ಕಾಲೇಜು ದಿನಗಳಲ್ಲಿ ಅಡ್ಡ ಹೆಸರು
ಎನ್ನುವುದು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ವಿಶಿಷ್ಟ ಸ್ಥಾನವನ್ನು
ಪಡೆದುಕೊಳ್ಳುತ್ತವೆ. ಇಂತಹ ಅಡ್ಡ ಹೆಸರುಗಳಲ್ಲಿ ಹಲವು ಫನ್ನಿಯಾಗಿದ್ದರೆ,
ಇನ್ನೂ ಕೆಲವುಗಳು ಸಿಲ್ಲಿಯಾಗಿರುತ್ತವೆ.
ಪ್ರತಿಯೊಬ್ಬರಿಗೂ ಅವರದೇ ಆದ ನಾಮಧೇಯಗಳಿದ್ದರೂ,
ಅವರವರ ಹವ್ಯಾಸ,
ಅಭಿನಯ, ಚಟ
ಹೀಗೆ ಹಲವು ಕಾರಣಗಳಿಂದಾಗಿ ಹೆಸರಿನ ಮುಂದೆ ಅಡ್ಡ ಹೆಸರುಗಳು ಸೇರಿಕೊಂಡು ಬಿಡುತ್ತವೆ. ಕೆಲವೊಮ್ಮೆ
ನಿಜವಾದ ಹೆಸರೇ ಮರೆತು ಹೋಗುವಷ್ಟರ ಮಟ್ಟಿಗೆ ಅಡ್ಡ ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಲವು ಸಾರಿ
ಈ ಅಡ್ಡ ಹೆಸರುಗಳಿಗೆ ಎಲ್ಲರೂ ಹೊಂದಿಕೊಂಡು ಬಿಡುತ್ತಾರೆ. ಕೆಲವೊಮ್ಮೆ ಮಾತ್ರ ವಿರೋಧಗಳು ಕೇಳಿ
ಬರುತ್ತವೆ ಅಷ್ಟೇ.
ಸುಮ್ಮನೆ ಕಾಲೇಜು ದಿನಗಳ ಗೆಳೆಯರ
ಬಳಗವನ್ನು ಗಮನಿಸಿ, ಅವರ
ಬಳಗದಲ್ಲಿ ಹೆಚ್ಚಿನ ಮಂದಿ ತಮ್ಮ ನಿಜವಾದ ಹೆಸರುಗಳಿಂದ ಕರೆದುಕೊಳ್ಳುವುದೇ ಇಲ್ಲ. ಕೆಂಪ,
ಬಿಡ್ಡ, ಮಚ್ಚಾ,
ಮಗಾ, ಕುಂಟ,
ಕುಳ್ಳ ಹೀಗೆ ಅವರವರ ಗಾತ್ರಗಳಿಗನುಗುಣವಾಗಿ ಅಡ್ಡ ಹೆಸರುಗಳು
ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು ಗುಂಪಿನಲ್ಲೊಬ್ಬ ಮಂಜ ಎನ್ನುವ ಹೆಸರಿನವನ್ನು ಇದ್ದರಂತೂ
ಕೋಳಿ ಎಂಬ ಅಡ್ಡ ಹೆಸರು ಆತನಿಗೆ ಖಾಯಂ ಎಂಬಂತಾಗಿದೆ.
ಗೆಳೆಯರ ಬಳಗದಲ್ಲೊಬ್ಬ ಹುಲಿ
ಇರುತ್ತಾನೆ, ದಾಸ
ಇರುತ್ತಾ. ಇನ್ನು ಆ ಬಳಗದಲ್ಲಿ ಬ್ರಾಹ್ಮಣರ ಹುಡುಗರು ಇದ್ದರಂತೂ ಅವರಿಗೆ ಭಟ್ಟ,
ಹೆಗಡೆ ಅಥವಾ ಪುಳಚಾರ್ ಎಂಬ ಅಡ್ಡ ಹೆಸರು ಖಾಯಂ.
