Wednesday, July 24, 2013

ಮರೆಯಾದ ರಾಯ್ಕರ್ ಮಾಸ್ತರ್

ರಾಯ್ಕರ್ ಮಾಸ್ತರ್ ಎಂದು ಖ್ಯಾತಿಗಳಿಸಿದ್ದ ರಾಮಚಂದ್ರ ಗುರುರಾವ್ ರಾಯಕರ್ ಅವರು ಕಲಾವಿದರಾಗಿ, ಶಿಕ್ಷಕರಾಗಿ, ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಸಂಗ್ರಹಗಾರರಾಗಿ ಗಳಿಸಿದ ಹೆಸರು ಅಪಾರವಾದುದು. ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಾಟರ್ ಕಲರ್, ಆಯಿಲ್ ಪೇಂಟಿಂಗ್, ರೇಖಾಚಿತ್ರ ಈ ಮುಂತಾದ ಚಿತ್ರಕಲಾ ಬಗೆಗಳಲ್ಲಿ ರಾಯ್ಕರ್ ಮಾಸ್ತರರದ್ದು ಎತ್ತಿದ ಕೈಯಾಗಿತ್ತು. ಈ ಪ್ರಕಾರಗಳಲ್ಲಿ ಅವರು ಬಿಡಿಸಿದ ಚಿತ್ರಗಳು ಖ್ಯಾತಿಯನ್ನು ಗಳಿಸಿಕೊಂಡಿವೆ.
    ರಾಯ್ಕರ್ ಮಾಸ್ತರರು ಜನಿಸಿದ್ದು 1924ರ ಅಗಸ್ಟ್ 30ರಂದು. ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಸುವರ್ಣ ಕಿರೀಟವನ್ನು ರಚಿಸಿದ ಖ್ಯಾತಿಯನ್ನು ಗಳಿಸಿರುವ ನಟ, ಸಾಹಿತಿ ದಿ. ಗುರುರಾವ್ ರಾಮಚಂದ್ರ ರಾಯಕರ್ ಹಾಗೂ ನಾಗಮ್ಮ ದಂಪತಿಗಳಿಗೆ ಜನಿಸಿದ ರಾಯ್ಕರ್ ಮಾಸ್ತರ್ ಅವರು ಮುಂಬಯಿಯ ಸರ್. ಜೆ. ಜೆ. ಕಲಾ ಶಾಲೆ, ಹುಬ್ಬಳ್ಳಿಯ ಡಾ. ಎಂ. ವಿ. ಮಿಣಜಗಿ ಕಲಾಶಾಲೆ, ಧಾರವಾಡದ ಡಿ. ವಿ. ಹಾಲಭಾವಿ ಕಲಾಶಾಲೆ, ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಮುಂಬಯಿಯ ರಾಜ್ಯಾಧ್ಯಕ್ಷ ಕುಶಲ ಕೈಗಾರಿಕಾ ಶಾಲೆಗಳಲ್ಲಿ ಅಧ್ಯಯನ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.
    ನಗರದ ಮಾರಿಕಾಂಬಾ ಹೈಸ್ಕೂಲಿನಲ್ಲಿ 1947ರಿಂದ 1980ರ ವರೆಗೆ 33 ವರ್ಷ ಚಿತ್ರಕಲಾ ಶಿಕ್ಷಕರಾಗಿ ವಿದ್ಯಾದಾನ ಮಾಡಿದ ರಾಯ್ಕರ್ ಮಾಸ್ತರರ ಶಿಷ್ಯವೃಂದ ಬಹುದೊಡ್ಡದು. ಅವರ ಶಿಷ್ಯರಲ್ಲಿ ಬಹಳಷ್ಟು ಜನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ನಾಡಿನ ಹೆಸರಾಂತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ರಾಯ್ಕರ ಮಾಸ್ತರರ ಶಿಷ್ಯರಾಗಿದ್ದರು. ಕಾರ್ನಾಡರು ಶಿರಸಿಗೆ ಭೇಟಿ ನೀಡಿದಾಗಲೆಲ್ಲ ರಾಯ್ಕರ ಮಾಸ್ತರರನ್ನು ಭೇಟಿಯಾಗದೇ ಮರಳುವುದೇ ಇಲ್ಲ. ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಗಿರೀಶ ಕಾರ್ನಾಡರು ರಾಯಕರ್ ಮಾಸ್ತರರ ಪ್ರಭಾವ ನನ್ನ ಮೇಲೆ ಉಂಟಾಗಿದೆ ಎಂದು ಆಗಾಗ ಹೇಳಿದ್ದೂ ಇದೆ.
