(ಬಾಂಗ್ಲಾದಲ್ಲಿ ಹಿಂದೂ ಹಬ್ಬದ ಆಚರಣೆ) |
ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಹಾದು ಹೋಗುತ್ತಿದ್ದವು. ಕಾಲಿಯಾಖೈರ್ ನ ಹೊರ ರಸ್ತೆಯಲ್ಲಿ ಸಾಗಿ ಮಿರ್ಜಾಪುರದ ರಸ್ತೆಯ ಕಡೆಗೆ ಹೊರಳುವ ವೇಳೆಗೆ ಆಗಲೇ ಸೂರ್ಯ ತನ್ನ ಮೊದಲ ಕಿರಣಗಳನ್ನು ಭೂಮಿಯ ಮೇಲೆ ಚೆಲ್ಲಿಯಾಗಿತ್ತು. ಕಾಲಿಯಾಖೈರ್ ದಾಟುತ್ತಿದ್ದಂತೆ ಮತ್ತೆ ವಿಸ್ತಾರವಾದ ಗದ್ದೆಯ ಬಯಲುಗಳು ಕಾಣಿಸಿದವು. ಗದ್ದೆಬಯಲಿನ ಕೊನೆಯಲ್ಲಿ ಗೆರೆ ಎಳೆದಂತೆ ನದಿಯೊಂದು ಹಾದು ಹೋಗಿತ್ತು. ಬ್ರಹ್ಮಪುತ್ರಾ ನದಿಯ ಒಡಲನ್ನು ಸೇರುವ ಈ ನದಿಯನ್ನು ನಾವು ದಾಟಿ ಬಂದಿದ್ದೇವೆ ಎಂದುಕೊಂಡ ವಿನಯಚಂದ್ರ.
ಮಾತಿನ ಹುಕಿಗೆ ಬಿದ್ದಿದ್ದ ಮಧುಮಿತಾ `ಮಳೆಗಾಲದಲ್ಲಿ ಪ್ರವಾಹ ಉಕ್ಕೇರಿದಾಗ ಬ್ರಹ್ಮಪುತ್ರಾ ನದಿ ಈ ಪ್ರದೇಶವನ್ನೆಲ್ಲ ಮುಳುಗಿಸಿಬಿಡುತ್ತದೆ..' ಎಂದಳು.
`ಹಾಗಾದರೆ ಬ್ರಹ್ಮಪುತ್ರಾ ನದಿ ಕೂಡ ಇಲ್ಲೇ ಎಲ್ಲೋ ಹತ್ತಿರದಲ್ಲಿರಬೇಕು..' ಎಂದು ಕೇಳಿದ ವಿನಯಚಂದ್ರ.
`ಊಹೂಂ. ಆ ನದಿ ಸಾಕಷ್ಟು ದೂರದಲ್ಲಿಯೇ ಇದೆ. ಆದರೆ ಮಳೆಗಾಲದಲ್ಲಿ ಅದರಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಜಾಸ್ತಿಯಾಗಿರುತ್ತದೆ. ಬಾಂಗ್ಲಾ ನಾಡು ಬಯಲು. ಈ ಗದ್ದೆ ಬಯಲಿನ ತುಂಬೆಲ್ಲ ನೀರು ತುಂಬಿ ಬಿಡುತ್ತವೆ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಯ ಉಪನದಿಗಳೂ ಉಕ್ಕೇರುವ ಕಾರಣ ನೀರು ಎಲ್ಲೆಂದರಲ್ಲಿ ನಿಲ್ಲುತ್ತವೆ. ಮಳೆಗಾಲದಲ್ಲಿ ನೋಡಬೇಕು. ಆಗ ಈ ರಸ್ತೆಯಿದೆಯಲ್ಲ ಇದರ ಅಕ್ಕಪಕ್ಕದಲ್ಲೆಲ್ಲ ನೀರು ನಿಂತಿರುತ್ತವೆ. ನಡುವೆ ಮಾತ್ರ ಕರ್ರಗೆ ಉದ್ದಾನುದ್ದ ಟಾರು ರಸ್ತೆ ಹಾದು ಹೋಗಿದ್ದು ಎಂತ ಚಂದ ಕಾಣಿಸುತ್ತೆ ಅಂತೀಯಾ..'
`ಓಹೋ.. ನೀನು ಈ ಪ್ರದೇಶದಲ್ಲಿ ಅನೇಕ ಸಾರಿ ಓಡಾಡಿದ್ದೀಯಾ ಅನ್ನು...'
