Thursday, September 25, 2014

ಬೆಂಗಾಲಿ ಸುಂದರಿ-26

(ರೋಕಿಯಾ ಮಹಲ್, ಕಟಾರಿಯಾ, ಬಾಂಗ್ಲಾದೇಶ)
             ಸಲೀಂ ಚಾಚಾನೊಂದಿಗೆ ಮಾತಾಡದೇ ಮೌನವಾಗಿ ವಾಪಾಸಾಗುತ್ತಿದ್ದ ವಿನಯಚಂದ್ರನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲ. ಏನನ್ನೋ ಕಳೆದುಕೊಂಡ ಅನುಭವ. ಅದೆಷ್ಟೋ ವರ್ಷ ತಾನು ಅಂದುಕೊಂಡಿದ್ದ ನಂಬಿಕೆ, ಸಿದ್ಧಾಂತಗಳು ಅರೆಘಳಿಗೆಯಲ್ಲಿ ಕತ್ತರಿ ಪ್ರಯೋಗದಲ್ಲಿ ಕಳೆದುಕೊಂಡ ಅನುಭವವಾಗಿತ್ತು. ಛೇ. ತಾನು ವಿರೋಧಿಸಬಾರದಿತ್ತೇ.. ಎಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಸಲೀಂ ಚಾಚಾ ಕೂಡ ಮಾತಾಡದೇ ಸಾಗುತ್ತಿದ್ದ. ವಿನಯಚಂದ್ರನಿಗೆ ಮುಂಜಿಯ ಉರಿಗಿಂತ ಮನಸ್ಸಿನ ಉರಿ ಹೆಚ್ಚು ನೋವನ್ನು ಕೊಡುತ್ತಿತ್ತು. ಛೇ.. ತಪ್ಪು ಮಾಡಿಬಿಟ್ಟೆನಾ ಎಂದೂ ಅನ್ನಿಸದೇ ಇರಲಿಲ್ಲ.
             ಖಾದಿರ್ ಮನೆ ಮೆಟ್ಟಿಲು ತುಳಿಯುತ್ತಿದ್ದಂತೆ ಎದುರಿಗೆ ಬಂದ ಮಧುಮಿತಾ ವಿನಯ ಚಂದ್ರನನ್ನು ನೋಡಿ ಕಿಚಾಯಿಸುವಂತೆ ನಕ್ಕಳು. ತನಗೆಲ್ಲಾ ಗೊತ್ತಿದೆ ಎಂಬಂತಿತ್ತು ಆ ನಗು. ಮೊದಲೇ ಇವಳಿಗೆ ವಿಷಯ ಗೊತ್ತಿತ್ತೇ..? ಗೊತ್ತಿದ್ದೂ ಮುಚ್ಚಿಟ್ಟಳೇ ಎನ್ನುವ ಅಂಶವೂ ಕಾಡಿತು. ಗೊಂದಲಿಗನ ಮನಸ್ಸು ಎಲ್ಲವನ್ನೂ ಅನುಮಾನಿಸುತ್ತದಲ್ಲ ಹಾಗಾಗಿತ್ತು ಅವನ ಪಾಡು. ಛೇ ಇವಳೂ ಮುಚ್ಚಿಟ್ಟಳೇ ಎಂದುಕೊಂಡನಾದರೂ ಅರೆಘಳಿಗೆಯಲ್ಲಿ ತಲೆ ಕೊಡವಿ ಮುಂದಕ್ಕೆ ಹೋಗುತ್ತಿದ್ದ ವಿನಯಚಂದ್ರನ್ನು ಮತ್ತೊಮ್ಮೆ ಕಿಚಾಯಿಸಿದಳು ಮಧುಮಿತಾ. ವಿನಯಚಂದ್ರ ಮೌನದಿಂದ ಆಕೆಯನ್ನು ದಾಟಿ ಮುಂದಕ್ಕೆ ಹೋದ. ಮಧುಮಿತಾಳಿಗೂ ಪೆಚ್ಚೆನ್ನಿಸಿತು.
             ಖಾದೀರ್ ಮನೆಯಲ್ಲಿ ಇವರಿಗಾಗಿ ನೀಡಿದ್ದ ಕೋಣೆಯೊಳಕ್ಕೆ ವಿನಯಚಂದ್ರ ಹೋದ. ಹಿಂದೆಯೇ ಬಂದ ಮಧುಮಿತಾ ಕೋಣೆಯ ಬಾಗಿಲು ಹಾಕಿದಳು. ಬಂದವಳೇ ವಿನಯಚಂದ್ರನನ್ನು ತಬ್ಬಿ ಹಿಡಿದು ತಲೆಯನ್ನು ನೇವರಿಸುತ್ತ `ಏನಾಯ್ತು..' ಎಂದಳು.
