Wednesday, January 1, 2014

ಹವಿವಾಹಿತರ ಸಂಘ

ಚಿತ್ರ ಕೃಪೆ : ಭಾವು ಪತ್ತಾರ

                 ನಮ್ಮೂರಿನಲ್ಲಿರುವ ಈ ಅಘೋಷಿತ ಸಂಘ ಸಾಕಷ್ಟು ಸದಸ್ಯರನ್ನು ಹೊಂದಿರುವ ಮೂಲಕ ಬಹುದೊಡ್ಡ ಗಾತ್ರವನ್ನೇ ಹೊಂದಿದೆ. ಸಂಘದ ಸದಸ್ಯರಿಗೆ ಹೋಲಿಸಿದರೆ ನಮ್ಮೂರಿನಲ್ಲಿರುವುದು ಕೇವಲ ಏಳೆಂಟು ಮನೆಗಳಷ್ಟೇ. ಈ ಮನೆಗಳ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಸಂಘದ ಗಾತ್ರ ಅಗಾಧವಾದುದು ಎನ್ನುವುದು ಅರಿವಿಗೆ ಬರುತ್ತದೆ.

                ಈ ಸಂಘಕ್ಕೆ ಕನಿಷ್ಠ ವಯೋಮಿತಿ ಇದೆಯಾದರೂ ಗರಿಷ್ಟ ವಯೋಮಿತಿಯಿಲ್ಲ. ಅನ್ ಲಿಮಿಟೆಡ್ ವಯಸ್ಸಿನ ಸದಸ್ಯರಿರುವ ಕಾರಣ ಗರಿಷ್ಟಕ್ಕೆ ಅವಕಾಶವೇ ಇಲ್ಲ ಎನ್ನಬಹುದು. ಅಂದ ಹಾಗೆ ಈ ಸಂಘದ ಕನಿಷ್ಟ ವಯೋಮಾನ ಇಪ್ಪತ್ತೊಂದು ವರ್ಷ. ತಡೀರಿ ಮಾರಾಯ್ರೆ.. ಸಂಘದ ಬಗ್ಗೆ ಮುಖ್ಯವಾಗಿ ಇರುವ ವಿಷಯವನ್ನೇ ಹೇಳಲು ಮರೆತೆ ನೋಡಿ. ಇದು ಅಂತಿಂತ ಸಂಘವಲ್ಲ. ಹವಿವಾಹಿತರ ಸಂಘ ಎಂಬುದು ಇದರ ನಾಮಧೇಯ.

                ಸರ್ಕಾರಿ ನಿಯಮದಂತೆ ಇಪ್ಪತ್ತೊಂದು ವರ್ಷವನ್ನು ಮೀರಿದ ಯುವಕರು, ಮಧ್ಯವಯಸ್ಕರು ಹಾಗೂ ಮುದುಕರು ಇದರ ಸದಸ್ಯರು. ಮದುವೆಯಾಗಿ ಯಾರ್ಯಾರು ಸಂಸಾರಸ್ಥರ ಪಟ್ಟವನ್ನು ಕಟ್ಟಿಕೊಳ್ಳುತ್ತಾರೋ ಅವರಿಗೆ ಈ ಸಂಘದಿಂದ ರಿಟೈಟ್ ಮೆಂಟ್ ನಿಡಲಾಗುತ್ತದೆ. ಮದುವೆ ಆಗದಿರುವವರು, ಮದುವೆ ಆಗದಿರುವವರಿಗಾಗಿ ಕಟ್ಟಿಕೊಂಡ ಸಂಘ ಇದೆಂದು ಗಂಟಾಘೋಷವಾಗಿ ಹೇಳಬಹುದು.

                 ನಮ್ಮೂರಿನಲ್ಲಿರುವ ಈ ಸಂಘ ಸುಮ್ ಸುಮ್ಮನೆ ಹುಟ್ಟಿಲ್ಲ. ಹುಡುಕುತ್ತ ಹೋದರ ಇದರ ಹಿಂದೆ ಹಲವಾರು ಕಾರಣಗಳು ಗೋಚರಿಸುತ್ತವೆ. ನಮ್ಮೂರು ಹೇಳಿಕೇಳಿ ಹವ್ಯಕರ ಊರು. ಜೊತೆಗೆ ಇಲ್ಲಿರುವ ಮನೆಗಳೆಲ್ಲ ಅವಿಭಕ್ತದ ಗೋಜಲು. ಜಮೀನೇನೋ ಹೇರಳವಾಗಿದೆ. ಆದರೆ ಚಿಂದಿ ಚಿಂದಿ.. ತುಂಡು ತುಂಡು ಜಮೀನು. ಇಲ್ಲಷ್ಟು ಅಲ್ಲಷ್ಟು. ಇನ್ನು ಹವ್ಯಕ ಹುಡುಗಿಯರಿಗೋ ಬೆಂಗಳೂರಿನ ಭ್ರಮೆ. ತಾನು ಹೇಗೆ ಇರಲಿ ಹುಡುಗ ಸಾಪ್ಟ್ ವೇರೇ ಆಗಿರಬೇಕು ಎಂಬ ಭ್ರಮೆ. ಇಂತದ್ದರಲ್ಲಿ ನಮ್ಮೂರಿನ ಹಳ್ಳಿ ಹೈದರನ್ನು ನೋಡುವರ್ಯಾರು?  ಇಂತ ದೊಡ್ಡ-ಸಣ್ಣ ಕಾರಣಗಳೇ ನಮ್ಮೂರ ಹೈದರಿಗೆ ಮದುವೆ ಆಗದೇ ಇರಲು ಇರುವ ಪ್ರಮುಖ ಕಾರಣಗಳು ಎಂದರೆ ತಪ್ಪಾಗಲಿಕ್ಕಿಲ್ಲ.

                  ನಮ್ಮೂರ ಸಂಘದ ಸದಸ್ಯರ ಸಂಖ್ಯೆ ಒಂದೇ ಗುಕ್ಕಿಗೆ ಹದಿನೈದನ್ನು ದಾಟಿಬಿಡುತ್ತದೆ. ಐವತ್ತೆಂಟು ವಸಂತಗಳನ್ನು ಕಂಡ ತುದಿಮನೆ ಗಂಗಣ್ಣ ನಮ್ಮೂರ ಸಂಘದ ಅಧ್ಯಕ್ಷನಾದರೆ, ಮೊನ್ನೆ ತಾನೇ ಅರ್ಧ ಶತಕ ಬಾರಿಸಿದ ಅಡಿಗೆ ಮನೆಯ ನಾಗಣ್ಣ ಐವತ್ತರವನು ಇದರ ಕಾರ್ಯದರ್ಶಿ. ಇನ್ನುಳಿದಂತೆ ಈ ಸಂಘದ ವಿಶೇಷ ವ್ಯಕ್ತಿಗಳಲ್ಲಿ ನಾನೂ ಒಬ್ಬಾತ. ಸಂಘಕ್ಕೆ ಹೊಸ ಮುಖ. ಮೊನ್ನೆ ತಾನೆ ಎಲ್ಲರ ಎದುರು ಇಪ್ಪತ್ತೊಂದು ವರ್ಷದ ಮೇಣದ ಬತ್ತಿ ದೀಪವನ್ನು ಉಫ್ ಎಂದು ಆರಿಸಿದ ಕಾರಣಕ್ಕೆ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದೇನೆ.

