Thursday, October 17, 2013

ಬಲಿಪಶು (ಕಥೆ)

    ಶಿರಸಿಯ ದೊಡ್ಡ ಆಸ್ಪತ್ರೆ. ಅಲ್ಲಿಯ ಮಹಡಿಯ ಕೊಠಡಿಯೊಂದರಲ್ಲಿ ನಾನು ಮಲಗಿದ್ದೆ. ಮೈತುಂಬಾ ಬ್ಯಾಂಡೇಜು ಸುತ್ತಲಾಗಿತ್ತು. ಕಾಲಿನ ಮೂಳೆಯೊಂದು ಮುರಿದಿದ್ದರಿಂದ ಕಾಲಿಗೆ ತುಸು ದೊಡ್ಡದಾದ ಬ್ಯಾಂಡೇಜನ್ನು ಹಾಕಲಾಗಿತ್ತು. ತಲೆ, ಮುಖಗಳಿಗೆಲ್ಲಾ ಪೆಟ್ಟು ಬಿದ್ದಿದ್ದ ಪರಿಣಾಮ ಅಲ್ಲೆಲ್ಲಾ ಬ್ಯಾಂಡೇಜುಗಳನ್ನು ಹಾಕಿದ್ದರು. ನಾನು ಅಲ್ಲಿ ನನ್ನ ದೇಹವನ್ನು ಕೊಂಚವೂ ಅಲ್ಲಾಡಿಸಲು ಅಸಾಧ್ಯ ಎನ್ನುವಂತೆ ಮಲಗಿದ್ದೆ. ಅದೆಷ್ಟು ದಿನವಾಗಿತ್ತೋ ಗೊತ್ತಿ.. ಕನಿಷ್ಟವೆಂದರೂ ಹದಿನೈದು ದಿನಗಳು ಸಂದಿರಬಹುದು. ಆದರೆ ಕಳೆದ ಒಂದೆರಡು ಗಂಟೆಗಳ ಹಿಂದೆ ಅರೆಬರೆ ಪ್ರಜ್ಞೆ ಬಂದಿತ್ತು. ಸಂಪೂರ್ಣ ಪ್ರಜ್ಞೆ ಬರಲು ಕೆಲ ಕಾಲ ಹಿಡಿಯಿತು.
    ಒಂದೆರಡು ದಿನ ಕಳೆದವು. ಎಲ್ಲರ ಆರೈಕೆಯಿಂದಾಗಿ ನಾನು ನಿಧಾನವಾಗಿ ಎದ್ದು ಕುಳಿತುಕೊಳ್ಳುವಂತಾಗಿದ್ದೆ. ಆಗ ನನಗೆ ನಿಧಾನವಾಗಿ ನಡೆದಿದ್ದೆಲ್ಲವೂ ಜ್ಞಾಪಕಕ್ಕೆ ಬರತೊಡಗಿತು. ನಾನು ಕ್ರಮೇಣ ನೆನಪಿನ ಆಳಕ್ಕೆ ಇಳಿದೆ. ಮೊದಮೊದಲು ಅಸ್ಪಷ್ಟವಾಗಿ ನಂತರ ನಿಚ್ಚಳವಾಗಿ ಘಟನೆಗಳೆಲ್ಲ ನೆನಪಾಯಿತು. ಹಾಗೆ ಸುಮ್ಮನೇ ವಿಷಾದವೊಂದು ಸುಳಿದುಹೋಯಿತು. ಕಣ್ಣಿನ ಮುಂದೆ ನಡೆದ ಘಟನೆ ಪರದೆಯಂತೆ ಸರಿಯುತ್ತಿತ್ತು. ಪಕ್ಕನೆ ಎಚ್ಚರಾದಂತಾಯಿತು. ಎದ್ದು ಕುಳಿತು ನೋಡಿದರೆ ಡಾಕ್ಟರಾದಿಯಾಗಿ ಒಂದೆರಡು ಜನ ನನ್ನ ಮುಂದೆ ಕುಳಿತು ಕುತೂಹಲದಿಂದ ದಿಟ್ಟಿಸುತ್ತಿದ್ದಾರೆ. ವೈದ್ಯರು ಮುಂದೆ ಕುಳಿತು ಪರಿಕ್ಷಾರ್ಥವಾಗಿ ನನ್ನನ್ನು ನೋಡುತ್ತಿದ್ದರೆ ಅವರ ಹಿಂಬದಿಯಲ್ಲಿ ಭಯಭೀತರಾಗಿ ಅಮ್ಮ ನಿಂತು ಮುಂದೇನು ಎಂಬಂತೆ ಗಮನಿಸುತ್ತಿದ್ದಳು.
    ಡಾಕ್ಟರು ನನ್ನ ಬಳಿ `ಹಲೋ.. ಹೇಗಿದ್ದೀರಿ..?' ಎಂದರು. ನಾನು ಸನ್ನೆಯಲ್ಲಿಯೇ ಮುಗುಳುನಕ್ಕು ಚನ್ನಾಗಿದ್ದೇನೆ ಎಂದೆ. ನಂತರ ಅವರು `ಈಗ ತಲೆನೋವು ಹೇಗಿದೆ' ಎಂದರು. ನಾನು ನಿಧಾನವಾಗಿ `ಪರವಾಗಿಲ್ಲ ಡಾಕ್ಟ್ರೆ..' ಎಂದೆ
    `ಡೋಂಟ್ ವರಿ.. ಇನ್ನೊಂದೆರಡು ವಾರದಲ್ಲಿ ನೀನು ಹುಷಾರಾಗಬಲ್ಲೆ.. ನಿನ್ನ ವಿಲ್ ಪವರ್ ಚನ್ನಾಗಿದೆ. ಅದೇ ನಿನ್ನನ್ನು ಉಳಿಸಿದೆ..' ಎಂದರು.. ನಾನು `ಥ್ಯಾಂಕ್ಸ್..' ಎಂದೆ..
    ಅದಾಗಿ ಒಂದೆರಡು ದಿನ ಡಾಕ್ಟರ್ ಬಂದು ಚೆಕಪ್ ಮಾಡಿ ಹೋಗುತ್ತಿದ್ದರು.. ಅಷ್ಟರಲ್ಲಿ ನಾನು ಎಷ್ಟೋ ಸುಧಾರಿಸಿದ್ದೆ. ಕೊನೆಗೊಂದು ದಿನ ತಮ್ಮ ಕೆಲಸ ಮುಗಿಸಿ ಬಂದ ಡಾಕ್ಟರ್ ನನ್ನ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದರು.. ನಾನೂ ಹೊತ್ತು ಹೋಗದ ಕಾರಣ ಮಾತನಾಡತೊಡಗಿದೆ.. ಅವರು ತಮ್ಮ ಕುಟುಂಬ ಸೇರಿದಂತೆ ಹಲವು ವಿಷಯಗಳನ್ನು ನನ್ನೆದುರು ಬಿಚ್ಚಿಟ್ಟರು.. ಅದ್ಯಾಕೆ ಹಾಗೆ ಮಾಡಿದರೋ ನನಗೆ ಅರ್ಥವಾಗಲಿಲ್ಲ. ನನ್ನೆಡೆಗೆ ಅವರಿಗೆ ಕುತೂಹಲ ಇರಬಹುದು.. ನಾನ್ಯಾಕೆ ಗಾಯಗೊಂಡು ಆಸ್ಪತ್ರೆಯನ್ನು ಸೇರುವಂತಾಯ್ತು..? ನಾನು ಅರೆಪ್ರಜ್ಞಾವಸ್ತೆಗೆ ಮರಳಲು ಏನು ಕಾರಣ ಇತ್ಯಾದಿ ಗೊಂದಲಗಳು ಕಾಡಿರಬಹುದು.. ನನ್ನ ಮನೆಯವರು ಈ ಕುರಿತು ಹೇಳಿದರೂ ನನ್ನ ಬಳಿ ಸ್ಪಷ್ಟವಾಗಿ ತಿಳಿದುಕೊಳ್ಳುವ ಇಚ್ಛೆಯೂ ಇರಬಹುದು.. ಅಂತೂ ಮಾತಿಗೆ ನಿಂತರು.. ವಿಷಯಕ್ಕೂ ಬಂದರು..
    ನಾನು ನನ್ನೊಳಗಿದ್ದ ಆ ಘಟನೆಯನ್ನು ಅವರೆದುರು ನಿಧಾನವಾಗಿ ಹೇಳಲು ಆರಂಭಿಸಿದೆ..

