Monday, November 25, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 6

ಬಸವೇಶ್ವರ ಕಾಲೇಜು ಬಾಗೇವಾಡಿ
ನಮ್ಮ ಪಂದ್ಯಗಳು ಹೀಗೆ ಸಾಗಿದ್ದಾಗ ಪಾವಸ್ಕರ ದೊಡ್ಡ ಹೊಟ್ಟೆ ಕುಣಿಸುತ್ತಾ ಎದ್ದು ಓಡೋಡಿ ಬಂದ. ಬಂದವನೇ `ವಿನೂ...ಕಿಟ್ಟು ಗೆದ್ದ..' ಎಂದ..
ನಂಗೆ ಸಖತ್ ಖುಷಿಯಾಯಿತು. ನನ್ನ ಮ್ಯಾಚನ್ನು ಮಧ್ಯದಲ್ಲಿಯೇ ಬಿಟ್ಟು ಖುಷಿಯಿಂದ ಎದ್ದೋಡಿ ಕಿಟ್ಟುವನ್ನು ತಬ್ಬಿ ಹಾರೈಸಿ ಬಂದೆ. ಕಿಟ್ಟು ಗೋಗಟೆಯ 4th board ಆಟಗಾರ ಸಚಿನ್ ಸುಲ್ತಾನ್ ಪುರೆಯನ್ನು ಹೀನಾಯವಾಗಿ ಸೋಲಿಸಿ ಗೆದ್ದಿದ್ದ. ಮ್ಯಾಚ್  ಬಹಳ ಟಫ್ ಇತ್ತೆಂದೂ ಕೊನೆಯ ಕ್ಷಣದಲ್ಲಿ ಒಳ್ಳೆಯ ಟರ್ನಿಂಗ್ ಪಾಯಿಂಟ್ ನೀಡಿ ಗೆದ್ದ ಬಗೆಯನ್ನು ಕಿಟ್ಟು ಆ ದಿನ ಸಂಜೆ ತಿಳಿಸಿದ. ಇಲ್ಲಿಗೆ ನಮ್ಮ ಟೀಂ ಪಾಯಿಂಟ್ 7+1=8 ಆಯಿತು. ಆದರೂ ಗೋಗಟೆ ಕಾಲೇಜಿನ ವಿರುದ್ಧ 2-1ರಿಂದ ಹಿಂದಿತ್ತು. ಎಲ್ಲವೂ ನನ್ನ ಮೇಲೆಯೇ ನಿರ್ಧಾರವಾಗಿತ್ತು. ಕಿಟ್ಟುವಿನ ಮ್ಯಾಚ್ ಮುಗಿದಿದ್ದರಿಂದ ಎಲ್ಲರೂ ನನ್ನ ಪಂದ್ಯದ ಸುತ್ತ ನೆರೆಯಲಾರಂಭಿಸಿದ್ದರು.
ಮ್ಯಾಚ್ ಮತ್ತಷ್ಟು ಮುಂದುವರಿಯಿತು. ಆಟ ಹಾಗೆಯೇ ಸಾಗುತ್ತಿತ್ತು. ನನಗೆ ಸೆಕೆಯ ಜೊತೆಗೆ ಟೆನ್ಶನ್ ನಿಂದ ಬೆವರು ಕಿತ್ತುಕೊಂಡು ಬರುತ್ತಿತ್ತು. ಮ್ಯಾಚ್ ಗೆದ್ದು ರಿಲ್ಯಾಕ್ಸ್ ಆಗಿದ್ದ ಕಿಟ್ಟು ಈಗ ಫ್ರೀಯಾಗಿದ್ದ. ಆತನಂತೂ ಆಗಾಗ ನನ್ನ ಬೆನ್ನು ತಟ್ಟಿ `ಟೆನ್ಶನ್' ಮಾಡ್ಕೋಬೇಡ ಎನ್ನುತ್ತಿದ್ದ. ನನ್ನ ಎದುರಾಳಿ ಆಟಗಾರ ಚಿಂಚೋಳಿಮಠ cool ಆಗಿ ಆಡಿದಂತೆ ಕಾಣುತ್ತಿತ್ತು. ನನ್ನಂ ತಹಾಟಗಾರನನ್ನು ಅದೆಷ್ಟು ಜನರನ್ನು ನೋಡಿದ್ದನೋ.. ಬಿಡಿ.. ಆದರೆ ನನಗೆ ಬಹಳ ಟೆನ್ಶನ್ ಆಗುತ್ತಿತ್ತು. ಹೀಗೆಯೇ ಸುಮಾರು ಹೊತ್ತು ಕುಳಿತೆವು. ನಾನು ಬಹು ಬೇಗನೆ move ನಡೆಸುತ್ತಿದ್ದರೂ ಸಾಗರ್ ಚಿಂಚೋಳಿಮಠ ಒಂದು move ಮಾಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಲೇಡೀಸ್ ಟೀಂ ತಮ್ಮ ಎದುರಾಳಿ ಟೀಮುಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಗಳಿಸಿಯಾಗಿತ್ತು. ಅವರೂ ಬಂದು ನನ್ನ ಆಟ ನೋಡಲಾರಂಭಿಸಿದ್ದರು.
ಕೊನೆಗೆ ಗಂಟೆ 12ನ್ನು ದಾಟಿತು. 8 ಗಂಟೆಗೆ ಆರಂಭವಾದ ಆಟ 12 ಗಂಟೆಯನ್ನು ಕಳೆದರೂ ಮುಗಿಯುವ ಲಕ್ಷಣ ತೋರಲಿಲ್ಲ. ಕೊನೆಗೊಮ್ಮೆ ಆಟ ಮುಕ್ತಾಯದ ಹಂತ ಕಾಣದೇ ಇರುವಾಗ ಕ್ಲಾಕ್ ಇಡುವ ತೀರ್ಮಾನಕ್ಕೆ ಅಂಪಾಯರ್ರುಗಳು ಬಂದರು. ಮೊದಲೊಂದು ಸಾರಿ ಟೆನ್ಶನ್ ಜೊತೆಗೆ ಭಯವಾದರೂ ನಾವು ಬಾಗೇವಾಡಿಗೆ ಹೊರಡುವ 4 ದಿನಗಳ ಮೊದಲು ನಮ್ಮ ಕಾಲೇಜಿನ ಚೆಸ್ ಕೋಚ್ ಎಂ. ಕೆ. ಹೆಗಡೆಯವರ ಜೊತೆಗೆ ಕ್ಲಾಕ್ ಇಟ್ಟು ಚೆಸ್ ಆಡಿದ್ದು ಸಹಾಯಕ್ಕೆ ಬಂದಿತು. ಥ್ಯಾಂಕ್ ಗಾಡ್ ಅಂದುಕೊಂಡೆ. ಕೊನೆಗೊಮ್ಮೆ ಗೋಗಟೆ ಕಾಲೇಜಿನದ್ದೇ ಆದ ಹಳೆಯ ಕ್ಲಾಕನ್ನು ಮ್ಯಾಚ್ ನಿರ್ಧಾರಕ್ಕೆ ಇಟ್ಟರು. ಇಬ್ಬರಿಗೂ ತಲಾ 10 ನಿಮಿಷಗಳನ್ನು ನಿಗದಿಪಡಿಸಲಾಯಿತು.
ಆಟ ಈಗ ಚಕ ಚಕನೆ ಸಾಗಿತು. ವಿಚಿತ್ರವೆಂದರೆ ನಾನು ಚಿಂಚೋಳಿಮಠನಿಗಿಂತ ಸಾಕಷ್ಟು ವೇಗವಾಗಿ ಚಸ್ ಆಡಿದೆ. ಏಕೆಂದರೆ ರಾಪಿಡ್ ಚಸ್ ನನ್ನ ಅತ್ಯಂತ ಪ್ರೀತಿಯ ಆಟವಾಗಿತ್ತು. ನವೀನ್ ಪಾವಸ್ಕರನ ಜೊತೆಗೆ ಚಾಲೆಂಜ್ ರೂಪದಲ್ಲಿ ಆಡುತ್ತಿದ್ದ ನಾನು ಎಡಗಣ್ಣಿನಲ್ಲಿ ಪಾವಸ್ಕರನನ್ನು ನೋಡಿ ನಕ್ಕೆ.. ಆತ ಕೈಸನ್ನೆಯ ಮೂಲಕ ಕೂಲ್ ಎನ್ನುತ್ತಿದ್ದ.. ನನ್ನ ವೇಗದ move ಬಹುಶಃ ಸಾಗರ್ ಚಿಂಚೋಳಿಮಠನನ್ನು ದಂಗುಪಡಿಸಿರಬೇಕು. ನನ್ನ ರಾಪಿಡ್ ಚೆಸ್ ಪರಿಣಾಮ ನನ್ನ ಬಳಿ 8 ನಿಮಿಷ ಬಾಕಿ ಉಳಿಯಿತು. ಚಿಂಚೋಳಿ ಮಠನದ್ದು 7 ನಿಮಿಷ ಕಳೆದು 3 ನಿಮಿಷ ಮಾತ್ರ ಉಳಿಯಿತು. ಅಂದರೆ ಸಾಗರ್ ಚಿಂಚೋಳಿಮಠನಿಗಿಂತ 5 ನಿಮಿಷ ನನಗೆ ಬೋನಸ್ ಸಿಕ್ಕಿತ್ತು. ಅಷ್ಟು ವೇಗವಾಗಿ ಆಟವನ್ನಾಡಿದ್ದೆ. ಇಷ್ಟಾಗಿದ್ದರೂ ಆಟದಲ್ಲಿ ಯಾರಿಗೂ ನಿಶ್ಚಿತ ಗೆಲುವಿನ ಅವಕಾಶವೇ ಇರಲಿಲ್ಲ. ಹೀಗಿದ್ದಾಗ ಯಾರ ಸಮಯ ಬೇಗನೆ ಮುಗಿಯುತ್ತದೆಯೋ ಅವರು ಆಟದಲ್ಲಿ ಸೋತಂತೆ ಎಂದು ನಿರ್ಣಯ ಮಾಡಲಾಗುತ್ತದೆ. ನಾನಂತೂ ಬೆಕ್ಕಿನ ಆಟವನ್ನು ಆರಂಭ ಮಾಡಿದ್ದೆ. ಸಾಗರ್ ಚಿಂಚೋಳಿ ಮಠನ ಬಳಿ ಗುದ್ಯಾಡಿ ಗೆಲ್ಲುವುದು ಸುಲಭವೇ ಆಗಿರದ ಕಾರಣ ನಾನು ಬೆಕ್ಕಿನಂತೆ ಚಲ್ಲಾಟವಾಡಿ ಸಮಯ ತಿಂದು ಆ ಮೂಲಕವಾದರೂ ಆತನನ್ನು ಸೋಲಿಸಬಹುದೆಂಬ ಐಡಿಯಾ ಹಾಕಿ ಆಡುತ್ತಿದ್ದೆ. ಮತ್ತೊಂದು ನಿಮಿಷ ಕಳೆಯಿತು. ಈಗ ಮೊದಲ ಬಾರಿಗೆ ಚಿಂಚೋಳಿಮಠನ ಮುಖದಲ್ಲಿ ಗಾಬರಿಯನ್ನು ಕಂಡಿದ್ದೆ. ಅಷ್ಟಲ್ಲದೇ ಅವನ ತಂಡದ ಅನಿಕೇತನ್ ಪಾವಸೆ ಹಾಗೂ ಸಮೀರ್ ಘೋಟ್ನೆ ಜೊತೆಗೆ ಅವರ ಕೋಚ್ ಕೂಡ ಕಂಗಾಲಾಗುವ ಹಂತ ಬಂದಿದ್ದರು. ನಾನೇ ಗೆದ್ದೇನೇನೋ ಎನ್ನುವ ಹಂತದಲ್ಲಿ ಖುರ್ಚಿಯ ತುದಿಗೆ ಕುಳಿತು ಆಡತೊಡಗಿದ್ದೆ. ಹೀಗಿರುವಾಗ ಆತನಿಗೆ ಏನನ್ನಿಸಿತೋ ಏನೋ ಕ್ಲಾಕ್ ಗೆ ನಿಧಾನವಾಗಿ ಮೊಡಕುವ ಬದಲು ಜೋರಾಗಿ ಗುದ್ದಿದ. ಹಳೆಯ ಕ್ಲಾಕು ಇದ್ದಕ್ಕಿದ್ದಂತೆ ತಟಸ್ಥವಾಯಿತು. ಮುಂದೆ ಏನು ಮಾಡಿದರೂ ಅದು ಸರಿಯಾಗಲೇ ಇಲ್ಲ.
ಇದನ್ನು ನೋಡಿದ ಪಾವಸ್ಕರ ಭರ್ಜರಿ ಸಿಟ್ಟಾದ. ಗಲಾಟೆಗೆ ಇಳಿದುಬಿಟ್ಟ. ಗೋಗಟೆ ಟೀಮಿನ ಮ್ಯಾನೇಜರ್ರಾಗಿದ್ದವರೇ ಅಂಪಾಯರ್ರಾಗಿದ್ದರು. ಅವರು ತಮ್ಮ ಟೀಮಿನ ಬೆಂಬಲಕ್ಕೆ ನಿಂತುಬಿಟ್ಟಿದ್ದರು. ಜೊತೆಗೆ ಆ ಟೀಮಿತ ಹುಡುಗರೂ ಜೋರಾದರು. ಒಂದು ಹಂತದಲ್ಲಿ ಕೈ ಮಿಲಾಯಿಸುತ್ತದೆಯೇನೋ ಎನ್ನುವ ಹಂತಕ್ಕೆ ತಲುಪಿತು. ನವೀನ ಪಾವಸ್ಕರ ಅಷ್ಟು ಸಿಟ್ಟಾಗಿದ್ದ. ನಾನು ಸುಮ್ಮನೆ ನೋಡುತ್ತಿದ್ದೆ. ಕಿಟ್ಟು, ಆನಂದರು ನವೀನನನ್ನು ಸಮಾಧಾನ ಮಾಡುವ ಯತ್ನ ಮಾಡುತ್ತಿದ್ದರು. ನಮ್ಮ ಟೀಮಿನ ಮ್ಯಾನೇಜರ್ ಆಗಿದ್ದ ಎನ್. ಎಚ್. ಗೌಡರು ಅಂಪಾಯರ್ರಾಗಿದ್ದರು. ಆದರೆ ಅವರು ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅವರು ತಂಡು ಕುಳಿತುಬಿಟ್ಟರು. ಪಾವಸ್ಕರ ಇದರಿಂದಾಗಿ ಇನ್ನಷ್ಟು ಸಿಟ್ಟಾದ. ಗೋಗಟೆ ಕಾಲೇಜಿನ ವಿರುದ್ಧ ಏರಿ ಹೋದ. ಇದೇ ಸಮಯದಲ್ಲಿ ನಾನು ಎರಡು ತಪ್ಪು ಮಾಡಿಬಿಟ್ಟೆ. ಅದರಿಂದ ನಮಗೆ ಸಾಕಷ್ಟು ನಷ್ಟವೇ ಆಯಿತು. ಮೊದಲನೇದಾಗಿ ನಾನು ಪಾವಸ್ಕರನನ್ನು ಸುಮ್ಮನಿರಿಸಿ ತಪ್ಪು ಮಾಡಿದೆ. ಎರಡನೇದಾಗಿ ಕ್ಲಾಕು ಹಾಳಾದ ನಂತರವೂ ಮತ್ತೆ ಚೆಸ್ ಆಡಲು ಕುಳಿತುಬಿಟ್ಟೆ. ನಾಗಭೂಷಣ ಗೌಡರು ಹೀಗೆ ಮಾಡಲು ಹೇಳಿದ್ದರು. ನವೀನ ಪಾವಸ್ಕರ ನನ್ನ ಮಾತನ್ನು ಮಾತ್ರ ಕೇಳುತ್ತಾನೆ ಎಂಬುದು ಅವರಿಗೆ ಗೊತ್ತಿತ್ತು.. ನಾನು ಆತನನ್ನು ಸುಮ್ಮನಿರಿಸುವ ಜೊತೆಗೆ ಆಟಕ್ಕೂ ಕುಳಿತುಬಿಟ್ಟೆ. ನಾನು ಈ ತಪ್ಪುಗಳನ್ನು ಮಾಡಲೇಬಾರದಿತ್ತು. ಇದರ ಪರಿಣಾಮ ನಾನು ಪಂದ್ಯದಲ್ಲಿ ಹೀನಾಯವಾಗಿ ಸೋತೆ. ಸಾಕಷ್ಟು ಸಮಯ ಸಿಕ್ಕ ಚಿಂಚೋಳಿಮಠ ನನ್ನನ್ನು ಸೋಲಿಸಿದ. ತಂಡದ ಸ್ಕೋರು 3-1 ಆಯಿತು. ಇದುವರೆಗಿನ ಒಟ್ಟೂ ಪಾಯಿಂಟು 8 ಆಯಿತು. ಕೊನೆಗೆ ನಾನು ಅಲ್ಲಿ ಆಡಲೇಬಾರದಿತ್ತು ಅಂಬುದರ ಅರಿವಾಯಿತು.
ನಾನು ಸೋತರೂ ಅದು ಸೋಲಲ್ಲ ಎಂದುಕೊಂಡೆ. ಒಬ್ಬ ನ್ಯಾಶನಲ್ ಪ್ಲೇಯರ್ ಹೀಗೆ ಆಡಿ ಗೆದ್ದನಲ್ಲಾ ಛೀ.. ಅಂದುಕೊಂಡೆ.. ಮೋಸ ಮಾಡದಿದ್ದರೆ ಕ್ಲಾಕ್ ನಿಯಮದಂತೆ ಗೆಲ್ಲಬಲ್ಲೆ ಎನ್ನುವ ಸಮಾಧಾನವಿತ್ತು. ಆದರೂ ಆತನ ಮಟ್ಟಕ್ಕೆ ಹೋರಾಡಿದ ಖುಷಿಯಿತ್ತು. ಒಂದು ಹಂತದಲ್ಲಿ ಆತನಿಗೂ ಬೆವರಿಳಿಸಿದ ಸಾರ್ಥಕತೆಯಿತ್ತು. ಇಷ್ಟು ಸಾಕೆಂದುಕೊಂಡೆ.. ಆದರೂ ಮನಸ್ಸು ತಲ್ಲಣಗೊಂಡಿತ್ತು.