                  ನಮ್ಮೂರಿನ ಸಂಘದ ಪದಾಧಿಕಾರಿಗಳು ಆಗಾಗ ಸಭೆಯನ್ನು ಸೇರಿ ಚರ್ಚೆ ನಡೆಸುವುದುಂಟು. ನಾನು ಹೊಸಬನಾದ್ದರಿಂದ ನಡೆಯುವ ಸಭೆಗಳಲ್ಲಿ ಎಡಬಿಡದೇ ಭಾಗವಹಿಸಿದ್ದೇನೆ. ಹೆಚ್ಚಿನ ಸಂಗತಿಗಳು ಹೆಣ್ಣು ನೋಡುವುದರ ಕುರಿತೇ ಇರುತ್ತದೆಯಾದ್ದರಿಂದ ಅದರ ಕುರಿತು ಗಂಭೀರ ಚಿಂತನೆ ನಡೆಸಿಲ್ಲ. ಒಂದು ಸಭೆಯಲ್ಲಿ ಪದಾಧಿಕಾರಿಗಳೂ ಕಡಿಮೆಯಿದ್ದರು. ಆ ಸಂದರ್ಭದಲ್ಲಿ ಮಾತಿನ ಹುಕಿಗೆ ಬಿದ್ದಿದ್ದ ಅಧ್ಯಕ್ಷ ಐವತ್ತೆಂಟರ ಗಂಗಣ್ಣ ತನ್ನ ಲೈಫ್ ಟೈಮಿನಲ್ಲಿ ನಲವತ್ತೆಂಟು ಸಾರಿ ಹೆಣ್ಣು ನೋಡಲು ಹೋದ ಕಥೆಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ನಾನು ವಿಸ್ಮಯದಿಂದ ಕೇಳಿದ್ದೇನೆ. ಇದಕ್ಕೆ ಪ್ರತಿಯಾಗಿ ನಾಗಣ್ಣ ತಾನೇನು ಕಡಿಮೆ ಎನ್ನುವ ಹಾಗೆ ನೆರೆತ ತಲೆಗೂದಲಿಗೆ ಚಿಕ್ ಶಾಂಪೂ ಹಚ್ಚಿ ಕರೀಕಾಗಿಸಿ, ನಿನ್ನೆ ತಾನೆ ಡೈವೋರ್ಸ್ ಆದ ಒಬ್ಬಾಕೆಯನ್ನು ನೋಡಲು ಹೋಗಿ ಬಂದಿದ್ದನ್ನು ವಾಲಿ ವಿಜಯ ಯಕ್ಷಗಾನ ಪ್ರಸಂಗದಂತೆ ಹೇಳಿಕೊಂಡಿದ್ದ. ಇದನ್ನು ಕೇಳಿ ನಕ್ಕಿದ್ದ ನನ್ನನ್ನು ನೋಡಿ ಇವರೆಲ್ಲ `ತಮಾ.. ನೀ ನಗ್ತೆ.. ನಗಾ.. ಮುಂದೆ ಗೊತ್ತಾಗ್ತ ನಿಂಗೆ..' ಎಂದಿದ್ದರು.

                ಇರುವ ಕೆಲವೇ ಕೆಲವು ಮನೆಗಳಿಂದ ಇಷ್ಟು ಸದೃಢ ಸಂಘ ಹೇಗಾಯ್ತು ಅಂತ ಮತ್ತೆ ಮತ್ತೆ ಪ್ರಶ್ನಿಸಬೇಡಿ. ಹಳ್ಳಿ ಹೈದರು ಓದಿದ್ದು ಕಡಿಮೆ. ಹಾಗೆಂದು ಓಸಿ, ಇಸಪೀಟು, ಗುಡಗುಡಿ ಮುಂತಾದ ರಾಷ್ಟ್ರೀಯ ಕ್ರೀಡೆಗಳಲ್ಲೆಲ್ಲಾ ಇವರೇನೂ ಹಿಂದೆ ಬಿದ್ದವರಲ್ಲ. ಇನ್ನು ಬಾಯಲ್ಲಂತೂ ಸದಾ `ಯೆ ದಿಲ್ ಮಾಂಗೇ ಮೋ..ರ್..' ಎಂಬ ಸ್ಲೋಗನ್ನಿನಂತಹ ಮಾತುಗಳ ಜೊತೆಗೆ, ನಕ್ಷತ್ರ, ಬೆಂಕಿ, ಮಾರುತಿ, ಪದ್ಮಶ್ರೀಯಂತಹ ಗುಟಕಾಗಳು ಇವರ ಪ್ರತಾಪದ ಮತ್ತೊಂದು ಭಾಗವೇ ಆಗಿದೆ. ಇಂತವರನ್ನು ಹವಿಗನ್ನೆಯರು ಹೇಗೆ ತಾನೆ ಮೆಚ್ಚಿಯಾರು..?

                 `ನೀನು.. ಕೋಲೇಜಿಗೆ ಹೋಪಂವನಲ.. ಯಾರ್ನಾದ್ರೂ ಲವ್ ಮಾಡಾ. ಇಲ್ದೋದ್ರೆ ಯಂಗ್ಳಾಂಗೆ ಆಗೋಗ್ತೆ ನೋಡು..' ಎಂಬುದು ಹೊಸದಾಗಿ ಸಂಘಕ್ಕೆ ಎಂಟ್ರಿಯಾದ ನನಗೆ ಸದಾ ಹೇಳುತ್ತಿರುವ ಮಾತು, ಕನ್ನಡ ಶಾಲೆಯಲ್ಲಿ ಮಾಸ್ತರ್ರು ಹೇಳಿದ ಪಾಠಗಳಂತೆ ಸದಾ ನೆನಪಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ.

                ನಮ್ಮೂರ ಗುಟ್ಕಾ ಕಿಂಗು, ಮಟ್ಕಾ ಕಿಂಗುಗಳ ಬಗ್ಗೆ ಬೇರೆ-ಬೇರೆ ಪಕ್ಕದ ಊರುಗಳಲ್ಲೆಲ್ಲ `ಆ ಊರಿನವರು ಮದುವೆಯಾದ ಹಾಗೆ..'ಎಂದು ಗಾದೆಯ ಮೂಲ ಛೇಡಿಸುವಷ್ಟು ಸುದ್ದಿ ಹಬ್ಬಿದೆ. ಹೀಗೆ ಗಾದೆ ಬೆಳೆದಿರುವುದು ನಮ್ಮೂರಿಗರ ವರ್ಡ್ ಫೇಮಸ್ಸಿಗೆ ಚಿಕ್ಕ ಸಾಕ್ಷಿ ಅಷ್ಟೇ.

                ನಮ್ಮೂರ ಈ ಸಂಘದಲ್ಲಿ ಕಾಲೇಜು ಮೆಟ್ಟಿಲು ಕಂಡ ಎರಡನೇ ಸದಸ್ಯ ಎಂಬ ದುರದೃಷ್ಟದ ಹೆಮ್ಮೆ ನನಗೆ..` ಏ ತಮಾ.. ಕಾಲೇಜಿನಲ್ಲಿ ಯಂಗೆ ಆಪಂತಾ ಗನಾ ಕೂಸಿದ್ರೆ ಹೇಳಾ..' ಎನ್ನುವ ನಮ್ಮೂರಿಗರ ಮಾತಿಗೆ ನನಗೆ ಏನನ್ನಬೇಕೋ ಎಂದು ತಿಳಿಯದೇ ಅನೇಕ ಬಾರಿ ಒದ್ದಾಡಿದ್ದೇನೆ.

                ಜೀವನದಲ್ಲಿ ಒಂದೇ ಒಂದು ಸಾರಿ ಮದುವೆಯಾದರೆ ಸಾಕು ಎಂದು ನಮ್ಮೂರ ಸಂಘಾರ್ತಿಗಳು ಅದೆಷ್ಟು ಪ್ರಯತ್ನ ಪಟ್ಟಿದ್ದಾರೋ.. ಕೆಲವರು ಸಾವಿರ ಸುಳ್ಳನ್ನು ಹೇಳಿಯೂ ನೋಡಿದ್ದಾರೆ. ಪ್ರತಿ ವರ್ಷದ ಆದಿಯಲ್ಲಿ ಈ ವರ್ಷ ನನ್ನ ಮದುವೆ ಆಗಬೇಕು ಎಂಬ ಹರಕೆಗಳ ಸರಮಾಲೆಗಳನ್ನೇ ಹೊತ್ತು ಹೊತ್ತು ಕತ್ತು ಉಳುಕಿಸಿಕೊಂಡಿದ್ದಾರೆ.

                ಇನ್ನು ಪ್ರಮುಖ ಸದಸ್ಯನೇ ಆದ ಪಿಟಿಂಗ್ ಶಾಂತಣ್ಣನ ಬಗ್ಗೆ ಹೇಳದಿದ್ದರೆ ಏನೋ ಕಳವಳವಾಗುತ್ತದೆ. ಮಾಡುವ ಕೆಲಸ ಎಲೆಕ್ಟ್ರಿಷಿಯನ್ನು..ವಯಸ್ಸಿನಿಂದ ಎರಡು ಅಧ್ಯಕ್ಷನಾಗುವಂತಾಗಿದ್ದರೂ ತನ್ನ ಅಂತರಾತ್ಮದ ಕರೆಗೆ ಓಗೊಟ್ಟು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಇವರನ್ನು ಕಂಡರೆ ಎಲ್ಲರಿಗೂ ಅಚ್ಚು ಮೆಚ್ಚಿನ ಹುಚ್ಚು.

                ಈ ಸಂಘ ಆಗಾಗ ಯಾರದ್ದಾದರೂ ಮನೆಯ ಜಗುಲಿಯ ಮೇಲೆ ಮೀಟಿಂಗ್ ನಡೆಸುತ್ತದೆ. ಅದಕ್ಕೆ ಕಟ್ಟೆ ಪಂಚಾಯ್ತಿ ಎಂದೇ ಹೆಸರು. (ಆಸಕ್ತರು ಪಟ್ಟಂಗ ಎಂದುಕೊಳ್ಳಬಹುದು). ಮೀಟಿಂಗಿನಲ್ಲಿ ಚರ್ಚೆಗೆ ಬರುವ ವಿಷಯ ಎಂದರೆ ಎಷ್ಟೇ ಕೊಂಕಣ ಸುತ್ತಿದರೂ ಕೊನೆಗೆ ಮೈಲಾರಕ್ಕೆ ತಲುಪಬೇಕು ಎಂಬಂತೆ ಹೆಣ್ಣು ನೋಡುವುದೇ ಆಗಿದೆ. ಆಗಾಗ ಅಲ್ಲೊಬ್ಬರು ಇಲ್ಲೊಬ್ಬರು ಹವಿಗನ್ನೆಯರ ಸೊಕ್ಕಿಳಿಸುವ ಮಸೂದೆಯನ್ನು ಮಂಡಿಸಿದರೆ ಎಲ್ಲರೂ ಅದನ್ನು ಅನುಮೋದಿಸುತ್ತಾರೆ. ಕೆಲವೊಮ್ಮೆ ಇವರು `ಸ್ವಯಂವರ' ಎಂಬ ಕಾರ್ಯಕ್ರಮದಂತೆ `ಸ್ವಯಂವಧು' ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಹೇಗೆ ಎಂದು ಚಿಂತಿಸಿ, ಅದಕ್ಕಾಗಿ ಮುಂದಡಿಯಿಟ್ಟದ್ದೂ ಇದೆ. ಆದರೆ ತಾಂತ್ರಿಕ ಹಾಗೂ ಅಭಾವದ ಕಾರಣ ಅದು ಅಲ್ಲಿಗೆ ನಿಂತಿದ್ದು ಸುದ್ದಿಯಾಗಿಲ್ಲ.

                ಊರಿನ ಸುತ್ತಮುತ್ತಲ ಫಾಸಲೆಯಲ್ಲಿ ಅಥವಾ ಹತ್ತಿರದ ಸೀಮೆಗಳಲ್ಲಿ ಎಲ್ಲಾದರೂ ಹೈಗರ ಮನೆಯ ಮದುವೆ ನಡೆದರೂ ಅಲ್ಲೆಲ್ಲ ತೆರಳುವ ಈ ಸಂಘದ ಮಂದಿಗಳು ಅಲ್ಲೆಲ್ಲಾದರೂ ತಮಗೆ ಸೆಟ್ಟಾಗುವ ಕೂಸುಗಳಿದ್ದಾವಾ ಎಂದು ಆಸೆಗಣ್ಣಿನಿಂದ ದಿಟ್ಟಿಸುತ್ತಾರೆ. ಇವರ ರೀತಿ-ನೀತಿ-ನಡೆ-ನುಡಿಗಳನ್ನು ಕಂಡೋ ಏನೋ ಈ ಹವಿಹೈದರನ್ನು ಕಂಡ ಹುಡುಗಿಯರೆಲ್ಲ ಅಲ್ಲಿಂದ ಸದ್ದಿಲ್ಲದೇ ಗುಡ್ ಬಾಯ್ ಹೇಳುತ್ತಾರೆ.