******

    ಅದು ಶಿರಸಿಯ ದೊಡ್ಡ ಕಾಲೇಜು.. ಅಲ್ಲಿ ನಾನು ಕೊನೆಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ. ಈ ಸಾರಿಯ ಪರೀಕ್ಷೆಯೊಂದು ಚನ್ನಾಗಿ ಆಗಿಬಿಟ್ಟಿತೆಂದರೆ ರ್ಯಾಂಕ್ ಕಟ್ಟಿಟ್ಟ ಬುತ್ತಿ ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕೆ ತಕ್ಕಂತೆ ನನ್ನ ತಾಲೀಮೂ ಇತ್ತು.
    ಕಾಲೇಜಿನ ಆರಂಭದ ದಿನಗಳಿಂದಲೂ ಕಾಲೇಜಿನಲ್ಲಿ ನಾನು ಇಬ್ಬರು ಪರಮಾಪ್ತ ಮಿತ್ರರನ್ನು ಹೊಂದಿದ್ದೆ. ಒಬ್ಬನ ಹೆಸರು ವಿಶಾಲ್ ಇನ್ನೊಬ್ಬಾತ ಕುಮಾರ. ಇಬ್ಬರೂ ಶಿರಸಿಯವರೇ ಆಗಿದ್ದರು. ನಾನು ಮಾತ್ರ ಹಳ್ಳಿಯಿಂದ ಬಂದವನಾಗಿದ್ದೆ. ಈ ಇಬ್ಬರೂ ಪರಮ ಮುಂಗೋಪಿಗಳು. ಎದುರು ಸಿಟ್ಟಿನವರು.. ನಾನು ಶಾಂತಿದೂತ. ನನಗೂ ಇವರಿಗೂ ಅದ್ಯಾವ ಮಾಯೆಯಲ್ಲಿ ಸ್ನೇಹವಾಯಿತೋ ಗಿತ್ತಿಲ್ಲ. ನಮ್ಮ ಗೆಳೆತನ ಕಾಲೇಜಿನ ಕಿಟಕಿ ಬಾಗಿಲುಗಳಿಗೆ, ಬೇಂಚು ಡೆಸ್ಕುಗಳಿಗೆ ಗೊತ್ತಿತ್ತು.. ಅಷ್ಟೇ ಏಕೆ ವಾರಕ್ಕೊಮ್ಮೆ ಕದ್ದುಮುಚ್ಚಿ ನೋಡುವ ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಖುರ್ಚಿಗಳಿಗೂ ಗೊತ್ತಿತ್ತು.. ರಿಸರ್ವ್ ಕೂಡ ಆಗಿತ್ತು. ಈ ಇಬ್ಬರೂ ಸಾಕಷ್ಟು ದುಡ್ಡಿದ್ದವರಾಗಿದ್ದರೂ ಅಷ್ಟೇನೂ ಸ್ಥಿತಿವಂತನಾಗಿಲ್ಲದ ನಾನು ಅವರ ಪಾಲಿಗೆ ದೋಸ್ತನಾಗಿದ್ದೆ. ಹಣದ ವಿಷಯದಲ್ಲಿ ಅವರು ನನ್ನ ಪಾಲಿಗೆ ಗಾಡ್ ಫಾದರ್ ಆಗಿದ್ದರೆ ಪಠ್ಯದ ಚಟುವಟಿಕೆಗಳಿಗೆ ನಾನು ಅವರ ಪಾಲಿನ ವೀಕೀಪೀಡಿಯಾ ಆಗಿದ್ದೆ. ನಮ್ಮ ಕಾಲೇಜು ಜೀವನದ ಮೊದಲೆರಡು ವರ್ಷ ಇದೇ ಅಲೆಯಲ್ಲಿ ಏರಿಳಿಯುತ್ತಾ ಸಾಗಿತ್ತು.. ಬಹು ಸಂತಸದ ದಿನಗಳಾಗಿ ಸಾಗಿದ್ದವು.
    ಹೀಗಿರಲೊಂದು ದಿನ ಕಾಲೇಜಿನ ಕೊನೆಯ ವರ್ಷದ ಸಂಸತ್ ಚುನಾವಣೆ ಹತ್ತಿರಕ್ಕೆ ಬಂದಿತು. ನಮ್ಮ ಮೂವರಲ್ಲಿ ಸ್ವಲ್ಪ ಹುಡುಗಾಟದ ಸ್ವಭಾವದ ನಾನು ನನ್ನಿಬ್ಬರು ದೋಸ್ತರನ್ನೂ ಚುನಾವಣೆಗೆ ನಿಲ್ಲಿಸಿದೆ. ಬೇರೆ ಬೇರೆ ಕಾಂಬಿನೇಶನ್ನಿನ ಈ ಇಬ್ಬರೂ ದೋಸ್ತರು ನನ್ನ ಒತ್ತಾಯದ ಸುರಿಮಳೆಗೆ ಬಲಿಯಾಗಿ ಚುನಾವಣೆಗೆ ನಿಂತರು. ಅಷ್ಟೇ ಅಲ್ಲದೇ ನಾನೂ ಚುನಾವಣೆಗೆ ನಿಲ್ಲುವಂತೆ ಮಾಡಿದರು.
    ಅದೊಂದು ದುನ ಚುನಾವಣೆಯೂ ನಡೆಯಿತು. ಆಶ್ಚರ್ಯವೆಂಬಂತೆ ಆ ಚುನಾವಣೆಯಲ್ಲಿ ನಾವು ಮೂರೂ ಜನ ಆರಿಸಿ ಬಂದಿದ್ದೆವು. ಬಹುಶಃ ಇದೇ ನನ್ನ ಹಣೆಬರಹ ಹಾಳಾಗಲು ಕಾರಣವೇನೋ ಅನ್ನಿಸಿತು. ನಮ್ಮ ಬದುಕು ಅಡ್ಡದಾರಿಯಲ್ಲಿ ಹೊರಳಲೂ ಇದೂ ಕಾರಣವಾಯಿತು. ತಮಾಷೆಗೆ ಚುನಾವಣೆಗೆ ಸ್ಪರ್ಧಿಸಿದ್ದ ನಾವು ಸೀರಿಯಸ್ಸಾಗಿ ಗೆದ್ದ ಪರಿಣಾಮ ನಮ್ಮ ಬದುಕು ಸೀರಿಯಸ್ಸಾಯಿತು. ಈ ಸಾರಿ ಮಾತ್ರ ನಾನು ಎಷ್ಟು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದ ವಿಶಾಲ ಹಾಗೂ ಕುಮಾರ ವಿದ್ಯಾರ್ಥಿ ಯೂನಿಯನ್ನಿನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು.
    ಇದರ ಲಾಭವನ್ನು ಪಡೆದುಕೊಂಡ ಕೆಲವು ವ್ಯಕ್ತಿಗಳು, ನಮಗಾಗದವರು ವಿಶಾಲ ಹಾಗೂ ಕುಮಾರನ ನಡುವೆ ದ್ವೇಷದ ಬೀಜವನ್ನು ಬಿತ್ತಿದರು. ಈ ಇಬ್ಬರೂ ಇದರ ಪರಿಣಾಮವಾಗಿ ಪ್ರಭಲ ದ್ವೇಷಿಗಳಾಗಿ ಬದಲಾದರು. ಅಷ್ಟೇ ಅಲ್ಲದೇ ಸುತ್ತಮುತ್ತ ಜೊತೆಗಾರರನ್ನು ಕಟ್ಟಿಕೊಂಡು ಗ್ಯಾಂಗ್ ಮನ್ನುಗಳಾಗಿ ಬದಲಾದರು. ಒಬ್ಬರನ್ನು ಕಂಡರೆ ಮತ್ತೊಬ್ಬರು ಸಾಯಿಸುವಷ್ಟು ದ್ವೇಷಪಡಲಾರಂಭಿಸಿದರು. ನಾನು ಮಾತ್ರ ಇಬ್ಬರ ನಡುವೆ ಸಂಧಾನದ ಹಲವು ವಿಫಲ ಯತ್ನಗಳನ್ನು ನಡೆಸಿದೆ. ಸುಸ್ತಾಗಿ ಏಕಾಂಗಿಯಾದೆ. ಹಾಗೆಮದು ಈ ಇಬ್ಬರೂ ನನ್ನ ಬಳಿ ಚನ್ನಾಗಿಯೇ ಇದ್ದರು. ಆದರೆ ತಮ್ಮಲ್ಲಿ ಮಾತ್ರ ಸಿಟ್ಟಿನ ಬೆಟ್ಟವನ್ನೇ ಹೊಂದಿದ್ದರು.
    ಕೊನೆಯದಾಗಿ ಕಾರ್ಯದರ್ಶಿಯ ಆಯ್ಕೆಗಾಗಿ ಚುನಾವಣೆ ಬಂದಿತು. ಆ ದಿನ ನಾನು ಹಲವು ಕಾರಣಗಳಿಂದಾಗಿ ಕಾಲೇಜಿಗೆ ಹೋಗಲು ಆಗಲೇ ಇಲ್ಲ. ಮರುದಿನ ಹೋದೆ. ಆಗ ತಿಳಿಯಿತು ವಿಶಾಲ್ ಹಾಗೂ ಕುಮಾರ ಇಬ್ಬರಿಗೂ ಸಮನಾದ ಮತಗಳು ಬಿದ್ದಿದ್ದವು ಎಂಬುದು. ಅಂತಿಮವಾಗಿ ಗೆಲುವಿನ ನಿರ್ಧಾರ ಮಾಡುವುದು ನನ್ನ ಮತ ಎನ್ನುವುದನ್ನು ತಿಳಿದು ಗೊಂದಲದಲ್ಲಿ ಮುಳುಗಿದೆ. ಹೇಗಾದರೂ ಮಾಡಿ ತೊಂದರೆ ತಪ್ಪಿದರೆ ಸಾಕಪ್ಪಾ ಅಂದುಕೊಂಡಿದ್ದವನಿಗೆ ಏನು ಮಾಡಿದರೂ ಸಮಸ್ಯೆ ಬಿಡಲೊಲ್ಲದು.
    ತಮಗೇ ಮತ ಹಾಕಬೇಕೆಂದು ವಿಶಾಲ ಹಾಗೂ ಕುಮಾರ ಇಬ್ಬರೂ ಸಾಕಷ್ಟು ಆಮಿಷಗಳ ಜೊತೆಗೆ ಚಿಕ್ಕ ಪ್ರಮಾಣದ ಬೆದರಿಕೆಯನ್ನೂ ಒಡ್ಡಿದ್ದರು. ಏನು ಮಾಡೋದು ಎನ್ನುವ ಸಂದಿಗ್ಧತೆ ನನ್ನದಾಗಿತ್ತು. ಆದರೂ ಹಲವು ಕ್ಷಣಗಳ ಕಾಲ ಆಲೋಚನೆಯನ್ನು ಮಾಡಿ ಕೊನೆಗೆ ವಿಶಾಲನಿಗೆ ಮತವನ್ನು ಹಾಕಿದೆ. ನಾನು ಹಾಗೇಕೆ ಮಾಡಿದ್ದೆಂದು ಈಗಲೂ ಅರ್ಥವಾಗಿಲ್ಲ. ನನ್ನ ಮತದಿಂದಾಗಿ ವಿಶಾಲ ಕಾಲೇಜಿನ ಕಾರ್ಯದರ್ಶಿಯಾಗಿ ಆಯ್ಕೆಯಾದ. ಈಗಲಾದರೂ ಅವರೀರ್ವರ ನಡುವಣ ವೈರತ್ವ, ವೈಶಮ್ಯ ಕಡಿಮೆಯಾಗಬಹುದು ಎಂದು ಆಲೋಚಿಸಿದೆ. ಆದರೆ ಹಾಗಾಗಲೇ ಇಲ್ಲ.
    ಅವರು ಹಾಗೂ ಅವರ ಗುಂಪು ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಹಳಿಯಬೇಕು, ತುಳಿಯಬೇಕು ಎಂದು ಕಾಯುತ್ತಲೇ ಇದ್ದವು. ಅವರಿಗಿಂತ ತಾವು ಕಡಿಮೆಯಿಲ್ಲ, ನಾವೇ ಹೆಚ್ಚಿನವರು ಎನ್ನಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಹೀಗಿದ್ದಾಗಲೇ ಕಾಲೇಜಿನ ಕ್ರೀಡಾ ವಿಭಾಗಗಳಲ್ಲಿ, ಹಲವು ಕ್ರೀಡೆಗಳಲ್ಲಿ ಕುಮಾರ ಹಾಗೂ ಆತನ ಜೊತೆಗಾರರೇ ಗೆಲುವು ಜಯಗಳಿಸಿದ್ದರು. ಇದು ವಿಶಾಲನಿಗೆ ಸಿಟ್ಟನ್ನು ತರಿಸಿತ್ತು. ಅವನು ಹೇಗಾದರೂ ಮಾಡಿ ಒಂದು ವಿಷಯದಲ್ಲಾದರೂ ಕುಮಾರನನ್ನು ಸೋಲಿಸಬೇಕು ಎಂದು ಕಾಯುತ್ತಿದ್ದ.
