Thursday, June 5, 2014

ಒಲವ ಲತೆಗೆ ನೀರನೆರೆದ... -ಭಾಗ-2

(ಬುರುಡೆ ಜಲಪಾತ)
              ನೀರು ಮಂಜಿನಂತೆ ತಣ್ಣಗೆ ಕೊರೆಯುತ್ತಿತ್ತು. ನೀರಿಗಿಳಿದವರೆಲ್ಲ ಒಮ್ಮೆ `ಆಹಾಹ...ಓಹೋಹೋ..' ಎಂದು ಕೇಕೆ ಹೊಡೆದರು. ಅರ್ಧಗಂಟೆಯ ಕಾಲ ಅಘನಾಶಿನಿಯಲ್ಲಿ ಈಜಾಡಿ ಹಿತಾನುಭವವನ್ನು ಅನುಭವಿಸಿದರು. ತಂಡದ ನಾಯಕತ್ವದ ಹೊಣೆಗಾರಿಕೆ ಹೊತ್ತುಕೊಂಡಿದ್ದ ದಿಗಂತ ಕರಾರುವಾಕ್ಕಾಗಿ ಅರ್ಧಗಂಟೆಗೆ ತಂಡವನ್ನು ನೀರಿನಿಂದ ಎಬ್ಬಿಸಿದ್ದ. ನಂತರ ಪಯಣ ಮುಂದೆ ಸಾಗಿತ್ತು. ನದಿಯ ಅಕ್ಕಪಕ್ಕದ ಸೌಂದರ್ಯದ ಖನಿಯನ್ನು ಆಸ್ವಾದಿಸುತ್ತ, ನಿಸರ್ಗ ಸೌಂದರ್ಯವನ್ನು ಮನಸ್ಸಿನಲ್ಲಿ  ಅನುಭವಿಸುತ್ತ ಚಾರಣಿಗರ ತಂಡ ಮುಂದಡಿಯಿಟ್ಟಿತು.
              ನೆಲದ ಮೇಲೆ ನಡೆಯುವುದು ಸುಲಭ. ಆದರೆ ನದಿ ದಡದ ಮೇಲೆ ಅದರಲ್ಲಿಯೂ ನದಿ ಕಣಿವೆಯಲ್ಲಿ ನಡೆಯುವುದು ಬಹಳ ಸವಾಲಿನ ಕೆಲಸ. ಮತ್ತೊಮ್ಮೆ ಚಾರಣಿಗರ ತಂಡಕ್ಕೆ ಅದು ಅನುಭವಕ್ಕೆ ಬಂದಿತು. ಉಂಚಳ್ಳಿಯಲ್ಲಿ ಜಲಪಾತವನ್ನಿಳಿಯುವ ಅಘನಾಶಿನಿಯ ಪಾತ್ರ ಘಟ್ಟದ ಕೆಳಗೆ ತೀವ್ರ ಅಗಲವಾಗುತ್ತದೆ. ಇಲ್ಲಿ ನಡೆಯುವುದು ವಿಶಿಷ್ಟವೂ, ವಿಭಿನ್ನವೂ ಆಗಿರುತ್ತದೆ.  ನಾಲ್ಕೈದು ಕಿ.ಮಿ ದೂರ ಸಾಗಿದ ನಂತರ ಸಿದ್ದಾಪುರದ ಬೀಳಗಿ ಭಾಗದಿಂದ ಹರಿದು ಬರುವ ಅಘನಾಶಿನಿಯ ಒಡಲೊಳಗೆ ಐಕ್ಯವಾಗುವ ಉಪನದಿ ಸಿಗುತ್ತದೆ. ಅಲ್ಲಿಯತನಕ ಬಿಡುವಿಲ್ಲದೇ ನಡೆದರು. ಇಷ್ಟರಲ್ಲಾಗಲೇ ಒಂದೆರಡು ತಾಸುಗಳು ಸರಿದುಹೋಗಿದ್ದವು. ವಿಶ್ರಾಂತಿಗಾಗಿ ದಿಗಂತ ಸೂಚಿಸಿದ ತಕ್ಷಣ ತಂಡ ಥಟ್ಟನೆ ನೆಲಕ್ಕೆ ಕುಳಿತಿತ್ತು. ಸಂಪ್ರಾಣಿಸಿಕೊಂಡು ಹೊರಟ ತಂಡ ಉಪನದಿ ಧುಮ್ಮಿಕ್ಕುವ ಬುರುಡೆ ಜಲಪಾತ ಅಥವಾ ಇಳಿಮನೆ ಜಲಪಾತದ ಕಾಲಬುಡವನ್ನು ತಲುಪುವ ವೇಳೆಗೆ ಸೂರ್ಯ ನೆತ್ತಿಯನ್ನು ಸುಡಲಾರಂಭಿಸಿದ್ದ. ಚಾರಣಿಗರ ತಂಡದ ಹೊಟ್ಟೆಯೂ ತಾಳ ಹಾಕುತ್ತಿತ್ತು.
             ಬುರುಡೆ ಜಲಪಾತದ ಒಡಲಿನಲ್ಲಿ ಎಲ್ಲರೂ ಕುಳಿತು ತಂದಿದ್ದ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಳ್ಳುವ ವೇಳೆಗೆ ಮನಸ್ಸು ಒಂದಷ್ಟು ತಿಳಿಯಾಯಿತು. ಸಿಂಧು ತಾನು ತಂದಿದ್ದ ತಿಂಡಿಯನ್ನು ದಿಗಂತನಿಗೆ ಕೊಟ್ಟಿದ್ದಳು. ದಿಗಂತ ಖುಷಿಯಿಂದ ತಿಂದಿದ್ದ. ತಿಂಡಿ ತಿಂದ ಬಳಿಕ ಅರೆಘಳಿಗೆ ಸಮಯದ ನಂತರ ದಿಗಂತ ಮಾತಿಗೆ ನಿಂತ
