Friday, July 19, 2013

ಪ್ರೇಮಪತ್ರ-5, ಕಂಡು ಕಾಡುವ ಗೆಳತಿಯಲ್ಲಿ ಪ್ರೇಮ ನಿವೇದನೆ

ಪ್ರೀತಿಯ ಗೆಳತಿ,
 ಮತ್ತೆ ಮತ್ತೆ ಮಧುರ ಅನುಭವ ನೀಡಲೆಂಬಂತೆ ವರ್ಷಕ್ಕೊಮ್ಮೆ ಅವತರಿಸಿ ಬರುವ ಪ್ರೇಮಿಗಳ ದಿನದ ಮೆಲುಕು ಹಾಕುತ್ತಾ, ನನ್ನೆದೆಯ ಅಂತರಾಳದೊಳಗೆ ಹಲ ದಿನಗಳಿಂದ ಗೂಡು ಕಟ್ಟಿ ಹೊರಬರಲು ತವಕಿಸುತ್ತಿರುವ ಪ್ರೀತಿಯೆಂಬ ರೆಕ್ಕೆ ಬಲಿತ ಹಕ್ಕಿಯ ಬಗ್ಗೆ ತಿಳಿಸುತ್ತೇನೆ.
    ಗೆಳತಿ.., ಸ್ಪಷ್ಟವಾಗಿ ಹೇಳುತ್ತಿದ್ದೇನೆ.. ನಾ ನಿನ್ನ ಮನಸಾರೆ ಇಷ್ಟಪಟ್ಟಿದ್ದೇನೆ. ನನ್ನ ಜೀವಕ್ಕಿಂತ ಹೆಚ್ಚು ನಿನ್ನನ್ನು ನನ್ನ ಮನದೊಳಗೆ ಆದರಿಸಿಕೊಂಡಿದ್ದೇನೆ. ಕಣ್ಣ ರೆಪ್ಪೆಯ ಪರದೆಯ ಮೇಲೆ ನಿನ್ನದೇ ಹೊನ್ನ ಬಿಂಬವನ್ನು ಚಿತ್ರಿಸಿಕೊಂಡಿದ್ದೇನೆ.
ನಿಂಗೊತ್ತಲ್ಲ ಗೆಳತಿ..,
    ಲವ್ ಎಟ್ ಫಸ್ಟ್ ಸೈಟ್ ಅಂತ ಹೇಳ್ತಾರೆ.. ಆವೊತ್ತು ಕಾಲೇಜಿನ ಅಡ್ಮಿಷನ್ನಿಗೆಂದು ನಾ ಬಂದ ದಿನವೇ ನೀನೂ ಬಂದಿದ್ದೆ. ಆಗ ಎದುರಿಗೆ ಸಿಕ್ಕ ನನ್ನ ಗುರುತು ಪರಿಚಯ ಇಲ್ಲದಿದ್ದರೂ ಕೂಡ ಚಿಕ್ಕದೊಂದು ಮುಗುಳು ನಗೆಯನ್ನು ಇರಲಿ ತಗೋ ಎಂದು ಎಸೆದು ಹೋಗಿದ್ದೆ. ಆ ದಿನವೇ ನಿನ್ನದೊಂದು ಬಿಂಬ ನನ್ನ ಮನದೊಳಗೆ ಚಿತ್ರಣಗೊಂಡೆಬಿಟ್ಟಿತ್ತು.
    ಆಮೇಲೆ ಕಾಲೇಜು ಪ್ರಾರಂಭವಾದ ನಂತರ ನಿಧಾನವಾಗಿಯಾದರೂ ನಿನ್ನ ಪರಿಚಯವಾಗಿಬಿಡ್ತು.ಪರಿಚಯವಾದ ನಂತರ ಗೊತ್ತೇ ಇದೆಯಲ್ಲಾ ಮಾತು-ಕಥೆ, ಹರಟೆ, ಇತ್ಯಾದಿ ಇತ್ಯಾ.. ಮೆರೆದು ಬಿಟ್ಟಿತು. ಬಂದ ಕೆಲವೇ ದಿನದಲ್ಲಿಯೇ ನೀನು ನಂಗೆ ಅದೆಷ್ಟು ಆತ್ಮೀಯವಾಗಿಬಿಟ್ಟೆ ಮಾರಾಯ್ತಿ.. ಅಂತಹ ಮಧುರ ಮನದ ಹಲ ಕೆಲ ಮಾತುಗಳ ನಡುವೆಯೇ ನನ್ನ ಎದೆಯೊಳಗೆ ನಿನ್ನ ಎಡೆಗೊಂದು ಪ್ರೀತಿಯ ಬೀಚ ಮೊಳಕೆಯೊಡೆದದ್ದು. ಆ ನಂತರದ ದಿನಗಳಲ್ಲಿ ಆ ಪ್ರೀತಿಯ ಬೀಜಕ್ಕೆ ನಾನು ಮಾತು-ಕತೆ, ಕನಸು-ಕವನಗಳ ಇವುಗಳ ಮೂಲಕವೇ ನೀರೆರೆದೆ. ಕೊನೆಗೆ ಆ ಗಿಡ ದೊಡ್ಡದಾಗಿ ಮನದ ತುಂಬಾ ಬಳುಕಿ ನಿಂತಿತು. ಈಗಲೋ ಸುಂದರವಾದ ಹೂ ಬಿಡಲು ಕಾತರಗೊಂಡಿದೆ.
    ನಿಂಗೊತ್ತಿಲ್ಲ ಗೆಳತಿ, ನೀನು ಅದೆಷ್ಟೋ ಸಾರಿ ನನ್ನ ಹತ್ತಿರ ಮಾತನಾಡಿದಾಗಲೆಲ್ಲಾ, ನಾನು ಹಾಗೆ ಮಾತನಾಡಲು ಹೆದರುತ್ತಿದ್ದೆ. ಮಾತುಗಳು ನನಗೆ ಗೊತ್ತಿಲ್ಲದಂತೆಯೇ ತೊದಲುತ್ತಿದ್ದವು. ಪ್ರೀತಿಯ ಮೊದಲ ಮಜಲೇ ಭಯವಂತೆ.. ಅದಕ್ಕೆ ನನಗೆ ಹಾಗೆ ಆಯ್ತೇನೋ.. ಅಲ್ವೇನೆ..?
    ಆ ನಂತರದ ದಿನಗಳಲ್ಲಿ ಅದೆಷ್ಟೋ ಸಾರಿ ನಾನು ನಿಂಗೆ ನನ್ನ ಮನದಾಳದ ಭಾವನೆಗಳನ್ನು, ನನ್ನೊಳಗೆ ಅಂಕುರಿಸಿದ್ದ ಈ ಪ್ರೀತಿಯ ಕದಿರನ್ನು ತಿಳಿಸಲು ಪ್ರಯತ್ನ ಪಟ್ಟಿದ್ದೆ ಗೊತ್ತಾ.. ಅದೇಕೋ ಆಗೆಲ್ಲಾ ಕಾಲ ಪಕ್ಷವಗೊಂಡಿರಲಿಲ್ಲವೋ ಅಥವಾ ಮುಹೂರ್ತ ಕೂಡಿಬಂದಿರಲಿಲ್ಲೋ ಏನೋ.. ನನ್ನಿಂದ ನನ್ನ ಪ್ರೇಮವನ್ನು ನಿನ್ನೆದುರು ನಿವೇದಿಸಲು ಆಗಿರಲೇ ಇಲ್ಲ.
    ಗೆಳತಿ.., ನಮ್ಮ ಕಾಲೇಜಿನ ಪುಂಡರ ಗುಂಪು ಅದೆಷ್ಟೋ ಸಾರಿ ನೀನು ನಡೆದು ಹೋಗುತ್ತಿದ್ದಾಗ ನಿನ್ನ ಹಿಂದೆ ನಿಂತುಕೊಂಡು ಏರುದನಿಯಲ್ಲಿ ನಿನ್ನ ಕುರಿತು ಕಾಮೆಂಟುಗಳನ್ನು ಮಾಡುತ್ತಿತ್ತಲ್ಲ ಆಗೆಲ್ಲಾ ನಾನು ಒಳಗೊಳಗೆ ಅದ್ಯಾವಪರಿ ಉರಿದುಬಿದ್ದಿದ್ದೇನೆ., ಸಿಟ್ಟು ಮಾಡಿಕೊಂಡಿದ್ದೇನೆ ಗೊತ್ತಾ.. ಆಗೆಲ್ಲಾ ನಾನು ಈ ಪ್ರೇಮದ ಮೋಡಿಯೇ ಹೀಗಾ ಅಂತ ಯೋಚಿಸಿದ್ದಿದೆ.