    ಕೊನೆಗೆ ಬಿ.ಎಸ್ಸಿ ಪರೀಕ್ಷೆಗಳು ಹತ್ತಿರಬಂದವು. ಇಲ್ಲೂ ಪುನಃ ಮೇಲಾಟ, ತುಳಿದಾಟ, ಹಗೆ, ವೈಶಮ್ಯಗಳು ಮೆರೆದವು. ಅವರಿಬ್ಬರೂ ತಮ್ಮ ತಮ್ಮ ಗ್ಯಾಂಗಿನಿಂದ ಒಬ್ಬ ವ್ಯಕ್ತಿಯಾದರೂ ರ್ಯಾಂಕ್ ಬರಬೇಕು ಎಂದು ಬಯಸಿದರು.
    ತಾವೇ ಓದಿ ರ್ಯಾಂಕ್ ಗಳಿಸಲು ಪ್ರಯತ್ನ ಮಾಡುವುದನ್ನು ಬಿಟ್ಟು ಅವರಿಬ್ಬರೂ ತಮ್ಮ ಗ್ಯಾಂಗುಗಳ ಸಮೇತ ನನ್ನ ಬಳಿ ಬಂದರು. ನಾನು ಆಗ ಕಾಲೇಜಿನ ರ್ಯಾಂಕ್ ವಿದ್ಯಾರ್ಥಿ. ರ್ಯಾಂಕ್ ಪಡೆಯುವುದರಲ್ಲಿ ಎಲ್ಲರಿಗಿಂತ ಮುಂದಿದ್ದ ಕಾರಣ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನನಗೆ ಮತ್ತೆ ಉಭಯ ಸಂಕಟ ಹಾಗೂ ಪೇಚಾಟ.. ಏನು ಮಾಡುವುದಕ್ಕೂ ಬಗೆ ಹರಿಯಲಿಲ್ಲ. ಕೊನೆಗೆ ಮತ್ತೆ ಯೋಚನಾ ಲಹರಿಯನ್ನು ಕೈಗೊಂಡು ಈ ಸಾರಿ ಕುಮಾರನ ಜೊತೆಗೆ ಇರುವುದೆಂದು ನಿರ್ಧಾರ ಮಾಡಿದೆ. ಚುನಾವಣೆಯಲ್ಲಿ ವಿಶಾಲನ ಪರವಾಗಿ ಮತಹಾಕಿದ್ದರಿಂದ ಈ ಸಾರಿ ಕುಮಾರನ ಜೊತೆಗೆ ಇರಬೇಕು ಇದರಿಂದಾಗಿ ಇಬ್ಬರಿಗೂ ನ್ಯಾಯ ದೊರಕಿಸಿದಂತಾಗುತ್ತದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ನಿರ್ಧಾರದಿಂದ ವಿಶಾಲ ಸಿಟ್ಟಾಗಿಬಿಟ್ಟ. ಸಿಟ್ಟಿನಿಂದ ಆತ `ಏಯ್.. ನಾನ್ ನಿನ್ನ ಸುಮ್ನೆ ಬಿಡೋದಿಲ್ವೋ.. ಒಂದು ಕೈ ನೋಡ್ಕೋತೀನಿ..' ಎಂದು ಬೆದರಿಸಿ ಅಲ್ಲಿಂದ ಹೋದ.. ನಾನು ಈ ಘಟನೆಯನ್ನು ತಮಾಷೆಯೆಂದುಕೊಂಡು ಸುಮ್ಮನೆ ಬಿಟ್ಟುಬಿಟ್ಟೆ.
    ಹಲವು ದಿನಗಳು ಕಳೆದವು... ಕೊನೆಗೆ ಪರೀಕ್ಷೆಗೆ ಒಂದು ವಾರವಷ್ಟೇ ಉಳಿದಿತ್ತು. ನಾನು ಆ ದಿನ ಕಾಲೇಜಿಗೆ ಬಂದವನು ನನ್ನ ಹಾಲ್ ಟಿಕೆಟ್ ಪಡೆದು ಕಾಲೇಜಿನಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಮಡು ಬರುತ್ತಿದ್ದೆ. ಇನ್ನೇನು ದೇವಿಕೆರೆಯನ್ನು ದಾಟಿ ತಿರುವಿನಲ್ಲಿ ಮುನ್ನಡೆಯಬೇಕೆನ್ನಿಸುವಷ್ಟರಲ್ಲಿ ಎದುರಿನಿಂದ ಒಂದು ಟೆಂಪೋ ಬಂತು. ನಾಲ್ಕಾರು ಜನ ಹುಡುಗರು ಸರಸರನೆ ಇಳಿದರು. ಅವರೆಲ್ಲರ ಕೈಯಲ್ಲಿ ತರಹೇವಾರಿ ಆಯುಧಗಳಿದ್ದವು. ದೊಣ್ಣೆ, ರಾಡು, ಚೈನು ಇನ್ನೂ ಏನೇನೋ.. ನಾನು ವಿಸ್ಮಯದಿಂದ ನೋಡುತ್ತಿದ್ದಂತೆಯೇ ಆ ಗುಂಪು ನನ್ನ ಮೇಲೆ ಮುಗಿಬಿದ್ದು ಬಿಟ್ಟಿತು. ದಾಳಿ ಮಾಡಿತು. ಒಂದೆರಡು ಹೊಡೆತ ಬಿದ್ದಿದ್ದಷ್ಟೇ ನೆನಪು. ನಂತರ ಎಚ್ಚರಾದಾಗ ನಾನು ಇಲ್ಲಿ ಬಿದ್ದುಕೊಂಡಿದ್ದೆ.

