Wednesday, October 31, 2018

ದೇಶದ ಹೆಮ್ಮೆಯ ಬಾಕ್ಸರ್ ದುರಂತ ಜೀವನಗಾಥೆ - ಅರ್ಜುನ ಪ್ರಶಸ್ತಿ ಪಡೆದವನೀಗ ಕುಲ್ಫೀ ವ್ಯಾಪಾರಿ

ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರನೋರ್ವನ ದುರಂತ ಬದುಕು ಅನಾವರಣಗೊಂಡಿದೆ. ಬಾಕ್ಸಿಿಂಗ್‌ನಲ್ಲಿ ದೇಶಕ್ಕೆ ಪದಕವನ್ನು ಗೆದ್ದುಕೊಟ್ಟ ಬಾಕ್ಸರ್ ಇದೀಗ ಬೀದಿ ಬರಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ.
ಭಾರತದಲ್ಲಿ ಕ್ರಿಕೆಟ್ ಆಟಗಾರರ ಯಶಸ್ಸಿನ ಬಗ್ಗೆ ಕೇಳಿದ್ದೇವೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಆಟಗಾರ ಕೂಡ ಯಾವ್ಯಾವುದೋ ವ್ಯಾಪಾರದಲ್ಲಿ ಕೈ ಹಾಕಿ, ದುಡ್ಡು ಮಾಡಿಕೊಳ್ಳುತ್ತಾಾನೆ. ಆದರೆ ಉಳಿದ ಕ್ರೀಡೆಗಳಲ್ಲಿ ಮಿಂಚಿದ ಕ್ರೀಡಾಪಟುಗಳ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಎಂಬಂತಾಗಿದೆ.
ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರನೋರ್ವ ತದನಂತರದಲ್ಲಿ ಡಕಾಯಿತರ ತಂದ ನಾಯಕನಾಗಿ, ದುರಂತ ಅಂತ್ಯಕಂಡ ನಿದರ್ಶನ ಕಣ್ಣೆದುರಿದೆ. ಓಟ, ಅಥ್ಲೆಟಿಕ್ಸ್ , ಹಾಕಿ ಹೀಗೆ ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರು ತದನಂತರದ ತಮ್ಮ ಬದುಕಿನಲ್ಲಿ ತೀವ್ರ ತೊಂದರೆ ಎದುರಿಸಿದ ಸನ್ನಿವೇಶಗಳೂ ಹೆಚ್ಚಿದೆ. ಅಂತಹ ಸಾಲಿಗೆ ಹೊಸ ಸೇರ್ಪಡೆ ಬಾಕ್ಸರ್ ದಿನೇಶ್ ಕುಮಾರ್.
ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಇದೀಗ ಬೀದಿ ಬದಿಯಲ್ಲಿ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುವ ಹಂತ ತಲುಪಿದ್ದಾರೆ.
ಬಾಕ್ಸಿಿಂಗ್‌ನಲ್ಲಿ ದಿನೇಶ್ ಕುಮಾರ್ ಗೆದ್ದ ಪದಕಗಳು ಒಂದೆರಡಲ್ಲ ಬಿಡಿ. ಬಾಕ್ಸಿಿಂಗ್‌ನಲ್ಲಿ ಅವರು ಬರೋಬ್ಬರಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿದ್ದಾರೆ. ದಿನೇಶ್ ಕುಮಾರ್ ಅವರ ಸಾಧನೆಯನ್ನು ಗಮನಿಸಿದ ಸರ್ಕಾರ 2010ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ಇಂತಹ ಸಾಧಕ ದಿನೇಶ್ ಕುಮಾರ್ ಇದೀಗ ತನ್ನ ಬದುಕನ್ನು ಕಟ್ಟಿಕೊಳ್ಳಲು ಒದ್ದಾಟ ನಡೆಸುತ್ತಿದ್ದು, ಅದಕ್ಕಾಗಿ ಕುಲ್ಫಿ ಮಾರಾಟದ ಮಾರ್ಗ ಹಿಡಿದಿದ್ದಾರೆ.
ಹರಿಯಾಣದ ಭಿವಾನಿ ಪ್ರದೇಶದವರಾದ ದಿನೇಶ್ ಕುಮಾರ್  ದೇಶದ ಬಾಕ್ಸಿಿಂಗ್ ಲೋಕದ ಹೊಸ ದ್ರುವತಾರೆ ಎಂದು ಬಿಂಬಿತರಾಗಿದ್ದರು. ಆದರೆ 2014ರಲ್ಲಿ ಸಂಭವಿಸಿದ್ದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಕುಟುಂಬಸ್ಥರು ಅಪಾರ ಸಾಲ ಮಾಡಿದ್ದರು. ಅಪಘಾತದಿಂದಾಗಿ ದಿನೇಶ್ ಅವರ ಅದುವರೆಗಿನ ಬಾಕ್ಸಿಿಂಗ್ ವೃತ್ತಿಜೀವನಕ್ಕೆ ಅನಿರೀಕ್ಷಿತ ತೆರೆ ಬಿದ್ದಿತ್ತು.
ಇದೀಗ ದಿನೇಶ್ ಬಾಕ್ಸಿಿಂಗ್ ತರಬೇತಿಗಾಗಿಯೂ, ಅಪಘಾತದಿಂದ ಪಡೆದ ಚಿಕಿತ್ಸೆಗಾಗಿಯೂ ಮಾಡಿದ್ದ ಸಾ ಲವನ್ನು ತೀರಿಸಬೇಕಾಗಿ ಬಂದಿದೆ. ಸಾಲದ ವಿಷಯವನ್ನು ತಿಳಿದ ದಿನೇಶ್ ಕುಮಾರ್ ತಾವೂ ತಂದೆಗೆ ನೆರವಾಗಲು ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದಿದ್ದಾರೆ. ದಿನೇಶ್ ಅವರನ್ನು ಕಂಡ, ದಿನೇಶ್ ಅವರ ಬಾಕ್ಸಿಿಂಗ್ ಸಾಧನೆಯ ಮಾಹಿತಿ ಇರುವ ಪಾದಚಾರಿಗಳು, ಕಾರು, ಬೈಕ್ ಸವಾರರು ಅವರಲ್ಲಿ ಕುಲ್ಫಿ ಕರೀದಿಸಿ ಜತೆಯಲ್ಲೊಂದು ಸೆಲ್ಫೀ ತೆಗೆದುಕೊಂಡು ಹೋಗುತ್ತಿದ್ದಾರೆ.
ತಾವು ಕುಲ್ಫಿ ಮಾರಾಟಕ್ಕಿಳಿದ ಆರಂಭದ ದಿನಗಳಲ್ಲಿ ಸರ್ಕಾರ ತಮ್ಮ ಸಹಾಯಕ್ಕೆ ಬರುತ್ತದೆ ಎನ್ನುವ ಆಸೆಯನ್ನು ದಿನೇಶ್ ಕುಮಾರ್ ಹೊಂದಿದ್ದರು. ಆದರೆ ಯಾವುದೇ ಸರ್ಕಾರ ದಿನೇಶ್ ಕುಮಾರ್ ಅವರ ಸಹಾಯಕ್ಕೆ ಮುಂದಾಗಲಿಲ್ಲ. ಇದರಿಂದ ತೀವ್ರ ನಿರಾಸೆ ಹೊಂದಿದ ದಿನೇಶ್ ಕುಮಾರ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಕುಲ್ಫಿ ಮಾರಾಟ ಮಾಡುತ್ತಿದ್ದರೂ, ಅಪಘಾತದಿಂದಾಗಿ ಬಾಕ್ಸಿಿಂಗ್ ರಿಂಗ್‌ಗೆ ತಮಗೆ ಕಾಲಿರಿಸಲು ಅಸಾಧ್ಯವಾಗಿದ್ದರೂ ದಿನೇಶ್ ಕುಮಾರ್ ಎದೆಗುಂದಿಲ್ಲ. ಬದಲಾಗಿ ತಮ್ಮೊಳಗಿನ ಬಾಕ್ಸಿಿಂಗ್ ಜ್ಞಾನವನ್ನು ಕಿರಿಯರಿಗೆ ಧಾರೆ ಎರೆಯುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಬಾಕ್ಸಿಿಂಗ್ ತರಬೇತಿ ನೀಡುವ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮೊಳಗಿನ ಜ್ಞಾನವನ್ನು ಇತರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕ್ರಿಕೆಟ್ ಹಾಗೂ ಇತರ ಕೆಲವೇ ಕ್ರೀಡೆಗಳ ಕ್ರೀಡಾಪಟುಗಳಿಗೆ ಭಾರತದಲ್ಲಿ ಬೆಲೆ ಇದೆ ಎನ್ನುವುದು ಹಲವರ ಮಾತು. ಉಳಿದ ಕ್ರೀಡೆಗಳು ಸಾಲು ಸಾಲು ಪದಕಗಳನ್ನು ಗೆದ್ದು ಸಾಧನೆಯ ಶಿಖರವನ್ನು ಏರಿದರೂ ಅವರ ಕುರಿತು ಯಾರೂ ಗಮನ ಹರಿಸುವುದಿಲ್ಲ. ಪದಕಗಳನ್ನು ಗೆದ್ದು ತಂದರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಒದ್ದಾಾಡುತ್ತಿರುವ ದಿನೇಶ್ ಕುಮಾರ್ ಅವರಂತವರ ಬೆನ್ನಿಗೆ ಸರ್ಕಾರ, ಹಾಗೂ ಕ್ರೀಡಾ ಅಭಿಮಾನಿಗಳು ನಿಲ್ಲುವ ಜರೂರತ್ತಿದೆ. ಹೀಗಾದಾಗ ಮಾತ್ರ ಕ್ರೀಡಾಪಟುಗಳ ಬದುಕು ಹಸನಾಗಬಹುದಾಗಿದೆ.
---
ಯಾವ ರಾಜಕಾರಣಿಗಳ ಮೇಲೆ ವಿಶ್ವಾಸವೂ ಇಲ್ಲ. ಕುಟುಂಬವನ್ನು ಸಲಹಲಿಕ್ಕಾಗಿ ಕುಲ್ಫಿ ವ್ಯಾಪಾರ ನಡೆಸಿದ್ದೇನೆ. ನಾನು ಬಾಕ್ಸಿಿಂಗ್ ಜಗತ್ತಿನಲ್ಲಿ ದ್ರುವತಾರೆಯಾಗಬೇಕೆನ್ನುವ ಕನಸನ್ನು ನನ್ನ ತಂದೆ ಕಂಡಿದ್ದರು. ನನಗೆ ಅಪಘಾತವಾಗಿದ್ದು ವೃತ್ತಿ ಜೀವನ ಅಂತ್ಯವಾಗಿದೆ. ಆದರೆ ನನ್ನಲ್ಲಿನ ಬಾಕ್ಸಿಿಂಗ್ ಹಾಗೆಯೇ ಇದೆ. ನಾನೀಗಲೂ ಕಿರಿಯರಿಗೆ ಬಾಕ್ಸಿಿಂಗ್ ತರಬೇತಿ ನೀಡುತ್ತಿದ್ದೇನೆ. ಇನ್ನಾದರೂ ಸರ್ಕಾರದವರು ನನಗೆ ರಾಜ್ಯಮಟ್ಟದ ತರಬೇತುದಾರ ಹುದ್ದೆ ನೀಡಿದರೆ ನಿರ್ವಹಿಸಬಲ್ಲೆ .
ದಿನೇಶ್ ಕುಮಾರ್
ಬಾಕ್ಸರ್

( ಈ ಲೇಖನ ಹೊಸದಿಗಂತದ ಕ್ರೀಡಾ ಪುಟದಲ್ಲಿ ಪ್ರಕಟವಾಗಿದೆ )

Tuesday, October 30, 2018

ಕ್ರಿಕೆಟ್‌ನಲ್ಲಿ ಮುಗಿಯಿತು ತೊಂಭತ್ತರ ಜಮಾನಾ

ಶ್ರೀಲಂಕಾ ಕ್ರಿಕೆಟ್ ದಿಗ್ಗಜ ರಂಗಣ ಹೆರಾತ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಹೆರಾತ್ ವಿದಾಯದಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಬಹು ದೊಡ್ಡ ಬದಲಾವಣೆಯೊಂದು ಘಟಿಸುತ್ತಿದೆ. ಹೆರಾತ್ ವಿದಾಯದ ಮೂಲಕ ಕ್ರಿಕೆಟ್ ಲೋಕದಲ್ಲಿ 90ರ ದಶಕದ ಜಮಾನಾದ ಕೊನೆಯ ಕೊಂಡಿ ಕಳಚಿಕೊಳ್ಳುತ್ತಿದೆ.
ಮೊದಲ 15 ಓವರ್‌ಗಳಲ್ಲಿ ಪವರ್ ಪ್ಲೇ, 30 ಯಾರ್ಡ್ ಸರ್ಕಲ್ ನಿಯಮಗಳು, 250-260ರನ್ ಎಂದರೆ ಅಬ್ಬಬ್ಬಾ ಎನ್ನುವ ಸಮಯ, ಆಗ ತಾನೆ ಬಿಳಿ ಬಣ್ಣದ ಧಿರಿಸಿನಿಂದ ಬಣ್ಣ ಬಣ್ಣದ ಜೆರ್ಸಿಗೆ ಕಾಲಿಟ್ಟ ಸಮಯ ಈ ಮುಂತಾದ ಹಲವು ಸಂಗತಿಗಳು 90ರ ದಶಕದ ಕ್ರಿಕೆಟ್ ವೈಭವವನ್ನು ಕಟ್ಟಿಕೊಡುತ್ತವೆ.
90ರ ದಶಕದಲ್ಲಿಯೇ ಪಾಕಿಸ್ಥಾನ ಮೊಟ್ಟ ಮೊದಲ ವಿಶ್ವಕಪ್ ಎತ್ತಿ ಹಿಡಿದಿದ್ದು. ಈ ದಶಕದಲ್ಲಿಯೇ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವವನ್ನೇ ಆಳಿದ್ದು. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಪರಿವರ್ತನೆಯಾಗಿದ್ದು. 90ರ ದಶಕದಲ್ಲಿಯೇ ಆಸ್ಟ್ರೇಲಿಯಾ ಎಂಬುದು ಕ್ರಿಕೆಟ್‌ನ ಏಕಮೇವಾದ್ವಿತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು. ಸಾಲು  ಸಾಲು  ಲೆಜೆಂಡ್‌ಗಳು ಜನಿಸಿದ್ದು.
ತೆಂಡೂಲ್ಕರ್ ಅಲ್ಲದೇ, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ಮಾರ್ಕ್ ವಾ, ಸ್ಟೀವ್ ವಾ, ಜಾಕ್ ಕಾಲಿಸ್, ಹ್ಯಾನ್ಸಿ ಕ್ರೋನಿಯೆ, ಜಾಂಟಿ ರೋಡ್‌ಸ್‌‌, ಕಾರ್ಲ್ ಹೂಪರ್, ಅರ್ಜುನ ರಣತುಂಗಾ, ಅರವಿಂದ ಡಿಸಿಲ್ವಾ, ಗ್ಯಾರಿ ಕರ್ಸ್ಟನ್, ಮೈಕೆಲ್ ಬೆವನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಾಲ್‌ಶ್‌‌, ಆಂಬ್ರೋಸ್, ಮುತ್ತಯ್ಯ ಮುರಳೀಧರನ್, ಮೆಕ್‌ಗ್ರಾಥ್, ಶೇನ್ ವಾರ್ನೆ, ಅನಿಲ್ ಕುಂಬ್ಳೆ ಹೀಗೆ ಸಾಲು ಸಾಲು ದಿಗ್ಗಜರು 90ರ ದಶಕದಲ್ಲಿಯೇ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದವರು. ಅಜರಾಮರವಾಗಿ ಉಳಿದವರು. 10-15 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದವರು.
ಕ್ರಿಕೆಟ್‌ನಲ್ಲಿ ಹಳೆಯ ನೀರು ಹರಿದು ಹೊಸ ನೀರು ಸದಾ ಬರುತ್ತಲೇ ಇರುತ್ತದೆ. 1990ರಿಂದ 1999ರ ವರೆಗಿನ ಕಾಲವೆಂದರೆ ಅತ್ತ ಕ್ಲಾಸಿಕ್ ಅಲ್ಲ, ಇತ್ತ ಮಾಡರ್ನ್ ಅಲ್ಲ. ಕ್ರಿಕೆಟ್ ಎನ್ನುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಮಯ. ನಿಧಾನವಾಗಿ ಹೊಸ ರೀತಿಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದ ಹೊತ್ತು. ಪ್ರಸಿದ್ಧಿ, ಹಣ, ಜಾಹೀರಾತು ಹೀಗೆ ವಿವಿಧ ರಂಗಗಳಲ್ಲಿ ಕ್ರಿಕೆಟ್ ಕಲಿಗಳು ನಲಿಯುತ್ತಿದ್ದ ಹೊತ್ತು. ಆಟದ ಮಾದರಿಗಳೂ ಬದಲಾಗುತ್ತಿದ್ದ ಸಮಯ. ಹೊಸ ಹೊಸ ನಿಯಮಗಳನ್ನು ಪ್ರಯೋಗಗಳ ರೀತಿಯಲ್ಲಿ ಅಳವಡಿಕೆ ಮಾಡುತ್ತಿದ್ದ ಸಮಯ ಕೂಡ ಹೌದು. ಇಂತಹ 90ರ ದಶಕದ ಕೊಂಡಿಯಾಗಿ ಉಳಿದಿದ್ದರು ಶ್ರೀಲಂಕಾದ ಸ್ಪಿನ್ನರ್ ರಂಗಣ ಹೆರಾತ್.
2010ರಿಂದೀಚೆಗೆ 90ರ ದಶಕದಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಅನೇಕರು ನಿವೃತ್ತರಾಗಿದ್ದಾರೆ. ಈ ಸಂದರ್ಭದಲ್ಲೆಲ್ಲ 90ರ ದಶಕದ ವೈಭವಗಳು ನಿಧಾನವಾಗಿ ತೆರೆಯ ಮರೆಗೆ ಸರಿಯುವ ಲಕ್ಷಣಗಳು ಕಣ್ಣಿಗೆ ಕಾಣಿಸಲು ಆರಂಭಿಸಿದೆ. ದ್ರಾವಿಡ್, ಸಂಗಕ್ಕಾರ, ಜಯವರ್ಧನೆ, ಅಫ್ರೀದಿ, ತೆಂಡೂಲ್ಕರ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಮೆಕ್‌ಗ್ರಾಥ್ ಹೀಗೆ ಹಲವರು ವಿದಾಯ ಹೇಳಿದಾಗಲೂ 90ರ ದಶಕದ ನೆನಪು ಮರುಕಳಿಸಿವೆ. ಇದೀಗ 90ರ ದಶಕದ ಕೊನೆಯ ಕೊಂಡಿಯಾಗಿದ್ದ ಹೆರಾತ್ ವಿದಾಯದ ಮೂಲಕ ಅಂದಿನ ಜಮಾನಾದ ಆಟಗಳು ನೆನಪಾಗಿ ಮಾತ್ರ ಉಳಿಯಲಿವೆ.
ಇಂದಿನ ಕ್ರಿಕೆಟ್ ಅಂದಿನ ಕ್ರಿಕೆಟ್ ಆಗಿ ಉಳಿದಿಲ್ಲ. ಟೆಸ್‌ಟ್‌‌, ಏಕದಿನ ಮಾದರಿಯ ಜತೆಗೆ ಟಿ20 ಎಂಬ ಚುಟುಕಿನ, ಅಬ್ಬರದ ಕ್ರಿಕೆಟ್ ಮಾದರಿ ಎಲ್ಲರ ಮನಸ್ಸಿನಲ್ಲಿ ಉಳಿದುಹೋಗಿದೆ. ನಿಯಮಗಳು ಬದಲಾಗಿದೆ. 300+ ರನ್ ಗಳಿಸಿದರೂ ಅದು ಯಾವುದೇ ತಂಡಗಳಿಗೆ ಸವಾಲಾಗುತ್ತಿಲ್ಲ. ಏಕದಿನ ಮಾದರಿಯಲ್ಲಿ 200+ ರನ್ ಸರಾಗವಾಗಿ ಭಾರಿಸುವ ಬ್ಯಾಟ್‌ಸ್‌‌ಮನ್‌ಗಳ ಉದಯವಾಗಿದೆ. ಬೌಲರ್‌ಗಳು ಹೈರಾಣಾಗುವ ಸಮಯವಂತೂ ತೀರಾ ಹೆಚ್ಚಾಗಿದೆ. ಇಂತಹ ಸಮಯದಲ್ಲಿ 90ರ ದಶಕದ ಆಟಗಳು ಹೆಚ್ಚಿನ ಜನರಿಗೆ ನೆನಪಾಗುವುದಿಲ್ಲ.
ಕ್ರಿಕೆಟ್ ಜಗತ್ತಿನಲ್ಲಿ 90ರ ದಶಕದ ಆಟಗಾರರ ವೈಭವವನ್ನು ಇನ್ನು ಮುಂದೆ ಕಾಣಲು ಸಾಧ್ಯವೇ ಇಲ್ಲ. ಬದಲಾವಣೆ ನಿರಂತರ ಎಂಬ ಸಂದರ್ಭದಲ್ಲಿ ಆ ಸಮಯದ ಆಟಗಾರರು ಸದಾ ನೆನಪಾಗುತ್ತಿರುತ್ತಾರೆ. ಕ್ಲಾಸಿಕ್ ಆಟಗಳು, ರೋಚಕ ಪಂದ್ಯಗಳು ಸದಾ ನೆನಪಾಗುತ್ತಲೇ ಇರುತ್ತವೆ. 90ರ ದಶಕದ ಆಟಗಾರನಿಗೆ ವಿದಾಯ ಹೇಳುತ್ತ, ಹೊಸ ಪರ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ.