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅಡ್ಡ
ಹೆಸರುಗಳು ಬದಲಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರುಗಳೂ ರಗಡ್ ಆಗಿರುತ್ತವೆ.
ಮೆಣಸಿನಕಾಯಿ, ಬೆಳ್ಳಕ್ಕಿ,
ಇಂತಹ ಹೆಸರುಗಳು ಉತ್ತರ ಕರ್ನಾಟಕದಲ್ಲಿಕಾಣಸಿಗುತ್ತವೆ. ಅದೇ
ದಕ್ಷಿಣ ಕರ್ನಾಟಕ ಭಾಗಗಳಿಗೆ ಬಂದರೆ ಅಲ್ಲಿ ಕರೆಯುವ ಅಡ್ಡ ಹೆಸರುಗಳು ಭಿನ್ನ. ಬಿಡ್ಡ,
ಕೆಂಪ, ಕರಿಯ,
ದೊಡ್ಡಣ್ಣ, ಚಿಕ್ಕಣ್ಣ
ಇತ್ಯಾದಿಗಳು ಇಲ್ಲಿ ಜಾಸ್ತಿ. ಬೆಂಗಳೂರು ಕಡೆಗಳಲ್ಲಿ ಬಳಕೆಯಾಗುವ ಅಡ್ಡ ಹೆಸರುಗಳಲ್ಲಿ ತಮಿಳು,
ತೆಲುಗಿ ಪ್ರಭಾವ ಜಾಸ್ತಿ ಇರುತ್ತವೆ. ಅದೇ ಕಾರಣಕ್ಕೆ
ಬೆಂಗಳೂರು ಭಾಗದಲ್ಲಿ ಮಚ್ಚಾ, ಮಗಾ,
ಸಿವಾ ಇಂತದ್ದೆಲ್ಲ ಜಾಸ್ತಿ. ಮಂಗಳೂರು,
ಉಡುಪಿ, ಉತ್ತರ
ಕನ್ನಡಗಳಲ್ಲಿ ಕರೆಯುವ ಅಡ್ಡ ಹೆಸರುಗಳು ಇನ್ನಷ್ಟು ಬೇರೆ ಬೇರೆಯಾಗಿರುತ್ತವೆ.
ಸಿನಿಮಾ ನಟರುಗಳ ಹೆಸರನ್ನು ಅಡ್ಡ
ಹೆಸರಾಗಿ ಕರೆಯುವ ವಾಡಿಕೆ ಹಲವು ಸಂದರ್ಭಗಳಲ್ಲಿದೆ. ಯಾವುದೋ ಹುಡುಗನಿಗೆ ಯಾರೋ ಹೀರೋ ಇಷ್ಟವಾದರೆ,
ಆ ನಟನ ಚಿತ್ರಗಳ ಹೆಸರನ್ನು ಹೇಳಿ ಕರೆಯುವುದು,
ಇನ್ಯಾರಿಗಾದರೂ ಚಿನ್ರನಟನ ಹೋಲಿಕೆ ಇದ್ದರೆ ಅದೇ ಹೆಸರಿನಿಂದ
ಕರೆಯುವುದು ಹೀಗೆ. ಇನ್ನು ಆತ/ಆಕೆ ಏನಾದರೂ ತಪ್ಪನ್ನು ಮಾಡಿದರೆ ಅದನ್ನೇ ಅಡ್ಡ ಹೆಸರಿನಿಂದ
ಕರೆದಿರುವುದೂ ಇದೆ.
ನಾವು ಹೈಸ್ಕೂಲಿಗೆ ಹೋಗುವಾಗ ಒಬ್ಬ
ವಿದ್ಯಾರ್ಥಿ ಇದ್ದ. ಆತನಿಗೆ ಹಕ್ಕಿಗಳನ್ನು ಬೇಟೆಯಾಡುವುದು ಅಂದರೆ ಬಹಳ ಖುಷಿಯ ಸಂಗತಿಯಾಗಿತ್ತು.