`ಹುಂ.. ಬಹಳಷ್ಟು ಸಾರಿ ಓಡಾಡಿದ್ದೀನಿ. ಆದರೆ ಸೈಕಲ್ಲಿನ ಮೇಲೆ ಹೀಗೆ ಭಯದ ನೆರಳಿನಲ್ಲಿ ಓಡಾಡುತ್ತಿರುವುದು ಇದೇ ಮೊದಲು ನೋಡು. ನನ್ನದು ಸರ್ಕಾರಿ ಕೆಲಸವಾಗಿರೋ ಕಾರಣ ಒಂದೆರಡು ಸಾರಿ ಇಲ್ಲಿಗೆ ಕೆಲಸದ ನಿಮಿತ್ತ ಬಂದಿದ್ದೆ. ಮಳೆಗಾಲದಲ್ಲಿ ಪ್ರವಾಹದ ರಿಪೋರ್ಟ್ ಗೂ ಬಂದಿದ್ದೆ. ಆಗಲೇ ನನಗೆ ಅನುಭವವಾಗಿದ್ದು.' ಎಂದಳು ಮಧುಮಿತಾ.
`ನಾನೊಂದು ಮಾತು ಕೇಳಲಾ..?' ಎಂದ ವಿನಯಚಂದ್ರ
`ಹುಂ..ಕೇಳು.. ಅದಕ್ಕೆಂತ ಸಂಕೋಚ? ನೀನು ಒಂದು ಬಿಟ್ಟು ಹತ್ತು ಮಾತು ಕೇಳು.. ನಾನು ಉತ್ತರಿಸುತ್ತೇನೆ..'
`ನಿಂದು ಸರ್ಕಾರಿ ನೌಕರಿ ಅಂತೀಯಾ.. ಆದರೆ ಇಂತಹ ನೌಕರಿಯಲ್ಲಿದ್ದೂ ನಾವು ಹೀಗೆ ಕದ್ದು ಓಡಿ ಬರಬೇಕಾ? ಸರ್ಕಾರದ ಮಟ್ಟದಲ್ಲಿ ಪರಿಚಯದವರನ್ನು ಹಿಡಿದು ಹೇಗಾದರೂ ಮಾಡಿ ನಾವು ಭಾರತ ತಲುಪಬಹುದಿತ್ತಲ್ಲ.. ಈ ರಿಸ್ಕು, ಭಯ, ಭೀತಿ, ದುಗುಡ ಇವೆಲ್ಲ ಬೇಕಿತ್ತಾ?' ಎಂದ ವಿನಯಚಂದ್ರ.
`ಹುಂ.. ನೀನು ಹೇಳೋದು ಸರಿ. ಆದರೆ ಬಾಂಗ್ಲಾದಲ್ಲಿ ಸರ್ಕಾರಿ ಕೆಲಸ ಅಂದರೆ ಅಷ್ಟಕ್ಕಷ್ಟೆ. ನಾನು ನನಗೆ ಪರಿಚಯ ಇರೋ ಯಾರನ್ನೋ ಹಿಡಿದು ಭಾರತಕ್ಕೆ ಹೋಗಲು ತಯಾರಿ ನಡೆಸಿದೆ ಅಂತ ಇಟ್ಟುಕೊಂಡರೆ ಅವರಿಗೆ ಆಗದವರ ಮೂಲಕ ಹಿಂಸಾವಾದಿಗಳಿಗೆ ಮಾಹಿತಿ ಸಿಕ್ಕು ಏನೇನೋ ಮಾಡಿಬಿಡುತ್ತಾರೆ. ಅಲ್ಲದೇ ಇಲ್ಲಿ ಬಹುತೇಕ ಪ್ರತಿಯೊಬ್ಬ ಸರ್ಕಾರಿ ನೌಕರನೂ ಒಂದೊಂದು ರಾಷ್ಟ್ರೀಯ ಪಕ್ಷಕ್ಕೆ ನಿಷ್ಟನಾಗಿರಬೇಕು. ಅಂದರೆ ಆತ ತಾನು ಯಾರ ಆಡಳಿತದ ಅವಧಿಯಲ್ಲಿ ನೌಕರಿ ಮಾಡಲು ಆರಂಭಿಸುತ್ತಿದ್ದಾನೋ ಆ ಪಕ್ಷಕ್ಕೆ ಆತ ನಿಷ್ಟನಾಗಿರುತ್ತಾನೆ. ಬಿಡು ಹಾಗೆ ನಿಷ್ಟನಾಗಿರುವುದು ಆತನಿಗೆ ಅನಿವಾರ್ಯವೂ ಆಗಿರುತ್ತದೆ. ಇಂತಹ ವ್ಯಕ್ತಿಗಳು ತಮಗಾಗದವರ ಅಂದರೆ ತಮ್ಮ ಪಕ್ಷಕ್ಕೆ ನಿಷ್ಟನಾಗಿರದ ಅಧಿಕಾರಿಗಳ ತಪ್ಪು ಹುಡುಕುವಲ್ಲಿ, ಅವರ ವಿರುದ್ಧ ಕೆಲಸ ಮಾಡುವಲ್ಲಿ ಉತ್ಸುಕರಾಗಿರುತ್ತಾರೆ. ನಾನು ಯಾವುದೇ ಪಕ್ಷಕ್ಕೆ ನಿಷ್ಟೆ ತೋರಿಸಿಲ್ಲ. ಅದೂ ಕೂಡ ತಪ್ಪಾಗಿದೆ. ನಾನು ಯಾವುದೇ ಪಕ್ಷಕ್ಕೆ ಸೇರಿರದ ಕಾರಣ ಎಲ್ಲ ರಾಷ್ಟ್ರೀಯ ಪಕ್ಷಗಳೂ ನನ್ನ ವಿರುದ್ಧ ಸೇಡು ತೀರಿಕೊಳ್ಳಲು ಕಾಯುತ್ತಿರುವುದು ಸಾಮಾನ್ಯ. ನಾನು ಹಾಗೂ ನೀನು ಭಾರತಕ್ಕೆ ಹೊರಡಲು ತಯಾರಿ ನಡೆಸುತ್ತಿರುವುದು, ವಿಮಾನಯಾನ ಮಾಡಲು ಯತ್ನಿಸುವುದನ್ನು ತಡೆಯಲು ಎಂತಹ ಕಾರ್ಯಕ್ಕೂ ಅವರು ಮುಂದಾಗುತ್ತಾರೆ. ಹತ್ಯೆಯನ್ನೂ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಬಹುಶಃ ನಾವೀಗ ಕದ್ದು ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನ ನಡೆಸುವುದು ಆ ವಿಧಾನಕ್ಕಿಂತ ಸುಲಭವನ್ನಿಸುತ್ತದೆ. ಅದಕ್ಕೇ ಸಲೀಂ ಚಾಚಾ ಈ ವಿಧಾನವನ್ನು ಹೇಳಿದಾಗ ನಾನು ಒಪ್ಪಿಕೊಂಡಿದ್ದು.' ಎಂದಳು ಮಧುಮಿತಾ.
`ಹುಂ..' ಎಂದು ತಲೆಕೊಡವಿದ ವಿನಯಚಂದ್ರ `ಹಾಳಾದ ರಾಜಕಾರಣ.. ಏನೆಲ್ಲಾ ಮಾಡಿಬಿಡುತ್ತದೆ.. ಶಿಟ್..' ಎಂದ.
`ವಿನೂ ಒಂದು ಮಾತು ಹೇಳಲಾ. ನಾವು ವಿಮಾನಯಾನ ಮಾಡಿ ಭಾರತಕ್ಕೆ ಹೋಗಿದ್ದರೆ ಒಮದು ತಾಸು ಅಥವಾ ಎರಡು-ಮೂರು ತಾಸುಗಳಲ್ಲಿ ಭಾರತವನ್ನು ತಲುಪಿಬಿಡುತ್ತಿದ್ದೆವು. ಆದರೆ ನಾವು ಈ ರೀತಿಯಲ್ಲಿ ರಸ್ತೆಯ ಮೂಲಕ ಭಾರತವನ್ನು ತಲುಪುವುದು ಮಾತ್ರ ಬಹಳ ಖುಷಿ ಕೊಡುವ ವಿಚಾರ ನೋಡು. ಬದುಕಿನಲ್ಲಿ ಅದೆಷ್ಟೋ ಕಷ್ಟಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಇದು ಕಷ್ಟಕರವೇ ಹೌದು. ಈ ಕಷ್ಟವನ್ನೂ ಒಮ್ಮೆ ನಾವು ಅನುಭವಿಸಿಬಿಡೋಣ. ಸವಾಲುಗಳಿಗೆ ಒಡ್ಡಿಕೊಳ್ಳುವುದು ಅಂದರೆ ನನಗೆ ಬಹಳ ಖುಷಿ ಕೊಡುವ ವಿಚಾರ. ನಿನಗೂ ಕೂಡ ಸವಾಲುಗಳಿಗೆ ಎದುರು ನಿಲ್ಲುವುದು ಅಂದರೆ ಇಷ್ಟ ಅಂತ ಹೇಳಿದ್ದೆಯಲ್ಲ. ಮುಂದೇನಾಗುತ್ತದೆಯೋ ಅಂತ ನೋಡಿಬಿಡೋಣ.. ಅಲ್ಲವಾ' ಎಂದಳು ಮಧುಮಿತಾ.
`ಹೌದು ಮಧು. ನೀ ಹೇಳುವುದು ನಿಜ. ಬಾಂಗ್ಲಾ ನಾಡಿನಲ್ಲಿ ಹೀಗೆ ಪ್ರಯಾಣ ಮಾಡಿ ಗಡಿಯೊಳಗೆ ನುಸುಳುವುದು ಒಂಥರಾ ಮಜಾ ಇರುತ್ತದೆ. ಅದರಲ್ಲಿಯೂ ಭಾರತದ ಗಡಿಯನ್ನು ನುಸುಳುವುದಿದೆಯಲ್ಲ. ನಾನು ಕನಸು, ಮನಸಿನಲ್ಲಿಯೂ ಇಂತಹದ್ದೊಂದು ಜರುಗಬಹುದು ಎಂದು ಆಲೋಚನೆ ಮಾಡಿರಲಿಲ್ಲ ನೋಡು..' ಎಂದ ವಿನಯಚಂದ್ರ. ಮುಂದುವರಿದವನೇ ಬಾಂಗ್ಲಾದೇಶದ ಹಿಂಸಾಚಾರ, ಅಲ್ಲಿಯ ರಾಜಕಾರಣ, ರಾಜಕೀಯ ಪಕ್ಷಗಳ ನಡೆ ಇವುಗಳ ಬಗ್ಗೆ ಮಾತನಾಡಿ ಹಿಡಿಶಾಪ ಹಾಕಿದ
ಮಧುಮಿತಾ ಮಾತನ್ನು ಕೇಳಿಸಿಕೊಂಡು ನುಡಿದಳು. `ಇಷ್ಟೇ ಅಲ್ಲ ವಿನೂ. ನಮ್ಮ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಮಸಾಚಾರಕ್ಕೆಲ್ಲ ರಾಜಕಾರಣವೇ ಕಾರಣ. ಮುಖ್ಯವಾಗಿ ಇರುವುದು ಎರಡು ಪಕ್ಷ. ಇವರನ್ನು ಬೆಂಬಲಿಸಿದರೆ ಅವರು, ಅವರನ್ನು ಬೆಂಬಲಿಸಿದರೆ ಇವರು ನಮ್ಮ ಮೇಲೆ ಹಿಂಸಾಚಾರ ಮಾಡುತ್ತಾರೆ. ಹೋಗಲಿ ಮೂರನೇ ಪಕ್ಷವಾದರೂ ಇದೆಯಾ? ಅದನ್ನೂ ಬೆಳೆಯಲು ಕೊಡುವುದಿಲ್ಲ ಈ ಎರಡು ಪಕ್ಷಗಳು. ಹಿಂದೂಗಳೇ ಪಕ್ಷವನ್ನು ಕಟ್ಟಲು ಹಲವು ಸಾರಿ ಯೋಚನೆ ಮಾಡಿದ್ದರಂತೆ. ಆದರೆ ಅದು ಸಾಧ್ಯವೇ ಆಗಿಲ್ಲ. ಬಹುಶಃ ಕುಟಿಲ ರಾಜಕಾರಣದಲ್ಲಿ ಸಿಲುಕಿ ಹಿಂದೂಗಳ ಪಕ್ಷ ಕಟ್ಟುವ ಕನಸು ಕನಸಾಗಿಯೇ ಉಳಿದಿರಬೇಕು. ' ಎಂದಳು ಮಧುಮಿತಾ.
