Thursday, February 20, 2014

ನಗಲೊಂದಿಷ್ಟು ಹನಿಗಳು

ನಗೋಣ ಬನ್ನಿ
*ಅಡಿಕೆ-ಕುಣಿಕೆ
ಹಿಂದೊಮ್ಮೆ ತರುತ್ತಿತ್ತು ಅಡಿಕೆ
ಹೊನ್ನಿನ ಕುಣಿಕೆ
ಆದರೆ ಈಗ ತರತೊಡಗಿದೆ
ನೇಣಿನ ಕುಣಿಕೆ ||

*ಸ್ವಯಂWARಅ
ಸ್ವಯಂವರ  ಎಂದರೆ
ಬೇರೇನೂ ಅಲ್ಲ
ತಾನೇ ತಾನಾಗಿ WARನ್ನು
ಹುಡುಕಿಕೊಳ್ಳುವುದು ಎಂದರ್ಥ ||

*ಹಸ್ತಾಂತರ
ಹಸ್ತಾಂತರ, ಅಧಿಕಾರ
ಹಸ್ತ-ಅಂತರ
ಎಂಬ ಅವಾಂತರದಲ್ಲಿ
ದೇವೇಗೌಡರಿಗಿಂತ ಹೆಚ್ಚು
ನಡುಗಿದ್ದು ಕುಮಾರ ||

* ಸೂರು-ಚೂರು
ನಾನಿನ್ನ ಬಯಸಿದಾಗ
ಹೃದಯವಾಗಿತ್ತು
ಪ್ರೀತಿಯ ಸೂರು|
ಆದರೆ ನೀನೀಗ
ಬಿಟ್ಟುಹೋದಾಗ
ಅದಾಗಿತ್ತು ಚೂರು ಚೂರು ||

*ವ್ಯತ್ಯಾಸ
ಆನೆ ಇದ್ದರೂ ಸಾವಿರ
ಸತ್ತರೂ ಸಾವಿರ|
ಆದರೆ ಮಾನವ?
ಇದ್ದರೂ ಸಾಲ
ಸತ್ತರೂ ಸಾಲ ||

*ಹೊಸ ಗಾದೆ
ಈಚಲ ಮರದಡಿಗೆ
ಕುಳಿತು ಮಜ್ಜಿಗೆ ಕುಡಿದಂತೆ |
ಈ ಗಾದೆ ಹಳೆಯದಾಯ್ತಂತೆ.
ನಯಾ ಜಮಾನಾಕ್ಕೆ
ಹೊಸತು ಬೇಕಂತೆ
ಅದಕ್ಕೇ ಬಂತ್ರೀ ಈ ಗಾದೆ
`ಬಾರಿಗೆ ಹೋಗಿ
ಕೂಲ್ ಡ್ರಿಂಕ್ಸ್, ನಿಂಬೆ ಪಾನಕ
ಕುಡಿದಂತೆ' ||

*ಟೈಟಲ್ಲು
ಅವನು
ಟೈಟಾದಾಗಲೆಲ್ಲ
ಟೈಟಲ್ಲುಗಳು
ಹುಟ್ಟಿಕೊಳ್ಳುತ್ತವೆ ||

*ನನ್ನ ಕವನ
ನನ್ನ ಕವನಗಳು
ಹಾಗೆಯೇ
ಕಾಲಿ, ಪೀಲಿ
ಪೋಲಿ ||

(ನಗಲಿಕ್ಕೊಂದಷ್ಟು ಹನಿಗಳು.. ಸುಮ್ಮನೆ ನಕ್ಕುಬಿಡಿ.. ಬೇಜಾರಾದಾಗ ಓದಿ ರಿಲ್ಯಾಕ್ಸ್ ಆಗಿ..)

Wednesday, February 19, 2014

ಇದ್ದಡ

ನಾನು-ನೀನು
ಒಂದು ನದಿಯ
ಇಕ್ಕೆಲದ ದಡದ ಪಯಣಿಗರು
ನಾನಿತ್ತ ನೀನತ್ತ...

ಆಗಾಗ ನಿನ್ನ ಮುಂಗುರಳ
ನಡುವಿಂದ ಸುಳಿದು ಬರುವ
ಗಾಳಿ ನನ್ನ ಮನಸ್ಸಿಗೆ ತಾಕಿ
ಹಕ್ಕಿಯಂತೆ ರೆಕ್ಕೆಪುಕ್ಕ
ನಾನು ಬಾನಾಡಿ

ಹೆಚ್ಚಿನ ಕಾಲ ನಿನ್ನ ಬಯಸಿ
ಸನಿಹಕ್ಕೆ ಬರಲು ಕಾತರಿಸಿ
ಎಷ್ಟೆಲ್ಲ ದಿಟ್ಟಿಸಿದರೂ
ನದಿಯ ತಡೆಗೋಡೆ
ಭ್ರಮ ನಿರಸನ ನಿಟ್ಟುಸಿರು

ನಿನಗೂ ನನ್ನೆಡೆಗೆ ಕುಡಿನೋಟ.
ಸೇರುವ ಕಾತರ-ಬಯಕೆ
ನದಿಯ ದೆಸೆಯಿಂದ ದೂರ ದೂರ..
ಒಂಟಿ ಪಯಣ

ಆಗಾಗ ಸಿಗುವ ದ್ವೀಪಗಳು
ನಮ್ಮ ಕನಸಿಗೆ ಮತ್ತೆ ಚಾಲನೆ
ನದಿ ದಾಟೋಣ್ವಾ..?
ಆಗುತ್ತೋ ಇಲ್ವೋ..?
ಭಯ, ದುಗುಡ.. ನದಿ ಆಳವಿದ್ದರೆ
ಮುಳುಗಿ ಹೋದರೆ ಎಂಬ ಶಂಕೆ

ಮತ್ತಷ್ಟು ದೂರ ಸಾಗಿದರೆ ನದಿಯ
ನಡು ನಡುವಲ್ಲೆಲ್ಲ ಬಂಡೆಗಳು
ಗಟ್ಟಿ ಗಟ್ಟಿ ಜಗಜಟ್ಟಿಗಳು
ಇಲ್ಲೂ ದಾಟುವಾ ಎಂದರೆ
ಮತ್ತದೇ ಭಯ..
ನೀನಿಲ್ಲ ನಾನಿಲ್ಲ..
ನೀನಲ್ಲಿ ನಾನಲ್ಲಿ
ಮನಸು ಇದ್ದಡ.. ಇದ್ದಡ

ಕೊನೆಗೂ ಸಿಕ್ಕಿದೆ..
ಯಾರೋ ಪುಣ್ಯಾತ್ಮ ಕಟ್ಟಿದ ಸೇತುವೆ
ನನಗೂ ನಿನಗೂ ಬಾಳುವೆ..
ನೀನೂ ದಾಟಿದೆ..
ನಾನೂ ದಾಟಿದೆ..

ಮಾತಿನ ಮೊದಲು ಕೇಳಿದೆ..
ಮನಸಿದೆಯಾ..? ತಲೆ ತಗ್ಗಿಸಿದಳು..
ನಿನಗೂ ನನಗೂ
ಮನಸು ಇದ್ದಡ.. ಇದ್ದಡ..

**
(ಈ ಕವಿತೆ ಬರೆದಿದ್ದು 19-02-2014ರಂದು ಶಿರಸಿಯಲ್ಲಿ)

ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದ ಪರಿ..

