ಚರಿತ್ರೆಯ ಪುಟದಲ್ಲಿ ಮರೆಯಾದ ಸೋದೆಯ ವಿದ್ವಾಂಸ ದೊರೆ ಸದಾಶಿವರಾಯಯನ್ನು ಸ್ಮರಿಸುವ ಸಲುವಾಗಿ, ಸಾರಸ್ವತ ಲೋಕದಿಂದಲೂ ಕಡೆಗಣಿಸಲ್ಪಟ್ಟ ಶ್ರೇಷ್ಠ ಇತಿಹಾಸ ತಜ್ಞರಿಗೆ ಮತ್ತು ಇತಿಹಾಸ ಸಂಶೋಧಕರಿಗೆ ಇವನ ಹೆಸರಿನಲ್ಲಿಯೇ `ಸೋದೆ ಸದಾಶಿವರಾಯ ಪ್ರಶಸ್ತಿ'ಯನ್ನ ಕೊಡುವ ಕಾರ್ಯಕ್ರಮವೊಂದು ಶಿರಸಿಯಲ್ಲಿ ಆಯೋಜನೆಯಾಗಿದೆ.
ಈ ವರ್ಷದಿಂದ ಪ್ರತಿ ವರ್ಷ ಶಿರಸಿಯಲ್ಲಿ ಸೋದೆಯ ಮೂರು ಮಠಗಳಾದ ಸ್ವರ್ಣವಲ್ಲೀ ಮಠ, ಸೋದೆ ವಾದಿರಾಜಮಠ, ಸ್ವಾದಿ ಜೈನಮಠ ಹಾಗೂ ಶ್ರೀನಿಕೇತನ ವಿದ್ಯಾಲಯ ಸಹಯೋಗದಲ್ಲಿ ಜಾಗೃತವೇದಿಕೆ ಸೋಂದಾ(ರಿ) ಇವರು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿಯ ಮೂಲಕ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನವನ್ನ ಸಂಘಟಿಸಿ ಈ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತದೆ. ಸೆ.20ರಂದು ಶಿರಸಿಯಲ್ಲಿ ಡಾ. ಶ್ರೀನಿವಾಸ ರಿತ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಾದೇಶಿಕ ಇತಿಹಾಸದ ಜಾಗೃತಿ, ವಿದ್ಯಾರ್ಥಿಗಳಲ್ಲಿ ಇತಿಹಾಸದಲ್ಲಿ ಆಸಕ್ತಿ ಮೂಡಿಸುವುದು ಮತ್ತು ಮರೆಯಲ್ಲಿರುವ ಇತಿಹಾಸ ತಜ್ಞರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಇನ್ಮೂಲಕ ಸದಾಶಿವರಾಯನೂ ಚಿರಂತನವಾಗಲಿ ಎನ್ನುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಈಗಿನ ಸೋಂದಾ ಹಾಗೂ ಸುತ್ತಮುತ್ತಲ ಪ್ರದೇಶಗಳ ಅರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿ ಮೆರೆದ ಸುಂದರ ಸ್ಥಳ. ಪ್ರಕೃತಿಯ ರಮಣೀಯತೆಯ ಮಧ್ಯೆ ಕಂಗೊಳಿಸುತ್ತಿರುವ ಸೋದೆ ಪ್ರದೇಶದಲ್ಲಿ ಮಠಗಳು, ಮಂದಿರಗಳು ಕೋಟೆ ಕೊತ್ತಲೆಗಳು, ಇನ್ನಿತರ ಐತಿಹಾಸಿಕ ಕುರುಹುಗಳು ಸೋದೆ ಅರಸರ ಆಳ್ವಿಕೆಯ ಕುರುಹುಗಳೇ ಆಗಿವೆ. ಸೋದೆಯ ಅರಸರ ಸಾಮ್ರಾಜ್ಯದ ಪ್ರಮುಖ ಅರಸರುಗಳೆಂದರೆ ಇಮ್ಮಡಿ ಅರಸಪ್ಪ ನಾಯಕ, ರಾಮಚಂದ್ರ ನಾಯಕ, ಮಧುಲಿಂಗ ನಾಯಕ, ರಘುನಾಥ ನಾಯಕ, ಇಮ್ಮಡಿ ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶ, ಘಟ್ಟದ ಕೆಳಗಿನ ಪ್ರದೇಶ, ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸೊರಬ ಈ ಮುಂತಾದ ಪ್ರದೇಶಗಳಲ್ಲಿ ಅಜಮಾಸು 230ವರ್ಷ ಸಮೃದ್ಧ ಆಳ್ವಿಕೆಯನ್ನು ನೀಡಿದ್ದ ಈ ಸೋದೆ ಸಾಮ್ರಾಜ್ಯ ಮೈಸೂರಿನ ಹೈದರಾಲಿಯ ದಾಳಿಗೆ ಸಿಲುಕಿ ಕ್ರಿ.ಶ. 1763ರಲ್ಲಿ ಅವನತಿಯನ್ನ ಕಂಡಿತು.
ಇಂತಹ ಸುಂದರ ಸಾಮ್ರಾಜ್ಯದ ಪ್ರಬಲ ಅರಸನಾಗಿ ಆಳ್ವಿಕೆ ಮಾಡಿದ ಮಹಾನ್ ವ್ಯಕ್ತಿತ್ವದ ಅರಸನೇ ಸೋದೆಯ ಇಮ್ಮಡಿ ಸದಾಶಿವರಾಯ. ಚರಿತ್ರೆಯ ಪುಟಗಳಲ್ಲಿ ಸಾಮಂತ ಸಾಮ್ರಾಜ್ಯದ ಸಾಮಂತ ಅರಸರು ಸ್ವತಂತ್ರ ಅರಸರಿಗಿಂತ ಮಿಗಿಲಾದ ವ್ಯಕ್ತಿತ್ವವನ್ನು ಹೊಂದಿದ್ದು ಅವರಿಗಿಂತ ಹೆಚ್ಚು ಸಾಧನೆ ಮಾಡಿದ್ದರೂ ಇತಿಹಾಸ ಪುಟಗಳಲ್ಲಿ ಹೊಳೆಯದಿದ್ದರೂ ಕನಿಷ್ಠ ಪಕ್ಷ ಒಂದು ಸಾಲಿನ ಸ್ಥಾನವನ್ನು ಪಡೆಯದಿರುವುದು ದುರದೃಷ್ಟಕರ. ಇಂತಹ ಅನೇಕ ಸಾಮಂತ ಅರಸರು ನಮ್ಮ ನೆಲದಲ್ಲಿ ಮಿಂಚಿ ಮರೆಯಾಗಿದ್ದಾರೆ. ಅವರಲ್ಲಿ ಅಗ್ರಗಣ್ಯನೇ ಸೋದೆಯ ಸದಾಶಿವರಾಯ. ಈತ ಸೋದೆಯನ್ನ ಕ್ರಿ.ಶ. 1618ರ ವರೆಗೆ ಅರಸನಾಗಿ ಆಳ್ವಿಕೆ ಮಾಡಿದ್ದ. ತನ್ನ 26 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಕಲೆ, ಸಂಸ್ಕೃತಿ, ಧರ್ಮ, ಸಾಹಿತ್ಯ, ವಾಸ್ತು ಶಿಲ್ಪಕ್ಕೆ ಈತನ ಕೊಡಿಗೆ ಅನನ್ಯ, ಅನುಪಮವಾದುದು.
ಸದಾಶಿವರಾಯ ಮಧುಲಿಂಗ ನಾಯಕನ ಪುತ್ರ. ಪ್ರಸಿದ್ಧಳಾಗಿರುವ ಬೆಳವಡಿ ಮಲ್ಲಮ್ಮಳ ಸಹೋದರ ಬಾಲ್ಯದಿಂದಲೇ ಚುರುಕುಮತಿಯಾಗಿದ್ದ ಸದಾಶಿವರಾಯ ಚತುರ್ಭಾಷಾ ಪಂಡಿತ. ಕನ್ನಡ, ಸಂಸ್ಕೃತ, ಉರ್ದು, ಮರಾಠಿ ಭಾಷೆಯಲ್ಲಿ ಪರಿಣಿತಿಯನ್ನು ಸಾಧಿಸಿದ್ದ. ನಂತರ ಅಣ್ಣನಾದ ರಾಮಚಂದ್ರ ನಾಯಕನ ಆಳ್ವಿಕೆಯ ನಂತರ ವಂಶಪಾರಂಪರ್ಯವಾಗಿ ಸೋದೆಯ ಅರಸನಾಗಿ ಸಿಂಹಾಸನ ಅಲಂಕರಿಸಿದ.