`ಬುರುಡೆ ಜಲತಾ ಅಥವಾ ಇಳಿಮನೆ ಜಲಪಾತದ ಕಾಲ ಬುಡದಲ್ಲಿ ನಾವಿದ್ದೇವೆ. ಈ ಜಲಪಾತದ ಮೇಲ್ಭಾಗದಿಂದ ಬಂದರೆ ಮೂರು ಹಂತಗಳನ್ನು ಕಾಣಬಹುದು. ಆದರೆ ನಾಲ್ಕನೆಯ ಹಂತವನ್ನು ಕಾಣಬೇಕೆಂದರೆ ಈಗ ನಾವು ನಿಂತಿದ್ದೇವಲ್ಲ ಇಲ್ಲಿಂದ ಮಾತ್ರ ಸಾಧ್ಯ. ನೀವು ಪೋಟೋ ತೆಗೆದುಕೊಳ್ಳಬಹುದು.  ಮುಂದೆ ನಾವು ಇಲ್ಲಿಂದ ಗುಡ್ಡವನ್ನು ಹತ್ತಿ ಮೇಲಕ್ಕೆ ಹೋಗಬೇಕು. ಇಲ್ಲಿವರೆಗೆ ನಿಮಗೆ ಆದ ಅನುಭವಗಳೇ ಬೇರೆ. ಇನ್ನುಮುಂದಿನ ಅನುಭವವೇ ಬೇರೆ. ಸುಲಭಕ್ಕೆ ಈ ಗುಡ್ಡ ಹತ್ತುವುದು ಸಾಧ್ಯವಿಲ್ಲ. ಹತ್ತಿದವರು ಕೆಲವೇ ಕೆಲವು ಮಂದಿ. ಕಳೆದ ವರ್ಷ ನಾನು ಇಲ್ಲಿಗೆ ಬಂದಾಗ ಹತ್ತಿದ್ದೆ. ಬಹಳ ಅಪಾಯದ ಜಾಗ. ಕಡಿದಾಗಿದೆ. ನಾವು ಎಷ್ಟು ಹುಷಾರಾಗಿದ್ರೂ ಸಾಲದು. ನಮ್ಮಲ್ಲಿನ ಸಲಕರಣೆಗಳು ಇದ್ದಷ್ಟೂ ಕಡಿಮೆಯೇ. ಸುಮಾರು ಇನ್ನೂರೈವತ್ತು ಅಡಿ ಹತ್ತಿದ ನಂತರ ನಾವು ಮೂರನೆ ಹಂತದ ಪ್ರದೇಶದಲ್ಲಿ ಇರುತ್ತೇವೆ. ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಮೇಲಕ್ಕೆ ಹತ್ತಬೇಕು. ನಿಮ್ಮ ನಿಮ್ಮೊಳಗಿನ ನಿಜವಾದ ಧೈರ್ಯವನ್ನು ಪರೀಕ್ಷೆ ಮಾಡುವ ಸಮಯ ಇದು..' ಎಂದವನೇ ಮೇಲಕ್ಕೆ ಹತ್ತುವ ಜಾಗ ತೋರಿಸಿದ.
              ಚಾರಣಿಗರ ತಂಡ ಹಾಗೇ ಮೇಲಕ್ಕೆ ಕತ್ತೆತ್ತಿ ನೋಡಿತು. ಹತ್ತುವ ಜಾಗದ ತುದಿ ಕಾಣಿಸಲಿಲ್ಲ. ಮರಗಳು ಆವರಿಸಿದ್ದವು. ಅಕ್ಕಪಕ್ಕ ಅಪಾಯಕಾರಿಯಾಗಿ ಚಾಚಿಕೊಂಡ ಬಂಡೆಗಳು. ಇದನ್ನು ಹೇಗಪ್ಪಾ ಹತ್ತುವುದು ಎಂದುಕೊಂಡರು ಎಲ್ಲರೂ. ಸುಲಭಕ್ಕೆ ಹತ್ತುವುದು ಅಸಾಧ್ಯ ಎಂಬುದು ಎಲ್ಲರಿಗೂ ಮೊದಲ ನೋಟಕ್ಕೆ ಅನ್ನಿಸಿತು. ದಿಗಂತನೇ ಮೊದಲು ಹತ್ತಿ ಅರ್ಧ ಸಾಗಿ ಎಲ್ಲೆಲ್ಲೋ ಒಂದು ರೆಂಬೆಗೆ ಹಗ್ಗ ಕಟ್ಟಿ ಬಂದ. ಉಳಿದವರು ನೋಡುತ್ತ ನಿಂತಿದ್ದರು. ಮತ್ತೆ ಕೆಳಗಿಳಿದು ಬಂದವನೇ ಈಗ ಹತ್ತಿ ಎಂದು ಹೇಳಿದ ತಕ್ಷಣ ಉಳಿದವರು ಹತ್ತಲು ಆರಂಭಿಸಿದರು. ಚಾರಣವೆಂದರೆ ಬರಿ ಜಲಪಾತ ನೋಡುವುದು, ಬರುವುದು, ಗುಡ್ಡ ಹತ್ತಿಳಿದ ಶಾಸ್ತ್ರ ಮಾಡುವುದು ಎಂದು ಒಂದಿಬ್ಬರು ಅಂದುಕೊಂಡಿದ್ದರು. ಅಂತವರಿಗೆ ಚಾರಣವೆಂದರೆ ಸುಲಭದ್ದಲ್ಲ ಎನ್ನಿಸತೊಡಗಿತು. ಬೆನ್ನ ಮೇಲೆ ಮಣ ಭಾರದ ಚೀಲ, ಒಂದು ಕೈಯಲ್ಲಿ ಹಗ್ಗವನ್ನು ಹಿಡಿದು ಹತ್ತ ಬೇಕು. ಸುಡುವ ಸೂರ್ಯ, ಕಿತ್ತುಕೊಂಡು ಬರುವ ಬೆವರು, ಸ್ವಲ್ಪ ಯಾಮಾರಿದರೂ ಅಘನಾಶಿನಿ ತನ್ನ ತೆಕ್ಕೆಯೊಳಗೆಳೆದುಕೊಳ್ಳಲು ಸಿದ್ಧವಾಗಿದ್ದಾಳೇನೋ ಎನ್ನಿಸುವಂತಹ ವಾತಾವರಣವಿತ್ತು. ಮರಗಳ ಎಲೆಗಳು, ಮರದ ಮೇಲೆ ಗೂಡು ಕಟ್ಟಿದ್ದ ಸವಳಿಗಳು, ಮುಳ್ಳು, ಬಳ್ಳಿಗಳು, ನಾಗರ ಬೆತ್ತದ ಮುಳ್ಳುಗಳು ಪದೇ ಪದೆ ಕಾಡಿದವು. ದಿಗಂತ ಅದ್ಯಾವ ಮಾಯೆಯಲ್ಲಿ ಮೇಲಕ್ಕೆ ಯಾವ ಆಧಾರವಿಲ್ಲದೇ ಹತ್ತಿ ಹಗ್ಗವನ್ನು ಕಟ್ಟಿ ಬಂದನೋ ಎಂದುಕೊಂಡರು.