`ಛೇ.. ಇಷ್ಟು ಪುಟ್ಟ ದೇಶವನ್ನು ಹೇಗೆಲ್ಲ ತಯಾರು ಮಾಡಬಹುದಿತ್ತು. ಆದರೆ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಡೆಸುವ ದಾಳಕ್ಕೆ ಇಲ್ಲಿನ ಜನರು ಬಲಿಯಾಗುತ್ತಿದ್ದಾರಲ್ಲ.. ಇಂತಹ ಕಾರಣಗಳಿಗಾಗಿ ಈ ದೇಶ ಪ್ರತ್ಯೇಕವಾಗಬೇಕಿತ್ತೇ? ಮೊದಲು ಭಾರತದಿಂದ ಆಮೇಲೆ ಪಾಕಿಸ್ತಾನದಿಂದ.. ಏನೋ ಆಗಬೇಕು ಎಂದುಕೊಂಡವರು ಮತ್ತೇನೋ ಆಗಿಬಿಟ್ಟರಲ್ಲ. ಗಂಗೆಯ ಮುಖಜ ಭೂಮಿ, ಸುಂದರಬನ್ಸ್, ಚಿತ್ತಗಾಂಗ್ ಬೆಟ್ಟಗಳು, ಮೇಘಾಲಯ, ತುರಾ ಬೆಟ್ಟಗಳ ಒಂದು ಪಾರ್ಶ್ವ, ಅಸಂಖ್ಯಾತ ಹಿಂದೂ ದೇಗುಲಗಳು, ಢಾಕಾ ಎಂಬ ಸುಂದರ ನಗರಿ, ಭತ್ತವನ್ನು ಬೆಳೆಯುವ ಲಕ್ಷಗಟ್ಟಲೆ ಎಕರೆ ಪ್ರದೇಶಗಳು.. ಓಹ್.. ಸ್ವರ್ಗವಾಗಲು ಇನ್ನೆಂತದ್ದು ಬೇಕಿತ್ತು. ತಾನೇ ತನ್ನನ್ನು ನರಕಕ್ಕೆ ದೂಡಿಕೊಳ್ಳುವುದು ಎಂದರೆ ಇದೇ ಏನೋ..' ಎಂದು ತನ್ನೊಳಗಿನ ಅಸಮಧಾನ ತೋಡಿಕೊಂಡ ವಿನಯಚಂದ್ರ.
`ಹುಂ. ಖಂಡಿತ ಹೌದು. ಈ ದೇಶದಲ್ಲಿ ಸಮಸ್ಯೆಗಳು ಖಂಡಿತ ಕೊನೆಗೊಳ್ಳುವುದಿಲ್ಲ ನೋಡು. ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಯಾವಾಗ ಬ್ರಿಟೀಷರು ಒಡೆದರೋ ಆಗಲೇ ಶುರುವಾಯಿತು ನರಕ. ಮೊಟ್ಟಮೊದಲು ಬ್ರಿಟೀಷರ ವಿರುದ್ಧ ಸೋತ ಸಿರಾಜುದ್ದೌಲ, ಆತನಿಗೆ ಮೋಸ ಮಾಡಿದ ಮಿರ್ ಸಾಧಿಕ್ ಎಲ್ಲ ಆ ನಂತರ ನಡೆದ ಸಾಲು ಸಾಲು ಯುದ್ಧಗಳು, ನಡುವೆ ಮಿಚಿಂನಂತೆ ಬಂದು ಕ್ಷಣಕಾಲ ಸ್ವಾತಂತ್ರ್ಯವನ್ನು ಕೊಡಿಸಿದ ಸೇನಾನಿ ನೇತಾಜಿ.. ಈ ಎಲ್ಲವನ್ನೂ ಕಂಡಿದ್ದು ಇದೇ ನಾಡು. ಭಾರತದಿಂದ ಪ್ರತ್ಯೇಕವಾದ ನಂತರವಾದರೂ ಬಾಂಗ್ಲಾ ನಾಡು ಆರಾಮಾಗಿದೆಯಾ ಅದೂ ಇಲ್ಲ. ಪಾಕಿಸ್ತಾನದ ಸತ್ಯಾಚಾರಕ್ಕೆ ಸತತ 2 ದಶಕ ನಲುಗಿದೆ. ಭಾರತದ ಸಹಾಯದಿಂದಲೇ ಸ್ವತಂತ್ರವಾಗಿದ್ದರೂ ಕೂಡ ಭಾರತದ ವಿರುದ್ಧವೇ ಭಯೋತ್ಪಾದನೆಯಂತಹ ಕೆಲಸಗಳನ್ನು ಈ ದೇಶ ನಡೆಸುತ್ತಿದೆ. ಬಾಂಗ್ಲಾ ನಾಡಿನ ಸ್ವಾತಂತ್ರ್ಯಕ್ಕಾಗಿ ಶೇಕ್ ಮುಜೀಬುರ್ ರೆಹಮಾನ್ ಹೋರಾಡಿದರು. ಗಾಂಧೀಜಿಯವರಂತೆ ಇವರನ್ನೂ ಹತ್ಯೆ ಮಾಡಲಾಯಿತು. ಇದೀಗ ಅವರ ಮಗಳು ಇಲ್ಲಿನ ರಾಜಕಾರಣಿ. ವಿಚಿತ್ರವೆಂದರೆ ಅವರ ಆಡಳಿತವಾಗಿದ್ದರೂ ಇಲ್ಲಿ ಹಿಂಸಾಚಾರ ನಿಂತಿಲ್ಲ. ಬಹುಶಃ ನಿಲ್ಲುವುದೂ ಇಲ್ಲ. ಮತೋನ್ಮಾದ, ರಾಜಕಾರಣ, ಯುದ್ಧೋತ್ಸಾಹ ಈ ನಾಡನ್ನು ಹಾಳುಮಾಡಿದೆ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಟ 5000ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಬಲಾತ್ಕಾರ ನಡೆಯುತ್ತದೆ. ಆದರೆ ಪೊಲೀಸ್ ಸ್ಟೇಷನ್ನುಗಳಲ್ಲಿ ಇವುಗಳ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಪ್ರಕರಣ ದಾಖಲು ಮಾಡಲು ಹೋದರೆ ಅವರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಇಲ್ಲವೇ ಹೆದರಿಸಿ, ಬೆದರಿಸಿ ಸುಮ್ಮನಿರಿಸಲಾಗುತ್ತದೆ. ಇದು ನಾನು ಅತ್ಯಂತ ಹತ್ತಿರದಿಂದ ನೋಡಿದ ಅನುಭವವೂ ಹೌದು.' ಎಂದು ಮಧುಮಿತಾ ಹೇಳಿದಳು.
`ಮಧು.. ಈ ದೇಶದಲ್ಲಿ ಎಷ್ಟು ಹಿಂದುಗಳಿರಬಹುದು? ಮೊದಲೆಷ್ಟಿದ್ದರು? ಈಗ ಎಷ್ಟಾಗಿದ್ದಾರೆ? ಅವರ್ಯಾಕೆ ಬಾಂಗ್ಲಾ ಹಿಂಸಾಚಾರದ ವಿರುದ್ಧ ತಿರುಗಿಬೀಳಬಾರದು? ಶಸ್ತ್ರದ ಮೂಲಕವಾದರೂ ಸರಿ ಯಾಕೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಾರದು? ಹಿಂಸೆಗೆ ಹಿಂಸೆಯೇ ಉತ್ತರವಲ್ಲವಾ? ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂದು ಶಿವಾಜಿಯಾದಿಯಾಗಿ ಅನೇಕರು ಹೇಳಿಲ್ಲವಾ? ಯಾಕೆ ಬಾಂಗ್ಲಾ ದೇಶದ ಹಿಂದೂಗಳು ಹಾಗೆ ಮಾಡುತ್ತಿಲ್ಲ? ಯಾಕೆ ನೋವನ್ನು ಉಂಡು ಸುಮ್ಮನೆ ಉಳಿದಿದ್ದಾರೆ? ಯಾಕೆ ಎಲ್ಲರೂ ಹಿಂದುಗಳನ್ನು ಕೊಂದರೂ ಏನು ಮಾಡದೇ ಸುಮ್ಮನೆ ಉಳಿದುಹೋಗಿದ್ದಾರೆ?' ಎಂದು ಅಸಹನೆಯಿಂದ ಕೇಳಿದ ವಿನಯಚಂದ್ರ.
(ಹಿಂಸಾಚಾರಕ್ಕೆ ಮನೆ ಕಳೆದುಕೊಂಡ ಹಿಂದೂ ಯುವತಿ ರೋಧಿಸುತ್ತಿರುವುದು) |
`ಬಾಂಗ್ಲಾ ದೇಶದ ಕಥೆ ಹಾಗಿರಲಿ. ನಿಮ್ಮದೇ ದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆಯಲ್ಲ ವಿನೂ. ಅದಕ್ಕೇ ನಿಮ್ಮ ದೇಶ ಮಾತನಾಡುತ್ತಿಲ್ಲ. ಇನ್ನು ನಮ್ಮ ದೇಶದಲ್ಲಿ ನಡೆಯುವ ಕಗ್ಗೊಲೆಗಳ ಬಗ್ಗೆ ಮಾತನಾಡುತ್ತದೆಯಾ? ಕೋಮುಗಲಭೆ ಸಂಭವಿಸಿದಾಗೆಲ್ಲ ಹಿಂದೂಗಳದ್ದೇ ತಪ್ಪು ಎಂದು ಹೇಳಿ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತದೆ. ಆಗ ನಿಮ್ಮದೇ ಭಾರತ ಸರ್ಕಾರ ಏನಾದರೂ ಮಾಡಿದೆಯಾ? ನಾವೆಲ್ಲ ಗೋವನ್ನು ಪವಿತ್ರ ಪ್ರಾಣಿಯಾಗಿ ಪೂಜೆ ಮಾಡುತ್ತೇವೆ. ದೇವರು ಎನ್ನುತ್ತೇವೆ. ಅಂತಹ ಗೋವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಕೊಲ್ಲಲಾಗುತ್ತದೆ. ಅದನ್ನು ತಡೆಗಟ್ಟಲಾಗಿದೆಯಾ ಹೇಳು. ಹೀಗೆಲ್ಲಾ ಇದ್ದಾಗ ಪಕ್ಕದ ದೇಶದಲ್ಲಿ ತಮ್ಮದೇ ಬಾಂಧವರು ಸಾಯುತ್ತಿದ್ದರೂ ಅವರಿಗೆ ಹೇಗೆ ಸಹಾಯ ಮಾಡುತ್ತಾರೆ? ಶಸ್ತ್ರಕ್ಕೆ ಶಸ್ತ್ರವೇ ಉತ್ತರವಾಗುತ್ತದೆ ನಿಜ. ಆದರೆ ಬಾಂಗ್ಲಾದ ಬಡ ಹಿಂದೂಗಳಿಗೆ ಶಸ್ತ್ರವನ್ನು ನೀಡುವವರು ಯಾರು? ಅದ್ಯಾರೋ ಕಣ್ಣಿಗೆ ಕಾಣದ ನಕ್ಸಲರಿಗೆ ಪುರೂಲಿಯಾದಂತಹ ಪ್ರದೇಶಗಳಲ್ಲಿ ಅನಾಮಧೇಯ ವಿಮಾನಗಳೂ ಕೂಡ ಶಸ್ತ್ರಾಸ್ತ್ರವನ್ನು ಎಸೆದು ಹೋಗುತ್ತವೆ. ಬಾಂಗ್ಲಾದಲ್ಲಿ ಇಂತದ್ದನ್ನೆಲ್ಲ ಕನಸು ಕಾಣಲು ಸಾಧ್ಯವಿಲ್ಲ ಬಿಡು. ಬಾಂಗ್ಲಾದ ಹಿಂದೂಗಳು ಮೊದಲು ಹೊಟ್ಟೆಗೆ ಸಿಗಲಿ ಎಂದು ಬಯಸುತ್ತಾರೆ. ಆ ನಂತರ ಅವರು ಶಸ್ತ್ರದ ಬಗ್ಗೆ ಆಲೋಚನೆ. ನೀನೇನಾದರೂ ಭಾರತಕ್ಕೆ ಹೋಗಿ, ಬಂದೂಕು ಅಥವಾ ಶಸ್ತ್ರಾಸ್ತ್ರ ತಯಾರು ಮಾಡುವ ಕಾರ್ಖಾನೆ ತೆಗೆದರೆ ಹೇಳು. ಬಾಂಗ್ಲಾದಲ್ಲಿ ಯಾವ ಯಾವ ಪ್ರದೇಶಕ್ಕೆ ಎಷ್ಟು ಪ್ರಮಾಣದಲ್ಲಿ ಹಿಂದೂಗಳಿಗಾಗಿ ಶಸ್ತ್ರವನ್ನು ಒದಗಿಸಬೇಕು ಎಂಬುದನ್ನು ನಾನು ಹೇಳುತ್ತೇನೆ..' ಎಂದು ಹೇಳಿದ ಮಧುಮಿತಾ ಕಣ್ಣುಮಿಟುಕಿಸಿದಳು.
ವಿನಯಚಂದ್ರ ಒಮ್ಮೆ ಅಸಹನೆಯಿಂದ ಹೊಯ್ದಾಡಿದ. ನಂತರ ಮಾತನಾಡಿದ ಆತ `ಬಾಂಗ್ಲಾದಲ್ಲಿ ಇರುವ ಪಕ್ಷಗಳಲ್ಲಿ ಹಿಂದೂ ನಾಯಕರಿಲ್ಲವೇ? ಅವರೂ ಮಾತನಾಡುತ್ತಿಲ್ಲವೇ?' ಎಂದು ಕೇಳಿದ.
`ಇದ್ದಾರೆ. ಹಲವರು ಪ್ರಮುಖ ಮಂತ್ರಿ ಸ್ಥಾನವನ್ನೂ ಪಡೆದಿದ್ದರು. ಆದರೆ ಅವರ್ಯಾರೂ ಹಿಂದೂಗಳ ಪರಿಸ್ಥಿತಿ ಬಗ್ಗೆ ಆಲೋಚಿಸಲೂ ಇಲ್ಲ. ಅವರ ಸಮಸ್ಯೆಗಳ ಬಗ್ಗೆ ಹೋರಾಟವನ್ನೂ ನಡೆಸಿಲ್ಲ. ಛೇ..' ಎಂದಳು ಮಧುಮಿತಾ.
ವಿನಯಚಂದ್ರನ ಮನಸ್ಸಿನಲ್ಲಿ ನೂರಾರು ಹೊಯ್ದಾಟಗಳು ಶುರುವಾದಂತಿತ್ತು. ಅದೇ ಗುಂಗಿನಲ್ಲಿ ಸೈಕಲ್ ತುಳಿಯುತ್ತಿದ್ದ. ಸಲೀಂ ಚಾಚಾನಿಗೆ ನಿದ್ದೆ ಬಂದಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಮಾತಾಡದೇ ಮಲಗಿದ್ದರು. ಕೆಲವೇ ಸಮಯದ ನಂತರ ಮಿರ್ಜಾಪುರ ಹತ್ತಿರಕ್ಕೆ ಬಂದಿತು. ಮಿರ್ಕಾಪುರದ ಫಾಸಲೆಗೆ ಬಂದ ತಕ್ಷಣ ಮಧುಮಿತಾ ಸಲೀಂ ಚಾಚಾನನ್ನು ಎಚ್ಚರಿಸಿದಳು. ಆತ ಯಾವು ಯಾವುದೋ ದಾರಿಯಲ್ಲಿ ಸೈಕಲ್ ತುಳಿಯುವಂತೆ ಹೇಳಿದ. ಸಲೀಂ ಚಾಚಾನ ಅಣತಿಯಂತೆ ವಿನಯಚಂದ್ರ ಮಿರ್ಜಾಪುರದ ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ತುಳಿಯಲಾರಂಭಿಸಿದ. ಸಲೀಮ ಚಾಚಾ ಅದ್ಯಾವಾಗ ಮಿರ್ಜಾಪುರವನ್ನು ನೋಡಿದ್ದನೋ ಎಷ್ಟು ಸರಾಗವಾಗಿ ರಸ್ತೆಯನ್ನು ಹೇಳುತ್ತಿದ್ದನೆಂದರೆ ವಿನಯಚಂದ್ರ ಅಚ್ಚರಿಗೊಂಡಿದ್ದ. ಕೊನೆಗೆ ಅದೊಂದು ಮನೆಯ ಬಳಿ ಸೈಕಲ್ ನಿಲ್ಲಿಸುವಂತೆ ಹೇಳಿದ. ವಿನಯಚಂದ್ರ ಸೈಕಲ್ ನಿಲ್ಲಿಸಿದ. ಸಲೀಂ ಚಾಚಾ ಇಳಿದು ಮನೆಯೊಂದರ ಕದ ತಟ್ಟಿದ. ವಿನಯಚಂದ್ರ ಹಾಗೂ ಮಧುಮಿತಾ ವಿಸ್ಮಯದಿಂದ ನೋಡುತ್ತಿದ್ದರು.
(ಮುಂದುವರಿಯುತ್ತದೆ.)
No comments:
Post a Comment