    ಜಿಲ್ಲೆಯಲ್ಲಿ ರಾಯ್ಕರ್ ಮಾಸ್ತರ್ ಎಂದರೆ ಅವರಿಗೊಂದು ಘನತೆಯಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ರಾಯ್ಕರ್ ಮಾಸ್ತರ್ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಅತ್ಯಂತ ಸಮೀಪವರ್ತಿಗಳಾಗಿದ್ದರು. ರಾಮಕೃಷ್ಣ ಹೆಗಡೆಯವರು ಆಗಾಗ ರಾಯ್ಕರ್ ಮಾಸ್ತರರ ಮನೆಗೆ ಆಗಮಿಸಿ ಅವರ ದೊಡ್ಡ ಮನೆಯ ಮಹಡಿಯ ಮೇಲೆ ಹರಟೆ ಹೊಡೆಯುತ್ತಿದ್ದರು ಎಂಬುದು ರಾಯ್ಕರ್ ಮಾಸ್ತರ್ ಹಾಗೂ ರಾಮಕೃಷ್ಣ ಹೆಗಡೆಯವರ ನಡುವಿನ ಆತ್ಮೀಯತೆಯನ್ನು ವಿವರಿಸುತ್ತದೆ. ಇವರಲ್ಲದೇ ಗೋಪಾಲಕೇಷ್ಣ ಹೆಗಡೆ ಕೆರೆಮನೆ ಮುಂತಾದ ಅನೇಕ ಹಿರಿಯ ಚೇತನಗಳು ರಾಯ್ಕರ್ ಮಾಸ್ತರರ ಒಡನಾಡಿಗಳಾಗಿದ್ದರು. ಮಿತ್ರರ ಬಳಗ ಜೊತೆ ಸೇರಿದಾಗಲೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದರು.
    ರಾಯ್ಕರ್ ಮಾಸ್ತರರು ಕಲಾವಿದರಾಗಿ ಮಾಡಿದ ಸಾಧನೆ ಅಪಾರ. ಅಂದಿನ ದಿನಮಾನದಲ್ಲಿ ರಾಜ್ಯದಲ್ಲಿ 15 ಕಡೆಗಳಲ್ಲಿ, ದಿಲ್ಲಿಯಲ್ಲಿ 2 ಸಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. 1957ರಲ್ಲಿ ಶಿರಸಿಯಲ್ಲಿ ಜರುಗಿದ ಅಖಿಲಭಾರತ ಮಲೆನಾಡ ಸಮ್ಮೇಳನ, ಅಖಿಲ ಭಾರತ ಅಡಿಕೆ ಸಮ್ಮೇಳನದ ಬೃಹತ್ ಮಹಾದ್ವಾರಗಳನ್ನು ಶಿಲ್ಪದ ಮಾದರಿಯಲ್ಲಿ ತಯಾರಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅನೇಕ ಪುಸ್ತಕಗಳ, ಸ್ಮರಣ ಸಂಚಿಕೆಗಳ ಮುಖಚಿತ್ರ ರಚಿಸಿದ್ದಾರೆ. ನಾಡಿನ ಹೆಸರಾಂತ ವ್ಯಕ್ತಿಗಳ ಭಾವಚಿತ್ರವನ್ನು ಚಿತ್ರಿಸಿದ ಕೀರ್ತಿ ಇವರದ್ದಾಗಿದೆ. ಇವರು ಚಿತ್ರಿಸಿದ್ದ ಬಾದಾಮಿ, ಕಾರವಾರ, ಯಾಣ ಹಾಗೂ ಹಂಪೆಯ ಜಲವರ್ಣ ಚಿತ್ರಗಳು ಸುಪ್ರಸಿದ್ಧವಾಗಿದೆ. 1959ರಲ್ಲಿ ಕುಮಟಾದ ಗಿಬ್ ಹೈಸ್ಕೂಲಿನ ಚಿನ್ನದ ಹಬ್ಬದ ಸಂದರ್ಭದಲ್ಲಿ ನೀಡಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನೋಡಿದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಯ್ಕರರ ಗರಿಮೆಯಾಗಿದೆ.