            ಆರು ಜನ ಮೇಲಕ್ಕೆ ಹತ್ತಿದ ನಂತರ ಏಳನೆಯವಳಾಗಿ ಸಿಂಧು ಹಾಗೂ ಕೊನೆಯಲ್ಲಿ ದಿಗಂತ ಹತ್ತಲಾರಂಭಿಸಿದ್ದ. ಸಿಂಧುವೂ ಕೂಡ ಚಾರಣಕ್ಕೆ ಹೊಸಬಳೇ. ಕೇಳಿ ಗೊತ್ತಿತ್ತಷ್ಟೇ. ನಿಜವಾದ ಅನುಭವವಾಗತೊಡಗಿತ್ತು. ಮೇಲೆ ಒಂದು ಹೆಜ್ಜೆ ಹತ್ತಿದರೆ ಅರ್ಧ ಹೆಜ್ಜೆ ಕೆಳಕ್ಕಿಳಿದಂತಹ ಅನುಭವವಾಗುತ್ತಿತ್ತು. ಬುರುಡೆ ಜಲಪಾತದ ನಾಲ್ಕನೆ ಹಂತದ ಅರ್ಧಭಾಗವನ್ನೇರಲು ಗಂಟೆಗಟ್ಟಲೆ ಸಮಯವೇ ಬೇಕಾಯಿತು. ದಿಗಂತ ಮತ್ತೆ ಯಥಾಪ್ರಕಾರ ಮೊದಲಿನಂತೆ ಮಾಡಿದ. ತಾನು ಮೇಲಕ್ಕೆ ಹೋಗಿ ಹಗ್ಗವನ್ನು ಕಟ್ಟಿ ಬಂದ. ನಾಲ್ಕನೆ ಹಂತದ ಕೊನೆಯಲ್ಲಿ ಹಗ್ಗವನ್ನು ಕಟ್ಟಿ ಬಂದಿದ್ದ. ಎಲ್ಲರೂ ಹತ್ತಿ ಬಂದಿದ್ದರು. ಕೊನೆಯಲ್ಲಿ ಒಂದು ನೇರ ಮರವನ್ನು ಏರಿದರೆ ಮೂರನೆ ಹಂತವನ್ನು ಕಾಣಬಹುದಿತ್ತು. ಹುಡುಗರು ಸುಲಭವಾಗಿ ಮರವನ್ನು ಏರಬಲ್ಲವರಾಗಿದ್ದರು. ಆದರೆ ಹುಡುಗಿಯರು ಬಹಳ ಕಷ್ಟ ಪಡಬೇಕಾಗಿ ಬಂದಿತು. ಮೇಲಕ್ಕೆ ಹತ್ತಿದ ಹುಡುಗರು ಹಗ್ಗವನ್ನು ಹಿಡಿದುಕೊಳ್ಳುವುದು, ಅದರ ಸಹಾಯದಿಂದ ಹುಡುಗಿಯರು ಮೇಲಕ್ಕೆ ಹತ್ತುವುದು ಎಂಬ ಯೋಜನೆ ರೂಪಿಸಲಾಯಿತು. ದಿಗಂತ ಕೆಳಗೆ ಉಳಿದು ಹುಡುಗಿಯರು ಮೇಲೇರಲು ಸಹಾಯವಾಗುವಂತೆ ಸಲಹೆ, ಸೂಚನೆಗಳನ್ನು ಕೊಡುತ್ತಿದ್ದ. ಸಿಂಧು ಮತ್ತೆ ಯಥಾ ಪ್ರಕಾರ ಕೊನೆಯವಳಾಗಿ ಮರವೇರಲು ಅನುವಾದಳು. ಕಳಗಿನಿಂದ ಮೇಲಕ್ಕೇರಿದದ್ದ ಸುಸ್ತು, ಬೆವರು, ಮೈಕೈ ನೋವಿನ ಪರಿಣಾಮ ಆಕೆ ಏನು ಮಾಡಿದರೂ ಮರವನ್ನು ಹತ್ತಲು ಸಾಧ್ಯವಾಗಲಿಲ್ಲ. ನಾಲ್ಕು ಹೆಜ್ಜೆ ಏರುವುದು ಜರ್ರನೆ ಜಾರುವುದು ಮಾಡಲು ಆರಂಭಿಸಿದಳು. ಕೊನೆಗೊಮ್ಮೆ ದಿಗಂತನೇ ಅದ್ಹೇಗೋ ಕಷ್ಟಪಟ್ಟು ಆಕೆಯನ್ನು ಮೇಲಕ್ಕೆ ಕರೆತಂದಾಗ ಸಿಂಧುವಿನ ಕಣ್ಣಲ್ಲಿ ಕೃತಜ್ಞತೆಯ ಭಾವ ತುಂಬಿ ತುಳುಕುತ್ತಿತ್ತು.
          ಮೂರನೆ ಹಂತದಲ್ಲಿ ಜಲಪಾತದ ಬುಡದಲ್ಲಿ ಸ್ನಾನವನ್ನು ಮಾಡಿದವರು ಒಮ್ಮೆ ಹತ್ತಿ ಬಂದ ಸುಸ್ತನ್ನು ಕಳೆದು ಹೋಗುವಷ್ಟು ಖುಷಿ ಪಟ್ಟರು. ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿತ್ತು. ಅಳಿದುಳಿದ ತಿಂಡಿಯನ್ನೂ ತಿಂದು ಮುಗಿಸಿದರು. ಈ ಹಂತವನ್ನು ಏರಿ 9 ಕಿ.ಮಿ ನಡೆದು ಬಸ್ಸನ್ನು ಏರಬೇಕಿತ್ತು. ಆಗಲೇ ಗಂಟೆ ನಾಲ್ಕನ್ನು ದಾಟಿದ್ದ ಕಾರಣ ದಿಗಂತ ಅವಸರಿಸಿದ. ಐದುಗಂಟೆಗೆಲ್ಲ ಜಲಪಾತದ ಒಡಲಿನಿಂದ ಮೇಲೇರಿ ಬಂದರು. ಕತ್ತಲಾವರಿಸುವ ವೇಳೆಗೆ 9 ಕಿ.