Wednesday, June 18, 2014

ಜೋಗ


ಇಳಿಯುತಿದೆ ಬಾಂದಳದಿಂದ
ಹೊನ್ನಿನ ಝರಿ ನೀರು
ನಾಲ್ಕು ಸೀಳಿನ ಸೊಬಗಿನಿಂದ
ಊರು ಸ್ವರ್ಗಕೂ ಮೇರು ||

ರಾಜನೆಂದರೆ ಗಮ್ಯ ಗಂಭೀರ
ರಾಣಿಯ ಬಳುಕು ಸಿಂಧೂರ
ಮೆರೆಯುತಿದೆ ನಾಡು ಇಲ್ಲಿ
ಕುಣಿಯುತಿದೆ ಸೊಬಗು ಚೆಲ್ಲಿ ||

ರಾಜೆಟ್ ಎಂದರೆ ಕಿವಿ ಕಿವುಡು
ರೋರರ್ ನೋಡಲು ಕಣ್ಣು ಕುರುಡು
ಮೆರೆಯುತಿದೆ ಭವ್ಯ ಸೊಬಗು
ನಾಲ್ಕು ಧಾರೆ ನೀಡಿದೆ ಸೊಬಗು ||

ನೀರ ಧಾರೆಯು ಇಲ್ಲಿ ಚಲನೆಯಂತೆ
ನೂರು ಕಷ್ಟಗಳಿಗೆ ಕುಲುಮೆಯಂತೆ
ಜೋಗ ಜಲಪಾತವೇ ನಾಡ ಹೆಮ್ಮೆ
ನೋಡಿದ ಮನಕೊಂದು ಗರಿಮೆ ||

ಜೋಗವೆಂದರೆ ಜೋಗ. ಇದು ಒಂದೇ
ಇಲ್ಲ ಸಾಟಿಯು ಇದರ ಮುಂದೆ
ಇದುವೆ ಶಕ್ತಿಯ ಮೂಲಬಿಂದು
ನೀಡುತಿದೆ ಸ್ಪೂರ್ತಿ, ಜೀವಸಿಂಧು ||

**
(ಈ ಕವಿತೆಯನ್ನು ಬರೆದಿರುವುದು 5.10.2006ರಂದು ದಂಟಕಲ್ಲಿನಲ್ಲಿ)
(ಕವಿತೆಗೆ ಬಳಕೆ ಮಾಡಿರುವ ಜೋಗ ಜಲಪಾತದ ಚಿತ್ರವನ್ನು ನಾನು ತೆಗೆದಿದ್ದು 2009ರಲ್ಲಿ. ಅಚಾನಕ್ಕಾಗಿ ಈ ಚಿತ್ರದಲ್ಲಿ ಜೋಡಿಯೊಂದು ಸಿಲುಕಿಕೊಂಡಿತು. ಮೊದಲು ನನಗೆ ಅರಿವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಚನ್ನಾಗಿ ಮೂಡಿಬಂದಿತು. ಫ್ಲಿಕ್ಕರ್ ಹೈವ್ ಮೈಂಡ್ ನ ಜೋಗಜಲಪಾತದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದೆಂದು ಪರಿಗಣಿಸಲ್ಪಟ್ಟಿದೆ.)

Tuesday, June 17, 2014

ಒಲವ ಲತೆಗೆ ನೀರನೆರೆದ..ಭಾಗ-4

                 ದಿಗಂತ ಸಿಂಧುವಿನ ಬೆನ್ನಿಗೆ ನಿಂತಿದ್ದರಿಂದ ಆಕೆಯ ಕುರಿತು ಹರಿದಾಡುತ್ತಿದ್ದ ಮಾತುಗಳೆಲ್ಲ ನಿಂತಿದ್ದವು. ಆಕೆಯ ಪರವಾಗಿ ಮಾತನಾಡಲೂ ಜನರಿದ್ದಾರೆ ಎಂದಾಗ ಸೊಕಾ ಸುಮ್ಮನೆ ಲೂಸ್ ಟಾಕ್ ಮಾಡಲು ಜನರು ಹೆದರುತ್ತಾರೆ. ಇಲ್ಲೂ ಹಾಗೆಯೇ ಆಯಿತು. ದೊಡ್ಡ ಸ್ಟಾರ್ ದಿಗಂತ ಆಕೆಯ ಬೆನ್ನಿಗೆ ನಿಂತಿದ್ದ. ಆಕೆ ಮಾನಸಿಕವಾಗಿ ದೃಢವಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ.
                 ಸಿಂಧುವಿನ ಹೆಸರು ಹಾಳಾಗಿದ್ದ ಪರಿಣಾಮ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗದಂತಾಗಿತ್ತು. ಕೊನೆಗೆ ದಿಗಂತ ತನ್ನದೇ ಸಿನಿಮಾಕ್ಕೆ ಆಕೆಯನ್ನು ನಟಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ. ಕಳೆದುಹೋಗಿದ್ದ ಸ್ಥಾನಮಾನಗಳೆಲ್ಲ ಮರಳಿ ಸಿಗಲು ಕಾರಣನಾಗಿದ್ದ ದಿಗಂತ. ಸಿಂಧುವಿಗೆ ದಿಗಂತನ ಮೇಲೆ ಅಭಿಮಾನವಿತ್ತಾದರೂ ಆತನಿಗೆ ಸರಿಯಾಗಿ ಮುಖ ತೋರಿಸಲು ಆಗದಂತಹ ಮನಸ್ಥಿತಿಯಿತ್ತು. ಒಮ್ಮೆ ಪ್ರೇಮ ನಿವೇದನೆಯನ್ನು ಮಾಡಿದ್ದ ದಿಗಂತ. ಆತನನ್ನು ಒದ್ದು ಬಂದಂತೆ ಬಂದಿದ್ದಳು. ಇದರಿಂದಾಗಿ ದಿಗಂತ ಎಷ್ಟು ಯಾತನೆಯನ್ನು ಅನುಭವಿಸಿದ್ದ ಎನ್ನುವುದು ಆಕೆಗೆ ತಿಳಿದಿತ್ತು. ನಾನು ಇಷ್ಟೆಲ್ಲ ತೊಂದರೆ ಕೊಟ್ಟು ಆತನನ್ನು ಅವಮಾನಿಸಿ, ಆತನ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುವಂತೆ ಮಾಡಿದ್ದರೂ ಕೂಡ ದಿಗಂತ ನನ್ನ ನೆರವಿಗೆ ಬಂದನಲ್ಲ ಎಂದುಕೊಂಡಿದ್ದಳು. ಇಂತಹ ಸಂದರ್ಭದಲ್ಲೇ ಸಿಂಧು ನಿದ್ದೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡಿದ್ದಳು. ಆದರೆ ದಿಗಂತ ಇಂತಹ ಪ್ರಯತ್ನವನ್ನು ತಡೆದು ಆಕೆಯನ್ನು ಬದುಕಿಸಿದ್ದ. ಬುದ್ಧಿಯನ್ನೂ ಹೇಳಿದ್ದ.
              ಹೀಗಿದ್ದಾಗಲೇ ದಿಗಂತ ಆಕೆಗೆ ಪೋನ್ ಮಾಡಿ ಕೇಳಿದ್ದು `ಟ್ರೆಕ್ಕಿಂಗಿಗೆ ಹೋಗಿ ಬರೋಣವಾ.. ಬರ್ತೀಯಾ?' ಅಂತ. ಆಕೆ ಇರುವ ವಾತಾವರಣ ಕೊಂಚವಾದರೂ ಬದಲಾಗಲಿ, ಆಕೆಯ ಮನಸ್ಥಿತಿ ಸರಿ ಹೋಗಲಿ ಎನ್ನುವ ಕಾರಣಕ್ಕಾಗಿ ದಿಗಂತ ಇಂತಹದ್ದೊಂದು ಉಪಾಯವನ್ನು ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. ಸಂತಸಗೊಳ್ಳುವ ಸರದಿ ದಿಗಂತನದ್ದಾಗಿತ್ತು. ದಿಗಂತನಿಗೆ ಮತ್ತೆ ನೆನಪಾಗಿದ್ದು ಉಂಚಳ್ಳಿ ಜಲಪಾತ. ಸಿಂಧುವಿನ ಬಳಿಗೆ ಅದನ್ನೇ ಹೇಳಿದ್ದ. ಆಕೆ ಒಪ್ಪಿಕೊಂಡು ಹೊರಟಿದ್ದಳು.
           