                 ಸಂಘದಲ್ಲಿ ಹೊಸ ಹೊಸ ಆಲೋಚನೆಗಳು ಆವಾಗಾವಾಗ ಮಳೆಗಾಲದಲ್ಲಿ ಸುಮ್ನುಳ (ಕಂಬಳಿಹುಳ) ಹುಟ್ಟಿದಂತೆ ಹುಟ್ಟುತ್ತಿರುತ್ತವೆ. ಬೆಂಗಳೂರಿನಲ್ಲಿ ಬಿಡದಿ ಹೂಡಿರುವ ಹುಡುಗರನ್ನು ಬಯಸುವ ಹವಿ ಹುಡುಗಿಯರ ಕುರಿತು ತಿಳಿದು ತಾವು ಮದುವೆ ಆಗಲಿಕ್ಕಾದರೂ ಬೆಂಗಳೂರಿಗೆ ಹೋಗಬೇಕು ಎಂದು ಮುಂದಾಲೋಚಿಸಿ ಆ ಬಗ್ಗೆ ಪ್ರಯತ್ನ ಪಟ್ಟು ವಿಫಲರಾಗಿದ್ದೂ ಇದೆ. ಈ ಐಡೀರಿಯಾವೂ ವ್ಯರ್ಥವಾದಾಗ ತಮ್ಮ ಹವಿಮುಂದಾಳುಗಳನ್ನು ಹಿಡಿದು ಕಾಶಿ ಸೇರಿದಂತೆ ಉತ್ತರ ಭಾರತದ ಹವ್ಯಕ ಹೆಣ್ಣುಮಕ್ಕಳನ್ನು ತಂದುಕೊಳ್ಳಲು ಪ್ರಯತ್ನವನ್ನೂ ನಡೆಸಿದ್ದಾರೆ. ಆದರೆ ಚಿಕ್ಕ ಹಿಡುವಳಿದಾರರು ದೊಡ್ಡ ಮೊತ್ತ ನೀಡಲು ಕಷ್ಟವಾದ ಕಾರಣ ವಧು ಅನ್ವೇಷಣೆಯ ಕಾಶೀಯಾತ್ರೆ ಕೂಡ ವಿಫಲತೆಯ ಹಾದಿಯನ್ನು ತಲುಪಿದೆ ಬಹಿರಂಗ ಸತ್ಯ. ಸುತ್ತಣ ಊರಿಗಳ ಹವಿಹೈದರು ಹಾವೇರಿಯ ಕಡೆಯಿಂದ ಹೆಣ್ಣುಗಳನ್ನು ಮದುವೆಯಾಗಿ ಬಂದರಂತೆ ಎಂಬ ಸುದ್ದಿ ತಿಳಿದು ಒಮ್ಮೆ ರೋಮಾಂಚನಗೊಂಡಿದ್ದೂ ಇದೆ. ಆದರೆ ನಮ್ಮ ಹವ್ಯಕ ಸಂಸ್ಕ್ಋತಿಗೆ ಇದು ಆಗಿ ಬರುವುದಲ್ಲ, ಹೋಗಿ ಬರುವುದಲ್ಲ ಬಿಡಿ ಎಂದು ತಲೆಕೊಡವಿ ಸುಮ್ಮನಾಗಿದ್ದುದು ಹವಿ ಹೈದರ ನಿಯತ್ತನ್ನು ಎತ್ತಿ ತೋರಿಸುವಂತದ್ದು.

                 ತೀರಾ ಇತ್ತೀಚೆಗೆ ಸಂಘದಲ್ಲಿ ಒಂದೆರಡು ವೈಚಿತ್ರ್ಯವೂ ಜರುಗಿದೆ. ಈಗಾಗಲೇ ಮದುವೆಯಾಗಿ ಸಂಘದಿಂದ ನಿವೃತ್ತಿಯನ್ನು ಪಡೆದಿದ್ದ ಸಣ್ಮನೆಯ ರವಿಚಂದ್ರ ಹಾಗೂ ಮೂಲೆಮನೆಯ ಮಂಜುನಾಥ ಇವರಿಬ್ಬರೂ ಸಂಸಾರದ ಸುಖವನ್ನು ಅರಗಿಸಿಕೊಳ್ಳಲಾಗದೇ ಮತ್ತೆ ಪುನಃ ಸಂಘದ ಸದಸ್ಯತ್ವ ನೀಡಬೇಕೆಂದು ಅರ್ಜಿ ಹಾಕಿರುವುದು ಹಾಲಿ ಪದಾಧಿಕಾರಿಗಳಿಗೆ ತಲೆಬಿಸಿಯನ್ನು ಉಂಟುಮಾಡಿದೆ.

                  ಹೆಣ್ಣು ಸಿಗಲಿಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಕನ್ನಡದ ಭಾಗದಲ್ಲಿ ಓರ್ವ ಹವಿ ಹೈದ ಆತ್ಮಹತ್ಯೆಗೆ ಆರಣಾಗಿರುವ ಸುದ್ದಿಯನ್ನು ಪ್ರಕಟಿಸಿದ ಪತ್ರಿಕೆ ವಾರಗಳ ಕಾಲ ನಮ್ಮೂರಿನ ಸಂಘದ ಪದಾಧಿಕಾರಿಗಳ ಕೆಂಗಣ್ಣಿಗೆ ಹಾಗೂ ಹಿಡಿ ಶಾಪಕ್ಕೆ ಗುರಿಯಾಗಿದೆ. ನಿರಂತರ ಒಂದು ವಾರಗಳ ಕಾಲ ಆತ್ಮಹತ್ಯೆಗೆ ಶರಣಾದ ಹವಿಹೈದನ ನೆನಪಿನಲ್ಲಿ ಮೌನ ಮಾಡುವ ಮೂಲಕ ಶೀಯಾಳ ಕಂಪನಿ ಪ್ರಾಯೋಜಿತ ವಿಶ್ವದಾಖಲೆಯಾಗಿ ಉಳಿದಿದೆ.

                  ಒಂದೆರಡು ವಾರದ ಹಿಂದೆ ಸಂಘದ ಪ್ರಮುಖ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದ ದತ್ತಣ್ಣ ಮದುವೆಯಾಗಿ ಹೋದ ಲಾಗಾಯ್ತಿನಿಂದಲೂ ಗಂಗಣ್ಣ-ನಾಗಣ್ಣನ ಆದಿಯಾಗಿ ತಲೆ ನೆರೆತವರು ಬಣ್ಣ ಹಚ್ಚಿ ಮತ್ತೆ ವಧು ಬೇಟೆಗೆ ಹೊರಡುವುದರೊಂದಿಗೆ ಕಿರಿಯರಿಗೆ ಭಾರಿ ಸ್ಪರ್ಧೆಯನ್ನು ನೀಡಲಾರಂಭಿಸಿದ್ದಾರೆ.

                   ಅವರು ಹೊರಟ ಸ್ಪೀಡು ನೋಡಿದರೆ ಸಧ್ಯವೇ ಊರಿನಲ್ಲಿ ಒಂದಾದರೂ ಮದುವೆ ಆಗುವ ಸಂಭವ ಇರುವ ಸುದ್ದಿ ಗುಟ್ಟಾಗಿಟ್ಟರೂ ಗುಪ್ತಚರ ಇಲಾಖೆಯ ಯಡವಟ್ಟಿನಿಂದಾಗಿ ರಟ್ಟಾಗಿ ಹೋಗಿದೆ. ಪರಿಣಾಮ ಸುತ್ತಲ ಪರಿಚಿತ ಹವಿಗನ್ನೆಯರು ಆತಂಕ ಪಡತೊಡಗಿದ್ದಾರೆ.

                   ಹೀಗಿದೆ ನೋಡಿ ನಮ್ಮೂರ ಹವಿವಾಹಿತರ ಸಂಘ. ಹಾಂ ಅಂದಹಾಗೆ ನಿಮಗೆ ಹೇಳಿಯೇ ಇರಲಿಲ್ಲ ನೋಡಿ. ನಮ್ಮೂರ ಹವಿವಾಹಿತರ ಸಂಘದ ಗೀತೆ ಏನು ಗೊತ್ತಾ

ನಡೆ ಮುಂದೆ..

ನಡೆ ಮುಂದೆ..

ನುಗ್ಗಿ ನಡೆಮುಂದೆ... ಎಂಬುದಾಗಿದೆ.

