಕ್ರಮಾಂಕದ ಆಟಗಾರ ರಾಸ್ ಟೇಲರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯಾವ ದೇಶದ ವಿರುದ್ಧ ಆಡದಿದ್ದರೂ ಭಾರತದ ವಿರುದ್ಧ ಅಂತೂ ಉತ್ತಮವಾಗಿಯೇ ಆಡುವ ಟೇಲರ್ ಹೆಸರೂ ಕೂಡ ಸಾಕಷ್ಟು ದೀರ್ಘವಾಗಿದೆ. ಲುಟೆರು ರಾಸ್ ಪೌಟೋವಾ ಲೊಟೆ ಟೇಲರ್ ಎನ್ನುವುದು ರಾಸ್ ಟೇಲರ್ ನ ಪೂರ್ತಿ ಹೆಸರು.

ಹೆನ್ರಿ ಗೋವರ್
ಇಂಗ್ಲೆಂಡಿನ ಸರ್ರೇ ತಂಡದ ನಾಯಕ ಹೆನ್ರಿ ಗೋವರ್ ನ ಪೂರ್ಣ ಹೆಸರು ಹೆನ್ರಿ ಡ್ಯೂಡ್ಲಿ ಗ್ರೆಶಮ್ ಲೆವೆಸನ್ ಗೋವರ್ ಎಂದು. ಇವರಿಗೆ ಇಂಗ್ಲೆಂಡ್ ಸರ್ ಪದವಿಯನ್ನು ನೀಡಿ ಗೌರವಿಸಿತ್ತು.

ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್
ರಾಣಿ ವಿಕ್ಟೋರಿಯಾಳ ಮೊಮ್ಮಗ ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್ 1887ರಲ್ಲಿ ಕ್ರಿಕೆಟ್ ಆಡಿದವರು. ಇವರ ಪೂರ್ತಿ ಹೆಸರು ಪ್ರಿನ್ಸ್ ವಿಕ್ಟರ್ ಆಲ್ಬರ್ಟ್ ಲುಡ್ವಿಗ್ ಅರ್ನೆಸ್ಟ್ ಆಂಟನ್ ಕ್ರಿಸ್ಟಿಯನ್ ಆಫ್ ಶ್ಲೆಸ್ವಿಗ್ ಹೋಲ್ಸ್ಟೈನ್ ಎಂದು. ಇಂಗ್ಲೆಂಡಿನಲ್ಲಿ ಪ್ರಥಮದರ್ಜೆ ಪಂದ್ಯಗಳನ್ನು ಮಾತ್ರ ಆಡಿರುವ ಇವರು, ಡಬ್ಲೂ ಜಿ. ಗ್ರೇಸ್ ಅವರ ಸಮಕಾಲೀನರು.

ಫೌಡ್ ಬುಚ್ಚಸ್

1978-79ರಲ್ಲಿ ಭಾರತದ ವಿರುದ್ಧದ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 250ರನ್ ಭಾರಿಸಿದ ವೆಸ್ಟ್ ಇಂಡೀಸಿನ ಆಟಗಾರ ಫೌಡ್ ಬುಚ್ಚಸ್ ನ ಪೂರ್ಣ ಹೆಸರು ಶೇಕ್ ಫೌಡ್ ಅಹಮುಲ್ ಫಸಿಯೇಲ್ ಬುಚ್ಚಸ್ ಎಂದು. ವೆಸ್ಟಿಂಡೀಸಿನಲ್ಲಿ ಕೇವಲ ನಾಲ್ಕು ಜನರು ಮಾತ್ರ ನಾಲ್ಕು ಶಬ್ದಗಳ ಹೆಸರನ್ನು ಒಳಗೊಂಡಿದ್ದಾರೆ. ಅವರಲ್ಲೊಬ್ಬರು ಫೌಡ್ ಬುಚ್ಚಸ್.