ದುರ್ಗಾ ಹೋಟೆಲ್ ಇರುವ ಕಾಂಪ್ಲೆಕ್ಸ್..
ಅದೇ ದಿನ ಮದ್ಯಾಹ್ನ ನಮ್ಮ ಮುಂದಿನ ಪಂದ್ಯ ನಡೆಯಿತು. ಬೆಳಗಾವಿಯದ್ದೇ ಇನ್ನೊಂದು ಕಾಲೇಜು ಆರ್. ಪಿ.ಡಿ. ಅದರ ಜೊತೆಗೆ ನಮ್ಮ ಪಂದ್ಯ. ಅಲ್ಲಿನ ಕ್ಯಾಪ್ಟನ್ ನಮ್ಮ ಮಿತ್ರ ಗಣೇಶ. ಮ್ಯಾಚಿಗೂ ಮುನ್ನ ಬಂದು ಕಾಂಪ್ರೋಮೈಸ್ ಮಾಡಿಕೊಳ್ಳೋಣ 2 ನಮಗೆ 2 ನಿಮಗೆ ಎಂದ. ಟೀಂ ಕರೆದು ಕೇಳಿದೆ. ಅವರೂ ಸರಿಯಾದ ನಿರ್ಧಾರಕ್ಕೆ ಬರಲಿಲ್ಲ. ಏನು ಮಾಡಬೇಕೋ ತಿಳಿಯಲಿಲ್ಲ. ಕೊನೆಗೆ ಸೀದಾ ನಮ್ಮ ಎಂ. ಕೆ. ಹೆಗಡೆಯವರಿಗೆ ಪೋನಾಯಿಸಿದೆ.
ಅವರು `ಕಾಂಪ್ರೋಮೈಸ್ ಬೇಡ.. ಸರಿಯಾಗಿ ಆಡಿ.. ಎಷ್ಟು ಪಾಯಿಂಡ್ ಬರ್ತದೋ ಬರಲಿ..' ಎಂದರು.
ಸರಿಯೆಂದು ಆಡಲು ಕುಳಿತೆವು. ಮ್ಯಾಚಿನಲ್ಲಿ ಆನಂದ ಹಾಗೂ ಕಿಟ್ಟು ಬಹುಬೇಗನೆ ಗೆದ್ದು ನಮ್ಮ ಪಾಯಿಂಟನ್ನು 10ಕ್ಕೇರಿಸಿದರು. ಟೀಮಿಗೆ ಜೋಶ್ ಬಂದಿತ್ತು.
ಹಿಂದಿನ ಮ್ಯಾಚನ್ನು ಆ ರೀತಿ ಆಘಾತಕರವಾಗಿ ಸೋತ ಡಿಪ್ರೆಶನ್ ನಲ್ಲಿದ್ದ ನಾನು ಅನ್ಯಮನಸ್ಕತೆಯಿಂದಲೇ ಮ್ಯಾಚ್ ಆಡುತ್ತಿದ್ದೆ. ಪರಿಣಾಮವಾಗಿ ಅಷ್ಟೇನೂ ಒಳ್ಳೆಯ ಆಟಗಾರನಲ್ಲದ ನನ್ನ ಎದುರಾಳಿಯ ವಿರುದ್ಧ ನಾನು ಸೋತುಬಿಟ್ಟೆ.  ನಮ್ಮ ಟೀಮಿನಲ್ಲಿ ಕೋಲಾಹಲ. ಟೀಮಿನ ಕ್ಯಾಪ್ಟನ್ ಸತತ ಎರಡು ಸೋಲನ್ನು ತಿಂದಿದ್ದೆ. ಕಿಟ್ಟು ಹಾಗೂ ಆನಂದ ಚಿಂತಾಕ್ರಾಂತರಾಗಿದ್ದರು. ನಾನು ಸೋತಿದ್ದು ನವೀನನಿಗೂ ಗೊತ್ತಾಗಿ ಕಣ್ಣು ಸನ್ನೆಯಲ್ಲೇ ಕಿಡಿಕಾರತೊಡಗಿದ್ದ. ನಾನು ಆತನ ಕಣ್ಣು ತಪ್ಪಿಸತೊಡಗಿದ್ದೆ. ಇಲ್ಲಿ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ನಿರ್ಣಾಯಕನಾಗಿದ್ದ. ಆತನ ಆಟ ಸಾಗಿತ್ತು. ಆತನ ಎದುರಾಳಿ ಗಣೇಶ. ಸರಿಯಾಗಿ ಆಡುತ್ತಿದ್ದ ನವೀನ ಪಾವಸ್ಕರನಿಗೆ ಇದ್ದಕ್ಕಿದ್ದಂತೆ ಅದ್ಯಾವ ದೆವ್ವ ಮೆಟ್ಟಿಕೊಂಡಿತೋ, ತನ್ನೆಲ್ಲ ಪಾನುಗಳನ್ನೂ ಕಾಯಿಗಳನ್ನೂ ಕಳೆದುಕೊಳ್ಳತೊಡಗಿದ. ನೋಡ ನೋಡುತ್ತಿದ್ದಂತೆ ನವೀನ ಪಾವಸ್ಕರನ ಬಲಗಳೆಲ್ಲ ಬರಿದಾಯಿತು. ಕೊನೆಗೊಮ್ಮೆ ಆತನ ಪಾಲಿಗೆ ರಾಜನೊಬ್ಬನೇ ಉಳಿದುಕೊಂಡ. ಅದಕ್ಕೆ ಪ್ರತಿಯಾಗಿ ಗಣೇಶ ಸಾಕಷ್ಟು ಬಲದೊಂದಿಗೆ ಅಟ್ಯಾಕ್ ಶುರು ಮಾಡಿಕೊಂಡಿದ್ದ. ಗ್ಯಾರಂಟಿ ಸೋಲುತ್ತಾನೆ ಬಿಡಿ ಎಂದುಕೊಂಡೆ. ಅಷ್ಟರಲ್ಲಿ 5 ತಾಸಿಗೂ ಹೆಚ್ಚಿನ ಕಾಲ ಕಟ್ಟಿಕೊಂಡಿದ್ದ ಜಲಬಾಧೆ ಬಹಳ ಕಾಡಿತು. `ಕಿಟ್ಟು ಬಾರೋ ಹೋಗಿ ಬರೋಣ, ನವೀನ ಪಾವಸ್ಕರ ಹೊಗೆ ಹಾಕಿಸ್ಕೊಂಡ ..'ಎಂದೆ. `ನವೀನಾ.. ಟೈಂ ವೇಸ್ಟ್ ಮಾಡ್ತಿದ್ದೀಯಾ..? ಸುನ್ಮೆ ರಿಸೈನ್ ಮಾಡು..' ಎಂದು ಆನಂದ ಆಗಲೇ ಎರಡು ಮೂರು ಸಾರಿ ಹೇಳಿಯಾಗಿತ್ತು. ಆದರೆ ನವೀನನ ಕಿವಿಗೆ ಅದು ಹೋಗಲಿಲ್ಲ. ಆಡುತ್ತಲೇ ಇದ್ದ. ಹಾಳಾಗ್ಲಿ ಎಂದು ನಾವು ಎದ್ದು ಬಂದೆವು.
ಮರಳಿ ಬರುವಾಗ ಒಂದರ್ಧ ಗಂಟೆಯೇ ಹಿಡಿಯಿತು. ನನ್ನ ಆಟದ ಪೋಸ್ಟ್ ಮಾರ್ಟಮ್ ಅಂದರೆ ಸೋತ ಬಗೆಯ ಬಗ್ಗೆ ಕಿಟ್ಟುವಿನ ಜೊತೆಗೆ ಚರ್ಚಿಸುತ್ತ ಬರುತ್ತಿದ್ದೆ. ನವೀನ ಪಾವಸ್ಕರ ಖುಷಿಯಿಂದ ಓಡಿ ಬರುತ್ತಿರುವುದು ಕಾಣಿಸಿತು. ಏನೋ ಆಗಿದೆ ಎಂದುಕೊಂಡೆ.. ಬಂದವನೇ ಆಟ ಡ್ರಾ ಆಯ್ತು ಕಣೋ ಎಂದ. ಅರೇ.. ಇದ್ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲ..
ರಾಜನೊಬ್ಬನೇ ಇದ್ದ. ಹೇಗಿದ್ರೂ ನೀನು ಚೆಕ್ ಮೀಟ್ ಗ್ಯಾರಂಟಿ ಅಂದ್ಕೊಂಡಿದ್ವಿ... ಎಂದೆ
ಇಲ್ಲ ಮಾರಾಯಾ.. ಅಂವನಿಗೆ ನನ್ನ ರಾಜನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.. ಪರಿಣಾಮವಾಗಿ ಸ್ಟೈಲ್ ಮೀಟ್ ಆದೆ.. ಸ್ಟೈಲ್ ಮೀಟ್ ಆದರೆ ಡ್ರಾ ಅಂತೆ.. ಸೋ.. ಅರ್ಧ ಪಾಯಿಂಟು ಬೋನಸ್ಸು ಸಿಕ್ಕಿತು.. ಅಂದ.. ಖುಷಿಯಾಯಿತು.
ಈ ಡ್ರಾದಿಂದಾಗಿ ನಮ್ಮ ತಂಡದ ಮೊತ್ತ 10.5 ಆಯಿತು. ಅಂದರೆ ಕಾಂಪ್ರೋಮೈಸ್ ಗಿಂತ ಅರ್ಧ ಪಾಯಿಂಟು ಹೆಚ್ಚು ಸಿಕ್ಕಿತು. ಕೊನೆಯ ಮ್ಯಾಚಿನಲ್ಲಿ 4 ಬೋರ್ಡಿನಲ್ಲಿ 1 ಮ್ಯಾಚನ್ನೂ ಸೋಲದಿದ್ದರೆ ಪ್ರೈಜ್ ಗ್ಯಾರಂಟಿ ಎಂಬ ಹಂತಕ್ಕೆ ಬಂದಿತು.

ದಿ ಹೆಲ್ಪ್ ಪುಲ್ ಮ್ಯಾಚ್.. ಹಾಗೂ ಹೆಲ್ಪರ್ಸ್..
ಈ ಪಂದ್ಯದಲ್ಲಿ ನಾಲ್ಕಕ್ಕೆ ನಾಲ್ಕನ್ನೂ ಗೆದ್ದರೆ ಫಸ್ಟಂತೂ ಸಿಗಲಾರದು. ಏಕೆಂದರೆ ಗೋಗಟೆ ಕಾಲೇಜು 14 ಪಾಯಿಂಟು ಗಳಿಸಿ ಆಗಲೇ ಮೊದಲನೇ ಸ್ಥಾನವನ್ನು ಖಾಯಂ ಮಾಡಿಕೊಂಡಿತ್ತು. ಆದರೆ ನಾಲ್ಕರ ಪೈಕಿ 3.5 ಪಾಯಿಂಟ್ ಗೆದ್ರೂ ಸಾಕಿತ್ತು ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಿದ್ದೆವು. ನಮ್ಮ ವಿರುದ್ಧ ಕಳೆದ ಸಾರಿಯ ಪಂದ್ಯವನ್ನಾಡಿದ್ದ ಆರ್. ಪಿ. ಡಿ. ಕಾಲೇಜಿನ ಪಾಯಿಂಟು 9.5 ಆಗಿತ್ತು.ನಾವು ನಾಲ್ಕಕ್ಕೆ ನಾಲ್ಕನ್ನು ಗೆದ್ದರೂ 14.5 ಆಗುತ್ತಿತ್ತು. ಒಂದು ಮ್ಯಾಚು ಡ್ರಾ ಆದರೂ 14 ಪಾಯಿಂಟಾಗುತ್ತಿತ್ತು. ಅದೇ ನಾವೇನಾದರೂ ಒಂದು ಮ್ಯಾಚನ್ನು ಸೋತು ಆರ್. ಪಿ. ಡಿ. ಕಾಲೇಜು 4ರ ಪೈಕಿ 4ನ್ನೂ ಗೆದ್ದರೆ 2ನೇ ಸ್ಥಾನವನ್ನು share ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗಾಗುವುದನ್ನು ತಪ್ಪಿಸಲು ಅಷ್ಟಕ್ಕೆ ಅಷ್ಟೂ ಮ್ಯಾಚನ್ನು ಗೆಲ್ಲಲೇಬೇಕು ಎಂದುಕೊಂಡೆವು.  ನಮ್ಮ ನಿರೀಕ್ಷೆಯಂತೆ ಆರ್. ಪಿ. ಡಿ. ಕಾಲೇಜಿನವರು ಅವರ ಎದುರಾಳಿ ತಂಡದ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ನಾಲ್ಕಕ್ಕೆ ನಾಲ್ಕನ್ನೂ ಗೆದ್ದುಕೊಂಡರು. ಇದರಿಂದ ನನಗೆ ಕೊಂಚ ಟೆನ್ಶನ್ ಆಯಿತು. ನಮ್ಮ ಟೀಮಲ್ಲಿ ಯಾರಾದರೂ ಸೋತುಬಿಟ್ಟರೆ ಎನ್ನುವ ಭೀತಿ ಕಾಡಿತು.
ಆದರೆ...
ನಮ್ಮ ಪುಣ್ಯಕ್ಕೆ ನಮ್ಮ ವಿರುದ್ಧ ಬಿದ್ದವರು ಕುಮಟಾದ ಬಾಳಿಗಾ ಕಾಮರ್ಸ್ ಕಾಲೇಜಿನ ದೋಸ್ತರು. ಮ್ಯಾಚೇನೋ ಶುರುವಾಯಿತು. ಕಳೆದೆರಡು ಮ್ಯಾಚು ಸೋತಿದ್ದೆನಲ್ಲಾ.. ಸಿಟ್ಟೆಲ್ಲಿತ್ತೋ., ಮ್ಯಾಚು ಪ್ರಾರಂಭವಾದ 5 ನಿಮಿಷಗಳಲ್ಲಿಯೇ ಕನಿಷ್ಟ 20 step ಗಳಲ್ಲಿಯೇ ನನ್ನ ಎದುರಾಳಿಯನ್ನು ಸೋಲಿಸಿಬಿಟ್ಟೆ. ಮತ್ತೊಂದು 15-20 ನಿಮಿಷಗಳಲ್ಲಿ ಆನಂದನೂ ಗೆದ್ದುಬಿಟ್ಟ. ಆದರೆ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ಸೋಲತೊಡಗಿದ. ಕಿಟ್ಟುವಿನ ಮ್ಯಾಚು ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ಪಂದ್ಯಗಳನ್ನು ನೋಡಲು ಆರ್. ಪಿ. ಡಿ. ಕಾಲೇಜಿನ ಹುಡುಗರೂ ನೆರೆಯಲು ಆರಂಭಿಸಿಬಿಟ್ಟರು.
ಆಗ ಇದ್ದಕ್ಕಿದ್ದಂತೆ ನವೀನ ಪಾವಸ್ಕರನಿಗೆ ಏನನ್ನಿಸಿತೋ ಏನೋ ನನ್ನ ಕಿವಿಯಲ್ಲಿ `ಮ್ಯಾಚನ್ನು ಹೊಂದಾಣಿಕೆ ಮಾಡಿಕೊಳ್ಳೋಣ .. ' ಎಂದ. ಕಿಟ್ಟುವಿಗೂ ಹೇಳಿದ. ನಾನು ಬೇಡವೆಂದೆ. ಕಿಟ್ಟುವೂ ಹಾಗೆಯೇ ಹೇಳಿದ. ಆದರೆ ನವೀನ ಪಾವಸ್ಕರ ಬಿಡಬೇಕಲ್ಲ. ನಮ್ಮನ್ನು ಒಪ್ಪಿಸಿದ. ನಮ್ಮ ಎದುರಾಳಿ ತಂಡದ ಬಳಿ ಕೊನೆಗೆ ನವೀನನೇ `ಹೊಂದಾಣಿಕೆ ಮಾಡಿಕೊಳ್ಳೋಣ..' ಎಂದ.. ಅವರು ನನ್ನ ಹಾಗೂ ಕಿಟ್ಟುವಿನ ಮುಖವನ್ನು ನೋಡಲಾರಂಭಿಸಿದರು.
ನವೀನ ಪಾವಸ್ಕರ `ನೋಡಿ.. ಮ್ಯಾಚ್ ಹೊಂದಾಣಿಕೆ ಮಾಡಿಕೊಳ್ಳೋಣ.. ನಿಮಗೆ ದುಡ್ಡು ಕೊಡ್ತೀನಿ...' ಅಂದ.. ಕುಮಟಾ ಕಾಲೇಜಿನ 4ನೇ ಬೋರ್ಡ್ ಪ್ಲೇಯರ್ ಹೆಸರೂ ಕೃಷ್ಣ ಮೂರ್ತಿ ದೀಕ್ಷಿತ ಎಂಬುದೇ ಆಗಿತ್ತು. ಹಳೆಯ ಪರಿಚಯ. ಆತ ನವೀನನ ಬಳಿ `ನಾವು ಆಟವನ್ನು ದುಡ್ಡಿನಿಂದ ಅಳೆಯೋದಿಲ್ಲ.. ದುಡ್ಡಿಗಾದರೆ ನಾವು ಮ್ಯಾಚು ಬಿಟ್ಟುಕೊಡುವುದೇ ಇಲ್ಲ.. ' ಎಂದರು. ನನಗೆ ಏನು ಮಾಡಬೇಕೋ ಎಂಬುದು ತೋಚಲಿಲ್ಲ. ಕೊನೆಗೆ ಕಿಟ್ಟು ನಮ್ಮ ದೋಸ್ತ ರಾಘವನಿಗೆ ಪೋನ್ ಮಾಡಿದ. ಯಾಕಂದರೆ ನಮ್ಮ ವಿರುದ್ಧ ಆಡುತ್ತಿದ್ದ ಹುಡುಗರು ರಾಘವನ ಪರಮಾಪ್ತ ಮಿತ್ರರಾಗಿದ್ದರು ಅಷ್ಟೇ ಅಲ್ಲದೇ ರಾಘವನ ಅಜ್ಜನಮನೆಯಾದ ಗೋಕರ್ಣದಲ್ಲಿ ಆಡಿ ಬೆಳೆದಿದ್ದವರಾಗಿದ್ದರು.
ಕೊನೆಗೆ ರಾಘುವಿನ ಮಾತಿಗೆ ಹಾಗೂ ಒಂದು ಷರತ್ತಿಗೆ ಒಪ್ಪಿ ಅವರು ಆಟವನ್ನು ನಮಗೆ ಬಿಟ್ಟುಕೊಟ್ಟರು. ಅದೇನೆಂದರೆ ನಾಲ್ಕನೇ ಬೋರ್ಡಿನ ಆಟಗಾರರಾದ ಕೃಷ್ಣಮೂರ್ತಿ ದೀಕ್ಷಿತ್ ಹಾಗೂ ಕೃಷ್ಣಮೂರ್ತಿ ದೀಕ್ಷಿತ್ ಅವರ ನಡುವಿನ ಆಟವನ್ನು ಡ್ರಾ ಎಂದು ಪರಿಗಣಿಸಬೇಕು. ಬದಲಾಗಿ ಆ ಟೀಮಿನವರು ಸೋಲುತ್ತಿದ್ದ ನವೀನ ಪಾವಸ್ಕರನಿಗೆ ಗೆಲುವನ್ನು ಬಿಟ್ಟುಕೊಡುತ್ತಿದ್ದರು. ಹಾಗೆ ಮಾಡಿದರು ಕೂಡ. ಪರಿಣಾಮವಾಗಿ ಅರ್ಧ ಪಾಯಿಂಟಿನಿಂದ 2ನೇ ಸ್ಥಾನವನ್ನು ಗಳಿಸಿಕೊಂಡೆವು. ನಮ್ಮ ಟೀಮಿನ ಕೃಷ್ಣಮೂರ್ತಿ ದೀಕ್ಷಿತ್ ಇಡೀ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಗೆ ಪಾತ್ರನಾಗಿದ್ದ. ಕಾಕತಾಳೀಯದಂತೆ ನಮ್ಮ ಎದುರಾಳಿ ತಂಡ ಕುಮಟಾದ ಕೃಷ್ಣಮೂರ್ತಿ ದೀಕ್ಷಿತನೂ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಅಜೇಯನಾಗಿ ಉಳಿದಿದ್ದ.
ನನಗೆ ಬೇಜಾರಾಗಿತ್ತು. ಪಂದ್ಯ ಹೊಂದಾಣಿಕೆ ಮಾಡಿಕೊಂಡಿದ್ದು ನನಗೆ ಅಷ್ಟು ಖುಷಿಯನ್ನು ಕೊಟ್ಟಿರಲಿಲ್ಲ. ಆದರೆ ನಮ್ಮ ಟೀಮಿನ ಒಬ್ಬ ಆಟಗಾರನನ್ನು ಸೋಲಿಸಿದರೆ ತಲಾ 500 ರು. ಕೊಡುತ್ತೇನೆ ಎಂದು ಆರ್. ಪಿ. ಡಿ. ಕಾಲೇಜಿನ ಗಣೇಶ್ ಹಾಗೂ ಮಿತ್ರರು ಆಮಿಷ ಒಡ್ಡಿದ್ದರಂತೆ. ಹಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.. ನೀವು ನಮ್ಮವರು, ಉತ್ತರ ಕನ್ನಡದವರು ಗೆಲ್ಲಬೇಕು. ಅದಕ್ಕೂ ಹೆಚ್ಚಾಗಿ ನಮ್ಮ ರಾಘುವಿನ ದೋಸ್ತರು.. ನೀವು ಸೋಲಬಾರದು.. ಅದಕ್ಕಾಗಿ ಪಂದ್ಯ ಬಿಟ್ಟುಕೊಟ್ಟೆವು ಎಂದು ಹೇಳಿದರು. ಇದನ್ನು ಕೇಳಿದ ಮೇಲೆ ಅಷ್ಟಾಗಿ ನನಗೆ ಬೇಸರವಾಗಲಿಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ಸಮಾರೋಪ ಸಮಾರಂಭ...ಬ್ಲೂ ಟೀಂ ಸೆಲೆಕ್ಷನ್) 


Saturday, November 23, 2013

ದಿಙ್ಮೂಢ ಕವಿತೆಗಳು


ಟಾರು ರೋಡಿನಲ್ಲಿ
ವೇಗವಾಗಿ ಬೈಕಿನಲ್ಲಿ
ಸಾಗುತ್ತಿದ್ದೆ..
ಕಪ್ಪು ಬೆಕ್ಕು
ಬೈಕಿಗಡ್ಡವಾಗಿ
ಓಡಿ ಬಂದಿತು..
ಅಪಶಕುನ ಮುಂಡೇದು
ಬೈಕಿನ ಚಕ್ರಕ್ಕೆ ಸಿಲುಕಿ 
ಸತ್ತು ಹೋಯಿತು ||

***

ಬೆಳಿಗ್ಗೆ ಮುಂಚೆ
ಹಾಗೆ ಸುಮ್ಮನೆ
ಎಡಗಣ್ಣು 
ಅದುರಿತು
ಕಣ್ಣು ತಿಕ್ಕಿದೆ,
ರೆಪ್ಪೆಗೂದಲು 
ಕಿತ್ತು ಬಂದಿತು ||

**

ಶುಭಕಾರ್ಯಕ್ಕೆ
ಹೊರಟ ವೇಳೆ
ಬೋಳು ಹಣೆಯ ಮುದುಕಿ
ಸಮಾ ಎದುರಿಗೆ ಸಿಕ್ಕಳು
ಮುದಿಕಿಯೀಗ
ಹೊಸ ಮೇಕಪ್ 
ಬಾಕ್ಸು ಕೊಂಡಿದ್ದಾಳಂತೆ ||

***

 ರಸ್ತೆಯಲ್ಲಿ ಪದೇ ಪದೆ
ಎಡಗಾಲು  ಕಲ್ಲಿಗೆ ತಾಗಿ
ಎಡವಿತು.
ಕಲ್ಲು ಕಿತ್ತು ಬಂದಿತು ||

 **


ಕುತೂಹಲದಿಂದ
ಜ್ಯೋತಿಷಿಗಳ ಬಳಿ
ಭವಿಷ್ಯ ಕೇಳಿಸಲು
ಜಾತಕ ಕೊಟ್ಟೆ
ಭವಿಷ್ಯ ಹೇಳುವ ಮುನ್ನ
ಜ್ಯೋತಿಷಿಗಳು
ಇನ್ನಿಲ್ಲವಾದರು ||

***

ದಾರಿಯಲ್ಲಿ ಸಾಗುವಾಗ
ಅಡ್ಡಬಂದಿತು ನರಿ,
ಮುಖ ಸರಿಯಾಗಿ ಕಾಣಲಿಲ್ಲ,
ನೋಡಣವೆಂದು ಬೆನ್ನಟ್ಟಿದೆ
ಅಡ್ಡಗಟ್ಟಿ ಮುಖ ನೋಡಿದೆ
ಶನಿ ಮುಂಡೆಗಂಡನ
ಮುಖ ನೋಡಿದೆ..
ಇನ್ನು ನನ್ನ ಕೆಲಸ ಆದಂತೆ
ಎಂದು ಗೊಣಗಿದ ನರಿ
ವಾಪಾಸು ಮರಳಿತು ||

***
ನಾನು ಎರುದು ಬಂದಾಗ 
ಆತ ಒಂಟಿ ಸೀನು ಸೀನಿದ,
ನನಗೆ ಶೀತವಾಯಿತು ||

**

ಮತ್ತೊಮ್ಮೆ ಖಾಲಿಕೊಡ
ಎದುರು ಬಂದಿತು
ಶಿವ ಶಿವಾ ಎಂದುಕೊಂಡೆ
ಮನಸ್ಸು ಖಾಲಿಯಾಯಿತು ||

***

(ಬರೆದಿದ್ದು : ಶಿರಸಿಯಲ್ಲಿ, ನವೆಂಬರ್ 23, 2013ರಂದು)

Thursday, November 21, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 5

ದಿ ಬಾಕ್ಸಿಂಗ್ ಡೇ

ಸಾಲು ಸಾಲು ಟೇಬಲ್ಲುಗಳು..ನಾಲ್ಕು ಜನ ಎದುರು ಬದುರು ಕುಳಿತುಕೊಳ್ಳುವಂತೆ ಟೇಬಲ್ ಹಾಕಿತ್ತು. ಮೊದಲ ಬೋರ್ಡಿಗೆ ಆನಂದ, ೆರಡನೆಯದಕ್ಕೆ ನಾನು, ಮೂರನೇದಕ್ಕೆ ನವೀನ ಪಾವಸ್ಕರ, ನಾಲ್ಕನೆಯದಕ್ಕೆ  ಕಿಟ್ಟು ಕುಳಿತಿದ್ದ..
ಇವತ್ತು ಆಡಿದ್ದು ಎರಡು ಮ್ಯಾಚುಗಳು. ಮೊದಲು ನಮ್ಮ ಎದುರು ಬಿದ್ದವರು ಬಹುಶಹ ಹಾನಗಲ್ಲೋ, ಧಾರವಾಡದವರೋ ಇರಬೇಕು. ಮ್ಯಾಚ್ ಶುರುವಾದ ಹತ್ತೇ ನಿಮಿಷಗಳಲ್ಲಿ ಕೃಷ್ಣಮೂರ್ತಿ ಗೆದ್ದುಬಿಟ್ಟ. ನನ್ನ ಮ್ಯಾಚು ಗೆಲ್ಲುವ ಹಂತದಲ್ಲಿತ್ತು. . ಪಕ್ಕದಲ್ಲಿ ಕುಳಿತಿದ್ದ ನಾನು ನವೀನ ಪಾವಸ್ಕರನ ಪಕ್ಕೆಗೆ ತಿವಿದು `ಹೆಂಗೆ..? ' ಎಂಬಂತೆ ಸನ್ನೆ ಮಾಡಿದೆ. ಕಿಚಾಯಿಸಿದೆ.
ಅದಕ್ಕವನು ತನ್ನ ದೊಡ್ಡ ಹೊಟ್ಟೆ ಕುಲುಕಿಸಿ ನಗುತ್ತಾ.. `ನಮ್ಮ ಕಿಟ್ಟು ಅಲ್ವೇ..' ಎಂದ. !
ಕೊನೆಗೆ ನಾನು ಎರಡನೆಯವನಾಗಿ ಗೆದ್ದೆ. . ನವೀನ ಪಾವಸ್ಕರನೂ ಕೆಲವು ಕ್ಷಣಗಳಲ್ಲಿಯೇ ಗೆದ್ದು ನಮ್ಮ ಪಾಯಿಂಟನ್ನು ಮೂರಕ್ಕೇರುವಂತೆ ಮಾಡಿದ. ಆದರೆ ಮೊದಲ ಬೋರ್ಡಿನ ಪ್ಲೇಯರ್ ಆನಂದ ನಾಯ್ಕ ಸೋತುಬಿಟ್ಟ. ನಮಗೆ ಇಮ್ಮೆಲೆ ಆಘಾತವಾಯಿತಾದರೂ ತೋರಿಸಿಕೊಳ್ಳಲಿಲ್ಲ. ಆನಂದ ನಾಯ್ಕ ಮಾತ್ರ ಬಹಳ ಬೇಜಾರು ಮಾಡಿಕೊಂಡ. ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕುಬೇಕಾಗಿ ಹೋಯಿತು. ನವೀನ ಪಾವಸ್ಕರನ ಮೇಲೇ ಸಿಟ್ಟು ಉಕ್ಕಿತು. ಪಕ್ಕಕ್ಕೆ ಕರೆದೊಯ್ದು `ಏನೋ.. ನಿನ್ನ ಪ್ಲೇಯರ್ರು ಹಿಂಗೆ..? ಏನೇನೋ ಹೇಳ್ತಿದ್ದೆಯಲ್ಲ..' ಎಂದು ಹಳೆಯ ಸೇಡನ್ನು ತೀರಿಸಿಕೊಳ್ಳುವಂತೆ ಕಿಚಾಯಿಸಿದೆ.. ಆತ ಏನೇನೋ ಸಮಜಾಯಿಶಿ ನೀಡಿದ. ನಾನು ನಕ್ಕು ಸುಮ್ಮನಾದೆ. ಕಿಟ್ಟು ಆನಂದನನ್ನು ಸಮಾಧಾನ ಮಾಡಿದ.
ಹಾಗೆಯೇ ಎರಡನೇ ಪಂದ್ಯಕ್ಕೆ ಅನುವಾದೆವು. ಈ ಸಾರಿ ಅದ್ಯಾವುದೋ ದುರ್ಬಲ ಟೀಂ ನಮ್ಮ ವಿರುದ್ಧ ಬಿದ್ದಿತ್ತು. ನಾವು ನಾಲ್ಕೂ ಜನ ಹೀನಾಯವಾಗಿ ಆ ಟೀಮನ್ನು ಸೋಲಿಸಿ ನಮ್ಮ ಪಾಯಿಂಟನ್ನು 7ಕ್ಕೆ ಏರಿಸಿಕೊಂಡೆವು. ಈಗ ಕಿಟ್ಟುವಿನ ಮ್ಯಾಚ್ ಸ್ವಲ್ಪ tuf ಇತ್ತು. ಆದರೆ cool ಆಗಿರುವ ಆತ ಅದನ್ನು ನಿಭಾಯಿಸಿ ಗೆದ್ದ.ಆನಂದ ಗೆಲುವನ್ನು ಪಡೆದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದ. ಅಮತೂ ಇಂತೂ ಎರಡನೇ ದಿನ ಅರಾಮವಾಗಿಯೇ ಯಾವುದೇ ಹಾನಿಯಾಗದೇ ಎಲ್ಲ ಗೆಲುವಿನ ಸಡಗರದ ಜೊತೆಗೆ ನಡೆಯಿತೆನ್ನಿ.
ಹೇಗೆಂದರೂ ಮರುದಿನ ಬೆಳಗಾವಿಯ ಪ್ರಭಲ ಟೀಂ ಗೋಗಟೆ ಕಾಲೇಜಿನ ವಿರುದ್ಧ ನಮ್ಮ match ಬೀಳುತ್ತದೆ ಎಂದು ಲೆಕ್ಖ ಹಾಕಿದೆ. ಅದು ನಿಜ ಕೂಡ ಆಗಿ ಬಿಟ್ಟಿತು. ಹೀಗಾಗಿ ರಾತ್ರಿಯ ನಮ್ಮ ತಾಲೀಮು ಕೂಡ ಕೊಂಚ ಜೋರಾಯಿತು. ಮತ್ತೆ ಯಥಾಪ್ರಕಾರ ನಾನು-ಕಿಟ್ಟು, ನವೀನ ಪಾವಸ್ಕರ ಹಾಗೂ ಆನಂದರ ವಿರುದ್ಧ ಯದ್ವಾ ತದ್ವಾ ಸೋತು ಬಿಟ್ಟೆವು. ಹೇಗೆಂದರೂ ನನ್ನ ವಿರುದ್ಧ ರೇಟೆಡ್ ಪ್ಲೇಯರ್, ನ್ಯಾಚನಲ್ ಪ್ಲೇಯರ್ ಸಾಗರ್ ಚಿಂಚೋಳಿಮಠ ಬಿದ್ದೇಬೀಳುತ್ತಾನೆ ಎಂದುಕೊಂಡೆ. ಕೊಂಚ.. ಕೊಂಚವೇನು ಜಾಸ್ತಿ ಅಳುಕಿನಿಂದಲೇ ರಾತ್ರಿ 12 ಗಂಟೆಯವರೆಗೂ ಸೊಳ್ಳೆ ಸಾಮ್ರಾಜ್ಯದ ಸೈನಿಕರ ನಡುವೆ ಚದುರಂಗವನ್ನಾಡಿ ಮಲಗಿದೆವು.

19-09-2001, ಬುಧವಾರ
ಎಲ್ಲವೂ ಅಂದುಕೊಂಡಂತೆ ನಡೆದಿದ್ದವು. ನಮ್ಮ ವಿರುದ್ಧ ಗೋಗಟೆ ಕಾಲೇಜಿನ ಹುಡುಗರು ಬಿದ್ದಿದ್ದರು. ಆ ದಿನಗಳಲ್ಲಿ ಇವರದ್ದೇ ಅತ್ಯಂತ strong team. ನಾಲ್ವರಲ್ಲಿ ಇಬ್ಬರು national player. ಆದರೆ ಮೂವರು ರೇಟೆಡ್ ಪ್ಲೇಯರ್ಸ್. ಮುಂಜಾನೆ ಎದ್ದರೂ ಯಾಕೋ ಒಂಥರಾ ಅನ್ನಿಸುತ್ತಿತ್ತು. ನಮ್ಮ ಪ್ರೀತಿಯ ದುರ್ಗಾ ಹೊಟೆಲಿನಲ್ಲಿ ಹೋಗಿ ತಿಂಡಿ ತಿಂದರೆ ಏನೂ ಸರಿಯಾಗಿ ಸೇರುತ್ತಿಲ್ಲ. ನನಗೊಬ್ಬನಿಗೆ ಹೀಗೆ ಅನ್ನಿಸುತ್ತಿದೆಯೇನೋ ಅಂದುಕೊಂಡೆ. ಆನಂದ, ನವೀನ ಇಬ್ಬರಿಗೂ ಹಾಗೆ ಆಗಿತ್ತೆಂದು ಕೊನೆಗೊಮ್ಮೆ ಹೇಳಿದರು. ಕಿಟ್ಟು ಎಂದಿನ ಶಾಂತ ಸ್ವಭಾವದಲ್ಲಿ ಜಾಲಿಯಾಗಿದ್ದ. ಸ್ನಾನ, ಶೌಚ ಇತ್ಯಾದಿ, ಇತ್ಯಾದಿಗಳು ಎಂದಿನಂತೆ ಜರುಗಿದವು. ಅಂದುಕೊಂಡ ಮ್ಯಾಚ್ ಎದುರು ಬಂದೇ ಬಿಟ್ಟಿತು.
ತಕ್ಷಣವೇ ನಾನು ಎಲ್ಲರನ್ನೂ ಕರೆದು best of luck ಎಂದೆ. ಕೊನೆಗೆ ಪಾವಸ್ಕರನನ್ನು ಕರೆದು ' ನೋಡು, ನಿನ್ನ ವಿರುದ್ಧ ಸಮೀರ ಘೋಟ್ನೆ ಬಿದ್ದಿದ್ದಾನೆ. ಅಂವ ಹೋದ ವರ್ಷವೂ ನಿನ್ನನ್ನು ಸೋಲಿಸಿದ್ದ. ಆ ಉರಿ, ಸೇಡಿದ್ರೆ, ನಿನ್ನಲ್ಲಿ ತಾಕತ್ತಿದ್ರೆ ಅವನನ್ನು ಸೋಲಿಸು .. ನೋಡೋಣ.. ನೂರು ರೂಪಾಯ್ ಚಾಲೆಂಜು.. ' ಎಂದು ಗಾಳಿ ಹೊಡೆದೆ. ಅದಕ್ಕವನು `ನಾನು ಸೋಲಿಸುತ್ತೇನೆ.. ಈಗಾಗ್ಲೇ ಅರ್ಧಕ್ಕರ್ಧ ಅವನನ್ನು ಸೋಲಿಸಿಯಾಗಿದೆ..' ಎಂಬಂತೆ ಮಾತಾಡಿದ. ಆನಂದನ ಬಳಿಯೂ ಇದೇ ಚಾಲೆಂಜನ್ನು ಮಾಡಿ ಎದುರಾಳಿ ಅನಿಕೇತನ್ ಪಾವಸೆಯನ್ನು ಸೋಲಿಸು ಎಂದಿದ್ದೆ. ಆತ ಮಾತನಾಡದೇ ಸುಮ್ಮನುಳಿದಿದ್ದ. ಕಿಟ್ಟುವಿನ ಬಳಿ ನಾನು ಗಾಳಿ ಹೊಡೆಯುವುದು ವೇಸ್ಟ್ ಎನ್ನಿಸಿದ್ದರಿಂದ ಅಂತಹ ಕೆಲಸ ಮಾಡಲಿಲ್ಲ. ಆತ ತನ್ನ ಮಾತಿನ ಲಹರಿಯಲ್ಲಿ ಸುಮ್ಮನಿದ್ದ.
ನನಗೋ ಎದೆಯೊಳಗೆ ಪುಕಪುಕಿ. ತಂಡದ ಕ್ಯಾಪ್ಟನ್ ನಾನಾದ್ದರಿಂದ ತೋರಿಸಿಕೊಳ್ಳುವಂತಿಲ್ಲವಲ್ಲ. ನನ್ನ ಮುಂದಿನ ಆಟಗಾರ ಸಾಗರ ಚಿಮಚೋಳಿಮಠ ಎಂಬುದೂ ತಿಳಿದಿತ್ತು. ಭರ್ಜರಿ ಟೆನ್ಶನ್ ಮನದಲ್ಲಿತ್ತು. ಸುಮ್ಮನೇ.. ಆ ಕಾಲೇಜಿನ ಗ್ರವಂಡಿನಾಚೆ, ಹುಣಸೇ ಮರದ ಬಯಲಿನಲ್ಲಿ ಶಾಂತ ಪರಿಸರದಲ್ಲಿ ಮರಗಳ ಕೆಳಗೆ ಹತ್ತುನಿಮಿಷ ಕುಳಿತೆ. ಮಹಿಳಾ ತಂಡದ ಆಟಗಾರರು ಬಂದು ಹಲವು ಸಲಹೆಗಳನ್ನು ಕೊಟ್ಟರು. ಹುಂ.. ಎಂದೆ.. ಅವರುಗಳಿಗೆ ನನ್ನ ಮೇಲೆ ವಿಶ್ವಾಸ ಇತ್ತೇನೋ.. ಹೇಳಿದ್ದನ್ನು ಕೇಳಿದೆ. ಸರಿ ಎಂದೆ.  ಉತ್ಸಾಹ ಬಂದಿತ್ತು.