*****

    ಇದು ನನ್ನ ಕತೆ ಡಾಕ್ಟ್ರೆ.. ಈಗ ಹೇಳಿ ನಾನು ಇದಕ್ಕೇನು ಮಾಡಬೇಕು..? ಈಗ ಪರೀಕ್ಷೆಗಳೆಲ್ಲ ಮುಗಿದು ಹೋಗಿದೆ. ನಾನು ರ್ಯಾಂಕ್ ಪಡೆಯಬೇಕೆಂಬುದು ಪರಮಗುರಿಯಾಗಿತ್ತು.. ಆದರೆ ನನ್ನ ಕನಸೆಲ್ಲಾ ನುಚ್ಚು ನೂರಾಗಿ ಹೋಯಿತು.. ಎಂದು ಬಿಕ್ಕಳಿಸಿದೆ.
    ಬೇರೆ ಇನ್ನೇನನ್ನೋ ಆಲೋಚಿಸುತ್ತಿದ್ದ ಡಾಕ್ಟರ್ `ಅಲ್ಲಪ್ಪಾ ನಿನ್ನನ್ನು ಹೊಡೆದವರನ್ನೆಲ್ಲ ಪೊಲೀಸರು ಅರೆಸ್ಟು ಮಾಡ್ಕೊಂಡು ಹೋಗಿದ್ದಾರಲ್ಲಾ..' ಎಂದರು.
    `ಇನ್ನು ಅವರನ್ನು ಅರೆಸ್ಟ್ ಮಾಡಿ ಏನು ಪ್ರಯೋಜನ ಹೇಳಿ.. ನಾನು ನನ್ನ ದೋಸ್ತರನ್ನು ಚುನಾವಣೆಗೆ ನಿಲ್ಲಿಸಲೇ ಬಾರದಿತ್ತು. ಅದೇ ಇಷ್ಟಕ್ಕೆಲ್ಲ ಕಾರಣವಾಯಿತು.. ನನ್ನ ವಿಲಕ್ಷಣ ನಿರ್ಧಾರಗಳು ಮತ್ತೂ ವಿಕೋಪವನ್ನು ಉಂಟುಮಾಡಿತು. ಕೊನೆಗೆ ನನ್ನ ಆತ್ಮೀಯ ಗೆಳೆಯ ವಿಶಾಲನೇ ನನ್ನ ಮೇಲೆ ಹಲ್ಲೆ ಮಾಡಿಸಿದ.. ನಾನು ಅವರನ್ನು ಚುನಾವಣೆಗೆ ನಿಲ್ಲಿಸಿದ ತಪ್ಪಿಗೆ ಹಾಸಿಗೆ ಸೇರುವಂತಾಯಿತು..' ಎಂದು ಚೀರಿದೆ.
    ಡಾಕ್ಟರ್ ಅಸ್ಪಷ್ಟವಾಗಿ `ಛೇ.. ನಿನಗೆ ಹೀಗಾಗಬಾರದಿತ್ತು..' ಎಂದರು
    ಆಗ ನಾನು `ನಾನು ಮಾಡಿದ್ದಕ್ಕೆ ನನಗೆ ಹೀಗಾಯ್ತಾ ಎನ್ನುವ ಗೊಂದಲ ಇದೆ.. ಒಟ್ಟಿನಲ್ಲಿ ನಾನು ಇಲ್ಲಿ ಬಲಿಪಶು ಆಗಿಬಿಟ್ಟೆ. ವಿಧಿ ನನ್ನನ್ನು ಬಲಿಪಶು ಮಾಡಿತು. ನನ್ನ ಅದೃಷ್ಟ ನೆಟ್ಟಗಿರಲಿಲ್ಲ.. ಯಾವಾಗಲೋ ವಿಧಿಯನ್ನು ನಾನು ಹಳಿದಿದ್ದೆನೇನೋ.. ಅದಕ್ಕೆ ಈ ರೂಪದಲ್ಲಿ ಈಗ ನನ್ನನ್ನು ಅದು ಕಾಡುತ್ತಿದೆ.. ಎಂದು ಅರಚಿದೆ..
    ಇದನ್ನು ಕೇಳಿದ ಡಾಕ್ಟರ್ `ಬಹುಶಃ ಬಡವರು ಪ್ರತಿಭಾವಂತರಾಗಿದ್ದರೆ ಹೀಗೆ ಆಗುತ್ತೇನೋ.. ಅವರ ಪಾಲಿಗೆ ಅದೃಷ್ಟವೆಂಬುದು ಗಗನಕುಸುಮವೇ ಹೌದೇನೋ..' ಎಂದು ಹೇಳಿ ದೋರ್ಘ ನಿಟ್ಟುಸಿರನ್ನು ಬಿಟ್ಟರು..
    ಆ ನಿಟ್ಟುಸಿರು ನನಗೆ ಒಂದು ಕ್ಷಣದಲ್ಲಿ ವಿಧಿಯ ಅಟ್ಹಾಸದಂತೆಯೂ ಮತ್ತೊಮ್ಮೆ ಸಮಾಜದ ಅಸಹಾಯಕತೆಯ ನಿಟ್ಟುಸಿರಿನಂತೆಯೂ ಅನ್ನಿಸಿತು.