             `ನಿಂಗೆ ಗೊತ್ತಿಲ್ವಾ?' ಎಂದ.
             `ನೀನು ಸಲೀಂ ಚಾಚಾನ ಜೊತೆ ಹೋದ ನಂತರ ಖಾದಿರ್ ಭಾಯ್ ಹೆಂಡತಿ ವಿಷಯ ತಿಳಿಸಿದಳು..' ಎಂದಳು ಮಧುಮಿತಾ. ವಿನಯಚಂದ್ರ ನಿರಾಳನಾದ.
              `ಆದರೆ ನಾನು ತಪ್ಪು ಮಾಡಿದೆನಾ ಎನ್ನಿಸುತ್ತಿದೆ. ಹುಟ್ಟಿದಂದಿನಿಂದ ಬಂದ ನಂಬಿಕೆಗೆ ಕತ್ತರಿ ಬಿದ್ದಿತಾ ಎಂಬಂತೆ ಆಗುತ್ತಿದೆ. ನಮ್ಮದಲ್ಲದ ನಡೆಯಲ್ಲಿ ಸಾಗಿದೆವಾ ಎಂದೂ ಎನ್ನಿಸುತ್ತಿದೆ. ಯಾಕೋ ತಳಮಳ..' ಎಂದ. ಮನಸ್ಸು ಗದ್ಗದಿತವಾಗುತ್ತಿತ್ತು.
               `ತಲೆಬಿಸಿ ಬೇಡ. ಖಂಡಿತವಾಗಿಯೂ ಸಲೀಂ ಚಾಚಾ ನಮ್ಮ ಕೆಟ್ಟದ್ದಕ್ಕೆ ಈ ಕೆಲಸ ಮಾಡೋದಿಲ್ಲ. ಆತ ಏನೋ ಮುಂದಿನ ಕಷ್ಟದ ಸಂದರ್ಭಗಳನ್ನು ಊಹಿಸಿಕೊಂಡು ಹೀಗೆ ಮಾಡಿರುತ್ತಾನೆ. ಭಯ ಬಿಟ್ಹಾಕು. ನಮ್ಮ ಒಳ್ಳೆಯ ದಿನಗಳಿಗಾಗಿ ಆತ ಹೀಗೆ ಮಾಡಿದ್ದಾನೆ ಎಂದುಕೊಳ್ಳೋಣ..' ಎಂದಳು.
               `ನನಗೆ ನಂಬಿಕೆಯೇ ಹುಟ್ಟುತ್ತಿಲ್ಲ ಮಧು.. ಸಲೀಂ ಚಾಚಾ ನನ್ನನ್ನು ಮರುಳು ಮಾಡಿ ಧರ್ಮಾಂತರ ಮಾಡುತ್ತಿದ್ದಾನಾ ಅಂತ ಅನ್ನಿಸುತ್ತಿದೆ'
               `ನೀನೆ ಹೇಳಿದೆಯಲ್ಲ ವಿನೂ.. ನಾವು ಏನನ್ನು ನಂಬುತ್ತೇವೆಯೋ ಅದೇ ನಮ್ಮ ಧೈರ್ಯ ಅಂತ.. ಆತ ಒಳ್ಳೆಯವನು ಎಂದು ನಂಬಿಕೊಂಡರೆ ಆ ರೀತಿಯಲ್ಲಿಯೇ ನಿನಗೆ ಕಾಣುತ್ತಾನೆ. ಕೆಟ್ಟವನು ಎಂದುಕೊಂಡರೆ ಆತನ ಪ್ರತಿಯೊಂದು ನಡೆಯನ್ನೂ ನಾವು ಅನುಮಾನ ಪಡುವಂತಾಗುತ್ತದೆ. ಎಲ್ಲವೂ ನಮ್ಮ ನಮ್ಮೊಳಗಿನ ನಂಬಿಕೆಗಳೇ ವಿನೂ.. ನಾನೂ ಅಷ್ಟೆ ನಿನ್ನನ್ನು ನಂಬಿ ನಿನ್ನ ಜೊತೆಗೆ ಬರಲು ಹೊರಟಿಲ್ಲವಾ? ಹುಟ್ಟಿ ಬೆಳೆದ ಈ ನಾಡನ್ನು ಬಿಟ್ಟು ಕಾಣದ, ಕೇಳದ ನಿಮ್ಮ ನಾಡಿಗೆ ಹೊರಟು ಬರಲು ತಯಾರಾಗಿದ್ದೇನೆ ಅಲ್ಲವಾ? ಇದೂ ಹೀಗೆಯೇ. ಇನ್ನೊಂದು ವಿಷಯ ಏನೂ ಅಂದ್ರೆ ನಾವೀಗ ಏನೂ ಮಾಡಲಿಕ್ಕೆ ಬರೋದಿಲ್ಲ. ಯಾಕಂದ್ರೆ ನಾವು ಈ ಬಾಂಗ್ಲಾ ದೇಶದಲ್ಲಿ ಬೆದರಿಕೆಯ ನಡುವೆ ಬದುಕಿ ಜೀವ ಉಳಿಸಿಕೊಂಡು ಪರಾರಿಯಾಗಲು ಯತ್ನಿಸುವಾಗ ಸಲೀಂ ಚಾಚಾನನ್ನು ನಂಬಲೇಬೇಕು. ಜೀವನ ಪೂರ್ತಿ ಬೇಡ. ಬಾಂಗ್ಲಾ ನಾಡಿನ ಫಾಸಲೆ ದಾಟುವವರೆಗಾದರೂ ಆತನನ್ನು ನಂಬಲೇಬೇಕು. ಇದು ಸ್ವಾರ್ಥಕ್ಕೆ ಬಳಕೆಯಾಗುತ್ತದೆ ಎಂದುಕೊಂಡರೂ ಸರಿ. ಒಂದು ವೇಳೆ ಆತ ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆ ಎಂದುಕೋ.. ಅದನ್ನೂ ನಂಬಲೇಬೇಕು..' ಎಂದಳು.
             ವಿನಯಚಂದ್ರನಿಗೆ ಮಧುಮಿತಾಳ ಮಾತು ಅಚ್ಚರಿ ಹುಟ್ಟಿಸಿತ್ತು. ಹೀಗೂ ಆಲೋಚಿಸಬಹುದಲ್ಲ ಎಂದುಕೊಂಡ. ಅಷ್ಟರಲ್ಲಿ ಸಲೀಂ ಚಾಚಾ ಕೋಣೆಯ ಕದ ತಟ್ಟಿದ. ವಿನಯಚಂದ್ರನೇ ಹೋಗಿ ಬಾಗಿಲು ತೆಗೆದ. ಸಲೀಂ ಚಾಚಾನನ್ನು ಕಂಡೊಡನೆ ಏನು ಹೇಳಬೇಕೋ ತಿಳಿಯಲಿಲ್ಲ. ಸಲೀಂ ಚಾಚಾ ಸೀದಾ ಒಳಬಂದವನೇ `ಬೇಗ ತಯಾರಾಗಿ ನಾವು ಇವತ್ತೇ ಮಿರ್ಜಾಪುರದಿಂದ ಹೊರಡಬೇಕಾಗಿ ಬರಬಹುದು..' ಎಂದ.

***

            ಮಿರ್ಜಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದಿನ್ನೂ ಆರಿರಲಿಲ್ಲ. ಆದ್ದರಿಂದ ರಾತ್ರಿ ಪ್ರಯಾಣ ಬಹಳ ಸುಲಭದ್ದಾಗಿತ್ತು. ಹಗಲಿನಲ್ಲಿ ಪ್ರಯಾಣ ಮಾಡಿದರೆ ಅಪಾಯ ಎದುರಾಗುವ ಸಾಧ್ಯತೆಗಳು ಬಹಳ ಹೆಚ್ಚಿತ್ತು. ಸಲೀಂ ಚಾಚಾನೇ ಹೊರಡುವ ತಯಾರಿಗಳನ್ನು ಚುರುಕಿನಿಂದ ಮಾಡುತ್ತಿದ್ದ. ವಿನಯಚಂದ್ರ ಮಾತಿಲ್ಲದೇ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ. ಸುನ್ನತಿನ ಉರಿಯಿನ್ನೂ ಕಡಿಮೆಯಾಗಿರಲಿಲ್ಲ. ಕತ್ತರಿ ಹಾಕಿದಲ್ಲಿ ರಕ್ತಸ್ರಾವವಾಗುತ್ತಿದೆಯೇನೋ ಎಂದು ಪದೇ ಪದೆ ನೋಡಿಕೊಂಡಿದ್ದ ವಿನಯಚಂದ್ರ. ನಿಧಾನವಾಗಿ ರಕ್ತಸ್ರಾವ ಕಡಿಮೆಯಾಗಿತ್ತು.
                ಖಾದಿರ್ ಅಂತೂ ಮಿರ್ಜಾಪುರದಲ್ಲಿ ಹೇಗೆ ಸಾಗಬೇಕು, ಯಾವ ದಾರಿಯಿಂದ ಸಾಗಿದರೆ ಉತ್ತಮ ಎನ್ನುವುದನ್ನೆಲ್ಲ ವಿವರಿಸುತ್ತಿದ್ದ. ಯಾವುದಕ್ಕೂ ಇರಲಿ ಎಂಬಂತೆ ಖಾದಿರ್ ಬಾಂಗ್ಲಾ ದೇಶದ ಮ್ಯಾಪ್ ತಂದುಕೊಟ್ಟಿದ್ದ. ಇದರಿಂದ ಪಯಣಕ್ಕೆ ಸುಲಭವಾಗಬಹುದು ಎನ್ನುವ ನಂಬಿಕೆ ಆತನದ್ದು.