**
           ಐದಾರು ವರ್ಷಗಳ ಹಿಂದೆ ಟ್ರೆಕ್ಕಿಂಗಿಗೆ ಬಂದ ನಂತರ ಈಗ ಮತ್ತೊಮ್ಮೆ ಬಂದಿದ್ದ ಇವರ ಬದುಕಿನಲ್ಲಿ ಏನೆಲ್ಲ ಬದಲಾವಣೆಯಾಗಿದ್ದವು. ಸಿಂಧುವಿನ ಬಳಿ ದಿಗಂತ ತನ್ನ ಪ್ರೇಮ ನಿವೇದಿಸಿ, ತಿರಸ್ಕೃತನಾಗಿದ್ದ.  ನಂತರದ ದಿನಗಳಲ್ಲಿ ಸಿಂಧು ನಟಿಯಾಗಿ ಹೆಸರು ಮಾಡಿದ್ದಳು. ನಂತರ ಅದೇ ಸಿನಿಮಾ ಜಗತ್ತು ಆಕೆಯ ಹೆಸರು ಹಾಳಾಗುವಂತೆ ಮಾಡಿತ್ತು. ದಿಗಂತನೂ ಇತ್ತ ಜಿದ್ದಿಗೆ ಜಿದ್ದು ಎಂಬಂತೆ ನಟನಾಗಿ, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿ ಹೆಸರು, ಪ್ರಶಸ್ತಿ, ಅಭಿಮಾನಿಗಳನ್ನು ಗಳಿಸಿಕೊಂಡಿದ್ದ. ಹೆಸರು ಹಾಳಾಗಿ ಅವಕಾಶವಿಲ್ಲದೇ ಮಾನಸಿಕವಾಗಿಯೂ ಝರ್ಝರಿತಗೊಂಡಿದ್ದ ಸಿಂಧುವಿನ ಬೆನ್ನಿಗೆ ನಿಂತು ಆಕೆಯನ್ನು ಸಂಕಷ್ಟದಿಂದಲೂ ಪಾರು ಮಾಡಿದ್ದ.
            ಅಂದಿಗೂ ಇಂದಿಗೂ ಉಂಚಳ್ಳಿ ಜಲಪಾತ ಇದ್ದಹಾಗೆಯೇ ಇತ್ತು. ನೀರು ಕೊಂಚ ಕಡಿಮೆಯಾಗಿತ್ತು ಎನ್ನುವುದನ್ನು ಬಿಟ್ಟರೆ ಉಂಚಳ್ಳಿ ಜಲಪಾತ ತನ್ನ ಸೌಂದರ್ಯಕ್ಕೆ ಕುಂದನ್ನು ತಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ಟ್ರೆಕ್ಕಿಂಗೆ ಹಲವಾರು ಜನರು ಜೊತೆಯಲ್ಲಿದ್ದರು. ಆದರೆ ಈಗ ಸಿಂಧು ಹಾಗೂ ದಿಗಂತ ಇಬ್ಬರೇ ಬಂದಿದ್ದರು. ಆಗ ಕಾಲೇಜು ಹುಡುಗರಾಗಿದ್ದ ಇವರು ಈಗ ನಾಲ್ಕು ಜನ ಗುರುತು ಹಿಡಿಯಬಲ್ಲಂತಹ ನಟ-ನಟಿಯರು. ಯಾಕೋ ಸಿಂಧುವಿಗೆ ದಿಗಂತ ಮತ್ತೊಮ್ಮೆ ತನ್ನ ಬಳಿ ಪ್ರೇಮ ನಿವೇದನೆ ಮಾಡಿಬಿಡುತ್ತಾನಾ ಎಂಬ ಆಲೋಚನೆ ಶುರುವಾಯಿತು. ಅದಕ್ಕೆ ತಾನು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬ ಆಲೋಚನೆಯೂ ಶುರುವಾಯಿತು. ಕೊನೆ ಕೊನೆಗೆ ಆತ ಪ್ರೇಮ ನಿವೇದನೆ ಮಾಡಲಾರ, ಆದರೆ ನನ್ನಲ್ಲಿ ಆತನ ಬಗ್ಗೆ ಪ್ರೇಮ ಮೂಡುತ್ತಿದೆಯೇನೋ ಅನ್ನಿಸಿತು. ಕೇಳಿಬಿಡಲಾ ಅಂದುಕೊಂಡಳು. ಆದರೆ ಒಮ್ಮೆ ನಾನೇ ಧಿಕ್ಕರಿಸಿದ್ದೆ. ಈಗ ನಾನಾಗಿಯೇ ಅವನ ಬಳಿ ಪ್ರೇಮ ನಿವೇದನೆ ಮಾಡಿದರೆ ತನ್ನ ಲಾಭಕ್ಕಾಗಿ, ಅಥವಾ ತನ್ನ ಹೆಸರು ಹಾಳಾಗಿದ್ದನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಹೀಗೆ ಮಾಡಿದಳು ಅಂದುಕೊಳ್ಳುತ್ತಾಳೇನೋ ಎಂದುಕೊಂಡಳು.
             ದಿಗಂತ ತನಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾನೆ. ಕಾರಣವಿದ್ದೋ ಇಲ್ಲದೆಯೋ ಆತನನ್ನು ಧಿಕ್ಕರಿಸಿದ್ದೆ. ಸಿನೆಮಾ ಜಗತ್ತಿನಲ್ಲಿ ಸಾಧಿಸುವ ಛಲವಿತ್ತು. ಆದರೆ ಆ ಜಗತ್ತೇ ನನ್ನನ್ನು ಈ ರೀತಿ ಒದ್ದು ಬಿಡುತ್ತದೆ ಎಂದುಕೊಂಡಿರಲಿಲ್ಲ. ಆಗ ನನ್ನನ್ನು ಕಾಪಾಡಿದ್ದು ಎಂದೋ ನಾನು ಒದ್ದಿದ್ದ ದಿಗಂತ. ಬದುಕು ಏನೆಲ್ಲ ತಿರುವನ್ನು ಕೊಟ್ಟುಬಿಡುತ್ತದಲ್ಲ. ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನುವುದು ಇದಕ್ಕೇ ಇರಬೇಕು ಎಂದುಕೊಂಡಳು ಸಿಂಧು.

**
            ಈಗಲಾದರೂ ಕೇಳಿಬಿಡಬೇಕು. ನನ್ನನ್ನು ಪ್ರೀತಿಸುತ್ತೀಯಾ.. ಅಂತ ಎಂದುಕೊಂಡ ದಿಗಂತ. ಆದರೆ ನಾನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಪ್ರೀತಿಸು ಎಂದು ಹೇಳುವುದು ಎಷ್ಟು ಸರಿ? ಪ್ರೀತಿಸುವ ಸಲುವಾಗಿಯೇ ಇಷ್ಟೆಲ್ಲ ಮಾಡಿದನೇ ಎಂದುಕೊಂಡರೆ ಏನು ಮಾಡುವುದು? ಕೇಳಲಾ? ಬಿಡಲಾ? ಕೇಳಿ ಮಳ್ಳಾಗುವುದೇಕೆ? ಒಮ್ಮೆ ಕೇಳಿ ಅವಳಿಂದ ಧಿಕ್ಕರಿಸಿಕೊಂಡಿದ್ದರೂ ಇನ್ನೂ ಮನಸ್ಸೇಕೆ ಈ ರೀತಿ ಅಂದುಕೊಳ್ಳುತ್ತಿದೆ..? ದಿಗಂತನಿಗೆ ಆಲೋಚನೆ. ಉಂಚಳ್ಳಿ ಜಲಪಾತದ ಕಣಿವೆಯಿಳಿದಿದ್ದೇ ಗೊತ್ತಾಗಿರಲಿಲ್ಲ. ಆಲೋಚನೆಯ ನಡು ನಡುವಲ್ಲಿಯೇ ಮುಂದೆ ಮುಂದೆ ಸಾಗುತ್ತಿದ್ದರು.

