Saturday, September 14, 2013

ದ್ಯುಮಣಿ ಧಾಮ




ನೀರಿದ್ದರೆ ನಾಡು ಎನ್ನುವ ಮಾತನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಜೀವನದುದ್ದಕ್ಕೂ ಪರಿಸರ ಮಾತೆಯನ್ನು ಪೂಜಿಸಿದವರು ಕಲ್ಕಟ್ಟೆಯ ದ್ಯುಮಣಿ ಶಾಸ್ತ್ರಿ ದಂಪತಿ. ನೀರಿಲ್ಲದೆ ಬದುಕಿಲ್ಲ ಎನ್ನುವುದನ್ನು ಸ್ವತಃ ಅನುಭವದ ಮೂಲಕ ತಿಳಿದುಕೊಂಡು ಅದಕ್ಕಾಗಿ ಜೀವನ ಸವೆಸಿದರು. ನೀರಿಗೆ ಪೂರಕ ಕಾಡು ಎನ್ನುವುದನ್ನರಿತು ಕಾಡು ಬೆಳೆಸಿದರು.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಗ್ರಾಮದವರಾಗಿದ್ದ ದ್ಯುಮಣಿ ಶಾಸ್ತ್ರಿ 30 ವರ್ಷಗಳ ಹಿಂದೆ ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಕಲ್ಕಟ್ಟೆ ಎಂಬ ಊರಿನಲ್ಲಿದ್ದ ಜಮೀನಿನ ಉಸ್ತುವಾರಿ ವಹಿಸಿಕೊಂಡರು. ಜಮೀನಿಗೆ ಹೊಂದಿಕೊಂಡಂತೆ ಇದ್ದ ಬೆಟ್ಟ ಪ್ರದೇಶದಲ್ಲಿ ಕಾಡು ಗಿಡ ಮರಗಳಿರಲಿಲ್ಲ. ಬೇಸಿಗೆಯಲ್ಲಿ ಜಮೀನಿಗೆ ನೀರಿನ ಕೊರತೆ ಉಂಟಾಗುತ್ತಿತ್ತು. ಪ್ರಯೋಗಾರ್ಥವಾಗಿ ಕಾಡನ್ನು ಬೆಳೆಸಿದರೆ ನೀರಿಗೆ ಬರ ಬರಲಾರದು ಎನ್ನುವ ಸಾಮಾನ್ಯ ಜ್ಞಾನ ಬಳಸಿ ಕಾಡು ಬೆಳೆಸಲು ಮುಂದಾದರು. ಅಡಕೆ ತೋಟಕ್ಕಾಗಿ ಬಳಸಲ್ಪಡುವ ಹಸಿರೆಲೆ, ಒಣ ಎಲೆಗಳನ್ನು ತರುವುದನ್ನು ನಿಲ್ಲಿಸಿದರು. ಮರಗಿಡಗಳಿಗೆ ರಕ್ಷಣೆ ಒದಗಿಸಿದರು. ಎರಡು ಮೂರು ವರ್ಷಗಳಲ್ಲಿ ಅದರ ಪರಿಣಾಮ ಗೋಚರಿಸತೊಡಗಿತು. ಗಿಡ- ಮರಗಳ ಉದುರಿದ ಎಲೆಗಳು ಭೂಮಿಯ ಮೇಲ್‌ಸ್ತರದ ಮಣ್ಣಿನ ಸವಕಳಿ ತಡೆಯಿತು. ಹಾಗಾಗಿ ಬೆಟ್ಟದಲ್ಲಿ ಬಿದ್ದ ಮಳೆಯ ನೀರು ಅಲ್ಲೇ ಇಂಗಿತು. ಅಂತರ್ಜಲ ಮಟ್ಟವೂ ಏರಿತು.  