(ಗೋಜಲು ಬದುಕಿಗೊಂದು ಸಾಂದರ್ಭಿಕ ಚಿತ್ರ)
              ಅವನ ಬದುಕೇ ಒಂದು ದೊಡ್ಡ ಟ್ರಾಜಿಡಿ ಎಂದರೂ ತಪ್ಪಾಗಲಿಕ್ಕಿಲ್ಲ. ಅವನು ಏನೆಲ್ಲಾ ಮಾಡ್ಬೇಕು ಅಂದ್ಕೊಂಡು ಪ್ರತಿ ಕೆಲಸಕ್ಕೆ ಕೈ ಹಾಕಿದ್ರೂ ಅದೆಲ್ಲಾ ಫೇಲ್ ಆಗಿಬಿಡುತ್ತೆ. ಆತ ಮತ್ಯಾರು ಅಲ್ಲ. ನನಗೆ ಹೈಸ್ಕೂಲಿನಲ್ಲಿ ಸಿಕ್ಕ  ಒಬ್ಬ  ಆತ್ಮೀಯ ಗೆಳೆಯ. ದೀಪಕ.  ಆತ ಮನಸ್ಸಿನಲ್ಲಿ ಏನೇನೋ ಇಟ್ಗೊಂಡಿರ್ತಾನಾದ್ರೂ ತಾನು ಅದನ್ನು ತಲುಪಲು ಆಗೋದೇ ಇಲ್ಲ.
              ಮೂಲತಃ ಅವನೊಬ್ಬ ಮುಂಗೋಪಿ. ಪೂರ್ ಫೆಲ್ಲೋ. ಎಂಟರಿಂದ ಹತ್ತನೇ ಕ್ಲಾಸಿನ ವರೆಗೆ ಆತ ನನಗೆ ಸಹಪಾಠಿಯಾಗಿ ಸಿಕ್ಕಿದಾಗಲೇ ಆತ ಹೇಗೆ, ಏನು, ಎತ್ತ  ಎಂಬುದು ನನಗೆ ಸಂಪೂರ್ಣ ಪರಿಚಯವಾಗಿದ್ದು. ಒಬ್ಬ ವ್ಯಕ್ತಿಯನ್ನು ನಂಬಿದ  ಎಂದಾದರೆ ಮುಗೀತು. ತನ್ನೊಳಗಿನ ಸಕಲ ಗುಟ್ಟನ್ನೂ ಆತನ ಬಳಿ ಒದರಿಬಿಡುವ ಗುಣವನ್ನು ದೀಪಕ ಹೊಂದಿದ್ದ.
              ನಾನು ಎಂಟನೇ ತರಗತಿಯಲ್ಲಿ ಓದ್ಲಿಕ್ಕೆ ಅಂತ ಸಾಗರದ ಕಾನ್ಲೆ ಹೈಸ್ಕೂಲನ್ನು ಸೇರಿದ ದಿನವೇ ಆತ ನನ್ನ ಪ್ರಾಣಮಿತ್ರನಾಗಿಬಿಟ್ಟಿದ್ದ. ಅವನಿಗೆ ನನ್ನ ಗೆಳೆತನ ಮಾಡಲೇಬೇಕೆಂಬ ದರ್ದೂ ಇತ್ತೆಂದು ಕಾಣುತ್ತದೆ. ಏಕೆಂದರೆ ಹೈಸ್ಕೂಲಿನಲ್ಲಿ ಆಗ ಇದ್ದ ಬ್ರಾಹ್ಮಣ ಹುಡುಗರೆಂದರೆ ಮೂರೂ ನಾಲ್ಕೋ ಅಷ್ಟೆ. ಅವರಲ್ಲಿ ನಾನೂ ಒಬ್ಬ-ಅವನೂ ಒಬ್ಬ.  ಹುಡುಗಿಯರಲ್ಲೂ ಒಂದಿಬ್ಬರು ಇದ್ದರು. ಜೊತೆಗೆ ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾಸ್ತರ್ರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾನು ಸರಿಯುತ್ತರಗಳನ್ನು ಕೊಟ್ಟು ಕೊಟ್ಟು ಸ್ವಲ್ಪ ಬುದ್ಧಿವಂತ ಹುಡುಗ ಎನ್ನುವ ಹವಾ ಸೃಷ್ಟಿ ಮಾಡಿಕೊಂಡಿದ್ದೆ. ಓದಿನಲ್ಲಿ ಹಿಂದಿದ್ದರೂ ಮಾತಿನಲ್ಲಿ ಜೋರಾಗಿದ್ದ  ಆತ ಈ ಕಾರಣದಿಂದಲೇ ನನ್ನ ಜೊತೆಗೆ ಬಂದು ಮಿತೃತ್ವ ಪಡೆದುಕೊಂಡನೇನೋ ಅನ್ನಿಸುತ್ತದೆ.
               ಪ್ರತಿಸಾರಿ ಹೈಸ್ಕೂಲು ಚುನಾವಣೆ ಬಂದರೂ ಆತ ನಿಲ್ಲುತ್ತಿದ್ದ. ನಿಂತು ಸೋಲುತ್ತಿದ್ದ. ಚುನಾವಣೆಗೆ ನಿಂತಾಗಲೆಲ್ಲ ನೋಡಬೇಕು ದೀಪಕನ ಅಬ್ಬರ. ಥೇಟು ರಾಜಕಾರಣಿಗಳಂತೆ ಉದ್ದದ್ದ ಭಾಷಣವನ್ನು ಬಿಗಿಯುತ್ತಿದ್ದ. ಇತರ ಹುಡುಗರು ಆತನ ಮಾತನ್ನು ಭಕ್ತಿಯಿಂದ ಕೇಳುತ್ತಿದ್ದರು. ಪ್ರತಿ ಸಾರಿ ಚುನಾವಣೆಗಳಲ್ಲಿ ನಡೆಯುತ್ತಿದ್ದಂತೆ ಭಾಷಣ ಕೇಳಿದ ನಂತರ ಆತನನ್ನು ಮರೆತುಬಿಟ್ಟು ಬೇರೆಯವರಿಗೆ ಮತ ಹಾಕಿ ಬಿಡುತ್ತಿದ್ದರು.
               ಹೀಗಿದ್ದ ದೀಪಕನಿಗೆ ಮಾಸ್ಟ್ರಿಂದ ಪ್ರತಿ ದಿನ ಹೊಡೆತ ಬಿದ್ದೇ ಬೀಳುತ್ತಿತ್ತು. ನಾವು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ರಾಮಪ್ಪ  ಉರುಫ್ ಆರ್ಬಿಎನ್ ಎಂಬ ಮಾಸ್ಟ್ರರೊಬ್ಬರಿದ್ದರು.  ಹೊಡೆತಕ್ಕೆ ಹೆಸರುವಾಸಿ ಮಾಸ್ಟರ್ ಅವರು. ಅವರಂತೂ ಪ್ರತಿದಿನ ಇವನ ಬಳಿಯೇ ಹೊಡೆತದ ಕೋಲು ತರಲು ಹೇಳುತ್ತಿದ್ದರು. ಅವರು ಹೇಳಿದಾಗಲೆಲ್ಲಾ ಖುಷಿಯಿಂದ ಗಾಳಿ ಶೆಳಕೆಯನ್ನೋ, ಅಕೇಸಿಯಾ ಕೋಲನ್ನೋ ಮುರಿದು ತರುತ್ತಿದ್ದವನಿಗೆ ಸಿಗುತ್ತಿದ್ದುದು ಬೋನಸ್ಸು ಹಾಗೂ ಬೋಣಿ ಎಂಬಂತೆ ಅದೇ ಕೋಲಿನಿಂದ ಹೊಡೆತ. ಪಿಬಿಎನ್ ಹೊಡೆತಕ್ಕೆ ಪ್ರತಿಯಾಗಿ `ಅಯ್ಯಪ್ಪಾ... ಸಾ.. ನಾ ಸತ್ತೆ ಸತ್ತೆ..' ಎಂದು ಕೂಗುತ್ತಿದ್ದ ದೀಪಕನ ಧ್ವನಿಯಿನ್ನೂ ನನಗೆ ಹಸಿ ಹಸಿಯಾಗಿಯೇ ಇದೆ.
                ನಾಟಕಗಳಲ್ಲಿ ನಟನೆ ಮಾಡುವುದು ದೀಪಕನ ಹವ್ಯಾಸಗಳಲ್ಲಿ ಪ್ರಮುಖವಾದುದು. ಜೊತೆಗೆ ಆತ ಹಲವಾರು ಡ್ಯಾನ್ಸುಗಳಿಗೂ ಸ್ಟೆಪ್ ಹಾಕಿದ್ದಾನೆ. ನನ್ನ ಹಾಗೂ ಅವನ ನಡುವೆ ಅನೇಕ ಸಾರಿ ತಪ್ಪು ತಿಳುವಳಿಕೆ, ಇತರೆ ದೋಸ್ತರ ಫಿಟ್ಟಿಂಗ್ ಇತ್ಯಾದಿ ಕಾರಣಗಳಿಂದಾಗಿ ಮನಸ್ತಾಪ ಬಂದು ಮಾತು ಬಿಟ್ಟಿದ್ದೂ ಇದ್ದವು. ಕಾರಣಗಳು ಏನೇನಿದ್ದವೋ, ಏನೋ.. ಕೆಲವು ಕಾರಣಗಳು ಸಿಲ್ಲಿಯಾಗಿಯೂ ಇದ್ದವೆನ್ನಿ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ನನಗೂ ಅವನಿಗೂ ಜಗಳಗಳಾಗುತ್ತಿದ್ದುದು ಮಾಮೂಲು. ಪರಿಣಾಮವಾಗಿ ಆತ ನನ್ನ ಜೊತೆ ಅಥವಾ ನಾನು ಅವನ ಜೊತೆ ಮಾತನ್ನು ಬಿಡುತ್ತಿದ್ದೆ. ಇದರ ಪರಿಣಾಮ ಎಂಬಂತೆ ಆತ ಚುನಾವಣೆಯಲ್ಲಿ ಸೋಲುತ್ತಿದ್ದ. ಯಾಕಂದರೆ ಆ ದಿನಗಳಲ್ಲಿ ನಾನು ಚನ್ನಾಗಿ ಓದುತ್ತೇನೆ ಎನ್ನುವ ಹವಾ ಇದ್ದ ಕಾರಣ ನಾಲ್ಕೈದು ಮಿತ್ರರ ಗುಂಪು ಇರುತ್ತಿತ್ತು. ಅವರೆಲ್ಲ ನಾನು ಹೇಳಿದಂತೆ ಮಾಡುತ್ತಿದ್ದರು ಎನ್ನುವುದು ಆಗ ನನಗಿದ್ದ ಕೋಡಾಗಿತ್ತು. ನಾನು ಹೇಳಿದವರಿಗೆ ಓಟು ಹಾಕುತ್ತಿದ್ದರು. ನಾನು ಬೇಡ  ಎಂದರೆ ಓಟು ಹಾಕುತ್ತಿರಲಿಲ್ಲ. ಹೀಗೆ ದೀಪಕನೂ ಸೋತು ಹೋಗುತ್ತಿದ್ದ. ಆದರೆ ಒಂದು ಮಾತ್ರ ವಿಚಿತ್ರ ಹೇಳಲೇ ಬೇಕು. ಆತ ಹೀಗೆ ಮಾತು ಬಿಟ್ಟಾಗ ನಡೆದ ಚುನಾವಣೆಯಲ್ಲಿ ನಾನು ನನ್ನ ಮಿತ್ರರ ಬಳಿ ಅವನಿಗೆ ಓಟು ಹಾಕಬೇಡಿ ಎಂದು ಹೇಳಿ ಇತರರಿಗೆ ಮತ ಹಾಕಿಸಿದ್ದರೂ ನಾನು ಮಾತ್ರ ದೀಪಕನಿಗೆ ಹಾಕಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದೆ. ನನ್ನೊಬ್ಬನ ಓಟು ಬಿದ್ದರೆ ಆತ ಗೆಲ್ಲುತ್ತಾನೆಯೇ ಬಿಡಿ.. ಈಗ ಅದನ್ನೆಲ್ಲ ನೆನಸಿಕೊಂಡ್ರೆ ಮನದ ತುಂಬಾ ಬೇಜಾರಿನ ಮೂಟೆ ತುಂಬಿಬಿಡುತ್ತದೆ.
                 ಎಲ್ಲಕ್ಕಿಂತ ಮುಖ್ಯವಾಗಿ ನಾನು, ದೀಪಕ ಹಾಗೂ ಹೈಸ್ಕೂಲಿನ ಇನ್ನೊಬ್ಬ ಗೆಳೆಯ ಸುರೇಂದ್ರ ಸೇರಿಕೊಂಡು ಮಾಡದ ಪುಂಡರಪೂಟೇ ಇಲ್ಲ  ಎನ್ನಬಹುದು. ಹೈಸ್ಕೂಲಿನ ಮಾಮೂಲಿ ಹೊಡೆದಾಟ, ಚರ್ಚೆ, ವಾದಗಳಲ್ಲೆಲ್ಲಾ ನಮ್ಮದು ಒಂದು ಕೈ ಜೋರೇ ಇರುತ್ತಿತ್ತು. ದೀಪಕನಂತೂ ಕೆಲವು ಸಾರಿ ಮಾಸ್ಟರುಗಳ ಜೊತೆಗೆ ವಾದಕ್ಕೆ ಇಳಿದಿದ್ದೂ ಇದೆ.
                 ಇನ್ನು ಪ್ರತಿ ಪರೀಕ್ಷೆಯಲ್ಲೂ ನಾನು-ದೀಪಕ ಹಾಗೂ ಸುರೇಂದ್ರ ಅವರ ಪಾಲಿಗೆ ದೇವರಂತಾಗಿಬಿಡುತ್ತಿದ್ದೆ. ಮಾಸ್ಟ್ರುಗಳು ಹೇಗೇ ಕೂರಿಸಲಿ ಇವರಿಬ್ಬರೂ ಅದು ಹ್ಯಾಗೋ ನನ್ನ ಅಕ್ಕಪಕ್ಕದ, ಹತ್ತಿರದಲ್ಲಿಯೇ ಕುಳಿತುಬಿಡುತ್ತಿದ್ದರು. ಅವರಿಗೆ ನಾನು ಉತ್ತರ ಹೇಳಿಕೊಡುತ್ತಿದ್ದೆ. ಪಾಸಾಗುತ್ತಿದ್ದರು. ಕೊನೆ ಕೊನೆಗೆ ನಮ್ಮ ಟೀಚರ್ರುಗಳಿಗೆ ಈ ಕುರಿತು ತಿಳಿದು ನಮ್ಮನ್ನು ಬೇರೆ ಕಡೆಗೆ ಕುಳ್ಳಿರಿಸಿದ್ದೂ ಇದೆ ಎನ್ನಿ.
                 ದೀಪಕ ಕುರಿತು ಇನ್ನೊಂದು ವಿಶೇಷ ಸಂಗತಿ ಖಂಡಿತ ಹೇಳಲೇಬೇಕು. ಅದೆಂದರೆ ಆತನ ಪ್ರೇಮಪುರಾಣ. ಆತ ನಮ್ಮದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಬಹಳ ಇಷ್ಟಪಡುತ್ತಿದ್ದ. ಅವನಿ ಅಥವಾ ಅನಿತಾ ಎಂದೇನೋ ಇರಬೇಕು ಅವಳ ಹೆಸರು.(ಕರೇಯೋಕೆ ಒಂದು ಹೆಸರು ಬೇಕಾದ ಕಾರಣ ಹಾಗೂ ಹೆಸರು ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕಾಗಿ ಅವಳ ಹೆಸರನ್ನು ಅನಿತಾ ಎಂದೇ ಮುಂದೆ ಕರೆಯುತ್ತೇನೆ. ) ಅದೆಷ್ಟೋ ಸಾರಿ ದೀಪಕ್ ನನ್ನ ಬಳಿ ಬಂದು `ಲೇ ವಿನೂ.. ನನ್ನ ಲವ್ ಸಕ್ಸಸ್ ಆಗ್ತದೇನಲೇ..' ಎಂದು ಕೇಳುತ್ತಿದ್ದವನಿಗೆ ಏನೇನೋ ಉತ್ತರಗಳನ್ನು ಕೊಟ್ಟು ಸಾಗ ಹಾಕುವಷ್ಟರಲ್ಲಿ ನನಗೆ ಸುಮಾರು ಸರ್ಕಸ್ಸುಗಳನ್ನು ಮಾಡಬೇಕಾಗುತ್ತಿತ್ತು.  ಆಗಾಗ ಅವನ ಮನಸ್ಸಿನಲ್ಲಿ ಮೂಡುತ್ತಿದ್ದ ಅನುಮಾನ ಹಾಗೂ ಭಯವೆಂದರೆ ನಾನೆಲ್ಲಾದರೂ ಆಕೆಯನ್ನು ಇಷ್ಟಪಟ್ಟುಬಿಡುತ್ತೇನೋ ಎನ್ನುವುದಾಗಿತ್ತು. ಹೀಗೆ ಅನುಮಾನ ಮೂಡಲು ಹಲವು ಕಾರಣಗಳೂ ಇತ್ತೆನ್ನಿ. ನಮ್ಮದೇ ಕ್ಲಾಸಿನ ಕೆಲವು ಹುಡುಗರು ನನಗೂ ಆ ಹುಡುಗಿಯ ಹೆಸರನ್ನೂ ಸೇರಿಸಿ ತಮಾಷೆ ಮಾಡುತ್ತಿದ್ದರು. ನಮ್ಮಿಬ್ಬರ ಜೋಡಿ ಮಸ್ತಾಗುತ್ತದೆಂದು ಕಾಡುತ್ತಿದ್ದರು. ಅವರು ಹೀಗೆ ಹೇಳಿದಾಗಲೆಲ್ಲ ದೀಪಕ  ಉರಿದುಹೋಗುತ್ತಿದ್ದ. ಒಂದೆರಡು ಸಾರಿ ಈ ಕಾರಣದಿಂದ ಕ್ಲಾಸಿನಲ್ಲಿ ದೀಪು ಗಲಾಟೆ ಮಾಡಿದ್ದೂ ಇದೆ. ಆದರೆ ಅದೇನು ಕಾರಣವೋ ಗೊತ್ತಿಲ್ಲ ಹೈಸ್ಕೂಲಿನ ಸಂದರ್ಭದಲ್ಲಿ ಆತನಿಗೆ ತನ್ನ ಪ್ರೇಮವನ್ನು ಆಕೆಯ ಬಳಿ ನಿವೇದನೆ ಮಾಡಲು ಸಾಧ್ಯವಾಗಲೇ ಇಲ್ಲ.