****

(ಇದನ್ನು ಬರೆದಿದ್ದು 13-09-2008ರಲ್ಲಿ. ಉಳುಮೆ ಮಾಸಪತ್ರಿಕೆಯಲ್ಲಿ ಈ ಲಘು ಬರಹ ಪ್ರಕಟಗೊಂಡಿತ್ತು.ಈ ಬರಹವನ್ನು ಓದಿದ ಕನ್ನಡದ ಖ್ಯಾತ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆಯವರು `ಇದೊಂದು ಅತ್ಯುತ್ತಮ ಲಘು ಪ್ರಬಂಧ. ಇಲ್ಲಿ ಹಾಸ್ಯದ ಪರದೆಯನ್ನು ಸರಿಸಿದರೆ ದುರಂತ ವಾಸ್ತವ ಸಂಗತಿ ಅರಿವಾಗುತ್ತದೆ.. ಉತ್ತಮ ಹಾಸ್ಯದ ಲಕ್ಷಣ ಅದು.. ಹೀಗೆ ಬರೆಯುತ್ತಿದೆ' ಎಂದು ಹಾರಯಿಸಿದ್ದರು.)

                 

Sunday, December 29, 2013

ಚಿತ್ರ ಸಂಪುಟ

ಬದುಕು ಹಲವು ವರ್ಣಗಳ ಕೊಲಾಜ್. ಬದುಕಿನಲ್ಲಿ ನೂರಾರು ಬಣ್ಣಗಳನ್ನು ಕಾಣಬಹುದು. ಹಲವು ಸೆಳೆಯುವಂತದ್ದಾದರೆ ಹಲವು ಕಾಡುವಂತವುಗಳು.. ಹೀಗೆ. ಬದುಕಿನ ಹಲವು ಚಿತ್ರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇದಷ್ಟೇ.

**

ರೂಪದರ್ಶಿ : ಶೃತಿ ರಾವ್

ಬದಕಿನಲ್ಲಿ ಭಾವನೆಗಳಿಗೆ ಮಹತ್ವ ಹೆಚ್ಚು. ಭಾವನೆಗಳು ಮತ್ತೆ ಮತ್ತೆ ಸೆಳೆಯುತ್ತವೆ. ಕಾಡುತ್ತವೆ. ನಾಮ್ಮ ಪ್ರತಿ ನಡೆ ನುಡಿಯಲ್ಲಿಯೂ ಭಾವನೆಗಳು ಕಾಣುತ್ತವೆ. ಇಂತಹ ಒಂದು ಭಾವನಾತ್ಮಕ ಚಿತ್ರ-ಚಿತ್ರಣ.

 

****

 

ಉಂಚಳ್ಳಿ ಜಲಪಾತದ ಬಿಳಿಜಲಧಾರೆ

ಬಿಳಿಯ ಬಣ್ಣ ಶಾಂತಿಯ ಸಂಕೇತ. ಬಿಳಿಯಬಣ್ಣದ ಮೇಲೆ ಕಾಮನಬಿಲ್ಲಿನ ಬಣ್ಣ ಮೂಡಿದಾಗ ಬದುಕು ಸಹಜ-ಸುಂದರ.  ಸುಂದರ ಕಾಮನಬಿಲ್ಲಿಗೆ ಬಿಳಿ ಬಣ್ಣದ ಹಿನ್ನೆಲೆ ವಿಶೇಷ ಮೆರಗನ್ನು ನೀಡುತ್ತದೆ

 

***

ಸೃಜನ ಸುಂದರಿ

ಸಹಜವಾಗಿದ್ದರೆ ಚನ್ನಾಗಿ ಕಾಣುತ್ತದೆ. ಮೇಕಪ್  ಮಾಡಿದರೆ ಆ ಸೆಳೆತ ಕಡಿಮೆ.  ಬದುಕಿನ ಕುಲುಮೆಯ ಕೆಲಸದಲ್ಲಿ ಬೆಂದು-ಬಸವಳಿದಾಗ ಜೀವನ ಹಣ್ಣಾಗುತ್ತದೆ.

 

****

ನಗರಿಯಲ್ಲಿ ನಡೆದ ಹೋರಾಟ

 ಹೋರಾಟ ಬದುಕಿನ ಒಂದು ಮುಖ. ಹುಟ್ಟಿದ ತಕ್ಷಣ ಹೋರಾಟ ಶುರು. ಜಗತ್ತಿನ ಜೊತೆಗೆ ಸಂಘರ್ಷ ಮಾಡುತ್ತ ಬದುಕಬೇಕಾಗುತ್ತದೆ. ಒಂದು ಹೋರಾಟದ ಚಿತ್ರ. ಮಾನವ ಸರಪಳಿಯ ಮೂಲಕ ನಡೆಯುವ ಹೋರಾಟ ಜೀವಗಳನ್ನು ಬೆಸೆಯುತ್ತದೆ..!!

**

(ಹಾಗೆ ಸುಮ್ಮನೆ ವೃತ್ತಿಯ ಮದ್ಯ ತೆಗೆದ ಈ ನಾಲ್ಕು ಪೋಟೋಗಳನ್ನು ಒಂದೆ ಸೇರಿಸಿ ಚಿತ್ರ ಸಂಪುಟವಾಗಿ ಮಾಡಿದ್ದೇನೆ. ಹಾಗೆ ಸುಮ್ಮನೆ ನೋಡಿ.. ಕಮೆಂಟ್ ಮಾಡಿ)

Friday, December 27, 2013

ಸತ್ಯ....

ಏನೇ ಹೇಳಿ..
ಲವ್ ಫೇಲ್ಯೂರ್ ಆದಮೇಲೆ
ಹುಡುಗನಿಗೆ
ಸ್ವಾತಂತ್ರ್ಯ
ಸಂಭ್ರಮ...!!
 **
 ಮದುವೆ ಆದ ಮೇಲೆ
ಅನುದಿನವೂ 
ಹುಡುಗನಿಗೆಸ್ವಾತಂತ್ರ್ಯ
ಹೋರಾಟ..!!
**
ನನ್ನ ತಂಗಿ ಅವಳ
ಗೆಳತಿಯರ ಬಳಿ
ನನ್ನನ್ನು
ಇಂವ ನನ್ನ ಅಣ್ಣ..
ಎಂದು ಪರಿಚಯಿಸಿದಳು...
ಅವರು
ಅರಾಮನಾ ಅಣಾ..
ಎಂದು ಮಾತನಾಡಿಸಿದರು...!!!
***
ಶಾಕುಗಳೇ ಹಾಗೆ..
ಒಂದರ ಹಿಂದೆ ಒಂದು ಬರುತ್ತವೆ..
ಹೊಡೆದ ಜಾಗಕ್ಕೇ
ಹೊಡೆಯುತ್ತವೆ..!!
***
ವಿಪರ್ಯಾಸ ನೋಡಿ
ಮನೆ ಕಟ್ಟಲು ಕಂಬ
ಎತ್ತರಕ್ಕೆ ಏರಿದಂತೆಲ್ಲ
ಬ್ಯಾಂಕಿನ ಲೋನೂ
ಏರುತ್ತ..ದೆ!!
***
ಫೇಸ್ಬುಕ್ ಮೆಸೇಜ್ 
ರಿಕ್ವೆಸ್ಟ್ ಸರಮಾಲೆಗಳನ್ನು 
ತಾಳಲಾರದ 
ಒಬ್ಬ ಹುಡುಗಿ 
ಸ್ಟೇಟಸ್ ಅಪ್ ಡೇಟ್ 
ಮಾಡಿದ್ದು ಹೀಗೆ : 
ನನಗೆ ಮದುವೆಯಾಗಿದೆ.. 