ಸಮೃದ್ಧ ಕಾಡು
 ತೋಟಕ್ಕಾಗಿ ಮೀಸಲಾಗಿದ್ದ ಬೆಟ್ಟ ಈಗ ನಳನಳಿಸುವ ಸಮೃದ್ಧ ಕಾಡಾಗಿದೆ. ಈ ಕಾಡಿನಲ್ಲಿ ವನ್ಯಜೀವಿಗಳೂ ಇವೆ. ಆದರೆ ಯಾವುದೇ ಸಂದರ್ಭದಲ್ಲೂ ಅವು ಬೆಳೆಯ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ಅದಕ್ಕಾಗಿ ಪುರುಸೊತ್ತೂ ಇಲ್ಲ. ಕಾಡಿನಲ್ಲಿ ವಿವಿಧ ಬಗೆಯ ಹಣ್ಣಿನ ಮರಗಳನ್ನೇ ಸೃಷ್ಟಿಸಿದ್ದಾರೆ. ವರ್ಷಕಾಲವೂ ಒಂದಿಲ್ಲೊಂದು ಜಾತಿಯ ಹಣ್ಣುಗಳು ಯಥೇಚ್ಛವಾಗಿ ವನ್ಯಜೀವಿಗಳಿಗೆ ಸಿಗುತ್ತದೆ. ಹಲಸು, ಮಾವು, ಪೇರಲ, ಮುರುಗಲ, ಉಪ್ಪಾಗೆ ಹೀಗೆ ಹತ್ತು ಹಲವು ಜಾತಿಯ ಹಣ್ಣುಗಳು ಇವರ ಕಾಡಿನಲ್ಲಿವೆ. ಕಾಡು ಜಾತಿಯ ಹಣ್ಣುಗಳೂ ವಿಫುಲವಾಗಿದೆ. ಮಂಗ, ನವಿಲುಗಳಾದಿಯಾಗಿ ಪ್ರತಿಯೊಂದು ವನ್ಯಜೀವಿಗಳು ತಮಗಿಷ್ಟ ಬಂದಂತೆ ಸಂಚರಿಸಿಕೊಂಡು ಕಾಡಿನ ಉತ್ಪನ್ನಗಳನ್ನು ಆಹಾರವನ್ನಾಗಿ ಮಾಡಿಕೊಂಡಿವೆ. ಬೇಟೆಗಾರರಿಂದಲೂ ಅವುಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 

ಒಮ್ಮೆ ನೋಡಬೇಕು...
ದ್ಯುಮಣಿ ಶಾಸ್ತ್ರಿಯವರ ಅಡಕೆ ತೋಟವನ್ನು ಪ್ರತಿಯೊಬ್ಬ ಅಡಕೆ ಬೆಳೆಗಾರನೂ ನೋಡಲೇ ಬೇಕು. ತೋಟಕ್ಕೆ ನೀರಾವರಿ ಇಲ್ಲವೇ ಇಲ್ಲ. ತೋಟದಲ್ಲಿ ಜವುಳು ಆಗದಂತೆ ತೋಡುವ ಕಾಲುವೆಗಳಿಲ್ಲ. ಅಡಕೆ ಮರಕ್ಕೆ ಬೇಕಾಗಬಹುದಾದ ಗೊಬ್ಬರ ಹಾಕುವುದಿಲ್ಲ. ತೋಟದಲ್ಲಿ ಬೆಳೆಯುವ ಕಳೆಯನ್ನು ಹಾಗೇ ಬಿಡಲಾಗುತ್ತದೆ. ತೋಟಕ್ಕಾಗಿ ಇವರು ನೀಡುತ್ತಿರುವುದೆಂದರೆ ಸಗಣಿಯ ಸ್ಲರಿಯ ಸಿಂಪಡಣೆ. ಅದು ಅಡಕೆ ಮರಗಳಿಗೆ ಸಾಕಾಗುತ್ತದೆ. ಮರದ ಬುಡದಲ್ಲಿ ನೀರಿಗೇನೂ ಕೊರತೆಯಿಲ್ಲ. ಹಾಗಾಗಿ ಅಡಕೆ ಬೆಳೆಗೆ ಇನ್ನೇನು ಬೇಕು ಎನ್ನುವ ಮನೋಭಾವದಲ್ಲಿ ಕೃಷಿ ಮಾಡಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆಗೂ ಇದು ಉತ್ತರವಾಗುತ್ತದೆ. ತೋಟದ ಬೆಳೆಯಲ್ಲಿ ಉತ್ತಮ ಇಳುವರಿಯನ್ನೇ ಪಡೆಯುತ್ತಾರೆ. ಅಡಕೆ ತೋಟದಲ್ಲಿ ಬಾಳೆ, ಪೇರಲ, ನೇರಳೆ, ಬೆಣ್ಣೆ ಹಣ್ಣುಗಳಿದ್ದರೆ ಅಂಚಿನಲ್ಲಿ ಹುಲುಸಾಗಿ ಬೆಳೆ ನೀಡುತ್ತಿರುವ ತೆಂಗು ಕಂಗೊಳಿಸುತ್ತದೆ. ತೋಟದ ಬುಡದಲ್ಲಿ ನೋಡಿದವರು ಯಜಮಾನನ ನಡೆ ಕುರಿತು ಟೀಕಿಸುತ್ತಾರೆ. ಆದರೆ, ಅಡಕೆ ಮರದ ತುದಿಯಲ್ಲಿರುವ ಕೊನೆ ನೋಡಿ ಕಂಗಾಲಾಗುತ್ತಾರೆ.  