ಆತನ ಸಾಮರ್ಥ್ಯ ಎಷ್ಟಿತ್ತೆಂದರೆ ಆತ ಕವಣೆ ಕಲ್ಲನ್ನು ಬೀಸಿಯೋ ಅಥವಾ ಚ್ಯಾಟರ್ ಬಿಲ್ಲಿನಿಂದ
ಹೊಡೆದೋ ಪಿಕಳಾರ ಹಕ್ಕಿಗಳನ್ನು ಕೊಂದು ಅದನ್ನು ತಿನ್ನುತ್ತಿದ್ದ. ಇದರಿಂದಾಗಿ ಆತನಿಗೆ ಪಿಕಳಾರ
ಎಂಬ ಅಡ್ಡ ಹೆಸರೇ ಬಂದಿತ್ತು. ಹಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡುವವರು,
ಮದ್ಯದ ಕಂಪನಿಗಳ ಹೆಸರನ್ನು ಕಿರಿದಾಗಿಸಿ ಅಡ್ಡ ಹೆಸರಿನಿಂದ
ಕರೆದಿದ್ದೂ ಇದೆ. ಎಂಸಿ, ಕೆಎಫ್
ಇತ್ಯಾದಿ ಅಡ್ಡ ಹೆಸರುಗಳು ಹಲವರಿಗಿರುತ್ತವೆ. ಹಲವು ಸಂದರ್ಭಗಳಲ್ಲಿ ಯಾರದ್ದಾದರೂ ಒನ್ ವೇ ಲವ್
ಇದ್ದರೆ, ಆ
ಹುಡುಗಿಯ ಹೆಸರನ್ನು ಸೇರಿಸಿ ಕೀಟಲೆ ಮಾಡುವುದೂ ಇದೆ.
ಪ್ರತಿ ಗ್ರೂಪನ್ನೂ ಗಮನಿಸಿ. ಅಲ್ಲೊಬ್ಬ
ದಾಸ ಇರುತ್ತಾನೆ. ಪುಂಡ ಇರುತ್ತಾನೆ. ಪೋಲೀಸ ಇರುತ್ತಾನೆ. ಮಿಲಿಟ್ರಿ ಇರುತ್ತಾನೆ. ಇಂತಹ
ಹೆಸರುಗಳನ್ನು ಆಯಾಯಾ ವಿದ್ಯಾರ್ಥಿಗಳು ತಮ್ಮ ಪಾಲಿಗೆ ಸಿಕ್ಕ ಬಿರುದು,
ಬಾವಲಿಗಳೆಂಬಂತೆ ಸಂತಸದಿಂದಲೇ ಸ್ವೀಕಾರ ಮಾಡುತ್ತಾರೆ.
ಕಾಲೇಜು ದಿನಗಳಲ್ಲಿ ಆರಂಭವಾದ ಗೆಳೆತನ ಬದುಕಿನುದ್ದಕ್ಕೂ ಮುಂದುವರೆದ ಸಂದರ್ಭದಲ್ಲಿ ಆ ಮಿತ್ರ
ಮಂಡಳಿಗಳು ಪರಸ್ಪರರನ್ನು ಅಡ್ಡ ಹೆಸರಿನಿಂದಲೇ ಕರೆದುಕೊಂಡ,
ಕರೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಹುಡುಗಿಯರಿಗೂ ಕೂಡ ಅಷ್ಟೇ
ವಿಶಿಷ್ಟ ಅಡ್ಡ ಹೆಸರುಗಳಿರುತ್ತವೆ. ಯಾರಾದರೂ ಉದ್ದವಾದ ಹುಡುಗಿ ಇದ್ದರೆ ಅವರನ್ನು ಕೊಕ್ಕರೆ
ಎಂತಲೋ, ಒಂಟೆ
ಎಂದೋ ಕರೆಯುತ್ತಾರೆ. ದಪ್ಪ ಇದ್ದವಳ ಹೆಸರು ಏನೇ ಇದ್ದರೂ ಆಕೆ ಡುಮ್ಮಿ ಎಂದೋ,
ಟೆಡ್ಡಿಯಾಗಿಯೋ,
ಕರಡಿಮರಿಯಾಗಿಯೋ ಕರೆಸಿಕೊಳ್ಳುತ್ತಾಳೆ.
