`ಹಲೋ...
ವಾಣಿ ಇದ್ದಾ..?' ವಿನಾಯಕ ಮನಸ್ಸು ತಾಳಲಾರದೇ ಪೋನ್ ಮಾಡಿದ್ದ.
ಆತ ಪೋನ್ ಮಾಡುವ ವೇಳೆಗಾಗಲೇ ವಾಣಿಯ ಮದುವೆಯಾಗಿ ಮೂರ್ನಾಲ್ಕು ತಿಂಗಳು ಕಳೆದಿತ್ತು.
`ಇಲ್ಯಲಾ ತಮಾ.. ನೀ ಯಾರಾ..? ವಾಣಿ ಅದರ ಗಂಡನ ಮನೆಲ್ಲಿ ಇದ್ದಲ್ಲ..' ವಾಣಿಯ ಆಯಿ ಉತ್ತರ ನೀಡಿದ್ದಳು.
`ಹೌದಾ.. ಯಂಗೆ ಅಮೃತಬಳ್ಳಿಮನೆಯಾತು.. ವಿನಾಯ್ಕ ಹೇಳಿ ಯನ್ನ ಹೆಸ್ರು. ವಾಣಿ ಕ್ಲಾಸಿನವ್ವ. ಅವಳ ಪ್ರೆಂಡು.. ಯಂಗೆ ವಾಣಿ ಮನೆಯ ಪೋನ್ ನಂಬರ್ ಸಿಗ್ಲಕ್ಕಾ..?' ವಿನಾಯಕ ಕೇಳಿದ್ದ.
`ಓ.ವಿನಾಯಕನನಾ ತಮಾ.. ಅರಾಮ್ ಇದ್ಯಾ.. ವಾಣಿ ಆಗಾಗ ಹೇಳ್ತಾ ಇರ್ತಿತ್ತಾ.. ನೀನು ಯಂಗಳ ನೆಂಟರಡಲಾ..' ವಾಣಿಯ ಆಯಿ ಉತ್ತರ ನೀಡಿದ್ದಳು.
`ಹುಂ.. ಹೌದಡಾ.. ಯಾವಾಗಲೋ ವಾಣಿ ಹೇಳಿದ ನೆನಪು.. ವಾಣಿಗೆ ಪೋನ್ ಮಾಡಿದ್ರೆ ಸಿಗ್ಲಕ್ಕಾ ಈಗ..?' ವಿನಾಯ್ಕ ಮತ್ತೆ ಕೇಳಿದ್ದ..
`ತಮಾ ನಿನ್ ಆಯಿ ಅಪ್ಪಯ್ಯ ಎಲ್ಲಾ ಅರಾಮ್ ಇದ್ವಾ.. ಎಂತಾ ಮಾಡ್ತಾ ಇದ್ದೆ ನೀನು ಈಗ..?' ವಾಣಿಯ ಆಯಿ ವಿನಾಯಕನ ಪ್ರಶ್ನೆಗೆ ಉತ್ತರಿಸದೇ ತಾನೇ ಪ್ರಶ್ನೆ ಮಾಡಿದಳು.
`ಆನು ಬೆಂಗಳೂರಲ್ಲಿ ಇದ್ದಿ ಈಗ. ಯಮ್ಮನೆಲಿ ಎಲ್ಲಾ ಅರಾಮ್ ಇದ್ದ. ನಂಗೆ ಕಾಲೇಜು ದಿನಗಳಲ್ಲಿ ವಾಣಿ ಪ್ರೆಂಡ್ ಆಗಿತ್ತು. ಇವತ್ತು ನೆನಪಾತು ಮಾತಾಡನಾ ಹೇಳಿ ಮಾಡಿದ್ದಿ.. ಅದರ ಮನೆಯ ನಂಬರ್ ಇತ್ತಿಲ್ಲೆ.. ಹಂಗಾಗಿ ನಿಮ್ಮನಿಗೆ ಮಾಡಿದ್ದು..' ವಿನಾಯಕ ಇದ್ದ ವಿಷಯವನ್ನು ಹೇಳಿದ್ದ.
