Monday, September 10, 2018

ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ ಐವರು ಕ್ರಿಕೆಟ್ ಲೆಜೆಂಡ್ಸ್

ಕ್ರಿಕೆಟ್ ಜಗತ್ತಿನ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ಮೊದಲ ಟೆಸ್ಟ್  ಆಡಿದ್ದಾರೆ. ಇನ್ನೂ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ತಮ್ಮ ಬದುಕಿನ ಕೊಟ್ಟ ಕೊನೆಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮೊದಲ ಟೆಸ್ಟ್ ಹಾಗೂ ಕೊನೆಯ ಟೆಸ್ಟ್ ಈ ಎರಡಕ್ಕೂ ಭಾರತವೇ ಎದುರಾಳಿ ಆದ ನಿದರ್ಶನ ಹಲವಿದೆ. ಕ್ರಿಕೆಟ್ ಲೋಕದ ಖ್ಯಾತನಾಮ ಆಟಗಾರರು ಭಾರತದ  ವಿರುದ್ಧ ಕೊನೆಯ ಪಂದ್ಯವಾಡುವ ಮೂಲಕ ಭಾರತದ  ಹೆಸರನ್ನು ಅವರ ಜತೆ ಶಾಶ್ವತವಾಗಿ ಇರಿಸಿಕೊಂಡಿದ್ದಾರೆ. 2000ದಿಂದೀಚೆಗೆ ಭಾರತದ  ವಿರುದ್ಧವೇ ಕ್ರಿಕೆಟ್‌ಗೆ ವಿದಾಯ ಹೇಳೀದ ಐವರು ಕ್ರಿಕೆಟ್ ಕಲಿಗಳ ಕುರಿತು ಕಿರುವಿವರ ಇಲ್ಲಿದೆ.

ಸ್ಟೀವ್ ವಾ (2003-04)
ಆಸ್ಟ್ರೇಲಿಯಾ ಕಂಡ ಯಶಸ್ವಿ ನಾಯಕ ಸ್ಟೀವ್ ವಾ. ಕ್ರಿಕೆಟ್ ಲೋಕದ ಹೆಸರಾಂತ ಆಟಗಾರ. ಈ ಸ್ಟೀವ್ ವಾ ಭಾರತದ  ವಿರುದ್ಧ ತಮ್ಮ ಕೊಟ್ಟ ಕೊನೆಯ ಟೆಸ್ಟ್ ಆಡಿದರು. 2003-04ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿಯೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸ್ಟೀವ್ ವಾ ಪಾಲಿಗೆ ಕೊನೆಯ ಪಂದ್ಯಾವಳಿಯಾಯಿತು. ಈ ಕಾರಣದಿಂದಲೇ ಈ ಸರಣಿಯನ್ನು ಸ್ಟೀವ್ ವಾ ವಿದಾಯ ಟೂರ್ನಿ ಎಂದೂ ಕರೆಯಲಾಗುತ್ತದೆ. ಈ ಸರಣಿಯನ್ನು ಭಾರತ 1-1ರಿಂದ ಗೆದ್ದು ಸಮಬಲ ಸಾಧಿಸಿ ಸದಾ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದೆ. ಸತತ 16 ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಸ್ಟೀವ್ ವಾ ಕೊನೆಯ ಪಂದ್ಯ ಭಾರತದ  ವಿರುದ್ಧ ನಡೆದಿದ್ದು ಎನ್ನುವುದೇ ವಿಶೇಷ.


ಆ್ಯಡಂ ಗಿಲ್‌ಕ್ರಿಸ್ಟ್
ಆಸ್ಟ್ರೇಲಿಯಾ ಹಾಗೂ ವಿಶ್ವ ಕಂಡ ಸಾರ್ವಕಾಲಿಕ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಆ್ಯಡಂ ಗಿಲ್‌ಕ್ರಿಸ್ಟ್. 1999, 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದವರು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದವರು. 2007-08ರಲ್ಲಿ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಾಗ ಗಿಲ್‌ಕ್ರಿಸ್ಟ್  ಕೊನೆಯ ಪಂದ್ಯವನ್ನು ಆಡಿದರು. 2008ರ ಜನವರಿ 26 ಗಿಲ್‌ಕ್ರಿಸ್ಟ್  ಆಡಿದ ಕೊನೆಯ ಪಂದ್ಯ. ಈ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿಯ ನಂತರ ಗಿಲ್‌ಕ್ರಿಸ್ಟ್  ಐಪಿಎಲ್‌ಗಳಲ್ಲಿ ಆಡಿದರಾದರೂ ಪ್ರಭಾವಿ ಎನ್ನಿಸಲಿಲ್ಲ. ಭಾರತದ  ವಿರುದ್ಧ ವಿದಾಯ ಹೇಳಿದ ಎರಡನೇ ಲೆಜೆಂಡ್ ಎನ್ನಿಸಿಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ (2010)
ವಿಶ್ವದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧ ರನ್. ಅತ್ಯಂತ ಹೆಚ್ಚು ಏಕದಿನ ಹಾಗೂ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಆಟಗಾರ. ಭಾರತವು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ  2010ರಲ್ಲಿ ಗಾಲೆಯಲ್ಲಿ ನಡೆದ ಪಂದ್ಯ ಮುರಳೀಧರನ್ ವೃತ್ತಿ ಬದುಕಿನ ಕೊಟ್ಟ ಕೊನೆಯ ಪಂದ್ಯ ಎನ್ನಿಸಿಕೊಂಡಿತು. ಮುರಳೀಧರನ್ ಕೊನೆಯ ಪಂದ್ಯದ ಕೊನೆಯ ಬಾಲ್‌ನಲ್ಲಿ ಭಾರತದ ಪ್ರಗ್ಯಾನ್ ಓಝಾ ವಿಕೆಟ್ ಪಡೆಯುವ ಮೂಲಕ ಚಿರಸ್ಥಾಯಿ ಎನ್ನಿಸಿಕೊಂಡರು. ಇದು ಅವರ 800ನೇ ವಿಕೆಟ್ ಆಗಿತ್ತು. ಈ ಸರಣಿ ಸಮಬಲಗೊಂಡರೂ 1334 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಮುರಳೀಧರನ್ ವಿದಾಯ ಹೇಳಿದ್ದರಿಂದ ಅಭಿಮಾನಿಗಳ ಪಾಲಿಗೆ ಸದಾ ನೆನಪಿನಲ್ಲಿ ಉಳಿಯಿತು.