                  ನಮ್ಮಿಬ್ಬರಿಗೂ ಆಪ್ತರೆನ್ನಿಸಿದ ಬಿ. ಆರ್. ನಾರಾಯಣ ಉರುಫ್ ಬಿ.ಆರ್.ಎನ್. ಅವರಿಗಂತೂ ನಾವಿಬ್ಬರು ಯಡಗಣ್ಣು ಹಾಗೂ ಬಲಗಣ್ಣು ಎಂಬಂತಿದ್ದೆವು. ನಮ್ಮ, ಇಂಗ್ಲೀಷ್ ಸರ್ ಆಗಿದ್ದ ಅವರನ್ನು ನಾವು ಅದೆಷ್ಟು ಸಾರಿ ತಮಾಷೆ ಮಾಡಿದ್ದರೂ ಕೂಡ ಆಪ್ತರಾಗಿದ್ದರು. ಇಷ್ಟವಾಗಿದ್ದರು. ಇವರ ಹಳೆಯ ಚೆಸ್ಪಾ ಬೈಕಿನ ಕಿಕ್ ಹೊಡೆಯುವುದರಲ್ಲಿ ನನಗೂ ದೀಪುವಿಗೂ ಅನೇಕ ಸಾರಿ ಸ್ಪರ್ದೇ ಏರ್ಪಟ್ಟಿದ್ದೂ ಇದೆ. ಭಾರತ ತಂಡದ ಕ್ರಿಕೆಟ್ ಮ್ಯಾಚುಗಳು ನಡೆದಾಗಲೆಲ್ಲ ೀ ಬಿ.ಆರ್.ಎಲ್. ಅವರು ತರುತ್ತಿದ್ದ ಹ್ಯಾಡ್ ರೇಡಿಯೋಕ್ಕೆ ಕಿವಿಗೊಟ್ಟು ಸ್ಕೋರನ್ನು ಕೇಳಿ ಹೈಸ್ಕೂಲಿಗೆ ಹಂಚುವ ಘನಕಾರ್ಯವನ್ನು ನಾವೇ ಮಾಡುತ್ತಿದ್ದೆವು. ಹೀಗೆಲ್ಲಾ ನಡೆಯುತ್ತಿದ್ದಾಗ ನನ್ನ ಹಾಗೂ ಆತನ ಬದುಕು ಚನ್ನಾಗಿಯೇ ಇತ್ತು.
                 ಅಂತವನ ಬದುಕಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದುಹೋಯಿತು. ಬಹುಶಃ ಆವತ್ತು ಎಸ್ಸೆಎಸ್ಸೆಲ್ಸಿಯ ಗಣಿತ ಪಬ್ಲಿಕ್ ಪರೀಕ್ಷೆಯಿರಬೇಕು. ಆವತ್ತು ಬಂದವನೇ ದೀಪಕ ನನ್ನ ಬಳಿ `ಲೋ ವಿನೂ.. ಇವತ್ತು ನನ್ನ ಅಪ್ಪಂದು ಎರಡನೇ ಮದುವೆ ಕಣೋ.. ನಾನೇನ್ಮಾಡ್ಲೋ.. ನನ್ನ ಕಣ್ಣೆದುರು ಇನ್ನೊಬ್ಬಾಕೆಯ ಬದುಕು ಹಾಳಾಗ್ತಾ ಇದೆ.. ಆ ಅಪ್ಪ  ಎಂಬ ಬಡ್ಡೀಮಗ ನನ್ನ ಅಮ್ಮನಿಗೆ ಮೋಸ ಮಾಡಿ ನನ್ನನ್ನು ಹಾಗೂ ತಂಗಿಯನ್ನು ಅನಾಥರನ್ನಾಗಿ ಮಾಡಿದ್ದೂ ಅಲ್ದೆ ಈಗ ಇನ್ನೊಬ್ಬಾಕೆಯ ಲೈಫು ಹಾಳ್ಮಾಡ್ತಾ ಇದ್ದಾನೋ.. ನಂಗೆ ಈ ಗಣಿತ  ಎಕ್ಸಾಂ ಇಲ್ದಿದ್ರೆ ಅವನನ್ನ ಬಡಿದಾದ್ರೂ ಬುದ್ಧಿ ಕಲಿಸ್ತಿದ್ದೆ..' ಎಂದು ಹೇಳಿದ್ದ.
                 ಇವನ ಅಪ್ಪ ಭಾರಿ ಕುಡಿತಗಾರ. ದೀಪಕನ ತಾಯಿಯ ಜೊತೆಗೆ ಬಂದಿದ್ದ ಅಪಾರ ವರದಕ್ಷಿಣೆಯನ್ನು ನುಂಗಿ ನೀರ್ಕುಡಿದು ಮೋಸ ಮಾಡಿ ಓಡಿ ಹೋದ ಪರಿಣಾಮ ದೀಪಕನ ಜವಾಬ್ದಾರಿಯೆಲ್ಲ ಆತನ ತಾಯಿ ಹಾಗೂ ಸಂಬಂಧಿಕರ ಮೇಲೆ ಬಿದ್ದಿತ್ತು. ಕೊನೆಗೆ ತನ್ನ ಪರಿಚಯದವರೊಬ್ಬರ ಮನೆಯಲ್ಲಿ ಉಳಿದುಕೊಂಡು ಹೈಸ್ಕೂಲಿಗೆ ಬರುತ್ತಿದ್ದ ಆತ.  ಸಂಬಂಧಿಕರ ಮನೆಯಲ್ಲಿ ಅದೂ ಇದೂ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ  ಈತನ ಕುರಿತು ಹೈಸ್ಕೂಲಿನ ಮಿತ್ರರೆಲ್ಲ ಅಪ್ಪನ ಹೆಸರು ಹೇಳಿ ಚಾಳಿಸಿದ್ದೂ ಇದೆ. ಮೊದ ಮೊದಲೆಲ್ಲ ದೋಸ್ತರ ಜೊತೆಗೆ ಸೇರಿಕೊಂಡು ನಾನೂ ಚಾಳಿಸಿದ್ದೆ. ಆದರೆ ಕೊನೆಗೆ ಮಾತ್ರ ಸತ್ಯ ಗೊತ್ತಾಗಿತ್ತು. ಚಾಳಿಸುವುದನ್ನು ಬಿಟ್ಟು ಬಿಟ್ಟಿದ್ದೆ. ತದನಂತರ ನಾವು ಪಾಸಾಗಿ ಪಿಯುಸಿಯ ಮೆಟ್ಟಿಲು ಹತ್ತಿದ್ದೆವು. ಹೈಸ್ಕೂಲೆಂಬ ನದಿಯನ್ನು ದಾಟಿದ ನಾವು ಪಿಯುಸಿಯೆಂಬ ಕಡಲಿನಲ್ಲಿ ಈಜಲಿಕ್ಕಿಳಿದಾಗಲೇ ನಮಗೆ ನಿಜವಾದ ಬದುಕಿನ ಅರಿವಾಗಿದ್ದು. ಆ ನಂತರವೇ ದೀಪಕನೆಂಬ ದುರದೃಷ್ಟವಂತನ, ಕ್ರಿಯೇಟಿವ್ ಹುಡುಗನ ಟ್ರಾಜಿಡಿ ಲೈಫು ಶುರುವಾಗಿದ್ದು ಎನ್ನಬಹುದು. ಈ ನಂತರದ ಅವನ ಜೊತೆಗೆ ನನ್ನ ಒಡನಾಟ ಕಡಿಮೆಯಾಯಿತಾದರೂ ಆಗೊಮ್ಮೆ ಈಗೊಮ್ಮೆ ಆತನ ಬದುಕಿನ ಕುರಿತು ಹಲವು ಸಂಗತಿಗಳು ನನ್ನ ಕಿವಿಗೆ ಬೀಳುತ್ತಿದ್ದವು.
                 ನಾನು ಆ ನಂತರ ನಾಣಿಕಟ್ಟಾ ಕಾಲೇಜನ್ನು ಸೇರಿದೆ. ಆತ ಅವನ ಊರಿನ ಬಳಿಯಲ್ಲಿಯೇ ಇದ್ದ ಯಾವುದೋ ಪಿಯು ಕಾಲೇಜನ್ನೂ ಸೇರಿದ. ಅಲ್ಲಿಂದಲೇ ಇರಬೇಕು ಆತನ ಬದುಕು ಮೂರಾಬಟ್ಟೆಯಾಗಲು ಶುರುವಾದದ್ದು. ಒಳ್ಳೆಯ ಹುಡುಗನಾಗಿದ್ದ  ಆತನಿಗೆ ನಂತರ ಸಿಕ್ಕವರೆಲ್ಲ ಪುಂಡ ಪೋಕರಿ ಹುಡುಗರೇ ಆದ ಕಾರಣ  ಆತ ಮತ್ತಷ್ಟು ಬೇಗ ನೈತಿಕವಾಗಿ ಅದಃಪತನಕ್ಕೆ ಇಳಿದ ಎಂದರೆ ತಪ್ಪಾಗಲಿಕ್ಕಿಲ್ಲ. ಅವನ ಪಿಯು ಬದುಕಿನಲ್ಲಿ ಅವನಿಗೆ ಅವನಂತೆಯೇ ಕೆಲವು ಮುಂಗೋಪಿ ಹುಡುಗರು, ಸ್ಥಳೀಯ ಮಟ್ಟದಲ್ಲಿ ಚಿಕ್ಕಪುಟ್ಟ ರೌಡಿಸಂ ಮಾಡುತ್ತಿದ್ದ ಹುಡುಗರ ಪರಿಚಯವಾದವು. ಅಂತವರ ಜೊತೆ ಅಂತವರಂತೆಯೇ ಬೆಳೆದ ದೀಪಕ.
                 ಬಹುಶಃ ಆ ದಿನಗಳಲ್ಲಿಯೇ ಇರಬೇಕು ಆತ ತನ್ನ ದೋಸ್ತರ ಮಾತು ಕಟ್ಟಿಕೊಂಡು ಹೈಸ್ಕೂಲು ಲವ್ವರ್ ಗೆ ಒಂದು ಪ್ರೇಮಪತ್ರ ಬರೆದೇಬಿಟ್ಟ. ಆ ಲವ್ ಲೆಟರ್  ಸೀದಾ ಆ ಹುಡುಗಿಯ ಅಪ್ಪನಿಗೆ ಸಿಕ್ಕಿತು. ಆತ ಪೊಲೀಸ್ ಕಂಪ್ಲೇಟ್ ಕೊಟ್ಟ. ಪೊಲೀಸರು ಆತನನ್ನು ಹಿಡಿದು ನಾಲ್ಕೇಟು ಬಿಗಿದು ನಾಲ್ಕೈದು ದಿನ ಜೈಲಿನಲ್ಲೂ ಇಟ್ಟರು. ಅಲ್ಲಿಂದ ವಾಪಾಸು ಬಂದವನಿಗೆ ಬೇರೆಯದೇ ತೆರನಾದ ಅನುಭವವಾಯಿತು. ಸೆರೆಮನೆಯಲ್ಲಿದ್ದಾಗಲೇ ದೋಸ್ತನಾಗಿದ್ದನೋ ಏನೋ.. ಒಬ್ಬ ಹೆಸರುಮಾತಿನ ರೌಡಿಯ ಪರಿಚಯವೂ ಆಯಿತು. ಆತನ ಸಹವಾಸದಿಂದ ಕುಡಿಯುವುದನ್ನೂ ಕಲಿತ. ಎಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ ಹುಡುಗ ಪಿಯು ಪಾಸಾಗಲು ನಾಲ್ಕೈದು ವರ್ಷಗಳು ಬೇಕಾದವು. ಆಗ ಸ್ವಲ್ಪ ಗಟ್ಟಿ ವ್ಯಕ್ತಿತ್ವದ ಹುಡುಗನಾಗಿದ್ದ ದೀಪಕ ಕೊನೆ ಕೊನೆಗಂತೂ ಬಾಯಿ ಬಿಟ್ಟರೆ ರೈಲು ಹತ್ತಿಸುವ, ದೊಡ್ಡ ದೊಡ್ಡ ಮಾತಾಡುವ , ಬಡಾಯಿ ಕೊಚ್ಚಿಕೊಳ್ಳುವ, ಊರಲ್ಲೆಲ್ಲ ಏನೇ ದೊಡ್ಡ ಘಟನೆಗಳು ಜರುಗಿದರೂ ಅದನ್ನೆಲ್ಲಾ ತಾನೆ ಮಾಡಿದ್ದೆನ್ನುವ ಮಾತುಗಳು ಆತನ ಬಾಯಿಂದ ಬರತೊಡಗಿದವು. ಜೊತೆ ಜೊತೆಯಲ್ಲಿಯೇ ಸಿನೆಮಾಗಳ ಪ್ರಭಾವವೋ ಎಂಬಂತೆ ಮಾತಿಗೊಮ್ಮೆ `ಏಯ್ ನಿನ್ನಕ್ಕನ್.. ನಿನಯ್ಯನ್.. ಮಚ್ಚು ತೆಗೆದ ಅಂದ್ರೆ..' ಎಂಬಂತಹ ಶಬ್ದಗಳೇ ಬರತೊಡಗಿದವು. ಹೈಸ್ಕೂಲಿನ ಸಂದರ್ಭದಲ್ಲಿಯೇ ಯಾವುದೋ ಚಾಲೇಂಜಿಗೆ ಪ್ರತಿಯಾಗಿ ಸಿಗರೇಟಿನ ದಮ್ಮು ಎಳೆದಿದ್ದ ದೀಪಕ  ಇದೀಗ ಕೇವಲ ಕುಡಿತಕ್ಕಷ್ಟೇ ಸೀಮಿತವಾಗದೇ ಗಾಂಜಾ ಸೇವನೆಯಲ್ಲೂ ತೊಡಗಿಕೊಂಡಿದ್ದಾನೆಂಬ ಸುದ್ದಿ ನನಗೆ ಸಿಕ್ಕಿದೆ. ಜೊತೆ ಜೊತೆಯಲ್ಲಿ ಆತ ಅದರ ಕಳ್ಳ ಸಾಗಾಣಿಕೆ ಮಾಡುತ್ತಾನೆ ಎನ್ನುವ ಮಾತುಗಳೂ ಕೇಳಿಬಂದಿದ್ದು ನನಗೆ ಬಹಳ ಬೇಸರವನ್ನು ಮೂಡಿಸಿತ್ತು.
                ಇಂತಹ ದೋಸ್ತ ಮೊನ್ನೆ ತೀರಾ ಅಚಾನಕ್ಕಾಗಿ ನನಗೆ ಸಿಕ್ಕಿದ್ದ. ಒಮ್ಮೆ ನೋಡಿದಾಗ ಒಂದು ಸಾರಿ ಗುರುತು ಸಿಕ್ಕಿರಲಿಲ್ಲ.. ಕೊನೆಗೆ ನಾನು ಹೌದೋ ಅಲ್ಲವೋ ಎನ್ನುತ್ತಲೇ ಮಾತನಾಡಿಸಿ ನಾನು ಹೀಗ್ಹೀಗೆ ಪತ್ರಿಕೆಯೊಂದರಲ್ಲಿ ಕೆಲವ ಮಾಡುತ್ತಿದ್ದೇನೆ ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಆತ `ನೀವು ಪತ್ರಕರ್ತರೆಂದರೆ ಸಭ್ಯ  ಇರುವ ಬಡ್ಡಿಮಕ್ಕಳಲ್ಲ. ನೀವು ಅವರಿವರೇ ಬರೆದಿದ್ದನ್ನೆಲ್ಲ ಕದ್ದು ಬರೆದು ಮುಂದೆ ಬರ್ತೀರಿ..' ಎಂದೆಲ್ಲಾ ಹಲುಬಿದ್ದ.  ಆತನ ಬಾಯಿಯಿಂದ ಪರಮಾತ್ಮ ವಾಸನೆಯ ರೂಪದಲ್ಲಿ ಹೊರಬಿದ್ದಿದ್ದನ್ನು ಕಂಡು ನಾನು ಹೆಚ್ಚು ಮಾತು ಬೆಳೆಸದೇ ಹೋಗಿದ್ದೆ. ಈತ ಹೇಗಾದರೂ ಹಾಳಾಗಿ ಸಾಯಿಲಿ ಎಂದು ಶಪಿಸಿ ಅಲ್ಲಿಂದ ಬಂದಿದ್ದೆನಾದರೂ ಆತನ ತಾಯಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿ ಒಂಥರಾ ಆಗಿತ್ತು.
                ಹೇಗಿದ್ದ ವ್ಯಕ್ತಿ ಹೇಗಾಗಿಬಿಟ್ಟನಲ್ಲ. ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿಬಿಟ್ಟನಲ್ಲ. ಮುಂದೆಂದಾದರೂ ಆತ ಮೊದಲಿನ ಹಾಗೇ ಗನಾ ವ್ಯಕ್ತಿಯಾಗಬಲ್ಲನಾ..? ಈಗಿನ ರೌಡಿಯಿಸಂ, ಧೂಮ, ಪಾನಗಳ ಪರದೆಯನ್ನು ಕಳಚಿ ಹೊರಬರುತ್ತಾನಾ? ಅವನು ಈ ರೀತಿಯಾಗುವಂತೆ ಮಾಡಿದ ವ್ಯಕ್ತಿಗಳು  ಆತ ಮೊದಲಿನಂತಾಗುತ್ತಾನೆ ಎಂದರೆ ಸುಮ್ಮನೆ ಬಿಡುತ್ತಾರೆಯೇ? ಅದಕ್ಕಿಂತ ಮಿಗಿಲಾಗಿ ಆತನ ತಾಯಿಯ ಜೀವ ನಗುವಂತಾಗುತ್ತದೆಯೇ? ಮುಂದೆ ಹಲವು ಪ್ರಶ್ನೆಗಳು ಮೂಡಿದವು. ಎಲ್ಲವೂ ನಿಗೂಢ ಅನ್ನಿಸಿ ತಲೆಕೊಡವಿ ಅಲ್ಲಿಂದ ಬಂದಿದ್ದೆ.

**

(ಇದನ್ನು ಖಂಡಿತ ಬರೆದಿದ್ದು ಮೂರ್ನಾಲ್ಕು ವರ್ಷಗಳ ಹಿಂದೆ..)
(ಶಿರಸಿಯ ಉಳುಮೆ ಮಾಸಪತ್ರಿಕೆಯಲ್ಲಿ ಇದು ಪ್ರಕಟಗೊಂಡಿದೆ)
(ಈಗ ದೀಪಕ್ ಯಾವ ರೀತಿ ಇದ್ದಾನೆ ಎಂಬುದನ್ನು ಶೀಘ್ರವಾಗಿಯೇ ಬರೆಯಲಾಗುತ್ತದೆ..)

Sunday, February 16, 2014

ಮಂಕಾಳಕ್ಕನ ಕವಿತೆ

ಮಂಕಾಳಕ್ಕ ಎಂಬ ಒಂದು
ಅಜ್ಜಿ ಇತ್ತು ಯಂಗಳಲ್ಲಿ..
ಉದ್ದುದ್ದ ಬೈಗುಳ, ಸ್ವಾಟೆ ತಿವಿದು
ಬೈತಿತ್ತು ಬಾಯಲ್ಲಿ..||

ಮೋಟು ಜಡೆ ತುದಿಗೊಂದ್ ದಾರ
ನೆಟ್ಟಗೆ ನಿಲ್ತಿತ್ತು..
ಕಣ್ಣಿಗೊಂದು ಕನ್ನಡಕ ಇತ್ತು
ಹಳ್ಳು ಒಡೆದಿತ್ತು ||

ಸೊಸೆಯಕ್ಳ ಕಂಡ್ರೆ
ಸಿಕ್ಕಾಪಟ್ಟೆ ಸಿಟ್ಟು
ಬಾಯಲ್ಲಿ ಎಂದೂ ಯಾವತ್ತಿಗೂ
ನಿಲ್ತಿತ್ತಿಲ್ಲೆ ಗುಟ್ಟು ||

ಹಗಲೊತ್ತಲ್ಲೆ ನಿದ್ದೆಗಣ್ಣು
ಬಾಯಿ ತುಂಬಾ ಆಕಳಿಕೆ
ರಾತ್ರಿ ಮಾತ್ರ ಕೇಳೋದು ಕಷ್ಟ
ದೊಡ್ಡ ಶಬ್ದ ಗೊರಕೆ ||

ಮಂಕಾಳಕ್ಕನ ಉಬ್ಬ ಹಲ್ಲು
ಭಾರಿ ಕಾಡ್ತಿತ್ತು
ಬಾಯಲ್ ಬಪ್ಪ ದುರ್ವಾಸನೆ
ತಲೆ ಸುತ್ ತಿತ್ತು ||

ಅಜ್ಜಿಗ್ ಪಾಪ ಬ್ಯೂಸಿ ವರ್ಕರ್
ಸಿಕ್ಕಾಪಟ್ಟೆ ಕೆಲಸ
ಎಷ್ಟು ಸಾರಿ ಗುಡಿಸಿದ್ರೂನೂ
ಅಲ್ಲೇ ಇರ್ತಿತ್ತು ಕಸ ||

ಯಲ್ಗಾರಿಂದ ಮದ್ವೆಯಾಗಿ
ಯಂಗ್ಳೂರ್ ಸೇರಿತ್ತು
ಮದ್ವೆಯಾದ ಇಗ್ಗಜ್ಜಂಗೆ
ಗ್ರಾಚಾರ ಕೆಟ್ಟಿತ್ತು ||

ಮೂರ್ ಹೊತ್ತು ಮಾತು ಜೋರು
ಬೈಗುಳದ ಸುರಿಮಳೆ
ಆಗಾಗ ಕೊಂಕು ಮಾತು
ಯಾವಾಗ್ಲೂ ರಗಳೆ ||

ಮದ್ವೆ ನಂತ್ರ ಇಗ್ಗಜ್ಜಂಗೆ
ಮಂಕಾಳಕ್ಕ ಕಾಡು
ಯಾವಾಗ್ಲೂ ಸುಮ್ಮಂಗಿರ್ತಿದ್ದ
ಅವಂದು ನಾಯಿಪಾಡು ||

ಮಕ್ಕ  ಇದ್ದಿದ್ ಐದು ಜನ
ಪಂಚ ಪಾಂಡವರಂತೆ
ಒಬ್ಬರ ಕಂಡ್ರೆ ಒಬ್ಬರಿಗಾಗ್ತಿಲ್ಲೆ
ಭಾರಿ ವಿರೋಧವಂತೆ ||

ಮಂಕಾಳಕ್ಕ ಕುಂತಿಯಲ್ಲ
ಗಾಂಧಾರಿಯಂತೂ ಅಲ್ಲ
ಒಳ್ಳೇದೂ ಇಲ್ಲ ಕೆಟ್ಟದ್ದೂ ಇಲ್ಲ
ಯಾವುದಕ್ಕೂ ಸಲ್ಲ ||

ಮಂಕಾಳಕ್ಕಂಗ್ ಚಿನ್ನದ ಆಸೆ
ಯಾವಾಗ್ಲೂ ಬೇಕು ಸರ
ಚಿನ್ನದ ಬಗ್ಗೆ ಉಳಿದವ್ರೆಲ್ಲ
ಮಾತಾಡಿದ್ರೇ ಅಪಚಾರ ||

ಮಂಕಾಳಕ್ಕ ಮಹಾಸತಿ
ಗಂಡನ ಆಡಿಸ್ತಿತ್ತು
ಕುಂತ್ರೂ ತಪ್ಪು ನಿಂತ್ರೂ ತಪ್ಪು
ಕಾಟಾ ಕೊಡ್ತಾ ಇತ್ತು ||

ಅವಳ ಕೂಗಿಗೆ ಎದಿರೇ ಇಲ್ಲ
ಊರೆಲ್ಲ ಗಡಗಡ
ಎದುರು ಸಿಕ್ಕರೆ ಮಾತಾಡ್ತಿರ್ಲಿಲ್ಲ
ಮಂಕಾಳಕ್ಕನ ಸಂಗಡ ||

ಮಂಕಾಳಕ್ಕ  ಎತ್ತರದ್ದಲ್ಲ
ರಾಶಿ ಕುಳ್ಳಿತ್ತು
ಬಾಯಲ್ ಕವಳ ತುಂಬಕಂಡಿದ್ರೂ
ಮಾತು ಜೋರಿತ್ತು ||

ಬೆಂಕಿ ಕಾಸೋದು, ಭಜನೆ ಮಾಡದು
ಮಂಕಾಳಕ್ಕಂಗ್ ಪರಮಪ್ರಿಯ
ದಿನಾ ಸ್ನಾನ, ಬಟ್ಟೆ ತೊಳೆಯೋದು
ಯಾವತ್ತಿಗೂ ಅಪ್ರಿಯ ||

ಮಂಕಾಳಕ್ಕನ ಕಾಲಿಗೆ ಕಸ
ಔಷಧಿಗೆ ಬಗ್ತಿತ್ತಿಲ್ಲೆ..
ಪ್ಯಾಟಿಗೆ ಹೋಪವ್ ಮುಲಾಮ್ ತಂದ್ರೂ
ಅವಳಿಗೆ ಸಾಕಾಗ್ತಿತ್ತಿಲ್ಲೆ.. ||

ಸೀರೆ ಹುಚ್ಚಿನ ಮಂಕಾಳಕ್ಕ
ಕಾಟನ್ ಪತಲಾ ಉಡತಿತ್ತು
ಆರ್ ತಿಂಗ್ಳೀಗೊಂದ್ ಸೀರೆ ಮಾತ್ರ
ಖಾಯಮ್ಮಾಗಿ ಬೇಕಿತ್ತು ||

ಮಂಕಾಳಕ್ಕ ಈಗಿಲ್ಲೆ ಬಿಡಿ
ಸತ್ತು ನಾಕು ವರ್ಷ ಆತು
ಊರಲ್ಲಿ ಮೊದಲಿನಷ್ಟ್ ಮಜವೂ ಇಲ್ಲೆ
ಮನೆ ಮನ ಬೋರಾತು ||

ಮಂಕಾಳಕ್ಕ ಈಗಿನವ್ಕೆ
ಹೆಚ್ಗೆ ಗೊತ್ತಿಲ್ಲೆ
ಹಳೆಜನ ಮನುಷ್ಯರ್ಯಾರೂ
ಅವಳ ಮರೀತ್ವಿಲ್ಲೆ..||

**
(ಮಂಕಾಳಕ್ಕ ಎನ್ನುವ ವ್ಯಕ್ತ-ವ್ಯಕ್ತಿತ್ವ ನಮ್ಮಲ್ಲಿ ಇತ್ತು. ಈಗ್ಗೊಂದು ದಶಕದ ಹಿಂದೆ ಮಂಕಾಳಕ್ಕ ದೈವಾಧೀನರಾದರು. ನಾ ಕಂಡಂತೆ ಅವರು ಹೇಗಿದ್ದರು ಎನ್ನುವುದಕ್ಕೊಂದು ಟಪ್ಪಾಂಗುಚ್ಚಿ ಕವಿತೆ..)
(ಶಿರಸಿಯಲ್ಲಿ ಈ ಕವಿತೆಬರೆದಿದ್ದು 16-02-2014ರಂದು)

ಆತ್ಮಹತ್ಯೆಯ ನಂತರ (ಕಥೆ)