**

ಹಳೆಯ ಗಾದೆ
ಹುಡುಗನ ಸಂಬಳ
ಕೇಳಬಾರದು...
ಹುಡುಗಿಯ ವಯಸ್ಸು
ಕೇಳಬಾರದು..
ಕಾಲ ಬದಲಾಗಿದೆ..
ಜನ ಚೇಂಜ್ ಕೇಳ್ತಾರೆ ನೋಡಿ..
ಅದ್ಕೆ ಹೊಸ ಗಾದೆ
ಹವ್ಯಕ ಹುಡುಗರ ವಯಸ್ಸನ್ನೂ
ಕೇಳಬಾರದು..!! 

**

ಪ್ರಗತಿಯ 
ಹಿಂದೆ ನಡೆದುಕೊಂಡು 
ಹೋಗುವುದನ್ನು 
ಪ್ರಗತಿ ಫಥದಲ್ಲಿ ಅನ್ನಬಹುದೆ..?

(ಇವುಗಳನ್ನು ಬರೆದಿದ್ದು ಡಿ26/27-2013ರಂದು ಶಿರಸಿಯಲ್ಲಿ..)
(ಇವು ಖಂಡಿತವಾಗಿಯೂ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದವುಗಳು... 
ಹುಕಿ ಬಂದಾಗ ಹಾಗೇ ಬರೆಯುತ್ತ ಹೋದೆ.. ಒಂದರ ಹಿಂದೋಂದರಂತೆ ಹುಟ್ಟಿದವು... 
ಕೊನೆಗೆ ಎಲ್ಲವನ್ನೂ ಪೋಣಿಸಿ ಇಲ್ಲಿಟ್ಟಾಗ.. ಸತ್ಯವಾಯಿತು...)  

Tuesday, December 24, 2013

ಭಾವನೆಯ ಬೆನ್ನೇರಿ (ಪ್ರೇಮಪತ್ರ-9)

ಪ್ರೀತಿಯ ಗೆಳತಿ
ಪ್ರೀತಿ

ದಿನಾಲೂ ಪೋನಿನಲ್ಲಿ ತಲೆ ತಿಂತಿರ್ತೀಯಲ್ಲಾ.. ಪತ್ರ ಬರಿ ಪತ್ರ ಬರಿ.. ಬಹಳ ದಿನಗಳಾದವು ನಿನ್ನ ಬರಹಗಳನ್ನು ಓದದೆ ಅಂತ.. ಅದಕ್ಕೆ ಇವತ್ತು ಪುರಸೊತ್ತು ಮಾಡ್ಕೊಂಡು ಬರೀತಾ ಇದ್ದೇನೆ. ನಿಧಾನವಾಗಿ ಓದು. ನನ್ನಿಂದ ಏನನ್ನಾದರೂ ಬರೆಸಿಕೊಂಡೆ ಎಂಬ ನಿನ್ನ ಆಸೆ ಇದೀಗಲಾದರೂ ಈಡೇರಬಹುದು.
ನಾನು ಆಗಾಗ ಪತ್ರ ಬರೆಯಬೇಕೆನ್ನುವುದು ನಿನ್ನ ಬಯಕೆ. ನನಗೋ ಪತ್ರ ಬರೆಯಬೇಕೆಂಬ ಅದಮ್ಯ ತುಡಿತ. ಆದರೆ ಹಾಳಾದ ಬದುಕಿನ ಕ್ರಮಗಳು. ಪುರಸೊತ್ತು ಸಿಗಬೇಕಲ್ಲ.. ಸಿಕ್ಕಾಗಲೆಲ್ಲ ಹೀಗೆ ಬರೆಯುತ್ತೇನೆ. ಲೇಆಟದರೆ ಬೇಸರ ಪಡಬಾರದು ಅಷ್ಟೇ.. ಆಯ್ತಾ..
ನಿನಗೆ ಪತ್ರ ಬರೆಯುವ ಕುರಿತು ಅದಕ್ಕೊಂದು ವಿಷಯ ಬೇಕಲ್ಲ ಎಂದು ಹಲವು ಸಾರಿ ಚಿಂತಿಸಿದೆ. ಕಾಡು ಹರಟೇಯೇ ಪತ್ರವಾಗಬಾರದಲ್ಲ. ಅದಕ್ಕೆ ಏನಾದರೂ ಹೊಸತನ ಕೊಡಬೇಕಂತ ಚಿಂತಿಸುತ್ತಿದ್ದೇನೆ. ಮನಸ್ಸಂತೂ ಭಾವುಕತೆಯ ಕಡೆಗೆ ಭಾವನಾ ಲೋಕದೆಡೆಗೆ ತುಡಿಯುತ್ತಿದೆ. ಮೊನ್ನೆ ಏನಾಯ್ತು ಗೊತ್ತಾ.. ಯಾವುದೋ ಪೇಪರ್ ಕೆಲಸ ಮಾಡ್ತಾ ಇದ್ದೆ. ಆಗ ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರು ನಿಧನರಾದರು ಎನ್ನುವ ಸುದ್ಧಿ ತಿಳಿದು ಬಂದಿತು. ರಾಜಕುಮಾರ್ ಅವರ ಅಭಿನಯದ ಕಟ್ಟಾ ಅಭಿಮಾನಿಯಾದ ನನಗೆ ಒಮ್ಮೆಲೆ ದಿಗ್ಭ್ರಮೆ.
ಮನದಲ್ಲಿ ಏನೋ ಚಡಪಡಿಕೆ. ಏನು ಮಾಡಿದರೂ ಕೆಲಸದಲ್ಲಿ ಆಸಕ್ತಿಯೇ ಇಲ್ಲ. ಸರಿ.. ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಮನೆಗೆ ಬಂದೆ. ಮನೆಯಲ್ಲಿ ಆಗಲೋ ಎಲ್ಲರೂ ಟಿ.ವಿ.ಯ ಎದುರು ಆಸೀನರಾಗಿದ್ದರು. ನಾನು ಬರುವ ಸಮಯಕ್ಕೆ ವಿಪರ್ಯಾಸವೋ ಎಂಬಂತೆ ಟಿವಿಯಲ್ಲಿ
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದ
ಸೂತ್ರವ ಹರಿದ ಬೊಂಬೆಯ ಮುರಿದ
ಮಣ್ಣಾಗಿಸಿದ..
ಎಂಬ ಹಾಡು ತೆರೆಯ ಮೇಲೆ ಬರುತ್ತಿತ್ತು. ಎಂತಾ ಅದ್ಭುತ ಹಾಡಲ್ವಾ ಅದು? ಆ ಹಾಡಿಗೆ ರಾಜಕುಮಾರ್ ಅವರದ್ದೂ ಅಷ್ಟೇ ಅದ್ಭುತ ಅಭಿನಯ. ನೋಡ್ತಾ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಒಮ್ಮೆಲೆ ಅದೇನನ್ನೋ ಕಳೆದುಕೊಂಡಂತೆ ಆಯಿತು. ರಾಜಣ್ಣನ ಅಭಿನಯದ ಝಲಕಿನ ಪರಿಯಾ ಇದು? ಅಥವಾ ಹಾಡಿನ ಸೆಳಕಾ ಏನೊಂದೂ ಅರ್ಥವಾಗಲಿಲ್ಲ. ಅವರು ಸತ್ತಾಗ ಆ ಹಾಡನ್ನು ಹಾಕಿದ್ರು ಅದಕ್ಕಾಗಿ ಮನಸ್ಸಿನಲ್ಲಿ ಒಂದು ಥರಹ ಅಂದ್ಕೊಂಡೆ. ಇದು ಭಾವನೆಗಳ ಮೇಲಿನ ಪರಿಣಾಮವಾಗಿತ್ತು. ಜೊತೆಗೆ ಭಾವುಕತೆಯಾಗಿತ್ತು. ಇದನ್ನು ನಾನು ಆಗ ಅರಿತಿರಲಿಲ್ಲವಷ್ಟೆ.
ನಂತರ ಅದೇ ಬೇಜಾರು ಕಳಿಯೋಣವೆಂದುಕೊಂಡು ಮನೆಯಲ್ಲಿದ್ದ ಟೇಪ್ ರೆಕಾರ್ಡರ್ ನಲ್ಲಿ ಹಾಡು ಕೇಳಲೋಸುಗ ಸಿಕ್ಕಿದ ಕ್ಯಾಸೆಟ್ ಒಂದನ್ನು ಹಾಕಿದೆ. ಅದೋ ನಿಸಾರರ ಭಾವಗೀತೆಗಳು. ಹಚ್ಚಿದೊಡನೆಯೇ ಕೇಳಿದ್ದು..,
ಮತ್ತದೇ ಬೇಸರ, ಅದೆ ಸಂಜೆ
ಅದೆ ಏಕಾಂತ..
ನಿನ್ನ ಜೊತೆಯಿಲ್ಲದೇ, ಮಾತಿಲ್ಲದೇ
ಮನ ವಿಭ್ರಾಂತ...
ಎಂಬ ಹಾಡು. ಈ ಹಾಡಂತೂ ಮನಸ್ಸನ್ನು ಅದ್ಯಾವ ಪರಿ ಆಕ್ರಮಿಸಿಕೊಂಡುಬಿಟ್ಟಿತೆಂದರೆ ಬಹುಶಃ ನಂತರ ಇಡೀ ದಿನ ನನ್ನ ಮನಸ್ಸು ಯಾವುದೋ ರೀತಿಯಲ್ಲಿ ಇದ್ದುಬಿಟ್ಟಿತು. ಆಗ, ಕವಿ ಎಂತಹ ಭಾವನಾತ್ಮಕ ಸಾಲುಗಳನ್ನು ರಚಿಸುತ್ತಾನಲ್ಲ.. ಅನ್ನಿಸಿತು. ಅಂತಹ ಕವಿಹೃದಯ ಗ್ರೇಟ್ ಅನ್ನಿಸಿತು. ಅದಕ್ಕೂ ಮಿಗಿಲಾಗಿ ಕವಿಯ ಸಾಲಿನ ಭಾವನೆಗಳ ತೀವ್ರತೆಯನ್ನು ಗುರುತಿಸಿ ಅದರಲ್ಲಿ ಜೀವವನ್ನು ತುಂಬಿ ಅದನ್ನೊಂದು ಕರ್ಣಾಮೃತ ರಸಧಾರೆಯನ್ನಾಗಿ ಮಾಡ್ತಾನಲ್ಲಾ ಅಂತಹ ಗಾಯಕ/ಕಿ ಗ್ರೇಟ್ ಅನ್ನಿಸ್ತು.
ಬಹುಶಃ ಆ ನಂತರವೇ ನಾನು ಭಾವನೆಗಳ, ಭಾವುಕತೆಯ ಬಗ್ಗೆ ಹೆಚ್ಹೆಚ್ಚ್ಉ ಯೋಚಿಸಲು ಪ್ರಾರಂಭಿಸಿದೆನೋ ಅನ್ನಿಸುತ್ತೆ. ಮೊದ ಮೊದಲು ನಂಗೊಬ್ನಿಗೆ ಹಿಂಗಾಯ್ತಾ ಅಂತ ಯೋಚಿಸಿದೆ. ಕೊನೆಗೆ ಯಾವುದೇ ಕವಿ, ಒಳ್ಳೆಯ ಸಹೃದಯಿ, ಒಳ್ಳೆಯ ಓದುಗನಿಗೂ ಹೀಗೆಯೇ ಆಗಿರಲಿಕ್ಕೆ ಸಾಕು ಅನ್ನಿಸಿತು.
ನಂತರ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದ ನಂತರ ಭಾವುಕತೆಯ ಬಗ್ಗೆ ಗೊತ್ತಾಯಿತು. ಮೊದಲೊಂದ್ಸಲ ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕ ಓದಿದ್ದೆ. ಅದರಲ್ಲಿ ಭಾವುಕತೆ, ಭಾವಸಮಾಧಿಯೆಡೆಗೆ ವಿವರಣೆ ಬಂದಿತ್ತು. ಆಗ ಅದು ಸರಿಯಾಗಿ ಅರ್ಥವಾಗಿರಲಿಲ್ಲ. ಈಗ ಸಂಪೂರ್ಣ ಅರ್ಥವಾಗಿದೆ. ನನಗರಿವಿಲ್ಲದೇ ಬೆಳೆದಿರುವ ಭಾವುಕತನದಿಂದ ನನಗೆ ಖುಷಿಯೂ ಆಯಿತು.
ಇಂತಹ ಖುಷಿಯಲ್ಲಿಯೇ ಭಾವಗೀತೆ ಎಂಬ ಕವನವನ್ನೂ ರಚಿಸಿದೆ. ಅದಕ್ಕೆ ಭಾವನೆಗಳ ಹರಿವು-ತಿಳಿವುಗಳನ್ನು ಜೊತೆಗೆ ಸೇರಿಸಿದೆ. ನಿನಗೆ ಕುತೂಹಲ ಇರಬಹುದು. ತಾಳು ನಿನಗಾಗಿ ಅದನ್ನೂ ಬರೆದು ಕಳಿಸುತ್ತಿದ್ದೇನಮೆ. ಓದು,
ಭಾವಗೀತೆ ನಾನು ಬರೆದೆ
ಭಾವ ಜೀವಿಯಾಗಿ
ಹೃದಯ ಹೃದಯಗಳ ಜೊತೆಗೆ ಬೆರೆತೆ
ಭಾವ ಭಾಷಿಯಾಗಿ
ಎಂಬುದು. ಈಗ ನಿನಗೆ ಈ ನಾಲ್ಕೇ ಸಾಲುಗಳನ್ನು ಬರೆದು ಕಳಿಸುತ್ತೇನೆ. ಯಾಕಂದ್ರೆ ಬೇಸರ ಬರಬಾರದಲ್ಲ. ಇನ್ನೊಮ್ಮೆ ಯಾವತ್ತಾದ್ರೂ ಈ ಕವನವನ್ನು ಪೂರ್ತಿಯಾಗಿ ನಿನ್ನ ಬಳಿ ಪಿಸುಗುಟ್ಟುತ್ತೇನೆ. ಆಗಬಹುದಲ್ಲ.
ಇನ್ನೊಂದೇನು ಗೊತ್ತಾ, ಕವಿಗಳೆಲ್ಲ ಇಂತಹ ಭಾವುಕತೆಯ ಸನ್ನಿವೇಶದಲ್ಲೇ ಕವಿತೆಗಳನ್ನು, ಭಾವಗೀತೆಗಳನ್ನು ರಚಿಸುತ್ತಾರೆ. ಆದರೆ ಭಾವುಕತೆಯ ಬಗ್ಗೆ ಏನೇನೂ ಅರಿಯದಿರೋ ವ್ಯಕ್ತಿಗಳು ಭಾವುಕ ವ್ಯಕ್ತಿಗಳನ್ನು ಕಂಡರೆ ಆತ ಭೋಳೆ ವ್ಯಕ್ತಿ, ಆತನಿಗೆ ಮಂಕು ಹಿಡಿದೆ ಎನ್ನುತ್ತಾರೆ. ವಿಪರ್ಯಾಸ ನೋಡು `ಹುಚ್ಚು' ಎಂಬುದು ಇಂತಹ ಭಾವುಕತೆಯ ಅತ್ಯಂತ ಕಡೆಯ ಹಂತ  ಎಂಬುದನ್ನು ನಾನೆಲ್ಲೋ ಓದಿದ್ದೇನೆ. ಆದರೆ ಈಗಿನ, ನಾನು ಹೇಳುತ್ತಿರುವ ಭಾವುಕತೆಯಿಂದ -ಹುಚ್ಚಿನೆಡೆಗೆ ಬಹಳ ಬದಲಾವಣೆಗಳು ಆಘಬೇಕು. ಸಾಮಾನ್ಯರು ಇವೆರಡನ್ನೂ ಒಂದೇ ಎಂದು ತಿಳಿದಿದ್ದಾರೆ. ಆದರೆ ಅದು ನೋಡುಗರ ಕಣ್ಣಿಗೆ ಈ ಪೂರಕವಾಗಿಯೇ ಕಾಣುತ್ತದೆ.
ಬಹುಶಃ ಭಾವುಕತೆಯ ಬಗ್ಗೆ ನಿನಗೆ ಬಹುತೇಕ ಏನೇನೂ ತಿಳಿದಿರಲಿಕ್ಕಿಲ್ಲ. ಸಾಧ್ಯವಾದರೊಮ್ಮೆ ನೀನು ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಓದು. ಇಲ್ಲಾವದರೆ ನಿಸಾರರದ್ದೋ, ದೊಡ್ಡರಂಗೇಗೌಡರದ್ದೋ, ಲಕ್ಷ್ಮೀನಾರಾಯಣ ಭಟ್ಟರದ್ದೋ, ಶಿವರುದ್ರಪ್ಪಅವರದ್ದೋ, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಅವರ ಭಾವಗೀತೆಗಳ ಕ್ಯಾಸೆಟ್ ಕೇಳು. ಸಿ. ಅಶ್ವಥ್ ಅವರ ಭಾವಗೀತೆಗಳ ಹಾಡುಗಳನ್ನು ಕೇಳು. ಒಬ್ಬನೇ ಇದ್ದಾಗ ಆ ಬಗ್ಗೆ think ಮಾಡು. ಆಗ ನಿನಗೆ ಭಾವುಕತೆ, ಭಾವಾವೇಶ ಎಂದರೇಣು ಎಂಬುದು ತಂತಾನೆ ಅರಿವಾಗಬಹುದು. ಈಗ ಬರೀತಾ ಇದ್ದಾಗ ನನ್ನ ಮನಸ್ಸೇನೋ ಭಾವುಕತೆಗೆ ಒಳಗಾಗಿದೆ. ಆದರೆ ಭಾವುಕತೆಗೆ ಒಳಗಾದಷ್ಟು ಸಲೀಸಾಗಿ ಅದರ ಬಗ್ಗೆ ಬರೆಯುವುದು ಕಷ್ಟ. ಇದು ನೆನಪಿರ್ಲಿ.
ಏನೇ ಇರಲಿ, ನಿನ್ನ ಪತ್ರ ಬರೆಯುವ ಸಂಸ್ಕೃತಿಗೆ ನನ್ನ ಪ್ರಶಂಸೆ ಇದೆ. ಇಂದಿನ ಮೊಬೈಲ್ ಪೋನ್ ಯುಗದಲ್ಲಿ, ಅವುಗಳ ಹಾವಳಿಯ ನಡುವೆಯೂ ಪತ್ರ ಸಂಸ್ಕ್ಋತಿ ಮರೆಯದೇ ನೆನಪಿನಲ್ಲಿಟ್ಟು ಪತ್ರ ಬರೆಯಲು ಪ್ರೇರೇಪಿಸಿದ್ದಕ್ಕೆ ಧನ್ಯವಾದ. ಬಹುಶಃ ಇವತ್ತಿಗಿಷ್ಟು ಸಾಕು ಅನ್ನಿಸುತ್ತಿದೆ. ಹೆಚ್ಚು ಬರೆದು ಅಜೀರ್ಣವಾಗಬಾರದಲ್ಲ. ಮುಂದೆ ಮತ್ತೆ ಬರೆಯುತ್ತೇನೆ.