Thursday, October 25, 2018

ಗೆಳತಿ ನೀನಿಲ್ಲದೇ.!

ನಿನ್ನೊಡನೆ
ಮಾತಾಡಲಾಗದೇ
ಪದಗಳು ಬಿಕ್ಕುತ್ತಿವೆ
ಗೆಳತಿ...
ಮನದ ಕದ ಕಿರ್ರೆನ್ನುತ್ತಿದೆ..!!

ನನ್ನಷ್ಟಕ್ಕೆ ನಾನೇ
ಬೆಂದು ಹಣ್ಣಾಗುತ್ತಿದ್ದೇನೆ
ಗೆಳತಿ,
ನಿನ್ನ ಜೊತೆಯಿಲ್ಲದೇ..||

ಕಣ್ಣೆವೆಗಳಲ್ಲಿ
ನೀರು ತೊಟ್ಟಿಕ್ಕಲು
ಸಮಯ ಕಾದಿದೆ
ಗೆಳತಿ
ನೀನಿಲ್ಲದೇ..!!

(Incomplete...!!!)

Monday, October 22, 2018

ಅಡ್ಡ ಹೆಸರಿನ ಅಡ್ಡಾದಲ್ಲಿ…!

ಕಾಲೇಜು ದಿನಗಳಲ್ಲಿ ಅಡ್ಡ ಹೆಸರು ಎನ್ನುವುದು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಇಂತಹ ಅಡ್ಡ ಹೆಸರುಗಳಲ್ಲಿ ಹಲವು ಫನ್ನಿಯಾಗಿದ್ದರೆ, ಇನ್ನೂ ಕೆಲವುಗಳು ಸಿಲ್ಲಿಯಾಗಿರುತ್ತವೆ.
ಪ್ರತಿಯೊಬ್ಬರಿಗೂ ಅವರದೇ ಆದ ನಾಮಧೇಯಗಳಿದ್ದರೂ, ಅವರವರ ಹವ್ಯಾಸ, ಅಭಿನಯ, ಚಟ ಹೀಗೆ ಹಲವು ಕಾರಣಗಳಿಂದಾಗಿ ಹೆಸರಿನ ಮುಂದೆ ಅಡ್ಡ ಹೆಸರುಗಳು ಸೇರಿಕೊಂಡು ಬಿಡುತ್ತವೆ. ಕೆಲವೊಮ್ಮೆ ನಿಜವಾದ ಹೆಸರೇ ಮರೆತು ಹೋಗುವಷ್ಟರ ಮಟ್ಟಿಗೆ ಅಡ್ಡ ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಲವು ಸಾರಿ ಈ ಅಡ್ಡ ಹೆಸರುಗಳಿಗೆ ಎಲ್ಲರೂ ಹೊಂದಿಕೊಂಡು ಬಿಡುತ್ತಾರೆ. ಕೆಲವೊಮ್ಮೆ ಮಾತ್ರ ವಿರೋಧಗಳು ಕೇಳಿ ಬರುತ್ತವೆ ಅಷ್ಟೇ.
ಸುಮ್ಮನೆ ಕಾಲೇಜು ದಿನಗಳ ಗೆಳೆಯರ ಬಳಗವನ್ನು ಗಮನಿಸಿ, ಅವರ ಬಳಗದಲ್ಲಿ ಹೆಚ್ಚಿನ ಮಂದಿ ತಮ್ಮ ನಿಜವಾದ ಹೆಸರುಗಳಿಂದ ಕರೆದುಕೊಳ್ಳುವುದೇ ಇಲ್ಲ. ಕೆಂಪ, ಬಿಡ್ಡ, ಮಚ್ಚಾ, ಮಗಾ, ಕುಂಟ, ಕುಳ್ಳ ಹೀಗೆ ಅವರವರ ಗಾತ್ರಗಳಿಗನುಗುಣವಾಗಿ ಅಡ್ಡ ಹೆಸರುಗಳು ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು ಗುಂಪಿನಲ್ಲೊಬ್ಬ ಮಂಜ ಎನ್ನುವ ಹೆಸರಿನವನ್ನು ಇದ್ದರಂತೂ ಕೋಳಿ ಎಂಬ ಅಡ್ಡ ಹೆಸರು ಆತನಿಗೆ ಖಾಯಂ ಎಂಬಂತಾಗಿದೆ.
ಗೆಳೆಯರ ಬಳಗದಲ್ಲೊಬ್ಬ ಹುಲಿ ಇರುತ್ತಾನೆ, ದಾಸ ಇರುತ್ತಾ. ಇನ್ನು ಆ ಬಳಗದಲ್ಲಿ ಬ್ರಾಹ್ಮಣರ ಹುಡುಗರು ಇದ್ದರಂತೂ ಅವರಿಗೆ ಭಟ್ಟ, ಹೆಗಡೆ ಅಥವಾ ಪುಳಚಾರ್ ಎಂಬ ಅಡ್ಡ ಹೆಸರು ಖಾಯಂ.
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅಡ್ಡ ಹೆಸರುಗಳು ಬದಲಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರುಗಳೂ ರಗಡ್ ಆಗಿರುತ್ತವೆ. ಮೆಣಸಿನಕಾಯಿ, ಬೆಳ್ಳಕ್ಕಿ, ಇಂತಹ ಹೆಸರುಗಳು ಉತ್ತರ ಕರ್ನಾಟಕದಲ್ಲಿಕಾಣಸಿಗುತ್ತವೆ. ಅದೇ ದಕ್ಷಿಣ ಕರ್ನಾಟಕ ಭಾಗಗಳಿಗೆ ಬಂದರೆ ಅಲ್ಲಿ ಕರೆಯುವ ಅಡ್ಡ ಹೆಸರುಗಳು ಭಿನ್ನ. ಬಿಡ್ಡ, ಕೆಂಪ, ಕರಿಯ, ದೊಡ್ಡಣ್ಣ, ಚಿಕ್ಕಣ್ಣ ಇತ್ಯಾದಿಗಳು ಇಲ್ಲಿ ಜಾಸ್ತಿ. ಬೆಂಗಳೂರು ಕಡೆಗಳಲ್ಲಿ ಬಳಕೆಯಾಗುವ ಅಡ್ಡ ಹೆಸರುಗಳಲ್ಲಿ ತಮಿಳು, ತೆಲುಗಿ ಪ್ರಭಾವ ಜಾಸ್ತಿ ಇರುತ್ತವೆ. ಅದೇ ಕಾರಣಕ್ಕೆ ಬೆಂಗಳೂರು ಭಾಗದಲ್ಲಿ ಮಚ್ಚಾ, ಮಗಾ, ಸಿವಾ ಇಂತದ್ದೆಲ್ಲ ಜಾಸ್ತಿ. ಮಂಗಳೂರು, ಉಡುಪಿ, ಉತ್ತರ ಕನ್ನಡಗಳಲ್ಲಿ ಕರೆಯುವ ಅಡ್ಡ ಹೆಸರುಗಳು ಇನ್ನಷ್ಟು ಬೇರೆ ಬೇರೆಯಾಗಿರುತ್ತವೆ.
ಸಿನಿಮಾ ನಟರುಗಳ ಹೆಸರನ್ನು ಅಡ್ಡ ಹೆಸರಾಗಿ ಕರೆಯುವ ವಾಡಿಕೆ ಹಲವು ಸಂದರ್ಭಗಳಲ್ಲಿದೆ. ಯಾವುದೋ ಹುಡುಗನಿಗೆ ಯಾರೋ ಹೀರೋ ಇಷ್ಟವಾದರೆ, ಆ ನಟನ ಚಿತ್ರಗಳ ಹೆಸರನ್ನು ಹೇಳಿ ಕರೆಯುವುದು, ಇನ್ಯಾರಿಗಾದರೂ ಚಿನ್ರನಟನ ಹೋಲಿಕೆ ಇದ್ದರೆ ಅದೇ ಹೆಸರಿನಿಂದ ಕರೆಯುವುದು ಹೀಗೆ. ಇನ್ನು ಆತ/ಆಕೆ ಏನಾದರೂ ತಪ್ಪನ್ನು ಮಾಡಿದರೆ ಅದನ್ನೇ ಅಡ್ಡ ಹೆಸರಿನಿಂದ ಕರೆದಿರುವುದೂ ಇದೆ.
ನಾವು ಹೈಸ್ಕೂಲಿಗೆ ಹೋಗುವಾಗ ಒಬ್ಬ ವಿದ್ಯಾರ್ಥಿ ಇದ್ದ. ಆತನಿಗೆ ಹಕ್ಕಿಗಳನ್ನು ಬೇಟೆಯಾಡುವುದು ಅಂದರೆ ಬಹಳ ಖುಷಿಯ ಸಂಗತಿಯಾಗಿತ್ತು. ಆತನ ಸಾಮರ್ಥ್ಯ ಎಷ್ಟಿತ್ತೆಂದರೆ ಆತ ಕವಣೆ ಕಲ್ಲನ್ನು ಬೀಸಿಯೋ ಅಥವಾ ಚ್ಯಾಟರ್ ಬಿಲ್ಲಿನಿಂದ ಹೊಡೆದೋ ಪಿಕಳಾರ ಹಕ್ಕಿಗಳನ್ನು ಕೊಂದು ಅದನ್ನು ತಿನ್ನುತ್ತಿದ್ದ. ಇದರಿಂದಾಗಿ ಆತನಿಗೆ ಪಿಕಳಾರ ಎಂಬ ಅಡ್ಡ ಹೆಸರೇ ಬಂದಿತ್ತು. ಹಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡುವವರು, ಮದ್ಯದ ಕಂಪನಿಗಳ ಹೆಸರನ್ನು ಕಿರಿದಾಗಿಸಿ ಅಡ್ಡ ಹೆಸರಿನಿಂದ ಕರೆದಿದ್ದೂ ಇದೆ. ಎಂಸಿ, ಕೆಎಫ್ ಇತ್ಯಾದಿ ಅಡ್ಡ ಹೆಸರುಗಳು ಹಲವರಿಗಿರುತ್ತವೆ. ಹಲವು ಸಂದರ್ಭಗಳಲ್ಲಿ ಯಾರದ್ದಾದರೂ ಒನ್ ವೇ ಲವ್ ಇದ್ದರೆ, ಆ ಹುಡುಗಿಯ ಹೆಸರನ್ನು ಸೇರಿಸಿ ಕೀಟಲೆ ಮಾಡುವುದೂ ಇದೆ.
ಪ್ರತಿ ಗ್ರೂಪನ್ನೂ ಗಮನಿಸಿ. ಅಲ್ಲೊಬ್ಬ ದಾಸ ಇರುತ್ತಾನೆ. ಪುಂಡ ಇರುತ್ತಾನೆ. ಪೋಲೀಸ ಇರುತ್ತಾನೆ. ಮಿಲಿಟ್ರಿ ಇರುತ್ತಾನೆ. ಇಂತಹ ಹೆಸರುಗಳನ್ನು ಆಯಾಯಾ ವಿದ್ಯಾರ್ಥಿಗಳು ತಮ್ಮ ಪಾಲಿಗೆ ಸಿಕ್ಕ ಬಿರುದು, ಬಾವಲಿಗಳೆಂಬಂತೆ ಸಂತಸದಿಂದಲೇ ಸ್ವೀಕಾರ ಮಾಡುತ್ತಾರೆ. ಕಾಲೇಜು ದಿನಗಳಲ್ಲಿ ಆರಂಭವಾದ ಗೆಳೆತನ ಬದುಕಿನುದ್ದಕ್ಕೂ ಮುಂದುವರೆದ ಸಂದರ್ಭದಲ್ಲಿ ಆ ಮಿತ್ರ ಮಂಡಳಿಗಳು ಪರಸ್ಪರರನ್ನು ಅಡ್ಡ ಹೆಸರಿನಿಂದಲೇ ಕರೆದುಕೊಂಡ, ಕರೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಹುಡುಗಿಯರಿಗೂ ಕೂಡ ಅಷ್ಟೇ ವಿಶಿಷ್ಟ ಅಡ್ಡ ಹೆಸರುಗಳಿರುತ್ತವೆ. ಯಾರಾದರೂ ಉದ್ದವಾದ ಹುಡುಗಿ ಇದ್ದರೆ ಅವರನ್ನು ಕೊಕ್ಕರೆ ಎಂತಲೋ, ಒಂಟೆ ಎಂದೋ ಕರೆಯುತ್ತಾರೆ. ದಪ್ಪ ಇದ್ದವಳ ಹೆಸರು ಏನೇ ಇದ್ದರೂ ಆಕೆ ಡುಮ್ಮಿ ಎಂದೋ, ಟೆಡ್ಡಿಯಾಗಿಯೋ, ಕರಡಿಮರಿಯಾಗಿಯೋ ಕರೆಸಿಕೊಳ್ಳುತ್ತಾಳೆ.
ಹಲವು ಸಂದರ್ಭಗಳಲ್ಲಿ ಅಡ್ಡ ಹೆಸರಿನ ಬಳಕೆ ಅತಿರೇಕಕ್ಕೆ ಹೋದದ್ದೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಹೊಡೆದಾಟಗಳು ನಡೆದಿದ್ದೂ ಇದೆ. ಇಂತಹ ಅಡ್ಡ ಹೆಸರುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದದ್ದೂ ಇದೆ. ಆದರೆ ಇವೆಲ್ಲ ಸುಮ್ಮನೆ ಅತಿರೇಕ ಎನ್ನಿಸಿಕೊಳ್ಳುತ್ತವೆ.
ಕಾಲೇಜು ಬದುಕು ಎಂದ ಮೇಲೆ ಓದು, ಆಟ, ಓಟ, ಸಂತಸ, ಸಂಭ್ರಮಗಳು ಎಷ್ಟು ಸಹಜವೋ ಅದೇ ರೀತಿ ಅಡ್ಡ ಹೆಸರುಗಳೂ ಕೂಡ. ಇವು ಆ ದಿನಗಳ ಬದುಕಿನಲ್ಲಿ ಪ್ರಮುಖ ಭಾಗವಾಗಿ ಬದಲಾಗುತ್ತವೆ. ಇವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ಸುಮ್ಮನೇ ಬೇಸರಕ್ಕೆ ಕಾರಣವಾಗುವುದಷ್ಟೇ. ಬದಲಾಗಿ ಅಡ್ಡ ಹೆಸರುಗಳನ್ನು ಸುಮ್ಮನೇ ಎಂಜಾಯ್ ಮಾಡೋಣ ಬನ್ನಿ. ಕರೆಯುವವರು ಕರೆಯಲಿ, ಹೇಳುವವರು ಹೇಳಿಲಿ, ಖುಷಿಯಾಗಿರೋಣ. ಅಡ್ಡ ಹೆಸರುಗಳನ್ನು ಪ್ರೀತಿಯಿಂದ ಆದರಿಸಿ, ನಾವೂ ಕರೆದು, ಕರೆಸಿಕೊಂಡು ಖುಷಿ ಪಡೋಣ. ಅಡ್ಡ ಹೆಸರುಗಳು ಯಾಕಾಗಿ ಹುಟ್ಟಿಕೊಳ್ಳುತ್ತವೆ ಎನ್ನುವುದು ಕಷ್ಟ. ಅದೇ ರೀತಿ ಅಡ್ಡ ಹೆಸರನ್ನು ಇಡುವುದನ್ನು ತಡೆಯುವುದೂ ಕೂಡ ಕಷ್ಟ. ಯಾರೋ ಅಡ್ಡ ಹೆಸರನ್ನಿಟ್ಟರು ಎಂದು ಬೇಸರಿಸದೇ, ಅದಕ್ಕಾಗಿ ಸಿಟ್ಟು ಮಾಡಿಕೊಳ್ಳದೇ ಆ ಸಂದರ್ಭಗಳನ್ನು ಎಂಜಾಯ್ ಮಾಡೋಣ. ಸೂಕ್ತ ಸಂದರ್ಭ, ಸಮಯಗಳು ಸಿಕ್ಕರೆ ನಾವೂ ಕೂಡ ಯಾರಿಗಾದರೂ ಅಡ್ಡ ಹೆಸರು ಇಡಬಲ್ಲೆವು ಎಂಬುದನ್ನು ತೋರಿಸೋಣ. ತೀರಾ ಬದುಕಿಗೆ ಘಾಸಿಯಾಗದಂತೆ ಅಡ್ಡ ಹೆಸರನ್ನಿಟ್ಟು ಸಂಭ್ರಮಿಸೋಣ. ಅಲ್ಲವೇ.