ಮಿ ನಡೆದು ಹೋದರು. ಇಳಿಮನೆ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಸ್ಸಿಗೆ ಕಾಯುತ್ತ ನಿಂತಿದ್ದಾಗಲೇ ದಿಗಂತ ಸಿಂಧುವಿನ ಬಳಿ `ನನ್ನನ್ನು ಪ್ರೀತಿಸ್ತೀಯಾ..?' ಎಂದು ಕೇಳಿದ್ದ. ಜಲಪಾತದ ಕಣಿವೆಯಿಂದ ಬಂದು ಸುಸ್ತಾಗಿ ಕುಳಿತಿದ್ದವಳು ಬೆಚ್ಚಿ ಬಿದ್ದಿದ್ದಳು. ಆದರೆ ಏನೂ ಮಾತನಾಡಿರಲಿಲ್ಲ. ದಿಗಂತ ಉತ್ತರ ನಿರೀಕ್ಷಿಸುತ್ತಿದ್ದಾಗಲೇ ಬಸ್ಸು ಬಂದಿತ್ತು. ಸಿಂಧು ಮೌನವಾಗಿ ಬಸ್ಸನ್ನು ಏರಿ ಹೋಗಿದ್ದಳು. ಬಸ್ಸಿಳಿದು ಹೋಗುವಾಗಲೂ ಒಂದೇ ಒಂದು `ಹಾಯ್.. ಎಂದೋ ಸಿಗುತ್ತೇನೆ ಎಂದೋ..' ಒಂದೂ ಮಾತನ್ನು ಆಡಿಹೋಗಿರಲಿಲ್ಲ. ದಿಗಂತನಿಗೆ ತಪ್ಪು ಮಾಡಿದೆ ಎನ್ನುವ ಭಾವ ಕಾಡಲಾರಂಭಿಸಿದ್ದೇ ಆಗ. ಆದರೆ ಚಾರಣಕ್ಕೆ ಬಂದಿದ್ದ ಉಳಿದವರಿಗೆ ಈ ಸಂಗತಿ ಗೊತ್ತಾಗಿರಲಿಲ್ಲ.
            ಮರುದಿನ  ದಿಗಂತನನ್ನು ಕಾಲೇಜಿನಲ್ಲಿ ಹುಡುಕಿಕೊಂಡು ಬಂದು ಖಡಾಖಂಡಿತವಾಗಿ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ತಾನಿನ್ನೂ ಓದುತ್ತಿದ್ದೇನೆ. ಭವಿಷ್ಯದಲ್ಲಿ ಸಾಕಷ್ಟು ಕನಸನ್ನು ಇಟ್ಟುಕೊಂಡಿದ್ದೇನೆ. ಮಾಡೆಲ್ ಆಗಿ ಸಿನೆಮಾ ಜಗತ್ತಲ್ಲಿ ಮಿಂಚುವ ಆಸೆ ತನ್ನದು. ನಿನ್ನನ್ನು ಪ್ರೀತಿಸುವುದಿಲ್ಲ. ನನ್ನ ಕನಸು ಈಡೇರಿಸಿಕೊಳ್ಳಲೇ ಬೇಕು ಎಂದವಳನ್ನೇ ದಿಟ್ಟಿಸಿನೋಡಿದ್ದ ದಿಗಂತ. ಹುಡುಗಿಯರು ಎಷ್ಟು ನೇರವಾಗಿ, ಹೃದಯ ಚೂರಾಗುವಂತೆ ಉತ್ತರ ನೀಡಬಲ್ಲರು... ಎಂದುಕೊಂಡಿದ್ದ. ಮಾತಿಲ್ಲದೆ ಆತನೂ ಸುಮ್ಮನಾಗಿದ್ದ. ನಂತರದ ದಿನಗಳು ಹಾಗೆಯೇ ಸಾಗಿದ್ದವು. ದಿಗಂತ ಮಾತ್ರ ಮೌನದ ಕೋಟೆಯೊಳಗೆ ದಿನದಿಂದ ದಿನಕ್ಕೆ ಸಾಗಿದ್ದ. ಮೊದ ಮೊದಲು ಕ್ರಿಯಾಶೀಲವಾಗಿ, ಚಟಪಟನೆ ಮಾತನಾಡುತ್ತ ಎಲ್ಲರೊಂದಿಗೆ ಮಾತನಾಡುತ್ತ ಖುಷಿ ಖುಷಿಯಾಗಿ ಇದ್ದ ದಿಗಂತ ಕೊನೆ ಕೊನೆಗ ಯಾರೊಂದಿಗೂ ಬೆರೆಯಲಾರ, ಎಲ್ಲರಿಂದ ದೂರ ಉಳಿದು ಬಿಟ್ಟಿದ್ದ. ಸದಾ ಕಾಲ ಏನನ್ನೋ ಆಲೋಚನೆ ಮಾಡುತ್ತಿದ್ದಂತೆ ಅನ್ನಿಸಿತ್ತು. ಟ್ರೆಕ್ಕಿಂಗಿನ ಕಾರಣದಿಂದಾಗಿ ಕಾಲೇಜಿನಾದ್ಯಂತ ದಿಗಂತ ಹೀರೋ ಆಗಿದ್ದರೂ ದಿಗಂತ ಮಾತ್ರ ಅದರಿಂದ ವಿಮುಖನಾಗಿದ್ದಂತೆ ಕಂಡುಬಂದಿತ್ತು. ನಂತರದ ದಿನಗಳಲ್ಲಿ ಸಿಂಧು ಕಾಲೇಜನ್ನು ಮುಗಿಸಿ ಮಾಡೆಲ್ ಲೋಕಕ್ಕೆ ಕಾಲಿಟ್ಟು, ಆ ಮೂಲಕ ಚಿತ್ರರಂಗದಲ್ಲಿ ನಟಿಯಾಗಿ, ಹಲವಾರು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದ್ದಳು. ಅವಳಿಗೆ ಗೊತ್ತಿಲ್ಲದಂತೆ ದಿಗಂತ ಮರೆತು ಹೋಗಿದ್ದ. ಆದರೆ ಆತ ಮತ್ತೆ ಅವಳಿಗೆ ನೆನಪಾಗಿ ಕಾಡಿದ್ದು ಮಾತ್ರ ವಿಚಿತ್ರ ಘಟನೆಯಿಂದ.

(ಮುಂದುವರಿಯುತ್ತದೆ..)

ವಿಶ್ವ ಪರಿಸರ ದಿನ ಹಾಗೂ ಎರಡು ಘಟನೆಗಳು

(ಮೊದಲಿನವರು ಗುರುನಾಥ ಗೌಡರು, ಎರಡನೆಯವರು ಶೀನಾ ಸಿದ್ದಿ.)
ಮೊದಲಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳನ್ನು ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ.

ಘಟನೆ ಒಂದು:
           ಮುಂಜಾನೆ ಕರಾಳವಾಗಿತ್ತು. ಏಳು ಗಂಟೆಯಿರಬೇಕು. ಮನೆಯ ಪಕ್ಕದ ಕಾಡಿನಲ್ಲಿ ನಾಯಿ ಕೂಗಿದ ಶಬ್ದ. ಹಾಗೂ ಅದೇ ವೇಳೆಗೆ ಕೆಂಪು ಅಳಿಲು (ನಮ್ಮಲ್ಲಿ ಅದನ್ನು ಕೇಶಳಿಲು ಎನ್ನುತ್ತಾರೆ) ಅದೂ ಕೂಗಿದ ಶಬ್ದ. ವಿಕಾರವಾಗಿತ್ತು. ಏನೋ ಆಗಿರಬೇಕೆಂದು ಓಡೋಡಿ ಹೋದೆ.
            ಮುಂಜಾನೆಯೇ ನಮ್ಮೂರಲ್ಲಿ ಕೇಶಳಿಲುಗಳು ತೆಂಗಿನ ಮರಕ್ಕೆ ದಾಳಿ ಇಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನಿಸಿದೆ. ತೆಂಗಿನ ಹಿಂಡಿಗೆಗೆ ತೂತು ಕೊರೆದು ಅದರಲ್ಲಿನ ನೀರು ಹೀರಿ, ಒಳಗಿನ ತಿರುಳನ್ನು ತಿಂದು ಮುಗಿಸಿ ತೆಂಗಿನ ಬೆಳೆಗಾರರಿಗೆ ಸಮಸ್ಯೆಯಾಗಿರುವ ಕೇಶಳಿಲನ್ನು ದಿನಂಪ್ರತಿ ತೆಂಗಿನಮರಗಳನ್ನು ಬಡಿದು ಓಡಿಸುವುದು ಸಾಮಾನ್ಯವಾಗಿದೆ. ಇವತ್ತು ಬೆಳಿಗ್ಗೆ ಕೇಶಳಿಲಿನ ಜೋಡಿ ಯಾವುದೋ ತೆಂಗಿನ ಮರವನ್ನು ಗುರಿಯಾಗಿ ಇರಿಸಿಕೊಂಡು ಓಡಿ ಬಂದಿದ್ದವಿರಬೇಕು. ಮರದಿಂದ ಮರಕ್ಕೆ ಹಾರುತ್ತ ಬರುತ್ತಿದ್ದವು. ನಮ್ಮುರಲ್ಲಿ ಹೊಸ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಒಂದು ಜಾಗದಲ್ಲಿ ಮರಗಳ ನಡುವೆ ದೊಡ್ಡ ಗ್ಯಾಪ್ ಇದೆ. ಈ ಜಾಗದಲ್ಲಿ ಅಳಿಲುಗಳು ಮರದಿಂದ ಮರಕ್ಕೆ ಹಾರಲು ಬಹಳ ಕಷ್ಟ ಪಡಬೇಕು.
             ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಅಳಿಲು ಹಾರಿತಿರಬೇಕು. ಆದರೆ ಇನ್ನೊಂದು ಬದಿಯ ಮರ ಅದರ ಹಿಡಿತಕ್ಕೆ ಸರಿಯಾಗಿ ಸಿಕ್ಕಲಿಲ್ಲ. ಮರದಿಂದ ಉರುಳಿತು. ಉರುಳಿದ ಹೊಡೆತಕ್ಕೆ ಒಮ್ಮೆ ಏಳಲೇ ಆಗಲಿಲ್ಲ. ಹಾಗೇ ಕುಂಟುತ್ತ, ಏಳುತ್ತ ಬೀಳುತ್ತ ಹೋಗುತ್ತಿತ್ತು. ಇದನ್ನು ನೋಡಿದ್ದು ನಮ್ಮ ಪಕ್ಕದ ಮನೆಯ ನಾಯಿ ಓಡೋಡಿ ಬಂದದ್ದೇ ಕೇಶಳಿಲಿನ ಕುತ್ತಿಗೆಗೆ ಬಾಯಿ ಹಾಕಿಯೇ ಬಿಟ್ಟಿತು. ನಾನು ಓಡಿ ಹೋಗಿ ಬಿಡಿಸಲು ನೋಡಿದೆ. ನಾಯಿ ಗುರ್ರೆಂದಿತು. ಕಲ್ಲೆತ್ತಿಕೊಂಡೆ. ನಾಯಿಯ ಜೊತೆಗೆ ಅಳಿಲು ಕಿರ್ರೆನ್ನುತ್ತಿತ್ತು. ನಾಗಿ ನನ್ನನ್ನು ಹೆದರಿಸಲು ಗುರ್ರೆಂದರೆ ಅಳಿಲು ಪ್ರಾಣ ಹೋಗುವ ಅಂತಿಮ ಕ್ಷಣದಲ್ಲಿ ಕಿರ್ ಎನ್ನುತ್ತಲಿತ್ತು. ನಾನು ಕಲ್ಲೆತ್ತಿಕೊಂಡದ್ದನ್ನು ಕಂಡ ನಾಯಿ ಅಳಿಲನ್ನು ಬಿಟ್ಟು ಹೋಗುತ್ತದೆ ಎಂದುಕೊಂಡೆ. ತಥ್.. ಕಚ್ಚಿಕೊಂಡೇ ಹೋಯಿತು. ಕಣ್ಣೆದುರೇ ಒಂದು ಕೆಂಪಳಿತು ನಾಯಿಯ ಬಾಯಿಗೆ ಆಹಾರವಾಯಿತು. ತೋ.. ಎಂತಾ ಕೆಲಸ ಆಗಿಬಿಟ್ಟಿತಲ್ಲ. ಅಳಿಲನ್ನು ಉಳಿಸಲಾಗಲಿಲ್ಲವಲ್ಲ ಎಂದು ಮನಸ್ಸು ಹಳಹಳಿಸುತ್ತಿದ್ದರೆ, ಆ ಅಳಿಲಿನ ಸಂಗಾತಿ ಮರದ ಮೇಲಿಂದ ರೋಧಿಸುತ್ತಿತ್ತು. ಮನಸ್ಸು ಭಾರವಾಗಿಯೇ ಮರಳಿದೆ. ಪರಿಸರ ದಿನದ ಆರಂಭದಲ್ಲಿಯೇ ಇಂತಹ ಘಟನೆ ನೋಡಬೇಕಾಗಿ ಬಂತಲ್ಲ ಛೇ.. ಎಂದುಕೊಂಡೆ.