ರಜಿತಾ ಅಮುನುಗಮ
ಶ್ರೀಲಂಕಾದ ಈ ಆಟಗಾರನ ಹೆಸರನ್ನು ಓದಿದರೆ ಹೌಹಾರುತ್ತೀರಿ. 1990ರ ದಶಕದಲ್ಲಿ ಶ್ರೀಲಂಕಾದ ಪರ ಆಡಿತ ಈತ ಕ್ರಿಕೆಟ್ ನಲ್ಲಿ ಹೆಸರಾಗದಿದ್ದರೂ, ತನ್ನ ಹೆಸರಿನ ಮೂಲಕ ಹೆಸರಾಗಿದ್ದಾನೆ. ಅಮುನುಗಮ ರಾಜಪಕ್ಸೆ ರಾಜಕರುಣ ಅಬೆಯೂಕೂನ್ ಪಂಡಿತಾ ವಸಲಮುಡಿಯನ್ಸೆ ರಲಹಮಿಲಗೆ ರಾಜಿತಾ ಕ್ರಿಶಂತಾ ಬಂಡಾರ ಅಮುನುಗಮ. 11 ಶಬ್ದಗಳ 51 ಅಕ್ಷರಗಳ ಹೆಸರಿನ ಈತ ಕ್ರಿಕೆಟ್ ನಲ್ಲಿ ಅಲ್ಲದಿದ್ದರೂ ಹೆಸರಿನಲ್ಲಿ ಅರ್ಧಶತಕ ಭಾರಿಸಿದ್ದಾನೆ ಬಿಡಿ

ಎಂಕೆಜಿಸಿಪಿ ಲಕ್ಷಿತಾ
ಚಮಿಲಾ ಗಮಗೆ ಎನ್ನುವ ಹೆಸರಿನಿಂದ ಖ್ಯಾತಿ ಪಡದಿರುವ ಶ್ರೀಲಂಕಾದ ವೇಗದ ಬೌಲರ್ ನ ಪೂರ್ಣ ಹೆಸರು ಮತರಂಬ ಕನತ್ತಾ ಗಮಗೆ ಚಮಿಲಾ ಪ್ರೇಮನಾಥ ಲಕ್ಷಿತಾ ಎಂದು. ಶ್ರೀಲಂಕಾದ ಪರ ಈತ 2 ಟೆಸ್ಟ್ ಹಾಗೂ 7 ಏಕದಿನ ಪಂದ್ಯಗಳನ್ನಾಡಿದ್ದಾನೆ.

ರಂಗಣ ಹೆರಾತ್
ಮುತ್ತಯ್ಯ ಮುರಳೀಧರನ್ ನಂತರ ಶ್ರೀಲಂಕಾದ ಸ್ಪಿನ್ ಸಾರಥ್ಯ ವಹಿಸಿಕೊಂಡಿರುವ 3 ವರ್ಷದ ರಂಗಣ ಹೆರಾತ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬರೀ ರಂಗಣ ಹೆರಾತ್ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ಆತನ ಪೂರ್ಣನಾಮಧೇಯ ಹೆರಾತ್ ಮುದಿಯನಸೆಲಗೆ ರಂಗಣ ಕೀರ್ತಿ ಭಂಟಾರ ಹೆರಾತ್ ಎಂದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ನೋಡೋಣ...!

ಲಕ್ಸನ್ ಸಂದಕನ್
ಶ್ರೀಲಂಕಾದ ಯುವ ಸ್ಪಿನ್ನರ್ ಸಂದಕನ್ ಹೆಸರು ಕೂಡ ಸುದೀರ್ಘವಾಗಿದೆ. 2016ರಲ್ಲಿ ಮೊದಲ ಟೆಸ್ಟ್ ಆಡಿದ ಸಂದಕನ್ ನ ಪೂರ್ಣ ಹೆಸರು ಪತ್ತಂಪೆರುಮಾ ಅರ್ಚಿಗೆ ಡಾನ್ ಲಕ್ಷನ್ ರಂಗಿಕು ಸಂದಕನ್ ಎಂದು.

ಗಿಹನ್ ರೂಪಸಿಂಗೆ
2009ರಲ್ಲಿ ಶ್ರೀಲಂಕಾ ಪರ ಆಡಿದ ಈ ಆಟಗಾರನ ಪೂರ್ಣ ಹೆಸರು ರೂಪಸಿಂಗೆ ಜಯವರ್ಧನೆ ಮುದಿಯನಸಲಗೆ ಗಿಹನ್ ಮಧುಶಂಕ ರೂಪಸಿಂಘೆ.