Monday, October 14, 2013

ಸಂಜೆ ಬಕುಲ


ಮೂಡಿತೊಂದು ಸಂಜೆ ಬಕುಲ
ಕಾವ್ಯಲೋಕ ಕಲ ಕಲ|
ನಿರ್ಧಾರವು ಅಚಲ ಅಚಲ
ಒಮ್ಮೆಗೆಲ್ಲಾ ತಳಮಳ ||

ಬಯಸಿತದು ಸರ್ವಸಕಲ
ಪರಿಸರಗಳ ನಿರ್ಮಲ |
ಪ್ರೇಮ ಛಾಯೆ, ಸರಳ, ಸುಜಲ
ಮರುಗು ಮನಸು ಮಮ್ಮಲ ||

ಕೊಂಚ ಕಠಿಣ, ಕೊಂಚ ವಿರಲ
ಜೀವ ಹೃದಯ ಶ್ಯಾಮಲ |
ಬಕುಲವಿದುವೆ ರಂಜಲ
ಎಂದೆಂದಿಗು ಕುಶಲ ||

ಅಂತರಂಗ ಶುಭ್ರ ಸಲಿಲ
ಆಗದದುವೆ ಚಂಚಲ |
ಸಂಜೆಬಕುಲ ವಿರಲ ಸರಲ
ಕಾವ್ಯಧಾರೆ ಫಲ ಫಳ ||


(ಕವಿಮಿತ್ರ, ಗೆಳೆಯ ಸಂಜೆಬಕುಲ/ಸಂಜಯ ಭಟ್ಟ ಬೆಣ್ಣೆ ಕುರಿತು ಹಾಗೆ ಸುಮ್ಮನೆ ಬರೆದ ಕವಿತೆ)
(ಬರೆದಿದ್ದು : 10-12-2005ರಂದು, ದಂಟಕಲ್ಲಿನಲ್ಲಿ )

Friday, October 11, 2013

ನನ್ನ ನಿನ್ನ ನಡುವೆ


ನನ್ನ ನಿನ್ನ ನಡುವೆ ಮಾತಿಲ್ಲ ಕಥೆಯಿಲ್ಲ
ಮೌನವೇ ಮಾತಾಗಿದೆ ಅಲ್ಲಿ ||2||

ನನ್ನ ನಿನ್ನ ನಡುವೆ ಮುನಿಸಿಲ್ಲ, ಸಿಟ್ಟಿಲ್ಲ
ಸಂತಸವೇ ಸೇತುವಾಗಿದೆ ಅಲ್ಲಿ ||4||

ನನ್ನ ನಿನ್ನ ನಡುವೆ ಮರೆವಿಲ್ಲ-ಮೆರೆವಿಲ್ಲ
ನೆನಪುಗಳೇ ತುಂಬುಬಿಟ್ಟಿದೆ ಅಲ್ಲಿ ||6||

ನನ್ನ ನಿನ್ನ ನಡುವೆ ಸೋಲಿಲ್ಲ ಸೆಡವಿಲ್ಲ
ಗೆಲುವೇ ಮೆರೆದು ನಿಂತಿದೆ ಅಲ್ಲಿ ||8||

ನನ್ನ ನಿನ್ನ ನಡುವೆ ಧೂಳಿಲ್ಲ-ಗೋಳಿಲ್ಲ
ನಲಿವೇ ಬೆರೆತ್ಹೋಗಿದೆ ಅಲ್ಲಿ ||10||

ನನ್ನ ನಿನ್ನ ನಡುವೆ ಗತ್ತಿಲ್ಲ-ಕುತ್ತಿಲ್ಲ
ಪ್ರೀತಿಯೇ ಆಟವಾಡಿದೆ ಅಲ್ಲಿ ||12||

ನನ್ನ ನಿನ್ನ ನಡುವೆ ಅಳುವಿಲ್ಲ-ಬಿಕ್ಕಿಲ್ಲ
ನಗುವೇ ಹರಿದಿದೆಯೋ ಅಲ್ಲಿ ||14||

ನನ್ನ ನಿನ್ನ ನಡುವೆ ಬತ್ತಿಲ್ಲ-ಬರಡಿಲ್ಲ
 ಹಸಿರೇ ಹೊನಲಿದೆಯೋ ಅಲ್ಲಿ||16|| 

(ಒಂದು ಗಝಲ್ ಬರೆಯಲು ವ್ಯರ್ಥ ಪ್ರಯತ್ನ.. ಇದು ಗಝಲ್ ಆಗಬಹುದಾ..? ಬಲ್ಲವರು ಹೇಳಬೇಕು...)
(20-08-2006ರಂದು ದಂಟಕಲ್ಲಿನಲ್ಲಿ ಈ ಕವಿತೆಯನ್ನು ಬರೆದಿದ್ದೇನೆ..)