**
            `ದಿಗಿ... ಮುಂದೆ..? ಸಿನೆಮಾ ಜಗತ್ತಿನಲ್ಲಿ ಬಹಳ ಸಾಧನೆ ಮಾಡಿದೆ..? ಮುಂದೇನು ಮಾಡಬೇಕು ಅಂದ್ಕೊಂಡಿದ್ದೀಯಾ..?' ಸಿಂಧು ಆತನನ್ನು ಮಾತಿಗೆಳೆದಿದ್ದಳು.
            `ಇನ್ನೂ ನಾಲ್ಕೈದು ಸಿನೆಮಾಕ್ಕೆ ಆಫರ್ ಇದೆ. ಆದರೆ ನಾನೇ ಒಪ್ಪಿಕೊಳ್ಳಲಾ, ಬೇಡವಾ ಎನ್ನೋ ಸಂದಿಗ್ಧತೆಯಲ್ಲಿದ್ದೇನೆ. ಮಲೆಯಾಳಮ್ಮಿನದ್ದು ಒಂದು. ತೆಲುಗಿನದ್ದೊಂದು. ಬಾಲಿವುಡ್ಡಿಗೆ ಹೋಗಲಾ ಅನ್ನಿಸುತ್ತಿದೆ.. ಆದರೆ ಯಾಕೋ ಸಿನಿಮಾ ಜಗತ್ತು ನನ್ನಲ್ಲಿ ಹೇಳಲಾಗದಂತಹ ಭಾವನೆಗಳನ್ನು ಮೂಡಿಸುತ್ತಿದೆ.. ಗೊಂದಲಗಳು ಕಾಡುತ್ತಿವೆ. ಮೊದಲಿನ ಏಕಾಗ್ರತೆ ಇಲ್ಲವೇ ಇಲ್ಲ ಎಂಬಂತಾಗಿದೆ,,'
            `ಹುಂ. ನಿಜ. ನನಗೂ ಅದೇ ರೀತಿ ಅನ್ನಿಸ್ತಿದೆ. ಏನೆಲ್ಲಾ ಸಾಧಿಸಿದೆನಲ್ಲ ಅಂತ ನಾನು ಹಾರಾಡಿದ್ದೂ ಜಾಸ್ತಿ ಆಯ್ತೇನೋ ಅನ್ನಿಸ್ತಿದೆ. ಅಂತ ಹೊತ್ತಿನಲ್ಲೇ ನನ್ನ ಮೇಲೆ ಏನೆಲ್ಲ ಆರೋಪಗಳು ಬಂದವು. ಹೆಸರು ಹಾಳಾಯಿತು. ಖಂಡಿತ ನೀನಿಲ್ಲದಿದ್ದರೆ ನಾನು ಏನಾಗುತ್ತಿದ್ದೆನೋ. ನನ್ನ ಪಾಲಿಗೆ ನೀನು ದೇವರಂತೆ ಬಂದೆ. ನಾನು ನಿನಗೆ ಎಷ್ಟೆಲ್ಲ ನೋವು ಕೊಟ್ಟೆ. ಆದರೂ ನೀನು ನನ್ನ ಜೊತೆ ನಿಂತೆಯಲ್ಲ. ನೀನ್ಯಾಕೆ ಇಷ್ಟೆಲ್ಲ ಒಳ್ಳೆಯವನು? ನಿನ್ನಂತಹವನನ್ನು ನಾನು ಕಳೆದುಕೊಂಡೆನಲ್ಲ ಅಂತ ಅನ್ನಿಸುತ್ತಿದೆ.  ಯಾಕೋ ನಾನು ಈ ಸಿನಿಮಾ ಜಗತ್ತನ್ನು ಬಿಟ್ಟು ಬಿಡೋಣ ಅಂದುಕೊಂಡಿದ್ದೇನೆ.. ಹಾಳೂ ಜಗತ್ತು ಅದು. ತಪ್ಪಿಲ್ಲದಿದ್ದರೂ ನನ್ನ ಹೆಸರನ್ನು ಕೆಡಿಸಿತು. ನೀನು ನನ್ನ ಪಾಲಿಗೆ ಆಪದ್ಭಾಂಧವ.. ನಿನ್ನನ್ನು ನಾನು ಹೇಗೆ ಮರೆಯಲಿ' ಎಂದು ಹೇಳಿದ ಸಿಂಧು ದಿಗಂತನ ಕೈ ಹಿಡಿದು ಹಿತವಾಗಿ ಒಂದು ಮುತ್ತು ಕೊಟ್ಟಳು. ದಿಗಂತ ಚಡಪಡಿಸಿದ.
           `ನನ್ನಲ್ಲೂ ಆ ಆಲೋಚನೆಯಿದೆ. ನಮಗೆ ಈ ಸಿನಿಮಾ ಜಗತ್ತು, ಅದರ ರಂಗು, ನಾಟಕೀಯತೆ, ಯಾರನ್ನೋ ಓಲೈಸುವುದು, ಬಣ್ಣ ಕಳಚಿದ ಮೇಲೆ ಕಾಡುವ ಏಕಾಂಗಿತನ, ಸದಾ ಕಾಡುವ ಭಯ.. ಥತ್.. ಯಾರಿಗೆ ಬೇಕಪ್ಪಾ ಈ ಬದುಕು ಎನ್ನಿಸುತ್ತಿದೆ. ನಿಜ.. ನೀನು ನನ್ನನ್ನು ಧಿಕ್ಕರಿಸಿದ್ದೆಯಲ್ಲ. ಆಗಲೇ ನಾನು ನಿನ್ನ ಕನಸಿನ ಸಿನಿಮಾ ಜಗತ್ತಿನಲ್ಲಿಯೇ ನಾನೂ ಸಾಧನೆ ಮಾಡಬೇಕು ಎಂದುಕೊಂಡೆ. ಸಾಧನೆಯನ್ನೂ ಮಾಡಿದೆ. ಆದರೆ ಸಾಧನೆ ಮಾಡಿದ ಮೇಲೆ ಏನೂ ಇಲ್ಲ ಅನ್ನಿಸ್ತಾ ಇದೆ. ಏಕಾಂಗಿತನ, ಅದೇನೋ ಖೀನ್ನತೆ ನನ್ನನ್ನು ಆವರಿಸುತ್ತಿದೆ. ಹಿಂದಿನ ಟ್ರೆಕ್ಕಿಂಗುಗಳು, ಕಾಡಿನಲ್ಲಿ ಓಡಾಟ.. ಈ ಸಂದರ್ಭಗಳಲ್ಲಿ ಇದ್ದ ಕ್ರಿಯಾಶೀಲತೆಯೆಲ್ಲ ಈಗ ಸತ್ತುಹೋಯಿತೇನೋ ಅನ್ನಿಸುತ್ತಿದೆ. ಅದಕ್ಕೇ ನಾನು ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಇಲ್ಲೇ ಜಲಪಾತದ ಅಂಚಿನಲ್ಲೇ ಒಬ್ಬರು ಜಮೀನು ಕೊಡುತ್ತಿದ್ದಾರೆ. ಜಮೀನನ್ನು ಕೊಂಡು ಕೃಷಿಕನಾಗೋಣ ಅಂತ ನಾನು ಆಲೋಚನೆ ಮಾಡಿದ್ದೀನಿ.. ಏನಂತೀಯಾ..?'
            `ಖಂಡಿತ ಒಳ್ಳೆಯ ಆಲೋಚನೆ ನಿನ್ನದು. ನಾನೂ ಈ ನಿಟ್ಟಿನಲ್ಲಿ ಚಿಂತಿಸಿದ್ದೆ ನೋಡು.. ವೆಚ್ಚಕ್ಕೆ ಹೊನ್ನಿರಲು.. ಆಹಾ.. ಬೆಚ್ಚನೆ ಮನೆಯಿರಲು.. ಯಾಕೋ ಕಾಲೇಜು ದಿನಗಳಲ್ಲಿ ಓದಿದ್ದ ಕಗ್ಗ ನೆನಪಾಗುತ್ತಿದೆ ನೋಡು..' ಸಿಂಧು ಮೆಲ್ಲಗೆ ಉಸುರಿದ್ದಳು..
           `ಸಿಂಧು... ಒಂದು ಮಾತು ಕೇಳಲಾ..?'
           `ಏನು..?'
           `ಹೇಗೆ ಕೇಳಬೇಕು ಅಂತ ಗೊತ್ತಾಗುತ್ತಿಲ್ಲ...'
           `ಕೇಳು ಪರವಾಗಿಲ್ಲ... ಅಂತದ್ದೇನಪ್ಪಾ.. ನನ್ನ ಬಳಿ ಕೇಳುವಂತದ್ದು..' ಸಿಂಧು ಅಚ್ಚರಿಯಿಂದ ಕೇಳಿದ್ದಳು.
           `ನಮ್ಮನ್ನು ಹತ್ತಿರಕ್ಕೆ ತಂದಿದ್ದು ಈ ಟ್ರೆಕ್ಕಿಂಗು. ನಮ್ಮ ಬದುಕನ್ನು ಬದಲಾಯಿಸಿದ್ದೂ ಇದೆ. ತಿರುವು ನೀಡಿದ್ದೂ ಇದೆ. ಇದೇ ಟ್ರೆಕ್ಕಿಂಗು ಮತ್ಯಾಕೆ ನಮ್ಮ ಬದುಕಲ್ಲಿ ಇನ್ನೊಂದು ತಿರುವು ನೀಡಬಾರದು..?'
            `ಅಂದರೆ...'
            `ನೀನು ನನ್ನನ್ನೇನೋ ಧಿಕ್ಕರಿಸಿದೆ ನಿಜ. ಆದರೆ ನಿನ್ನೆಡೆಗಿನ ನನ್ನ ಭಾವನೆ ಎಂದಿಗೂ ಬದಲಾಗೋದಿಲ್ಲ. ಖಂಡಿತ ನನ್ನ ಮನಸ್ಸಿನಲ್ಲಿ ನಿನಗೊಂದು ಸ್ಥಾನವಿದೆ. ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ಬದುಕು ನಿನಗಾಗಿ ಎಂದುಕೊಂಡಿದ್ದೇನೆ. ಆ ದಿನ ನಿನ್ನೆಡೆಗೆ ನನ್ನಲ್ಲಿ ಎಷ್ಟು ಪ್ರೀತಿಯಿತ್ತೋ.. ಈಗಲೂ ಅಷ್ಟೇ ಪ್ರೀತಿಯಿದೆ. ದುಪ್ಪಟ್ಟು ಹೆಚ್ಚಾಗಿದ್ದರೂ ಇರಬಹುದು. ಮತ್ತೊಮ್ಮೆ ಕೇಳುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಪ್ರೀತಿಸುತ್ತಿದ್ದೇನೆ. ಪ್ರೀತಿಸುತ್ತಲೇ ಇರುತ್ತೇನೆ.. ನೀನೂ ನನ್ನನ್ನು...'
              `........'
              `ಬದುಕಿನಲ್ಲಿ ಒಟ್ಟಾಗಿ ಬಾಳೋಣ.. ಸಿನೆಮಾ ಲೋಕವನ್ನು ಬಿಟ್ಟು ಕೃಷಿಕರಾಗಿದ್ದುಬಿಡೋಣ. ಏನಂತೀಯಾ..?' ದಿಗಂತ ಕೇಳಿದ್ದ..
              `ಒಂದು ಮಾತು ಹೇಳಲೇ ದಿಗಿ.. ನೀನು ಆಗ ನನ್ನ ಬಳಿ ಪ್ರೇಮ ನಿವೇದನೆ ಮಾಡಿದೆ. ನಾನೇನೋ ಧಿಕ್ಕರಿಸಿದೆ. ಆಗ ನನ್ನ ಮನಸ್ಸಿನಲ್ಲಿ ಮಹತ್ವಾಕಾಂಕ್ಷೆ ಎನ್ನುವುದು ಕುಣಿದಾಡುತ್ತಿತ್ತು. ಸಿನಿಮಾ ಜಗತ್ತಿನ ರಂಗು ನನ್ನನ್ನು ಕಾಡುತ್ತಲೇ ಇತ್ತು. ನಿನ್ನೆಡೆಗೆ ಆಗ ಪ್ರೀತಿ ಇದ್ದರೂ ಕೂಡ ಸಿನಿಮಾ ರಂಗಿನ ಎದುರು ಅದು ಚಿಲ್ಲರೆಯಂತಾಗಿತ್ತು. ಆದರೆ ನಾನು ನಿನ್ನನ್ನು ಧಿಕ್ಕರಿಸಿದಾಗಲೂ ನೀನು ನನ್ನ ಬೆನ್ನಿಗೆ ನಿಂತೆಯಲ್ಲ.. ಈ ಸಂದರ್ಭದಲ್ಲಿ ನಾನು ನಿನ್ನ ಪ್ರೇಮವನ್ನು ಒಪ್ಪಿಕೊಂಡರೆ ಅದು ನನ್ನ ಸ್ವಾರ್ಥ ಅನ್ನಿಸುವುದಿಲ್ಲವಾ? ಯಾಕೋ ಬಹಳ ಚಿಕ್ಕವನಾಗಿಬಿಟ್ಟೆ ದಿಗಿ.. ಆದರೂ ಹೇಳುತ್ತೇನೆ.. ನಿನ್ನ ಸಾಂಗತ್ಯ, ಒಡನಾಟ ನನ್ನ ಬದುಕಿನಲ್ಲಿ ಮಧುರವಾದುದು. ಅದನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ.. ಜಗತ್ತು ಏನೇ ಹೇಳಲಿ... ಆಗ ಮಾಡಿದ ತಪ್ಪನ್ನ ಮತ್ತೆ ಮಾಡುವುದಿಲ್ಲ ದಿಗಿ..  ಬಾ ಹೊಸ ಬದುಕು ಬಾಳೋಣ.. ತೋಟಗಳಲ್ಲಿ... ಗದ್ದೆಗಳಲ್ಲಿ.. ಮುಖದ ಮೇಲೆ ಚಿತ್ರರಂಗದ ಬಣ್ಣ ಸಾಕು.. ಗದ್ದೆಯಲ್ಲಿನ ಅರಲು.. ಮಣ್ಣಿನ ವಾಸನೆ ಮತ್ತೆ ಮತ್ತೆ ಬೇಕು ಅನ್ನಿಸುತ್ತಿದೆ... ನಿನ್ನ ಪ್ರೀತಿ ಕೂಡ.. ..ನಿನ್ನ ಪ್ರೀತಿಗೆ ನನ್ನ ಸಮ್ಮತಿ ಇದೆ...  ಹುಂ....' ಎಂದು ಸಿಂಧು ಹೇಳಿದ ತಕ್ಷಣ ದಿಗಂತ ಆಕೆಯನ್ನು ಬಾಚಿ ತಬ್ಬಿಕೊಂಡಿದ್ದ. ಕಣ್ಣಿನಿಂದ ಆನಂದದ ಭಾಷ್ಪ ಭುವಿಗಿಳಿಯುತ್ತಿತ್ತು. ಉಂಚಳ್ಳಿಯ ಜಲಧಾರೆ ಸಾಕ್ಷಿಯಾಗಿ ನಿಂತಿತ್ತು.