Saturday, October 20, 2018

ಇದ್ದರೆ ಇರಬೇಕು ಇಂತಹ ಗುರು

ಕ್ರಿಕೆಟ್ ಲೋಕದ ಈ ಜಂಟಲ್‌ಮ್ಯಾನ್ ರನ್ ಗುಡ್ಡೆ ಹಾಕಿಲ್ಲ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಲಿಲ್ಲ. ಯಾವುದೋ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ರಾಜ್ಯಸಭಾ  ಸದಸ್ಯತ್ವ ಕೊಡಿ ಎನ್ನಲಿಲ್ಲ. ತಾವಾಯಿತು, ತಮ್ಮ ಶ್ರಮವಾಯಿತು ಎಂದುಕೊಂಡೇ ಉಳಿದರು. ತೆರೆಮರೆಯಲ್ಲೇ ಉಳಿದು, ಮುಂದಿನ ಜಮನಾದ ಸ್ಟಾರ್‌ಗಳನ್ನು ಕೆತ್ತುವ ಕೆಲಸ ಮಾಡಿದರು. ಹಾಗೆ ಮಾಡುತ್ತಲೇ ಎಲ್ಲರ ಕಣ್ಮಣಿ ಆದರು. ಬ್ಯಾಾಟಿಂಗ್ ಎಂಬ ಆಯುಧವನ್ನು ಕಳಚಿಟ್ಟರೆ ಏನಂತೆ, ನನ್ನೊಳಗಿನ ಪ್ರತಿಭಾ  ಪೋಷಣೆಯ ಶಕ್ತಿ ಸಾಕಷ್ಟಿದ್ದು, ನನ್ನಂತಹ ಇನ್ನೂ ಅನೇಕರನ್ನು ತಯಾರು ಮಾಡಬಲ್ಲೇ. . . ಎಂದು ಕೊಂಡು ಹೆಜ್ಜೆ ಹಾಕಿದ ವ್ಯಕ್ತಿ ಇವರು. ಇವರೇ ರಾಹುಲ್ ಶರತ್‌ಚಂದ್ರ ದ್ರಾಾವಿಡ್. ಭಾರತ ಎ ಕ್ರಿಕೆಟ್ ತಂಡ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್.
ಪದಾರ್ಪಣೆ ಪಂದ್ಯದಲ್ಲಿ ಶತಕ ಭಾರಿಸಿದ ಪೃಥ್ವಿ ಶಾ ಮೊದಲು ಪೋನ್ ಮಾಡಿದ್ದು ದ್ರಾವಿಡ್‌ಗೆ, ನನ್ನ ಆಟ ಉತ್ತಮವಾಗಲು, ಫಾರ್ಮಿಗೆ ಮರಳಲು ಕಾರಣವಾದದ್ದು ಗುರು ರಾಹುಲ್ ದ್ರಾವಿಡ್ ಎಂದು ಹೇಳಿದ್ದು ಮಯಾಂಕ್ ಅಗರ್ವಾಲ್, ಟೆಸ್ಟ್ಗೆ ಆಯ್ಕೆಯಾಗಿ ಅರ್ಧ  ಶತಕ ಭಾರಿಸಿದ ಹನುಮ ವಿಹಾರಿ ಧನ್ಯವಾದ ಸಲ್ಲಿಸಿದ್ದು ಗುರು ದ್ರಾವಿಡ್‌ಗೆ, ಅಷ್ಟೇ ಏಕೆ, ಭಾರತ ಟೆಸ್ಟ್  ತಂಡದ ಮಧ್ಯಮ ಕ್ರಮಾಂಕದ ಖಾಯಂ ಆಟಗಾರ ತಮ್ಮ ಫಾರ್ಮ್ ಕಳೆದುಕೊಂಡಾಗೆಲ್ಲ ಸಲಹೆ ಪಡೆಯುವುದು ದ್ರಾವಿಡ್ ಬಳಿಯೇ.
ದ್ರಾವಿಡ್ ಎಂಬ ಕ್ರಿಕೆಟ್ ಲೋಕದ ಮಹಾ ಗುರುವಿನ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಈ ಮೇಲಿನ ಅಭಿಪ್ರಾಯಗಳೇ ದ್ರಾವಿಡ್ ಕಲಿಸುವಿಕೆಯನ್ನು ತಿಳಿಸಿ ಹೇಳುತ್ತವೆ.
ರಾಹುಲ್ ದ್ರಾವಿಡ್. ಕೆಲವೇ ವರ್ಷಗಳ ಹಿಂದೆ ಭಾರತದ ಪಾಲಿಗೆ ದಿ ವಾಲ್ ಆಗಿದ್ದವರು. ಕಲಾತ್ಮಕತೆಗೆ, ನಂಬಿಕೆಗೆ, ನಿರಂತರ ಪ್ರದರ್ಶನಕ್ಕೆ ಇನ್ನೊೊಂದು ಹೆಸರಾಗಿದ್ದವರು. ಟೆಸ್ಟ್  ಕ್ರಿಕೆಟ್‌ನಲ್ಲಿ  ಭಾರತದ ತಂಡದ ರಕ್ಷಕನಾಗಿ, ಆಪದ್ಭಾಾಂಧ ವನಾಗಿದ್ದವರು. ಎಲ್ಲ ನಂಬಿಕಸ್ಥ ಬ್ಯಾಟ್‌ಸ್‌‌ಮನ್‌ಗಳು ವಿಲವಾದ ಸಂದರ್ಭದಲ್ಲೂ ದ್ರಾವಿಡ್, ನಾನಿದ್ದೇನೆ ಎಂದು ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡಿದವರು. ಹಲವು ಟೆಸ್‌ಟ್‌ ಹಾಗೂ ಏಕದಿನ ಪಂದ್ಯಗಳನ್ನು ಭಾರತದ ಪಾಲಿಗೆ ಉಳಿಸಿಕೊಟ್ಟವರು. ಇಂತಹ ದ್ರಾವಿಡ್ ನಿವೃತ್ತಿಯಾದಾಗ ಭಾರತದ  ಪಾಲಿಗೆ ಮುಂದೇನು ಎನ್ನುವ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ.
ಕ್ರಿಕೆಟ್ ಅಂಗಣದಿಂದ ನಿವೃತ್ತಿಯಾದರೇನಂತೆ ನನ್ನಂತಹ ಹಲವು ದ್ರಾವಿಡ್‌ರನ್ನು ಸೃಷ್ಟಿ ಮಾಡಿಕೊಡುತ್ತೇನೆ ಎಂದು ನಿಲುವು ತಾಳಿದ್ದು ಇದೇ ದಿ ವಾಲ್. ಆಟಗಾರನಾಗಿ ವಿದಾಯ ಹೇಳಿದ್ದರೂ ತರಬೇತುದಾರನಾಗಿ ಭಾರತದ  ಪಾಲಿಗೆ ಮತ್ತದೇ ಆಪದ್ಬಾಾಂಧವನ ಪಾತ್ರ ವಹಿಸುತ್ತಿರುವವನು ದ್ರಾವಿಡ್.
ಸುಮ್ಮನೇ ಗಮನಿಸಿ, ಅದೆಷ್ಟೋ ಯುವಕರು ಭಾರತ  ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ತುದಿಗಾಲಲ್ಲಿದ್ದಾರೆ. ಮತ್ತೆ ಹಲವರು ತಮ್ಮ ಬ್ಯಾಟಿಂಗ್ ಪ್ರತಿಭೆಯ ಮೂಲಕ ರಾಷ್ಟ್ರೀಯ ತಂಡದ ಕದವನ್ನು ತಟ್ಟುತ್ತಿದ್ದಾರೆ. ಮೊದಲಿನಂತೆ ಯಾವುದೇ ಆಟಗಾರ ವಿಫಲನಾದರೆ ಯಾರನ್ನು ಹುಡುಕುವುದು ಎನ್ನುವ ಪ್ರಶ್ನೆ ಇದೀಗ ಆಯ್ಕೆ ಮಂಡಳಿಯನ್ನು ಕಾಡುವುದಿಲ್ಲ. ದ್ರಾವಿಡ್ ಹಲವು ಆಟಗಾರರನ್ನು ಬದಲಿಯಾಗಿ ರೂಪಿಸಿ ಇಟ್ಟಿದ್ದಾರೆ. ಇದೇ ದ್ರಾವಿಡ್ ತಾಕತ್ತು.
ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಿಷಬ್ ಪಂಥ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅನುಕೂಲ್ ರಾಯ್, ಹನುಮ ವಿಹಾರಿ, ಶುಬ್‌ಮನ್ ಗಿಲ್, ಮನ್‌ಜ್ಯೋತ್ ಕಲ್ರಾ, ಹಿಮಾಂಶು ರಾಣಾ... ದ್ರಾವಿಡ್ ಗರಡಿಯಲ್ಲಿ ಪಳಗಿ, ಬೆಳಗಿದವರ ಲೀಸ್‌ಟ್‌ ಹೀಗೆಯೇ ಮುಂದುವರಿಯುತ್ತದೆ. ಮುಂದುವರಿಯುತ್ತಲೇ ಇದೆ ಬಿಡಿ.
ದ್ರಾವಿಡ್ ಭಾರತದ ಎ ತಂಡದ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾಗ, ಅವರು ಹಿರಿಯರ ತಂಡದ ಕೋಚ್ ಆಗಬೇಕಿತ್ತು ಎಂದು ಬಯಸಿದವರು ಅನೇಕರು. ಆ ಸಂದರ್ಭದಲ್ಲಿ  ಅಂತಹ ಆಫರ್‌ನ್ನು ನಯವಾಗಿ ತಿರಸ್ಕರಿಸಿದ ದ್ರಾವಿಡ್, ಕ್ರಿಕೆಟ್ ಲೋಕದ ಯುವ ಮನಸ್ಸುಗಳನ್ನು ಮಾಗಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಷ್ಟೇ ಅಲ್ಲ, ಗೆಲುವು ಸಾಸುವ ಜತೆ ಹೇಗೆ ಸಂಭ್ರಮಿಸಬೇಕು ಎಂಬುದನ್ನೂ ಹೇಳಿಕೊಟ್ಟರು. ಅಪ್ಘಾನಿಸ್ಥಾನದಂತಹ ತಂಡಗಳು ಅಚ್ಚರಿಯ ಹಾಗೂ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ ನೀಡಿದಾಗೆಲ್ಲ ಅಂತವರ ಬೆನ್ನಿಗೆ ನಿಂತು ಶ್ಲಾಘಿಸುವ ಕಾರ್ಯವನ್ನೂ ಕೈಗೊಂಡು ಆದರ್ಶ ಮೆರೆದರು.
ದ್ರಾವಿಡ್ ಕ್ರಿಕೆಟ್ ಕೋಚ್ ಆಗಿ ಅಷ್ಟೇ ಕಾರ್ಯ ನಿರ್ವಹಿಸಲಿಲ್ಲ. ಬದಲಾಗಿ ಅಥ್ಲೆಟಿಕ್‌ಸ್‌‌ನ ಪ್ರತಿಭೆಗಳ ಬೆನ್ನಿಗೆ ನಿಲ್ಲುವ ಕಾರ್ಯವನ್ನೂ ಮಾಡಿದರು. ಏಷ್ಯನ್ ಗೇಮ್‌ಸ್‌‌ನಲ್ಲಿ ಪದಕ ಗೆದ್ದ ಸ್ವಪ್ನ ಬರ್ಮನ್‌ಳಂತಹ ಹಲವು ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ನಿರೂಪಿಸಿದರು.
ದ್ರಾವಿಡ್ ಶಿಷ್ಯರು ಇದೀಗ ಭಾರತದ ಕ್ರಿಕೆಟ್ ತಂಡದ ಆಧಾರ ಸ್ಥಂಭವಾಗುವಂತಹ ಹಂತ ತಲುಪಿದೆ. ದ್ರಾವಿಡ್ ಹುಡುಗರು ಇದೀಗ ಸದ್ದು ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಭಾರತ ತಂಡಕ್ಕೆ ಆಯ್ಕೆ ಆದ ಸಂದರ್ಭದಲ್ಲಿ ತನ್ನ ಈ ಸಾಧನೆಗೆ ದ್ರಾವಿಡ್ ತರಬೇತಿ ಹಾಗೂ ಸಲಹೆಯೇ ಕಾರಣ ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಇದ್ದರೆ ಇರಬೇಕು ಇಂತಹ ಗುರು ಎಂಬಂತಾಗಿದೆ.