ಆಡಳಿತದಲ್ಲಿ ನಿಷ್ಣಾತನಾಗಿದ್ದ ಈತ ಸಾಮ್ರಾಜ್ಯವನ್ನು ಘಟ್ಟದ ಕೆಳಗಿನ ಕಾರವಾರದವರೆಗೆ ವಿಸ್ತರಿಸಿ ಅಲ್ಲಿ ತನ್ನ ಹೆಸರಿನಲ್ಲಿ ಸದಾಶಿವಗಡ ಕೋಟೆಯನ್ನು ನಿರ್ಮಿಸಿದ. ಪೋರ್ಚುಗೀಸರ ಜೊತೆ ಒಡಂಬಡಿಕೆಯನ್ನ ಮಾಡಿಕೊಂಡು ವ್ಯಾಪಾರದಲ್ಲಿ ಹಿಡಿತಸಾಧಿಸಿ ರಾಜ್ಯವನ್ನ ಆರ್ಥಿಕವಾಗಿ ಬಲಪಡಿಸಿದ ಅವನ ಆಳ್ವಿಕೆಯ ಕಾಲದಲ್ಲಿ ಸೋದೆ ರಾಜ್ಯದ ಮೇಲೆ ಕಣ್ಣಿಟ್ಟಿದ್ದ ಕೆಳದಿ ಅರಸರು ಮತ್ತು ಮೊಘಲರ ದಾಳಿಯನ್ನ ತಡೆಗಟ್ಟಲು ಬಿಜಾಪುರದ ಆದಿಲ್ಷಾಹಿಗಳ ಸಹಾಯವನ್ನು ಪಡೆದಿದ್ದ. ಬಿಜಾಪುರದ ಅದಿಲ್ ಶಾಹಿಗಳ ಜೊತೆ ಉತ್ತಮ ಬಾಂಧವ್ಯವನ್ನ ಹೊಂದಿದ್ದ ಈತನ ಸಾಮ್ರಾಜ್ಯದ ಮೇಲೆ ವೈರಿಗಳು ದಾಳಿ ಮಾಡಿದಾಗ ಸಹಾಯಕ್ಕೆ ಬರುತ್ತಿದ್ದವರು ಬಿಜಾಪುರದ ಆದಿಲ್ಷಾಹಿಗಳು.
ಸದಾಶಿವರಾಯನ ಮೇಲೆ ಆದಿಲ್ಷಾಹಿಗಳ ಪ್ರಭಾವ ಹೇಗಿತ್ತೆಂದರೆ ಈತನು ಇದೇ ಇಸ್ಲಾಮಿಕ್ ಶೈಲಿಯ ಅನೇಕ ಸ್ಮಾರಕಗಳನ್ನ ಶಿರಸಿ ಮತ್ತು ಸೋದೆಯಲ್ಲಿ ನಿರ್ಮಿಸಿದ್ದ. ಮುಖ್ಯವಾಗಿ ಸೋದೆಯಲ್ಲಿರುವ ಗದ್ದಿಗೆ ಸ್ಮಾರಕ ಇದೊಂದು ತೀರಾ ಅಪರೂಪದ ಸ್ಮಾರಕ. ಇಡೀ ದಕ್ಷಿಣ ಭಾರತದಲ್ಲೇ ಇದು ಅಪರೂಪದ್ದು ಎನ್ನಿಸಿಕೊಂಡಿದೆ. ಇದು 40 ಅಂಕಣದ ಕರಿಕಲ್ಲಿನ ಬೃಹತ್ ಅರಮನೆಯಾಗಿದೆ. ಮುಂದೆ ಇವನ ಸಮಾಧಿಯನ್ನ ಇಲ್ಲೇ ಮಾಡಲಾಯಿತು. ಇಂದಿಗೂ ಸದಾಶಿವರಾಯನ ಸಮಾಧಿಯನ್ನು ಸೋದೆಯ ಗದ್ದಿಗೆ ಮನೆಯಲ್ಲಿ ಕಾಣಬಹುದು. ಇವನ ಗದ್ದಿಗೆಯಿಂದಾಗಿಯೇ ಈ ಸ್ಥಳಕ್ಕೆ ಆ ಹೆಸರು ಬಂದಿದೆ. ಸದಾಶಿವರಾಯನ ಇನ್ನೊಂದು ಪ್ರಮುಖ ಇಂಡೋ ಇಸ್ಲಾಮಿಕ್ ವಸ್ತುಶಿಲ್ಪೀಯ ಕೊಡುಗೆ ಎಂದರೆ ಶಿರಸಿಯಲ್ಲಿರುವ ' ಮುಸುಕಿನ ಬಾವಿ'. ಇದನ್ನು ತನಗೆ ಸ್ಪೂರ್ತಿ ಯಾಗಿದ್ದ ತನ್ನ ಪ್ರೇಯಸಿಯೋರ್ವಳಿಗೆ ಆತ ನಿರ್ಮಿಸಿದ್ದ, ಇದೊಂದು ಪ್ರೇಮ ಸ್ಮಾರಕವಾಗಿ ಮೌನವಾಗಿ ನಿಂತಿದೆ.
ಸೋದೆಯ ಹಳೆಯೂರು ಎಂಬಲ್ಲಿ ಶಂಕರನಾರಾಯಣ ದೇವಾಲಯ ನಿರ್ಮಿಸಿದವನೂ ಕೂಡ ಸದಾಶಿವರಾಯನೇ. ಇದರಲ್ಲಿ ಶಂಕರ ಮತ್ತು ನಾರಾಯಣರ ಎರಡು ಪ್ರತ್ಯೇಕ ಗರ್ಭಗುಡಿಗಳಿದ್ದು ಶೈವ ಮತ್ತು ವೈಷ್ಣವರ ಮಧ್ಯೆ ಮಧುರ ಬಾಂಧವ್ಯ ಸ್ಥಾಪನೆಗೆಂದೇ ಸದಾಶಿವರಾಯ ಇದನ್ನು ನಿಮರ್ಮಿಸಿದ್ದು ಇದರಿಂದ ಆತನ ಸೌಹಾರ್ದ ಭಾವನೆ ಅರ್ಥವಾಗುತ್ತದೆ. ಹಾಗೆಯೇ ಸೋದೆಯಲ್ಲಿ ಸದಾಶಿವ ದೇವಸ್ಥಾನ ಮತ್ತು ಮೊಘಲರಿಂದ ರಕ್ಷಣೆ ಪಡೆಯಲೆಂದು ಸ್ವರ್ಣವಲ್ಲೀ ಮಠದ ಸಮೀಪ ನಿರ್ಮಿಸಿರುವ ಕೋಟೆ ಇವನ ನಿರ್ಮಾಣವೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಾಲಯವನ್ನು ನಿರ್ಮಿಸಿದವನು ಇದೇ ಸದಾಶಿವರಾಯ ಎಂಬುದು ಉಲ್ಲೇಖನೀಯ ಸಂಗತಿ. ಬನವಾಸಿಯಲ್ಲಿ ಸದಾಶಿವೇಶ್ವರ ದೇವಾಲಯ ನಿರ್ಮಾಣ ಮತ್ತು ಸುಂದರವಾದ ತ್ರಿಲೋಕಮಂಟಪವೂ ಸದಾಶಿವ ರಾಯನ ಕೊಡುಗೆಯೇ ಆಗಿದೆ.