           ರಾತ್ರಿ ಆವರಿಸಿದ ತಕ್ಷಣ ಸಲೀಂ ಚಾಚಾ ಮಧುಮಿತಾ ಹಾಗೂ ವಿನಯಚಂದ್ರನನ್ನು ಹೊರಡಿಸಿದ. ಖಾದಿರ್ ಕೂಡ ಕೊಂಚ ದೂರದ ವರೆಗೆ ತಾನು ಬರುತ್ತೇನೆ ಎಂದ. ಖಾದಿರ್ ಮುಂದಕ್ಕೆ ತನ್ನ ಸೈಕಲ್ ರಿಕ್ಷಾ ಮೂಲಕ ಸಾಗಿದರೆ ಸಲೀಂ ಚಾಚಾ ಆತನನ್ನು ಹಿಂಬಾಲಿಸಿದ. ಅದ್ಯಾವ್ಯಾವ ಗಲ್ಲಿಗಳಲ್ಲಿ ತಿರುಗಿದನೋ, ಯಾವ ಯಾವ ಓಣಿಗಳಲ್ಲಿ ಸಾಗಿದನೋ. ಕತ್ತಲೆ ಮಿರ್ಜಾಪುರದ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅರ್ಥವಾಗದಂತೆ ವಿನಯಚಂದ್ರ ಕುಳಿತಿದ್ದ. ಖಾದಿರ್ ಗೆ ಮಿರ್ಜಾಪುರದ ಗಲ್ಲಿಗಳು ಅಂಗೈಯೊಳಗಿನ ರೇಖೆಗಳಂತೆ ಸ್ಪಷ್ಟವಾಗಿದ್ದವೇನೋ. ಸರಸರನೆ ಸಾಗುತ್ತಿದ್ದ. ಸಲೀಂ ಚಾಚಾ ಆತನ ವೇಗಕ್ಕೆ ತಕ್ಕಂತೆ ಸೈಕಲ್ ತುಳಿಯಲು ಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಹಿಂದೆಬಿದ್ದ.
            ಸುತ್ತು ಬಳಸುವ ಮೂಲಕ ಸಾಗಿದವರಿಗೆ ಅರ್ಧಗಂಟೆಯ ನಂತರ ಮಿರ್ಜಾಪುರದ ಕೊನೆ ಸಿಕ್ಕಿತು. ಮಿರ್ಜಾಪುರದಿಂದ ಪಾಕುಲ್ಲಾವನ್ನು ತಲುಪಬೇಕಿತ್ತು. ರಾತ್ರಿಯಿಡೀ ಪಯಣ ಕೈಗೊಂಡರೆ ಪಾಕುಲ್ಲಾ ತಲುಪಬಹುದು ಎನ್ನುವುದು ಸಲೀಮ ಚಾಚಾನ ಯೋಚನೆಯಾಗಿತ್ತು. ಸದ್ದಿಲ್ಲದ ಮಿರ್ಜಾಪುರದ ಕೊನೆ ಬಂದ ತಕ್ಷಣ ಖಾದಿರ್ ತಾನು ಮರಳುತ್ತೇನೆ ಎಂದ. ಖಾದಿರ್ ಗೊಂದು ಧನ್ಯವಾದ ತಿಳಿಸಿದ ನಂತರ ಇವರ ಪ್ರಯಾಣ ಮುಂದಕ್ಕೆ ಸಾಗಿತು. ಢಾಕಾದಿಂದ ಬಂದಿದ್ದ ಹೆದ್ದಾರಿಯಲ್ಲಿ ಮತ್ತೆ ಇವರು ಮುಂದ ಮುಂದಕ್ಕೆ ಸಾಗಿದರು. ಹಿಂಸಾಚಾರದ ಕಾರಣವೋ ಏನೋ ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದವು. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಸಿಗುತ್ತಿದ್ದ ವಾಹನಗಳೂ ಕೂಡ ಯಮವೇಗದಲ್ಲಿ ಸಾಗುತ್ತಿದ್ದವು.
            `ಬೇಟಾ... ಏನಾಯ್ತು.. ಯಾಕೆ ಮೌನವಾಗಿದ್ದೀಯಾ..? ಏನೋ ಬೇಜಾರು ಆಗಿರೋ ಹಾಗಿದೆ. ಏನಾದರೂ ಸಮಸ್ಯೆಯಾ?' ಸಲೀಂ ಚಾಚಾ ವಿನಯಚಂದ್ರನನ್ನು ಮಾತಿಗೆಳೆದಿದ್ದ.