ಹಲವು ಸಂದರ್ಭಗಳಲ್ಲಿ ಅಡ್ಡ ಹೆಸರಿನ
ಬಳಕೆ ಅತಿರೇಕಕ್ಕೆ ಹೋದದ್ದೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಹೊಡೆದಾಟಗಳು ನಡೆದಿದ್ದೂ
ಇದೆ. ಇಂತಹ ಅಡ್ಡ ಹೆಸರುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದದ್ದೂ ಇದೆ. ಆದರೆ
ಇವೆಲ್ಲ ಸುಮ್ಮನೆ ಅತಿರೇಕ ಎನ್ನಿಸಿಕೊಳ್ಳುತ್ತವೆ.
ಕಾಲೇಜು ಬದುಕು ಎಂದ ಮೇಲೆ ಓದು,
ಆಟ, ಓಟ,
ಸಂತಸ, ಸಂಭ್ರಮಗಳು
ಎಷ್ಟು ಸಹಜವೋ ಅದೇ ರೀತಿ ಅಡ್ಡ ಹೆಸರುಗಳೂ ಕೂಡ. ಇವು ಆ ದಿನಗಳ ಬದುಕಿನಲ್ಲಿ ಪ್ರಮುಖ ಭಾಗವಾಗಿ
ಬದಲಾಗುತ್ತವೆ. ಇವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ಸುಮ್ಮನೇ ಬೇಸರಕ್ಕೆ ಕಾರಣವಾಗುವುದಷ್ಟೇ.
ಬದಲಾಗಿ ಅಡ್ಡ ಹೆಸರುಗಳನ್ನು ಸುಮ್ಮನೇ ಎಂಜಾಯ್ ಮಾಡೋಣ ಬನ್ನಿ. ಕರೆಯುವವರು ಕರೆಯಲಿ,
ಹೇಳುವವರು ಹೇಳಿಲಿ,
ಖುಷಿಯಾಗಿರೋಣ. ಅಡ್ಡ ಹೆಸರುಗಳನ್ನು ಪ್ರೀತಿಯಿಂದ ಆದರಿಸಿ,
ನಾವೂ ಕರೆದು,
ಕರೆಸಿಕೊಂಡು ಖುಷಿ ಪಡೋಣ. ಅಡ್ಡ ಹೆಸರುಗಳು ಯಾಕಾಗಿ
ಹುಟ್ಟಿಕೊಳ್ಳುತ್ತವೆ ಎನ್ನುವುದು ಕಷ್ಟ. ಅದೇ ರೀತಿ ಅಡ್ಡ ಹೆಸರನ್ನು ಇಡುವುದನ್ನು ತಡೆಯುವುದೂ
ಕೂಡ ಕಷ್ಟ. ಯಾರೋ ಅಡ್ಡ ಹೆಸರನ್ನಿಟ್ಟರು ಎಂದು ಬೇಸರಿಸದೇ,
ಅದಕ್ಕಾಗಿ ಸಿಟ್ಟು ಮಾಡಿಕೊಳ್ಳದೇ ಆ ಸಂದರ್ಭಗಳನ್ನು ಎಂಜಾಯ್
ಮಾಡೋಣ. ಸೂಕ್ತ ಸಂದರ್ಭ, ಸಮಯಗಳು
ಸಿಕ್ಕರೆ ನಾವೂ ಕೂಡ ಯಾರಿಗಾದರೂ ಅಡ್ಡ ಹೆಸರು ಇಡಬಲ್ಲೆವು ಎಂಬುದನ್ನು ತೋರಿಸೋಣ. ತೀರಾ ಬದುಕಿಗೆ
ಘಾಸಿಯಾಗದಂತೆ ಅಡ್ಡ ಹೆಸರನ್ನಿಟ್ಟು ಸಂಭ್ರಮಿಸೋಣ. ಅಲ್ಲವೇ.
No comments:
Post a Comment