Monday, September 2, 2013

ದುರಂತ (ಕಥೆ)

   
        ಅದೊಂದು ರವಿವಾರ. ನಾನು ವಾರದ ರಜೆಯನ್ನು ಚನ್ನಾಗಿ ಕಳೆಯಬೇಕೆಂದುಕೊಂಡು ಬೆಳಿಗ್ಗೆ ಲೇಟಾಗಿ ಎದ್ದು ತಿಂಡಿ ಮುಗಿಸಿ ಪೇಪರ್ ಓದುತ್ತಾ ಕುಳಿತಿದ್ದೆ. ಆಗ ನಮ್ಮ ಮನೆಯ ಕಾಲಿಂಗ್ ಬೆಲ್ ಸದ್ದುಮಾಡತೊಡಗಿತು. ನನ್ನಾಕೆ ಬಂದು ಬಾಗಿಲು ತೆರೆಯುತ್ತಾಳೆ ಎಂದುಕೊಂಡು ನಾನು ಸುಮ್ಮನಿದ್ದೆ. ಮತ್ತೊಮ್ಮೆ ಬೆಲ್ಲು ಹಿಂದಿನದಕ್ಕಿಂತಲೂ ಜೋರಾಗಿ ಅರಚಿತು. ನನ್ನಾಕೆಗೆ ಅಡುಗೆ ಅರಮನೆಯಲ್ಲಿ ಏನೋ ಕೆಲಸ ಇರಬಹುದು ಎಂದು ಭಾವಿಸಿ, ಆಲಸ್ಯವನ್ನು ತೊರೆದು, ವಿಧಿಯಿಲ್ಲದೇ ನಾನೇ ಹೋಗಿ ಬಾಗಿಲನ್ನು ತೆರೆದೆ.
    ನೋಡುತ್ತೇನೆ, ಅಲ್ಲಿ ನಿಂತಿದ್ದಾನೆ ನನ್ನ ದೂರದ ಸಂಬಂಧಿಯೋರ್ವರ ಮಗ ಅಜಯ. ಅವನನ್ನು ನಾನು `ಬಾರಯ್ಯ ಅಜಯ, ಹೇಗಿದ್ದೀಯಾ..? ಎಂದು ಒಳಕ್ಕೆ ಸ್ವಾಗತಿಸಿದೆ.
    ಆತ ಒಳಗೆ ಬಂದವನೇ `ಏನಿಲ್ಲಾ ಒಂದು ವಿಷಯ ಮಾತನಾಡಬೇಕಿತ್ತು ಅದಕ್ಕೆ ಬಂದೆ..' ಎಂದ..
    `ಏನಪ್ಪಾ ಅಂತಾ ವಿಷಯ..?' ಎಂದು ನಾನು ಮನುಷ್ಯ ಸಹಜ ಕುತೂಹಲದಿಂದ ಕೇಳಿದೆ.
    ಅದಕ್ಕವನು ಒಂದು ಲಕೋಟೆಯನ್ನು ನನ್ನ ಕೈಗೆ ಕೊಡುತ್ತಾ ` ನಾನೊಂದು ಕಥೆ ಬರೆದಿದ್ದೇನೆ. ಇದನ್ನು ನಮ್ಮೂರಿನಲ್ಲಿ ನಡೆಯುವ, ಪತ್ರಿಕೆಯೊಂದು ನಡೆಸುತ್ತಿರುವ ಕಥಾ ಸ್ಪರ್ಧೆಗೆ ಕಳಿಸೋಣ ಎಂದುಕೊಂಡಿದ್ದೇನೆ. ನೀವೋ ಒಳ್ಳೆಯ ಕಥೆಗಾರರು. ಒಳ್ಳೆಯ ಹೆಸರು ಮಾಡಿರುವ ಲೇಖಕರು. ಆದ್ದರಿಂದ ಈ ಕಥೆಯ ಬಗ್ಗೆ ನಿಮ್ಮ ಸಲಹೆ ಕೇಳೋಣ ಅಂತ ಬಂದಿದ್ದೇನೆ .. ' ಎಂದು ಹೇಳಿದ.
    `ದುರಂತ..' ಎನ್ನುವ ತಲೆಬರಹವನ್ನು ಹೊಂದಿದ್ದ ಆ ಕಥೆ ಉತ್ತಮವಾಗಿತ್ತು. ಉತ್ತಮವಾದ ನಿರೂಪಣೆ, ಒಳ್ಳೆಯ ಶೈಲಿ ಆ ಕಥೆಯಲ್ಲಿತ್ತು. ಈ ಕಥೆ ಖಂಡಿತವಾಗಿಯೂ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆಯುತ್ತದೆ ಎಂದು ನಾನು ಭಾವಿಸಿದೆ.