`ಹೇಯ್... ಒಂದ್ ನಿಮಿಷ...'
ಎಂಬ ಮಾತು ಗಾಳಿಯಲ್ಲಿ ಇದ್ದಕ್ಕಿದ್ದಂತೆ ತೇಲಿಬಂತು. ನನ್ನನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಂದಿರಬೇಕು. ನಾನು ಸುತ್ತಮುತ್ತ ತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಎಲ್ಲೋ ಏನೋ ಭ್ರಮೆ.. ಎಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದೆ.
            ತುರ್ತು ಕಾರ್ಯದ ನಿಮಿತ್ತ ಶಿರಸಿಗೆ ಹೋಗಿದ್ದ ನನಗೆ ಅಂದು ದಿನದ ಸಮಯಕ್ಕಿಂತ ಹೆಚ್ಚು ತಡವಾಗಿತ್ತು. ಮನೆಯಲ್ಲಿ ಆಯಿ ನನಗೆ ಊಟ ಬಡಿಸಿ ಮಲುಗಬೇಕು ಎಂದು ಕಾಯುತ್ತಿರುತ್ತಾಳೆ ಎಂದು ಸ್ವಲ್ಪ ವೇಗವಾಗಿಯೇ ಬೈಕು ಚಾಲನೆ ಮಾಡುತ್ತ ಬರುತ್ತಿದ್ದೆ.. ನೀಲೆಕಣಿಯನ್ನು ದಾಟಿ ಅಬ್ರಿ ಕ್ರಾಸಿನಲ್ಲಿ ಒಂದು ಬಿದಿರುಮಟ್ಟಿಯಿದೆ. ಅಲ್ಲಿ ಗಾಡಿಯನ್ನು ನಿಲ್ಲಿಸಿ ಯಾವಾಗಲೂ ಜಲಬಾಧೆಯನ್ನು ತೀರಿಸಿಕೊಳ್ಳುವುದು ನನ್ನ ವಾಡಿಕೆ. ನಿಂತಿದ್ದಾಗ ಕೇಳಿಬಂದಿತ್ತು ಧ್ವನಿ.
`ಹಾಯ್ ದೋಸ್ತಾ.. ಹೇಗಿದ್ದೀಯಾ..?' ಮತ್ತೊಮ್ಮೆ ಕೇಳಿತ್ತು ಧ್ವನಿ. ಯಾವುದೋ ಗಂಡಸಿನ ಧ್ವನಿ.
            ಇದೆಂತದಪಾ ಇದು.. ಎಂದುಕೊಂಡು ಒಮ್ಮೆ ಸಣ್ಣದಾಗಿ ಬೆದರಿದೆ. ಭೂತ, ಪಿಶಾಚಿ ಇತ್ಯಾದಿಗಳ ಬಗೆಗೆಲ್ಲ ನನಗೆ ಅಷ್ಟಾಗಿ ನಂಬಿಕೆಯಿರಲಿಲ್ಲ. ಹಾಗಾಗಿ ಆ ರಸ್ತೆಯ ಬದಿಯಲ್ಲಿರುವ ಬಿದಿರುಮೆಳೆಯ ಪಕ್ಕದಲ್ಲಿ ಯಾರೋ ನಿಂತು ನನ್ನನ್ನೋ ಅಥವಾ ಇನ್ಯಾರನ್ನೋ ಕರೆಯುತ್ತಿರಬಹುದೆಂದು ಭಾವಿಸಿದೆ. ನಾನು ಮಾತಾಡಲಿಲ್ಲ. ಮತ್ತೊಮ್ಮೆ ಕೇಳಿದ ಧ್ವನಿ `ನೀನೆ ಕಣೋ..' ಎಂದಿತು. ಸುತ್ತಮುತ್ತ ನೋಡಿದರೂ ಆ ಧ್ವನಿಗೆ ಮೂಲವಾದುದು ನನಗೆ ಕಾಣಿಸಲಿಲ್ಲ. ಇದೆಂತದ್ದೋ ಚೇಷ್ಟೆಯಿರಬೇಕು ಎಂದುಕೊಂಡೆ. ಅಮಾಸೆ, ಹುಣ್ಣಿಮೆ ಸಮಯದಲ್ಲಿ ಭೂತ-ಗೀತ ಸಿಕ್ಕಾಪಟ್ಟೆ ಓಡಾಡ್ತು.. ನಂಗೂ ಒಂದೆರಡು ಸಾರಿ ಕಂಡಿತ್ತು. ಹಾಗೆ ಧ್ವನಿ ಕೇಳಿಸಿದಾಗಲೆಲ್ಲ ನೀನು ಮಾತನಾಡಲಿಕ್ಕೆ ಹೋಗಬೇಡ ಮಾರಾಯಾ ಎಂದು ಅಜ್ಜ ನನ್ನ ಬಳಿ ಚಿಕ್ಕಂದಿನಲ್ಲಿ ಹೇಳುತ್ತಿದ್ದುದು ನೆನಪಿಗೆ ಬಂದು ಒಮ್ಮೆ ಸಣ್ಣದಾಗಿ ಬೆವೆತೆ. ಯಾರಾದರೂ ನನ್ನ ಮೇಲೆ ಹಲ್ಲೆ ಮಾಡಲು ಅಡಗಿ ನಿಂತಿರಬಹುದೆ? ಕಳ್ಳರೇ..? ದರೋಡೆಕೋರರೆ..? ಮನಸ್ಸು ಯಾಕೋ ಕೆಟ್ಟದ್ದನ್ನೇ ಆಲೋಚಿಸಲು ಆರಂಭಿಸಿತ್ತು.
                  `ಹೇ ವಿನೂ...' ಅಂದಿತು ಆ ಧ್ವನಿ. ಈ ಸಾರಿ ನಿಜಕ್ಕೂ ನಾನು ಬೆಚ್ಚಿದೆ. ಬಾಯಲ್ಲಿ ಗಾಯತ್ರಿ ಮಂತ್ರ ಇನ್ನೇನು ಹೇಳಬೇಕು ಎಂದುಕೊಳ್ಳತೊಡಗಿದೆ. `ವಿನೂ.. ವಿನೂ.. ಹೆದರಬೇಡ.. ನಾನು ನಿನ್ನ ದೋಸ್ತ ಮಾರಾಯಾ..' ಎಂದಿತು ಧ್ವನಿ.
                  `ಯಾರದು..? ಇಲ್ಲೇನ್ ಮಾಡ್ತಾ ಇದ್ದೀರಿ? ಧೈರ್ಯ ಇದ್ದರೆ ನನ್ನೆದುರು ಬಂದು ಮಾತಾಡೂ..' ಎಂದು ಗಡುಸಾಗಿ ಕೂಗಿದೆ. ಒಂದು ಸಾರಿ ಧ್ವನಿ ಸುಮ್ಮನಾಯಿತೇನೋ ಅನ್ನಿಸಿತು. ಆ ಧ್ವನಿ ಕೇಳಿದ ಅಬ್ಬರದಲ್ಲಿ ನನಗರಿವಿಲ್ಲದಂತೆ ಜಲಬಾಧೆಯೂ ನಿಂತಿತ್ತು. ಅರೇ ನನ್ನೊಳಗೆ ಆವಿಯಾಯಿತೇ ಎಂದುಕೊಂಡೆ. ಆದರೆ ಮೈತುಂಬ ಬೆವರು. ಇನ್ನೇನು ನನ್ನ ಗಾಡಿಯನ್ನು ಹತ್ತಿ ಮೊದಲು ಅಲ್ಲಿಂದ ಕಾಲ್ಕೀಳಬೇಕು ಎನ್ನಿಸುವಷ್ಟರಲ್ಲಿ ಮತ್ತೆ ಧ್ವನಿ ಕೇಳಿತು. ಯಾರೋ ನನ್ನ ಬಗ್ಗೆ ಗೊತ್ತಿರುವವರು ಹೀಗೆ ತಮಾಶೆ ಮಾಡುತ್ತಿರಬಹುದೆಂದುಕೊಂಡರೂ ಮನಸ್ಸು ಅಪದ್ಧ ನುಡಿಯುತ್ತಿತ್ತು.
                 `ಹೆದರ್ಕಳಡ ದೋಸ್ತಾ.. ನಾನು ಗಣಿ.. ನೆನಪಾಗಿಲ್ವಾ.. ನಿನ್ನ ಕ್ಲಾಸ್ ಮೇಟ್..' ಎಂದು ಹೇಳಿತು ಧ್ವನಿ. ನನಗೆ ಈಗ ಮಾತ್ರ ಭಯ ಕಡಿಮೆಯಾಗಿ ಕುತೂಹಲ ಹುಟ್ಟಿತು. ಅರೆ ಹೌದಲ್ಲ ಪಕ್ಕಾ ಗಣಿಯದ್ದೇ ಧ್ವನಿ ಎನ್ನಿಸಿತು. ನಾನು ಗಟ್ಟಿಯಾಗಿ `ಗಣಿಯಾದರೆ ನನಗ್ಯಾಕೆ ಕಾಣ್ತಾ ಇಲ್ಲ..? ಗಣಿ ಸತ್ತು ಆಗಲೇ ಆರೇಳು ವರ್ಷವಾಗಿದೆ... ಇದೆಂತಾ ಭ್ರಮೆ..' ಎಂದೆ..
                `ಹೌದು ದೋಸ್ತಾ.. ನಾನು ಸತ್ತು ಆರೇಳು ವರ್ಷ ಆಗಿದ್ದು ನಿಜ. ಯಾಕೋ ಸುಮ್ಮನೆ ನನ್ನ ಮಿತ್ರರ ದಂಡನ್ನು ನೋಡಿ ಮಾತನಾಡಿಸುವಾ ಎನ್ನಿಸಿತು. ಅದಕ್ಕೆ ಬಂದೆ..'ಎಂದ ಧ್ವನಿ ಕೇಳಿಸಿತು. ನಾನು ಧ್ವನಿ ಕೇಳಿದತ್ತ ನೋಡುತ್ತಿದ್ದೆ. ಹತ್ತಿರದ ಬಿದಿರುಮಟ್ಟಿಯ ಎದುರು ಇದ್ದಕ್ಕಿದ್ದಂತೆ ಫ್ಲಾಷ್ ಲೈಟ್ ಆದಂತಾಯಿತು. ಕಣ್ಣುಜ್ಜಿಕೊಂಡು ನೋಡುವಷ್ಟರಲ್ಲಿ ವ್ಯಕ್ತಿಯ ಆಕೃತಿಯನ್ನು ಆ ಫ್ಲಾಷ್ ಲಯಟ್ ಪಡೆದುಕೊಂಡಿತು. ಇದು ಖಂಡಿತ ಯಾವುದೋ ಬ್ಲಾಕ್ ಮ್ಯಾಜಿಕ್ಕಲ್ಲ.. ಹೌದಿನಿಯ ಕರಾಮತ್ತೂ ಅಲ್ಲ ಎಂದುಕೊಂಡೆ.
                `ಎಲ್ಲಾ ಸರಿ.. ನೀನು ನಂಗೆ ಯಾಕೆ ಕಾಣಿಸಿಕೊಂಡಿದ್ದು.. ನಾನು ನಿನಗೇನೂ ಅಷ್ಟು ಆಪ್ತ ದೋಸ್ತ ಆಗಿರಲಿಲ್ಲವಲ್ಲ.. ಕಾಲೇಜಿನಲ್ಲಿ ನಿನಗೆ ನೂರಾರು ಗೆಳಯರಿದ್ದರು. ಹತ್ತಾರು ಜನರು ನನಗಿಂತ ಆಪ್ತರಾಗಿದ್ದರು. ಅವರೆಲ್ಲರಿಗೂ ಕಾಣಿಸಿಕೊಂಡಿದ್ದೀಯಾ.. ಅಥವಾ ನನಗೊಬ್ಬನಿಗೆ ಕಾಣಿಸಿಕೊಳ್ತಾ ಇರೋದಾ..? ನಿನ್ನ ಕಣ್ಣಿಗೆ ನಾನೇ ಯಾಕೆ ಬೀಳಬೇಕು..?' ಆ ಆಕೃತಿಯೊಂದಿಗೆ ವಾದಮಾಡುವ ಅನ್ನಿಸಿ ಕೇಳಿದೆ.
                `ಅರ್ಥವಾಗದ ನೂರಾರು ಜನ ಮಿತ್ರರಿಗಿಂತ ಅರ್ಥವಾಗುವ ಒಬ್ಬ ವ್ಯಕ್ತಿ ಸಾಕು. ಅಂವ ಶತ್ರು ಆದರೂ ಪರವಾಗಿಲ್ಲ. ಭಾವನೆಗಳು ಅರ್ಥವಾಗಬೇಕು. ನಿನಗೆ ನನ್ನ ಭಾವನೆಗಳು ಖಂಡಿತ ಅರ್ಥವಾಗುತ್ತವೆ ಎನ್ನುವ ಕಾರಣಕ್ಕಾಗಿ ನಾನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಿತ್ರರಲ್ಲಿ ಅನೇಕರ ಕಣ್ಣಿಗೆ ಕಾಣಿಸಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅವರು ನನ್ನ ಕುರಿತು ತಲೆಕೆಡಿಸಿಕೊಳ್ಳಲಿಲ್ಲ ನೋಡು ಹಾಗಾಗಿ ನಿನಗೆ ಕಾಣಿಸಿಕೊಳ್ಳುತ್ತಿದ್ದೇನೆ..' ಎಂದಿತು ಆಕೃತಿ.
               ಇದುವರೆಗೂ ಯಾರದ್ದೋ ಹುಚ್ಚಾಟ ಎಂದುಕೊಳ್ಳುತ್ತಿದ್ದ ನಾನು ನಿಧಾನವಾಗಿ ಆ ಆಕೃತಿಯ ಮಾತನ್ನು ನಂಬುತ್ತ ಹೋದೆ. ಒಂದುಕಾಲದಲ್ಲಿ ಆಪ್ತಮಿತ್ರನಾಗಿ ನಂತರ ಶತ್ರುವಾಗಿ ಬದಲಾಗಿ ಜಗಳ-ಗಲಾಟೆಯನ್ನು ನಾವು ಮಾಡಿಕೊಂಡಿದ್ದೆವು. ನನ್ನ ಬಳಿ ಮಾತನಾಡುತ್ತಿರುವುದು ಆತನೇ ಇರಬೇಕು ಎನ್ನುವ ಭಾವನೆ ಮೂಡಲಾರಂಭಿಸಿತು. `ಅಲ್ಲಾ ನಾನೂ ನಿನ್ನನ್ನು ನಂಬದಿದ್ದರೆ ಏನು ಮಾಡುತ್ತೀಯಾ..?' ಎಂದೆ..
               `ಯಾರೂ ನನ್ನ ಬಳಿ ಇಷ್ಟೂ ಮಾತನಾಡುವ ಮನಸ್ಸು ಮಾಡಿರಲಿಲ್ಲ ದೋಸ್ತಾ.. ನೀನು ಇಷ್ಟಾದರೂ ಮಾಡಿದೆಯಲ್ಲ.. ಅಷ್ಟೇ ಸಾಕು ಎಂದುಕೊಳ್ಳುತ್ತೇನೆ..' ಎಂದಿತು ಅದು.
               ` ಅಲ್ಲಾ.. ದೋಸ್ತಾ ಸರಿ ನಾನು ನಿನ್ನನ್ನು ನಂಬ್ತಿ.. ನನ್ನ ಬಳಿ ಹೇಳಿಕೊಳ್ಳುವಂತದ್ದು ನಿಂಗೆ ಏನಿದೆ ಅಂತದ್ದು..? ಒಂದು ಕೆಲಸ ಮಾಡ್ತೀನಿ.. ನೀನು ಹೇಳಿಕೊಳ್ಳಬೇಕೆಂದಿದ್ದನ್ನು ನಾನೇ ಕೇಳ್ತಾ ಹೋಗ್ತೀನಿ.. ಆಗಬಹುದೇ..?' ನಾನು ಗಣಿಯ ಆಕೃತಿಯನ್ನು ಮಾತಿಗೆಳೆಯುತ್ತಿದ್ದೆ.