Thursday, October 11, 2018

ಮ್ಯಾಕ್ಸ್ ಮುಲ್ಲರನ ದತ್ತು ಪುತ್ರ ಭಗವಾನ್ ಮನಸ್ಸಿನ ಗೊಂದಲಗಳು


ಕೆಲವರಿರುತ್ತಾರೆ, ಅವರಿಗೆ ಇದ್ದದ್ದರಲ್ಲಿ ಕೊಂಕನ್ನು ಹುಡುಕುವುದು, ತಪ್ಪನ್ನು ಹುಟ್ಟು ಹಾಕುವುದು ಇತ್ಯಾದಿಗಳ ಮೇಲೆಯೇ ಆಸಕ್ತಿ. ಎಲ್ಲವನ್ನೂ ಸುಳ್ಳು ಎನ್ನುವ ಮೂಲಕ ತಮ್ಮ ಅಸ್ತಿತ್ವವನ್ನು ಪ್ರಚುರ ಪಡಿಸುವುದೇ ಬಹುಮುಖ್ಯ ಕಾರ್ಯವಾಗುತ್ತದೆ. ಅಂತಹ ಸಾಲಿನಲ್ಲಿ ಮುಖ್ಯವಾಗಿರುವವರೇ ಭಗವಾನ್.ಕಳೆದ ಕೆಲವು ವರ್ಷಗಳನ್ನು ನೋಡಿದರೆ ಪ್ರತಿ ದಸರಾ, ನವರಾತ್ರಿ ಬಂತೆಂದರೆ ಸಾಕು, ದೀಪಾವಳಿ ಬಂತೆಂದರೆ ಸಾಕು ಭಗವಾನ್ ತಮ್ಮ ನಾಲಗೆಯನ್ನು ಉದ್ದ ಮಾಡುತ್ತಾಾರೆ. ರಾಮ ಸುಳ್ಳು, ರಾಮಾಯಣ ನಡೆದಿಲ್ಲ, ಸೀತೆ ಸುಳ್ಳು, ಮಹಾಭಾರತ ನಡೆದಿಲ್ಲ, ಪುರಾಣಗಳೆಲ್ಲ ಪೊಳ್ಳು ಎನ್ನುವ ಅರ್ಥದಲ್ಲಿ ಮಾತನಾಡುತ್ತಾಾರೆ. ಯಜ್ಞ ಯಾಗಾದಿಗಳಲ್ಲಿ ಯಾವುದೇ ಶಕ್ತಿ ಇಲ್ಲ, ನೀವು ಕಟ್ಟಿಕೊಂಡ ದಾರಕ್ಕೆ ಶಕ್ತಿ ಇದ್ದರೆ ಪಾಕಿಸ್ಥಾನ ಹಾಗೂ ಚೀನಾದ ಗಡಿಗೆ ಹೋಗಿ ಯಜ್ಞ ಯಾಗಾದಿಗಳನ್ನು ಮಾಡಿ ಎಂದು ಹಲುಬುತ್ತಾರೆ. ಸಹಸ್ರ ಸಹಸ್ರ ವರ್ಷಗಳ ಭವ್ಯ ಇತಿಹಾಸವಿರುವ ಭಾರತದ ಕುರಿತು ಹೀಗಳೆಯುವ ಮಾತನಾಡುತ್ತಾಾರೆ. ಅಷ್ಟೇ ಏಕೆ ಯಾರಾದರೂ ತಮ್ಮನ್ನು ಉಪನ್ಯಾಾಸಕ್ಕೆ ಕರೆದರೆ, ಅಂತಹ ವೇದಿಕೆಗಳಲ್ಲಿ ಹಿಂದೂ ದೇವರುಗಳನ್ನು ಬಯ್ಯಲು ಶುರುವಿಟ್ಟುಕೊಳ್ಳುತ್ತಾಾರೆ. ನಮ್ಮ ಪುರಾಣಗಳ ಬಗ್ಗೆ, ಗಣಪ, ಕೃಷ್ಣ, ಶಿವ, ರಾಮ, ವಿಷ್ಣು ಹೀಗೆ ನಮ್ಮ ಅಸಂಖ್ಯಾತ ದೇವರುಗಳ ಬಗ್ಗೆ ತಮ್ಮದೇ ಆದ ಹೊಸ ವ್ಯಾಖ್ಯಾನಗಳನ್ನು ನೀಡಲು ಆರಂಭಿಸುತ್ತಾರೆ. ಯಜ್ಞ ಯಗಾದಿಗಳನ್ನು ದ್ವೇಷ ಮಾಡುತ್ತಾರೆ. ತಮ್ಮ ಮನಸ್ಸಿನಲ್ಲಿ ಏನೇನು ಅಂಶಗಳು ಮೂಡುತ್ತವೆಯೋ ಅದನ್ನೆಲ್ಲ ಸಂಶೋಧನೆ ಎಂದು ಹೇಳುವ ಮೂಲಕ ಇತಿಹಾಸವೆಂಬ ಹಸಿ ಗೋಡೆಯ ಮೇಲೆ ಹರಳನ್ನು ಅಂಟಿಸಲು ಯತ್ನಿಸುತ್ತಾರೆ.ಇಂತಹ ಭಗವಾನರ ಮಾತುಗಳಿಗೆ ತಲೆಯಲ್ಲಾಡಿಸಲು ಕೆಲವು ವಂದಿ ಮಾಗಧರೂ ಇದ್ದಾರೆ. ಭಗವಾನ್ ಹೇಳಿದ್ದೆಲ್ಲ ಸತ್ಯ ಎನ್ನುವ ಹಿರಿ-ಕಿರಿ ಹಾಗೂ ಕಿರಿಕಿರಿ ತಲೆಗಳೂ ಇವೆ. ಭಗವಾನ್ ಒಂದು ಬಾಣವನ್ನು ಬಿಡುವುದನ್ನೇ ಕಾಯುತ್ತಿರುವ ಇಂತಹ ಪ್ರಭೃತಿಗಳೆಲ್ಲ ಆ ಬಾಣದ ಹಿಂದೆ ತಮ್ಮದೂ ಒಂದಿರಲಿ ಎಂದು ಸಾಲು ಸಾಲು ಕಿರು, ಮರಿ ಬಾಣಗಳನ್ನು ಬಿಡಲು ಆರಂಭಿಸುತ್ತಾರೆ. ಇಂತಹ ಪ್ರಭೃತಿಗಳಿಗೆ ನಿಜವಾದುದ್ಯಾವುದೂ ಬೇಕಾಗಿಲ್ಲ. ಇತಿಹಾಸವನ್ನು ತಿರುಚುವುದು, ನಮ್ಮದೇ ಸಂಪ್ರದಾಯ, ಸಂಸ್ಕೃತಿಗಳನ್ನು ಹೀಗಳೆಯುವುದು ಅಷ್ಟೇ ಸಾಕಾಗಿರುತ್ತದೆ. ಜತೆಗೆ ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ, ತುಳಿತ, ದಮನ ಇತ್ಯಾಾದಿಗಳನ್ನು ಹುಟ್ಟು ಹಾಕುವ ಅನಿವಾರ್ಯತೆ, ಅಗತ್ಯತೆ, ಅದರ ನಡುವೆಯೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಜರೂರತ್ತಿರುತ್ತದೆ.ಸೂಕ್ಷ್ಮವಾಗಿ ಗಮನಿಸಿದಾಗ ಭಗವಾನ್ ಮಾತುಗಳಲ್ಲಿ ಅಡಗಿರುವ ಹಲವು ವೈರುಧ್ಯಗಳು, ಗೊಂದಲಗಳು, ವೈರುಧ್ಯಗಳು ತಟ್ಟನೆ ನಮ್ಮ ಕಣ್ಣೆದುರಿಗೆ ಬರುತ್ತವೆ. ಬಹುಶಃ ಇದನ್ನು ಭಗವಾನ್ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡಬಹುದು ಅಥವಾ ಜಾರಿಕೊಂಡು ಇನ್ನೇನೋ ಹೇಳಿ ತಪ್ಪಿಸಿಕೊಳ್ಳಬಹುದೇನೋ. ಇನ್ನೂ ಗಟ್ಟಿಯಾಗಿ ಕೇಳಿದರೆ ತುಳಿತ, ಹೇರಿಕೆ ಇತ್ಯಾದಿ ಶಬ್ದಗಳನ್ನು ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಭಗವಾನ್ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೆಂದರೆ ರಾಮಾಯಣ ಸುಳ್ಳು ಎನ್ನುವ ವಿಷಯವನ್ನು. ರಾಮ ಸುಳ್ಳು, ಸೀತೆ ಭೂಮಿಯ ಅಂತರಂಗದಿಂದ ಬಂದಿಲ್ಲ ಎನ್ನುವ ವಿಷಯವನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಇದೇ ಭಗವಾನ್ ರಾವಣನ ಕುರಿತು ಮಾತನಾಡುತ್ತಾರೆ. ರಾವಣ ರಾಕ್ಷಸನಲ್ಲ, ಆತನನ್ನು ಬೇಕೆಂದೇ ರಾಕ್ಷಸನಂತೆ ಚಿತ್ರಿಸಲಾಗಿದೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳ ನಡುವೆಯೇ ಹಲವು ಗೊಂದಲಗಳು ಕಾಡುತ್ತವೆ. ರಾಮ, ಸೀತೆ ಸುಳ್ಳು ಎನ್ನುವ ಭಗವಾನ್‌ಗೆ ರಾವಣ ಮಾತ್ರ ನಿಜವಾಗಿ ಕಾಣುವುದು ವಿಚಿತ್ರ. ರಾಮಾಯಣವೇ ನಡೆದಿಲ್ಲ ಎಂದು ಹೇಳುವ ಇವರು ರಾವಣ ಮಾತ್ರ ನಿಜ ಎನ್ನುವ ಮೂಲಕ ತಮ್ಮ ಮನಸ್ಸಿನಲ್ಲಿಯೇ ಗೊಂದಲ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ರಾಮಾಯಣ ಸುಳ್ಳು ಎನ್ನುವ ಇವರು ರಾವಣನನ್ನೂ ಸುಳ್ಳು ಎಂದು ಹೇಳಲು ಹೋಗುವುದಿಲ್ಲ. ಅದೇ ರೀತಿ ರಾವಣನನನ್ನು ಹೀರೋ ಎಂದು ಪ್ರಚುರಪಡಿಸಲು ಮುಂದಾಗುವ ಭಗವಾನ್ ರಾಮಾಯಣವನ್ನು ತಾವೇ ಸುಳ್ಳು ಎಂದು ಹೇಳಿದ್ದನ್ನು ಜಾಣರಂತೆ ಮರೆತುಬಿಡುತ್ತಾರೆ.ಬಾಯಿ ಬಿಟ್ಟರೆ ಬ್ರಾಹ್ಮಣರಿಂದ ದಲಿತರ ಮೇಲೆ ಅನ್ಯಾಯವಾಗಿದೆ ಎಂದು ಹೇಳುವವರು ಭಗವಾನ್. ವೈದಿಕರು ಹಿಂದುಳಿದವರನ್ನು ತುಳಿದರು ಎಂದು ಒರಲುತ್ತಾರೆ. ಅರಚುತ್ತಾರೆ. ಇದೇ ಭಗವಾನ್ ರಾವಣನನ್ನು ಪೂಜಿಸಬೇಕು ಎನ್ನುತ್ತಾರೆ. ಆದರೆ ರಾವಣ ಬ್ರಾಹ್ಮಣನಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರವನ್ನೇ ನೀಡುವುದಿಲ್ಲ. ಆರ್ಯರೆಂದರೆ ಬ್ರಾಹ್ಮಣರು, ದ್ರಾವಿಡರೆಲ್ಲ ದಲಿತರು ಎಂದು ಹೇಳುವ ಮೂಲಕ ಹೊಸದೊಂದು ವಾದ ಸರಣಿಯನ್ನು ಹುಟ್ಟು ಹಾಕುತ್ತಾರೆ. ರಾವಣನನ್ನು ದ್ರಾವಿಡರ ಸಾಲಿಗೆ ಸೇರಿಸಿಕೊಳ್ಳುವ ಇವರು, ಅಂತಹ ರಾವಣ ಬ್ರಾಹ್ಮಣನಲ್ಲವೇ ಎಂದರೆ ಮಾತನಾಡುವುದಿಲ್ಲ. ಭಗವಾನ್ ಮನಸ್ಸಿನ ಕುತರ್ಕದಂತೆಯೇ ಬ್ರಾಹ್ಮಣನಾದ ರಾವಣನನ್ನು ಇತರರು ತುಳಿದರಲ್ಲವೇ ಎಂದರೆ ಅದಕ್ಕೆ ಉತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.ದಸರೆ ಸಂದರ್ಭದಲ್ಲಿ ಮೈಸೂರು ಸಡಗರ, ಸಂಭ್ರಮದಲ್ಲಿ ಮಿಂದೇಳುತ್ತದೆ. ಹಬ್ಬವನ್ನಾಚರಿಸುತ್ತದೆ. ಇಡೀ ದೇಶವೇ ದಸರೆ ಹಬ್ಬದ ಸಡಗರವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತದೆ. ನಮ್ಮೊೊಳಗಿನ ಅಂಧಃಕಾರವನ್ನು ಹೋಗಲಾಡಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು ಎಂದು ಬಯಸುತ್ತದೆ. ಆದರೆ ಆ ಸಂದರ್ಭಗಳಲ್ಲೇ ಭಗವಾನ್ ತಮ್ಮಲ್ಲಿನ ಅಂಧಃಕಾರವನ್ನು ಸಮಾಜದ ಮೇಲೆ ಕಾರುವ ಯತ್ನವನ್ನು ಮಾಡುತ್ತಾರೆ. ಮಹಿಷಾಸುರನ ಪರ ವಹಿಸಿ ಮಾತನಾಡುತ್ತಾರೆ. ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯ ಮೇಲಿಟ್ಟು ಮೆರವಣಿಗೆ ಮಾಡುವುದನ್ನು ವಿರೋಧಿಸುತ್ತಾರೆ. ಮಹಿಷನ ಮೂರ್ತಿಯನ್ನು ಇಡಬೇಕು, ಮಹಿಷಾಸುರ ದಸರಾವನ್ನು ಆಚರಿಸಬೇಕು ಎಂದೆಲ್ಲ ಬಡಬಡಿಸುತ್ತಾರೆ. ಆದರೆ ಹೀಗೆಲ್ಲ ಹುಯ್ಯಲಿಡುವ ಭಗವಾನ್, ಈ ಹಿಂದೆ ಹಲವು ವೇದಿಕೆಗಳಲ್ಲಿ ದೇವರು ಸುಳ್ಳು, ಪುರಾಣಗಳೆಲ್ಲ ಮಿಥ್ಯ ಎಂದು ಹೇಳಿದ್ದನ್ನು ಮರೆತುಬಿಡುತ್ತಾರೆ. ಇವರ ಪ್ರಕಾರ ದೇವರುಗಳು, ಪುರಾಣಗಳು ಮಾತ್ರ ಸುಳ್ಳು, ಆದರೆ ರಾಕ್ಷಸರು ಮಾತ್ರ ಸಥ್ಯವೇ?ಈ ಎಲ್ಲ ಅಂಶಗಳನ್ನೂ ಗಮನಿಸಿದಾಗ ಭಗವಾನ್ ಮನಸ್ಸು ಗೊಂದಲಗಳ ಗೂಡು ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಮ್ಯಾಕ್ಸ್ ಮುಲ್ಲರ್ ಭಾರತದ ಸಂಸ್ಕೃತಿಯನ್ನು ನಾಶ ಮಾಡುವ ಪಣ ತೊಟ್ಟು ಅದಕ್ಕೆ ಪೂರಕ ಕಾರ್ಯಗಳನ್ನು ಕೈಗೊಂಡನಂತೆ. ದೀಗ ಭಗವಾನ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅವರನ್ನು ಮ್ಯಾಕ್ಸ್ ಮುಲ್ಲರ್ ವಾದಿ ಎಂದು ಕರೆಯಬಹುದು. ಅದಿಲ್ಲವಾದರೆ ಮ್ಯಾಕ್ಸ್ ಮುಲ್ಲರ್‌ನನ್ನು ಗುರು ಎಂದು ದತ್ತು ತೆಗೆದುಕೊಂಡ ಮಹಾನುಭಾವ ಎಂದು ಕರೆಯಬಹುದು.ಆರ್ಯ-ದ್ರಾವಿಡ ಸಿದ್ಧಾಾಂತ ಸಂಶೋಧನೆಗಳ ಮೂಲಕವೇ ಸುಳ್ಳು ಎಂದು ಸಾಬೀತಾಗಿದ್ದರೂ ಅದೇ ಅಂಶವನ್ನು ಹಿಡಿದುಕೊಂಡು ಜಗ್ಗಾಡುತ್ತ, ನಿಜ ಎಂದು ಬಿಂಬಿಸಲು ಮುಂದಾಗಿರುವ ಭಗವಾನ್ ಯಾವ ಪುರುಷಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ?ತಾವು ಪ್ರತಿಪಾದಿಸುವ ಅಂಶಗಳಿಗೆ ಕಟ್ಟು ಬೀಳಲಾಗದೇ ಅರ್ಧಮರ್ಧ ಮಾತ್ರ ವಿಷಯಗಳನ್ನು ಹೇಳಿ, ಅದನ್ನೂ ಸಮರ್ಥನೆ ಮಾಡಿಕೊಳ್ಳಲಾಗದೇ ನಗೆಪಾಟಲಿಗೀಡಾಗುತ್ತಿದ್ದಾರೆ. ಹಿಂದೂ ದೇವರನ್ನು, ಪುರಾಣಗಳನ್ನು ವಿರೋಧಿಸಬೇಕು. ದಾನವರ ಪೂಜೆಗೆ ಆದ್ಯತೆ ನೀಡಬೇಕು. ದೇವರನ್ನು ವಿರೋಧಿಸುವ, ದಾನವ ಪೂಜೆಗೆ ಮಹತ್ವ ನೀಡುವ ವಿದ್ಯಾರ್ಥಿ ವೃಂದವನ್ನು ಸೃಷ್ಟಿ ಮಾಡಬೇಕು ಇಂತಹ ಮನಸ್ಥಿತಿಯನ್ನು ಹೊಂದಿರುವ ಭಗವಾನ್ ತಮ್ಮ ಇಂತಹುದೇ ಮಾತುಗಳಿಂದ ಸಮಾಜದಲ್ಲಿ ಇನ್ನಷ್ಟು ನಿಕೃಷ್ಟವಾಗುತ್ತಿದ್ದಾರೆ. ತಾವೇ ಮಾತಿನ ಮೂಲಕ ಹೇಳಿದ್ದನ್ನು ತಾವೇ ಸಮರ್ಥನೆ ಮಾಡಿಕೊಳ್ಳಲು ಒದ್ದಾಡಿ, ತಾವೊಬ್ಬ ಅಪ್ರಬುದ್ಧ ಎಂಬುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ.ಇಂತಹ ಗೊಂದಲದ ಮನಸ್ಥಿತಿಯ ಭಗವಾನ್ ಬಹಿರಂಗ ಚರ್ಚೆಗೂ ಬರುವ ಪ್ರಯತ್ನ ನಡೆಸುವುದಿಲ್ಲ. ಬಹಿರಂಗ ಚರ್ಚೆಗೆ ಬಂದರೂ ಅಲ್ಲಿ ಸಮರ್ಪಕ ಉತ್ತರವನ್ನು ನೀಡುವುದೇ ಇಲ್ಲ.ತಾವೇ ಗೊಂದಲದ ತಳಹದಿಯ ಮೇಲೆ ಕೂತಿರುವಾಗ, ತಾವು ಹೇಳುತ್ತಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಶಕ್ತಿಯೇ ಇಲ್ಲವಾಗಿರುವಾಗ, ತಮ್ಮದೇ ನೆಲೆಗಟ್ಟನ್ನು, ತಮ್ಮದೇ ಸಂಸ್ಕೃತಿಯ ಕುರಿತಂತೆ ಇತಿಹಾಸದ ಸಂಶೋಧನೆ ಹೆಸರಿನಲ್ಲಿ ಸುಳ್ಳಿನ ಸರಮಾಲೆ ಕಟ್ಟುವಂತಹ, ಉಪನ್ಯಾಸಕ ಭಗವಾನ್ ವಿದ್ಯಾರ್ಥಿಗಳಿಗೆ ಇನ್ನೇನನ್ನು ತಾನೇ ಕಲಿಸಬಲ್ಲರು? ಯಾವ ನೆಲೆಗಟ್ಟಿನ ಮೇಲೆ ಶಿಷ್ಯ ಸಮೂಹವನ್ನು ಬೆಳೆಸಲು ಮುಂದಾಗಿದ್ದಾರೆ? ಇಂತಹವರ ಮುಂದೆ ಭಗವಂತನೇ ಬಂದು, ತಾನು ಭಗವಂತ ಎಂದರೂ ಅವರ ಕುರಿತು ಅನುಮಾನವನ್ನು ವ್ಯಕ್ತಪಡಿಸದೇ ಬಿಟ್ಟಾಾರೆಯೇ? ಹೇ ಭಗವಾನ್, ಈ ಭಗವಾನ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ?

Wednesday, October 10, 2018

ಬಾಕ್ಸಿಂಗ್ ರಿಂಗ್ ಗೆ ಇಳಿದ ಚಾಯ್‌ವಾಲಾ

ಭಾರತ ಪ್ರತಿಭಾವಂತ ಕ್ರೀಡಾಪಟುಗಳ ದೇಶ. ಭಾರತದಲ್ಲಿ ಎಲ್ಲಿ ಯಾವ ಪ್ರತಿಭೆಯನ್ನು ಹೊಂದಿರುವ ಕ್ರೀಡಾಪಟುಗಳಿದ್ದಾರೆ ಎನ್ನುವುದು ಕಷ್ಟ. ಕೂಲಿ ಕಾರ್ಮಿಕನ ಮಗಳು, ಪಿಡಬ್ಲುಡಿ ಕೆಲಸಗಾರನ ಮಗ, ದನ ಕಾಯುವವ, ಮಾರುಕಟ್ಟೆಯಲ್ಲಿ ಮೂಟೆ ಎಸೆಯುವವ ಹೀಗೆ ಹಲವರು ತಮ್ಮ ಛಲ, ಶ್ರಮದಿಂದಾಗಿ ವಿವಿಧ  ಕ್ರೀಡೆಗಳಲ್ಲಿ ಪಾಲ್ಗೊೊಂಡು ದೇಶಕ್ಕೆ ಪದಕಗಳನ್ನೇ ಗೆದ್ದುಕೊಡುತ್ತಿದ್ದಾರೆ. ಅಂತಹ ಸಾಲಿಗೆ ಇನ್ನೋರ್ವ ಸೇರ್ಪಡೆಯಾಗಿದ್ದಾನೆ. ಅವನೇ ರಾಜೇಶಕುಮಾರ್ ಕಸಾನಾ.
ರಾಜೇಶ ಕುಮಾರ್ ಕಸಾನಾ ಪ್ರಸ್ತುತ ಬಾಕ್ಸಿಂಗ್ ರಿಂಗ್‌ನಲ್ಲಿ ಸದ್ದು ಮಾಡುತ್ತಿರುವ ಕ್ರೀಡಾಪಟು. ದೇಶದ ನಂಬರ್ 1ವೃತ್ತಿಪರ ಬಾಕ್ಸರ್ ಎಂದು ಕರೆಸಿಕೊಂಡಿರುವಾತ. ಇಂತಹ ಕ್ರೀಡಾಪಟು ಚಹಾ ಮಾರಾಟ ಮಾಡಿ, ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರತಿಭೆ  ಪ್ರದರ್ಶನ ಮಾಡುತ್ತಿದ್ದ ಎನ್ನುವುದು ಅಚ್ಚರಿಯಾದರೂ ಸತ್ಯ.
ಹರಿಯಾಣದ ಬಿವಾನಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಚಹಾ ಮಾರುವ ರಾಜೇಶ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಮಿಂಚು ಹಡಿಸಿದ್ದಾರೆ. ಓಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ಮಾದರಿಯಾಗಿ ಇರಿಸಿಕೊಂಡು ಅವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ತಮ್ಮ ಊರಿನಲ್ಲಿ ಎಲ್ಲರ ಪಾಲಿಗೆ ಅಕ್ಕರೆಯಿಂದ ಲುಕಾ ಎಂದು ಕರೆಸಿಕೊಳ್ಳುವ ರಾಜೇಶ್ ಸಹೋದರನ ಜೊತೆಗೆ ಟೀ ಅಂಗಡಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಮುಂಜಾನೆ ಐದು ಎಂಟೆಗೆ ಎದ್ದು ಚಹಾ ಮಾರಾಟ ಆರಂಭಿಸುವ ರಾಜೇಶ್ ಮದ್ಯಾಹ್ನ 1ರ ವರೆಗೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಾರೆ. ಮದ್ಯಾಹ್ನ ಊಟ-ವಿಶ್ರಾಾಂತಿಯ ಬಳಿಕ ಸಂಜೆ 6ರ ಹೊತ್ತಿಗೆ ಬಾಕ್ಸಿಂಗ್ ಅಭ್ಯಾಸ ಕ್ಕೆ  ತೆರಳುತ್ತಾರೆ.
10 ರೂಪಾಯಿಗೆ ಚಹಾ ಮಾರಾಟ ಮಾಡುವ ಕಸಾನಾ, ಈ ಮೂಲಕವೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಬಾಕ್ಸರ್ ಆಗಬೇಕು ಎನ್ನುವುದು ಅಪ್ಪನ ಕನಸು. ಈ ಕನಸ್ನು ನನಸಾಗಿಸಲು ಹೊರಟಿದ್ದಾಾರೆ ಕಸಾನಾ. ಎಷ್ಟೇ ಕಷ್ಟ ಬಂದರೂ ಅಪ್ಪನ ಕನಸು ನನಸು ಮಾಡುವ ಛಲ ರಾಜೇಶ್ ಕಸಾನಾದು.
 2015ರಲ್ಲಿ ಮೊದಲ ಬಾರಿಗೆ ವೃತ್ತಿಪರ ಬಾಕ್ಸಿಂಗ್ ರಿಂಗಿಗೆ ಇಳಿದ ರಾಜೇಶ್, ಮನ್‌ಪ್ರೀತ್ ಸಿಂಗ್‌ರನ್ನು ಮಣಿಸಿದ್ದರು. ಆ ಬಳಿಕ 10 ಸ್ಪರ್ಧೆಗಳಲ್ಲಿ 9 ಬಾರಿ ಗೆಲುವು ದಾಖಲಿಸಿದ್ದಾರೆ. ಇನ್ನೊೊಂದು ಪಂದ್ಯ ಡ್ರಾ ಆಗಿದೆ.
ಲೈಟ್‌ವೇಟ್ ವೃತ್ತಿಪರ ಬಾಕ್ಸಿಂಗ್ನಲ್ಲಿ ದೇಶದಲ್ಲೇ ನಂ.1 ಪಟ್ಟ ಎನಿಸಿಕೊಂಡಿದ್ದು, ವಿಶ್ವ ವೃತ್ತಿಪರ ಬಾಕ್ಸಿಂಗ್ ಲೈಟ್‌ವೇಟ್ ಶ್ರೇಯಾಂಕದಲ್ಲಿ 221ನೇ ಸ್ಥಾನದಲ್ಲಿದ್ದಾರೆ. 24ರ ಹರೆಯದ ರಾಜೇಶ್‌ರ ಅಪ್ಪ ಚಾಲಕರಾಗಿದ್ದರು. ಆದರೆ ಕ್ಯಾನ್ಸರ್‌ಗೆ ಬಲಿಯಾದರು. ಸೋದರಿಗೂ ಕ್ಯಾನ್ಸರ್ ತಗುಲಿದ್ದರಿಂದ 2011ರಲ್ಲಿ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. 2013ರಲ್ಲಿ ಸೋದರಿ ಕೂಡಾ ಇಹಲೋಕ ತ್ಯಜಿಸಿದರು.
ಶಾಲಾ ಕಲಿಕೆ ಸಂದರ್ಭದಲ್ಲಿ  ಅಪ್ಪನನ್ನು ಕಳೆದುಕೊಂಡೆ. ಅವರ ಮರಣಾನಂತರ ನಾನು ಶಾಲೆ ಬಿಟ್ಟು ಡ್ರೈವರ್ ಆಗಿ ದುಡಿದೆ. ಆದರೆ ನಾನು ಅಂದುಕೊಂಡಂತೆ ನಡೆಯದ ಕಾರಣ ಇದೀಗ ಟೀ ಶಾಪ್ ನಡೆಸುತ್ತಿದ್ದೇನೆ ಎನ್ನುವುದು ರಾಜೇಶ್ ಮನದಾಳದ ಮಾತು.
ಇಂತಹ ರಾಜೇಶ್ ಬೆನ್ನಿಗೆ ರಾಯಲ್ ಸ್ಪೋರ್ಟ್‌ಸ್‌ ಪ್ರೊಮೊಕ್ಷ್ಸ್ ನಿಂತಿದೆ.
2016ರಲ್ಲಿ ದಿಲ್ಲಿಯ ಜ್ಯಾಗರಾಜ್ ಸ್ಟೇಡಿಯಂನಲ್ಲಿ ವಿಜೆಂದರ್ ಎಂಟನೇ ಬಾರಿಗೆ ವೃತ್ತಿಪರ ಸ್ಪರ್ಧೆ  ಗೆದ್ದಾಗ ಅವರ ಹೋರಾಟವನ್ನು ನಾನು ನಿಕಟವಾಗಿ ವೀಕ್ಷಿಸಿದ್ದೆ. ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೂ ಸಿಕ್ಕಿತು. ಆದರೆ ಅವರ ಜತೆ ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿಲ್ಲ ಎಂದು ರಾಜೇಶ್ ಹೇಳಿದ್ದಾಾರೆ.
ಭಾರತದಲ್ಲಿ ಇಂತಹ ಪ್ರತಿಭೆಗಳು ಸಾಕಷ್ಟಿವೆ. ಆದರೆ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವವರ ಸಂಕ್ಯೆ ಹೆಚ್ಚಳವಾಗಬೇಕಿದೆ. ಸ್ವಲ್ಪ ಸಹಾಯ ಮಾಡಿ, ಬೆನ್ನಿಿಗೆ ನಿಂತರೆ ವಿಶ್ವವೇ ಬೆರಗಾಗುವಂತಹ ಲಿತಾಂಶ ನೀಡಲು ಭಾರತದ ರ್ಸ್ಪಗಳು ಸಿದ್ಧರಿದ್ದಾಾರೆ. ಪ್ರತಿಭೆಗಳ ಖನಿಯಾಗಿರುವ ಆಟಗಾರರ ಬೆನ್ನುತಟ್ಟುವ ಕೆಲಸ ಎಲ್ಲೆಡೆ ಆಗಬೇಕಾಗಿದೆ.