ಕೊನೆಗೂ ಉತ್ತರ ನೀಡಲು ಮುಂದಾದ ವಾಣಿಯ ಆಯಿ `ತಮಾ ಆನು ನಂಬರ್ ಕೊಡ್ತಿ ತಡಿ.. ಪಟ್ಟಿ ನೋಡ್ಕ್ಯಂಡು ಹೇಳವು............... ....... ........ ...... ಹಿಡಿ ಇಕಾ ಬರಕಾ..' ವಿನಾಯಕ ಬರೆದುಕೊಂಡ. ವಾಣಿಯ ಆಯಿಯೇ ಮುಂದುವರಿಸಿದಳು `... ಆದರೆ ತಮಾ ಒಂದ್ ಮಾತು ಹೇಳಲಾ.. ನೀನು ಈಗ ವಾಣಿಗೆ ಪೋನ್ ಮಾಡದು ಯಂಗೆಂತಕ್ಕೋ ಸರಿ ಕಾಣ್ತಿಲ್ಲೆ ತಮಾ.. ವಾಣಿಯ ಅತ್ತೆಗೆ ಇದೆಲ್ಲಾ ಸರಿ ಕಾನ್ತಿಲ್ಲೆ.. ರಾಶಿ ಕಟ್ಟು ನಿಟ್ಟಲಾ..' ಎಂದಾಗ ವಿನಾಯಕ ಒಮ್ಮೆ ಪೆಚ್ಚಾದ ಅಷ್ಟೇ ಅಲ್ಲದೇ ವಾಣಿಗೆ ಪೋನ್ ಮಾಡಲೋ ಬೇಡವೋ ಎನ್ನುವ ದ್ವಂದ್ವಕ್ಕೆ ಸಿಲುಕಿದ. ಮನಸು ಒಮ್ಮೆ ಪೋನ್ ಮಾಡು ಎಂದರೆ ಮತ್ತೊಮ್ಮೆ ಬೇಡ ಎನ್ನುವಂತೆ ಅನ್ನಿಸುತ್ತಿತ್ತು. ಪೋನ್ ಹಿಡಿದುಕೊಂಡೇ ಇದ್ದ ವಿನಾಯಕನಿಗೆ ಇದೇ ಆಲೋಚನೆಯಲ್ಲಿ ವಾಣಿಯ ಆಯಿ ಮತ್ತೇನೋ ಹೇಳುತ್ತಿದ್ದರೂ ಕಿವಿಗೆ ಹೋಗಲಿಲ್ಲ. ಎಲ್ಲ ಮಾತುಗಳಿಗೂ ಹೂ.. ಹೂ ಎಂದು ಪೋನಿಟ್ಟ.
ಪೋನಿಟ್ಟ ಘಳಿಗೆಯಿಂದ ಹೊಸದೊಂದು ದ್ವಂದ್ವ ವಿನಾಯಕನನ್ನು ಕಾಡಹತ್ತಿತು. ತಾನೀಗ ವಾಣಿಗೆ ಪೋನ್ ಮಾಡಿದರೆ ಆಕೆ ಮಾತನಾಡುತ್ತಾಳೋ ಇಲ್ಲವೋ ಎಂಬ ಬಾವ ಕಾಡಿತು. ಒಂದು ವೇಳೆ ಮಾತನಾಡಿದರೂ ಏನು ಮಾತಾಡಬಹುದು..? ಪೋನ್ ಮಾಡಿದ ತನ್ನ ಮೇಲೆ ಬೈದು ಇನ್ನು ಮೇಲೆ ಹೀಗೆ ಮಾಡಬೇಡ ಎಂದರೆ..? ವಾಣಿಯ ಬದಲು ಅವಳ ಮನೆಯಲ್ಲಿ ಆಕೆಯ ಅತ್ತೆಯೋ, ಮಾವನೋ, ಗಂಡನೋ ಪೋನ್ ತೆಗೆದುಕೊಂಡರೆ ತಾನ್ಯಾರು ಎಂದು ಹೇಗೆ ಹೇಳುವುದು? ವಾಣಿಯ ಗೆಳೆಯ ತಾನು ಎಂದರೆ ಅವರು ಏನೆಂದುಕೊಂಡಾರು..? ತಾನು ಮಾಡಿದ ಒಂದೇ ಒಂದು ಪೋನು ವಾಣಿಯ ಬದುಕನ್ನು ಹಾಳು ಮಾಡಿದರೆ ಏನು ಮಾಡೋದು..? ಸುಮ್ಮನೆ ಮಾಡಿದೆ ಎನ್ನಲಾ..? ಬಿಟ್ಟು ಬಿಡದೆ ವಿನಾಯಕ ಆಲೋಚಿಸಿದ. ಕೊನೆಗೊಮ್ಮೆ ಪೋನ್ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದ.