ಘಟನೆ ಎರಡು:
            ಕಳವೆಯಲ್ಲಿ ಕಾನ್ಮನೆ ಪರಿಸರ ಜ್ಞಾನ ಕೇಂದ್ರದ ಉದ್ಘಾಟನೆ ಇವತ್ತು. ಅಳಿಲಿನ ಘಟನೆ ನೆನಪಿನಲ್ಲಿಯೇ ಕಳವೆಗೆ ಹೋದೆ. ಶಿವಣ್ಣ (ಶಿವಾನಂದ ಕಳವೆ) ಮಕ್ಕಳಿಗೆ ಮರಗಳು ಭೂಮಿಗೆ ಬಂದ ಕತೆ ಹೇಳುತ್ತಿದ್ದರು. ಕೆಲ ಹೊತ್ತಿನಲ್ಲಿಯೇ ಕಾನ್ಮನೆ ಉದ್ಘಾಟನೆಗಾಗಿ ಹಿರಿಯರೆಲ್ಲ ಬಂದರು ಉದ್ಘಾಟನೆಯೂ ಆಯಿತು.
            ಕಾರ್ಯಕ್ರಮದ ವಿಶೇಷ ಘಟ್ಟವಾಗಿ ಇಬ್ಬರು ಕಾಡಿನ ಒಡನಾಡಿಗಳಿಗೆ ಸನ್ಮಾನ ಇಟ್ಟುಕೊಳ್ಳಲಾಗಿತ್ತು. ಒಬ್ಬರು ಬೇಡ್ತಿ ಕೊಳ್ಳಗಳಲ್ಲಿ ಅಡ್ಡಾಡುತ್ತ ಕಾಡಿನ ಅಧ್ಯಯನ ಮಾಡಿದ ಶೀನಾ ಶಿದ್ದಿ ಪುರ್ಲೆಮನೆ. ಕಳೆದ 60 ದಶಕಗಳಿಂದ ಕಾಡಿನಲ್ಲಿಯೇ ಸುತ್ತಾಡುತ್ತ ಅನುಭವ ಗಳಿಸಿಕೊಂಡವರು. ಇನ್ನೋರ್ವರು ಗುರುನಾಥ ಗೌಡ ಬಸೂರು. 1980ರ ದಶಕದಲ್ಲಿ ಕಣ್ಣನ್ನು ಕಳೆದುಕೊಂಡರೂ ಸಂಗೀತ ಕಲಿತು, ಕಾಡನ್ನು ಬೆಳೆಸಿ, ಅಕ್ಕಿ ಗಿರಣಿಯನ್ನು ತಯಾರಿಸಿ, ಕೆರೆಗೆ ಕಾಯಕಲ್ಪ ಕೊಟ್ಟು ಕಣ್ಣಿದ್ದವರೂ ನಾಚುವಂತೆ ಮಾಡಿದ ಸಾಹಸಿ. ಇಬ್ಬರನ್ನೂ ನೋಡಿ ಮನಸ್ಸು ಪುಳಕಿತವಾಯಿತು.
           ಶೀನಾ ಸಿದ್ದಿಯವರ ಸನ್ಮಾನದ ಸಂದರ್ಭದಲ್ಲಿ ಅವರಿಗೆ ಸ್ವಂತ ಮನೆಯಿಲ್ಲ, ಅತಿಕ್ರಮಣ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ರೇಷನ್ ಕಾರ್ಡು ಸಿಕ್ಕಿದೆ ಎಂದು ಹೇಳುತ್ತಿದ್ದರು ಶಿವಣ್ಣ. ಶೀನಾ ಸಿದ್ದಿ ಭಾವುಕರಾಗಿದ್ದರು. ಅವರ ಕಣ್ಣಲ್ಲಿ ನೀರು ಕಂಡು ಸಭೆಯಲ್ಲಿದ್ದ ಬಹುತೇಕರು ಗದ್ಗದಿತರಾದರು. ಗುರುನಾಥ ಗೌಡರ ಸಾಧನೆಯನ್ನು ಹೇಳಿದಂತೆಲ್ಲ ಸಭೆಯಲ್ಲಿದ್ದ ಹೈಸ್ಕೂಲು ಮಕ್ಕಳ ಕಣ್ಣಲ್ಲೂ ನೀರು. ಇಬ್ಬರ ಸನ್ಮಾನ ಮುಗಿಯುತ್ತಿದ್ದಂತೆ ಕರತಾಡನ ಜೋರಾಗಿತ್ತು.
             ನಂತರ ಮಾತನಾಡಿದರು ಗುರುನಾಥ ಗೌಡರು. ತಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿದರು. ಕೆರೆ ಕಟ್ಟಿದ್ದು, ಆ ಸಂದರ್ಭದಲ್ಲಿ ಹಲವರು ಹಣ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಸೇರಿದಂತೆ ಹಲವು ಸಂಗತಿಗಳನ್ನು ಬಿಚ್ಚಿಟ್ಟರು. ಯಾಕೋ ಅವರನ್ನು ಮುಟ್ಟಿ ಮಾತನಾಡಿಸಬೇಕು ಅನ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಕಾಡಿನ ಒಡನಾಡಿ, ಕಣ್ಣಿಲ್ಲದಿದ್ದರೂ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಸನ್ಮಾನ ಮಾಡಿದ ಶಿವಾನಂದ ಕಳವೆಯವರ ಬಗ್ಗೆ ಹೆಮ್ಮೆಯೂ ಆಯಿತು.
             ಪರಿಸರ ದಿನದ ಆರಂಭ ಬೇಸರದಿಂದ ಆಗಿದ್ದರೂ ಅಂತ್ಯದಲ್ಲಿ ಒಂದೊಳ್ಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕತೆ ಲಭಿಸಿತ್ತು. ಪರಿಸರದ ಜೊತೆಗೆ ಸದಾ ಒಡನಾಡುತ್ತ, ಪರಿಸರದ ಜೊತೆಗೆ ಪರಿಸರವಾಗುತ್ತ ಬಂದ ಈ ಇಬ್ಬರು ಸಾಧಕರು ಬಹಳ ಗ್ರೇಟ್ ಎನ್ನಿಸಿತು. ಅಳಿಲನ್ನು ನಾಯಿಯ ಬಾಯಿಯಿಂದ ಬಿಡಿಸಲು ಸಾಧ್ಯವಾಗಲಿಲ್ಲ ಎನ್ನುವ  ಭಾವ ಮತ್ತೆ ಮತ್ತೆ ಕಾಡಿ ಮನಸ್ಸು ಮೂಕವಾಯಿತು. ಪರಿಸರ ದಿನ ಎರಡು ಭಿನ್ನ ಅನುಭವಗಳನ್ನು ನೀಡಿತು. ಮನಸ್ಸು ಭಾವನೆಗಳ ಜೊತೆಯಲ್ಲಿ ಹೊಯ್ದಾಡಿತು.