    ಸತ್ಯವಾಗ್ಲೂ ಹೇಳ್ತೀನಿ ಗೆಳತಿ, ನಿನ್ನ ಬಗ್ಗೆ ಯಾರಾದ್ರೂ ಏನನ್ನಾದ್ರೂ ಹೇಳಿದ್ರು ಅಂತಂದ್ರೆ ನಾನು ಅದೆಷ್ಟು ದುಃಖವನ್ನು-ಸಿಟ್ಟನ್ನು, ಯಾತನೆಯನ್ನು ಅನುಭವಿಸುತ್ತೀನಿ ಗೊತ್ತಾ..? ಪ್ರೇಮ ಅಂದರೆ ಹಸಿರು, ಮಳೆ, ಬದುಕು ಅಂತೆಲ್ಲ ಹೇಳ್ತಾರೆ. ನನ್ನ ಪಾಲಿಗೆ ಅದು ಸತ್ಯವಾಗಿಬಿಟ್ಟಿದೆ. ಆ ಅಡ್ಮಿಷನ್ನಿನ ದಿನದಂದು ನಿನ್ನನ್ನು ಕಾಣುವ ವರೆಗೂ ನಾನು ಒಂದು ರೀತಿ ಒರಟನಾಗಿದ್ದೆ. ಒರಟುತನಕ್ಕಿಂತ ಹೆಚ್ಚು ಸಿಡುಕುತ್ತಿದ್ದೆ. ತಟ್ಟನೆ ರೇಗುತ್ತಿದ್ದೆ. ಕಾರಣವೇ ಇಲ್ಲದೆ ಜಗಳಕ್ಕೆ ನಿಲ್ಲುತ್ತಿದ್ದೆ. ಸಿಟ್ಟಾಗುತ್ತಿದ್ದೆ. ಸಹನೆಯೇ ಇರುತ್ತಿರಲಿಲ್ಲ. ಆದರೆ ಯಾವಾಗ ನನ್ನೊಳಗೆ ನಿನ್ನ ರೂಪ ಆಹ್ವಾನಗೊಂಡು ಬೇರು ಬಿಟ್ಟು ಕುಳಿತುಕೊಂಡಿತೋ ಆ ಕ್ಷಣದಿಂದಲೇ ನಾನು ಮೃದುವಾಗುತ್ತಾ ಹೋದೆ.. ಕ್ರಮೇಣ ನನ್ನ ಸಿಟ್ಟು, ಒರಟುತನ, ರೇಗುವಿಕೆಗೆ ಬ್ರೇಕ್ ಬೀಳಲಾರಂಭವಾಯಿತು. ಜಗಳಗಂಟತನವಂತೂ ನಾಗರಹಾವು ಪೊರೆ ಬಿಟ್ಟುಹೋಗುವಂತೆ ನನ್ನನ್ನು ಬಿಟ್ಟು ಹೋಯಿತು. ಎಲ್ಲೋ ಅಡಗಿದ್ದ, ನನಗೆ ಗೊತ್ತೇ ಇಲ್ಲದಂತಿದ್ದ ಸಾಪ್ಟ್ ನೆಸ್ ನನ್ನಲ್ಲಿ ತುಂಬಿತು. ಅರ್ಧಮರ್ಧ ಮಾತಿಗೆ ಮುಗಿಯಿತು ಎನ್ನುವಂತಿದ್ದ ನಾನು ತಾಳ್ಮೆಯನ್ನು ಪಡೆದುಕೊಮಡೆ. ನೇರವಾಗುತ್ತ ಹೋದೆ. ಮೌನಿಯಾದೆ. ಈಗ ಯೋಚಿಸು ಗೆಳತಿ.., ನಾನು ಅದ್ಯಾವ ಪರಿ ನಿನ್ನನ್ನು ಪ್ರೀತಿಸುತ್ತಿರಬಹುದು ಅಂತ..!!
    ಇಷ್ಟರ ಜೊತೆಗೆ ಇನ್ನೊಂದು ಮಾತನ್ನೂ ನಾನು ನಿನ್ನೆದುರು ಅರುಹಿ ಬಿಡುತ್ತೇನೆ. .. ನನ್ನಲ್ಲಿ ಮೊಳೆತ ಈ ಪ್ರೀತಿ ನಿಸ್ಸಂದೇಹವಾಗಿಯೂ ನಿಷ್ಕಲ್ಮಷವಾದುದು. ಈ ಪ್ರೀತಿಯಲ್ಲಿ ಕಾಮವಿಲ್ಲ. ಲೋಭವಿಲ್ಲ. ಹುಚ್ಚು ಹುಂಭತನವಿಲ್ಲ. ಬರಿ ಆಕರ್ಷಣೆಯೂ ಅಲ್ಲ. ಇದರಲ್ಲಿ ಸಂದೇಹವೂ ಇಲ್ಲ. ಹಾಗೆಯೇ ಸಂಶಯವೂ ಇಲ್ಲ. ಇದು ಕೇವಲ ಶುದ್ಧ-ಸ್ವಚ್ಛ-ಶುಭ್ರ ಪ್ರೇಮವಷ್ಟೆ. ಇದರಲ್ಲಿ ಅನುಮಾನದ ಚಿಕ್ಕ ಹಸ್ತರೇಖೆಯನ್ನೂ ಕಾಣುವಂತಿಲ್ಲ. ನೀನು ಅದೆಷ್ಟು ಸಾರಿ ಪರೀಕ್ಷಿಸದರೂ ಕೂಡ ಇದರೊಳಗೆ ಭಿನ್ನವಿಲ್ಲ-ಬೇಧವಿಲ್ಲ.