Thursday, October 10, 2013

ಬಾವಲಿ ಗುಹೆ

    ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ, ತೊರೆ, ಝರಿ, ಇಳಿಜಾರು, ಗುಡ್ಡ, ಕಣಿವೆ, ಕಾಡು, ಗುಹೆ ಹೀಗೆ ಒಂದಿಲ್ಲೊಂದು ಬಗೆಯ ಸೃಷ್ಟಿ ಸೌಂದರ್ಯಗಳನ್ನೊಳಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯ, ವಿಶಿಷ್ಟ ಸಂಗತಿಗಳು ಅಗೋಚರವಾಗಿದೆ. ಕೆಲವೊಂದು ಗೋಚರಿಸುತ್ತವೆ. ಅಂತಹ ವಿಶಿಷ್ಟ ತಾಣಗಳಲ್ಲಿ ಯಲ್ಲಾಪುರ ತಾಲೂಕಿನ ಬಾವಲಿ ಗುಹೆ ಒಂದಾಗಿದೆ.
    ಯಲ್ಲಾಪುರ ನಗರದಿಂದ 22 ಕಿ.ಮಿ ಕಡಿದಾದ ಮಾರ್ಗದಲ್ಲಿ ಸಾಗಿದರೆ ಬಾವಲಿ ಗುಹೆ ತಲುಪಬಹುದು. ಯಲ್ಲಾಪುರ-ವಜ್ರಳ್ಳಿ ಮಾರ್ಗದಿಂದ 3 ಕಿ.ಮಿ ದಟ್ಟಡವಿಯ ಮಧ್ಯ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಆ ಮೂಲಕ ಬೆಣ್ಣೆಜಡ್ಡಿ ಎನ್ನುವ ಊರನ್ನು ತಲುಪಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೋಟಪಟ್ಟಿ ಮತ್ತು ಗುಡ್ಡದ ಇಳಿಜಾರಿನಲ್ಲಿಯ ಅಂಚಿನಲ್ಲಿ ಬಾವಲಿಗುಹೆಗೆ ತಲುಪಬಹುದಾಗಿದೆ. ಬಾವಲಿ ಗುಹೆಗೆ ತಲುಪುವವರಲ್ಲಿ ಬಾಹುಗಳು ಗಟ್ಟಿಯಾಗಿರಬೇಕು. ಸಾಹಸಕ್ಕೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ.
    ಕಡಿದಾದ ಇಳಿಜಾರಿ, ತಗ್ಗುದಿಣ್ಣೆಗಳ ಸಾಲಿನಲ್ಲಿ ಕೊಂಚ ಯಾಮಾದಿರೂ ಪ್ರಪಾತ. ಅಂತಹ ಸ್ಥಳದಲ್ಲೇ ಸಾಗಬೇಕು. ಬಾವಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಕಲ್ಲಿನಿಂದಾವೃತವಾದ ಕಡಿದಾದ ಮಾರ್ಗದಲ್ಲಿ ಕಲ್ಲು ಬಂಡೆಗಳನ್ನು ಹತ್ತಿ ಗುಹೆ ತಲುಪಿವಷ್ಟರಲ್ಲಿ ಜೀವ ಹೈರಾಣ ಎಂದೆನಿಸಿದರೂ ಅಲ್ಲಿಯ ಪ್ರಕೃತಿಯ ಸೊಬಗನ್ನು ಸವಿದಾಗ ಶ್ರಮ ಸಾರ್ಥಕವೆನಿಸುತ್ತದೆ. ಗುಹೆ ಪ್ರವೇಶಿಸುವಾಗ ಬೆಳಕಿನ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಒಬ್ಬರು ನುಸುಳಿ ಒಳ ಪ್ರವೇಶ ಮಾಡಬಹುದಾಗಿದೆ. ಬ್ಯಾಟರಿ ಬೆಳಕನ್ನು ಗುಹೆಯ ಒಳಗಡೆ ಹಾಯಿಸುತ್ತಿದ್ದಂತೆ ಬಾವಲಿಗಳ ಹಾರಾಟ ಶುರುವಾಗುತ್ತದೆ. ಅದೆಷ್ಟೋ ಬಾವಲಿಗಳು ನಮಗೆ ಢೀ ಕೊಟ್ಟು ಹೊರಹಾರುತ್ತವೆ. ಒಳಗಡೆ ಪ್ರವೇಶ ಮಾಡಿದರೆ ಅಲ್ಲೊಂದು ಕೊಳವಿದೆ. ವರ್ಷವಿಡೀ ಈ ಕೊಳದಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ನೀರು ಬೇಸಿಗೆಯಲ್ಲೂ ಹರಿದು ಕೆಳಗಿರುವ ತೋಟಪಟ್ಟಿಗಳಿಗೆ ತಂಪೆರೆಯುತ್ತದೆ. ಈ ನೀರಿಗೆ ಅಬ್ಬಿ ನೀರು ಎನ್ನಲಾಗುತ್ತದೆ.
  ಬಾವಲಿ ಗುಹೆಯಲ್ಲಿ ಧೈರ್ಯವಿದ್ದರೆ ಎಷ್ಟು ದೂರ ಬೇಕಾದರೂ ಸಾಗಬಹುದು. ಆದರೆ ಬಾವಲಿಗಳ ಹಿಕ್ಕೆ ಮತ್ತು ಮೂತ್ರದ ವಾಸನೆಗಳನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿರಬೇಕು. ಒಳ ಪ್ರವೇಶ ಮಾಡಿದ ಮೇಲೆ 5-6 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಗುಹೆ ಎಷ್ಟು ದೂರವಿದೆ ಎನ್ನುವುದು ಈ ವರೆಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಮನುಷ್ಯರನ್ನು ಕಂಡ ಬಾವಲಿಗಳು ಹೊರಡಿಸುವ ಶಬ್ದಗಳು ಅಲ್ಪಮಟ್ಟಿನ ಭಯವನ್ನು ಹುಟ್ಟುಹಾಕುತ್ತದೆ. ಆದರೂ ಬಾವಲಿ ಗುಹೆ ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ.
    ಬಾವಲಿ ಗುಹೆಯೊಳಗಡೆ ಹೋದಂತೆ ಹಲವಾರು ಉಪ ಮಾರ್ಗಗಳೂ ಇವೆ. ಅವು ಎಲ್ಲಿ ಸೇರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ದೂರ ಕ್ರಮಿಸಲೂ ಸಾಧ್ಯವಿಲ್ಲ. ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಈ ಗುಹೆಯನ್ನು ಯಾರೂ ಹೊಕ್ಕಿಲ್ಲ. ಕಾರಣ ಆ ಗುಹೆಯಲ್ಲಿ ಬಾವಲಿಗಳಿಲ್ಲ. ಬಾವಲಿಗಳಿಲ್ಲದ ಸ್ಥಳಗಳಲ್ಲಿ ಹಾವು, ಚೇಳುಗಳಂತಹ ಅಪಾಯಕಾರಿ ಜೀವಿಗಳಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಬಾವಲಿ ಗುಹೆ ಕುರಿತಂತೆ ಸ್ಥಳೀಯರು ಹೇಳುವಂತೆ ಮಹಾಭಾರತದ ಸಂದರ್ಭದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅದೇ ರೀತಿ ಗುಹೆಯ ಮೇಲಿನ ಗುಡ್ಡದಲ್ಲಿ ವನದೇವತೆಯಿದೆ.
    ಬಾವಲಿಗಳು ರೈತಸ್ನೇಹಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಬಾವಲಿಗಳ ಹಿಕ್ಕೆ ಕೃಷಿಗೆ ಉತ್ಕೃಷ್ಟ ಸಾವಯವ ಗೊಬ್ಬರ. ಸುತ್ತಮುತ್ತಲ ಐದಾರು ಕಿಲೋಮೀಟರ್ನ ಜನ ತಮಗೆಷ್ಟು ಬೇಕೋ ಅಷ್ಟು ಬಾವಲಿ ಹಿಕ್ಕೆಗಳನ್ನು ಕೊಂಡೊಯ್ದು ಕೃಷಿಗೆ ಬಳಸುತ್ತಾರೆ. ಗುಹೆಯ ಹೊರಭಾಗದಲ್ಲಿ ಅಬ್ಬಿ ನೀರಿರುವುದರಿಂದ ಅಲ್ಲಿಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಬಾವಲಿ ಗುಹೆಗೆ ತೆರಳಲು ಪಕ್ವ ಕಾಲವೆಂದರೆ ನವೆಂಬರ್ನಿಂದ ಮೇ ವರೆಗಿನ ಅವಧಿಯಲ್ಲಿ ಯಾವಾಗಲೂ ಈ ಪ್ರದೇಶಕ್ಕೆ ತೆರಳಬಹುದಾಗಿದೆ.