                `ಅಂಗಿತೊಳೆಯವು ಹೇಳಿ ಮನಸ್ಸು ಮಾಡುತ್ತಿದ್ದ ತಕ್ಷಣ ಅಗಸ ಮನೆ ಬಾಗಿಲಲ್ಲಿ ಪ್ರತ್ಯಕ್ಷ ಆಗಿದ್ದ ಅನ್ನೋ ಹಂಗಾತು ನೋಡು ನಿನ್ನ ಮಾತು. ಸರಿ.. ನಾ ಹೇಳಿಕೊಳ್ಳುತ್ತ ಹೋಗುವ ಮುನ್ನ ನೀನೇ ಏನೇನ್ ಕೇಳಬೇಕೋ ಅದನ್ನು ಕೇಳು.. ನಾನು ಉತ್ತರ ಕೊಡ್ತೆ.. ಮತ್ತೆ ದೆವ್ವದ ಸಂದರ್ಶನ ಅಂತ ಎಲ್ಲಾದ್ರೂ ಬರೆದುಬಿಟ್ಟೀಯಾ..' ಗಣಿಯ ಆಕೃತಿ ನನ್ನ ಜೊತೆ ಮಾತನಾಡುತ್ತಲೇ ಚಿಕ್ಕದಾಗಿ ಎಚ್ಚರಿಕೆಯನ್ನೂ ನೀಡಿತ್ತು.
               ` ಹೆ ಹೆ ಸರಿ ಸರಿ..ಹಂಗೇನೂ ಮಾಡೋದಿಲ್ಲ ಮಾರಾಯಾ...' ನನಗರಿವಿಲ್ಲದಂತೆ ಭೂತದ ಜೊತೆಗೆ ಆಪ್ತತೆ ಮುಡಲಾರಂಭವಾಗಿತ್ತು.. `ಮತ್ತೆ ಹೇಗಿದಿಯಾ ಗಣಿ..' ಉಭಯಕುಶಲೋಪರಿಯ ಮೂಲಕ ಮಾತಿಗೆ ಶುರುವಿಟ್ಟುಕೊಂಡೆ.
               `ಭೂತದ ಬಳಿ ಹೇಗಿದ್ದೀಯಾ ಎಂದು ಕೇಳ್ತೀಯಲ್ಲ ಮಾರಾಯಾ.. ನಾವು ಯಾವಾಗಲೂ ಅತೃಪ್ತರು. ನಮಗೆ ತೃಪ್ತಿ ಅನ್ನೋದೆ ಇಲ್ಲ ತಿಳ್ಕೋ. ನಾವು ತೃಪ್ತರಾದ್ವಿ ಅಂತಾದ್ರೆ ನಮಗೆ ಭೂತದ ಬದುಕಿನಿಂದ ಮುಕ್ತಿ ಸಿಕ್ಕಂತೆ..' ಎಂದಿತು ಗಣಿಯ ಆತ್ಮ.
              `ನನ್ನಲ್ಲಿ ನಿನ್ನ ಬಗ್ಗೆ ಇನ್ನೂ ಹಲವು ಗೊಂದಲಗಳಿವೆ. ಕೇಳಬೇಕಾದ ಹಲವು ಪ್ರಶ್ನೆಗಳು ಅರ್ಧಲ್ಲಿಯೇ ನಿಂತು ಹೋಗಿದೆ. ಹೇಗೆ ಕೇಳಬೇಕು ಎಂದೇ ಗೊತ್ತಾಗುತ್ತಿಲ್ಲ.. ನೀನು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ನಮಗೆಲ್ಲಾ ಅದು ಇನ್ನೂ ನಿಘೂಡವಾಗಿದೆ. ನೀನು ಆತ್ಮಹತ್ಯೆ ಮಾಡಿಕೊಂಡ ಮರುದಿನ ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತನಾಡುತ್ತಿದ್ದರು. ಕೆಲವರು ಇದು ಆತ್ಮಹತ್ಯೆಯಲ್ಲಿ ಕೊಲೆ ಅಂದರು. ಮತ್ತೆ ಹಲವರು ಆತ್ಮಹತ್ಯೆಯೇ ಹೌದು ಎಂದರು. ಅದೇನೇ ಆಗಿರಲಿ. ನಿನ್ನ ಸಾವಿಗೆ ಅಸಲಿ ಕಾರಣ ಏನು..?' ಪ್ರಶ್ನೆಗಳ ಸುರಿಮಳೆ ಮಾಡಿದೆ.
               `ನೋಡು ಸಾವಿಗೆ ಒಂದು ರೀತಿ, ನೆಪ, ಮಾರ್ಗಗಳಿರುತ್ತವೆ. ನಾನು ಸತ್ತ ರಕ್ಷಣ ಯಾರ್ಯಾರು ಹೇಗ್ಹೇಗೆ ಮಾತನಾಡಿಕೊಂಡರು ಎಂಬುದು ನನಗೂ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡೆನೋ ಅಥವಾ ಕೊಲೆಯಾದೆನೋ ಎಂಬುದು ಮುಖ್ಯವಲ್ಲ. ನಾನು ಸತ್ತಿದ್ದೇನಲ್ಲ.. ಅದು ಸತ್ಯ. ನಾನು ಸತ್ತಿರುವ ಕೊಠಡಿಯ ಬಾಗಿಲು ಚಿಲಕ ಹಾಕಿರಲಿಲ್ಲ. ಯಾವಾಗಲೂ ನನ್ನ ಜೊತೆಗೆ ಇರುತ್ತಿದ್ದ ರೂಮಿನ ಸಹಪಾಠಿ ಆ ದಿನ ರೂಮಿನಲ್ಲಿರಲಿಲ್ಲ ಇತ್ಯಾದಿ ಇತ್ಯಾದಿಗಳೆಲ್ಲ ನನ್ನ ಸಾವಿನ ಕುರಿತು ನಿಮ್ಮಲ್ಲಿ ದ್ವಂದ್ವವನ್ನು ಹುಟ್ಟುಹಾಕಿವೆ ಅನ್ನುವುದು ನನಗೂ ಗೊತ್ತಿದೆ. ನಾನು ಸತ್ತಿದ್ದು ಹೇಗೆ ಎನ್ನುವುದು ನಿನಗೆ ಅಷ್ಟು ಮುಖ್ಯ ಎನ್ನುವುದಾದರೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೆ ಎಂದೇ ಹೇಳಬೇಕಾಗುತ್ತದೆ ನೋಡು..' ಎಂದ ಆತ್ಮರೂಪಿ ಗಣಿ.
               `ಅದು ಸರಿ.. ಯಾಕೆ ಅಂತ ಗೊತ್ತಾಗಲಿಲ್ಲವಲ್ಲ.. ಹಲವರು ನೀನು ಸಾಯುವಾಗ ತೀವ್ರವಾದ ಖಾಯಿಲೆಯಿಂದ ಬಳಲುತ್ತಿದ್ದೆ, ವೈಟ್ ಜಾಂಡೀಸಾಗಿತ್ತು, ಲವ್ ಫೇಲ್ಯೂರ್ ಆಗಿತ್ತು, ನೀನು ಪ್ರೀತಿಸುತ್ತಿದ್ದ ಹುಡುಗಿಯ ಅಣ್ಣಂದಿರು ನಿನ್ನ ಮೇಲೆ ಹಲ್ಲೆ ಮಾಡಲು ಸಮಯ ಸಾಧಿಸುತ್ತಿದ್ದರು ಅವರ ಭಯದಿಂದ ಆತ್ಮಹತ್ಯೆ ಮಾಡಿಕೊಂಡೆ ಎಂದೆಲ್ಲ ಮಾತನಾಡಿಕೊಂಡಿದ್ದರು..ನಿನ್ನ ಸಾವಿಗೆ ಅಸಲಿ ಕಾರಣ ಎಂತದ್ದು ಮಾರಾಯಾ..?' ಗಣಿಯ ಕಾಲೆಳೆದೆ.
                `ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ. ಆದರೆ ಕಾರಣಗಳನ್ನು ಹೇಳಲಾರೆ.. ಕಟು ಸತ್ಯಗಳು ಭಾವನೆಗಳನ್ನು ಘಾಸಿಗೊಳಿಸುತ್ತವೆ. ಮಾರಾಯಾ ನನ್ನ ಸಾವಿನ ವಿಷಯ ಬಿಟ್ಹಾಕು.. ನಮ್ಮ ಕಾಲೇಜಿನ ಸವಿ ದಿನಗಳನ್ನು ನೆನಪು ಮಾಡಿಕೊಳ್ಳೋಣ.. ಖುಷಿಯಾಗಿ ಮಾತನಾಡುವ ಅಂತ ಬಂದರೆ ಇವ ಬರಿ ನನ್ನ ಸಾವಿನ ಕುರಿತೇ ಮಾತನಾಡುತ್ತಾನೆ..' ಗಣಿಯ ಆತ್ಮ ಹುಸಿಮುನಿಸು ತೋರಿತು.
                `ಆಯ್ತು ಬಿಡು ಮಾರಾಯಾ.. ಕೇಳೋಲ್ಲ.. ನಿನ್ನ ಪ್ರೀತಿಸ್ತಾ ಇದ್ಲಲ್ಲ ಅವಳೇನು ಮಾಡ್ತಾ ಇದ್ದಾಳೋ..? ಗೊತ್ತುಂಟಾ ಅವಳ ಬಗ್ಗೆ..?'
                `ಹುಂ.. ನಿಮಗೆ ಹೇಗೆ ಮಿತ್ರರು ಇರುತ್ತಾರೋ ನಮಗೂ ಹಾಗೇ ಈ ಪೈಶಾಚಿಕ ಲೋಕದಲ್ಲೂ ಮಿತ್ರರು ಇರ್ತಾರೆ.. ಅವರ ಬಳಿ ಮಾಹಿತಿ ಪಡೆದಿದ್ದೇನೆ. ಅವಳಿಗೆ ಮದುವೆ ಆಗಿದೆಯಂತೆ. ಒಂದು ಗಂಡು ಮಗು ಇದೆ ಎಂಬ ಸುದ್ದಿ ತಿಳಿದೆ. ಆ ಮಗುವಿನ ಹೆಸರು ಗಣಿ ಅಂತಲೇ ಇಟ್ಟಿದ್ದಾಳಂತೆ.. ಯಾಕೋ ತುಂಬಾ ಬೇಜಾರಾಗ್ತಿದೆ ದೋಸ್ತಾ..? ಅದ್ ಸರಿ ನೀನು ನನ್ನ ತಂಗಿಯನ್ನು ಪ್ರೀತಿಸ್ತಾ ಇದ್ಯಲ್ಲಾ.. ಅವಳ ಕತೆ ಏನಾಯ್ತು.. ನಿಂಗೆ ಅವಳು ಸಿಕ್ಕಳಾ..?' ನನ್ನನ್ನೇ ಪ್ರಶ್ನಿಸಿದ್ದ ಗಣಿ.
                `ನಿನಗೆ ಅಣ್ಣ ಅಣ್ಣ ಎಂದು ಕಾಡುತ್ತಿದ್ದಳಲ್ಲ.. ಅವಳ ಬಗ್ಗೆ ನೀನು ಕೇಳ್ತಿದ್ದೀಯಲ್ಲವಾ.. ಯಾಕೆ ನಿಂಗೆ ಅವಳ ಮನೆಯ ಬಳಿ ಯಾವುದೇ ಮಿತ್ರರು ಸಿಕ್ಕಿಲ್ಲವೇನೋ...' ಗಣಿಯ ಆತ್ಮದ ಕಾಲೆಳೆಯಲು ಯತ್ನಿಸಿದೆ..
                `ಹೆ ಹೋಗೋ ಮಾರಾಯಾ.. ಹಂಗೇನೂ ಇಲ್ಲ.. ನೀನು ಹೇಳ್ತೀಯೋ ಇಲ್ವೋ...'
                `ಇಲ್ಲ ಗಣಿ.. ಅವಳು ನನಗೆ ಸಿಗಲಿಲ್ಲ.. ನನಗೆ ಕಾರಣವನ್ನೂ ಹೇಳದೇ ಬಿಟ್ಟುಹೋದಳು..' ಎಂದೆ
                `ಕಾಲೇಜು ದಿನಗಳಲ್ಲೇ ನಿನಗೆ ಹೇಳಬೇಕು ಎಂದುಕೊಂಡಿದ್ದೆ ದೋಸ್ತಾ.. ಅವಳು ನಿನಗೆ ಸರಿಯಾದವಳಲ್ಲ ಅಂತ.. ಆದರೆ ನಾನು ಹೇಳಿದರೆ ನೀನು ಕೇಳುವಂತಿರಲಿಲ್ಲ ಬಿಡು. ಆಕೆಯೂ ತುಂಬಾ ಸತಾಯಿಸಿರಬೇಕು ಎಲ್ಲವಾ.. ಆ ನಂತರ ನನ್ನ ನಿನ್ನ ನಡುವೆ ಗೊತ್ತಾಗದಂತೆ ಅವಳ ದೆಸೆಯಿಂದಲೇ ಗೋಡೆ ಬೆಳೆಯಿತು. ನಾನು-ನೀನು ಮಾತುಬಿಟ್ಟಿದ್ದಷ್ಟೇ ಅಲ್ಲ ಎದುರಾ ಬದರಾ ಆದರೆ ಗುದ್ದಾಡಿಕೊಲ್ಳುವಷ್ಟು ದ್ವೇಷ ಕಾರಲು ಆರಂಭ ಮಾಡಿದ್ವಿ.. ಈಗ ನೆನಪು ಮಾಡಿಕೊಂಡರೆ ತುಂಬಾ ಬೇಜಾರಾಗುತ್ತದೆ ಮಾರಾಯಾ..' ಎಂದ ಗಣಿ.
                `ದೆವ್ವ ಮತ್ತು ಬೇಜಾರು.. ಎಂತಾ ಶಬ್ದಗಳು ಮಾರಾಯಾ.. ದೆವ್ವಕ್ಕೂ ಬೇಜಾರಾಗುತ್ತದೆ ಎಂದು ಇದೇ ಮೊದಲು ನಾನು ಕೇಳಿದ್ದು.. ಇರಲಿ ಬಿಡು.. ಆ ದಿನಗಳು ನಿಜಕ್ಕೂ ಖುಷಿ ನೀಡಿದ್ದವು.. ಈಗಲೂ ಅನೇಕ ಸಾರಿ ನೆನಪು ಮಾಡಿಕೊಂಡು ನನ್ನೊಳಗೆ ಖುಷಿ ಹಾಗೂ ದುಃಖವನ್ನು ಅನುಭವಿಸುತ್ತೇನೆ... ಅದನ್ನು ಈಗ ಯಾರ ಬಳಿಯಾದರೂ ಹೇಳಿದರೆ ಇಂವ ಆ ಕಾಲದಿಂದ ಮುಂದೆ ಬರಲೇ ಇಲ್ಲ ಎಂದುಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದೇನೆ..' ಎಂದೆ
                 `ಹೌದು.. ಹೌದು.. ಕಾಲೇಜಿನ ತರಗತಿಗಳು, ಆ ಲೆಕ್ಚರ್ರುಗಳು, ಸೀರಿಯಸ್ಸಾಗಿ ಪಾಠ ಕೇಳುವ ನಾನು, ಚೆಸ್ಸು, ಅದು, ಇದು ಎಂಬ ಕಾರಣ ಕೊಟ್ಟು ಕ್ಲಾಸಿಗೆ ಕಳ್ಳಬೀಳುವ ನೀನು.. ನನ್ನ ಜೊತೆ ಹುಡುಗಿಯರು ಮಾತನಾಡಿ ಹಾಯ್ ಬಾಯ್ ಅಂದರೆ ಹೊಟ್ಟೆ ಉರಿದುಕೊಳ್ಳುವ ನೀನು, ಬಕ್ಕಳ ತೇರಲ್ಲಿ ಫಾರಿನ್ನ್ ಮಂದಿಯ ಜೊತೆ ಸಖತ್ತಾಗಿ ಇಂಗ್ಲೀಷ್ ಮಾತನಾಡಿದ ನೀನು, ನಿನ್ನನ್ನೋಡಿ ಎಂತಾ ಸಾಲಿಡ್ ಇಂಗ್ಲೀಷ್ ಮಾತಾಡ್ತೆ ಮಾರಾಯಾ ಎಂದಿದ್ದ ನಾನು, ಆಕಾಶವಾಣಿ ಕಾರವಾರದ ಕ್ವಿಜ್ ಕಾಂಪಿಟೇಶನ್ನು, ಕೈಗಾದ ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ ಅಡ್ಡಾಡಿದ್ದು, ಕ್ರಿಸ್ ಮಸ್ ದಿನ ಸಾಂತಾಕ್ಲಾಸ್ ಹಾಕಿಕೊಂಡಿದ್ದ ಕೆಂಪು ಟೋಪಿಯನ್ನು ಎಳೆದಿದ್ದ ನೀನು.. ಅಂವ ಅಟ್ಟಿಸಿಕೊಂಡು ಬಂದಾಗ ಕೈಗಾದ ಬೀದಿಯಲ್ಲಿ ಓಡಿದ್ದ ನಾನು... ಮತ್ತೆ ಮತ್ತೆ ಕಾಡುವ ನಮ್ಮ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು... ಓಹ್ ಒಂದೆ ಎರಡೆ... ಎಲ್ಲ ನನಗೂ ಆಗಾಗ ನೆನಪಾಗುತ್ತಿರುತ್ತವೆ ಮಾರಾಯಾ..' ಎಂದ ಆತ.