`ಛೇ... ಅಷ್ಟು ಪ್ರೀತಿಯಿತ್ತಲ್ಲ.. ನಾನು ಪ್ರಪೋಸ್ ಮಾಡಿಬಿಡಬೇಕಿತ್ತು.. ಅವಳು ನನ್ನನ್ನು ತಿರಸ್ಕರಿಸಿದ್ದರೆ ಮನಸ್ಸಿಗೆ ಸಮಾಧಾನವಾದರೂ ಇರುತ್ತಿತ್ತು. ಆದರೆ ಈಗ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹಾಗೆಯೇ ಉಳಿದುಹೋಗಿಬಿಟ್ಟವು. ಅಲ್ಲಾ ಅವಳಾದರೂ ನನ್ನ ಬಳಿ ನೀನಂದ್ರೆ ನನಗಿಷ್ಟ ಕಣೋ ಎಂದು ಹೇಳಬಹುದಾಗಿತ್ತು..' ಎಂದು ಹಲುಬಿಕೊಂಡ ವಿನಾಯಕ `ಷಿಟ್..' ಎಂದು ಒಮ್ಮೆ ತಲೆಕೊಡವಿಕೊಂಡ.
***
ವಿನಾಯಕ ಈಗ ಹೇಗಿರಬಹುದು..? ತಾನೇನೋ ಮದುವೆಯಾಗಿ ಬಂದು ಬಿಟ್ಟೆ. ಆದರೆ ವಿನಾಯಕನ ಪಾಡು ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತಿಲ್ಲವಲ್ಲ ಎಂದು ವಾಣಿ ಆಲೋಚಿಸುವ ವೇಳೆಗೆ ಆಕೆಗೆ ತನ್ನ ಸಂಸಾರದ ಅನೇಕ ಮಜಲುಗಳನ್ನು ದಾಟಿದ್ದಳು. ಶಿರಸಿಯಲ್ಲಿ ಕೆಲಸ ಮಾಡುವ ಗಂಡ ಬೆಳಿಗ್ಗೆ ಶಿರಸಿಗೆ ಹೋದರೆ ಬರುವುದು ಕತ್ತಲಾದ ಮೇಲೆಯೆ. ಅಲ್ಲಿಯವರೆಗೂ ಮನೆಯಲ್ಲಿ ತಾನು ಸುಮ್ಮನೇ ಇರಬೇಕು. ಅತ್ತೆಯಿದ್ದಾಳೆ. ಮಾವನೂ ಇದ್ದಾನೆ. ಮನೆಯಲ್ಲಿ ಜಮೀನು ಸಾಕಷ್ಟಿರುವ ಕಾರಣ ಆಳು-ಕಾಳುಗಳೂ ತುಂಬಿದ್ದಾರೆ. ಬೆಳಿಗ್ಗೆ ಅಡಿಗೆ ಮಾಡಿ ಗಂಡನನ್ನು ಶಿರಸಿಗೆ ಕಳಿಸಿದ ನಂತರ ಒಂದೆರಡು ತಾಸುಗಳ ಕಾಲ ಪುರಸೊತ್ತು ಲಭಿಸುತ್ತದೆ. ಅಷ್ಟರಲ್ಲಿ ಅತ್ತೆಯವರು ಬಂದು `ಮಧ್ಯಾಹ್ನಕ್ಕೆ ಎಂತಾ ಆಸೆ ಮಾಡ್ತೆ..? ಬೆಂಡೆಕಾಯಿ ಹಶಿ ಅಂದ್ರೆ ಯಂಗೆ ಪಂಚಪ್ರಾಣ ಅದನ್ನೇ ಮಾಡ್ತ್ಯಾ..?' ಎಂದು ಕೇಳುತ್ತಾರೆ.