ದ ಬಾಕ್ಸಿಂಗ್ ಮ್ಯಾಚ್..
 ನಾನಂದುಕೊಂಡಂತಾಗಿದ್ದ ಮ್ಯಾಚು ಮುಂಜಾನೆ 8 ಗಂಟೆಗೆ ಶುರುವಾಯಿತು. ನಾನು ಬೇಕಂತಲೇ 10 ನಿಮಿಷ ತಡವಾಗಿ ಮ್ಯಾಚಿಗೆ ಹೋದೆ. ಆಗಲೇ ಅಲ್ಲಿ ಎಲ್ಲರೂ ಬಂದಿದ್ದರು. ಹಲವರು ಮ್ಯಾಚು ಆರಂಭಿಸಿದ್ದರು. ಮತ್ತೆ ಹಲವರ ಮ್ಯಾಚು ಅದಾಗಲೇ ಮುಗಿದೂ ಹೋಗಿತ್ತು ಕೂಡ..!! ಪಾವಸ್ಕರ, ಆನಂದ, ಕಿಟ್ಟು ಮ್ಯಾಚು ಆರಂಭಿಸಿದ್ದರು. ನನ್ನೆದುರು ಆಟಗಾರ ಚಿಂಚೋಳಿಮಠ ನನಗಾಗಿ ಕಾಯುತ್ತ ಕುಳಿತಿದ್ದ. ಪಾವಸ್ಕರ ಯಥಾಪ್ರಕಾರ ಸಿಕ್ಕಾಪಟ್ಟೆ ನಗುತ್ತಾ ಆಡುತ್ತಿದ್ದ.. ಾನಂದ ಕಿಟ್ಟು ಯಾವುದೇ ಟೆನ್ಶನ್ ಇಲ್ಲದೇ ಆಡುತ್ತಿದ್ದರು. ನಾನು ಬಂದವನೇ ಅವರೆಲ್ಲರಿಗೂ ಮತ್ತೊಮ್ಮೆ best of luck ಹೇಳಿ ಆಡಲು ಕುಳಿತೆ. ಆಟ ಟೆಸ್ಟ್ ಮ್ಯಾಚಿನಂತೆ ನಿಧಾನವಾಗಿ ಸಾಗಿತು. ನಾನು ಡಿಫೆನ್ಸ್ ಆಡತೊಡಗಿದ್ದೆ. ಆದರೆ ಹೋರಾಟಕ್ಕೆ ಪ್ರತಿಹೋರಾಟ ಸಾಗಿಯೇ ಇತ್ತು. ನಾನು-ಅವನು, ಅವನು-ನಾನು ಎಂಬಂತೆ ಸಮಬಲದಲ್ಲಿ ಪಾನುಗಳನ್ನು, ಪೀಸುಗಳನ್ನು ಹೊಡೆದುಕೊಳ್ಳುತ್ತ ಸಾಗಿದೆವು. ಆಟ ನಿಧಾನವಾಗಿ ರಂಗೇರತೊಡಗಿತ್ತು. ಮ್ಯಾಚು ಮುಗಿದವರೆಲ್ಲ ನಮ್ಮನ್ನು ಸುತ್ತುಗಟ್ಟಿ ನೋಡತೊಡಗಿದ್ದರು. ಏಕೆಂದರೆ ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಟಾಪ್ 2 ಟೀಮುಗಳ ನಡುವಿನ ಕದನ ಅದು ಎಂದು ಸುದ್ದಿ ಹಬ್ಬಿತ್ತು. ಎರಡು strong team ಗಳು ಪರಸ್ಪರ ಜಿದ್ದಿಗೆ ಬಿದ್ದಿದ್ದರು. ಆನಂದ, ನಾನು, ನವೀನ, ಕಿಟ್ಟುವಿನ ಸುತ್ತೆಲ್ಲ ಗುಂಪೇ ಗುಂಪು.. match ಹ್ಯಾಗಿರಬಹುದು, ಹೇಗೆ ಆಡಬಹುದು ಎಂಬ ಕುತೂಹಲ ಅವರಿಗೆ.. ಅಂಪಾಯರ್ರುಗಳೂ ನೋಡಲು ಬಂದಿದ್ದರು. ಆ ಕಾರಣದಿಂದ ನಮ್ಮ ಸುತ್ತಲೂ ನೆರೆದವರನ್ನು ಚದುರಿಸಲು ಅವರು ಹೋಗಲಿಲ್ಲ.
ಮ್ಯಾಚು ಆರಂಭವಾಗಿ ಅರ್ಧ-ಮುಕ್ಕಾಲು ಗಂಟೆ ಕಳೆದಿರಬಹುದು.. ಟೇಬಲ್ ಮೇಲೆ ಕೈಯೂರಿ, ಗದ್ದಕ್ಕೆ ಕೈಕೊಟ್ಟು ಗಂಭೀರದ ರೀತಿಯಲ್ಲಿ ಪೋಸು ಕೊಡುತ್ತಾ ಆಟವನ್ನಾಡುತ್ತಿದ್ದ ನವೀನ ಪಾವಸ್ಕರ ತಲೆ ಮೇಲೆ ಕೈಹೊತ್ತು ಎದ್ದು ಬಂದ.. `ಏನಾಯ್ತು..? ' ಎಂದು ಕೇಳಿದೆ.. `ಪುಸ್ಸಾಯ್ತು..' ಎಂದ.. ನಗು ಬಂತು..
ಬಂದವನೇ ನನ್ನ ಬಳಿ `ವಿನೂ.. 4-0 ದಿಂದ ಮ್ಯಾಚ್ ಸೋಲ್ತೀವಿ ಅನ್ಸುತ್ತೆ..' ಎಂದ..  `ಮುಚ್ಕೊಂಡು ನೋಡು..' ಎಂದೆ..ಸುಮ್ಮನಾದ.. ಒಮ್ಮೆ ನನ್ನ ಬಳಿ ಬರುವುದು, ಮ್ಯಾಚ್ ನೋಡಿ ಕಣ್ಣಿನಲ್ಲಿ ಕ್ವಶ್ಚನ್ ಮಾರ್ಕ್ ಮೂಡಿಸಿ ಪಕ್ಕದಲ್ಲಿದ್ದ ಆನಂದನ ಬಳಿ ಹೋಗುವುದು, ಕೊನೆಗೊಮ್ಮೆ ಕಿಟ್ಟುವಿನ ಬಳಿ ಹೋಗಿ ಆತನ ಬೆನ್ನು ತಟ್ಟಿ ಧೈರ್ಯ ತುಂಬುವ ಕೆಲಸಕ್ಕೆ ನವೀನ ನಿರತನಾದ.. ನವೀನ ಆಡಿದ ಟೇಬಲ್ಲನ್ನು ಗಮನಿಸಿದೆ. ನವೀನನ ರಾಜನೊಬ್ಬನೇ ಉಳಿದಿದ್ದರೆ ಉಳಿದೆಲ್ಲ ಢಮಾರ್ ಆಗಿದ್ದವು. ಎದುರಾಳಿ ಸಮೀರ್ ಘೋಟ್ನೆ ಮಿನಿಸ್ಟರ್, ಕುದುರೆ ಸೇರಿದಂತೆ ಸಾಕಷ್ಟು ಬಲಗಳನ್ನು ಹೊಂದಿದ್ದು ಮ್ಯಾಚನ್ನು ಗೆದ್ದಿದ್ದ.. `ತಥ್.. ನನ್ನ ಮಗನೇ.. ಇಷ್ಟ್ ಖರಾಬಾಗಿ ಸೋಲೋದಾ..?' ಎಂದು ಸನ್ನೆ ಮಾಡಿದೆ.. ನವೀನ ಕಣ್ಣು ತಪ್ಪಿಸುವ ಯತ್ನ ಮಾಡಿದ. ಮತ್ತೆ ಕೆಲವು ನಿಮಿಷಗಳು ಸಂದಿರುವಷ್ಟರಲ್ಲಿ ಫಸ್ಟ್ ಬೋರ್ಡ್ ಪ್ಲೇಯರ್ ಆನಂದ ಗೋಗಟೆಯ ಮತ್ತೊಬ್ಬ ನ್ಯಾಷನಲ್ ಪ್ಲೇಯರ್ ಅನಿಕೇತ್ ಪಾವಸೆ ವಿರುದ್ಧ ಸೋತು ಎದ್ದು ಬಂದ..ಪಾ...ಪ.. ಸೋತವನು ಅದೆಷ್ಟು ಸಾರಿ ಮುಖ ೊರೆಸಿಕೊಂಡನೋ.. ಕಣ್ಣೀರಿಗಾ..? ಬೆವರಿಗಾ..? ಸ್ಪಷ್ಟವಾಗಲಿಲ್ಲ.. ಮೂರೋ.. ನಾಲ್ಕನೆಯದೋ ಬೋರ್ಡನ್ನು ಆಡುವಂತಹವನನ್ನು ಮೊದಲ ಬೋರ್ಡಿಗೆ ಆಡಿಸಿ ತಪ್ಪು ಮಾಡಿದೆನಾ ಎಂದೆಲ್ಲಾ ಅನ್ನಿಸಿತು.. ಜೊತೆಯಲ್ಲಿ `ಅಯ್ಯೋ.. ಇವರ್ಯಾಕೆ ಇಷ್ಟು ಹೀನಾಯವಾಗಿ ಸೋತರು..' ಎಂದೂ ಅನ್ನಿಸದಿರಲಿಲ್ಲ.. ಆನಂದನೂ ಹೆಚ್ಚು ಕಡಿಮೆ ನವೀನನಷ್ಟೇ ಖರಾಬಾಗಿ ಸೋತಿದ್ದ.. ಻ಲ್ಲಿಗೆ ನಮ್ಮ ಟೀಮು ಆಗಲೇ 2-0ದಿಂದ ಹಿಂದುಳಿದಂತಾಗಿತ್ತು.
ತಂಡದ ಇಬ್ಬರು ಆಟಗಾರರು ಇಷ್ಟು ಹೀನಾಯವಾಗಿ ಸೋತರಲ್ಲಾ ಎನಿಸಿತಾದರೂ ಕಿಟ್ಟುವಿನ ಮೇಲೆ ಕೊಂಚ ಭರವಸೆಯುಳಿದಿತ್ತು. ಇವರಷ್ಟು ಹೀನಾಯವಾಗಿ ಸೋಲಲಾರ ಎನ್ನುವ ಭರವಸೆ ಮನಸ್ಸಿನಲ್ಲಿತ್ತು. ನನ್ನ ಮೇಲೆ, ನನ್ನ ಾಟದ ಮೇಲೆ ನನಗೆ ಇರುವ ಭರವಸೆಗಿಂತ ಹೆಚ್ಚು ಆತನ ಆಟದ ಮೇಲಿತ್ತು ಅಂದರೂ ತಪ್ಪಾಗಲಿಕ್ಕಿಲ್ಲ.  ಆತನ ಆಟದಲ್ಲಿನ ಟರ್ನಿಂಗ್ ಪಾಯಿಂಟುಗಳೇ ಹಾಗಿದ್ದವು. ಇದ್ದಕ್ಕಿದ್ದಂತೆ ಟ್ವಿಸ್ಟನ್ನು ಕೊಟ್ಟು ಎದುರಾಳಿಯನ್ನು ಗಲಿಬಿಲಿಗೊಳಿಸಿ ಸೋಲಿಸುತ್ತಿದ್ದ. ಟ್ವಿಸ್ಟು ನೀಡಿ ಸುಮ್ಮನಿರುವ ಕಿಟ್ಟು ಎದುರಾಳಿ ಗಲಿಬಿಲಿಯಲ್ಲಿದ್ದರೆ ಆತನ ಬಳಿ ಉಭಯಕುಶಲೋಪರಿ ಸಾಂಪ್ರತದ ಜೊತೆ ತಮಾಶೆಯನ್ನು ಮಾಡಿ ಎದುರಾಳಿಯ ಮನಸ್ಸನ್ನೂ ಫ್ರೀಯಾಗಿಸುವ ಗುಣವನ್ನೂ ಹೊಂದಿದ್ದ.. ಆತ ಇದ್ದಾನಲ್ಲ ನೋಡೋಣ.. ಎಂದು ಸುಮ್ಮನಾದೆ..
ನಮ್ಮ ಆಟದಲ್ಲಿ ಎದುರಾಳಿ ಸಾಗರ್ ಚಿಂಚೋಳಿಮಠ ಪ್ರತಿಯೊಂದು ನಡೆಗೂ 15-20 ನಿಮಿಷ time ತೆಗೆದುಕೊಳ್ಳುತ್ತಿದ್ದ.. ಇದು ನನಗೆ ಬಹಳ ಉಪಯೋಗಕಾರಿಯಾಯಿತು,. ಕಾಲೇಜುಗಳಲ್ಲಿ, ಪ್ರಾಕ್ಟೀಸಿನ ಸಂದರ್ಭಗಳಲ್ಲಿ ರ್ಯಾಪಿಡ್ ಚೆಸ್ ಆಡಿ ರೂಢಿಯಾಗಿದ್ದ ನಾನು ಆತ ಯೋಚನೆ ಮಾಡಿ ನಡೆಸುವ ಸಂದರ್ಭಗಳಲ್ಲಿಯೇ ನಾನೂ ಆಲೋಚನೆ ಮಾಡಿ ತಕ್ಷಣದಲ್ಲಿ ಆಡಿ free ಆಗುತ್ತಿದ್ದೆ. 
ಆಟದ ಮಧ್ಯದಲ್ಲೇ ಒಮ್ಮೆ ಎದ್ದು ಹೋಗಿ ಕಿಟ್ಟುವಿನ ಮ್ಯಾಚು ನೋಡಿದೆ. (ಪಂದ್ಯದ ನಡುವೆ ಏಳಬೇಡಿ, ಮಾತನಾಡಬೇಡಿ ಎಂಬ ರೂಲ್ಸುಗಳನ್ನು ಕಟ್ಟುನಿಟ್ಟಾಗಿ ಮಾಡಿದ್ದರೆ ಖಂಡಿತವಾಗಿಯೂ ನಾವು ಆಟಕ್ಕೆ ಸಲಾಂ ಹೊಡೆದು ಬರುತ್ತಿದ್ದೆವು ಬಿಡಿ) ಅರೇ....ವಿನ್ನಾಗುವ ತರದಲ್ಲಿತ್ತು..!!
ನನ್ನ ಮ್ಯಾಚು ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಎತ್ತೆತ್ತಲೋ ಸಾಗುತ್ತಿತ್ತು.. ಆಡಿದ್ದು ಬಹುಶಃ 15-20ಸ್ಟೆಪ್ ಅಸ್ಟೇ ಇರಬೇಕು. ಸಮಯ ಎರಡೂವರೆ ಗಂಟೆಗೂ ಅಧಿಕ ಕಾಲವನ್ನು ವ್ಯಯಿಸಿತ್ತು. ನನ್ನ ಹಾಗೂ ಕಿಟ್ಟುವಿನ ಸುತ್ತ ಜನವೋ ಜನ.. ಆ ಜನರಲ್ಲಿ ಹೆಚ್ಚಿನವರು ನನಗೆ ಹಾಗೂ ಕಿಟ್ಟುವಿಗೆ ಸಪೋರ್ಟ್ ಮಾಡಿದ್ದರು. ಏಕೆಂದರೆ ಅದರಲ್ಲಿ ಹಲವರು ಗೋಗಟೆ ಕಾಲೇಜಿನ ವಿರುದ್ಧ ಹೀನಾಯವಾಗಿ ಸೋತಿದ್ದ ಹಲವರು, ಮೋಸದಿಂದಲೂ ಸೋತಿದ್ದ ಮತ್ತೆ ಕೆಲವರು ನಾವಾದರೂ ಗೆಲ್ಲಲಿ ಎಂದು ಹಾರೈಸುತ್ತಲಿದ್ದರು ಎಂಬುದು ಸ್ಪಷ್ಟವಾಗಿತ್ತು. ಮತ್ತೊಂದು ಅರ್ಧಗಂಟೆ ಕಳೆಯಿತು. ಬಹುಶಃ 11 ಗಂಟೆಯಾಗಿರಬೇಕು. ಆಗ ನನಗೆ ಕಿಟ್ಟುವಿನ ಕಡೆಗೆ ಟೆನ್ಶನ್ ಶುರುವಾಯಿತು.
ಏಕೆಂದರೆ ಕಾಲೇಜಿನಲ್ಲೆಲ್ಲ ಅನಾಮತ್ತು ಎರಡೂವರೆ-ಮೂರುಗಂಟೆಗಳ ಕಾಲ ಒಂದು ಕಡೆ ಕುಳಿತವನೇ ಅಲ್ಲ ಕಿಟ್ಟು.. ಎಂತದ್ದೇ ಮ್ಯಾಚಿರಲಿ, ಸೋಲಲಿ, ಗೆಲ್ಲಲಿ.. ಕುಳಿತು ಬೇಜಾರು ಬಂದ ತಕ್ಷಣ `ಸಾಯ್ಲಾ ದಂಟೂ.. ಬ್ಯಾಜಾರ್ ಬಂದ್ ಹೋತಲೆ..ಮ್ಯಾಚು ಬಿಟ್ ಕೊಡ್ತಿ.. ಎದ್ ಹೋಪನಾ..' ಎಂದು ಹೇಳಿ ಎದ್ದುಬಂದು ಬಿಡುತ್ತಿದ್ದ..ಆತನ ಪರಿಸ್ಥಿತಿ ಏನಾಯಿತೆಂದು ನೋಡೋಣ ಎಂದು ಪಕ್ಕದಲ್ಲಿ ನೋಡಿದರೆ .. ಅವನೆಲ್ಲಿ ಕಾಣುತ್ತಾನೆ..? ಸುತ್ತಲೂ ಜನ ತುಂಬಿ ಆತನಿಗೂ ನನಗೂ ಲಿಂಕೇ ಇಲ್ಲದಂತಾಗಿಬಿಟ್ಟಿತ್ತು. ಪಂದ್ಯ ಬೇರೆ ರೋಚಕವಾಗಿತ್ತು. ಟೀಮು 2-0ದಿಂದ ಹಿಂದಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ, ಮ್ಯಾಚಿನ ಕ್ಲೈಮ್ಯಾಕ್ಸ್.. ಹೆಲ್ಪ್ ಪುಲ್ ಮ್ಯಾಚುಗಳು)

Sunday, November 17, 2013

ಬೊಂಬಾಯ್ ಕಮಲಿ ಹಾಗೂ ಚಂದ್ರಕಾಂತನ ಬೆಳಕು

 ಕಮಲಿಯ ಬಾಯಿಗೆ ಬಿದ್ದರೆ ಮುಗಿಯಿತು..
ಹಾಗೊಂದು ಅಘೋಷಿತ ಮಾತು ನಮ್ಮ ಕಡೆ ಚಾಲ್ತಿಯಲ್ಲಿದೆ...
ಚಂದ್ರಕಾಂತ ಮಾಸ್ತರ್ರು ಅದ್ಹೇಗೆ ಕಮಲಿಯ ಬಾಯಿಗೆ ಬಿದ್ದರೋ ಎಂಬುದು ತರ್ಕಕ್ಕೆ ನಿಲುದಂತಹ ಪ್ರಶ್ನೆ..
ಚಂದ್ರಕಾಂತ ಮಾಸ್ತರ್ರು ಹಾಗೂ ಕಮಲಿ ಇಬ್ಬರೂ ನನಗೆ ಪರಿಚಯದವರೇ.. ಇವರ ಪೈಕಿ ಚಂದ್ರಕಾಂತ ಮಾಸ್ತರ್ರು ನನಗೆ ಪ್ರಾಥಮಿಕ ಶಿಕ್ಷಣವನ್ನು ಒಂದೆರಡು ವರ್ಷ ಕಲಿಸಿದರೆ ಕಮಲಿ ಪರಿಚಯದಾಕೆ.. ನನಗಿಂತ ಕನಿಷ್ಟವೆಂದರೂ 50 ವರ್ಷಕ್ಕೆ ದೊಡ್ಡವಳು.. ಆದಕಾರಣ ಕಮಲಿಯನ್ನು ಕಮಲಜ್ಜಿ ಎನ್ನಬಹುದು.. ಆದರೆ ಕಮಲಿಯನ್ನು ಕಮಲಜ್ಜಿ ಎಂದು ಕರೆದರೆ ಅದರ ಸ್ವಾರಸ್ಯ ಹೊರಟುಹೋಗುತ್ತದೆ.. ಆದ್ದರಿಂದ ಕಮಲಿಯನ್ನು ಕಮಲಿ ಎಂದೇ ಕರೆಯುತ್ತೇನೆ..
ಇಂತಹ ಕಮಲಿಯ ಬಾಯಿಗೆ ಚಂದ್ರಕಾಂತ ಮಾಸ್ತರ್ರು ಬಿದ್ದಿದ್ದು ಅದ್ಹೇಗೋ ಗೊತ್ತಿಲ್ಲ.. ಆದರೆ ಅದರಿಂದ ಮಾಸ್ತರ್ರು ಅನುಭವಿಸಿದ ಬವಣೆಯಂತೂ ಹೇಳತೀರದು ಬಿಡಿ.
**
`ಥೋ... ನಿಂಗೆ 21 ಮಾರ್ಕ್ಸು ಕೊಟ್ನನಾ... ತಡಿಯಾ..  21 ಮಾರ್ಕ್ಸು ತಗಳುವಷ್ಟು ಬುದ್ಧಿವಂತ ನೀ ಅಲ್ಲ.. ಅದು 15 ಆಗಬೇಕು..' ಎಂದು ಚಂದ್ರಕಾಂತ ಮಾಸ್ತರ್ರು ಉತ್ತರ ಪತ್ರಿಕೆ ವಾಪಾಸು ಪಡೆದು ಎರಡೆರಡರಂತೆ ಮೂರು ಪ್ರಶ್ನೆಗಳಿಗೆ ಕಡಿಮೆ ಮಾರ್ಕ್ಸ್ ಕೊಡುತ್ತಿದ್ದರೆ ಖುಷಿಯಲ್ಲಿ ತೇಲಾಡುತ್ತಿದ್ದ ನಾನು ಒಮ್ಮೆಲ್ಲೇ ದಿಗ್ಭ್ರಾಂತಿಯಿಂದ ಧರೆಗಿಳಿದು ಹೋಗಿದ್ದೆ...
ಇಂತಹ ಕ್ಯಾಲ್ಕ್ಯುಲೇಶನ್ನಿನ ಚಂದ್ರಕಾಂತ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಹೊಸದಾಗಿ ಬಂದಾಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಹೊಸ ಅಪಾಯಿಂಟ್ ಮೆಂಟ್ ಆದ ಕಾರಣ ನೋಡಲು ಯಂಗಾಗಿದ್ದ ಚಂದ್ರಕಾಂತ ಮಾಸ್ತರ್ರು ಹೊಸಬೆಳಕಿನಂತೆ ಕಾಣುತ್ತಿದ್ದದ್ದಂತೂ ಸುಳ್ಳಲ್ಲ.
ಚಂದ್ರಕಾಂತ ಮಾಸ್ತರ್ರು ನಾನು ಓದುತ್ತಿದ್ದ ಶಾಲೆಗೆ ಬರುವ ಮುನ್ನ ಅನೇಕ ಮಾಸ್ತರ್ರು ಕಲಿಸಿ ಹೋಗಿದ್ದರು. ಬಿನ್ನೇತಿ ಹಾಗೂ ವನ್ನೇತಿಯಲ್ಲಿ ಕಲಿಸಿದ್ದ ಸತೀಶ ಮಾಸ್ತರ್ರು, ಅವರು ತಮ್ಮ ನೆನಪಿಗಾಗಿ ಎಲ್ಲಾ ಮಕ್ಕಳಿಗೆ ಕೊಟ್ಟ ಚೂಪ ಮುಕಳಿ ಲೋಟ ಎಲ್ಲವೂ ಇನ್ನೂ ನೆನಪಿದೆ. ಅದಾದ ನಂತರ ಜಿ. ಎಸ್. ಭಟ್ಟರು ಬಂದವರೇ ನಮ್ಮಲ್ಲಿ ಭೀತಿಯನ್ನು ಹುಟ್ಟು ಹಾಕಿದ್ದರು. ದಿನಕ್ಕೆ ಕನಿಷ್ಟವೆಂದರೂ 10-12 ಗಾಳಿ ಶೆಳಕೆಯನ್ನು ಚಪ್ಪುಗರೆಯುತ್ತಿದ್ದ ಜಿ. ಎಸ್. ಭಟ್ಟರು ನನ್ನಂತಹ ಹುಡುಗರಿಗಂತೂ ಹುಲಿಯೇ ಹೌದು. ಆದರೆ ನಾನು ಜಿ. ಎಸ್. ಭಟ್ಟರಿಂದ ಹೊಡೆತ ತಿಂದಿದ್ದು ಕಮ್ಮಿಯೇ ಬಿಡಿ.. ನನ್ನ ಸೀನಿಯರ್ ಹುಡುಗನೊಬ್ಬನಿದ್ದ ಗಪ್ಪತಿ. ಜಿ.ಎಸ್. ಭಟ್ಟರಿಂದ ಆತನಿಗೆ ದಿನಾ ಬೋನಸ್ ಹೊಡೆತಗಳು ಕಾಯ್ದಿರಿಸಲ್ಪಟ್ಟಿದ್ದವು. ದಿನಾ ಶಾಲೆ ಮುಗಿಸಿ ಬಂದ ನಂತರ ಕಾಲು, ಕೈ, ಬೆನ್ನಮೇಲೆಲ್ಲಾ ಕೆಂಪಡರಿ ರಕ್ತಗಟ್ಟಿದ್ದ ಬಾಸುಂಡೆಗಳನ್ನು ತೋರಿಸಿದಾಗ ಅದನ್ನು ನೆನೆಸಿಕೊಂಡೇ ನನ್ನ ಕಾಲು, ತೊಡೆಗಳು ಪಥರಗುಡುತ್ತಿದ್ದವು. ಇಂತಹ ಜಿ. ಎಸ್. ಭಟ್ಟರು ಇದ್ದಕ್ಕಿದ್ದಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರ ಕುರಿತು ಅನೇಕ ಗಾಳಿ ಸುದ್ದಿಗಳು ನಮ್ಮ ಶಾಲೆಯ ಸುತ್ತಮುತ್ತ ಹಾರಿಬಂದು ಕಿವಿಯ ಮೇಲೆ ಬಿದ್ದು ಹೋಗಿದ್ದವು. ಅದಕ್ಕಿಂತ ಹೆಚ್ಚಾಗಿ ನಮ್ಮ ನಿಟ್ಟುಸಿರಿನ ಗಾಳಿಯ ಬಲವೇ ಜಾಸ್ತಿಯಾಗಿ ಗಾಳಿಮಾತಿನ ಬಲವನ್ನು ದೂರಕ್ಕೆ ಅಟ್ಟಿತ್ತು.
ಇಂತಹ ಜಿ. ಎಸ್. ಭಟ್ಟರು ದುರಂತ ಅಂತ್ಯವಾದ ಒಂದು ವರ್ಷದ ತರುವಾಯ ಬಂದವರೇ ಚಂದ್ರಕಾಂತ ಮಾಸ್ತರ್ರು. ಅವರು ಶಾಲೆಗೆ ಬರುವಾಗ ಆಗಲೇ ತಾರಕ್ಕೋರು, ಗಂಗಕ್ಕೋರು, ಗಡಕರ್ ಮಾಸ್ತರ್ರು ಕಲಿಸುತ್ತಿದ್ದರು. ಇವರ ಪೈಕಿ ಗಡಕರ್ ಮಾಸ್ತರ್ರು ಹೆಡ್ಮಾಸ್ತರ್ರಾಗಿದ್ದರೆ ಉಳಿದವರು ಸಹಶಿಕ್ಷಕರಾಗಿದ್ದರು. ಇವರ ನಡುವೆಯೇ ಕುಳ್ಳೀಶ್ವರ ನಾಯ್ಕ ಮಾಸ್ತರ್ರು, ರಮೇಶ ನಾಯ್ಕರು, ಹರೀಶ ಮಾಸ್ತರ್ರೂ ಕಲಿಸಿದ್ದು ನೆನಪಿದೆ.
ಯುವಕ ಚಂದ್ರಕಾಂತ ಮಾಸ್ತರ್ರು ಬಂದ ಹೊಸತರಲ್ಲಿ ಬಹಳ ಮೃದುವಂತೆ ಕಂಡರು. ಎಲ್ಲ ಮಕ್ಕಳನ್ನೂ ಮಾತನಾಡಿಸಿದಾಗ ನಮಗೆ ಹೊಸ ಹುರುಪು.. ಅಷ್ಟೇ ಅಲ್ಲದೇ ನಾವು ಕ್ರಿಕೆಟ್ಟಾಡಲು ಹೋದಾಗ ತಾವೂ ಬಂದು ಕ್ರಿಕೆಟ್ ಆಟಕ್ಕೆ ನಿಂತಾಗ ನಮಗೆ ಅಪಾರ ಖುಷಿಯಾಗುತ್ತಿತ್ತು. ಆದರೆ ಎಷ್ಟೇ ಸಾರಿ ನಾವು ಅವರನ್ನು ಔಟ್ ಮಾಡಿದಾಗಲೂ ನಾಟೌಟ್ ಎಂದು ಹೇಳಿ ಮತ್ತಷ್ಟು ಬಾಲ್ ಮಾಡುವಂತೆ ಹೇಳಿದಾಗ ಮಾತ್ರ ಮನಸ್ಸಲ್ಲಿ ಹಿಡಿಶಾಪ.
ಹೊಸ ಮಾಸ್ತರ್ರು ಎಂಬ ಕಾರಣಕ್ಕೆ ಸುತ್ತ ಮುತ್ತಲ ಊರುಗಳಲ್ಲಿ  ಅವರ ಕಡೆಗೆ ಸಾಪ್ಟ್ ಕಾರ್ನರ್ ಕೂಡ ಜಾಸ್ತಿಯಿತ್ತು. ಹೊಸ ಮಾಸ್ತರ್ರು, ಬ್ಯಾಚುಲರ್ರಂತೆ ಎಂಬುದೂ ಆಗಿನ ಕಾಲಕ್ಕೆ ದೊಡ್ಡ ಸುದ್ದಿ.
ಅವರು ಬಂದವರೇ ನಮಗೆಲ್ಲ ಮೊಟ್ಟಮೊದಲು ಮಾಡಿದ ಪಾಠವೇ ಬೆಳಕಿನ ಕುರಿತಾದದ್ದು.. ಆದ್ದರಿಂದಲೇ ಅವರಿಗೆ ಚಂದ್ರಕಾಂತನ ಬೆಳಕು ಎಂಬ ಅಡ್ಡ ಹೆ ಸರು ಅದೆಲ್ಲಿಂದಲೋ ಹುಟ್ಟಿಕೊಂಡಿತ್ತು.