    ಆದರೆ ನನ್ನ ಮನಸ್ಸಿನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದ್ದ ಅಹಂಕಾರವು ತಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಮೂಡಿತು. ನಾನೇ ಉತ್ತಮ ಕಥೆಗಾರ, ನನಗಿಂತ ಯಾರೂ ಚನ್ನಾಗಿ ಬರೆಯುವುದಿಲ್ಲ. ಆದ್ದರಿಂದ ಯಾರೂ ನನಗಿಂತ ಚನ್ನಾಗಿ ಬರೆಯಲಾರರು, ಬರೆಯಬಾರದು ಎಂಬ ಭಾವನೆ ನನ್ನ ಮನಸ್ಸಿನಲ್ಲುಂಟಾಯಿತು. ಅಷ್ಟೇ ಅಲ್ಲದೇ ಆ ಕಥಾ ಸ್ಪರ್ಧೆಗೆ ನಾನೂ ಸಹ ಕಥೆಯನ್ನು ಕಳಿಸುವವನಿದ್ದೆ. ಆ ತಕ್ಷಣ ನಾನು ಅವನಿಗೆ ` ಈ ಕಥೆ ಅಷ್ಟೇನೂ ಚನ್ನಾಗಿಲ್ಲ.. ಇಲ್ಲಿ ಒಂದೊಂದು ಸನ್ನಿವೇಶಕ್ಕೂ ಹೊಂದಾಣಿಕೆಯೇ ಇಲ್ಲ.. ಈ ಕಥೆ ಅರ್ಥವೇ ಆಗೋಲ್ಲ. ಇದು ತುಂಬ ವಿಚಿತ್ರವಾಗಿದೆ. ಇನ್ನೂ ಪಳಗಬೇಕು ನೀನು. ಈ ಕಥೆಯನ್ನು ಕಥಾ ಸ್ಪರ್ಧೆಗೆ ಕಳಿಸಿದರೆ ಪ್ರಶಸ್ತಿಗೆ ಆಯ್ಕೆಯಾಗುವುದಿಲ್ಲ. ನೀನು ಇದನ್ನು ಕಳಿಸದೇ ಇರುವುದೇ ಉತ್ತಮ..' ಎಂದೆ. ಹೀಗೆ ಹೇಳುವುದು ನನ್ನ ಕವಿತ್ವಕ್ಕೆ ಮಾಡುತ್ತಿರುವ ಅಪಚಾರ ಎಂಬುದು ಗೊತ್ತಿದ್ದರೂ ಹಾಗೆ ಹೇಳಿದೆ.
    ಇದರಿಂದ ಅವನಿಗೆ ಅವಮಾನವಾದಂತಾಯಿತು. ಆಂತರ್ಯದಲ್ಲಿ ನನ್ನ ಕಥೆಯನ್ನು ಹೀಯಾಳಿಸಿದರಲ್ಲ ಎಂದು ದುಃಖವೂ ಆಗಿರಬಹುದು. ಹುಣ್ಣಿಮೆಯ ಚಂದ್ರನಂತೆ ಕಳಕಳೆಯಾಗಿದ್ದ ಆತನ ಮುಖದ ಭಾವವು ತಕ್ಷಣವೇ ಬದಲಾಗಿ ವಿವರ್ಣಗೊಂಡಿತು. ತಕ್ಷಣ ಅವನು `ಹಾಗಿದ್ದರೆ ನಾನು ಬರುತ್ತೇನೆ..' ಎಂದು ಹೇಳಿ ಹೊರಟ.
    `ಟೀ ಕುಡ್ಕೊಂಡು ಹೋಗಪ್ಪಾ..' ಎಂದೆ..
    `ಬೇಡ.. ಇನ್ನೊಮ್ಮೆ ಬರ್ತೀನಿ..' ಎನ್ನುತ್ತಾ ಹೊರಟೇಬಿಟ್ಟ.
    ಅಜಯ ಒಬ್ಬ ಪ್ರತಿಭಾನ್ವಿತ. ಒಳ್ಳೆಯ, ಬಹುಮುಖ ಪ್ರತಿಭೆಯ ಹುಡುಗ. ಉತ್ತಮ ಕಾಲೇಜು ವಿದ್ಯಾರ್ಥಿ. ಆತನಿಗೆ ತಂದೆ ಇರಲಿಲ್ಲ. ತಾಯಿ ಇದ್ದಳು. ತಾಯಿಯ ಮುದ್ದಿನ ಮಗನಾಗಿದ್ದ. ಆತ ಹೆಸರಿಗೆ ತಕ್ಕಂತೆ ಅಜೆಯನೇ ಆಗಿದ್ದ. ಅವನು ಪ್ರತಿಭೆಗಳ ಸಂಗಮದಂತಿದ್ದ.