**
(ಮುಗಿಯಿತು)

Monday, June 16, 2014

ಪ್ಯಾರಾ ಮಂಜಿಲ್-1 (ಕಥೆ)

              ಬಿಸಿನೆಸ್ ಹಾಗೂ ಮನೆ ಎರಡೂ ಉಪಯೋಗಕ್ಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರಶಾಂತ ಅಶ್ವಿನಿ ಸರ್ಕಲ್ಲಿನ ಆ ಹಳೆಯ ಮನೆಯನ್ನು ಹುಡುಕಿದ್ದ. ಅದೃಷ್ಟಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಕ್ಕಿತ್ತು. ನಗರದ ನಡುಮಧ್ಯದಲ್ಲಿ ಸಾವಿರ ರು. ಚಿಲ್ಲರೆಗೆ ಆ ಮನೆ ಸಿಕ್ಕಿದ್ದು ಅದೃಷ್ಟವಲ್ಲದೇ ಮತ್ತೇನಿಲ್ಲ ಎಂದುಕೊಂಡು ತನ್ನ ಉದ್ಯಮದ ಸರಂಜಾಮುಗಳನ್ನು ಆ ಮನೆಯತ್ತ ಸಾಗಿಸಿದ್ದ. ಮನೆಯ ಮುಂಭಾಗದಲ್ಲಿ ಆಫೀಸು, ಹಿಂಭಾಗ ಹಾಗೂ ಮೇಲ್ಮಹಡಿಯಲ್ಲಿ ಉಳಿದುಕೊಳ್ಳುವ ಕೋಣೆಯನ್ನಾಗಿ ಪರಿವರ್ತನೆ ಮಾಡಿದ್ದ.
              ಅದು ನನ್ನ ಕಾಲೇಜು ದಿನಗಳಾದ್ದರಿಂದ, ಮನೆಯಿಂದ ಕಾಲೇಜಿಗೆ ಬಹುದೂರವಾದ ಕಾರಣ ಪ್ರಶಾಂತ ತನ್ನ ಆ ಮನೆಯಲ್ಲಿ ಉಳಿದುಕೊಂಡು ಹೋಗು ಎಂದೂ ಹೇಳಿದ್ದ. ನನಗೂ ಅದೇ ಬೇಕಿತ್ತಾದ್ದರಿಂದ ಅಲ್ಲಿಂದ ಕಾಲೇಜಿಗೆ ಹೋಗಲು ನಿರ್ಧರಿಸಿದ್ದೆ.
              ಹಳೆಯ ಮನೆ. ಆರು ಅಡಿ ದಪ್ಪದ ಮಣ್ಣುಗೋಡೆಗಳು. ಉದ್ದನೆಯ ಮನೆಗೆ ಆರು ರೂಮುಗಳಿದ್ದವು. ಪ್ರಾರಂಭದ ದಿನಗಳಲ್ಲಿ ಈ ಮನೆಯಲ್ಲಿ ನಾನು, ಪ್ರಶಾಂತ ಹಾಗೂ ರಾಘವ ಉಳಿದುಕೊಂಡಿದ್ದೆವು. ಮೊದಲ ದಿನ ರಾಘವ ಈ ಮನೆಯನ್ನು ನೋಡಿದವನೇ `ಈ ಮನೆ ಒಂಥರಾ ವಿಚಿತ್ರವಾಗಿದೆ.. ಏನೋ ಅವ್ಯಕ್ತ ಭಯ ಕಾಡ್ತದಲ್ಲ ಮಾರಾಯಾ..' ಎಂದಿದ್ದ. ಅಷ್ಟೇ ಅಲ್ಲದೇ ಈ ಮನೆಯಲ್ಲೊಂದು ಕೋಣೆಯಿತ್ತು. ಕತ್ತಲೆಯ ಕರಿಗೂಡಿನಂತಿದ್ದ ಈ ಕೋಣೆಯನ್ನು ನೋಡಿದ ರಾಘವ ಅದಕ್ಕೆ `ನಾಗವಲ್ಲಿ ಕೋಣೆ' ಎಂದು ಹೆಸರಿಟ್ಟಿದ್ದ. ರಾಘವನಿಗೆ ಅದ್ಯಾಕೆ ಹಾಗೆ ಅನ್ನಿಸಿತೋ ಏನೋ. ನಾಗವಲ್ಲಿ ಯಾವ ಕಾರಣಕ್ಕೆ ನೆನಪಾದಳೋ. ಕತ್ತಲೆಯ ಕೂಪದಂತಿದ್ದ ಆ ರೂಮಿನಲ್ಲಿ ನಾವ್ಯಾರೂ ಉಳಿದಕೊಳ್ಳಲು ಯತ್ನಿಸಲಿಲ್ಲ. ಬದಲಾಗಿ ನಾವೆಲ್ಲ ಮಹಡಿಯಲ್ಲಿ ಠಿಕಾಣಿ ಹೂಡಿದೆವು.
              `ವಿಚಿತ್ರ ಕನಸು ಮಾರಾಯಾ.. ಯಾಕೋ ಸರಿಯಾಗಿ ನಿದ್ದೆಯೇ ಬರೋದಿಲ್ಲ.. ಸ್ವಪ್ನದಲ್ಲಿ ಏನೇನೋ ವಿಚಿತ್ರ ಘಟನೆಗಳು ಜರುಗುತ್ತವೆ..' ಎಂದು ಪ್ರಶಾಂತ ಒಮ್ಮೆ ಅಂದಾಗ ಮೊದಲ ಬಾರಿಗೆ ನನಗೆ ಈ ಮನೆ ಯಾಕೋ ನಾವು ಅಂದುಕೊಂಡಂತಿಲ್ಲ. ಏನೋ ಬೇರೆ ರೀತಿಯದ್ದಾಗಿದೆ ಅನ್ನಿಸಿತು.
               ಸುಮ್ಮನೆ ಸ್ವಪ್ನ ಬೀಳುತ್ತದೆ ಎನ್ನುವ ಕಾರಣಕ್ಕೆ ಮನೆ ಸರಿಯಿಲ್ಲ.. ಹಾಗೆ ಹೀಗೆ ಎನ್ನಲು ನನಗೆ ಸಾಧ್ಯವಾಗಲಿಲ್ಲ. ಎಲ್ಲ ಕಡೆಯೂ ಸ್ವಪ್ನ ಬೀಳುತ್ತದೆ. ಇಲ್ಲಿಯೂ ಬೀಳುತ್ತದೆ. ಅದರಲ್ಲೇನು ವಿಶೇಷ ಎಂದುಕೊಂಡಿದ್ದೆ. ಹೀಗಿದ್ದಾಗ ಗೆಳೆಯ ನಾಗರಾಜ ನಮ್ಮ ಒಡನಾಡಿಯಾಗಿ ಈ ರೂಮಿನಲ್ಲಿ ಉಳಿಯಲು ಬಂದಿದ್ದ. ಮತ್ತು ಅದೇ ದಿನಗಳಲ್ಲಿ ರಾಘವ ಬೇರೆಯ ರೂಮಿಗೆ ತೆರಳಿದ್ದ. ನಿಜಕ್ಕೂ ವಿಚಿತ್ರ ಮನೋಭಾವದವನು ನಾಗರಾಜ. ಮಧ್ಯರಾತ್ರಿಯ ಸ್ವಪ್ನಗಳಿಗೆ ಗೌರವ ಕೊಡುತ್ತಾನಾದರೂ ಶುದ್ಧ ಬೋಗಸ್ ಎನ್ನುವ ಮನಸ್ಥಿತಿಯವನು. ಮಧ್ಯರಾತ್ರಿಯಲ್ಲೆದ್ದು ಬರವಣಿಗೆಯಲ್ಲಿ ತೊಡಗಿಕೊಳ್ಳುವ ನಾಗರಾಜ ಅಪರಾತ್ರಿಯಲ್ಲಿ ಓಡಾಡುವ ದೆವ್ವಗಳಿಗೂ ತಲೆಬೇನೆಯಾಗುವಂತವನು. ಅಂತಹ ನಾಗರಾಜನಿಗೂ ಈ ಮನೆಯಲ್ಲಿ ಸ್ವಪ್ನದ ಅನುಭವಾಗತೊಡಗಿ, ಅದನ್ನು ಎಲ್ಲರ ಬಳಿಯೂ ಹೇಳಿಕೊಂಡಾಗ ನಾನು ಈ ಮನೆಯ ಬಗ್ಗೆ ಗಂಭೀರ ಆಲೋಚನೆಗೆ ತೊಡಗಿದೆ.