    ಬಾವಲಿ ಗುಹೆಗೆ ಹೋಗುವವರು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾದ ಹಲವಾರು ಅಂಶಗಳಿವೆ. ಬಾವಲಿಗಳ ಶಾಂತತೆಗೆ ಭಂಗವನ್ನು ತರಬಾರದು. ಒಂದು ವೇಳೆ ಅವುಗಳು ಸಿಟ್ಟಾದರೆ ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ನಿಸರ್ಗ ಮಧ್ಯದಲ್ಲಿರುವ ಈ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದು ನಿಷೇಧ. ಹಾಗೊಂದು ವೇಳೆ ಪ್ಲಾಸ್ಟಿಕ್ ಎಸೆದರೆ ಸ್ಥಳೀಯರು ದಂಡ ಹಾಕುತ್ತಾರೆ. ಬಾವಲಿ ಗುಹೆಗೆ ಹೋಗ ಬಯಸುವವರು ತಾರಗಾರಿನ ಗಣೇಶ ಕಿರಿಗಾರಿ ಮೊಬೈಲ್ ಸಂಖ್ಯೆ : 9449112440 ಅಥವಾ 08419-238070 ಈ ದೂರವಾಣಿಗಳಿಗೆ ಸಂಪಕರ್ಿಸಿದರೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಾರೆ. ಮೊದಲೇ ತಿಳಿಸಿದ್ದರೆ ಊಟದ ವ್ಯವಸ್ಥೆಯನ್ನೂ ಕೈಗೊಳ್ಳುತ್ತಾರೆ. ಬಾವಲಿ ಗುಹೆಗೆ ತೆರಳುವವರಿಗೆ ಮಾರ್ಗದರ್ಶನ ನೀಡುತ್ತಾರೆ.

Tuesday, October 8, 2013

ಹೇಳಿ ಹೋಗು ಕಾರಣ


ನನ್ನ ಮನವ ತೊರೆವ ಮುನ್ನ
ಹೇಳಿಹೋಗು ಕಾರಣ..
ನನ್ನ ಕನಸ ಕೊಲುವ ಮುನ್ನ
ಹೇಳಿ ಹೋಗು ಕಾರಣ..||

ಅಂದು ನೀನು ಕಂಡುದೇಕೆ..?
ನನ್ನ ಮನವ ಸೆಳೆದುದೇಕೆ.?
ಪ್ರೀತಿ ಬಲೆಯ ಬೀಸಿದ್ದೇಕೆ..?
ಹೇಳಿ ಹೋಗು ಕಾರಣ..||

ಜೊತೆಗೆ ಹಲವು ಮಾತನಾಡಿ
ಮನದ ಜೊತೆಗೆ ಆಟವಾಡಿ
ಬಿಟ್ಟು ಓಡಿ ಹೋಗುವ ಮೊದಲು
ಹೇಳಿ ಹೋಗು ಕಾರಣ..||

ನನ್ನೊಳೇನು ತಪ್ಪು ಕಂಡೆ.?
ನನ್ನ ಪ್ರೀತಿ ಚುಚ್ಚಿ ಕೊಂದೆ
ನೀನು ದೂರವಾಗೋ ಮೊದಲು
ಹೇಳಿ ಹೋಗು ಕಾರಣ..||

ನೀನು ಪ್ರೀತಿಸಿದ್ದು ಸುಳ್ಳೆ?
ಏಕೆ ನನ್ನ ಸೆಳೆದೆ ಮರುಳೆ..?
ನನ್ನೊಡಲು ಸಾಯೋ ಮೊದಲು
ಹೇಳಿ ಹೋಗು ಕಾರಣ..||


(ಬರೆದಿದು : ಶಿರಸಿಯಲ್ಲಿ, 23-01-2006ರಂದು )
(ಈ ಕವಿತೆಯನ್ನು 24-01-2006ರಂದು ಶಿರಸಿ ತಾಲೂಕಿನ ಉಂಚಳ್ಳಿಯಲ್ಲಿ 
ಓದುಗರ ವೇದಿಕೆ ಹಮ್ಮಿಕೊಂಡಿದ್ದ ಯುವ ಕವಿಗೋಷ್ಟಿಯಲ್ಲಿ ವಾಚಿಸಲಾಗಿದೆ.)