              `ಏನಿಲ್ಲ..' ವಿನಯಚಂದ್ರ ಹೇಳಿದ್ದ.
              `ಮುಖ ನೋಡಿದ ತಕ್ಷಣ ಗೊತ್ತಾಗ್ತದೆ ಬೇಟಾ.. ಸುನ್ನತ್ ಆಗಿರೋದು ಏನಾದ್ರೂ ತೊಂದರೆ ಆಯ್ತಾ? ಮತ್ತೇನಾದ್ರೂ ಸಮಸ್ಯೆ?' ಎಂದ ಸಲೀಂ ಚಾಚಾ. `ಇಲ್ಲ... ಹಾಗೇನಿಲ್ಲ..' ಉತ್ತರಿಸಿದ ವಿನಯಚಂದ್ರ.
            `ನಂಗೆ ಗೊತ್ತಾಗ್ತದೆ ಬೇಟಾ.. ಮದ್ಯಾಹ್ನ ಹೇಳಿದ್ದೆಯಲ್ಲ ನಂಬಿಕೆ ಅಂತ.. ನಿನ್ನ ಈ ಅಸೌಖ್ಯಕ್ಕೆ ಅದೂ ಕಾರಣ ಅನ್ನೋದು ನನಗೆ ಗೊತ್ತು. ಖಂಡಿತವಾಗಿಯೂ ಸುನ್ನತ್ ಮಾಡಿಸಿಕೊಂಡಿದ್ದರಿಂದ ನಿನ್ನ ನಂಬಿಕೆಗೆ ಘಾಸಿಯಾಗಿಲ್ಲ ಎಂದುಕೊಳ್ಳುತ್ತೇನೆ. ನಾನು ಮಾಡಿದ್ದು ಸರಿ ಅಂತ ನನ್ನ ವಾದವಲ್ಲ. ಆದರೂ ಒಂದು ಮಾತು ಹೇಳ್ತೀನಿ ಕೇಳು.  ವಿಜ್ಞಾನ ಸಾಕಷ್ಟು ಮುಂದುವರಿದಿದೆಯಲ್ಲಾ.. ಒಂದು ವೇಳೆ ಏನಾದ್ರೂ ಸಮಸ್ಯೆ ನಿನಗೆ ಆಗಿತ್ತು ಅಂದಿಟ್ಟುಕೋ.. ಅಂದರೆ ಮದುವೆಯ ಸಂದರ್ಭದಲ್ಲಿಯೋ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಸಮಸ್ಯೆ ಉಂಟಾದರೆ ಆಗ ವೈದ್ಯರೇ ಮುಂಜಿಗೆ ಸೂಚಿಸುತ್ತಿದ್ದರು. ನಾನು ಹೀಗೆ ಆಗಿರುವ ವಿಷಯವನ್ನು ಹಲವು ಸಾರಿ ಕೇಳಿ ತಿಳಿದಿದ್ದೇನೆ. ನಮ್ಮ ಧರ್ಮದಲ್ಲೂ ಅನೇಕರು ಮೊದ ಮೊದಲು ಮುಂಜಿಗೆ ಹೆದರಿದ್ದರು. ಆದರೆ ಅದರಿಂದ ಯಾವುದೇ ತೊಂದರೆಯಿಲ್ಲ ಎಂದಾದಾಗ ಸುಮ್ಮನಾದರು. ನಿಮ್ಮಲ್ಲೂ ಹಲವರು ಅದನ್ನು ಮಾಡಿಸಿಕೊಳ್ಳುತ್ತಾರೆ... ಆದ್ದರಿಂದ ನೀನು ಚಿಂತೆ ಮಾಡಬೇಡ ಬೇಟಾ.. ಚಿಕ್ಕ ಚಿಕ್ಕ ಮಕ್ಕಳಿಗೆ ಸುನ್ನತ್ ಮಾಡಲಾಗುತ್ತದೆ ಬೇಟಾ. ಮುಂದೆ ಸಮಸ್ಯೆ ಏನೂ ಆಗುವುದಿಲ್ಲ ಅವರಿಗೆ' ಎಂದ ಸಲೀಂ ಚಾಚಾ.
             ವಿನಯಚಂದ್ರ ಮಾತಾಡಲಿಲ್ಲ. `ನಾನು ನಿನಗೆ ಮುಂಜಿ ಮಾಡಿಸಿದ್ದರ ಹಿಂದೆ ಏನಾದರೂ ತಂತ್ರ ಇರಬಹುದೆಂದು ನೀನು ಭಾವಿಸಬಹುದು. ಆದರೆ ಖಂಡಿತ ಹಾಗಿಲ್ಲ ಬೇಟಾ.. ನಿಂಗೆ ಗೊತ್ತಿರಬಹುದು ನಾವು ಈಗ ಎಂತಹ ಅಪಾಯಕರ ಸನ್ನಿವೇಶದಲ್ಲಿ ಇದ್ದೀವಿ ಅಂತ. ಇವತ್ತು ಬೆಳಿಗ್ಗೆ ಖಾದಿರ್ ಮನೆಯ ಟಿವಿಯಲ್ಲಿ ನಿನ್ನ ಪೋಟೋ ನೋಡಿದೆ. ಅಲ್ಲಿ ನೀನು ಕಬ್ಬಡ್ಡಿ ಪಂದ್ಯಾವಳಿ ಗೆದ್ದಿದ್ದು ತೋರಿಸುತ್ತಿದ್ದರು. ಇಂತಹ ವ್ಯಕ್ತಿ ಬಾಂಗ್ಲಾ ದೇಶದಲ್ಲಿ ಕಾಣೆಯಾಗಿದ್ದಾನೆ ಎಂದೂ ಪ್ರಕಟಣೆ ಬರುತ್ತಿತ್ತು. ನೀನು ಯಾವುದಾದರೂ ಅಧಿಕಾರಿಗಳಿಗೆ ಸಿಕ್ಕಿದರೆ ಸಮಸ್ಯೆಯಿಲ್ಲ. ಬದಲಾಗಿ ಯಾರಾದರೂ ಪುಂಡರಿಗೆ, ಹಿಂಸಾಚಾರ ಮಾಡುವವರ ಕೈಗೆ ಸಿಕ್ಕುಬಿದ್ದರೆ ಏನಾಗಬಹುದು ಊಹಿಸು. ನಿನ್ನ ಚಹರೆಯೇನೋ ಮೇಲ್ನೋಟಕ್ಕೆ ಬದಲಾಗಿದೆ. ನೋಡಲಿಕ್ಕೆ ಮುಸಲ್ನಾನನಾಗಿ ಕಾಣುವಂತೆ ವೇಷ ಬದಲು ಮಾಡಲಾಗಿದೆ. ಆದರೆ ಯಾರಿಗಾದರೂ ಖಂಡಿತವಾಗಿ ಅನುಮಾನ ಬರುವುದಿಲ್ಲವಾ.. ಯಾರೋ ಒಬ್ಬನಿಗೆ ಬಂದರೂ ಸಾಕಲ್ಲವಾ? ಒತ್ತೆಯಾಳಾಗಿಯೋ, ಹೆಣವಾಗಿಯೋ ಬಲಿಯಾಗಬೇಕಾಗುತ್ತದೆ...ಈ ಸಮಸ್ಯೆಯನ್ನು ತಪ್ಪಿಸಬೇಕು. ಹಿಂದೂವಾಗಿದ್ದರೆ ಸಮಸ್ಯೆ. ಚಹರೆಯನ್ನು ಬದಲಿಸಿಕೊಂಡರೆ ಆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಕಾರಣಕ್ಕೆ ನಿನಗೆ ಅನಿವಾರ್ಯವಾಗಿ ಸುನ್ನತ್ ಮಾಡಿಸುವ ನಿರ್ಧಾರಕ್ಕೆ ಬಂದೆ. ಬಾಂಗ್ಲಾದೇಶದಲ್ಲಿ ಚಿಕ್ಕ ಚಿಕ್ಕ ಸಂಗತಿಗಳಿಗೂ ಅನುಮಾನ ಪಡುತ್ತಾರೆ ಬೇಟಾ. ಅಂತದ್ದರಲ್ಲಿ ಒಬ್ಬ ಬೆಳೆದ ಮುಸಲ್ಮಾನ, ಮದುವೆಯಾಗಿರುವವನು ಸುನ್ನತ್ ಮಾಡಿಕೊಂಡಿಲ್ಲ ಎಂದರೆ ಸುಮ್ಮನೆ ಬಿಡುತ್ತಾರೆಯೇ? ನಮ್ಮ ಧರ್ಮದಲ್ಲಿ ಸುನ್ನತ್ ಕಡ್ಡಾಯ. ನಿನಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸುನ್ನತ್ ಮಾಡಿಸಿದ್ದು' ಎಂದ ಸಲೀಂ ಚಾಚಾ
             ಆಗ ಬಾಯ್ತೆರೆದ ವಿನಯಚಂದ್ರ `ಚಾಚಾ.. ಮುಂಜಿ ಮಾಡಿಸಿಕೊಂಡ ಮಾತ್ರಕ್ಕೆ ಸಮಸ್ಯೆ ಬಗೆ ಹರಿದುಬಿಡುತ್ತದೆಯಾ..?' ಕೊಂಚ ಅಸಹನೆಯಿಂದಲೇ ಕೇಳಿದ.