ಅತ್ತೆ ಹೀಗೆ ಹೇಳುವುದು ತನಗಿಷ್ಟ ಮಾಡು ಎಂಬ ಇನ್ ಡೈರೆಕ್ಟ್ ಆದ ಆರ್ಡರ್ ಎಂಬುದು ವಾಣಿಗೆ ಗೊತ್ತಾಗುತ್ತಿದ್ದರೂ ತನ್ನ ಮಾತಿಗೆ ಗಂಡನ ಮನೆಯಲ್ಲಿ ಬೆಲೆ ಇಲ್ಲ ಎಂಬುದನ್ನು ಮದುವೆಯಾಗಿ ಬಂದ ಹದಿನೈದೇ ದಿನಗಳಲ್ಲಿ ತಿಳಿದುಕೊಂಡಿದ್ದಾಳೆ. ತನ್ನ ಮಾತಿಗೊಂದೆ ಅಲ್ಲ ತನ್ನ ಭಾವನೆಗಳಿಗೂ ಕಿಮ್ಮತ್ತಿಲ್ಲ ಎಂಬುದು ನಂತರದ ದಿನಗಳಲ್ಲಿ ವಾಣಿಗೆ ಅರಿವಾಗಿದೆ. ಮದ್ಯಾಹ್ನದ ಊಟದ ಶಾಸ್ತ್ರ ಮಾಡಿ ಮುಗಿದ ನಂತರ ಟಿವಿಯಲ್ಲಿ ಯಾವುದೋ ಮೂರ್ನಾಲ್ಕು ಬಾಗಿಲುಗಳ ಧಾರಾವಾಹಿ ಕಳೆದಿರುತ್ತದೆ. ಅವನ್ನೆಲ್ಲ ನೋಡಿದ ಹಾಗೇ ಮಾಡುವ ವೇಳೆಗೆ ಇಳಿಸಂಜೆ ಆವರಿಸಿ ಮನಸ್ಸೆಲ್ಲ ಖಾಲಿ ಖಾಲಿಯಾದ ಅನುಭವ. ಮತ್ತೆ ಸಂಜೆಯ ಊಟಕ್ಕೆ ಮಾಡಬೇಕಲ್ಲ ಎನ್ನುವ ಆಲೋಚನೆ ವಾಣಿಯದ್ದು. ಮನೆಯಲ್ಲಿ ಅತ್ತೆ-ಮಾವ ಬೇಗನೆ ಊಟ ಮಾಡಿದರೂ ಗಂಡ ಬಂದ ನಂತರವೇ ಊಟ ಮಾಡಬೇಕು. ಇದು ಅತ್ತೆ ಹೊರಡಿಸಿದ ಫರ್ಮಾನು. ಆದ ಕಾರಣ ಎಷ್ಟೇ ಹಸಿವಾಗಿದ್ದರೂ ತಡರಾತ್ರಿ ಬರುವ ಗಂಡನಿಗಾಗಿ ಕಾಯಲೇ ಬೇಕು. ಆ ವೇಳೆಗೆ ಮತ್ತೆ ಟಿವಿಯ ಸಾನ್ನಿಧ್ಯ ಲಭ್ಯ. ತರಹೇವಾರಿ ಧಾರಾವಾಹಿಗಳು. ಹೆಚ್ಚಿನವುಗಳು ಅತ್ತೆಗೆ ಇಷ್ಟ. ಆದ್ದರಿಂದ ಅತ್ತೆಗೆ ಏನಿಷ್ಟವೋ ಅದನ್ನೇ ನೋಡಬೇಕು. ಬೋರಾದರೂ ಪ್ರಶ್ನೆ ಮಾಡುವಂತಿಲ್ಲ. ಚಾನಲ್ ಬದಲು ಮಾಡುವಂತಿಲ್ಲ.