Monday, October 8, 2018

ಅನುರಕ್ತ (ಕಥೆ ಭಾಗ-೧)

`ಸಂಜಯ ನಿಂಗೆ ನಾನು ನಮ್ಮ ಕಾಲೇಜು ಬದುಕು ಮುಗಿದ ನಂತರ ಹೈದರಾಬಾದ್ ನಲ್ ಇದ್ದಿದ್ದು ಗೊತ್ತಿದ್ದು ಅಲ್ದಾ?' ಎಂದು ನಾನು ಕೇಳಿದ್ದೆ. `ಹೌದೋ ಮಾರಾಯಾ.. ಅದ್ಯಾವ್ದೋ ಎಂಎನ್ಸಿಲಿ ಕೆಲಸ ಸಿಕ್ಕಿದ್ದು ಹೇಳಿ ಒಂದೋ ಎರಡೋ ವರ್ಷ ಇದ್ದಿದ್ದೆ ಅಲ್ದನಾ..' ಸಂಜಯ ಹೇಳಿದ್ದ.
`ಹೌದು.. ಎರಡು ವರ್ಷ ಇದ್ದೆ. ಅದಾಗಿ ಹತ್ತು ವರ್ಷವೇ ಕಳೆದು ಹೋಯ್ತು ನೋಡು..' ಅಂದೆ. ಸಂಜಯ ತಲೆ ಅಲ್ಲಾಡಿಸಿದ್ದ.
ನಮ್ಮ ಕಾಲೇಜು ಬದುಕು ಮುಗಿಸಿ ಅನಾಮತ್ತು 13-14 ವರ್ಷಗಳು ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸಂಜಯನಿಗೆ ನಾನು ಪೋನಾಯಿಸಿದ್ದೆ. ಆಗೀಗ ಪೋನ್ ಮುಖಾಂತರ ನಮ್ಮ ನಿರಂತರ ಸಂಭಾಷಣೆ ಇತ್ತಾದರೂ, ಈಗಿತ್ತಲಾಗಿ ಅದು ಕಡಿಮೆಯೇ ಆಗಿ ಹೋಗಿತ್ತು. ಅಪರೂಪದಲ್ಲಿ ಅಪರೂಪ ಎನ್ನುವಂತೆ ನಾನು ಪೋನ್ ಮಾಡಿದ್ದ ಸಂದರ್ಭದಲ್ಲಿ ಖಾಸಾ ಮಿತ್ರ ಸಂಜಯ ಖುಷಿ ಪಟ್ಟುಕೊಂಡೇ ಪೋನ್ ಎತ್ತಿದ್ದ.
ಆತನ ಬಳಿ ನಾನು `ಕೂಡಲೇ ಹೊರಟು ಬೆಂಗಳೂರಿಗೆ ಬಾ.. ಅಸ್ಸಾಂಗೆ ಹೋಗೋದಿದೆ. ಕನಿಷ್ಟ 15 ದಿನದ ಪಯಣ. ನಿನಗೆ ಸೀಟ್ ಬುಕ್ ಮಾಡಿದ್ದೇನೆ ಎಂದಿದ್ದೆ. ಇದ್ದಕ್ಕಿದ್ದಂತೆ ಅಸ್ಸಾಂಗೆ ಹೋಗೋಣ ಬಾ ಎಂದು ನಾನು ಹೇಳಿದ್ದನ್ನು ಕೇಳಿ ಹೌಹಾರಿದ ಮಿತ್ರ ಮೊದಲಿಗೆ ಆಗೋದಿಲ್ಲ ಎಂದನಾದರೂ ಕೊನೆಗೆ ನನ್ನ ಬೇಡಿಕೆಗೆ, ಒತ್ತಾಯಕ್ಕೆ ಒಪ್ಪಿಕೊಂಡು ಬಂದಿದ್ದ.
ಯಶವಂತಪುರದಿಂದ ಅಸ್ಸಾಂನ ದಿಬ್ರುಘಡ ನಿಲ್ದಾಣ ತಲುಪುವ ಕಾಮಾಖ್ಯಾ ಎಕ್ಸ್ ಪ್ರೆಸ್ ರೈಲು ಮೂರನೇ ಸಾರಿ ಕೂಗುವ ವೇಳೆಗಾಗಲೇ ನಾನು ಸಂಜಯ ನಮ್ಮ ಸೀಟಿನಲ್ಲಿ ಕುಳಿತು ಹರಟೆಯನ್ನು ಕೊಚ್ಚಲು ಆರಂಭಿಸಿದ್ದೆವು. ಅಜಮಾಸು ಮೂರೂವರೆ ಸಹಸ್ರ ಕಿಲೋಮೀಟರುಗಳ ದೂರದ ಪ್ರಯಾಣ ಆರಂಭವಾಗುವ ವೇಳೆಗಾಗಲೇ ನಾನು ಅಸ್ಸಾಂನಲ್ಲಿ ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಹೋಗಬೇಕು ಎಂದು ಆಲೋಚಿಸ ಹತ್ತಿದ್ದೆ. ಕರ್ನಾಟಕವನ್ನು ದಾಟಿ, ಆಂಧ್ರದಲ್ಲಿ ಹಾದು, ಒಡಿಶಾವನ್ನು ತಲುಪಿ ಅಲ್ಲಿಂದಾಚೆಗೆ ಪಶ್ಚಿಮ ಬಂಗಾಳದಲ್ಲೆಲ್ಲ ಸುತ್ತಾಡಿದ ರೈಲು ಸೀದಾ ಸಿಲಿಗುರಿಯ ಮೂಲಕ ಅಸ್ಸಾಂ ಕಡೆಗೆ ಚುಕು ಬುಕು ಎನ್ನುತ್ತಿತ್ತು. ಸುದೀರ್ಘ ಪಯಣ ಅದು. ಮೂರು ದಿನಗಳ ಕಾಲ ಸಹನೆಯಿಂದ ಸಹಿಸಿಕೊಳ್ಳಬೇಕೆಂಬಂತಹ ಪಯಣ.
`ಅಲ್ದೋ ಮಾರಾಯಾ... ಯಾವ್ದೋ ಫ್ಲೈಟ್ ಬುಕ್ ಮಾಡ್ಕಂಡು ಹೋಗಿದ್ರೆ ಮೂರ್ನಾಲ್ಕು ತಾಸಲ್ಲಿ ಅಸ್ಸಾಂಗೆ ಹೋಗ್ಲಕ್ಕಾಗಿತ್ತಲಾ...' ಎಂದು ಸಂಜಯ ಹೇಳಿದ್ದ.
`ನಿಂಗೊತ್ತಿದ್ದಲಾ.. ಬೇರೆ ಬೇರೆ ಪ್ರದೇಶಗಳನ್ನ ನೋಡೋದು ಅಂದ್ರೆ ನಂಗಿಷ್ಟ ಅಂತ.. ರೈಲಲ್ಲು ಹೋದ್ರೆ ಸಮಯ ಹೆಚ್ಚಾದ್ರೂ ಅಡ್ಡಿಲ್ಲೆ, ಬೇರೆ ಬೇರೆ ರಾಜ್ಯ, ಅಲ್ಲಿನ ಜನರನ್ನು ನೋಡ್ಲಕ್ಕು ಅಂತ ಈ ಥರ ಮಾಡಿದ್ದಿ ನೋಡು.. ಈ ಭಾರತೀಯ ರೈಲು ಅನ್ನೋದು ಸಾವಿರ ಸಂಸ್ಕೃತಿಗಳ ಸಂಗಮ. ಇದರಲ್ಲಿ ಸಿಗೋ ಮಜಾ ವಿಮಾನದಲ್ಲಿ ಸಿಕ್ತಿಲ್ಲೆ..' ಎಂದಿದ್ದಕ್ಕೆ ಸಂಜಯ ತಲೆಯಾಡಿಸಿ ಕಿರುನಗೆ ಸೂಸಿದ್ದ.
`ನೀ ಏನೋ ಇದ್ದಕ್ಕಿದ್ದಂತೆ ಪೋನ್ ಮಾಡ್ಕಂಡ ಬಾ ಅಂದೆ.. ಆನು ಹೇಳಿದ್ನಿಲ್ಲೆ ಕೇಳಿದ್ನಿಲ್ಲೆ ಬಂದ್ ಬಿಟ್ಟಿ... ಅಸ್ಸಾಂಗೆ ಹೋಪದು ಹೇಳಿ ಅಷ್ಟೇ ನೀ ಹೇಳಿದ್ದು... ಆನಂತೂ ಎಲ್ಲಿಗ್ ಹೋಪದು, ಎಂತಕ್ಕೆ ಏನೂ ಕೇಳದ್ದೇ ಹೊಂಟಿದ್ದಿ ನೋಡು... ಕೊನೆಕೊಯ್ಲು ಮುಗದ್ದು, ಅಡಕೆ ಸೊಲಿಯಲೆ ಜನ ಬಂಜ.. ದನ ಬೇರೆ ಕರಾ ಹಾಕಿದ್ದು. ಆದರೂ ನಾನು ನೀ ಹೇಳಿದ್ದೆ ಹೇಳಿ ಸಿಕ್ಕಿದ್ ಬಸ್ ಹತ್ಕಂಡು ಬಂಜಿ ನೋಡು.. ಏನ್ ನಿನ್ ಕಥೆ.. ಎಂತಕ್ ಅಸ್ಸಾಂಗೆ ಹೊಮಟಾಜು ಎಂತತದೂ ಅಂತ್-ಪಾರ್ ಹರಿತಾ ಇಲ್ಲೆ ನಂಗೆ.. ಈಗಾದ್ರೂ ಹೇಳು ಮಾರಾಯಾ.. ನಾವ್ ಎಂತಕ್ ಅಲ್ಲಿಗೆ ಹೊಂಟಾಜು? ನೀ ಬೇರೆ ಒಬ್ನೆ ಹೊಂಟಿದ್ದೆ. ನಿನ್ ಹೆಂಡ್ತಿನ ಮನೆಲ್ ಬಿಟ್ಟಿಕ್ ಬಂಜ್ಯಾ?' ಎಂದು ಸಂಜಯ ಒಂದೇ ಉಸುರಿಗೆ ಮಾತನಾಡುತ್ತಿದ್ದ. ಅವನ ಪ್ರಶ್ನೆಗಳ ಸುರಿಮಳೆಗೆ ಎದುರಾಗಿ ನಾನು, ಯಾವುದಕ್ಕೆ ಮೊದಲು ಉತ್ತರ ಹೇಳಲಿ ಎಂದು ಆಲೋಚಿಸುತ್ತಿದ್ದ ವೇಳೆಗಾಗೇ ನಮ್ಮನ್ನು ಹೊತ್ತಿದ್ದ ಕಾಮಾಕ್ಯ ಎಕ್ಸ್ ಪ್ರೆಸ್ ರೈಲು ದಿಬ್ರುಘಡತ್ತ ಮುಖ ಮಾಡಲು ಧಡ ಧಡ ಎನ್ನುತ್ತಿತ್ತು. ಸಂಜಯ ತನ್ನ ಕಾರ್ಯ ಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಬಂದಿದ್ದ. ನನ್ನ ಮನಸ್ಸು ಹಸಿಯಾಗಿತ್ತು.
`ನೋಡು ಸಂಜು... ನಾವ್ ಅಸ್ಸಾಂಗೆ ಹೋಗವು ಅಂತಾದ್ರೆ ಮೂರು ದಿನ ಪ್ರಯಾಣ ಮಾಡವು.. ಅಷ್ಟರಲ್ಲಿ ನಿಂಗೆ ಹೇಳದ್ದೇ ಇರ್ತ್ನನಾ...' ಎಂದೆ..
`ಹು.. ಮೂರು ದಿನದ ವರೆಗೆ ಹೇಳುವಂತಹ ಕಥೆಯನೋ ನಿಂದು...ಅಷ್ಟೆಲ್ಲ ಉದ್ದ ಹೇಳಡ ಮಾರಾಯಾ. ಕಥೆ ಸಣ್ಣ ಇರ್ಲಿ ಮಾರಾಯಾ.. ಉದ್ದ ಆದ್ರೆ ಬ್ಯಾಸರ ಬಂದೋಗ್ಲಕ್ಕು ನೋಡು..' ಸಂಜಯ ಹೌಹಾರಿದಂತೆ ಕೇಳಿದ್ದ. ಕಣ್ಣು ಮಿಟುಕಿಸಿ ಹೇಳಿದ್ದ. ಅವನ ಮಾತಿನಲ್ಲಿ ತಮಾಷೆ ಎದ್ದು ಕಾಣಿಸಿತ್ತು. ನಾನು ಹಿತವಾಗಿ ನಕ್ಕಿದ್ದೆ.
`ಹಂಗೆಂತದ್ದೂ ಇಲ್ಲೆ ಮಾರಾಯಾ.. ಸರಿಯಾಗ್ ಹೇಳಿದ್ರೆ ಅರ್ಧಗಂಟೆಲ್ ಯನ್ ಕಥೆ ಮುಗಿದು ಹೋಗ್ತು.. ಇನ್ನು ಕಥೆ ಎಳಿಯವು ಹೇಳಾದ್ರೆ ಮೂರು ದಿನದವರೆಗೂ ಮಾಡ್ತಿ ನೋಡು..' ಎಂದೆ ನಾನೂ ಅಷ್ಟೇ ತಮಾಷೆಯಿಂದ.
ತಲೆ ಅಲ್ಲಾಡಿಸಿ ಹೌದೆಂದು ಒಪ್ಪಿಕೊಂಡಿದ್ದ ಸಂಜಯ `ಮೂರ್ ದಿನ ಎಲ್ಲ ಬ್ಯಾಡ ಮಾರಾಯಾ.. ಚಿಕ್ಕದಾಗಿ ಹೇಳು... ಎಂತಕ್ ಹೋಗ್ತಾ ಇದ್ದಾಜು ಹೇಳಿ... ' ಅಂದಿದ್ದ. ಧಾರಾವಾಹಿಯಂತೆ ನಾನು ಕಥೆ ಎಳೆಯುವಲ್ಲಿ ಶೂರ ಎನ್ನುವುದು ಅವನಿಗೆ ಗೊತ್ತಿತ್ತಾದ್ದರಿಂದ ಮೊದಲೇ ಆತ ಅದಕ್ಕೆ ತಡೆ ಒಡ್ಡಿಬಿಟ್ಟಿದ್ದ.
ನಾನು ಹುಂ ಅಂದವನೇ ಹೋಗುವ ಕಾರಣ ಶುರು ಹಚ್ಚಿಕೊಂಡಿದ್ದೆ. ನಮ್ಮ ಪಯಣ ಶುರುವಾಗಿತ್ತು.
ಬದುಕಲ್ಲಿ ನೂರಾರು ತಿರುವುಗಳು ಸದಾ ಇರುತ್ತವೆ. ಇಂತಹ ತಿರುವು ನನ್ನ ಬದುಕಲ್ಲೂ ಇತ್ತು. ಅದಕ್ಕೆ ತಕ್ಕಂತೆ ಹಲವಾರು ಘಟನೆಗೂ ಜರುಗಿದ್ದವು. ಇದೀಗ ನಾನು ಅಂತಹದೇ ಒಂದು ತಿರುವಿನಿಂದ ಸುದೀರ್ಘ ಪಯಣ ಶುರುಹಚ್ಚಿಕೊಂಡಿದ್ದೆ.
ಎಲ್ಲಿಯ ಅಸ್ಸಾಮು? ಎಲ್ಲಿಯ ನಮ್ಮೂರು.. ಒಂದಕ್ಕೊಂದು ಉತ್ತರ ದಕ್ಷಿಣದಂತೆ..