               ಅದೊಂದು ದಿನ ಪ್ರಶಾಂತ, ನಾಗರಾಜ ಈ ಇಬ್ಬರೂ ರಾತ್ರಿ ಮನೆಯಲ್ಲಿ ಉಳಿಯಲಿಲ್ಲ. ನಾನೊಬ್ಬನೇ ಇದ್ದೆ. ರಾತ್ರಿ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ದೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಾಯಿತು. ದೊಡ್ಡ ಸದ್ದು. ಮನೆಯ ಹಿಂದೆ ಯಾರೋ ಒಬ್ಬರು ಇನ್ನೊಬ್ಬರಿಗೆ ಬಡಿಯುತ್ತಿದ್ದಾರೆ. ಹೊಡೆಸಿಕೊಳ್ಳುತ್ತಿದ್ದ ವ್ಯಕ್ತಿ ಜೋರಾಗಿ ಕೂಗುತ್ತಿದ್ದಾನೆ. ನಾನು ಮೊದಲಿಗೆ ಬೆಚ್ಚಿದೆ. ಆದರೆ ಸ್ವಲ್ಪ ಹೊತ್ತಿನ ನಂತರ ಭಯವನ್ನು ಬಿಟ್ಟು ಶಬ್ದ ಬಂದ ಕಡೆಗೆ ಆಲಿಸತೊಡಗಿದೆ. ಗಮನವಿಟ್ಟು ಹೇಳಿದಾಗ ಹೊಡೆಯುತ್ತಿದ್ದ ಶಬ್ದ ಅಸ್ಪಷ್ಟವಾಗಿತ್ತಾದರೂ ಅಳುವ ಶಬ್ದ ಜೋರಾಗಿ ಕೇಳುತ್ತಿತ್ತು. `ದಮ್ಮಯ್ಯ.. ನಮ್ಮನ್ನು ಬಿಟ್ಟುಬಿಡಿ... ಮಾಫ್ ಕರೋ..' ಎಂಬ ಮಾತು ಕೇಳಿಸಿತು. ಈ ಮಾತು ಕೇಳಿ ಮನಸ್ಸು ತರ್ಕಿಸಿತು. ನಮ್ಮನ್ನು ಬಿಟ್ಟುಬಿಡಿ ಎಂಬ ಶಬ್ದ ಬರುತ್ತಿದೆ ಎಂದಾದರೆ ಖಂಡಿತ ಹೊಡೆತ ತಿನ್ನುತ್ತಿರುವುದು ಒಬ್ಬರಲ್ಲ. ಒಬ್ಬರಿಗಿಂತ ಹೆಚ್ಚು. ಅಂದರೆ ಇಬ್ಬರೋ ಮೂವರೋ..
                ಇದು ಕನಸಾ..? ನನಸಾ.. ಎನ್ನುವ ಗೊಂದಲ. ನನ್ನ ಕೈಯನ್ನು ಚಿವುಟಿಕೊಂಡು ನೋಡಿದೆ. ಮತ್ತೆ ಮತ್ತೆ ಆ ಧ್ವನಿಗಳು ಕೇಳಿಸಿದವು. ಧ್ವನಿ ಕೇಳಿಸಿದ ಕಾರಣಕ್ಕೆ ಅದರ ಮೂಲವನ್ನು ಹುಡುಕಿ, ತಮ್ಮನ್ನು ಬಿಟ್ಟುಬಿಡಿ ಎಂದು ಅರಚುತ್ತಿರುವವರ ಸಹಾಯಕ್ಕೆ ಹೋಗಲು ನನಗೆ ಧೈರ್ಯ ಸಾಕಾಗಲಿಲ್ಲ. ಈ ಕುರಿತು ಮರುದಿನ ವಿಚಾರಿಸಿದರಾಯಿತು. ಆದರೆ ಈಗ ಏನೇನು ನಡೆಯುತ್ತದೆ ನೋಡೋಣ ಎಂದು ಹಾಗೆಯೇ ಉಳಿದಿದ್ದೆ. ಮತ್ತೆ ಮತ್ತೆ ಆಲಿಸುತ್ತಿದ್ದಾಗ ಇಬ್ಬರು ಅರಚುತ್ತಿರುವ ಧ್ವನಿ ಕೇಳಿಸಿತು. ಒಂದು ಗಂಡಸಿನ ಧ್ವನಿ. ಇನ್ನೊಂದು ಹೆಂಗಸಿನದು. ಆದರೆ ಅವರಿಬ್ಬರಲ್ಲಿ ಗಂಡಸಿನ ಧ್ವನಿ ಅಚ್ಚಕನ್ನಡದಲ್ಲಿದ್ದರೆ ಹೆಂಗಸಿನ ಧ್ವನಿ ಮಾತ್ರ ಬೇರೆ ತರವಾಗಿ ಕೇಳಿಸಿತು. ಹಿಂದಿ ಮಿಶ್ರಿತ ಧ್ವನಿಯಂತೆ ಅನ್ನಿಸಿತು. ನನಗೆ ಭಯದ ಬದಲು ಕುತೂಹಲವಾಗತೊಡಗಿತು. ಆ ದಿನ ಅದೇ ಕುತೂಹಲದಲ್ಲಿ ರಾತ್ರಿಯಿಡಿ ನಿದ್ದೆ ಹತ್ತಲಿಲ್ಲ. ಮರುದಿನ ಬೆಳಗಿನ ವೇಳೆಗೆ ಜಾಗರಣೆಯ ಪರಿಣಾಮ ಕಣ್ಣು ಕೆಂಪಡರಿತ್ತು.
              ಬೆಳಗಾಗೆದ್ದವನೇ ರಾತ್ರಿ ಕಂಡ ಹಾಗೂ ಕೇಳಿದ ಸಂಗತಿಯ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು. ಮನೆಯ ಆಸುಪಾಸಿನಲ್ಲಿ ಏನಾದರೂ ಆಗಿದೆಯಾ ನೋಡಬೇಕು ಎಂದು ಹೊರಟೆ. ನಾವು ಉಳಿದಕೊಂಡಿದ್ದ ಆ ಮನೆಯಲ್ಲಿ ರಾತ್ರಿ ಅನುಭವಕ್ಕೆ ಬರುವ ವಿಚಿತ್ರ ಘಟನೆಯ ಬಗ್ಗೆ ಅಕ್ಕಪಕ್ಕದವರಲ್ಲಿ ಕೇಳಿದೆ. ಆದರೆ ಅವರು ಏನೊಂದನ್ನೂ ಬಾಯಿ ಬಿಡಲಿಲ್ಲ. ನನಗೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿತು. ರಾತ್ರಿ ಮನೆಯ ಹಿಂದುಗಡೆಯಿಂದ ಶಬ್ದ ಬಂದಿತ್ತು. ಮನೆಯ ಹಿಂದೆ ಇರುವ ಇನ್ನೊಂದು ಮನೆಯಲ್ಲಿ ಹೋಗಿ ಈ ಕುರಿತು ಕೇಳಿದೆ. ಅದಕ್ಕೆ ಉತ್ತರ ನೀಡಿದ ಅವರು ತಮ್ಮ ಮನೆಯಲ್ಲಿ ಏನೂ ನಡೆದಿಲ್ಲ. ಬಹುಶಃ ನಿಮ್ಮ ಮನೆಯಲ್ಲೇ ಏನೋ ನಡೆದಿರಬೇಕು ನೋಡಿ. ನಾವೆಲ್ಲ ಚನ್ನಾಗಿಯೇ ಇದ್ದೇವೆ ಎಂದು ಮನೆಯೊಳಗೆಲ್ಲ ಕರೆದೊಯ್ದು ತೋರಿಸಿದರು. ಖಂಡಿತವಾಗಿಯೂ ಅವರ ಮನೆಯಲ್ಲಿ ಏನೂ ಆಗಿರಲಿಲ್ಲ. ವಾಪಾಸಾದೆ.
**
            ಮನೆ ದಿನದಿಂದ ದಿನಕ್ಕೆ ನಿಗೂಢವಾಗತೊಡಗಿತು. ವಿಚಿತ್ರ ಅನುಭವಗಳು. ಹೇಳಿಕೊಳ್ಳಲು ಅಸಾಧ್ಯವಾದದು ಎಂಬಂತೆ ಜರುಗತೊಡಗಿತು. ಮನೆಯ ಬಗ್ಗೆ ಮಾಹಿತಿ ಕಲೆ ಹಾಕೋಣ ಎಂದುಕೊಂಡರೆ ಮನೆಯ ಕುರಿತು ಯಾರೂ ಮಾಹಿತಿ ನೀಡಲಿಲ್ಲ. ನಮ್ಮೂರ ಬಳಿಯಲ್ಲಿಯೇ ಒಬ್ಬರು ಹಿರಿಯರು ಮಾತಿಗೆ ಸಿಕ್ಕಿದ್ದರು. ಅವರ ಬಳಿ ಹೀಗೇ ಮಾತನಾಡುತ್ತಿದ್ದಾಗ ನಾನು ಮನೆಯ ವಿಷಯವನ್ನು ಹೇಳಿದೆ. ತಕ್ಷಣವೇ ಈ ಮನೆಯ ಬಗ್ಗೆ ಮಾಹಿತಿ ನೀಡಬಹುದಾದ ವ್ಯಕ್ತಿಯೊಬ್ಬರ ಬಗ್ಗೆ ನನಗೆ ಹೇಳಿದರು. ಹಿರಿಯರು ಹೇಳಿದ ವ್ಯಕ್ತಿ ಯಾರಿರಬಹುದು ಎಂದುಕೊಂಡರೆ ಮನೆಯ ಮಾಲೀಕರು ಎಂದು ತಿಳಿದುಬಂದಿತು. ನಾನು ಸೀದಾ ಅವರನ್ನು ಹುಡುಕಿ ಹೊರಟೆ.
            ಅಬ್ದುಲ್ ಸಲೀಂ. ಮನೆಯ ಯಜಮಾನರು. ನಗರದ ಅದ್ಯಾವುದೋ ಮೂಲೆಯಲ್ಲಿ ಅವರ ಮನೆಯಿತ್ತು. ಸುತ್ತಿ ಬಳಸಿ ಹುಡುಕಿದ ನಂತರ ಅವರ ಮನೆ ಸಿಕ್ಕಿತು. ನಾನು ಅವರ ಬಳಿ ಅದೂ ಇದೂ ಮಾತನಾಡಿ ನಂತರ ನಿಧಾನವಾಗಿ ಮನೆಯ ವಿಷಯದ ಬಗ್ಗೆ ತಿಳಿಸಿದೆ. ರಾತ್ರಿ ನನಗಾಗುತ್ತಿದ್ದ ವಿಚಿತ್ರ ಅನುಭವದ ಬಗ್ಗೆ ಹೇಳಿದೆ. ಅಬ್ದುಲ್ ಸಲೀಂ ಏನನ್ನೂ ಹೇಳಲಿಲ್ಲ. `ಮಾಲೂಮ್ ನಹಿ..' ಎಂದು ನನ್ನನ್ನು ಸಾಗ ಹಾಕಲು ಪ್ರಯತ್ನಿಸಿದರು. ನಾನು ಪಟ್ಟು ಬಿಡಲು ಸಿದ್ಧನಿರಲಿಲ್ಲ. ಮತ್ತೆ ಮತ್ತೆ ಕೇಳಿದೆ. ಪದೇ ಪದೆ ಕಾಡಿದೆ. ಕೊನೆಗೊಮ್ಮೆ ನನ್ನ ಹಪಹಪಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ `ಮನೆಯ ಒಡೆಯ ನಾನು. ಆದರೆ ನನಗೆ ಮನೆಯ ಹಿನ್ನೆಲೆಯ ಬಗ್ಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದರೆ ಮನೆಯಲ್ಲಿ ಇಂತಹ ವಿಚಿತ್ರಗಳು ಜರುಗುತ್ತವೆ ಎನ್ನುವುದು ನನಗೆ ಗೊತ್ತಿತ್ತು. ಈ ಹಿಂದೆ ಮನೆಯ ಬಾಡಿಗೆಗಿದ್ದ ಹಲವರು ಹೇಳಿದ್ದರು. ಒಂದಿಬ್ಬರು ಇದರಿಂದ ಹೆದರಿ ಆಸ್ಪತ್ರೆಯನ್ನೂ ಸೇರಿದ್ದರು.  ಆದರೆ ಮನೆಯ ಕುರಿತು ಪಟ್ಟಾಗಿ ಕೇಳಲು ಬಂದಿದ್ದು ನೀವು ಮಾತ್ರ..' ಎಂದರು. ನಾನು ಹೂಂ ಅಂದೆ.
            `ಈ ಮನೆಯ ಕುರಿತು ನನಗೆ ಮಾಹಿತಿ ಕಡಿಮೆ. ನನ್ನ ಹಿರಿಯರಿಂದ ಈ ಮನೆ ನನಗೆ ಬಂದಿದೆ. ಬಾಡಿಗೆ ಕೊಡುತ್ತಿದ್ದೇನಷ್ಟೆ. ನಮ್ಮ ಮನೆಯಲ್ಲಿ ಒಬ್ಬರು ಹಿರಿಯ ಮಹಿಳೆಯಿದ್ದಾರೆ. ಫಾತಿಮಾ ಜಿ ಅಂತ. ಹತ್ತಿರ ಹತ್ತಿರ ನೂರು ವರ್ಷ ವಯಸ್ಸಾಗಿದೆ. ಅವರು ನಿಮಗೆ ಖಂಡಿತ ಮಾಹಿತಿ ನೀಡಬಲ್ಲರು.. ' ಎಂದು ತಿಳಿಸಿದ ಅಬ್ದುಲ್  ಫಾತಿಮಾ ಅವರಿದ್ದ ಜಾಗಕ್ಕೆ ನನ್ನನ್ನು ಕರೆದೊಯ್ದರು. ಮತ್ತೆ ಯಥಾಪ್ರಕಾರ ಗಲ್ಲಿ ಗಲ್ಲಿಗಳನ್ನು ದಾಟಿ, ಸುತ್ತಿ ಬಳಸಿ ಎಲ್ಲೋ ಒಂದು ಕಡೆ ಹಳೆಯ ಮನೆಗೆ ಕರೆದೊಯ್ದರು. ಅಲ್ಲೊಬ್ಬ ವಯಸ್ಸಾದ ಮಹಿಳೆಯ ಬಳಿಯಲ್ಲಿ ಅಬ್ದುಲ್ ಸಲೀಂ ಅವರು ಉರ್ದುವಿನಲ್ಲಿ ಮಾತನಾಡಿದರು. ಆರಂಭದಲ್ಲಿ ಆ ಮಹಿಳೆ ಒಪ್ಪಿದಂತೆ ಕಾಣಲಿಲ್ಲ. ಅಬ್ದುಲ್ ಅವರು ಏನೋ ವಾದ ಮಾಡಿದಂತೆ ಕಾಣಿಸಿತ್ತು. ನನಗೆ ಅರ್ಥವಾಗಲಿಲ್ಲ. ಸರಿ ಸುಮಾರು ಹೊತ್ತಿನ ನಂತರ ಫಾತಿಮಾ ನನ್ನ ಬಳಿ ಮಾತಿಗೆ ನಿಂತರು.
             ಫಾತಿಮಾ ಅವರಿಗೆ ಖಂಡಿತವಾಗಿಯೂ ನೂರು ವರ್ಷಗಳಾಗಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಎಂದೋ ಹುಟ್ಟಿದ್ದರಿರಬೇಕು. ನಾನು ಉಭಯ ಕುಶಲೋಪರಿಗೆಂಬಂತೆ ಅವರ ವಯಸ್ಸನ್ನು ಕೇಳಿದೆ. ನೂರು ಆಗಿರಬಹುದು ಎಂದರು. ಅವರಿಗೂ ಸರಿಯಾಗಿ ನೆನಪಿರಲಿಲ್ಲ. ಅವರು ಮಾತನಾಡುತ್ತಿದ್ದ ಭಾಷೆಯೂ ಸ್ಪಷ್ಟವಾಗಿರಲಿಲ್ಲ. ಹಲ್ಲಿಲ್ಲದ ಬಾಯಿಯಲ್ಲಿ ಉರ್ದು, ಅರ್ಯಾಬಿಕ್ ಮಿಶ್ರಿತ ಕನ್ನಡದಲ್ಲಿ ಅವರು ಮಾತನಾಡುತ್ತಿದ್ದರೆ ನಾನು ಅವನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೆ. ಅವರು ಮಾತನಾಡಿದ್ದು ಹೀಗೆಯೇ ಇರಬೇಕು ಎನ್ನುವ ಊಹೆಯನ್ನೂ ಮಾಡಿಕೊಳ್ಳುತ್ತಿದ್ದೆ. ಹಾಗೇ ಸುಮ್ಮನೆ ಮಾತನಾಡಿದ ನಂತರ ನಾನು ಅಸಲಿ ವಿಷಯಕ್ಕೆ ಬಂದೆ.  ಅಬ್ದುಲ್ ಸಲೀಂ ಅವರಂತೆ ಆರಂಭದಲ್ಲಿ ಫಾತಿಮಾ ಅವರೂ ಕೂಡ ನನ್ನ ಕೋರಿಕೆಗೆ ಮಣಿಯಲಿಲ್ಲ. ನಾನು ಮನೆಯ ವಿಷಯವಾಗಿ ಕೇಳುತ್ತಲೇ ಇದ್ದೆ. ಅವರು ಮಾಹಿತಿಯನ್ನು ಬಿಟ್ಟುಕೊಡುತ್ತಲೇ ಇರಲಿಲ್ಲ. ಕೊನೆಗೆ ಅಬ್ದುಲ್ ಸಲೀಂ ಅವರ ಬಳಿ ಮಾಡಿದಂತೆ ಹರಪೆ ಬಿದ್ದೆ. ಕೊನೆಗೊಮ್ಮೆ ಅವರೂ ಕೂಡ ಮನೆಯ ಕುರಿತು ಹೇಳಲು ಒಪ್ಪಿಕೊಂಡರು. ಫಾತಿಮಜ್ಜಿ ಮನೆಯ ಕುರಿತು ವಿಸ್ತಾರವಾಗಿ ಹೇಳುತ್ತ ಸಾಗಿದಂತೆಲ್ಲ ನನ್ನ ಕಿವಿ ನೆಟ್ಟಗಾಯಿತು. ಮೈಮೇಲಿನ ಕೂದಲುಗಳೂ ನೇರವಾಗಿ ನಿಂತಿದ್ದವು. ತಲೆಯೆಲ್ಲ ಬಿಸಿಯಾದಂತೆ ಅನ್ನಿಸತೊಡಗಿತ್ತು. ಏನೋ ಕಳವಳ, ಯಾತನೆ, ತಳಮಳ. ಹೇಳಿಕೊಳ್ಳಲು ಅಸಾಧ್ಯ ಎನ್ನುವಂತಾಗಿದ್ದವು. ನಾನು ಉಳಿದುಕೊಂಡಿದ್ದ ಬಾಡಿಗೆ ಮನೆಯೊಳಗಣ ಇನ್ನೊಂದು ಬಾಗಿಲಿನ ಅನಾವರಣವಾಗುತ್ತಿದೆಯೇನೋ ಅನ್ನಿಸತೊಡಗಿತ್ತು.

***
(ಮುಂದುವರಿಯುತ್ತದೆ..)

ನಾವು ಹವ್ಯಕರು

(ಹವ್ಯಕರ ಜೀವನಾಧಾರ ಅಡಿಕೆ)
ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು. ಮನಸು ತೇರು ||

ಸಾಗರ, ಸಿರಸಿ ನೂರಾರ್ ಸೀಮೆ
ಉ.ಕ, ದ.ಕ ನಾನಾ ಜಮೆ
ಭಾಷೆ ಬೇರೆ, ವೇಷ ಬೇರೆ
ನಾವು ಹವ್ಯಕರು ನಾವು ಹವ್ಯಕರು ||

ತೋಟದ ಜೊತೆಗೆ ಪೌರೋಹಿತ್ಗೆ
ಪೇಟೆಲಂತೂ ಸಾಪ್ಟ್ ವೇರು
ಕೈತುಂಬ ಕೆಲಸ, ಬಾಯ್ತುಂಬಾ ಮಾತು
ನಾವು ಹವ್ಯಕರು ನಾವು ಹವ್ಯಕರು ||

ಸೊಟೈಟಿ ಸಾಲ, ತಲೆಯ ಮೇಲೆ ಶೂಲ
ಬಾಯಲ್ಲಿ ಕವಳ, ರಸಗವಳ
ಮಜ್ಜಿಗೆ ತಂಬುಳಿ, ಅಪ್ಪೆಹುಳಿ ಮೆಲ್ಲುವ
ನಾವು ಹವ್ಯಕರು ನಾವು ಹವ್ಯಕರು ||

ಯಮ್ಮೇಟಿ ಗಾಡಿ, ಅಡಿಕೆ ತೋಟ
ಮಳೆಗಾಲದಲ್ಲಿ ಕೊಳೆಯ ಕಾಟ
ಮನೆ ತುಂಬ ದನಕರು ಕಾಲ್ನಡೆ
ನಾವು ಹವ್ಯಕರು ನಾವು ಹವ್ಯಕರು ||

ಹಾಳೆಟೊಪ್ಪಿ, ಕೆಂಬಣ್ಣದ ಪಂಜಿ
ಕಟ್ ಬಾಕಿ ಸಾಲಕ್ಕೆ ಬಲು ಅಂಜಿ
ವಾರಕ್ಕೊಮ್ಮೆ ಪ್ಯಾಟೆ ಪಯಣ
ನಾವು ಹವ್ಯಕರು ನಾವು ಹವ್ಯಕರು ||


ಸತ್ಕಾರದಲ್ ಊಟ, ಮದುವೆ ಮುಂಜಿ
ಸೊಸೈಟಿಗಳಂತೂ ಬಲು ಹಿಂಜಿ
ಸಾಲಿದ್ರೂ ಸೋಲಿಲ್ಲ, ಮುಖದಲ್ಲಿ ಅಳುವಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಗುಡ್ಡದ ಬುಡದಲ್ಲಿ ಮನೆ, ಎದುರಲ್ಲಿ ತೋಟ
ಎಕರೆ, ಗುಂಟೆಯ ಜಮೀನು, ಮಂಗನ ಕಾಟ
ದುಡಿದಷ್ಟೂ ಕಡಿಮೆ, ಬೆವರಿಗೆ ಬೆಲೆಯಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಮನೆಯಲ್ಲಿಲ್ಲ ಮಕ್ಕಳು, ಊರು ಖಾಲಿ ಖಾಲಿ
ಹೆಸರಿಗೆ ಸಾಪ್ಟ್ ವೇರು, ಕೆಲಸ ಖಾಲಿಪಿಲಿ
ದೊಡ್ಡೂರಲ್ಲಿದ್ರೂ ನಮ್ಮೂರ ಮರೆತಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಹವ್ಯಕರೆಂದರೆ ಸುಮ್ಮನೆ ಅಲ್ಲ
ನಾವು ಯಾರಿಗೂ ಕಮ್ಮಿಯಿಲ್ಲ
ಸೋತುಕೊಂಡಿದ್ರೂ ತೋರಿಸ್ಕಳೋದಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

***
(ಈ ಕವಿತೆಯನ್ನು ಹವ್ಯಕರ ಬಗ್ಗೆ ಸೊಖಾ ಸುಮ್ಮನೆ ಬರೆದಿದ್ದು.. ಮುಂದಿನ ದಿನಗಳಲ್ಲಿ ಈ ಕವಿತೆಯನ್ನು ಪಾರ್ಟ್ 2, ಪಾರ್ಟ್ 3 ರೂಪದಲ್ಲಿ ಹಿಗ್ಗಿಸುವ ಆಲೋಚನೆಯಿದೆ. ಅಲ್ಲೀವರೆಗೆ ಸುಧಾರಾಣಿ ಮಾಡಿಕೊಳ್ಳತಕ್ಕದ್ದು..)
(ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಜೂನ್ 16, 2014ರಂದು)

Saturday, June 14, 2014

ಸೊನ್ನೆಯ ಮೂಲಕ ಚಿತ್ರಪಾಠ

(ಜಿ.ಎಂ.ಬೊಮ್ನಳ್ಳಿ)
ಸೊನ್ನೆ ಸುತ್ತುವುದರ ಮೂಲಕ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಲು ಮುಂದಾಗಿದ್ದಾರೆ ನಾಡಿನ ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ಜಿ. ಎಂ. ಬೊಮ್ನಳ್ಳಿಯವರು.
ನಾಡಿನಾದ್ಯಂತ ತಮ್ಮ ವ್ಯಂಗ್ಯಚಿತ್ರದ ಪಂಚಿನ ಮೂಲಕ ಮನೆಮಾತಾಗಿರುವವರು ಜಿ. ಎಂ. ಬೊಮ್ನಳ್ಳಿಯವರು. ಇವರ ವ್ಯಂಗ್ಯ ಚೊತ್ರ ಪ್ರಕಟಗೊಳ್ಳದ ಪತ್ರಿಕೆಗಳೇ ಇಲ್ಲ ಎನ್ನಬಹುದು. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ವಿಶೇಷ ಸಂಚಿಕೆಗಳಲ್ಲೆಲ್ಲ ಜಿ. ಎಂ. ಬೊಮ್ನಳ್ಳಿಯವರ ವ್ಯಂಗ್ಯಚಿತ್ರ ಇರಲೇಬೇಕು. ಕನ್ನಡ ದಿನಪತ್ರಿಕೆಗಳಲ್ಲದೇ ಮರಾಠಿ, ಹಿಂದಿ, ಇಂಗ್ಲೀಷ್ ಭಾಷೆಯ ಪತ್ರಿಕೆಗಳಲ್ಲಿಯೂ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ.
ಕೃಷಿ ಹಾಗೂ ಪರಿಸರದ ಕುರಿತು ವ್ಯಂಗ್ಯ ಚಿತ್ರಗಳನ್ನು ಬಿಡಿಸುವ ನಾಡಿನ ಏಕೈಕ ವ್ಯಂಗ್ಯಚಿತ್ರ ಕಲಾವಿದ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡವರು ಜಿ. ಎಂ. ಬೊಮ್ನಳ್ಳಿಯವರು. ತಮ್ಮ ಕುಂಚದ ಪಂಚಿನ ಮೂಲಕ ರಾಜಕಾರಣಿಗಳ, ಹಾದಿ ತಪ್ಪುತ್ತಿರುವ ಸಮಾಜದ ಕಿವಿ ಹಿಂಡಿದವರು ಇವರು. ಒಮ್ಮೆ ಕುಂಚವನ್ನು ಹಿಡಿದರೆಂದರೆ ಸಾಲು ಸಾಲು ಚಿತ್ರಗಳು, ವ್ಯಂಗ್ಯ ಚಿತ್ರಗಳು ಸರಸರನೆ ರೂಪವನ್ನು ಪಡೆದುಕೊಳ್ಳುತ್ತವೆ. ಬಿಡುವಿನ ಸಮಯದಲ್ಲಿ ವಿವಿಧ ಶಾಲೆಗಳಲ್ಲಿಯೂ ಚಿತ್ರಕಲೆಯನ್ನು ಕಲಿಸುವ ಜಿ. ಎಂ. ಬೊಮ್ನಳ್ಳಿಯವರು ಇದೀಗ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಲು `ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ' ಎನ್ನುವ ವಿನೂತನ ಪುಸ್ತಕವೊಂದನ್ನು ಹೊರತರುತ್ತಿದ್ದಾರೆ.
ರಾಜ್ಯ ಸರ್ಕಾರ ಮಕ್ಕಳಲ್ಲಿನ ಸೃಜನಶೀಲತೆಯನ್ನು ಬೆಳಕಿಗೆ ತರಲು ಇನ್ನಿಲ್ಲದ ಪ್ರಯತ್ನವನ್ನು ಪಡುತ್ತಿದೆ. ಕಲಿ ನಲಿ, ನಲಿ ಕಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಮನಸ್ಸಿನೊಳಗೆ ಸುಪ್ತವಾಗಿದ್ದ ಪ್ರತಿಭೆ ಅನಾವರಣಕ್ಕೆ ವೇದಿಕೆಯನ್ನೂ ಕಲ್ಪಿಸಿದೆ. ಚಿತ್ರಕಲೆ ಮಕ್ಕಳ ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವ ಪ್ರಮುಖ ಮಾರ್ಗ. ವಿಜ್ಞಾನಗಳಂತಹ ಪ್ರಮುಖ ವಿಷಯಗಳಲ್ಲಿ ಚಿತ್ರ ಬಿಡಿಸುವುದಕ್ಕಾಗಿಯೇ ಅಂಕಗಳನ್ನು ನಿಗದಿಪಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ಜಿ. ಎಂ. ಬೊಮ್ನಳ್ಳಿಯವರು ಸೊನ್ನೆಯನ್ನು ಸುತ್ತಿ ನಂತರ ಅದರ ಮೂಲಕ ವಿವಿಧ ಚಿತ್ರಗಳನ್ನು ಬಿಡಿಸಲು ಸುಲಭವಾಗುವಂತೆ ಪುಸ್ತಕವೊಂದನ್ನು ಹೊರತರುತ್ತಿದ್ದಾರೆ.
ಸೊನ್ನೆಯ ಮೂಲಕ ಗಣಪ, ಹಕ್ಕಿ, ಚಿತ್ರ, ಪ್ರಾಣಿಗಳು, ಆನೆ, ಮನುಷ್ಯನ ಮುಖ, ಹೂವು, ಹಣ್ಣು ಹೀಗೆ ನೂರಾರು ಬಗೆಯ ಚಿತ್ರಗಳನ್ನು ರಚಿಸಲು ಸಾಧ್ಯವಿದೆ ಎಂದು ಪುಸ್ತಕದ ಮೂಲಕ ಜಿ. ಎಂ. ಬೊಮ್ನಳ್ಳಿ ತೋರಿಸಿಕೊಡಲು ಹೊರಟಿದ್ದಾರೆ. ಸೊನ್ನೆಯನ್ನು ಬಳಸಿ ನೂರೈವತ್ತಕ್ಕೂ ಹೆಚ್ಚಿನ ಬಗೆಯ ಚಿತ್ರಗಳನ್ನು ಜಿ. ಎಂ. ಬೊಮ್ನಳ್ಳಿ ಬಿಡಿಸಿ ತೋರಿಸಿದ್ದಾರೆ. ಒಂದು ಸೊನ್ನೆ ಎಷ್ಟೆಲ್ಲ ಚಿತ್ರಗಳಿಗೆ ಕಾರಣವಾಗಬಲ್ಲದು ಎನ್ನುವುದನ್ನು ಜಿ. ಎಂ. ಬೊಮ್ನಳ್ಳಿ ಪುಸ್ತಕದಲ್ಲಿ ತೋರಿಸಿದ್ದಾರೆ.
ಜಿ. ಎಂ. ಬೊಮ್ನಳ್ಳಿ ಅವರು ವೃತ್ತಿಯಿಂದ ಕೃಷಿಕರು. ವ್ಯಂಗ್ಯಚಿತ್ರ ರಚನೆ ಅವರ ಹವ್ಯಾಸ. ವ್ಯಂಗ್ಯಚಿತ್ರದ ಜೊತೆಗೆ ಇತರ ಬಗೆಯ ಚಿತ್ರಗಳನ್ನೂ ರಚಿಸುಲ್ಲಿಯೂ ಬೊಮ್ನಳ್ಳಿಯವರು ಸಿದ್ಧಹಸ್ತರು. ಕಳೆದ ಎರಡು ದಶಕಗಳಿಂದ ಇವರು ಬಿಡಿಸಿದ ಚಿತ್ರಗಳು ರಾಜ್ಯ ಹೊರರಾಜ್ಯಗಳ ಪತ್ರಿಕೆಗಳ ಪುಟಗಳನ್ನಲಂಕರಿಸಿವೆ. ಅದೆಷ್ಟೋ ಜನರು ಇವರ ವ್ಯಂಗ್ಯಚಿತ್ರಗಳನ್ನು ಮಿಸ್ ಮಾಡಿಕೊಂಡವರಿದ್ದಾರೆ. ದಿನಬೆಳಗಾದರೆ ಬೊಮ್ನಳ್ಳಿಯವರ ಕಾರ್ಟೂನುಗಳಿಗಾಗಿ ಕಾದು ಕುಳಿತವರಿದ್ದಾರೆ. ಇಂತಹ ಕಲಾವಿದರು ಇದೀಗ ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ ಪುಸ್ತಕದ ಮೂಲಕ ಮಕ್ಕಳ ಪ್ರತಿಭೆ ಬೆಳವಣಿಗೆಗೆ ಕಾರಣರಾಗುತ್ತಿದ್ದಾರೆ.
ಇವರ ಈ ಪುಸ್ತಕ ಇದೀಗ ಬಿಡುಗಡೆಯ ಹಂತದಲ್ಲಿದೆ. 50 ಪುಟಗಳ ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ ಪುಸ್ತಕಕ್ಕೆ 40 ರು. ಬೆಲೆಯಿದೆ. ಆದರೆ ಮಕ್ಕಳ ಬದುಕು ರೂಪುಗೊಳ್ಳಲು ನೆರವಾಗಲಿ ಎನ್ನುವ ದೃಷ್ಟಿಯಿಂದ ಲಾಭ-ನಷ್ಟದ ಗೋಜಿಗೆ ಹೋಗದೇ 30 ರು.ಗೆ ಕೊಡುತ್ತೇನೆ ಎಂದು ಬೊಮ್ನಳ್ಳಿಯವರು ಹೇಳುತ್ತಾರೆ. ಸೊನ್ನೆಯ ಮೂಲಕ ಚಿತ್ರವನ್ನು ಬಿಡಿಸುತ್ತ ಸಾಗಿದಂತೆ ಮಕ್ಕಳ ಅಕ್ಷರ ಸುಂದರಾವಗುತ್ತದೆ. ಜೊತೆ ಜೊತೆಯಲ್ಲಿಯೇ ಏಕಾಗ್ರತೆಯೂ ಮೂಡುತ್ತದೆ. ಚಿತ್ರಗಳಿಗೆ ಬಣ್ಣಗಳನ್ನು ತುಂಬಿದರಂತೂ ಮಕ್ಕಳ ಮನಸ್ಸಿನೊಳಗಿನ ಭಾವನೆಗಳಿ ಜೀವತಳೆದಂತಾಗುತ್ತವೆ. ಶಿಕ್ಷಣ ಇಲಾಖೆ ಇಂತಹ ಕಲಾವಿದರ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ.
ಮಕ್ಕಳ ಪ್ರತಿಭೆ ಅನಾವರಣ ಹಾಗೂ ಅವರ ಬೌದ್ಧಿಕ ಮಟ್ಟ ವಿಕಾಸವಾಗಲು ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಏನೆಲ್ಲ ಕಸರತ್ತನ್ನು ಮಾಡಿ ಹೊಸ ಹೊಸ ಶಿಕ್ಷಣ ವಿಧಾನಗಳನ್ನು ಪರಿಚಯಿಸುತ್ತಿದೆ. ಜಿ. ಎಂ. ಬೊಮ್ನಳ್ಳಿಯವರ ಈ ಪ್ರಯತ್ನ ಸರಳವೂ, ಉತ್ತಮವಾದುದೂ ಆಗಿದೆ. ಸುಲಭವಾಗಿ ಕಲಿಯಬಹುದಾದದ್ದು. ಶಿಕ್ಷಣ ಇಲಾಖೆ ಇಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಪಠ್ಯದಲ್ಲಿ ಸೇರ್ಪಡೆಗೊಳಿಸಿದರೆ ಮಕ್ಕಳ ಬದುಕಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಜಿ. ಎಂ. ಬೊಮ್ನಳ್ಳಿ ಅವರನ್ನು ಸಂಪರ್ಕಿಸಬಹುದಾದರೆ : 9480789702
**
ಸೊನ್ನೆ ಹಲವು ಸಾಧ್ಯತೆಗಳ ಪ್ರತೀಕ. ಸೊನ್ನೆಯ ಮೂಲಕ ಚಿತ್ರ ಬಿಡಿಸುವುದನ್ನು ಕಲಿಯುವುದು ಸುಲಭ. ಸೊನ್ನೆಯಿಂದ ಯಾವುದೇ ಆಕಾರವನ್ನೂ ರಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸೊನ್ನೆ ಬಿಡಿಸಿರಿ ಚಿತ್ರ ಕಲಿಯಿರಿ ಮಕ್ಕಳಿಗೆ ಬಹಳಷ್ಟು ಸಹಕಾರಿಯಾಗಲಿದೆ. ಮಕ್ಕಳ ವಿಕಾಸಕ್ಕೆ ನನ್ನದೊಂದು ಚಿಕ್ಕ ಪ್ರಯತ್ನ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿಯ ಸಹಕಾರ, ಸಹಾಯವನ್ನು ಮಾಡುತ್ತದೆ ಎನ್ನುವುದೂ ಬಹಳ ಮುಖ್ಯ.
ಜಿ. ಎಂ. ಬೊಮ್ನಳ್ಳಿ
****

(ಈ ವರದಿ ಜೂ.14ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)