ಅಖಿಲ ಧನಂಜಯ
ಮಹಾಮರಕ್ಕಲ ಕುರುಕುಲಸೂರಿಯಾ ಪಟಬೆಂಡಿಗೆ ಅಖಿಲ ಧನಂಜಯ ಪೆರೇರಾನನ್ನು ಅಖಿಲ ಧನಂಜಯ ಎಂದೇ ಕರೆಯೋಣ. ಪೂರ್ಣ ಹೆಸರು ಹೇಳಲು ಹೋದರೆ ಸುಸ್ತಾಗಬಹುದು.

ಹೇಮಂತ ವಿಕ್ರಮರತ್ನೆ
ಶ್ರೀಲಂಕಾದ ಪರವಾಗಿ 1993ರಲ್ಲಿ ಕೆಲವು ಪಂದ್ಯಗಳನ್ನಾಡಿದ ಹೇಮಂತ ವಿಕ್ರಮಸಿಂಘೆಯ ಪೂರ್ಣ ಹೆಸರು ರಣಸಿಂಘೆ ಪಟ್ಟಿಕಿರಿಕೊರಲಲಗೆ ಅರುಣ ಹೇಮಂತ ವಿಕ್ರಮರತ್ನೆ ಎಂದು.

ಸಚಿತ್ರ ಸೇನಾನಾಯಕೆ
ಶ್ರೀಲಂಕಾದ ಸ್ಪಿನ್ನರ್ ಸಚಿತ್ರ ಸೇನಾನಾಯಕೆಯ ಪೂರ್ಣ ಹೆಸರು ಸೇನಾನಾಯಕೆ ಮುದಿಯನಿಸಲಗೆ ಸಚಿತ್ರ ಮಧುಶಂಕ ಸೇನಾನಾಯಕೆ ಎಂದು.

ಬಿಡಿ ಶ್ರೀಲಂಕಾದ ಹಲವು ಆಟಗಾರರ ಹೆಸರು ಸುದೀರ್ಘವಾಗಿಯೇ ಇದೆ. ಭಾರತದವರ ಕಡೆಗೆ ನೋಡೋಣ. ಭಾರತದ ಆಟಗಾರರ ಹೆಸರುಗಳೂ ಕೂಡ ಸುದೀರ್ಘವಾಗಿದೆ. ಸುಮ್ಮನೆ ನಿಮ್ಮ ಕುತೂಹಲಕ್ಕೆ ಅವನ್ನು ಕೊಡುತ್ತಿದ್ದೇನೆ. ನೋಡಿ,

ವೆಂಕಟ್
ಉದ್ದದ ಹೆಸರುಗಳ ಯಾದಿಯಲ್ಲಿ ಭಾರತದ ಆಟಗಾರರ ಹೆಸರೂ ಇದೆ. ಅವರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಆಫ್ ಸ್ಪಿನ್ನರ್ ಎಸ್. ವೆಂಕಟರಾಘವನ್. ಭಾರತದ ನಾಯಕರೂ ಆಗಿದ್ದ ಇವರು 156 ವಿಕೆಟ್ ಪಡೆದಿದ್ದಾರೆ. ದೀರ್ಘಕಾಲದಿಂದ ಅಂಪಾಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಂದಹಾಗೆ ಇವರ ಪೂರ್ತಿ ಹೆಸರು ಶ್ರೀನಿವಾಸ ರಾಘವನ್ ವೆಂಕಟ ರಾಘವನ್ ಎಂದು.

ವಿವಿಎಸ್ ಲಕ್ಷ್ಮಣ್
ಭಾರತ ಕಂಡ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಒಬ್ಬರಾದ ವಿವಿಎಸ್ ಲಕ್ಷ್ಮಣ್ ರ ಪೂರ್ಣ ಹೆಸರು ವೆಂಗಿಪುರುಪ್ಪು ವೀರವೆಂಕಟ ಸಾಯಿ ಲಕ್ಷ್ಮಣ್

ಸ್ಟುವರ್ಟ್ ಬಿನ್ನಿ
ಬಿನ್ನಿ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ.. ಅಪ್ಪ ರೋಜರ್ ಬಿನ್ನಿ, ಮಗ ಸ್ಟುವರ್ಟ್ ಬಿನ್ನಿ ಎಲ್ಲರಿಗೂ ಗೊತ್ತು. ಆದರೆ ಆತನ ಪೂರ್ಣ ಹೆಸರು ಗೊತ್ತಾ? ಗೊತ್ತಲ್ಲವಾದರೆ ಇಲ್ಲಿ ನೋಡಿ... ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ. ಇದು ಸ್ಟುವರ್ಟ್ ಬಿನ್ನಿಯ ಪೂರ್ಣ ನಾಮಧೇಯ.

