Wednesday, July 3, 2013

ಮಹಾಮಳೆಯ ನೋಟಗಳು

ಮಹಾಮಳೆಯ ನೋಟಗಳು


ಕಳೆದೆರಡು ದಿನಗಳ ಹಿಂದೆ ವರುಣ ರಾಯ ರಜಾ ಹಾಕಿದ್ದ.. ಆಮೇಲಿನದೆಲ್ಲ ಓವರ್ ಡ್ಯೂಟಿ...
ಟೈಂ ಪಿಕಪ್ ಮಾಡಲು ನಮ್ಮ ಡ್ರೈವರ್ರುಗಳು ಬಸ್ಸನ್ನು ಯದ್ವಾತದ್ವಾ ಓಡಿಸುವಂತೆ..
ಶುರುವಾಯ್ತು ನೋಡಿ... ಮಹಾಮಳೆ...
ಉತ್ತರಖಂಡವನ್ನು ನೆನಪಿಸಿಬಿಟ್ಟಿತು..


ಸೋಮವಾರ ಸಂಜೆ ಜಿಟಿ ಜಿಟಿ ಎಂದ ಮಲೆ ಮಂಗಳವಾರ ಮದ್ಯಾಹ್ನವೂ ಜಿಟಿಜಿಟಿಯಿತ್ತು..
ಆರಿದ್ರಾ ಮಳೆಯ ಅಬ್ಬರ ಕಾಣ್ತಾ ಇಲ್ಲವೋ ಅಂದುಕೊಂಡಿದ್ದೆವು...
ಮಂಗಳವಾರ ಸಂಜೆ ಶುರುವಾಯ್ತು ನೋಡಿ ಮಳೆ...
ಸ್ಮಾಲ್ ಬ್ರೇಕ್.... ಇಲ್ಲವೇ ಇಲ್ಲ...
ಜೊರ.. ಜೊರ... ಜೊರ...
ಒಂದೇ ವೇಗ... ಮೈಲೇಜ್ ಮೆಂಟೇನ್ ಮಾಡುತ್ತಿತ್ತು...
ಒಂದೇ ಏಟಿಗೆ ಭೂಮಿ ತನ್ನ ಬಿಸಿಯನ್ನೆಲ್ಲ ಕಳೆದುಕೊಂಡು ಹಸಿಯಾಗಿತ್ತು...


ಬುಧವಾರ ಮದ್ಯಾಹ್ನದ ವರೆಗೂ ಮಳೆ ಬ್ರೇಕಿಲ್ಲದೆ ಸುರಿಯುತ್ತಿತ್ತು.
ಪರಿಣಾಮ ನೋಡಿ ಭೀಖರವಾಗಿತ್ತು..
ಹಳ್ಳ, ಕೊಳ್ಳಗಳು ತುಂಬಿದವು.. ಬೋರ್ಘರೆದವು...

ಜೊರಗುಡುವ ಮಳೆ.. ಮಂಗಳವಾರ ರಾತ್ರಿ ನಾನು ಮಲಗಿದ್ದೆ.. ಮಳೆಯ ಸದ್ದಿಗೆ ಮಧ್ಯರಾತ್ರಿ ಪದೆ ಪದೆ ಎಚ್ಚರಾಗುತ್ತಿತ್ತು...
ನಮ್ಮೂರಿನಿಂದ ಅರ್ಧ ಮೈಲಿ ದೂರದಲ್ಲಿ ಅಘನಾಶಿನಿ ಹರಿಯುತ್ತಾಳೆ.. ಅದರ ಸದ್ದು ಮೊದ ಮೊದಲು ಚಿಕ್ಕದಿತ್ತು.. ಕೊನೆ ಕೊನೆಗೆ ದೊಡ್ಡದಾಯಿತು..
ಬೆಳಿಗ್ಗೆಯಾದರೆ ಸಾಕಪ್ಪಾ ಅಂದುಕೊಂಡೆ..
ಅದ್ಯಾವುದೋ ಜಾವದಲ್ಲಿ ಎಚ್ಚರಾಯಿತು..
ಸುತ್ತೆಲ್ಲ ಬೆಳಕು..
ಮಳೆ ಸುರಿಯುತ್ತಲೇ ಇತ್ತು..
ಆದರೆ ಗಂಟೆ ಎಸ್ಟಿರಬಹುದು? ನೋಡಲು ಕರೆಂಟಿರಲಿಲ್ಲ..
ಸಿಕಾಡಗಳ ಟ್ರೊಂಯ್ ಟ್ರೊಂಯ್ ಸದ್ದಿನ ಮೇಲೆ ಸಮಯ ಅಳೆಯಲು ಯತ್ನಿಸಿದೆ. ಊಹುಂ ಕೇಳಲಿಲ್ಲ..
ಅರೇ.. ಇದೆಂತ ಭ್ರಮೆ ಅಂದುಕೊಂಡೆ..
ಆಮೇಲೆ ಮತ್ತೆ ನಿದ್ರೆ.. ಅದೆಷ್ಟೋ ಸಮಯದ ನಂತರ ಶಿರಸಿಯಿಂದ ನಮ್ಮ ಸರ್ ಪೋನ್ ಮಾಡಿದರು.. ಮನೆಯಲ್ಲಿ ಯಾರಿಗೂ ಎಚ್ಚರಿರಲಿಲ್ಲ..
ಟೈಂ ನೋಡಿದರೆ 8.30.. ಆಗಸ ನೋಡಿದೆ.. 6 ಗಂಟೆಗೆ ಆಗುವಂತಹ ಮಬ್ಬು ಬೆಳಗು..
ಇದೆನಾಯ್ತು ಅಂದರೆ ಅದೇ ಮಳೆ...