ಆತನ ಸಾಂಸ್ಕೃತಿಕ ಕಳಕಳಿ ಬಹು ವಿಶಿಷ್ಟವಾದುದು. ಬಿಜಾಪುರ ಆದಿಲ್ಷಾಹಿಗಳಿಗೆ ತೋರಿಸುವ ಸಲುವಾಗಿ ತನ್ನ ರಾಜ್ಯದ ಒಂದು ಯಕ್ಷಗಾನ ಮೇಳವನ್ನ ಬಿಜಾಪುರಕ್ಕೆ ಕರೆದುಕೊಂಡುಹೋಗಿ ಆಡಿಸಿದ್ದ ಎಂಬುದು ಯಕ್ಷಗಾನದ ಚರಿತ್ರೆಗೆ ಸಂಬಂಧಿಸಿದಂತೆಯೂ ಮಹತ್ವದ ಸಂಗತಿಯಾಗುತ್ತದೆ. ಇದು ಸದಾಶಿವರಾಯನ ಒಂದು ಮುಖವಾದರೆ ಇನ್ನೊಂದು ಮುಖ ಆತನ ಸಾಹಿತ್ಯದ ಮುಖ. ಆತ ಆಡಳಿತಾತ್ಮಕವಾಗಿ ಎಷ್ಟು ಉತ್ತಮ ಅರಸನಾಗಿದ್ದನೋ ಸಾಹಿತ್ಯಿಕವಾಗಿಯೂ ಅಷ್ಟೇ ದೊಡ್ಡ ವಿದ್ವಾಂಸನಾಗಿದ್ದ.
ಆ ಕಾಲದಲ್ಲೇ ಆತ ಹದಿನೇಳು ಕೃತಿಗಳನ್ನ ರಚಿಸಿದ್ದ, ಅದರಲ್ಲಿ ಈಗ ಒಂದು ಪ್ರಕಟಗೊಂಡಿದೆ. 'ಸದಾಶಿವ ನೀತಿ'. ಇದನ್ನ ಹೊರತುಪಡಿಸಿ ಆತನ ಇನ್ನಿತರರ ಕೃತಿಗಳೆಂದರೆ ಸ್ವರವಚನಗಳು, ಸಮಸ್ಯಾಪೂರ್ಣ ವೃತ್ತಕಂದ, ರಾಗಮಾಲಿಕೆ, ಪಂಚವಿಂಶತಿ ಲೀಲೆಯ ರಗಳೆ, ತ್ರಿವಿಧಿ, ಉಳುವೆಯ ಮಹಾತ್ಮೆ, ಜೋಗುಳ ಪದಗಳು, ನವರಸ ಜಕ್ಕಿಣಿ, ಪಂಚವಿಂಶತಿ ಲೀಲೆಯ ಮೂಲ ಪದ್ಯ, ಜಾವಡಿ, ಭಿಕ್ಷಾಟನಾ ಲೀಲೆಯ ಕಂದ, ಖಡ್ಗ ಪ್ರಬಂಧ, ಮಂಗಲಾಷ್ಟಿಕೆಗಳು, ಪ್ರಭುಲಿಂಗ ಲೀಲೆಯ ಜಾವಡಿ ಮಹಾ ಚದುರಂಗ ಲಕ್ಷಣ, ಕಲಹಕೇತಯ್ಯಗಳ ಲಕ್ಷಣ, ಕಂದಪದ್ಯ, ಮುಂತಾದವು. ಇಂತಹ ನಾಯಕನ ನೆನಪಿಗೋಸ್ಕರ ಹಾಗೂ ಇತಿಹಾಸದ ಪುಟಗಳಲ್ಲಿ ಮತ್ತೊಮ್ಮೆ ಕನ್ಣಾಡಿಸುವ ಸಲುವಾಗಿ ರಾಜ್ಯಮಟ್ಟದ ಇತಿಹಾಸ ಮೇಳಕ್ಕೆ ಶಿರಸಿ ಸಜ್ಜಾಗುತ್ತಿದೆ. ಇತಿಹಾಸ ತಜ್ಞರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
***
(ಸೆ.18ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)
(ಪೂರಕ ಮಾಹಿತಿ ನಿಡಿದವರು ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಸೋಂದಾ)
ಸದಾಶಿವರಾಯನ ಬಗೆಗೆ ಒಂದೊಳ್ಳೆ ಲೇಖನ :-)
ReplyDeleteಸೂಪರ್
ReplyDeletePls any one send me lakshmish Hegade sir number
ReplyDelete