    --------------
    ಇದಾಗಿ ಕೆಲವು ದಿನಗಳ ನಂತರ ನಮ್ಮೂರಿನ ಆ ಪ್ರಸಿದ್ದ ಪತ್ರಿಕೆಯನ್ನು ಓದುತ್ತಿದ್ದೆ. ನನಗೆ ಅದರಲ್ಲಿ ಆಶ್ಚರ್ಯವೊಂದು ಕಾದಿತ್ತು. ಅಜೆಯನಿಗೆ ನಾನು ಕಳಿಸಬೇಡ ಎಂದು ಹೇಳಿದ್ದ `ದುರಂತ..' ಕಥೆಗೆ ಪ್ರಥಮ ಪ್ರಶಸ್ತಿ ಲಭಿಸಿತ್ತು. ಬಹುಶಃ ನಾನು ಕಳಿಸಬೇಡ ಎಂದು ಹೇಳಿದ್ದರೂ ಆತ ಅದನ್ನು ಪತ್ರಿಕೆಗೆ ಕಳಿಸಿರಬಹುದು. ಈಗ ಮಾತ್ರ ನನಗೆ, ನನ್ನ  ಅಹಂಕಾರಕ್ಕೆ, ಸ್ವಾರ್ಥ ಬುದ್ಧಿಗೆ ನಾಚಿಕೆಯಾಯಿತು. ಆ ಕ್ಷಣ ನನಗೆ ನನ್ನ ತಪ್ಪಿನ ಅರಿವಾಯಿತು. ನಂತರ ನಾನು ತಡಮಾಡದೇ ನನ್ನ ತಪ್ಪಿಗೆ ಕ್ಷಮೆ ಕೇಳಿ, ಅವನನ್ನು ಅಭಿನಂದಿಸಿ ಬರಲು ಅವನ ಮನೆಗೆ ಹೊರಟೆ.
    ಅವನ ಮನೆಗೆ ಬಂದು ಸೇರಿದಾಗ ಅಲ್ಲಿ ಬಹಳಷ್ಟು ಜನರು ಸೇರಿದ್ದರು. ಅವರೆಲ್ಲರೂ ನನ್ನ ಹಾಗೆಯೇ ಅಜಯನನ್ನು ಅಭಿನಂದಿಸಲು ಬಂದಿದ್ದಾರೆ ಎಂದುಕೊಂಡು ಮುಂದೆ ಹೋದೆ.
    ನಡುಮನೆಯೊಳಗೆ ಹೋಗಿ ನೋಡಿದಾಗ ನನಗೆ ಧಿಗಿಲಾಯ್ತು. ಅಲ್ಲಿನ ದೃಶ್ಯವನ್ನು ನೋಡಿ ನನ್ನ ಕಣ್ಣುಗಳನ್ನು ನಾನೇ ನಂಬಲು ಆಗಲಿಲ್ಲ. ನಾನು ಯಾರನ್ನು ಅಭಿನಂದಿಸಬೇಕು ಎಂದುಕೊಂಡಿದ್ದೆನೋ, ನಾನು ಯಾರಲ್ಲಿ ಕ್ಷಮೆಯನ್ನು ಕೇಳಬೇಕು ಎಂದುಕೊಂಡು ಬಂದಿದ್ದೆನೋ ಆ ಅಜಯ ಅಲ್ಲಿ ಸತ್ತು ಹೆಣದ ರೂಪದಲ್ಲಿ ಮಲಗಿದ್ದ.
    ಅವನ ತಾಯಿಯ ದುಃಖವನ್ನು ನನ್ನಲ್ಲಿ ನೋಡಲಾಗಲಿಲ್ಲ. ಆಕೆಯ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆ ದೃಶ್ಯ ನನ್ನ ಹೃದಯದ ಅಹಂಭಾವವನ್ನು ಕುಟುಕಿದಂತೆಯೂ, ತಿವಿದಂತೆಯೂ ಅನ್ನಿಸುತ್ತಿತ್ತು.
    ಅಜಯ ಸತ್ತದ್ದರಿಂದ ನನ್ನ ಹೃದಯ ಭಾರವಾದಂತೆ ಅನ್ನಿಸಿತು. ಮನಸ್ಸಿಗೆ ಅತಿಯಾದ ದುಃಖವುಂಟಾಯಿತು. ನನ್ನ ಅಂತರಾತ್ಮ ನನ್ನಲ್ಲಿ ನೀನೆ ಅಪರಾಧಿ, ಒಬ್ಬನ ಕವಿತ್ವದ ಕೊಲೆಗೆ ಕಾರಣನಾದೆ ಎನ್ನುತ್ತಿತ್ತು. ನನಗೆ ಅಲ್ಲಿ ಆ ಕ್ಷಣ ನಿಲ್ಲಲಾಗಲಿಲ್ಲ. ಅಲ್ಲಿರಲಾರದೇ ಹೊರಬಂದೆ. ಅಲ್ಲಿ ನಿಂತಿದ್ದವರಲ್ಲಿ ಒಬ್ಬನನ್ನು ` ಅಜಯ ಹೇಗೆ ಸತ್ತ..?..' ಎಂದು ಕೇಳಿದೆ.
    ಅದಕ್ಕವನು ಅತಿ ದಃಖದಿಂದ `ಅವನಿಗೆ ಬ್ಲಡ್ ಕ್ಯಾನ್ಸರ್ ಇತ್ತಂತೆ.. ಯಾರಿಗೂ ತಿಳಿಸಿರಲಿಲ್ಲ. ಮೊನೆನ ಒಮ್ಮಿಂದೊಮ್ಮೆಲೆ ರಕ್ತ ವಾಂತಿ ಮಾಡಿಕೊಂಡ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಆತ ಬದುಕುಳಿಯಲಿಲ್ಲ ನೋಡಿ..' ಎಂದು ಹೇಳಿ ಕಣ್ಣೀರು ಹಾಕಿದ.
    ತಕ್ಷಣ ನನಗೆ ಅವನು ಬರೆದಿದ್ದ `ದುರಂತ..' ಕಥೆಯ ನೆನಪಾಯಿತು. ಆ ಕಥೆಯ ಒಂದೊಂದು ಸಾಲುಗಳೂ ನನ್ನ ಕಣ್ಣಮುಂದೆ ಸುಳಿಯತೊಡಗಿದವು. ಆ ಕ್ಷಣ ನನಗೆ ಅರಿವಾಯಿತು. ಆ ಕಥೆ ಅಜೆಯನದ್ದೇ ಆಗಿತ್ತು. ಅಂದರೆ ಆ ಕಥೆಯ ಕಥಾ ನಾಯಕ ಅಜಯನೇ ಆಗಿದ್ದ. ಆ ಕಥೆಯಲ್ಲಿ ಆತ ತನ್ನ ಜೀವನದ ಕಥೆ-ವ್ಯಥೆಯನ್ನೇ ಸಾಲುಗಳಾಗಿ ಬರೆದುಕೊಂಡಿದ್ದ. ಅದನ್ನು ನಾನು ಅರಿಯಲಿಲ್ಲ. ಆ ಕಥೆಯಲ್ಲಿನ ನಾಯಕ ಕ್ಯಾನ್ಸರ್ ನಿಂದ ಸತ್ತಿದ್ದ. ಇವನೂ ಕೂಡ ಹಾಗೆಯೇ ಮರಣಹೊಂದಿದ. ಇನ್ನೂ ವಿಪರ್ಯಾಸವೆಂದರೆ ಆತ ಬರೆದ ಕಥೆಗೆ ಬಹುಮಾನ ಬಂದ ದಿನವೇ ಆತ ವಿಧಿವಿಲಾಸಕ್ಕೆ ಬಲಿಯಾಗಿದ್ದ. ಆತನ ಬಾಳು ಆತ ಬರೆದ `ದುರಂತ' ಕಥೆಯಂತೇ ದುರಂತಮಯವಾಗಿತ್ತು.
    ನನಗೆ ನಂತರ ಅಲ್ಲಿ ನಿಲ್ಲಲಾಗಲಿಲ್ಲ. ಅವನ ಆತ್ಮಕ್ಕೆ ಶಾಂತಿಯನ್ನು ಕೋರಿ, ಹಾಗೆಯೇ ನನ್ನ ತಪ್ಪನ್ನು ಮನ್ನಿಸು ಎಂದು ಮನದಲ್ಲಿಯೇ ಹೇಳಿ ಅಲ್ಲಿಂದ ಹೊರಟುಬಂದೆ. ಆ ಕ್ಷಣದಲ್ಲಿ ನನ್ನ ಕಣ್ಣುಗಳು ತೇವಗೊಂಡಿದ್ದವು.

ಬರೆದಿದ್ದು : 22-08-2003ರಂದು

No comments:

Post a Comment