ತೋಟದ ಕೆಳಗೆ 40 ಅಡಿ ಕೆಳಗೆ ಅಘನಾಶಿನಿ ಹರಿಯುತ್ತಿದ್ದಳು.. ನೋಡಿ ಬರೋಣ ಎಂದು ಹೊರಟೆ..
ಆಕೆ ರೌದ್ರಾವತಾರ ತೋರಿರಲಿಲ್ಲ..
ಬರುವಾಗ ಅಘನಾಶಿನಿ ನೆರೆ ಬಂದರೆ ಪೋಟೋ ತಗೊಂಡು ಬನ್ನಿ.. ಹುಡಾಯಲೆ ಹೋಗಡಿ..ಎನ್ನುವ ನಮ್ಮ ಸರ್ ಮಾತಿಗೆ ಬೆಲೆ ಕೊಟ್ಟು ಪೋಟೋ ತೆಗೆಯೋಣ ಎಂದು ಯತ್ನಿಸಿದರೆ ವಂದೂ ಸರಿ ಬರಲಿಲ್ಲ..
ಹೊಳೆಯ ದಂಡೆಗೆ ಹೋದೆ.. ಕ್ಷಣಕ್ಷಣಕ್ಕೂ ನೀರು ಉಕ್ಕುತ್ತಿತ್ತು.. ಒಂದಷ್ಟು ಪೋಟೋ ಕ್ಲಿಕ್ಕಿಸುವ ವೇಳಗೆ ಒಂದು ಮಹಾಮಳೆ ಸುರಿಯಿತು ನೋಡಿ..
ಎದ್ದೋಡಿ ಬಂದೆ..
ಮನೆಗೆ ಮರಳುವಷ್ಟರಲ್ಲಿ ಮನೆಯೊಳಗೆಲ್ಲ ನೀರು..ನೀರು..

ಹೊಟ್ಟೆಗೆ ಕೊಂಚ ತಿಂಡಿ ತಿಂದು ಮುಗಿಸುವ ವೇಳೆಗೆ ಸುದ್ದಿ ಬಂದಿತ್ತು.. ಶಿರಸಿಯ ಚಿನ್ನಾಪುರ ಕೆರೆ ಒಡೆದಿದೆ.. ಅಂತ.. ಕೋಟೆಕೆರೆ ತುಂಬಿದೆಯಂತೆ.. ಯಾವ ಕ್ಷಣದಲ್ಲೂ ಒಡೆಯಬಹುದು.. ಅಂತಲೂ ಅಂದರು ನಮ್ಮ ವಿಶ್ವಣ್ಣ..
ಸುದ್ದಿ ಮಾಡಲು ಹೋಗಬೇಕು...
ಮಹಾಮಳೆ.. ಎಲ್ಲ ಕಡೆ ನೆರೆ ಬಂದಿದೆ.. ಎಲ್ಲಿ ಸುದ್ದಿ ಮಾಡೋಣ ಹೇಳಿ..?
ಅಷ್ಟರಲ್ಲಿ ಕಾನಸೂರಿನಿಂದ ಸುಭಾಷ ನಾಯ್ಕರು ಪೋನ್ ಮಾಡಿ ಅರ್ಜೆಂಟು ಬನ್ನಿ ನಮ್ಮೂರಿನ ನಾಲ್ಕು ಮನೆ ಮುಳುಗಿದೆ ಎಂದರು.
ದಡಬಡಿಸಿ ಹೋಗಬೇಕೆಂದರೂ ನಮ್ಮೂರಿನ ಗಬ್ಬು ರಸ್ತೆಯಲ್ಲಿ ಹುಗಿಯುತ್ತ ಏಳುತ್ತ, ಬೀಳುತ್ತ ಆರು ಕಿ.ಮಿ ಕಾನಸೂರು ಮುಟ್ಟುವ ವೇಳಗೆ ಅರ್ಧ ಗಂಟೆ...
ಮಳೆ ಅಬ್ಬರಕ್ಕೆ ಅಘನಾಶಿನಿಯ ಸೋದರ ಸಂಬಂಧಿ ಉಕ್ಕಿತ್ತು...
ಪರಿಣಾಮ ನದಿಯ ಪಕ್ಕದಲ್ಲಿದ್ದ ನಾಲ್ಕು ಮನೆಗೆ ನೀರು ನುಗ್ಗಿ ಐದನೇ ಮನೆಯ ಒಳಗೆ ಇಣುಕುತ್ತಿತ್ತು...

ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದರು.. ಸಾಮಾನು ಸರಂಜಾಮು ಸಾಗಾಟದಲ್ಲಿ ನಿರತರಾಗಿದ್ದರು..
ತಾ.ಪಂ, ಗ್ರಾ.ಪಂ, ಸೇರಿದಂತೆ ಇಲಾಖೆಗಳ ಹಲವು ಮಂದಿ ಆಗಲೇ ಆಗಮಿಸಿದ್ದರು.. ಕೊನೆಗೆ ಎಷ್ಟು ನಷ್ಟ.. ಆಯ್ತು ಎನ್ನುವ ಆಲೋಚನೆ ಅವರದ್ದು.. ಓಯ್ ಇವ್ರೆ.. ನಮ್ಮ ಮನೆಯ ಇದೂ ಕೊಚ್ಚಿಕೊಂಡು ಹೋಗಿದೆ... ಎಂದು ಮರೆತಿದ್ದದ್ದನ್ನು ಲೀಸ್ಟಿನಲ್ಲಿ ಸೇರಿಸುತ್ತಿದ್ದರು...
ಕಳೆದ 3 ವರ್ಷದ ಹಿಂದೆ ಅಘನಾಶಿನಿ ನದಿಯ ಬಲದಂಡೆಗೆ ಪಿಚ್ಚಿಂಗ್ ಕಟ್ಟಿ ಅಂತ ಹೇಳಿದ್ವಿ.. ಇಲಾಖೆಯವರು `ಕಾಗೆ' ಹಾರಿಸಿದರು.. ಅಂತ ರಾಜಕಾರಣದಲ್ಲಿ ಮಾತನಾಡುತ್ತಿದ್ದ ಹಲವರು ಅಲ್ಲಿದ್ದರು..

ಪೋಟೋ.. ಅಹವಾಲು ಎಲ್ಲ ಪಡಕೊಂಡು ಹೊಸಗದ್ದೆ ಸೇತುವೆಗೆ ಹೋಗಬೇಕು ಎಂದು ಗಾಡಿ ತಿರುಗಿಸಿದೆ..
ಕಲ್ಮಟ್ಟಿ ಹಳ್ಳದ ನೀರು ಉಕ್ಕುಕ್ಕಿ ಹರಿಯುತ್ತಿತ್ತು...
ಬಾಳೆಸರ ರಸ್ತೆಯನ್ನು ಬಂದು ಮಾಡಿ ಬಿಡುತ್ತೇನೆ ಎಂದು ಮೈಮೇಲೆ ಬಂದವರಂತೆ ಆಡುತ್ತಿತ್ತು..
ಹಾಗೂ ಹೀಗೂ ಮುನ್ನಡೆದೆ..
ಕೋಡ್ಸರಕ್ಕೆ ಹೋಗುವಾಗ ಅಲ್ಲೊಂದು ಕಡೆ ಭೂಕುಸಿತದ ಜಾಗವಿದೆ..
ನಾನು ಹೋಗುವ ಮುನ್ನ ಒಂದಿಷ್ಟು ಭೂ ಕುಸಿತವಾಗಿತ್ತು..
ಪರಿಣಾಮ ಕರೆಂಟು ಕಂಬ ಹಾಗೂ ಕಂಬದ ಜಡೆಗಳಾದ ಲೈನುಗಳನ್ನೆಲ್ಲ ಮುಲಾಜಿಲ್ಲದೇ ಕಿತ್ತು ಹಾಕಿತ್ತು...
ಅದರ ಪೋಟೋ ತೆಗೆಯೋಣ ಅಂತ ಗಾಡಿ ನಿಲ್ಲಿಸಿದೆ..
ಅಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ನಾಲ್ಕು ಜನ ಯಂಗ್ ಸ್ಟಾರ್ ಗಳು.. ಹೋಯ್.. ಮೊದ್ಲು ಇತ್ಲಾಗೆ ಬನ್ನಿ.. ಎಂದು ಕೂಗಿದರು..
ಗಡಬಡಿಸಿ ಮುಮದೆ ಹೋದೆ..
ನೀವೆಂತ.. ಬೆಳಿಗ್ಗೆ ಅಲ್ಲಿ ಕುಸಿದಿತ್ತು.. ಈಗ ಅದೇ ಅಲ್ಲಿ ನೋಡಿ ಮಣ್ಣು ಅರ ಸರ ಇಳಿತಾ ಅದೆ.. ಈಗ ಕುಸಿತದೆ ನೋಡಿ ಅಂದರು..

ಲೈವ್ ಆಗಿ ಕಣ್ಣೆದುರು ಕುಸಿಯುತ್ತದೆ ಅಂತಾದರೆ ಪೋಟೋ ಕ್ಲಿಕ್ಕಿಸೋಣ ಅಂತ ಕಾದೆ..
ಊಹೂಂ.. ವಂದಿಂಚೂ ಕುಸಿಯಲಿಲ್ಲ.. ಮಣ್ಣು ಮಾತ್ರ ಆಗಾಗ ನಾ ಬಿದ್ದೆ ನಾ ಬಿದ್ದೆ ಅಂತ ಬೀಳುತ್ತಿತ್ತು..
ಕೊನೆಗೆ ಹೊಸಗದ್ದೆ ಸೇತುವೆ ಮೇಲೆ ನೀರು ಬಂದದೆ ಎಂಬ ಗಾಳಿ ಸುದ್ದಿ ಕೇಳಿ ಗುಡ್ಡ ಕುಸಿತದ ಲೈವ್ ಪ್ರೋಗ್ರಾಮನ್ನು ಅಲ್ಲಿಗೆ ಬಿಟ್ಟು ಹೋದೆ...
ನಾನು ಹೊಸಗದ್ದೆ ಕಡೆಗೆ ಹೋದಂತೆಲ್ಲ ದಾರಿಯಲ್ಲಿ ಸಿಕ್ಕ ಬೈಕುಗಳು, ಬಸ್ಸು, ವಾಹನಗಳು ಹೋಯ್ ದಾರಿ ಬಂದಾಗದೆ.. ಹೋಗ್ಲಿಕ್ಕಾಗೂದಿಲ್ಲ.. ಎನ್ನುತ್ತಿದ್ದರು..ಆದರೂ ಮುಂದುವರಿಯುತ್ತಿದ್ದ ನನ್ನನ್ನು ಪಿರ್ಕಿಯಂತೆ ಕಂಡು ಮುಂದಕ್ಕೆ ಸಾಗುತ್ತಿದ್ದರು..

ಹೊಸಗದ್ದೆ ಸೇತುವೆಯತ್ತ ಹೋದರೆ ಸೇತುವೆ ಮೇಲೆ ನೀರೇ ಇಲ್ಲ..!!!
ಬರೀ ಜನ...
ಅಘನಾಶಿನಿ ಸೇತುವೆಗೆ ಮುತ್ತಿಕ್ಕುತ್ತ ಸಾಗುತ್ತಿತ್ತು..
ಆಗೀಗ ಸೇತುವೆ ಮೇಲೆ ನೀರು ಉಕ್ಕುತ್ತಿತ್ತು..
ಹೊಸಗದ್ದೆ ಹಾಗೂ ಸುತ್ತಮುತ್ತಲ ಜನ ಜಮಾಯಿಸಿದ್ದರು..
ಉಕ್ಕೇರುವ ಹೊಳೆ ನೋಡಲು ಬಂದಿದ್ದಾರೆ ಎಂದುಕೊಂಡೆ..
ಹೊಳೆ ನೋಡುವವರು ಸೇತುವೆ ಮೇಲೆ ಯಾಕೆ ನಿಂತಿದ್ದಾರೆ ಎನ್ನಿಸಿತು..
ಯಾರಾದ್ರೂ ಹೊಳೆಗೆ ಹಾರಿದರೇ..? ಅದರ ಪರಾಮರ್ಶೆ ಮಾಡ್ತಾ ಇದ್ದಾರೆಯೇ ಎಂಬೆಲ್ಲ ಶಂಕೆ ಮೂಡಿ ಮನದಲ್ಲಿ ಭೀತಿ..

ಹೋಗ್ಲಿ ಎಂದು ಮುಂದಕ್ಕೆ ಹೋದರೆ ಅಲ್ಲಿ ಜಮಾಯಿಸಿದ್ದ ಜನರ ಕೆಲಸವೇ ಬೇರೆ ನಮೂನಿಯಾಗಿತ್ತು..
ಹೊಳೆಯಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿಯನ್ನು ಕ್ಯಾಚ್ ಹಿಡಿಯುವುದಕ್ಕಾಗಿ ಜನರು ಸೇರಿದ್ದರು.. ಸೇತುವೆ ಮೇಲೆ ನಿಂತು ಅಲ್ಲ ಬರುವ ತೆಂಗಿನ ಕಾಯಿಯನ್ನು ಹಿಡಿಯಲು ಸ್ಪರ್ಧೆಯೇ ನಡೆಯುತ್ತಿತ್ತು..
ಮಹಿಳೆಯರೂ ಪುರುಷರಿಗೆ ಪೈಪೋಟಿ ನೀಡುತ್ತಿದ್ದರು..
ಆದರೆ ಮಹಿಳೆಯರು ತೆಂಗಿನ ಕಾಯಿಗೆ ಮುಗಿ ಬೀಳುತ್ತಿರಲಿಲ್ಲ.
ಬದಲಾಗಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಕಟ್ಟಿಗೆ, ಕುಂಟೆಗಳನ್ನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ರು..

ಆಗಾಗ ನದಿ ನೀರು ಸೇತುವೆ ಮೇಲೆ ಉಕ್ಕುತ್ತಿತ್ತುಉ.
ಆಗೆಲ್ಲ ಜನಮಾನಸದಲ್ಲಿ ಹೋ ಎನ್ನುವ ಕೂಗು...
ಆದರೂ ಇವರ ಕಾಯಕ ನಿಲ್ಲುತ್ತಿರಲಿಲ್ಲ..
ನಂಗೆ 12 ಕಾಯ್ ಸಿಕ್ತು .. ನಂಗೆ 14 ಎನ್ನುವ ಲೆಕ್ಕಾಚಾರವೂ ಇತ್ತು..
4 ವರ್ಷದವರಿಂದ ಹಿಡಿದು 85 ವರ್ಷದ ವರೆಗೆ ಎಲ್ಲ ವಯೋಮಾನದ ಗಂಡು ಹಾಗೂ ಹೆಣ್ಣುಗಳು ಎಲ್ಲಿದ್ದವು..

ದಾರಿಯಲ್ಲಿ ಸಾಗುವ ವಾಹನಗಳ ಕಡೆಗೆ ಖಬರಿರಲಿಲ್ಲ..
ಇವರದ್ದೇ ಆಟ..
ದೇವರೇ ಈ ಸೇತುವೆ ಅಘನಾಶಿನಿಯ ಆರ್ಭಟಕ್ಕೆ ಕೊಚ್ಚಿ ಹೋದರೆ ಕತೆಯೇನಪ್ಪಾ.. ಎನ್ನುವ ಭಯದ ಚಿಕ್ಕ ಶಾಕ್..
ಹಳೆ ಸೇತುವೆ.. ಸೇತುವೆಯ ಅಕ್ಕಪಕ್ಕದ ಸೈಡ್ ಬಾರ್ ಗಳು ಕಿತ್ತುಹೋಗಿವೆ..
ಯಾರಾದ್ರೂ ತೆಂಗಿನ ಕಾಯಿ ಅಥವಾ ಕುಂಟೆಗಳನ್ನು ಕ್ಯಾಚ್ ಮಾಡಲು ಹೋಗಿ ಲಗಾಪಾಟಿ ಹೊಡೆದರೆ ಏನಪ್ಪಾ.. ಎಂದು ಕೊಂಡು ಹಗೂರಕ್ಕೆ ಕ್ಯಾಮರಾ ತೆಗೆದೆ..

ಆಗ ಶುರುವಾಯ್ತು ನೋಡಿ..
ಹೈಕಳೆಲ್ಲ..
ಯಾವ ಟೀವಿ? ಎಂದರು..
ಟಿವಿ ಅಲ್ಲ ಕಾಣ್ತದಾ.. ಪೇಪರ್ರಿರಬೇಕು ಎನ್ನುವ ವೇದವಾಕ್ಯ ಇನ್ನೊಬ್ಬನದ್ದು..
ಸುಮ್ನಿರ್ರಾ.. ಪೇಸ್ ಬುಕ್ಕಿಗೆ ಹೊಡ್ಕಳಾಕೆ ಹಿಡಿದಿದ್ದು ಎಂದು ಗುಂಪಲ್ಲಿರುವ ಗೋವಿಂದನ ಮಾತು..
ಎಲ್ಲ ಕಿವಿಗೆ ಬಿತ್ತು..
ನನ್ನ ಪಾಡಿಗೆ ನಾನು ಕ್ಯಾಮರಾ ಕ್ಲಿಕ್ ಕ್ಲಿಕ್..
ಕೊನೆಗೆ ಇಡಿಯ ಸೇತುವೆ ಮೇಲೆ ನಿಧಾನವಾಗಿ ನೀರು ಉಕ್ಕಲಾರಂಭಿಸಿತು..
ಅದರ ಪರಿವೆಯೂ ಇಲ್ಲ..
ಇಡಿ ಸೇತುವೆ ಪೋಟೋ ಹೊಡೆದುಕೊಳ್ಳಬೇಕಿತ್ತು...
ಕೊನೆಗೆ ಆ ಗುಂಪಿನ ಮುಖ್ಯಸ್ಥರ ಬಳಿ ಸ್ವಲ್ಪ ಸೇತುವೆಯಿಂದ ಆಚೆ ಹೋಗಿ ಎಂದೆ..
ನಮ್ ಪೋಟೋ ಹೊಡೀರಿ ಹೋಗ್ತೇವೆ ಅಂದ..
ಸರಿ ಎಂದೆ..
ಆತನಂತೂ ಸ್ವರಗಕ್ಕೆ 12 ಗೇಣು...
ಎಲ್ಲಾರನ್ನೂ ದೂರಕ್ಕೆ ಸರಿಸುವ ಆತನ ಗತ್ತು ಗಾಂಭೀರ್ಯ ಎಲ್ಲಾ ನೋಡಿದಾಗ ಖಂಡಿತವಾಗಿಯೂ ಮುಂದಿನ ಸಾರಿ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸುತ್ತಾನೆ ಎನ್ನಿಸಿತು. ನೆರೆಯ ಎಫೆಕ್ಟ್ ಪೋಟೋ ಹೊಡೆಯೋಣ ಎಂದುಕೊಂಡರೆ ಈ ಹೈದರ ಪೋಟೋ ಸೆಷನ್ ಮಾಡಬೇಕಾಗಿ ಬಂತಲ್ಲ ದೇವರೆ.. ಅಂದುಕೊಂಡೆ.. ಅಲ್ಲಿದ್ದವನೊಬ್ಬ ವೀಡಿಯೋ ಮಾಡ್ಕೋ ಅಂದ..
ಅಷ್ಟರಲ್ಲಿ ಪೋನು ಕಿಣಿ ಕಿಣಿ..
ಕಾರವಾರದ ಮಂಜು ವೀಡಿಯೋ ಮಾಡ್ಕಳಿ ನನಗೆ ಕಳಿಸಿ ಅಂದ..
ಸಿಕ್ಕಿದ್ದೆ ಸಿವಾ.. ಅದೂ ಆಯ್ತು...

ಸುಮಾರು ಪೋಟೋ ತೆಗೆದ ನಂತರವೂ ಅಗನಾಶಿನಿ ಸೇತುವೆಯ ಮೇಲೆ ಬರಲಿಲ್ಲ..
ಕಾದುಕಾದುವ್ಯರ್ಥ..
ಅದ್ಯಾವನೋ ಪುರ ಜನ ಹೇಳಿದ..
ಬಾಳೂರಲ್ಲಿ ಮನೆಗೆ ನೀರು ನುಗ್ಗಿದೆ ಅಂದ..
ಹೋಗಲು ಸಾಧ್ಯವೇ ಎಂದರೆ ರಸ್ತೆಯಲ್ಲಿ ನೀರು ಬಂದಿದೆ ಎಂದ..
ಟುಸ್ಸಾಯ್ತು ಉತ್ಸಾಹ..
ಅಷ್ಟರಲ್ಲಿ ಶಿರಸಿಯಿಂದ, ಬೇಗ ಆಫೀಸಿಗೆ ಬನ್ನಿ.. ಕೋಟೆಕೆರೆ ಢಂ ಅನ್ನೋ ಛಾನ್ಸಿದೆ ಎನ್ನುವ ದೂರವಾಣಿ...
ಮರಳಿ ದಾರಿ ಹಿಡಿದೆ..
ಕೋಡ್ಸರದ ಭೂಕುಸಿತ ಜಾಗಕ್ಕೆ ಬಂದರೆ.. ಅಲ್ಲಿ ಅದೇ ಯಂಗ್ ಸ್ಟಾರ್ಸ್ ಅವರಿಂದ ಅದೇ ಡೈಲಾಗ್ ಪುನರಾವರ್ತನೆ..
ಭೂಮಿಯೂ ಅಷ್ಟೇ ಈಗ ಕುಸಿತೆನೆ ನೋಡು..
ಈಗ ಕುಸಿತೇನೆ ನೋಡು..ಅನ್ನುತ್ತಿತ್ತು.. ಬಿಟ್ಟು ಹೋದೆ..

ಕಾನಸೂರಿಗೆ ಬರುವ ವೇಳೆಗೆ ಸುಭಾಷ್ ನಿಂದ ಮತ್ತೆ ಪೋನ್..
ಮಾದ್ನಕಳ್ ಸೇತುವೆ ಮೇಲೆ ನೀರು ಹೋಗ್ತಾ ಇದೆ.. ನೋಡಿ.. ಅಂದ..
ಹೋಗಿ ನೋಡಿದರೆ.. ಸೇತುವೆಯೇ ಕಾಣದಂತೆ ಮಳೆ ನೀರು..
ಕೆಂಪು ಕೆನ್ನೀರು.. ರಾಡಿ ರಾಡಿ.. ಪಕ್ಕದ ತೆಂಗಿನ ತೋಟಗಳಲ್ಲೆಲ್ಲ ನೀರೇ ನೀರು..
ಪಾಪ ಅಲ್ಲಿ 4 ಗಂಟೆಗಳಿಂದ ಸೇತುವೆ ದಾಟಲು ನಿಂತುಕೊಂಡಿದ್ದರಂತೆ...
ಮಳೆ ನೀರು ಬಿಡಲೊಲ್ಲದು..

ನಾನೂ ಸೇತುವೆ ಮೇಲೆ ಓಡಾಡಿದೆ...
ಮಳ್ಳಂಡೆ ತನಕ ನೀರು...
ತಂಪು ತಂಪು ಕೂಲ್ ಕೂಲ್ ಆಯಿತು.. ಅವ್ಯಕ್ತ ಬೀತಿ ಬಗಲಿನಲ್ಲಿ ಬೆವರನ್ನೂ ತಂದಿತು...
ಪೋಟೋ ಸಾಕಷ್ಟು ತೆಗೆದುಕೊಂಡೆ..
ಅಷ್ಟರಲ್ಲಿ ಆಗಲೇ ಶಿರಸಿಯಿಂದ ಮತ್ತೆರಡು ಸಾರಿ ಪೋನ್ ಬಂದಿತ್ತು..

ಶಿರಸಿಗೆ ಹಾಗೂ ಹೀಗೂ ಹೋಗುವ ವೇಳೆಗೆ ಮಳೆ ಕಡಿಮೆ ಆಗಿತ್ತು..
ಕೋಟೆಕೆರೆಗೆ ಬಂದರೆ ನೀರಿನ ಪ್ರಮಾಣ ಇಳಿದಿತ್ತು..
ಥೋ ನೀವು ಆಗಲೇ ಬರಬೇಕಿತ್ತು...
ಪೋಟೋ ಮಿಸ್ ಮಾಡಿಕೊಂಡ್ರಿ ಎಂದು ಜೊತೆಗಾರ ಪತ್ರಕರ್ತರು ಛೇಡಿಸಿದರು...
ಅವರಿಗೆ ನಾನು ಬೇರೆ ಕಡೆಯ ನೆರೆ ಪೋಟೋ ತೆಗೆಯಲು ಹೋದ ಸುದ್ದಿಯನ್ನು ಹೇಳಲೇ ಇಲ್ಲ..
ಯಾವಾಗಲೂ ಸತ್ಯ ಹರಿಶ್ಚಂದ್ರನ ಪೋಸು ಕೊಡುತ್ತಿದ್ದ ನನು ಈಗ ಮಾತ್ರ ಸುಳ್ಳು ಹರಿಶ್ಚಂದ್ರನಾದೆ..!!

ಅಂತೂ ಇಂತೂ ಮಳೆಯ ಕುರಿತು ರಿಪೋರ್ಟ್ ಬರೆದು ಕಳಿಸಿದಾಗ.. ಅದೇನೋ ದಿಲ್ ಖುಷ್...
ಪತ್ರಕರ್ತನಾಗಿದ್ದಕ್ಕೆ ಇಂತದ್ದು ಕಾಮನ್ನು ಗುರು ಎಂದು ಅದ್ಯಾರೋ ಹೇಳಿದರು..
ಬೆಂಗಳೂರಲ್ಲಿದ್ದರೆ ಹಿಂಗಾಗ್ತಿತ್ತಾ ಎಂದವರೂ ಇದ್ದಾರೆ,,,
ಏನೋ ಒಂಥರಾ ಎನ್ನಿಸಿದರೂ
ಮನದಲ್ಲಿ ಮಹಾಮಳೆಯ ನೆನಪು..
ಉತ್ತರಕನ್ನಡವೂ ಉತ್ತರಕಾಂಡದಂತಾಯ್ತು.. ಎಂಬಂತೆ...

5 comments:

  1. ಚೆನ್ನಾಗಿ ಬರೆದಿದ್ದೀರಿ. ನಮ್ ಉ.ಕ. ಮಳೆಯ ಚಿತ್ರಣ ಸಿಕ್ತು. ಚಿತ್ರಗಳನ್ನ ನೋಡಿದರೆ ಮಳೆ ಅಬ್ಬರ ಗೊತ್ತಾಗ್ತದೆ.

    "ಯಾವ ಟೀವಿ? ಎಂದರು..
    ಟಿವಿ ಅಲ್ಲ ಕಾಣ್ತದಾ.. ಪೇಪರ್ರಿರಬೇಕು ಎನ್ನುವ ವೇದವಾಕ್ಯ ಇನ್ನೊಬ್ಬನದ್ದು..
    ಸುಮ್ನಿರ್ರಾ.. ಪೇಸ್ ಬುಕ್ಕಿಗೆ ಹೊಡ್ಕಳಾಕೆ ಹಿಡಿದಿದ್ದು ಎಂದು ಗುಂಪಲ್ಲಿರುವ ಗೋವಿಂದನ ಮಾತು.."

    ಇದು ತಮಾಷೆಯಾಗಿದೆ. :)

    ReplyDelete
  2. ಉತ್ತರಕನ್ನಡ ಆ ದೇವರ ತವರು.... ಅದನ್ನ ಆತ ಮುಳುಗಿಸಲಾರ... ಅಲ್ಲಿನ ಪ್ರಕೃತಿ ಎಷ್ಟೇ ಮಳೆ ಹುಯ್ದರೂ ನೀರನ್ನು ಜಾರಿಬಿಡುವ ಕನ್ನಿಕೆ. ಅದ್ಯಾವಾಗಲೂ "ಉತ್ತರಾಖ೦ಡ"ವಾಗಲಾರದು ಎ೦ಬುದು ಆಶಯ - ಆ ದೇವರಲ್ಲಿ ಮನವಿ ಮಾಡುವ ಮುನ್ನ .... "ಉತ್ತರಾ೦ಚಲ"ದ೦ತೇ ನಾವು ಪ್ರಕೃತಿಯ ವಿರುದ್ಧವಾಗಿ ಹೋಗಲಾರೆವು ಎ೦ದು ಆಣೆ ಮಾಡಬೇಕಾಗಿದೆ.

    ReplyDelete
  3. Rashi cholo bardidra.. banglore alli edkandu oorina male miss madkande ansta elle nim article odida mele...

    ReplyDelete
  4. ವಿ. ರಾ, ಹೆ ಅವರಿಗೆ ಧನ್ಯವಾದಗಳು...

    ReplyDelete
  5. ಅಭಿಪ್ರಾಯಿಸಿದ ಸಂಜನಾ ಹೆಗಡೆಯವರಿಗೆ ಧನ್ಯವಾದಗಳು..

    ReplyDelete