***

`ಸಂಜಯ.. ನಾನೂ ನೀನೂ ಡಿಗ್ರಿ ಮುಗ್ಸಿದ್ದರ ತನಕ ನಿಂಗೆ ನನ್ನ ಅಂತರಂಗ ಸಂಪೂರ್ಣ ಗೊತ್ತಿದ್ದು. ಆ ದಿನಗಳ ನಮ್ಮ ಬದುಕು, ಬವಣೆ, ಒದ್ದಾಟ ಇತ್ಯಾದಿಗಳಿಗೆಲ್ಲ ನೀನು ಪ್ರತ್ಯಕ್ಷದರ್ಶಿ. ನಮ್ಮ ಡಿಗ್ರಿ ಬದುಕು ಮುಗಿದ ತಕ್ಷಣ ನೀ ಏನೋ ಕೃಷಿ ಮಾಡ್ತಿ ಅಂತ ಊರಲ್ಲೇ ಉಳಕಂಡೆ. ಜೊತೆಗೆ ಲಾ ಓದವು ಅಂತ ಹೇಳಿ ಶಿರಸಿ ಕಾಲೇಜಲ್ಲಿ ಸೇರಿದ್ದೂ ತಿಳದಿತ್ತು. ನಂಗೆ ಮುಂದೆಂತ ಮಾಡವು ಅಂತ ಗೊತ್ತಾಗಿತ್ತಿಲ್ಲೆ. ಅದೇ ಟೈಮಲ್ಲಿ ನಂಗೆ ಎಂಬಿಎ ಸೀಟು ಸಿಕ್ಕಿತ್ತು. ಬೆಂಗಳೂರಿನ ಕಾಲೇಜೊಂದರಲ್ಲಿ ಓದಲು ಅವಕಾಶ ಸಿಕ್ಕಿತ್ತು. ಹಂಗಾಗಿ ನಾನು ಬೆಂಗಳೂರಿಗೆ ಬರೋದು ಅನಿವಾರ್ಯವೂ ಆಗಿತ್ತು..ಡಿಗ್ರಿ ಮುಗಿದ ತಕ್ಷಣವೇ ನಾನು ಬೆಂಗಳೂರಿಗೆ ಬಸ್ಸು ಹತ್ತಿದ್ದೆ..'
`ವಿನಿ... ಇದೆಲ್ಲ ಗೊತ್ತಿದ್ದದ್ದೇಯಾ ಮಾರಾಯಾ... ಆದರೆ ಆಮೇಲಿನ ಸಂಗತಿಗಳು ನಂಗೆ ಅಷ್ಟಾಗಿ ಗೊತ್ತಿಲ್ಲೆ ನೋಡು... ನೀನೂ ಹೇಳ್ಕಂಜಿಲ್ಲೆ.. ನಾನೂ ಕೇಳಿದ್ನಿಲ್ಲೆ..' ಎಂದ ಸಂಜಯ.
`ಹುಂ..'ಎಂದ ನಾನು ನಿಧಾನವಾಗಿ ನನ್ನ ಕಥೆಯನ್ನು ಹೇಳಲು ಶುರುಹಚ್ಚಿಕೊಂಡಿದ್ದೆ.
`ಎಂಬಿಎಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಓದಲು ಬಂದೆ. ಓದಿಗಾಗಿ ಬಂದವನು ಬೆಂಗಳೂರಿನ ಥಳುಕಿಗೆ, ಬಳುಕಿಗೆ ಹೊಂದಿಕೊಳ್ಳಲಾಗದೇ ತತ್ತರಿಸಿದೆ. ವೇಗ, ಧಾವಂತ, ಓಟಕ್ಕೆ ಸರಿಸಮನಾಗಿ ಓಡಲು, ಮುನ್ನುಗ್ಗಲು ಸಾಧ್ಯವಾಗದೇ ಎಡವುವ ಹಂತವೂ ಬಂದು ತಲುಪಿತು. ಎಕ್ಸಾಮುಗಳಲ್ಲಂತೂ ಪಾಸಾಗುವ ವರೆಗೆ ಸಾಕೋಬೇಕೋ ಆಗಿಹೋಗುವ ಹಂತವೂ ತಲುಪಿತು ಬಿಡು. ಇಂಗ್ಲೀಷು ನನ್ನ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿತ್ತು. ಆದರೆ ಕಾಲೇಜುಗಳಲ್ಲಿ ಮಾಡುತ್ತಿದ್ದ ಕನ್ನಡ ಮಾತಾಡುವ ಸ್ಪರ್ಧೆಗಳಲ್ಲಿ ನಾನೇ ಮುಂದಿರುತ್ತಿದ್ದೆ. ಎಂತ ಚಂದ ಕನ್ನಡ ಮಾತಾಡ್ತಾನೆ ಮಾರಾಯಾ ಇವ್ನು ಅನ್ನುವಷ್ಟರ ವರೆಗೆ...'
`ಆಮೇಲೆ..'
`ಇದೇನೋ ಸಾಗುತ್ತಿತ್ತು. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದೆ. ಆ ದಿನಗಳಲ್ಲೇ ನನಗೆ ಪರಿಚಯ ಆದವಳು ವಿದ್ಯುಲ್ಲತಾ. ಅಸ್ಸಾಮಿನವಳು.. ಇದೋ.. ಇದೀಗ ಅವಳನ್ನೇ ಹುಡುಕಿ ಹೊರಟಿದ್ದೇನೆ.. ನಿನ್ನನ್ನೂ ಕರ್ಕೊಂಡು...' ಎಂದೆ.
`ಒಹೋ... ' ಎಂದ ಸಂಜಯ ಒಮ್ಮೆ ಅಚ್ಚರಿ ಪಟ್ಟುಕೊಂಡ. `ನಿನ್ನ ಹೆಂಡತಿಗೆ ಗೊತ್ತಾ...' ಕೀಟಲೆಯ ಧ್ವನಿಯಲ್ಲಿ ಕೇಳಿದ ಸಂಜಯ. ಇದಕ್ಕೆ ನಾನು ಉತ್ತರಿಸಲಿಲ್ಲ.
`ವಿದ್ಯುಲ್ಲತಾ ಎಂಬ ಹೆರಿನಲ್ಲೇ ಕ್ರಿಯಾಶೀಲತೆ ಇತ್ತು. ಚೈತನ್ಯವಿತ್ತು. ಆಕೆ ತೀರಾ ಸುಂದರಿಯಾಗಿರಲಿಲ್ಲ. ಹಾಗಂತ ಆಕೆ ತೀರಾ ಕಳಪೆಯೇನೂ ಆಗಿರಲಿಲ್ಲ. ಅಸ್ಸಾಮಿ ಹುಡುಗಿಯರಲ್ಲಿನ ವಿಶೇಷ ಆಕರ್ಷಣೆ ಅವಳಲ್ಲಿತ್ತು. ಬೆಳ್ಳಗಿನ ಅವಳ ಮುಖ.. ಹಣೆಯಲ್ಲಿ ಬೊಟ್ಟು ಇಲ್ಲದಿದ್ದರೂ, ಖಾಲಿ ಖಾಲಿಯಾಗಿದ್ದರೂ ಒಮ್ಮೆಗೆ ಸೆಳೆಯಬಲ್ಲ ಆಕೆಯ ಹಣೆ, ವಿಶಿಷ್ಟವಾದ ಕಪ್ಪು ಕಣ್ಣುಗಳು, ತುರುಬನ್ನು ಎತ್ತಿ ಕಟ್ಟುತ್ತಿದ್ದ ಆಕೆಯ ರೂಪ ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವವರು ಹತ್ತಿರಕ್ಕೆ ಬರುತ್ತಾರೆ ಎನ್ನುವುದು ಪುರಾಣ ಕಾಲದಿಂದಲೂ ನಿಜವಾದದ್ದೇ. ವಿದ್ಯುಲ್ಲತಾಳಿಗೂ ಅಷ್ಟೇ. ನನ್ನಂತೆಯೇ ಇಂಗ್ಲೀಷು ಕಬ್ಬಿಣದ ಕಡಲೆಯಾಗಿತ್ತು. ಅಸ್ಸಾಮಿ ಭಾಷೆಯಲ್ಲಿ, ಹಿಂದಿಯಲ್ಲಿ ಆಕೆಯದ್ದು ಎತ್ತಿದ ಕೈ. ಆದರೆ ಇಂಗ್ಲೀಷು ಅಂದ ಕೂಡಲೇ ಆಕೆ ಹಿಂದೇಟು ಹಾಕುತ್ತಿದ್ದಳು. ಇಂತದ್ದೇ ಗುಣವನ್ನು ಹೊಂದಿದ್ದ ನನಗೂ , ಆಕೆಗೂ ಪರಿಚಯ ಆಗಲು ಬೇರೆಯ ಕಾರಣಗಳಿರಲಿಲ್ಲ ಬಿಡು. ನನ್ನಂತೆಯೇ ಆಕೆ, ಆಕೆಯಂತೆಯೇ ನಾನು. ಯಾವಾಗಲೋ ಸ್ನೇಹ ಬೆಳೆದಿತ್ತು..'
`ಆಮೇಲೆ..' ಎಂದು ಹೇಳುವ ವೇಳೆಗಾಗಲೇ ರೈಲು ಕರ್ನಾಟಕ ಗಡಿಯನ್ನು ದಾಟಿ ಆಂಧ್ರವನ್ನು ಹಾದು ಮುನ್ನುಗ್ಗುತ್ತಿತ್ತು. ಒಂದಿಬ್ಬರು ಚಾಯ್ ವಾಲಾಗಳು ಚಾಯ್ ಚಾಯ್ ಎನ್ನುತ್ತಲೂ, ಕಾಫಿ ಟಿ ಎನ್ನುತ್ತಲೂ ಸಾಗಿದ್ದರು. ನಾನು ಒಬ್ಬನನ್ನು ಕರೆದು ಇಬ್ಬರಿಗೂ ಚಾಯ್ ತಗೊಂಡು ಕುಳಿತೆ. ಒಂದು ಸಿಪ್ ಸೊರ್... ಎನ್ನುತ್ತಾ ಕುಡಿಯುತ್ತಿರುವಂತೆಯೇ ಸಂಜಯ `ಮುಂದೇನಾಯ್ತು ಹೇಳು ಮಾರಾಯಾ...'ಎಂದ. ಮುಂದುವರಿದ ಆತನೇ `ಪ್ರೀತಿ ಹುಟ್ಟಿತು.. ಅವಳನ್ನು ಹುಡುಕಿ ಹೊರಟಿದ್ದೀಯಾ.. ಇಷ್ಟೇ ಅಲ್ವಾ ನಿನ್ನ ಕಥೆ...' ಎಂದ.
ತಲೆ ಕೊಡವಿದ ನಾನು `ನನ್ನ ಕಥೆಯಲ್ಲಿ ಈ ಅಂಶಗಳೂ ಇದೆ. ಆದರೆ. ಇಷ್ಟೇ ಅಲ್ಲ ನನ್ನ ಕಥೆ. ಇನ್ನೂ ಇದೆ. ಸುಮ್ನೇ ಕೇಳು ಮಾರಾಯಾ..' ಎಂದೆ. ಸಂಜಯ ಸುಮ್ಮನೆ ಚಹಾ ಕುಡಿಯುತ್ತ ನನ್ನ ಮಾತಿಗೆ ಕಿವಿಯಾದ.
`ವಿದ್ಯುಲ್ಲತಾಳ ಸಾನ್ನಿಧ್ಯದಿಂದಲೇ ನನ್ನಲ್ಲಿ ಚೈತನ್ಯ ಸಂಚಾರವಾಗಿತ್ತು. ಹೊಸ ಹುರುಪು ನನ್ನಲ್ಲಿ ಮೂಡಿತ್ತು. ಇಂಗ್ಲೀಷಿನ ಕಡೆಗಿದ್ದ ಕೀಳರಿಮೆ ನನ್ನಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದದ್ದವು. ಆಕೆ ಅದೆಷ್ಟು ಕಲಿತಳೋ ಬಿಟ್ಟಳೋ ಗೊತ್ತಾಗಲಿಲ್ಲ. ನಾನಂತೂ ಆಕೆಯ ಜತೆಯಲ್ಲಿಯೇ ನನ್ನೊಳಗಿನ ಕೀಳರಿಮೆಯನ್ನು, ಹಿಂದೇಟು ಹಾಕುವಿಕೆಯನ್ನು ಮರೆತು ಹೊಸ ಚೈತನ್ಯವನ್ನು ಪಡೆದುಕೊಂಡಿದ್ದೆ.'
`ನನ್ನ ಬಗ್ಗೆ ಆಕೆ ಅದೆಷ್ಟು ತಿಳಿದುಕೊಂಡಳೋ ಗೊತ್ತಿಲ್ಲ. ಆದರೆ ಆಕೆಯ ಬಗ್ಗೆ ನಾನು ಬಹಳ ತಿಳಿದುಕೊಂಡೆ. ಅವಳು, ಅವಳ ಸಂಸ್ಕೃತಿ, ಆಹಾರ, ಆಚಾರ, ವಿಚಾರ.. ಅಹೋಮರು.. ಬೃಹ್ಮಪುತ್ರಾ ನದಿಯ ಅಘಾದತೆ, ತುಂಬಿ ಹರಿಯುವಾಗಿನ ಬ್ರಹ್ಮಪುತ್ರಾ ನದಿಯ ರುದ್ರ ನರ್ತನ.. ಬಿಹೂ ನೃತ್ಯ.. ಅಸ್ಸಾಮಿ ವಾದ್ಯಗಳು, ಅಸ್ಸಾಮಿನ ವಿಶಿಷ್ಟ ಖಾದ್ಯಗಳ ರುಚಿ ಹತ್ತಿಸಿದ್ದೂ ಇವಳೇ. ಅಸ್ಸಾಮಿನ ಖಾರ್ ಎಂಬ ಸಾಂಪ್ರದಾಯಿಕ ಖಾದ್ಯ, ಜೋಲ್ಪಾನ್, ಪಿಥಾ, ಲಾರು ಮುಂತಾದ ಸ್ನ್ಯಾಕ್ಸ್ ಗಳು, ನರಸಿಂಗ್ ಮೊಸರು ಜೋಲ್, ಮೊಸರ್ ತೆಂಗಾ, ಪುರಾ ಮುಂತಾದ ಹತ್ತಾರು ಆಹಾರಗಳ ರುಚಿ ತೋರಿಸಿದ್ದಲ್ಲದೇ ಕೆಲವನ್ನು ಮಾಡುವ ರೀತಿಯನ್ನು ನನಗೆ ಕಲಿಸಿದ್ದಳು...'
`ಬ್ರಹ್ಮಪುತ್ರಾ ನದಿಯ ಎಡಕ್ಕೆ ಬಹು ದೂರದ ಗುಡ್ಡದ ಗಡಿಯಲ್ಲಿ, ಭೂತಾನಿಗೆ ಹತ್ತಿರದಲ್ಲೆಲ್ಲೋ ಅವಳ ಮನೆ ಇದೆಯಂತೆ. ಎಂದೋ ಒಮ್ಮೆ ಅವಳು ಹೇಳಿದ್ದ ನೆನಪು. ತುಂಬು ಕುಟುಂಬದ ಮನೆ. ಹೊರ ಜಗತ್ತಿನ ಹೆಚ್ಚಿನ ಸೌಲಭ್ಯಗಳು, ಸೌಕರ್ಯಗಳನ್ನು ಕಾಣದ ಮನೆ. ಹಳೆಯ ಸಂಸ್ಕೃತಿಗಳನ್ನು ಉಳಿಸಿಕೊಂಡಂತಹ ಮನೆ ಅವಳದ್ದು. ಅಪ್ಪ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಅಮ್ಮ, ಹಿರಿಯಜ್ಜಿ ಹೀಗೆ ಮನೆ ತುಂಬ ಜನವೋ ಜನರು. ಸುಲಭವಾಗಿ ಹೇಳಬೇಕಂದರೆ, ತೆಲುಗು ಸಿನಿಮಾಗಳಲ್ಲಿ ಬರುವ ಅವಿಭಕ್ತ ಕುಟುಂಬಗಳಂತೇ ಅನ್ನಬಹುದು. ಆದರೆ ಇಡೀಯ ಕುಟುಂಬದಲ್ಲಿ ಎಂಬಿಎ ಓದುತ್ತಿರುವವಳು ಅಂದರೆ ವಿದ್ಯುಲ್ಲತಾ ಒಬ್ಬಳೆ ಆಗಿದ್ದಳಂತೆ. ಅವಳ ಕುಟುಂಬದಲ್ಲಿ ಪಿಯುಸಿ, ಡಿಗ್ರಿ ತನಕ ಓದಿದವರು ಹಲವರಿದ್ದರೂ, ಯಾರೊಬ್ಬರೂ ಇನ್ನೂ ಜಾಸ್ತಿ ಓದಿರಲಿಲ್ಲ ಎನ್ನುವುದು ಆಕೆಯಿಂದಲೇ ತಿಳಿದು ಬಂದ ಸಂಗತಿಯಾಗಿತ್ತು.'
'ಆಕೆಯ ಅಪ್ಪ ಮನೆಯ ಯಜಮಾನನಾಗಿದದ್ದ ಕಾರಣವೋ ಏನೋ, ಆಕೆ ಕುಟುಂಬದಲ್ಲಿ ಮುದ್ದಿನಿಂದಲೇ ಬೆಳೆದವಳು. ಅಸ್ಸಾಮಿನಲ್ಲಿ, ಹಿಂದಿಯಲ್ಲಿ.. ಆಕೆಯನ್ನು ಮೀರಿಸುವವರೇ ಇರಲಿಲ್ಲ. ಆದರೆ ಆಕೆಗೆ ಇಂಗ್ಲೀಷು ಮಾತ್ರ ಕಷ್ಟ ಕಷ್ಟ ಎಂಬಂತಾಗಿತ್ತು. ಅದ್ಹೇಗೇಗೋ ಇಂಗ್ಲೀಷಿನಲ್ಲಿ ಬರೆದು, ಪಾಸಾಗಿ ಬೆಂಗಳೂರಿಗೆ ಬರುವಂತಾಗಿದ್ದಳು. ಆಕೆಯ ಮನೆಯಲ್ಲಂತೂ ವಿದ್ಯುಲ್ಲತಾ ಬೆಂಗಳೂರಿಗೆ ಬರುವುದು ಸುತಾರಾಂ ಇಷ್ಟವಿರಲಿಲ್ಲವಂತೆ. ಆದರೂ ಅದ್ಹೇಗೋ ಒತ್ತಾಯ ಮಾಡಿ, ಹರಪೆ ಬಿದ್ದು, ಒಂದೆರಡು ದಿನಗಳ ಕಾಲ ಉಪವಾಸವನ್ನೇ ಕೈಗೊಂಡು ಬಂದಿದ್ದಳಂತೆ. ಬೆಂಗಳೂರಿಗೆ ಬಂದವಳು ಥೇಟು ನನ್ನಂತೆಯೇ.. ಇಲ್ಲಿನ ಧಾವಂತದಲ್ಲಿ ಕಳೆದೇ ಹೋಗುತ್ತೇನೆ, ಹೋಗುತ್ತಿದ್ದೇನೆ ಎನ್ನುವ ಸಂದರ್ಭದಲ್ಲಿ ಆಕೆಗೆ ನಾನು ಜತೆಯಾಗಿದ್ದೆ..'
'ನನಗೆ ಗೊತ್ತೆ ಇಲ್ಲದಂತೆಯೇ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಆಕೆಯ ಮನಸ್ಸಿನಲ್ಲಿಯೂ ಹುಟ್ಟಿತ್ತೇನೋ ಗೊತ್ತಿಲ್ಲ. ಶುಭ ಸಂದರ್ಭದಲ್ಲಿ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ನನಗೆ ಸ್ವರ್ಗ ಮೂರೇ ಗೇಣಿಗೆ ಕೈಗೆ ಸಿಗುತ್ತದೆ ಎನ್ನುವಷ್ಟು ಸಂಭ್ರಮ..'
'ಆ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಅಡ್ಡಾಡಿದ ಜಾಗಗಳಿಲ್ಲ ಬಿಡು. ಕಾಲೇಜಿಗೆ ಹೋಗುತ್ತಿದ್ದೆವಾದರೂ ಅದರ ಜತೆ ಜತೆಯಲ್ಲಿಯೇ ನಮ್ಮ ಸುತ್ತಾಟ ಸಾಕಷ್ಟು ನಡೆದಿತ್ತು. ಬೆಂಗಳೂರಿನ ಜ್ಞಾನಭಾರತಿಯ ಅಂಗಣಗಳು, ವಾರಕ್ಕೊಮ್ಮೆ ದೂರದ ಬೆಟ್ಟ ಗುಡ್ಡಗಳಿಗೆ ನಡೆಸುವ ಟ್ರೆಕ್ಕಿಂಗುಗಳು, ಸ್ವಲ್ಪವ ಸಮಯ ಸಿಕ್ಕರೂ, ಕಾಡು, ನದಿ, ನೀರು, ಬೆಟ್ಟ ಎಂದುಕೊಂಡು ಹೊರಟುಬಿಡುತ್ತಿದ್ದೆವು.'
`ನನಗೀಗಲೂ ನೆನಪಿದೆ. ಒಂದು ದಿನ ಆಕೆಯನ್ನು ಮೊಟ್ಟ ಮೊದಲ ಬಾರಿಗೆ ನನ್ನ ರೂಮಿಗೆ ಕರೆತಂದಿದ್ದೆ. ಏನೇ ಪ್ರೀತಿ ಇದ್ದರೂ ಆಕೆ ಅಳುಕಿನಿಂದಲೇ ನನ್ನ ರೂಮಿಗೆ ಬಂದಿದ್ದಳು...'ಎಂದವನೇ ಸುಮ್ಮನಾದೆ. ನನ್ನ ತಲೆಯಲ್ಲಿ ಆ ದಿನಗಳ ನೆನಪು ಹಾಗೆಯೇ ಓಡಲಾರಂಭಿಸಿತ್ತು. ಸಂಜಯ ಗಂಭೀರವಾಗಿ ಕೇಳುತ್ತಿದದ್ದವನು ನನ್ನ ಕಡೆಗೆ ನೋಡಲಾರಂಭಿಸಿದ್ದ.
ಸುದೀರ್ಘ ಮೌನದ ನಂತರ ನಾನೇ ಮಾತು ಮುಂದುವರಿಸಿದೆ. `ಆ ದಿನ ಏನೆಲ್ಲ ಆಗೋಯ್ತು. ಆಕೆಗೆ ಇಷ್ಟವಿರಲಿಲ್ಲ. ನಾನೇ ಬಲವಂತ ಮಾಡಿಬಿಟ್ಟೆ. ಪ್ರೀತಿ ಮಧುರವಾಗಿರಲಿ, ಶುಭ್ರವಾಗಿರಲಿ ಎಂದೆಲ್ಲ ಹೇಳಿದ್ದಳು ಆಕೆ. ಆದರೆ ನಾನೇ ಒತ್ತಾಯ ಮಾಡಿಬಿಟ್ಟೆ. ನನ್ನ ಒತ್ತಾಯಕ್ಕೆ ಆಕೆ ಸಹಕರಿಸಿದ್ದಳು. ನನ್ನದೇ ರೂಮಿನಲ್ಲಿ ನಾನು ಆಕೆಯನ್ನು ಆವರಿಸಿಕೊಂಡಿದ್ದೆ. ಅಲ್ಲೇ ನಮ್ಮ ಮಿಲನವಾಗಿತ್ತು. ಆದರೆ ಅಮೇಲೆ ನಡೆದಿದ್ದೆಲ್ಲ ದುರಂತ ಎಂಬಂತಾಗಿಬಿಟ್ಟತು. ಅಷ್ಟೆಲ್ಲ ಆದ ಮೇಲೆ ನನ್ನ ಬಳಿ ಆಕೆ ಕೇಳಿದ್ದೊಂದೇ ಮಾತು.. ನಿನ್ನನ್ನು ನಂಬಿದ್ದೆ. ಆದರೆ ಈ ರೀತಿ ಮಾಡುತ್ತೀಯಾ ಅಂತ ಗೊತ್ತಿರಲಿಲ್ಲ. ಈಗಲೂ ನಿನ್ನನ್ನು ನಂಬಿದ್ದೇನೆ. ಮುಂದೆಯೂ ಕೂಡ ನಿನ್ನನ್ನು ನಂಬಿರುತ್ತೇನೆ.. ನನ್ನ ನಂಬಿಕೆಯನ್ನು ಕೊಂದು ಬಿಡಬೇಡ.. ಎಂದಿದ್ದಳು. ನಾನು ಮೌನವಾಗಿದ್ದೆ. ಆದರೆ ಆ ದಿನದ ನಂತರ ನನ್ನ ಬದುಕಿನಲ್ಲೂ, ಆಕೆಯ ಬದುಕಿನಲ್ಲೂ ಸಿಕ್ಕ ತಿರುವುಗಳು ಮಾತ್ರ ಉಫ್.. ಹೇಗೆ ಹೇಳಲಿ..?'

