Tuesday, February 4, 2014

ನಕ್ಕು ಹಗುರಾಗಿ

ರೂಪದರ್ಶಿ : ಸಮನ್ವಯ ಸುದರ್ಶನ್
ನಕ್ಕು ಹಗುರಾಗಿ
ಕಮರುತಿಹ ಜೀವಗಳೇ..||


ನಗುವೆ ಹೃದಯದ ಚಿಲುಮೆ
ನಗುವೆ ಜೀವ ಸ್ಪೂರ್ತಿ |
ಇದುವೆ ಮಧುರ ಕ್ಷಣ
ಇದು ಪ್ರೀತಿ ಮೂರ್ತಿ ||

ನಗುವೆ ಕನಸಿನ ಕಿರಣ
ಹೊಸತು ಜೀವಸ್ಫುರಣ |
ನಗುವೆ ಮಾತಿನ ಮೂಲ
ಇದುವೆ ಸ್ನೇಹದ ಜಾಲ ||

ನಗುವೆ ದ್ವೇಷಕೆ ಕೊನೆಯು
ಹರ್ಷ ಪ್ರೀತಿಗೆ ಗೊನೆಯು |
ನಗುವೆ ಮೊಗದ ಚೆಲುವು
ಇದರಿಂದಲೇ ಭವ್ಯ ನಿಲುವು ||

ನಗುವ ನಲಿವಿನಿಂದಲೇ
ಜೀವ ಹಸಿರು ಆಗಿಸಿ |
ಎದೆಯಾಳದ ನೋವು, ದುಃಖ
ತೊರೆದು ದೂರಕೆ ಓಡಿಸಿ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ 13.12.2006ರಲ್ಲಿ ಬರೆದಿದ್ದೇನೆ)

Monday, February 3, 2014

ನಿಖಿತಾ ಹಾಗೂ ನಾನು


                    ಯಾವ ಮುಹೂರ್ತದಲ್ಲಿ ಈ ನಿಖಿತ ಮನೆಯ ಸದಸ್ಯಳಾದಳೋ ಗೊತ್ತಾಗಲೇ ಇಲ್ಲ. ಒಟ್ಟಿನಲ್ಲಿ ಆಕೆ ನಮ್ಮ ಮನೆಯಲ್ಲಿ ನಮ್ಮವಳಾಗಿದ್ದಳು.
                    ಒಂದು ದಿನ ಮನೆಗೆ ಇಳಿಸಂಜೆಯ ಹೊತ್ತು ಬೈಕೇರಿ ಮನೆಯ ಕಡೆಗೆ ಬರುತ್ತಿದ್ದೆ. ಬೈಕಿನ ಹಿಂದೆ ಆಯಿ ಇದ್ದಳು. ಅಡಕಳ್ಳಿ ಶಾಲೆಗೆ ಬರುವ ಹೊತ್ತಿನಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದಳು ನಿಖಿತಾ. `ಆಯಿಯ ಬಳಿ ನಮ್ಮನಿಗೆ ಕರಕೊಂಡು ಹೋಪನನೆ ಕೇಳಿದ್ದೆ..' `ತಮಾ.. ಮನೆಯಲ್ಲಿ ರಾಗಿಣಿ, ಶ್ರೀದೇವಿ, ದರ್ಶನ.. ಎಲ್ಲಾ ಇದ್ದ ಈಗ ನಿಖಿತಾನೂ ಬೇಕನಾ..?' ಎಂದು ಕೇಳಿದಳು ಆಯಿ.
`ಇರ್ಲೆ.. ಥೋ ರಾಗಿಣಿ ದನಿಕರ ಆತು.. ಶ್ರೀದೇವಿ ದನ ಆತು.. ಇನ್ನು ದರ್ಶನ ಅಂತೂ ಹಂಡಾಪಟ್ಟೆ ಬಣ್ಣದ ಹೋರಿಗರ ಆತು.. ನಿಖಿತಾ ಇರ್ಲಿ.. ಕರೆದುಕೊಂಡು ಹೋಪನ ತಗಾ.. ನಮಗೆ ಹೊರೆಯಾಗ್ತಿಲ್ಲೆ..' ಎಂದವನೇ ಆಯಿಯ ತೊಡೆಯ ಮೇಲೆ ಕುಳ್ಳಿರಿಸಿ ಮನೆಯತ್ತ ಬೈಕು ಚಲಾಯಿಸಿದ್ದೆ.
                    ಹೇಳ್ತಿ ತಡಿರಿ.. ನಿಖಿತಾ.. ಅವಳಲ್ಲಿ ಇವಳಲ್ಲ.. ಆಕೆ ನಮ್ಮ ಮನೆಯಲ್ಲಿದ್ದ ಹೆಣ್ಣು ನಾಯಿ ಮಾರಾಯ್ರೆ.. ಆಯಿಯ ವಿರೋಧವನ್ನು ಕಟ್ಟಿಕೊಂಡೂ ಆಕೆಯನ್ನು ಮನೆಗೆ ತಂದ ದಿನ ಟಿವಿಯಲ್ಲಿ ದರ್ಶನ್ ಗಲಾಟೆ ಬರುತ್ತಿತ್ತು. ತಂದಿದ್ದು ಹೆಣ್ಣು ನಾಯಿಮರಿ. ಏನಾದರೂ ವಿಶೇಷ ನಾಮಕರಣ ಮಾಡಬೇಕಲ್ಲ ಎಂದುಕೊಂಡವನಿಗೆ ನೆನಪಾದದ್ದು ನಿಖಿತಾ. ಶುಭ ಮುಹೂರ್ತದಲ್ಲಿ ರಾಹುಕಾಲದ ಸಂದರ್ಭದಲ್ಲಿ ನಿಖಿತಾ ಎಂದು ನಾಮಕರಣ ಮಾಡಿದೆ.
`ಇಶ್ಶೀ.. ರಾಗಿಣಿಯಾತು, ಶ್ರೀದೇವಿಯಾತು, ದರ್ಶನನೂ ಆದ.. ನಿಖಿತ ಬೇರೆ ಬಾಕಿಯಿತ್ತನಾ..?' ಎಂದು ಆಯಿ ರಾಗವೆಳೆದಿದ್ದಳು. `ಸುಮ್ನಿರೆ ಮಜಾ ಇರ್ತು..' ಹೇಳಿ ಆಕೆಯನ್ನು ಸುಮ್ಮನಿರಿಸಿದ್ದೆ.
                   ನಾನು ಹೊಸ ನಾಯಿಮರಿ ತಂದ ವಿಚಾರ ಹಾಗೂ ಅದಕ್ಕೆ ನಿಖಿತಾ ಎಂದು ನಾಮಕರಣ ಮಾಡಿದ ವಿಚಾರ ನಮ್ಮೂರಿಗರಿಗೆ ಜಗಜ್ಜಾಹೀರಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ ನೋಡಿ. ಬಂದವರೇ.. `ಅಯ್ಯೋ ತಮಾ.. ನಿಖಿತಾ ಹೇಳಿ ಹೆಸರಿಟ್ಟಿದ್ದಿದ್ ನೋಡಿ ಲ್ಯಾಬ್ರಡಾರೋ, ಪಮೋರಿಯನ್ನೋ ಹೌಂಡೋ ಅಂದ್ ಕಂಡನಲಾ.. ನೋಡಿದ್ರೆ ಜಾತಿ ನಾಯಿ..' ಎಂದು ಹೇಳುತ್ತಿದ್ದುದು ಗೋಡೆಯ ಮೇಲಿನ ಹಲ್ಲಿಯ ಲೊಚಗುಡುವ ಮಾತಿನಂತೆ ನನಗನ್ನಿಸಿತ್ತು.
                   ತರುವಾಗ ಬಡಕಲು ಬಡಕಲಾಗಿದ್ದ ನಿಖಿತಾ ಆರಂಭದ ಹಲವು ದಿನಗಳ ಕಾಲ ತನ್ನ ಜೀರೋ ಫಿಗರ್ ಮೆಂಟೇನ್ ಮಾಡಿದ್ದಳು. ನಾನು `ಎಂತಕ್ಕೋ ನಿಖಿತಾ ದೊಡ್ಡಾಗ್ತೇ ಇಲ್ಲೆ ಕಾಣ್ತು..' ಎಂದು ಹೇಳಿ ಒಂದು ಕೋಳಿಮೊಟ್ಟೆ ತಂದು ಹಾಕಿದ್ದೆ. ಒಂದೇ ಗುಕ್ಕಿಗೆ ತಿಂದ ನಿಖಿತಾ ನಂತರದ ನಾಲ್ಕೈದು ದಿನದಲ್ಲಿ ಸೋನಾಕ್ಷಿ ಸಿನ್ಹಾಳಂತೆ ದಷ್ಟಪುಷ್ಟವಾಗಿದ್ದಳು. ಎಲ್ಲರಿಗೂ ಕಾಣುವಂತಾಗಿದ್ದಳು.
                   ನಿಖಿತಾಳಲ್ಲಿ ಹಲವು ಒಳ್ಳೆಯ ಗುಣಗಳಿದ್ದವು. ಕೆಲವು ದುರ್ಗುಣಗಳೂ ಇದ್ದವು. ದುರ್ಗುಣಗಳಲ್ಲಿ ಮುಖ್ಯವಾದದ್ದೆಂದರೆ ಕಂಡ ಕಂಡಿದ್ದನ್ನು ಕಚ್ಚುವ ಚಟ. ಬುಟ್ಟು, ಕಾಲುಮಣೆ, ಕಂಬ, ಕುತ್ತಿಗೆಗೆ ಕಟ್ಟಿದ ಸರಪಳಿ, ಯಾಮಾರಿ ಅದರ ಬಳಿ ಬಿಟ್ಟು ಹೋದ ಚಪ್ಪಲ್ಲು.. ಏನೂ ಸಿಕ್ಕಿಲ್ಲ ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಗಿಣಿ ದನಿಕರದ ಕಿವಿ.. ಹೀಗೆ ನಿಖಿತಾಳ ಕಚ್ಚುವ ಚಟಕ್ಕೆ ಬಲಿಯಾಗಿದ್ದು ಹಲವು. ನಿಖಿತಾಳಿಗೊಂದು ಸುಂದರ ಗೂಡನ್ನೂ ತಯಾರು ಮಾಡಿಕೊಟ್ಟಿದ್ದೆ. ಆದರೆ ಆಕೆಯ ಹಲ್ಲಿನ ಕಾವಿಗೆ ಅದೂ ಮುರಿದುಹೋಗಿತ್ತು. ಆಕೆಯ ಕಡಿತದ ಕಾಟ ತಾಳಲಾರದೇ ಒಂದೆರಡು ಸಾರಿ ದಬ್ಬನೆ ನಿಖಿತಾಳ ಬಾಯಿಗೆ ಬಡಿದಿದ್ದೂ ಇದೆ. ಆಗೆಲ್ಲಾ `ಕುಂಯಕ್..' ಎಂದು ಕೂಗಿ ತಪ್ಪು ಮಾಡಲಾರೆ ಎಂದಿದ್ದರೂ ಮತ್ತೆ ಯಥಾ ಪ್ರಕಾರ ನಿಖಿತಾಳ ಬಾಲ ಡೊಂಕೆಂಬುದನ್ನು ಸಾಬೀತುಪಡಿಸುತ್ತಿತ್ತು.
                  ರಾತ್ರಿಯ ವೇಳೆ  `ಊ...' ಎಂದು ಅರಚುವುದು ನಿಖಿತಾಳ ಇನ್ನೊಂದು ದುರ್ಗುಣ. ಅದೆಂತ ಕನಸು ಬೀಳುತ್ತವೋ ಏನೋ.. ಅಷ್ಟಷ್ಟು ಹೊತ್ತಿಗೆ `ಊ...' ಎಂದು ಅರಚಿಕೊಳ್ಳುತ್ತಿದ್ದಳು ನಿಖಿತಾ.. ರಾತ್ರಿಯ ಸುಖನಿದ್ರೆಯಲ್ಲಿರುತ್ತಿದ್ದ ನಾನು ದಡಕ್ಕನೆ ಎದ್ದು ಹೊರ ಬಂದು ಲೈಟ್ ಹಾಕುವಷ್ಟರಲ್ಲಿ ಗಪ್ ಚುಪ್. ಗದರಿ ಮತ್ತೆ ಹಾಸಿಗೆಯನ್ನು ಸೇರುವಷ್ಟರಲ್ಲಿ ಮತ್ತೆ `ಊ...' ಹಲವು ರಾತ್ರಿಗಳು ನಿಖಿತಾಳ ಅರಚುವಿಕೆಗೆ ಹೀಗೆ ಬಲಿಯಾಗಿದ್ದಿವೆ. ಬಹುಶಃ ಈ ಊಳಾಟವೇ ಆಕೆಯ ಅಂತ್ಯಕ್ಕೆ ಕಾರಣವಾಗಿರಬೇಕು. ಅದನ್ನು ಕ್ಲೈಮ್ಯಾಕ್ಸಿನಲ್ಲಿ ಹೇಳ್ತಿ ಅಲ್ಲಿತನಕ ತಡಕಳಿ..
                  ಆಕೆಯ ಇನ್ನೊಂದು ಪ್ರಮುಖ ದುರ್ಗುಣ ಎಂದರೆ ಕಂಡಕಂಡಲ್ಲಿ ಅಗೆಯುವುದು. ಅಂಗಳವಿರಲಿ, ಹೊಡ್ಸಲಿನ ಬುಡವಿರಲಿ ಅಥವಾ ಅಡಿಕೆ ಬೇಯಿಸುವ ಒಲೆಯಿರಲಿ ಅದನ್ನು ತನ್ನು ಉಗುರಿನಿಂದ ಅಗೆದು ಹಾಕುವ ಮಹಾಗುಣವನ್ನು ನಿಖಿತಾ ಹೊಂದಿದ್ದಳು.
                  ನಾನು ಮನೆಯಿಂದ ಎಲ್ಲಿಗೇ ಹೊರಡಲಿ ನಿಳಿತಾ ಕೂಡ ಬಣ್ಣ ಬೆಗಡೆಯಿಂದ ತಯಾರಾಗುತ್ತಿದ್ದುದು ವಿಶೇಷ. ನಾನು ಪ್ಯಾಂಟ್ ಹಾಕಿದ ತಕ್ಷಣ ನಿಖಿತಾಳ ಸಂಭ್ರಮ ಸಡಗರ ನೋಡಬೇಕು.. ಆಹಾ..ಅಂಗಳದ ತುಂಬೆಲ್ಲ ಅವಳೇ ಅವಳು.. ಕುಣಿಯುವುದೇನು ನಲಿಯುವುದೇನು ಆಹಾ.. ನಾನು ಬೈಕ್ ಹತ್ತುವವರೆಗೂ ನನ್ನ ಮುಂದೆ ಹಿಂದೆ ಹೆಚ್ಚೂ ಕಡಿಮೆ ಡ್ಯಾನ್ಸ್ ಮಾಡಿದಂತೆ ನಡೆಯುವುದು ಅವಳ ರೂಟೀನು ಕೆಲಸ. ಕೆಲವೊಮ್ಮೆ ನನ್ನ ಬೈಕಿನ ಹಿಂದೆ ಕಿಲೋಮೀಟರುಗಟ್ಟಲೆ ಹಿಂಬಾಲಿಸಿ ಬಂದಿದ್ದೂ ಇದೆ.. ನಾನು `ಹಚ್ಯಾ..' ಎಂದು ಹದರಿದಾಗಲೆಲ್ಲ.. ಅಕ್ಕಪಕ್ಕದಲ್ಲಿ ಏನೋ ಬ್ಯೂಸಿ ಕೆಲಸ ಇದೆ ಎಂಬಂತೆ ಪೋಸು ಕೊಡುತ್ತ `ಬಕ್ ಬಕ್ ಬೌ...' ಎಂದು ಕೂಗುತ್ತಾ ಗಮನವನ್ನು ಎತ್ತಲೋ ಹರಿಸಿದ ಸಂದರ್ಭಗಳೂ ಇವೆ.
                  ಮನೆಯಲ್ಲಿ ಪುರಸೊತ್ತಿದ್ದಾಗ ನಾನು ಮನೆಯ ದನಗಳನ್ನು ಬಿಟ್ಟುಕೊಂಡು ಕಾಯಲು ಹೋಗುತ್ತೇನೆ. `ಇಂವ ಎಂತದಾ ದನಕಾಯ್ತಾ..' ಎಂದು ನೀವು ನನ್ನ ಬಗ್ಗೆ ಆಡಿಕೊಂಡರೂ ತಪ್ಪಿಲ್ಲ. ದನಕಾಯುವುದು ನನಗೆ ಖಂಡಿತವಾಗಿಯೂ ಖುಷಿ ಕೊಡುವ ಸಂಗತಿ. ಬಹುಶಃ ನಾನು ದನಕಾಯುವಾಗ ಕಂಡಷ್ಟು ಕನಸನ್ನು ಬೆಳಗಿನ ಜಾವದಲ್ಲೂ ಕಂಡಿಲ್ಲ ಬಿಡಿ. ಹೀಗೆ ನಾನು ದನ ಕಾಯಲು ಹೊರಟೆನೆಂದಾಗ ನನಗಿಂತ ಮೊದಲು ಸಾಗುವವಳೇ ನಿಖಿತಾ. ನೋಡಿದರೆ ನನಗೆ ಬಾಡಿಗಾರ್ಡೇನೋ ಎಂದುಕೊಳ್ಳಬೇಕು. ದುರಂತವೆಂದರೆ ಯಾರಾದರೂ ನಿಖಿತಾಳ ಎದುರು ಬಂದು ದಾರಿಯಲ್ಲಿದ್ದ ಕಲ್ಲನ್ನೆತ್ತಿ ಒಗೆದಂತಹ ಸನ್ನೆ ಮಾಡಿದರೆ ಸಾಕು `ಕಂಯ್.. ಕಂಯ್.. ಕಂಯ್..' ಎಂದು ಕೂಗುತ್ತಾ ನನ್ನ ಹಿಂದೆ ಅಡಗುವಷ್ಟು ಧೈರ್ಯವಂತೆ.
                  ದನವನ್ನು ಬಿಟ್ಟಾಗ ನಿಖಿತಾ ಸುಮ್ಮನಿರೋದಿಲ್ಲ. ಆಕೆಗೆ ಆಟವಾಡುವ ಚಟ. ಅದಕ್ಕಾಗಿ  ರಾಗಿಣಿಯನ್ನೋ, ಶ್ರೀದೇವಿಯನ್ನೋ, ಇಲ್ಲ ಆಗ ತಾನೇ ಮೀಸೆ ಬಂದಿದ್ದ ದರ್ಶನನನ್ನೋ ಕರೆಯುತ್ತಾಳೆ. ರಾಗಿಣಿ ಸುಮ್ಮನೆ ನಿಖಿತಾಳ ಬಳಿ ಸಿಟ್ಟಿನಿಂದ ಹೊತ್ತಂತೆ ಮಾಡಿದರೆ ಶ್ರೀದೇವಿ ನಿಖಿತಾಳನ್ನು ಹಲವು ಸಾರಿ ಬೆನ್ನಟ್ಟಿ ದೂರಕ್ಕೆ ಓಡಿಸಿದ್ದಳು. ಹುಡುಗುಬುದ್ಧಿಯ ದರ್ಶನ ನಿಖಿತಾಳ ಜೊತೆ ಜೂಟಾಟ ಆಡಿ ಬಾಯಲ್ಲಿ ನೊಜಲು ಸುರಿಸಿ ಎಲ್ಲಾದರೂ ನೆರಳಿನಲ್ಲಿ ನಿಂತು ಸುಧಾರಿಸಿಕೊಳ್ಳುತ್ತಿದ್ದ ನೆನಪಿನ್ನೂ ಹಸಿ ಹಸಿಯಾಗಿದೆ.
                  ನಿಖಿತಾಳ ಕ್ರಿಯಾಶೀಲತೆಯನ್ನು ಆಕೆಯ ಡೊಂಕು ಬಾಲದಲ್ಲೇ ಅಳೆಯಬೇಕು ನೋಡಿ. ಆಟದ ಮೂಡಿನಲ್ಲಿದ್ದಾಗ ನಿಖಿತಾಳ  ಬಿಎಸ್ಸಾರ್ ಫ್ಯಾನಿಗಿಂತ ಜೋರಾಗಿ ಬೀಸುತ್ತಿರುತ್ತದೆ. ಕಾಲಂತೂ ರಪ್ಪ ರಪ್ಪನೆ ನೆಲಕ್ಕೆ ಬಡಿಯುವ ವೈಖರಿ ಇಂದಿನ ಕನ್ನಡ ಸಿನಿಮಾಗಳ ಐಟಮ್ ಡ್ಯಾನ್ಸರಿಗಿಂತ ಚನ್ನಾಗಿರುತ್ತದೆ ಎಂದರೆ ಖಂಡಿತ ಅತಿಶಯೋಕ್ತಿಯಲ್ಲ ಬಿಡಿ. ಆದರೆ ತನಗೆ ಭಯವಾದರೆ ಸಾಕು ನಿಖಿತಾಳ ಬಾಲವನ್ನು ಮಾತ್ರ ಹುಡುಕಬೇಕು. ಅಫ್ಕೋರ್ಸ್.. ಇಂತಹ ಸಂದರ್ಭದಲ್ಲಿಯೇ ಆಕೆಯ ಬಾಲ ನೆಟ್ಟಗಾಗುವುದೂ ಇದೆ.. ಯಾರಾದರೂ ನಾಯಿ ಬಾಲ ಡೊಂಕು ಮಾರಾಯ್ರೆ ಎಂದರೆ ಅವರಿಗೆ ನಿಖಿತಾಳನ್ನು ತೋರಿಸುವಾ ಎಂದುಕೊಂಡಿದ್ದಿದ್ದೂ ಇದೆ.
                 ಇಂತಹ ನಿಖಿತಾ ಒಂದು ಮುಂಜಾನೆ ಸರಪಳಿಯಿಂದ ಬೋಳು ಉಳುಚಿಕೊಂಡು ಗುಡ್ಡದತ್ತ ಓಡಿತ್ತು. ನಾನಂತೂ ಆಕೆಯ ಹೆಸರು ಹೇಳಿ `ಕ್ರೂಯ್.. ಕ್ರೂಯ್..' ಎಂದು ಸಾಕಾಗಿತ್ತು. ಅರ್ಧಗಂಟೆಯಾದರೂ ಪತ್ತೆಯೇ ಇರಲಿಲ್ಲ. ಎಲ್ಲೋ ಹಡಬೆ ತಿರುಗಲು ಹೋಗಿದೆ ಎಂದುಕೊಂಡ ಹತ್ತೇ ನಿಮಿಷದಲ್ಲಿ ನಿಖಿತಾ ವಾಪಾಸ್ ಆಗಿತ್ತು. ಬಾಯಲ್ಲಿ ಚಿಕ್ಕ ಮೊಲದ ಮರಿಯನ್ನು ಕಚ್ಚಿ ತಂದಿತ್ತು. ಪುಟ್ಟ ಮರಿ. ನಿಖಿತಾಳ ದಾಳಿಗೆ ಸಿಕ್ಕಿ ಆಗಲೇ ಸತ್ತು ಹೋಗಿತ್ತು. `ಧರಿದ್ರ ನಾಯಿಗೊಡ್ಡೆ..' ಎಂದು ಬೈದು ಬಡಿಗೆ ತೆಗೆದುಕೊಳ್ಳುವಷ್ಟರಲ್ಲಿ ನಿಖಿತಾ ಮತ್ತೆ ಪರಾರಿಯಾಗಿತ್ತು. ಆಕೆಗೆ ಆ ಮೊಲದ ಮರಿ ಆ ದಿನ ಭೋರಿ ಭೋಜನವಾಗಿತ್ತು. ರಾತ್ರಿ ನಾನು ಇಲ್ಲದ ಹೊತ್ತನ್ನು ನೋಡಿ ಮನೆಗೆ ವಾಪಾಸಾಗಿತ್ತು. ಮರುದಿನ ಎನ್ನುವ ವೇಳೆಗೆ ನನ್ನ ಸಿಟ್ಟೂ ತಣಿದಿತ್ತು.
                 ನಿಖಿತಾಳ ಪುರಾಣ ಇಷ್ಟೆಲ್ಲ ಕೇಳಿದ ಮೇಲೆ ವರ್ಷಗಟ್ಟಲೆ ಇದು ನಮ್ಮ ಮನೆಯ ನಿವಾಸಿಯಾಗಿತ್ತು ಎಂದುಕೊಳ್ಳುತ್ತಿದ್ದೀರೇನೋ.. ಹಾಗೇನೂ ಆಗಿಲ್ಲ ಬಿಡಿ. 10 ತಿಂಗಳೋ ಅಥವಾ ಹನ್ನೊಂದೋ ಇರಬೇಕು. ಅಷ್ಟರಲ್ಲಿ ಅದು ಮಾಡಿದ ಪ್ರತಾಪ ಬಹಳಷ್ಟು ಎಂದರೆ ತಪ್ಪಲ್ಲ ಬಿಡಿ. ಮೊದ ಮೊದಲು ನಿಖಿತಾಳನ್ನು ಕಂಡರೆ ಮಾರು ದೂರ ಹಾರಿ ಬೈದುಬಿಡುತ್ತಿದ್ದ ಆಯಿಗೂ ಅಚ್ಚುಮೆಚ್ಚಿನದಾಗಿತ್ತು. ಬೆಳಗ್ಗಿನ ದೋಸೆಗೋ, ಮದ್ಯಾಹ್ನದ ಉಪ್ಪಿಲ್ಲದ ಮಜ್ಜಿಗೆಯನ್ನಕ್ಕೋ  ನಿಖಿತಾ ಕಾಯ್ದು ನಿಲ್ಲುತ್ತಿದ್ದ ಪರಿಯನ್ನು ಗಮನಿಸಿದ ಆಯಿ ಅನೇಕ ಸಾರಿ ನಿಖಿತಾಳಿಗೆ ವಿವಿಧ ರುಚಿಯ ತಿಂಡಿಗಳನ್ನು ಹಾಕಿ ಸಾಕಿ ಸಲಹುವ ಪ್ರಯತ್ನವನ್ನೂ ನಡೆಸಿದ್ದಳು. ತನಗೆ ಊಟ ತಂದಾಗಲೆಲ್ಲ ಕಾಲು ಸುತ್ತುತ್ತ ಬರುವ ನಿಖಿತ ಊಟ ಹಾಕಿದ ನಂತರ ಅದರ ಊಟದ ಬಟ್ಟಲ ಬಳಿ ನನ್ನನ್ನೂ ಸೇರಿದಂತೆ ಯಾರೇ ಹೋದರೂ `ಗುರ್ರೆ'ನ್ನುತ್ತಿದ್ದ  ಪರಿ ಮಾತ್ರ ಭಯಂಕರವಾಗಿ ಕಂಡಿತ್ತು.
                ಮನೆಯ ಸುತ್ತ ಕಾಡಿರುವ ಕಾರಣ ನಾಯಿಗಳನ್ನು ಕಚ್ಚಿ ಒಯ್ಯುವ ಗುರಕೆಗಳ ಕಾಟ ನಮ್ಮಲ್ಲಿ ಬಹಳ ಜಾಸ್ತಿ. ಈ ಕಾರಣಕ್ಕಾಗಿಯೇ ನಾನು ನಿಖಿತಾಳಿಗೊಂದು ಪಂಜರವನ್ನೂ ಮಾಡಿದ್ದೆ. ಪಂಜರ ಚನ್ನಾಗಿತ್ತಾದರೂ ನಿಖಿತಾಳಿಗೆ ಮಾತ್ರ ಅದರೊಳಗೆ ಹೋಗಲು ಮನಸ್ಸಾಗುತ್ತಿರಲಿಲ್ಲ. `ನಿಖಿತಾ.. ಗೂಡೊಳಗೆ ಹೋಗು..' ಎಂದು ಜೋರುಮಾಡಿದಾಗಲೆಲ್ಲ ಜೋಲು ಮುಖದೊಂದಿಗೆ ಮೊಂಡು ಹಟ ಮಾಡುತ್ತಿತ್ತು. ಆದರೂ ಅದನ್ನು ನಾನು ಗೂಡೊಳಗೆ ದಬ್ಬುತ್ತಿದ್ದೆ. ಅಲ್ಲಿಗೆ ಹೋದ ನಂತರ ಭಯಂಕರ ಸಿಟ್ಟು ಮಾಡುತ್ತಿತ್ತು ನಿಖಿತಾ. ಕೂಗಾಟವಂತೂ ಜೋರಾಗುತ್ತಿತ್ತು. ಪಂಜರದ ಸರಳುಗಳನ್ನು ಹಲ್ಲಿನಿಂದ ಕಚ್ಚುವುದು, ಕಾಲಿನಿಂದ ಗೆಬರುವ ಕೆಲಸವನ್ನು ಅದು ಮಾಡುತ್ತಿತ್ತು. ಇಂತಹ ಅದರ ಅಬ್ಬರದ ಕಾರ್ಯಕ್ಕಾಗಿಯೇ ಆ ಪಂಜರದ ಒಂದು ಭಾಗ ಕಿತ್ತು ಬಂದಿತ್ತು. ನನ್ನ ಅರಿವಿಗೆ ಹಲವು ದಿನಗಳ ಕಾಲ ಅದು ಬಂದೇ ಇರಲಿಲ್ಲ.
               ನಿಖಿತಾಳನ್ನು ಕಂಡರೆ ನನಗೆ ಖಂಡಿತವಾಗಿಯೂ ಪೂರ್ಣಚಂದ್ರ ತೇಜಸ್ವಿಯವ `ಕಿವಿ'ಯ ನೆನಪಾಗುತ್ತದೆ. ಅವರೊಡನೆ ಆತ್ಮೀಯವಾಗಿ ಒಡನಾಡಿದ ನಾಯಿ ಅದು. ನನ್ನ ಜೊತೆಗೂ ನಿಖಿತ ಹಾಗೆಯೇ ಇತ್ತು. ನಾನು ಅಘನಾಶಿನಿ ನದಿಯಲ್ಲಿ ಈಜಲು ಹೊಳೆಗೆ ಜಿಗಿದರೆ ಅದೂ ಜಿಗಿಯುತ್ತಿದ್ದುದು ವಿಶೇಷ. ಒಂದೆರಡು ಸಾರಿ ಜಿಗಿಯುವ ಭರದಲ್ಲಿ ನೀರೊಳಗೆ ಕಂತಿ ನೀರು ಕುಡಿದ ಮೇಲೆ ಮತ್ತೆ ಅಂತಹ ಸಾಹಸ ಮಾಡಲಿಲ್ಲ. ನಿಖಿತಾಳ ವೈರಿಗಳ ಕುರಿತು ಸ್ವಲ್ಪವಾದರೂ ಹೇಳದಿದ್ದರೆ ಏನೋ ಮಿಸ್ ಹೊಡೆಯುತ್ತದೆ.
               ತನ್ನ ಮೈಮೇಲೆ ಸದಾ ಬೀಡು ಬಿಟ್ಟುಕೊಂಡಿರುವ ಕಡಿತದ ಹುಳು ನಿಖಿತಾಳ ವೈರಿ ನಂಬರ್ 1. ಈ ಕಡಿತದ ಹುಳುವಿನ ಬಾಧೆಯನ್ನು ತಾಳಲಾರದೇ ಅನೇಕ ಸಾರಿ ತನ್ನ ಮೈಯನ್ನು ತಾನು ಕಚ್ಚಿಕೊಂಡಿದ್ದೂ ಇದೆ. ಅದರ ಮೈ ಕಡಿತದ ಕಾರಣ ನಮ್ಮ ಮನೆಯ ಸದಸ್ಯರು ಆಕೆಯ ಮೈ ತುರಿಸಬೇಕಿತ್ತು. ಹಾಗೆ ಮಾಡದಿದ್ದರೆ ನಮ್ಮ ಮೈಮೇಲೆ ಜಿಗಿಯುವ ಕಾರ್ಯವನ್ನೂ ಅದು ಮಾಡುತ್ತಿತ್ತು. ಹಾಕಿದ ಆಹಾರವನ್ನು ಕದ್ದು ತಿನ್ನಲು ಬರುವ ಕಾಗೆಗಳ ಜೋಡಿ ನಿಖಿತಾಳ ವೈರಿ ನಂಬರ್ 2. ಎಷ್ಟೇ ನಾಜೂಕಿನಿಂದ ಯಾರಿಗೂ ಹತ್ತಿರ ಬರಲು ಅವಕಾಶವಿಲ್ಲದಂತೆ ತನಗೆ ಹಾಕುವ ತಿಂಡಿ ಅಥವಾ ಊಟವನ್ನು ತಿನ್ನುತ್ತಿದ್ದರೂ ಬುದ್ಧಿವಂತ ಕಾಗೆಗಳು ಅದನ್ನು ಎಗರಿಸಲು ಯತ್ನಿಸುತ್ತಿದ್ದವು. ಇದರಿಂದ ಸಿಟ್ಟಾಗುತ್ತಿದ್ದ ನಿಖಿತಾ ಅನೇಕ ಸಾರಿ ಅವುಗಳನ್ನು ಬೆನ್ನಟ್ಟಿತ್ತು. ಅವರನ್ನು ಹಿಡಿಯುವ ಭರದಲ್ಲಿ ಎರಡೋ ಮೂರೋ ಸಾರಿ ನಮ್ಮ ಮನೆಯ ಹಂಚಿನ ಮಾಡನ್ನೂ ಏರಿಬಿಟ್ಟಿದ್ದ ನಿಖಿತಾ ಅಪ್ಪನ ಬಡಿಗೆಯ ಏಟಿಗೆ ಹೆದರಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ.
              ನಿಖಿತಾ ನಮ್ಮ ಮನೆಯಲ್ಲಿದ್ದ ಸಮಯದಲ್ಲಿಯೇ ಸಾಂಬ ಹಾಗೂ ರಂಗ ಎಂಬ ಎರಡು ಮುದ್ದಾದ ಬೆಕ್ಕಿನ ಮರಿಗಳು ನಮ್ಮಲ್ಲಿದ್ದವು. ಈ ಮರಿಗಳಿಗೆ ಯಾವುದೇ ಸ್ಥಳವಾದರೂ ಸರಿ. ಎಗ್ಗಿಲ್ಲ. ನಾವು ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ಬೆಕ್ಕಿನ ಮರಿಗಳು ಮನೆಯೊಳಗೆ ಲೈಯನ್ ಕಿಂಗ್ ಮರಿಯಂತೆ ರಾಜಾರೋಷವಾಗಿ ಓಡಾಡುತ್ತಿದ್ದವು. ಸಾಂಬ ಹಾಗೂ ರಂಗ ಬೆಕ್ಕಿನ ಮರಿಗಳು ಮನೆಯೊಳಗೆ ಓಡ್ಯಾಡುತ್ತಿದ್ದುದು ನಿಖಿತಾಳಿಗೆ ಹೊಟ್ಟೆಕಿಚ್ಚು ತರುತ್ತಿತ್ತೋ ಏನೋ. ಅನೇಕ ಸಾರಿ ಇವುಗಳನ್ನು ಬೆನ್ನಟ್ಟಿದ್ದೂ ಇದೆ. ಸಾಂಬ ಹಾಗೂ ರಂಗನ ಹಿಂದೆಯೇ ತಾನೂ ಮನೆಯೊಳಗೆ ಬರಲು ಪ್ತಯತ್ನಿಸಿ ಹೊಡೆತ ತಿಂದಿದ್ದೂ ಇದೆ. ಈ ಕಾರಣದಿಂದಲೇ ನಿಖಿತಾಳ ಶತ್ರು ನಂಬರ್ 3 ಪಟ್ಟವನ್ನು ಈ ಬೆಕ್ಕಿನ ಮರಿಗಳು ಹೊತ್ತುಕೊಳ್ಳಬೇಕಾಯಿತು.
               ಅಡಿಕೆ ಮರದಲ್ಲಿ ಕೆಂಪಾದ ಅಡಿಕೆಯನ್ನು ಸೀಬಿ ಸೀಬಿ ಒಗೆಯುತ್ತಿದ್ದ ಕಪ್ಪು ಮುಸುಡಿಯ ಉದ್ದ ಬಾಲದ ಮಂಗಗಳು ನಿಖಿತಾಳ ನಾಲ್ಕನೆಯ ಹಾಗೂ ಫೈನಲ್ ಶತ್ರು. ನಿಖಿತಾಳನ್ನು ಕಂಡರೆ ಹಲ್ಲುಕಿಸಿದು ಏಡಿಸುತ್ತಿದ್ದ ಇವುಗಳು ನಿಖಿತಾಳ ಬಾಯಿಗೆ ಬೆದರಿ ಮರ ಹತ್ತಿ ಕೂರುತ್ತಿದ್ದುದೂ ಇದೆ. ಮನೆಯ ಅಂಗಳದಲ್ಲಿರುವ ಕಂಚಿಮರದ ಕಂಚಿಕಾಯಿಗಳನ್ನು ಎಗರಿಸುವ ಪ್ರಯತ್ನ ಮಂಗನ ಬಳಗದ್ದಾದರೆ ಅವನ್ನು ತಡೆಯಬೇಕು ಎನ್ನುವುದು ನಿಖಿತಾಳ ಕಾರ್ಯ. ಅನೇಕ ಸಾರಿ ನಿಖಿತಾಳ ಕಣ್ಣು ತಪ್ಪಿಸಿ ಈ ಮಂಗನ ಗ್ವಾಲೆ ಕಂಚಿ ಮರ ಏರಿದ್ದೂ ಇದೆ. ಅದನ್ನು ಕಂಡು ಓಡಿ ಬರುವ ನಿಖಿತಾಳ ಮೈಮೇಲೆ ಹಲವು ಸಾರಿ ಕಂಚಿ ಕಾಯಿಗಳಿಂದ ಮಂಗಗಳು ಹೊಡೆದಿದ್ದೂ `ಕಂಯ್ ಕಂಯ್..' ಗುಡುತ್ತಲೇ ಅಬ್ಬರದಿಮದ ಮಂಗನ ಗ್ವಾಲೆ ಬೆದರಿಸಿದ್ದು ನಿಖಿತಾಳ ಘನ ಕಾರ್ಯಗಳಲ್ಲಿ ಒಂದೆನ್ನಿಸಿದೆ.
             ಇಂತಹ ಗುಣದ ನಿಖಿತಾಳ ಅಂತ್ಯ ಅತ್ಯಂತ ದುರಂತದಿಂದ ಕೂಡಿತ್ತು. ಕಳೆದ ಶಿರಸಿ ಜಾತ್ರೆಯ ಸಂದರ್ಭದಲ್ಲಿ ನಾನು ಜಾತ್ರೆಗೆ ಬಂದಿದ್ದೆ. ರಾತ್ರಿ 2 ಗಂಟೆಯಾಗಿರಬೇಕು. ನಾನು ವಾಪಾಸು ಬಂದು ದಣೀ ಹಾಸಿಗೆಯ ಮೇಲೆ ಅಡ್ಡಾಗಿದ್ದೆ. ಪಂಜರವನ್ನು ತೂತು ಮಾಡಿದ್ದ ನಿಖಿತಾ ಅದ್ಯಾವುದೋ ಮಾಯೆಯಲ್ಲಿ ಗೂಡಿನಿಂದ ಹೊರಬಿದ್ದು ಅಂಗಳದಲ್ಲೆಲ್ಲೋ ಮಲಗಿತ್ತಿರಬೇಕು. ಕೊಬ್ಬಿದ ನಿಖಿತಾಳ ಮೇಲೆ ಅದ್ಯಾವುದೋ ಗುರುಕೆ(ನಾಯಿ, ಮೊಲ, ಚಿಕ್ಕ ಚಿಕ್ಕ ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿಯುವ ಚಿರತೆ ಜಾತಿಗೆ ಸೇರಿದ ಪ್ರಾಣಿ: ಮರಿಚಿರತೆ ಎನ್ನಬಹುದು)ಗೆ ಅನೇಕ ದಿನಗಳಿಂದ ಕಣ್ಣಿತ್ತೆಂದು ಕಾಣಿಸುತ್ತದೆ. ಇನ್ನೇನು ನನಗೆ ನಿದ್ದೆ ಬರಬೇಕು ಅಷ್ಟರಲ್ಲಿ `ಕಂಯ್.. ಕೊಂಯಯ್ಯೋ..' ಎಂಬ ಶಬ್ದ.. ಒಮ್ಮೆ ಗುರ್ರೆಂದಂತಾಯ್ತು.. ನಿಶಬ್ದ. ನಾನು ದಡಬಡಿಸಿ ಎದ್ದು ಲಯಟ್ ಹಾಕಿ ಅಂಗಳಕ್ಕೆ ಹೋಗುವಷ್ಟರಲ್ಲಿ ನಿಖಿತಾ ಇಲ್ಲವೇ ಇಲ್ಲ. ಅಂಗಳದಲ್ಲಿ ಹುಡುಕಾಡುವಷ್ಟರಲ್ಲಿ ಸದ್ದು ಕೇಳಿದ ಅಪ್ಪಯ್ಯನೂ ಎದ್ದು ಬಂದಿದ್ದ. ಅದೇ ವೇಳೆ ತೋಟದ ಮೂಲೆಯಲ್ಲೇಲ್ಲೋ ಗುರಕೆ ಕೈಗಿದಂತಾಯ್ತು. `ತಡಿಯಾ ತಮಾ..' ಎಂದವನೇ ಅಪ್ಪ ಬ್ಯಾಟರಿಯನ್ನು ಹಿಡಿದು ತೋಟದತ್ತ ನಡೆದ. ಸ್ವಲ್ಪ ಹೊತ್ತಿಗೆ ಮರಳಿ ಬಂದ. `ಏನಾಯ್ತು..' ಎಂದೆ. `ಕಂಡಿದ್ದಿಲ್ಲೆ..' ಎಂದವನೇ `ಗುರಕೆ ಹೊತ್ಕಂಡು ಹೋತಾ..' ಎಂದ. ನಾನು ನಿಟ್ಟುಸಿರು ಬಿಟ್ಟೆ.
            ಬೆಳಗಾದ ಕೂಡಲೇ ಅಂಗಳದಲ್ಲಿ ಹುಡುಕಿದೆ. ಗೂಡಿನ ಒಂದು ಭಾಗ ಬಾಯಿ ಬಿಟ್ಟುಕೊಂಡಿತ್ತು. ನಿಖಿತಾ ಮಲಗಿದ್ದ ಜಾಗದಲ್ಲಿ ರಕ್ತದ ಕಲೆಗಳು, ಗುರಕೆ ಬಾಯಿ ಹಾಕಿದ್ದೇ ತಡ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕುರುಹುಗಳೂ ಕಂಡವು. ಕಾಲಿನ ಉಗುರಿನಿಂದ ನೆಲವನ್ನು ಬಲವಾಗಿ ಊರಿದ್ದ ನಿಖಿತಾಳನ್ನು ಗುರಕೆ ಹಾಗೆಯೇ ಎಳೆದುಕೊಂಡು ಹೋಗಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಮಾರುದ್ದದ ಗೀರು ಅಂಗಳದಲ್ಲಿ ಬಿದ್ದಿತ್ತು. ರಾತ್ರಿ ಗುರಕೆ ಕೂಗಿದ ಸ್ಥಳದತ್ತ ಹೋಗಿ ನೋಡಿದೆ. ಅಲ್ಲೆಲ್ಲೋ ನಿಖಿತಾಳನ್ನು ಹೊತ್ತೊಯ್ದ ಗುರಕೆ ವಿಜಯೋತ್ಸವದ ಧ್ವನಿಯನ್ನು ಹೊರಡಿಸಿರಬೇಕು. ತೋಟದ ಮಂಡಗಾದಿಗೆ ಸಂಕದ ಮೇಲೆ ರಕ್ತ ಕಂಡಂತಾಯ್ತು. `ಹಾಳಾದ ಗುರಕೆ..'  ಎಂದು ಬೈದೆ. `ಧರಿದ್ರ ಕುನ್ನಿಗೊಡ್ಡು.. ಅಷ್ಟು ಚಂದ ಗೂಡು ಮಾಡಿಟ್ಟಿದ್ರೂ ಅದನ್ನು ಮುರದು ಹೊರಗೆ ಬಂದಿತ್ತು. ಸಾಯವು ಹೇಳೆ ಹಿಂಗ್ ಮಾಡ್ಕಂಡಿತ್ತು ಕಾಣ್ತು..' ಎಂದು ಅಪ್ಪ ಗೊಣಗಿದ. ನಿಖಿತ ನೆನಪಾಗಿದ್ದಳು.

Sunday, February 2, 2014

ಸುಳಿವ ಪ್ರೀತಿ

ಮಣ್ಣ ಕಣ ಕಣದೊಳಗೆ
ವರ್ಷಧಾರೆಯು ಸುರಿದು
ಕಂಪು ತಾ ಸೂಸಿರಲು
ಪ್ರೀತಿ ಸುಳಿದಿತ್ತು ||

ಹೊಸ ಚಿಗುರು ಮೊಳೆತಿರಲು
ನವ ಹಕ್ಕಿ ನಲಿದಿರಲು
ಬದುಕ ಬಯಸಲು ಅಲ್ಲಿ
ಪ್ರೀತಿ ಸುಳಿದಿತ್ತು ||

ಹಾರಿರುವ ಕೋಗಿಲೆಯು
ಮರಳಿ ಮಾಮರ ಬಯಸಿ
ಜೊತೆಗೂಡ ಬಂದಾಗ
ಪ್ರೀತಿ ಸುಳಿದಿತ್ತು ||

ಮನಸು ಹಸಿರಾಗಿರಲು
ಜೊತೆಯುಸಿರು ಬೆರೆತಾಗ
ಮನಸು ಮನಸಿನ ನಡುವೆ
ಪ್ರೀತಿ ಸುಳಿದಿತ್ತು ||

**
(ಈ ಕವಿತೆಯನ್ನು 01.11.2006ರಂದು ದಂಕಲ್ಲಿನಲ್ಲಿ ಬರೆದಿದದ್ದು)
(23.01.2208ರಂದು ಆಕಾಶವಾಣಿ ಕಾರವಾರದಲ್ಲಿ ಕವಿತೆಯನ್ನು ವಾಚಿಸಲಾಗಿದೆ)
(ಮುತ್ಮೂರ್ಡ್ ಮಾದತ್ತೆ, ಸುಪರ್ಣ ದಂಟಕಲ್ ಹಾಗೂ ಪೂರ್ಣಿಮಾ ಹೆಗಡೆ ಈ ಕವಿತೆಗೆ ರಾಗವನ್ನು ಹಾಕಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು )

Saturday, February 1, 2014

ಬೆಂಗಾಲಿ ಸುಂದರಿ-5

                    ವಿನಯಚಂದ್ರ ಹಾಗೂ ಜೊತೆಗಾರರು ನವದೆಹಲಿಯನ್ನು ತಲುಪುವ ವೇಳೆಗೆ ದೆಹಲಿಯನ್ನು ದಟ್ಟ ಮಂಜು ಆವರಿಸಿತ್ತು. ಕಣ್ಣೆದುರು 10-15 ಮೀಟರ್ ದೂರದವರೆಗೆ ಏನೂ ಕಾಣಿಸದು ಎನ್ನುವಷ್ಟು ಮಂಜು. ಮಿಳಿಯ ಪರದೆ. ಚುಮು ಚುಮು ಚಳಿ. ನಾಲ್ವರೂ ಏರ್ ಪೋರ್ಟಿನಿಂದ ಸೀದಾ ಕಬ್ಬಡ್ಡಿ ತರಬೇತಿಗೆಂದು ನಿಗದಿ ಪಡಿಸಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಾಗಲೇ ತಂಡದ ಬಹುತೇಕ ಎಲ್ಲ ಆಟಗಾರರೂ ಬಂದಿದ್ದರು. ಒಟ್ಟೂ 12 ಜನರ ತಂಡ. ಏಳು ಜನ ಕಬ್ಬಡ್ಡಿ ಆಡುವವರಾದರೆ ಐವರು ಇತರೆ ಆಟಗಾರರು. ಆಟಗಾರರಲ್ಲಿ ಹೆಚ್ಚಿನವರು ದಕ್ಷಿಣ ಭಾರತದವರಾಗಿದ್ದರು. ಕರ್ನಾಟಕದಿಂದ ವಿನಯಚಂದ್ರನಿದ್ದರೆ ತಮಿಳುನಾಡಿನಿಂದ ಇಬ್ಬರು, ಕೇರಳದಿಂದ ಒಬ್ಬಾತ, ಮಹಾರಾಷ್ಟ್ರದಿಂದ ಇಬ್ಬರು, ಆಂದ್ರದಿಂದ ಇಬ್ಬರು, ಓರಿಸ್ಸಾದ ಒಬ್ಬಾತ, ಇದ್ದರೆ ಉಳಿದ ಆಟಗಾರರು ಮದ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶಕ್ಕೆ ಸೇರಿದವರಾಗಿದ್ದರು. ಇಬ್ಬರು ಪಂಜಾಬಿನವರೂ ಇದ್ದರು. ಎಲ್ಲ ಒಟ್ಟು ಸೇರುವ ವೇಳೆಗೆ ಮದ್ಯಾಹ್ನವೂ ಆಗಿತ್ತು.
                   ಅಷ್ಟರಲ್ಲಿ ಕೋಚ್ ಪ್ರಕಾಶ ಜಾಧವ್ ಅವರೂ ಆಗಮಿಸಿದ್ದರು. ಅವರಿಗೆ ಟೀಮಿನಲ್ಲಿದ್ದ ಹಳೆಯ ಆಟಗಾರರ ಪರಿಚಯವಿತ್ತು. ಎಲ್ಲರನ್ನೂ ಮಾತನಾಡಿಸಿ ಕೊನೆಯದಾಗಿ ವಿನಯಚಂದ್ರ ಹಾಗೂ ಸೂರ್ಯನ್ ಬಳಿಗೆ ಆಗಮಿಸಿದರು. ಬಂದವರೇ ಸೂರ್ಯನ್ ನ್ನು ಮಾತನಾಡಿಸಿದರು. ನಂತರ ವಿನಯಚಂದ್ರನ ಬಳಿ ತಿರುಗಿ `ವಿನಯ್ ಅವರೆ ಚಿದಂಬರ್ ಅವರು ಎಲ್ಲಾ ಹೇಳಿದ್ದಾರೆ. ಆಲ್ ದಿ ಬೆಸ್ಟ್.. ಚನ್ನಾಗಿ ಆಡಿ' ಎಂದರು.
                 ವಿನಯಚಂದ್ರ `ಥ್ಯಾಂಕ್ಸ್..ಖಂಡಿತ.. ಎಲ್ಲಾ ನಿಮ್ಮ ಆಶೀರ್ವಾದ ಸರ್' ಎಂದ.
                 ನಂತರ ತರಬೇತಿ ಶುರುವಾದವು. ವಿಶ್ವಕಪ್ ವಿಜಯಕ್ಕೆ ಅಗತ್ಯವಾದಂತಹ ಎಲ್ಲ ತರಬೇತಿಗಳನ್ನೂ ಅಲ್ಲಿ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ವಿನಯಚಂದ್ರ ಹೊಸತನ್ನು ಕಲಿಯುತ್ತ ಹೋದ. ವಿನಯಚಂದ್ರ ಇದುವರೆಗೂ ಏನು ಕಲಿತಿದ್ದನೋ ಅದಕ್ಕಿಂತಲೂ ಹೆಚ್ಚಿನದನ್ನೇನೋ ಕಲಿಯುತ್ತಿದ್ದೇನೆ ಎನ್ನಿಸಿತು. ಚುಮು ಚುಮು ಚಳಿಯಲ್ಲಿಯೂ ಬೆವರು ಸುರಿಸುವಂತೆ ತರಬೇತಿ ನಡೆಯುತ್ತಿತ್ತು. ಕಬ್ಬಡ್ಡಿ ತರಬೇತಿ ನಡೆಯುತ್ತಿದ್ದ ನ್ಯಾಶನಲ್ ಗ್ರೌಂಡ್ ನಲ್ಲಿ ಆಗೊಮ್ಮೆ ಈಗೊಮ್ಮೆ ಸೂರ್ಯಕಿರಣದ ಪರಿಚಯವಾಗುತ್ತಿತ್ತಾದರೂ ದಿನದ ಬಹು ಸಮಯ ತಿಳಿಮೋಡವೋ, ಮಂಜಿನ ಪೊರೆಯೋ ಆವರಿಸುತ್ತಿತ್ತು. ಇಂತಹ ವಾತಾವರಣದಲ್ಲಿಯೂ ಕಷ್ಟಪಟ್ಟು ತರಬೇತಿ ನಡೆಸುತ್ತಿದ್ದರು ಆಟಗಾರರು.

**

                      ನವದೆಹಲಿ ವಿನಯಚಂದ್ರನ ಪಾಲಿಗೆ ನಿತ್ಯನೂತನವಾಗಿತ್ತು. ಪ್ರತಿದಿನ ಹೊಸ ತರವಾಗಿ ಆತನಿಗೆ ಕಲಿಸುತ್ತ ಹೋಯಿತು. ಈ ಮುನ್ನ ಆರೆಂಟು ಸಾರಿ ವಿನಯಚಂದ್ರ ನವದೆಹಲಿಗೆ ಬಂದಿದ್ದನಾದರೂ ದೆಹಲಿಯ ಬೀದಿಗಳಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಾರಿ ಸಾಕಷ್ಟು ಸಮಯ ಸಿಕ್ಕಿತು. ತಿರುಗಾಡಲು ಜೊತೆಗೆ ಸೂರ್ಯನ್ ಸಿಕ್ಕಿದ್ದ. ಆ ಕಾರಣದಿಂದ ನವದೆಹಲಿಯ ಬೀದಿಗಳತ್ತ ವಿನಯಚಂದ್ರ ಮುಖ ಮಾಡಿದ್ದ.
                     ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಾಕಷ್ಟು ಹೆಸರು ಮಾಡಿಕೊಂಡಿರುತ್ತಾರೆ. ಈ ಕಾರಣದಿಂದ ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಟೆನ್ನಿಸ್ ಹಾಗೂ ಫುಟ್ ಬಾಲ್ ಆಟಗಾರರಿಗೂ ಕೆಲವೊಮ್ಮೆ ಅಭಿಮಾನಿಗಳ ಕಾಟವಿರುತ್ತದೆ. ಹಾಕಿಗೂ ಆಗೀಗ ಅಭಿಮಾನಿಗಳು ಕಾಣುತ್ತಾರೆ. ಆದರೆ ಕಬ್ಬಡ್ಡಿಯನ್ನು ಕೇಳುವವರು ಬಹಳ ಕಡಿಮೆಯೇ ಎನ್ನಬಹುದು. ಈ ಕಾರಣಕ್ಕಾಗಿ ಯಾವುದೇ ತೊಂದರೆಯಿಲ್ಲದೇ ವಿನಯಚಂದ್ರ ದೆಹಲಿಯಲ್ಲಿ ಸುತ್ತಾಡಿದ. ತನ್ನಿಷ್ಟದ ದಾಲ್ ಚಾವಲ್ ತಿಂದ. ಪಾನಿಪುರಿಯನ್ನೂ ತಿಂದ. ಸೂರ್ಯನ್ ಕೂಡ ಆತನಿಗೆ ಜೊತೆಗಾರಿಕೆ ನೀಡಿದ. ದೆಹಲಿಯ ರಾಜಪಥ, ಹೊಸ ದಿಲ್ಲಿಯ ಬೀದಿಗಳು, ಫಿರೋಜ್ ಷಾ ಕೋಟ್ಲಾ ಮೈದಾನಗಳಿಗೆಲ್ಲ ಹೋಗಿ ಬಂದ. ಮಂಜಿನ ಮುಂಜಾವಿನಲ್ಲಿ, ಮೋಡಕವಿದ ವಾತಾವರಣದಲ್ಲಿ ದೆಹಲಿಯಲ್ಲಿ ಓಡಾಡುವುದು ಹೊಸ ಖುಷಿಯನ್ನು ನೀಡುತ್ತಿತ್ತು.
                   ದಿನಕಳೆದಂತೆ ವಿನಯಚಂದ್ರನ ಮನದ ದುಗುಡ ಹೆಚ್ಚುತ್ತ ಹೋಯಿತು. ಬಾಂಗ್ಲಾದೇಶಕ್ಕೆ ಹೋಗುವ ದಿನವೂ ಹತ್ತಿರ ಬರುತ್ತಿತ್ತು. ಬಾಂಗ್ಲಾದೇಶದಲ್ಲಿ ಹೇಗೋ ಏನೋ ಅನ್ನುವ ತಳಮಳ ಆತನಲ್ಲಿ ಶುರುವಾದಂತಿತ್ತು. ಆದರೂ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದ.
                  `ವಿನು.. ಬಾಂಗ್ಲಾದೇಶಕ್ಕೆ ಹೋಗೋಕೆ ಇನ್ನು ಮೂರೇ ದಿನ ಇದೆ ಕಣೋ.. ಬಾಂಗ್ಲಾದೇಶದಲ್ಲಿ ಬೇರೆ ಗಲಾಟೆ ಆರಂಭವಾಗುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧಿ ಪಕ್ಷದ ನಡುವೆ ಬಹಳ ಘರ್ಷಣೆ ನಡೆಯುತ್ತಿದೆಯಂತೆ.. ವಿಶ್ವಕಪ್ ನಡೆಯುವುದು ಅನುಮಾನ ಎಂದು ಜಾಧವ್ ಹೇಳುತ್ತಿದ್ದರು..' ಎಂದು ಸೂರ್ಯನ್ ವಿನಯಚಂದ್ರನ ಬಳಿ ಹೇಳಿದಾಗ ವಿನಯಚಂದ್ರನಲ್ಲಿ ಒಮ್ಮೆ  ನಿರಾಸೆಯ ಕಾರ್ಮೋಡ ಸುಳಿದಿದ್ದು ಸುಳ್ಳಲ್ಲ. ಮುಂದೇನು ಮಾಡೋದು ಎನ್ನುವ ಭಾವನೆ ಮೂಡಿದ್ದೂ ಸುಳ್ಳಲ್ಲ. ವಿಶ್ವಕಪ್ ಪಂದ್ಯಾವಳಿ ರದ್ದಾದರೆ ಇದುವರೆಗೂ ಮಾಡಿಕೊಂಡ ತಯಾರಿಗಳೆಲ್ಲ ವ್ಯರ್ಥವಾಗುತ್ತವೆ. ಇದೇ ಮೊದಲ ಬಾರಿಗೆ ತಾನು ಕಬ್ಬಡ್ಡಿ ಪಂದ್ಯಾವಳಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ಈಗ ಪಂದ್ಯಾವಳಿಯೇ ರದ್ಧಾದರೆ ಇದರಿಂದ ಬೇಜಾರಾಗುತ್ತದೆ. ಮೊದಲ ಪ್ರಯತ್ನವೇ ಹೀಗಾಗಿಬಿಟ್ಟಿತಲ್ಲ ಎನ್ನುವ ಕೊರಗೂ ಇರುತ್ತದೆ. ಸಿಕ್ಕ ಅವಕಾಶದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಆಟವಾಡಬೇಕು ಎಂದುಕೊಂಡಿದ್ದ ವಿನಯಚಂದ್ರ ಒಮ್ಮೆ ಮಂಕಾಗಿದ್ದು ಸುಳ್ಳಲ್ಲ.
               ನಡೆಯುತ್ತದೆ, ನಡೆಯುವುದಿಲ್ಲ.. ಈ ಗೊಂದಲಗಳ ನಡುವೆ ವಿಶ್ವಕಪ್ ನಡೆದೇ ನಡೆಯುತ್ತದೆ ಎಂದು ಬಾಂಗ್ಲಾ ಸರ್ಕಾರ ಕೊನೆಗೊಮ್ಮೆ ಘೋಷಣೆ ಮಾಡಿತ್ತು. ಬಾಂಗ್ಲಾದೇಶಕ್ಕೆ ಆಗಮಿಸುವ ಬೇರೆ ಬೇರೆ ದೇಶಗಳ ಆಟಗಾರರಿಗೆ ಎಲ್ಲ ಸೌಕರ್ಯ ಕೈಗೊಳ್ಳಲಾಗುತ್ತದೆ. ಸುರಕ್ಷತೆಯ ಬಗ್ಗೆ ಅನುಮಾನ ಬೇಡ. ಭಾರಿ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಬಾಂಗ್ಲಾದೇಶ ಭರವಸೆಯನ್ನು ನೀಡಿತು. ಇಷ್ಟೆಲ್ಲ ಆದ ನಂತರ ಕೊನೆಗೊಮ್ಮೆ ಬಾಂಗ್ಲಾದೇಶಕ್ಕೆ ಹೋಗೋದು ಪಕ್ಕಾ ಆದಾಗ ಮಾತ್ರ ವಿನಯಚಂದ್ರ ನಿರಾಳನಾಗಿದ್ದ. ಜಾಧವ್ ಅವರು ಎಲ್ಲ ಆಟಗಾರರನ್ನು ಕರೆದು ಬಾಂಗ್ಲಾದೇಶದಲ್ಲಿ ನಡೆದುಕೊಳ್ಳುವ ಬಗ್ಗೆ ತಿಳಿ ಹೇಳಿದರು. ಹಿರಿಯ ಆಟಗಾರರಿಗೆ ಇದು ಮಾಮೂಲಿ ಸಂಗತಿಯಾಗಿದ್ದರೂ ವಿನಯಚಂದ್ರನಿಗೆ ಮೊದಲ ಅನುಭವವಾಗಿತ್ತು. ಜಾಧವ್ ಅವರು `ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಾಟೆಯ ಬಗ್ಗೆ ತುಣುಕಾಗಿ ವಿವರಿಸಿ ಯಾರೂ ಕೂಡ ತಮ್ಮ ತಮ್ಮ ಹೊಟೆಲ್ ಹಾಗೂ ವಿಶ್ವಕಪ್ ನಡೆಯುವ ಸ್ಥಳಗಳನ್ನು ಬಿಟ್ಟು ಹೊರಗೆ ಹೋಗಬಾರದು. ಹೋಗಲೇಬೇಕೆಂಬ ಅನಿವಾರ್ಯತೆ ಒದಗಿಬಂದರೆ ತಂಡದ ಮ್ಯಾನೇಜ್ ಮೆಂಟಿಗೆ ವಿಷಯವನ್ನು ತಿಳಿಸಿ, ಅವರಿಂದ ಒಪ್ಪಿಗೆ ಪಡೆದು, ಭದ್ರತೆಗಾಗಿ ಜೊತೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯಬೇಕು ಎಂದು ತಾಕೀತು ಮಾಡಿದ್ದರು. ವಿನಯಚಂದ್ರ ಎಲ್ಲರಂತೆ `ಹೂಂ' ಅಂದಿದ್ದ.
              ಮರುದಿನ ಬಾಂಗ್ಲಾದೇಶಕ್ಕೆ ಹೊರಡುವ ಸಲುವಾಗಿ ತಯಾರಿ ನಡೆದಿತ್ತು. ತನ್ನ ತಾಲೀಮನ್ನು ಮುಗಿಸಿ ವಿನಯಚಂದ್ರ ರೂಮಿನತ್ತ ಮರಳುತ್ತಿದ್ದಾಗ ಜಾಧವ್ ಆತನನ್ನು ಕರೆದರು. ಕುತೂಹಲದಿಂದಲೇ ಹೋದ.
`ವಿನಯ್.. ಹೇಗಿದ್ದೀರಿ?'
`ಚನ್ನಾಗಿದ್ದೇನೆ ಸರ್..'
`ಇದು ನಿನ್ನ ಮೊದಲ ವಿಶ್ವಕಪ್ ಅಲ್ಲಾ.. ಏನನ್ನಿಸ್ತಾ ಇದೆ..?'
`ಏನ್ ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ ಸರ್.. ಬಹಳ ತಳಮಳ ಆಗ್ತಾ ಇದೆ..ಹೇಗಾಗುತ್ತೋ, ಏನಾಗುತ್ತೋ ಎನ್ನುವ ಭಾವ ಕಾಡುತ್ತಿದೆ'
`ಓಹ್.. ಹೌದಾ.. ಗುಡ್.. ಎಲ್ಲರಿಗೂ ಹಾಗೆ ಆಗುತ್ತೆ.. ಇರ್ಲಿ.. ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರಬೇಕಪ್ಪ.. ಅಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಅಲ್ಲಿನ ಸರ್ಕಾರ ಎಲ್ಲ ಸರಿಯಿದೆ ಅಂತ ಹೇಳಿದೆ. ಆದರೂ ನಾವು ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ನಿನ್ನನ್ನು ಹುಷಾರಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿದಂಬರ ಅವರು ನನಗೆ ವಹಿಸಿದ್ದಾರೆ..'
`ಸರ್.. ಸರಿ ಸರ್..'
`ನೋಡು.. ಬಾಂಗ್ಲಾದೇಶದ ಕುರಿತು ನಾನು ನಿಂಗೆ ಹೆಚ್ಚು ಹೇಳಬೇಕಿಲ್ಲ ಅಂದ್ಕೋತೀನಿ.. ಮೈಯೆಲ್ಲಾ ಕಣ್ಣಾಗಿರಬೇಕು.. ಆಟದ ಕುರಿತು ಬಂದ್ರೆ ಯಾವ ಸಮಯದಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಬಲ್ಲೆ ಎಂಬ ಛಾತಿ ಬೇಕು.. ತಿಳೀತಾ..' ಎಂದರು.
`ಹುಂ ಸರ್.. ಅಲ್ಲಿ ಗಲಾಟೆ ಇದೆ ಅಂದಿದ್ದರು. ನಮಗೆ ಸಮಸ್ಯೆ ಇಲ್ವಾ..?' ವಿನಯಚಂದ್ರ ಮನದಾಳದ ತುಮುಲವನ್ನು ಹೊರ ಹಾಕಿದ್ದ.
`ನಮಗೆ ಟೈಟ್ ಸೆಕ್ಯೂರಿಟಿ ಅರೇಂಜ್ ಮಾಡಿದ್ದಾರಂತೆ.. ಸಮಸ್ಯೆ ಆಗೋದಿಲ್ಲ ಅಂದ್ಕೊಂಡಿದ್ದೀವಿ. ಅಂತಹ ಸಮಸ್ಯೆಗಳು ಎದುರಾದರೆ ಬಾಂಗ್ಲಾ ಮಿಲಿಟರಿಯವರು ನಮ್ಮನ್ನು ಕಾಪಾಡೋಕೆ ಹೊಣೆ ಹೊತ್ತಿದ್ದಾರಂತೆ..ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.. ಆದರೂ ನೋಡೋಣ..' ಎಂದು ಹೇಳಿದರು ಜಾಧವ್.
ವಿನಯಚಂದ್ರ ಮಾತಾಡಲಿಲ್ಲ.

**

               ರೂಮಿನಲ್ಲಿ ಸೂರ್ಯನ್ ತಯಾರಾಗಿದ್ದ. `ವಿನು ಬೇಗ ತಯಾರಾಗು.. ಜಾಧವ್ ಸರ್ ನಮಗೆಲ್ಲ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡೋ ಸಿಡಿ ಕೊಟ್ಟಿದ್ದಾರೆ ನೋಡೋಣ..' ಎಂದ.
              ಸಿಡಿಯನ್ನು ಹಾಕಿ ನೋಡುತ್ತಿದ್ದಂತೆ ಬಾಂಗ್ಲಾದೇಶ ಅವರ ಕಣ್ಮುಂದೆ ಅನಾವರಣಗೊಂಡಿತು.
              ಒಂದಾನೊಂದು ಕಾಲದಲ್ಲಿ ಭಾರತದ್ದೇ ಒಂದು ಭಾಗವಾಗಿದ್ದ ಆ ನಾಡು ನಂತರ ಪಾಕಿಸ್ತಾನದ ಪ್ರದೇಶವಾಗಿ ಆ ನಂತರ ಪಾಕಿಸ್ತಾನಕ್ಕೂ ಈಗಿನ ಬಾಂಗ್ಲಾದೇಶಕ್ಕೂ ಘರ್ಷಣೆ ನಡೆದಿತ್ತು. ಕೊನೆಗೆ 1971ರಲ್ಲಿ ಭಾರತದ ಐರನ್ ಲೇಡಿ ಇಂದಿರಾಗಾಂಧಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಳು. ನಂತರದ ದಿನಗಳಲ್ಲಿ ಭಾರತದ ಕಡೆಗೆ ಬಹಳ ನಿಷ್ಟವಾಗಿದ್ದ ಬಾಂಗ್ಲಾದೇಶ ಕೊನೆ ಕೊನೆಗೆ ಭಾರತದ ವಿರುದ್ಧ ಭಯೋತ್ಪಾದಕ ಕಾರ್ಯಗಳನ್ನು ಕೈಗೊಳ್ಳುವಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಾರಂಭಿಸಿತ್ತು.
              ಸಾವಿರ ಕಿಲೋಮೀಟರುಗಟ್ಟಲೆ ಗಡಿಯನ್ನು ಬಾಂಗ್ಲಾದೇಶ ಭಾರತದೊಂದಿಗೆ ಹಂಚಿಕೊಂಡಿದೆ. ಆದರೆ ಗಡಿಗುಂಟ ಬೇಲಿಯೇ ಇಲ್ಲ. ಈ ಕಾರಣದಿಂದ ಪ್ರತಿ ದಿನ ನೂರಾರು ಜನ ಭಾರತದತ್ತ ನುಸುಳಿ ಬರುತ್ತಲೇ ಇದ್ದಾರೆ. ಭಾರತ ಈ ಸಮಸ್ಯೆಗೆ ಎಚ್ಚರಿಕೆಯ ಮೂಲಕ ತಡೆ ಹಾಕಲು ಯತ್ನಿಸುತ್ತಲೇ ಇದೆ. ಆಗಾಗ ಒಂದಷ್ಟು ಜನರನ್ನು ಗುಂಡಿಕ್ಕಿ ಸಾಯಿಸುವ ಮೂಲಕ ಭಾರತದೊಳಗೆ ನುಸುಳಿ ಬರುವ ಬಾಂಗ್ಲಾದೇಶಿಯರಿಗೆ ಎಚ್ಚರಿಕೆ ನೀಡುವ ಯತ್ನವನ್ನೂ ಮಾಡುತ್ತಿದೆ. ಟಿ.ವಿ ಪರದೆಯ ಮೇಲೆ ಮಾಹಿತಿ ಬರುತ್ತಲೇ ಇತ್ತು.
              `ತಥ್.. ಏನ್ ವೀಡಿಯೋನಪ್ಪಾ.. ಒಳ್ಳೇದು ಏನೂ ಇಲ್ವಾ?' ಎಂದು ಗೊಣಗಿದ. ವಿನಯಚಂದ್ರ ನೋಡುತ್ತಲೇ ಇದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವೀಡಿಯೋದಲ್ಲಿ ಬಾಂಗ್ಲಾದೇಶಿ ಮಹಿಳೆಯರು, ಹುಡುಗಿಯರ ಬಗ್ಗೆ ವಿವರಣೆ ಬರಲಾರಂಭಿಸಿತು. ತಕ್ಷಣ ಚುರುಕಾದ ಸೂರ್ಯನ್ `ಅಬ್ಬಾ.. ಅಂತೂ ನಮಗೆ ಬೇಕಾದ ವಿಷಯ ಬಂತಪ್ಪಾ..ಇನ್ನು ಕಣ್ಣಿಗೆ ಹಬ್ಬ' ಎಂದ.
               ಬಾಂಗ್ಲಾದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾದರೂ ಕೆಲವು ಪ್ರದೇಶಗಳಲ್ಲಿ ಹಿಂದೂಗಳೂ ಇದ್ದಾರೆ. ಅಲ್ಲಲ್ಲಿ ಬೌದ್ಧರನ್ನೂ ಕಾಣಬಹುದಾಗಿದೆ. ಬೆಂಗಾಲಿ ಹಿಂದುಗಳಲ್ಲಿ ಬೆಂಗಾಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ಬೆಂಗಾಲಿ ಹುಡುಗಿಯರು ಖಾದಿ, ಕಾಟನ್ ಸೀರೆಯ ಮೂಲಕ ಸೆಳೆಯುತ್ತಾರೆ. ಈಗೀಗ ಅವರ ಮೇಲೆ ದೌರ್ಜನ್ಯಗಳು ಹೆಚ್ಚಳವಾಗುತ್ತಿವೆ ಎಂದು ವೀಡಿಯೋ ಹೇಳುತ್ತಿತ್ತು.
                `ಬೆಂಗಾಲಿ ಹುಡುಗಿಯರು ಚನ್ನಾಗಿರ್ತಾರಂತೆ ವಿನು.. ನಾವು ಒಂದು ಕೈ ನೋಡೋಣ ಅಲ್ವಾ..'  ಎಂದ ಸೂರ್ಯನ್.
                `ಖಂಡಿತ.. ನೋಡೋಣ.. ನಿನಗೆ ಬೇಕಾದ್ರೆ ಹೇಳು ನಾನು ಸೆಲೆಕ್ಟ್ ಮಾಡ್ತೀನಿ.. ಹುಡುಗಿಯರನ್ನು ನೋಡಿದ ತಕ್ಷಣ ಅವರ ಗುಣವನ್ನು ಅಳೆಯುವಲ್ಲಿ ನಾನು ವಿಶೇಷತೆಗಳನ್ನು ಹೊಂದಿದ್ದೇನೆ..' ಎಂದ ವಿನಯಚಂದ್ರ.
                `ಹೋ.. ಖಂಡಿತ.. ನನಗೊಂದು ಬೆಂಗಾಲಿ ಹಿಂದೂ ಹುಡುಗಿ ಹುಡುಕು ಮಾರಾಯಾ.. ಈ ವೀಡಿಯೋ ಏನು ತೋರಿಸಿತೋ ಅದು ನನಗೆ ಅರ್ಥವಾಗಲಿಲ್ಲ. ಆದರೆ ಬೆಂಗಾಲಿ ಹುಡುಗಿಯರ ಕುರಿತು ಹೇಳಿದ ವಿಷಯಗಳು ಮಾತ್ರ ಶಬ್ದಶಬ್ದವೂ ನೆನಪಿನಲ್ಲಿದೆ..ಬೆಂಗಾಲಿ ಹುಡುಗಿಯರು ಬಹಳ ಚನ್ನಾಗಿ ಕಂಡರಪ್ಪಾ..' ಎಂದ ಸೂರ್ಯನ್..
                 `ಹೇಯ್.. ಬಾಂಗ್ಲಾದೇಶದ ಪ್ರಧಾನಿ ಕೂಡ ಹೆಣ್ಣು ಮಾರಾಯಾ..' ವಿನಯಚಂದ್ರ ಛೇಡಿಸಿದ.
                 `ಹೋಗೋ ಮಾರಾಯಾ.. ನನಗೆ ಅದು ಗೊತ್ತಿಲ್ಲ ಅಂದುಕೊಂಡೆಯಾ..? ಅಲ್ಲಿ ಪ್ರಧಾನಿ ವಿರುದ್ಧ ಪ್ರತಿಸ್ಪರ್ಧಿಯಾಗಿ ನಿಂತವಳೂ ಹೆಣ್ಣೇ ಮಾರಾಯಾ..ಈಗ ಗಲಾಟೆ ನಡೆಯುತ್ತಿರುವುದು ಇಬ್ಬರು ಹೆಂಗಸರ ಪಕ್ಷಗಳ ನಡುವೆ...' ಸೂರ್ಯನ್ ಮಾತಿನ ತಿರುಗುತ್ತರ ನೀಡಿದ.
               `ಹೌದು ಹೌದು ಈ ಇಬ್ಬರು ಹೆಂಗಸರಿದಂಲೇ ಅಲ್ಲವಾ ಬಾಂಗ್ಲಾದೇಶದಲ್ಲಿ ಒಳಜಗಳ, ಅರಾಜಕತೆ, ದಂಗೆ, ಹೋರಾಟ, ಗಲಾಟೆಗಳಾಗ್ತಾ ಇರೋದು.. ಚಂದ ಇದ್ದಾರೆ ಅಂತ ನಂಬೋಕಾಗೋಲ್ಲ ಅನ್ನೋದು ಇದಕ್ಕೇ ಇರಬೇಕು ನೋಡು..' ಎಂದ ವಿನಯಚಂದ್ರ.
                  ಮಾತು ತಮಾಷೆಯಿಂದ ಗಂಭೀರ ವಿಷಯದ ಕಡೆಗೆ ಹೊರಳುತ್ತಿತ್ತು. ಬಾಂಗ್ಲಾದೇಶದ ಕುರಿತು ಏನೇ ಮಾತು ಶುರುವಿಟ್ಟುಕೊಂಡರೂ ಕೊನೆಗೆ ಅದು ಅಲ್ಲಿನ ಅರಾಜಕತೆ, ದಂಗೆಯ ವಿಷಯಕ್ಕೇ ಬಂದು ಮುಟ್ಟುತ್ತಿತ್ತು. ಆ ವಿಷಯ ಬಂದ ನಂತರ ಮಾತು ಮುಂದುವರಿಯುತ್ತಿರಲಿಲ್ಲ. ಮೌನ ಆವರಿಸುತ್ತಿತ್ತು. ಮನಸ್ಸಿನಲ್ಲಿ ಎಷ್ಟೇ ಭೀತಿ, ಗೊಂದಲ, ಮುಂದೇನು ಎನ್ನುವ ಭಾವನೆಗಳು ಮೂಡಿದರೂ ಸಹ ಸೂರ್ಯನ್ ಹಾಗೂ ವಿನಯಚಂದ್ರ ಈ ಕುರಿತು ಹೆಚ್ಚಿಗೆ ಮಾತನಾಡುತ್ತಿರಲಿಲ್ಲ.
                  ಇಷ್ಟರ ನಡುವೆ ಸೂರ್ಯನ್ ವ್ಯಕ್ತಿ ಚಿತ್ರಣ ನೀಡದಿದ್ದರೆ ಕಥೆ ಮುಂದುವರಿಯುವುದಿಲ್ಲ. ನೋಡಲು ಪಕ್ಕಾ ತಮಿಳಿನವನಂತೆ ಕಾಣುವ, ಕಪ್ಪು ಬಣ್ಣವನ್ನು ಹೊಂದಿರುವ ಸೂರ್ಯನ್ ಗೆ  ಒಂದು ರೀತಿಯ ರಂಗೀನ್ ಮನುಷ್ಯ. ಯಾವುದೇ ಹುಡುಗಿ ಕಣ್ಣಿಗೆ ಬಿದ್ದರೂ ಅವಳನ್ನು ಮಾತನಾಡಿಸುವ ಪ್ರವೃತ್ತಿಯವನು. ವಯೋಸಹಜ ಫ್ಲರ್ಟಿಂಗ್ ಗುಣವಿತ್ತಾದರೂ ಅದು ಅತಿಯಾಗಿರಲಿಲ್ಲ. ಹುಡುಗಿಯರು ಸ್ವಲ್ಪ ಪರಿಚಯವಾದರು ಎಂದರೆ ಹರಟೆಗೆ ಬಿದ್ದು ಬಿಡುವ ವ್ಯಕ್ತಿತ್ವದವನಾಗಿದ್ದ ಸೂರ್ಯನ್. ಇಂತವನಿಗೆ ಬಾಂಗ್ಲಾದೇಶದ ಹುಡುಗಿಯರು ಸೆಳೆದಿರುವುದರಲ್ಲಿ ತಪ್ಪಿಲ್ಲ ಬಿಡಿ.

(ಮುಂದುವರಿಯುತ್ತದೆ..)

Friday, January 31, 2014

ಚಿಪಗಿ ದ್ಯಾಮವ್ವ ಸನ್ನಿಧಿಯಲ್ಲಿ ವನಭೋಜನ

ವನಭೋಜನ ಎಂಬ ವಿಶಿಷ್ಟ ಸಂಪ್ರದಾಯ ಮರೆಯಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಚಿಪಗಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ದ್ಯಾಮವ್ವ ದೇವಾಲಯದ ಆವರಣದಲ್ಲಿ ನಡೆದ ವನಭೋಜನ ಯಶಸ್ವಿಯಾಯಿತು.

ಗ್ರಾಮಸ್ಥರೆಲ್ಲ ಸೇರಿ ತಮ್ಮೂರಿನ ಸನಿಹದ ಅರಣ್ಯಕ್ಕೆ ತೆರಳಿ ಒಂದು ದಿನ ಅಲ್ಲಿ ಊಟ ಮಾಡಿ, ಸಂತಸ ಪಡುವ ವಿಶಿಷ್ಟ ಹಾಗೂ ಉತ್ತಮ ಪರಂಪರೆಯೇ ವನಭೋಜನ. ಇದರಲ್ಲಿ ಭಾಗಿಯಾಗಿವ ಪ್ರತಿಯೊಬ್ಬ ಗ್ರಾಮಸ್ಥನೂ ವನಭೋಜನಕ್ಕಾಗಿ ತನ್ನ ಕೈಲಾದ ಸಹಾಯವನ್ನು ಮಾಡುತ್ತಾನೆ. 

ಗ್ರಾಮಸ್ಥರ ಒಗ್ಗೂಡುವಿಕೆ: 

ಒಬ್ಬರು ಅಕ್ಕಿ ತಂದರೆ ಇನ್ನೊಬ್ಬರು ಬೆಲ್ಲ, ಮತ್ತೊಬ್ಬರು ತೆಂಗಿನಕಾಯಿ, ಮಗದೊಬ್ಬರು ಹಾಲು, ಹೀಗೆ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ವಸ್ತುಗಳನ್ನು ತರುವ ಮೂಲಕ ವನಭೋಜನದ ಯಶಸ್ವಿಗೆ ಕಾರಣನಾಗುತ್ತಾನೆ. ಗ್ರಾಮಸ್ಥರೆಲ್ಲರ ಸೇರುವಿಕೆಯಿಂದ ವನಭೋಜನವೂ ಅತ್ಯುತ್ತಮವಾಗಿ ಜರುಗುತ್ತದೆ. 

ವನಭೋಜನ ಇಡೀ ಗ್ರಾಮದ ಒಗ್ಗಟ್ಟಿನ ಪ್ರತೀಕ. ಗ್ರಾಮಸ್ಥರು ಒಂದುಗೂಡಿ ಮಾಡುವ ಈ ಕಾರ್ಯಕ್ರಮ ಏಕತೆಗೆ ಸಾಕ್ಷಿಯಾಗುವಂತದ್ದಾಗಿದೆ. ವರ್ಷಕ್ಕೊಮ್ಮೆಯೋ ಎರಡು ಸಾರಿಯೋ ತಮ್ಮೂರಿನ ಫಾಸಲೆಯಲ್ಲಿ ಅರಣ್ಯದಲ್ಲಿಯೋ, ನದಿ ದಂಡೆಯಲ್ಲಿಯೋ ಸೇರಿ ಅಡುಗೆ ಮಾಡಿ, ವನಭೋಜನ, ಹೊಳೆಯೂಟ ಕಾರ್ಯಕ್ರಮ ಪ್ರಾಚೀನ ಕಾಲದಲ್ಲಿ ಬಹಳಷ್ಟು ಸಾರಿ ನಡೆದ ಉದಾಹರಣೆಗಳು ಸಿಗುತ್ತವೆ.

ಹರಕೆ: 

ಚಿಪಗಿ ಊರಿನ ಗ್ರಾಮಸ್ಥರು ದ್ಯಾಮವ್ವ ದೇವಿಯ ಸನ್ನಿಧಿಯಲ್ಲಿ ವನಭೋಜನದ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಊರಿನ ಯಾವುದೇ ವ್ಯಕ್ತಿ ಅಥವಾ ಮನೆಯವರು ವನಭೋಜನದ ಹರಕೆಯನ್ನು ಹೊತ್ತುಕೊಂಡರೂ ಇಡೀ ಊರಿನವರು ಇದರಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ. ಊರಿನವರಷ್ಟೇ ಅಲ್ಲದೇ ಹೊರ ಊರಿನ ಜನರೂ, ಸಂಬಂಧಿಕರೂ ಈ ವನಭೋಜನದಲ್ಲಿ ಪಾಲ್ಗೊಳ್ಳುತ್ತಾರೆ.ಮಳೆಗಾಲ ಕಳೆದ ನಂತರ ಆರಂಭಗೊಳ್ಳುವ ಚಿಪಗಿ ವನಭೋಜನ ಜಾತ್ರೆಯ ವರ್ಷವಾದರೆ ಜಾತ್ರೆಯ ವರೆಗೆ ನಡೆಯುತ್ತದೆ. ಅದಿಲ್ಲವಾದರೆ ಮಾರ್ಚ್ ತಿಂಗಳಿನ ವರೆಗೂ ನಡೆಯುತ್ತದೆ.  

ಶಿರಸಿ ಜಾತ್ರೆಯ ಮುನ್ನ ನಡೆಯುವ ಹೊರಬೀಡು ಕಾರ್ಯಕ್ರಮಕ್ಕೆ ಮೊದಲು ಇಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗುತ್ತದೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ನಂತರ ಚಿಪಗಿ ದ್ಯಾಮವ್ವನ ಸನ್ನಿಧಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳುವುದಿಲ್ಲ. ವರ್ಷಕ್ಕೆ ಎಂಟಕ್ಕೂ ಹೆಚ್ಚಿನ ವನಭೋಜನಗಳು ನಡೆದ ದಾಖಲೆಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬೆಳಗಿನ ಹಾಲು ಪಾಯಸಕ್ಕೆ ಮೀಸಲು ಊರಿನಲ್ಲಿ ವನಭೋಜನ ನಡೆಯುವ ದಿನದಂದು ಇಡೀ ಊರಿನವರು ತಮ್ಮ ತಮ್ಮ ಮನೆಗಳ ಬೆಳಗಿನ ಹೊತ್ತಿನ ಹಾಲನ್ನು ವನಭೋಜನಕ್ಕೆ ಬಳಕೆ ಮಾಡುತ್ತಾರೆ. ಅಂದಿನ ಹಾಲು ವನಭೋಜನದಲ್ಲಿ ಮಾಡಲಾಗುವ ಪಾಯಸಕ್ಕಾಗಿ ಬಳಸುತ್ತಾರೆ. ವನಭೋಜನಕ್ಕಾಗಿ ಸ್ಥಳೀಯರಿಗಿಂತ ಹೆಚ್ಚು ಹೊರ ಊರುಗಳಲ್ಲಿರುವವರೇ ಹರಕೆ ಹೊತ್ತುಕೊಳ್ಳುತ್ತಾರೆ ಎನ್ನುವುದೂ ವಿಶೇಷ ಸಂಗತಿಯಾಗಿದೆ. 

ದ್ಯಾಮವ್ವ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ನಂತರ ವನಭೋಜನಕ್ಕಾಗಿ ಊರಿನವರೇ ಅಡುಗೆ ಮಾಡುತ್ತಾರೆ. ಊಟವನ್ನು ಬಡಿಸುವವರೂ ಅವರೇ. ಆದರೆ ಕಾರಣಾಂತರಗಳಿಂದ ಈಗ ಕೆಲವು ವರ್ಷಗಳಿಂದ ಅಡುಗೆ ಮಾಡುವವರನ್ನು ಕರೆಸಲಾಗುತ್ತಿದೆ. ಹಸಿರು ಮರಗಳ ನೆರಳಿನಲ್ಲಿ ಊಟಕ್ಕಾಗಿ ಬಾಳೆ ಎಲೆಗಳನ್ನು ಹಾಕಲಾಗುತ್ತದೆ. ಊಟದ ನಂತರ ಈ ಬಾಳೆಗಳನ್ನು ತೆಗೆದು ಎಸೆಯುವುದಿಲ್ಲ. ಬದಲಾಗಿ ಅವುಗಳನ್ನು ಹಾಗೆಯೇ ನೆಲದ ಮೇಲೆ ಬಿಡಲಾಗುತ್ತದೆ. ಈ ಬಾಳೆಗಳನ್ನು ದನಗಳು ಬಂದು ತಿನ್ನಬೇಕು. ವನಭೋಜನದಲ್ಲಿ ಮನುಷ್ಯನ ಜೊತೆಗೆ ಎಲ್ಲ ಪ್ರಾಣಿಗಳೂ ಸೇರ್ಪಡೆಯಾಗಬೇಕು ಎನ್ನುವ ಕಾರಣಕ್ಕಾಗಿ ಇಂತಹ ಸಂಪ್ರದಾಯವನ್ನು ತಂದಿರಬಹುದೆಂದು ಸ್ಥಳೀಯರಾದ ಆರ್.ವಿ. ಹೆಗಡೆ ಹೇಳುತ್ತಾರೆ.

ಆಧುನಿಕ ಸಮಾಜದ ಯಾಂತ್ರಿಕ ಜೀವನದ ಭರಾಟೆಯಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಸಮಾಜದಿಂದ ಮರೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

 

(ಕನ್ನಡಪ್ರಭದಲ್ಲಿ ಜ.28ರಂದು ಬರೆದಿದ್ದ ಲೇಖನ)