    ರಾಯ್ಕರ್ ಮಾಸ್ತರರು 12 ವರ್ಷ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ರಾಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರಾಗಿ, ರಾಜ್ಯ ಚಿತ್ರಕಲಾ ಪರೀಕ್ಷಾ ಮಂಡಳಿ ಸದಸ್ಯರಾಗಿ, ಮೈಸೂರು ದಸರಾ ಉತ್ಸವ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1991ರಲ್ಲಿ ರಾಜ್ಯದ ಅಕಾಡೆಮಿಗಳ ಸುಧಾರಣಾ ಸಮಿತಿ ಸದಸ್ಯರಾಗಿ, ರಾಜ್ಯ ನಿವೃತ್ತ ಶಿಕ್ಷಕರ ಒಕ್ಕೂಟದ ಸದಸ್ಯರಾಗಿ, ರಾಜ್ಯ ಕಲಾ ಶಿಕ್ಷಣ ಪರಿಶೀಲನಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಉತ್ಸವಗಳಾದ ಕದಂಬೋತ್ಸವ ಹಾಗೂ ಕರಾವಳಿ ಉತ್ಸವ, ಉತ್ತರ ಕನ್ನಡ ಜಿಲ್ಲಾ ಸಂಗೀತ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಯ್ಕರ್ ಮಾಸ್ತರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ಮಾಡಿದ್ದು 15 ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕದ ಜಲಪಾತಗಳು, ಕರ್ನಾಟಕದ ಗಿರಿಧಾಮಗಳು, ಕರ್ನಾಟಕದಲ್ಲಿ ಚಿನ್ನ, ಬೆಳ್ಳಿಯ ಕುಶಲ ಕೈಗಾರಿಕೆ ಈ ಮುಂತಾದವುಗಳು ಅವರ ಕೆಲವು ಪ್ರಸಿದ್ಧ ಪುಸ್ತಕಗಳಾಗಿದ್ದವು.
    ಹಲವಾರಿ ಪ್ರಶಸ್ತಿಗಳು, ಗೌರವಗಳು, ಸಂಮಾನಗಳು ದಿ. ಆರ್. ಜಿ. ರಾಯ್ಕರ್ ಅವರನ್ನು ಅರಸಿಕೊಂಡು ಬಂದಿವೆ. 1982ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ, 1989ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ದೆಹಲಿಯ ಅಖಿಲ ಭಾರತ ಕಲೆ ಮತ್ತು ಕೈಗಾರಿಕಾ ಸೊಸೈಟಿಯ ಸುವರ್ಣ ಮಹೋತ್ಸವದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳು ಅವರ ಮುಡಿಗೇರಿವೆ. 1980-85ರ ವರೆಗೆ ಶಿರಸಿಯ ಮಾರಿಕಾಂಬಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ, 1986ರಿಂದ 1989ರ ವರೆಗೆ ಶಿರಸಿಯ ಸುವರ್ಣ ಕೋ-ಆಪ್-ಸೊಸೈಟಿ ಲಿ.ಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿಯಾಗಿ, ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