           `ಖಂಡಿತ ಬಗೆ ಹರಿಯುವುದಿಲ್ಲ. ಆದರೆ ಸಮಸ್ಯೆ ಮುಕ್ಕಾಲು ಪಾಲು ಕಡಿಮೆಯಾಗುತ್ತದೆ. ಯಾಕೆ ಗೊತ್ತಾ ಯಾರಿಗಾದರೂ ಒಬ್ಬರಿಗೆ ನಿನ್ನ ಬಗ್ಗೆ ಅನುಮಾನ ಬಂತು ಅಂತಿಟ್ಟುಕೊ, ಅವರು ನಿನ್ನ ಬಳಿ ಹೆಸರು, ವಿಳಾಸ, ಇತ್ಯಾದಿ ಇತ್ಯಾದಿ ಎಲ್ಲ ಕೇಳುತ್ತಾರೆ. ನೀನು ಅದಕ್ಕೆ ಉತ್ತರ ನೀಡಿದರೂ ಆತನಲ್ಲಿ ಅನುಮಾನ ಹಾಗೇ ಉಳಿದುಬಿಡುತ್ತದೆ. ನಿನ್ನ ಹೆಸರನ್ನು ಬದಲಾಯಿಸಿದ್ದರೂ ನೀನು ಮುಸಲ್ಮಾನನೋ ಅಲ್ಲವೋ ಎನ್ನುವ ಪರೀಕ್ಷೆಗೆ ಮುಂದಾಗುತ್ತಾರೆ. ಕೆಲವು ವೇಳೆ ನೀನು ಮುಸಲ್ಮಾನನೋ ಅಲ್ಲವೋ ಅಂತ ಪರೀಕ್ಷೆಗೂ ಮುಂದಾಗಬಹುದು. ಆಗ ನಿನ್ನ ಬಟ್ಟೆ ಬಿಚ್ಚಿಸುತ್ತಾರೆ. ಮುಂಜಿ ಆಗಿದೆಯೋ ಎಂದೂ ಪರೀಕ್ಷೆ ಮಾಡುತ್ತಾರೆ. ಖಂಡಿತವಾಗಿಯೂ ಅವರಿಗೆ ಗೊತ್ತಿದೆ ನಿಮ್ಮ ಹಿಂಧೂಗಳಲ್ಲಿ ನಮ್ಮ ಹಾಗೆ ಮುಂಜಿ ಮಾಡುವುದಿಲ್ಲ ಅಂತ. ಆದರೆ ನಿನಗೆ ಈಗ ಮುಂಜಿ ಮಾಡಿದ್ದರಿಂದ ಅವರ ಅನುಮಾನವೂ ಪರಿಹಾರವಾಗುತ್ತದೆ. ನಿನ್ನ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ..' ಎಂದ.
             `ಅಂದರೆ ..' ಎಂದ ವಿನಯಚಂದ್ರ `ಅಲ್ಲಾ.. ಆ ರೀತಿ ಪರೀಕ್ಷೆ ಮಾಡುವುದು ಇನ್ನೂ ಜಾರಿಯಲ್ಲಿದೆಯಾ..?'
             `ಹುಂ.. ಹೌದು.. ಬಾಂಗ್ಲಾದಲ್ಲಿದೆ. ಕಾಶ್ಮೀರದಲ್ಲಿಯೂ ಇದೆ. ನಿಮ್ಮ ಕಾಶ್ಮೀರದಲ್ಲಿ ಇದು ಜಾಸ್ತಿ. ಯಾಕಂತೀಯಾ.. ಅಲ್ಲಿ ಭಾರತದ ಗೂಢಚಾರರು ಇರಬಹುದು ಎನ್ನುವ ಭಯವಿರುತ್ತದೆ. ಸೈನಿಕರೋ, ತಲೆಮರೆಸಿ ಬಂದವರೋ ಎಂಬ ಪರೀಕ್ಷೆ ಮಾಡುತ್ತಾರೆ. ಪಾಕಿಸ್ತಾನದಲ್ಲಿರುವ ಕಾಶ್ಮೀರ ಭಾಗದಲ್ಲಿ ಉಗ್ರರ ಶಿಬಿರಗಳಿದ್ದಲ್ಲಿ ಈ ರೀತಿಯ ಪರೀಕ್ಷೆ ಸದಾ ಇದ್ದೇ ಇದೆ. ಉಗ್ರ ತರಬೇತಿಗೆ ಬರುವ ಹೊಸ ಹೊಸ ಯುವಕರನ್ನು ಇದೇ ರೀತಿ ಪರೀಕ್ಷೆ ಮಾಡಿಯೇ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಾರಂತೆ..' ಎಂದ ಸಲೀಂ ಚಾಚಾ.. ವಿನಯಚಂದ್ರನ ಬಾಯಿಂದ ಅರಿವಿಲ್ಲದಂತೆಯೇ `ಛೇ...' ಎಂಬ ಶಬ್ದ ಹೊರಬಿದ್ದಿತ್ತು.