    ಗೆಳತಿ..,
    ಇಷ್ಟು ಹೊತ್ತು ನನ್ನ ಮನದಲ್ಲಿ ನಿನ್ನೆಡೆಗಿನ ಪ್ರೇಮಕ್ಕೊಂದು ಅಕ್ಷರ ರೂಪ ಕೊಟ್ಟಿದ್ದೇನೆ. ಎಲ್ಲೋ.. ಎಂದೋ ಕಣ್ಣಿಗೆ ಕಾಣದಂತೆ ವ್ಯರ್ಥವಾಗಿ ಬಸಿದು ಹೋಗುತ್ತಿದ್ದ ಮನಸ್ಸಿನ ಭಾವನೆಗಳಿಗೆ ಅಷ್ಟೋ ಇಷ್ಟೋ ಎಂಬಂತೆ ಬರಹದ ರೂಪ ಕೊಟ್ಟು ಬಿಟ್ಟಿದ್ದೇನೆ...
    ಇಷ್ಟರ ಮೇಲೆ ಆಯ್ಕೆ ನಿನ್ನದು ಗೆಳತಿ., ನನ್ನ ಪ್ರೀತಿಸ್ತೀಯಾ..? ನಿನ್ನದೊಂದು ಅತ್ಯಂತ ಸ್ಪಷ್ಟವಾದ ನಿಲುವೊಂದನ್ನು ನಗೆ ತಿಳಿಸುತ್ತೀಯಾ, ನೀನು ನನ್ನನ್ನು ಇಷ್ಟಪಡ್ತೀಯಾ ಅಂದ್ಕೊಂಡು ಕನಸಿನ ಆಶಾಗೋಪುರದ ಮೇಲೆ ಹನುಮನಂತೆ ಕುಳಿತಿದ್ದೇನೆ. ಆ ಆಶಾಗೋಪುರವನ್ನು ಗಾಳಿಗೋಪುರ ಮಾಡುವುದಿಲ್ಲ ತಾನೆ..?
    ಕೊನೆಯದಾಗಿ ನೀನು ನನ್ನು ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಎಂದು ನಂಬಿ ನಿನ್ನ ನಿರ್ಧಾರಕ್ಕಾ ಕಾದಿದ್ದೇನೆ.. ನಿನ್ನ ನಿರ್ಧಾರ ನನ್ನ ಪಾಲಿಗೆ ನಲಿವಾಗಿರಲಿ, ಹಸಿರಾಗಿರಲಿ, ಹಸಿಯಾಗಿರಲಿ ಎಂದು ಬಯಸುತ್ತಿದ್ದೇನೆ..

ಇಂತಿ ನಿನ್ನ ನಿರ್ಧಾರಕ್ಕಾಗಿ
ಕಾದು ಕುಳಿತಿರುವ
ಜೀವನ್

2 comments:

  1. ಚನ್ನಗಿದೆ ಅದರೆ ಎಲ್ಲಾ ಪದಗಳನ್ನುಒಂದೇ ಕಲರ್ ನಲ್ಲಿ ಇದ್ದರೆ ಅರಾಮಾಗಿ ಓದಲು ಆನುಕೂಲ.. ಸರ್

    ReplyDelete
  2. lo prema kavipungava, ento nin kathe ? bari kandavra hesralli baryode aatallo maraya. nin hesralli baryodendu ?

    ReplyDelete