`ಸುಬ್ರಾಹ ಹೆಗಡೇರೆ.. ಇವರು ನಮ್ಮ ಶಾಲೆಯ ಹೊಸ ಮಾಸ್ತರ್ರು.. ಇವರಿಗೆ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆಯಾಗಬೇಕಿತ್ತಲ್ಲ..' ಎಂದು ಗಡಕರ್ ಮಾಸ್ತರ್ರು ಹೇಳಿದ ತಕ್ಷಣ ಅಪ್ಪಯ್ಯ `ಥೋ.. ಮಾಸ್ತರ್ರೇ.. ಅದಕ್ಕೆಂತಾ ಕೇಳ್ತಿ.. ನಮ್ಮನೆಗೆ ಬರ್ಲಿ.. ಮದ್ಯಾಹ್ನದ ಒಂದು ಹೊತ್ತಿನ ಊಟ ಸೈಯಲ್ರಾ.. ಖಂಡಿತ ಯಮ್ಮನೆಲಿ ವ್ಯವಸ್ಥೆ ಮಾಡ್ತ್ಯ.. ಆದ್ರೆ ಶಾಲೆಯಿಂದ ಯಮ್ಮನೆ 2.5 ಕಿಲೋಮೀಟರ್ ಆಗ್ತಲ್ರಾ.. ಅದು ತೊಂದ್ರಿಲ್ಲೆ ಹೇಳಾದ್ರೆ ಹೇಳಿ..' ಎಂದಾಗ ಚಂದ್ರಕಾಂತ ಮಾಸ್ತರ್ರು ದೂರಾದರೆ ಏನು ಮದ್ಯಾಹ್ನದ ಊಟವಾದರೆ ಸಾಕು ಎಂದು ಒಪ್ಪಿಕೊಂಡಿದ್ದರು. ಅಲ್ಲಿಂದ ಸರಿಸುಮಾರು 2 ವರ್ಷಗಳ ಪರ್ಯಂತ ನಮ್ಮ ಮನೆಯಲ್ಲಿ ಮಧ್ಯಾಹ್ನದ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರಾಗಿದ್ದರು..
ಹೀಗಿದ್ದ ಚಂದ್ರಕಾಂತ ಮಾಸ್ತರ್ರಿಗೆ ನನ್ನ ಮೇಲೆ ಸಾಪ್ಟ್ ಕಾರ್ನರ್ ಇರಲೇಬೇಕಿತ್ತು.. ಆದರೆ ಅದ್ಯಾಕೆ ನನ್ನ ಮೇಲೆ ವಿಪರೀತ ಸಿಟ್ಟಿತ್ತೋ ಆಗ ಗೊತ್ತೆ ಆಗಿರಲಿಲ್ಲ.. ಕಾರಣವಿಲ್ಲದೇ ಹೊಡೆಯುವುದು, ಶಿಕ್ಷೆ ಕೊಡುವುದು, ಮಾರ್ಕುಗಳನ್ನು ಕಟ್ ಮಾಡುವುದು ಅವರಿಂದ ನಡೆದಿತ್ತು.. ಇಂತಹ ನಡೆಗಳಿಂದಾಗಿ ನಾನು ಅವರನ್ನು ಅನೇಕ ಸಾರಿ ಶಪಿಸಿದ್ದೆ.. ನನ್ನ ಶಾಪ ಅವರಿಗೆ ಯಾವತ್ತೂ ತಾಗಿರಲೇ ಇಲ್ಲ.. ನಾನು ಶಾಪ ಕೊಟ್ಟರೆ ಯಾಕೆ ತಾಗೋದಿಲ್ಲ ಎಂದು ಅನೇಕ ಸಾರಿ ಆಲೋಚಿಸಿದ್ದೆ.. ಉತ್ತರ ಸಿಗದೇ ಹತಾಶೆಯನ್ನೂ ಹೊಂದಿದ್ದೆ..
ಹೀಗಿರುವ ಚಂದ್ರಕಾಂತ ಮಾಸ್ತರ್ರು ತಾವು ಮಾತನಾಡುವಾಗ ಒಂದು ರೀತಿಯ ಕೊಸ ಕೊಸ ಅನ್ನುವ ಶಬ್ದವನ್ನು ಹೊರಡಿಸುತ್ತಿದ್ದರು..  ಅವರ ಮೂಗಿನಲ್ಲಿ ಅದೇನು ಸಮಸ್ಯೆಯಿತ್ತೋ.. ಒಟ್ಟಿನಲ್ಲಿ ಪ್ರಯತ್ನ ಪೂರ್ವಕವಾಗಿಯೋ ಅಥವಾ ಅಪ್ರಯತ್ನದಿಂದಲೋ ಅವರ ಮೂಗಿನಿಂದ ಕೊಸ ಕೊಸ ಎಂಬ ಶಬ್ದ ಬರುತ್ತಿತ್ತು... ಅದಕ್ಕಾಗಿಯೆ ಅವರು ಭಾರಿ ಬೆಲೆ ತೆತ್ತಿದ್ದು ಇತಿಹಾಸ.. ಕೊಸ ಕೊಸ ಚಂದ್ರಕಾಂತ ಎಂದೇ ನಮ್ಮ ಸುತ್ತಮುತ್ತಲ ಬಳಗದಲ್ಲಿ ಹೆಸರು ಗಳಿಸಿಕೊಳ್ಳುವಷ್ಟು ಪರಿಣಾಮವನ್ನು ಉಂಟು ಮಾಡಿತ್ತು..
**
ಕಮಲಿಯ ಬಾಯಿಗೆ ಬಲಿಯಾಗದವರು ಇಲ್ಲವೇ ಇಲ್ಲ ಎಂದು ಮೊದಲೇ ಹೇಳಿದ್ದೆನಲ್ಲ.. ಹೌದು.. ಆಕೆಯ ಬಾಯಿ ಬೊಂಬಾಯಿಯೂ ಹೌದು.. ಜೊತೆಗೆ ಆಕೆ ಸುದ್ದಿಯನ್ನು ಹಬ್ಬಿಸುವವಳೂ ಹೌದು.. ಆದ್ದರಿಂದಲೇ ನಮ್ಮ ಸುತ್ತಮುತ್ತ ಯಾರಾದರೂ ದೊಡ್ಡದಾಗಿ ಕೂಗಿದರೆ `ಎಂತಾ.. ಕಮಲಿಯ ಬಾಯಿ ಮಾಡ್ಕಂಡು ಕೂಗ್ತೆ..' ಎಂದು ಕೇಳುವ ಮಾತು ರೂಢಿಯಾಗಿದೆ.. ಇನ್ನೂ ಹಲವರು ಬೊಂಬಾಯ್ ಕಮಲಿ ಎಂದೂ ಕರೆಯುತ್ತಾರೆ..
ನಾನೂ ಬಾಲ್ಯದಲ್ಲಿ ಕಮಲಿಯ ಬಾಯಿಗೆ ಬಿದ್ದಿದ್ದೆ... ನಮ್ಮ ಬಾಲ್ಯದ ಕಿಲಾಡಿತನಗಳು ಸಾಕಷ್ಟು ಸುಣ್ಣ ಬಣ್ಣ ಕಂಡಿದ್ದರೆ ಅದಕ್ಕೆ ಕಮಲಿಯ ಕೊಡುಗೆ ಸಾಕಷ್ಟಿದೆ.. ಬಹುಶಃ ನನ್ನ ಹರೆಯ ಅಥವಾ post-ಹರೆಯದಲ್ಲಿ ಆಕೆಯ ಬಾಯಿಗೆ ಬೀಳದಿದ್ದುದು ನನ್ನ ಪುಣ್ಯವೇ ಇರಬೇಕು.. ಇದಕ್ಕೆ ಕಾರಣ ಹುಡುಕಿದ್ದೆ.. ಆ-ಈ ಸಂದರ್ಭಗಳಲ್ಲಿ ಆಕೆಯ ಬಾಯಿಗೆ ಬೀಳಲು ಹಲವಾರು ಸಂಗತಿಗಳಿದ್ದವು.. ಆದ್ದರಿಂದ ನಾನು ಬಚಾವಾಗಿದ್ದೆ.. ಇಲ್ಲವಾದರೆ ನನ್ನ ಕುರಿತು ಇನ್ನೂ ಅನೇಕ ಗಾಸಿಪ್ಪುಗಳು ಹಬ್ಬಬಹುದಾಗಿದ್ದವು.. ಅದಿರ್ಲಿ ಬಿಡಿ..
ಚಂದ್ರಕಾಂತ ತನ್ನ ಬೆಳಕನ್ನು ಬೀರುತ್ತಾ ಶಾಲೆಯಿಂದ ನಡೆದು ನಮ್ಮ ಮನೆಯ ಕಡೆ ಬರುತ್ತಿರುವಾಗ ಒಮ್ಮೆ ದಾರಿಮಧ್ಯ ಕಮಲಿ ಸಿಕ್ಕಿದಳು.. ಏರು ಜವ್ವನ ನೋಡಿ.. ತೆಗೆದ ಮಾತಿಗೆ `ಏನಜ್ಜಿ.. ಅರಾಮಾ.. ಈ ಬಿಸಿಲಲ್ಲಿ ಎತ್ತ ಕಡೆ..?' ಎಂದು ಕೇಳಿದ ಸಂದರ್ಭದಲ್ಲಿ ನಾಲ್ಕೈದು ಸಾರಿ ಮೂಗಿನಿಂದ ಕೊಸ ಕೊಸ ಸದ್ದು ಬಂದಿತ್ತು..
ಅದನ್ನು ಕೇಳಿದ ಬೊಂಬಾಯ್ ಕಮಲಿ `ತಮಾ.. ಆ ಇನ್ನೂ ಅಜ್ಜಿ ಆಜ್ನಿಲ್ಯಾ.. ಯಂಗೆ ವಯಸ್ಸೇ ಆಜಿಲ್ಲೆ.. ಯನ್ನ ಈಗ್ಲೆ ಅಜ್ಜಿ ಮಾಡ್ತಾ ಇದ್ದೆ.. ಸೋಜಿದ್ಯನಾ... ಅದೆಂತಕ್ಕೆ ನೀ ಮಾತಾಡಕಿರೆ ಹಂಗೆ ಕೊಸ ಕೊಸ ಗುಡ್ತೆ.. ಎಂತಾ ರೋಗ್ವಾ.? ಬೆಳ್ಳೇಕೇರಿ ಡಾಕ್ಟರ್ ಹತ್ರಾನಾದ್ರೂ ತೋರಿಶ್ಗ್ಯಂಡ್ ಬರಕಾಗಿತ್ತಾ..' ಎಂದು ಕೂಗಾಡಲು ಹಿಡಿದಳು..
ಯಾಕಾದ್ರೂ ಮಾತನಾಡಿದೆನೋ ಅನ್ನುವ ಪರಿಸ್ಥಿತಿ ಚಂದ್ರಕಾಂತ ಮಾಸ್ತರ್ರಿಗೆ.. ಅವರ ಜೊತೆಯಲ್ಲಿ ನಡೆದು ಬರುತ್ತಿದ್ದ ನಾನೂ ಇದಕ್ಕೆ ಪ್ರತಿಯಾಗಿ `ಕಿಸಕ್ಕನೆ..' ನಕ್ಕಿದ್ದೆ.. ಬಹುಶಃ ಇದೇ ಕಾರಣವೇ ನನ್ನ ವಿರುದ್ಧ ಸಿಟ್ಟಿಗೆ ಕಾರಣ ಇರಬಹುದೇನೋ..
ಅದಾಗಿ ಒಂದೊಪ್ಪತ್ತು ಸರಿಯಾಘಿ ಕಳೆದಿರಲಿಲ್ಲ.. ನಮ್ಮೂರು ಹಾಗೂ ಸುತ್ತಮುತ್ತಲೆಲ್ಲ ಚಂದ್ರಕಾಂತಂಗೆ ಕೊಸ ಕೊಸ ರೋಗನಡಾ.. ಎನ್ನುವ ಸುದ್ದಿ ಸದ್ದಿಲ್ಲದೇ ಹಬ್ಬಿತ್ತು.. ಸುದ್ದಿಮೂಲ ಬೊಂಬಾಯ್ ಕಮಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ..
ಪಾ..ಪ ಬ್ರಹ್ಮಚಾರಿ ಮಾಸ್ತರ್ರಿಗೆ ಹಿಂಗಾಗಕಾಗಿತ್ತಿಲ್ಲೆ.. ಎನ್ನುವ ಸಂತಾಪಸೂಚಕ ಮಾತುಗಳೂ ಕೆಲವರ ಬಾಯಿಂದ ಉದುರಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಕ್ಕೆ ತಂದಿತು..ಹೋದಲ್ಲಿ ಬಂದಲ್ಲಿ ಇದೇ ಸುದ್ದಿ.. ಯಾರೂ ಬಾಯಿಬಿಟ್ಟು ಚಂದ್ರಕಾಂತ ಮಾಸ್ತರ್ರ ಬಳಿ ಇದನ್ನು ಹೇಳದಿದ್ದರೂ ಬಾಡಿ ಲ್ಯಾಂಗ್ವೇಜಿನ ಮೂಲಕ ಅರ್ಥವಾಗುತ್ತಿತ್ತು.. ಕೊನೆಗೊಮ್ಮೆ ನನ್ನ ತಂಗಿ ಮಾತಿನ ಭರದಲ್ಲಿ ಚಂದ್ರಕಾಂತ ಮಾಸ್ತರ್ರ ಬಳಿ ಈ ವಿಷಯ ಕೇಳಿದಾಗ ಅವರ ಮುಖ ಹುಳ್ಳಗಾಗಿತ್ತು..
***