Wednesday, June 4, 2014

ಏಳು ಹನಿಗವಿತೆಗಳು

ಪ್ರೀತಿ

ಬತ್ತಲಾರದ ಚಿಲುಮೆ
ಧಾವಂತದೊಲುಮೆ |
ಮರೆಯದ ಮಧುರಾನುಭೂತಿ
ಪರಸ್ಪರರ ಅರಿವೆ ||

ಭಗ್ನ

ಕೆಲವರು ಎಷ್ಟು
ಪ್ರಯತ್ನಿಸಿದರೂ
ಬಯಸಿದುದು
ಸಿಗಲಾರದು |
ರಾಧೆ, ಭಾಮೆಗಿಂತ
ಹೆಚ್ಚಾಗಿ
ಕೃಷ್ಣನನ್ನು
ಪ್ರೀತಿಸಿದ್ದಳು ||

ಆವರಣ

ನನ್ನೆದೆಯೊಳಗೆ ಒಂದೇ ತಾಳ, ಬಡಿತ |
ಅದೇ ಆವೇಗ, ಅದೇ ನಿನಾದ ||
ಯಾಕಂದ್ರೆ ಅಲ್ಲಿದ್ದುದು
ನೀ ಕುಣಿದು ಬಿಟ್ಟುಹೋದ
ನಿನ್ನ ಕಾಲುಗೆಜ್ಜೆ ||

ಸೂರ್ಯನ ಪ್ರೀತಿ

ಆ ಒಬ್ಬಂಟಿ ಸೂರ್ಯನಿಗೆ
ಪ್ರೀತಿ ಎಂದರೇನು ಗೊತ್ತು?
ಸುಕೋಮಲೆ ಭೂಮಿಯ
ಸುಡತೊಡಗಿದ, ಆಕೆ ಎದ್ದು
ದೂರ ಓಡಿಬಂದಳು |
ಈಗ ಪರಿತಾಪಿ ಸೂರ್ಯ
ಅವಳನ್ನೇ ಸುತ್ತುತ್ತಾ
ಪ್ರೇಮ ಯಾಚಿಸುತ್ತಿದ್ದಾನೆ ||

ಸೋಲು-ಗೆಲುವು

ಒಬ್ಬ ವ್ಯಕ್ತಿ ಗೆದ್ದರೆ
ಅವನ ಕಡೆಗೆ ಎಲ್ಲರೂ |
ಸುತ್ತ ಮುತ್ತ ಹಾರ-ಜೈಕಾರ
ಕೂಗುತ್ತಾರೆ ಜನರು |
ಆದರೆ ಸೋತವನೆಡೆಗೆ ಮಾತ್ರ
ತಿರುಗಿ ನೋಡುವುದಿಲ್ಲ ಯಾರೂ ||