ನಿಸರ್ಗ ಬಳಕೆ 
ದ್ಯುಮಣಿ ಶಾಸ್ತ್ರಿಯವರು ಸೌರಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದಲ್ಲಿ ಒಣಗಿಸಬಹುದಾದ ತೋಟದ ಬೆಳೆಗಳು, ಹಣ್ಣು, ಸಂಗ್ರಹಿಸಿಟ್ಟಿರುವ ಧಾನ್ಯ ಕೆಡದಂತೆ ಸೌರಮನೆಯಲ್ಲಿಡಲಾಗುತ್ತದೆ. ಬೇಸಿಗೆಯಲ್ಲೂ ಮೋಡ ಕವಿದ ವಾತಾವರಣವಿದ್ದರೂ ಅಡಕೆ ಒಣಗಿಸಲು ಯಾವುದೇ ತೊಂದರೆಯಿಲ್ಲ. ವರ್ಷವಿಡೀ ಶಾಖ ಶಕ್ತಿ ಉತ್ಪಾದನೆಯಾಗುತ್ತದೆ. ಇದರಿಂದಾಗಿ ಉರುವಲು ಕಟ್ಟಿಗೆಯ ಅವಲಂಬನೆ ತಪ್ಪಿದೆ. ಬಟ್ಟೆಯನ್ನು ಇಲ್ಲೇ ಒಣಹಾಕಲಾಗುತ್ತದೆ. ಎಲ್ಲ ರೀತಿಯಲ್ಲೂ ಪ್ರಕೃತಿಯ ಮೇಲೆ ಒತ್ತಡ ಹಾಕದೇ, ನೈಸರ್ಗಿಕವಾಗಿ ಸಿಗಬಹುದಾದ ನೀರು, ಶಕ್ತಿ ಇಂಥವುಗಳ ಬಳಕೆ ಮಾಡಿಕೊಂಡಿದ್ದಾರೆ.  
ಕಾಡಿನ ಕೊಡುಗೆ 
ತಿಂದ ಹಣ್ಣಿನ ಬೀಜ, ಒರಟೆಗಳನ್ನು ಕಾಡಿಗೆ ಚೆಲ್ಲಲಾಗುತ್ತದೆ. ತಮ್ಮಷ್ಟಕ್ಕೆ ತಾವು ಚಿಗುರಿ ಸಸಿಯಾಗಿ ಮರವಾಗುತ್ತಿದೆ. ಕಾಡನ್ನು ಅದರ ಪಾಡಿಗೆ ಬಿಟ್ಟಿದ್ದಾರೆ. ಕಾಡಿನ ಪ್ರಾಣಿಗಳು ಇದರ ಹೊರಗೆ ಬರುವ ಅಗತ್ಯವೇ ಇಲ್ಲ. ಕಾಡುಕುರಿ, ಜಿಂಕೆ, ನವಿಲು ಹೀಗೆ ಪ್ರಾಣಿ ಸಂಕುಲಗಳ ತಂಡವೇ ಇವರ ಕಾಡಿನಲ್ಲಿದೆ. ಕಾಡು ಬೆಳೆಯಲು ಅವು ತಮ್ಮದೇ ಆದ ಕೊಡುಗೆಯನ್ನು ಕೊಡುತ್ತಿವೆ. ಕಾಡಿಗೆ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಕಾಡುಮಲ್ಲಿಗೆ, ಹೆಗ್ಗರಣಿ, ಮಧುನಾಶಿನಿ, ಗಣಪೆ, ಸೀಗೆ ಮುಂತಾದ ಬಳ್ಳಿಗಳು ಮರಗಳ ಆಶ್ರಯ ಪಡೆದಿವೆ. ಅನೇಕ ಬೆಟ್ಟ ಪ್ರದೆಶಗಳಲ್ಲಿ ಕಣ್ಮರೆಯಾಗುತ್ತಿರುವ ಕುಂಟುನೇರಳೆ, ಚಂದಕಲು, ಬಿಕ್ಕೆ, ಸುರಹೊನ್ನೆ, ಹೆಬ್ಬೇವು, ಸಂಪಿಗೆ, ಹೆಬ್ಬಲಸು, ಅಮಟೆ, ನೆಲ್ಲಿ, ಮದ್ದಾಲೆ, ಬೊಬ್ಬಿ ಮುಂತಾದ ಮರಗಳು ಸೋಂಪಾಗಿ ಬೆಳೆದು ನಿಂತಿವೆ. ಇವೆಲ್ಲ ಕಾಡಿನ ಕಥೆಯನ್ನು ಹೇಳುತ್ತ ನೀರನ್ನು ಕೊಡುತ್ತಿವೆ.

1 comment: