ಕೊಳ್ಳುವುದು ಏನನ್ನು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿತು..
ನನಗೆ ಕ್ರಾಂತಿ ನಾಯಕ `ಚೆ ಗುವೆರಾ' ನ ಚಿತ್ರವಿರುವ ಟಿ ಷರ್ಟ್ ಕೊಳ್ಳಬೇಕು ಎನ್ನಿಸಿತ್ತು..
ದೋಸ್ತರ ಬಳಿ ಹೇಳಿದೆ..
ಅವರಿಗೂ ಹೇಳಿದೆ..
ಮೋಹನನಿಗೆ ಚೆಗುವೆರಾ ನ ಬಗ್ಗೆ ಗೊತ್ತಿರಲಿಲ್ಲವೋ ಅಥವಾ ಬೇಕಂತಲೇ ಹೇಳಿದನೋ ಗೊತ್ತಿಲ್ಲ..
ಜಾಗ್ವಾರ್ ಷರ್ಟ್ ಜಾಗ್ವಾರ್ ಷರ್ಟ್ ಎನ್ನಲು ಶುರುಹಚ್ಚಿಕೊಂಡ..
ನಮಗೆ ತಮಾಷೆಯಾಗಿ ನಗು ಬಂತು..
ಹಿಂದಿನ ಸಾರಿ ನಾನು, ರಾಘು ಊಟಿಗೆ ಬಂದಾಗ ಒಂದು ಅಂಗಡಿಯಲ್ಲಿ ಜರ್ಕಿನ್ನುಗಳನ್ನು ಕೊಂಡಿದ್ದೆವು.. ಅದರತ್ತ ಮುಖ ಮಾಡಿದೆವು..
ನಮಗೆ ಬೇಕಾದಂತಹ ಯಾವುದೇ ಬಟ್ಟೆ ಅಲ್ಲಿ ಸಿಗಲಿಲ್ಲ..
ಇನ್ನೊಂದು ದೊಡ್ಡ ಮಳಿಗೆ..
ನಾವು ಅಪ್ಪಟ ಕನ್ನಡಿಗರು..
ತಮಿಳಿನ ಸಾಪಡ್ ಬಿಟ್ಟರೆ ಇನ್ನೆಂತದ್ದೂ ಗೊತ್ತಿಲ್ಲ..
ಕೊನೆಗೆ ಆ ಮಳಿಗೆಯಲ್ಲಿ ಕನ್ನಡ ಗೊತ್ತಿದ್ದ ತಮಿಳರಿದ್ದರು...
ಅವರು ತಮಿಳರೋ ಅಥವಾ ಕನ್ನಡಿಗರೇ ಹೊಟ್ಟೆಪಾಡಿಗೆ ಅಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ..
ಆದರೆ ಅವರ ಪ್ರನೌನ್ಸಿಯೇಷನ್ ಮಾತ್ರ ತಮಿಳಿನಂತೆಯೇ ಇತ್ತು.. ಸೋ ತಮಿಳ್ಗನ್ನಡಿಗರೇ ಇರಬೇಕು...
ಅಂದುಕೊಂಡೆವು..
ಅಂಗಡಿ ತುಂಬೆಲ್ಲ ನಮನಮೂನೆಯ ಜರ್ಕಿನ್ನುಗಳು ಸ್ವೆಟ್ಟರುಗಳು..
ಯಾವುದನ್ನೇ ಹಿಡಿದರೂ ಕೊಳ್ಳಬೇಕೆನ್ನಿಸುವ ಮೋಹ..
ನಾವು `ವಿಟಮಿನ್ ಎಂ' ಅನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಲ್ಲ ಮಾರಾಯ್ರೆ..
ಆದ್ದರಿಂದ ನಾವು ನಾಲ್ವರೂ ತಲಾ ಒಂದೊಂದು ಜರ್ಕಿನ್ ಕಂ ಸ್ವೆಟರ್ ಕೊಳ್ಳುವುದು ಎಂಬ ತೀರ್ಮಾನ ಬಹುಮತ ಪಡೆಯಿತು..
ಅದೃಷ್ಟಕ್ಕೆ ಅಲ್ಲಿ ನನ್ನ ಪ್ರೀತಿಯ ಚೆ ಗುವೆರಾ ಷರ್ಟ್ ಇತ್ತು..
ಎಲ್ಲರಿಗೂ ಉಷ್ಟವಾದದ್ದೂ ನನ್ನ ಅದೃಷ್ಟವೇ ಸರಿ..
ನಾಲ್ಕರ ಜೊತೆಗೆ ಒಂದು ಎಕ್ಸ್ ಟ್ರಾ.. ಒಟ್ಟೂ ಐದು ಷರ್ಟ್ ಕೊಂಡೆವು..
ಟ್ರಿಪ್ ಕಳೆದು ಸರಿಸುಮಾರು 3-4 ವರ್ಷ ಕಳೆಯುತ್ತಿದೆ..
ಇಂದಿಗೂ ಚೆಗುವೆರಾ ನನ್ನ ಬಳಿ ಅರಾಮವಾಗಿದೆ.. ಮಳೆಗಾಲದ ತಂಪಿನಲ್ಲಿ, ಚಳಿಗಾಲದ ಕೊರೆಯುವಿಕೆಯಲ್ಲಿ ನನ್ನ ಎದೆಯ ಮೇಲೇರುತ್ತಾನೆ ಆತ.. ಬೆಚ್ಚಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಮಾರಾಯ..
ನಿನ್ನ ಕ್ರಾಂತಿಯ ಕಿಡಿಗಳು ಚಿರಾಯುವಾಗಿರಲಿ..
ಅಲ್ಲೊಂದು ಅಂಗಡಿ ನಮ್ಮ ಮನಸ್ಸನ್ನು ತಟ್ಟನೆ ಸೆಳೆಯಿತು..
ಅದೊಂದು ಟೆಡ್ಡಿ ಬೇರ್ ಅಂಗಡಿ..
ಸಾವಿರ ಸಾವಿರ ಸಂಖ್ಯೆಯಲ್ಲಿ ಟೆಡ್ಡಿ ಬೇರ್ ಗಳು ಅಲ್ಲಿದ್ದವು..
ಚಿಕ್ಕವು, ದೊಡ್ಡವು, ಪುಟ್ಟವು, ಕೆಂಪು, ನೀಲಿ, ಹಳದಿ, ಗುಲಾಬಿ.. ನಮ್ಮದು ಕೊರತೆಯ ಅರ್ಥಶಾಸ್ತ್ರ,,
ನೋಡಲು ಅರ್ಥಶಾಸ್ತ್ರದ ಲೆಕ್ಖಾಚಾರ ಬೇಕಿಲ್ಲವಲ್ಲ ನೋಡುತ್ತ ನಿಂತೆವು.,.
ಅರೇ/.. ಟೆಡ್ಡಿ ಬೇರ್ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದೆ..
ಅರೇ.. ನಗುತ್ತಲೂ ಇದೆ.. ನೋಡ ನೋಡುತ್ತಿದ್ದಂತೆಯೇ ಮಾತನ್ನೂ ಆಡಲು ಪ್ರಾರಂಭಿಸಿತು..
ಇದೇನಿದೆ ಎನ್ನುವಷ್ಟರಲ್ಲಿ ಅದೊಂದು ಹುಡುಗಿ..!!
ಅಂಗಡಿಯ ಒಡತಿಯೋ ಯಾರೋ..
ನೇಪಾಳಿಯಂತೆ ಟಾರಿನ ಬಣ್ಣವಲ್ಲ..
ಕಣ್ಣು ಕಿರಿದು.. ಕಿಟ್ಟುವಂತೂ ``ಹ್ವಾ ಇದು ಜಿಂಪೋ ಛೇ... ಕಡೆಯಿರಬೇಕು' ಅಂದ
ಅಂದರೆ ನೇಪಾಳಿಯೋ.. ಗೂರಖಾವೋ.. ಟಿಬೇಟಿಯನ್ನರೂ ಇರಬೇಕು ಎಂಬುದು ನಮ್ಮ ಅಂದಿನ ಕೋಡ್ ವರ್ಡ್ ಆಗಿತ್ತು..
ಹೌದು.. ಆಕೆ ನೇಪಾಳಿಯೇ..
ಸರಿ ಟೆಡ್ಡಿಯನ್ನು ಕೊಳ್ಳುವ ಮನಸ್ಸಿಲ್ಲ..
ಗೊಂಬೆಗಳನ್ನು ಕೊಳ್ಳುವ ನಾಟಕ ಶುರುಹಚ್ಚಿಕೊಂಡು ಚೌಕಾಸಿಗಿಳಿದೆವು..
ನಮ್ಮಂತವರನ್ನು ಎಷ್ಟುಮಂದಿಯನ್ನು ಆಕೆ ಕಂಡಿದ್ದಳೋ..
ಬಲೆ ಘಾಟಿ.. ಮಾತಿನಲ್ಲೇ ಮೋಡಿ ಮಾಡುವ ಛಾತಿ.. ವ್ಯಾಪರಾದ ಸಕಲ ಎಬಿಸಿಡಿ ಗೊತ್ತಿದ್ದ ಅವಳ ಮುಂದೆ ನಮ್ಮ ಆಟ ನಡೆಯಲಿಲ್ಲ.. ಹಾಗಂತ ನಾವು ಟೆಡ್ಡಿಬೇರ್ ಕೊಳ್ಳಲಿಲ್ಲ ಮಾರಾಯ್ರೆ..
ಹಾಲುಬಿಳುಪಿ ಟೆಡ್ಡಿಯಂತಹ ಹುಡುಗಿಯನ್ನು ನೋಡಿ ಮಾತನಾಡಿ.. ಪುಳಕಿತರಾಗಿ ಮರಳಿದೆವು..
`ಎದೆಯೊಳಗೆ ಗಿಟಾರು ನೂರು...ಮಿಡಿ ಮಿಡಿ ಮಿಡಿದು...'
ನಮ್ಮ ಶಾಪಿಂಗು ಮುಗಿಯಿತು...
ಇನ್ನೇನು ಮಾಡುವುದು..?
ಬೊಟಾನಿಕ್ಕಲ್ ಗಾರ್ಡನ್ ಸೆಳೆಯಲಿಲ್ಲ..
ನೇಮಿ ಚಂದ್ರರ ಅವರು ಹೇಳಿವಂತೆ `ನಾ ಓಡಿ ಓಡಿ ಮುಟ್ಟಿದ ಬೆಟ್ಟದ ತುದಿಯಲ್ಲಿ ಏನಿದೆ ಬಟ್ಟಾ ಬಯಲು' ಎನ್ನುವಂತೆ ಭಾಸವಾಯಿತು.. ಅಲ್ಲಿನ ಮರಗಿಡಗಳನ್ನು ಕತ್ತರಿಸಿ, ಬಗ್ಗಿಸಿ ವಿವಿಧ ಆಕೃತಿಗಳನ್ನಾಗಿ ಮಾಡಿದ್ದು ನಮ್ಮನ್ನು ಕಾಡಲಿಲ್ಲ..
ಸರಿ ಊಟಿ ನೋಡಿದ್ದಾಯ್ತು.. ಚಳಿಯಲ್ಲಿ ಕೂಲ್ ಆಗಿದ್ದಾಯ್ತು.. ಮುಂದೇನು..? ಎನ್ನುವ ಕ್ವಶ್ಚನ್ ಮಾರ್ಕು ನಮ್ಮ ಮನದಲ್ಲಿ ಮೂಡಿ ಉತ್ತರಕ್ಕಾಗಿ ತಡಕಾಡುತ್ತಿತ್ತು..
ಅಷ್ಟರಲ್ಲಿ ನಮಗೆ ಟೀ ಫ್ಯಾಕ್ಟರಿ ನೋಡಬೇಕು ಎನ್ನುವ ಚಿಕ್ಕದೊಂದು ಆಸೆ..
ಆಸೆಯ ಹುಳು ಮನದಲ್ಲಿ ಹೊಕ್ಕ ನಂತರ ಅದಕ್ಕೆ ಅಂತ್ಯ ಹಾಕಲೇ ಬೇಕು..
ಸರಿ ಅಲ್ಲೊಂದು ಫ್ಯಾಕ್ಟರಿ ಕಣ್ಣಿಗೆ ಬಿತ್ತು.. ಹೊರಟರೆ ಅದಕ್ಕೆ ಪ್ರವೇಶಫೀಸಿದೆ.. ಅದೆಷ್ಟೋ ಕೊಟ್ಟು ಹೋಗಬೇಕೆಂದರೆ ಚಿಕ್ಕ ಕ್ಯೂ ಕೂಡ ಇದೆ.. ಸುಮ್ಮನೇ ಲಾಸು ಮಾಡಿಕೊಂಡು ಹೋಗುವುದು ಬೇಡ ಎನ್ನುವ ಎಕನಾಮಿಕ್ಸು ನಮ್ಮ ಮನದಲ್ಲಿ..
ಆದರೆ ಕ್ಯೂನಲ್ಲಿ ನೋಡಿದರೆ ಮೂರ್ನಾಲ್ಕು ಬೆಳ್ಳಗಿನ ಹುಡುಗಿಯರು..!
ಜೈ...
ನಾವೂ ಕ್ಯೂನಲ್ಲಿ ನಿಂತೆವು..
ಹತ್ತುನಿಮಿಷದ ನಂತರ ಫ್ಯಾಕ್ಟರಿಯ ಒಳಭಾಗದಲ್ಲಿ ನಾವು..
ಅದರೊಳಗೆ ಇಂಗ್ಲೀಷ್ ಭಾಷೆಯಲ್ಲಿ ಕಾಮೆಂಟರಿ..
ಏನೋ ಹೇಳುತ್ತಿದ್ದರು..
ನಾವು ನಾಲ್ವರೂ ಘನ ಗಂಬೀರವಾಗಿ ಕೇಳುವ ನಟನೆ ಮಾಡಿದೆವು..
ನಮ್ಮ ನಟನೆ ನೋಡಿದರೆ ನಮಗೆ ಸಂಪೂರ್ಣ ಅರ್ಥವಾಗಿದೆ ಎನ್ನುವಂತಿತ್ತು..
ಹೊರ ಬಂದಾಗ ಕಿಟ್ಟು ಕೇಳಿದ್ದು `ಅಂವ ಎಂತಾ ಹೇಳಿದ್ನಲೆ..' ನನ್ನ ಉತ್ತರ `ಸಾಯ್ಲಾ ಟಸ್ ಪುಸ್ ಅಂದ ಅರ್ಥ ಆಜಿಲ್ಲೆ..' ಮೋಹನ, ರಾಘು ಕೂಡ ಇದಕ್ಕೆ ಹೊರತಾಗಿರಲಿಲ್ಲ ಎನ್ನುವುದು ಅವರ ಮುಖದಿಂದ ಗೊತ್ತಾಗುತ್ತಿತ್ತು..
ಆ ಫ್ಯಾಕ್ಟರಿಯಲ್ಲಿ ಚಾಕಲೇಟುಗಳು ತಯಾರಾಗುತ್ತಿದ್ದವು. ನೋಡಿದ ತಕ್ಷಣ ಬಾಯಲ್ಲಿ ಚವುಳು ನೀರು ಸುರಿಯಬೇಕು.. ಅಷ್ಟು ಚನ್ನಾಗಿದ್ದವು..
ಬೆಲೆ ಕೇಳಿದರೆ ಈಗಿನ ಪೆಟ್ರೂಲ್ ರೇಟಿಗಿಂತ ಜಾಸ್ತಿ... ಅದಕ್ಕೆ ಪ್ರತಿಯಾಗಿ ಅವರು ಕೊಡುವುದು ಕಡಿಮೆ ಗಾತ್ರದ ಚಾಕಲೇಟು..
ನೋಡಿದಷ್ಟರಲ್ಲೇ ಹೊಟ್ಟೆ ತುಂಬಿತು ಎಂದು ಹೇಳಿ ವಾಪಾಸು ಬಂದೆವು...
ಮುಂದೆ... `ಎಲ್ಲಿಗೆ ಪಯಣ..? ಯಾವುದು ದಾರಿ..' ಮರಳಿ ಬೆಂಗಳೂರಿಗಾ..?
ಊಹೂಂ ಬಗೆ ಹರಿಯಲಿಲ್ಲ..
ಅಷ್ಟರಲ್ಲಿ ನಮ್ಮ ಭಭ್ರವಾಹನದ ಹೊಟ್ಟೆ ಖಾಲಿಯಾಗಿದ್ದು ನೆನಪಾಯಿತು..
ಬಂಕಿಗೆ ಹೋಗಿ ನೋಡಿದರೆ ಕರ್ನಾಟಕಕ್ಕಿಂತ 1.5 ರು.ಗಿಂತಲೂ ಕಡಿಮೆ ದರದಲ್ಲಿ ಪೆಟ್ರೂಲು..
ವೀರ ಕನ್ನಡಿಗರಾದ ನಾವು ಕರ್ನಾಟಕವನ್ನು ಹಿಗ್ಗಾ ಮುಗ್ಗಾ ಬೈದು ಟ್ಯಾಂಕ್ ಫುಲ್ ಮಾಡಿಕೊಂಡು ಗಾಡಿಯನ್ನು ಗುರ್ರೆನ್ನಿಸುವಾಗಲೇ ನಮ್ಮ ಹೊಟ್ಟೆ ಖಾಲಿಯಾದದ್ದು ನೆನಪಾಯಿತು...
ಮತ್ತದೆ ದಾರಿ ಮಧ್ಯದ ಹೊಟೆಲನ್ನು ನೆನಪು ಮಾಡಿಕೊಂಡು ಮುಂದಕ್ಕೆ ಹೆಜ್ಜೆಯನ್ನಿಟ್ಟೆವು..
ಹೋಗುವಾಗ ಏದುಸಿರು ಬಿಟ್ಟಿದ್ದ ನಮ್ಮ ಭಭ್ರುವಾಹನರಿಗೆ ಈಗ ವೇಗ ಇಮ್ಮಡಿಸಿತ್ತು..
ಫೇವರ್ಸ್ ಹಾಕಿದ್ದ ರಸ್ತೆ.. ಗಾಡಿಯನ್ನು ಆಫ್ ಮಾಡಿಕೊಂಡರೂ 10-20 ಕಿ.ಮಿ ಅರಾಮವಾಗಿ ಸಾಗಬಹುದು.. ಅಷ್ಟು ಇಳಿಜಾರು..
10-12 ಕಿ.ಮಿ ಬಂದ ನಂತರ ನಮ್ಮ ಅದೇ ಹೊಟೆಲ್ ಸಿಕ್ಕಿತು..
ಬಾಗಿಲು ಹಾಕಿತ್ತು..
ಮತ್ತಷ್ಟು ಬೈಗುಳ.. ಹೊಟ್ಟೆಪಾಡು ತಾಳಹಾಕುತ್ತಿತ್ತು..
ಅಲ್ಲೆಲ್ಲೋ ಇನ್ನೊಂದು ಹೊಟೆಲು ಸಿಕ್ಕಿತು.. ಊಟದ ಶಾಸ್ತ್ರ ಮುಗಿಸಿದೆವು..
ಆಮೇಲೆ ಮತ್ತೆ ನಮ್ಮೆದುರು ಮೂಡಿದ್ದು `ಎಲ್ಲಿಗೆ ಪಯಣ..? ಯಾವುದು ದಾರಿ..?'
ಗಾಡಿ ನಿಲ್ಲಿಸಿ ವಾಪಾಸು ಬೆಂಗಳೂರಿಗೆ ಹೋಗುವುದಾ..? ಎಂದು ಸಮಾಲೋಚನೆ ಮಾಡಿದೆವು..
ಅಷ್ಟರಲ್ಲಿ ಅದ್ಯಾವ ಟ್ಯೂಬ್ ಲೈಟ್ ಹೊತ್ತಿಕೊಂಡಿತೋ.. ಮೋಹನ ಇಲ್ಲೆಲ್ಲೋ ವಯನಾಡಿದೆ ನೋಡಿ ಬರೋಣ ಎಂದ..
ನಮಗೆ ಅನುಮಾನ.. ಸುಮ್ನಿರು ಮಾರಾಯಾ ವಯನಾಡು ಇರುವುದು ಕೇರಳದಲ್ಲಿ ಎಂದೆವು..
ಇಲ್ಲಪ್ಪಾ.. ಎಲ್ಲೋ ನೋಡಿದ್ದೇನೆ..
ಊಟಿಯ ಹತ್ತಿರದಲ್ಲೇ ಇದೆ ವಯನಾಡು.. ಎಂದ..
ನಮಗೆ ನಂಬಿಕೆ ಬರಲಿಲ್ಲ..
ಕೊನೆಗೆ ತನ್ನ ಬ್ಯಾಗಿನಲ್ಲಿದ್ದ ಮ್ಯಾಪನ್ನು ತೆಗೆದು ತೋರಿಸಿದ ನಂಬಿಕೆ ಬಂತು..
ಅಲ್ಲೆ ಹತ್ತಿರದಲ್ಲಿದ್ದ ಅಂಗಡಿಯಾತನ ಬಳಿ ಮತ್ತೊಮ್ಮೆ ಕನ್ ಫರ್ಮ್ ಮಾಡಿಕೊಂಡೆವು..
ಆದರೆ ಹೋಗುವುದಾ ಬೇಡ್ವಾ.. ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ..
ನನಗೆ ರಜಾ ಸಿಗುವುದು ಅನುಮಾನವಿತ್ತು..
ಏನ್ ಮಾಡೋದು..?
ಆ ನಾಲ್ವರಲ್ಲಿ ನಾನು ವಾರದ ರಜಾ ಪಡೆದು ಬಂದಿದ್ದೆ..
ರಾಘು ಇನ್ನೂ ಓದುತ್ತಿದ್ದ..
ಕಿಟ್ಟು, ಮೋಹನ ಸ್ವ ಉದ್ಯೋಗದಲ್ಲಿದ್ದರು..
ನನಗೆ ಆಫೀಸಿನಲ್ಲಿ ರಜಾ ಕೊಡ್ತಾರೋ ಇಲ್ಲವೋ ಎನ್ನುವ ಶಂಕೆ..
ಕೊನೆಗೆ ಅಳುಕಿನಿಂದ ಆಫೀಸಿಗೆ ಪೋನ್ ಮಾಡಿದೆ..
ನನ್ನ ಮೇಲಿನವರು `ಏನ್ ವಿನಯ್,ಎಂದರು..
ಸರ್ ನಾಳೆ ಆಫೀಸಿಗೆ ಬರೋದಿಕ್ಕಾಗೋದಿಲ್ಲ ಎಂದೆ..
ಯಾಕೆ ಏನಾಯ್ತು ಎಂದರು/..
ಹುಷಾರಿಲ್ಲ.. ತುಂಬಾ ಕೋಲ್ಡಾಗಿದೆ. ಚಿಕ್ಕದಾಗಿ ಫೀವರ್ರು ಬೇರೆ ಎಂದು ರೈಲು ಬಿಟ್ಟೆ..
ಅದಕ್ಕವರು ಏನ್ರಿ.. ನಿನ್ನೆ ಚನ್ನಾಗಿದ್ರಲ್ರಿ.. ಅಷ್ಟು ಬೇಗ ಏನಾಯ್ತು ಎಂದರು//
ಗೊತ್ತಿಲ್ಲ ಸಾರ್.. ಏನೋ ಹೆಚ್ಚೂ ಕಡಿಮೆಯಾಗಿದೆ ಅನ್ಸುತ್ತೆ.. ಎಂದೆ..
ನಿಮ್ದೊಳ್ಳೆ ಗೋಳಾಯ್ತು ಕಣ್ರಿ.. ಓಕೆ.. ರೆಸ್ಟ್ ತಗೊಂಡು ಬನ್ನಿ.. ನಾಡಿದ್ದಿನಿಂದ ನೈಟ್ ಡ್ಯೂಟಿ ಎಂದರು..
ಮನದಲ್ಲಿ ಗಾಳಿಯ ಬಲೂನು ಒಡೆದ ಅನುಭವ..
ಆದರೆ ರಜಾ ಸಿಕ್ಕಿತೆಂಬ ಖುಷಿ..
ಅದನ್ನು ಮಿತ್ರವೃಂದದ ಬಳಿ ಹೇಳಿದಾಗ ಅವರಿಗೂ ಖುಷಿಯಾಗದೇ ಇರಲಿಲ್ಲ/..
ವಯನಾಡಿಗೆ ಹೋಗುವ ಮೊದಲು ಊಟಿ ಬೆಟ್ಟವನ್ನಿಳಿದು ಗುಡಲೂರಿಗೆ ಹೋಗಿ ಅಲ್ಲಿಂದ ಹೋಗಬೇಕಿತ್ತು..
ಅದಕ್ಕಾಗಿ ಮೊದಲು ಗುಡಲೂರಿಗೆ ಹೋಗುವಾ ಎಂದು ನಮ್ಮ ಪ್ಲಾನ್ ತಯಾರಾಯಿತು..
ಊಟಿಯಿಂದ 40ಓ, 45ಓ ಕಿ.ಮಿ ದೂರದಲ್ಲಿದ್ದ ಗುಡಲೂರಿನ ಮಾರ್ಗ ರಾಷ್ಟ್ರೀಯ ಹೆದ್ದಾರಿ..
ನಿಸರ್ಗದ ಖನಿ..
ಎಲ್ಲವನ್ನೂ ಕಣ್ತುಂಬಿಕೊಂಡು ಹೋಗಬೇಕೆಂದರೆ ಕನಿಷ್ಟ 4 ತಾಸುಗಳಾದರೂ ಬೇಕೇಬೇಕು..
ಮಾರ್ಗಮಧ್ಯ ತಮಿಳಿನ ಉದ್ದುದ್ದ ಹೆಸರಿನ ಊರುಗಳು..
ಪೈಕರ ಡ್ಯಾಂ, ಉದ್ದುದ್ದ ನೀಲಗಿರಿ ಕಾಡುಗಳು.. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ ಬಿಡಿ..
(ಮುಂದುವರಿಯುತ್ತದೆ.,...,)
No comments:
Post a Comment