    ಪುಸ್ತಕ ಸಂಗ್ರಹಗಾರರಾಗಿ ಹೆಸರು ಮಾಡಿದವರು ರಾಯ್ಕರ್ ಮಾಸ್ತರರು. ಇವರ ಬಳಿ ಸ್ವಂತ ಗ್ರಂಥ ಬಂಢಾರವಿತ್ತು. ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಪ್ರವಾಸ ಸಾಹಿತ್ಯ, ಶಿಕ್ಷಣ, ಚಿಂತನೆ, ಯೋಗ, ಧಾರ್ಮಿಕ, ಜೀವನಚರಿತ್ರೆ, ಗೆಝೆಟಿಯರ್, ವೈದ್ಯಕೀಯ, ಜಾನಪದ, ಕ್ಷೇತ್ರದರ್ಶನ, ಸ್ಮರಣ ಸಂಚಿಕೆ ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು. ತಮ್ಮ ಜೀವನದಲ್ಲಿ 60 ವರ್ಷಗಳ ಕಾಲ ಪುಸ್ತಕ ಸಂಗ್ರಹದ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಉತ್ತರಕನ್ನಡದ ಮೊಟ್ಟ ಮೊದಲ ಪತ್ರಿಕೆ ಎನ್ನುವ ಖ್ಯಾತಿಗಳಿಸಿರುವ ಹವ್ಯಕ ಸುಬೋಧ ಪತ್ರಿಕೆ ಕೂಡ ಇವರ ಸಂಗ್ರಹದಲ್ಲಿದೆ. ಇಷ್ಟೇ ಅಲ್ಲದೇ ಪ್ರಾಚೀನ ನಾಣ್ಯಗಳು, ವಿವಿಧ ಭಂಗಿಯ ಗಣೇಶನ ಮೂರ್ತಿಗಳು, ಮೆಡಲುಗಳು, ಸ್ಟಾಂಪುಗಳು, ಪ್ರಪ್ರಥಮ ಪೋಸ್ಟ್ ಕವರುಗಳು, ಕೀ ಚೈನುಗಳು, ಅತ್ತರ್ ಬಾಟಲಿಗಳು, ಪ್ರಾಚೀನ ಮೂರ್ತಿಗಳು, ನಿಶಾನೆಗಳು, ಮಾನಪತ್ರಗಳು, ನೆನಪಿನ ಕಾಣಿಕೆಗಳು ಹೀಗೆ ಇನ್ನೂ ಹಲವಾರು ಅಪರೂಪದ ತಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ರಾಯ್ಕರ್ ಮಾಸ್ತರರು ಬೆಳೆಸಿಕೊಂಡಿದ್ದರು.
    ತಮ್ಮ ಇಳಿ ವಯಸ್ಸಿನಲ್ಲಿ ಅಮೇರಿಕಾ ಹಾಗೂ ಸಿಂಗಾಪುರ ಯಾತ್ರೆಗಳನ್ನೂ ರಾಯ್ಕರ್ ಮಾಸ್ತರರು ಕೈಗೊಂಡಿದ್ದರು. ಬಿಡುವಾದಾಗ ಭಾರತ ಸುತ್ತುವ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ರಾಯಕರ್ ಮಾಸ್ತರರು ತಾವು ಪ್ರವಾಸ ಮಾಡಿದ ಕುರಿತು ಸುಂದರವಾಗಿ ಬರಹದ ರೂಪದಲ್ಲಿ ಮೂಡಿಸುತ್ತಿದ್ದರು. ವಯೋಸಹಜ ಕಾರಣದಿಂದಾಗಿ ತಮ್ಮ ಕೊನೆಗಾಲದಲ್ಲಿ ಚಿತ್ರಕಲೆಯನ್ನು ನಿಲ್ಲಿಸಿದರೂ ಬರವಣಿಗೆ, ಸಂಗ್ರಹಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದರು. ಇಷ್ಟೆಲ್ಲ ಸಾಧನೆಗಳನ್ನು ಕೈಗೊಂಡಿದ್ದರೂ ರಾಯ್ಕರ್ ಮಾಸ್ತರರು ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದರು. ಇಂತಹ ಮಹಾನ್ ಚೇತನ ಇನ್ನಿಲ್ಲವಾಗಿದೆ. ಇಂದಿನ ಪೀಳಿಗೆಗೆ, ಸಮಾಜಕ್ಕೆ ಆದರ್ಶಪ್ರಾಯವಾಗಿದ್ದ ಕಲಾವಿದ, ಸಾಧಕ, ಅಪರೂಪದ ವ್ಯಕ್ತಿ, ಹಿರಿಯ ಕೊಂಡಿಯೊಂದು ಕಳಚಿದೆ.
ರಾಜ್ಯದ ಹೆಸರಾಂತ ಕಲಾವಿದಕೊಂಡಿಯೊಂದು ಕಳಚಿದೆ. ಸರಳ, ಸಜ್ಜನಿಕೆಯ ಮೂರ್ತರೂಪದಂತಿದ್ದ ಆರ್. ಜಿ. ರಾಯ್ಕರ್ ಅವರ ನಿಧನದಿಂದಾಗಿ ಕಲಾಲೋಕ ಬಡವಾಗಿದೆ. ಬಹುರಂಗಗಳಲ್ಲಿ ಕೆಲಸ ಮಾಡಿದ್ದ ಅವರ ಸಾಧನೆ ಇಂದಿನವರಿಗೆ ಸ್ಪೂರ್ತಿದಾಯಕವಾದುದು.

No comments:

Post a Comment