ಇಂತಿ ನಿನ್ನೊಲವಿನ
ಜೀವನ್

(ಇದನ್ನು ಬರೆದಿದ್ದು ಮೇ 2006ರಲ್ಲಿ, ಶಿರಸಿಯ ಕದಂಬ ವಾಣಿಯಲ್ಲಿ ಇದು ಪ್ರಕಟಗೊಂಡಿದೆ.)

Monday, December 23, 2013

ನಿನ್ನ ನೆನಪು


ಗೆಳತಿ, ನಿನ್ನ ಬಿಂಬ ನನ್ನ
ಮನಸಿನಲ್ಲಿ ಮೂಡಿದೆ
ನಿನ್ನ ನೆನಪು ಬಳುಕು ಒನಪು
ನನ್ನ ಮನದಿ ಮೆರೆದಿದೆ ||

ನಿನ್ನ ನೆನಪು ನನ್ನ ಮನವ
ಎಳೆದು ಸೆಳೆದು ನಿಲಿಸಿದೆ,
ಮನವು ನಿನ್ನ ಪ್ರೀತಿಯೊಂದು
ಸ್ಪರ್ಷವನ್ನು ಬಯಸಿದೆ ||

ನಿನ್ನ ನೆನಪು ನನಗೆ ಹರುಷ
ಮುಗ್ಧ ಮನ ನಲಿದಿದೆ
ಕನಸಿನಲ್ಲಿ ನಿನ್ನ ನೆನೆದು
ಮನದಿ ಹರುಷ ಪಟ್ಟಿದೆ ||

ಗೆಳತಿ, ನಿನ್ನ ನೆನಪಿನಲ್ಲಿ
ನನ್ನೇ ನಾನು ಮರೆತಿಹೆ
ಜೀವ ನೀನು, ಪ್ರೀತಿ ನೀನು
ಎಂದು ನಾನು ತಿಳಿದಿಹೆ ||

ನಿನ್ನ ನೆನಪೇ ನನ್ನ ಜೀವ
ನೀನೆ ಬದುಕು ಆಗಿಹೆ
ನಿನ್ನ ನೆನಪೆ ನನ್ನ ಕವನ
ಅದುವೆ ಸ್ಪೂರ್ತಿಯಾಗಿದೆ ||

(ಈ ಕವಿತೆಯನ್ನು ಬರೆದಿದ್ದು 04-10-2006ರಂದು, ದಂಟಕಲ್ಲಿನಲ್ಲಿ)