ಜಾಕ್ ಕಾಲಿಸ್ (2013)
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆಟಗಾರ ಜಾಕ್ ಕಾಲಿಸ್. ಟೆಸ್ಟ್ ನಲ್ಲಿ  ಅತ್ಯಂತ ಹೆಚ್ಚು ರನ್ ಗಳಿಸಿದವರ ಯಾದಿಯಲ್ಲಿ ಸ್ಥಾನ ಪಡೆದವರು. 13000 ರನ್, 292 ವಿಕೆಟ್ ಹಾಗೂ 200 ಕ್ಯಾಚ್ ಪಡೆದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬ. ಕಾಲಿಸ್ ಕೊನೆಯ ಟೆಸ್ಟ್ ಆಡಿದ್ದು 2013ರಲ್ಲಿ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ಗೆಲುವಿಗೂ ಕಾರಣರಾದ ಆಟಗಾರ. ತೆಂಡೂಲ್ಕರ್, ಲಾರಾ, ಚಂದ್ರಪಾಲ್, ಸ್ಟೀವ್ ವಾ, ಮುರಳೀಧರನ್, ವಾಲ್ಶ್ ಮುಂತಾದ ದಿಗ್ಗಜರ ಸಾಲಿನಲ್ಲಿ ನಿಲ್ಲುವಂತಹ ಆಟಗಾರ. ಕಾಲೀಸ್ ಕೊನೆಯ ಪಂದ್ಯ ಆಡಿದ್ದುಯ ಭಾರತದ ವಿರುದ್ಧ ಎನ್ನುವ ಸಂಗತಿ ಭಾರತಕ್ಕೆ ಹೆಮ್ಮೆಯ ವಿಷಯವೇ ಸರಿ.

ಕುಮಾರ ಸಂಗಕ್ಕಾರ (2015)
ಶ್ರೀಲಂಕಾ ಕಂಡ ಅತ್ಯುತ್ತಮ ಆಟಗಾರ, ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ. ಅತ್ಯಂತ ಹೆಚ್ಚು ದ್ವಿಶತಕಗಳನ್ನು ಭಾರಿಸಿದ ಆಟಗಾರ ಎನ್ನುವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿರುವ ಸಂಗಕ್ಕಾರ 2015ರಲ್ಲಿ ಭಾರತದ  ವಿರುದ್ಧ ಕೊಟ್ಟ ಕೊನೆಯ ಪಂದ್ಯವನ್ನು ಆಡಿದರು. ಮೂರನೇ ಕ್ರಮಾಂಕದಲ್ಲಿ ಆಟವಾಡುತ್ತಿದ್ದ ಸಂಗಕ್ಕಾರ 38 ಶತಕಗಳನ್ನು ಭಾರಿಸಿದ್ದರು. 3 ಪಂದ್ಯಗಳ ಸರಣಿಯನ್ನು ಶ್ರೀಲಂಕಾ 2-1 ಅಂತರದಲ್ಲಿ ಸೋಲನ್ನು ಕಂಡರೂ ಸಂಗಕ್ಕಾರ ಆಟ ಅದ್ಭುತವಾಗಿತ್ತು. ಭಾರತದ  ವಿರುದ್ಧ ಅಂತಿಮ ಪಂದ್ಯವನ್ನಾಡುವ ಸಂದರ್ಭದಲ್ಲಿ  ಸಂಗಕ್ಕಾರ ಕಣ್ಣಾಲಿಗಳು ತುಂಬಿಬಂದಿದ್ದವು. ಭಾರತದ  ಆಟಗಾರರು ಈ ಎಲ್ಲ ಲೆಜೆಂಡ್‌ಗಳಿಗೂ ಗಾರ್ಡ್ ಆಫ್  ಆನರ್ ನೀಡುವ ಮೂಲಕ ಸ್ವರಣೀಯ ವಿದಾಯವನ್ನು ಹೇಳಿದ್ದು ಕೂಡ ಉಲ್ಲೇಖನೀಯ.

No comments:

Post a Comment