(ಮುಂದುವರಿಯುತ್ತದೆ...)

Sunday, October 7, 2018

ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರಿಗೂ ಬೇಕು ನಿರ್ದಿಷ್ಠ ಮಾನದಂಡ

ಮಾಯಾಂಕ್ ಅಗರ್ವಾಲ್, ಕರುಣ್ ನಾಯಕರ್ ಹಾಗೂ ಮುರಳಿ ವಿಜಯ್ ಅವರುಗಳ ಪ್ರಕರಣವನ್ನು ಗಮನಿಸಿದರೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅಂಶ ಬೆಳಕಿಗೆ ಬರುತ್ತದೆ. ಆಯ್ಕೆ ಮಂಡಳಿಯು ಪ್ರತಿಭಾವಂತ ಆಟಗಾರರನ್ನು ಪದೇ ಪದೆ ಕಡೆಗಣಿಸುತ್ತಿರುವುದನ್ನು ಗಮನಿಸಿದರೆ  ಆಯ್ಕೆ ಸಮಿತಿಯಲ್ಲಿ ರಾಜಕೀಯ ತೀವ್ರವಾಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ದಟ್ಟವಾಗಿದೆ.
ಕಳೆದ ನಾಲ್ಕೈದು ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಭಾರತದ ಆಯ್ಕೆ ಸಮಿತಿ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ನಿರ್ಧಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರತಿಭಾವಂತ ಆಟಗಾರರು ದೇಸೀಯ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೂ, ಅವರನ್ನು ಪದೇ ಪದೆ ಕಡೆಗಣನೆ ಮಾಡುವ ಮೂಲಕ ಸಾಕಷ್ಟು ಟೀಕೆಗೂ ಕಾರಣರಾಗಿದ್ದಾರೆ.
ಕರ್ನಾಟಕದ ಪ್ರತಿಭಾವಂತ ಆಟಗಾರ ಮಾಯಾಂಕ ಅಗರ್ವಾಲ್. ದೇಸೀಯ ಕ್ರಿಕೆಟ್ ಕೂಟಗಳಲ್ಲಿ ಮಾಯಾಂಕ್ ಕಳೆದೆರಡು ವರ್ಷಗಳ ಅವಧಿಯಲ್ಲಿ ರನ್ ಗುಡ್ಡೆಯನ್ನೇ ನಿರ್ಮಿಸಿದ್ದಾರೆ. ಆದರೆ ಈಗಿನ ವಿಂಡೀಸ್ ವಿರುದ್ಧದ ಪಂದ್ಯಾವಳಿ ವರೆಗೂ ಮಾಯಾಂಕ್‌ರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿರಲೇ ಇಲ್ಲ. ಹಿರಿಯ ಆಟಗಾರರು, ಅಭಿಮಾನಿಗಳು ಒತ್ತಾಯ ಮಾಡಿ, ಟೀಕೆ ಮಾಡಿದ ಮೇಲೆಯೇ ಮಾಯಾಂಕ್ ತಂಡಕ್ಕೆ ಆಯ್ಕೆಯಾಗುವಂತಾಯಿತು.
ಕರುಣ್ ನಾಯರ್, ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕವನ್ನು ಸಿಡಿಸಿದ ಖ್ಯಾತಿ ಹೊಂದಿದ್ದಾರೆ. ಇಂಗ್ಲೆೆಂಡ್ ವಿರುದ್ಧದ ಟೆಸ್‌ಟ್‌ ಸರಣಿಗಾಗಿ ಕರುಣ್ ನಾಯರ್‌ರನ್ನು ಆಯ್ಕೆ ಮಾಡಲಾಗಿತ್ತು. ಐದಕ್ಕೆ ಐದು ಪಂದ್ಯಗಳಲ್ಲಿ ಕರುಣ್‌ಗೆ ಅವಕಾಶ ನೀಡದೇ ಅವಮಾನ ಮಾಡಲಾಯಿತು. ಐದೂ ಪಂದ್ಯಗಳಲ್ಲಿ ಬೇಂಚ್ ಕಾಯಿಸಿದ ಕರುಣ್ ನಾಯರ್ ನಿರಾಶರಾಗಬೇಕಾಯಿತು. ಅದೇ ಕಾರಣಕ್ಕಾಗಿ ಕರುಣ್ ನಾಯರ್, ಈ ಸರಣಿಯ ವೇಳೆ ಆಯ್ಕೆ ಮಂಡಳಿ ಹಾಗೂ ಮ್ಯಾನೇಜ್‌ಮೆಂಟ್ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಹೇಳಿದರು. ಹೀಗೆ ಅವಕಾಶ ನೀಡದ ಆಯ್ಕೆ ಮಂಡಳಿ, ವಿಂಡೀಸ್ ಸರಣಿಗೆ ಕಾರಣವಿಲ್ಲದೇ ಕರುಣ್‌ರನ್ನು ಆಯ್ಕೆ ಮಾಡದೇ ಇದ್ದುದು ಸಾಕಷ್ಟು ಅನುಮಾನಗಳಿಗೂ, ಟೀಕೆಗಳಿಗೂ ಕಾರಣವಾಯಿತು.
ಇದೇ ವೇಳೆ ಭಾರತ ತಂಡದ ಮುರಳಿ ವಿಜಯ್ ಕೂಡ ತಮ್ಮ ಬಳಿ ಆಯ್ಕೆ ಮಂಡಳಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇಂಗ್ಲೆೆಂಡ್ ಸರಣಿಯ 4ನೇ ಪಂದ್ಯದ ಬಳಿಕ ಹಾಗೂ ವಿಂಡೀಸ್ ಸರಣಿಗೆ ತಂಡದ ಆಯ್ಕೆ ಸಂದರ್ಭದಲ್ಲಿ ಆಯ್ಕೆ ಸಮಿತಿ ತಮ್ಮ ಬಳಿ ಮಾತನ್ನಾಡಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾಾರೆ. ಇದನ್ನೆಲ್ಲ ಗಮನಿಸಿದಾಗ ಆಯ್ಕೆ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ರಾಜಕೀಯದ ದಾಳವಾಗಿ ಆಯ್ಕೆ ಸಮಿತಿ ಬಳಕೆಯಾಗುತ್ತಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ.

ಆಯ್ಕೆ ಸಮಿತಿ ಹಾಗೂ ಅನುಭವ
ಆಯ್ಕೆ ಸಮಿತಿಯು 5 ಸದಸ್ಯರನ್ನು ಮತ್ತು ಸಂಚಾಲಕರನ್ನು ಹೊಂದಿರುತ್ತದೆ. ಆಯ್ಕೆ ಸಮಿತಿಯ 5 ಸದಸ್ಯರು ಮಾತ್ರ ತಂಡದ ಆಯ್ಕೆಗೆ ಮತ ಚಲಾಯಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಸಂಚಾಲಕನು ಕಾರ್ಯದರ್ಶಿಯಾಗಿದ್ದು, ಹಿರಿಯ ಆಯ್ಕೆ ತಂಡಕ್ಕೆ ಬಿಸಿಸಿಐ ಮತ್ತು ಜೂನಿಯರ್ ಆಯ್ಕೆ ತಂಡದ ಜೂನಿಯರ್ ಕಾರ್ಯದರ್ಶಿ ಹುದ್ದೆಗಳಿರುತ್ತವೆ.
ಆಯ್ಕೆ ಸಮಿತಿಯಲ್ಲಿರುವ 5 ಸದಸ್ಯರನ್ನು ಸಾಂಪ್ರದಾಯಿಕವಾಗಿ 5 ಕ್ರಿಕೆಟ್ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ. ಉತ್ತರ ವಲಯ, ಕೇಂದ್ರ ವಲಯ, ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯಗಳಿವೆ. 5 ಸದಸ್ಯರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಬಿಸಿಸಿಐ ಆಯ್ಕೆ ಮಾಡುತ್ತದೆ. ಲೋಧಾ ಸಮಿತಿಯ ಶಿಫಾರಸಿನ ಒತ್ತಡದಿಂದಾಗಿ, ಬಿಸಿಸಿಐ 2016 ರಲ್ಲಿ ವಲಯ ವ್ಯವಸ್ಥೆಯನ್ನು ರದ್ದುಗೊಳಿಸಿತು.
ತಂಡದ ನಾಯಕ ಮತ್ತು ತರಬೇತುದಾರ ತಂಡದ ಆಯ್ಕೆ ಸಮಿತಿ ಸಭೆಗಳಿಗೆ ಆಹ್ವಾನ ನೀಡಲಾಗುತ್ತದೆ, ಆದರೆ ತಂಡ ಆಯ್ಕೆಗಳಲ್ಲಿ ನಾಯಕ ಮತ್ತು ತರಬೇತುದಾರರಿಗೆ ಮತದಾನದ ಹಕ್ಕು ಇರುವುದಿಲ್ಲ.
ಪ್ರಸ್ತುತ ಭಾರತ ತಂಡದ ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಮುಖ್ಯಸ್ಥರಾಗಿ ಮಾಜಿ ವಿಕೆಟ್ ಕೀಪರ್ ಎಂ. ಎಸ್. ಕೆ. ಪ್ರಸಾದ್  ಇದ್ದರೆ, ಉಳಿದ ಸದಸ್ಯರಾಗಿ ದೇವಾಂಗ್ ಗಾಂಧಿ ಹಾಗೂ ಶರಣದೀಪ್ ಸಿಂಗ್ ಇದ್ದಾರೆ.
ಈ ಆಟಗಾರರಲ್ಲಿ ಎಂ. ಎಸ್. ಕೆ. ಪ್ರಸಾದ್ ಆಡಿದ್ದು 6 ಟೆಸ್‌ಟ್‌ ಹಾಗೂ 17 ಏಕದಿನ ಪಂದ್ಯಗಳನ್ನು ಮಾತ್ರ. ದೇವಾಂಗ್ ಗಾಂಧಿ ಆಡಿದ್ದು 4 ಟೆಸ್‌ಟ್‌ ಹಾಗೂ 3 ಏಕದಿನ ಪಂದ್ಯಗಳು. ಶರಣದೀಪ್ ಸಿಂಗ್ ಆಡಿದ್ದು 3 ಟೆಸ್‌ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಮಾತ್ರ. ವಿಚಿತ್ರವೆಂದರೆ ಇಷ್ಟು ಅಲ್ಪ ಕ್ರಿಕೆಟ್ ಆಡಿದವರು ಭಾರತ ತಂಡವನ್ನು ಆಯ್ಕೆ ಮಾಡುತ್ತಾರೆ. ಇನ್ನೂ ವಿಚಿತ್ರ ಎಂದರೆ, ಈ ಎಲ್ಲಾ ಆಟಗಾರರು ಸೇರಿ ಭಾರಿಸಿದ ರನ್‌ಗಳನ್ನು ಕರುಣ್ ನಾಯರ್ ತಮ್ಮ ಒಂದೇ ಇನ್ನಿಿಂಗ್‌ಸ್‌ (303 ನಾಟೌಟ್)ನಲ್ಲಿ ಭಾರಿಸಿದ್ದಾರೆ.

ಮಾನದಂಡಗಳು
ಈ ವೈರುದೈ ಗಮನಿಸಿದಾಗ ಭಾರತದ ಆಯ್ಕೆ ಸಮಿತಿ ಸದಸ್ಯರಾಗುವವರು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿಗಳಾಗಿರುವುದು ಅಗತ್ಯ ಎನ್ನುವುದು ಅಭಿಮಾನಗಳ ಅಭಿಮತವಾಗಿದೆ. ಕನಿಷ್ಟ 25 ಟೆಸ್‌ಟ್‌‌ಗಳು ಹಾಗೂ 25 ಏಕದಿನ ಪಂದ್ಯಗಳನ್ನಾದರೂ ಆಡಿರಬೇಕು ಎನ್ನುವ ಅಭಿಪ್ರಾಯ ದಟ್ಟವಾಗಿ ಕೇಳಿ ಬರುತ್ತಿದೆ. ಏಕದಿನ ಹಾಗೂ ಟೆಸ್‌ಟ್‌‌ಗಳಲ್ಲಿ ಕನಿಷ್ಟ 1000 ರನ್ ಭಾರಿಸಿರಬೇಕು ಅಥವಾ 50 ವಿಕೆಟ್ ಕಬಳಿಸಿರಬೇಕು. ಇಂತವರನ್ನು ಮಾತ್ರ ಆಯ್ಕೆ ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕೆಂಬ ಆಗ್ರಹಗಳು ಕೇಳಿ ಬಂದಿವೆ. ಇಲ್ಲವಾದಲ್ಲಿ ಈಗ ನಡೆಯುತ್ತಿರುವಂತಹ ಅಧ್ವಾಾನಗಳು ಮತ್ತೂ ಮುಂದುವರಿಯುವುದು ಸಹಜ ಎಂಬಂತಾಗಿದೆ.

Saturday, October 6, 2018

ರ್ಯಾಂಕ್ ತೆಗೆದುಕೊಳ್ಳಿ ಆದರೆ ಫಸ್ಟ್ ರ್ಯಾಂಕ್ ರಾಜು ಆಗಬೇಡಿ

ಕಾಲೇಜು ಎನ್ನುವುದೊಂದು ನಾಲೇಜಿನ ಜಗತ್ತು. ಎಲ್ಲ ವಿಷಯಗಳನ್ನು ಅರಿತುಕೊಳ್ಳುವ ಪ್ರಪಂಚ. ಇಂತಹ ಕಾಲೇಜು ಕೇವಲ ಓದಿಗೆ ಮಾತ್ರ ಸೀಮಿತವಾಗದಿರಲಿ. ರಚನಾತ್ಮಕ ಕಾರ್ಯಗಳು, ಸೃಜನಶೀಲತೆಯನ್ನು ಪ್ರಚುರಪಡಿಸಿಕೊಳ್ಳುವಲ್ಲಿ ಕಾಲೇಜು ವೇದಿಕೆಯಾಗಲಿ.
ಕಾಲೇಜು ಎಂದ ಮೇಲೆ ಓದು ಎಷ್ಟು ಮುಖ್ಯವೋ, ಅದರ ಜತೆ ಜತೆಯಲ್ಲಿಯೇ ನಾವು ಕೈಗೊಳ್ಳುವ ವಿವಿಧ  ಕಾರ್ಯಗಳು, ರಚನಾತ್ಮಕ ಕೆಲಸಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬರೀ ಓದು, ಮಾರ್ಕ್ಸ್, ರ್ಯಾಂಕ್  ಎಂದು ಬದುಕಿದವರಿಗಿಂತ, ಆವರೇಜ್ ಮಾರ್ಕ್ಸ್  ತೆಗೆದವರು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗಬಲ್ಲರು.
ಬರೀ ಓದಿ ಓದಿ ಪುಸ್ತಕದ ಹುಳುವಾಗಿ, ಸಮಾಜದ ನಡುವೆ ಫಸ್ಟ್ ರ್ಯಾಂಕ್ ರಾಜು ಆಗುವುದರ ಬದಲು, ಲಾಸ್ಟ  ಬೇಂಚ್ ಹುಡುಗನಾಗಿ, ಕಾಲೇಜಿನ ರಸ ನಿಮಿಷಗಳನ್ನು, ಆ ದಿನಗಳ ಎಲ್ಲ ಸಂತಸಗಳನ್ನು ಸವಿಯುವವನು ಖುಷ್ ಖುಷಿಯಾಗಿ ಬದುಕುತ್ತಾನೆ. ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾನೆ.
ಹಾಗಾದರೆ ಓದು ಹೊರತು ಪಡಿಸಿ ಕಾಲೇಜು ಟೈಮಲ್ಲಿ ಏನೇನು ಮಾಡಬಹುದು? ಆಟೋಟವೋ, ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇನ್ಯಾವುದೋ ಅಂಶಗಳು ಥಟ್ಟನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅವು ಮಾತ್ರವಲ್ಲ ಇನ್ನೂ ಹಲವು ಅಂಶಗಳಲ್ಲಿ ಕಾಲೇಜು ಹುಡುಗರು ತಮ್ಮನ್ನು ತಾವು ತೊಡಗಿಸಿಕೊಂಡು, ಪ್ರತಿಭೆಯನ್ನು, ವ್ಯಕ್ತಿತ್ವವನ್ನು ಪ್ರದರ್ಶಿಸಬಹುದು. ರೂಪಿಸಿಕೊಳ್ಳಬಹುದು. ಅಂತಹ ಕೆಲವು ಸಂಗತಿಗಳ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ.