ಪದ

ಕವಿತೆಯ ಬಲಭುಜ
ಸುಮಧುರ ಹಾಡು |
ಹಾಡಿದರೆ ಕವಿತೆ
ಆಗುವುದು ಜನಪದ,
ಇಲ್ಲವಾದಲ್ಲಿ ಅದು ಬರಿ
ಪುಸ್ತಕದೊಳಗಿನ ಪದ ||

ಅರ್ಜುನ

ತನ್ನ ಕಾರ್ಯಸಾಧನೆಗಾಗಿ
ಸ್ತ್ರೀವೇಷವನ್ನೂ ಕೂಡ
ಹಾಕಿದರೂ, ಎಲ್ಲರಿಗೆ ಮೋಸ
ಮಾಡಿದರೂ, ಭಬ್ರುವಾಹನನನ್ನು
ಜಾರಿಣಿಯ ಮಗನೆಂದು ಜರಿದಾತ ||

Tuesday, June 3, 2014

Funny ಹನಿಗಳು

ಗಾಂಧಿ-ಬ್ರಾಂದಿ

ಗಾಂಧಿ ಗಾಂಧಿ ಎಂದು
ಸದಾಕಾಲ ಗಾಂಧಿಯನ್ನು
ನೆನೆಯುತ್ತಿದ್ದ ಆ ಮಂತ್ರಿಗೆ, 
ಗಾಂಧಿ ಜಯಂತಿಯ ದಿನ
ನೆನಪಾಗಿದ್ದು ಮಾತ್ರ ಬ್ರಾಂದಿ ||

ಬಳುವಳಿ

ಈಗೀಗ ಮುಖ್ಯವಾಗಿ
ತಂದೆಯಿಂದ ಮಗನಿಗೆ
ಬಳುವಳಿಯಾಗಿ ಬರುವುದು
ಎರಡೇ ಎರಡು |
ಪಿತ್ರಾರ್ಜಿತ ಆಸ್ತಿ ಹಾಗೂ
ಪಿತ್ರಾರ್ಜಿತ ಸಾಲ ||

ಡಬ್ಬಲ್ಲು ಮೀನಿಂಗು

ಸ್ವಾಮಿ, ಪದಗಳ ನಡುವೆ
ಗ್ಯಾಪು ಕೊಟ್ಟರೆ ಮೀನಿಂಗೇ
ಚೇಂಜಂತೆ, ಅಲ್ವಾ! ಹೌದು
ಮುಖಕ್ಕೆ ಮಂಗಳಾರತಿ ಎತ್ತಿದರು
ಈ ಮಾತು ಸರಿ !! ಅದೇ ಹೀಗೆ
ಮುಖಕ್ಕೆ ಮಂಗಳ-ಆರತಿ
ಎತ್ತಿದರು ಎಂದರೆ ಮೀನಿಂಗು
ಡಬ್ಬಲ್ಲೇ ಅಲ್ವೇ ||

ಮಂಗಳಾರತಿ

ಮಂಗಳ-ಆರತಿಯರ ನಡುವೆ
ಬಿದ್ದ ಪುಂಡನಿಗೆ ಅವರಿಬ್ಬರು
ಚನ್ನಾಗಿ ಉಗಿದು, ಮುಖಕ್ಕೆ
ಮಂಗಳಾರತಿ ಎತ್ತಿದರು ||

ಬಾರಿ

ಅತ್ತೆಗೊಂದು ಬಾರಿ
ಸೊಸೆಗೊಂದು ಬಾರಿ
ಆದರೆ ಬಡವನ
ಪಾಲಿಗೆ ಇರುವುದೊಂದೇ
ದುಬಾರಿ ||

ಪವರ್ರು

ಪತಿ-ಪತ್ನಿಯರಲ್ಲಿ
ಹೆಂಡತಿಯೇ ಗಟ್ಟಿ |
ಪತಿಗೆ ಧಮ್ಮಿದ್ದರೆ
ಆಸ್ಪತ್ರೆಗೆ ಅಟ್ಟಿ ||

Monday, June 2, 2014

ಆಗಂತುಕ ಪ್ರೇಮಿ

(ಚಿತ್ರಕೃಪೆ : ವಿನಾಯಕ ಹೆಗಡೆ)
ದೂರದಿಂದ ಬಂದನವ
ನನ್ನೆದೆಯ ಕದ ತೆರೆದ
ಪಂಜರದ ಬದುಕಿಂದ
ಹೊರಗೆಲ್ಲೋ ಸೆಳೆದ |

ಬಂದ ಹೊಸ ಚಣದಲ್ಲಿ
ನಗುವೆರಡ ತಂದ
ತೆರೆದನಲ್ಲಾ ಇಂದು
ನೂರು ಮನಗಳ ಬಂಧ ||

ಮೊದಮೊದಲು ಆಗಂತುಕ
ನಡುನಡುವೆ ಮಿತ್ರ
ಬದುಕು ನೀಡುವ ಜೀವಿ
ಕೊನೆಗೊಮ್ಮೆ ಪ್ರೇಮಿ ||

ಆಗಂತುಕನ ರೂಪ
ಮನದಲ್ಲಿ ಕಡೆದಿದೆ ಶಿಲ್ಪ
ಆಗಲೇ ಮನ ನಿಲ್ಲದಲ್ಲ
ನಾನು ನಾನಾಗಿ ಉಳಿದಿಲ್ಲ ||

ಒಮ್ಮೆ ಒಲವಿನ ಪ್ರೇಮಿ
ಮತ್ತೊಮ್ಮೆ ಆಗಂತುಕ
ಆಗಿ ಹೋದರೆ ದ್ರೋಹಿ
ನೀನೊಬ್ಬನೇ ಘಾತುಕ ||

**
(ಈ ಕವಿತೆಯನ್ನು ಬರೆದಿದ್ದು 02-03-2006ರಂದು ದಂಟಕಲ್ಲಿನಲ್ಲಿ)
(ವಿನಾಯಕ ಹೆಗಡೆ ಚಿತ್ರ ಕೊಟ್ಟಿದ್ದು... ಥ್ಯಾಂಕ್ಸು..)