ಚೇತನ್ ಚೌಹಾಣ್
ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ಒಂದು ಕಾಲದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಟೆಸ್ಟ್ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದರು. ಇವರ ಪೂರ್ಣ ಹೆಸರು ಚೇತನ್ ಪ್ರತಾಪ್ ಸಿಂಗ್ ಚೌಹಾಣ್.

ಎಸ್ ಎಂ ಎಚ್ ಕಿರ್ಮಾನಿ
ಭಾರತದ ಅತ್ಯುತ್ತಮ ವಿಕೇಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದ ಕಿರ್ಮಾನಿ ಅವರ ಪೂರ್ಣ ಹೆಸರು ಸಯ್ಯದ್ ಮುಜ್ತಾಬ್ ಹುಸೇನ್ ಕಿರ್ಮಾನಿ ಎಂದು.

ರೋಜರ್ ಬಿನ್ನಿ
ಮಗ ಸ್ಟುವರ್ಟ್ ಬಿನ್ನಿಯ ಉದ್ದ ಹೆಸರನ್ನೇನೋ ನೋಡಿದಿರಿ. ಅಪ್ಪ ರೋಜರ್ ಬಿನ್ನಿಯದ್ದು ಹೇಳುವುದು ಬೇಡವೇ? ರೋಜರ್ ಬಿನ್ನಿಯ ಪೂರ್ತಿ ಹೆಸರು ರೋಜರ್ ಮೈಖೆಲ್ ಹಂಫ್ರಿ ಬಿನ್ನಿ.

ವೆಂಕಟೇಶ್ ಪ್ರಸಾದ್
ಕನ್ನಡಿಗ, ಶ್ರೀನಾಥ್ ರ ಸಮಕಾಲೀನ ವೇಗದ ಬೌಲರ್ ವೆಂಕಟೇಶ ಪ್ರಸಾದರು ನೆನಪಾದಾಗಲೆಲ್ಲ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅಮೀರ್ ಸೊಹೈಲ್ ಜೊತೆಗಿನ ಕಾದಾಟ, ಜಿದ್ದು ನೆನಪಾಗುತ್ತದೆ. ಇಂತಹ ಹೆಸರಾಂತ ಬೌಲರ್ ವೆಂಕಟೇಶ ಪ್ರಸಾದ ಪೂರ್ಣ ಹೆಸರು ಬಾಪು ಕೃಷ್ಣರಾವ್ ವೆಂಕಟೇಶ್ ಪ್ರಸಾದ್ ಎಂದು.

ಇಎಎಸ್ ಪ್ರಸನ್ನ
ಭಾರತದ ಸಾರ್ವಕಾಲಿಕ ಶ್ರೇಷ್ಟ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಇಎಎಸ್ ಪ್ರಸನ್ನರ ಪೂರ್ಣ ಹೆಸರು ಎರಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ.

ಗುಲಾಂ ಪಾರ್ಕರ್
1980ರ ದಶಕದಲ್ಲಿ ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ ಗುಲಾಮ್ ಪಾರ್ಕರ್ ಎನ್ನುವ ಕ್ರಿಕೆಟ್ ಆಟಗಾರನ ಪೂರ್ಣ ಹೆಸರು ಗುಲಾಮ್ ಅಹಮದ್ ಹಸನ್ ಮೊಹಮ್ಮದ್ ಪಾರ್ಕರ್.

ಇಷ್ಟು ಸಾಕೇನೋ ಅಲ್ಲವಾ
ಇಂತಹ ಹೆಸರುಗಳು ನಿಮಗೆ ಸಿಕ್ಕರೆ ಹೇಳಿ... ಕುತೂಹಲದಿಂದ ಓದಿ ನೋಡೋಣ.. ಖುಷಿ ಪಡೋಣ...

No comments:

Post a Comment