ರಾತ್ರಿ ಬರುವ ಗಂಡನನ್ನು ಕಾಯುವ ವಾಣಿಗೆ ಗಂಡ ಬಂದ ನಂತರ ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಚೈತನ್ಯಯುತವಾಗಿದ್ದೇನೆ, ಖುಷಿಯಿಂದ ಇದ್ದೇನೆ ಎಂದು ತೋರಿಸಬೇಕು. ಮೊದ ಮೊದಲು ಈ ಭಾವಗಳು ನಾಟಕೀಯ ಎನ್ನಿಸಿದರೂ ಈಗ ಅದು ರೂಢಿಯಾಗಿದೆ. ಗಂಡ ಹೆಚ್ಚಿನ ದಿನ ಶಿರಸಿಯಲ್ಲೇ ಊಟ ಮಾಡಿ ಬರುತ್ತಾನೆ. ಅಂತಹ ದಿನಗಳಲ್ಲೆಲ್ಲ ತಾನೊಬ್ಬನೇ ಮೌನದಿಂದ ಊಟಮಾಡಿ ಎದ್ದು ಬರುವಾಗ ಆಕೆಗೆ ಜೊತೆಯಾಗುವುದು ನಿಟ್ಟುಸಿರು. ಊಟ ಮುಗಿಸಿ ಮನೆವಾರ್ತೆಯನ್ನು ಮುಗಿಸುವ ವೇಳೆಗೆ ಗಂಡ ಹಾಸಿಗೆಗೆ ಕರೆದಿರುತ್ತಾನೆ. ಆತನನ್ನು ರಮಿಸಿ, ಮನದಣಿಯೆ ಖುಷಿ ಪಡುವಲ್ಲಿಗೆ ವಾಣಿಯ ದಿನವೊಂದು ಸುಮ್ಮನೆ ಕಳೆದುಹೋಗುತ್ತದೆ.
ಇಂತಹ ಏಕತಾನತೆಯ ದಿನಗಳಲ್ಲೇ ಒಮ್ಮೆ ವಾಣಿಗೆ ನೆನಪಾದದ್ದು ವಿನಾಯಕ. ತಾನೇ ಮುಂದಾಗಿ ವಿನಾಯಕನಿಗೆ ಪ್ರಪೋಸ್ ಮಾಡಿ ಬಿಡಬೇಕಿತ್ತು ಎನ್ನಿಸಿದ್ದೂ ಸುಳ್ಳಲ್ಲ. ತಾನು ಒಂಚೂರು ಧೈರ್ಯ ಮಾಡಿ ಏನಾದರಾಗಲಿ ಎಂದು ವಿನಾಯಕನಿಗೆ ಪ್ರಪೋಸ್ ಮಾಡಿಬಿಟ್ಟಿದ್ದರೆ ಬದುಕು ಹೀಗೆ ಖಂಡಿತ ಇರುತ್ತಿರಲಿಲ್ಲ ಎಂದುಕೊಮಡಳು. ಯಾಕೋ ತನ್ನ ಮನಸ್ಸಿನ ಭಾವನೆಗಳನ್ನು ವಿನಾಯಕನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಳು ವಾಣಿ. ವಿನಾಯಕನಿಗೆ ಪೋನ್ ಮಾಡಿಬಿಡಲಾ ಎಂದುಕೊಂಡಳು. ಆದರೆ ಪೋನ್ ಮಾಡಲು ಧೈರ್ಯ ಸಾಕಾಗಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈಗ ತಾನು ಪೋನ್ ಮಾಡುವುದು ಅಷ್ಟು ಸಮಂಜಸವಾಗಲಾರದು ಎಂದುಕೊಂಡಳು.
`ಹಾಳಾದವನು.. ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಆತನಿಗೂ ಖಂಡಿತ ನನ್ನ ಮೇಲೆ ಮನಸ್ಸಿದ್ದೇ ಇರುತ್ತದೆ. ಪ್ರಪೋಸ್ ಮಾಡಲಿಕ್ಕೇನಾಗಿತ್ತು ಧಾಡಿ..? ನನಗೆ ಈ ಜಂಜಡಗಳು ಇರುತ್ತಿರಲಿಲ್ಲವೇನೋ. ಬೇರೆ ತೆರನಾದ ಬದುಕನ್ನು ಬಾಳಬಹುದಿತ್ತೇನೋ. ನಾನು-ಅವನು ಇಬ್ಬರೇ ಇರಬಹುದಾಗಿತ್ತೇನೋ..' ಎಂದೆಲ್ಲಾ ಎಂದುಕೊಂಡವಳಿಗೆ ವಿನಾಯಕನಾದರೂ ಒಮ್ಮೆ ಪೋನ್ ಮಾಡಬಾರದೇ ಅನ್ನಿಸಿತ್ತು. ಇನ್ನು ಪೋನ್ ಮಾಡಿ ಏನು ಪ್ರಯೋಜನ ಎಂದುಕೊಂಡಳು.
***
ಶಿರಸಿ ಜಾತ್ರೆಯ ನೆಪದಿಂದ ವಿನಾಯಕ ಬೆಂಗಳೂರಿನಿಂದ ಊರಿಗೆ ಮರಳಿದ್ದ. ವೀಕೆಂಡಿನಲ್ಲಿ ಜಾತ್ರೆ ತಿರುಗಲು ದೋಸ್ತರು ಕರೆದಿದ್ದರು. ಹೋಗಿದ್ದ. ಜಾತ್ರೆಯೆಂಬ ಜನಜಂಗುಳಿ ವಿನಾಯಕನನ್ನು ಬೇರೆಯ ಲೋಕಕ್ಕೆ ಒಯ್ದಿತ್ತು. ಜಾತ್ರೆಯಲ್ಲಿ ಮಾರಿಕಾಂಬಾ ದೇವಿಯ ದರ್ಶನದ ನೆಪದಲ್ಲಿ ಪೇಟೆ ಸುತ್ತಲು ದೋಸ್ತರ ಜೊತೆಗೆ ಹೊರಟಿದ್ದ ವಿನಾಯಕ. ಗಿಜುಗುಡುವ ಜನಸಾಗರದಲ್ಲಿ ಯಾರ್ಯಾರದ್ದೋ ಮೈಗೆ ಮೈಯನ್ನು ತಾಗಿಸುತ್ತ, ಒಳಗೊಳಗೆ ಖುಷಿ ಪಡುತ್ತ ವಿನಾಯಕ ಹಾಗೂ ದೋಸ್ತರ ದಂಡು ಹೊರಟಿದ್ದು. ಕೋಟೆಕೆರೆಯ ಸರ್ಕಸ್ಸು, ಟೊರಟೊರ, ಜಾಯಿಂಟ್ ವೀಲ್, ಕ್ರೊಕೋಡೈಲ್, ದೋಣಿ ಸೇರಿದಂತೆ ತರಹೇವಾರಿ ಮನರಂಜನೆಯನ್ನು ಪಡೆದುಕೊಂಡು ವಾಪಾಸಾಗುತ್ತಿದ್ದಾಗ ವಿನಾಯಕನ ಕಣ್ಣಿಗೆ ವಾಣಿ ಬಿದ್ದಳು. ವಿನಾಯಕ ಬೇಕಂತಲೇ ಕಣ್ತಪ್ಪಿಸಲು ಯತ್ನಿಸಿದ. ಅದೇ ಸಮಯಕ್ಕೆ ವಾಣಿಯೂ ವಿನಾಯಕನತ್ತ ನೋಡಿದಳು. ಒಮ್ಮೆ ಇಬ್ಬರಲ್ಲೂ ಹಳೆಯ ದಿನಗಳು ನೆನಪಾದವು.
ದೋಸ್ತರ ಜೊತೆಗೆ ಬಂದಿದ್ದ ವಿನಾಯಕನನ್ನು ವಾಣಿ ದೂರದಿಂದಲೇ ಅಳೆದಳು. ವಿನಾಯಕ ಆಕೆಯನ್ನೂ ಆಕೆಯ ಪಕ್ಕದಲ್ಲಿ ಬರುತ್ತಿದ್ದ ಗಂಡನನ್ನೂ ನೋಡಿದಂತೆ ಮಾಡಿ ಮುಖ ತಿರುಗಿಸಲು ಯತ್ನಿಸಿದ. ದೋಸ್ತರ ಬಳಿ ಬೇರೆ ಕಡೆಗೆ ಹೋಗೋಣ ಎಂದು ಹೇಳಿ ಒತ್ತಾಯ ಮಾಡಲು ಯತ್ನಿಸಿದ. ಆದರೆ ದೋಸ್ತರು ವಾಣಿ ಕಂಡ ದಿಕ್ಕಿನತ್ತಲೇ ಸಾಗಿದರು. ಕೊನೆಗೊಮ್ಮೆ ವಾಣಿ-ವಿನಾಯಕ ಎದುರಾಬದರಾದರು.
ಅವಳೇ ಮಾತಾಡಿಸಲಿ ಎಂದುಕೊಂಡ ವಿನಾಯಕ. ಮಾತಾಡ್ಸೋ ಮಾರಾಯಾ ಎಂದುಕೊಂಡಳು. ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿಸುವ ಲಕ್ಷಣಗಳಿರಲಿಲ್ಲ. ಕೊನೆಗೆ ವಾಣಿಯೇ `ಅರೇ ವಿನಾಯ್ಕಾ... ಅರಾಮನಾ..?' ಎಂದಳು.
ಮುಗುಳ್ನಕ್ಕ ವಿನಾಯಕ `ಹೇಯ್ ವಾಣಿ.. ಎಂತಾ ಸರ್ ಪ್ರೈಸ್ ಮಾರಾಯ್ತಿ.. ಫುಲ್ ಬಿಂದಾಸ್.. ನೀ ಹೆಂಗಿದ್ದೆ..?' ಎಂದು ಕೇಳುತ್ತಿದ್ದಂತೆ ಇತ್ತ ವಿನಾಯಕನ ದೋಸ್ತರು ಹಾಗೂ ಅತ್ತ ವಾಣಿಯ ಗಂಡ ಇವರಿಬ್ಬರನ್ನೂ ಬೆಕ್ಕಸ ಬೆರಗಿನಿಂದ ನೋಡತೊಡಗಿದ್ದರು.
`ಇಂವ ವಿನಾಯ್ಕ ಹೇಳಿ. ನನ್ನ ಕ್ಲಾಸಿನವನೇಯಾ.. ಡಿಗ್ರಿಲಿ ಓದಕಿದ್ರೆ ಬರ್ತಿದ್ದ.. ನೆಂಟರಾಗವು..' ಗಂಡನಿಗೆ ಪರಿಚಯಿಸಿದಳು ವಾಣಿ. ಹಲೋ ಎಂದದ್ದು ಆಕೆಯ ಗಂಡ. ಅದಕ್ಕೆ ಪ್ರತಿಯಾಗಿ ತಾನೂ ತನ್ನ ದೋಸ್ತರನ್ನು ಪರಿಚಯ ಮಾಡಿಸಿದ ವಿನಾಯಕ.
ಮುಂದಿನ ಮಾತುಗಳಲ್ಲಿ ವಾಣಿ ವಿನಾಯಕನ ಕೆಲಸ, ವೃತ್ತಿ, ಬೆಂಗಳೂರಿನಿಂದ ಬಂದಿದ್ದು, ಮನೆಯವರ ಬಗ್ಗೆಯೆಲ್ಲಾ ವಿಚಾರಿಸಿದಳು. ವಿನಾಯಕನೂ ಪ್ರತಿಯಾಗಿ ಉತ್ತರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ.
`ಅಲ್ದಾ ವಿನಾಯಕಾ.. ರಾಶಿ ಬಡಿ ಬಿದ್ದೋಜ್ಯಲಾ.. ಎಂತಕ್ಕಾ.. ಸರಿಯಾಗಿ ಊಟ-ತಿಂಡಿ ಮಾಡ್ತಾ ಇದ್ಯಾ ಇಲ್ಯಾ..?' ಎಂದು ವಾಣಿ ಕೇಳುವ ವೇಳೆಗೆ ವಿನಾಯಕನ ಕಣ್ಣಲ್ಲಿ ನೀರು ಬರುವುದೊಂದೇ ಬಾಕಿ.
ಕೀಟಲೆಯ ಸ್ವಭಾವದ ವಿನಾಯಕನ ದೋಸ್ತರಲ್ಲೊಬ್ಬ `ಅದೆಂತಾ ಕೇಳ್ತೀರಿ.. ಅಂವ ಡಿಗ್ರಿಯಲ್ಲಿ ಯಾರನ್ನೋ ಲವ್ ಮಾಡಿದ್ನಡಾ.. ಕೊನೆಗೂ ಹೇಳ್ಕಂಬಲೆ ಆಜಿಲ್ಯಡಾ.. ಅದೇ ಮನಸ್ಸಿನಲ್ಲಿ ಇದ್ದಾ.. ಲವ್ ಫೇಲ್ಯೂರ್ ಆದವರ ಹಣೇಬರಹವೇ ಇಷ್ಟು ನೋಡಿ..' ಎಂದಾಗ ವಾಣಿಯ ಗಂಡನಾದಿಯಾಗಿ ಎಲ್ಲರೂ ನಕ್ಕರು. ವಾಣಿ ಹಾಗೂ ವಿನಾಯಕ ಇಬ್ಬರೂ ನಗಲಿಲ್ಲ. ಇಬ್ಬರ ಕಣ್ಣಲ್ಲೂ ನೀರು ಇಳಿಯಲು ತವಕಿಸುತ್ತಿತ್ತು.
ಅಷ್ಟರಲ್ಲಿ ದೋಸ್ತರು ವಿನಾಯಕನನ್ನು ಬೇರೆಡೆಗೆ ಕರೆದೊಯ್ದರು. ವಾಣಿ ಹಾಗೂ ಆಕೆಯ ಗಂಡ ಮತ್ತೆಲ್ಲೋ ಜಾತ್ರೆಯಲ್ಲಿ ಕಳೆದು ಹೋದರು. ಎಂದೋ ತಿಳಿಯಬೇಕಿದ್ದ ವಿಷಯ ಈ ರೂಪದಲ್ಲಿ ತಿಳಿಯುತ್ತದೆ ಎಂದು ಇಬ್ಬರೂ ಅಂದುಕೊಂಡಿರಲಿಲ್ಲ. ಇಬ್ಬರ ಮನಸ್ಸೂ ಭಾವನೆಗಳ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿತ್ತು. ಜಾತ್ರೆಯ ಜನಸಮುದ್ರದಲ್ಲಿ ಕಣ್ಣೀರು ಉರುಳಿದ್ದು ಯಾರಿಗೂ ಕಾಣಲಿಲ್ಲ.