                  `ಹೌದು ಹೌದು.. ಕದ್ರಾ ಡ್ಯಾಮಿನ ಎದುರು ನಾನು-ನೀನು ನಿಂತು ಪೋಟೋ ತೆಗೆಸಿಕೊಂಡಿದ್ದನ್ನು ಮರೆತು ಬಿಟ್ಟಂತಿದೆ ನೋಡು.. ನಾವು ಹಾಗೆ ನಿಂತಿದ್ದಾಗಲೇ ಡ್ಯಾಮಿನ ಒಂದು ಗೇಟಿನ್ನು ಅರ್ಧ ತೆಗೆದು ನೀರನ್ನು ಬಿಟ್ಟಿದ್ದರು. ನಾವಿಬ್ಬರೂ ಭಯದಿಂದ ಓಡಿ ನಿನ್ನ ಸಂಬಂಧಿಕರ ಮನೆಯತ್ತ ತೆರಳಿದ್ದೆವಲ್ಲ.. ಕೈಗಾದಿಂದ ವಾಪಾಸು ಬರುವಾಗ ಟಿಕೆಟ್ ಮಾಡಿಸದೇ ಬಸ್ಸನ್ನೇರಿ ಕೊನೆಗೆ ಚಕ್ಕಿಂಗ್ ಆಫೀಸರ್ ಕೈಲಿ ಸಿಕ್ಕಿಬಿದ್ದು ದಂಡ ತೆತ್ತಿದ್ದೆವಲ್ಲ.. ಕಾರವಾರ, ಕುಮಟಾ, ಧಾರವಾಡ, ಹುಬ್ಬಳ್ಳಿ, ಶಿರಸಿ ಊಹೂಂ.. ನಮ್ಮ ಉರಾಉರಿಗೆ ಅವು ಎಂದೂ ಸಾಕಾಗಿರಲೇ ಇಲ್ಲ ಅಲ್ಲವಾ.. ' ನೆನಪಿನಾಳಕ್ಕೆ ನಾನು ಇಳಿದಿದ್ದೆ..
                 `ನಿಜ ನಿಜ.. ಕಾಲೇಜಿನ ನೋಟೀಸು ಬೋರ್ಡಿನ ತುಂಬ ನೀನು-ನಾನು ಹಾಗೂ ನಮ್ಮ ಮಿತ್ರವೃಂದಗಳೇ ಇದ್ದವು. ಅದನ್ನು ಮರೆಯಲಿಕ್ಕಾಗಲ್ಲ ಬಿಡು..' ಎಂದ ಗಣಿ.
                 `ನಾನು ಅವಳನ್ನು ಪ್ರೀತಿಸುತ್ತಿದ್ದ ಹೊತ್ತಿನಲ್ಲಿಯೇ ನೀನು ನನ್ನ ಬಳಿ ಬಂದು ಅವಳ ಗೆಳತಿ ಹೇಗೆ..? ಒಳ್ಳೆಯ ಗುಣವಾ..? ಯಾವ ಊರು ಇತ್ಯಾದಿ ಮಾಹಿತಿಗಳೆಲ್ಲವನ್ನೂ ಪಡೆದಿದ್ದೆ.. ಕೆಲ ದಿನಗಳ ಕಾಲ ನೀನು ಹಾಗೂ ನನ್ನ ಹುಡುಗಿಯ ಗೆಳತಿ ಇಬ್ಬರೂ ಆಪ್ತರಾಗಿ ಓಡಾಡಿದ್ದಿರಿ.. ಆಮೇಲೆ ಇದ್ದಕ್ಕಿದ್ದಂತೆ ದೂರಾದಿರಿ.. ನಾನು ದೂರದಿಂದಲೇ ಗಮನಿಸಿದ್ದೆ.. ಏನಾಗಿತ್ತೋ..?' ನಾನು ಕೇಳಿದೆ.
                 `ಹುಂ. ಅದರ ಬಗ್ಗೆ ಏನ್ ಹೇಳೋದು.. ಪ್ರೇಮ ಹಾಗೂ ವೈಫಲ್ಯ ಒಂದೇ ನಾಣ್ಯ.. ಎರಡೆರಡು ಮುಖಗಳು ಮಾರಾಯ..ದೇವರು ಈ ನಾಣ್ಯವನ್ನು ಆಗಾಗ ಮೇಲಕ್ಕೆ ಹಾರಿಸುತ್ತಿರುತ್ತಾನೆ. ಕೆಲವು ಸಾರಿ ಪ್ರೇಮ ಮೇಲಾಗಿ ಬಿಡುತ್ತದೆ.. ಮತ್ತೆ ಕೆಲವು ಸಾರಿ ವೈಫಲ್ಯ.. ನನ್ನ ಪಾಲಿಗೆ ವೈಫಲ್ಯ ಮೇಲಾಗಿ ಬಿದ್ದಿತ್ತು.. ನಾನು ಅವಳು ದೂರಾಗಿದ್ದೆವು.. ನಿನ್ನ ಕತೆ ಏನು..?' ಎಂದ ಗಣಿ.
                `ನನ್ನ ಕಥೆ ಏನು ಕೇಳ್ತಿ ಮಾರಾಯಾ.. ಕಾಲೇಜು ದಿನಗಳಲ್ಲಿ ಅವಳು ನನ್ನ ಪ್ರೀತಿಯ ಜೊತೆಗೆ ಕಣ್ಣಾ ಮುಚ್ಚಾಲೆ ಆಡಿದಳು.. ನಂತರ ಕಾಲೇಜು ಕಳೆದ ತಕ್ಷಣ ದೊಡ್ಡದೊಂದು ಕೆಲಸ ಸಿಕ್ಕಿತು ನೋಡು ಪ್ರಾಕ್ಟಿಕಲ್ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಳು.. ಮುಂದೊಂದು ದಿನ ನನಗೆ ಹೇಳಲಿಲ್ಲ ಕೇಳಲಿಲ್ಲ.. ಬೇರೊಬ್ಬನ ಜೊತೆ ಮದುವೆಯಾದಳು ಹೋದಳು.. ನಿನ್ನ ಪ್ರೇಮದ ಕಥೆ ಏನಾಗಿತ್ತೋ ನನ್ನದೂ ಅದೇ ಆಗಿತ್ತು...' ಎಂದು ನಿಟ್ಟುಸಿರುಬಿಟ್ಟೆ..
                 `ಏಹೇ.. ನನ್ನದಕ್ಕೂ ನಿನ್ನದಕ್ಕೂ ಬಹಳ ವ್ಯತ್ಯಾಸ ಇದೆ ಮಾರಾಯಾ.. ನನ್ನದು ಹುಟ್ಟುವ ಮೊದಲೆ ಸತ್ತ ಪ್ರೇಮ.. ಆದರೆ ನಿನ್ನದು ಹೆಮ್ಮರವಾಗಿದ್ದ ಪ್ರೇಮ. ಆದರೆ ನಿನ್ನ ಪ್ರೀತಿಯ ಹೆಮ್ಮರದ ನಡುವೆ ಬಸುರಿಗಿಡ ಹುಟ್ಟಿದ್ದು ನಿನಗೆ ಗೊತ್ತಾಗಲೇ ಇಲ್ಲ ಅನ್ನಿಸುತ್ತದೆ  ಅಲ್ಲವಾ..? ಹೋಗ್ಲಿ ಬಿಡು.. ಆದದ್ದೆಲ್ಲಾ ಒಳ್ಳೆಯದಕ್ಕೆ.. ಮುಂದೇನೋ ಒಳ್ಳೆಯದಾಗುತ್ತದೆ...' ಎಂದ ಗಣಿ..
                 `ಹೌದು.. ಹೌದು.. ಅದೇ ಬದುಕಲ್ಲವಾ.. ಹೋಗ್ಲಿ ಒಂದು ಪ್ರಶ್ನೆ ದೋಸ್ತಾ.. ಇದಕ್ಕೆ ಹಾರಿಕೆ ಉತ್ತರ ಬೇಡ..' ಎಂದೆ.. ಸರಿ ಎಂದ ಗಣಿ.. `ನೀನೇನೋ ಆತ್ಮಹತ್ಯೆ ಮಾಡಿಕೊಂಡೆ.. ಆದರೆ ಅದನ್ನು ಎಪ್ರಿಲ್ 1ಕ್ಕೆ ಯಾಕೆ ಮಾಡಿಕೊಂಡೆ..? ಇಷ್ಟಕ್ಕೂ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ..? ನಿನ್ನಲ್ಲಿ ಕೆಜಿಗಟ್ಟಲೆ ಪ್ರತಿಭೆಗಳಿದ್ದವು, ಒಳ್ಳೆಯ ಡ್ಯಾನ್ಸರ್, ಆಕ್ಟರ್, ಮಿಮಿಕ್ರಿ ಪಟು ನೀನಾಗಿದ್ದೆ.. ರಾಂಕ್ ಪಡೆಯುವಂತಹ ವಿದ್ಯಾರ್ಥಿಯೂ ನೀನು ಎಂಬುದು ನಮಗೆ ತಿಳಿದ ಸಂಗತಿ.. ಅನೇಕ ಸಾರಿ ನಾನು, ರಾಘು, ಕಿಟ್ಟಿ, ಮರಗಿಣಿ, ವಿನಿ, ನಾಗೂ, ಸುಬ್ಬು ಎಲ್ಲರೂ ನಿನ್ನ ಬಳಿ ಸಲಹೆ ಪಡೆದಿದ್ದೆವು.. ಸೋತು ಕುಸಿದಿದ್ದಾಗ ಗಾಳಿಯನ್ನು ಗುದ್ದಿ ಗೆಲ್ಲುವ ಆಶಾವಾದ ಹುಟ್ಟ ಹಾಕಿದ್ದ ನೀನು ಸಾವಿಗೆ ಶರಣಾಗಿದ್ದು ನಮಗೆ ಬಹಳ ಸಿಟ್ಟು ತಂದಿತ್ತು.. ನೀನು ಸತ್ತು ಸಾಧಿಸಿದ್ದೇನು..?' ಎಂದೆ..
                  ಗಣಿ ಮಾತಾಡಲಿಲ್ಲ.. ಒಂದೆರಗಳಿಗೆ ನಿಶ್ಶಬ್ಧ. ಗಣಿ ಇದ್ದಾನೋ ಹೊರಟು ಹೋದನೋ ಎನ್ನುವ ಅನುಮಾನ ಕಾಡಲು ಶುರುವಾದವು.. `ಗಣಿ.. ಇದ್ದೀಯಾ..? ಮಾಯವಾದೆಯಾ..?' ಎಂದು ಕೇಳಿದೆ.
                  ತುಸು ಹೊತ್ತಿನ ನಂತರ ಗಣಿ ಮಾತನಾಡಲು ಆರಂಭಿಸಿದ ' ನಿಜ ದೋಸ್ತಾ.. ನೀನು ಹೇಳಿದ ಮಾತುಗಳನ್ನೇ ನಾನು ಆಲೋಚನೆ ಮಾಡುತ್ತಿದ್ದೆ. ನಾನು ಆತ್ಮಹತ್ಯೆ ಮಾಡಿಕೊಂಡೆ ನಿಜ. ಆದರೆ ಆತ್ಮಹತ್ಯೆ ಮಾಡಿಕೊಂಡು ಏನು ಸಾಧನೆ ಮಾಡಿದೆ ಅಂತ ಕೇಳಿದರೆ ಏನಿಲ್ಲ ಎನ್ನಬಹುದು. ಇತ್ತ ಸ್ವರ್ಗವೂ ಇಲ್ಲ ನರಕವೂ ಇಲ್ಲ. ಬದುಕಿ ನಿಮ್ಮ ಜೊತೆಗೆ ಖುಷಿಯಾಗಿದ್ದೇನಾ ಅದೂ ಇಲ್ಲ. ಹೀಗೆ ಅಂತರಪಿಶಾಚಿಯಾಗಿ ಅಲೆಯುತ್ತಿದ್ದೇನೆ. ನಾನು ಸಾಯಬಾರದಿತ್ತು ಅಂತ ಅನ್ನಿಸುತ್ತಿದೆ.ಬದುಕಿನಲ್ಲಿ ಅದೆಷ್ಟೇ ತೊಂದರೆಗಳು, ತಾಪತ್ರಯಗಳು, ದುಃಖಗಳು ಸಮಸ್ಯೆಗಳು, ಹಳವಂಡಗಳಿದ್ದರೂ ಬದುಕಿ ತೋರಿಸಬೇಕಿತ್ತು ಅಂದುಕೊಳ್ಳುತ್ತಿದ್ದೇನೆ. ನೀವೆಲ್ಲ ಬದುಕುತ್ತಿದ್ದೀರಿ. ನಿಜಕ್ಕೂ ನಿಮ್ಮನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿದೆ. ಬದುಕಿನಲ್ಲಿ ಎಷ್ಟು ಸಾರಿ ಬಿದ್ದಿರಿ ನೀವು ಆದರೆ ನನ್ನ ಹಾಗೆ ಪರಿಸ್ಥಿತಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿಲ್ಲ. ಬದುಕಿನ ಜೊತೆಗೆ ಗುದ್ಯಾಟ ನಡೆಸುತ್ತಿದ್ದೀರಲ್ಲ.. ನೀವು ಗ್ರೇಟ್.. ನಾನು ಹೇಡಿ ಅಂದುಕೊಂಡರೆ ಸರಿಯಾಗುತ್ತೇನೋ..' ಎಂದ. ಒಂದರೆಘಳಿಗೆ ನಿಂತು  `ಆತ್ಮಹತ್ಯೆಗೂ ಮುನ್ನ ನೋಡೇ ಬಿಡುವ ಎಂದು ಮಾಡಿಕೊಂಡೆ. ಆದರೆ ಯಾವಾಗ ಜೀವ ಹಾರಿ ಹೋಯ್ತೋ.. ತಕ್ಷಣವೇ ಅಯ್ಯೋ ನಾನೆಂತ ತಪ್ಪು ಮಾಡಿಬಿಟ್ಟೆ ಎಂದುಕೊಂಡೆ. ವಾಪಾಸು ಬರಲು ಯತ್ನಿಸಿದೆ. ಊಹೂಂ ಆಗಲಿಲ್ಲ.. ನೀವೆಲ್ಲ ನಾನು ಆತ್ಮಹತ್ಯೆ ಮಾಡಿಕೊಂಡ ನಂತರ ನನ್ನ ಪಾರ್ಥಿವ ಶರೀರ ನೋಡಲು ಬಂದಿರಿ. ನನ್ನ ನಿನ್ನ ನಡುವೆ ಅದೆಷ್ಟೇ ಸಿಟ್ಟು, ಸೆಡವು, ದ್ವೇಷ ಇದ್ದರೂ ನೀನು ಬಂದು ಕಣ್ಣೀರು ಹಾಕಿದೆಯಲ್ಲ.. ನಾನು ಆ ಕ್ಷಣದಲ್ಲೇ ಅಯ್ಯೋ ಎಂತಾ ತಪ್ಪು ಕೆಲಸ ಮಾಡಿಬಿಟ್ಟೆ. ಎದುರಾ ಬದುರಾ ಹೊಡೆದಾಡಿಕೊಂಡರೂ ಆಂತರ್ಯದಲ್ಲಿ ಎಂತಾ ಒಳ್ಳೆಯ ಗುಣವಿತ್ತಲ್ಲ ಎಂದುಕೊಂಡೆ. ಒಳಗೊಳಗೆ ನಾನೂ ಅತ್ತೆ. ತ್ರಿಶಂಕುವಾಗಿದ್ದುಕೊಂಡೆ ನನ್ನ ದೇಹವನ್ನು ನನ್ನ ಮನೆಯವರು ಬೆಂಕಿಯಲ್ಲಿ ಸುಡುತ್ತಿದ್ದುದನ್ನು ನೋಡಿದೆ. ಕಸಿವಿಸಿಯಾಯಿತು. ಆದರೆ ವಾಪಾಸು ಬರಲು ಆಗಲೇ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡೆ ಎನ್ನುವ ಕಾರಣಕ್ಕೆ ನನ್ನ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿದರಲ್ಲ.. ಆಗಲೂ ಅಷ್ಟೆ ಏನೋ ತಳಮಳ ಕಸಿವಿಸಿಯಾಯಿತು. ನನ್ನೆದೆಯನ್ನು ಬಗೆಯುತ್ತಿದ್ದರೆ, ಕೈಕಾಲಿನ ಒಳಗೆಲ್ಲ ವೈದ್ಯರು ದೃಷ್ಟಿ ಹಾಯಿಸುತ್ತಿದ್ದರೆ ಮತ್ತೆ ಮತ್ತೆ ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದುಕೊಂಡೆ. ಆದರೆ .. ಆದರೆ... ನಾನು ಆತ್ಮಹತ್ಯೆ ಮಾಡಿಕೊಂಡ ಮೇಲೆ ಇನ್ನೆಷ್ಟು ಸಾರಿ ಹೇಳಿದರೂ ಏನು ಪ್ರಯೋಜನ.. ವಾಪಾಸು ಬರಲಿಕ್ಕೆ ಆಗುವುದಿಲ್ಲವಲ್ಲ..ಹುಂ..' ಗಣಿ ನಿಟ್ಟುಸಿರು ಬಿಟ್ಟಂತಾಯಿತು. ನನಗೆ ಏನು ಹೇಳಬೇಕೋ ತೋಚಲಿಲ್ಲ. ಸುಮ್ಮನಿದ್ದೆ.
              ಆತನೇ ಮುಂದುವರಿದ `ದೋಸ್ತಾ ಖರೆ ಹೇಳ್ತಿ.. ಯಾರೂ ಆತ್ಮಹತ್ಯೆ ಮಾಡ್ಕಳಡಿ.. ಬದುಕು ಇನ್ನೂ ಇದ್ದು.. ಎಲ್ಲಿವರೆಗೆ ನಾವಾಗೆ ಬದುಕ್ತೀವೋ ಅಲ್ಲೀವರೆಗೂ ಬದುಕಿ.. ಅವಕಾಶಗಳು ಸಾಕಷ್ಟಿವೆ..  ನನ್ನಾಂಗೆ ಆಗಬೇಡಿ.. ಬದುಕಿಗೆ ಹೆದರಿ ಓಡಲೇಬೇಡಿ.. ಏನೇನು ಸಾಧ್ಯವೋ ಅಷ್ಟನ್ನೂ ಅನುಭವಿಸಿ. ಬಹುಶಃ ಅನುಭವಗಳು ಕೊಡುವ ಖುಷಿಯನ್ನು ಮತ್ಯಾವುದೂ ಕೊಡೋದಿಲ್ಲ ಅನ್ನಿಸ್ತಿದೆ.. ಅನುಭವಗಳನ್ನೇ ಸವಿಯಬೇಕು..' ಗಣಿ ಬೋಧನೆ ಮಾಡುತ್ತಿದ್ದಾನಾ ಅನ್ನಿಸಿತಾದರೂ ಆತ ಹೇಳುವ ಸಂಗತಿಗಳೂ ಹೌದಾದದ್ದು ಎನ್ನಿಸಿತು.
                `ನಾನು ಎಪ್ರಿಲ್ ಒಂದರಂದು ಆತ್ಮಹತ್ಯೆ ಮಾಡಿಕೊಂಡಿಲ್ಲ ದೋಸ್ತಾ.. ಮಾರ್ಚ್ 31ಕ್ಕೇ ಮಾಡಿಕೊಂಡದ್ದು. ಅದು ನಿಮಗೆಲ್ಲ ಗೊತ್ತಾಗಿದ್ದು ಎಪ್ರಿಲ್ 1ರಂದು. ಆತ್ಮಹತ್ಯೆಗೆ ಇಂತದ್ದೇ ದಿನಾಂಕ ಅಂತ ಯಾರಾದ್ರೂ ನಿಗದಿ ಮಾಡಿರ್ತಾರೇನೋ ಹುಚ್ಚಾ..' ಎಂದು ನಕ್ಕ ಗಣಿ. ನನಗೆ ಪಿಚ್ಚೆನ್ನಿಸಿತು.
                 `ನೀ ಹೇಳಿದ್ದು ನಿಜ ವಿನೂ.. ನನ್ನಲ್ಲಿ ಪ್ರತಿಭೆಗಳಿದ್ದವು. ನೀನು ಗುರುತಿಸಿದ್ದೆ. ಅನೇಕ ಸಾರಿ ಹೇಳಿಯೂ ಹೇಳಿದ್ದೆ. ಯುನಿವರ್ಸಿಟಿ ಯುವಜನ ಮೇಳಕ್ಕೆ ಹೋದಾಗಲೇ ಅಲ್ಲವೇ ಸಿನಿಮಾವೊಂದರ ನಿರ್ದೇಶಕರು ನನ್ನ ಬಳಿ ನಟನೆ ಮಾಡ್ತೀಯಾ? ನಿನಗೆ ಅವಕಾಶ ಕೊಟ್ಟರೆ ಬರ್ತೀಯಾ ಅಂತ ಕೇಳಿದ್ದರು. ನಿನಗೂ ಗೊತ್ತು ಅದು. ಆದರೆ ಬದುಕು ನಾವಂದುಕೊಂಡಂತೆ ಆಗಲೇ ಇಲ್ಲ ನೋಡು.. ಎತ್ತೆತ್ತಲೋ ಹೊರಳಿತು..' ಎಂದ..
                 `ಹೌದು ಕಣೋ ಗಣೀ.. ಎಲ್ಲವೂ ಹಂಗೇ ಆಗೋದು. ನಾವು ಅಂದುಕೊಳ್ಳೋದೆ ಒಂದು ಆದರೆ ಆಗೋದೇ ಇನ್ನೊಂದು.. ಅದ್ ಸರಿ ನೀ ಯಾಕೆ ಇನ್ನೂ ಅಂತರ ಪಿಶಾಚಿಯಾಗಿ, ಈ ರೂಪದಲ್ಲಿ ಓಡಾಡ್ತಾ ಇದ್ದಿದ್ದು..? ನೀನು ಸತ್ತು ಆಗಲೇ ಐದು ವರ್ಷಗಳಾಗ್ತಾ ಬಂದವಲ್ಲ ಮಾರಾಯಾ.. ಇನ್ನೆಷ್ಟು ದಿನಗಳ ಕಾಲ ಈ ರೂಪ..?' ಎಂದು ಕೇಳಿದೆ.
                `ಗೊತ್ತಿಲ್ಲ.. ಒಳ್ಳೆ ಬದುಕನ್ನು ಕೊಟ್ಟಿದ್ದೆ..ಅದನ್ನು ಹಾಳುಮಾಡಿಕೊಂಡೆ ಎನ್ನುವ ಕಾರಣಕ್ಕೆ ದೇವರು ಈ ರೂಪದಲ್ಲಿ ಶಿಕ್ಷೆ ಅನುಭವಿಸು ಅಂತ ಪಿಶಾಚಿಯಾಗಿ ಅಲೆದಾಡಲು ನನ್ನನ್ನು ಬಿಟ್ಟಿರಬೇಕು. ಯಾಕೋ ಗೊತ್ತಿಲ್ಲ. ನಾನು ಹೀಗೇ ಇದ್ದೇನೆ. ಖಂಡಿತ ನನಗೆ ಇನ್ನೆಷ್ಟು ಕಾಲ ಇದೇ ಅವತಾರದಲ್ಲಿ ಇರಬೇಕು ಎನ್ನುವುದೂ ಗೊತ್ತಿಲ್ಲ. ದೇವರು ಕೊಟ್ಟಿದ್ದು ಶಿಕ್ಷೆಯೇ ಹೌದಾದರೆ ಅನುಭವಿಸಲೇ ಬೇಕು.. ಅಲ್ಲವಾ..? ಹೋಗ್ಲಿ ಬಿಡು.. ನಾನು ಹೋಗೋ ಹೊತ್ತಾಯ್ತು..' ಎಂದು ಗಣಿ ಹೊರಡಲು ಅನುವಾದ..
                 ನಾನು ಲಗು ಬಗೆಯಿಂದ ತಾಳು ಮಾರಾಯಾ.. `ನಿನ್ನ ಬಳಿ ಕೇಳೋದು ಸಾಕಷ್ಟಿದೆ..' ಎಂದೆ.
                 `ಪತ್ರಕರ್ತನ ಬುದ್ಧಿ ಶುರುಮಾಡಿಕೊಂಡು ಬಿಟ್ಟೆಯಾ..? ಹಲವು ಸಂಗತಿ ಹಂಚಿಕೊಂಡೆವಲ್ಲ ಮಾರಾಯಾ.. ಇನ್ನೆಂತ ಉಂಟು ಕೇಳೋದಿಕ್ಕೆ..?' ಎಂದು ಪ್ರಶ್ನಿಸಿದ ಗಣಿ.
                  `ಕೊನೆ ಪ್ರಶ್ನೆ ಅಂತ ಬೇಕಾದ್ರೂ ಅಂದುಕೋ.. ಇದಕ್ಕೆ ನೀನು ಸ್ಪಷ್ಟ ಉತ್ತರ ಕೊಡಲೇ ಬೇಕು.. ಕೊಡ್ತೀಯಲ್ಲಾ..' ಎಂದು ಪಟ್ಟಾಗಿ ಕೇಳಿದೆ..
                   `ಅದೆಂತಾ ಪ್ರಶ್ನೆ ಮಾರಾಯಾ.. ಕೇಳು.. ಕೇಳು.. ಹೇಳುವಂತದ್ದಾದರೆ ಹೇಳೋಣ..' ಗಣಿ ಮತ್ತೆ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದ..
                   `ಏನೂ ಅಲ್ಲ ಮಾರಾಯಾ.. ಒಂದು ಕಾಲದಲ್ಲಿ ನಾನೂ ನೀನೂ ಭಯಂಕರ ದೋಸ್ತರು.. ಆದರೆ ಕೊನೆ ಕೊನೆಗೆ ನಾನು ನೀನು ಸಿಕ್ಕಾಪಟ್ಟೆ ಧ್ವೇಶ ಕಾರುವ ಶತ್ರುಗಳಾಗಿದ್ವಿ.. ನೀನು ಸತ್ತ ತಕ್ಷಣದಲ್ಲೇ ನನಗೆ ಈ ಬಗ್ಗೆ ಕೇಳಬೇಕು ಎಂದುಕೊಂಡಿದ್ದೆ.  ನಿನಗೆ ನನ್ನ ಮೇಲೆ ದ್ವೇಶ ಹುಟ್ಟಲು ಕಾರಣವಾದರೂ ಏನಿತ್ತು? ಯಾರು ನಮ್ಮ ನಡುವಿನ ಸ್ನೇಹಕ್ಕೆ ಹುಳಿ ಹಿಂಡಿದ್ದು..? ಇದ್ದಕ್ಕಿದ್ದಂತೆ ಏನಾಯಿತು ನಿನಗೆ..? ಸುಬ್ಬುವಾ..? ರಾಘುವಾ.. ಕಿಟ್ಟುವಾ.. ನಾಗೂವಾ..ಮರಗಿಣಿಯಾ.. ಅಥವಾ.. ಇನ್ಯಾರಾದರೂ..? ಅವಳೇನಾದರೂ ಹೇಳಿದ್ದಳಾ..? ಖಂಡಿತ ಇವರಾರೂ ಅಲ್ಲ ಎಂದುಕೊಂಡಿದ್ದೇನೆ. ನೀನು ಆತ್ಮಹತ್ಯೆ ಮಾಡಿಕೊಂಡೆ ಅಂದ ತಕ್ಷಣ ನನ್ನ ಮನಸ್ಸು ಕೇಳಿತ್ತು. ಯಾಕೆ ನಮ್ಮ ನಡುವೆ ದ್ವೇಶ ಹುಟ್ಟಿತು..? ಯಾರು ಕಾರಣರು ನಮ್ಮ ನಡುವಿನ ದ್ವೇಶಕ್ಕೆ ಅಂತ.. ಈಗಲಾದರೂ ಹೇಳು ದೋಸ್ತಾ..' ಗಣಿಯ ಬಳಿ ಅಂಗಲಾಚಿದೆ.
                 `ಬೇಡ ವಿನು.. ಕೆಲವು ಪ್ರಶ್ನೆಗಳಿಗೆ ಉತ್ತರವಿದ್ದರೂ ಅದನ್ನು ಹೇಳು ಸಾಧ್ಯವಾಗೋದಿಲ್ಲ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇರಲಿ. ಅವಕ್ಕೆ ಉತ್ತರ ಕೇಳುವ ಪ್ರಯತ್ನ ಮಾಡಲೇಬಾರದು. ಸಿಗುವ ಉತ್ತರಗಳು ಮನಸ್ಸನ್ನು ಒಡೆಯುತ್ತವೆ ಹೃದಯಗಳಿಗೆ ಗಾಯ ಮಾಡುತ್ತವೆ.. ನಿಜಕ್ಕೂ ನೀನು ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿದೆ. ಆದರೆ ನಾನು ಹೇಳಲಾರೆ.. ನಾನು ಆತ್ಮಹತ್ಯೆ ಮಾಡಿಕೊಂಡು ತ್ರಿಶಂಕು ಸ್ವರ್ಗದಲ್ಲಿ ನರಳುತ್ತಿದ್ದೇನೆ. ನೀವು ಬದುಕುತ್ತಿರುವವರು. ಚನ್ನಾಗಿ ಬದುಕಿ. ನಾನು ಹೇಳುವ ಉತ್ತರ ಬದುಕಿನಲ್ಲಿ ಖುಷಿಯಾಗಿರುವ ನಿಮ್ಮ ಮನಸ್ಸನ್ನು ಒಡೆಯಬಾರದಲ್ವಾ.. ನನ್ನ ಬದುಕು ಹಾಳಾಗಿದೆ ನಿಜ.. ಬದುಕಿರುವ ನಿಮ್ಮ ಬದುಕು ಚನ್ನಾಗಿರಲಿ ದೋಸ್ತಾ..' ಎಂದು ಹೇಳಿದ ಗಣಿ ನಾನು ಮತ್ತೆ ಮಾತನಾಡುವುದರೊಳಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದ. ಮತ್ತೊಮ್ಮೆ ಆತನನ್ನು ಪ್ರಶ್ನಿಸುವುದರೊಳಗಾಗಿ `ಬಾಯ್..' ಎಂದವನೇ ನನ್ನ ಮಾತು ಕೇಳುವುದರೊಳಗೆ ಮಾಯವಾಗಿದ್ದ.

**
(ಮುಗಿಯಿತು)
**
(ಈ ಖಂಡಿತ ಯಾರಿಗೂ ಸಂಬಂಧಿಸಿದ್ದಲ್ಲ.. ನಮ್ಮ ನಡುವೆ ನಡೆದ ಕೆಲವು ಘಟನೆಗಳು ಈ ಕತೆಗೆ ಸ್ಪೂರ್ತಿ.. ಯಾರಾದರೂ ಈ ಕಥೆಯನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ..)