ಪಠ್ಯಕ್ಕೆ  ಅಂಟಿಕೊಳ್ಳುವುದರಿಂದ ಆಗುವ ಅಪಾಯಗಳು
ಕೇವಲ ಪಠ್ಯಕ್ಕೆ, ಓದಿಗೆ ಅಂಟಿಕೊಂಡರೆ ಬದುಕಿನಲ್ಲಿ ಪಾಯ ಉಂಟಾಗುವುದೇ ಅಧಿಕ. ಕೇವಲ ಪಠ್ಯಕ್ಕೆ ಅಂಟಿಕೊಂಡವರಲ್ಲಿ ಹೆಚ್ಚಿನ ಜನರು ನಂತರ ಬದುಕಿನಲ್ಲಿ ಕಳೆದೇ ಹೋಗಿದ್ದಾರೆ. ಜೀವನವನ್ನು ಸಮರ್ಪಕವಾಗಿ ಕಟ್ಟಿಕೊಳ್ಳಲು ಎಡವಿದ್ದಾರೆ. ಸಮಾಜದ ನಡುವೆ ಬಾಳಿ ಬದುಕಲು ಒದ್ದಾಡಿ, ಬದುಕನ್ನು ಅಂತ್ಯಗೊಳಿಸಿಕೊಂಡವರೂ ಇದ್ದಾರೆ. ಕೇವಲ ಪಠ್ಯಕ್ಕೆ ಅಂಟಿಕೊಂಡವರು ಫಸ್ಟ್  ರ್ಯಾಂಕ್  ರಾಜುಗಳಾಗಿ ಬದುಕನ್ನು ಕಾಮೆಡಿ ಮಾಡಿಕೊಂಡವರೂ ಅನೇಕರು ನಮ್ಮ ಮುಂದೆಯೇ ನಿದರ್ಶನಗಳಾಗಿದ್ದಾರೆ. ಪಠ್ಯದ ಹುಳುಗಳು ನಾಲ್ಕು ಜನರ ನಡುವೆ ಬೆರೆಯುವುದಕ್ಕೆ ಸಾಧ್ಯ ವಾಗದೇ ಬವಣೆ ಪಡುವುದನ್ನು ನೋಡಿದ್ದೇವೆ. ಅಷ್ಟೇ ಅಲ್ಲದೇ ಬದುಕಿನಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಅದಕ್ಕೆ ಇತರರ ನೆರವಿಲ್ಲದೆಯೇ, ಸ್ವತಂತ್ರವಾಗಿ ತೆಗೆದುಕೊಂಡಿದ್ದಂತೂ ಇಲ್ಲವೇ ಇಲ್ಲ ಬಿಡಿ. ಬರೀ ಪಠ್ಯದ ಹುಳುವಾಗುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಪಠ್ಯದಿಂದ ಆಚೆಗೂ ಇಣುಕುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಬಲ್ಲದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ
ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಯೊಬ್ಬರ ಬದುಕಿನಲ್ಲಿ ಪಠ್ಯದಷ್ಟೇ ಬಹಳ ಮುಖ್ಯ. ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮೈಮನಗಳನ್ನು ತಿಳಿಯಾಗಿಸಬಲ್ಲದು. ಆಟೋಟಗಳು ದೇಹಕ್ಕೆ ಹಿತಕಾರಿ, ಆರೋಗ್ಯಕಾರಿ. ಆಟೋಟಗಳಲ್ಲಿ ಪಾಲ್ಗೊಳ್ಳದೇ ಇರುವುದು, ದೇಹಕ್ಕೆ ವ್ಯಾಾಯಾಮಗಳನ್ನು ನೀಡದೇ ಇರುವುದು ಅನಾರೋಗ್ಯಗಳಿಗೆ ಅವಕಾಶ ನೀಡದಂತೆ. ಕ್ರಿಕೆಟ್, ಓಟ, ಷಟಲ್ ಬ್ಯಾಡ್ಮಿಿಂಟನ್ ಹೀಗೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೇಹಗಳಿಗೆ ರೀಲ್ಯಾಕ್ಸ್  ಸಿಗುತ್ತದೆ. ಇನ್ನು ಚದುರಂಗ (ಚೆಸ್) ನಂತರ ಮೈಂಡ್ ಗೇಮುಗಳು ನಮ್ಮ ಮನಸ್ಸನ್ನು ಚುರುಕಾಗಿಸುತ್ತದೆ. ಕಾಲೇಜು ದಿನಗಳಲ್ಲಿ ಓದು ಎಷ್ಟು ಅಗತ್ಯವೋ, ಇಂತಹ ಆಟೋಟಗಳಲ್ಲಿ ಭಾಗವಹಿಸುವುದೂ ಕೂಡ ಅಷ್ಟೇ ಮುಖ್ಯ.
ಇನ್ನು ವಿವಿಧ  ಆಟಗಳಲ್ಲಿ, ಓಟದಂತಹ ಸ್ಪರ್ಧೆಗಳಲ್ಲಿ  ಕಾಲೇಜುಗಳನ್ನು ಪ್ರತಿನಿಸುವುದೂ ಕೂಡ ಬಹಳ ಹೆಮ್ಮೆಯ ಸಂಗತಿಯೇ ಸರಿ. ಯಾವ್ಯಾವುದೋ ಕಾಲೇಜುಗಳಿಗೆ  ಸ್ಪರ್ಧೆಗಳಿಗಾಗಿ ತೆರಳಿ, ಆ ಕಾಲೇಜಿನ ಅಂಗಳದಲ್ಲಿ ನಮ್ಮ ಕಾಲೇಜನ್ನು ಪ್ರತಿನಿಸಿ ಗೆಲುವು ಸಾಸುವ ಸಂದರ್ಭದಲ್ಲಿ  ನೀಡುವಂತಹ ಖುಷಿ ಓದಿ ರ್ಯಾಂಕ್ ಪಡೆದಾಗ ನೀಡುವ ಖುಷಿಗಿಂತ ಹೆಚ್ಚು. ಇನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಲೂ ಆಗಿ ಹೊರಹೊಮ್ಮಿದಾಗಲಂತೂ ಆಗುವ ಸಂತಸ, ಸಂಭ್ರಮಕ್ಕೆ ಪಾರವೇ ಇಲ್ಲ ಬಿಡಿ.

ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಳ್ಳುವಿಕೆ
ಕ್ರೀಡೆಗಳಷ್ಟೇ ಕಾಲೇಜು ದಿನಗಳಲ್ಲಿ ಬಹು ಮುಖ್ಯವಾಗುದು ಸಾಂಸ್ಕೃತಿಕ ರಂಗ. ಕಾಲೇಜಿನ ಮಟ್ಟದಲ್ಲಿ ಯಾವುದೋ ನಾಟಕವೋ, ಹಾಡೋ, ನೃತ್ಯದಲ್ಲೋ ಪಾಲ್ಗೊಳ್ಳುವ ಮೂಲಕ ನಮ್ಮೊಳಗಿನ ಸಾಂಸ್ಕೃತಿಕ ಪ್ರತಿಭೆಯನ್ನು ಒರೆಗೆ ಹಚ್ಚುವುದೂ ಕೂಡ ಬಹುಮುಖ್ಯ. ಕಾಲೇಜು ದಿನಗಳಲ್ಲಿಯೇ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ನಾಲ್ಕು ಜನರ ಮುಂದೆ ಪ್ರದರ್ಶನ ಮಾಡುವ ಮೂಲಕ, ಬದುಕನ್ನು ಬದಲಿಸಿಕೊಂಡವರು ಹಲವರು. ಸಾಂಸ್ಕೃತಿಕ ರಂಗದಲ್ಲಿ ಕಣ್ಮಣಿಯಾಗಿ ಮೆರೆದವರೂ ಅನೇಕ ಜನರಿದ್ದಾರೆ. ಇಂತಹ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ವಿದ್ಯಾಾರ್ಥಿಗಳು ಮಿಂಚುವ ಮೂಲಕ ಕಾಲೇಜನ್ನು, ವಿಶ್ವವಿದ್ಯಾಲಯವನ್ನು ಪ್ರತಿನಿಸಿದಾಗಲೂ  ಸಿಗುವ ಸಂತಸ, ಸಂಭ್ರಮ  ಅನಿರ್ವಚನೀಯವಾದುದು.

ಸಾಮಾಜಿಕ ಕಾರ್ಯಗಳು
ಓದು, ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಪಾಲ್ಗೊಳ್ಳುವುದರ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶ ಬಹಳ ಇದೆ. ಇಂತಹ ಸಾಮಾಜಿಕ ಕಾರ್ಯಗಳು, ಮುಂದಿನ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡುತ್ತವೆ. ಜತೆಗೆ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಕಾರ್ಯಗಳು ಕಾಲೇಜು ದಿನಗಳಲ್ಲಿ ಇಂತಹ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿದೆ. ಎನ್‌ಸಿಸಿಯು ಮುಂದಿನ ಬದುಕಿನಲ್ಲಿ ದೇಶಸೇವೆ, ಸೈನ್ಯ ಸೇರುವಿಕೆಯಂತಹ ಹಲವು ಅವಕಾಶಗಳನ್ನು ತೆರೆದಿಡುತ್ತದೆ. ಅಲ್ಲದೇ ನಾಯಕತ್ವ ಗುಣವನ್ನೂ ಕೂಡ ಬೆಳೆಸುತ್ತದೆ. ಎನ್‌ಎಸ್‌ಎಸ್ ಕೂಡ ಬದುಕನ್ನು ವಿಭಿನ್ನ ರೀತಿಯಲ್ಲಿ, ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ಸಮಾಜವನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ. ಎನ್‌ಸಿಸಿ ಕ್ಯಾಾಂಪುಗಳಂತೂ ನಾಯಕತ್ವ ಗುಣವನ್ನು ಬೆಳೆಸುವುದರ ಜತೆಗೆ ಸಮಾಜದ ನಡುವೆ ನಮ್ಮ ಬೆಲೆಯನ್ನು ಹೆಚ್ಚಿಸುತ್ತವೆ. ಗ್ರಾಮಾಭ್ಯುದಯ , ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಹೀಗೆ ವಿವಿಧ  ರಂಗದಲ್ಲಿ ಬೆಳವಣಿಗೆಗೂ ಎನ್‌ಎಸ್‌ಎಸ್ ಕಾರಣವಾಗುತ್ತದೆ.

ಕಾಲೇಜು ದಿನಗಳಲ್ಲಿ ಓದುವುದರ ಜತೆ ಜತೆಯಲ್ಲಿಯೇ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಬಹುದು. ಕಿರುಚಿತ್ರಗಳನ್ನು ನಿರ್ಮಿಸಬಹುದು, ಪತ್ರಿಕೆಗಳಿಗೆ ಬರಹಗಳನ್ನು ಬರೆಯಬಹುದು. ಸದೃಢ ಆರೋಗ್ಯಕ್ಕಾಗಿ ಯೋಗದಂತಹ ತರಗತಿಗಳನ್ನು ನಡೆಸಬಹುದು. ಸ್ವತಃ ನಾವೂ ಕೂಡ ಯೋಗಾಸನಗಳನ್ನು ನಡೆಸಿ ನಮ್ಮ ಮೈಮನಗಳನ್ನು ತಿಳಿಯಾಗಿರಿಸಿಕೊಳ್ಳಬಹುದು. ಯಾವುದೋ ವಾಹಿನಿಗಳಲ್ಲಿ ಆಂಕರ್ ಆಗಬಹುದು. ಅಷ್ಟೇ ಏಕೆ ಕಾಲೇಜು ಕಾರ್ಯಕ್ರಮಗಳಲ್ಲಿಯೂ ಉತ್ತಮ ನಿರೂಪಕರಾಗಿ ಎಲ್ಲರ ಮನವನ್ನು ಗೆಲ್ಲಬಹುದು.

ಪಾರ್ಟ್ ಟೈಂ ಕಾರ್ಯಗಳು
ಕಾಲೇಜು ಓದಿನ ಜತೆ ಜತೆಯಲ್ಲಿಯೇ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಬದುಕು ನಡೆಸಿದವರು ಹಲವರಿದ್ದಾರೆ. ತಮ್ಮ ಬದುಕಿನ ಅನ್ನವನ್ನು ತಾವೇ ಕಂಡುಕೊಂಡವರೂ ಇದ್ದಾರೆ. ಬಿಡುವಿನ ವೇಳೆಯಲ್ಲಿ ಯಾವುದೋ ಕಾರ್ಯಗಳನ್ನು ನಡೆಸಿ ಪಾಕೆಟ್ ಮನಿಯನ್ನು ಮಾಡಿಕೊಂಡವರಿದ್ದಾರೆ. ಇಂತಹ ವ್ಯಕ್ತಿಗಳು ಮನಿ ಮ್ಯಾನೇಜ್‌ಮೆಂಟನ್ನು ಹೆಚ್ಚು ತಿಳಿದುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಯಶಸ್ವಿಯಾಗಬಲ್ಲರು.

ಲವ್ ಮಾಡಿ ನೋಡು..
ಕಾಲೇಜು ಬದುಕಿನಲ್ಲಿ ಪ್ರೀತಿ-ಪ್ರೇಮ-ಪ್ರಣಯ ಸಹಜ. ಪ್ರತಿಯೊಬ್ಬನಿಗೂ, ಪ್ರತಿಯೊಬ್ಬಳಿಗೂ ಕೂಡ ಪ್ರೀತಿ ಎಂಬುದು ಚಿಗುರೊಡೆದೇ ಇರುತ್ತದೆ. ಯಾರೋ ಒಬ್ಬರು ಅವನ/ಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡೇ ಇರುತ್ತಾಾರೆ. ಅವರವರಿಗೆ ಅರಿವಿಲ್ಲದಂತೆಯೇ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡು ಭದ್ರವಾಗಿ ನೆಲೆಯೂರಿ ನಿಂತಿರುತ್ತಾರೆ. ಕೆಲವರು ತಮ್ಮೊಳಗಿನ ಸುಪ್ತ ಪ್ರೀತಿಯನ್ನು ಅವನ/ಳ ಬಳಿ ಹೇಳಿಕೊಂಡರೆ ಇನ್ನೂ ಹಲವರು ಹೇಳಿಕೊಳ್ಳದೇ ತೊಳಲಾಡುತ್ತಿರುತ್ತಾರೆ. ಹಲವರಿಗೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವುದು ತಪ್ಪು. ಆದರೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮದಲ್ಲಿ ಇದ್ದೂ ಬದುಕನ್ನು ಸುಂದರವಾಗಿ ಕಟ್ಟಿಕೊಂಡವರು ನಮ್ಮ ನಡುವೆಯೇ ಉದಾಹರಣೆಯಾಗಿ ನಿಂತಿದ್ದಾರೆ.

ಲಾಸ್ಟ ಲೈನ್ಸ್
ಕಾಲೇಜು ಹುಡುಗ್ರಾ. . .  ಹುಡುಗೀರ್ರಾ . . . ಬರೀ ಓದು ಓದು ಎಂದು ಓದುಗುಳಿಯಾಗಬೇಡಿ. ಓದಿನ ಜತೆಗೆ ಇತರ ಹಲವು ಸಂಗತಿಗಳು ಜಗತ್ತಿನಲ್ಲಿ ಸುಂದರವಾಗಿದೆ. ಅದರ ಕಡೆಗೂ ಗಮನ ಹರಿಸಿ. ಕಾಲೇಜು ದಿನಗಳಲ್ಲಿ ಓದಿನ ಜತೆ ಜತೆಯಲ್ಲಿಯೇ ಪಡೆದುಕೊಳ್ಳುವ ಇತರ ಖುಷಿಗಳು ಬದುಕಿನಾದ್ಯಂತ ನೆನಪಿನಲ್ಲಿ ಇರುತ್ತವೆ. ಇವನ್ನು ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಎಷ್ಟು ಪರಿತಪಿಸಿದರೂ ಸಿಗಲಾರದು. ಹೀಗಾಗಿ ಹೇಳೋದಿಷ್ಟೆ.. . ಜಸ್ಟ್  ಹ್ಯಾಪಿಯಾಗಿರಿ..



Tuesday, October 2, 2018

ಕಥೆಯ ಕಾಯಿಲೆ

ಅರಳರಳಿ ಮರುಮರಳಿ
ಸುಳಿದು ಬರುತಿದೆ ಕಥೆಯ ಕಾಯಿಲೆ
ನೋವುಂಟು ನಲಿವುಂಟು
ಸುರುಳಿ ಸೊಳ್ಳೆಯ ಬತ್ತಿ ಕಥೆಯ ಕಾಯಿಲೆ

ಅಕ್ಕರೆಯ ಪ್ರೀತಿ ಸಕ್ಕರೆಯ ರೀತಿ
ಸೋಲನ್ನೂ ಮರೆಸುತಿದೆ ಖ್ಯಾತಿ
ಅತ್ತಿತ್ತ ಹುಯ್ದಾಡಿ ಸುತ್ತೆಲ್ಲ ಸುಳಿದಾಡಿ
ಮರಳಿ ಬರುತಿದೆ ಕಥೆಯ ಕಾಯಿಲೆ

ಮನಸು ಅಂತರಗಂಗೆ
ಹರಿಸಿ ಪ್ರೀತಿಯ ಗಂಗೆ
ತೆರೆ ತೆರೆಯ ನೆರಳಲ್ಲಿ
ಮತ್ತೆ ನೆನಪಾಗುತಿದೆ ಕಥೆಯ ಕಾಯಿಲೆ

ಜನನ ಮರಣದ ನಡುವೆ
ನೋವು ನಲಿವಿನ ಗೊಡವೆ
ಪ್ರೀತಿ ಸ್ನೇಹದ ಒಡವೆ
ಹೊತ್ತು ತರುತಿದೆ ಕಥೆಯ ಕಾಯಿಲೆ

ನಗುವು ಅಳುವಿನ ಬದುಕು
ಒಲವು ಸೇಡಿನ ಇಣುಕು
ನೆನಪು ನಲಿವಿನ ಪಲಕು
ಕರೆಯ ಕೊಟ್ಟಿದೆ ಕಥೆಯ ಕಾಯಿಲೆ


******



(ಕನ್ನಡದ ಇನ್ನೊಂದು ಚಿತ್ರಕ್ಕೆ ಈ ಹಾಡನ್ನು ಬರೆದುಕೊಟ್ಟಿದ್ದೆ. ಖಂಡಿತವಾಗಿಯೂ ಇದನ್ನು ಬಳಸಿಕೊಳ್ಳುತ್ತೇವೆ.. ಶೀಘ್ರದಲ್ಲಿಯೇ ನಿಮಗೆ ವಿತ್ ಮ್ಯೂಸಿಕ್ ಹಾಡನ್ನು ಕಳಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದರು.
ಹಾಡನ್ನು ಬರೆಯುವ ಮೊದಲು ಸುರುಳಿ ಸೊಳ್ಳೆಯ ಬತ್ತಿ ಹಾಗೂ ಕಥೆಯ ಕಾಯಿಲೆ ಎನ್ನುವ ಎರಡು ಶಬ್ದಗಳನ್ನು ಕೊಟ್ಟು ಇವೆರಡೂ ಹಾಡಿನ ಮೊದಲ ಪ್ಯಾರಾದಲ್ಲಿ ಇರಲೇಬೇಕು ಎಂದಿದ್ದರು. ಇದೇ ಏಕೆ ಎಂದರೆ, ಅದನ್ನೇ ಸಿನಿಮಾ ಟೈಟಲ್ ಮಾಡುವುದಾಗಿ ಹೇಳಿದ್ದರು. ಆಮೇಲೆ ಈ ಹೆಸರು ಬಳಕೆಯಾಗಲಿಲ್ಲ. ಚಿತ್ರ ಬಿಡುಗಡೆಯೂ ಆಯ್ತುಘಿ. ಅದರಲ್ಲಿ ನನ್ನ ಹಾಡೂ ಕೂಡ ಬಳಕೆ ಆಗಿರಲಿಲ್ಲ. ಎನಿವೇ.. ಆ ಹಾಡು ಇಲ್ಲಿದೆ ನೋಡಿ)