           ಸೈಕಲ್ಲು ಮುಂದಕ್ಕೆ ಸಾಗುತ್ತಲೇ ಇತ್ತು. ಮೇಘಾಲಯದ ಬೆಟ್ಟದ ಕಡೆಯಿಂದ ತೂರಿ ಬರುತ್ತಿದ್ದ ಗಾಳಿ ಪ್ರಯಾಣ ಮಾಡುತ್ತಿದ್ದವರಲ್ಲಿ ಚಳಿಯನ್ನು ಹುಟ್ಟುಹಾಕಿತ್ತು. ಈ ನಡುವೆ ಸೈಕಲ್ಲನ್ನು ವಿನಯಚಂದ್ರ ಚಾಲನೆ ಮಾಡತೊಡಗಿದ್ದ. ಬಾಂಗ್ಲಾ ನಾಡಿನ ಬಯಲು, ಬಯಲ ನಡುವೆ ರಸ್ತೆ.. ರಸ್ತೆಯಲ್ಲಿ ಸಾಗುತ್ತಿರುವ ಸೈಕಲ್. ನಡು ನಡುವೆ ಸಿಗುವ ಒಂದೊಂದೇ ಮನೆಗಳು. ವಿನಯಚಂದ್ರ ಬೆಳಗಿನಿಂದ ಗೊಂದಲದಲ್ಲಿದ್ದರೂ ಈಗ ನಿರಾಳನಾಗಿದ್ದ. ಸಲೀಂ ಚಾಚಾ ಖಂಡಿತ ಮೋಸ ಮಾಡಿಲ್ಲ. ತಮ್ಮ ಒಳ್ಳೆಯದಕ್ಕೇ ಮಾಡಿದ್ದಾನೆ ಎಂದು ಅನ್ನಿಸಿತ್ತು. ಧರ್ಮಾಂತರ ಮಾಡಬಹುದೇನೋ ಎನ್ನುವ ಭಯ ದೂರವಾಗಿತ್ತು. ಮನಸ್ಸು ಖುಷಿಯಿಂದ ಕುಣಿಯಲಾರಂಭಿಸಿತ್ತು.
             ಬೆಳಗಾಗುವ ವೇಳೆಗೆ ಪಾಕುಲ್ಲಾ ತಲುಪಬೇಕು ಎಂದುಕೊಂಡಿದ್ದವರು ಎಷ್ಟು ವೇಗವಾಗಿ ಬಂದಿದ್ದರೆಂದರೆ ಬೇಳಗಾಗಲೂ ಇನ್ನೂ ಎರಡು ಮೂರು ತಾಸುಗಳು ಬಾಕಿ ಇದ್ದವು. ಇದರಿಂದಾಗಿ ಪಾಕುಲ್ಲಾದಿಂದ ಮುಂದಕ್ಕೆ ಪ್ರಯಾಣ ಮಾಡುವುದೇ ಸರಿ ಎಂದುಕೊಂಡರು. ವಿನಯಚಂದ್ರ ಸಲೀಂ ಚಾಚಾನ ಬಳಿ ಚರ್ಚಿಸಿದ. ಪಾಕುಲ್ಲಾದಿಂದ ತಾಂಗೈಲ್ ತಲುಪಬೇಕಿತ್ತು. ಇದಕ್ಕೆ ಎರಡು ಮಾರ್ಗಗಳಿದ್ದವು. ದೇಲ್ದುವಾರ್ ಮೂಲಕ ಸಾಗುವುದೊಂದು ಮಾರ್ಗವಾಗಿದ್ದರೆ ಕರಾಟಿಯಾ ಮೂಲಕ ಸಾಗುವುದು ಇನ್ನೊಂದು ಮಾರ್ಗವಾಗಿತ್ತು. ಕೊನೆಗೆ ಚರ್ಚಿಸಿದ ನಂತರ ಕರಾಟಿಯಾ ಮೂಲಕ ಸಾಗುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದರು. ಬೆಳಗಾಗುವ ವೇಳೆಗೆ ಕರಾಟಿಯಾವನ್ನು ತಲುಪಲೇಬೇಕು ಎನ್ನುವ ನಿರ್ಧಾರವನ್ನೂ ಮಾಡಿಕೊಂಡರು. ವಿನಯಚಂದ್ರ ಸೈಕಲ್ ತುಳಿಯಲಾರಂಭಿಸಿದ.

(ಮುಂದುವರಿಯುತ್ತದೆ)

No comments:

Post a Comment