ಕಮಲಿಯ ಬಾಯಿಂದ ಹರಿಬಿದ್ದ ಕಥೆಯನ್ನು ಚಂದ್ರಕಾಂತ ಮಾಸ್ತರ್ರು ಹಲಕೆಲವು ದಿನ ಅದ್ಹೇಗೋ ತಡೆದುಕೊಂಡರು.  ಗಾಸಿಪ್ಪಿನ ಸುದ್ದಿ ಕೇಳುವುದು ಹೆಚ್ಚಾದಂತೆಲ್ಲ ನಮಗೆ ಬೀಳುವ ಹೊಡೆತದ ಪ್ರಮಾನವೂ ಜಾಸ್ತಿಯಾಗುತ್ತಿತ್ತು. ನನ್ನ ಜೊತೆಗೆ ಕಲಿಯುತ್ತಿದ್ದ ಅನೇಕ ಸಹಪಾಠಿಗಳು ಚಂದ್ರಕಾಂತ ಮಾಸ್ತರ್ರು ಸೊಕಾ ಸುಮ್ಮನೆ ಹೊಡೆಯುತ್ತಾರೆ ಎನ್ನುವುದನ್ನು ಕಂಪ್ಲೇಂಟ್ ರೂಪದಲ್ಲಿ ಮನೆಯಲ್ಲಿ ಹೇಳುವವರೆಗೂ ಇದು ಮುಂದುವರಿಯಿತು.
ಈ ನಡುವೆ ನಮ್ಮ ಮನೆಯಲ್ಲಿ ಹಿಸೆ ಪಂಚಾಯತಿಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.. ನನ್ನ ಅಪ್ಪ ಒಂದು ಪಕ್ಷದವನಾಗಿದ್ದರೆ ಅಪ್ಪನ ತಮ್ಮಂದಿರೆಲ್ಲ ಇನ್ನೊಂದು ಕಡೆಗೆ. ಊಟಕ್ಕೆ ಬರುತ್ತಿದ್ದ ಚಂದ್ರಕಾಂತ ಮಾಸ್ತರರ ಬಳಿ ನನ್ನ ಚಿಕ್ಕಪ್ಪಂದಿರು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಹಚ್ಚಿಕೊಟ್ಟಾಗ ನನಗೆ ಬೀಳುತ್ತಿದ್ದ ಹೊಡೆತದ ಸಂಖ್ಯೆ ಹೆಚ್ಚಾಗುತ್ತಲಿತ್ತು.. ನಾನು ಹೈರಾಣಾಗುತ್ತಿದ್ದೆ..
***

ಚಂದ್ರಕಾಂತ ಮಾಸ್ತರರ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ಬೊಂಬಾಯ್ ಕಮಲಿಯ ಬಾಯಿ ನನಗಂತೂ ಬಹಳ ಸಂತಸವನ್ನು ತಂದಿತ್ತು.. ಬೊಂಬಾಯ್ ಕಮಲಿಯ ಬೊಂಬಾಯಿಯ ಎಫೆಕ್ಟು ನನ್ನ ತೊಂದರೆಯನ್ನು ತಪ್ಪಿಸುತ್ತಿತ್ತು.. ನಾಲ್ಕಾರು ತಿಂಗಳು ಕಳೆಯುವಷ್ಟರಲ್ಲಿ ಚಂದ್ರಕಾಂತ ಮಾಸ್ತರರ ಬೆಳಕು ಕಳೆದು ಬಸವಳಿದು ಹೋಗಿದ್ದರು.
ಬೊಂಬಾಯ್ ಕಾಟವನ್ನು ಹೇಗಾದರೂ ತಪ್ಪಿಸಿಕೊಂಡಿದ್ದರೆ ಸಾಕು ಎನ್ನುವಷ್ಟಾಗಿತ್ತು.. ಮಾಸ್ತರು ಎಲ್ಲೇ ಹೋದರೂ ಉಭಯಕುಶಲೋಪರಿ ಸಾಂಪ್ರತಕ್ಕಿಂತ ಹೆಚ್ಚಾಗಿ ಅವರ ಕೊಸ ಕೊಸ ಮಾತಿನ ಬಗ್ಗೆಯೇ ಚರ್ಚೆಯಾಗತೊಡಗಿದಾಗ ಮಾಸ್ತರರ ಮನದೊಳಗಿದ್ದ ಅಸಮಧಾನದ ಮೂಟೆ ಭುಗಿಲೆದ್ದು ರೇಗಾಡುತ್ತಿದ್ದರು. ಆದರೂ ಜನರು ಬಿಡಬೇಕಲ್ಲ..

***

ಶಾಲೆಗೆ ಹೆಡ್ಮಾಸ್ತರ್ ಆಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅವರ ಕನಸಿಗೆ ಅಡ್ಡಗಾಲಾಗಿದ್ದು ಬೊಂಬಾಯ್ ಕಮಲಿ ಹಾಗೂ ಆಕೆಯ ಬೊಂಬಾಯ್ ಮಾತುಗಳು.. ಗಡಕರ್ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿ ಹೋದ ನಂತರ ಆ ಸ್ಥಾನಗೆ ತನಗೇ ಸಿಗುತ್ತದೆ ಎಂದು ನಂಬಿಕೊಂಡಿದ್ದರು ಚಂದ್ರಕಾಂತ ಮಾಸ್ತರ್ರು. ಆದರೆ ಅದು ಈಡೇರಲೇ ಇಲ್ಲ. ಆಗ ಶಾಲೆಯಲ್ಲಿ ಸೀನಿಯರ್ ಟೀಚರ್ ಹಾಗೂ ವೃತ್ತಿಯಲ್ಲೂ ಸೀನಿಯರ್ ಆಗಿದ್ದ ತಾರಕ್ಕೋರು ಹೆಡ್ಮಿಸ್ ಆಗುವುದರೊಂದಿಗೆ ಚಂದ್ರಕಾಂತ ಮಾಸ್ತರ್ರ ಬೆಳಕು ಮತ್ತಷ್ಟು ಮಬ್ಬಾಗಿತ್ತು.. ಆದರೂ ತಾರಕ್ಕೋರು ರಜಾದ ಮೇಲಿದ್ದಾಗ ಪ್ರಭಾರಿ ಹೆಡ್ಮಾಸ್ತರ್ರಾಗಿ ಖುಷಿ ಪಟ್ಟು ಸಮಾಧಾನ ಮಾಡಿಕೊಳ್ಳುತ್ತಿದ್ದರು..
ಇಷ್ಟಾದರೂ ಬೊಂಬಾಯ್ ಕಮಲಿಯ ಬಾಯಿ ಅವರ ಪಾಲಿಗೆ ಕಪ್ಪು ಚುಕ್ಕೆಯಾಗಿಯೇ ಉಳಿದುಬಿಟ್ಟಿತು.

**
ಇಷ್ಟೆಲ್ಲ ಹೇಳಿ ಕ್ಲೈಮ್ಯಾಕ್ಸ್ ಹೇಳದಿದ್ದರೆ ಸಿನೇಮಾ ಖುಷಿ ಕೊಡೋದಿಲ್ಲ ನೋಡಿ.. ಬೊಂಬಾಯ್ ಕಮಲಿಯ ಮಾತು ಮತ್ತೂ ಜೋರಾದಾಗ ಹೆದರಿದ ಚಂದ್ರಕಾಂತ ಮಾಸ್ತರ್ರು ಕೊನೆಗೊಮ್ಮೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬೇರೆ ಶಾಲೆಗೆ ಹೋಗುವುದರೊಂದಿಗೆ ಶುಭಂ ಹೇಳಿಬಿಡುತ್ತೇನೆ..
ಅಲ್ಲಿಗೆ ನಮ್ಮ ಪರಿತಾಪವೂ ಕಳೆದಿತ್ತು.. ನನ್ನ ಪ್ರೈಮರಿ ಶಾಲಾ ಜೀವನವೂ ಮುಗಿದಿತ್ತು.. ಚಂದ್ರಕಾಂತ ಮಾಸ್ತರ್ರು ಹೊಸ ಶಾಲೆಯಲ್ಲಿ ಹೆಡ್ಮಾಸ್ತರ್ರಾದರಾ ಎಂಬುದು ಇಂದೂ ಗೊತ್ತಾಗಿಲ್ಲ ನೋಡಿ..

Thursday, November 14, 2013

ನವಿಲುಗರಿ ಬೆಳೆಯಲಿಲ್ಲ

`ನವಿಲುಗರಿ ಬೆಳೆಯುತ್ತಂತೆ!'
ಹಾಗಂತ ಬಾಲ್ಯದೊಳೆಲ್ಲೋ
ಮಿತ್ರ ಉಸುರಿದ್ದ |
ತಂದು, ಯಾವುದೋ ಒಂದು
ಪಟ್ಟಿ ಹಾಳೆಯ ಮಧ್ಯ ಇಟ್ಟು
ಮರೆತದ್ದಾಯ್ತು ||

ಸವಿ ಸವಿದು ಖುಷಿ ತಂದ
ಬಾಲ್ಯವೆಲ್ಲೋ ಓಡಿಹೋಯ್ತು |
ಹೊಸ ಹುರುಪೆಂಬಂತೆ
ಹರೆಯ ಬಂತು, ಬಂದ ವೇಗದಲ್ಲೇ
ಕಾಣದಂತೆ ಓಡಿಹೋಯ್ತು ಕೂಡ..|

ಮುಂದಿನ ಹೆಜ್ಜೆಯೋ, ಸಂಗಾತಿ
ಅರಸೆನ್ನುವ ಯವ್ವನ|
ಅದೆಲ್ಲಿ ಹೋಯ್ತೋ ಗೊತ್ತಿಲ್ಲ |

ಮುಗಿಯಿತು ಮದುವೆ-
ಮಡದಿ-ಮಕ್ಕಳು-ಸಂಸಾರ
ಎಂಬ ಚಕ್ರಬಂಧ |
ಕೊನೆಯವರೆಗೂ ಕಾಡಿ ನಿಂತಿತು
ತುತ್ತಿನ ಚೀಲ ಎಂಬ ದುಡಿತಗಾರ |

ಬಾಲ್ಯದ ಬದುಕ ಬಾಗಿಲಲಿ
ಮುಪ್ಪಡರಿ ನಿಂತಿತು |
ಸನಿಹದ ಸಾವೇ ಕೊನೆಯ
ಬಯಸುವ, ಬಯಸದ ನಿರೀಕ್ಷೆಯಾಯ್ತು |
ನಡುವೆ ಮುಖದ ಮೇಲಣ
ಸುಕ್ಕು ಮೆರೆಯಿತು | ಬೊಚ್ಚು ಬಾಯಿ
ನಕ್ಕಿತು | ಮೊಮ್ಮಕ್ಕಳು
ಮೆರೆದು, ಆಡಿ ಕುಣಿದರು |
ದೃಷ್ಟಿ ಮಂಜಾಯಿತು, ಬದುಕು
ಶಕುತಿ ತಗ್ಗಿ ನಿಂತಿತು |

ಜೀವ ಅಡಗುವ ಮುನ್ನವೆಂದೋ
ಮತ್ತೊಮ್ಮೆ, ಮರೆತ ಪಟ್ಟಿ
ನೆನಪಿಗೆ ಬಂದು, ಅಟ್ಟದ ಸಂದಿಯ
ಮೂಲೆಯಲ್ಲೆಲ್ಲೋ ಸಿಕ್ಕಿತು |

ಮತ್ತದೇ ಪುಟ ತೆರೆದು ನೋಡಿದರೆ
`ನವಿಲುಗರಿ'ಬೆಳೆಯಲೇ ಇಲ್ಲ|
ಇದ್ದ ಹಾಗೇ ಇದೆ |
ಬೆಳೆದಿದ್ದು ಕಳೆದಿದ್ದು ಮಾತ್ರ
ಮಾನವನ ಬದುಕು |

ಮತ್ತೆ ಮೊಮ್ಮಗ ಕೂಡ
ಪಟ್ಟಿ ಮಧ್ಯದಲ್ಲಿ ನವಿಲುಗರಿ
ಇಟ್ಟಾಯಿತು |

(ಇದನ್ನು ಬರೆದಿದ್ದು 5-12-2006ರಂದು ದಂಟಕಲ್ಲಿನಲ್ಲಿ, ಈ ಕವಿತೆಯನ್ನು ಶಿರಸಿಯ ವಿಜಯನಳಿನಿ ರಮೇಶ್ ಅವರ ಮನೆಯಲ್ಲಿ 28-07-2007ರಂದು ನಡೆದ ಕವಿ ಕಾವ್ಯ ಬಳಗದ ಕವಿಗೋಷ್ಟಿಯಲ್ಲಿ ವಾಚನ ಮಾಡಿದ್ದೇನೆ.)
(ನಿನ್ನ ವಯಸ್ಸಿಗೆ ಪ್ರೇಮಕ ಕವಿತೆ ಬರೆಯಬೇಕು. ಆದರೆ ಈ ಥರಹದ ಕವಿತೆ ಬರೆದಿದ್ದೀಯಾ ಎಂದರೆ ಆಲೋಚನೆ ಮಾಡಬೇಕಿದೆ.. ಪ್ರೇಮಕವಿತೆ ಬರೆಯಲು ಮುಂದಾಗು.. ಉಳಿದ ಕವಿತೆಗಳು ಜೊತೆಗೆ ಬರುತ್ತವೆ ಎಂದು ಈ ಕವಿತೆಯ ಕುರಿತು ಖ್ಯಾತ ವಿಮರ್ಷಕ, ಗುರುಗಳಾದ ಶ್ರೀ ಆರ್. ಡಿ. ಹೆಗಡೆ ಆಲ್ಮನೆ ಅವರು ಹೇಳಿದ್ದರು.)